ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇ ನೈತಿಕ ಮಟ್ಟಗಳನ್ನು ಪ್ರವರ್ಧಿಸುವ ಪ್ರಯತ್ನಗಳು

ಒಳ್ಳೇ ನೈತಿಕ ಮಟ್ಟಗಳನ್ನು ಪ್ರವರ್ಧಿಸುವ ಪ್ರಯತ್ನಗಳು

ಒಳ್ಳೇ ನೈತಿಕ ಮಟ್ಟಗಳನ್ನು ಪ್ರವರ್ಧಿಸುವ ಪ್ರಯತ್ನಗಳು

ಇಸವಿ 2001ರ ಕೊನೆಯ ಭಾಗದಲ್ಲಿ, ರೇಡಿಯೋ ಮೊಸಾಂಬೀಕ್‌ನ ರಾಷ್ಟ್ರೀಯ ಪ್ರಸಾರಕ್ಕೆ ಕಿವಿಗೊಡುತ್ತಿದ್ದವರು ಈ ಪ್ರಕಟನೆಯನ್ನು ಕೇಳಿಸಿಕೊಂಡರು:

“ಗಣತಂತ್ರ ರಾಜ್ಯದ ರಾಷ್ಟ್ರಾಧ್ಯಕ್ಷರು, ಮಾಪೂಟೋದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಸೌಕರ್ಯಗಳಿಗೆ ಭೇಟಿಯಿತ್ತರು. ಕುಟುಂಬಗಳಲ್ಲಿ ಒಳ್ಳೇ ನೈತಿಕ ಮಟ್ಟಗಳನ್ನು ಪ್ರವರ್ಧಿಸಲು ಮತ್ತು ತಮ್ಮ ಸಾಕ್ಷರತಾ ಕಾರ್ಯಕ್ರಮಗಳ ಮೂಲಕ ವಯಸ್ಕರ ಶಿಕ್ಷಣವನ್ನು ಪ್ರವರ್ಧಿಸಲು ಅವರು ಮಾಡುವ ಪ್ರಯತ್ನಗಳನ್ನು ಹೆಚ್ಚಿಸುವಂತೆ ಈ ಧಾರ್ಮಿಕ ಸಭೆಯ ಸದಸ್ಯರನ್ನು ರಾಷ್ಟ್ರಾಧ್ಯಕ್ಷರು ಉತ್ತೇಜಿಸಿದರು. ಸುಮಾರು 10,000 ಜನರು ಈಗಾಗಲೇ ಈ ಕಾರ್ಯಕ್ರಮಗಳಿಂದ ಲಾಭಪಡೆದಿದ್ದಾರೆ. ರಾಷ್ಟ್ರಾಧ್ಯಕ್ಷ ಶೀಸ್ವಾನೂರವರಿಗನುಸಾರ, ಇವುಗಳಂಥ ಕಾರ್ಯಕ್ರಮಗಳನ್ನು ಶ್ಲಾಘಿಸಬೇಕಾಗಿದೆ, ಏಕೆಂದರೆ ಈ ದೇಶವು ಈಗಲೂ ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಅವು ಅಮೂಲ್ಯವಾದ ಸಹಾಯಕಗಳಾಗಿವೆ.”

ರಾಷ್ಟ್ರಾಧ್ಯಕ್ಷರ ಭಾಷಣದ ಈ ಮುಂದಿನ ತುಣುಕಿನೊಂದಿಗೆ ಪ್ರಕಟನೆಯು ಮುಂದುವರಿಯಿತು: “ಸಾಕ್ಷರತೆಯಲ್ಲಿ ಹೆಚ್ಚಿನ ಜನರ ಆಸಕ್ತಿಯನ್ನು ನೋಡುವುದು ತುಂಬ ಉತ್ತೇಜನದಾಯಕವಾಗಿದೆ. ನಮ್ಮ ಸಾಕ್ಷರತಾ ಪರಿಮಾಣವನ್ನು ವರ್ಧಿಸಲು ಸಾಮಾನ್ಯ ಪ್ರಜೆಗಳೇ ಸಹಾಯಮಾಡಲಿದ್ದಾರೆಂದು ಇದು ನಮಗೆ ತೋರಿಸುತ್ತದೆ. ಆದುದರಿಂದ, ಯಾವುದೇ ಭಾಷೆಯಲ್ಲಾಗಲಿ ತಮ್ಮ ಸಾಕ್ಷರತಾ ಕಾರ್ಯಕ್ರಮಗಳನ್ನು ತೀವ್ರಗೊಳಿಸುವಂತೆ ನಾನು ಯೆಹೋವನ ಸಾಕ್ಷಿಗಳನ್ನು ಉತ್ತೇಜಿಸಲು ಬಯಸುತ್ತೇನೆ. ನಿಜವಾಗಿಯೂ ಪ್ರಾಮುಖ್ಯವಾದ ಸಂಗತಿಯೇನೆಂದರೆ, ಸಾಕ್ಷರತೆ ಇರಬೇಕು ಮತ್ತು ಜನರು ಹೆಚ್ಚು ಸುಲಭವಾಗಿ ಸಂವಾದಮಾಡಲು ಶಕ್ತರಾಗಿ, ಭವಿಷ್ಯತ್ತಿನಲ್ಲಿ ಶಿಕ್ಷಣದಲ್ಲಿ ಇನ್ನೂ ಹೆಚ್ಚು ಭಾಗವಹಿಸಬೇಕು.”

ಜನರು ದೇವರ ವಾಕ್ಯವನ್ನು ಸ್ವತಃ ಓದಲು ಶಕ್ತರಾಗುವಂತೆ, ಮೊಸಾಂಬೀಕ್‌ನಲ್ಲಿರುವ ಯೆಹೋವನ ಸಾಕ್ಷಿಗಳು ದೇಶದಾದ್ಯಂತ 850 ಸ್ಥಳಗಳಲ್ಲಿ ಸಾಕ್ಷರತಾ ತರಗತಿಗಳನ್ನು ನಡೆಸುತ್ತಾರೆ. ಅದಲ್ಲದೆ, ಅವರು ಪ್ರತಿ ವಾರ ಸುಮಾರು 50,000 ಮನೆ ಬೈಬಲ್‌ ಅಧ್ಯಯನಗಳನ್ನು ಉಚಿತವಾಗಿ ನಡೆಸುತ್ತಾರೆ. ಇದೆಲ್ಲವೂ, ಈಗ 235 ದೇಶಗಳಲ್ಲಿ ಹಬ್ಬಿರುವ ಲೋಕವ್ಯಾಪಕ ಬೈಬಲ್‌ ಶೈಕ್ಷಣಿಕ ಕಾರ್ಯಕ್ರಮದ ಭಾಗವಾಗಿದೆ. (ಮತ್ತಾಯ 24:14) ನೀವು ಕೂಡ ಈ ಕಾರ್ಯಕ್ರಮದಿಂದ ಪ್ರಯೋಜನ ಪಡೆಯಬಲ್ಲಿರಿ. ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಲು ಹಿಂಜರಿಯಬೇಡಿ.