ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಧುನಿಕ ಗ್ರೀಕ್‌ ಭಾಷೆಯಲ್ಲಿ ಬೈಬಲನ್ನು ತಯಾರಿಸಲಿಕ್ಕಾಗಿ ತೀವ್ರ ಪ್ರಯತ್ನ

ಆಧುನಿಕ ಗ್ರೀಕ್‌ ಭಾಷೆಯಲ್ಲಿ ಬೈಬಲನ್ನು ತಯಾರಿಸಲಿಕ್ಕಾಗಿ ತೀವ್ರ ಪ್ರಯತ್ನ

ಆಧುನಿಕ ಗ್ರೀಕ್‌ ಭಾಷೆಯಲ್ಲಿ ಬೈಬಲನ್ನು ತಯಾರಿಸಲಿಕ್ಕಾಗಿ ತೀವ್ರ ಪ್ರಯತ್ನ

ಮುಕ್ತ ವಿಚಾರದ ತೊಟ್ಟಿಲು ಎಂದು ಕೆಲವೊಮ್ಮೆ ಕರೆಯಲಾಗುವ ಗ್ರೀಸ್‌ ದೇಶದಲ್ಲಿ, ಜನಸಾಮಾನ್ಯರ ಭಾಷೆಯಲ್ಲಿ ಬೈಬಲನ್ನು ಭಾಷಾಂತರಿಸುವ ವಿಷಯವು, ದೀರ್ಘಸಮಯದ ಹಾಗೂ ಕಠಿನವಾದ ಹೋರಾಟದ ಕೇಂದ್ರಬಿಂದುವಾಗಿತ್ತು ಎಂಬುದನ್ನು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಆದರೆ, ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾದ ಗ್ರೀಕ್‌ ಭಾಷೆಯ ಬೈಬಲನ್ನು ತಯಾರಿಸುವುದನ್ನು ಯಾರು ವಿರೋಧಿಸಾರು? ಅದನ್ನು ನಿಲ್ಲಿಸಲು ಯಾರಾದರೂ ಏಕೆ ಪ್ರಯತ್ನಿಸಾರು?

ಪವಿತ್ರ ಶಾಸ್ತ್ರಗಳ ಒಂದು ದೊಡ್ಡ ಭಾಗವು ಮೂಲತಃ ಗ್ರೀಕ್‌ ಭಾಷೆಯಲ್ಲಿ ಬರೆಯಲ್ಪಟ್ಟಿದ್ದರಿಂದ ಗ್ರೀಕ್‌ ಭಾಷೆಯನ್ನಾಡುವ ಜನರು ಧನ್ಯರು ಎಂದು ನೀವು ನೆನಸಬಹುದು. ಆದರೆ ಆಧುನಿಕ ಗ್ರೀಕ್‌ ಭಾಷೆಯು, ಹೀಬ್ರು ಶಾಸ್ತ್ರಗಳ ಸೆಪ್ಟೂಅಜಂಟ್‌ ಭಾಷಾಂತರ ಹಾಗೂ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಗ್ರೀಕ್‌ ಭಾಷೆಗಿಂತ ಬಹಳಷ್ಟು ಭಿನ್ನವಾಗಿದೆ. ವಾಸ್ತವದಲ್ಲಿ ಕಳೆದ ಆರು ಶತಮಾನಗಳಿಂದ, ಗ್ರೀಕ್‌ ಭಾಷೆಯನ್ನಾಡುವ ಹೆಚ್ಚಿನ ಜನರಿಗೆ ಬೈಬಲಿಗಾಗಿ ಉಪಯೋಗಿಸಲ್ಪಟ್ಟಿದ್ದ ಗ್ರೀಕ್‌ ಭಾಷೆಯು, ಒಂದು ವಿದೇಶೀ ಭಾಷೆಯಷ್ಟೇ ಅಪರಿಚಿತವಾಗಿಬಿಟ್ಟಿದೆ. ಹಳೆಯ ಪದಗಳ ಸ್ಥಾನದಲ್ಲಿ ಹೊಸ ಪದಗಳು ಬಂದಿವೆ ಮತ್ತು ಶಬ್ದಭಂಡಾರ, ವ್ಯಾಕರಣ ಹಾಗೂ ವಾಕ್ಯರಚನೆಯು ಬದಲಾಗಿಬಿಟ್ಟಿದೆ.

ಮೂರರಿಂದ ಹದಿನಾರನೆಯ ಶತಮಾನದ ವರೆಗಿನ ಗ್ರೀಕ್‌ ಹಸ್ತಪ್ರತಿಗಳ ಒಂದು ಸಂಗ್ರಹವು, ಸೆಪ್ಟೂಅಜಂಟ್‌ ಅನ್ನು ಗ್ರೀಕ್‌ ಭಾಷೆಯ ಇತ್ತೀಚಿನ ರೂಪಕ್ಕೆ ಭಾಷಾಂತರಿಸಲು ಮಾಡಲ್ಪಟ್ಟ ಒಂದು ಪ್ರಯತ್ನಕ್ಕೆ ಪ್ರಮಾಣವನ್ನು ಒದಗಿಸುತ್ತದೆ. ಮೂರನೆಯ ಶತಮಾನದಲ್ಲಿ, ನೀಯೋಸೀಸರೀಯದ ಬಿಷಪರಾಗಿದ್ದ ಗ್ರೆಗರಿ ಎಂಬವರು (ಸಾ.ಶ. 213ರಿಂದ 270) ಸೆಪ್ಟೂಅಜಂಟ್‌ನಿಂದ ಪ್ರಸಂಗಿ ಪುಸ್ತಕವನ್ನು ಸರಳವಾದ ಗ್ರೀಕ್‌ ಭಾಷೆಗೆ ಭಾಷಾಂತರಿಸಿದರು. 11ನೆಯ ಶತಮಾನದಲ್ಲಿ ಮೆಸಡೋನ್ಯದಲ್ಲಿ ಜೀವಿಸುತ್ತಿದ್ದ ಟೊಬೈಯಸ್‌ ಬೆನ್‌ ಎಲೀಯೆಸರ್‌ ಎಂಬ ಯೆಹೂದ್ಯನು, ಸೆಪ್ಟೂಅಜಂಟ್‌ನಲ್ಲಿದ್ದ ಪೆಂಟಟ್ಯೂಕ್‌ನ ಕೆಲವೊಂದು ಭಾಗಗಳನ್ನು ನಿತ್ಯಬಳಕೆಯ ಗ್ರೀಕ್‌ಭಾಷೆಗೆ ಭಾಷಾಂತರಿಸಿದನು. ಕೇವಲ ಗ್ರೀಕ್‌ ಭಾಷೆಯನ್ನಾಡುತ್ತಿದ್ದ ಆದರೆ ಹೀಬ್ರು ಲಿಪಿಯನ್ನು ಓದುತ್ತಿದ್ದ ಮೆಸಡೋನ್ಯದ ಯೆಹೂದ್ಯರ ಪ್ರಯೋಜನಾರ್ಥವಾಗಿ ಅವನು ಹೀಬ್ರು ಲಿಪಿಯನ್ನೂ ಉಪಯೋಗಿಸಿದನು. ಈ ವಿಧದ ಸಂಪೂರ್ಣ ಪೆಂಟಟ್ಯೂಕ್‌ ಅನ್ನು 1547ರಲ್ಲಿ ಕಾನ್‌ಸ್ಟೆಂಟಿನೋಪಲ್‌ನಲ್ಲಿ ಪ್ರಕಾಶಿಸಲಾಯಿತು.

ಅಂಧಕಾರದ ನಡುವೆ ಸ್ವಲ್ಪ ಬೆಳಕು

ಬೈಸಾಂಟ್ಯಮ್‌ ಸಾಮ್ರಾಜ್ಯದಲ್ಲಿದ್ದ ಗ್ರೀಕ್‌ ಭಾಷೆಯ ಕ್ಷೇತ್ರಗಳು 15ನೆಯ ಶತಮಾನದಲ್ಲಿ ಆಟೊಮನರ ನಿಯಂತ್ರಣದಡಿ ಬಂದಾಗ, ಅಧಿಕಾಂಶ ಜನರಿಗೆ ಶಿಕ್ಷಣವಿರಲಿಲ್ಲ. ಆಟೊಮನ್‌ ಸಾಮ್ರಾಜ್ಯದಲ್ಲಿ ಆರ್ತೊಡಾಕ್ಸ್‌ ಚರ್ಚಿಗೆ ವಿಶೇಷವಾದ ಅನುಗ್ರಹವು ಕೊಡಲ್ಪಟ್ಟಿದ್ದರೂ, ಅದು ಅಲಕ್ಷ್ಯದಿಂದ ಅದರ ಮಂದೆಯು ಬಡ ಹಾಗೂ ಅವಿದ್ಯಾವಂತ ರೈತಾಪಿ ಜನರಾಗುವಂತೆ ಬಿಟ್ಟಿತು. ಗ್ರೀಕ್‌ ಲೇಖಕರಾದ ಥಾಮಸ್‌ ಸ್ಪೀಲ್ಯಾಸ್‌ ಹೇಳಿದ್ದು: “ಆರ್ತೊಡಾಕ್ಸ್‌ ಚರ್ಚಿನ ಮತ್ತು ಅದರ ಶೈಕ್ಷಣಿಕ ವ್ಯವಸ್ಥೆಯ ಅತಿ ಮುಖ್ಯ ಗುರಿಯು, ಅದರ ಸದಸ್ಯರನ್ನು ಇಸ್ಲಾಮ್‌ ಮತ ಹಾಗೂ ರೋಮನ್‌ ಕ್ಯಾಥೊಲಿಕ್‌ ಧರ್ಮದ ಪ್ರಚಾರ ದಾಳಿಗಳಿಂದ ಸಂರಕ್ಷಿಸುವುದೇ ಆಗಿತ್ತು. ಫಲಿತಾಂಶವಾಗಿ, ಗ್ರೀಕ್‌ ಭಾಷೆಯಲ್ಲಿನ ಶಿಕ್ಷಣವು ಬಹುಮಟ್ಟಿಗೆ ನಿಶ್ಚಲವಾಯಿತು.” ಇಂಥ ನಿರೀಕ್ಷಾಹೀನ ವಾತಾವರಣದಲ್ಲಿ, ಬೈಬಲಿನ ಕೀರ್ತನೆಗಳ ಪುಸ್ತಕದಿಂದ ಸಂತ್ರಸ್ತ ಜನರಿಗೆ ಉಪಶಮನ ಹಾಗೂ ಸಾಂತ್ವನವನ್ನು ಒದಗಿಸುವ ಅಗತ್ಯವಿದೆಯೆಂದು ಬೈಬಲ್‌ ಪ್ರಿಯರಿಗನಿಸಿತು. ಆದುದರಿಂದ 1543ರಿಂದ 1835ರ ವರೆಗೆ, ಗ್ರೀಕ್‌ ಆಡುಭಾಷೆಯಲ್ಲಿ ಕೀರ್ತನೆಗಳ 18 ಭಾಷಾಂತರಗಳು ಇದ್ದವು.

ಸಂಪೂರ್ಣ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಪ್ರಥಮ ಗ್ರೀಕ್‌ ಭಾಷಾಂತರವು 1630ರಲ್ಲಿ ಮಾಕ್ಸಮಸ್‌ ಕಾಲೀಪೋಲೀಟೀಸ್‌ನಿಂದ ಸಿದ್ಧಗೊಳಿಸಲ್ಪಟ್ಟಿತು. ಇವನು, ಕ್ಯಾಲಿಪೊಲಿಸ್‌ ಎಂಬಲ್ಲಿನ ಗ್ರೀಕ್‌ ಸಂನ್ಯಾಸಿಯಾಗಿದ್ದನು. ಇದನ್ನು ಸಿರಿಲ್‌ ಲೂಕಾರಸ್‌ನ ನಿರ್ದೇಶನ ಹಾಗೂ ಬೆಂಬಲದೊಂದಿಗೆ ಮಾಡಲಾಯಿತು. ಅವನು, ಕಾನ್‌ಸ್ಟೆಂಟಿನೋಪಲ್‌ನ ಚರ್ಚ್‌ ಮುಖ್ಯಸ್ಥನಾಗಿದ್ದನು ಮತ್ತು ಆರ್ತೊಡಾಕ್ಸ್‌ ಚರ್ಚಿನ ಭಾವೀ ಸುಧಾರಕನಾಗಿದ್ದನು. ಚರ್ಚಿನೊಳಗೇ ಲೂಕಾರಸ್‌ನ ವಿರೋಧಿಗಳಿದ್ದರು. ಮತ್ತು ಇವರು, ಸುಧಾರಣೆಯ ಯಾವುದೇ ಪ್ರಯತ್ನಗಳನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ ಮತ್ತು ಆಡುಭಾಷೆಯಲ್ಲಿ ಬೈಬಲಿನ ಯಾವುದೇ ಭಾಷಾಂತರಕ್ಕೆ ಒಪ್ಪಿಗೆ ಕೊಡಲಿಲ್ಲ. * ಲೂಕಾರಸ್‌ನನ್ನು ಒಬ್ಬ ದೇಶದ್ರೋಹಿಯೋಪಾದಿ ಕತ್ತುಹಿಸುಕಿ ಕೊಲ್ಲಲಾಯಿತು. ಹಾಗಿದ್ದರೂ, ಮಾಕ್ಸಮಸ್‌ನ ಭಾಷಾಂತರದ ಸುಮಾರು 1,500 ಪ್ರತಿಗಳು 1638ರಲ್ಲಿ ಮುದ್ರಿಸಲ್ಪಟ್ಟವು. ಈ ಭಾಷಾಂತರಕ್ಕೆ ಪ್ರತಿಕ್ರಿಯೆಯಲ್ಲಿ, ಸುಮಾರು 34 ವರ್ಷಗಳ ಬಳಿಕ ಜೆರೂಸಲೆಮ್‌ನಲ್ಲಿ ನಡೆದ ಆರ್ತೊಡಾಕ್ಸ್‌ ಧರ್ಮಾಧಿಕಾರಿಗಳ ಆಲೋಚನಾ ಸಭೆಯು ಘೋಷಿಸಿದ್ದೇನೆಂದರೆ, ಶಾಸ್ತ್ರಗಳನ್ನು “ಇಷ್ಟಬಂದವರೆಲ್ಲ ಓದಸಾಧ್ಯವಿಲ್ಲ, ಬದಲಾಗಿ ಸೂಕ್ತವಾದ ಸಂಶೋಧನೆಯನ್ನು ನಡೆಸಿದ ಬಳಿಕ ಆತ್ಮದ ವಿಚಾರಗಳನ್ನು ಆಳವಾಗಿ ಪರಿಶೋಧಿಸಿ ನೋಡುವವರು ಮಾತ್ರ ಅದನ್ನು ಓದಸಾಧ್ಯವಿದೆ.” ಇದರರ್ಥ, ಶಾಸ್ತ್ರಗಳನ್ನು ಕೇವಲ ಸುಶಿಕ್ಷಿತ ಪಾದ್ರಿವರ್ಗದವರು ಮಾತ್ರ ಓದಬೇಕು ಎಂದಾಗಿತ್ತು.

ಇಸವಿ 1703ರಲ್ಲಿ, ಲೆಸ್ವೊಸ್‌ ಎಂಬ ದ್ವೀಪದವನಾಗಿದ್ದ ಗ್ರೀಕ್‌ ಸಂನ್ಯಾಸಿಯಾಗಿದ್ದ ಸೆರಫಿಮ್‌, ಮಾಕ್ಸಮಸ್‌ನ ಭಾಷಾಂತರದ ಒಂದು ಪರಿಷ್ಕೃತ ಆವೃತ್ತಿಯನ್ನು ಲಂಡನ್‌ನಲ್ಲಿ ಪ್ರಕಾಶಿಸಲು ಪ್ರಯತ್ನಿಸಿದನು. ಇಂಗ್ಲೆಂಡಿನ ರಾಜನ ಆಸ್ಥಾನವು ಹಣಕಾಸಿನ ಸಹಾಯವನ್ನು ಒದಗಿಸುವುದೆಂದು ಕೊಟ್ಟ ಮಾತನ್ನು ಪಾಲಿಸದಿದ್ದಾಗ, ಅವನು ತನ್ನ ಸ್ವಂತ ಹಣದಿಂದ ಆ ಪರಿಷ್ಕೃತ ಆವೃತ್ತಿಯನ್ನು ಮುದ್ರಿಸಿದನು. ಅದರ ಆವೇಶಭರಿತ ಮುನ್ನುಡಿಯಲ್ಲಿ ಸೆರಫಿಮನು, “ಪ್ರತಿಯೊಬ್ಬ ದೈವಭಕ್ತ ಕ್ರೈಸ್ತನು” ಬೈಬಲನ್ನು ಓದುವ ಅಗತ್ಯದ ಕುರಿತಾಗಿ ಒತ್ತಿಹೇಳಿದನು ಮತ್ತು ಚರ್ಚಿನ ಉಚ್ಚ ಪದವಿಯ ಪಾದ್ರಿವರ್ಗದವರು “ಜನರನ್ನು ಅಜ್ಞಾನದಲ್ಲೇ ಇಡುವ ಮೂಲಕ ತಮ್ಮ ದುರ್ನಡತೆಯನ್ನು ಮರೆಮಾಡುವ ಆಸೆಯುಳ್ಳವರು” ಆಗಿದ್ದಾರೆಂಬ ಆರೋಪ ಹೊರಿಸಿದನು. ನಿರೀಕ್ಷಿಸಲಾದಂತೆ, ಅವನ ಆರ್ತೊಡಾಕ್ಸ್‌ ವಿರೋಧಿಗಳು ರಷ್ಯದಲ್ಲಿ ಅವನ ದಸ್ತಗಿರಿಯಾಗುವಂತೆ ನೋಡಿಕೊಂಡರು ಮತ್ತು ಅವನನ್ನು ಸೈಬೀರಿಯಕ್ಕೆ ಗಡೀಪಾರುಮಾಡಲಾಯಿತು. ಅಲ್ಲಿ ಅವನು 1735ರಲ್ಲಿ ತೀರಿಹೋದನು.

ಆ ಅವಧಿಯಲ್ಲಿದ್ದ ಗ್ರೀಕ್‌ ಭಾಷೆಯನ್ನಾಡುತ್ತಿದ್ದ ಜನರ ತೀವ್ರವಾದ ಆತ್ಮಿಕ ಹಸಿವಿನ ಕುರಿತಾಗಿ ತಿಳಿಸುತ್ತಾ, ಮಾಕ್ಸಮಸ್‌ನ ಭಾಷಾಂತರದ ಮುಂದಿನ ಒಂದು ಪರಿಷ್ಕೃತ ಆವೃತ್ತಿಯ ಬಗ್ಗೆ ಒಬ್ಬ ಗ್ರೀಕ್‌ ಪಾದ್ರಿಯು ಈ ಹೇಳಿಕೆಯನ್ನು ಮಾಡಿದನು: “ಬೇರೆಯವರೊಂದಿಗೆ ಗ್ರೀಕ್‌ ಜನರು ಈ ಪವಿತ್ರ ಬೈಬಲನ್ನು ಪ್ರೀತಿ ಹಾಗೂ ಕಡುಬಯಕೆಯಿಂದ ಸ್ವೀಕರಿಸಿದರು. ಅವರದನ್ನು ಓದಿದರು. ಅವರೊಳಗಿದ್ದ ನೋವು ಶಮನಗೊಳಿಸಲ್ಪಟ್ಟ ಅನುಭವ ಅವರಿಗಾಯಿತು ಮತ್ತು ದೇವರಲ್ಲಿದ್ದ ಅವರ ನಂಬಿಕೆಯು . . . ಭುಗಿಲೆದ್ದಿತು.” ಆದರೆ ಜನರು ಬೈಬಲನ್ನು ಅರ್ಥಮಾಡಿಕೊಂಡರೆ, ಆಗ ಪಾದ್ರಿಗಳ ಅಶಾಸ್ತ್ರೀಯ ನಂಬಿಕೆಗಳೂ ಕ್ರಿಯೆಗಳೂ ಬಯಲಾಗುವವು ಎಂದು ಅವರ ಆತ್ಮಿಕ ಮುಖಂಡರು ಹೆದರಿದರು. ಆದುದರಿಂದ 1823 ಮತ್ತು ಪುನಃ 1836ರಲ್ಲಿ, ಕಾನ್‌ಸ್ಟೆಂಟಿನೋಪಲ್‌ನ ಬಿಷಪನು, ಅಂಥ ಬೈಬಲ್‌ ಭಾಷಾಂತರಗಳ ಎಲ್ಲಾ ಪ್ರತಿಗಳನ್ನು ಸುಟ್ಟುಹಾಕುವಂತೆ ಆಜ್ಞೆಹೊರಡಿಸಿದನು.

ಒಬ್ಬ ಧೀರ ಭಾಷಾಂತರಕಾರ

ಈ ಕಟು ವಿರೋಧ ಹಾಗೂ ಬೈಬಲ್‌ ಜ್ಞಾನಕ್ಕಾಗಿದ್ದ ಹೃತ್ಪೂರ್ವಕ ಹಂಬಲದ ಹಿನ್ನೆಲೆಯಲ್ಲಿ, ಆಧುನಿಕ ಗ್ರೀಕ್‌ ಭಾಷೆಗೆ ಬೈಬಲನ್ನು ಭಾಷಾಂತರಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದ್ದ ಒಬ್ಬ ಪ್ರಖ್ಯಾತ ವ್ಯಕ್ತಿಯು ಉದಯಿಸಿದನು. ಈ ಧೀರ ವ್ಯಕ್ತಿಯು, ನೇಯೊಫೀಟೌಸ್‌ ವಾಮ್‌ವಾಸ್‌ ಆಗಿದ್ದನು. ಅವನು ಒಬ್ಬ ಪ್ರತಿಷ್ಠಿತ ಬಹುಭಾಷಾ ಶಾಸ್ತ್ರಜ್ಞ ಮತ್ತು ಪ್ರಸಿದ್ಧ ಬೈಬಲ್‌ ವಿದ್ವಾಂಸನಾಗಿದ್ದನು. ಅವನನ್ನು ಸಾಮಾನ್ಯವಾಗಿ, “ರಾಷ್ಟ್ರದ ಶಿಕ್ಷಕರಲ್ಲಿ” ಒಬ್ಬನೆಂದು ಪರಿಗಣಿಸಲಾಗುತ್ತಿತ್ತು.

ಜನರ ಆತ್ಮಿಕ ಅನಕ್ಷರಸ್ಥತೆಗೆ ಆರ್ತೊಡಾಕ್ಸ್‌ ಚರ್ಚು ತಾನೇ ಕಾರಣವೆಂಬುದನ್ನು ವಾಮ್‌ವಾಸ್‌ ನಂಬಿದನು. ಜನರನ್ನು ಆತ್ಮಿಕವಾಗಿ ಎಚ್ಚರಗೊಳಿಸಲು, ಬೈಬಲನ್ನು ಆ ಸಮಯದಲ್ಲಿನ ಗ್ರೀಕ್‌ ಆಡುಭಾಷೆಗೆ ಭಾಷಾಂತರಮಾಡಬೇಕು ಎಂದು ಅವನು ದೃಢವಾಗಿ ನಂಬಿದನು. 1831ರಲ್ಲಿ, ಇತರ ವಿದ್ವಾಂಸರ ಸಹಾಯದೊಂದಿಗೆ, ಅವನು ಬೈಬಲನ್ನು ಪಾಂಡಿತ್ಯಪೂರ್ಣ ಗ್ರೀಕ್‌ ಭಾಷೆಗೆ ಭಾಷಾಂತರಿಸಲಾರಂಭಿಸಿದನು. ಅವನ ಸಂಪೂರ್ಣ ಭಾಷಾಂತರವನ್ನು 1850ರಲ್ಲಿ ಪ್ರಕಾಶಿಸಲಾಯಿತು. ಗ್ರೀಕ್‌ ಆರ್ತೊಡಾಕ್ಸ್‌ ಚರ್ಚು ಅವನಿಗೆ ಬೆಂಬಲವನ್ನು ನೀಡದಿದ್ದ ಕಾರಣ, ಅವನು ತನ್ನ ಭಾಷಾಂತರದ ಪ್ರಕಾಶನ ಹಾಗೂ ವಿತರಣೆಗಾಗಿ ಬ್ರಿಟಿಷ್‌ ಆ್ಯಂಡ್‌ ಫಾರೆನ್‌ ಬೈಬಲ್‌ ಸೊಸೈಟಿ (ಬಿಎಫ್‌ಬಿಎಸ್‌)ಯೊಂದಿಗೆ ಜೊತೆಗೂಡಿ ಕೆಲಸಮಾಡಿದನು. ಚರ್ಚು ಅವನಿಗೆ “ಪ್ರಾಟೆಸ್ಟಂಟ್‌” ಎಂಬ ಹೆಸರನ್ನು ಕೊಟ್ಟ ಕಾರಣ ಬೇಗನೆ ಅವನನ್ನು ಸಮಾಜದಿಂದ ಹೊರಹಾಕಲಾಯಿತು.

ವಾಮ್‌ವಾಸ್‌ನ ಭಾಷಾಂತರವು ಕಿಂಗ್‌ ಜೇಮ್ಸ್‌ ವರ್ಷನ್‌ಗೆ ನಿಕಟವಾಗಿ ಅಂಟಿಕೊಂಡಿತ್ತು, ಮತ್ತು ಈ ಕಾರಣದಿಂದ, ಆ ಸಮಯದಲ್ಲಿನ ಸೀಮಿತ ಬೈಬಲ್‌ ಜ್ಞಾನ ಹಾಗೂ ಭಾಷಾ ಜ್ಞಾನದಿಂದಾಗಿ ಆ ಭಾಷಾಂತರದಲ್ಲಿದ್ದ ಕುಂದುಕೊರತೆಗಳು ಅವನ ಭಾಷಾಂತರದಲ್ಲೂ ತೋರಿಬಂದವು. ಆದರೂ ಅನೇಕ ವರ್ಷಗಳ ವರೆಗೆ, ಈ ಭಾಷಾಂತರವೇ ಜನರಿಗೆ ಅತ್ಯಾಧುನಿಕ ಗ್ರೀಕ್‌ ಭಾಷೆಯಲ್ಲಿ ಲಭ್ಯವಿದ್ದ ಬೈಬಲ್‌ ಆಗಿತ್ತು. ಆಸಕ್ತಿಕರ ಸಂಗತಿಯೇನೆಂದರೆ, ಅದರಲ್ಲಿ ದೇವರ ವೈಯಕ್ತಿಕ ಹೆಸರು, “ಈಓವಾ” ಎಂಬ ರೂಪದಲ್ಲಿ ನಾಲ್ಕು ಸಲ ಒಳಗೂಡಿಸಲ್ಪಟ್ಟಿತ್ತು.​—ಆದಿಕಾಂಡ 22:14; ವಿಮೋಚನಕಾಂಡ 6:3; 17:15; ನ್ಯಾಯಸ್ಥಾಪಕರು 6:24.

ಈ ಬೈಬಲ್‌ ಮತ್ತು ಸುಲಭವಾಗಿ ಅರ್ಥಮಾಡಿಕೊಳ್ಳಸಾಧ್ಯವಿದ್ದ ಇತರ ಭಾಷಾಂತರಗಳಿಗೆ ಜನರ ಸಾಮಾನ್ಯ ಪ್ರತಿಕ್ರಿಯೆ ಏನಾಗಿತ್ತು? ಅದು ಭಾವಪರವಶಗೊಳಿಸುವಂಥದ್ದು ಆಗಿತ್ತು! ಗ್ರೀಕ್‌ ದ್ವೀಪವೊಂದರ ತೀರದ ಒಂದು ದೋಣಿಯಲ್ಲಿದ್ದ ಬಿಎಫ್‌ಬಿಎಸ್‌ನ ಒಬ್ಬ ಬೈಬಲ್‌ ಮಾರಾಟಗಾರನು, “[ಬೈಬಲ್‌ಗಳಿಗಾಗಿ] ಬಂದಿದ್ದ ಮಕ್ಕಳಿಂದ ತುಂಬಿದ ಎಷ್ಟೊಂದು ದೋಣಿಗಳಿಂದ ಸುತ್ತುವರಿಯಲ್ಪಟ್ಟನೆಂದರೆ, . . . ಕ್ಯಾಪ್ಟನನು ಅಲ್ಲಿಂದ ಹಡಗನ್ನು ಹೊರಡಿಸಲು ಅಪ್ಪಣೆ ಕೊಡುವಂತೆ ಒತ್ತಾಯಿಸಲ್ಪಟ್ಟನು.” ಇಲ್ಲದಿದ್ದಲ್ಲಿ ಅವನು ತನ್ನ ಬಳಿ ಇದ್ದ ಇಡೀ ಸ್ಟಾಕನ್ನು ಒಂದೇ ಸ್ಥಳದಲ್ಲಿ ಖಾಲಿಮಾಡಬೇಕಾಗುತ್ತಿತ್ತೊ ಏನೋ! ಆದರೆ ವಿರೋಧಿಗಳು ಇದೆಲ್ಲವನ್ನು ನೋಡುತ್ತಾ ಸುಮ್ಮನೆ ಕೂರಲಿಲ್ಲ.

ಆರ್ತೊಡಾಕ್ಸ್‌ ಪಾದ್ರಿಗಳು ಜನರನ್ನು ಇಂಥ ಭಾಷಾಂತರಗಳ ವಿರುದ್ಧ ಎಚ್ಚರಿಸಿದರು. ದೃಷ್ಟಾಂತಕ್ಕಾಗಿ ಅಥೆನ್ಸ್‌ ನಗರದಲ್ಲಿ ಬೈಬಲ್‌ಗಳನ್ನು ವಶಪಡಿಸಿಕೊಳ್ಳಲಾಯಿತು. 1833ರಲ್ಲಿ ಕ್ರೀಟ್‌ ದ್ವೀಪದ ಆರ್ತೊಡಾಕ್ಸ್‌ ಬಿಷಪನು, ಒಂದು ಸಂನ್ಯಾಸಿ ಮಠದಲ್ಲಿ ಕಂಡುಹಿಡಿದ “ಹೊಸ ಒಡಂಬಡಿಕೆಗಳನ್ನು” ಬೆಂಕಿಗೆ ಹಾಕಿದನು. ಒಂದು ಪ್ರತಿಯನ್ನು ಒಬ್ಬ ಪಾದ್ರಿಯು ಅಡಗಿಸಿಟ್ಟನು, ಮತ್ತು ಹತ್ತಿರದ ಹಳ್ಳಿಗಳಲ್ಲಿದ್ದ ಜನರು ಆ ಬಿಷಪನು ಆ ದ್ವೀಪವನ್ನು ಬಿಟ್ಟುಹೋಗುವ ವರೆಗೂ ತಮ್ಮ ಪ್ರತಿಗಳನ್ನು ಅಡಗಿಸಿಟ್ಟರು.

ಕೆಲವು ವರ್ಷಗಳ ಬಳಿಕ ಕಾರ್ಫೂ ಎಂಬ ದ್ವೀಪದಲ್ಲಿ, ಗ್ರೀಕ್‌ ಆರ್ತೊಡಾಕ್ಸ್‌ ಚರ್ಚಿನ ಪವಿತ್ರ ಆಡಳಿತ ಸಭೆಯು ವಾಮ್‌ವಾಸ್‌ ಬೈಬಲಿನ ಭಾಷಾಂತರವನ್ನು ನಿಷಿದ್ಧಗೊಳಿಸಿತು. ಅದರ ಮಾರಾಟವನ್ನು ನಿಷೇಧಿಸಲಾಯಿತು ಮತ್ತು ಇದ್ದ ಎಲ್ಲಾ ಪ್ರತಿಗಳನ್ನು ನಾಶಗೊಳಿಸಲಾಯಿತು. ಕಯಾಸ್‌, ಸೀರಾಸ್‌, ಮತ್ತು ಮಿಕನಾಸ್‌ ದ್ವೀಪಗಳಲ್ಲಿ, ಸ್ಥಳಿಕ ಪಾದ್ರಿಗಳ ದ್ವೇಷವು ಬೈಬಲ್‌ ಸುಡುವಿಕೆಗೆ ನಡಿಸಿತು. ಆದರೆ ಬೈಬಲ್‌ ಭಾಷಾಂತರದ ಇನ್ನೂ ಹೆಚ್ಚಿನ ನಿಗ್ರಹವು ಇನ್ನೂ ಮುಂದೆ ಆಗಲಿಕ್ಕಿತ್ತು.

ಒಬ್ಬ ರಾಣಿಯು ಬೈಬಲ್‌ನಲ್ಲಿ ಆಸಕ್ತಿವಹಿಸುತ್ತಾಳೆ

ಸಾಮಾನ್ಯ ಗ್ರೀಕ್‌ ಜನರಿಗೆ ಬೈಬಲಿನ ಕುರಿತಾಗಿ ತೀರ ಅಲ್ಪ ಜ್ಞಾನವಿತ್ತೆಂಬುದನ್ನು, 1870ಗಳಲ್ಲಿ ರಾಣಿ ಆಲ್ಗ ಗ್ರಹಿಸಿದಳು. ಶಾಸ್ತ್ರಗಳ ಕುರಿತಾದ ಜ್ಞಾನವು ರಾಷ್ಟ್ರಕ್ಕೆ ಸಾಂತ್ವನವನ್ನು ಮತ್ತು ಚೈತನ್ಯವನ್ನು ನೀಡುವುದೆಂಬದನ್ನು ನಂಬುತ್ತಾ, ವಾಮ್‌ವಾಸ್‌ ಭಾಷಾಂತರಕ್ಕಿಂತಲೂ ಹೆಚ್ಚು ಸರಳವಾದ ಭಾಷೆಯಲ್ಲಿ ಬೈಬಲು ಭಾಷಾಂತರಿಸಲ್ಪಡುವಂತೆ ಅವಳು ಪ್ರಯತ್ನಿಸಿದಳು.

ಅನಧಿಕೃತವಾಗಿ, ಅಥೆನ್ಸ್‌ನ ಆರ್ಚ್‌ಬಿಷಪ್‌ ಮತ್ತು ಪವಿತ್ರ ಆಡಳಿತ ಸಭೆಯ ಮುಖ್ಯಸ್ಥನಾಗಿದ್ದ ಪ್ರೋಕೋಪಿಯೋಸ್‌ ಈ ವಿಷಯದಲ್ಲಿ ರಾಣಿಯನ್ನು ಪ್ರೋತ್ಸಾಹಿಸಿದನು. ಆದರೆ ಅಧಿಕೃತ ಮನ್ನಣೆಗಾಗಿ ಅವಳು ಪವಿತ್ರ ಆಡಳಿತ ಸಭೆಗೆ ವಿನಂತಿಸಿದಾಗ, ಅವಳ ವಿನಂತಿಯನ್ನು ತಳ್ಳಿಹಾಕಲಾಯಿತು. ಹಾಗಿದ್ದರೂ ಅವಳು ಪಟ್ಟುಹಿಡಿದಳು, ಮತ್ತು ಇನ್ನೊಂದು ಹೊಸ ಅರ್ಜಿಯನ್ನು ಸಲ್ಲಿಸಿದಳು. ಆದರೆ 1899ರಲ್ಲಿ ಎರಡನೆಯ ಸಲವೂ ಅದನ್ನು ನಿರಾಕರಿಸಲಾಯಿತು. ಆ ಅಸಮ್ಮತಿಯನ್ನು ನಿರ್ಲಕ್ಷಿಸುತ್ತಾ, ಅವಳು ತನ್ನ ಸ್ವಂತ ಖರ್ಚಿನಲ್ಲಿ ಸೀಮಿತ ಸಂಖ್ಯೆಯ ಪ್ರತಿಗಳನ್ನು ಮುದ್ರಿಸಲು ನಿರ್ಣಯಿಸಿದಳು. ಇದನ್ನು 1900ರಲ್ಲಿ ಪೂರ್ಣಗೊಳಿಸಲಾಯಿತು.

ಜಗ್ಗದ ವಿರೋಧಿಗಳು

ಇಸವಿ 1901ರಲ್ಲಿ ಅಥೆನ್ಸ್‌ನ ಒಂದು ಪ್ರಖ್ಯಾತ ವಾರ್ತಾಪತ್ರಿಕೆಯಾದ ದಿ ಆಕ್ರೊಪೊಲಿಸ್‌, ಜನಸಾಮಾನ್ಯ ರೂಪದ ಗ್ರೀಕ್‌ ಭಾಷೆಗೆ ಭಾಷಾಂತರಮಾಡಲ್ಪಟ್ಟಿದ್ದ ಮತ್ತಾಯನ ಸುವಾರ್ತೆಯನ್ನು ಪ್ರಕಾಶಿಸಿತು. ಅದನ್ನು ಭಾಷಾಂತರಮಾಡಿದವನು, ಇಂಗ್ಲೆಂಡ್‌ನ ಲಿವರ್‌ಪೂಲ್‌ನಲ್ಲಿ ಕೆಲಸಮಾಡುತ್ತಿದ್ದ ಆಲೆಕ್ಸಾಂಡರ್‌ ಪಾಲೀಸ್‌ ಎಂಬ ಭಾಷಾಂತರಕಾರನಾಗಿದ್ದನು. ಪಾಲೀಸ್‌ ಮತ್ತು ಅವನ ಸಹಕರ್ಮಿಗಳ ಸುವ್ಯಕ್ತ ಉದ್ದೇಶವು, ‘ಗ್ರೀಕ್‌ ಜನರನ್ನು ಶಿಕ್ಷಿತಗೊಳಿಸುವುದು’ ಮತ್ತು ಪತನದಿಂದ “ಚೇತರಿಸಿಕೊಳ್ಳುವಂತೆ ಆ ದೇಶಕ್ಕೆ ಸಹಾಯಮಾಡುವುದು” ಆಗಿತ್ತು.

ಆರ್ತೊಡಾಕ್ಸ್‌ ದೇವತಾಶಾಸ್ತ್ರ ವಿದ್ಯಾರ್ಥಿಗಳು ಮತ್ತು ಅವರ ಪ್ರೊಫೆಸರರು ಆ ಭಾಷಾಂತರವನ್ನು “ದೇಶದ ಅತ್ಯಮೂಲ್ಯವಾದ ಪೂಜ್ಯವಸ್ತುಗಳ ಅಪಹಾಸ್ಯಮಾಡುವಿಕೆ,” ಬೈಬಲಿನ ಅಪವಿತ್ರಗೊಳಿಸುವಿಕೆ ಎಂದು ಕರೆದರು. ಕಾನ್‌ಸ್ಟೆಂಟಿನೋಪಲ್‌ನ ಬಿಷಪರಾಗಿದ್ದ IIIನೆಯ ಈಓಆಕಿಮ್‌ ಆ ಭಾಷಾಂತರವನ್ನು ಅಸಮ್ಮತಿಸುವಂಥ ಒಂದು ಶಾಸನವನ್ನು ಹೊರಡಿಸಿದರು. ಈ ವಾಗ್ವಾದವು ರಾಜಕೀಯ ರೂಪವನ್ನು ತಾಳಿತು, ಮತ್ತು ಕಚ್ಚಾಡುತ್ತಿದ್ದ ರಾಜಕೀಯ ಪಕ್ಷಗಳು ಅದನ್ನು ಕುಟಿಲ ರೀತಿಯಲ್ಲಿ ತಮ್ಮ ಪ್ರಯೋಜನಕ್ಕಾಗಿ ಬಳಸಿದವು.

ಅಥೆನ್ಸ್‌ನ ವಾರ್ತಾಮಾಧ್ಯಮದಲ್ಲಿ ತುಂಬ ವರ್ಚಸ್ಸುಳ್ಳ ಒಂದು ಭಾಗವು, ಪಾಲೀಸ್‌ನ ಭಾಷಾಂತರದ ಮೇಲೆ ದಾಳಿನಡೆಸಲಾರಂಭಿಸುತ್ತಾ, ಅದರ ಬೆಂಬಲಿಗರನ್ನು “ನಾಸ್ತಿಕರು,” “ದೇಶದ್ರೋಹಿಗಳು,” ಮತ್ತು ಗ್ರೀಕ್‌ ಸಮಾಜವನ್ನು ಅಸ್ಥಿರಗೊಳಿಸಲು ಪಟ್ಟುಹಿಡಿದಿರುವ “ವಿದೇಶಿ ಶಕ್ತಿಗಳ ಪ್ರತಿನಿಧಿಗಳು” ಎಂದು ಕರೆಯಿತು. ಗ್ರೀಕ್‌ ಆರ್ತೊಡಾಕ್ಸ್‌ ಚರ್ಚಿನಲ್ಲಿರುವ ವಿಪರೀತ ಸಂಪ್ರದಾಯಸ್ಥ ಗುಂಪುಗಳ ಪ್ರೇರಣೆಯ ಮೇರೆಗೆ, 1901ರ ನವೆಂಬರ್‌ 5ರಿಂದ 8ರ ವರೆಗೆ ವಿದ್ಯಾರ್ಥಿಗಳು ಅಥೆನ್ಸ್‌ನಲ್ಲಿ ದೊಂಬಿಗಲಭೆಯನ್ನು ನಡೆಸಿದರು. ಅವರು ದಿ ಆಕ್ರೊಪೊಲಿಸ್‌ ವಾರ್ತಾಪತ್ರಿಕೆಯ ಆಫೀಸುಗಳ ಮೇಲೆ ಆಕ್ರಮಣಮಾಡಿದರು, ಅರಮನೆಯ ವಿರುದ್ಧ ಮೆರವಣಿಗೆ ನಡೆಸಿದರು, ಅಥೆನ್ಸ್‌ನ ವಿಶ್ವವಿದ್ಯಾನಿಲಯವನ್ನು ಸ್ವಾಧೀನಪಡಿಸಿಕೊಂಡರು, ಮತ್ತು ಸರಕಾರವನ್ನು ರಾಜೀನಾಮೆ ಕೊಡುವಂತೆ ಒತ್ತಾಯಿಸಿದರು. ಆ ಗಲಭೆಗಳ ಅಂತ್ಯದಲ್ಲಿ, ಸೈನ್ಯದೊಂದಿಗಿನ ತಿಕ್ಕಾಟದಲ್ಲಿ ಎಂಟು ಮಂದಿ ಕೊಲ್ಲಲ್ಪಟ್ಟರು. ಮರುದಿನ, ರಾಜನು ಆರ್ಚ್‌ಬಿಷಪ್‌ ಪ್ರೋಕೋಪಿಯೋಸ್‌ನ ರಾಜೀನಾಮೆಯನ್ನು ಒತ್ತಾಯಿಸಿದನು ಮತ್ತು ಎರಡು ದಿನಗಳ ನಂತರ ಇಡೀ ಮಂತ್ರಿಮಂಡಲವು ರಾಜೀನಾಮೆ ಕೊಟ್ಟಿತು.

ಒಂದು ತಿಂಗಳ ನಂತರ ಆ ವಿದ್ಯಾರ್ಥಿಗಳು ಪುನಃ ಪ್ರದರ್ಶನ ನಡೆಸಿದರು ಮತ್ತು ಬಹಿರಂಗವಾಗಿ ಪಾಲೀಸ್‌ ಭಾಷಾಂತರದ ಒಂದು ಪ್ರತಿಯನ್ನು ಸುಟ್ಟುಹಾಕಿದರು. ಈ ಭಾಷಾಂತರದ ವಿತರಣೆಯ ವಿರುದ್ಧ ಅವರೊಂದು ಠರಾವನ್ನು ಹೊರಡಿಸಿದರು ಮತ್ತು ಮುಂದೆಂದಾದರೂ ಆ ಭಾಷಾಂತರವನ್ನು ವಿತರಿಸಲು ಮಾಡುವ ಪ್ರಯತ್ನಕ್ಕಾಗಿ ಕಠಿನ ಶಿಕ್ಷೆಯನ್ನು ವಿಧಿಸಲಿಕ್ಕಾಗಿ ಕೇಳಿಕೊಂಡರು. ಬೈಬಲಿನ ಆಧುನಿಕ ಗ್ರೀಕ್‌ ಭಾಷೆಯಲ್ಲಿನ ಯಾವುದೇ ಭಾಷಾಂತರದ ಉಪಯೋಗವನ್ನು ನಿಷೇಧಿಸಲು ಇದು ಒಂದು ನೆವವಾಗಿ ಕಾರ್ಯನಡಿಸಿತು! ನಿಶ್ಚಯವಾಗಿಯೂ ಇದೊಂದು ಕರಾಳ ಕ್ಷಣವಾಗಿತ್ತು!

“ಯೆಹೋವನ ಮಾತೋ ಸದಾಕಾಲವೂ ಇರುವದು”

ಆಧುನಿಕ ಗ್ರೀಕ್‌ ಭಾಷೆಯಲ್ಲಿರುವ ಬೈಬಲನ್ನು ಉಪಯೋಗಿಸುವುದರ ವಿರುದ್ಧ ಇದ್ದ ನಿಷೇಧವನ್ನು 1924ರಲ್ಲಿ ಹಿಂದೆಗೆಯಲಾಯಿತು. ಅಂದಿನಿಂದ, ಗ್ರೀಕ್‌ ಆರ್ತೊಡಾಕ್ಸ್‌ ಚರ್ಚು, ಬೈಬಲನ್ನು ಜನರಿಂದ ದೂರವಿಡಲು ಮಾಡಿರುವ ಎಲ್ಲಾ ಪ್ರಯತ್ನಗಳು ಸಂಪೂರ್ಣವಾಗಿ ನೆಲಕಚ್ಚಿವೆ. ತನ್ಮಧ್ಯೆ, ಯೆಹೋವನ ಸಾಕ್ಷಿಗಳು ಬೇರೆ ಅನೇಕ ದೇಶಗಳಲ್ಲಿ ಮಾಡಿರುವಂತೆಯೇ, ಗ್ರೀಸ್‌ನಲ್ಲೂ ಬೈಬಲ್‌ ಶಿಕ್ಷಣದ ಕೆಲಸದಲ್ಲಿ ನೇತೃತ್ವವನ್ನು ವಹಿಸಿದ್ದಾರೆ. 1905ರಂದಿನಿಂದ ಅವರು, ಗ್ರೀಕ್‌ ಭಾಷೆಯನ್ನಾಡುವ ಸಾವಿರಾರು ಜನರು ಬೈಬಲ್‌ ಸತ್ಯದ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ವಾಮ್‌ವಾಸ್‌ ಭಾಷಾಂತರವನ್ನು ಉಪಯೋಗಿಸಿದ್ದಾರೆ.

ಈ ಎಲ್ಲ ವರ್ಷಗಳಲ್ಲಿ, ಅನೇಕ ವಿದ್ವಾಂಸರೂ ಪ್ರೊಫೆಸರರೂ ಆಧುನಿಕ ಗ್ರೀಕ್‌ ಭಾಷೆಯಲ್ಲಿ ಬೈಬಲನ್ನು ತಯಾರಿಸಲು ಶ್ಲಾಘನೀಯ ಪ್ರಯತ್ನಗಳನ್ನು ಮಾಡಿದ್ದಾರೆ. ಇಂದು ಒಬ್ಬ ಸಾಮಾನ್ಯ ಗ್ರೀಕನಿಗೆ ಓದಸಾಧ್ಯವಿರುವ ಸುಮಾರು 30 ಬೈಬಲ್‌ ಭಾಷಾಂತರಗಳಿವೆ. ಇವು, ಇಡೀ ಬೈಬಲ್‌ ಇಲ್ಲವೆ ಬೈಬಲಿನ ಕೆಲವೊಂದು ಪುಸ್ತಕಗಳ ಭಾಷಾಂತರಗಳಾಗಿವೆ. ಇವುಗಳಲ್ಲಿ ಒಂದು ನೈಜ ಮಾಣಿಕ್ಯವು, ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರದ ಗ್ರೀಕ್‌ ಆವೃತ್ತಿಯಾಗಿದೆ. ಇದನ್ನು, ಲೋಕವ್ಯಾಪಕವಾಗಿ ಗ್ರೀಕ್‌ ಭಾಷೆಯನ್ನಾಡುವ 1.6 ಕೋಟಿ ಜನರ ಪ್ರಯೋಜನಕ್ಕಾಗಿ 1997ರಲ್ಲಿ ಬಿಡುಗಡೆಮಾಡಲಾಯಿತು. ಯೆಹೋವನ ಸಾಕ್ಷಿಗಳಿಂದ ತಯಾರಿಸಲ್ಪಟ್ಟಿರುವ ಈ ಭಾಷಾಂತರವನ್ನು, ದೇವರ ವಾಕ್ಯವನ್ನು ಸುಲಭವಾಗಿ ಓದಸಾಧ್ಯವಿರುವ, ಅರ್ಥಮಾಡಿಕೊಳ್ಳಬಲ್ಲ ರೀತಿಯಲ್ಲಿ ಮಾಡಲಾಗಿದ್ದು, ಅದು ಮೂಲ ಗ್ರಂಥಪಾಠಕ್ಕೆ ನಂಬಿಗಸ್ತಿಕೆಯಿಂದ ಅಂಟಿಕೊಳ್ಳುತ್ತದೆ.

ಆಧುನಿಕ ಗ್ರೀಕ್‌ ಭಾಷೆಗೆ ಬೈಬಲನ್ನು ಭಾಷಾಂತರಿಸಲಿಕ್ಕಾಗಿ ಮಾಡಲ್ಪಟ್ಟ ತೀವ್ರ ಪ್ರಯತ್ನವು ಒಂದು ಪ್ರಮುಖ ವಾಸ್ತವಾಂಶವನ್ನು ದೃಷ್ಟಾಂತಿಸುತ್ತದೆ. ಮನುಷ್ಯರ ಬದ್ಧವೈರದ ಪ್ರಯತ್ನಗಳ ಎದುರಲ್ಲೂ “ಕರ್ತನ [“ಯೆಹೋವನ,” NW] ಮಾತೋ ಸದಾಕಾಲವೂ ಇರುವದು” ಎಂಬುದನ್ನು ಅದು ಸ್ಪಷ್ಟವಾಗಿ ಸೂಚಿಸುತ್ತದೆ.​—1 ಪೇತ್ರ 1:25.

[ಪಾದಟಿಪ್ಪಣಿ]

^ ಪ್ಯಾರ. 7 ಸಿರಿಲ್‌ ಲೂಕಾರಸ್‌ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಕಾವಲಿನಬುರುಜು ಪತ್ರಿಕೆಯ 2000, ಫೆಬ್ರವರಿ 15, ಪುಟಗಳು 26-9ನ್ನು ನೋಡಿರಿ.

[ಪುಟ 27ರಲ್ಲಿರುವ ಚಿತ್ರ]

ಸಿರಿಲ್‌ ಲೂಕಾರಸ್‌, 1630ರಲ್ಲಿ ಸಂಪೂರ್ಣ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಪ್ರಥಮ ಗ್ರೀಕ್‌ ಭಾಷಾಂತರವನ್ನು ನಿರ್ದೇಶಿಸಿದನು

[ಕೃಪೆ]

Bib. Publ. Univ. de Genève

[ಪುಟ 28ರಲ್ಲಿರುವ ಚಿತ್ರಗಳು]

ಗ್ರೀಕ್‌ ಆಡುಭಾಷೆಯಲ್ಲಿನ ಕೆಲವೊಂದು ಭಾಷಾಂತರಗಳು: ಕೀರ್ತನೆಗಳು (1) ಲಾರ್ಯನ್‌ನಿಂದ 1828ರಲ್ಲಿ, (2) ವಾಮ್‌ವಾಸ್‌ನಿಂದ 1832ರಲ್ಲಿ, (3) ಜೂಲ್ಯಾನಸ್‌ನಿಂದ 1643ರಲ್ಲಿ ಮುದ್ರಿಸಲ್ಪಟ್ಟಿತ್ತು. “ಹಳೇ ಒಡಂಬಡಿಕೆ” (4) ವಾಮ್‌ವಾಸ್‌ನಿಂದ 1840ರಲ್ಲಿ ಮುದ್ರಿಸಲ್ಪಟ್ಟಿತು

[ಕೃಪೆ]

ಬೈಬಲ್‌ಗಳು: National Library of Greece; Queen Olga: Culver Pictures

[ಪುಟ 26ರಲ್ಲಿರುವ ಚಿತ್ರ ಕೃಪೆ]

ಪಪೈರಸ್‌: Reproduced by kind permission of The Trustees of the Chester Beatty Library, Dublin

[ಪುಟ 29ರಲ್ಲಿರುವ ಚಿತ್ರ ಕೃಪೆ]

ಪಪೈರಸ್‌: Reproduced by kind permission of The Trustees of the Chester Beatty Library, Dublin