ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ಷಮೆಯಾಚಿಸುವುದು ಅಷ್ಟು ಕಷ್ಟಕರವೇಕೆ?

ಕ್ಷಮೆಯಾಚಿಸುವುದು ಅಷ್ಟು ಕಷ್ಟಕರವೇಕೆ?

ಕ್ಷಮೆಯಾಚಿಸುವುದು ಅಷ್ಟು ಕಷ್ಟಕರವೇಕೆ?

ಅಮೆರಿಕದ ಕ್ಯಾಲಿಫೊರ್ನಿಯ ವಿಧಾನ ಸಭೆಯು, ಇಸವಿ 2000ದ ಜುಲೈ ತಿಂಗಳಿನಲ್ಲಿ ಒಂದು ಮಸೂದೆಯನ್ನು ಮಂಜೂರು ಮಾಡಿತು. ಜನರು ಸ್ವತಃ ಶಾಮೀಲಾಗಿರುವ ಒಂದು ಅಪಘಾತದಲ್ಲಿ ಅವರು ಗಾಯಗೊಂಡವನಿಗೆ ಅನುಕಂಪವನ್ನು ವ್ಯಕ್ತಪಡಿಸುವಲ್ಲಿ, ಅವರನ್ನು ಆ ಅಪಘಾತದ ಹೊಣೆಗಾರಿಕೆಯಿಂದ ಬಿಡಿಸಲಿಕ್ಕಾಗಿ ಇದನ್ನು ರಚಿಸಲಾಗಿತ್ತು. ಈ ಮಸೂದೆಯ ಉದ್ದೇಶವೇನಾಗಿತ್ತು? ಒಂದು ಅಪಘಾತದ ದೆಸೆಯಿಂದ ಗಾಯವೊ ನಷ್ಟವೊ ಆಗುವಲ್ಲಿ, ಜನರು ಅನೇಕವೇಳೆ ಕ್ಷಮೆಯಾಚಿಸಲು ಹಿಂಜರಿಯುತ್ತಿದ್ದರೆಂಬುದನ್ನು ಗಮನಿಸಲಾಗಿತ್ತು. ಏಕೆಂದರೆ ನ್ಯಾಯಾಲಯದಲ್ಲಿ, ಕ್ಷಮೆಯಾಚಿಸಿದವನು ಅಪರಾಧಿಯೆಂದು ಅರ್ಥಮಾಡಿಕೊಳ್ಳಲಾಗುತ್ತಿತ್ತು. ಅದೇ ಸಮಯದಲ್ಲಿ, ತಮ್ಮಿಂದ ಒಡನೆ ಕ್ಷಮೆಯಾಚಿಸಬೇಕಿತ್ತೆಂದು ಎಣಿಸುವವರು ಬೇಗನೆ ಕೋಪಗೊಂಡು, ಒಂದು ಚಿಕ್ಕ ಅಪಘಾತವು ಒಂದು ದೊಡ್ಡ ಕಲಹವಾಗಿ ಪರಿಣಮಿಸಬಹುದಿತ್ತು.

ನಿಮ್ಮ ತಪ್ಪು ಇಲ್ಲದಿರುವಂಥ ಒಂದು ಅಪಘಾತಕ್ಕಾಗಿ ಕ್ಷಮೆಯಾಚಿಸುವ ಆವಶ್ಯಕತೆಯಿಲ್ಲವೆಂಬುದು ನಿಜ. ಮತ್ತು ಕೆಲವು ಬಾರಿ, ನೀವು ಏನು ಹೇಳುತ್ತೀರೊ ಅದರ ವಿಷಯದಲ್ಲಿ ಜಾಗರೂಕತೆ ವಹಿಸುವುದೂ ವಿವೇಕದ ಮಾರ್ಗವಾಗಿದೆ. ಒಂದು ಹಳೆಯ ಜ್ಞಾನೋಕ್ತಿ ಹೇಳುವುದು: “ಮಾತಾಳಿಗೆ ಪಾಪ ತಪ್ಪದು; ಮೌನಿಯು ಮತಿವಂತ.” (ಜ್ಞಾನೋಕ್ತಿ 10:19; 27:12) ಆದರೂ, ನಾವು ಸಜ್ಜನಿಕೆ ಮತ್ತು ಸಹಾಯಭಾವವನ್ನು ತೋರಿಸಸಾಧ್ಯವಿದೆ.

ಆದರೆ, ಕೋರ್ಟು ದಾವೆಗಳು ಒಳಗೂಡಿಲ್ಲದಿರುವಾಗಲೂ ಅನೇಕ ಜನರು ಕ್ಷಮೆಯಾಚಿಸುವುದನ್ನು ನಿಲ್ಲಿಸಿದ್ದಾರೆಂಬುದು ನಿಜವಲ್ಲವೇ? ಮನೆಯಲ್ಲಿ ಒಬ್ಬ ಪತ್ನಿಯು, ‘ನನ್ನ ಪತಿ ಯಾವುದಕ್ಕೂ ಕ್ಷಮೆಯಾಚಿಸುವುದೇ ಇಲ್ಲ’ ಎಂದು ಪ್ರಲಾಪಿಸಬಹುದು. ಕೆಲಸದ ಸ್ಥಳದಲ್ಲಿ ಮೇಲ್ವಿಚಾರಕ ಕರ್ಮಚಾರಿಯು, ‘ನನ್ನ ಕೆಲಸಗಾರರು ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ ಮತ್ತು ಅವರು “ನಮ್ಮನ್ನು ಕ್ಷಮಿಸಿ” ಎಂದು ಹೇಳುವುದೇ ಇಲ್ಲ’ ಎಂದು ದೂರಬಹುದು. ಶಾಲೆಯಲ್ಲಿನ ಒಬ್ಬ ಶಿಕ್ಷಕರು, ‘“ಕ್ಷಮಿಸಿ” ಎಂದು ಹೇಳುವಂತೆ ಮಕ್ಕಳಿಗೆ ತರಬೇತು ಕೊಡಲ್ಪಟ್ಟಿಲ್ಲ’ ಎಂದು ದೂರಬಹುದು.

ಒಬ್ಬನು ಕ್ಷಮೆಯಾಚಿಸದೇ ಇರಲು ಒಂದು ಕಾರಣವು ತಿರಸ್ಕರಿಸಲ್ಪಡುವ ಭಯವಾಗಿರಬಹುದು. ಇತರರು ತನ್ನನ್ನು ತಾತ್ಸಾರದಿಂದ ಕಂಡಾರು ಎಂಬುದರಿಂದ ಚಿಂತಿತನಾಗಿರುವ ಕಾರಣ, ತನಗೆ ನಿಜವಾಗಿಯೂ ಹೇಗನಿಸುತ್ತದೆಂದು ಒಬ್ಬನು ಹೇಳದೇ ಇರಬಹುದು. ಅಲ್ಲದೆ, ಗಾಯಗೊಂಡ ವ್ಯಕ್ತಿಯು ತಪ್ಪಿತಸ್ಥನನ್ನು ಸಂಪೂರ್ಣವಾಗಿ ಅಲಕ್ಷಿಸಬಹುದು ಮತ್ತು ಇದು ಸಮಾಧಾನಮಾಡುವಿಕೆಯನ್ನು ಅತಿ ಕಷ್ಟಕರವಾಗಿ ಮಾಡಬಹುದು.

ಕ್ಷಮೆಯಾಚಿಸಲು ಕೆಲವರು ಹಿಂಜರಿಯುವ ಇನ್ನೊಂದು ಕಾರಣವು, ಇತರರ ಅನಿಸಿಕೆಗಳ ಕಡೆಗೆ ತೋರಿಸಲ್ಪಡುವ ಕಾಳಜಿಯ ಕೊರತೆಯಾಗಿರಬಹುದು. ‘ನಾನು ಈಗಾಗಲೇ ಮಾಡಿರುವ ತಪ್ಪು, ಕ್ಷಮೆಯಾಚಿಸುವುದರಿಂದ ಪರಿಹಾರವಾಗದು’ ಎಂದು ಅವರು ತರ್ಕಿಸಬಹುದು. ಇನ್ನಿತರರು, ಮುಂದೆ ಬರಸಾಧ್ಯವಿರುವ ಪರಿಣಾಮಗಳ ಕಾರಣ ‘ಕ್ಷಮಿಸಿ’ ಎಂದು ಹೇಳಲು ಹಿಂಜರಿಯಬಹುದು. ‘ಇತರರು ನನ್ನನ್ನು ಹೊಣೆಗಾರನನ್ನಾಗಿ ಮಾಡಿ ನಷ್ಟ ಪರಿಹಾರಕ್ಕಾಗಿ ಕೇಳಿಯಾರೊ?’ ಎಂದು ಅವರು ಯೋಚಿಸಬಹುದು. ಆದರೂ, ತಪ್ಪನ್ನು ಒಪ್ಪಿಕೊಳ್ಳುವುದಕ್ಕಿರುವ ಅತಿ ದೊಡ್ಡ ತಡೆಯು ಅಹಂಭಾವವಾಗಿದೆ. ಅಹಂಭಾವದ ಕಾರಣ “ಕ್ಷಮಿಸಿ” ಎಂದು ಹೇಳಲು ಒಪ್ಪದಿರುವವನು, ‘ತಪ್ಪನ್ನು ಒಪ್ಪಿ ನನ್ನ ಪ್ರತಿಷ್ಠೆಯನ್ನು ಕೆಳಗಿಳಿಸಲು ನನಗೆ ಮನಸ್ಸಿಲ್ಲ. ಅದು ನನ್ನ ಗೌರವಕ್ಕೆ ಧಕ್ಕೆ ತಂದೀತು’ ಎಂದು ತೀರ್ಮಾನಿಸುವವನಾಗಿದ್ದಾನೆ.

ಒಂದಲ್ಲ ಒಂದು ಕಾರಣಕ್ಕಾಗಿ, ಅನೇಕರಿಗೆ ತಪ್ಪೊಪ್ಪಿಕೊಳ್ಳುವ ಮಾತುಗಳನ್ನಾಡುವುದು ಕಷ್ಟಕರವಾಗಿರುತ್ತದೆ. ಆದರೆ ಕ್ಷಮೆಯಾಚಿಸುವುದು ನಿಜವಾಗಿಯೂ ಅಷ್ಟೊಂದು ಆವಶ್ಯಕವೋ? ಕ್ಷಮೆಯಾಚಿಸುವುದರಿಂದ ಬರುವ ಪ್ರಯೋಜನಗಳಾವುವು?

[ಪುಟ 3ರಲ್ಲಿರುವ ಚಿತ್ರ]

“‘ಕ್ಷಮಿಸಿ’ ಎಂದು ಹೇಳುವಂತೆ ಮಕ್ಕಳಿಗೆ ತರಬೇತು ಕೊಡಲ್ಪಟ್ಟಿಲ್ಲ”

[ಪುಟ 3ರಲ್ಲಿರುವ ಚಿತ್ರ]

“ನನ್ನ ಕೆಲಸಗಾರರು ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ”

[ಪುಟ 3ರಲ್ಲಿರುವ ಚಿತ್ರ]

“ನನ್ನ ಪತಿ ಯಾವುದಕ್ಕೂ ಕ್ಷಮೆಯಾಚಿಸುವುದೇ ಇಲ್ಲ”