ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯಾರಾಧನೆಯ ಬೆಂಬಲಿಗರು ಅಂದು ಮತ್ತು ಇಂದು

ಸತ್ಯಾರಾಧನೆಯ ಬೆಂಬಲಿಗರು ಅಂದು ಮತ್ತು ಇಂದು

ಸತ್ಯಾರಾಧನೆಯ ಬೆಂಬಲಿಗರು ಅಂದು ಮತ್ತು ಇಂದು

ಪುರಾತನ ಯೆರೂಸಲೇಮ್‌ ನಗರದ ವಿಷಯದಲ್ಲಿ ಕಣ್ಣೀರು ಹರಿಸಿದ ಒಬ್ಬ ವ್ಯಕ್ತಿಯ ಹೆಸರು ನಿಮಗೆ ಜ್ಞಾಪಕವಿದೆಯೋ? ‘ಅದು ಯೇಸು’ ಎಂದು ನೀವು ಹೇಳೀರಿ. ಯೇಸು ಹಾಗೆ ಮಾಡಿದನೆಂಬುದು ನಿಜ. (ಲೂಕ 19:​28, 41, 42) ಆದರೆ ಯೇಸು ಭೂಮಿಗೆ ಬರುವುದಕ್ಕೆ ಶತಮಾನಗಳಷ್ಟು ಹಿಂದೆ ದೇವರ ಇನ್ನೊಬ್ಬ ನಂಬಿಗಸ್ತ ಸೇವಕನು ಯೆರೂಸಲೇಮಿನ ವಿಷಯದಲ್ಲಿ ಹಾಗೆಯೇ ಅತ್ತನು. ಅವನ ಹೆಸರು ನೆಹೆಮೀಯ ಎಂದಾಗಿತ್ತು.​—ನೆಹೆಮೀಯ 1:​3, 4.

ನೆಹೆಮೀಯನು ಯೆರೂಸಲೇಮಿನ ಸಂಬಂಧದಲ್ಲಿ ಅಳುವಂತೆ ಅವನನ್ನು ಯಾವುದು ಅಷ್ಟು ದುಃಖಿತನನ್ನಾಗಿ ಮಾಡಿತು? ಅವನು ಆ ನಗರ ಮತ್ತು ನಗರವಾಸಿಗಳ ಪ್ರಯೋಜನಾರ್ಥವಾಗಿ ಏನು ಮಾಡಿದನು? ಮತ್ತು ಅವನ ಮಾದರಿಯಿಂದ ನಾವೇನು ಕಲಿಯಬಲ್ಲೆವು? ಇದಕ್ಕೆ ಉತ್ತರ ಕೊಡುವ ಉದ್ದೇಶದಿಂದ, ಅವನ ದಿನಗಳ ಕೆಲವು ಆಗುಹೋಗುಗಳನ್ನು ನಾವು ಪುನರ್ವಿಮರ್ಶಿಸೋಣ.

ಬಲವಾದ ಭಾವಾವೇಶವುಳ್ಳ ಮತ್ತು ನಿರ್ಣಾಯಕವಾಗಿ ವರ್ತಿಸುವ ಪುರುಷ

ನೆಹೆಮೀಯನು ಯೆರೂಸಲೇಮಿನ ದೇಶಾಧಿಪತಿಯಾಗಿ ನೇಮಿಸಲ್ಪಡುವ ಮೊದಲು, ಶೂಷನ್‌ ಪಟ್ಟಣದ ಪಾರಸಿಯ ರಾಜನ ಆಸ್ಥಾನದಲ್ಲಿ ಶ್ರೇಷ್ಠ ದರ್ಜೆಯ ಅಧಿಕಾರಿಯಾಗಿದ್ದನು. ಆದರೂ ಅವನ ಸುಖಾನುಭವದ ಜೀವನವು, ದೂರದ ಯೆರೂಸಲೇಮಿನಲ್ಲಿದ್ದ ತನ್ನ ಯೆಹೂದಿ ಸಹೋದರರ ಕ್ಷೇಮದ ಕುರಿತು ಅವನಿಗಿದ್ದ ಚಿಂತೆಯನ್ನು ಕಡಿಮೆಮಾಡಲಿಲ್ಲ. ವಾಸ್ತವದಲ್ಲಿ, ಯೆರೂಸಲೇಮಿನ ಯೆಹೂದ್ಯರ ಒಂದು ಪ್ರತಿನಿಧಿ ತಂಡವು ಶೂಷನ್‌ಗೆ ಬಂದಾಗ, ಅವನು ಮಾಡಿದ ಪ್ರಥಮ ಕೆಲಸವು, “ಸೆರೆಯವರೊಳಗೆ ತಪ್ಪಿಸಿಕೊಂಡ ಯೆಹೂದ್ಯರ ಮತ್ತು

ಯೆರೂಸಲೇಮಿನ ಸಮಾಚಾರವನ್ನು . . . ಅವರ ಹತ್ತಿರ ವಿಚಾರಿಸು”ವುದಾಗಿತ್ತು. (ನೆಹೆಮೀಯ 1:2) ಯೆರೂಸಲೇಮಿನ ಜನರು “ಮಹಾಕಷ್ಟನಿಂದೆಗಳಿಗೆ” ಒಳಗಾಗಿದ್ದಾರೆ ಮತ್ತು ಪೌಳಿಗೋಡೆಯು “ಕೆಡವಲ್ಪಟ್ಟಿರುತ್ತದೆ” ಎಂಬ ಸುದ್ದಿಯನ್ನು ಆ ಸಂದರ್ಶಕರು ಕೊಟ್ಟಾಗ, ನೆಹೆಮೀಯನು ‘ಕೂತುಕೊಂಡು ಅತ್ತು, ಕೆಲವು ದಿವಸಗಳ ವರೆಗೂ ಶೋಕಿಸಿದನು.’ ಬಳಿಕ ಅವನು ತನ್ನ ದುಃಖದ ಭಾವನೆಗಳನ್ನು ಮನದಾಳದಿಂದ ಮಾಡಿದ ಪ್ರಾರ್ಥನೆಯಲ್ಲಿ ಯೆಹೋವನಿಗೆ ವ್ಯಕ್ತಪಡಿಸಿದನು. (ನೆಹೆಮೀಯ 1:​3-11) ನೆಹೆಮೀಯನು ಅಷ್ಟು ದುಃಖಿತನಾದದ್ದೇಕೆ? ಏಕೆಂದರೆ ಯೆರೂಸಲೇಮು ಭೂಮಿಯ ಮೇಲೆ ಯೆಹೋವನ ಆರಾಧನೆಯ ಕೇಂದ್ರಬಿಂದುವಾಗಿತ್ತು. ಆದರೆ ಈಗ ಅದನ್ನು ಅಲಕ್ಷ್ಯಮಾಡಲಾಗಿತ್ತು. (1 ಅರಸುಗಳು 11:36) ಇದಲ್ಲದೆ, ಆ ನಗರದ ಹಾಳುಬಿದ್ದಿರುವ ಸ್ಥಿತಿಯು ಅದರ ನಿವಾಸಿಗಳ ನ್ಯೂನ ಆತ್ಮಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತಿತ್ತು.​—ನೆಹೆಮೀಯ 1:​6, 7.

ಯೆರೂಸಲೇಮಿನ ವಿಷಯದಲ್ಲಿ ನೆಹೆಮೀಯನಿಗಿದ್ದ ಚಿಂತೆ ಮತ್ತು ಅಲ್ಲಿ ವಾಸಿಸುತ್ತಿದ್ದ ಯೆಹೂದ್ಯರ ವಿಷಯದಲ್ಲಿ ಅವನಿಗಿದ್ದ ಸಹಾನುಭೂತಿಯು, ಅವನು ಸೇವೆಯಲ್ಲಿ ತನ್ನನ್ನೇ ನೀಡಿಕೊಳ್ಳುವಂತೆ ನಡೆಸಿತು. ಪಾರಸಿಯ ರಾಜನು ನೆಹೆಮೀಯನಿಗೆ ಅವನ ಕರ್ತವ್ಯಗಳಿಂದ ಬಿಡುವನ್ನು ಕೊಟ್ಟಾಕ್ಷಣ, ನೆಹೆಮೀಯನು ಯೆರೂಸಲೇಮನ್ನು ತಲಪಲು ಮಾಡಬೇಕಾಗಿದ್ದ ದೀರ್ಘ ಪ್ರಯಾಣದ ಏರ್ಪಾಡುಗಳಲ್ಲಿ ತೊಡಗಿದನು. (ನೆಹೆಮೀಯ 2:​5, 6) ಅಗತ್ಯವಿದ್ದ ದುರಸ್ತು ಕೆಲಸದ ಬೆಂಬಲಾರ್ಥವಾಗಿ ನೆಹೆಮೀಯನು ತನ್ನ ಸಾಮರ್ಥ್ಯ, ಸಮಯ ಮತ್ತು ಕೌಶಲಗಳನ್ನು ಕೊಡಲಪೇಕ್ಷಿಸಿದನು. ಅವನು ಅಲ್ಲಿಗೆ ಬಂದು ತಲಪಿದ ಕೆಲವೇ ದಿನಗಳೊಳಗೆ, ಯೆರೂಸಲೇಮಿನ ಪೂರ್ತಿ ಗೋಡೆಯ ದುರಸ್ತಿಗಾಗಿ ಅವನ ಯೋಜನೆ ಸಿದ್ಧವಾಗಿತ್ತು.​—ನೆಹೆಮೀಯ 2:​11-18.

ಗೋಡೆಯನ್ನು ದುರಸ್ತುಗೊಳಿಸುವ ಆ ಬೃಹತ್‌ ಕೆಲಸವನ್ನು ನೆಹೆಮೀಯನು ಅನೇಕ ಕುಟುಂಬಗಳ ನಡುವೆ ಹಂಚಿದನು. ಇವರೆಲ್ಲರೂ ಜೊತೆಜೊತೆಯಲ್ಲೇ ಕೆಲಸ ಮಾಡಬೇಕಾಗಿತ್ತು. * ಅಲ್ಲಿ 40ಕ್ಕೂ ಹೆಚ್ಚು ಗುಂಪುಗಳಿದ್ದು, ಪ್ರತಿಯೊಂದು ಗುಂಪು ಗೋಡೆಯ ಒಂದು “ಭಾಗ”ವನ್ನು ದುರಸ್ತುಗೊಳಿಸುವಂತೆ ನೇಮಿಸಲ್ಪಟ್ಟಿತ್ತು. ಇದರ ಪರಿಣಾಮವೇನಾಗಿತ್ತು? ಹೆತ್ತವರು ತಮ್ಮ ಮಕ್ಕಳೊಂದಿಗೆ ಜೊತೆಗೂಡಿದ್ದು, ಅಷ್ಟು ಮಂದಿ ಕೆಲಸಗಾರರು ತಮ್ಮ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಲಾಗಿ, ಅಸಾಧ್ಯವೆಂದು ತೋರುತ್ತಿದ್ದ ಕೆಲಸವು ಸಾಧ್ಯವಾಗಿ ಪರಿಣಮಿಸಿತು. (ನೆಹೆಮೀಯ 3:​11, 12, 19, 20) ಚಟುವಟಿಕೆಯಿಂದ ಕೂಡಿದ್ದ ಎರಡು ತಿಂಗಳುಗಳೊಳಗೆ ಪೂರ್ತಿ ಗೋಡೆಯು ದುರಸ್ತುಗೊಳಿಸಲ್ಪಟ್ಟಿತು! ಈ ಜೀರ್ಣೋದ್ಧಾರದ ಕೆಲಸವನ್ನು ವಿರೋಧಿಸಿದವರು ಸಹ “ಈ ಕಾರ್ಯವು ನಮ್ಮ ದೇವರಿಂದಲೇ ಪೂರೈಸಿತು” ಎಂದು ಒಪ್ಪಿಕೊಳ್ಳಲೇಬೇಕಾಯಿತೆಂದು ನೆಹೆಮೀಯನು ಬರೆದನು.​—ನೆಹೆಮೀಯ 6:15, 16.

ಸ್ಮರಣಯೋಗ್ಯ ಮಾದರಿ

ನೆಹೆಮೀಯನು ತನ್ನ ಸಮಯ ಮತ್ತು ಸಂಘಟನಾ ಕೌಶಲಗಳಿಗಿಂತಲೂ ಹೆಚ್ಚನ್ನು ನೀಡಿದನು. ಸತ್ಯಾರಾಧನೆಯನ್ನು ಬೆಂಬಲಿಸಲು ಅವನು ತನ್ನ ಪ್ರಾಪಂಚಿಕ ಸಂಪತ್ತನ್ನೂ ಉಪಯೋಗಿಸಿದನು. ತನ್ನ ಯೆಹೂದಿ ಸಹೋದರರನ್ನು ದಾಸತ್ವದಿಂದ ವಿಮೋಚಿಸಲಿಕ್ಕಾಗಿ ಅವನು ತನ್ನ ಸ್ವಂತ ಹಣವನ್ನು ಉಪಯೋಗಿಸಿದನು. ಅವನು ಬಡ್ಡಿತೆಗೆದುಕೊಳ್ಳದೆ ಹಣವನ್ನು ಸಾಲವಾಗಿ ಕೊಟ್ಟನು. ಅವನು ದೇಶಾಧಿಪತಿಯೋಪಾದಿ ಪಡೆದುಕೊಳ್ಳಲು ಹಕ್ಕಿದ್ದ ಭತ್ಯವನ್ನು ಕೇಳಿ ಯೆಹೂದ್ಯರ ಮೇಲೆ “ಬಹಳ ಭಾರ”ಹಾಕಲಿಲ್ಲ. ಬದಲಿಗೆ, “ನೂರೈವತ್ತು ಮಂದಿ ಅಧಿಕಾರಿಗಳೂ ಸುತ್ತಣ ಜನಾಂಗಗಳ ಮಧ್ಯದಿಂದ ನಮ್ಮ ಬಳಿಗೆ ಬರುತ್ತಿದ್ದವರೂ” ಊಟಮಾಡಲು ಅವನ ಮನೆ ಸದಾ ತೆರೆದಿತ್ತು. ಅವನು ತನ್ನ ಅತಿಥಿಗಳಿಗೆ ಪ್ರತಿದಿನ “ಒಂದು ಹೋರಿ ಆರು ಕೊಬ್ಬಿದ ಕುರಿ ಕೆಲವು ಕೋಳಿ”ಗಳನ್ನು ಒದಗಿಸಿದನು. ಅಲ್ಲದೆ, ಹತ್ತು ದಿವಸಕ್ಕೊಮ್ಮೆ ತನ್ನ ಸ್ವಂತ ಖರ್ಚಿನಲ್ಲಿ ಅವನು ಅವರಿಗೆ “ಎಲ್ಲಾ ತರದ ದ್ರಾಕ್ಷಾರಸವನ್ನು ಬೇಕಾಗುವಷ್ಟು” ಒದಗಿಸಿಕೊಟ್ಟನು.​—ನೆಹೆಮೀಯ 5:8, 10, 14-18.

ನೆಹೆಮೀಯನು ಅಂದು ಮತ್ತು ಇಂದಿನ ದೇವರ ಸೇವಕರಿಗೆ ಉದಾರತೆಯ ವಿಷಯದಲ್ಲಿ ಎಷ್ಟು ಎದ್ದುಕಾಣುವ ಮಾದರಿಯನ್ನಿಟ್ಟನು! ದೇವರ ಈ ಧೀರ ಸೇವಕನು ಸತ್ಯಾರಾಧನೆಯ ಬೆಳವಣಿಗೆಗಾಗಿ ಕೆಲಸಗಾರರನ್ನು ಬೆಂಬಲಿಸಲು ತನ್ನ ಪ್ರಾಪಂಚಿಕ ಸಂಪತ್ತನ್ನು ಉದಾರವಾಗಿಯೂ ಸಿದ್ಧಮನಸ್ಸಿನಿಂದಲೂ ಉಪಯೋಗಿಸಿದನು. ಆದುದರಿಂದಲೇ, ಅವನು ಸೂಕ್ತವಾಗಿಯೇ ಯೆಹೋವನಿಗೆ, “ನನ್ನ ದೇವರೇ, ನಾನು ಆ ಜನರಿಗೋಸ್ಕರ ಮಾಡಿದ್ದೆಲ್ಲವನ್ನು . . . ನೆನಪುಮಾಡಿಕೋ” ಎಂದು ಹೇಳಸಾಧ್ಯವಿತ್ತು. (ನೆಹೆಮೀಯ 5:19) ಯೆಹೋವನು ನಿಶ್ಚಯವಾಗಿಯೂ ಹಾಗೆಯೇ ಮಾಡುವನು.​—ಇಬ್ರಿಯ 6:10.

ನೆಹೆಮೀಯನ ಮಾದರಿಯು ಇಂದು ಅನುಸರಿಸಲ್ಪಡುತ್ತದೆ

ತದ್ರೀತಿಯಲ್ಲಿ ಯೆಹೋವನ ಜನರು ಇಂದು ಸತ್ಯಾರಾಧನೆಯ ಪರವಾಗಿ ವಾತ್ಸಲ್ಯದ ಭಾವನೆಗಳು, ಕ್ರಿಯೆಗೈಯುವ ಸಿದ್ಧಮನಸ್ಸು ಮತ್ತು ಸ್ವತ್ಯಾಗದ ಮನೋಭಾವವನ್ನು ತೋರಿಸುವುದನ್ನು ನೋಡುವುದು ಹೃದಯೋತ್ತೇಜಕವಾಗಿದೆ. ನಮ್ಮ ಜೊತೆ ವಿಶ್ವಾಸಿಗಳು ಕಷ್ಟಾನುಭವಿಸುತ್ತಿದ್ದಾರೆಂಬ ಸುದ್ದಿಯನ್ನು ನಾವು ಕೇಳುವಾಗ, ಅವರ ಕ್ಷೇಮದ ಕುರಿತು ನಾವು ತೀರ ಚಿಂತಿತರಾಗುತ್ತೇವೆ. (ರೋಮಾಪುರ 12:15) ನಾವು ನೆಹೆಮೀಯನಂತೆಯೇ, ಒಂದೇ ನಂಬಿಕೆಯಲ್ಲಿ ಪಾಲಿಗರಾಗಿದ್ದು, ಸಂಕಟಕ್ಕೊಳಗಾಗಿರುವ ನಮ್ಮ ಸಹೋದರರ ಬೆಂಬಲಾರ್ಥವಾಗಿ ಪ್ರಾರ್ಥನೆಯಲ್ಲಿ ಯೆಹೋವನ ಕಡೆಗೆ ತಿರುಗಿ, “ಕೃಪೆಮಾಡು; ನಿನ್ನ ಸೇವಕನಾದ ನನ್ನ ಪ್ರಾರ್ಥನೆಗೂ ನಿನ್ನ ನಾಮಸ್ಮರಣೆಯಲ್ಲಿ ಆನಂದಿಸುವ ನಿನ್ನ ಭಕ್ತರ ಪ್ರಾರ್ಥನೆಗೂ ಕಿವಿಗೊಡು” ಎಂದು ಬೇಡುತ್ತೇವೆ.​—ನೆಹೆಮೀಯ 1:11; ಕೊಲೊಸ್ಸೆ 4:2.

ಆದರೂ, ನಮ್ಮ ಕ್ರೈಸ್ತ ಸಹೋದರರ ಆತ್ಮಿಕ ಹಾಗೂ ಶಾರೀರಿಕ ಕ್ಷೇಮದ ವಿಷಯದಲ್ಲಿ ಮತ್ತು ಸತ್ಯಾರಾಧನೆಯ ಪ್ರಗತಿಯ ವಿಷಯದಲ್ಲಿ ನಮಗಿರುವ ಚಿಂತೆಯು ಬರೀ ನಮ್ಮ ಭಾವನೆಗಳ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಅದು ನಮ್ಮನ್ನು ಕ್ರಿಯೆಗೈಯುವಂತೆಯೂ ಪ್ರಚೋದಿಸುತ್ತದೆ. ಯಾರ ಪರಿಸ್ಥಿತಿಗಳು ಅನುಮತಿಸುತ್ತವೊ ಅವರು ಪ್ರೀತಿಯಿಂದ ಪ್ರೇರಿತರಾಗಿ, ಹೆಚ್ಚುಕಡಿಮೆ ನೆಹೆಮೀಯನಂತೆಯೇ, ತಮ್ಮ ಮನೆಯ ಸಾಪೇಕ್ಷವಾದ ಸುಖಸೌಕರ್ಯಗಳನ್ನು ಬಿಟ್ಟು, ಅಗತ್ಯವಿರುವವರಿಗೆ ಸಹಾಯ ನೀಡಲು ಬೇರೆ ಸ್ಥಳಗಳಿಗೆ ಸ್ಥಳಾಂತರಿಸುತ್ತಾರೆ. ಲೋಕದ ಕೆಲವು ಭಾಗಗಳಲ್ಲಿ ಇಂತಹ ಸ್ವಯಂಸೇವಕರು ಜೀವಿಸುತ್ತಿರುವ ಸ್ಥಿತಿಗಳು ಕಡಿಮೆ ಸೌಕರ್ಯಗಳಿಂದ ಕೂಡಿರುವುದಾದರೂ, ಅದರಿಂದ ಧೃತಿಗೆಡದೆ ತಮ್ಮ ಕ್ರೈಸ್ತ ಸಹೋದರರ ಜೊತೆಯಲ್ಲಿ ಸೇವೆಮಾಡಿ, ಅಲ್ಲಿ ಸತ್ಯಾರಾಧನೆಯ ಪ್ರಗತಿಗಾಗಿ ಅವರು ಬೆಂಬಲವನ್ನು ಕೊಡುತ್ತಾರೆ. ಅವರು ಪ್ರದರ್ಶಿಸುವ ಸ್ವತ್ಯಾಗದ ಮನೋಭಾವವು ನಿಜವಾಗಿಯೂ ಪ್ರಶಂಸಾರ್ಹವಾಗಿದೆ.

ನಮ್ಮ ಸ್ವಂತ ಸಮುದಾಯದಲ್ಲಿ ನಮ್ಮ ಪಾಲನ್ನು ಮಾಡುವುದು

ನಮ್ಮಲ್ಲಿ ಹೆಚ್ಚಿನವರು ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಲು ಅಶಕ್ತರೆಂಬುದು ಅರ್ಥಮಾಡಿಕೊಳ್ಳಬಹುದಾದ ಸಂಗತಿ. ನಾವು ನಮ್ಮ ಸಮುದಾಯದಲ್ಲೇ ಸತ್ಯಾರಾಧನೆಯನ್ನು ಬೆಂಬಲಿಸುತ್ತೇವೆ. ಇದು ಸಹ ನೆಹೆಮೀಯನ ಪುಸ್ತಕದಲ್ಲಿ ಚಿತ್ರಿಸಲ್ಪಟ್ಟಿದೆ. ದುರಸ್ತುಗೊಳಿಸುವ ಕೆಲಸದಲ್ಲಿ ಭಾಗವಹಿಸಿದ ಕೆಲವು ನಂಬಿಗಸ್ತ ಕುಟುಂಬಗಳ ಕುರಿತು ನೆಹೆಮೀಯನು ಕೂಡಿಸಿರುವ ಈ ವಿವರವನ್ನು ಗಮನಿಸಿರಿ. ಅವನು ಬರೆದುದು: “ಹರೂಮಫನ ಮಗನಾದ ಯೆದಾಯ; ಇವನು ತನ್ನ ಮನೆಯ ಎದುರಿಗಿರುವ ಗೋಡೆಯನ್ನು ಜೀರ್ಣೋದ್ಧಾರಮಾಡಿದನು . . . ಬೆನ್ಯಾಮೀನ್‌ ಹಷ್ಷೂಬರು; ಇವರು ತಮ್ಮ ತಮ್ಮ ಮನೆಗಳಿಗೆ ಎದುರಾಗಿರುವ ಗೋಡೆಯನ್ನು ಜೀರ್ಣೋದ್ಧಾರಮಾಡಿದರು. ಇವರ ಆಚೆ ಅನನ್ಯನ ಮೊಮ್ಮಗನೂ ಮಾಸೇಯನ ಮಗನೂ ಆದ ಅಜರ್ಯ; ಇವನು ತನ್ನ ಮನೆಯ ಹತ್ತಿರದಲ್ಲಿರುವ ಗೋಡೆಯನ್ನು ಜೀರ್ಣೋದ್ಧಾರಮಾಡಿದನು.” (ಓರೆ ಅಕ್ಷರಗಳು ನಮ್ಮವು.) (ನೆಹೆಮೀಯ 3:10, 23, 28-30) ಆ ಪುರುಷರೂ ಅವರ ಕುಟುಂಬಗಳೂ ತಮ್ಮ ಮನೆಗಳಿಗೆ ಹತ್ತಿರದಲ್ಲಿಯೇ ಜೀರ್ಣೋದ್ಧಾರದ ಕೆಲಸವನ್ನು ಮಾಡಿ ಸತ್ಯಾರಾಧನೆಯ ಏಳಿಗೆಗೋಸ್ಕರ ಮಹತ್ತಾದ ಸಹಾಯವನ್ನು ಮಾಡಿದರು.

ಇಂದು ನಮ್ಮಲ್ಲಿ ಅನೇಕರು ನಮ್ಮ ಸ್ವಂತ ಸಮುದಾಯಗಳಲ್ಲಿ ವಿವಿಧ ರೀತಿಗಳಲ್ಲಿ ಸತ್ಯಾರಾಧನೆಯನ್ನು ಬೆಂಬಲಿಸುತ್ತೇವೆ. ರಾಜ್ಯ ಸಭಾಗೃಹ ನಿರ್ಮಾಣ ಯೋಜನೆಗಳು, ವಿಪತ್ತು ಪರಿಹಾರ ಯೋಜನೆಗಳು ಮತ್ತು ಅತಿ ಪ್ರಾಮುಖ್ಯವಾಗಿ, ರಾಜ್ಯ ಸಾರುವಿಕೆಯ ಕೆಲಸದಲ್ಲಿ ನಾವು ಭಾಗವಹಿಸುತ್ತೇವೆ. ಇದಕ್ಕೆ ಕೂಡಿಸಿ, ನಾವು ವೈಯಕ್ತಿಕವಾಗಿ ಕಟ್ಟುವ ಕೆಲಸದಲ್ಲಿ ಇಲ್ಲವೆ ಪರಿಹಾರದ ಕೆಲಸದಲ್ಲಿ ಭಾಗವಹಿಸಲು ಶಕ್ತರಾಗಿರಲಿ ಇಲ್ಲದಿರಲಿ, ನೆಹೆಮೀಯನು ತನ್ನ ದಿನಗಳಲ್ಲಿ ತುಂಬ ಉದಾರಭಾವದಿಂದ ಮಾಡಿದಂತೆಯೇ, ನಮಗೆಲ್ಲರಿಗೂ ನಮ್ಮ ಪ್ರಾಪಂಚಿಕ ಸಂಪತ್ತಿನ ಮೂಲಕ ಸತ್ಯಾರಾಧನೆಯನ್ನು ಬೆಂಬಲಿಸುವ ಹೃತ್ಪೂರ್ವಕ ಅಪೇಕ್ಷೆಯಿದೆ.​—“ಸ್ವಯಂಪ್ರೇರಿತ ದಾನದ ವೈಶಿಷ್ಟ್ಯಗಳು” ಎಂಬ ಚೌಕವನ್ನು ನೋಡಿರಿ.

ನಮ್ಮ ಹೆಚ್ಚುತ್ತಿರುವ ಮುದ್ರಣ ಚಟುವಟಿಕೆಗಳು, ಪರಿಹಾರ ಯೋಜನೆಗಳು ಮತ್ತು ಲೋಕದಾದ್ಯಂತ ನಾವು ನಡೆಸುವ ಅನೇಕಾನೇಕ ಸೇವೆಗಳಿಗೆ ಬೇಕಾಗಿರುವ ಹಣವನ್ನು ಕಂಡುಕೊಳ್ಳುವುದು ಕೆಲವೊಮ್ಮೆ ನಮ್ಮ ಶಕ್ತಿಗೆ ಮೀರಿದ ವಿಷಯವಾಗಿ ಕಾಣಬಹುದು. ಹಾಗಿದ್ದರೂ ಯೆರೂಸಲೇಮಿನ ಆ ಮಹಾ ಗೋಡೆಯನ್ನು ದುರಸ್ತುಮಾಡುವುದು ಕೂಡ ಶಕ್ತಿಗೆ ಮೀರಿದ ಕೆಲಸವಾಗಿ ಕಂಡುಬಂದಿತ್ತೆಂಬುದನ್ನು ಜ್ಞಾಪಿಸಿಕೊಳ್ಳಿ. (ನೆಹೆಮೀಯ 4:10) ಆದರೂ, ಈ ಕೆಲಸವನ್ನು ಸಿದ್ಧಮನಸ್ಸುಳ್ಳ ಅನೇಕ ಕುಟುಂಬಗಳು ತಮ್ಮ ಮಧ್ಯೆ ಹಂಚಿಕೊಂಡದ್ದರಿಂದ ಆ ಕೆಲಸವು ಸಾಧಿಸಲ್ಪಟ್ಟಿತು. ಅದೇ ರೀತಿ ಇಂದು ಸಹ, ನಮ್ಮಲ್ಲಿ ಪ್ರತಿಯೊಬ್ಬನು ಕೆಲಸದ ಒಂದು ಭಾಗವನ್ನು ನಿಭಾಯಿಸುತ್ತಾ ಮುಂದುವರಿಯುವಲ್ಲಿ, ನಮ್ಮ ಲೋಕವ್ಯಾಪಕ ಚಟುವಟಿಕೆಗಳಿಗೆ ಬೇಕಾಗಿರುವ ಗಣನೀಯ ಮೊತ್ತದ ಹಣವನ್ನು ಪಡೆಯುವುದು ನಮ್ಮ ಸಾಮರ್ಥ್ಯಕ್ಕೆ ನಿಲುಕುವ ವಿಷಯವಾಗಿರುವುದು.

“ಕಾಣಿಕೆಯನ್ನು ಕೊಡಲು ಕೆಲವರು ಆಯ್ಕೆಮಾಡುವ ವಿಧಗಳು” ಎಂಬ ಚೌಕವು ರಾಜ್ಯದ ಕೆಲಸವನ್ನು ಆರ್ಥಿಕವಾಗಿ ಬೆಂಬಲಿಸಸಾಧ್ಯವಿರುವ ಅನೇಕ ವಿಧಗಳನ್ನು ತೋರಿಸುತ್ತದೆ. ಕಳೆದ ವರುಷದಲ್ಲಿ ದೇವಜನರಲ್ಲಿ ಅನೇಕರು ಇಂತಹ ಬೆಂಬಲವನ್ನು ಕೊಟ್ಟಿರುತ್ತಾರೆ ಮತ್ತು ಇದಕ್ಕಾಗಿ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯು, ಈ ಸ್ವಯಂಪ್ರೇರಿತ ದಾನದಲ್ಲಿ ಪಾಲಿಗರಾಗಲು ಯಾರ ಹೃದಯವು ಅವರನ್ನು ಪ್ರಚೋದಿಸಿತೊ ಅವರೆಲ್ಲರಿಗೆ ತನ್ನ ಗಾಢವಾದ ಕೃತಜ್ಞತೆಯನ್ನು ಸೂಚಿಸಲು ಈ ಅವಕಾಶವನ್ನು ಉಪಯೋಗಿಸುತ್ತದೆ. ಎಲ್ಲಕ್ಕೂ ಮಿಗಿಲಾಗಿ, ಭೂಮ್ಯಾದ್ಯಂತವಾಗಿ ಸತ್ಯಾರಾಧನೆಯನ್ನು ಪ್ರವರ್ಧಿಸಲು ತನ್ನ ಜನರು ಮಾಡಿರುವ ಮನಃಪೂರ್ವಕ ಪ್ರಯತ್ನಗಳ ಮೇಲೆ ಹೇರಳವಾದ ಆಶೀರ್ವಾದಗಳನ್ನು ಸುರಿಸಿರುವ ಯೆಹೋವನಿಗೆ ನಾವು ಆಭಾರಿಗಳಾಗಿದ್ದೇವೆ. ಹೌದು, ಯೆಹೋವನ ಹಸ್ತವು ನಮ್ಮನ್ನು ಈ ಎಲ್ಲಾ ವರುಷಗಳಲ್ಲಿ ಹೇಗೆ ನಡೆಸಿಕೊಂಡು ಬಂದಿದೆಯೆಂಬುದರ ಬಗ್ಗೆ ನಾವು ಚಿಂತಿಸುವಾಗ, ‘ನನ್ನ ದೇವರ ಕೃಪಾಹಸ್ತವು ನನ್ನನ್ನು ಪಾಲಿಸಿತು’ ಎಂದು ಕೃತಜ್ಞತಾಭಾವದಿಂದ ಹೇಳಿದ ನೆಹೆಮೀಯನ ಮಾತುಗಳನ್ನು ನಾವೂ ಉಚ್ಚರಿಸುವಂತೆ ಪ್ರೇರಿಸಲ್ಪಡುತ್ತೇವೆ.​—ನೆಹೆಮೀಯ 2:18.

[ಪಾದಟಿಪ್ಪಣಿ]

^ ಕೆಲವು ಮಂದಿ ಯೆಹೂದಿ ಪ್ರಮುಖರು, ಅಲ್ಲಿನ “ಶ್ರೀಮಂತರು” ಕೆಲಸದಲ್ಲಿ ಭಾಗವಹಿಸಲು ನಿರಾಕರಿಸಿದರೆಂದು ನೆಹೆಮೀಯ 3:5 ಹೇಳುತ್ತದೆ. ಆದರೆ ಅವರು ಮಾತ್ರ ಹೀಗಿದ್ದರು. ವಿವಿಧ ಹಿನ್ನೆಲೆಗಳ ಜನರು​—ಯಾಜಕರು, ಅಕ್ಕಸಾಲಿಗರು, ಬುಕ್ಕಿಟ್ಟುಗಾರರು, ನಾಡೊಡೆಯರು, ವರ್ತಕರು​—ಈ ಯೋಜನೆಯನ್ನು ಬೆಂಬಲಿಸಿದರು.​—ವಚನಗಳು 1, 8, 9, 32.

[ಪುಟ 28, 29ರಲ್ಲಿರುವ ಚೌಕ/ಚಿತ್ರಗಳು]

ಕೆಲವರು ಕೊಡಲು ಆಯ್ಕೆಮಾಡುವ ವಿಧಗಳು

ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು 

ಅನೇಕರು, “ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು​—ಮತ್ತಾಯ 24:14” ಎಂದು ಗುರುತುಮಾಡಲ್ಪಟ್ಟ ಕಾಣಿಕೆ ಪೆಟ್ಟಿಗೆಗಳಲ್ಲಿ ಹಾಕಲು ಬಯಸುವ ಹಣದ ಮೊತ್ತವನ್ನು ಬದಿಗಿರಿಸುತ್ತಾರೆ ಅಥವಾ ಬಜೆಟ್‌ ಮಾಡುತ್ತಾರೆ.

ಪ್ರತಿ ತಿಂಗಳು ಲೋಕದಾದ್ಯಂತ ಇರುವ ಸಭೆಗಳು ಈ ಹಣವನ್ನು ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯಕ್ಕೆ ಇಲ್ಲವೆ ಸ್ಥಳಿಕ ಬ್ರಾಂಚ್‌ ಆಫೀಸಿಗೆ ಕಳುಹಿಸುತ್ತವೆ. ಸ್ವಯಂಪ್ರೇರಿತ ಹಣದ ದಾನಗಳನ್ನು ನೇರವಾಗಿ, The Watch Tower Bible and Tract Society of India, G-37, South Avenue, Santacruz, Mumbai 400 054,  ಇಲ್ಲವೆ ನಿಮ್ಮ ದೇಶದ ಕೆಲಸವನ್ನು ನೋಡಿಕೊಳ್ಳುತ್ತಿರುವ ಬ್ರಾಂಚ್‌ ಆಫೀಸಿಗೆ ಕಳುಹಿಸಬಹುದು. ಆಭರಣಗಳು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನೂ ದಾನವಾಗಿ ಕೊಡಬಹುದು. ಇಂತಹ ಕಾಣಿಕೆಗಳೊಂದಿಗೆ, ಇದು ನೇರವಾಗಿ ಕೊಟ್ಟಿರುವ ಕೊಡುಗೆ ಎಂದು ಹೇಳುವ ಸಂಕ್ಷಿಪ್ತ ಪತ್ರವು ಜೊತೆಗೂಡಿರಬೇಕು.

ಚ್ಯಾರಿಟಬಲ್‌ ಯೋಜನೆ 

ನೇರವಾದ ಹಣದ ಕೊಡುಗೆಗಳು ಮತ್ತು ಷರತ್ತುಗಳೊಂದಿಗಿನ ಹಣದ ದಾನಗಳಿಗೆ ಕೂಡಿಸಿ, ಲೋಕವ್ಯಾಪಕ ರಾಜ್ಯ ಸೇವೆಯ ಪ್ರಯೋಜನಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಸಹಾಯಮಾಡಬಹುದಾದ ವಿಧಾನಗಳಿವೆ. ಇವು ಕೆಳಗಿನವುಗಳನ್ನು ಒಳಗೂಡುತ್ತವೆ:

ವಿಮೆ: ಜೆಹೋವಸ್‌ ವಿಟ್ನೆಸಸ್‌ ಆಫ್‌ ಇಂಡಿಯ ಟ್ರಸ್ಟ್‌ ಅನ್ನು ಒಂದು ಜೀವ ವಿಮಾ ಪಾಲಿಸಿ ಇಲ್ಲವೆ ನಿವೃತ್ತಿ ವೇತನ ಯೋಜನೆಯ ಫಲಾನುಭವಿಯಾಗಿ ಹೆಸರಿಸಬಹುದು.

ಬ್ಯಾಂಕ್‌ ಖಾತೆಗಳು: ಬ್ಯಾಂಕ್‌ ಖಾತೆಗಳು ಮತ್ತು ಫಿಕ್ಸ್ಡ್‌ ಡೆಪಾಸಿಟ್‌ಗಳನ್ನು, ಸ್ಥಳಿಕ ಬ್ಯಾಂಕ್‌ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ, ಜೆಹೋವಸ್‌ ವಿಟ್ನೆಸಸ್‌ ಆಫ್‌ ಇಂಡಿಯ ಟ್ರಸ್ಟ್‌ ಅನ್ನು ನ್ಯಾಸಾನುಭೋಗಿಯಾಗಿ ಇಟ್ಟುಕೊಳ್ಳುವಂತೆ ಅಥವಾ ದಾನಿಯು ಮರಣಹೊಂದುವಲ್ಲಿ ಆ ಟ್ರಸ್ಟ್‌ಗೆ ಅವು ಸಲ್ಲುವಂತೆ ಏರ್ಪಡಿಸಬಹುದು.

ಸ್ಟಾಕ್‌ಗಳು ಮತ್ತು ಬಾಂಡ್‌ಗಳು: ಸ್ಟಾಕ್‌ಗಳು ಹಾಗೂ ಬಾಂಡ್‌ಗಳನ್ನು ನೇರವಾದ ಕೊಡುಗೆಯಾಗಿ ಜೆಹೋವಸ್‌ ವಿಟ್ನೆಸಸ್‌ ಆಫ್‌ ಇಂಡಿಯ ಟ್ರಸ್ಟ್‌ಗೆ ದಾನಮಾಡಬಹುದು.

ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಒಂದು ಕೊಡುಗೆಯಾಗಿ, ಇಲ್ಲವೆ ದಾನಿಯು ಅವನ ಅಥವಾ ಅವಳ ಜೀವಮಾನಕಾಲದಲ್ಲಿ ಅದರಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ಜೆಹೋವಸ್‌ ವಿಟ್ನೆಸಸ್‌ ಆಫ್‌ ಇಂಡಿಯ ಟ್ರಸ್ಟ್‌ಗೆ ದಾನಮಾಡಬಹುದು. ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ಕರಾರುಪತ್ರಮಾಡುವ ಮೊದಲು ನಿಮ್ಮ ದೇಶದಲ್ಲಿರುವ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿರಿ.

ಉಯಿಲುಗಳು ಮತ್ತು ಟ್ರಸ್ಟ್‌ಗಳು: ಆಸ್ತಿ ಅಥವಾ ಹಣವನ್ನು ಕಾನೂನುಬದ್ಧವಾಗಿ ನಿರ್ವಹಿಸಿದ ಉಯಿಲಿನ ಮೂಲಕ, ಜೆಹೋವಸ್‌ ವಿಟ್ನೆಸಸ್‌ ಆಫ್‌ ಇಂಡಿಯ ಟ್ರಸ್ಟ್‌ಗೆ ಬಿಟ್ಟುಹೋಗಬಹುದು. ಅಥವಾ ಜೆಹೋವಸ್‌ ವಿಟ್ನೆಸಸ್‌ ಆಫ್‌ ಇಂಡಿಯ ಅನ್ನು ಒಂದು ಟ್ರಸ್ಟ್‌ ಒಪ್ಪಿಗೆ ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು.

ಟ್ರಸ್ಟ್‌ ಅನ್ನು ಫಲಾನುಭವಿಯಾಗಿ ಹೆಸರಿಸಿ ಉಯಿಲನ್ನು ಬರೆಯುವಾಗ, ಇಂಡಿಯನ್‌ ಸಕ್ಸೆಷನ್‌ ಆ್ಯಕ್ಟ್‌, 1925ರ ಸೆಕ್ಷನ್‌ 118ರಲ್ಲಿ ಕಂಡುಬರುವ ಈ ವಿಷಯವನ್ನು ದಯವಿಟ್ಟು ಗಮನಿಸಿರಿ. ಅದು ಹೇಳುವುದು: “ಸೋದರಳಿಯ ಅಥವಾ ಸೋದರ ಸೊಸೆ ಅಥವಾ ಹತ್ತಿರದ ಸಂಬಂಧಿಕರಿರುವ ಯಾವ ವ್ಯಕ್ತಿಗೂ ತನ್ನ ಮರಣಕ್ಕೆ ಹನ್ನೆರಡು ತಿಂಗಳುಗಳಿಗಿಂತ ಕಡಿಮೆಯಾಗಿರದ ಕಾಲದಲ್ಲಿ ಮೃತ್ಯುಪತ್ರವನ್ನು ಸಪ್ರಮಾಣಿಸಿ, ಅಂದಿನಿಂದ ಅದರ ಕಾರ್ಯನಿರ್ವಹಣೆ ನಡೆಯುವುದಕ್ಕೆ ಆರು ತಿಂಗಳುಗಳೊಳಗೆ ಜೀವಂತ ವ್ಯಕ್ತಿಗಳ ಮೃತ್ಯುಪತ್ರಗಳನ್ನು ಕಾನೂನು ಒದಗಿಸುವ ಸ್ಥಳದಲ್ಲಿ ಭದ್ರವಾಗಿರಿಸಿದ ಹೊರತು, ಯಾವುದೇ ಆಸ್ತಿಯನ್ನು ಧಾರ್ಮಿಕ ಅಥವಾ ಧರ್ಮಕಾರ್ಯಗಳಿಗೆ ಬಿಟ್ಟುಹೋಗುವ ಅಧಿಕಾರವಿಲ್ಲ.”

ನಿಮ್ಮ ಉಯಿಲಿನಲ್ಲಿ ನೀವು ಜೆಹೋವಸ್‌ ವಿಟ್ನೆಸಸ್‌ ಆಫ್‌ ಇಂಡಿಯ ಟ್ರಸ್ಟ್‌ ಅನ್ನು ಫಲಾನುಭವಿಯಾಗಿ ಹೆಸರಿಸಲು ಬಯಸುವಲ್ಲಿ, ಆ ಉಯಿಲಿನಲ್ಲಿ ಬರೆಯಲಿಕ್ಕಾಗಿ, ಸೊಸೈಟಿಯ ಪೂರ್ಣ ಹೆಸರು ಮತ್ತು ವಿಳಾಸವನ್ನು ದಯವಿಟ್ಟು ಗಮನಿಸಿರಿ:

Jehovah’s Witnesses of India

927/1, Addevishwanathapura,

Rajanukunte, Bangalore 561 203,

Karnataka.

[ಪುಟ 30ರಲ್ಲಿರುವ ಚೌಕ]

ಸ್ವಯಂಪ್ರೇರಿತ ದಾನದ ವೈಶಿಷ್ಟ್ಯಗಳು

ಅಪೊಸ್ತಲ ಪೌಲನು ಕೊರಿಂಥದವರಿಗೆ ಬರೆದ ಪತ್ರಗಳಲ್ಲಿ ಸ್ವಯಂಪ್ರೇರಿತ ದಾನದ ಮೂರು ಗಮನಾರ್ಹ ವೈಶಿಷ್ಟ್ಯಗಳನ್ನು ಕೊಟ್ಟನು. (1) ಹಣವನ್ನು ಸಂಗ್ರಹಿಸುವುದರ ಕುರಿತು ಬರೆಯುವಾಗ ಪೌಲನು ಸಲಹೆ ಕೊಟ್ಟದ್ದು: “ನಿಮ್ಮಲ್ಲಿ ಪ್ರತಿಯೊಬ್ಬನು . . . ವಾರವಾರದ ಮೊದಲನೆಯ ದಿನದಲ್ಲಿ [ಹಣ] ಗಂಟುಮಾಡಿ ತನ್ನ ಮನೆಯಲ್ಲಿಟ್ಟುಕೊಂಡಿರಬೇಕು.” (1 ಕೊರಿಂಥ 16:2) ಹೀಗೆ, ದಾನವನ್ನು ಕೊಡಲು ಮುಂದಾಗಿಯೇ ಯೋಜಿಸಬೇಕು ಮತ್ತು ಅದನ್ನು ಕ್ರಮಬದ್ಧವಾಗಿ ಮಾಡಬೇಕು. (2) ಪ್ರತಿಯೊಬ್ಬನು “ತನಗೆ ಬಂದ ಸಂಪಾದನೆಯ ಮೇರೆಗೆ” ಕೊಡಬೇಕೆಂದೂ ಪೌಲನು ಬರೆದನು. (1 ಕೊರಿಂಥ 16:2) ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಸ್ವಯಂಪ್ರೇರಿತ ದಾನದಲ್ಲಿ ಪಾಲಿಗನಾಗಲು ಬಯಸುವಂಥ ಒಬ್ಬ ವ್ಯಕ್ತಿ ಉಚಿತ ಪ್ರಮಾಣದಲ್ಲಿ ಅದನ್ನು ಮಾಡಸಾಧ್ಯವಿದೆ. ಒಬ್ಬ ಕ್ರೈಸ್ತನ ಸಂಪಾದನೆ ಕೊಂಚವಿರುವಾಗಲೂ, ಅವನು ದಾನವಾಗಿ ಕೊಡಬಹುದಾದ ಚಿಕ್ಕ ಮೊತ್ತದ ಹಣವನ್ನೂ ಯೆಹೋವನು ಬೆಲೆಯುಳ್ಳದ್ದಾಗಿ ಪರಿಗಣಿಸುತ್ತಾನೆ. (ಲೂಕ 21:​1-4) (3) ಪೌಲನು ಮುಂದೆ ಬರೆದುದು: “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.” (2 ಕೊರಿಂಥ 9:7) ಯಥಾರ್ಥ ಕ್ರೈಸ್ತರು ಮನದಾಳದಿಂದ​—ಸಂತೋಷದಿಂದ​—ಕೊಡುತ್ತಾರೆ.

[ಪುಟ 26ರಲ್ಲಿರುವ ಚಿತ್ರಗಳು]

ನೆಹೆಮೀಯನು ಬಲವಾದ ಭಾವಾವೇಶವುಳ್ಳವನೂ ನಿರ್ಣಾಯಕವಾಗಿ ವರ್ತಿಸುವವನೂ ಆಗಿದ್ದನು

[ಪುಟ 30ರಲ್ಲಿರುವ ಚಿತ್ರಗಳು]

ಸ್ವಯಂಪ್ರೇರಿತ ಕಾಣಿಕೆಗಳು ಲೋಕದಾದ್ಯಂತವಾಗಿ ಮುದ್ರಣ ಕಾರ್ಯಗಳನ್ನು, ಪರಿಹಾರ ಯೋಜನೆಗಳನ್ನು, ರಾಜ್ಯ ಸಭಾಗೃಹಗಳ ನಿರ್ಮಾಣಕಾರ್ಯವನ್ನು ಮತ್ತು ಇತರ ಪ್ರಯೋಜನದಾಯಕ ಸೇವಾಕಾರ್ಯಗಳನ್ನು ಬೆಂಬಲಿಸುತ್ತವೆ