ಕ್ರೈಸ್ತರಿಗೆ ಪರಸ್ಪರರ ಅಗತ್ಯವಿದೆ
ಕ್ರೈಸ್ತರಿಗೆ ಪರಸ್ಪರರ ಅಗತ್ಯವಿದೆ
“ನಾವು ಒಬ್ಬರಿಗೊಬ್ಬರು ಅಂಗಗಳಾಗಿದ್ದೇವಲ್ಲಾ.”—ಎಫೆಸ 4:25.
1. ಮಾನವ ದೇಹದ ಬಗ್ಗೆ ಒಂದು ಎನ್‌ಸೈಕ್ಲಪೀಡೀಯವು ಏನು ಹೇಳುತ್ತದೆ?
ಮಾನವ ದೇಹವು ಸೃಷ್ಟಿಯ ಒಂದು ಅದ್ಭುತ ಕೃತಿಯಾಗಿದೆ! ದ ವರ್ಲ್ಡ್ ಬುಕ್ ಎನ್‌ಸೈಕ್ಲಪೀಡೀಯ ಹೇಳುವುದು: “ಕೆಲವೊಮ್ಮೆ ಜನರು ಮಾನವ ದೇಹವನ್ನು, ನಿರ್ಮಿಸಲ್ಪಟ್ಟಿರುವವುಗಳಲ್ಲೇ ಅತ್ಯಂತ ಅದ್ಭುತಕರವಾದ ಒಂದು ಯಂತ್ರ ಎಂದು ಕರೆಯುತ್ತಾರೆ. ನಿಶ್ಚಯವಾಗಿಯೂ ಮಾನವ ದೇಹವು ಒಂದು ಯಂತ್ರವಲ್ಲ ನಿಜ. ಆದರೆ ಅನೇಕ ವಿಧಗಳಲ್ಲಿ ಅದನ್ನು ಒಂದು ಯಂತ್ರಕ್ಕೆ ಹೋಲಿಸಬಹುದು. ಒಂದು ಯಂತ್ರದಂತೆಯೇ ದೇಹದಲ್ಲಿ ಅನೇಕ ಭಾಗಗಳಿರುತ್ತವೆ. ದೇಹದ ಪ್ರತಿಯೊಂದು ಅಂಗವು, ಒಂದು ಯಂತ್ರದ ಭಾಗದಂತೆ ವಿಶೇಷ ರೀತಿಯ ಕೆಲಸಗಳನ್ನು ಮಾಡುತ್ತದೆ. ಆದರೆ ಎಲ್ಲಾ ಭಾಗಗಳು ಒಗ್ಗಟ್ಟಿನಿಂದ ಕೆಲಸಮಾಡಿ, ಹೀಗೆ ದೇಹ ಇಲ್ಲವೆ ಯಂತ್ರವು ಸುಗಮವಾಗಿ ಓಡುವಂತೆ ಮಾಡುತ್ತವೆ.”
2. ಮಾನವ ದೇಹ ಮತ್ತು ಕ್ರೈಸ್ತ ಸಭೆಯ ವಿಷಯದಲ್ಲಿ ಯಾವ ಹೋಲಿಕೆಯಿದೆ?
2 ಹೌದು, ಮಾನವ ದೇಹದಲ್ಲಿ ಅನೇಕ ಭಾಗಗಳು ಇಲ್ಲವೆ ಅಂಗಗಳು ಇರುತ್ತವೆ ಮತ್ತು ಪ್ರತಿಯೊಂದು ಅಂಗವು ಅಗತ್ಯವಾದ ಒಂದಲ್ಲ ಒಂದು ಕೆಲಸವನ್ನು ಪೂರೈಸುತ್ತದೆ. ಒಂದೇ ಒಂದು ನರ, ಸ್ನಾಯು ಇಲ್ಲವೆ ದೇಹದ ಅಂಗವೂ ಕೆಲಸಕ್ಕೆ ಬಾರದಂಥದ್ದಾಗಿರುವುದಿಲ್ಲ. ಅದೇ ರೀತಿಯಲ್ಲಿ ಕ್ರೈಸ್ತ ಸಭೆಯಲ್ಲಿರುವ ಪ್ರತಿಯೊಬ್ಬ ಸದಸ್ಯನೂ, ಸಭೆಯ ಆತ್ಮಿಕ ಆರೋಗ್ಯ ಮತ್ತು ಸೌಂದರ್ಯಕ್ಕೆ ಒಂದಲ್ಲ ಒಂದು ವಿಷಯವನ್ನು ಕೂಡಿಸಬಲ್ಲನು. (1 ಕೊರಿಂಥ 12:14-26) ಸಭೆಯಲ್ಲಿರುವ ಯಾವನೇ ಸದಸ್ಯನು, ತಾನು ಇತರರಿಗಿಂತ ಶ್ರೇಷ್ಠನಾಗಿದ್ದೇನೆ ಎಂಬ ಭಾವನೆಯನ್ನು ಇಟ್ಟುಕೊಳ್ಳಬಾರದಾದರೂ, ಯಾರೂ ತಾನು ಪ್ರಯೋಜನಕ್ಕೆ ಬಾರದವನು ಎಂಬ ಭಾವನೆಯನ್ನೂ ಬೆಳೆಸಿಕೊಳ್ಳಬಾರದು.—ರೋಮಾಪುರ 12:3.
3. ಕ್ರೈಸ್ತರಿಗೆ ಪರಸ್ಪರರ ಅಗತ್ಯವಿದೆ ಎಂದು ಎಫೆಸ 4:25 ಹೇಗೆ ಸೂಚಿಸುತ್ತದೆ?
3 ಮಾನವ ದೇಹದ ಪರಸ್ಪರ ಅವಲಂಬಿತ ಅಂಗಗಳಂತೆಯೇ ಕ್ರೈಸ್ತರಿಗೆ ಪರಸ್ಪರರ ಅಗತ್ಯವಿದೆ. ಅಪೊಸ್ತಲ ಪೌಲನು ಆತ್ಮಾಭಿಷಿಕ್ತ ಜೊತೆ ವಿಶ್ವಾಸಿಗಳಿಗೆ ಹೇಳಿದ್ದು: “ಆದಕಾರಣ ಸುಳ್ಳಾಡುವದನ್ನು ಬಿಟ್ಟುಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ; ಯಾಕಂದರೆ ನಾವು ಒಬ್ಬರಿಗೊಬ್ಬರು ಅಂಗಗಳಾಗಿದ್ದೇವಲ್ಲಾ.” (ಎಫೆಸ 4:25) ಆತ್ಮಿಕ ಇಸ್ರಾಯೇಲಿನ ಸದಸ್ಯರು ‘ಒಬ್ಬರಿಗೊಬ್ಬರು’ ಸೇರಿದವರಾಗಿರುವುದರಿಂದ ಅವರ, ಅಂದರೆ ‘ಕ್ರಿಸ್ತನ ದೇಹದ’ ಅಂಗಗಳ ನಡುವೆ ಮನಃಪೂರ್ವಕ ಮಾತುಸಂಪರ್ಕ ಮತ್ತು ಪೂರ್ಣ ಸಹಕಾರವಿದೆ. ಹೌದು, ಅವರಲ್ಲಿ ಪ್ರತಿಯೊಬ್ಬರೂ ಇತರರಿಗೆ ಸೇರಿದವರಾಗಿದ್ದಾರೆ. (ಎಫೆಸ 4:11-13) ಅವರೊಂದಿಗೆ ಭೂನಿರೀಕ್ಷೆಯುಳ್ಳ, ಸತ್ಯಪೂರ್ಣ, ಸಹಕಾರಭಾವದ ಕ್ರೈಸ್ತರು ಸಂತೋಷದಿಂದ ಐಕ್ಯರಾಗಿದ್ದಾರೆ.
4. ಹೊಸಬರಿಗೆ ಯಾವ ವಿಧಗಳಲ್ಲಿ ಸಹಾಯಮಾಡಬಹುದು?
4 ಭೂಪರದೈಸಿನಲ್ಲಿ ಜೀವಿಸಲು ನಿರೀಕ್ಷಿಸುವ ಸಾವಿರಾರು ಮಂದಿ, ಪ್ರತಿ ವರ್ಷ ದೀಕ್ಷಾಸ್ನಾನಹೊಂದುತ್ತಾರೆ. ಸಭೆಯ ಇತರ ಸದಸ್ಯರು ಸಂತೋಷದಿಂದ ಅವರಿಗೆ ‘ಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ ಹೋಗಲು’ ಸಹಾಯಮಾಡುತ್ತಾರೆ. (ಇಬ್ರಿಯ 6:1-3) ಈ ಸಹಾಯದಲ್ಲಿ, ಶಾಸ್ತ್ರೀಯ ಪ್ರಶ್ನೆಗಳಿಗೆ ಉತ್ತರ ಕೊಡುವುದು ಇಲ್ಲವೆ ಶುಶ್ರೂಷೆಯಲ್ಲಿ ಪ್ರಾಯೋಗಿಕ ನೆರವನ್ನು ನೀಡುವುದು ಒಳಗೂಡಿರಬಹುದು. ಕ್ರೈಸ್ತ ಕೂಟಗಳಲ್ಲಿ ಕ್ರಮವಾದ ಪಾಲ್ಗೊಳ್ಳುವಿಕೆಯ ವಿಷಯದಲ್ಲಿ ಒಳ್ಳೇ ಮಾದರಿಯನ್ನಿಡುವ ಮೂಲಕ ನಾವು ಹೊಸಬರಿಗೆ ಸಹಾಯಮಾಡಬಹುದು. ಸಂಕಷ್ಟದ ಸಮಯಗಳಲ್ಲಿ ನಾವು ಪ್ರೋತ್ಸಾಹವನ್ನೂ, ಪ್ರಾಯಶಃ ಸಂತೈಸುವಿಕೆಯನ್ನೂ ನೀಡಬಹುದು. (1 ಥೆಸಲೊನೀಕ 5:14, 15) ಇತರರು ‘ಸತ್ಯವನ್ನನುಸರಿಸಿ ನಡೆಯುತ್ತಾ’ ಇರುವಂತೆ ಸಹಾಯಮಾಡಲಿಕ್ಕಾಗಿರುವ ಮಾರ್ಗಗಳಿಗಾಗಿ ನಾವು ಹುಡುಕಬೇಕು. (3 ಯೋಹಾನ 4) ನಾವು ಯುವ ಪ್ರಾಯದವರಾಗಿರಲಿ ವೃದ್ಧರಾಗಿರಲಿ, ಇತ್ತೀಚಿಗೆ ಸತ್ಯದಲ್ಲಿ ನಡೆಯಲಾರಂಭಿಸಿರಲಿ ಇಲ್ಲವೆ ಅನೇಕಾನೇಕ ವರ್ಷಗಳಿಂದ ಸತ್ಯದಲ್ಲಿ ನಡೆದುಬಂದಿರಲಿ, ನಾವು ಜೊತೆ ವಿಶ್ವಾಸಿಗಳ ಆತ್ಮಿಕ ಕ್ಷೇಮವನ್ನು ಹೆಚ್ಚಿಸಬಹುದು ಮತ್ತು ಅವರಿಗೆ ಖಂಡಿತವಾಗಿಯೂ ನಮ್ಮ ಆವಶ್ಯಕತೆಯಿದೆ.
ಅಗತ್ಯವಿದ್ದ ಸಹಾಯವನ್ನು ಅವರು ನೀಡಿದರು
5. ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಪೌಲನಿಗೆ ಹೇಗೆ ಸಹಾಯಮಾಡಿದರು?
5 ಜೊತೆ ವಿಶ್ವಾಸಿಗಳಿಗೆ ಸಹಾಯ ನೀಡಿ ತೃಪ್ತಿಯನ್ನು ಕಂಡುಕೊಳ್ಳುವವರಲ್ಲಿ ಕ್ರೈಸ್ತ ವಿವಾಹಿತ ದಂಪತಿಗಳು ಸೇರಿರುತ್ತಾರೆ. ದೃಷ್ಟಾಂತಕ್ಕಾಗಿ, ಅಕ್ವಿಲ ಮತ್ತು ಅವನ ಪತ್ನಿ ಪ್ರಿಸ್ಕಿಲ್ಲ (ಪ್ರಿಸ್ಕ) ಪೌಲನಿಗೆ ಸಹಾಯಮಾಡಿದರು. ಅವರು ಅವನನ್ನು ತಮ್ಮ ಮನೆಗೆ ಬರಮಾಡಿಕೊಂಡರು, ಗುಡಾರಮಾಡುವವರಾಗಿ ಅವನೊಂದಿಗೆ ಕೆಲಸಮಾಡಿದರು, ಮತ್ತು ಕೊರಿಂಥದಲ್ಲಿದ್ದ ಹೊಸ ಸಭೆಯನ್ನು ಕಟ್ಟಲು ಅವನಿಗೆ ಸಹಾಯಮಾಡಿದರು. (ಅ. ಕೃತ್ಯಗಳು 18:1-4) ನಮಗೆ ಪ್ರಕಟಿಸಲ್ಪಟ್ಟಿರದಂಥ ಯಾವುದೊ ರೀತಿಯಲ್ಲಿ, ಅವರು ಪೌಲನಿಗೋಸ್ಕರ ತಮ್ಮ ಜೀವಗಳನ್ನೂ ಅಪಾಯಕ್ಕೊಡ್ಡಿದ್ದರು. ಅವರು ರೋಮ್‌ನಲ್ಲಿದ್ದಾಗಲೇ ಪೌಲನು ಅಲ್ಲಿದ್ದ ಕ್ರೈಸ್ತರಿಗೆ ಹೀಗೆ ಹೇಳಿದನು: “ಕ್ರಿಸ್ತ ಯೇಸುವಿನ ಸೇವೆಯಲ್ಲಿ ನನ್ನ ಜೊತೆಕೆಲಸದವರಾದ ಪ್ರಿಸ್ಕಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ಹೇಳಿರಿ. ಅವರು ನನ್ನ ಪ್ರಾಣದ ಸಂರಕ್ಷಣೆಗಾಗಿ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡಿದರು. ನಾನು ಮಾತ್ರವೇ ಅಲ್ಲ, ಅನ್ಯಜನರ ಸಭೆಗಳವರೆಲ್ಲರೂ ಅವರ ಉಪಕಾರವನ್ನು ಸ್ಮರಿಸುತ್ತಾರೆ.” (ರೋಮಾಪುರ 16:3, 4) ಅಕ್ವಿಲ ಮತ್ತು ಪ್ರಿಸ್ಕಿಲ್ಲರಂತೆಯೇ, ಆಧುನಿಕ ದಿನದ ಕೆಲವು ಮಂದಿ ಕ್ರೈಸ್ತರು ಸಭೆಗಳನ್ನು ಕಟ್ಟುತ್ತಾರೆ ಮತ್ತು ಜೊತೆ ಆರಾಧಕರಿಗೆ ವಿಭಿನ್ನ ವಿಧಗಳಲ್ಲಿ ಸಹಾಯಮಾಡುತ್ತಾರೆ. ಕೆಲವೊಮ್ಮೆ ದೇವರ ಇತರ ಸೇವಕರು ಹಿಂಸಕರ ಹಸ್ತಗಳಲ್ಲಿ ಪಾಶವೀಯ ವರ್ತನೆ ಇಲ್ಲವೆ ಸಾವಿಗೀಡಾಗುವುದನ್ನು ತಪ್ಪಿಸಲಿಕ್ಕಾಗಿ ಅವರು ತಮ್ಮ ಸ್ವಂತ ಜೀವಗಳನ್ನೂ ಅಪಾಯಕ್ಕೊಡ್ಡಿದ್ದಾರೆ.
6. ಅಪೊಲ್ಲೋಸನು ಯಾವ ಸಹಾಯವನ್ನು ಪಡೆದನು?
6 ಅಕ್ವಿಲ ಮತ್ತು ಪ್ರಿಸ್ಕಿಲ್ಲರು, ವಾಕ್ಚಾತುರ್ಯವಿದ್ದ ಕ್ರೈಸ್ತ ಅಪೊಲ್ಲೋಸನಿಗೂ ಸಹಾಯಮಾಡಿದರು. ಈ ಅಪೊಲ್ಲೋಸನು ಎಫೆಸದ ನಿವಾಸಿಗಳಿಗೆ ಯೇಸು ಕ್ರಿಸ್ತನ ಬಗ್ಗೆ ಕಲಿಸುತ್ತಾ ಇದ್ದನು. ಆದರೆ ಆ ಸಮಯದಲ್ಲಿ ಅಪೊಲ್ಲೋಸನಿಗೆ, ನಿಯಮದೊಡಂಬಡಿಕೆಯ ವಿರುದ್ಧ ನಡೆಸಲ್ಪಟ್ಟಿರುವ ಪಾಪಗಳಿಗೆ ಪಶ್ಚಾತ್ತಾಪ ಸೂಚಕವಾಗಿ ಯೋಹಾನನಿಂದ ನಡೆಸಲ್ಪಟ್ಟ ದೀಕ್ಷಾಸ್ನಾನದ ಕುರಿತಾಗಿ ಮಾತ್ರ ತಿಳಿದಿತ್ತು. ಅಪೊಲ್ಲೋಸನಿಗೆ ಸಹಾಯದ ಅಗತ್ಯವಿದೆ ಎಂಬುದನ್ನು ವಿವೇಚಿಸಿ ತಿಳಿದುಕೊಂಡ ಅಕ್ವಿಲ ಪ್ರಿಸ್ಕಿಲ್ಲರು, “ದೇವರ ಮಾರ್ಗವನ್ನು ಅವನಿಗೆ ಇನ್ನೂ ಸೂಕ್ಷ್ಮವಾಗಿ ವಿವರಿಸಿದರು.” ತದನಂತರ ಅಖಾಯದಲ್ಲಿ ಅವನು, “ಯೇಸುವೇ ಕ್ರಿಸ್ತನೆಂದು ಶಾಸ್ತ್ರಾಧಾರದಿಂದ ತೋರಿಸಿಕೊಟ್ಟು ಎಲ್ಲರ ಮುಂದೆ ಬಲವಾಗಿ ಯೆಹೂದ್ಯರನ್ನು ಖಂಡಿಸಿ ದೇವರ ಕೃಪೆಯಿಂದ ನಂಬಿದ್ದವರಿಗೆ ಬಹಳ ಸಹಾಯಮಾಡಿದನು.” (ಅ. ಕೃತ್ಯಗಳು 18:24-28) ಜೊತೆ ಆರಾಧಕರು ಮಾಡುವ ಹೇಳಿಕೆಗಳು ಅನೇಕಸಲ, ದೇವರ ವಾಕ್ಯದ ಕುರಿತಾದ ನಮ್ಮ ತಿಳಿವಳಿಕೆಯನ್ನು ವರ್ಧಿಸಬಲ್ಲವು. ಈ ವಿಧದಲ್ಲೂ ನಮಗೆ ಪರಸ್ಪರರ ಅಗತ್ಯವಿದೆ.
ಭೌತಿಕ ನೆರವನ್ನು ಒದಗಿಸುವುದು
7. ಜೊತೆ ಕ್ರೈಸ್ತರಿಗೆ ಭೌತಿಕ ಸಹಾಯದ ಅಗತ್ಯಬಿದ್ದಾಗ ಫಿಲಿಪ್ಪಿಯವರು ಹೇಗೆ ಪ್ರತಿಕ್ರಿಯಿಸಿದರು?
7 ಫಿಲಿಪ್ಪಿಯಲ್ಲಿದ್ದ ಕ್ರೈಸ್ತ ಸಭೆಯ ಸದಸ್ಯರು ಪೌಲನನ್ನು ಬಹಳಷ್ಟು ಪ್ರೀತಿಸುತ್ತಿದ್ದರು. ಅವನು ಥೆಸಲೊನೀಕದಲ್ಲಿ ತಂಗಿದ್ದಾಗ ಅವರು ಅವನಿಗೆ ಭೌತಿಕ ಸರಬರಾಯಿಗಳನ್ನು ಕಳುಹಿಸಿಕೊಟ್ಟರು. (ಫಿಲಿಪ್ಪಿ 4:15, 16) ಯೆರೂಸಲೇಮಿನಲ್ಲಿದ್ದ ಸಹೋದರರಿಗೆ ಭೌತಿಕ ಸಹಾಯದ ಅಗತ್ಯಬಿದ್ದಾಗ, ಫಿಲಿಪ್ಪಿಯವರು ತಮ್ಮ ಶಕ್ತಿಮೀರಿ ದಾನಮಾಡುವ ಸಿದ್ಧಮನಸ್ಸನ್ನು ತೋರಿಸಿದರು. ಫಿಲಿಪ್ಪಿಯಲ್ಲಿದ್ದ ತನ್ನ ಸಹೋದರ ಸಹೋದರಿಯರ ಉತ್ತಮ ಮನೋವೃತ್ತಿಯನ್ನು ಪೌಲನು ಎಷ್ಟೊಂದು ಗಣ್ಯಮಾಡಿದನೆಂದರೆ, ಇತರ ವಿಶ್ವಾಸಿಗಳಿಗೆ ಅವರನ್ನು ಒಂದು ಮಾದರಿಯೋಪಾದಿ ಅವನು ಉಲ್ಲೇಖಿಸಿದನು.—2 ಕೊರಿಂಥ 8:1-6.
8. ಎಪಫ್ರೊದೀತನು ಯಾವ ಮನೋವೃತ್ತಿಯನ್ನು ತೋರಿಸಿದನು?
ಫಿಲಿಪ್ಪಿ 2:25-30; 4:18) ಎಪಫ್ರೊದೀತನು ಒಬ್ಬ ಹಿರಿಯನಾಗಿದ್ದನೊ ಶುಶ್ರೂಷಾ ಸೇವಕನಾಗಿದ್ದನೊ ಎಂಬುದು ನಮಗೆ ತಿಳಿಸಲ್ಪಟ್ಟಿಲ್ಲ. ಹಾಗಿದ್ದರೂ, ಅವನು ಸ್ವತ್ಯಾಗದ ಮನೋಭಾವ ಹಾಗೂ ಸಹಾಯಭಾವದ ಕ್ರೈಸ್ತನಾಗಿದ್ದನು ಮತ್ತು ಪೌಲನಿಗೆ ನಿಜವಾಗಿಯೂ ಅವನ ಅಗತ್ಯವಿತ್ತು. ನಿಮ್ಮ ಸಭೆಯಲ್ಲಿ ಎಪಫ್ರೊದೀತನಂತಿರುವವರು ಯಾರಾದರೂ ಇದ್ದಾರೊ?
8 ಪೌಲನು ಸೆರೆಯಲ್ಲಿದ್ದಾಗ, ಫಿಲಿಪ್ಪಿಯವರು ಅವನಿಗೆ ಭೌತಿಕ ಕೊಡುಗೆಗಳನ್ನು ಕಳುಹಿಸಿದರು ಮಾತ್ರವಲ್ಲ, ತಮ್ಮ ವೈಯಕ್ತಿಕ ಪ್ರತಿನಿಧಿಯೋಪಾದಿ ಎಪಫ್ರೊದೀತನನ್ನು ಅವನ ಬಳಿ ಕಳುಹಿಸಿದರು. ಪೌಲನಂದದ್ದು: “ನೀವೇ ನನಗೆ ಮಾಡಬೇಕೆಂದಿರುವ ಉಪಚಾರದಲ್ಲಿ ಕಡಿಮೆಯಾದದ್ದನ್ನು ಪೂರ್ತಿಮಾಡುವದಕ್ಕಾಗಿ [ಎಪಫ್ರೊದೀತನು] ಜೀವದ ಆಶೆಯನ್ನು ಲಕ್ಷ್ಯಮಾಡದೆ ಕ್ರಿಸ್ತನ ಕೆಲಸದ ನಿಮಿತ್ತ ಸಾಯುವ” ಹಾಗಿದ್ದನು. (ಅವರು “ಬಲವರ್ಧಕ ಸಹಾಯಕರಾಗಿ”ದ್ದರು
9. ಅರಿಸ್ತಾರ್ಕನ ವಿಷಯದಲ್ಲಿ ನಮಗೆ ಯಾವ ಮಾದರಿಯಿದೆ?
9 ಅಕ್ವಿಲ, ಪ್ರಿಸ್ಕಿಲ್ಲ ಮತ್ತು ಎಪಫ್ರೊದೀತನಂಥ ಪ್ರೀತಿಯ ಸಹೋದರ ಸಹೋದರಿಯರು ಯಾವುದೇ ಸಭೆಯಲ್ಲಿದ್ದರೂ ಅವರನ್ನು ಗಣ್ಯಮಾಡಲಾಗುತ್ತದೆ. ನಮ್ಮ ಜೊತೆ ಆರಾಧಕರಲ್ಲಿ ಕೆಲವರು ಬಹುಮಟ್ಟಿಗೆ ಪ್ರಥಮ ಶತಮಾನದ ಕ್ರೈಸ್ತ ಅರಿಸ್ತಾರ್ಕನಂತೆ ಇರಬಹುದು. ಅವನು ಮತ್ತು ಇತರರು ‘ಬಲವರ್ಧಕ ಸಹಾಯಕರಾಗಿದ್ದರು,’ ಅಂದರೆ ಬಹುಶಃ ಸಾಂತ್ವನ ಅಥವಾ ಮೂಲಭೂತ, ಪ್ರಾಯೋಗಿಕ ವಿಷಯಗಳಲ್ಲಿ ನೆರವಿನ ಮೂಲವಾಗಿದ್ದರು. (ಕೊಲೊಸ್ಸೆ 4:10, 11, NW) ಪೌಲನಿಗೆ ನೆರವು ನೀಡುವ ಮೂಲಕ, ಅರಿಸ್ತಾರ್ಕನು ನಿಜವಾಗಿಯೂ ಆಪತ್ಬಾಂಧವನಾಗಿ ಪರಿಣಮಿಸಿದನು. ಅವನು ಜ್ಞಾನೋಕ್ತಿ 17:17ರಲ್ಲಿ (NW) ತಿಳಿಸಲ್ಪಟ್ಟಿರುವಂಥ ರೀತಿಯ ವ್ಯಕ್ತಿಯಾಗಿದ್ದನು: “ಒಬ್ಬ ನಿಜ ಸಂಗಾತಿಯು ಯಾವಾಗಲೂ ಪ್ರೀತಿಸುತ್ತಾನೆ, ಮತ್ತು ಸಂಕಟದ ಸಮಯದಲ್ಲಿ ಸಹಾಯಮಾಡಲಿಕ್ಕಾಗಿ ಹುಟ್ಟಿರುವ ಸಹೋದರನಾಗಿದ್ದಾನೆ.” ನಾವೆಲ್ಲರೂ, ಜೊತೆ ಕ್ರೈಸ್ತರಿಗೆ “ಬಲವರ್ಧಕ ಸಹಾಯಕರಾಗಿ”ರಲು ಪ್ರಯತ್ನಿಸಬೇಕಲ್ಲವೆ? ನಾವು ವಿಶೇಷವಾಗಿ ಕಷ್ಟದಲ್ಲಿ ಬಿದ್ದು ನಲುಗುತ್ತಿರುವವರಿಗೆ ನಮ್ಮ ಸಹಾಯಹಸ್ತವನ್ನು ಚಾಚಬೇಕು.
10. ಪೇತ್ರನು ಕ್ರೈಸ್ತ ಹಿರಿಯರಿಗಾಗಿ ಯಾವ ಮಾದರಿಯನ್ನಿಟ್ಟನು?
10 ವಿಶೇಷವಾಗಿ ಕ್ರೈಸ್ತ ಹಿರಿಯರು, ತಮ್ಮ ಆತ್ಮಿಕ ಸಹೋದರ ಸಹೋದರಿಯರಿಗೆ ಬಲವರ್ಧಕ ಸಹಾಯಕರಾಗಿರಬೇಕು. ಕ್ರಿಸ್ತನು ಅಪೊಸ್ತಲ ಪೇತ್ರನಿಗಂದದ್ದು: “ನಿನ್ನ ಸಹೋದರರನ್ನು ದೃಢಪಡಿಸು.” (ಲೂಕ 22:32) ಪೇತ್ರನು ಅದನ್ನು ಮಾಡಲು ಶಕ್ತನಾದನು, ಏಕೆಂದರೆ ಅವನು ದೃಢವಾದ ಗುಣಗಳನ್ನು ತೋರಿಸಿದನು. ಇದು ವಿಶೇಷವಾಗಿ ಯೇಸುವಿನ ಪುನರುತ್ಥಾನದ ನಂತರ ಸತ್ಯವಾಗಿತ್ತು. ಹಿರಿಯರೇ, ನೀವು ಸಹ ಸಿದ್ಧಮನಸ್ಸಿನಿಂದ ಮತ್ತು ಕೋಮಲಭಾವದಿಂದ ಇದನ್ನು ಮಾಡಲು ಸರ್ವಪ್ರಯತ್ನವನ್ನೂ ಮಾಡಿರಿ. ಏಕೆಂದರೆ ನಿಮ್ಮ ಜೊತೆ ವಿಶ್ವಾಸಿಗಳಿಗೆ ನಿಮ್ಮ ಅಗತ್ಯವಿದೆ.—ಅ. ಕೃತ್ಯಗಳು 20:28-30; 1 ಪೇತ್ರ 5:2, 3.
11. ತಿಮೊಥೆಯನ ಮನೋವೃತ್ತಿಯನ್ನು ಪರಿಗಣಿಸುವ ಮೂಲಕ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?
11 ಪೌಲನ ಸಂಚಾರ ಸಂಗಾತಿಯಾಗಿದ್ದ ತಿಮೊಥೆಯನು ಒಬ್ಬ ಹಿರಿಯನಾಗಿದ್ದನು. ಅವನು ಬೇರೆ ಕ್ರೈಸ್ತರ ಕುರಿತಾಗಿ ತುಂಬ ಕಾಳಜಿವಹಿಸುವವನಾಗಿದ್ದನು. ತಿಮೊಥೆಯನಿಗೆ ನಿರ್ದಿಷ್ಟವಾದ ಆರೋಗ್ಯ ಸಮಸ್ಯೆಗಳಿದ್ದರೂ, ಅವನು ಪೂರ್ಣಹೃದಯದ ನಂಬಿಕೆಯನ್ನು ಪ್ರದರ್ಶಿಸಿದನು ಮತ್ತು ‘ಸುವಾರ್ತಾಪ್ರಚಾರಕ್ಕಾಗಿ ಕಷ್ಟಪಟ್ಟು ಕೆಲಸನಡಿಸಿದನು.’ ಹೀಗಿರುವುದರಿಂದ ಅಪೊಸ್ತಲ ಪೌಲನು ಫಿಲಿಪ್ಪಿಯವರಿಗೆ ಹೀಗನ್ನಲು ಶಕ್ತನಾದನು: “ಅವನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ.” (ಫಿಲಿಪ್ಪಿ 2:20, 22; 1 ತಿಮೊಥೆಯ 5:23; 2 ತಿಮೊಥೆಯ 1:5) ತಿಮೊಥೆಯನಂಥ ಮನೋವೃತ್ತಿಯನ್ನು ಪ್ರದರ್ಶಿಸುವ ಮೂಲಕ, ನಾವು ಯೆಹೋವನನ್ನು ಸೇವಿಸುತ್ತಿರುವ ನಮ್ಮ ಜೊತೆ ಆರಾಧಕರಿಗೆ ಆಶೀರ್ವಾದವಾಗಿರಬಲ್ಲೆವು. ನಮ್ಮ ಸ್ವಂತ ಮಾನವ ದೌರ್ಬಲ್ಯಗಳು ಮತ್ತು ವಿಭಿನ್ನ ಪ್ರಕಾರದ ಪರೀಕ್ಷೆಗಳನ್ನು ನಾವು ತಾಳಿಕೊಳ್ಳಬೇಕಾಗಬಹುದು ನಿಜ, ಆದರೆ ನಾವು ಕೂಡ ಬಲವಾದ ನಂಬಿಕೆ ಮತ್ತು ನಮ್ಮ ಆತ್ಮಿಕ ಸಹೋದರ ಸಹೋದರಿಯರಿಗಾಗಿ ಪ್ರೀತಿಯ ಚಿಂತೆಯನ್ನು ತೋರಿಸಬಲ್ಲೆವು ಮತ್ತು ತೋರಿಸಲೇಬೇಕು. ಅವರಿಗೆ ನಮ್ಮ ಅಗತ್ಯವಿದೆ ಎಂಬುದನ್ನು ನಾವು ಯಾವಾಗಲೂ ನೆನಪಿನಲ್ಲಿಡಬೇಕು.
ಬೇರೆಯವರ ಬಗ್ಗೆ ಕಾಳಜಿವಹಿಸಿದ ಸ್ತ್ರೀಯರು
12. ದೊರ್ಕಳ ಮಾದರಿಯಿಂದ ನಾವೇನು ಕಲಿಯಬಲ್ಲೆವು?
12 ಬೇರೆಯವರ ಬಗ್ಗೆ ಕಾಳಜಿವಹಿಸಿದ ದೈವಭಕ್ತ ಸ್ತ್ರೀಯರಲ್ಲಿ, ದೊರ್ಕಳು ಒಬ್ಬಳಾಗಿದ್ದಳು. ಅವಳು ಮರಣಹೊಂದಿದಾಗ, ಶಿಷ್ಯರು ಪೇತ್ರನನ್ನು ಕರೇಕಳುಹಿಸಿ, ಅವನನ್ನು ಮೇಲಿನ ಕೋಣೆಗೆ ಕರೆದುಕೊಂಡು ಹೋದರು. ಅಲ್ಲಿ “ವಿಧವೆಯರೆಲ್ಲರು ಅಳುತ್ತಾ ಅವನ ಹತ್ತಿರ ನಿಂತುಕೊಂಡು ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟಿದ್ದ ಒಳಂಗಿಗಳನ್ನೂ ಮೇಲಂಗಿಗಳನ್ನೂ ತೋರಿಸಿದರು.” ದೊರ್ಕಳನ್ನು ಪುನಃ ಜೀವಿಸುವಂತೆ ಮಾಡಲಾಯಿತು, ಮತ್ತು ಅವಳು ನಿಸ್ಸಂದೇಹವಾಗಿಯೂ ‘ಸತ್ಕ್ರಿಯೆಗಳನ್ನೂ ದಾನಧರ್ಮಗಳನ್ನೂ ಬಹಳವಾಗಿ ಮಾಡುವುದನ್ನು’ ಮುಂದುವರಿಸಿದಳು. ಸದ್ಯದ ದಿನದ ಕ್ರೈಸ್ತ ಸಭೆಯಲ್ಲಿ, ಅಗತ್ಯದಲ್ಲಿರುವವರಿಗೆ ಬಟ್ಟೆಗಳನ್ನು ಹೊಲಿದುಕೊಡುವ ಇಲ್ಲವೆ ಬೇರಾವುದೇ ಪ್ರೀತಿಯ ಕೆಲಸಗಳನ್ನು ಮಾಡುವ ದೊರ್ಕಳಂಥ ಸ್ತ್ರೀಯರಿದ್ದಾರೆ. ಮತ್ತು ನಿಶ್ಚಯವಾಗಿಯೂ ಅವರ ಸತ್ಕ್ರಿಯೆಗಳಲ್ಲಿ, ರಾಜ್ಯಾಭಿರುಚಿಗಳನ್ನು ಪ್ರವರ್ಧಿಸುವುದು ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪಾಲ್ಗೊಳ್ಳುವುದು ಪ್ರಮುಖವಾಗಿದೆ.—ಅ. ಕೃತ್ಯಗಳು 9:36-42; ಮತ್ತಾಯ 6:33; 28:19, 20.
13. ಲುದ್ಯಳು ಜೊತೆ ಕ್ರೈಸ್ತರ ಬಗ್ಗೆ ಕಾಳಜಿ ತೋರಿಸಿದ್ದು ಹೇಗೆ?
ಅ. ಕೃತ್ಯಗಳು 16:12-15) ಲುದ್ಯಳು ಬೇರೆಯವರಿಗೋಸ್ಕರ ಒಳ್ಳೇದನ್ನು ಮಾಡಲು ಬಯಸುತ್ತಿದ್ದುದರಿಂದ, ಪೌಲನು ಮತ್ತು ಅವನ ಸಂಗಡಿಗರು ಅವಳ ಮನೆಯಲ್ಲಿ ತಂಗುವಂತೆ ಮಾಡುವುದರಲ್ಲಿ ಸಫಲಳಾದಳು. ಇಂದು ದಯಾಪರ ಮತ್ತು ಪ್ರೀತಿಯ ಕ್ರೈಸ್ತರು ಅದೇ ರೀತಿಯ ಅತಿಥಿಸತ್ಕಾರವನ್ನು ತೋರಿಸುವಾಗ ನಾವದನ್ನು ಎಷ್ಟು ಗಣ್ಯಮಾಡುತ್ತೇವೆ!—ರೋಮಾಪುರ 12:13; 1 ಪೇತ್ರ 4:9.
13 ಲುದ್ಯಳೆಂಬ ಒಬ್ಬ ದೇವಭಯವುಳ್ಳ ಸ್ತ್ರೀಯು ಇತರರ ಕುರಿತಾಗಿ ಕಾಳಜಿವಹಿಸುತ್ತಿದ್ದಳು. ಅವಳು ಥುವತೈರದ ಮೂಲನಿವಾಸಿಯಾಗಿದ್ದು, ಪೌಲನು ಸುಮಾರು ಸಾ.ಶ. 50ರಲ್ಲಿ ಫಿಲಿಪ್ಪಿಯಲ್ಲಿ ಸಾರುತ್ತಿದ್ದಾಗ ಅಲ್ಲಿ ವಾಸಿಸುತ್ತಿದ್ದಳು. ಲುದ್ಯಳು ಒಬ್ಬ ಯೆಹೂದಿ ಮತಾವಲಂಬಿ ಆಗಿದ್ದಿರಬಹುದು. ಆದರೆ ಫಿಲಿಪ್ಪಿಯಲ್ಲಿ ತೀರ ಕಡಿಮೆ ಯೆಹೂದ್ಯರು ಇದ್ದುದರಿಂದ ಅಲ್ಲಿ ಯಾವುದೇ ಸಭಾಮಂದಿರವು ಇಲ್ಲದಿದ್ದಿರಬಹುದು. ಆ ವೃತ್ತಾಂತವು ಹೇಳುವುದು: “ಪೌಲನು ಹೇಳಿದ ಮಾತುಗಳಿಗೆ ಲಕ್ಷ್ಯಕೊಡುವದಕ್ಕೆ ಕರ್ತನು [ಲುದ್ಯಳ] ಹೃದಯವನ್ನು ತೆರೆದನು. ಆಕೆಯೂ ಆಕೆಯ ಮನೆಯವರೂ ದೀಕ್ಷಾಸ್ನಾನಮಾಡಿಸಿಕೊಂಡ ಮೇಲೆ ಆಕೆ—ನಾನು ಕರ್ತ [“ಯೆಹೋವ,” NW]ನನ್ನು ನಂಬಿದವಳೆಂದು ನಿಶ್ಚಯಿಸಿಕೊಂಡಿದ್ದರೆ ನನ್ನ ಮನೆಯಲ್ಲಿ ಬಂದು ಇರ್ರಿ ಎಂದು ಬೇಡಿಕೊಂಡು ನಮ್ಮನ್ನು ಬಲವಂತ ಮಾಡಿದಳು.” (ಯುವ ಜನರೇ ನಮಗೆ ನಿಮ್ಮ ಅಗತ್ಯವೂ ಇದೆ
14. ಯೇಸು ಕ್ರಿಸ್ತನು ಯುವ ಜನರನ್ನು ಹೇಗೆ ಉಪಚರಿಸಿದನು?
14 ಕ್ರೈಸ್ತ ಸಭೆಯು ಶುರುವಾದದ್ದು, ದೇವರ ದಯಾಪರ, ಸ್ನೇಹಪರ ಪುತ್ರನಾದ ಯೇಸು ಕ್ರಿಸ್ತನಿಂದಲೇ. ಜನರಿಗೆ ಅವನ ಬಳಿಯಿರಲು ಮುಜುಗರವೆನಿಸುತ್ತಿರಲಿಲ್ಲ, ಯಾಕೆಂದರೆ ಅವನು ಪ್ರೀತಿಪರನೂ ಕರುಣೆಯುಳ್ಳವನೂ ಆಗಿದ್ದನು. ಒಂದು ಸಂದರ್ಭದಲ್ಲಿ ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನ ಬಳಿ ತರಲಾರಂಭಿಸಿದಾಗ, ಅವನ ಶಿಷ್ಯರು ಅವರನ್ನು ಹಿಂದೆ ಕಳುಹಿಸಲು ಪ್ರಯತ್ನಿಸಿದರು. ಆದರೆ ಯೇಸು ಹೇಳಿದ್ದು: “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ; ದೇವರ ರಾಜ್ಯವು ಇಂಥವರದೇ. ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವದಿಲ್ಲವೋ ಅವನು ಅದರಲ್ಲಿ ಸೇರುವದೇ ಇಲ್ಲ.” (ಮಾರ್ಕ 10:13-15) ರಾಜ್ಯದ ಆಶೀರ್ವಾದಗಳನ್ನು ಪಡೆಯಲಿಕ್ಕಾಗಿ ನಾವು ಎಳೇ ಮಕ್ಕಳಷ್ಟು ನಮ್ರರೂ, ಕಲಿಯುವ ಮನೋಭಾವದವರೂ ಆಗಿರಬೇಕು. ಯೇಸು ಈ ಚಿಕ್ಕ ಮಕ್ಕಳನ್ನು ಅಪ್ಪಿಕೊಂಡು ಅವರನ್ನು ಆಶೀರ್ವದಿಸುವ ಮೂಲಕ ಅವರಿಗಾಗಿರುವ ತನ್ನ ಪ್ರೀತಿಯನ್ನು ತೋರಿಸಿದನು. (ಮಾರ್ಕ 10:16) ಯುವ ಜನರಾದ ನಿಮ್ಮ ಕುರಿತಾಗಿ ಏನು? ನಿಮ್ಮನ್ನು ಪ್ರೀತಿಸಲಾಗುತ್ತದೆ ಮತ್ತು ಸಭೆಯಲ್ಲಿ ನಿಮ್ಮ ಅಗತ್ಯವಿದೆ ಎಂಬ ಆಶ್ವಾಸನೆ ನಿಮಗಿರಲಿ.
15. ಲೂಕ 2:40-52ರಲ್ಲಿ ಯೇಸುವಿನ ಜೀವನದ ಬಗ್ಗೆ ಯಾವ ನಿಜಾಂಶಗಳು ದಾಖಲಿಸಲ್ಪಟ್ಟಿವೆ, ಮತ್ತು ಅವನು ಯುವ ಜನರಿಗಾಗಿ ಯಾವ ಮಾದರಿಯನ್ನಿಟ್ಟನು?
15 ಯೇಸು ಇನ್ನೂ ಒಬ್ಬ ಎಳೆಯ ಹುಡುಗನಾಗಿದ್ದಾಗಲೇ ದೇವರಿಗಾಗಿ ಮತ್ತು ಶಾಸ್ತ್ರವಚನಗಳಿಗಾಗಿ ತನ್ನ ಪ್ರೀತಿಯನ್ನು ತೋರಿಸಿದನು. ಅವನು 12 ವರ್ಷದವನಾಗಿದ್ದಾಗ, ಅವನು ಮತ್ತು ಅವನ ಹೆತ್ತವರಾದ ಯೋಸೇಫ ಹಾಗೂ ಮರಿಯರು, ತಮ್ಮ ಊರಾದ ನಜರೇತ್‌ನಿಂದ ಯೆರೂಸಲೇಮಿಗೆ ಪಸ್ಕಹಬ್ಬವನ್ನು ಆಚರಿಸಲು ಪ್ರಯಾಣಿಸಿದರು. ಹಿಂದಿರುಗಿ ಬರುವ ಪ್ರಯಾಣದಲ್ಲಿ, ಯೇಸು ತಮ್ಮ ಜೊತೆಯಲ್ಲಿ ಬರುತ್ತಿದ್ದ ಗುಂಪಿನಲ್ಲಿಲ್ಲ ಎಂಬುದು ಲೂಕ 2:40-52) ಯುವ ಜನರಿಗಾಗಿ ಯೇಸು ಎಂಥ ಉತ್ತಮ ಮಾದರಿಯನ್ನಿಟ್ಟನು! ಖಂಡಿತವಾಗಿಯೂ ಅವರು ತಮ್ಮ ಹೆತ್ತವರಿಗೆ ವಿಧೇಯರಾಗಿರಬೇಕು ಮತ್ತು ಆತ್ಮಿಕ ವಿಷಯಗಳನ್ನು ಕಲಿಯುವುದರಲ್ಲಿ ಆಸಕ್ತರಾಗಿರಬೇಕು.—ಧರ್ಮೋಪದೇಶಕಾಂಡ 5:16; ಎಫೆಸ 6:1-3.
ಅವನ ಹೆತ್ತವರಿಗೆ ಗೊತ್ತಾಯಿತು. ಕೊನೆಗೆ ಅವರು ಅವನನ್ನು ಪತ್ತೆಹಚ್ಚಿದರು. ಅವನು ದೇವಾಲಯದ ಒಂದು ಸಭಾಗೃಹದಲ್ಲಿ, ಯೆಹೂದಿ ಶಿಕ್ಷಕರಿಗೆ ಕಿವಿಗೊಡುತ್ತಾ, ಅವರಿಗೆ ಪ್ರಶ್ನೆಗಳನ್ನು ಕೇಳುತ್ತಾ ಇದ್ದನು. ತನ್ನನ್ನು ಎಲ್ಲಿ ಹುಡುಕಬೇಕೆಂಬುದು ಯೋಸೇಫ ಮರಿಯರಿಗೆ ತಿಳಿದಿರಲಿಲ್ಲವೆಂಬ ಸಂಗತಿಯಿಂದ ಆಶ್ಚರ್ಯಗೊಂಡ ಯೇಸು ಕೇಳಿದ್ದು: “ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದದ್ದು ನಿಮಗೆ ತಿಳಿಯಲಿಲ್ಲವೇ?” ತದನಂತರ ಅವನು ತನ್ನ ಹೆತ್ತವರೊಂದಿಗೆ ಮನೆಗೆ ಹಿಂದಿರುಗಿದನು, ಅವರಿಗೆ ಅಧೀನನಾಗಿದ್ದನು, ಮತ್ತು ವಿವೇಕದಲ್ಲಿಯೂ ಶಾರೀರಿಕ ಬೆಳವಣಿಗೆಯಲ್ಲೂ ಪ್ರಗತಿಮಾಡುತ್ತಾ ಮುಂದುವರಿದನು. (16. (ಎ) ಯೇಸು ದೇವಾಲಯದಲ್ಲಿ ಸಾಕ್ಷಿಕೊಡುತ್ತಿದ್ದಾಗ ಕೆಲವು ಹುಡುಗರು ಏನೆಂದು ಕೂಗಿದರು? (ಬಿ) ಇಂದು ಯುವ ಕ್ರೈಸ್ತರಿಗೆ ಯಾವ ಸುಯೋಗವಿದೆ?
16 ಒಬ್ಬ ಯುವ ವ್ಯಕ್ತಿಯೋಪಾದಿ, ನೀವು ಶಾಲೆಯಲ್ಲಿ ಮತ್ತು ನಿಮ್ಮ ಹೆತ್ತವರ ಸಂಗಡ ಮನೆಯಿಂದ ಮನೆಯಲ್ಲಿ ಯೆಹೋವನ ಕುರಿತಾಗಿ ಸಾಕ್ಷಿ ನೀಡುತ್ತಿರಬಹುದು. (ಯೆಶಾಯ 43:10-12; ಅ. ಕೃತ್ಯಗಳು 20:20, 21) ಯೇಸು ತನ್ನ ಮರಣದ ಸ್ವಲ್ಪ ಸಮಯಕ್ಕೆ ಮುಂಚೆ ದೇವಾಲಯದಲ್ಲಿ ಸಾಕ್ಷಿ ನೀಡುತ್ತಿದ್ದಾಗ ಮತ್ತು ಜನರನ್ನು ಗುಣಪಡಿಸುತ್ತಿದ್ದಾಗ, ಕೆಲವು ಹುಡುಗರು ಹೀಗೆ ಕೂಗಿದರು: “ದಾವೀದನ ಕುಮಾರನಿಗೆ ಜಯ ಜಯ”! ಇದರಿಂದ ಸಿಟ್ಟುಗೊಂಡ ಮಹಾಯಾಜಕರೂ ಶಾಸ್ತ್ರಿಗಳೂ ಪ್ರತಿಭಟಿಸುತ್ತಾ ಹೇಳಿದ್ದು: “ಇವರು ಹೇಳುವದನ್ನು ಕೇಳುತ್ತೀಯಾ?” “ಹೌದು,” ಎಂದು ಯೇಸು ಉತ್ತರಿಸಿದನು. “ಸಣ್ಣ ಮಕ್ಕಳ ಬಾಯಿಂದಲೂ ಮೊಲೇಕೂಸುಗಳ ಬಾಯಿಂದಲೂ ಸ್ತೋತ್ರವನ್ನು ಸಿದ್ಧಿಗೆ ತಂದಿ ಎಂಬದನ್ನು ನೀವು ಎಂದಾದರೂ ಓದಲಿಲ್ಲವೋ?” (ಮತ್ತಾಯ 21:15-17) ಆ ಮಕ್ಕಳಂತೆಯೇ, ಸಭೆಯಲ್ಲಿರುವ ಯುವ ಜನರಾದ ನಿಮಗೂ, ದೇವರನ್ನೂ ಆತನ ಮಗನನ್ನೂ ಸ್ತುತಿಸುವ ಮಹಾ ಸುಯೋಗ ಇದೆ. ನಮ್ಮ ಪಕ್ಕದಲ್ಲಿದ್ದು ರಾಜ್ಯ ಘೋಷಕರಾಗಿ ನೀವು ಕೆಲಸಮಾಡಬೇಕೆಂದು ನಾವು ಬಯಸುತ್ತೇವೆ ಮತ್ತು ನಮಗೆ ನಿಮ್ಮ ಅಗತ್ಯವಿದೆ.
ಆಪತ್ತು ಬಂದೆರಗಿದಾಗ
17, 18. (ಎ) ಪೌಲನು ಯೂದಾಯದಲ್ಲಿದ್ದ ಕ್ರೈಸ್ತರಿಗಾಗಿ ಹಣಸಂಗ್ರಹ ಕಾರ್ಯವನ್ನು ಏರ್ಪಡಿಸಿದ್ದೇಕೆ? (ಬಿ) ಯೂದಾಯದಲ್ಲಿದ್ದ ವಿಶ್ವಾಸಿಗಳಿಗಾಗಿ ಮಾಡಲ್ಪಟ್ಟ ಸ್ವಯಂಪ್ರೇರಿತ ದಾನಗಳು, ಯೆಹೂದಿ ಹಾಗೂ ಅನ್ಯಜನಾಂಗಗಳ ಕ್ರೈಸ್ತರ ಮೇಲೆ ಯಾವ ಪರಿಣಾಮವನ್ನು ಬೀರಿದವು?
17 ನಮ್ಮ ಪರಿಸ್ಥಿತಿಗಳು ಏನೇ ಆಗಿರಲಿ, ಕಷ್ಟದಲ್ಲಿ ಬಿದ್ದಿರುವ ನಮ್ಮ ಜೊತೆ ಕ್ರೈಸ್ತರಿಗೆ ಸಹಾಯಮಾಡುವಂತೆ ಪ್ರೀತಿಯು ನಮ್ಮನ್ನು ಪ್ರಚೋದಿಸುತ್ತದೆ. (ಯೋಹಾನ 13:34, 35; ಯಾಕೋಬ 2:14-17) ಅಖಾಯ, ಗಲಾತ್ಯ, ಮಕೆದೋನ್ಯ ಮತ್ತು ಏಷ್ಯಾ ಸೀಮೆಯಲ್ಲಿದ್ದ ಸಭೆಗಳಿಂದ ಹಣಸಂಗ್ರಹವನ್ನು ಏರ್ಪಡಿಸಲಿಕ್ಕಾಗಿ ಪೌಲನನ್ನು ಪ್ರಚೋದಿಸಿದ ಸಂಗತಿಯು, ಯೂದಾಯದಲ್ಲಿದ್ದ ಅವನ ಸಹೋದರ ಸಹೋದರಿಯರಿಗಾಗಿದ್ದ ಪ್ರೀತಿಯೇ. ಯೆರೂಸಲೇಮಿನಲ್ಲಿದ್ದ ಶಿಷ್ಯರು ಅನುಭವಿಸಿದ ಹಿಂಸೆ, ಪೌರ ಗಲಭೆ ಮತ್ತು ಕ್ಷಾಮವು, ಪೌಲನು ‘ಕಷ್ಟ,’ “ಸಂಕಟ” ಮತ್ತು ‘[ಅವರ] ಸೊತ್ತುಗಳ ಸುಲುಕೊಳ್ಳುವಿಕೆ’ ಎಂದು ಕರೆದಂಥ ಸಂಗತಿಗಳಲ್ಲಿ ಫಲಿಸಿರಬಹುದು. (ಇಬ್ರಿಯ 10:32-34; ಅ. ಕೃತ್ಯಗಳು 11:27-12:1) ಆದುದರಿಂದ ಅವನು ಯೂದಾಯದಲ್ಲಿದ್ದ ಬಡ ಕ್ರೈಸ್ತರಿಗಾಗಿ ಹಣವನ್ನು ಸಂಗ್ರಹಿಸುವ ಏರ್ಪಾಡಿನ ಉಸ್ತುವಾರಿಯನ್ನು ನಿರ್ವಹಿಸಿದನು.—1 ಕೊರಿಂಥ 16:1-3; 2 ಕೊರಿಂಥ 8:1-4, 13-15; 9:1, 2, 7.
18 ಯೂದಾಯದಲ್ಲಿದ್ದ ಪವಿತ್ರ ಜನರಿಗಾಗಿರುವ ಸ್ವಯಂಪ್ರೇರಿತ ದಾನಗಳು, ಯೆಹೋವನ ಯೆಹೂದಿ ಹಾಗೂ ಅನ್ಯಜನಾಂಗಗಳ ಆರಾಧಕರ ನಡುವೆ ಸಹೋದರತ್ವದ ಬಂಧವು ಅಸ್ತಿತ್ವದಲ್ಲಿತ್ತೆಂಬುದನ್ನು ರುಜುಪಡಿಸಿದವು. ಆ ಅನ್ಯಜನಾಂಗಗಳ ಕ್ರೈಸ್ತರು ಕೊಟ್ಟಂಥ ಹಣಕಾಸಿನ ಕಾಣಿಕೆಗಳು, ಅವರು ಯೂದಾಯದ ತಮ್ಮ ಜೊತೆ ಆರಾಧಕರಿಂದ ಪಡೆದಂಥ ಆತ್ಮಿಕ ಐಶ್ವರ್ಯಕ್ಕಾಗಿ ತಮ್ಮ ಕೃತಜ್ಞತೆಯನ್ನು ತೋರಿಸಲಿಕ್ಕಾಗಿಯೂ ಒಂದು ಅವಕಾಶವನ್ನು ಕೊಟ್ಟಿತು. ಹೀಗೆ, ಭೌತಿಕ ಹಾಗೂ ಆತ್ಮಿಕ ಸ್ವರೂಪದ ಹಂಚಿಕೊಳ್ಳುವಿಕೆ ಇತ್ತು. (ರೋಮಾಪುರ 15:26, 27) ಇಂದು ಕೂಡ, ಕಷ್ಟದಲ್ಲಿರುವ ಜೊತೆ ಕ್ರೈಸ್ತರಿಗಾಗಿ ಮಾಡಲ್ಪಡುವ ಕಾಣಿಕೆಗಳು ಸ್ವಯಂಪ್ರೇರಿತವಾಗಿವೆ ಮತ್ತು ಪ್ರೀತಿಯಿಂದ ಪ್ರಚೋದಿಸಲ್ಪಟ್ಟಿವೆ. (ಮಾರ್ಕ 12:28-31) ಸಮಾನತ್ವವು ಉಂಟಾಗಿ, ‘ಸ್ವಲ್ಪವಾಗಿ ಕೂಡಿಸಿದವನಿಗೆ ಏನೂ ಕಡಿಮೆಯಾಗದಂತೆ’ ಈ ಸಂಬಂಧದಲ್ಲೂ ನಮಗೆ ಪರಸ್ಪರರ ಅಗತ್ಯವಿದೆ.—2 ಕೊರಿಂಥ 8:15.
19, 20. ವಿಪತ್ತುಗಳು ಸಂಭವಿಸುವಾಗ ಯೆಹೋವನ ಜನರು ಹೇಗೆ ಸಹಾಯವನ್ನು ಒದಗಿಸುತ್ತಾರೆಂಬುದನ್ನು ತೋರಿಸಲು ಒಂದು ಉದಾಹರಣೆಯನ್ನು ಕೊಡಿರಿ.
19 ಕ್ರೈಸ್ತರಿಗೆ ಪರಸ್ಪರರ ಅಗತ್ಯವಿದೆ ಎಂಬುದರ ಅರಿವಿನಿಂದಾಗಿ, ನಂಬಿಕೆಯಲ್ಲಿ ನಮ್ಮ ಸಹೋದರ ಸಹೋದರಿಯರು ಆಗಿರುವವರಿಗೆ ಸಹಾಯಮಾಡಲು ನಾವು ತಡಮಾಡುವುದಿಲ್ಲ.
ಉದಾಹರಣೆಗೆ ಇಸವಿ 2001ರ ಆರಂಭದಲ್ಲಿ ಎಲ್ ಸಾಲ್ವಡಾರ್‌ನಲ್ಲಾದ ಧ್ವಂಸಕಾರಿ ಭೂಕಂಪಗಳು ಮತ್ತು ಭೂಕುಸಿತಗಳ ಸಮಯದಲ್ಲಿ ಏನು ನಡೆಯಿತೊ ಅದನ್ನು ಪರಿಗಣಿಸಿರಿ. ಒಂದು ವರದಿಯು ಹೇಳಿದ್ದು: “ಎಲ್ ಸಾಲ್ವಡಾರ್‌ನ ಎಲ್ಲಾ ಭಾಗಗಳಲ್ಲಿ ಸಹೋದರರು ಪರಿಹಾರ ಕ್ರಮಗಳನ್ನು ಕೈಗೊಂಡರು. ಗ್ವಾಟೆಮಾಲ, ಅಮೆರಿಕ ಮತ್ತು ಕೆನಡದಿಂದ ಸಹೋದರರ ಗುಂಪುಗಳು ಬಂದು ನಮಗೆ ಸಹಾಯಮಾಡಿದವು. . . . 500ಕ್ಕಿಂತಲೂ ಹೆಚ್ಚು ಮನೆಗಳು ಮತ್ತು 3 ಆಕರ್ಷಕ ರಾಜ್ಯ ಸಭಾಗೃಹಗಳನ್ನು ಬೇಗನೆ ನಿರ್ಮಿಸಲಾಯಿತು. ಈ ಸ್ವತ್ಯಾಗ ಮನೋಭಾವದ ಸಹೋದರರ ಕಠಿನ ಶ್ರಮ ಹಾಗೂ ಸಹಕಾರ ಭಾವದಿಂದಾಗಿ ಒಂದು ದೊಡ್ಡ ಸಾಕ್ಷಿಯು ಕೊಡಲ್ಪಟ್ಟಿದೆ.”20 ದಕ್ಷಿಣ ಆಫ್ರಿಕದಿಂದ ಬಂದಿರುವ ಒಂದು ವರದಿಯು ಹೇಳಿದ್ದು: “ಮೊಸಾಂಬೀಕ್ ಮೇಲೆ ಎರಗಿದ ಭಯಂಕರ ನೆರೆಹಾವಳಿಗಳು ನಮ್ಮ ಕ್ರೈಸ್ತ ಸಹೋದರರಲ್ಲೂ ಅನೇಕರನ್ನು ಬಾಧಿಸಿದವು. ಅವರ ಹೆಚ್ಚಿನ ಅಗತ್ಯಗಳನ್ನು ಪೂರೈಸಲು ಮೊಸಾಂಬೀಕ್‌ನಲ್ಲಿರುವ ಬ್ರಾಂಚ್ ಆಫೀಸು ಏರ್ಪಾಡುಗಳನ್ನು ಮಾಡಿತು. ಆದರೆ ಅವರು ನಮಗೆ, ಉಪಯೋಗಿಸಲ್ಪಟ್ಟಿದ್ದರೂ ಸುಸ್ಥಿತಿಯಲ್ಲಿರುವ ಬಟ್ಟೆಬರೆಗಳನ್ನು ಆ ಕಷ್ಟದಲ್ಲಿರುವ ಸಹೋದರರಿಗಾಗಿ ಕಳುಹಿಸುವಂತೆ ಕೇಳಿಕೊಂಡರು. ಮೊಸಾಂಬೀಕ್‌ನಲ್ಲಿರುವ ನಮ್ಮ ಸಹೋದರರಿಗೆ ಕಳುಹಿಸಲು, 12 ಮೀಟರ್ ಉದ್ದದ ಒಂದು ಕಂಟೇನರ್ ತುಂಬ ಬಟ್ಟೆಗಳನ್ನು ಒಟ್ಟುಗೂಡಿಸಲು ನಾವು ಶಕ್ತರಾದೆವು.” ಹೌದು, ಈ ವಿಧಗಳಲ್ಲೂ ನಮಗೆ ಪರಸ್ಪರರ ಅಗತ್ಯವಿದೆ.
21. ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?
21 ಈ ಹಿಂದೆ ಹೇಳಲಾಗಿರುವಂತೆ, ಮಾನವ ದೇಹದ ಪ್ರತಿಯೊಂದು ಭಾಗವೂ ಪ್ರಾಮುಖ್ಯವಾಗಿದೆ. ಕ್ರೈಸ್ತ ಸಭೆಯ ವಿಷಯದಲ್ಲೂ ಇದು ಖಂಡಿತವಾಗಿಯೂ ಸತ್ಯವಾಗಿದೆ. ಅದರ ಎಲ್ಲಾ ಸದಸ್ಯರಿಗೂ ಪರಸ್ಪರರ ಅಗತ್ಯವಿದೆ. ಅವರು ಐಕ್ಯವಾಗಿ ಸೇವೆಸಲ್ಲಿಸುತ್ತಾ ಇರುವುದೂ ಅಗತ್ಯವಾಗಿದೆ. ಇದನ್ನು ಸಾಧ್ಯಗೊಳಿಸುವ ಕೆಲವೊಂದು ಅಂಶಗಳನ್ನು ಮುಂದಿನ ಲೇಖನವು ಪರಿಗಣಿಸುವುದು.
ನೀವು ಹೇಗೆ ಉತ್ತರ ಕೊಡುವಿರಿ?
• ಮಾನವ ದೇಹ ಮತ್ತು ಕ್ರೈಸ್ತ ಸಭೆಯ ನಡುವೆ ಯಾವ ಹೋಲಿಕೆಯಿದೆ?
• ಜೊತೆ ವಿಶ್ವಾಸಿಗಳಿಗೆ ಸಹಾಯದ ಅಗತ್ಯವಿದ್ದಾಗ ಆದಿ ಕ್ರೈಸ್ತರು ಹೇಗೆ ಪ್ರತಿವರ್ತಿಸಿದರು?
• ಕ್ರೈಸ್ತರಿಗೆ ಪರಸ್ಪರರ ಅಗತ್ಯವಿದೆ ಮತ್ತು ಅವರು ಪರಸ್ಪರ ಸಹಾಯಮಾಡುತ್ತಾರೆ ಎಂಬುದನ್ನು ತೋರಿಸುವ ಕೆಲವೊಂದು ಶಾಸ್ತ್ರೀಯ ಉದಾಹರಣೆಗಳು ಯಾವುವು?
[ಅಧ್ಯಯನ ಪ್ರಶ್ನೆಗಳು]
[ಪುಟ 10ರಲ್ಲಿರುವ ಚಿತ್ರ]
ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಬೇರೆಯವರ ಬಗ್ಗೆ ಕಾಳಜಿ ತೋರಿಸಿದರು
[ಪುಟ 12ರಲ್ಲಿರುವ ಚಿತ್ರಗಳು]
ಆಪತ್ತು ಬಂದೆರಗುವಾಗ ಯೆಹೋವನ ಜನರು ಪರಸ್ಪರರಿಗೂ ಇತರರಿಗೂ ಸಹಾಯಮಾಡುತ್ತಾರೆ