ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ಮಿಷನೆರಿ ನೇಮಕವು ನಮ್ಮ ಮನೆಯಾಯಿತು

ಒಂದು ಮಿಷನೆರಿ ನೇಮಕವು ನಮ್ಮ ಮನೆಯಾಯಿತು

ಜೀವನ ಕಥೆ

ಒಂದು ಮಿಷನೆರಿ ನೇಮಕವು ನಮ್ಮ ಮನೆಯಾಯಿತು

ಡಿಕ್‌ ವಾಲ್‌ಡ್ರನ್‌ ಅವರು ಹೇಳಿದಂತೆ

ಅದು 1953ರ ಸೆಪ್ಟೆಂಬರ್‌ ತಿಂಗಳ ಒಂದು ಭಾನುವಾರ ಮಧ್ಯಾಹ್ನವಾಗಿತ್ತು. ನೈರುತ್ಯ ಆಫ್ರಿಕಕ್ಕೆ (ಈಗ ನಮೀಬಿಯ) ಆಗಷ್ಟೇ ಆಗಮಿಸಿದ್ದೆವು. ನಾವು ಈ ದೇಶಕ್ಕೆ ಬಂದು ಒಂದು ವಾರವೂ ಆಗಿರಲಿಲ್ಲ, ಆಗಲೇ ನಾವು ಅದರ ರಾಜಧಾನಿಯಾದ ವಿಂಟ್‌ಹುಕ್‌ನಲ್ಲಿ ಸಾರ್ವಜನಿಕ ಕೂಟವೊಂದನ್ನು ನಡಿಸಲಿದ್ದೆವು. ಆಸ್ಟ್ರೇಲಿಯದಷ್ಟು ದೂರದಿಂದ ಆಫ್ರಿಕದ ಈ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಯಾವುದು ನಮ್ಮನ್ನು ಪ್ರಚೋದಿಸಿತ್ತು? ನಾನು ಮತ್ತು ನನ್ನ ಪತ್ನಿ, ಜೊತೆಯಲ್ಲಿ ಮೂವರು ಯುವತಿಯರೊಡನೆ, ದೇವರ ರಾಜ್ಯದ ಸುವಾರ್ತೆಯ ಮಿಷನೆರಿಗಳೋಪಾದಿ ಇಲ್ಲಿಗೆ ಬಂದಿದ್ದೆವು.​—ಮತ್ತಾಯ 24:14.

ನನ್ನ ಜೀವಿತವು ಭೂಮಿಯ ಬಹುದೂರದ ಭಾಗವಾಗಿರುವ ಆಸ್ಟ್ರೇಲಿಯದಲ್ಲಿ, ಐತಿಹಾಸಿಕ ವರ್ಷವಾಗಿದ್ದ 1914ರಲ್ಲಿ ಆರಂಭಗೊಂಡಿತು. ಆರ್ಥಿಕ ಹಾಗೂ ಕೈಗಾರಿಕಾ ಕುಸಿತದ ಸಮಯದಲ್ಲಿ ನಾನು ಹದಿಪ್ರಾಯದವನಾಗಿದ್ದೆ, ಮತ್ತು ಕುಟುಂಬದ ಪೋಷಣೆಗಾಗಿ ನಾನು ನನ್ನ ಪಾಲಿನ ದುಡಿಮೆಯನ್ನು ಮಾಡಬೇಕಾಗಿತ್ತು. ಯಾವ ಕೆಲಸವೂ ಸಿಗುತ್ತಿರಲಿಲ್ಲ; ಆದರೆ ಹೊಟ್ಟೆಪಾಡಿಗಾಗಿ, ಆಸ್ಟ್ರೇಲಿಯದಲ್ಲಿ ಅನೇಕ ಸಂಖ್ಯೆಯಲ್ಲಿದ್ದ ಕಾಡುಮೊಲಗಳನ್ನು ಬೇಟೆಯಾಡುವ ಒಂದು ಕೆಲಸವನ್ನು ನಾನೇ ಹುಡುಕಿಕೊಂಡೆ. ಹೀಗೆ, ಕುಟುಂಬದ ಆಹಾರ ಸರಬರಾಯಿಗೆ ನಾನು ನೀಡುತ್ತಿದ್ದ ಮುಖ್ಯ ಸಹಾಯಗಳಲ್ಲಿ ಒಂದು, ಮೊಲದ ಮಾಂಸವನ್ನು ಕ್ರಮವಾಗಿ ಒದಗಿಸುವುದೇ ಆಗಿತ್ತು.

ಎರಡನೆಯ ಲೋಕ ಯುದ್ಧವು 1939ರಲ್ಲಿ ಆರಂಭವಾಗುವಷ್ಟರೊಳಗೆ, ಮೆಲ್‌ಬರ್ನ್‌ ನಗರದಲ್ಲಿರುವ ಟ್ರ್ಯಾಮ್‌ಗಳು ಮತ್ತು ಬಸ್ಸುಗಳಲ್ಲಿ ಕೆಲಸಮಾಡುವ ಒಂದು ಉದ್ಯೋಗವನ್ನು ನಾನು ಪಡೆದುಕೊಳ್ಳಲು ಶಕ್ತನಾಗಿದ್ದೆ. ಇಂಥ ಸಾರಿಗೆ ವ್ಯವಸ್ಥೆಯಲ್ಲಿ ಸುಮಾರು 700 ಪುರುಷರು ಶಿಫ್ಟ್‌ಗಳಲ್ಲಿ ಕೆಲಸಮಾಡುತ್ತಿದ್ದರು, ಮತ್ತು ಪ್ರತಿಯೊಂದು ಶಿಫ್ಟ್‌ನಲ್ಲಿಯೂ ನಾನು ಬೇರೆ ಬೇರೆ ಡ್ರೈವರುಗಳನ್ನು ಅಥವಾ ಕಂಡಕ್ಟರ್‌ಗಳನ್ನು ಭೇಟಿಯಾಗುತ್ತಿದ್ದೆ. ಕೆಲವೊಮ್ಮೆ ನಾನು ಅವರಿಗೆ “ನೀವು ಯಾವ ಧರ್ಮದವರು?” ಎಂದು ಕೇಳುತ್ತಿದ್ದೆ ಮತ್ತು ಅವರು ತಮ್ಮ ನಂಬಿಕೆಗಳ ಕುರಿತು ವಿವರಿಸುವಂತೆ ಮಾಡುತ್ತಿದ್ದೆ. ನನಗೆ ಸಂತೃಪ್ತಿಕರವಾದ ಉತ್ತರಗಳನ್ನು ಕೊಡಸಾಧ್ಯವಿದ್ದ ಏಕಮಾತ್ರ ವ್ಯಕ್ತಿಯು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದನು. ಎಲ್ಲಿ ದೇವಭಯವುಳ್ಳ ಮಾನವರು ಸದಾಕಾಲ ಜೀವಿಸುವರೋ ಆ ಪರದೈಸ ಭೂಮಿಯ ಕುರಿತಾದ ಬೈಬಲ್‌ ಆಧಾರಿತ ಸಂದೇಶವನ್ನು ಅವನು ನನಗೆ ವಿವರಿಸಿದನು.​—ಕೀರ್ತನೆ 37:29.

ಈ ಮಧ್ಯೆ ನನ್ನ ತಾಯಿಯವರಿಗೂ ಯೆಹೋವನ ಸಾಕ್ಷಿಗಳ ಭೇಟಿಯಾಯಿತು. ಅನೇಕವೇಳೆ ನಾನು ರಾತ್ರಿ ತಡವಾಗಿ ಶಿಫ್ಟ್‌ ಮುಗಿಸಿ ಕೆಲಸದಿಂದ ಮನೆಗೆ ಬಂದಾಗ, ನನ್ನ ಆಹಾರದೊಂದಿಗೆ ಕಾನ್ಸೊಲೇಷನ್‌ ಪತ್ರಿಕೆಯ (ಈಗ ಎಚ್ಚರ! ಎಂದು ಕರೆಯಲ್ಪಡುತ್ತದೆ) ಒಂದು ಪ್ರತಿಯೂ ನನಗಾಗಿ ಕಾದಿರುತ್ತಿತ್ತು. ನಾನು ಏನನ್ನು ಓದುತ್ತಿದ್ದೆನೋ ಅದು ಆಸಕ್ತಿಕರವಾಗಿ ಧ್ವನಿಸಿತು. ಸಕಾಲದಲ್ಲಿ, ಇದೇ ಸತ್ಯ ಧರ್ಮ ಎಂಬ ತೀರ್ಮಾನಕ್ಕೆ ನಾನು ಬಂದೆ ಮತ್ತು ಸಭೆಯೊಂದಿಗೆ ಕ್ರಿಯಾಶೀಲ ರೀತಿಯಲ್ಲಿ ಭಾಗವಹಿಸತೊಡಗಿದೆ ಹಾಗೂ 1940ರ ಮೇ ತಿಂಗಳಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆ.

ಮೆಲ್‌ಬರ್ನ್‌ನಲ್ಲಿ ಒಂದು ಪಯನೀಯರ್‌ ಗೃಹವಿತ್ತು ಮತ್ತು ಅಲ್ಲಿ ಯೆಹೋವನ ಸಾಕ್ಷಿಗಳ ಸುಮಾರು 25 ಮಂದಿ ಪೂರ್ಣ ಸಮಯದ ಸೇವಕರು ವಾಸಿಸುತ್ತಿದ್ದರು. ನಾನು ಅವರೊಡನೆ ವಾಸಿಸತೊಡಗಿದೆ. ಪ್ರತಿ ದಿನವೂ ನಾನು ಸಾರುವ ಕಾರ್ಯದಲ್ಲಿ ಅವರಿಗಾಗುತ್ತಿದ್ದ ರೋಮಾಂಚಕ ಅನುಭವಗಳನ್ನು ಕೇಳಿಸಿಕೊಳ್ಳುತ್ತಿದ್ದೆ, ಮತ್ತು ಪಯನೀಯರನಾಗುವ ಬಯಕೆಯು ನನ್ನ ಮನಸ್ಸಿನಲ್ಲಿಯೂ ಬೆಳೆಯತೊಡಗಿತು. ಕಾಲಕ್ರಮೇಣ ನಾನು ಪಯನೀಯರ್‌ ಸೇವೆಗೆ ಅರ್ಜಿಯನ್ನು ಹಾಕಿದೆ. ನನ್ನನ್ನು ಸ್ವೀಕರಿಸಲಾಯಿತು ಮತ್ತು ಯೆಹೋವನ ಸಾಕ್ಷಿಗಳ ಆಸ್ಟ್ರೇಲಿಯ ಬ್ರಾಂಚ್‌ ಆಫೀಸಿನಲ್ಲಿ ಸೇವೆಮಾಡಲು ನನ್ನನ್ನು ಕರೆಯಲಾಯಿತು. ಹೀಗೆ ನಾನು ಬೆತೆಲ್‌ ಕುಟುಂಬದ ಸದಸ್ಯನಾಗಿ ಪರಿಣಮಿಸಿದೆ.

ಸೆರೆವಾಸ ಮತ್ತು ನಿಷೇಧ

ಬೆತೆಲ್‌ನಲ್ಲಿ ನನಗಿದ್ದ ನೇಮಕಗಳಲ್ಲಿ ಒಂದು, ಸಾಮಿಲ್‌ ಅನ್ನು ನಡೆಸುವುದಾಗಿತ್ತು. ಇಂಧನಕ್ಕಾಗಿ ಇದ್ದಲನ್ನು ತಯಾರಿಸಲಿಕ್ಕಾಗಿ ಅಲ್ಲಿ ನಾವು ಮರಗಳನ್ನು ಕಡಿಯಬೇಕಾಗಿತ್ತು. ಈ ಇಂಧನವನ್ನು ಬ್ರಾಂಚ್‌ನಲ್ಲಿರುವ ವಾಹನಗಳಿಗಾಗಿ ಉಪಯೋಗಿಸಲಾಗುತ್ತಿತ್ತು. ಏಕೆಂದರೆ ಯುದ್ಧದ ಕಾರಣದಿಂದ ಮಾರಾಟಕ್ಕೆ ಲಭ್ಯವಿದ್ದ ಪೆಟ್ರೋಲ್‌ ತುಂಬ ಕಡಿಮೆಯಾಗಿತ್ತು. ನಾವು ಸುಮಾರು 12 ಮಂದಿ ಸಾಮಿಲ್‌ನಲ್ಲಿ ಕೆಲಸಮಾಡುತ್ತಿದ್ದೆವು ಮತ್ತು ನಾವೆಲ್ಲರೂ ಒತ್ತಾಯದ ಮಿಲಿಟರಿ ಸೇವೆಗೆ ಒಳಗಾಗಿದ್ದೆವು. ಅತಿ ಬೇಗನೆ ನಾವು, ಮಿಲಿಟರಿ ಸೇವೆಯ ವಿಷಯದಲ್ಲಿ ನಮ್ಮ ಬೈಬಲ್‌ ಆಧಾರಿತ ನಿರಾಕರಣೆಗಾಗಿ ಆರು ತಿಂಗಳುಗಳ ಸೆರೆವಾಸದ ಶಿಕ್ಷೆಗೆ ಗುರಿಯಾದೆವು. (ಯೆಶಾಯ 2:4) ಶ್ರಮದ ದುಡಿಮೆಗಾಗಿ ನಮ್ಮನ್ನು ಒಂದು ಸೆರೆಮನೆಯ ಫಾರ್ಮ್‌ಗೆ ಕಳುಹಿಸಲಾಯಿತು. ಅವರು ನಮಗೆ ಯಾವ ನೇಮಕವನ್ನು ಕೊಟ್ಟರು? ನಮ್ಮ ಆಶ್ಚರ್ಯಕ್ಕೆ, ಬೆತೆಲ್‌ನಲ್ಲಿ ಯಾವ ಕೆಲಸವನ್ನು ಮಾಡಲು ನಮಗೆ ತರಬೇತಿಯನ್ನು ನೀಡಲಾಗಿತ್ತೋ ಅದೇ ಕೆಲಸ, ಅಂದರೆ ಮರವನ್ನು ಕಡಿಯುವ ಕೆಲಸವು ನಮಗೆ ಕೊಡಲ್ಪಟ್ಟಿತು!

ಮರವನ್ನು ಕಡಿಯುವ ಕೆಲಸವನ್ನು ನಾವು ಎಷ್ಟು ಚೆನ್ನಾಗಿ ಮಾಡಿದೆವೆಂದರೆ, ನಮಗೆ ಬೈಬಲನ್ನಾಗಲಿ ನಮ್ಮ ಬೈಬಲ್‌ ಸಾಹಿತ್ಯವನ್ನಾಗಲಿ ಕೊಡಬಾರದೆಂಬ ಕಟ್ಟುನಿಟ್ಟಾದ ಆಜ್ಞೆಗಳು ಹೊರಡಿಸಲ್ಪಟ್ಟಿದ್ದರೂ, ಸೆರೆಮನೆಯ ಅಧಿಕಾರಿಯು ನಾವು ಅವುಗಳನ್ನು ಪಡೆದುಕೊಳ್ಳುವಂತೆ ಅನುಮತಿಸಿದನು. ಈ ಸಮಯದಲ್ಲೇ ನಾನು ಮಾನವ ಸಂಬಂಧಗಳ ವಿಷಯದಲ್ಲಿ ಒಂದು ಪ್ರಯೋಜನಾರ್ಹ ಪಾಠವನ್ನು ಕಲಿತೆ. ನಾನು ಬೆತೆಲ್‌ನಲ್ಲಿ ಕೆಲಸಮಾಡುತ್ತಿದ್ದಾಗ, ಅಲ್ಲಿದ್ದ ಒಬ್ಬ ಸಹೋದರನೊಂದಿಗೆ ನನಗೆ ಸ್ವಲ್ಪವೂ ಹೊಂದಿಕೊಂಡು ಹೋಗಲಾಗುತ್ತಿರಲಿಲ್ಲ. ನಮ್ಮ ವ್ಯಕ್ತಿತ್ವಗಳು ತೀರ ಭಿನ್ನವಾಗಿದ್ದವು. ಹೀಗಿರುವಾಗ, ಒಂದೇ ಸೆರೆಕೋಣೆಯಲ್ಲಿ ನನ್ನೊಂದಿಗೆ ಯಾರನ್ನು ಇರಿಸಲಾಯಿತೆಂದು ನೀವು ನೆನಸಬಲ್ಲಿರೋ? ಹೌದು, ಅದೇ ಸಹೋದರನನ್ನು. ಈಗ ನಿಜವಾಗಿಯೂ ನಮಗೆ ಪರಸ್ಪರ ಅರಿತುಕೊಳ್ಳಲು ಸಾಕಷ್ಟು ಸಮಯವಿತ್ತು, ಮತ್ತು ಇದರ ಫಲಿತಾಂಶವಾಗಿ ನಮ್ಮಿಬ್ಬರ ಮಧ್ಯೆ ತುಂಬ ಆಪ್ತವಾದ ಹಾಗೂ ಶಾಶ್ವತವಾದ ಸ್ನೇಹವು ಬೆಳೆಯಿತು.

ಸಕಾಲದಲ್ಲಿ, ಆಸ್ಟ್ರೇಲಿಯದಲ್ಲಿ ಯೆಹೋವನ ಸಾಕ್ಷಿಗಳ ಕೆಲಸವನ್ನು ನಿಷೇಧಿಸಲಾಯಿತು. ಎಲ್ಲ ನಿಧಿಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಬೆತೆಲಿನ ಸಹೋದರರ ಬಳಿ ಆರ್ಥಿಕವಾಗಿ ಏನೂ ಇರಲಿಲ್ಲ. ಒಂದು ಸಂದರ್ಭದಲ್ಲಿ, ಅವರಲ್ಲಿ ಒಬ್ಬನು ನನ್ನ ಬಳಿ ಬಂದು ಹೇಳಿದ್ದು: “ಡಿಕ್‌, ನಾನು ಊರಿನೊಳಗೆ ಹೋಗಿ ಅಲ್ಲಿ ಸ್ವಲ್ಪ ಸಾಕ್ಷಿಕಾರ್ಯವನ್ನು ಮಾಡಲು ಬಯಸುತ್ತೇನೆ, ಆದರೆ ನನ್ನ ಬಳಿ ಶೂಗಳಿಲ್ಲ, ಕೇವಲ ಕೆಲಸದ ಬೂಟ್‌ಗಳು ಮಾತ್ರ ಇವೆ.” ಅವನಿಗೆ ಸಹಾಯಮಾಡಲು ನನಗೆ ಸಂತೋಷವಾಯಿತು, ಮತ್ತು ಅವನು ನನ್ನ ಶೂಗಳನ್ನು ಹಾಕಿಕೊಂಡು ಅಲ್ಲಿಗೆ ಹೋದನು.

ಅವನು ಸಾರುವ ಕೆಲಸದಲ್ಲಿ ಒಳಗೂಡಿದ್ದಕ್ಕಾಗಿ ಅವನನ್ನು ಬಂಧಿಸಲಾಗಿದೆ ಮತ್ತು ಸೆರೆಯಲ್ಲಿ ಹಾಕಲಾಗಿದೆ ಎಂಬುದು ನಂತರ ನಮಗೆ ತಿಳಿದುಬಂತು. “ನಿನ್ನ ವಿಷಯದಲ್ಲಿ ನನಗೆ ಅನುಕಂಪವಿದೆ. ಒಳ್ಳೇದಾಯ್ತು ನಾನು ಸಿಕ್ಕಿಬೀಳಲಿಲ್ಲ” ಎಂಬ ಸಂದೇಶವಿದ್ದ ಚಿಕ್ಕ ಚೀಟಿಯನ್ನು ನಾನು ಅವನಿಗೆ ಕಳುಹಿಸುವ ಬಯಕೆಯನ್ನು ತಡೆದುಕೊಳ್ಳಲಾಗಲಿಲ್ಲ. ಆದರೆ ನನ್ನ ತಟಸ್ಥ ನಿಲುವಿನ ಕಾರಣ ಎರಡನೆಯ ಬಾರಿ ನನ್ನನ್ನೂ ಬಂಧಿಸಿ ಸೆರೆಯಲ್ಲಿ ಹಾಕಲಾಯಿತು. ನನ್ನ ಬಿಡುಗಡೆಯ ಬಳಿಕ, ಬೆತೆಲ್‌ ಕುಟುಂಬಕ್ಕೆ ಆಹಾರವನ್ನು ಸರಬರಾಜುಮಾಡುತ್ತಿದ್ದ ಫಾರ್ಮ್‌ ಅನ್ನು ನೋಡಿಕೊಳ್ಳುವಂತೆ ನನ್ನನ್ನು ನೇಮಿಸಲಾಯಿತು. ಅಷ್ಟರಲ್ಲಿ ನಾವು ಒಂದು ಕೋರ್ಟ್‌ ನಿರ್ಣಯದಲ್ಲಿ ಜಯಗಳಿಸಿದ್ದೆವು, ಮತ್ತು ಯೆಹೋವನ ಸಾಕ್ಷಿಗಳ ಚಟುವಟಿಕೆಗಳ ಮೇಲಿದ್ದ ನಿಷೇಧವು ತೆಗೆದುಹಾಕಲ್ಪಟ್ಟಿತು.

ಒಬ್ಬ ಹುರುಪಿನ ಸೌವಾರ್ತಿಕಳೊಂದಿಗೆ ವಿವಾಹ

ಫಾರ್ಮಿನಲ್ಲಿದ್ದಾಗ ನಾನು ವಿವಾಹದ ಕುರಿತು ಗಂಭೀರವಾಗಿ ಆಲೋಚಿಸತೊಡಗಿದೆ ಮತ್ತು ಕಾರಲೀ ಕ್ಲೋಗನ್‌ ಎಂಬ ಒಬ್ಬ ಪಯನೀಯರ್‌ ಯುವತಿಯ ಕಡೆಗೆ ಆಕರ್ಷಿತನಾದೆ. ಕಾರಲೀಯ ಕುಟುಂಬದಲ್ಲಿ ಬೈಬಲಿನ ಸಂದೇಶಕ್ಕೆ ಆಸಕ್ತಿಯನ್ನು ತೋರಿಸಿದವರಲ್ಲಿ ಮೊದಲಿಗರು ಅವಳ ಅಜ್ಜಿಯಾಗಿದ್ದರು. ಅವರು ಮರಣಶಯ್ಯೆಯಲ್ಲಿದ್ದಾಗ ಕಾರಲೀಯ ತಾಯಿಯಾಗಿದ್ದ ವೇರರಿಗೆ ಹೇಳಿದ್ದು: “ದೇವರನ್ನು ಪ್ರೀತಿಸುವಂಥ ಹಾಗೂ ಆತನ ಸೇವೆಮಾಡುವಂಥ ರೀತಿಯಲ್ಲಿ ನಿನ್ನ ಮಕ್ಕಳನ್ನು ಬೆಳೆಸು ಮತ್ತು ಒಂದು ದಿನ ನಾವು ಭೂಪರದೈಸಿನಲ್ಲಿ ಭೇಟಿಯಾಗುವ.” ಸಮಯಾನಂತರ, ಒಬ್ಬ ಪಯನೀಯರನು ಇಂದು ಜೀವಿಸುತ್ತಿರುವ ಲಕ್ಷಾಂತರ ಮಂದಿ ಎಂದಿಗೂ ಸಾಯುವುದಿಲ್ಲ (ಇಂಗ್ಲಿಷ್‌) ಎಂಬ ಪ್ರಕಾಶನದೊಂದಿಗೆ ವೇರರ ಮನೆಗೆ ಬಂದಾಗ, ತನ್ನ ತಾಯಿ ಹೇಳಿದ್ದ ಮಾತುಗಳು ವೇರರಿಗೆ ಅರ್ಥವತ್ತಾಗಿ ಕಂಡುಬಂದವು. ಮಾನವಕುಲವು ಒಂದು ಪರದೈಸ ಭೂಮಿಯಲ್ಲಿ ಜೀವಿತವನ್ನು ಆನಂದಿಸುವುದು ದೇವರ ಉದ್ದೇಶವಾಗಿತ್ತೆಂಬುದನ್ನು ಆ ಪುಸ್ತಿಕೆಯು ವೇರರಿಗೆ ಮನದಟ್ಟುಮಾಡಿತು. (ಪ್ರಕಟನೆ 21:4) 1930ಗಳ ಆರಂಭದಲ್ಲೇ ವೇರ ದೀಕ್ಷಾಸ್ನಾನವನ್ನು ಪಡೆದುಕೊಂಡರು, ಮತ್ತು ಅವರ ತಾಯಿ ಅವರಿಗೆ ಉತ್ತೇಜಿಸಿದ್ದಂತೆಯೇ ತಮ್ಮ ಮೂವರು ಹೆಣ್ಣುಮಕ್ಕಳು​—ಲೂಸೀ, ಜೇನ್‌, ಮತ್ತು ಕಾರಲೀ​—ದೇವರಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಅವರಿಗೆ ಸಹಾಯಮಾಡಿದರು. ಆದರೂ, ಕುಟುಂಬಗಳಲ್ಲಿ ಇದೇ ರೀತಿ ಸಂಭವಿಸಬಹುದೆಂದು ಯೇಸು ಎಚ್ಚರಿಸಿದ್ದಂತೆಯೇ, ಕಾರಲೀಯ ತಂದೆಯವರು ತಮ್ಮ ಕುಟುಂಬದ ಧಾರ್ಮಿಕ ಅಭಿರುಚಿಗಳನ್ನು ಬಲವಾಗಿ ವಿರೋಧಿಸಿದರು.​—ಮತ್ತಾಯ 10:​34-36.

ಕ್ಲೋಗನ್‌ ಕುಟುಂಬವು ಸಂಗೀತಾಭಿರುಚಿಯಿದ್ದ ಕುಟುಂಬವಾಗಿದ್ದು, ಮಕ್ಕಳಲ್ಲಿ ಪ್ರತಿಯೊಬ್ಬರೂ ಒಂದೊಂದು ವಾದ್ಯವನ್ನು ನುಡಿಸುತ್ತಿದ್ದರು. ಕಾರಲೀ ವಾಯಲಿನ್‌ ನುಡಿಸುತ್ತಿದ್ದಳು, ಮತ್ತು 1939ರಲ್ಲಿ 15 ವರ್ಷ ಪ್ರಾಯದವಳಾಗಿದ್ದಾಗ, ಸಂಗೀತದಲ್ಲಿ ಅವಳಿಗೆ ಡಿಪ್ಲೋಮ ನೀಡಲ್ಪಟ್ಟಿತ್ತು. IIನೆಯ ಲೋಕ ಯುದ್ಧದ ಆರಂಭವು, ಕಾರಲೀಯು ತನ್ನ ಭವಿಷ್ಯತ್ತಿನ ಕುರಿತು ಗಂಭೀರವಾಗಿ ಆಲೋಚಿಸುವಂತೆ ಮಾಡಿತು. ಅವಳು ತನ್ನ ಜೀವಿತವನ್ನು ಹೇಗೆ ಉಪಯೋಗಿಸಲಿದ್ದಳೆಂಬುದನ್ನು ನಿರ್ಧರಿಸಲು ಸಮಯವು ಈಗ ಕೂಡಿಬಂದಿತ್ತು. ಇನ್ನೊಂದು ಕಡೆಯಲ್ಲಿ, ಸಂಗೀತದ ಜೀವನ ಮಾರ್ಗವನ್ನು ಬೆನ್ನಟ್ಟುವ ಸಾಧ್ಯತೆಯೂ ಇತ್ತು. ಇಷ್ಟರಲ್ಲೇ ಮೆಲ್‌ಬರ್ನ್‌ ಸಿಂಫನಿ ಆರ್ಕೆಸ್ಟ್ರಾದಲ್ಲಿ ವಾಯಲಿನ್‌ ನುಡಿಸಲು ಬರುವಂತೆ ಅವಳಿಗೆ ಆಮಂತ್ರಣವು ನೀಡಲ್ಪಟ್ಟಿತ್ತು. ಮತ್ತೊಂದು ಕಡೆಯಲ್ಲಿ, ರಾಜ್ಯದ ಸಂದೇಶವನ್ನು ಸಾರುವ ಮಹಾನ್‌ ಕಾರ್ಯಕ್ಕಾಗಿ ತನ್ನ ಸಮಯವನ್ನು ವಿನಿಯೋಗಿಸುವ ಸಾಧ್ಯತೆಯೂ ಅವಳಿಗಿತ್ತು. ಇದರ ಕುರಿತು ಗಂಭೀರವಾಗಿ ಆಲೋಚಿಸಿದ ಬಳಿಕ, ಕಾರಲೀ ಮತ್ತು ಅವಳ ಇಬ್ಬರು ಅಕ್ಕಂದಿರು 1940ರಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡರು ಮತ್ತು ಪೂರ್ಣ ಸಮಯದ ಸೌವಾರ್ತಿಕ ಕೆಲಸವನ್ನು ಆರಂಭಿಸಲಿಕ್ಕಾಗಿ ಸಿದ್ಧತೆಗಳನ್ನು ಮಾಡಿದರು.

ಪೂರ್ಣ ಸಮಯದ ಶುಶ್ರೂಷೆಯ ಕುರಿತು ಕಾರಲೀ ದೃಢನಿರ್ಧಾರವನ್ನು ಮಾಡಿದ ಸ್ವಲ್ಪ ಸಮಯದ ಬಳಿಕ, ಆಸ್ಟ್ರೇಲಿಯ ಬ್ರಾಂಚ್‌ನಿಂದ ಬಂದ ಲಾಯ್ಡ್‌ ಬ್ಯಾರಿ ಎಂಬ ಒಬ್ಬ ಜವಾಬ್ದಾರಿಯುತ ಸಹೋದರರು ಅವಳನ್ನು ಸಮೀಪಿಸಿದರು. ಸಮಯಾನಂತರ ಈ ಸಹೋದರರು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿ ಕಾರ್ಯನಡಿಸಿದರು. ಅವರು ಆಗಷ್ಟೇ ಮೆಲ್‌ಬರ್ನ್‌ನಲ್ಲಿ ಒಂದು ಭಾಷಣವನ್ನು ಕೊಟ್ಟಿದ್ದರು ಮತ್ತು ಅವರು ಕಾರಲೀಗೆ ಹೇಳಿದ್ದು: “ನಾನು ಬೆತೆಲಿಗೆ ಹಿಂದಿರುಗುತ್ತಿದ್ದೇನೆ. ನೀನೇಕೆ ನನ್ನೊಂದಿಗೆ ಪ್ರಯಾಣಿಸಿ, ಬೆತೆಲ್‌ ಕುಟುಂಬಕ್ಕೆ ಸೇರಿಕೊಳ್ಳಬಾರದು?” ಅವಳು ಸಿದ್ಧಮನಸ್ಸಿನಿಂದ ಆ ಆಮಂತ್ರಣವನ್ನು ಸ್ವೀಕರಿಸಿದಳು.

ಕಾರಲೀ ಮತ್ತು ಬೆತೆಲ್‌ ಕುಟುಂಬದಲ್ಲಿದ್ದ ಇತರ ಸಹೋದರಿಯರು, ಯುದ್ಧ ವರ್ಷಗಳ ನಿಷೇಧದ ಸಮಯದಲ್ಲಿ ಆಸ್ಟ್ರೇಲಿಯದಲ್ಲಿದ್ದ ಸಹೋದರರಿಗೆ ಬೈಬಲ್‌ ಸಾಹಿತ್ಯವನ್ನು ಸರಬರಾಜುಮಾಡುವುದರಲ್ಲಿ ಅತ್ಯಾವಶ್ಯಕ ಪಾತ್ರವನ್ನು ವಹಿಸಿದರು. ಸಹೋದರ ಮಾಲ್ಕಮ್‌ ವಾಲ್‌ರ ಮೇಲ್ವಿಚಾರಣೆಯ ಕೆಳಗೆ, ಅವರೇ ವಾಸ್ತವದಲ್ಲಿ ಹೆಚ್ಚಿನ ಮುದ್ರಣಕಾರ್ಯವನ್ನು ಮಾಡಿದರು. ಹೊಸ ಲೋಕ (ಇಂಗ್ಲಿಷ್‌) ಮತ್ತು ಮಕ್ಕಳು (ಇಂಗ್ಲಿಷ್‌) ಎಂಬ ಪುಸ್ತಕಗಳು ಮುದ್ರಿಸಲ್ಪಡುತ್ತಿದ್ದವು ಮತ್ತು ಬೈಂಡ್‌ಮಾಡಲ್ಪಡುತ್ತಿದ್ದವು. ನಿಷೇಧವು ಜಾರಿಯಲ್ಲಿದ್ದ ಎರಡು ವರ್ಷಗಳಿಗಿಂತಲೂ ಹೆಚ್ಚಿನ ಸಮಯಾವಧಿಯಲ್ಲಿ ಕಾವಲಿನಬುರುಜು ಪತ್ರಿಕೆಯ ಒಂದೇ ಒಂದು ಸಂಚಿಕೆಯ ಮುದ್ರಣವೂ ನಿಂತುಹೋಗಲಿಲ್ಲ.

ಪೊಲೀಸರಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಮುದ್ರಣಾಲಯವನ್ನು ಸುಮಾರು 15 ಬಾರಿ ಸ್ಥಳಾಂತರಿಸಬೇಕಾಯಿತು. ಒಂದು ಸಂದರ್ಭದಲ್ಲಿ, ಬೈಬಲ್‌ ಸಾಹಿತ್ಯವು ಒಂದು ಕಟ್ಟಡದ ತಳಮನೆಯಲ್ಲಿ ಮುದ್ರಿಸಲ್ಪಟ್ಟಿತು ಮತ್ತು ಎದುರಿಗೆ ಮಾತ್ರ ಬೇರೆ ರೀತಿಯ ಮುದ್ರಣವನ್ನು ಮಾಡಲಾಯಿತು. ಯಾವುದೇ ಅಪಾಯವು ಎದುರಾದಾಗ, ಸ್ವಾಗತಕೋಣೆಯಲ್ಲಿದ್ದ ಸಹೋದರಿಯು ಒಂದು ಗುಂಡಿಯನ್ನು ಒತ್ತುತ್ತಿದ್ದಳು, ಮತ್ತು ಅದು ತಳಮನೆಯಲ್ಲಿ ಗಂಟೆಯನ್ನು ಬಾರಿಸುತ್ತಿತ್ತು; ಆಗ ಅಲ್ಲಿದ್ದ ಸಹೋದರಿಯರು ಯಾರಾಗಲಿ ತನಿಖೆಯನ್ನು ಆರಂಭಿಸುವುದಕ್ಕೆ ಮುಂಚೆಯೇ ಪ್ರಕಾಶನಗಳನ್ನು ಅಡಗಿಸಿಡಲು ಸಾಧ್ಯವಾಗುತ್ತಿತ್ತು.

ಅಂಥ ಒಂದು ತನಿಖೆಯ ಸಮಯದಲ್ಲಿ, ಕಾವಲಿನಬುರುಜು ಪತ್ರಿಕೆಯ ಒಂದು ಪ್ರತಿಯು ಎಲ್ಲರ ದೃಷ್ಟಿಗೂ ಬೀಳುವಂಥ ರೀತಿಯಲ್ಲಿ ಮೇಜಿನ ಮೇಲೆ ಇತ್ತು ಎಂಬುದನ್ನು ಸಹೋದರಿಯರಲ್ಲಿ ಕೆಲವರು ಗ್ರಹಿಸಿದಾಗ, ಅವರಿಗೆ ತುಂಬ ಆಘಾತವಾಯಿತು. ಆದರೆ ಪೊಲೀಸನೊಬ್ಬನು ಒಳಗೆ ಬಂದು, ಆ ಕಾವಲಿನಬುರುಜು ಪತ್ರಿಕೆಯ ಮೇಲೆಯೇ ತನ್ನ ಬ್ರೀಫ್‌ಕೇಸನ್ನು ಇಟ್ಟು, ತಲಾಷನ್ನು ಮಾಡತೊಡಗಿದನು. ಏನೂ ಸಿಗದಿದ್ದಾಗ ಅವನು ತನ್ನ ಬ್ರೀಫ್‌ಕೇಸನ್ನು ತೆಗೆದುಕೊಂಡು ತನ್ನ ದಾರಿ ಹಿಡಿದನು!

ನಿಷೇಧವು ತೆಗೆದುಹಾಕಲ್ಪಟ್ಟ ಬಳಿಕ ಮತ್ತು ಬ್ರಾಂಚ್‌ ಸೊತ್ತು ಸಹೋದರರಿಗೆ ಹಿಂದಿರುಗಿಸಲ್ಪಟ್ಟ ಬಳಿಕ, ಅವರಲ್ಲಿ ಅನೇಕರಿಗೆ ವಿಶೇಷ ಪಯನೀಯರರೋಪಾದಿ ಕ್ಷೇತ್ರಕ್ಕೆ ಹೋಗಿ ಸೇವೆಮಾಡುವ ಸದವಕಾಶವು ಕೊಡಲ್ಪಟ್ಟಿತು. ಆ ಸಮಯದಲ್ಲೇ ಕಾರಲೀ, ಗ್ಲೆನಿ ನಿಸ್‌ಗೆ ಹೋಗಲು ತನ್ನನ್ನು ನೀಡಿಕೊಂಡಳು. 1948ರ ಜನವರಿ 1ರಂದು ನಾವು ವಿವಾಹವಾದಾಗ ನಾನು ಅಲ್ಲಿ ಅವಳನ್ನು ಜೊತೆಗೂಡಿದೆ. ನಾವು ಆ ನೇಮಕವನ್ನು ಬಿಟ್ಟುಹೋಗುವಾಗ, ಅಲ್ಲಿ ಮಹತ್ತರವಾಗಿ ಅಭಿವೃದ್ಧಿ ಹೊಂದುತ್ತಿದ್ದಂಥ ಒಂದು ಸಭೆಯು ಸ್ಥಾಪಿಸಲ್ಪಟ್ಟಿತ್ತು.

ನಮ್ಮ ಮುಂದಿನ ನೇಮಕವು ರಾಕ್‌ಹ್ಯಾಂಪ್ಟನ್‌ ಆಗಿತ್ತು. ಆದರೆ ನಾವು ಅಲ್ಲಿ ಯಾವುದೇ ವಸತಿಸೌಕರ್ಯವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಆದುದರಿಂದ ಒಬ್ಬ ಆಸಕ್ತ ವ್ಯಕ್ತಿಯ ಫಾರ್ಮ್‌ನಲ್ಲಿದ್ದ ಒಂದು ಚಿಕ್ಕ ಜಾಗದಲ್ಲಿ ನಾವು ಒಂದು ಡೇರೆಯನ್ನು ಹಾಕಿದೆವು. ಮುಂದಿನ ಒಂಬತ್ತು ತಿಂಗಳುಗಳ ವರೆಗೆ ಆ ಡೇರೆಯು ನಮ್ಮ ಮನೆಯಾಗಿರಲಿತ್ತು. ನಾವು ಆ ಡೇರೆಯಲ್ಲಿ ಇನ್ನೂ ಹೆಚ್ಚು ಕಾಲ ವಾಸಿಸಬಹುದಾಗಿತ್ತು. ಆದರೆ ಮಳೆಗಾಲ ಬಂದಾಗ, ಉಷ್ಣವಲಯದ ಬಿರುಗಾಳಿಯು ಡೇರೆಯನ್ನು ಸಂಪೂರ್ಣವಾಗಿ ತುಂಡು ತುಂಡು ಮಾಡಿಬಿಟ್ಟಿತು ಮತ್ತು ಧಾರಾಕಾರವಾದ ಮಳೆಯು ಅದನ್ನು ಕೊಚ್ಚಿಕೊಂಡುಹೋಯಿತು. *

ಒಂದು ವಿದೇಶೀ ನೇಮಕಕ್ಕೆ ನಮ್ಮ ಸ್ಥಳಾಂತರ

ನಾವು ರಾಕ್‌ಹ್ಯಾಂಪ್ಟನ್‌ನಲ್ಲಿದ್ದಾಗ, ಮಿಷನೆರಿ ತರಬೇತಿಗಾಗಿರುವ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 19ನೆಯ ತರಗತಿಗೆ ಹಾಜರಾಗಲಿಕ್ಕಾಗಿ ನಮಗೆ ಆಮಂತ್ರಣ ಸಿಕ್ಕಿತು. ಮತ್ತು ಈ ರೀತಿಯಲ್ಲಿ ನಾವು 1952ರಲ್ಲಿ ಪದವಿಯನ್ನು ಪಡೆದ ಬಳಿಕ, ಆ ಸಮಯದಲ್ಲಿ ಯಾವುದು ನೈರುತ್ಯ ಆಫ್ರಿಕ ಎಂದು ಪ್ರಸಿದ್ಧವಾಗಿತ್ತೋ ಆ ದೇಶಕ್ಕೆ ಕಳುಹಿಸಲ್ಪಟ್ಟೆವು.

ಅತಿ ಬೇಗನೆ, ಕ್ರೈಸ್ತಪ್ರಪಂಚದ ಪಾದ್ರಿಗಳು ನಮ್ಮ ಮಿಷನೆರಿ ಕೆಲಸದ ಕುರಿತು ತಮಗೆ ಹೇಗನಿಸುತ್ತದೆಂಬುದನ್ನು ತೋರಿಸಿದರು. ಪ್ರತಿ ಭಾನುವಾರ ಒಂದಾದ ಬಳಿಕ ಇನ್ನೊಂದರಂತೆ ಆರು ವಾರಗಳ ವರೆಗೆ, ಅವರು ವೇದಿಕೆಯಿಂದ ತಮ್ಮ ಸಭೆಗಳಿಗೆ ನಮ್ಮ ಕುರಿತು ಎಚ್ಚರಿಕೆಯಿಂದಿರುವಂತೆ ಹೇಳಿದರು. ನಾವು ಬಂದಾಗ ಬಾಗಿಲನ್ನು ತೆರೆಯದಿರುವಂತೆ, ಮತ್ತು ಬೈಬಲಿನಿಂದ ಓದಿಹೇಳುವುದು ಅವರನ್ನು ಗೊಂದಲಕ್ಕೆ ಒಳಪಡಿಸಸಾಧ್ಯವಿರುವುದರಿಂದ ನಾವು ಬೈಬಲಿನಿಂದ ಓದಿಹೇಳಲು ಅನುಮತಿಸದಿರುವಂತೆ ಅವರು ಜನರಿಗೆ ಹೇಳಿದರು. ಒಂದು ಕ್ಷೇತ್ರದಲ್ಲಿ ನಾವು ಅನೇಕ ಪ್ರಕಾಶನಗಳನ್ನು ವಿತರಿಸಿದೆವು, ಆದರೆ ಒಬ್ಬ ಪಾದ್ರಿಯು ನಮ್ಮ ನಂತರ ಪ್ರತಿಯೊಂದು ಮನೆಗೆ ಹೋಗಿ ವಿತರಿಸಿದ ಪ್ರಕಾಶನಗಳನ್ನೆಲ್ಲಾ ಸಂಗ್ರಹಿಸಿದನು. ಒಂದು ದಿನ ನಾವು ಆ ಪಾದ್ರಿಯ ಅಧ್ಯಯನ ಕೋಣೆಯಲ್ಲಿ ಅವನೊಂದಿಗೆ ಚರ್ಚಿಸುತ್ತಿದ್ದಾಗ, ನಮ್ಮ ಪುಸ್ತಕಗಳಲ್ಲಿ ಅನೇಕ ಪುಸ್ತಕಗಳು ಅವನ ಬಳಿ ಇದ್ದದ್ದು ನಮ್ಮ ಕಣ್ಣಿಗೆ ಬಿತ್ತು.

ಸ್ವಲ್ಪದರಲ್ಲೇ ಸ್ಥಳಿಕ ಅಧಿಕಾರಿಗಳು ಸಹ ನಮ್ಮ ಚಟುವಟಿಕೆಗಳ ಕುರಿತು ಅವರಿಗಿದ್ದ ಚಿಂತೆಯನ್ನು ತೋರಿಸಲಾರಂಭಿಸಿದರು. ಪಾದ್ರಿಗಳ ಚಿತಾವಣೆಯಿಂದಾಗಿ, ನಮಗೆ ಕಮ್ಯೂನಿಸ್ಟ್‌ ವ್ಯವಸ್ಥೆಯೊಂದಿಗೆ ಸಂಪರ್ಕವಿರಬಹುದು ಎಂದು ಅವರು ಸಂದೇಹಪಟ್ಟರು ಎಂಬುದರಲ್ಲಿ ಸಂಶಯವಿಲ್ಲ. ಆದುದರಿಂದ ನಮ್ಮ ಬೆರಳಿನ ಗುರುತುಗಳನ್ನು ತೆಗೆದುಕೊಳ್ಳಲಾಯಿತು ಮತ್ತು ನಾವು ಯಾರನ್ನು ಭೇಟಿಮಾಡಿದೆವೋ ಆ ಜನರಲ್ಲಿ ಕೆಲವರನ್ನು ವಿಚಾರಣೆಮಾಡಲಾಯಿತು. ಈ ಎಲ್ಲಾ ವಿರೋಧದ ಎದುರಿನಲ್ಲೂ ನಮ್ಮ ಕೂಟಗಳ ಹಾಜರಿಯು ಮಾತ್ರ ಏಕಪ್ರಕಾರವಾಗಿ ಬೆಳೆಯಿತು.

ನಾವು ಅಲ್ಲಿ ಉಳಿದ ಆರಂಭದ ಸಮಯದಿಂದಲೂ, ಓವಾಂಬೋ, ಹರೆರೋ, ಮತ್ತು ನಾಮಾ ಎಂಬ ಸ್ಥಳೀಯ ಸಮುದಾಯದ ಜನರ ನಡುವೆ ಬೈಬಲ್‌ ಸಂದೇಶವನ್ನು ಹಬ್ಬಿಸಲಿಕ್ಕಾಗಿ ನಾವು ತೀವ್ರಾಪೇಕ್ಷೆಯನ್ನು ಬೆಳೆಸಿಕೊಂಡೆವು. ಆದರೂ ಇದು ಅಷ್ಟೇನೂ ಸುಲಭವಾಗಿರಲಿಲ್ಲ. ಆ ದಿನಗಳಲ್ಲಿ ನೈರುತ್ಯ ಆಫ್ರಿಕವು, ದಕ್ಷಿಣ ಆಫ್ರಿಕದ ವರ್ಣಭೇದ ನೀತಿಯ ಸರಕಾರದ ಅಧೀನದಲ್ಲಿತ್ತು. ಬಿಳಿಯರಾಗಿದ್ದ ನಾವು ಸರಕಾರದ ಪರವಾನಗಿ ಇಲ್ಲದೆ ಕಪ್ಪು ವರ್ಣೀಯರ ಕ್ಷೇತ್ರಗಳಲ್ಲಿ ಸಾಕ್ಷಿನೀಡುವ ಅನುಮತಿಯಿರಲಿಲ್ಲ. ಆಗಿಂದಾಗ್ಗೆ ನಾವು ಈ ಪರವಾನಗಿಗಾಗಿ ಅರ್ಜಿಯನ್ನು ಹಾಕಿದೆವಾದರೂ, ಅಧಿಕಾರಿಗಳು ನಮಗೆ ಅನುಮತಿಯನ್ನು ನೀಡಲು ನಿರಾಕರಿಸಿದರು.

ನಮ್ಮ ವಿದೇಶೀ ನೇಮಕದಲ್ಲಿ ಎರಡು ವರ್ಷಗಳನ್ನು ಕಳೆದ ಬಳಿಕ, ನಮಗೊಂದು ಅನಿರೀಕ್ಷಿತವು ಕಾದಿತ್ತು. ಕಾರಲೀ ಗರ್ಭಿಣಿಯಾಗಿದ್ದಳು. 1955ರ ಅಕ್ಟೋಬರ್‌ ತಿಂಗಳಿನಲ್ಲಿ ನಮ್ಮ ಮಗಳಾದ ಶಾರ್ಲಟ್‌ ಜನಿಸಿದಳು. ಇನ್ನುಮುಂದೆ ನಾವು ಮಿಷನೆರಿಗಳೋಪಾದಿ ಸೇವೆಯನ್ನು ಮುಂದುವರಿಸಲು ಸಾಧ್ಯವಿರಲಿಲ್ಲವಾದರೂ, ನಾನು ಒಂದು ಪಾರ್ಟ್‌-ಟೈಮ್‌ ಉದ್ಯೋಗವನ್ನು ಕಂಡುಕೊಂಡು, ಸ್ವಲ್ಪ ಸಮಯದ ವರೆಗೆ ಒಬ್ಬ ಪಯನೀಯರನೋಪಾದಿ ಮುಂದುವರಿಯಲು ಶಕ್ತನಾದೆ.

ನಮ್ಮ ಪ್ರಾರ್ಥನೆಗಳಿಗೆ ಉತ್ತರ

ಇಸವಿ 1960ರಲ್ಲಿ ನಾವು ಇನ್ನೊಂದು ಪಂಥಾಹ್ವಾನವನ್ನು ಎದುರಿಸಿದೆವು. ಏನೆಂದರೆ ಕಾರಲೀಗೆ ಒಂದು ಪತ್ರ ಬಂತು. ಅದರಲ್ಲಿ ಅವಳ ತಾಯಿ ಎಷ್ಟು ಅಸ್ವಸ್ಥರಾಗಿದ್ದಾರೆಂದರೆ, ಈಗ ಕಾರಲೀ ಮನೆಗೆ ಹೋಗದಿದ್ದಲ್ಲಿ ಅವಳು ಇನ್ನೆಂದೂ ತನ್ನ ತಾಯಿಯನ್ನು ನೋಡಲಾರಳು ಎಂದು ಬರೆಯಲ್ಪಟ್ಟಿತ್ತು. ಆದುದರಿಂದ ನಾವು ನೈರುತ್ಯ ಆಫ್ರಿಕವನ್ನು ಬಿಟ್ಟು, ಪುನಃ ಆಸ್ಟ್ರೇಲಿಯಕ್ಕೆ ಹಿಂದಿರುಗುವ ಯೋಜನೆಯನ್ನು ಮಾಡಿದೆವು. ಆಗ ಒಂದು ಘಟನೆಯು ಸಂಭವಿಸಿತು. ನಾವು ಅಲ್ಲಿಂದ ಹೊರಡಲಿದ್ದ ವಾರವೇ, ಸ್ಥಳಿಕ ಅಧಿಕಾರಿಗಳಿಂದ ನನಗೆ ಕಾಟೂಟೂರಾ ಎಂಬ ಕಪ್ಪು ಜನರ ಕ್ಷೇತ್ರವನ್ನು ಪ್ರವೇಶಿಸುವ ಪರವಾನಗಿಯು ಕೊಡಲ್ಪಟ್ಟಿತು. ಈಗ ನಾವೇನು ಮಾಡಲಿದ್ದೆವು? ಪರವಾನಗಿಯನ್ನು ಪಡೆದುಕೊಳ್ಳಲಿಕ್ಕಾಗಿ ಏಳು ವರ್ಷಗಳ ವರೆಗೆ ಸತತ ಹೋರಾಟ ನಡೆಸಿದ ಬಳಿಕ, ಈಗ ಅದನ್ನು ಹಿಂದಿರುಗಿಸುವುದೋ? ನಾವು ಆರಂಭಿಸಿರುವ ಕೆಲಸವನ್ನು ಇತರರು ಮಾಡಸಾಧ್ಯವಿದೆ ಎಂದು ತರ್ಕಿಸುವುದು ತುಂಬ ಸುಲಭವಾಗಿತ್ತು. ಆದರೆ ಇದು ಯೆಹೋವನಿಂದ ಬಂದ ಒಂದು ಆಶೀರ್ವಾದವಾಗಿರಲಿಲ್ಲವೋ, ನಮ್ಮ ಪ್ರಾರ್ಥನೆಗಳಿಗೆ ಆತನ ಉತ್ತರವಾಗಿರಲಿಲ್ಲವೋ?

ಆ ಕೂಡಲೆ ನಾನು ಒಂದು ನಿರ್ಣಯವನ್ನು ಮಾಡಿದೆ. ನಾನು ಈ ದೇಶವನ್ನು ಬಿಟ್ಟುಹೋಗುವುದಿಲ್ಲ, ಏಕೆಂದರೆ ನಾವು ಎಲ್ಲವನ್ನೂ ಬಿಟ್ಟು ಆಸ್ಟ್ರೇಲಿಯಕ್ಕೆ ಹೋಗುವುದಾದರೆ, ಶಾಶ್ವತವಾದ ನಿವಾಸಕ್ಕಾಗಿ ನಾವು ಮಾಡಿದ ಹೋರಾಟವು ಗಂಡಾಂತರಕ್ಕೆ ಒಳಗಾಗುತ್ತದೆ ಎಂಬ ಭಯ ನನಗಿತ್ತು. ಮರುದಿನ, ನಾನು ನನ್ನ ಹಡಗಿನ ಬುಕಿಂಗ್‌ ಅನ್ನು ರದ್ದುಮಾಡಿದೆ ಮತ್ತು ದೀರ್ಘವಾದ ರಜೆಗಾಗಿ ಕಾರಲೀ ಹಾಗೂ ಶಾರ್ಲಟ್‌ರನ್ನು ಮಾತ್ರ ಆಸ್ಟ್ರೇಲಿಯಕ್ಕೆ ಕಳುಹಿಸಿದೆ.

ಅವರು ಇಲ್ಲದಿದ್ದಾಗ, ಕಪ್ಪು ಜನರ ಕ್ಷೇತ್ರದಲ್ಲಿದ್ದ ನಿವಾಸಿಗಳಿಗೆ ನಾನು ಸಾಕ್ಷಿಯನ್ನು ನೀಡಲಾರಂಭಿಸಿದೆ. ಅಲ್ಲಿ ತೋರಿಸಲ್ಪಟ್ಟ ಆಸಕ್ತಿಯು ಮಹತ್ತರವಾದದ್ದಾಗಿತ್ತು. ಕಾರಲೀ ಮತ್ತು ಶಾರ್ಲಟ್‌ ಹಿಂದಿರುಗಿದಾಗ, ಕಪ್ಪು ಜನರ ಕ್ಷೇತ್ರದಿಂದ ಬಂದ ಅನೇಕ ಜನರು ನಮ್ಮ ಕೂಟಗಳಿಗೆ ಹಾಜರಾಗುತ್ತಿದ್ದರು.

ಈ ಸಮಯದಷ್ಟಕ್ಕೆ ನನ್ನ ಬಳಿ ಒಂದು ಹಳೇ ಕಾರ್‌ ಇತ್ತು. ಇದರ ಸಹಾಯದಿಂದ ನಾನು ಆಸಕ್ತ ಜನರನ್ನು ಕೂಟಕ್ಕೆ ಕರೆತರಲು ಶಕ್ತನಾಗಿದ್ದೆ. ಪ್ರತಿಯೊಂದು ಕೂಟಕ್ಕೆ ಒಂದು ಬಾರಿಗೆ ಏಳು, ಎಂಟು, ಅಥವಾ ಒಂಬತ್ತು ಜನರನ್ನು ಕರೆದುಕೊಂಡು, ನಾನು ನಾಲ್ಕು ಅಥವಾ ಐದು ಬಾರಿ ಹೋಗಿ ಬರುತ್ತಿದ್ದೆ. ಕೊನೆಯ ವ್ಯಕ್ತಿಯು ಕಾರ್‌ನಿಂದ ಇಳಿದ ನಂತರ, “ಕಾರ್‌ನ ಸೀಟಿನ ಕೆಳಗೆ ಇನ್ನೂ ಎಷ್ಟು ಜನರನ್ನು ತುಂಬಿಸಿದ್ದೀರಾ?” ಎಂದು ಕಾರಲೀ ತಮಾಷೆಗಾಗಿ ಕೇಳುತ್ತಿದ್ದಳು.

ಸಾರುವ ಕೆಲಸದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರಲಿಕ್ಕಾಗಿ, ನಮಗೆ ಸ್ಥಳಿಕ ಜನರ ಭಾಷೆಯಲ್ಲಿ ಸಾಹಿತ್ಯದ ಅಗತ್ಯವಿತ್ತು. ಆದುದರಿಂದ ಹೊಸ ಲೋಕದಲ್ಲಿ ಜೀವನ ಎಂಬ ಟ್ರ್ಯಾಕ್ಟ್‌ ನಾಲ್ಕು​—ಹರೆರೋ, ನಾಮಾ, ಡಾಂಗ, ಮತ್ತು ಕನ್ಯಾಮ​—ಸ್ಥಳಿಕ ಭಾಷೆಗಳಲ್ಲಿ ಭಾಷಾಂತರಿಸುವಂತೆ ಏರ್ಪಡಿಸುವ ಸುಯೋಗ ನನಗಿತ್ತು. ಭಾಷಾಂತರಕಾರರು ವಿದ್ಯಾವಂತರಾದ ಜನರಾಗಿದ್ದು, ನಾವು ಅವರೊಂದಿಗೆ ಬೈಬಲ್‌ ಅಧ್ಯಯನವನ್ನು ನಡೆಸುತ್ತಿದ್ದೆವು. ಆದರೆ ಪ್ರತಿಯೊಂದು ವಾಕ್ಯವು ಸರಿಯಾಗಿ ಭಾಷಾಂತರಿಸಲ್ಪಟ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ನಾನು ಅವರೊಂದಿಗೆ ಕುಳಿತುಕೊಂಡು ಕೆಲಸಮಾಡಬೇಕಾಗಿತ್ತು. ನಾಮಾ ಭಾಷೆಯಲ್ಲಿ ತೀರ ಮಿತವಾದ ಶಬ್ದಭಂಡಾರವಿದೆ. ದೃಷ್ಟಾಂತಕ್ಕಾಗಿ, “ಆರಂಭದಲ್ಲಿ ಆದಾಮನು ಪರಿಪೂರ್ಣ ಮನುಷ್ಯನಾಗಿದ್ದನು” ಎಂಬ ಅಂಶವನ್ನು ವಿವರಿಸಲು ನಾನು ಪ್ರಯತ್ನಿಸುತ್ತಾ ಇದ್ದೆ. ಭಾಷಾಂತರಕಾರನು ತನ್ನ ತಲೆ ಕೆರೆದುಕೊಳ್ಳುತ್ತಾ, “ಪರಿಪೂರ್ಣ” ಎಂಬ ಶಬ್ದಕ್ಕಾಗಿರುವ ನಾಮಾ ಭಾಷೆಯ ಪದವು ತನಗೆ ನೆನಪಿಗೆ ಬರುತ್ತಿಲ್ಲ ಎಂದು ಹೇಳಿದನು. ಕೊನೆಗೆ “ಗೊತ್ತಾಯ್ತು” ಅಂದನು. “ಆರಂಭದಲ್ಲಿ ಆದಾಮನು ಮಾಗಿದ ಪೀಚ್‌ ಹಣ್ಣಿನಂತಿದ್ದನು.”

ನಮ್ಮ ನೇಮಿತ ಮನೆಯಲ್ಲಿ ಸಂತೃಪ್ತರು

ಈಗ ನಮೀಬಿಯ ಎಂದು ಕರೆಯಲ್ಪಡುವ ಈ ದೇಶಕ್ಕೆ ನಾವು ಕಾಲಿಟ್ಟಾಗಿನಿಂದ ಸುಮಾರು 49 ವರ್ಷಗಳು ಸಂದಿವೆ. ಕಪ್ಪು ಜನರ ಸಮುದಾಯಗಳನ್ನು ಪ್ರವೇಶಿಸಲಿಕ್ಕಾಗಿ ನಮಗೆ ಇನ್ನೆಂದಿಗೂ ಪರವಾನಗಿಯನ್ನು ಪಡೆಯುವ ಅಗತ್ಯವಿಲ್ಲ. ಈಗ ನಮೀಬಿಯದಲ್ಲಿ ಒಂದು ಹೊಸ ಸರಕಾರವು ಆಳುತ್ತಿದ್ದು, ಅದು ವರ್ಣಭೇದ ನೀತಿಯಿಲ್ಲದಿರುವಂಥ ಸಂವಿಧಾನದ ಮೇಲಾಧಾರಿತವಾಗಿದೆ. ಇಂದು ವಿಂಟ್‌ಹುಕ್‌ನಲ್ಲಿ ನಾಲ್ಕು ದೊಡ್ಡ ಸಭೆಗಳಿವೆ ಮತ್ತು ಜನರು ಆರಾಮವಾದ ರಾಜ್ಯ ಸಭಾಗೃಹಗಳಲ್ಲಿ ಕೂಡಿಬರುತ್ತಾರೆ.

ನಾವು ಗಿಲ್ಯಡ್‌ ಶಾಲೆಯಲ್ಲಿ ಕೇಳಿಸಿಕೊಂಡ, “ನಿಮ್ಮ ವಿದೇಶೀ ನೇಮಕವನ್ನು ನಿಮ್ಮ ಮನೆಯಾಗಿ ಮಾಡಿಕೊಳ್ಳಿ” ಎಂಬ ಮಾತುಗಳ ಕುರಿತು ಅನೇಕವೇಳೆ ಪುನರಾಲೋಚಿಸಿದ್ದೇವೆ. ಯೆಹೋವನು ವಿಷಯಗಳನ್ನು ಮಾರ್ಗದರ್ಶಿಸಿರುವ ವಿಧದಿಂದ, ಈ ವಿದೇಶೀ ನೆಲವು ನಮ್ಮ ಮನೆಯಾಗಬೇಕು ಎಂಬುದು ಆತನ ಚಿತ್ತವಾಗಿತ್ತು ಎಂಬ ವಿಷಯವು ನಮಗೆ ಚೆನ್ನಾಗಿ ಮನದಟ್ಟಾಗಿದೆ. ಇಲ್ಲಿನ ಸಹೋದರರ ಆಸಕ್ತಿಕರವಾದ ಬೇರೆ ಬೇರೆ ಸಂಸ್ಕೃತಿಗಳ ಜೊತೆಗೆ ಅವರನ್ನು ನಾವು ಪ್ರೀತಿಸತೊಡಗಿದ್ದೇವೆ. ಅವರು ಸಂತೋಷಪಡುವಾಗ ಅವರೊಂದಿಗೆ ನಾವು ನಕ್ಕುನಲಿದಾಡಿದ್ದೇವೆ ಮತ್ತು ಅವರ ಕಷ್ಟದುಃಖಗಳಲ್ಲಿ ಅವರೊಂದಿಗೆ ಅತ್ತಿದ್ದೇವೆ. ಯಾರನ್ನು ನಾವು ಸಾಮಾನ್ಯವಾಗಿ ನಮ್ಮ ಕಾರ್‌ನಲ್ಲಿ ತುಂಬಿಸಿಕೊಂಡು ಕೂಟಗಳಿಗೆ ಕರೆದೊಯ್ಯುತ್ತಿದ್ದೆವೋ ಅವರಲ್ಲಿ ಕೆಲವರು ಈಗ ತಮ್ಮ ಸಭೆಗಳಲ್ಲಿ ಬಲವಾದ ಬೆಂಬಲಿಗರಾಗಿದ್ದಾರೆ. 1953ರಲ್ಲಿ ನಾವು ಈ ಸವಿಸ್ತಾರ ದೇಶಕ್ಕೆ ಆಗಮಿಸಿದಾಗ, ಸ್ಥಳಿಕವಾಗಿ ಸುವಾರ್ತೆಯನ್ನು ಸಾರುತ್ತಿದ್ದ ಪ್ರಚಾರಕರು ಹತ್ತಕ್ಕಿಂತಲೂ ಕಡಿಮೆಯಿದ್ದರು. ಆ ಚಿಕ್ಕ ಆರಂಭದಿಂದ, ಪ್ರಚಾರಕರ ಸಂಖ್ಯೆಯು ಈಗ 1,200ಕ್ಕೆ ಬೆಳೆದಿದೆ. ತನ್ನ ವಾಗ್ದಾನಕ್ಕನುಸಾರ, ಎಲ್ಲಿ ನಾವು ಮತ್ತು ಇತರರು ‘ಸಸಿಯನ್ನು ನೆಟ್ಟು ನೀರುಹೊಯ್ದಿದ್ದೇವೋ’ ಅಲ್ಲಿ ಯೆಹೋವನು ಬೆಳೆಯನ್ನು ನೀಡಿದ್ದಾನೆ.​—1 ಕೊರಿಂಥ 3:6.

ಪ್ರಥಮವಾಗಿ ಆಸ್ಟ್ರೇಲಿಯದಲ್ಲಿ ಮತ್ತು ಈಗ ನಮೀಬಿಯದಲ್ಲಿ, ಅನೇಕ ವರ್ಷಗಳ ಸೇವೆಯ ಕಡೆಗೆ ನಾವು ಹಿನ್ನೋಟ ಬೀರುವಾಗ, ನನಗೆ ಮತ್ತು ಕಾರಲೀಗೆ ಆಳವಾದ ಸಂತೃಪ್ತಿಯ ಅನಿಸಿಕೆಯಿದೆ. ಈಗಲೂ ಎಂದೆಂದಿಗೂ ಆತನ ಚಿತ್ತವನ್ನು ಮಾಡಲಿಕ್ಕಾಗಿ ಯೆಹೋವನು ನಮಗೆ ಬಲವನ್ನು ಕೊಡುತ್ತಾ ಮುಂದುವರಿಯಲಿ ಎಂದು ನಾವು ಹಾರೈಸುತ್ತೇವೆ ಮತ್ತು ಪ್ರಾರ್ಥಿಸುತ್ತೇವೆ.

[ಪಾದಟಿಪ್ಪಣಿ]

^ ಪ್ಯಾರ. 22 ವಾಲ್‌ಡ್ರನ್‌ ದಂಪತಿಯು ಈ ಕಷ್ಟಕರ ನೇಮಕವನ್ನು ಹೇಗೆ ತಾಳಿಕೊಂಡರು ಎಂಬುದರ ಕುರಿತಾದ ರೋಮಾಂಚಕ, ಅನಾಮಧೇಯ ವೃತ್ತಾಂತವು, 1952, ಡಿಸೆಂಬರ್‌ 1ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯ 707-8ನೆಯ ಪುಟಗಳಲ್ಲಿ ಕೊಡಲ್ಪಟ್ಟಿದೆ.

[ಪುಟ 26, 27ರಲ್ಲಿರುವ ಚಿತ್ರ]

ಆಸ್ಟ್ರೇಲಿಯದ ರಾಕ್‌ಹ್ಯಾಂಪ್ಟನ್‌ನಲ್ಲಿನ ನಮ್ಮ ನೇಮಕಕ್ಕೆ ಸ್ಥಳಾಂತರಿಸುವುದು

[ಪುಟ 27ರಲ್ಲಿರುವ ಚಿತ್ರ]

ಗಿಲ್ಯಡ್‌ ಶಾಲೆಯ ಪ್ರಯಾಣ ಮಾರ್ಗದಲ್ಲಿ ಹಡಗುಕಟ್ಟೆಯ ಮೇಲೆ

[ಪುಟ 28ರಲ್ಲಿರುವ ಚಿತ್ರ]

ನಮೀಬಿಯದಲ್ಲಿ ಸಾಕ್ಷಿನೀಡುವುದು ನಮಗೆ ಅತ್ಯಧಿಕ ಆನಂದವನ್ನು ತರುತ್ತದೆ