ಆರಾಧನಾ ಸ್ಥಳಗಳು ನಮಗೆ ಅವುಗಳ ಆವಶ್ಯಕತೆಯಿದೆಯೋ?
ಆರಾಧನಾ ಸ್ಥಳಗಳು ನಮಗೆ ಅವುಗಳ ಆವಶ್ಯಕತೆಯಿದೆಯೋ?
‘ದೇಶದ ಬೇರೆ ಬೇರೆ ಭಾಗಗಳಿಂದ ಬಂದ, ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿದ್ದ ಸಾವಿರಾರು ಯಾತ್ರಿಕರು, ಸ್ಪ್ಯಾನಿಷ್‌ಪೂರ್ವ ನೃತ್ಯಗಳೆಂದು ಭಾವಿಸಲಾಗುತ್ತಿದ್ದ ನೃತ್ಯಗಳನ್ನು ನಗಾರಿಯ ತಾಳಕ್ಕೆ ತಕ್ಕಂತೆ ಪುನರಭಿನಯಿಸುತ್ತಿರುವ ದಕ್ಷಿಣ ಅಮೆರಿಕದ ಮೂಲನಿವಾಸಿಗಳ ಗುಂಪುಗಳು, ಮತ್ತು ಜನಸಮೂಹಗಳ ಮಧ್ಯದಿಂದ ದಾರಿಮಾಡಿಕೊಂಡು ತಮ್ಮ ಮಂಡಿಗಳ ಸಹಾಯದಿಂದ ವೇದನಾಮಯ ರೀತಿಯಲ್ಲಿ ದೇವಾಲಯದ ಕಡೆಗೆ ಸಾಗುತ್ತಿರುವ ಭಕ್ತರು, ಬಸಿಲಿಕ ಚರ್ಚಿನ ಒಳಾಂಗಣದಲ್ಲಿ ಮತ್ತು ಸುತ್ತಲೂ ಇದ್ದ ಬೀದಿಗಳಲ್ಲಿ ಕಿಕ್ಕಿರಿದು ತುಂಬಿದ್ದರು.’
ಇಸವಿ 2001ರ ಡಿಸೆಂಬರ್ ತಿಂಗಳಿನಲ್ಲಿ ತಂಡೋಪತಂಡವಾಗಿ ಬರುತ್ತಿದ್ದ ದೊಡ್ಡ ಜನಸಮೂಹಗಳನ್ನು, ಎಲ್ ಏಕೋನೋಮೀಸ್ಟಾ ಎಂಬ ವಾರ್ತಾಪತ್ರಿಕೆಯು ಈ ಮೇಲಿನಂತೆ ವರ್ಣಿಸಿತು. ಆ ಸಮಯದಲ್ಲಿ ಸುಮಾರು ಮೂವತ್ತು ಲಕ್ಷ ಜನರು, ಗ್ವಾಡೆಲೋಪ್‌ನ ಕನ್ಯೆಯಲ್ಲಿನ ತಮ್ಮ ನಂಬಿಕೆಯನ್ನು ತೋರ್ಪಡಿಸಲಿಕ್ಕಾಗಿ ಮೆಕ್ಸಿಕೊ ಸಿಟಿಯಲ್ಲಿದ್ದ ಬಸಿಲಿಕ ಚರ್ಚನ್ನು ಸಂದರ್ಶಿಸಿದರು. ರೋಮ್‌ನಲ್ಲಿರುವ ಸೆಂಟ್ ಪೀಟರ್ಸ್ ಬಸಿಲಿಕ ಚರ್ಚನ್ನು ಒಳಗೊಂಡು ಇತರ ಧಾರ್ಮಿಕ ಭವನಗಳು ಸಹ ದೊಡ್ಡ ಜನಸಮೂಹಗಳನ್ನು ಆಕರ್ಷಿಸುತ್ತವೆ.
ಧಾರ್ಮಿಕ ಕಟ್ಟಡಗಳು, ದೇವರನ್ನು ಆರಾಧಿಸಲು ಬಯಸುವಂಥ ಅನೇಕರ ಹೃದಯಗಳಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡಿವೆ. ಬ್ರಸಿಲ್‌ನ ಮಾರೀಅ ಹೇಳುವುದು: “ನನ್ನ ವಿಷಯದಲ್ಲಿ ಹೇಳುವುದಾದರೆ, ನಾನು ದೇವರಿಗೆ ಹತ್ತಿರವಾಗಲು ಸಾಧ್ಯಗೊಳಿಸಿದ ಸ್ಥಳವು ಚರ್ಚ್ ಆಗಿತ್ತು. ಅದೊಂದು ಪವಿತ್ರ ಸ್ಥಳವಾಗಿತ್ತು. ಚರ್ಚಿಗೆ ಹೋಗುವುದು ನನ್ನ ಆತ್ಮವನ್ನು ಶುದ್ಧೀಕರಿಸುತ್ತದೆ ಮತ್ತು ಪ್ರತಿ ಭಾನುವಾರ ಮಾಸ್‌ಗೆ ಹಾಗೂ ಪಾಪನಿವೇದನೆಗೆ ಹೋಗದಿರುವುದು ಒಂದು ದೊಡ್ಡ ಪಾಪವಾಗಿದೆ ಎಂದು ನಾನು ನಂಬಿದ್ದೆ.” ಮೆಕ್ಸಿಕೋದ ಕೋನ್‌ಸ್ವೆಲೋ ಹೇಳುವುದು: “ಚರ್ಚು ನನ್ನ ಮನಸ್ಸಿನಲ್ಲಿ ಆಳವಾದ ಭಾವನೆಗಳನ್ನು ಉಂಟುಮಾಡಿತು; ನಾನು ಚರ್ಚನ್ನು ತುಂಬ ಅಮೂಲ್ಯವಾಗಿ ಪರಿಗಣಿಸಿದೆ. ಅಲ್ಲಿರುವಾಗ ನನಗೆ ಸ್ವರ್ಗದಲ್ಲಿರುವಂಥ ಅನಿಸಿಕೆ ಆಗುತ್ತಿತ್ತು.”
ಕೆಲವರು ಚರ್ಚುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಾರಾದರೂ, ಆರಾಧನಾ ಸ್ಥಳಗಳೋಪಾದಿ ಕಾರ್ಯನಡಿಸಲು ಚರ್ಚುಗಳ ಆವಶ್ಯಕತೆಯಿದೆಯೋ ಎಂಬುದರ ಕುರಿತು ಇತರರು ಸಂದೇಹವನ್ನು ವ್ಯಕ್ತಪಡಿಸುತ್ತಾರೆ. ಸ್ವಲ್ಪ ಮಂದಿ ಮಾತ್ರ ಚರ್ಚಿಗೆ ಹಾಜರಾಗುವುದರ ವಿಷಯದಲ್ಲಿ ಮಾತಾಡುತ್ತಾ, ಇಂಗ್ಲೆಂಡಿನ ಕ್ಯಾಥೊಲಿಕ್ ಪಾದ್ರಿಯಾಗಿರುವ ಪೀಟರ್ ಸೈಬರ್ಟ್ ಹೇಳುವುದು: “ಧರ್ಮದಲ್ಲಿ ತಮಗೆ ಯಾವುದು ಇಷ್ಟವಾಗುತ್ತದೋ ಅದನ್ನು [ಜನರು] ಆಯ್ಕೆಮಾಡಿಕೊಳ್ಳುತ್ತಾರೆ. ಅನೇಕ ವೃದ್ಧರು ಕ್ಯಾಥೊಲಿಕರಾಗಿದ್ದಾರೆ ಮತ್ತು ಅವರು ತಮ್ಮ ನಂಬಿಕೆಗಳಿಗನುಸಾರ ಜೀವಿಸುತ್ತಾರೆ; ಆದರೆ ಅದೇ ರೀತಿಯ ಬದ್ಧತೆಯ ಪರಿಜ್ಞಾನ ಯುವ ಜನರ ನಡುವೆ ಇಲ್ಲ.” ಲಂಡನಿನ 1998, ನವೆಂಬರ್ 20ರ ಡೇಲಿ ಟೆಲಿಗ್ರಾಫ್ ಎಂಬ ವಾರ್ತಾಪತ್ರಿಕೆಯು ಗಮನಿಸಿದ್ದು: “1979ರಿಂದ
ಇಂಗ್ಲೆಂಡಿನಲ್ಲಿ ತೆರೆಯಲ್ಪಟ್ಟ 495 ಚರ್ಚುಗಳು ಮತ್ತು ನವೀಕರಿಸಲ್ಪಟ್ಟ 150 ಚರ್ಚುಗಳಿಗೆ ಹೋಲಿಸುವಾಗ, ಸುಮಾರು 1,500 ಚರ್ಚುಗಳು ಮುಚ್ಚಲ್ಪಟ್ಟಿವೆ.”ಇಸವಿ 1997ರಲ್ಲಿ ಜರ್ಮನಿಯ ಮ್ಯೂನಿಕ್‌ನ ಸೂವೆಟ್‌ಡೈಚ್ ಟ್ಸೈಟುಂಗ್ ಎಂಬ ವಾರ್ತಾಪತ್ರಿಕೆಯು ವರದಿಸಿದ್ದು: “ಚರ್ಚುಗಳು ಚಿತ್ರಮಂದಿರಗಳಾಗಿ ಮತ್ತು ಅಪಾರ್ಟ್‌ಮೆಂಟ್‌ಗಳಾಗಿ ಪರಿವರ್ತಿಸಲ್ಪಟ್ಟಿವೆ: ಭಕ್ತರು ಚರ್ಚ್ ಆರಾಧನೆಗಳಿಗೆ ಹಾಜರಾಗುತ್ತಿಲ್ಲ, ಆರಾಧನಾ ಸ್ಥಳಗಳನ್ನು ಬೇರೆ ಉದ್ದೇಶಗಳಿಗಾಗಿ ಉಪಯೋಗಿಸಲಾಗುತ್ತಿದೆ. . . . ನೆದರ್ಲೆಂಡ್ಸ್‌ನಲ್ಲಿ ಅಥವಾ ಇಂಗ್ಲೆಂಡಿನಲ್ಲಿ ಈಗಾಗಲೇ ರೂಢಿಯಾಗಿಬಿಟ್ಟಿರುವ ಈ ವಿಷಯ ಜರ್ಮನಿಯಲ್ಲೂ ರೂಢಿಯಾಗುತ್ತಿದೆ.” ಅದು ಕೂಡಿಸಿ ಹೇಳಿದ್ದು: “ಜರ್ಮನಿಯಲ್ಲಿ ಕಳೆದ ಕೆಲವೇ ವರ್ಷಗಳಲ್ಲಿ ಸುಮಾರು 30 ಅಥವಾ 40 ಚರ್ಚುಗಳ ಎದ್ದುಕಾಣುವ ಮಾರಾಟಗಳನ್ನು ಒಬ್ಬನು ಕಂಡುಕೊಳ್ಳಸಾಧ್ಯವಿದೆ.”
ದೇವರ ಆರಾಧನೆಗೆ ಧಾರ್ಮಿಕ ಕಟ್ಟಡಗಳು ನಿಜವಾಗಿಯೂ ಅಗತ್ಯವಾಗಿವೆಯೋ? ಬಸಿಲಿಕ ಚರ್ಚುಗಳು ಮತ್ತು ಅಲಂಕಾರಮಯ ಚರ್ಚುಗಳ ಪೂರ್ವನಿದರ್ಶನಗಳು ಶಾಸ್ತ್ರವಚನಗಳಲ್ಲಿವೆಯೋ? ಯಾವ ರೀತಿಯ ಕಟ್ಟಡಗಳು ಸತ್ಯ ಹಾಗೂ ಜೀವಂತ ದೇವರ ಆರಾಧನೆಯೊಂದಿಗೆ ಸಂಬಂಧಿಸಿವೆ? ಆರಾಧನಾ ಸ್ಥಳಗಳ ಆವಶ್ಯಕತೆಯ ಕುರಿತು ಮತ್ತು ಅಲ್ಲಿ ಏನು ನಡೆಯಬೇಕು ಎಂಬುದರ ಕುರಿತು ಅಂಥ ಕಟ್ಟಡಗಳಿಂದ ನಾವೇನನ್ನು ಕಲಿಯಸಾಧ್ಯವಿದೆ?