ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಮುಂದೆ ನಮ್ಮ ದಿನಗಳು ಎಣಿಕೆಗೆ ಯೋಗ್ಯವಾಗಿರುವಂತೆ ನಾವು ಹೇಗೆ ಮಾಡಬಲ್ಲೆವು?

ಯೆಹೋವನ ಮುಂದೆ ನಮ್ಮ ದಿನಗಳು ಎಣಿಕೆಗೆ ಯೋಗ್ಯವಾಗಿರುವಂತೆ ನಾವು ಹೇಗೆ ಮಾಡಬಲ್ಲೆವು?

ಯೆಹೋವನ ಮುಂದೆ ನಮ್ಮ ದಿನಗಳು ಎಣಿಕೆಗೆ ಯೋಗ್ಯವಾಗಿರುವಂತೆ ನಾವು ಹೇಗೆ ಮಾಡಬಲ್ಲೆವು?

“ಕಳೆದುಹೋಗಿವೆ: ನಿನ್ನೆ ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತಮಾನದ ನಡುವೆ ಎರಡು ಹೊನ್ನಿನ ತಾಸುಗಳು. ಪ್ರತಿಯೊಂದರಲ್ಲೂ ಅರುವತ್ತು ವಜ್ರದಂಥ ನಿಮಿಷಗಳು ಜೋಡಿಸಲ್ಪಟ್ಟಿದ್ದವು. ಯಾವುದೇ ಬಹುಮಾನವು ನೀಡಲ್ಪಡುವುದಿಲ್ಲ, ಯಾಕೆಂದರೆ ಅವುಗಳನ್ನು ಎಂದೂ ಮರಳಿಪಡೆಯಲಾಗದು.”​—ಲಿಡ್ಯ ಏಚ್‌. ಸಿಗೂರ್ನಿ, ಅಮೆರಿಕನ್‌ ಲೇಖಕಿ (1791-1865).

ನಮ್ಮ ಜೀವಮಾನದ ದಿನಗಳು ಕೊಂಚವೂ ಬೇಗನೆ ಹಾರಿಹೋಗುವಂಥವುಗಳೂ ಆಗಿ ತೋರುತ್ತವೆ. ಜೀವನವು ಎಷ್ಟು ಅಲ್ಪಾವಧಿಯದ್ದಾಗಿದೆ ಎಂಬುದರ ಬಗ್ಗೆ ಕೀರ್ತನೆಗಾರನಾದ ದಾವೀದನು ಚಿಂತಿಸುತ್ತಾ, ಹೀಗೆ ಪ್ರಾರ್ಥಿಸುವಂತೆ ಪ್ರೇರಿಸಲ್ಪಟ್ಟನು: “ಯೆಹೋವನೇ, ನನಗೆ ಅವಸಾನವುಂಟೆಂದೂ ನನ್ನ ಜೀವಮಾನವು ಅತ್ಯಲ್ಪವೆಂದೂ ನಾನು ಎಷ್ಟೋ ಅಸ್ಥಿರನೆಂದೂ ನನಗೆ ತಿಳಿಯಪಡಿಸು. ನನ್ನ ಆಯುಸ್ಸನ್ನು ಗೇಣುದ್ದವಾಗಿ ಮಾಡಿದ್ದೀಯಲ್ಲಾ; ನನ್ನ ಜೀವಿತಕಾಲ ನಿನ್ನ ಎಣಿಕೆಯಲ್ಲಿ ಏನೂ ಅಲ್ಲ.” ದಾವೀದನ ಮುಖ್ಯ ಚಿಂತೆಯು, ತನ್ನ ನಡೆನುಡಿಯ ಮೂಲಕ ದೇವರನ್ನು ಸಂತೋಷಪಡಿಸುವ ರೀತಿಯಲ್ಲಿ ಜೀವಿಸುವುದೇ ಆಗಿತ್ತು. ದೇವರ ಮೇಲಣ ತನ್ನ ಆತುಕೊಳ್ಳುವಿಕೆಯ ಬಗ್ಗೆ ತಿಳಿಸುತ್ತಾ ಅವನಂದದ್ದು: “ನೀನೇ ನನ್ನ ನಿರೀಕ್ಷೆ.” (ಕೀರ್ತನೆ 39:4, 5, 7) ಯೆಹೋವನು ದಾವೀದನ ಮಾತುಗಳಿಗೆ ಕಿವಿಗೊಟ್ಟನು. ಮತ್ತು ಆತನು ನಿಜವಾಗಿಯೂ ದಾವೀದನ ಚಟುವಟಿಕೆಗಳನ್ನು ಅಳೆದು, ಅದಕ್ಕನುಸಾರ ಅವನಿಗೆ ಪ್ರತಿಫಲವನ್ನು ಕೊಟ್ಟನು.

ದಿನದ ಪ್ರತಿಯೊಂದು ಕ್ಷಣವೂ ಕಾರ್ಯಮಗ್ನರಾಗಿದ್ದು, ವೇಗವಾಗಿ ಮುಂದೋಡುವ ಮತ್ತು ತುಂಬ ಚಟುವಟಿಕೆಯಿಂದ ಕೂಡಿರುವ ಜೀವನದಲ್ಲಿ ಮುಂದೆ ಸಾಗುವುದು ತೀರ ಸುಲಭ. ಇದು ನಮ್ಮಲ್ಲಿ ಕೌತುಕಭರಿತ ಚಿಂತೆಯನ್ನೂ ಉಂಟುಮಾಡಬಹುದು, ಏಕೆಂದರೆ ಮಾಡಲು ಮತ್ತು ಅನುಭವಿಸಲು ಬಹಳಷ್ಟು ಇದೆ, ಆದರೆ ಇರುವ ಸಮಯ ತೀರ ಕಡಿಮೆ. ನಮ್ಮ ಚಿಂತೆಯೂ, ದಾವೀದನಿಗಿದ್ದ ಚಿಂತೆಯೇ ಆಗಿದೆಯೊ? ಅಂದರೆ ದೇವರ ಮೆಚ್ಚಿಕೆಯನ್ನು ಪಡೆಯುವಂಥ ರೀತಿಯ ಜೀವನವನ್ನು ನಡೆಸುವುದು ನಮ್ಮ ಚಿಂತೆಯಾಗಿದೆಯೊ? ಖಂಡಿತವಾಗಿಯೂ ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬನನ್ನೂ ಗಮನಿಸುತ್ತಾನೆ ಮತ್ತು ಜಾಗರೂಕತೆಯಿಂದ ಪರೀಕ್ಷಿಸುತ್ತಾನೆ. ದೇವಭಯವಿದ್ದ ಯೋಬನೆಂಬ ಪುರುಷನು ಸುಮಾರು 3,600 ವರ್ಷಗಳ ಹಿಂದೆ ಅಂಗೀಕರಿಸಿದ್ದೇನೆಂದರೆ, ಯೆಹೋವನು ತನ್ನ ಎಲ್ಲ ಮಾರ್ಗಗಳನ್ನು ನೋಡುತ್ತಿದ್ದಾನೆ ಮತ್ತು ತನ್ನ ಹೆಜ್ಜೆಗಳನ್ನು ಎಣಿಸುತ್ತಿದ್ದಾನೆಂದೇ. ಯೋಬನು ಆಲಂಕಾರಿಕವಾಗಿ ಕೇಳಿದ್ದು: “ಆತನು ವಿಚಾರಿಸುವಾಗ ಯಾವ ಉತ್ತರ ಕೊಟ್ಟೇನು?” (ಯೋಬ 31:​4-6, 14) ಆತ್ಮಿಕ ಆದ್ಯತೆಗಳನ್ನಿಡುವ ಮೂಲಕ, ದೇವರಾಜ್ಞೆಗಳಿಗೆ ವಿಧೇಯರಾಗುವ ಮೂಲಕ ಮತ್ತು ನಮ್ಮ ಸಮಯವನ್ನು ವಿವೇಕಯುತವಾಗಿ ವಿನಿಯೋಗಿಸುವ ಮೂಲಕ ನಮ್ಮ ದಿನಗಳು ದೇವರ ಮುಂದೆ ಎಣಿಕೆಗೆ ಯೋಗ್ಯವಾಗಿರುವಂತೆ ನಾವು ಮಾಡಬಲ್ಲೆವು. ಈ ವಿಷಯಗಳನ್ನು ನಾವು ಹೆಚ್ಚು ಸೂಕ್ಷ್ಮವಾಗಿ ಚರ್ಚಿಸೋಣ.

ಆತ್ಮಿಕ ವಿಷಯಗಳಿಗೆ ನಾವು ಪ್ರಮುಖ ಮಹತ್ವವನ್ನು ಕೊಡೋಣ

“ಹೆಚ್ಚು ಪ್ರಾಮುಖ್ಯವಾದ ವಿಷಯಗಳೇನು ಎಂಬುದನ್ನು ಖಚಿತಪಡಿಸಿಕೊಳ್ಳಿರಿ” ಎಂದು ಪ್ರೇರಿತ ಶಾಸ್ತ್ರವಚನಗಳು ಅನ್ನುವಾಗ, ನಾವು ಆತ್ಮಿಕ ಆದ್ಯತೆಗಳನ್ನು ಇಟ್ಟುಕೊಳ್ಳುವಂತೆ ಅವು ಯೋಗ್ಯವಾಗಿಯೇ ಪ್ರೇರಿಸುತ್ತವೆ. ಈ ಪ್ರಾಮುಖ್ಯ ವಿಷಯಗಳೇನು? ಇದರಲ್ಲಿ, “ನಿಷ್ಕೃಷ್ಟ ಜ್ಞಾನ ಮತ್ತು ಪೂರ್ಣ ವಿವೇಚನಾಶಕ್ತಿ” ಸೇರಿದೆ. (ಫಿಲಿಪ್ಪಿ 1:​9, 10, NW) ಯೆಹೋವನ ಉದ್ದೇಶದ ಬಗ್ಗೆ ಜ್ಞಾನವನ್ನು ಪಡೆಯಲಿಕ್ಕಾಗಿ, ನಮ್ಮ ಸಮಯವನ್ನು ವಿವೇಕಯುತವಾಗಿ ಬಳಸುವುದು ಆವಶ್ಯಕ. ಆದರೆ ಈ ರೀತಿಯಲ್ಲಿ ಆತ್ಮಿಕ ವಿಷಯಗಳಿಗೆ ಪ್ರಮುಖ ಮಹತ್ವವನ್ನು ಕೊಡುವುದು, ಪ್ರತಿಫಲದಾಯಕವೂ ತೃಪ್ತಿದಾಯಕವೂ ಆದ ಒಂದು ಜೀವನದ ಆಶ್ವಾಸನೆಯನ್ನು ನಮಗೆ ಕೊಡುತ್ತದೆ.

“ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬದನ್ನು ಪರಿಶೋಧಿಸಿ ತಿಳುಕೊಳ್ಳಿರಿ” ಎಂದು ಅಪೊಸ್ತಲ ಪೌಲನು ನಮಗೆ ಜ್ಞಾಪಕಹುಟ್ಟಿಸುತ್ತಾನೆ. ಪರಿಶೋಧಿಸಿ ತಿಳುಕೊಳ್ಳುವುದರಲ್ಲಿ, ನಮ್ಮ ಹೃದಯದ ಇಂಗಿತಗಳನ್ನೂ ಅಭಿಲಾಷೆಗಳನ್ನೂ ಸ್ವಪರೀಕ್ಷೆಗೆ ಒಳಗಾಗಿಸುವುದು ಸೇರಿರಬೇಕು. ಆ ಅಪೊಸ್ತಲನು ಮುಂದುವರಿಸಿ ಹೇಳಿದ್ದು: “ಕರ್ತನ [“ಯೆಹೋವನ,” NW] ಚಿತ್ತವೇನೆಂಬದನ್ನು ವಿಚಾರಿಸಿ ತಿಳಿದವರಾಗಿರ್ರಿ.” (ಎಫೆಸ 5:​10, 17) ಹಾಗಾದರೆ, ಯೆಹೋವನಿಗೆ ಯಾವುದು ಅಂಗೀಕಾರಾರ್ಹವಾಗಿದೆ? ಒಂದು ಬೈಬಲ್‌ ಜ್ಞಾನೋಕ್ತಿಯು ಉತ್ತರಿಸುವುದು: “ಜ್ಞಾನ [“ವಿವೇಕ,” NW]ವನ್ನು ಪಡೆಯಬೇಕೆಂಬದೇ ಜ್ಞಾನಬೋಧೆಯ ಪ್ರಥಮಪಾಠ; ನಿನ್ನ ಎಲ್ಲಾ ಸಂಪತ್ತಿನಿಂದಲೂ ವಿವೇಕವನ್ನು [“ತಿಳಿವಳಿಕೆಯನ್ನು,” NW] ಪಡೆ. ಜ್ಞಾನವೆಂಬಾಕೆಯು [“ವಿವೇಕವು,” NW] ಶ್ರೇಷ್ಠಳು ಎಂದು ನೀನು ಭಾವಿಸಿದರೆ ಆಕೆಯು ನಿನ್ನನ್ನು ಉನ್ನತಿಗೆ ತರುವಳು.” (ಜ್ಞಾನೋಕ್ತಿ 4:7, 8) ದೈವಿಕ ವಿವೇಕವನ್ನು ಪಡೆದುಕೊಂಡು ಅದನ್ನು ಪ್ರಯೋಗಿಸುವ ವ್ಯಕ್ತಿಯ ವಿಷಯದಲ್ಲಿ ಯೆಹೋವನು ಹರ್ಷಿಸುತ್ತಾನೆ. (ಜ್ಞಾನೋಕ್ತಿ 23:15) ಅಂಥ ವಿವೇಕದ ವಿಶೇಷತೆಯೇನೆಂದರೆ, ಅದನ್ನು ಯಾರೂ ಕಸಿದುಕೊಳ್ಳಲಾರರು ಅಥವಾ ಅದನ್ನು ನಾಶಗೊಳಿಸಲಾಗದು. ವಾಸ್ತವದಲ್ಲಿ ಅದು, ‘ದುರ್ಮಾರ್ಗದಿಂದಲೂ ಕೆಟ್ಟ ಮಾತನಾಡುವವರಿಂದಲೂ’ ಒಂದು ತಡೆ ಮತ್ತು ಸಂರಕ್ಷಣೆ ಆಗಿರುವುದು.​—ಜ್ಞಾನೋಕ್ತಿ 2:​10-15.

ಹೀಗಿರುವುದರಿಂದ, ಆತ್ಮಿಕ ವಿಷಯಗಳ ಕಡೆಗೆ ತಾತ್ಸಾರ ಮನೋಭಾವವನ್ನು ತಾಳುವುದರ ವಿರುದ್ಧ ಯಾವುದೇ ಪ್ರವೃತ್ತಿಯನ್ನು ಪ್ರತಿರೋಧಿಸುವುದು ಎಷ್ಟು ವಿವೇಕಪೂರ್ಣ ಸಂಗತಿ! ಯೆಹೋವನ ನುಡಿಗಳಿಗಾಗಿ ಗಣ್ಯಭಾವವನ್ನೂ, ಆತನ ಕುರಿತು ಸ್ವಸ್ಥಭರಿತ ಭಯವನ್ನೂ ನಾವು ಬೆಳೆಸಿಕೊಳ್ಳಬೇಕು. (ಜ್ಞಾನೋಕ್ತಿ 23:​17, 18) ಅಂಥ ಮನೋವೃತ್ತಿಯನ್ನು ಜೀವನದ ಯಾವುದೇ ಹಂತದಲ್ಲಿ ಪಡೆದುಕೊಳ್ಳಬಹುದಾದರೂ, ಈ ಸರಿಯಾದ ನಮೂನೆಯನ್ನು ಸ್ಥಾಪಿಸುವ ಮತ್ತು ಬೈಬಲಿನ ಮೂಲತತ್ತ್ವಗಳನ್ನು ನಮ್ಮ ವ್ಯಕ್ತಿತ್ವದಲ್ಲಿ ಅಚ್ಚೊತ್ತುವ ಅತ್ಯುತ್ತಮ ಸಮಯ ಯೌವನವಾಗಿದೆ. ಜ್ಞಾನಿಯಾದ ರಾಜ ಸೊಲೊಮೋನನು ಹೇಳುವುದು: “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.”​—ಪ್ರಸಂಗಿ 12:1.

ಯೆಹೋವನಿಗಾಗಿ ಗಣ್ಯತೆಯನ್ನು ಬೆಳೆಸಿಕೊಳ್ಳುವ ಅತ್ಯಾಪ್ತ ವಿಧವು, ಪ್ರತಿನಿತ್ಯವೂ ಆತನಿಗೆ ವೈಯಕ್ತಿಕ ಪ್ರಾರ್ಥನೆಯನ್ನು ಮಾಡುವ ಮೂಲಕವೇ ಆಗಿದೆ. ಯೆಹೋವನ ಬಳಿ ಮನಬಿಚ್ಚಿ ಮಾತಾಡುವುದರ ಮಹತ್ವವನ್ನು ದಾವೀದನು ಗ್ರಹಿಸಿದನು. ಆದುದರಿಂದ ಅವನು ಹೀಗೆ ಯಾಚಿಸಿದನು: “ಯೆಹೋವನೇ, ನನ್ನ ಪ್ರಾರ್ಥನೆಯನ್ನು ಲಾಲಿಸು; ನನ್ನ ಮೊರೆಗೆ ಕಿವಿಗೊಡು. ನನ್ನ ಕಣ್ಣೀರನ್ನು ನೋಡು, ಸುಮ್ಮನಿರಬೇಡ.” (ಕೀರ್ತನೆ 39:12) ದೇವರೊಂದಿಗಿರುವ ನಮ್ಮ ಆಪ್ತತೆಯು ಎಷ್ಟಿದೆಯೆಂದರೆ, ನಾವು ಭಾವೋದ್ರೇಕಗೊಂಡು ಕೆಲವೊಮ್ಮೆ ಅತ್ತುಬಿಡುತ್ತೇವೊ? ಹೌದು, ನಮ್ಮ ಮನದಾಳದಲ್ಲಿರುವ ಗುಟ್ಟಿನ ವಿಚಾರಗಳನ್ನು ನಾವು ಯೆಹೋವನಿಗೆ ಹೇಳಿ, ಆತನ ವಾಕ್ಯದ ಮೇಲೆ ಎಷ್ಟು ಹೆಚ್ಚು ಮನನಮಾಡುತ್ತೇವೊ, ಆತನು ನಮಗೆ ಅಷ್ಟೇ ಹತ್ತಿರ ಬರುವನು.​—ಯಾಕೋಬ 4:8.

ವಿಧೇಯತೆಯನ್ನು ಕಲಿಯಿರಿ

ದೇವರ ಮೇಲಣ ತನ್ನ ಅವಲಂಬನೆಯನ್ನು ಅಂಗೀಕರಿಸಿದ ನಂಬಿಕೆಯ ಇನ್ನೊಬ್ಬ ಪುರುಷನು ಮೋಶೆಯಾಗಿದ್ದನು. ದಾವೀದನಂತೆಯೇ, ಮೋಶೆಯು ಸಹ ಜೀವಿತವು ಕಷ್ಟತೊಂದರೆಗಳಿಂದ ತುಂಬಿರುವುದನ್ನು ನೋಡಸಾಧ್ಯವಿತ್ತು. ಈ ಕಾರಣದಿಂದ ‘ವಿವೇಕದ ಹೃದಯವನ್ನು ಪಡೆದುಕೊಳ್ಳಲಾಗುವಂಥ ರೀತಿಯಲ್ಲಿ ಅವನ ದಿನಗಳನ್ನು ಸರಿಯಾಗಿ ಎಣಿಸುವ ವಿಧವನ್ನು ತೋರಿಸು’ವಂತೆ ಅವನು ದೇವರ ಬಳಿ ಬೇಡಿಕೊಂಡನು. (ಕೀರ್ತನೆ 90:​10-12, NW) ಯೆಹೋವನ ನಿಯಮಗಳನ್ನೂ ಮೂಲತತ್ತ್ವಗಳನ್ನೂ ಕಲಿತುಕೊಂಡು ಅವುಗಳಿಗನುಸಾರ ನಡೆದರೆ ಮಾತ್ರ ವಿವೇಕದ ಹೃದಯವನ್ನು ಪಡೆಯಸಾಧ್ಯವಿತ್ತು. ಮೋಶೆಗೆ ಇದು ತಿಳಿದಿತ್ತು, ಮತ್ತು ಈ ಕಾರಣದಿಂದ ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಮುಂಚೆ ದೇವರ ನಿಯಮಗಳನ್ನೂ ಕಟ್ಟಳೆಗಳನ್ನೂ ಪುನಃ ಪುನಃ ಉಚ್ಚರಿಸುವ ಮೂಲಕ ಆ ಪ್ರಮುಖ ಸತ್ಯವನ್ನು ಆ ಜನಾಂಗದ ಮೇಲೆ ಅಚ್ಚೊತ್ತಿಸಲು ಅವನು ಪ್ರಯತ್ನಿಸಿದನು. ಮುಂದೆಂದಾದರೂ ಯೆಹೋವನು ಇಸ್ರಾಯೇಲಿನ ಮೇಲೆ ಆಳುವಂತೆ ಒಬ್ಬ ಮಾನವ ಅರಸನನ್ನು ಆಯ್ಕೆಮಾಡುವಾಗ, ಅವನು ಧರ್ಮಶಾಸ್ತ್ರದ ಒಂದು ಪ್ರತಿಯನ್ನು ಬರೆದುಕೊಂಡು ತನ್ನ ಜೀವಮಾನವೆಲ್ಲ ಅದನ್ನು ಓದಬೇಕಾಗಿತ್ತು. ಏಕೆ? ದೇವರಿಗೆ ಭಯಪಡುವುದನ್ನು ಕಲಿಯಲಿಕ್ಕೋಸ್ಕರವೇ. ಇದು ರಾಜನ ವಿಧೇಯತೆಯನ್ನು ಪರೀಕ್ಷಿಸಲಿತ್ತು. ಆದರೆ ಅದು ಅವನು ಮದದಿಂದ ತನ್ನನ್ನು ಸ್ವದೇಶದವರಿಗಿಂತ ಹೆಚ್ಚಿಸಿಕೊಳ್ಳುವುದರಿಂದ ತಡೆಯುತ್ತಿತ್ತು ಮತ್ತು ಅವನು ಬಹುಕಾಲ ರಾಜ್ಯಾಧಿಕಾರವನ್ನು ನಡಿಸುತ್ತಾ ಬಾಳಲಿದ್ದನು. (ಧರ್ಮೋಪದೇಶಕಾಂಡ 17:​18-20) ಈ ವಾಗ್ದಾನವೇ, ಯೆಹೋವನು ದಾವೀದನ ಮಗನಾದ ಸೊಲೊಮೋನನಿಗೆ ಹೀಗಂದಾಗ ಪುನರುಚ್ಚರಿಸಲ್ಪಟ್ಟಿತ್ತು: “ನೀನು ನಿನ್ನ ತಂದೆಯಾದ ದಾವೀದನಂತೆ ನನ್ನ ಮಾರ್ಗದಲ್ಲಿ ನಡೆದು ನನ್ನ ಆಜ್ಞಾವಿಧಿಗಳನ್ನು ಕೈಕೊಳ್ಳುವದಾದರೆ ನಿನ್ನ ಆಯುಷ್ಯವನ್ನು ಹೆಚ್ಚಿಸುವೆನು.”​—1 ಅರಸುಗಳು 3:10-14.

ದೇವರ ದೃಷ್ಟಿಯಲ್ಲಿ ವಿಧೇಯತೆಯು ಒಂದು ಗಂಭೀರ ವಿಷಯವಾಗಿದೆ. ಯೆಹೋವನ ಆವಶ್ಯಕತೆಗಳು ಮತ್ತು ಆಜ್ಞೆಗಳಲ್ಲಿನ ಕೆಲವೊಂದು ಅಂಶಗಳನ್ನು ನಾವು ಕ್ಷುಲ್ಲಕವೆಂದೆಣಿಸಿದರೆ, ಆತನು ಖಂಡಿತವಾಗಿಯೂ ಅಂಥ ಮನೋಭಾವವನ್ನು ಗಮನಿಸುವನು. (ಜ್ಞಾನೋಕ್ತಿ 15:3) ಇದರ ಅರಿವುಳ್ಳವರಾಗಿ, ಹೀಗೆ ಮಾಡುವುದು ಯಾವಾಗಲೂ ಸುಲಭವಾಗಿರದಿದ್ದರೂ ನಾವು ಯೆಹೋವನ ಎಲ್ಲಾ ದೈವಿಕ ನಿರ್ದೇಶನಗಳಿಗಾಗಿ ಉಚ್ಚ ಮಾನ್ಯತೆಯನ್ನು ಕಾಪಾಡಿಕೊಳ್ಳುವಂತೆ ಅದು ನಮ್ಮನ್ನು ಪ್ರಚೋದಿಸತಕ್ಕದ್ದು. ನಾವು ದೇವರ ನಿಯಮಗಳನ್ನೂ ಆಜ್ಞೆಗಳನ್ನೂ ಪಾಲಿಸಲು ಪ್ರಯತ್ನಿಸುತ್ತಿರುವಾಗ ಸೈತಾನನು ‘ನಮಗೆ ಅಭ್ಯಂತರಮಾಡಲು’ ತನ್ನಿಂದ ಸಾಧ್ಯವಿರುವುದೆಲ್ಲವನ್ನೂ ಮಾಡುತ್ತಾನೆ.​—1 ಥೆಸಲೊನೀಕ 2:18.

ಆರಾಧನೆ ಮತ್ತು ಸಾಹಚರ್ಯಕ್ಕಾಗಿ ಕೊಡಲ್ಪಟ್ಟಿರುವ ಶಾಸ್ತ್ರೀಯ ಸಲಹೆಯನ್ನು ಪಾಲಿಸುವುದೂ ವಿಶೇಷವಾಗಿ ಪ್ರಾಮುಖ್ಯವಾಗಿದೆ. (ಧರ್ಮೋಪದೇಶಕಾಂಡ 31:​12, 13; ಇಬ್ರಿಯ 10:​24, 25) ಆದುದರಿಂದ ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು: ‘ನಿಜವಾಗಿಯೂ ಸಾರ್ಥಕವಾಗಿರುವಂಥದ್ದನ್ನು ಮಾಡಲು ಬೇಕಾಗಿರುವ ದೃಢನಿರ್ಧಾರ ಮತ್ತು ಪಟ್ಟುಹಿಡಿಯುವಿಕೆ ನನಗಿದೆಯೊ?’ ಹಣಕಾಸಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿ, ಕ್ರೈಸ್ತ ಕೂಟಗಳಲ್ಲಿನ ಸಹವಾಸ ಮತ್ತು ಉಪದೇಶವನ್ನು ನಿರ್ಲಕ್ಷಿಸುವುದು, ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ದುರ್ಬಲಗೊಳಿಸುವುದು. ಅಪೊಸ್ತಲ ಪೌಲನು ಬರೆದುದು: “ದ್ರವ್ಯಾಶೆ [“ಹಣದಾಶೆ,” NW]ಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ; ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ.” (ಇಬ್ರಿಯ 13:5) ಯೆಹೋವನ ಆಜ್ಞೆಗಳಿಗೆ ಸಿದ್ಧಮನಸ್ಸಿನಿಂದ ವಿಧೇಯರಾಗುವುದು, ಆತನು ನಮ್ಮನ್ನು ಪರಾಮರಿಸುವನೆಂಬ ಪೂರ್ಣ ಭರವಸೆ ನಮಗಿದೆಯೆಂಬುದನ್ನು ತೋರಿಸುತ್ತದೆ.

ಯೇಸು ವಿಧೇಯತೆಯನ್ನು ಕಲಿತುಕೊಂಡು, ಪ್ರಯೋಜನಗಳನ್ನು ಪಡೆದನು. ನಮ್ಮ ವಿಷಯದಲ್ಲೂ ಇದು ಸತ್ಯವಾಗಿರಬಲ್ಲದು. (ಇಬ್ರಿಯ 5:8) ನಾವು ಎಷ್ಟು ಹೆಚ್ಚು ವಿಧೇಯತೆಯನ್ನು ಬೆಳೆಸಿಕೊಳ್ಳುತ್ತೇವೊ, ವಿಧೇಯರಾಗಿರುವುದು ಅಷ್ಟೇ ಸುಲಭವಾಗುವುದು, ಚಿಕ್ಕಪುಟ್ಟ ವಿಷಯಗಳಲ್ಲೂ ಕೂಡ. ನಮ್ಮ ಸಮಗ್ರತೆಯಿಂದಾಗಿ, ನಾವು ಇತರರಿಂದ ಅಹಿತಕರವಾದ ಮತ್ತು ಕಠೋರವಾದ ಉಪಚಾರವನ್ನೂ ಎದುರಿಸಬೇಕಾಗಬಹುದು ನಿಜ. ಇದು ವಿಶೇಷವಾಗಿ ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ ಇಲ್ಲವೆ ಧಾರ್ಮಿಕವಾಗಿ ವಿಭಾಜಿತವಾಗಿರುವ ಮನೆತನದಲ್ಲಿ ಸತ್ಯವಾಗಿರಬಹುದು. ಹೀಗಿದ್ದರೂ, ಇಸ್ರಾಯೇಲ್ಯರು ಒಂದುವೇಳೆ ‘ಯೆಹೋವನನ್ನು ಪ್ರೀತಿಸಿ, ಆತನ ಮಾತಿಗೆ ವಿಧೇಯರಾಗಿ, ಆತನಿಗೆ ಹೊಂದಿಕೊಂಡು’ ಇದ್ದರೆ, ‘ಅವರು ಬದುಕಿಕೊಳ್ಳುವದಕ್ಕೂ ಬಹುಕಾಲ ಇರುವದಕ್ಕೂ ಆತನು ಆಧಾರ’ವಾಗಿರುವನೆಂದು ಆತನು ಮಾಡಿದ ಘೋಷಣೆಯಿಂದ ನಾವು ಸಾಂತ್ವನವನ್ನು ಪಡೆದುಕೊಳ್ಳುತ್ತೇವೆ. (ಧರ್ಮೋಪದೇಶಕಾಂಡ 30:20) ಇದೇ ವಾಗ್ದಾನವು ನಮಗೂ ಕೊಡಲ್ಪಟ್ಟಿದೆ.

ಸಮಯವನ್ನು ವಿವೇಕಯುತವಾಗಿ ಬಳಸಿರಿ

ನಮ್ಮ ಸಮಯದ ವಿವೇಕಯುತ ಬಳಕೆಯು ಸಹ, ನಮ್ಮ ದಿನಗಳು ಯೆಹೋವನ ಮುಂದೆ ಎಣಿಕೆಗೆ ಯೋಗ್ಯವಾಗಿರುವಂಥ ರೀತಿಯಲ್ಲಿ ಅವುಗಳನ್ನು ಉಪಯೋಗಿಸುವಂತೆ ನಮಗೆ ಸಹಾಯಮಾಡಬಲ್ಲದು. ಹಣವನ್ನಾದರೂ ಉಳಿಸಬಹುದು, ಆದರೆ ಸಮಯವನ್ನು ಖರ್ಚುಮಾಡಲೇಬೇಕು, ಇಲ್ಲದಿದ್ದಲ್ಲಿ ಅದು ಕಳೆದುಹೋಗುತ್ತದೆ. ದಾಟಿಹೋಗುವ ಪ್ರತಿಯೊಂದು ತಾಸು ಎಂದೂ ಮರಳಿಬಾರದು. ಯಾವಾಗಲೂ, ನಮಗೆ ಮಾಡಲು ಸಾಧ್ಯವಿರುವುದಕ್ಕಿಂತಲೂ ಹೆಚ್ಚು ಸಂಗತಿಗಳು ಇರುವುದರಿಂದ, ನಮ್ಮ ಜೀವನದ ಗುರಿಗಳನ್ನು ತಲಪಲು ಸಹಾಯಮಾಡುವಂಥ ರೀತಿಯಲ್ಲಿ ನಾವು ನಮ್ಮ ಸಮಯವನ್ನು ವ್ಯಯಿಸುತ್ತೇವೊ? ಎಲ್ಲಾ ಕ್ರೈಸ್ತರಿಗೆ, ರಾಜ್ಯ ಸಾರುವಿಕೆ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಕ್ರಮದ ಪಾಲ್ಗೊಳ್ಳುವಿಕೆಯೇ ಒಂದು ಪ್ರಧಾನ ಗುರಿಯಾಗಿರಬೇಕು.​—ಮತ್ತಾಯ 24:14; 28:​19, 20.

ನಮಗೆ ಸಮಯದ ಮೌಲ್ಯವೇನೆಂಬುದರ ಅರಿವಿದ್ದರೆ ಮಾತ್ರ ನಾವು ಅದನ್ನು ವಿವೇಕಯುತವಾಗಿ ಬಳಸುವೆವು. ತಕ್ಕದ್ದಾಗಿಯೇ ಎಫೆಸ 5:16 (NW) ನಾವು ‘ನಮಗೋಸ್ಕರ ಸೂಕ್ತವಾದ ಸಮಯವನ್ನು ಕೊಂಡುಕೊಳ್ಳುವಂತೆ’ ಪ್ರೇರೇಪಿಸುತ್ತದೆ ಮತ್ತು ಇದರರ್ಥ “ಖರೀದಿಸುವುದು,” ಅಂದರೆ ಕಡಿಮೆ ಮಹತ್ವವುಳ್ಳ ವಿಷಯಗಳನ್ನು ಬಿಟ್ಟುಬಿಡುವ ಮೂಲಕ ಅದನ್ನು “ಖರೀದಿಸುವುದು” ಆಗಿದೆ. ಇದು, ಸಮಯವ್ಯಯಮಾಡುವಂಥ ಚಟುವಟಿಕೆಗಳನ್ನು ಕಡಿಮೆಗೊಳಿಸುವುದನ್ನು ಅರ್ಥೈಸುತ್ತದೆ. ವಿಪರೀತವಾಗಿ ಟಿವಿ ನೋಡುವುದು ಇಲ್ಲವೆ ಇಂಟರ್‌ನೆಟ್‌ನಲ್ಲಿ ಸರ್ಫ್‌ ಮಾಡುವುದು, ಪ್ರಯೋಜನವಿಲ್ಲದ ಲೌಕಿಕ ಮಾಹಿತಿಯನ್ನು ಓದುವುದು, ಇಲ್ಲವೆ ಮನೋರಂಜನೆ ಮತ್ತು ವಿನೋದಾವಳಿಗಳಲ್ಲಿ ವಿಪರೀತ ಒಳಗೂಡುವಿಕೆಯು ನಮ್ಮನ್ನು ದಣಿಸಬಲ್ಲದು. ಇದಕ್ಕೆ ಕೂಡಿಸಿ, ಭೌತಿಕ ಸ್ವತ್ತುಗಳ ಅತಿರೇಕ ಸಂಗ್ರಹವು ವಿವೇಕದ ಹೃದಯವನ್ನು ಪಡೆಯಲಿಕ್ಕಾಗಿ ಬೇಕಾಗುವ ಸಮಯವನ್ನು ಕಬಳಿಸಬಲ್ಲದು.

ಸಮಯವನ್ನು ಜಾಗರೂಕತೆಯಿಂದ ನಿರ್ವಹಿಸಬೇಕೆಂಬುದನ್ನು ಸಮರ್ಥಿಸುವವರು ಹೇಳುವುದು: “ಸ್ಪಷ್ಟವಾದ ಹಾಗೂ ನಿರ್ದಿಷ್ಟವಾದ ಗುರಿಗಳಿಲ್ಲದಿದ್ದರೆ, ನಿಮ್ಮ ಸಮಯವನ್ನು ಸದುಪಯೋಗಿಸುವುದು ಅಸಾಧ್ಯ.” ಗುರಿಗಳನ್ನಿಡಲಿಕ್ಕಾಗಿ ಅವರು ಐದು ಮಟ್ಟಗಳನ್ನು ಸೂಚಿಸುತ್ತಾರೆ: ನಿರ್ದಿಷ್ಟವಾದದ್ದು, ಅಳೆಯಸಾಧ್ಯವಿರುವಂಥದ್ದು, ಸಾಧಿಸಸಾಧ್ಯವಿರುವಂಥದ್ದು, ವಾಸ್ತವಿಕವಾದದ್ದು ಮತ್ತು ಗಡುವುಳ್ಳದ್ದು.

ನಾವು ಇಡಬಹುದಾದ ಒಂದು ಸಾರ್ಥಕ ಗುರಿಯು, ನಮ್ಮ ಬೈಬಲ್‌ ವಾಚನವನ್ನು ಉತ್ತಮಗೊಳಿಸುವುದೇ ಆಗಿದೆ. ಮೊದಲನೆಯ ಹೆಜ್ಜೆಯೇನೆಂದರೆ, ನಮ್ಮ ಈ ಗುರಿಯನ್ನು ನಿರ್ದಿಷ್ಟವಾದದ್ದಾಗಿ ಮಾಡುವುದು. ಅಂದರೆ ಇಡೀ ಬೈಬಲನ್ನು ಓದುವುದು. ಮುಂದಿನ ಹೆಜ್ಜೆಯು ನಮ್ಮ ಗುರಿಯನ್ನು ಅಳೆಯಸಾಧ್ಯವಾದದ್ದಾಗಿ ಮಾಡುವುದಾಗಿದೆ. ಹೀಗೆ ಮಾಡುವ ಮೂಲಕ, ನಾವು ಎಷ್ಟು ಪ್ರಗತಿಯನ್ನು ಮಾಡಿದ್ದೇವೆಂಬುದನ್ನು ಪತ್ತೆಹಚ್ಚಬಹುದು. ಗುರಿಗಳು ನಾವು ಪ್ರಯಾಸಪಡುವಂತೆ ಮತ್ತು ಬೆಳೆಯುವಂತೆ ಮಾಡಬೇಕು. ಅವು ಸಾಧಿಸಲು ಸಾಧ್ಯವಿರುವವುಗಳೂ ವಾಸ್ತವವಿಕವಾದವುಗಳೂ ಆಗಿರಬೇಕು. ನಮ್ಮ ವೈಯಕ್ತಿಕ ಸಾಮರ್ಥ್ಯಗಳು, ಕೌಶಲಗಳು ಮತ್ತು ಲಭ್ಯವಿರುವ ಸಮಯವನ್ನು ಪರಿಗಣಿಸಬೇಕು. ಕೆಲವರಿಗೆ ಒಂದು ಗುರಿಯನ್ನು ತಲಪಲು ಹೆಚ್ಚು ಸಮಯ ಬೇಕಾಗಬಹುದು. ಕೊನೆಯದಾಗಿ, ನಮ್ಮ ಗುರಿಗೆ ಒಂದು ಗಡುವು ಇರಬೇಕು. ಒಂದು ತಾರೀಖನ್ನು ನಿಗದಿಪಡಿಸುವುದು, ಆ ಗುರಿಯನ್ನು ತಲಪಬೇಕೆಂಬ ಪ್ರೇರಣೆಗೆ ಪುಷ್ಟಿಯನ್ನು ನೀಡುವುದು.

ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯ ಕಾರ್ಯಾಲಯದಲ್ಲಿ ಇಲ್ಲವೆ ಲೋಕದಾದ್ಯಂತವಿರುವ ಅದರ ಬ್ರಾಂಚುಗಳಲ್ಲೊಂದರಲ್ಲಿ ಸೇವೆಸಲ್ಲಿಸುತ್ತಿರುವ ಭೌಗೋಳಿಕ ಬೆತೆಲ್‌ ಕುಟುಂಬದ ಎಲ್ಲಾ ಸದಸ್ಯರಿಗೆ, ತಾವು ಬೆತೆಲಿಗೆ ಬಂದ ಮೊದಲನೆಯ ವರ್ಷದಲ್ಲಿ ಇಡೀ ಬೈಬಲನ್ನು ಓದಬೇಕೆಂಬ ಒಂದು ನಿರ್ದಿಷ್ಟ ಗುರಿಯಿರುತ್ತದೆ. ಲಾಭದಾಯಕವಾದ ಬೈಬಲ್‌ ವಾಚನವು ತಮ್ಮ ಆತ್ಮಿಕ ಬೆಳವಣಿಗೆಗೆ ಮತ್ತು ಯಾರು ತಮಗೆ ಪ್ರಯೋಜನ ತರುವಂಥ ರೀತಿಯಲ್ಲಿ ಕಲಿಸುತ್ತಾನೊ ಆ ಯೆಹೋವ ದೇವರೊಂದಿಗೆ ಹೆಚ್ಚು ಆಪ್ತವಾದ ಸಂಬಂಧಕ್ಕೆ ನೆರವು ನೀಡುತ್ತದೆ ಎಂಬುದನ್ನು ಅವರು ಗ್ರಹಿಸುತ್ತಾರೆ. (ಯೆಶಾಯ 48:17) ನಾವು ಕೂಡ ಕ್ರಮದ ಬೈಬಲ್‌ ವಾಚನವನ್ನು ನಮ್ಮ ಗುರಿಯನ್ನಾಗಿ ಮಾಡಬಲ್ಲೆವೊ?

ನಮ್ಮ ದಿನಗಳು ಎಣಿಕೆಗೆ ಯೋಗ್ಯವಾಗಿರುವಂತೆ ಮಾಡುವುದರ ಪ್ರಯೋಜನಗಳು

ಆತ್ಮಿಕ ವಿಷಯಗಳಿಗೆ ಪ್ರಮುಖ ಗಮನವನ್ನು ಕೊಡುವುದು, ಅಗಣಿತ ಆಶೀರ್ವಾದಗಳನ್ನು ತರುವುದು. ಒಂದನೆಯದಾಗಿ, ಅದು ನಮ್ಮಲ್ಲಿ ಏನನ್ನೊ ಸಾಧಿಸಿದ್ದೇವೆಂಬ ಪ್ರಜ್ಞೆಯನ್ನು ಹೆಚ್ಚಿಸುವುದು ಮತ್ತು ಜೀವನಕ್ಕೆ ಒಂದು ಉದ್ದೇಶವನ್ನು ಕೊಡುವುದು. ಮನಃಪೂರ್ವಕವಾದ ಪ್ರಾರ್ಥನೆಯಲ್ಲಿ ಯೆಹೋವನೊಂದಿಗೆ ಸಂವಾದಮಾಡುವುದು, ನಮ್ಮನ್ನು ಇನ್ನೂ ಹೆಚ್ಚಾಗಿ ಆತನ ಸಮೀಪಕ್ಕೆ ತರುತ್ತದೆ. ನಾವು ಪ್ರಾರ್ಥಿಸುವ ಸಂಗತಿಯೇ, ನಾವು ಆತನಲ್ಲಿ ಭರವಸೆಯನ್ನಿಡುತ್ತೇವೆ ಎಂಬುದನ್ನು ತೋರಿಸುತ್ತದೆ. ಬೈಬಲನ್ನೂ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸುವ ಬೈಬಲಾಧಾರಿತ ಪ್ರಕಾಶನಗಳನ್ನೂ ದಿನನಿತ್ಯವೂ ಓದುವುದು, ದೇವರು ನಮ್ಮೊಂದಿಗೆ ಮಾತಾಡುವಾಗ ನಾವು ಕಿವಿಗೊಡಲು ಸಿದ್ಧರಿದ್ದೇವೆಂಬುದನ್ನು ಪ್ರದರ್ಶಿಸುತ್ತದೆ. (ಮತ್ತಾಯ 24:​45-47) ಇದು, ನಾವು ಜೀವನದಲ್ಲಿ ಸರಿಯಾದ ನಿರ್ಣಯಗಳನ್ನೂ ಆಯ್ಕೆಗಳನ್ನೂ ಮಾಡುವಂತೆ ಬೇಕಾಗುವ ವಿವೇಕದ ಹೃದಯವನ್ನು ಪಡೆಯಲು ಸಹಾಯಮಾಡುತ್ತದೆ.​—ಕೀರ್ತನೆ 1:​1-3.

ನಾವು ಯೆಹೋವನ ಆಜ್ಞೆಗಳಿಗೆ ವಿಧೇಯರಾಗಲು ಸಂತೋಷಿಸುತ್ತೇವೆ, ಯಾಕೆಂದರೆ ಅದು ನಮಗೆ ಒಂದು ಹೊರೆಯಾಗಿರುವುದಿಲ್ಲ. (1 ಯೋಹಾನ 5:3) ಪ್ರತಿಯೊಂದು ದಿನವನ್ನೂ ಯೆಹೋವನ ಎಣಿಕೆಗೆ ಯೋಗ್ಯವಾಗಿ ಮಾಡುವಾಗ, ನಾವು ಆತನೊಂದಿಗಿನ ನಮ್ಮ ಸಂಬಂಧವನ್ನು ಬಲಪಡಿಸುತ್ತೇವೆ. ನಮ್ಮ ಜೊತೆ ಕ್ರೈಸ್ತರಿಗೆ ನಾವು ನಿಜವಾದ ಆತ್ಮಿಕ ಬೆಂಬಲವೂ ಆಗುತ್ತೇವೆ. ಅಂಥ ಕ್ರಿಯೆಗಳು ಯೆಹೋವ ದೇವರನ್ನು ಸಂತೋಷಪಡಿಸುತ್ತವೆ. (ಜ್ಞಾನೋಕ್ತಿ 27:11) ಮತ್ತು ಈಗಲೂ ಮುಂದೂ, ಹೀಗೆ ಎಂದೆಂದಿಗೂ ಯೆಹೋವನ ಅನುಗ್ರಹಕ್ಕೆ ಪಾತ್ರರಾಗುವುದಕ್ಕಿಂತಲೂ ಶ್ರೇಷ್ಠವಾದ ಬಹುಮಾನ ಬೇರೊಂದಿಲ್ಲ!

[ಪುಟ 21ರಲ್ಲಿರುವ ಚಿತ್ರ]

ಆತ್ಮಿಕ ವಿಷಯಗಳ ಬಗ್ಗೆ ಕ್ರೈಸ್ತರಿಗೆ ಗಂಭೀರವಾದ ದೃಷ್ಟಿಕೋನವಿರುತ್ತದೆ

[ಪುಟ 22ರಲ್ಲಿರುವ ಚಿತ್ರಗಳು]

ನೀವು ನಿಮ್ಮ ಸಮಯವನ್ನು ವಿವೇಕಯುತವಾಗಿ ಬಳಸುತ್ತಿದ್ದೀರೊ?

[ಪುಟ 23ರಲ್ಲಿರುವ ಚಿತ್ರ]

ಪ್ರತಿಯೊಂದು ದಿನವನ್ನೂ ಯೆಹೋವನ ಎಣಿಕೆಗೆ ಯೋಗ್ಯವಾಗಿ ಮಾಡುವಾಗ, ನಾವು ಆತನೊಂದಿಗಿನ ನಮ್ಮ ಸಂಬಂಧವನ್ನು ಬಲಪಡಿಸುತ್ತೇವೆ