ಸಭೆಯಾಗಿ ಕೂಡಿಬರುವುದನ್ನು ಬಿಟ್ಟು ಬಿಡಬೇಡಿರಿ
ಸಭೆಯಾಗಿ ಕೂಡಿಬರುವುದನ್ನು ಬಿಟ್ಟು ಬಿಡಬೇಡಿರಿ
ಶಾಸ್ತ್ರವಚನವು ಹೇಳುವುದು: “ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟು ಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.” (ಇಬ್ರಿಯ 10:25) ಸತ್ಯಾರಾಧಕರು ‘ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸಲು ಮತ್ತು ಸತ್ಕಾರ್ಯಮಾಡಲು’ ಒಂದು ಆರಾಧನಾ ಸ್ಥಳಕ್ಕೆ ಕೂಡಿಬರುವ ಹಂಗುಳ್ಳವರಾಗಿದ್ದಾರೆ ಎಂಬುದಂತೂ ಸ್ಪಷ್ಟ.—ಇಬ್ರಿಯ 10:24.
ಅಪೊಸ್ತಲ ಪೌಲನು ನಮ್ಮ ಸಾಮಾನ್ಯ ಶಕದ ಪ್ರಥಮ ಶತಮಾನದಲ್ಲಿ ಈ ಮೇಲಿನ ಮಾತುಗಳನ್ನು ಬರೆದಾಗ, ಯೆರೂಸಲೇಮಿನಲ್ಲಿದ್ದ ಒಂದು ಭವ್ಯ ದೇವಾಲಯವು ಯೆಹೂದ್ಯರಿಗೆ ಒಂದು ಆರಾಧನಾ ಸ್ಥಳವಾಗಿ ಕಾರ್ಯನಡಿಸಿತು. ಅಲ್ಲಿ ಸಭಾಮಂದಿರಗಳೂ ಇದ್ದವು. ಯೇಸು “ಯೆಹೂದ್ಯರೆಲ್ಲಾ ಕೂಡುವಂಥ ಸಭಾಮಂದಿರಗಳಲ್ಲಿಯೂ ದೇವಾಲಯದಲ್ಲಿಯೂ ಯಾವಾಗಲೂ ಉಪದೇಶಮಾಡುತ್ತಾ” ಇದ್ದನು.—ಯೋಹಾನ 18:20.
ಪರಸ್ಪರ ಉತ್ತೇಜಿಸಲಿಕ್ಕಾಗಿ ಕೂಡಿಬರುವಂತೆ ಪೌಲನು ಕ್ರೈಸ್ತರಿಗೆ ಸಲಹೆ ನೀಡಿದಾಗ, ಯಾವ ರೀತಿಯ ಆರಾಧನಾ ಸ್ಥಳಗಳು ಪೌಲನ ಮನಸ್ಸಿನಲ್ಲಿದ್ದವು? ಯೆರೂಸಲೇಮಿನಲ್ಲಿದ್ದ ದೇವಾಲಯದ ಏರ್ಪಾಡು ಕ್ರೈಸ್ತಪ್ರಪಂಚದ ಭವ್ಯ ಸೌಧಗಳಿಗೆ ಯಾವುದೇ ರೀತಿಯಲ್ಲಿ ಒಂದು ಪೂರ್ವನಿದರ್ಶನವಾಗಿತ್ತೋ? ಕ್ರೈಸ್ತರೆಂದು ಹೇಳಿಕೊಳ್ಳುವವರಿಗೆ ಬೃಹದಾಕಾರದ ಧಾರ್ಮಿಕ ಕಟ್ಟಡಗಳು ಯಾವಾಗ ಪರಿಚಯಿಸಲ್ಪಟ್ಟವು?
‘ದೇವರ ಹೆಸರಿಗಾಗಿ ಒಂದು ಆಲಯ’
ದೇವರಿಗಾಗಿರುವ ಒಂದು ಆರಾಧನಾ ಸ್ಥಳದ ಕುರಿತಾದ ಪ್ರಥಮ ಸೂಚನೆಗಳು ಬೈಬಲಿನ ವಿಮೋಚನಕಾಂಡ ಪುಸ್ತಕದಲ್ಲಿ ಕಂಡುಬರುತ್ತವೆ. ಯೆಹೋವ ದೇವರು ತಾನಾದುಕೊಂಡ ಜನರಿಗೆ, ಅಂದರೆ ಇಸ್ರಾಯೇಲ್ಯರಿಗೆ “ಗುಡಾರ”ವನ್ನು ಅಥವಾ “ದೇವದರ್ಶನದ ಗುಡಾರ”ವನ್ನು ಕಟ್ಟುವಂತೆ ಸಲಹೆ ನೀಡಿದನು. ಒಡಂಬಡಿಕೆಯ ಮಂಜೂಷವನ್ನು ಮತ್ತು ಇತರ ಅನೇಕ ಪವಿತ್ರ ಪಾತ್ರೆಗಳನ್ನು ಅದರಲ್ಲಿ ಇಡಬೇಕಾಗಿತ್ತು. ಅದು ವಿಮೋಚನಕಾಂಡ, ಅಧ್ಯಾಯಗಳು 25-27; 40:33-38) ಬೈಬಲು ಈ ಗುಡಾರವನ್ನು “ಯೆಹೋವನ ಮಂದಿರ” ಎಂದು ಸಹ ಸಂಬೋಧಿಸುತ್ತದೆ.—1 ಸಮುವೇಲ 1:9, 24.
ಸಾ.ಶ.ಪೂ. 1512ರಲ್ಲಿ ಪೂರ್ಣಗೊಳಿಸಲ್ಪಟ್ಟ ಬಳಿಕ, “ಯೆಹೋವನ ತೇಜಸ್ಸು ಗುಡಾರವನ್ನು ತುಂಬಿತು.” ಸುಲಭವಾಗಿ ಸಾಗಿಸಸಾಧ್ಯವಿರುವ ಆ ಗುಡಾರವು, ಅನೇಕ ಶತಮಾನಗಳ ವರೆಗೆ ದೇವರ ಸಮಕ್ಷಮಕ್ಕೆ ಬರಲಿಕ್ಕಾಗಿರುವ ಆತನ ಏರ್ಪಾಡಿನ ಕೇಂದ್ರೀಯ ವೈಶಿಷ್ಟ್ಯವಾಗಿ ಕಾರ್ಯನಡಿಸಿತು. (ಸಮಯಾನಂತರ ದಾವೀದನು ಯೆರೂಸಲೇಮಿನಲ್ಲಿ ರಾಜನಾಗಿದ್ದಾಗ, ಯೆಹೋವನ ಮಹಿಮೆಗಾಗಿ ಒಂದು ಖಾಯಂ ಆಲಯವನ್ನು ಕಟ್ಟುವ ತೀವ್ರಾಪೇಕ್ಷೆಯನ್ನು ವ್ಯಕ್ತಪಡಿಸಿದನು. ಆದರೂ ದಾವೀದನು ಯುದ್ಧವೀರನಾಗಿದ್ದರಿಂದ ಯೆಹೋವನು ಅವನಿಗೆ ಹೇಳಿದ್ದು: “ನೀನು . . . ನನ್ನ ಹೆಸರಿಗಾಗಿ ಆಲಯವನ್ನು ಕಟ್ಟಬಾರದು.” ಅದಕ್ಕೆ ಬದಲಾಗಿ, ಯೆಹೋವನು ದಾವೀದನ ಮಗನಾಗಿದ್ದ ಸೊಲೊಮೋನನು ದೇವಾಲಯವನ್ನು ಕಟ್ಟುವಂತೆ ಆಯ್ಕೆಮಾಡಿದನು. (1 ಪೂರ್ವಕಾಲವೃತ್ತಾಂತ 22:6-10) ಸುಮಾರು ಏಳೂವರೆ ವರ್ಷಗಳ ನಿರ್ಮಾಣಕಾರ್ಯದ ಬಳಿಕ, ಸಾ.ಶ.ಪೂ. 1026ರಲ್ಲಿ ಸೊಲೊಮೋನನು ದೇವಾಲಯವನ್ನು ಪ್ರತಿಷ್ಠಾಪಿಸಿದನು. ಈ ಕಟ್ಟಡವನ್ನು ಅಂಗೀಕರಿಸುತ್ತಾ ಯೆಹೋವನು ಹೇಳಿದ್ದು: “ನನ್ನ ನಾಮಮಹತ್ತು ನೀನು ಕಟ್ಟಿಸಿದ ಆಲಯದಲ್ಲಿ ಸದಾ ಇರುವಂತೆ ಅದನ್ನು ನನಗೋಸ್ಕರ ಪ್ರತಿಷ್ಠಿಸಿಕೊಂಡಿದ್ದೇನೆ; ನನ್ನ ದೃಷ್ಟಿಯೂ ಮನಸ್ಸೂ ಪ್ರತಿದಿನವೂ ಅದರ ಮೇಲಿರುವವು.” (1 ಅರಸುಗಳು 9:3) ಇಸ್ರಾಯೇಲ್ಯರು ನಂಬಿಗಸ್ತರಾಗಿ ಉಳಿದಿರುವಷ್ಟು ಸಮಯ, ಯೆಹೋವನು ಆ ಆಲಯದ ಕಡೆಗೆ ತನ್ನ ಅನುಗ್ರಹವನ್ನು ತೋರಿಸಲಿದ್ದನು. ಆದರೂ, ಯಾವುದು ಸರಿಯಾಗಿದೆಯೋ ಅದರಿಂದ ಅವರು ವಿಮುಖರಾದಲ್ಲಿ, ಯೆಹೋವನು ಆ ಸ್ಥಳದಿಂದ ತನ್ನ ಅನುಗ್ರಹವನ್ನು ಹಿಂದೆಗೆದುಕೊಳ್ಳಲಿದ್ದನು, ಮತ್ತು ‘ಆ ಆಲಯವು ಅವಶೇಷಗಳ ರಾಶಿಯಾಗಲಿತ್ತು.’—1 ಅರಸುಗಳು 9:4-9, NW; 2 ಪೂರ್ವಕಾಲವೃತ್ತಾಂತ 7:16, 19, 20.
ಸಕಾಲದಲ್ಲಿ, ಇಸ್ರಾಯೇಲ್ಯರು ಸತ್ಯಾರಾಧನೆಯಿಂದ ವಿಮುಖರಾದರು. (2 ಅರಸುಗಳು 21:1-5) “[ಯೆಹೋವನು] ಕಸ್ದೀಯರ ಅರಸನನ್ನು ಅವರ ಮೇಲೆ ಬರಮಾಡಿ ಎಲ್ಲರನ್ನೂ ಅವನ ಕೈಗೆ ಒಪ್ಪಿಸಿದನು. . . . [ಅವನ ಜನರು] ಯೆರೂಸಲೇಮಿನ ಪೌಳಿಗೋಡೆಗಳನ್ನು ಕೆಡವಿ ಅದರ ಎಲ್ಲಾ ರಾಜಮಂದಿರಗಳನ್ನೂ ದೇವಾಲಯವನ್ನೂ ಸುಟ್ಟುಬಿಟ್ಟು ಅಮೂಲ್ಯವಸ್ತುಗಳನ್ನು ನಾಶಮಾಡಿದರು. ಕತ್ತಿಗೆ ತಪ್ಪಿಸಿಕೊಂಡವರನ್ನು ಅರಸನು ಬಾಬೆಲಿಗೆ ಸೆರೆಯೊಯ್ದನು. . . . ಅವರು ಅವನಿಗೂ ಅವನ ಮಕ್ಕಳಿಗೂ ಸೇವಕರಾಗಿದ್ದರು.” ಬೈಬಲಿಗನುಸಾರ, ಸಾ.ಶ.ಪೂ. 607ರಲ್ಲಿ ಇದು ಸಂಭವಿಸಿತು.—2 ಪೂರ್ವಕಾಲವೃತ್ತಾಂತ 36:15-21; ಯೆರೆಮೀಯ 52:12-14.
ಪ್ರವಾದಿಯಾದ ಯೆಶಾಯನಿಂದ ಮುಂತಿಳಿಸಲ್ಪಟ್ಟಂತೆ, ಬಾಬೆಲಿನ ಅಧಿಕಾರದಿಂದ ಯೆಹೂದ್ಯರನ್ನು ಬಿಡುಗಡೆಮಾಡಲಿಕ್ಕಾಗಿ ದೇವರು ಪಾರಸಿಯ ಅರಸನಾದ ಕೋರೆಷನನ್ನು ಎಬ್ಬಿಸಿದನು. (ಯೆಶಾಯ 45:1) 70 ವರ್ಷಗಳ ದೇಶಭ್ರಷ್ಟತೆಯ ಬಳಿಕ, ದೇವಾಲಯವನ್ನು ಪುನಸ್ಸ್ಥಾಪಿಸುವ ಉದ್ದೇಶದಿಂದ ಸಾ.ಶ.ಪೂ. 537ರಲ್ಲಿ ಅವರು ಯೆರೂಸಲೇಮಿಗೆ ಹಿಂದಿರುಗಿದರು. (ಎಜ್ರ 1:1-6; 2:1, 2; ಯೆರೆಮೀಯ 29:10) ನಿರ್ಮಾಣಕಾರ್ಯದಲ್ಲಿ ವಿಳಂಬವಾದ ಬಳಿಕ, ಕೊನೆಗೂ ಸಾ.ಶ.ಪೂ. 515ರಲ್ಲಿ ದೇವಾಲಯವು ಪೂರ್ಣಗೊಳಿಸಲ್ಪಟ್ಟಿತು ಮತ್ತು ದೇವರ ಶುದ್ಧಾರಾಧನೆಯು ಪುನಸ್ಸ್ಥಾಪಿಸಲ್ಪಟ್ಟಿತು. ಅದು ಸೊಲೊಮೋನನ ದೇವಾಲಯದಷ್ಟು ವೈಭವದಿಂದ ಕೂಡಿರಲಿಲ್ಲವಾದರೂ, ಆ ಕಟ್ಟಡವು ಸುಮಾರು 600 ವರ್ಷಗಳ ವರೆಗೆ ಉಳಿಯಿತು. ಆದರೂ, ಇಸ್ರಾಯೇಲ್ಯರು ಯೆಹೋವನ ಆರಾಧನೆಯನ್ನು ನಿರ್ಲಕ್ಷಿಸಿದ್ದರಿಂದ ಈ ದೇವಾಲಯವು ಸಹ ದುಸ್ಥಿತಿಗೆ ಒಳಗಾಯಿತು. ಯೇಸು ಕ್ರಿಸ್ತನು ಭೂಮಿಯ ಮೇಲೆ ಕಾಣಿಸಿಕೊಂಡಾಗ, ಈ ದೇವಾಲಯವು ಅರಸನಾದ ಹೆರೋದನಿಂದ ಪ್ರಗತಿಪರವಾಗಿ ಪುನರ್ನಿರ್ಮಾಣ ಹೊಂದುವ ಕಾರ್ಯಗತಿಯಲ್ಲಿತ್ತು. ಈ ದೇವಾಲಯಕ್ಕೆ ಏನಾಗಲಿತ್ತು?
“ಕಲ್ಲಿನ ಮೇಲೆ ಕಲ್ಲು ಉಳಿಯುವದಿಲ್ಲ”
ಯೆರೂಸಲೇಮಿನಲ್ಲಿದ್ದ ದೇವಾಲಯಕ್ಕೆ ಸೂಚಿಸುತ್ತಾ ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವದಿಲ್ಲ, ಎಲ್ಲಾ ಕೆಡವಲ್ಪಡುವದು.” (ಮತ್ತಾಯ 24:1, 2) ಈ ಮಾತುಗಳಿಗೆ ಹೊಂದಿಕೆಯಲ್ಲಿ, ಶತಮಾನಗಳಿಂದಲೂ ದೇವರ ಆರಾಧನೆಯ ಕೇಂದ್ರವಾಗಿ ಅಂಗೀಕರಿಸಲ್ಪಟ್ಟಿದ್ದ ಸ್ಥಳವು, ಯೆಹೂದ್ಯರ ದಂಗೆಯನ್ನು ಅಡಗಿಸಲಿಕ್ಕಾಗಿ ಬಂದಂಥ ರೋಮನ್ ಸೈನಿಕರಿಂದ ಸಾ.ಶ. 70ರಲ್ಲಿ ನಾಶಗೊಳಿಸಲ್ಪಟ್ಟಿತು. * ಆ ದೇವಾಲಯವು ಎಂದಿಗೂ ಪುನರ್ನಿರ್ಮಿಸಲ್ಪಡಲಿಲ್ಲ. ಏಳನೆಯ ಶತಮಾನದಲ್ಲಿ, ಡೋಮ್ ಆಫ್ ದ ರಾಕ್ ಎಂದು ಪ್ರಸಿದ್ಧವಾಗಿರುವ ಮುಸ್ಲಿಮ್ ಮಸೀದಿಯು ಅಲ್ಲಿ ನಿರ್ಮಿಸಲ್ಪಟ್ಟಿತು, ಮತ್ತು ಈ ಮುಂಚೆ ಯೆಹೂದ್ಯರ ಆರಾಧನಾ ಸ್ಥಳವಾಗಿದ್ದ ಸ್ಥಳದಲ್ಲೇ ಇಂದಿನ ವರೆಗೂ ಇದು ಅಸ್ತಿತ್ವದಲ್ಲಿದೆ.
ಯೇಸುವಿನ ಹಿಂಬಾಲಕರಿಗೆ ಆರಾಧನಾ ಏರ್ಪಾಡು ಯಾವ ರೀತಿಯಲ್ಲಿತ್ತು? ಯೆಹೂದಿ ಹಿನ್ನೆಲೆಯಿಂದ ಬಂದವರಾಗಿದ್ದ ಆದಿ ಕ್ರೈಸ್ತರು, ಅತಿ ಬೇಗನೆ ನಾಶಗೊಳಿಸಲ್ಪಡಲಿದ್ದ ದೇವಾಲಯದಲ್ಲಿ ದೇವರಿಗೆ ಆರಾಧನೆ ಸಲ್ಲಿಸುವುದನ್ನು ಮುಂದುವರಿಸಲಿದ್ದರೋ? ಯೆಹೂದ್ಯೇತರ ಕ್ರೈಸ್ತರು ದೇವರನ್ನು ಎಲ್ಲಿ ಆರಾಧಿಸಲಿದ್ದರು? ಕ್ರೈಸ್ತಪ್ರಪಂಚದ ಧಾರ್ಮಿಕ ಕಟ್ಟಡಗಳು ಈ ದೇವಾಲಯಕ್ಕೆ ಒಂದು ಬದಲಿಯಾಗಿ ಕಾರ್ಯನಡಿಸಲಿದ್ದವೋ? ಸಮಾರ್ಯದ ಒಬ್ಬ ಸ್ತ್ರೀಯೊಂದಿಗೆ ಯೇಸು ನಡೆಸಿದ ಸಂಭಾಷಣೆಯು ಈ ವಿಷಯದಲ್ಲಿ ನಮಗೆ ಒಳನೋಟವನ್ನು ನೀಡುತ್ತದೆ.
ಶತಮಾನಗಳ ವರೆಗೆ, ಸಮಾರ್ಯದಲ್ಲಿದ್ದ ಗೆರಿಜ್ಜೀಮ್ ಬೆಟ್ಟದ ಮೇಲಿದ್ದ ಒಂದು ದೊಡ್ಡ ಆಲಯದಲ್ಲಿ ಸಮಾರ್ಯದವರು ದೇವರನ್ನು ಆರಾಧಿಸುತ್ತಿದ್ದರು. ಸಮಾರ್ಯದ ಸ್ತ್ರೀಯು ಯೇಸುವಿಗೆ ಹೇಳಿದ್ದು: “ನಮ್ಮ ಹಿರಿಯರು ಈ ಬೆಟ್ಟದಲ್ಲಿ ದೇವಾರಾಧನೆಮಾಡುತ್ತಿದ್ದರು; ಆದರೆ ನೀವು ಆರಾಧನೆಮಾಡತಕ್ಕ ಸ್ಥಳವು ಯೆರೂಸಲೇಮಿನಲ್ಲಿ ಅದೆ ಅನ್ನುತ್ತೀರಿ.” ಇದಕ್ಕೆ ಉತ್ತರವಾಗಿ ಯೇಸು ಹೇಳಿದ್ದು: “ಅಮ್ಮಾ, ನಾನು ಹೇಳುವ ಮಾತನ್ನು ನಂಬು; ಒಂದು ಕಾಲ ಬರುತ್ತದೆ. ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸಬೇಕಾದರೆ ಈ ಬೆಟ್ಟಕ್ಕೂ ಹೋಗುವದಿಲ್ಲ, ಯೆರೂಸಲೇಮಿಗೂ ಹೋಗುವದಿಲ್ಲ.” ಇನ್ನುಮುಂದೆ ಯೆಹೋವನ ಆರಾಧನೆಯಲ್ಲಿ ಒಂದು ಭೌತಿಕ ದೇವಾಲಯದ ಅಗತ್ಯವಿರಲಿಲ್ಲ. ಏಕೆಂದರೆ ಯೇಸು ವಿವರಿಸಿದ್ದು: “ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು.” (ಯೋಹಾನ 4:20, 21, 24) ಸಮಯಾನಂತರ ಅಪೊಸ್ತಲ ಪೌಲನು ಅಥೇನೆ ಪಟ್ಟಣದ ಜನರಿಗೆ ಹೇಳಿದ್ದು: “ಜಗತ್ತನ್ನೂ ಅದರಲ್ಲಿರುವ ಎಲ್ಲಾ ವಸ್ತುಗಳನ್ನೂ ಉಂಟು ಮಾಡಿದ ದೇವರು ಭೂಮ್ಯಾಕಾಶಗಳ ಒಡೆಯನಾಗಿರುವದರಿಂದ ಆತನು ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವವನಲ್ಲ.”—ಅ. ಕೃತ್ಯಗಳು 17:24.
ಕ್ರೈಸ್ತಪ್ರಪಂಚದ ಧಾರ್ಮಿಕ ಕಟ್ಟಡಗಳಿಗೂ ಕ್ರೈಸ್ತಪೂರ್ವ ಶಕದ ದೇವಾಲಯದ ಏರ್ಪಾಡಿಗೂ ಯಾವುದೇ ಸಂಬಂಧವಿಲ್ಲ. ಮತ್ತು ಅಂಥ ಸ್ಥಳಗಳನ್ನು ನಿರ್ಮಿಸಲು ಪ್ರಥಮ ಶತಮಾನದ ಕ್ರೈಸ್ತರಿಗೆ ಯಾವುದೇ ಕಾರಣವಿರಲಿಲ್ಲ. ಆದರೂ, ಅಪೊಸ್ತಲರ ಮರಣಾನಂತರ, ಮುಂತಿಳಿಸಲ್ಪಟ್ಟಂತೆ ಸತ್ಯ ಬೋಧನೆಗಳಿಂದ ವಿಪಥಗೊಳ್ಳುವಿಕೆ, ಅಂದರೆ ಧರ್ಮಭ್ರಷ್ಟತೆಯು ಸಂಭವಿಸಿತು. (ಅ. ಕೃತ್ಯಗಳು 20:29, 30) ಸಾ.ಶ. 313ರಲ್ಲಿ ರೋಮನ್ ಚಕ್ರವರ್ತಿಯಾದ ಕಾನ್ಸ್‌ಟೆಂಟೀನನು ಕ್ರೈಸ್ತಧರ್ಮಕ್ಕೆ ಮತಾಂತರವಾಗುವುದಕ್ಕಿಂತ ಅನೇಕ ವರ್ಷಗಳ ಹಿಂದೆಯೇ, ಕ್ರೈಸ್ತರು ಎಂದು ಹೇಳಿಕೊಂಡ ಜನರು ಯೇಸು ಕಲಿಸಿದ್ದಂಥ ವಿಷಯಗಳಿಂದ ವಿಮುಖರಾಗಲು ಆರಂಭಿಸಿದ್ದರು.
“ಕ್ರೈಸ್ತಧರ್ಮ”ವನ್ನು ವಿಧರ್ಮಿ ರೋಮನ್ ಧರ್ಮದೊಂದಿಗೆ ಐಕ್ಯಗೊಳಿಸಲು ಕಾನ್ಸ್‌ಟೆಂಟೀನನು ನೆರವನ್ನಿತ್ತನು. ದಿ ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ ಹೇಳುವುದು: “ರೋಮ್‌ನಲ್ಲಿ ದೊಡ್ಡ ದೊಡ್ಡ ಕ್ರೈಸ್ತ ಬಸಿಲಿಕ ಚರ್ಚುಗಳ ನಿರ್ಮಾಣ ಯೋಜನೆಗೆ ಕಾನ್ಸ್‌ಟೆಂಟೀನನು ತಾನೇ ಅಪ್ಪಣೆ ನೀಡಿದ್ದನು: ಸೆಂಟ್ ಪೀಟರ್ಸ್, ಸಾನ್ ಪಾಓಲೋ ಫೂ ಓರೀ ಲೆ ಮೂರಾ, ಮತ್ತು ಎಸ್. ಜೋವಾನೀ ಇನ್ ಲಾಟೆರಾನೋ. ಅವನು . . . ಶಿಲುಬೆಯಾಕಾರದ ವಾಸ್ತುಶಿಲ್ಪ ವಿನ್ಯಾಸವನ್ನು ನಿರ್ಮಿಸಿದನು, ಮತ್ತು ಅದು ಮಧ್ಯ ಯುಗಗಳಾದ್ಯಂತ ಪಶ್ಚಿಮ ಯೂರೋಪಿನಲ್ಲಿರುವ ಚರ್ಚುಗಳಿಗೆ ಪ್ರಮಾಣಭೂತವಾಗಿ ಪರಿಣಮಿಸಿತು.” ರೋಮ್‌ನ ಪುನರ್ನಿರ್ಮಿಸಲ್ಪಟ್ಟ ಸೆಂಟ್ ಪೀಟರ್ಸ್ ಬಸಿಲಿಕ ಚರ್ಚು, ಈಗಲೂ ರೋಮನ್ ಕ್ಯಾಥೊಲಿಕ್ ಚರ್ಚಿನ ಕೇಂದ್ರವಾಗಿ ಪರಿಗಣಿಸಲ್ಪಡುತ್ತದೆ.
ಇತಿಹಾಸಕಾರರಾದ ವಿಲ್ ಡ್ಯೂರಾಂಟ್ ಅವರು ಹೇಳುವುದು: “ಚರ್ಚು ಕೆಲವು ಧಾರ್ಮಿಕ ಪದ್ಧತಿಗಳನ್ನು ಹಾಗೂ ಕ್ರೈಸ್ತಪೂರ್ವ [ವಿಧರ್ಮಿ] ರೋಮ್‌ನಲ್ಲಿ ಸರ್ವಸಾಮಾನ್ಯವಾಗಿದ್ದ ಆರಾಧನಾ ವಿಧಾನಗಳನ್ನು ಸ್ವೀಕರಿಸಿತು.” ಇದರಲ್ಲಿ “ಬಸಿಲಿಕ ಚರ್ಚಿನ ವಾಸ್ತುಶಿಲ್ಪವು” ಒಳಗೂಡಿತ್ತು. 10ರಿಂದ 15ನೆಯ ಶತಮಾನಗಳ ವರೆಗೆ, ಚರ್ಚುಗಳು ಹಾಗೂ ಕತೀಡ್ರಲ್‌ಗಳ ಕಟ್ಟುವಿಕೆಯಲ್ಲಿ ಥಟ್ಟನೆ ಏರಿಕೆಯುಂಟಾಯಿತು ಮತ್ತು ವಾಸ್ತುಶಿಲ್ಪಕ್ಕೆ ಮಹತ್ತರವಾದ ಒತ್ತುನೀಡಲ್ಪಟ್ಟಿತ್ತು. ಆ ಸಮಯದಲ್ಲೇ, ಈಗ ಕಲಾಸೌಂದರ್ಯವುಳ್ಳ ಕಟ್ಟಡಗಳು ಎಂದು ಪರಿಗಣಿಸಲಾಗುತ್ತಿರುವ ಕ್ರೈಸ್ತಪ್ರಪಂಚದ ಭವ್ಯ ಸೌಧಗಳಲ್ಲಿ ಅನೇಕವು ಅಸ್ತಿತ್ವಕ್ಕೆ ಬಂದವು.
ಚರ್ಚಿನಲ್ಲಿ ಆರಾಧನೆಯನ್ನು ಸಲ್ಲಿಸುವ ಮೂಲಕ ಜನರು ಯಾವಾಗಲೂ ಆತ್ಮಿಕ ಚೈತನ್ಯವನ್ನು ಹಾಗೂ ಉತ್ತೇಜನವನ್ನು ಕಂಡುಕೊಂಡಿದ್ದಾರೋ? “ಧರ್ಮದಲ್ಲಿ ಯಾವುದು ಬಳಲಿಸುವ ಹಾಗೂ ಆಯಾಸಕರವಾಗಿರುವ ಸಂಗತಿಯಾಗಿದೆಯೋ ಅದೆಲ್ಲವನ್ನೂ ಚರ್ಚು ಪ್ರತಿನಿಧಿಸುತ್ತದೆ ಎಂಬುದು ನನ್ನ ಅಭಿಪ್ರಾಯ” ಎಂದು ಬ್ರಸಿಲ್‌ನ ಫ್ರಾನ್‌ಸೀಸ್ಕೂ ಹೇಳುತ್ತಾರೆ. “ಚರ್ಚಿನ ಮಾಸ್ ಅರ್ಥಹೀನವಾದ, ಪದೇ ಪದೇ ಮಾಡಲ್ಪಡುವ ಮತಾಚರಣೆಯಾಗಿದ್ದರಿಂದ, ಅದು ನನ್ನ ನೈಜ ಆವಶ್ಯಕತೆಗಳನ್ನು ತೃಪ್ತಿಪಡಿಸಲು ಯಾವ ರೀತಿಯಲ್ಲೂ ಸಹಾಯಕರವಾಗಿರಲಿಲ್ಲ. ಮಾಸ್ ಮುಗಿದಾಗ ಒಂದು ರೀತಿಯ ಬಿಡುಗಡೆಯ
ಅನಿಸಿಕೆಯಾಗುತ್ತಿತ್ತು.” ಆದರೂ, ನಿಜ ವಿಶ್ವಾಸಿಗಳು ಒಟ್ಟುಗೂಡಿಬರುವಂತೆ ಆಜ್ಞಾಪಿಸಲ್ಪಟ್ಟಿದ್ದಾರೆ. ಅವರು ಕೂಟಗಳಿಗಾಗಿ ಯಾವ ಏರ್ಪಾಡನ್ನು ಅನುಸರಿಸಬೇಕು?“ಅವರ ಮನೆಯಲ್ಲಿ ಕೂಡುವ ಸಭೆ”
ಒಟ್ಟುಗೂಡಿ ಬರುವ ಕ್ರೈಸ್ತ ವಿಧಕ್ಕಾಗಿ ಮಾದರಿಯು, ಪ್ರಥಮ ಶತಮಾನದ ವಿಶ್ವಾಸಿಗಳು ಹೇಗೆ ಕೂಡಿಬರುತ್ತಿದ್ದರು ಎಂಬುದನ್ನು ಪರೀಕ್ಷಿಸುವುದರಿಂದ ತಿಳಿದುಬರುತ್ತದೆ. ಸಾಮಾನ್ಯವಾಗಿ ಅವರು ಖಾಸಗಿ ಮನೆಗಳಲ್ಲಿ ಕೂಡಿಬರುತ್ತಿದ್ದರು ಎಂದು ಶಾಸ್ತ್ರವಚನಗಳು ಸೂಚಿಸುತ್ತವೆ. ಉದಾಹರಣೆಗೆ, ಅಪೊಸ್ತಲ ಪೌಲನು ಬರೆದುದು: “ಕ್ರಿಸ್ತ ಯೇಸುವಿನ ಸೇವೆಯಲ್ಲಿ ನನ್ನ ಜೊತೆಕೆಲಸದವರಾದ ಪ್ರಿಸ್ಕಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ಹೇಳಿರಿ. ಅವರ ಮನೆಯಲ್ಲಿ ಕೂಡುವ ಸಭೆಗೆ ಸಹ ನನ್ನ ವಂದನೆಯನ್ನು ಹೇಳಿರಿ.” (ರೋಮಾಪುರ 16:3, 5; ಕೊಲೊಸ್ಸೆ 4:15; ಫಿಲೆಮೋನ 2) “ಸಭೆ” (ಎಕ್ಲೀಸೀಆ) ಎಂಬುದಕ್ಕಾಗಿರುವ ಗ್ರೀಕ್ ಪದವು, ಕಿಂಗ್ ಜೇಮ್ಸ್ ವರ್ಷನ್‌ನಂತಹ ಕೆಲವು ಇಂಗ್ಲಿಷ್ ಭಾಷಾಂತರಗಳಲ್ಲಿ “ಚರ್ಚ್” ಎಂದು ಭಾಷಾಂತರಿಸಲ್ಪಟ್ಟಿದೆ.
ಆರಂಭದ ಕ್ರೈಸ್ತ ಸಭೆಗಳಲ್ಲಿ ಕೂಟಗಳು ಹೇಗೆ ನಡೆಸಲ್ಪಡುತ್ತಿದ್ದವು? ಶಿಷ್ಯ ಯಾಕೋಬನು ಒಂದು ಕ್ರೈಸ್ತ ಕೂಟವನ್ನು ಸೂಚಿಸಲಿಕ್ಕಾಗಿ ಸೀನಾಗಾಘೀನ್ (ಸಭಾಮಂದಿರ) ಎಂಬ ಗ್ರೀಕ್ ಪದದ ಒಂದು ರೂಪವನ್ನು ಉಪಯೋಗಿಸುತ್ತಾನೆ. (ಯಾಕೋಬ 2:2) ಈ ಗ್ರೀಕ್ ಪದದ ಅರ್ಥ “ಒಟ್ಟುಗೂಡಿಸುವುದು” ಎಂದಾಗಿದೆ ಮತ್ತು ಎಕ್ಲೀಸೀಆ ಪದದೊಂದಿಗೆ ಪರ್ಯಾಯ ಕ್ರಮದಲ್ಲಿ ಉಪಯೋಗಿಸಲ್ಪಟ್ಟಿದೆ. ಆದರೂ, ಸಮಯಾನಂತರ “ಸೀನಾಗಾಘ್” ಎಂಬ ಪದವು, ಸಮ್ಮೇಳನವು ನಡೆಸಲ್ಪಡುತ್ತಿದ್ದ ಸ್ಥಳದ ಅಥವಾ ಕಟ್ಟಡದ ಅರ್ಥವನ್ನು ತೆಗೆದುಕೊಂಡಿತು. ಪ್ರಥಮ ಯೆಹೂದಿ ಕ್ರೈಸ್ತರು ಒಂದು ಸಭಾಮಂದಿರದಲ್ಲಿ ಏನು ನಡೆಯುತ್ತಿತ್ತೋ ಅದರೊಂದಿಗೆ ಚಿರಪರಿಚಿತರಾಗಿದ್ದರು. *
ತಮ್ಮ ವಾರ್ಷಿಕ ಹಬ್ಬಗಳಿಗಾಗಿ ಯೆಹೂದ್ಯರು ಯೆರೂಸಲೇಮಿನಲ್ಲಿದ್ದ ದೇವಾಲಯದಲ್ಲಿ ಕೂಡಿಬಂದರಾದರೂ, ಸಭಾಮಂದಿರಗಳು ಯೆಹೋವನ ಕುರಿತು ಕಲಿಯಲಿಕ್ಕಾಗಿ ಮತ್ತು ಧರ್ಮಶಾಸ್ತ್ರದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳಲಿಕ್ಕಾಗಿರುವ ಸ್ಥಳಿಕ ಸ್ಥಳಗಳಾಗಿ ಕಾರ್ಯನಡಿಸಿದವು. ಸಭಾಮಂದಿರಗಳಲ್ಲಿ ನಡೆಸಲ್ಪಡುತ್ತಿದ್ದ ಬೇರೆ ಬೇರೆ ಪದ್ಧತಿಗಳಲ್ಲಿ, ಪ್ರಾರ್ಥನೆ ಮತ್ತು ಶಾಸ್ತ್ರವಚನಗಳ ವಾಚನ ಹಾಗೂ ಶಾಸ್ತ್ರವಚನಗಳ ಸವಿವರವಾದ ಚರ್ಚೆ ಮತ್ತು ಪ್ರಬೋಧನೆಯು ಒಳಗೂಡಿದ್ದಂತೆ ತೋರಿಬರುತ್ತದೆ. ಪೌಲನೂ ಅವನೊಂದಿಗಿದ್ದ ಇತರರೂ ಅಂತಿಯೋಕ್ಯದಲ್ಲಿದ್ದ ಒಂದು ಸಭಾಮಂದಿರದೊಳಕ್ಕೆ ಹೋದಾಗ, “ಸಭಾಮಂದಿರದ ಯಜಮಾನರು—ಸಹೋದರರೇ, ಜನರಿಗೆ ಹೇಳತಕ್ಕ ಬುದ್ಧಿಮಾತೇನಾದರೂ ನಿಮಗಿದ್ದರೆ ಹೇಳಿರಿ” ಎಂದು ಅವರಿಗೆ ಹೇಳಿದರು. (ಅ. ಕೃತ್ಯಗಳು 13:15) ಪ್ರಥಮ ಶತಮಾನದ ಯೆಹೂದಿ ಕ್ರೈಸ್ತರು ಖಾಸಗಿ ಮನೆಗಳಲ್ಲಿ ಕೂಡಿಬಂದಾಗ, ತಮ್ಮ ಕೂಟಗಳನ್ನು ಶಾಸ್ತ್ರಕ್ಕನುಸಾರ ಬೋಧಪ್ರದವಾಗಿಯೂ ಆತ್ಮಿಕವಾಗಿ ಭಕ್ತಿವೃದ್ಧಿಮಾಡುವಂಥದ್ದಾಗಿಯೂ ಮಾಡುವ ಮೂಲಕ, ತದ್ರೀತಿಯ ಮಾದರಿಯನ್ನು ಅನುಸರಿಸಿದರು ಎಂಬುದರಲ್ಲಿ ಸಂದೇಹವಿಲ್ಲ.
ಉತ್ತೇಜನವನ್ನೀಯಲಿಕ್ಕಾಗಿ ಸಭೆಗಳು
ಆದಿ ಕ್ರೈಸ್ತರಂತೆಯೇ ಇಂದು ಯೆಹೋವನ ಸಾಕ್ಷಿಗಳು, ಬೈಬಲಿನ ಉಪದೇಶವನ್ನು ಪಡೆದುಕೊಳ್ಳಲಿಕ್ಕಾಗಿ ಮತ್ತು ಹಿತಕರವಾದ ಸಹವಾಸದಲ್ಲಿ ಆನಂದಿಸಲಿಕ್ಕಾಗಿ ಸಾಧಾರಣವಾದ ಆರಾಧನಾ ಸ್ಥಳಗಳಲ್ಲಿ ಕೂಡಿಬರುತ್ತಾರೆ. ಅನೇಕ ವರ್ಷಗಳ ವರೆಗೆ ಅವರು ಖಾಸಗಿ ಮನೆಗಳಲ್ಲಿ ಮಾತ್ರ ಕೂಡಿಬಂದರು ಮತ್ತು ಈಗಲೂ ಕೆಲವು ಸ್ಥಳಗಳಲ್ಲಿ ಅವರು ಹೀಗೆ ಮಾಡುತ್ತಾರೆ. ಆದರೆ ಈಗ ಸಭೆಗಳ ಸಂಖ್ಯೆಯು 90,000ಕ್ಕಿಂತಲೂ ಹೆಚ್ಚಿದೆ ಮತ್ತು ಅವರ ಮುಖ್ಯ ಕೂಟದ ಸ್ಥಳಗಳನ್ನು ರಾಜ್ಯ ಸಭಾಗೃಹಗಳೆಂದು ಕರೆಯಲಾಗುತ್ತದೆ. ಈ ಕಟ್ಟಡಗಳು ಆಕರ್ಷಣೋದ್ದೇಶವುಳ್ಳವುಗಳು ಆಗಿರುವುದಿಲ್ಲ. ಅಥವಾ ಹೊರತೋರಿಕೆಯಲ್ಲಿ ಚರ್ಚುಗಳಂತೆಯೂ ಇಲ್ಲ. ಅವು ಪ್ರಾಯೋಗಿಕವಾದವುಗಳಾಗಿವೆ ಮತ್ತು ಸಾಧಾರಣ ರಚನೆಯ ಕಟ್ಟಡಗಳಾಗಿದ್ದು, ದೇವರ ವಾಕ್ಯದಿಂದ ವಿಷಯಗಳನ್ನು ಕೇಳಿಸಿಕೊಳ್ಳಲು ಮತ್ತು ಕಲಿಯಲು, ಸಾಪ್ತಾಹಿಕ ಕೂಟಗಳಿಗಾಗಿ 100ರಿಂದ 200 ಜನರು ಒಟ್ಟುಗೂಡಲಿಕ್ಕಾಗಿ ಸ್ಥಳಾವಕಾಶವನ್ನು ನೀಡುವಂಥವುಗಳಾಗಿವೆ.
ಯೆಹೋವನ ಸಾಕ್ಷಿಗಳ ಅಧಿಕಾಂಶ ಸಭೆಗಳು ವಾರಕ್ಕೆ ಮೂರಾವರ್ತಿ ಕೂಡಿಬರುತ್ತವೆ. ಒಂದು ಕೂಟವು ಪ್ರಚಲಿತ ಆಸಕ್ತಿಯ ವಿಷಯಭಾಗದ ಕುರಿತಾದ ಒಂದು ಬಹಿರಂಗ ಭಾಷಣವಾಗಿದೆ. ಅದರ ನಂತರ ಕಾವಲಿನಬುರುಜು ಪತ್ರಿಕೆಯನ್ನು ಮೂಲ ವಿಷಯವಸ್ತುವಾಗಿ ಉಪಯೋಗಿಸುತ್ತಾ, ಒಂದು ಬೈಬಲಾಧಾರಿತ ಮುಖ್ಯ ವಿಷಯ ಅಥವಾ ಪ್ರವಾದನೆಯ ಮೇಲಾಧಾರಿತವಾದ ಒಂದು ಅಧ್ಯಯನವು ನಡೆಯುತ್ತದೆ. ಇನ್ನೊಂದು ಕೂಟವು, ಬೈಬಲ್ ಸಂದೇಶವನ್ನು ಪ್ರಸ್ತುತಪಡಿಸುವುದರಲ್ಲಿ ತರಬೇತಿಯನ್ನು ಒದಗಿಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿರುವ ಒಂದು ಶಾಲೆಯಾಗಿದೆ. ತದನಂತರ ಕ್ರೈಸ್ತ ಶುಶ್ರೂಷೆಗಾಗಿ ಪ್ರಾಯೋಗಿಕ ಸಲಹೆಗಳನ್ನು ಕೊಡಲಿಕ್ಕಾಗಿ ವಿಶೇಷವಾಗಿ ಮೀಸಲಾಗಿಡಲ್ಪಟ್ಟಿರುವ ಒಂದು ಕೂಟವು ನಡೆಯುತ್ತದೆ. ವಾರಕ್ಕೊಮ್ಮೆ ಸಾಕ್ಷಿಗಳು ಬೈಬಲ್ ಅಧ್ಯಯನಕ್ಕಾಗಿ ಖಾಸಗಿ ಮನೆಗಳಲ್ಲಿ ಚಿಕ್ಕ ಚಿಕ್ಕ ಗುಂಪುಗಳಾಗಿಯೂ ಕೂಡಿಬರುತ್ತಾರೆ. ಈ ಎಲ್ಲಾ ಕೂಟಗಳು ಸಾರ್ವಜನಿಕರಿಗಾಗಿ ತೆರೆದಿವೆ. ಹಣ ಸಂಗ್ರಹಣೆಯನ್ನು ಎಂದೂ ಮಾಡಲಾಗುವುದಿಲ್ಲ.
ಈ ಮುಂಚೆ ತಿಳಿಸಲ್ಪಟ್ಟ ಫ್ರಾನ್‌ಸೀಸ್ಕೂ ಅವರು ರಾಜ್ಯ ಸಭಾಗೃಹದಲ್ಲಿ ನಡೆಸಲ್ಪಡುವ ಕೂಟಗಳನ್ನು ತುಂಬ ಪ್ರಯೋಜನದಾಯಕವಾಗಿ ಕಂಡುಕೊಂಡರು. ಅವರು ಹೇಳುವುದು: “ನಾನು ಸಂದರ್ಶಿಸಿದ ಪ್ರಥಮ ಕೂಟದ ಸ್ಥಳವು ನಗರದ ಕೇಂದ್ರಭಾಗದಲ್ಲಿದ್ದ ಒಂದು ಸುವ್ಯವಸ್ಥಿತ ಕಟ್ಟಡವಾಗಿತ್ತು, ಮತ್ತು ಆ ಸಭಾಗೃಹವನ್ನು ಬಿಟ್ಟು ಹೊರಗೆ ಬಂದಾಗ ಮನಸ್ಸಿನಲ್ಲಿ ಪ್ರಸನ್ನಕರವಾದ ಭಾವನೆಯಿತ್ತು. ಹಾಜರಿದ್ದವರು ತುಂಬ ಸ್ನೇಹಪರರಾಗಿದ್ದರು, ಮತ್ತು ಅವರ ನಡುವೆ ಇದ್ದ ಪ್ರೀತಿಯನ್ನು ನಾನು ಗ್ರಹಿಸಸಾಧ್ಯವಿತ್ತು. ನಾನು ಪುನಃ ಅಲ್ಲಿಗೆ ಹೋಗಲು ಆತುರನಾಗಿದ್ದೆ. ವಾಸ್ತವದಲ್ಲಿ, ಅಂದಿನಿಂದ ನಾನೊಂದು ಕೂಟಕ್ಕೂ ತಪ್ಪಿಸಿಕೊಂಡಿಲ್ಲ. ಈ ಕ್ರೈಸ್ತ ಕೂಟಗಳು ಆಸಕ್ತಿಕರವಾಗಿವೆ, ಮತ್ತು ಅವು ನನ್ನ ಆತ್ಮಿಕ ಆವಶ್ಯಕತೆಗಳನ್ನು ಪೂರೈಸುತ್ತವೆ. ಕೆಲವೊಂದು ಕಾರಣಗಳಿಗಾಗಿ ನನಗೆ ನಿರುತ್ಸಾಹದ ಅನಿಸಿಕೆಯಾಗುತ್ತಿರುವಾಗಲೂ, ಮನೆಗೆ ಹಿಂದಿರುಗುವಾಗ ನಾನು ಉತ್ತೇಜಿತನಾಗಿರುತ್ತೇನೆ ಎಂಬ ಭರವಸೆಯಿಂದ ನಾನು ರಾಜ್ಯ ಸಭಾಗೃಹಕ್ಕೆ ಹೋಗುತ್ತೇನೆ.”
ಬೈಬಲ್ ಶಿಕ್ಷಣ, ಭಕ್ತಿವೃದ್ಧಿಮಾಡುವಂಥ ಸಹವಾಸ, ಹಾಗೂ ದೇವರನ್ನು ಸ್ತುತಿಸಲಿಕ್ಕಾಗಿರುವ ಅವಕಾಶವು ಸಹ ಯೆಹೋವನ ಸಾಕ್ಷಿಗಳ ಕ್ರೈಸ್ತ ಕೂಟಗಳಲ್ಲಿ ನಿಮಗಾಗಿ ಕಾದಿರುತ್ತದೆ. ನಿಮ್ಮ ಮನೆಗೆ ಅತಿ ಸಮೀಪದಲ್ಲಿರುವ ರಾಜ್ಯ ಸಭಾಗೃಹಕ್ಕೆ ಹಾಜರಾಗಲು ನಿಮಗೆ ನಮ್ಮ ಹಾರ್ದಿಕ ಆಮಂತ್ರಣವಿದೆ. ಅಲ್ಲಿ ಬರುವಲ್ಲಿ ಖಂಡಿತವಾಗಿಯೂ ನೀವು ಆನಂದಿಸುವಿರಿ.
[ಪಾದಟಿಪ್ಪಣಿಗಳು]
^ ಪ್ಯಾರ. 11 ಆ ದೇವಾಲಯವು ರೋಮನರಿಂದ ಸಂಪೂರ್ಣವಾಗಿ ನೆಲಸಮಗೊಳಿಸಲ್ಪಟ್ಟಿತು. ಬಹುದೂರದ ಸ್ಥಳಗಳಿಂದ ಪ್ರಾರ್ಥಿಸಲಿಕ್ಕಾಗಿ ಅನೇಕ ಯೆಹೂದ್ಯರು ಎಲ್ಲಿಗೆ ಬರುತ್ತಾರೋ ಆ ಗೋಳಾಟದ ಗೋಡೆ (ವೇಲಿಂಗ್ ವಾಲ್) ಎಂಬ ಸ್ಥಳವು ಆ ದೇವಾಲಯದ ಒಂದು ಭಾಗವಾಗಿರುವುದಿಲ್ಲ. ಅದು, ಆ ದೇವಾಲಯದ ಅಂಗಣದ ಗೋಡೆಯ ಕೇವಲ ಒಂದು ಭಾಗವಾಗಿದೆ ಅಷ್ಟೇ.
^ ಪ್ಯಾರ. 20 ಬಾಬೆಲಿನಲ್ಲಿ 70 ವರ್ಷಗಳ ದೇಶಭ್ರಷ್ಟ ಸ್ಥಿತಿಯಲ್ಲಿದ್ದ ಸಮಯದಲ್ಲಿ ದೇವಾಲಯವು ಅಸ್ತಿತ್ವದಲ್ಲಿಲ್ಲದಿದ್ದಾಗ ಅಥವಾ ದೇಶಭ್ರಷ್ಟ ಸ್ಥಿತಿಯಿಂದ ಜನರು ಹಿಂದಿರುಗಿ ಬಂದ ಸ್ವಲ್ಪ ಸಮಯಾನಂತರ ದೇವಾಲಯವು ಇನ್ನೂ ಕಟ್ಟಲ್ಪಡುತ್ತಿದ್ದ ಸಮಯದಲ್ಲಿ, ಸಭಾಮಂದಿರಗಳು ಸ್ಥಾಪಿಸಲ್ಪಟ್ಟಿರುವುದು ಸಂಭವನೀಯ. ಪ್ರಥಮ ಶತಮಾನದಷ್ಟಕ್ಕೆ, ಪ್ಯಾಲೆಸ್ಟೀನ್‌ನಲ್ಲಿದ್ದ ಪ್ರತಿಯೊಂದು ಪಟ್ಟಣದಲ್ಲಿ ಅದರದ್ದೇ ಆದ ಸಭಾಮಂದಿರವಿತ್ತು, ಮತ್ತು ದೊಡ್ಡ ಪಟ್ಟಣಗಳಲ್ಲಿ ಒಂದಕ್ಕಿಂತಲೂ ಹೆಚ್ಚು ಸಭಾಮಂದಿರಗಳಿದ್ದವು.
[ಪುಟ 4, 5ರಲ್ಲಿರುವ ಚಿತ್ರಗಳು]
ದೇವದರ್ಶನದ ಗುಡಾರ ಮತ್ತು ಸಮಯಾನಂತರ ದೇವಾಲಯಗಳು ಯೆಹೋವನ ಆರಾಧನೆಯ ಅತ್ಯುತ್ತಮ ಕೇಂದ್ರಗಳಾಗಿ ಕಾರ್ಯನಡಿಸಿದವು
[ಪುಟ 6ರಲ್ಲಿರುವ ಚಿತ್ರ]
ರೋಮ್‌ನಲ್ಲಿರುವ ಸೆಂಟ್ ಪೀಟರ್ಸ್ ಬಸಿಲಿಕ ಚರ್ಚು
[ಪುಟ 7ರಲ್ಲಿರುವ ಚಿತ್ರ]
ಆದಿ ಕ್ರೈಸ್ತರು ಖಾಸಗಿ ಮನೆಗಳಲ್ಲಿ ಕೂಡಿಬಂದರು
[ಪುಟ 8, 9ರಲ್ಲಿರುವ ಚಿತ್ರಗಳು]
ಯೆಹೋವನ ಸಾಕ್ಷಿಗಳು ಖಾಸಗಿ ಮನೆಗಳಲ್ಲಿ ಮತ್ತು ರಾಜ್ಯ ಸಭಾಗೃಹಗಳಲ್ಲಿ ಕ್ರೈಸ್ತ ಕೂಟಗಳನ್ನು ನಡೆಸುತ್ತಾರೆ