ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ದೇವರ ಮಂದೆಯನ್ನು ಕಾಯಿರಿ”

“ದೇವರ ಮಂದೆಯನ್ನು ಕಾಯಿರಿ”

“ನನ್ನ ಬಳಿಗೆ ಬನ್ನಿರಿ, . . . ನಾನು ನಿಮಗೆ ಚೈತನ್ಯ ನೀಡುವೆನು”

“ದೇವರ ಮಂದೆಯನ್ನು ಕಾಯಿರಿ”

“ನಮಗೆ ಅಗತ್ಯವಿರುವಾಗೆಲ್ಲಾ ಕಿವಿಗೊಡಲು ಮತ್ತು ನಮ್ಮನ್ನು ಉತ್ತೇಜಿಸುವಂಥ ಮಾತುಗಳನ್ನು ಬೈಬಲಿನಿಂದ ಹಂಚಿಕೊಳ್ಳಲು ನೀವು ಸದಾ ಸಿದ್ಧರಿರುತ್ತೀರಿ.”​ಪ್ಯಾಮಲ.

“ನೀವು ನಮಗೋಸ್ಕರ ಮಾಡುವಂಥದ್ದೆಲ್ಲದಕ್ಕಾಗಿ ನಿಮಗೆ ಉಪಕಾರ. ಅದು ನಿಜವಾಗಿಯೂ ನಮ್ಮ ಮೇಲೆ ತುಂಬ ಪರಿಣಾಮ ಬೀರುತ್ತದೆ.”​—ರಾಬರ್ಟ್‌.

ಪ್ಯಾಮಲ ಮತ್ತು ರಾಬರ್ಟ್‌, ತಮ್ಮ ತಮ್ಮ ಸಭೆಗಳಲ್ಲಿರುವ ಕ್ರೈಸ್ತ ಹಿರಿಯರಿಗೆ ಈ ಮಾತುಗಳನ್ನು ಬರೆಯುವಂತೆ ಪ್ರೇರಿಸಲ್ಪಟ್ಟರು. ಲೋಕವ್ಯಾಪಕವಾಗಿರುವ ದೇವರ ಸೇವಕರಲ್ಲಿ ಇತರರು ಸಹ, ‘ದೇವರ ಮಂದೆಯನ್ನು ಕಾಯುವ’ ವ್ಯಕ್ತಿಗಳಿಂದ ಪಡೆಯುವ ನಿರಂತರ ಬೆಂಬಲ ಹಾಗೂ ಆರೈಕೆಗಾಗಿ ಆಭಾರಿಗಳಾಗಿದ್ದಾರೆ. (1 ಪೇತ್ರ 5:2) ಹೌದು, ಹಿರಿಯರು ತಮಗೋಸ್ಕರ ಮಾಡುವಂಥ ಅನೇಕ ಸಂಗತಿಗಳಿಗಾಗಿ ಮತ್ತು ಅವರು ಅದನ್ನು ಮಾಡುವ ರೀತಿಗಾಗಿ ಯೆಹೋವನ ಜನರು ಕೃತಜ್ಞರಾಗಿದ್ದಾರೆ.

“ಮಾಡಲು ಬಹಳಷ್ಟಿದೆ”

ಕ್ರೈಸ್ತ ಹಿರಿಯರಿಗೆ ಹಲವಾರು ಜವಾಬ್ದಾರಿಗಳಿರುತ್ತವೆ. (ಲೂಕ 12:48) ಅವರು ಸಭಾ ಕೂಟಗಳಿಗಾಗಿ ಭಾಷಣಗಳನ್ನು ತಯಾರಿಸುತ್ತಾರೆ ಮತ್ತು ದೇವರ ರಾಜ್ಯದ ಸುವಾರ್ತೆಯನ್ನು ಬಹಿರಂಗವಾಗಿ ಸಾರುವುದರಲ್ಲಿ ಪಾಲ್ಗೊಳ್ಳುತ್ತಾರೆ. ಅವರಿಗಿರುವ ಕರ್ತವ್ಯಗಳಲ್ಲಿ ಜೊತೆ ವಿಶ್ವಾಸಿಗಳಿಗೆ ಕುರಿಪಾಲನಾ ಭೇಟಿಗಳನ್ನು ಮಾಡುವುದೂ ಸೇರಿರುತ್ತದೆ. ವೃದ್ಧ ವ್ಯಕ್ತಿಗಳು ಮತ್ತು ಇತರರಿಗೆ, ಹೀಗೆ ವಿಶೇಷ ಗಮನದ ಅಗತ್ಯವಿರುವವರಿಗೆ ಹಿರಿಯರು ಸಮಯವನ್ನು ಕೊಡುತ್ತಾರೆ. ಇದೆಲ್ಲವನ್ನು ಮಾಡುವಾಗ, ಅವರು ತಮ್ಮ ಸ್ವಂತ ಕುಟುಂಬಗಳ ಆತ್ಮಿಕ ಹಾಗೂ ಭೌತಿಕ ಹಿತವನ್ನೂ ನೋಡಿಕೊಳ್ಳುತ್ತಾರೆ. (ಯೋಬ 29:​12-15; 1 ತಿಮೊಥೆಯ 3:​4, 5; 5:8) ಕೆಲವು ಮಂದಿ ಹಿರಿಯರು ರಾಜ್ಯ ಸಭಾಗೃಹಗಳನ್ನು ಕಟ್ಟಲು ಸಹಾಯಮಾಡುತ್ತಾರೆ. ಇನ್ನಿತರರು ಹಾಸ್ಪಿಟಲ್‌ ಲಿಏಸಾನ್‌ ಕಮಿಟಿಗಳು ಇಲ್ಲವೆ ಪೇಷಂಟ್‌ ವಿಸಿಟೇಷನ್‌ ಗ್ರೂಪ್‌ಗಳ ಸದಸ್ಯರಾಗಿ ಸೇವೆಸಲ್ಲಿಸುತ್ತಾರೆ. ಮತ್ತು ಅನೇಕರು ಸಮ್ಮೇಳನಗಳಲ್ಲೂ ಅಧಿವೇಶನಗಳಲ್ಲೂ ಸ್ವಯಂಸೇವಕರಾಗಿ ಕೆಲಸಮಾಡುತ್ತಾರೆ. ಹೌದು, ಹಿರಿಯರಿಗೆ “ಕರ್ತನ ಕೆಲಸದಲ್ಲಿ ಮಾಡಲು ಬಹಳಷ್ಟಿದೆ.” (1 ಕೊರಿಂಥ 15:​58, NW) ಹೀಗಿರುವುದರಿಂದ ಈ ಪರಿಶ್ರಮಿ ಹಿರಿಯರನ್ನು, ಅವರ ಪರಾಮರಿಕೆಗೆ ವಹಿಸಲ್ಪಟ್ಟಿರುವವರು ಗಾಢವಾಗಿ ಗಣ್ಯಮಾಡುವುದು ಆಶ್ಚರ್ಯದ ಸಂಗತಿಯೇನಲ್ಲ!​—1 ಥೆಸಲೊನೀಕ 5:​12, 13.

ಜೊತೆ ಕ್ರೈಸ್ತರನ್ನು ಆತ್ಮಿಕವಾಗಿ ಬಲಪಡಿಸಲಿಕ್ಕಾಗಿ, ಅವರನ್ನು ಮನೆಯಲ್ಲೊ ಬೇರೊಂದು ಸ್ಥಳದಲ್ಲೊ ಕ್ರಮವಾಗಿ ಭೇಟಿಮಾಡುವ ಹಿರಿಯರು, ಉತ್ತೇಜನದ ಮೂಲವಾಗಿದ್ದಾರೆ. “ಹಿರಿಯರ ಪ್ರೀತಿಪರ ಬೆಂಬಲ ಮತ್ತು ಉತ್ತೇಜನವಿಲ್ಲದಿರುತ್ತಿದ್ದಲ್ಲಿ, ನಾನು ಇಂದು ಒಬ್ಬ ಪೂರ್ಣ ಸಮಯದ ಶುಶ್ರೂಷಕನಾಗಿ ಯೆಹೋವನ ಸೇವೆಮಾಡುತ್ತಿರುತ್ತಿದ್ದೆ ಎಂದು ನಾನೆಣಿಸುವುದಿಲ್ಲ,” ಎಂದು ಥಾಮಸ್‌ ಹೇಳಿದನು. ಅವನು ತಂದೆಯಿಲ್ಲದೆ ಬೆಳೆದ ಹುಡುಗನಾಗಿದ್ದನು. ಒಂಟಿ ಹೆತ್ತವರ ಕುಟುಂಬಗಳಲ್ಲಿ ಬೆಳೆದಿರುವ ಅನೇಕ ಯುವ ಜನರು, ತಾವು ಹಿರಿಯರಿಂದ ಪಡೆದಿರುವ ಗಮನದಿಂದಾಗಿ ದೇವರೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತೆಂಬುದನ್ನು ಅಂಗೀಕರಿಸುತ್ತಾರೆ.

ಸಭೆಯಲ್ಲಿರುವ ವೃದ್ಧ ವ್ಯಕ್ತಿಗಳು ಸಹ ಕುರಿಪಾಲನಾ ಭೇಟಿಗಳನ್ನು ತುಂಬ ಅಮೂಲ್ಯವೆಂದೆಣಿಸುತ್ತಾರೆ. 80ರ ನಡುವಿನ ವರ್ಷಗಳಲ್ಲಿರುವ ಒಂದು ಮಿಷನೆರಿ ದಂಪತಿಯನ್ನು ಇಬ್ಬರು ಹಿರಿಯರು ಭೇಟಿಮಾಡಿದ ನಂತರ, ಅವರು ಬರೆದುದು: “ನಮಗೆ ತುಂಬ ಸಂತೋಷವನ್ನು ತಂದ ನಿಮ್ಮ ಭೇಟಿಗಾಗಿ ನಾವು ನಮ್ಮ ಗಣ್ಯತೆಯನ್ನು ವ್ಯಕ್ತಪಡಿಸಲು ಬಯಸುತ್ತೇವೆ. ನೀವು ಹೊರಟುಹೋದ ನಂತರ, ನೀವು ನಮ್ಮೊಂದಿಗೆ ಚರ್ಚಿಸಿದಂಥ ವಚನಗಳನ್ನು ನಾವು ಪುನಃ ಓದಿದೆವು. ನಿಮ್ಮ ಪ್ರೋತ್ಸಾಹದ ಮಾತುಗಳನ್ನು ನಾವೆಂದಿಗೂ ಮರೆಯುವುದಿಲ್ಲ.” 70 ವರ್ಷ ಪ್ರಾಯದ ಒಬ್ಬ ವಿಧವೆಯು ಹಿರಿಯರಿಗೆ ಬರೆದುದು: “ನಾನು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸುತ್ತಾ ಇದ್ದೆ, ಮತ್ತು ಆತನು ಸಹೋದರರಾದ ನಿಮ್ಮನ್ನು ನನ್ನ ಮನೆಗೆ ಕಳುಹಿಸಿದನು. ನಿಮ್ಮ ಭೇಟಿಯು, ಯೆಹೋವನಿಂದ ಬಂದ ಒಂದು ಆಶೀರ್ವಾದವಾಗಿತ್ತು!” ನಿಮ್ಮ ಸಭೆಯಲ್ಲಿರುವ ಹಿರಿಯರು ನೀಡಿದ ಭೇಟಿಯಿಂದಾಗಿ ನೀವು ಇತ್ತೀಚೆಗೆ ಪ್ರಯೋಜನವನ್ನು ಪಡೆದಿದ್ದೀರೊ? ಅವರು ತಮ್ಮ ಕೈಗೆ ಒಪ್ಪಿಸಲ್ಪಟ್ಟಿರುವ ಮಂದೆಯನ್ನು ಕಾಯಲು ಮಾಡುವ ಪ್ರಯತ್ನಗಳನ್ನು ನಾವೆಲ್ಲರೂ ನಿಶ್ಚಯವಾಗಿಯೂ ಗಣ್ಯಮಾಡುತ್ತೇವೆ!

ದೇವರನ್ನೂ ಕ್ರಿಸ್ತನನ್ನೂ ಅನುಕರಿಸುವ ಕುರುಬರು

ಯೆಹೋವನು ಒಬ್ಬ ಪ್ರೀತಿಪರ ಕುರುಬನಾಗಿದ್ದಾನೆ. (ಕೀರ್ತನೆ 23:​1-4; ಯೆರೆಮೀಯ 31:10; 1 ಪೇತ್ರ 2:25) ಯೇಸು ಕ್ರಿಸ್ತನು ಸಹ ಒಬ್ಬ ಗಮನಾರ್ಹ ಆತ್ಮಿಕ ಕುರುಬನಾಗಿದ್ದಾನೆ. ವಾಸ್ತವದಲ್ಲಿ ಅವನನ್ನು “ಒಳ್ಳೇ ಕುರುಬನು,” ‘ಮಹಾಪಾಲಕನು’ ಮತ್ತು “ಹಿರೀ ಕುರುಬನು” ಎಂದು ಕರೆಯಲಾಗಿದೆ. (ಯೋಹಾನ 10:11; ಇಬ್ರಿಯ 13:20; 1 ಪೇತ್ರ 5:4) ತನ್ನ ಶಿಷ್ಯರಾಗಲು ಬಯಸಿದವರೊಂದಿಗೆ ಯೇಸು ಹೇಗೆ ವ್ಯವಹರಿಸಿದನು? ಅವನು ಅವರಿಗೆ ಈ ಅನುರಾಗಭರಿತ ಆಮಂತ್ರಣವನ್ನು ಕೊಟ್ಟನು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ಚೈತನ್ಯ ನೀಡುವೆನು.”​—ಮತ್ತಾಯ 11:​28, NW.

ತದ್ರೀತಿಯಲ್ಲಿ ಇಂದು ಹಿರಿಯರು, ಮಂದೆಗೆ ಚೈತನ್ಯ ಹಾಗೂ ಸಂರಕ್ಷಣೆಯ ಮೂಲವಾಗಿರಲು ಶ್ರಮಿಸುತ್ತಾರೆ. ಅಂಥ ಪುರುಷರು “ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ” ಇರುತ್ತಾರೆ. (ಯೆಶಾಯ 32:2) ಅಂಥ ದಯಾಪರ ಸಂರಕ್ಷಕರು ಚೈತನ್ಯವನ್ನು ತರುತ್ತಾರೆ, ಮಂದೆಯ ಗೌರವವನ್ನು ಸಂಪಾದಿಸುತ್ತಾರೆ ಮತ್ತು ದೇವರ ಮೆಚ್ಚುಗೆಯನ್ನು ಪಡೆಯುತ್ತಾರೆ.​—ಫಿಲಿಪ್ಪಿ 2:29; 1 ತಿಮೊಥೆಯ 5:17.

ಅವರ ಪತ್ನಿಯರಿಂದ ಅಮೂಲ್ಯವಾದ ಬೆಂಬಲ

ದೇವಜನರು ಕ್ರೈಸ್ತ ಹಿರಿಯರಿಗಾಗಿಯೂ, ಈ ಪುರುಷರು ತಮ್ಮ ಪತ್ನಿಯರಿಂದ ಪಡೆಯುವಂಥ ಪ್ರೀತಿಪರ ಬೆಂಬಲಕ್ಕಾಗಿಯೂ ಆಭಾರಿಗಳಾಗಿದ್ದಾರೆ. ಬೆಂಬಲ ನೀಡುವವರಾಗಿರಲಿಕ್ಕಾಗಿ, ಈ ಸ್ತ್ರೀಯರು ಅನೇಕವೇಳೆ ಎಷ್ಟೋ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಕೆಲವೊಮ್ಮೆ ಅವರು ಮನೆಯಲ್ಲಿರುತ್ತಾರೆ ಆದರೆ ಅವರ ಗಂಡಂದಿರು ಸಭಾ ವಿಷಯಗಳನ್ನು ನಿರ್ವಹಿಸುವುದರಲ್ಲಿ ಇಲ್ಲವೆ ಕುರಿಪಾಲನಾ ಭೇಟಿಗಳನ್ನು ಮಾಡುವುದರಲ್ಲಿ ಮಗ್ನರಾಗಿರುತ್ತಾರೆ. ಇಬ್ಬರೂ ಸೇರಿ ಎಷ್ಟೋ ಜಾಗರೂಕತೆಯಿಂದ ಮಾಡಿದ ವೈಯಕ್ತಿಕ ಯೋಜನೆಗಳನ್ನು ಕೆಲವೊಮ್ಮೆ, ಸಭೆಯಲ್ಲಿ ಏಳುವ ಯಾವುದೊ ತುರ್ತು ಸಮಸ್ಯೆಯಿಂದಾಗಿ ರದ್ದುಗೊಳಿಸಬೇಕಾಗುತ್ತದೆ. “ಹಾಗಿದ್ದರೂ, ನನ್ನ ಪತಿ ಕೂಟಗಳಿಗಾಗಿ ತಯಾರಿಸುತ್ತಿರುವುದನ್ನು ಇಲ್ಲವೆ ಕುರಿಪಾಲನಾ ಭೇಟಿಗಳನ್ನು ಮಾಡುವುದರಲ್ಲಿ ಇಷ್ಟೊಂದು ಕಾರ್ಯಮಗ್ನರಾಗಿರುವುದನ್ನು ನೋಡುವಾಗ, ಅವರು ಯೆಹೋವನ ಕೆಲಸವನ್ನು ಮಾಡುತ್ತಿದ್ದಾರೆಂಬುದನ್ನು ನಾನು ಮನಸ್ಸಿನಲ್ಲಿ ಇಡುತ್ತೇನೆ, ಮತ್ತು ನನ್ನಿಂದ ಸಾಧ್ಯವಿರುವಷ್ಟು ಬೆಂಬಲವನ್ನು ಕೊಡುತ್ತೇನೆ” ಎಂದು ಮಿಶೆಲ್‌ ಹೇಳುತ್ತಾಳೆ.

ಒಬ್ಬ ಹಿರಿಯನ ಪತ್ನಿಯಾಗಿರುವ ಶೆರಲ್‌ ತಿಳಿಸಿದ್ದು: “ಸಭೆಯಲ್ಲಿರುವ ಸಹೋದರ ಸಹೋದರಿಯರಿಗೆ ಹಿರಿಯರೊಂದಿಗೆ ಮಾತಾಡುವ ಅಗತ್ಯವಿದೆಯೆಂದು ನನಗೆ ತಿಳಿದಿದೆ, ಮತ್ತು ಅವರಿಗೆ ನನ್ನ ಗಂಡನ ಅಗತ್ಯಬೀಳುವ ಯಾವುದೇ ಹೊತ್ತಿನಲ್ಲಿ ಅವರ ಬಳಿ ಬರಬಹುದೆಂಬ ಭಾವನೆ ಇರಬೇಕೆಂದು ನಾನು ಬಯಸುತ್ತೇನೆ.” ಮಿಶೆಲ್‌ ಮತ್ತು ಶೆರಲ್‌ರಂಥ ಬೆಂಬಲಕೊಡುವ ಸ್ತ್ರೀಯರು, ತಮ್ಮ ಗಂಡಂದಿರು ದೇವರ ಕುರಿಗಳ ಆರೈಕೆಮಾಡಸಾಧ್ಯವಾಗುವಂತೆ ಸಿದ್ಧಮನಸ್ಸಿನಿಂದ ತ್ಯಾಗಗಳನ್ನು ಮಾಡುತ್ತಾರೆ. ಹಿರಿಯರ ಪತ್ನಿಯರು ತೋರಿಸುವ ಬೆಂಬಲಾತ್ಮಕ ಮನೋವೃತ್ತಿಗಾಗಿ ಅವರನ್ನು ಗಣ್ಯಮಾಡಲಾಗುತ್ತದೆ.

ಆದರೆ ಒಬ್ಬ ಕಾರ್ಯಮಗ್ನ ಹಿರಿಯನು ತನ್ನ ಹೆಂಡತಿ ಮಕ್ಕಳ ಆತ್ಮಿಕ ಹಾಗೂ ಇತರ ಅಗತ್ಯಗಳನ್ನು ಅಲಕ್ಷಿಸಬಾರದು. ಒಬ್ಬ ವಿವಾಹಿತ ಹಿರಿಯನು, “ನಿಂದಾರಹಿತನೂ ಏಕಪತ್ನಿಯುಳ್ಳವನೂ ಆಗಿರಬೇಕು. ಅವನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು; ಅವರು ದುರ್ಮಾರ್ಗಸ್ಥರೆನಿಸಿಕೊಂಡವರಾಗಲಿ ಅಧಿಕಾರಕ್ಕೆ ಒಳಗಾಗದವರಾಗಲಿ ಆಗಿರಬಾರದು.” (ತೀತ 1:6) ಕ್ರೈಸ್ತ ಮೇಲ್ವಿಚಾರಕರಿಂದ ಶಾಸ್ತ್ರೀಯವಾಗಿ ಕೇಳಿಕೊಳ್ಳಲ್ಪಟ್ಟಿರುವ ದೈವಿಕ ರೀತಿಯಲ್ಲಿ ಅವನು ತನ್ನ ಕುಟುಂಬವನ್ನು ಪರಾಮರಿಸಬೇಕು.​—1 ತಿಮೊಥೆಯ 3:​1-7.

ಒಬ್ಬ ಕಾರ್ಯಮಗ್ನ ಹಿರಿಯನಿಗೆ ಬೆಂಬಲ ನೀಡುವ ಒಬ್ಬ ಹೆಂಡತಿಯು ಬೆಲೆಕಟ್ಟಲಾಗದಷ್ಟು ಅಮೂಲ್ಯಳಾಗಿದ್ದಾಳೆ! ವಿಚಾರಪೂರ್ಣ ವಿವಾಹಿತ ಹಿರಿಯರಿಗೆ ಹಾಗನಿಸುತ್ತದೆ. ಅದು ಬೈಬಲ್‌ ಹೇಳುವಂತೆಯೇ ಇದೆ: “ಪತ್ನೀಲಾಭವು ರತ್ನಲಾಭ.” (ಜ್ಞಾನೋಕ್ತಿ 18:22) ಮಾತು ಹಾಗೂ ಕೃತಿಯಲ್ಲಿ ಇಂಥ ಹಿರಿಯರು ತಮ್ಮ ಪತ್ನಿಯರಿಗೆ ಹೃತ್ಪೂರ್ವಕ ಗಣ್ಯತೆಯನ್ನು ತೋರಿಸುತ್ತಾರೆ. ಜೊತೆಯಾಗಿ ಮನಃಪೂರ್ವಕ ಪ್ರಾರ್ಥನೆ ಹಾಗೂ ಆನಂದಕರವಾದ ಅಧ್ಯಯನವನ್ನು ಮಾಡುವುದರೊಂದಿಗೆ, ಈ ಕ್ರೈಸ್ತ ವಿವಾಹಿತ ದಂಪತಿಗಳು ಸಮುದ್ರ ತೀರದಲ್ಲಿ ನಡೆದಾಟ, ಅರಣ್ಯದಲ್ಲಿ ದೂರದ ನಡಗೆ, ಇಲ್ಲವೆ ಒಂದು ಉದ್ಯಾನವನದಲ್ಲಿ ಅಡ್ಡಾಡುವುದರಂಥ ಸಂಗತಿಗಳ ಆನಂದವನ್ನು ಆಸ್ವಾದಿಸಲು ಸಮಯವನ್ನು ಬದಿಗಿರಿಸುತ್ತಾರೆ. ಹೌದು, ಹಿರಿಯರು ತಮ್ಮ ಹೆಂಡತಿಯರಿಗೆ ಪ್ರೀತಿಭರಿತ ಆರೈಕೆಯನ್ನು ಕೊಡುವುದರಲ್ಲಿ ಆನಂದವನ್ನು ಪಡೆಯುತ್ತಾರೆ.​—1 ಪೇತ್ರ 3:7.

ದೇವರ ಮಂದೆಯನ್ನು ನಿಸ್ವಾರ್ಥಭಾವದಿಂದ ಕಾಯುವ ಹಿರಿಯರು ಯೆಹೋವನ ಜನರಿಗೆ ಆತ್ಮಿಕ ಚೈತನ್ಯದ ಮೂಲವಾಗಿದ್ದಾರೆ. ಅವರು ನಿಜವಾಗಿಯೂ “ಪುರುಷರಲ್ಲಿನ ವರದಾನಗಳು,” ಸಭೆಗೆ ಒಂದು ಆಶೀರ್ವಾದವಾಗಿದ್ದಾರೆ!​—ಎಫೆಸ 4:​8, 11-13, NW.