ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆನಂದವನ್ನು ತರುವಂತೆ ಕೊಡುವುದು

ಆನಂದವನ್ನು ತರುವಂತೆ ಕೊಡುವುದು

ಆನಂದವನ್ನು ತರುವಂತೆ ಕೊಡುವುದು

ಬ್ರಸಿಲ್‌ನ ಈಶಾನ್ಯ ಭಾಗದ ಗುಡಿಸಲುಗಳಲ್ಲೊಂದರಲ್ಲಿ ಜೀವಿಸುವ ಸೆನೀವಾಲ್‌, ತಾನು ಆಸ್ಪತ್ರೆಯ ಕಾವಲುಗಾರನಾಗಿ ಗಳಿಸುತ್ತಿದ್ದ ಅತ್ಯಲ್ಪ ಸಂಬಳದಿಂದ ತನ್ನ ಹೆಂಡತಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದನು. ಇಷ್ಟು ಕಷ್ಟವಿದ್ದರೂ ಸೆನೀವಾಲ್‌ ಶುದ್ಧಾಂತಃಕರಣದಿಂದ ತಪ್ಪದೇ ತನ್ನ ದಶಮಾಂಶವನ್ನು ಕೊಡುತ್ತಿದ್ದನು. ತನ್ನ ಹೊಟ್ಟೆಯನ್ನು ಸವರುತ್ತಾ ಅವನು ಹೇಳುವುದು: “ನನ್ನ ಕುಟುಂಬ ಕೆಲವು ಸಲ ಹೊಟ್ಟೆಗಿಲ್ಲದೆ ಇರುತ್ತಿತ್ತು. ಆದರೂ, ಎಷ್ಟೇ ತ್ಯಾಗಮಾಡಬೇಕಾಗಿ ಬಂದರೂ ನಾನು ದೇವರಿಗೆ ಅತಿ ಹೆಚ್ಚಿನದ್ದನ್ನು ಕೊಡಬಯಸುತ್ತಿದ್ದೆ.”

ತನ್ನ ಕೆಲಸವನ್ನು ಕಳೆದುಕೊಂಡಾಗಲೂ ಸೆನೀವಾಲ್‌ ದಶಮಾಂಶವನ್ನು ಕೊಡುತ್ತಾ ಬಂದನು. ದೊಡ್ಡ ಮೊತ್ತದ ದಾನವನ್ನು ಕೊಟ್ಟು ದೇವರನ್ನು ಪರೀಕ್ಷಿಸು ಎಂದು ಅವನ ಪಾದ್ರಿಯು ಅವನನ್ನು ಪ್ರೋತ್ಸಾಹಿಸಿದನು. ದೇವರು ಅವನ ಮೇಲೆ ಖಂಡಿತವಾಗಿಯೂ ಆಶೀರ್ವಾದ ಸುರಿಸುವನೆಂಬ ಖಾತ್ರಿಯನ್ನು ಆ ಪಾದ್ರಿಯು ಕೊಟ್ಟನು. ಆದುದರಿಂದ ಸೆನೀವಾಲ್‌ ತನ್ನ ಮನೆಯನ್ನು ಮಾರಿ ಅದರಿಂದ ಬರುವ ಹಣವನ್ನು ಚರ್ಚಿಗೆ ಕೊಡಲು ನಿರ್ಧರಿಸಿದನು.

ಈ ರೀತಿ ಯಥಾರ್ಥವಾಗಿ ಕೊಡುವ ಮನಸ್ಸುಳ್ಳವನು ಸೆನೀವಾಲ್‌ ಮಾತ್ರವಲ್ಲ. ತೀರ ಬಡವರಾಗಿರುವ ಅನೇಕರು ಈ ದಶಮಾಂಶವನ್ನು ಕರ್ತವ್ಯಪರ ಮನೋಭಾವದಿಂದ ಕೊಡುತ್ತಾರೆ. ಏಕೆಂದರೆ ಈ ದಶಮಾಂಶ ಕೊಡುವಿಕೆಯನ್ನು ಬೈಬಲು ಕೇಳಿಕೊಳ್ಳುತ್ತದೆಂದು ಅವರ ಚರ್ಚುಗಳು ಬೋಧಿಸುತ್ತವೆ. ಇದು ನಿಜವೊ?

ದಶಮಾಂಶ ಕೊಡುವಿಕೆ ಮತ್ತು ಧರ್ಮಶಾಸ್ತ್ರ

ದಶಮಾಂಶವನ್ನು ತೆರುವ ಆಜ್ಞೆಯು, ಯೆಹೋವ ದೇವರು ಪುರಾತನ ಇಸ್ರಾಯೇಲಿನ 12 ಕುಲಗಳಿಗೆ 3,500 ವರುಷಗಳಿಗಿಂತಲೂ ಹಿಂದೆ ಕೊಟ್ಟಿದ್ದ ಧರ್ಮಶಾಸ್ತ್ರದ ಭಾಗವಾಗಿತ್ತು. ಇಸ್ರಾಯೇಲ್ಯರು, ಜಮೀನಿನ ಮತ್ತು ಮರದ ಉತ್ಪನ್ನಗಳಲ್ಲಿ ಹತ್ತನೆಯ ಪಾಲನ್ನು ಮತ್ತು ಪಶುಗಳ ಅಭಿವೃದ್ಧಿಯಲ್ಲಿ ಹತ್ತನೆಯದನ್ನು, ಲೇವಿ ಕುಲದವರು ಸಾಕ್ಷಿಗುಡಾರದಲ್ಲಿ ಮಾಡುವ ಸೇವೆಯ ಸಲುವಾಗಿ ಅವರಿಗೆ ಕೊಡಬೇಕೆಂದು ಧರ್ಮಶಾಸ್ತ್ರವು ಆಜ್ಞೆಯನ್ನು ವಿಧಿಸಿತ್ತು.​—ಯಾಜಕಕಾಂಡ 27:30, 32; ಅರಣ್ಯಕಾಂಡ 18:21, 24.

ಆ ಧರ್ಮಶಾಸ್ತ್ರವು ಇಸ್ರಾಯೇಲ್ಯರಿಗೆ ಅತಿ ‘ಕಷ್ಟವಾದದ್ದಾಗಿರದು’ ಎಂದು ಯೆಹೋವನು ಆಶ್ವಾಸನೆ ಕೊಟ್ಟನು. (ಧರ್ಮೋಪದೇಶಕಾಂಡ 30:11) ಅವರು ಎಷ್ಟರ ವರೆಗೆ ದಶಮಾಂಶ ತೆರಿಗೆ ಸೇರಿರುವ ಯೆಹೋವನ ಆಜ್ಞೆಯನ್ನು ಪಾಲಿಸುತ್ತಾರೊ ಅಷ್ಟು ಕಾಲ ಅವರಿಗೆ ಸಮೃದ್ಧ ಬೆಳೆ ಫಲಿಸುವುದೆಂಬ ಆತನ ವಾಗ್ದಾನ ಅವರಿಗಿತ್ತು. ಮತ್ತು ಕೊರತೆಯ ವಿರುದ್ಧ ಸಂರಕ್ಷಣೆಯೋಪಾದಿ, ಜನಾಂಗವು ಧಾರ್ಮಿಕ ಉತ್ಸವಗಳಿಗಾಗಿ ಕೂಡಿಬರುವಾಗ ಉಪಯೋಗಿಸಲ್ಪಡುತ್ತಿದ್ದ ಒಂದು ವಾರ್ಷಿಕ ದಶಮಾಂಶವನ್ನು ಕ್ರಮಬದ್ಧವಾಗಿ ಬದಿಗಿರಿಸಲಾಗುತ್ತಿತ್ತು. ಹೀಗೆ ‘ಅನ್ಯದೇಶದವರೂ ತಾಯಿತಂದೆಯಿಲ್ಲದವರೂ ವಿಧವೆಯರೂ’ ತೃಪ್ತರಾಗಿರಸಾಧ್ಯವಿತ್ತು.​—ಧರ್ಮೋಪದೇಶಕಾಂಡ 14:28, 29; 28:1, 2, 11-14.

ದಶಮಾಂಶವನ್ನು ಕೊಡಲು ತಪ್ಪುವಲ್ಲಿ ನಿರ್ದಿಷ್ಟವಾದ ಶಿಕ್ಷೆಯು ವಿಧಿಸಲ್ಪಡುವ ಏರ್ಪಾಡು ಧರ್ಮಶಾಸ್ತ್ರದಲ್ಲಿ ಇರಲಿಲ್ಲವಾದರೂ, ಪ್ರತಿಯೊಬ್ಬ ಇಸ್ರಾಯೇಲ್ಯನು ಈ ರೀತಿಯಲ್ಲಿ ಸತ್ಯಾರಾಧನೆಯನ್ನು ಬೆಂಬಲಿಸುವ ಬಲವಾದ ನೈತಿಕ ಹಂಗಿಗೊಳಗಾಗಿದ್ದನು. ವಾಸ್ತವದಲ್ಲಿ, ಮಲಾಕಿಯನ ದಿನದಲ್ಲಿ ದಶಮಾಂಶ ಕೊಡುವಿಕೆಯನ್ನು ನಿರ್ಲಕ್ಷಿಸಿದವರ ಮೇಲೆ ಯೆಹೋವನು, ‘ದಶಮಾಂಶ ಮತ್ತು ತನಗೋಸ್ಕರ ಪ್ರತ್ಯೇಕಿಸಬೇಕಾದ ಪದಾರ್ಥಗಳನ್ನು ಕದ್ದವರು’ ಎಂಬ ಆರೋಪವನ್ನು ಹಾಕಿದನು. (ಮಲಾಕಿಯ 3:8) ದಶಮಾಂಶವನ್ನು ಕೊಡದಿರುವ ಕ್ರೈಸ್ತರ ಮೇಲೂ ಅದೇ ಆರೋಪವನ್ನು ಹಾಕಬಹುದೊ?

ಇದರ ಕುರಿತು ಯೋಚಿಸಿರಿ. ಒಂದು ದೇಶದ ಕಾನೂನುಗಳು ಅದರ ಮೇರೆಗಳ ಹೊರಗಡೆ ಸಾಮಾನ್ಯವಾಗಿ ಅನ್ವಯವಾಗುವುದಿಲ್ಲ. ಉದಾಹರಣೆಗೆ, ಬ್ರಿಟನ್‌ನ ವಾಹನ ಚಾಲಕರು ಎಡಬದಿಯಲ್ಲಿ ವಾಹನಗಳನ್ನು ಚಲಿಸಬೇಕೆಂಬ ಕಾಯಿದೆಯು ಫ್ರಾನ್ಸ್‌ನ ವಾಹನ ಚಾಲಕರಿಗೆ ಅನ್ವಯಿಸುವುದಿಲ್ಲ. ತದ್ರೀತಿ, ದಶಮಾಂಶ ತೆರುವ ಕಾಯಿದೆಯು ದೇವರ ಮತ್ತು ಇಸ್ರಾಯೇಲ್‌ ಜನಾಂಗದ ಮಧ್ಯೆ ಮಾತ್ರ ಮಾಡಲ್ಪಟ್ಟ ಒಡಂಬಡಿಕೆಯ ಭಾಗವಾಗಿತ್ತು. (ವಿಮೋಚನಕಾಂಡ 19:3-8; ಕೀರ್ತನೆ 147:19, 20) ಇಸ್ರಾಯೇಲ್ಯರು ಮಾತ್ರ ಈ ಕಾಯಿದೆಯ ನಿರ್ಬಂಧಕ್ಕೊಳಗಾಗಿದ್ದರು.

ಇದಲ್ಲದೆ, ದೇವರು ಎಂದೂ ಬದಲಾಗುವುದಿಲ್ಲ ಎಂಬುದು ನಿಜವಾದರೂ, ಆತನ ಆವಶ್ಯಕತೆಗಳು ಕೆಲವೊಮ್ಮೆ ಬದಲಾಗುತ್ತವೆ. (ಮಲಾಕಿಯ 3:6) ಸಾ.ಶ. 33ರಲ್ಲಿ ಯೇಸುವಿನ ಯಜ್ಞಾರ್ಪಿತ ಮರಣವು, ಧರ್ಮಶಾಸ್ತ್ರವನ್ನು ಮತ್ತು ಅದರೊಂದಿಗೆ ‘ದಶಮಭಾಗಗಳನ್ನು ತೆಗೆದುಕೊಳ್ಳುವ ವಿಷಯದಲ್ಲಿ ಧರ್ಮಶಾಸ್ತ್ರದಲ್ಲಿರುವ ಅಪ್ಪಣೆಯನ್ನು’ ‘ಕೆಡಿಸಿ’ “ಇಲ್ಲದಂತಾಗ”ಮಾಡಿದೆಯೆಂದು ಬೈಬಲು ಖಡಾಖಂಡಿತವಾಗಿ ಹೇಳುತ್ತದೆ.​—ಇಬ್ರಿಯ 7:5, 19; ಕೊಲೊಸ್ಸೆ 2:13, 14; ಎಫೆಸ 2:13-15.

ಕ್ರೈಸ್ತರ ಕೊಡುವಿಕೆ

ಆದರೂ, ಸತ್ಯಾರಾಧನೆಯನ್ನು ಬೆಂಬಲಿಸಲಿಕ್ಕಾಗಿರುವ ಕಾಣಿಕೆಗಳ ಅಗತ್ಯ ಅಲ್ಲಿಗೆ ಕೊನೆಗೊಳ್ಳಲಿಲ್ಲ. ಯೇಸು ತನ್ನ ಶಿಷ್ಯರನ್ನು, ಅವರು ‘ಭೂಲೋಕದ ಕಟ್ಟಕಡೆಯ ವರೆಗೂ ಸಾಕ್ಷಿಗಳಾಗಿರುವಂತೆ’ ನೇಮಿಸಿದ್ದನು. (ಅ. ಕೃತ್ಯಗಳು 1:8) ವಿಶ್ವಾಸಿಗಳ ಸಂಖ್ಯೆ ಹೆಚ್ಚಾದಷ್ಟಕ್ಕೆ, ಸಭೆಗಳನ್ನು ಸಂದರ್ಶಿಸಿ ಬಲಗೊಳಿಸಲು ಕ್ರೈಸ್ತ ಬೋಧಕರ ಮತ್ತು ಮೇಲ್ವಿಚಾರಕರ ಅಗತ್ಯವೂ ಹೆಚ್ಚಾಯಿತು. ಕೆಲವು ಸಮಯಗಳಲ್ಲಿ ವಿಧವೆಯರು, ಅನಾಥರು ಮತ್ತು ಇತರ ನಿರ್ಗತಿಕರನ್ನು ಪರಾಮರಿಸಬೇಕಾಗಿತ್ತು. ಇದಕ್ಕೆ ತಗಲಿದ ವೆಚ್ಚವನ್ನು ಮೊದಲನೆಯ ಶತಮಾನದ ಕ್ರೈಸ್ತರು ಹೇಗೆ ತುಂಬಿಸಿದರು?

ಸುಮಾರು ಸಾ.ಶ. 55ರಷ್ಟಕ್ಕೆ, ಯೂದಾಯದ ಬಡ ಕ್ರೈಸ್ತರ ಪರವಾಗಿ ಒಂದು ವಿಜ್ಞಾಪನೆಯನ್ನು ಯೂರೋಪ್‌ ಮತ್ತು ಏಷ್ಯ ಮೈನರಿನ ಯೆಹೂದ್ಯೇತರ ಸಭೆಗಳಿಗೆ ಕಳುಹಿಸಲಾಯಿತು. ಕೊರಿಂಥದ ಸಭೆಗೆ ಬರೆದ ಪತ್ರಗಳಲ್ಲಿ ಅಪೊಸ್ತಲ ಪೌಲನು “ದೇವಜನರಿಗೋಸ್ಕರ ಹಣ ವಸೂಲುಮಾಡುವ” ವಿಧವನ್ನು ವರ್ಣಿಸಿದನು. (1 ಕೊರಿಂಥ 16:1) ಕ್ರೈಸ್ತರ ಕೊಡುವಿಕೆಯ ವಿಷಯದಲ್ಲಿ ಪೌಲನ ಮಾತುಗಳು ಏನನ್ನು ಪ್ರಕಟಪಡಿಸುತ್ತವೊ ಅದನ್ನು ಓದಿ ನಿಮಗೆ ಆಶ್ಚರ್ಯವಾದೀತು.

ಜೊತೆ ವಿಶ್ವಾಸಿಗಳು ಸಹಾಯವನ್ನು ಕೊಡುವಂತೆ ಅಪೊಸ್ತಲ ಪೌಲನು ಅವರನ್ನು ವಿಪರೀತವಾಗಿ ಪುಸಲಾಯಿಸಲಿಲ್ಲ. ವಾಸ್ತವವೇನಂದರೆ, ಮಕೆದೋನ್ಯದ ಕ್ರೈಸ್ತರು ‘ಬಹಳ ಹಿಂಸೆ ತಾಳುತ್ತಿದ್ದರೂ’ “ವಿಪರೀತವಾದ ಬಡತನದಲ್ಲಿದ್ದರೂ” “ದೇವಜನರಿಗೆ ಸಹಾಯಮಾಡುವ ಕೆಲಸದಲ್ಲಿ ತಾವು ಪಾಲುಗಾರರಾಗುವಂತೆ ಅಪ್ಪಣೆಯಾಗಬೇಕೆಂದು” ಅವನನ್ನು “ಬಹಳವಾಗಿ ಬೇಡಿಕೊಂಡರು.”​—2 ಕೊರಿಂಥ 8:1-4.

ಹೆಚ್ಚು ಧನಿಕರಾದ ಕೊರಿಂಥದವರು ಮಕೆದೋನ್ಯದಲ್ಲಿದ್ದ ತಮ್ಮ ಸಹೋದರರ ಉದಾರತೆಯನ್ನು ಅನುಕರಿಸಬೇಕೆಂದು ಪೌಲನು ಪ್ರೋತ್ಸಾಹಿಸಿದ್ದು ನಿಜ. ಹಾಗಿದ್ದರೂ ಒಂದು ಪರಾಮರ್ಶನ ಗ್ರಂಥವು ಹೇಳಿದ್ದೇನೆಂದರೆ, ಅವನು ‘ಆಜ್ಞೆಗಳನ್ನು ಕೊಡಲು ನಿರಾಕರಿಸಿದನೆಂದೂ, ಬದಲಿಗೆ ಅವರನ್ನು ವಿನಂತಿಸಿ, ಸೂಚಿಸಿ, ಪ್ರೋತ್ಸಾಹಿಸಿ, ಅವರ ಬಳಿ ವಿಜ್ಞಾಪಿಸಲು ಇಷ್ಟಪಟ್ಟನು. ಬಲಾತ್ಕಾರವು ಇರುತ್ತಿದ್ದಲ್ಲಿ ಕೊರಿಂಥದವರ ಕೊಡುವಿಕೆಯಲ್ಲಿ ಸ್ವಯಂಪ್ರೇರಣೆಯೂ ಹಾರ್ದಿಕತೆಯೂ ಇರುತ್ತಿರಲಿಲ್ಲ.’ ಏಕೆಂದರೆ “ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ” ಅಲ್ಲ, ಬದಲಾಗಿ “ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು” ಎಂಬುದು ಪೌಲನಿಗೆ ತಿಳಿದಿತ್ತು.​—2 ಕೊರಿಂಥ 9:7.

ಕೊರಿಂಥದವರಿಗಿದ್ದ ಸಮೃದ್ಧವಾದ ನಂಬಿಕೆ ಮತ್ತು ಜ್ಞಾನದೊಂದಿಗೆ ಜೊತೆ ಕ್ರೈಸ್ತರ ಮೇಲೆ ಅವರಿಗಿದ್ದ ಪ್ರೀತಿಯು ಅವರು ಸ್ವಯಂಪ್ರೇರಿತರಾಗಿ ಕೊಡುವಂತೆ ಅವರನ್ನು ಪ್ರೇರಿಸಿತು.​—2 ಕೊರಿಂಥ 8:​7, 8.

“ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ”

ಒಂದು ನಿಶ್ಚಿತ ಮೊತ್ತ ಅಥವಾ ಪ್ರತಿಶತವನ್ನು ನಿರ್ದಿಷ್ಟವಾಗಿ ಹೇಳುವ ಬದಲಿಗೆ, “ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಂಪಾದನೆಗೆ ತಕ್ಕಂತೆ ಹಣದ ಮೊತ್ತವನ್ನು ಪ್ರತಿ ವಾರದ ಮೊದಲನೆಯ ದಿನವೇ ಬದಿಗಿರಿಸಲಿ” ಎಂದು ಮಾತ್ರ ಪೌಲನು ಹೇಳಿದನು. (ಓರೆ ಅಕ್ಷರಗಳು ನಮ್ಮವು.) (1 ಕೊರಿಂಥ 16:​2, NIV) ಹೀಗೆ ಯೋಜಿಸಿ, ಕ್ರಮವಾಗಿ ಒಂದು ಮೊತ್ತವನ್ನು ಬದಿಗಿರಿಸುವ ಮೂಲಕ, ಪೌಲನು ಬಂದಾಗ ಕೊರಿಂಥದವರು ಅರೆಮನಸ್ಸಿನಿಂದಾಗಲಿ ಅಥವಾ ಭಾವಾವೇಶದಿಂದಾಗಲಿ ಕೊಡುವ ನಿರ್ಬಂಧಕ್ಕೆ ಒಳಗಾಗದಿರುತ್ತಿದ್ದರು. ಪ್ರತಿಯೊಬ್ಬ ಕ್ರೈಸ್ತನು ಎಷ್ಟು ಕೊಡಬೇಕೆಂಬುದು ಅವನ ಖಾಸಗಿ ನಿರ್ಣಯವಾಗಿತ್ತು, “ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ” ಮಾಡಿರುವ ನಿರ್ಧಾರವಾಗಿತ್ತು.​—2 ಕೊರಿಂಥ 9:​5, 7.

ಹೇರಳವಾಗಿ ಕೊಯ್ಯಬೇಕಾಗಿದ್ದರೆ ಕೊರಿಂಥದವರು ಹೇರಳವಾಗಿ ಬಿತ್ತಬೇಕಾಗಿತ್ತು. ದಿವಾಳಿಯಾಗುವ ತನಕ ಕೊಡುವಂಥ ಯಾವ ಸೂಚನೆಯೂ ಇರಲಿಲ್ಲ. ‘ನಿಮಗೆ ಕಷ್ಟವುಂಟಾಗಬೇಕೆಂಬುದು ನನ್ನ ತಾತ್ಪರ್ಯವಲ್ಲ’ ಎಂಬ ಆಶ್ವಾಸನೆಯನ್ನು ಪೌಲನು ಅವರಿಗೆ ಕೊಟ್ಟನು. ಕಾಣಿಕೆಗಳನ್ನು ಒಬ್ಬನು ‘ಇರುವುದಕ್ಕೆ ಅನುಸಾರವಾಗಿ ಕೊಡಬೇಕಾಗಿತ್ತು, ಇಲ್ಲದ್ದಕ್ಕೆ ಅನುಸಾರವಾಗಿ ಅಲ್ಲ.’ (2 ಕೊರಿಂಥ 8:12, 13; 9:6) ಸಮಯಾನಂತರ ಬರೆದ ಪತ್ರದಲ್ಲಿ ಆ ಅಪೊಸ್ತಲನು ಎಚ್ಚರಿಸಿದ್ದು: “ಯಾವನಾದರೂ . . . ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” (1 ತಿಮೊಥೆಯ 5:8) ಈ ಮೂಲತತ್ತ್ವವನ್ನು ಉಲ್ಲಂಘಿಸುವಂಥ ರೀತಿಯ ಕೊಡುವಿಕೆಯನ್ನು ಪೌಲನು ಪ್ರೋತ್ಸಾಹಿಸಲಿಲ್ಲ.

ಕೊರತೆಯಲ್ಲಿದ್ದ “ದೇವಜನರಿಗೋಸ್ಕರ ಹಣ ವಸೂಲುಮಾಡುವ” ಉಸ್ತುವಾರಿಯನ್ನು ಪೌಲನು ವಹಿಸಿಕೊಂಡನು. ಪೌಲನು ಮತ್ತು ಇತರ ಅಪೊಸ್ತಲರು ತಮ್ಮ ಸ್ವಂತ ಶುಶ್ರೂಷೆಗಳಿಗಾಗಿ ಹಣ ವಸೂಲಿಯನ್ನು ಮಾಡುವ ಅಥವಾ ದಶಮಾಂಶಗಳನ್ನು ಪಡೆಯುವ ವಿಷಯವನ್ನು ನಾವು ಶಾಸ್ತ್ರವಚನಗಳಲ್ಲಿ ಎಲ್ಲಿಯೂ ಓದುವುದಿಲ್ಲ. (ಅ. ಕೃತ್ಯಗಳು 3:6) ಸಭೆಗಳು ಕಳುಹಿಸಿದ ಕೊಡುಗೆಗಳಿಗೆ ಸದಾ ಕೃತಜ್ಞನಾಗಿದ್ದ ಪೌಲನು, ತನ್ನ ಸಹೋದರರ ಮೇಲೆ “ಭಾರ” ಹಾಕುವುದನ್ನು ಶುದ್ಧಾಂತಃಕರಣದಿಂದ ತ್ಯಜಿಸಿದನು.​—1 ಥೆಸಲೊನೀಕ 2:9; ಫಿಲಿಪ್ಪಿ 4:15-18.

ಇಂದು ಸ್ವಯಂಪ್ರೇರಿತ ಕೊಡುವಿಕೆ

ಹೀಗೆ ಮೊದಲನೆಯ ಶತಮಾನದಲ್ಲಿ ಕ್ರಿಸ್ತನ ಅನುಯಾಯಿಗಳು ಸ್ವಯಂಪ್ರೇರಿತ ಕೊಡುವಿಕೆಯನ್ನು ಮಾಡಿದರೇ ಹೊರತು ದಶಮಾಂಶದ ಕೊಡುವಿಕೆಯನ್ನಲ್ಲ ಎಂಬುದು ಸ್ಪಷ್ಟ. ಆದರೂ, ಸುವಾರ್ತೆಯನ್ನು ಸಾರಲು ಬೇಕಾಗುವ ಮತ್ತು ಕೊರತೆಯಲ್ಲಿರುವ ಕ್ರೈಸ್ತರ ಆರೈಕೆಗಾಗಿ ಬೇಕಾಗುವ ಹಣಸಂಗ್ರಹವನ್ನು ಮಾಡಲು ಇದು ಇನ್ನೂ ಕಾರ್ಯಸಾಧಕವಾದ ಮಾರ್ಗವಾಗಿದೆಯೋ ಎಂದು ನೀವು ಕುತೂಹಲಪಡಬಹುದು.

ಈ ವಿಷಯವನ್ನು ಪರಿಗಣಿಸಿರಿ. ಈ ಪತ್ರಿಕೆಯ ಸಂಪಾದಕರು 1879ರಲ್ಲಿ, ತಾವು ಬೆಂಬಲಕ್ಕಾಗಿ “ಮನುಷ್ಯರ ಬಳಿ ಎಂದೂ ಬೇಡುವುದೂ ಇಲ್ಲ, ಮನವಿ ಮಾಡುವುದೂ ಇಲ್ಲ” ಎಂದು ಬಹಿರಂಗವಾಗಿ ಹೇಳಿದರು. ಆ ನಿರ್ಣಯವು ಯೆಹೋವನ ಸಾಕ್ಷಿಗಳು ಬೈಬಲ್‌ ಸತ್ಯವನ್ನು ಹಬ್ಬಿಸುವ ಪ್ರಯತ್ನಗಳನ್ನು ತಡೆದುಹಿಡಿದಿದೆಯೊ?

ಈಗ ಸಾಕ್ಷಿಗಳು ಬೈಬಲ್‌, ಕ್ರೈಸ್ತ ಪುಸ್ತಕಗಳು ಮತ್ತು ಬೇರೆ ಸಾಹಿತ್ಯಗಳನ್ನು 235 ದೇಶಗಳಲ್ಲಿ ವಿತರಣೆ ಮಾಡುತ್ತಿದ್ದಾರೆ. ಬೈಬಲ್‌ ಶಿಕ್ಷಣ ನೀಡುವ ಕಾವಲಿನಬುರುಜು ಪತ್ರಿಕೆಯು, ಆರಂಭದಲ್ಲಿ ಒಂದು ಭಾಷೆಯಲ್ಲಿ ತಿಂಗಳಿಗೆ 6,000 ಪ್ರತಿ ವಿತರಣೆಯಾಗುತ್ತಿತ್ತು. ಅಂದಿನಿಂದ ಇದು ತಿಂಗಳಿಗೆರಡು ಬಾರಿ 146 ಭಾಷೆಗಳಲ್ಲಿ 2 ಕೋಟಿ 40 ಲಕ್ಷ ಪ್ರತಿಗಳು ಲಭ್ಯವಾಗಿರುವ ಪತ್ರಿಕೆಯಾಗಿ ಪರಿಣಮಿಸಿದೆ. ತಮ್ಮ ಭೌಗೋಳಿಕ ಬೈಬಲ್‌ ಶಿಕ್ಷಣ ಕಾರ್ಯವನ್ನು ಸಂಘಟಿಸಲು ಸಾಕ್ಷಿಗಳು 110 ದೇಶಗಳಲ್ಲಿ ಆಡಳಿತ ಕೇಂದ್ರಗಳನ್ನು ರಚಿಸಿದ್ದಾರೆ ಇಲ್ಲವೆ ಕೊಂಡುಕೊಂಡಿದ್ದಾರೆ. ಇದಕ್ಕೆ ಕೂಡಿಸಿ, ಹೆಚ್ಚಿನ ಬೈಬಲ್‌ ಶಿಕ್ಷಣವನ್ನು ಪಡೆಯಲು ಆಸಕ್ತಿಯಿರುವವರು ಕೂಡಿಬರುವಂತೆ ಮಾಡಲು ಅವರು ಸಾವಿರಾರು ಸ್ಥಳಿಕ ಸಭಾಗೃಹಗಳನ್ನೂ ದೊಡ್ಡ ಸಮ್ಮೇಳನ ಸಭಾಗೃಹಗಳನ್ನೂ ರಚಿಸಿದ್ದಾರೆ.

ಜನರ ಆತ್ಮಿಕಾವಶ್ಯಕತೆಗಳನ್ನು ನೋಡಿಕೊಳ್ಳುವುದು ಆದ್ಯತೆಯ ವಿಷಯವಾಗಿರುವುದಾದರೂ, ಯೆಹೋವನ ಸಾಕ್ಷಿಗಳು ಜೊತೆ ವಿಶ್ವಾಸಿಗಳ ಪ್ರಾಪಂಚಿಕ ಆವಶ್ಯಕತೆಗಳನ್ನು ಅಸಡ್ಡೆ ಮಾಡುವುದಿಲ್ಲ. ತಮ್ಮ ಸಹೋದರರು ಯುದ್ಧ, ಭೂಕಂಪಗಳು, ಅನಾವೃಷ್ಟಿ ಮತ್ತು ಬಿರುಗಾಳಿಗಳ ಹಾವಳಿಗೆ ತುತ್ತಾಗುವಾಗ, ಅವರು ತುರ್ತಾಗಿ ಔಷಧ, ಆಹಾರ, ಬಟ್ಟೆ ಮತ್ತಿತರ ಆವಶ್ಯಕತೆಗಳನ್ನು ಪೂರೈಸುತ್ತಾರೆ. ಇದಕ್ಕೆ ಹಣವು ವೈಯಕ್ತಿಕವಾಗಿ ಒಬ್ಬೊಬ್ಬ ಕ್ರೈಸ್ತರಿಂದಲೂ ಸಭೆಗಳಿಂದಲೂ ಮಾಡಲ್ಪಡುವ ದಾನಗಳಿಂದ ಬರುತ್ತದೆ.

ಸ್ವಯಂಪ್ರೇರಿತರಾಗಿ ಕಾಣಿಕೆ ನೀಡುವುದು ಕಾರ್ಯಸಾಧಕವಾಗಿದೆಯಲ್ಲದೆ, ಈ ಹಿಂದೆ ಹೇಳಿರುವ ಸೆನೀವಾಲ್‌ನಂತಹ ಬಡವರ ಹೊರೆಯನ್ನೂ ಇದು ಕಡಿಮೆಮಾಡುತ್ತದೆ. ಸಂತೋಷಕರವಾಗಿ, ಸೆನೀವಾಲ್‌ ತನ್ನ ಮನೆಯನ್ನು ಮಾರುವ ಮೊದಲು, ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕಿಯಾದ ಮಾರಿಯಾ ಅವನನ್ನು ಭೇಟಿಮಾಡಿದಳು. “ಆ ಸಂಭಾಷಣೆಯು ಅನಾವಶ್ಯಕವಾದ ಬಹಳಷ್ಟು ಕಷ್ಟಗಳಿಂದ ನನ್ನ ಕುಟುಂಬವನ್ನು ರಕ್ಷಿಸಿತು,” ಎಂದು ಸೆನೀವಾಲ್‌ ಜ್ಞಾಪಿಸಿಕೊಳ್ಳುತ್ತಾನೆ.

ಕರ್ತನ ಕೆಲಸ ದಶಮಾಂಶ ಕೊಡುವಿಕೆಯ ಮೇಲೆ ಹೊಂದಿಕೊಂಡಿಲ್ಲ ಎಂದು ಸೆನೀವಾಲ್‌ಗೆ ತಿಳಿದುಬಂತು. ವಾಸ್ತವವೇನಂದರೆ, ದಶಮಾಂಶ ಕೊಡುವಿಕೆ ಈಗ ಒಂದು ಶಾಸ್ತ್ರಾಧಾರಿತ ಆವಶ್ಯಕತೆಯಾಗಿರುವುದಿಲ್ಲ. ಕ್ರೈಸ್ತರು ಉದಾರವಾಗಿ ಕೊಡುವಲ್ಲಿ ಆಶೀರ್ವದಿಸಲ್ಪಡುತ್ತಾರೆಂದೂ ಆದರೆ ಅವರು ದಿವಾಳಿಯಾಗುವ ತನಕ ಕೊಡುವ ನಿರ್ಬಂಧವಿಲ್ಲವೆಂಬುದನ್ನೂ ಅವನು ತಿಳಿದುಕೊಂಡನು.

ಸ್ವಯಂಪ್ರೇರಿತವಾಗಿ ಕೊಡುವ ರೂಢಿಯು ಸೆನೀವಾಲ್‌ಗೆ ನಿಜ ಆನಂದವನ್ನು ತಂದಿದೆ. ಅವನು ಇದನ್ನು ಹೀಗೆ ವ್ಯಕ್ತಪಡಿಸುತ್ತಾನೆ: “ನಾನು 10 ಪ್ರತಿಶತವನ್ನು ಕೊಟ್ಟೇನು ಯಾ ಕೊಡದೆ ಹೋದೇನು. ಆದರೆ ನಾನು ಕೊಡುವ ಕಾಣಿಕೆಯಲ್ಲಿ ನನಗೆ ಸಂತೋಷವಿದೆ ಮತ್ತು ಯೆಹೋವನಿಗೂ ಸಂತೋಷವಿದೆಯೆಂಬ ಖಾತ್ರಿ ನನಗಿದೆ.”

[ಪುಟ 6ರಲ್ಲಿರುವ ಚೌಕ/ಚಿತ್ರಗಳು]

ಆದಿ ಚರ್ಚ್‌ ಫಾದರ್‌ಗಳು ದಶಮಾಂಶ ಕೊಡುವಿಕೆಯನ್ನು ಬೋಧಿಸಿದರೊ?

“ನಮ್ಮಲ್ಲಿ ಧನಿಕರು ಕೊರತೆಯುಳ್ಳವರಿಗೆ ಸಹಾಯ ನೀಡುತ್ತಾರೆ . . . ಅನುಕೂಲವಂತರು ಮತ್ತು ಮನಸ್ಸುಳ್ಳ ಪ್ರತಿಯೊಬ್ಬರು ತಮಗೆ ಉಚಿತವೆಂದು ಎಣಿಸುವುದನ್ನು ಕೊಡುತ್ತಾರೆ.”​—ದ ಫಸ್ಟ್‌ ಅಪಾಲಜಿ, ಜಸ್ಟಿನ್‌ ಮಾರ್ಟರ್‌, ಸುಮಾರು ಸಾ.ಶ. 150.

“ಯೆಹೂದ್ಯರ ಸ್ವತ್ತುಗಳ ದಶಮಾಂಶಗಳು ದೇವರಿಗೆ ಸಮರ್ಪಿತವಾಗಿದ್ದದ್ದು ನಿಶ್ಚಯ, ಆದರೆ ಅದರಿಂದ ಬಿಡಿಸಲ್ಪಟ್ಟಿರುವವರು, . . . ಬಡ ವಿಧವೆಯು ತನ್ನ ಬದುಕನ್ನು ದೇವರ ಬೊಕ್ಕಸಕ್ಕೆ ಹಾಕಿದಂತೆಯೇ, ತಮ್ಮ ಸ್ವತ್ತುಗಳನ್ನೆಲ್ಲ ಕರ್ತನ ಉದ್ದೇಶಗಳಿಗಾಗಿ ಬದಿಗಿರಿಸುತ್ತಾರೆ.”​—ಅಗೇನ್‌ಸ್ಟ್‌ ಹೆರಸೀಸ್‌, ಐರೀನೀಯಸ್‌, ಸುಮಾರು ಸಾ.ಶ. 180.

“ನಮ್ಮಲ್ಲಿ ಹಣದ ಪೆಟ್ಟಿಗೆಯಿದೆಯಾದರೂ, ಧರ್ಮಕ್ಕೆ ಬೆಲೆ ತೆರಬೇಕೊ ಎಂಬಂತೆ, ಅದರಲ್ಲಿ ರಕ್ಷಣೆಯನ್ನು ಖರೀದಿಸುವ ಹಣವಿರುವುದಿಲ್ಲ. ಒಬ್ಬನು ತಿಂಗಳಿಗೊಮ್ಮೆ, ಮನಸ್ಸಿರುವಲ್ಲಿ ಒಂದು ಚಿಕ್ಕ ಕಾಣಿಕೆಯನ್ನು ಆ ಪೆಟ್ಟಿಗೆಯಲ್ಲಿ ಹಾಕುತ್ತಾನೆ; ಆದರೆ ಅವನಿಗೆ ಸಂತೋಷವಿರುವಲ್ಲಿ ಮತ್ತು ಶಕ್ತನಾಗಿರುವಲ್ಲಿ ಮಾತ್ರ: ಏಕೆಂದರೆ ಬಲಾತ್ಕಾರವಿಲ್ಲ; ಎಲ್ಲವೂ ಸ್ವಯಂಪ್ರೇರಿತವಾಗಿದೆ.”​—ಅಪಾಲಜಿ, ಟೆರ್ಟಲ್ಯನ್‌, ಸುಮಾರು ಸಾ.ಶ. 197.

“ಚರ್ಚು ಬೆಳೆದು ವಿವಿಧ ಸಾಂಸ್ಥಿಕ ಪದ್ಧತಿಗಳು ಹುಟ್ಟಿಕೊಂಡಾಗ, ಪಾದ್ರಿಗಳನ್ನು ಯೋಗ್ಯ ರೀತಿಯಲ್ಲಿ ಮತ್ತು ಕಾಯಂ ಆಗಿ ಆರ್ಥಿಕವಾಗಿ ಪರಾಮರಿಸಲಿಕ್ಕಾಗಿ ಬೇಕಾದ ನಿಯಮಗಳನ್ನು ಮಾಡುವ ಅಗತ್ಯ ಬಿತ್ತು. ದಶಮಾಂಶ ತೆರುವ ಪದ್ಧತಿಯನ್ನು ಹಳೆಯ ಧರ್ಮಶಾಸ್ತ್ರದಿಂದ ಆರಿಸಿಕೊಳ್ಳಲಾಯಿತು . . . ಈ ವಿಷಯದಲ್ಲಿ ಅತಿ ಆದಿಯ ನಿಶ್ಚಿತ ನಿಯಮವು, ಸಾ.ಶ. 567ರಲ್ಲಿ ಟೂರ್‌ನಲ್ಲಿ ಕೂಡಿಬಂದಿದ್ದ ಬಿಶಪರ ಪತ್ರದಲ್ಲಿಯೂ 585ರಲ್ಲಿ ಮಾಕೋನ್‌ ಕೌನ್ಸಿಲ್‌ನ [ಆಜ್ಞೆಗಳಲ್ಲಿಯೂ] ಇತ್ತೆಂದು ತೋರಿಬರುತ್ತದೆ.”​—ದ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡೀಯ.

[ಕೃಪೆ]

ನಾಣ್ಯ, ಮೇಲೆ ಎಡಬದಿ: Pictorial Archive (Near Eastern History) Est.

[ಪುಟ 4, 5ರಲ್ಲಿರುವ ಚಿತ್ರ]

ಸ್ವಯಂಪ್ರೇರಿತ ಕೊಡುವಿಕೆಯು ಆನಂದವನ್ನು ತರುತ್ತದೆ

[ಪುಟ 7ರಲ್ಲಿರುವ ಚಿತ್ರಗಳು]

ಸ್ವಯಂಪ್ರೇರಿತ ಕಾಣಿಕೆಗಳು, ಸಾರುವ ಕಾರ್ಯ, ತುರ್ತು ಪರಿಸ್ಥಿತಿ ಪರಿಹಾರ ಕಾರ್ಯ ಮತ್ತು ಕೂಟದ ಸ್ಥಳಗಳ ನಿರ್ಮಾಣಕ್ಕಾಗಿ ಹಣಕಾಸನ್ನು ಒದಗಿಸುತ್ತವೆ