ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ದೇವರಿಗೆ ಮಾಡುವ ಹರಕೆಗಳನ್ನು ಯಾವಾಗಲೂ ಪೂರೈಸಲೇಬೇಕೊ?

ಶಾಸ್ತ್ರವಚನಕ್ಕನುಸಾರ ಒಂದು ಹರಕೆಯು, ಒಂದು ಕೆಲಸವನ್ನು ಮಾಡಲು, ಒಂದು ಕಾಣಿಕೆಯನ್ನು ಕೊಡಲು, ಒಂದು ವಿಶೇಷವಾದ ಸೇವೆಗಿಳಿಯಲು ಇಲ್ಲವೆ ಒಂದು ಪಾತ್ರವನ್ನು ವಹಿಸಲು, ಅಥವಾ ನಿಷಿದ್ಧವಾಗಿರದಂಥ ನಿರ್ದಿಷ್ಟ ವಿಷಯಗಳಿಂದ ದೂರವಿರಲು ದೇವರಿಗೆ ಗಂಭೀರವಾದ ವಚನವನ್ನು ನೀಡುವುದೇ ಆಗಿದೆ. ಬೈಬಲ್‌ನಲ್ಲೂ ಹರಕೆಗಳ ಕುರಿತಾದ ವೃತ್ತಾಂತಗಳಿವೆ. ಇವು ಷರತ್ತುಳ್ಳ ಹರಕೆಗಳಾಗಿದ್ದವು. ಅಂದರೆ, ದೇವರು ಮೊದಲು ಒಂದು ಕಾರ್ಯವನ್ನು ಮಾಡುವಲ್ಲಿ, ತಾನು ಮಾತುಕೊಟ್ಟಿರುವಂತೆ ಮಾಡುವೆನೆಂದು ಒಬ್ಬನು ಭಾಷೆಕೊಡುವುದು ಅದರಲ್ಲಿ ಸೇರಿತ್ತು. ಉದಾಹರಣೆಗಾಗಿ, ಪ್ರವಾದಿಯಾದ ಸಮುವೇಲನ ತಾಯಿ ಹನ್ನಳು, “ಸೇನಾಧೀಶ್ವರನಾದ ಯೆಹೋವನೇ, ನಿನ್ನ ದಾಸಿಯ ದುಃಖವನ್ನು ಪರಾಂಬರಿಸು; ನನ್ನನ್ನು ತಿರಸ್ಕರಿಸದೆ ಕನಿಕರವಿಟ್ಟು ನನಗೊಬ್ಬ ಮಗನನ್ನು ಕೊಡಬೇಕು; ಅವನು ಜೀವದಿಂದಿರುವ ತನಕ ನಿನ್ನವನಾಗಿಯೇ ಇರುವ ಹಾಗೆ ನಿನಗೆ ಪ್ರತಿಷ್ಠಿಸಿ ಕೊಡುವೆನು; ಅವನ ತಲೆಯ ಮೇಲೆ ಕ್ಷೌರ ಕತ್ತಿಯನ್ನು ಬರಗೊಡುವದಿಲ್ಲ ಎಂದು ಪ್ರಾರ್ಥಿಸಿ ಹರಕೆಮಾಡಿದಳು.” (1 ಸಮುವೇಲ 1:11) ಹರಕೆಗಳು ಒಬ್ಬ ವ್ಯಕ್ತಿಯು ಸ್ವಂತ ಇಷ್ಟದಿಂದ ಮಾಡುವಂಥವುಗಳಾಗಿರುತ್ತವೆ ಎಂದು ಸಹ ಬೈಬಲ್‌ ವರ್ಣಿಸುತ್ತದೆ. ದೇವರಿಗೆ ಮಾಡಲ್ಪಡುವ ಹರಕೆಗಳನ್ನು ಎಷ್ಟರ ಮಟ್ಟಿಗೆ ತೀರಿಸಬೇಕು?

“ನೀನು ದೇವರಿಗೆ ಹರಕೆಯನ್ನು ಕಟ್ಟಿದರೆ ಅದನ್ನು ತೀರಿಸಲು ತಡಮಾಡಬೇಡ” ಎಂದು ಪ್ರಾಚೀನ ಇಸ್ರಾಯೇಲಿನ ರಾಜ ಸೊಲೊಮೋನನು ಹೇಳುತ್ತಾನೆ. ಅವನು ಕೂಡಿಸಿ ಹೇಳಿದ್ದು: “ನಿನ್ನ ಹರಕೆಯನ್ನು ಒಪ್ಪಿಸು. ನೀನು ಹರಸಿಕೊಂಡು ತೀರಿಸದೆ ಇರುವದಕ್ಕಿಂತ ಹರಕೆಮಾಡಿಕೊಳ್ಳದೆ ಇರುವದು ವಾಸಿ.” (ಪ್ರಸಂಗಿ 5:4, 5) ಮೋಶೆಯ ಮುಖಾಂತರ ಇಸ್ರಾಯೇಲಿಗೆ ಕೊಡಲ್ಪಟ್ಟ ಧರ್ಮಶಾಸ್ತ್ರವು ತಿಳಿಸುವುದು: “ನಿಮ್ಮ ದೇವರಾದ ಯೆಹೋವನಿಗೆ ಹರಕೆಮಾಡಿದ ಮೇಲೆ ಅದನ್ನು ತಡಮಾಡದೆ ತೀರಿಸಬೇಕು; ಆತನು ತಪ್ಪದೆ ಅದನ್ನು ವಿಚಾರಿಸುವನು; ತೀರಿಸದೆ ಹೋಗುವದು ಪಾಪ.” (ಧರ್ಮೋಪದೇಶಕಾಂಡ 23:21) ದೇವರಿಗೆ ಹರಕೆಮಾಡುವುದು ಒಂದು ಗಂಭೀರ ವಿಷಯವಾಗಿದೆ ಎಂಬುದು ಸ್ಪಷ್ಟ. ಅದನ್ನು ಒಂದು ಒಳ್ಳೇ ಕಾರಣಕ್ಕಾಗಿ ಮಾಡಬೇಕು, ಮತ್ತು ಅದನ್ನು ಮಾಡುವವನಿಗೆ, ತಾನು ಏನು ಹರಕೆಮಾಡುತ್ತೇನೊ ಅದನ್ನು ಪೂರೈಸಲು ಶಕ್ತನಾಗಿದ್ದೇನೆಂಬುದರ ಬಗ್ಗೆ ಯಾವುದೇ ಸಂದೇಹವಿರಬಾರದು. ಹಾಗಿದ್ದರೆ, ಅವನು ಹರಕೆಮಾಡದಿರುವುದೇ ಲೇಸು. ಆದರೆ ಒಮ್ಮೆ ಹರಕೆಗಳನ್ನು ಮಾಡಿದ ನಂತರ, ಅವೆಲ್ಲವನ್ನು ಪೂರೈಸಲೇಬೇಕೊ?

ಒಬ್ಬನು ಮಾಡಿದ ಹರಕೆಯಲ್ಲಿ ಅವನು ಮಾಡುತ್ತೇನೆಂದು ಹೇಳಿದ ಸಂಗತಿಯು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿಲ್ಲ ಎಂದು ತದನಂತರ ಅವನಿಗೆ ತಿಳಿದುಬರುವಲ್ಲಿ ಆಗೇನು? ಒಂದುವೇಳೆ ಅದು ಯಾವುದಾದರೊಂದು ವಿಧದಲ್ಲಿ ಅನೈತಿಕತೆಯನ್ನು ಸತ್ಯಾರಾಧನೆಯೊಂದಿಗೆ ಜೋಡಿಸುವಂಥ ರೀತಿಯ ಹರಕೆಯಾಗಿದ್ದರೆ ಏನು? (ಧರ್ಮೋಪದೇಶಕಾಂಡ 23:18) ಅಂಥ ಹರಕೆಯನ್ನು ತೀರಿಸಬೇಕೆಂಬ ಯಾವುದೇ ನಿರ್ಬಂಧವಿಲ್ಲ ಎಂಬುದು ಸುವ್ಯಕ್ತ. ಅಷ್ಟುಮಾತ್ರವಲ್ಲದೆ, ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಒಬ್ಬ ಸ್ತ್ರೀಯು ಮಾಡುವ ಹರಕೆಯನ್ನು ಅವಳ ತಂದೆ ಇಲ್ಲವೆ ಗಂಡನು ರದ್ದುಗೊಳಿಸಸಾಧ್ಯವಿತ್ತು.​—ಅರಣ್ಯಕಾಂಡ 30:​3-15.

ಈ ವಿದ್ಯಮಾನವನ್ನೂ ಪರಿಗಣಿಸಿರಿ. ಒಬ್ಬ ವ್ಯಕ್ತಿಯು ತಾನು ಅವಿವಾಹಿತನಾಗಿ ಉಳಿಯುವೆನೆಂದು ದೇವರಿಗೆ ಹರಕೆ ಮಾಡಿದ್ದಾನೆಂದು ಇಟ್ಟುಕೊಳ್ಳಿ. ಆದರೆ ಈಗ ಅವನ ಸ್ಥಿತಿಯು ಅಡ್ಡಕತ್ತರಿಯಲ್ಲಿ ಸಿಕ್ಕಿಬಿದ್ದಂತಿದೆ. ತಾನು ಆ ಹರಕೆಯನ್ನು ಪೂರೈಸುವುದು, ದೇವರು ನೈತಿಕತೆಯ ಬಗ್ಗೆ ಇಟ್ಟಿರುವ ಮಟ್ಟಗಳನ್ನು ಉಲ್ಲಂಘಿಸುವ ಹಂತಕ್ಕೆ ತನ್ನನ್ನು ತಂದಿದೆಯೆಂದು ಅವನಿಗನಿಸುವ ಸ್ಥಾನದಲ್ಲಿ ಆ ಹರಕೆಯು ಅವನನ್ನು ತಂದಿರಿಸಿದೆ. ಅವನು ಆಗಲೂ ಆ ಹರಕೆಯನ್ನು ಪೂರೈಸಲು ಪ್ರಯತ್ನಿಸಬೇಕೊ? ಅವನು ತನ್ನ ಹರಕೆಯನ್ನು ಪೂರೈಸದೆ ದೇವರ ಕರುಣೆಗಾಗಿ ಮೊರೆಯಿಡುತ್ತಾ, ಕ್ಷಮಾಪಣೆಗಾಗಿ ಬೇಡಿಕೊಳ್ಳುತ್ತಾ, ಅನೈತಿಕತೆಯ ದೋಷವನ್ನು ಹೊತ್ತುಕೊಳ್ಳುವುದರಿಂದ ತನ್ನನ್ನು ಸಂರಕ್ಷಿಸಿಕೊಳ್ಳುವುದು ಒಳ್ಳೇದಲ್ಲವೊ? ಈ ವಿಷಯದಲ್ಲಿ ಸ್ವತಃ ಅವನು ಮಾತ್ರ ನಿರ್ಣಯಮಾಡಬಹುದು. ಬೇರೆ ಯಾರೂ ಅವನಿಗೋಸ್ಕರ ನಿರ್ಣಯವನ್ನು ಮಾಡಲಾರರು.

ತಾನು ಮಾಡಿದ ಹರಕೆಯು ದುಡುಕಿ ಮಾಡಿದ್ದಾಗಿತ್ತೆಂದು ಒಬ್ಬನಿಗೆ ಅನಂತರ ತಿಳಿದುಬರುವುದಾದರೆ ಆಗೇನು? ಅವನು ಆಗಲೂ ಆ ಹರಕೆಯನ್ನು ಪೂರೈಸಲು ಪ್ರಯತ್ನಿಸಬೇಕೊ? ಯೆಫ್ತಾಹನು ದೇವರಿಗೆ ಮಾಡಿದ ಹರಕೆಯನ್ನು ಪೂರೈಸುವುದು ಸುಲಭವಾಗಿರಲಿಲ್ಲ. ಆದರೂ ಅವನು ನಿಷ್ಠೆಯಿಂದ ಅದನ್ನು ಪೂರೈಸಿದನು. (ನ್ಯಾಯಸ್ಥಾಪಕರು 11:​30-40) ಒಬ್ಬ ವ್ಯಕ್ತಿಯು ಒಂದು ಹರಕೆಯನ್ನು ಪೂರೈಸಲು ತಪ್ಪಿಹೋಗುವುದು, ದೇವರು ‘ರೋಷಗೊಳ್ಳುವಂತೆ’ ಮತ್ತು ಆ ವ್ಯಕ್ತಿಯು ಏನನ್ನು ಸಾಧಿಸಿದ್ದಾನೊ ಆ ಕೆಲಸವನ್ನು ಕೆಡವಿಹಾಕುವುದಕ್ಕೆ ನಡೆಸಬಹುದು. (ಪ್ರಸಂಗಿ 5:6) ಒಂದು ಹರಕೆಯನ್ನು ಪೂರೈಸುವ ವಿಷಯವನ್ನು ಹಗುರವೆಂದೆಣಿಸುವುದು ದೇವರ ಅನುಗ್ರಹದ ಹಿಂದೆಗೆಯುವಿಕೆಯಲ್ಲಿ ಫಲಿಸಸಾಧ್ಯವಿದೆ.

ಯೇಸು ಕ್ರಿಸ್ತನು ಹೇಳಿದ್ದು: “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ; ಇದಕ್ಕಿಂತ ಹೆಚ್ಚಾದದ್ದು ಸೈತಾನನಿಂದ ಬಂದದ್ದು.” (ಓರೆ ಅಕ್ಷರಗಳು ನಮ್ಮವು.) (ಮತ್ತಾಯ 5:37) ಒಬ್ಬ ಕ್ರೈಸ್ತನು ಕೇವಲ ಹರಕೆಗಳನ್ನು ಪೂರೈಸುವುದರ ಬಗ್ಗೆ ಮಾತ್ರವಲ್ಲ, ದೇವರಿಗೆ ಮತ್ತು ಮನುಷ್ಯರಿಗೆ ತಾನು ವಚನಕೊಡುವಂಥ ಎಲ್ಲಾ ವಿಷಯಗಳಲ್ಲಿ ವಿಶ್ವಾಸಾರ್ಹನಾಗಿ ಪರಿಣಮಿಸುವುದರ ಬಗ್ಗೆಯೂ ಚಿಂತಿತನಾಗಿರಬೇಕು. ಆರಂಭದಲ್ಲಿ ಒಳ್ಳೇದಾಗಿರುವಂತೆ ಕಂಡರೂ, ಹೆಚ್ಚು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮೂರ್ಖತನದಂತೆ ತೋರಿದ ಒಂದು ಒಪ್ಪಂದವನ್ನು ಒಬ್ಬನು ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾಡಿಕೊಂಡಿರುವ ಸಂಕಷ್ಟದಲ್ಲಿ ಬೀಳುವುದಾದರೆ ಆಗೇನು? ಅಂಥ ವಿಷಯಗಳನ್ನು ಅವನು ಹಗುರವಾಗಿ ತೆಗೆದುಕೊಳ್ಳಬಾರದು. ಆದರೆ ಆ ವ್ಯಕ್ತಿಯೊಂದಿಗೆ ಮನಃಪೂರ್ವಕವಾದ ಚರ್ಚೆಯನ್ನು ಮಾಡಿದ ಕಾರಣ, ಆ ವ್ಯಕ್ತಿಯು ಅವನನ್ನು ನಿರ್ದಿಷ್ಟ ಹಂಗಿನಿಂದ ಬಿಡಿಸಲು ನಿರ್ಣಯಿಸಬಹುದು.​—ಕೀರ್ತನೆ 15:4; ಜ್ಞಾನೋಕ್ತಿ 6:​2, 3.

ಹರಕೆಗಳು ಮತ್ತು ಇತರ ವಿಷಯಗಳ ಸಂಬಂಧದಲ್ಲಿ, ನಮ್ಮ ಮುಖ್ಯ ಚಿಂತೆ ಏನಾಗಿರಬೇಕು? ನಾವು ಯೆಹೋವ ದೇವರೊಂದಿಗೆ ಒಂದು ಒಳ್ಳೇ ಸಂಬಂಧವನ್ನು ಕಾಪಾಡಿಕೊಳ್ಳಲು ಯಾವಾಗಲೂ ಪ್ರಯತ್ನಿಸುವುದೇ.

[ಪುಟ 30, 31ರಲ್ಲಿರುವ ಚಿತ್ರಗಳು]

ಹನ್ನಳು ತನ್ನ ಹರಕೆಯನ್ನು ಪೂರೈಸಲು ಹಿಂಜರಿಯಲಿಲ್ಲ

[ಪುಟ 30, 31ರಲ್ಲಿರುವ ಚಿತ್ರಗಳು]

ತನ್ನ ಹರಕೆಯನ್ನು ಪೂರೈಸುವುದು ಕಷ್ಟಕರವಾಗಿದ್ದರೂ, ಯೆಫ್ತಾಹನು ಅದನ್ನು ಪೂರೈಸಿದನು