ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮಗೆಲ್ಲರಿಗೂ ಪ್ರಶಂಸೆಯ ಅಗತ್ಯವಿದೆ

ನಮಗೆಲ್ಲರಿಗೂ ಪ್ರಶಂಸೆಯ ಅಗತ್ಯವಿದೆ

ನಮಗೆಲ್ಲರಿಗೂ ಪ್ರಶಂಸೆಯ ಅಗತ್ಯವಿದೆ

ಆಪುಟ್ಟ ಹುಡುಗಿಗೆ ಅದೊಂದು ಒಳ್ಳೇ ದಿನವಾಗಿತ್ತು. ಬೇರೆ ಸಮಯಗಳಲ್ಲಿ ಅವಳನ್ನು ಯಾವಾಗಲೂ ತಿದ್ದಬೇಕಾಗಿತ್ತಾದರೂ, ಈ ನಿರ್ದಿಷ್ಟ ದಿನದಂದು ಅವಳು ತುಂಬ ಚೆನ್ನಾಗಿ ನಡೆದುಕೊಂಡಿದ್ದಳು. ಆದರೆ ಆ ರಾತ್ರಿ, ಆ ಪುಟ್ಟ ಹುಡುಗಿಯನ್ನು ಮಲಗಿಸಿ ಹೊರಗೆಹೋದ ನಂತರ, ಅವಳು ಅಳುತ್ತಿರುವುದನ್ನು ತಾಯಿ ಕೇಳಿಸಿಕೊಂಡಳು. ಏನಾಯಿತೆಂದು ಅವಳನ್ನು ಪ್ರಶ್ನಿಸಿದಾಗ, ಅವಳು ಬಿಕ್ಕಿ ಬಿಕ್ಕಿ ಅಳುತ್ತಾ ಕೇಳಿದ್ದು: “ಇವತ್ತು ನಾನು ಒಳ್ಳೇ ಹುಡುಗಿಯಾಗಿರಲಿಲ್ಲವೊ?”

ಆ ಪ್ರಶ್ನೆಯಿಂದಾಗಿ ತಾಯಿಗೆ ಚೂರಿಯಿಂದ ಇರಿದಂತೆ ಭಾಸವಾಯಿತು. ತನ್ನ ಮಗಳನ್ನು ತಿದ್ದಲು ಅವಳು ಯಾವಾಗಲೂ ಸಿದ್ಧಳಿರುತ್ತಿದ್ದಳು. ಆದರೆ ಇಂದು, ತನ್ನ ಮಗಳು ಎಷ್ಟು ಚೆನ್ನಾಗಿ ನಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಳೆಂಬುದನ್ನು ತಾಯಿ ಗಮನಿಸಿದ್ದರೂ, ಅವಳಿಗೆ ಒಂದೇ ಒಂದು ಪ್ರಶಂಸೆಯ ಮಾತನ್ನೂ ಹೇಳುವ ಗೊಡವೆಗೆ ಹೋಗಲಿಲ್ಲ.

ಪುಟ್ಟ ಹುಡುಗಿಯರಿಗೆ ಮಾತ್ರ ಪ್ರಶಂಸೆ ಮತ್ತು ಪುನರಾಶ್ವಾಸನೆಯ ಮಾತುಗಳ ಅಗತ್ಯವಿರುವುದಿಲ್ಲ. ನಮಗೆಲ್ಲರಿಗೂ ಸಲಹೆ ಹಾಗೂ ತಿದ್ದುಪಾಟು ಬೇಕಾಗಿರುವಂತೆಯೇ ಪ್ರಶಂಸೆಯೂ ಬೇಕಾಗಿದೆ.

ನಮಗೆ ಹೃತ್ಪೂರ್ವಕವಾದ ಪ್ರಶಂಸೆಯು ದೊರಕುವಾಗ ಹೇಗನಿಸುತ್ತದೆ? ಅದು ನಮ್ಮನ್ನು ಸಂತೋಷಪಡಿಸಿ, ನಮ್ಮನ್ನು ಗೆಲುವಾಗಿಸುವುದಿಲ್ಲವೇ? ಯಾರೊ ನಮ್ಮನ್ನು ಗಮನಿಸಿದ್ದಾರೆ, ಯಾರೊ ನಮ್ಮ ವಿಷಯದಲ್ಲಿ ಕಾಳಜಿವಹಿಸುತ್ತಾರೆಂದು ನಮಗನಿಸುತ್ತಿರಬಹುದು. ನಾವು ಮಾಡಿದ ಪ್ರಯತ್ನವು ಸಾರ್ಥಕವಾಗಿತ್ತು ಎಂಬ ಪುನರಾಶ್ವಾಸನೆಯನ್ನು ಅದು ನಮಗೆ ಕೊಡುತ್ತದೆ ಮತ್ತು ನಾವು ಭವಿಷ್ಯದಲ್ಲಿ ಇನ್ನೂ ಹೆಚ್ಚು ಪ್ರಯತ್ನಮಾಡುವಂತೆ ಅದು ನಮ್ಮನ್ನು ಪ್ರಚೋದಿಸುತ್ತದೆ. ಅನೇಕವೇಳೆ ಮನಃಪೂರ್ವಕ ಪ್ರಶಂಸೆಯು, ಆ ಉತ್ತೇಜನದಾಯಕವಾದ ಮಾತುಗಳನ್ನಾಡಲು ಸಮಯವನ್ನು ತೆಗೆದುಕೊಂಡ ವ್ಯಕ್ತಿಯ ಕಡೆಗೆ ನಮ್ಮನ್ನು ಆಕರ್ಷಿಸುತ್ತದೆಂಬುದು ಅಚ್ಚರಿಗೊಳಿಸುವ ಸಂಗತಿಯೇನಲ್ಲ.​—ಜ್ಞಾನೋಕ್ತಿ 15:23.

ಪ್ರಶಂಸೆಯನ್ನು ಕೊಡುವ ಅಗತ್ಯವಿದೆ ಎಂಬುದನ್ನು ಯೇಸು ಕ್ರಿಸ್ತನು ಗ್ರಹಿಸಿದನು. ತಲಾಂತುಗಳ ಕುರಿತಾದ ಸಾಮ್ಯದಲ್ಲಿ ದಣಿಯು (ಸ್ವತಃ ಯೇಸು ಕ್ರಿಸ್ತನನ್ನು ಚಿತ್ರಿಸುತ್ತದೆ) ಇಬ್ಬರು ನಂಬಿಗಸ್ತ ದಾಸರನ್ನು, “ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು” ಎಂದು ಮನಃಪೂರ್ವಕವಾಗಿ ಪ್ರಶಂಸಿಸುತ್ತಾನೆ. ಎಷ್ಟು ಹೃದಯೋತ್ತೇಜಕ ಸಂಗತಿ! ಅವರಿಗೆ ಬೇರೆ ಬೇರೆ ಸಾಮರ್ಥ್ಯಗಳು ಮತ್ತು ಸಾಧನೆಗಳಿದ್ದರೂ, ಅವರಿಗೆ ಸರಿಸಮಾನವಾದ ಪ್ರಶಂಸೆಯು ಸಿಗುತ್ತದೆ.​—ಮತ್ತಾಯ 25:​19-23.

ಆದುದರಿಂದ ಆ ಪುಟ್ಟ ಹುಡುಗಿಯ ತಾಯಿಯನ್ನು ನಾವು ನೆನಪಿನಲ್ಲಿಡೋಣ. ಇತರರು ಕಣ್ಣೀರು ಹರಿಸಿದ ಮೇಲೆಯೇ ನಾವು ಅವರನ್ನು ಪ್ರಶಂಸಿಸಲಿಕ್ಕಾಗಿ ಕಾಯಬೇಕಾದ ಅಗತ್ಯವಿಲ್ಲ. ಅದರ ಬದಲು, ಪ್ರಶಂಸಿಸಲಿಕ್ಕಾಗಿರುವ ಅವಕಾಶಗಳಿಗಾಗಿ ನಾವು ಹುಡುಕೋಣ. ಪ್ರತಿಯೊಂದು ಸಂದರ್ಭದಲ್ಲೂ ಮನಃಪೂರ್ವಕ ಪ್ರಶಂಸೆಯನ್ನು ಕೊಡಲು ನಮಗೆ ಸಕಾರಣವಿದೆ.