ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಚಿಕ್ಕ ಮೊತ್ತದ ಹಣವು ಒಳಗೂಡಿರುವಾಗಲೂ ಬಾಜಿಕಟ್ಟುವುದು ತಪ್ಪೊ?

ಜೂಜಾಟದ ಬಗ್ಗೆ ದೇವರ ವಾಕ್ಯವು ಸವಿವರವಾಗಿ ಚರ್ಚಿಸುವುದಿಲ್ಲವಾದರೂ, ಎಲ್ಲ ರೀತಿಯ ಜೂಜಾಟವು ಬೈಬಲ್‌ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿಲ್ಲವೆಂಬ ವಿಷಯದಲ್ಲಿ ಅದು ನಿಶ್ಚಯವಾಗಿಯೂ ಸಾಕಷ್ಟನ್ನು ಹೇಳುತ್ತದೆ. * ದೃಷ್ಟಾಂತಕ್ಕೆ, ಜೂಜಾಟವು ಲೋಭವನ್ನು ಉದ್ರೇಕಿಸುತ್ತದೆಂಬುದು ವ್ಯಾಪಕವಾಗಿ ಒಪ್ಪಲ್ಪಟ್ಟಿರುವ ಮಾತಾಗಿದೆ. ಈ ಒಂದೇ ನಿಜತ್ವವು ಕ್ರೈಸ್ತರಿಗೆ ವಿಚಾರಮಾಡಲಿಕ್ಕಾಗಿ ಒಂದು ಪ್ರಮುಖ ವಿಷಯವಾಗಿದೆ, ಏಕೆಂದರೆ “ಲೋಭಿಗಳು” ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೆಂದು ದೇವರ ವಾಕ್ಯವು ತಿಳಿಸುತ್ತದೆ ಮಾತ್ರವಲ್ಲ, ದುರಾಶೆಯನ್ನು ವಿಗ್ರಹಾರಾಧನೆಯೊಂದಿಗೆ ವರ್ಗೀಕರಿಸುತ್ತದೆ.​—1 ಕೊರಿಂಥ 6:​9, 10; ಕೊಲೊಸ್ಸೆ 3:5.

ಜೂಜಾಟವು ಆತ್ಮ ದುರಭಿಮಾನವನ್ನೂ ಅಹಿತಕರವಾದ ಸ್ಪರ್ಧಾತ್ಮಕ ಮನೋಭಾವವನ್ನೂ, ಅಂದರೆ ಗೆಲ್ಲಬೇಕೆಂಬ ಬಲವಾದ ಅಪೇಕ್ಷೆಯನ್ನೂ ಪ್ರಚೋದಿಸುತ್ತದೆ. ಅಪೊಸ್ತಲ ಪೌಲನು, “ಅಹಂಕಾರಿಗಳೂ ಒಬ್ಬರನ್ನೊಬ್ಬರು ಕೆಣಕುವವರೂ ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ ಆಗದೇ ಇರೋಣ” ಎಂದು ಬರೆದಾಗ, ಈ ವಿಷಯಗಳ ಕುರಿತು ಅವನು ಎಚ್ಚರಿಸಿದನು. (ಗಲಾತ್ಯ 5:26) ಇದಲ್ಲದೆ, ಜೂಜಾಟವು ಕೆಲವರಲ್ಲಿ ಅದೃಷ್ಟದ ಮೇಲೆ ಮೂಢನಂಬಿಕೆಯನ್ನು ಇಡುವಂತೆ ಉತ್ತೇಜಿಸುತ್ತದೆ. ಜೂಜಾಡುವವರು ಅದೃಷ್ಟವನ್ನು ತಮಗೆ ಅನುಕೂಲವಾಗುವಂತೆ ಪ್ರಭಾವಿಸಲಿಕ್ಕಾಗಿ ವಿವಿಧ ರೀತಿಯ ಮೂಢನಂಬಿಕೆಗಳನ್ನು ಬೆಳೆಸಿಕೊಳ್ಳುತ್ತಾರೆ. “ಶುಭದಾಯಕದೇವತೆಗೆ ಔತಣವನ್ನು ಅಣಿಮಾಡಿ ಗತಿದಾಯಕದೇವತೆಗೆ ಮದ್ಯವನ್ನು ತುಂಬಾ ಬೆರಸಿದ” ಅಪನಂಬಿಗಸ್ತ ಇಸ್ರಾಯೇಲ್ಯರನ್ನು ಅವರು ನಮ್ಮ ಜ್ಞಾಪಕಕ್ಕೆ ತರುತ್ತಾರೆ.​—ಯೆಶಾಯ 65:11.

ಸಂಬಂಧಿಕರೊಂದಿಗೆ ಅಥವಾ ಆಪ್ತಮಿತ್ರರೊಂದಿಗೆ ಸ್ಪರ್ಧಾತ್ಮಕವಲ್ಲದ ಇಸ್ಪೀಟಾಟವನ್ನೊ ಬೋರ್ಡ್‌ ಆಟವನ್ನೊ ಆಡುವಾಗ, ಚಿಕ್ಕ ಮೊತ್ತದ ಹಣವನ್ನು ಬಾಜಿಕಟ್ಟುವುದು ಹಾನಿಕರವಲ್ಲದ ವಿನೋದಾವಳಿಯಲ್ಲದೆ ಇನ್ನೇನೂ ಅಲ್ಲವೆಂದು ಕೆಲವರು ತರ್ಕಿಸಬಹುದು. ಚಿಕ್ಕ ಮೊತ್ತದ ಹಣವನ್ನು ಬಾಜಿಕಟ್ಟುವವನು ತಾನು ಲೋಭಿ, ದುರಭಿಮಾನಿ, ಸ್ಪರ್ಧಾತ್ಮಕ ಮನೋಭಾವದವನು ಎಂದು ಎಣಿಸಲಿಕ್ಕಿಲ್ಲ ನಿಜ. ಆದರೂ ಅವನು ಯಾರೊಂದಿಗೆ ಆಡುತ್ತಿದ್ದಾನೊ ಅವನ ಮೇಲೆ ಈ ಜೂಜಾಟವು ಯಾವ ಪರಿಣಾಮವನ್ನು ಬೀರಬಲ್ಲದು? ತಮ್ಮ ಸಹಜ ಮನೋಭಾವಕ್ಕೆ ವಿರುದ್ಧವಾಗಿ ವರ್ತಿಸುವ ಅನೇಕ ಜೂಜುಕೋರರು “ತಮಾಷೆಗಾಗಿ” ಎಂದು ಚಿಕ್ಕ ರೀತಿಯಲ್ಲಿ ಬಾಜಿಕಟ್ಟಿಯೇ ಆ ಚಟವನ್ನು ಆರಂಭಿಸಿದವರಾಗಿದ್ದಾರೆ. (ಲೂಕ 16:10) ಆದರೆ ಅವರ ಸಂಬಂಧದಲ್ಲಿ, ಕೆಡುಕಿಲ್ಲದಂತೆ ತೋರಿದ ಇಂತಹ ಆಟವು ಸಮಯಾನಂತರ ಹೆಚ್ಚು ಕುಟಿಲವಾದದ್ದಾಗಿ ಪರಿಣಮಿಸಿತು.

ಮಕ್ಕಳ ವಿಷಯದಲ್ಲಿ ಇದು ವಿಶೇಷವಾಗಿ ನಿಜವಾಗಿದೆ. ಅನೇಕ ಮಂದಿ ಮಕ್ಕಳು ಚಿಕ್ಕ ಬಾಜಿಕಟ್ಟುವಿಕೆಯಲ್ಲಿ ಗೆದ್ದಾಗ ಉದ್ರೇಕಗೊಂಡು ದೊಡ್ಡ ಮೊತ್ತದ ಹಣವನ್ನು ಬಾಜಿಕಟ್ಟುವಂತೆ ಪ್ರೇರಿಸಲ್ಪಟ್ಟಿದ್ದಾರೆ. (1 ತಿಮೊಥೆಯ 6:10) ಅಮೆರಿಕದಲ್ಲಿ ಪ್ರಕಟಿಸಲಾದ, ಆಂತರಿಕ ನಿರ್ಬಂಧದ ಜೂಜುಕೋರರ ಮೇಲೆ ಆ್ಯರಿಸೋನ ಕೌನ್ಸಿಲ್‌ ನಡೆಸಿದ ದೀರ್ಘಾವಧಿಯ ಅಧ್ಯಯನವು, ಜೂಜಾಡುವ ಚಟವಿರುವ ಅನೇಕರು, “ಕ್ರೀಡೆಗಳ ಮೇಲೆ ಬಾಜಿಕಟ್ಟಿಯೊ ಅಥವಾ ಮಿತ್ರರು ಇಲ್ಲವೆ ಸಂಬಂಧಿಕರೊಂದಿಗೆ ಇಸ್ಪೀಟಾಟವಾಡುವಾಗ ಚಿಕ್ಕ ಮೊತ್ತದ ಬಾಜಿಕಟ್ಟಿಯೊ” ಚಿಕ್ಕ ವಯಸ್ಸಿನಲ್ಲೇ ಇದನ್ನು ಪ್ರಾರಂಭಿಸಿದರೆಂಬುದನ್ನು ದೃಢೀಕರಿಸಿತು. “ಮಕ್ಕಳು ಜೂಜಾಟವನ್ನು, ಸಾಮಾನ್ಯವಾಗಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇಸ್ಪೀಟಾಟವಾಡುವ ಮೂಲಕ ಮನೆಯಲ್ಲೇ ಆರಂಭಿಸುತ್ತಾರೆ” ಎಂದು ಇನ್ನೊಂದು ವರದಿಯು ಹೇಳುತ್ತದೆ. “ಜೂಜಾಡುವ ಮಕ್ಕಳಲ್ಲಿ 30 ಪ್ರತಿಶತ ತಮ್ಮ ಹನ್ನೊಂದನೆಯ ಜನ್ಮದಿನಾಚಾರಣೆಗೆ ಮೊದಲೇ ಆರಂಭಿಸಿದರು” ಎಂದು ಆ ವರದಿಯು ಮುಂದುವರಿಸಿ ಹೇಳುತ್ತದೆ. ಹದಿಪ್ರಾಯದ ಜೂಜುಕೋರರಲ್ಲಿ ಅನೇಕರು ತಮ್ಮ ಚಟವನ್ನು ಮುಂದುವರಿಸಲು ಪಾತಕ ಮತ್ತು ಅನೈತಿಕತೆಗೆ ಇಳಿಯುತ್ತಾರೆಂದು, ಜನರು ಅತಿರೇಕವಾಗಿ ಜೂಜಾಡುವ ಕಾರಣ​—ವಿಕೃತ ಮತ್ತು ಸಮಸ್ಯಾತ್ಮಕ ಜೂಜಾಟ (ಇಂಗ್ಲಿಷ್‌) ಎಂಬ ಅಧ್ಯಯನವು ತಿಳಿಸುತ್ತದೆ. ಯಾವುದು ಆರಂಭದಲ್ಲಿ ಹಾನಿರಹಿತವೆಂದು ತೋರಿಬಂತೋ ಅದಕ್ಕೆ ಎಂತಹ ದುರಂತಕರ ಪರಿಣಾಮ!

ನಾವು ಈಗಾಗಲೇ ಅನೇಕ ಬಲೆಗಳೂ ಶೋಧನೆಗಳೂ ಇರುವ ಲೋಕದಲ್ಲಿ ಜೀವಿಸುತ್ತಿರುವುದರಿಂದ, ಇನ್ನೊಂದಕ್ಕೆ ನಾವು ಅನಾವಶ್ಯಕವಾಗಿ ಏಕೆ ನಮ್ಮನ್ನು ಒಡ್ಡಿಕೊಳ್ಳಬೇಕು? (ಜ್ಞಾನೋಕ್ತಿ 27:12) ನಾವು ಜೂಜಾಡುವಾಗ ಮಕ್ಕಳು ಅಲ್ಲಿರಲಿ ಇಲ್ಲದಿರಲಿ, ಹಣದ ಮೊತ್ತ ಚಿಕ್ಕದಾಗಿರಲಿ ದೊಡ್ಡದಾಗಿರಲಿ, ಅದು ನಮ್ಮ ಆಧ್ಯಾತ್ಮಿಕತೆಗೆ ಅಪಾಯವನ್ನು ಉಂಟುಮಾಡುವುದರಿಂದ ಅದನ್ನು ದೂರವಿಡಬೇಕು. ವಿನೋದಕ್ಕಾಗಿ ಬೋರ್ಡ್‌ ಅಥವಾ ಇಸ್ಪೀಟಾಟದಲ್ಲಿ ಆನಂದಿಸುವ ಕ್ರೈಸ್ತರು ತಮ್ಮ ಸ್ಕೋರುಗಳನ್ನು ಬರೆದಿಡುವುದು ಉತ್ತಮ ಅಥವಾ ಬರೆದಿಡದೆ ಸುಮ್ಮನೆ ವಿನೋದಕ್ಕಾಗಿ ಆಡುವುದೂ ಉತ್ತಮ. ತಮ್ಮ ಸ್ವಂತ ಆಧ್ಯಾತ್ಮಿಕತೆ ಹಾಗೂ ತಮ್ಮ ಸ್ನೇಹಿತರ ಮತ್ತು ಕುಟುಂಬದ ಆಧ್ಯಾತ್ಮಿಕತೆಯ ಕುರಿತು ಲಕ್ಷಿಸುವ ವಿವೇಕಿಗಳಾದ ಕ್ರೈಸ್ತರು, ಹಣದ ಮೊತ್ತವು ಚಿಕ್ಕದಾಗಿದ್ದರೂ ಜೂಜಾಟದ ಅಭ್ಯಾಸದಿಂದ ದೂರವಿರುವರು.

[ಪಾದಟಿಪ್ಪಣಿ]

^ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡೀಯ ಜೂಜಾಟವನ್ನು “ಒಂದು ಆಟ, ಸಂಭವ ಅಥವಾ ಅಕಸ್ಮಾತ್‌ ಘಟನೆಯ ಪರಿಣಾಮದ ಮೇಲೆ ಬಾಜಿಕಟ್ಟುವುದು” ಎಂದು ಅರ್ಥನಿರೂಪಿಸುತ್ತದೆ. ಅದು ಇನ್ನೂ ಹೇಳುವುದು: “ಜೂಜಾಡುವವರು ಅಥವಾ ಆಟಗಾರರು ಸಾಮಾನ್ಯವಾಗಿ ಹಣವನ್ನು . . . ಲಾಟರಿ, ಇಸ್ಪೀಟಾಟ, ಮತ್ತು ಪಗಡೆಯಾಟದಂಥ ಅದೃಷ್ಟದ ಆಟಗಳ ಮೇಲೆ ಬಾಜಿಕಟ್ಟುತ್ತಾರೆ.”