ದಿವಾಳಿಯಾಗುವ ತನಕ ಕೊಡುವುದು
ದಿವಾಳಿಯಾಗುವ ತನಕ ಕೊಡುವುದು
“ನನ್ನನ್ನು ನೀವು ಭಿಕ್ಷುಕನೆಂದು ಕರೆಯಬಹುದು. ನನಗೆ ಬೇಸರವಾಗದು. ನಾನು ಬೇಡುತ್ತಿರುವುದು ಯೇಸುವಿಗಾಗಿ ತಾನೇ.” ಪ್ರಾಟೆಸ್ಟಂಟ್ ಪಾದ್ರಿಯೊಬ್ಬನ ಈ ಪರಿಣಾಮಕಾರಿ ಮಾತುಗಳು, ಧಾರ್ಮಿಕ ಹಣಸಹಾಯದ ಬಗ್ಗೆ ನಡೆಯುತ್ತಿರುವ ವಾಗ್ವಾದವನ್ನು ಒತ್ತಿಹೇಳುತ್ತವೆ. ಸಂಘಟಿತ ಧರ್ಮವು ಗಣನೀಯ ಮೊತ್ತದ ಆರ್ಥಿಕ ಬೆಂಬಲದಿಂದ ಮಾತ್ರ ಪಾರಾಗಿ ಉಳಿಯಲು ಸಾಧ್ಯವಿರುವಂತೆ ತೋರುತ್ತದೆ. ಏಕೆಂದರೆ ಸಂಬಳಗಳನ್ನು ಕೊಡಲು, ದೇವಾಲಯಗಳನ್ನು ಕಟ್ಟಿ ಸುಸ್ಥಿತಿಯಲ್ಲಿಡಲು ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಬೆಂಬಲಿಸಲು ಹಣ ಅಗತ್ಯ. ಆದರೆ, ಬೇಕಾಗಿರುವ ಹಣವನ್ನು ಎಲ್ಲಿಂದ ತರಬೇಕು?
ಅನೇಕ ಚರ್ಚುಗಳಲ್ಲಿ ಇದಕ್ಕಿರುವ ಉಪಾಯವು ದಶಮಾಂಶದ ಕೊಡುವಿಕೆಯಾಗಿದೆ. * ನಾರ್ಮನ್ ರಾಬರ್ಟ್‌ಸನ್ ಎಂಬ ಸಂಚಾರಿ ಪ್ರಚಾರಕನು ಹೇಳುವುದು: “ಭೂಮಿಯ ಮೇಲಿರುವ ತನ್ನ ರಾಜ್ಯಕ್ಕೆ ಹಣಸಹಾಯ ನೀಡುವ ದೇವರ ಮಾರ್ಗವು ದಶಮಾಂಶ ಕೊಡುವಿಕೆಯಾಗಿದೆ. ಸುವಾರ್ತೆ ಸಾರಲ್ಪಡುವುದನ್ನು ಸಾಧ್ಯಗೊಳಿಸುವಂಥ ಸಂಗತಿಯು ದೇವರ ಈ ಅರ್ಥಶಾಸ್ತ್ರ ಪದ್ಧತಿಯೇ.” ಅದನ್ನು ಕೊಡುವ ತನ್ನ ಹಿಂಬಾಲಕರ ಜವಾಬ್ದಾರಿಯ ಕುರಿತು ಜ್ಞಾಪಕಹುಟ್ಟಿಸುವ ವಿಷಯದಲ್ಲಿ ಸ್ವಲ್ಪವೂ ಅಳುಕಿಲ್ಲದೆ, ಅವನು ಒತ್ತಿಹೇಳುವುದು: ‘ನೀವು ದಶಮಾಂಶವನ್ನು ಕೊಡುವುದು ನಿಮಗೆ ಕೊಡಲು ಸಾಧ್ಯವಿದೆ ಎಂಬ ಕಾರಣದಿಂದಲ್ಲ. ಅದು ವಿಧೇಯತೆಯ ಕೃತ್ಯವಾಗಿದೆ. ದಶಮಾಂಶವನ್ನು ಕೊಡದಿರುವುದು ದೇವಾಜ್ಞೆಯ ಉಲ್ಲಂಘನೆಯಾಗಿದೆ. ಅದು ಹಣ ಲಪಟಾಯಿಸುವಿಕೆಯಾಗಿದೆ.’—ದಶಮಾಂಶವನ್ನು ಕೊಡುವುದು—ದೇವರ ಹಣಕಾಸಿನ ಯೋಜನೆ (ಇಂಗ್ಲಿಷ್).
ಕೊಡುವಿಕೆಯು ಕ್ರೈಸ್ತ ಆರಾಧನೆಯ ಭಾಗವಾಗಿರಬೇಕೆಂಬುದನ್ನು ನೀವು ಹೆಚ್ಚಿನಾಂಶ ಒಪ್ಪಿಕೊಳ್ಳುತ್ತೀರಿ. ಆದರೂ, ಹಣಕ್ಕಾಗಿ ಪಟ್ಟುಹಿಡಿದು ಮಾಡುವ ಕೇಳಿಕೆಗಳು ನಿಮ್ಮ ಮನಸ್ಸನ್ನು ಕೆಡಿಸುತ್ತವೋ, ಬಹುಶಃ ಜುಗುಪ್ಸೆಯನ್ನೂ ಹುಟ್ಟಿಸುತ್ತವೋ? ಬ್ರಸಿಲ್‌ನ ದೇವತಾಶಾಸ್ತ್ರಜ್ಞ ಈನಾಸ್ಯೂ ಸ್ಟ್ರೀಡರ್, ಚರ್ಚ್‌ಗಳು “ಅವುಗಳ ಸಂಸ್ಥಾಪನೆಯ ಸಮಸ್ಯೆಗಳನ್ನು ಪರಿಹರಿಸಲಿಕ್ಕಾಗಿ” ದಶಮಾಂಶ ಕೇಳಿಕೆಯ ಮೇಲೆ ಅವಲಂಬಿಸಿವೆಯೆಂದು ಆಪಾದಿಸಿ, ಅಂಥ ರೂಢಿಗಳನ್ನು “ಅನುಚಿತ, ನಿಂದಾತ್ಮಕ ಮತ್ತು ನೀತಿಭ್ರಷ್ಟ” ಎಂದು ಕರೆಯುತ್ತಾರೆ. ಈ ಪದ್ಧತಿಯ ಪರಿಣಾಮವಾಗಿ “ನಿರುದ್ಯೋಗಿಗಳು, ವಿಧವೆಯರು, ಜೋಪಡಿ ವಾಸಿಗಳು ಮತ್ತು ತಾರ್ಕಿಕವಾಗಿ ಯೋಚಿಸಸಾಧ್ಯವಿಲ್ಲದವರು, ದೇವರು ತಮ್ಮ ಕೈಬಿಟ್ಟಿದ್ದಾನೆಂದೂ, ತಮ್ಮ ಕುಟುಂಬವನ್ನು ಉಪವಾಸವಿಟ್ಟಾದರೂ ‘ಸಂಚಾರಿ ಪ್ರಚಾರಕನಿಗೆ’ ನಿರ್ದಿಷ್ಟ ಮೊತ್ತವನ್ನು ಕೊಡುವ ಹಂಗು ತಮಗಿದೆಯೆಂದು ತೀರ್ಮಾನಿಸುತ್ತಾರೆ” ಎಂದು ಅವರು ಹೇಳುತ್ತಾರೆ.
ನೀವು ಹೀಗೆ ಯೋಚಿಸುತ್ತಿರಬಹುದು: ‘ದಶಮಾಂಶ ಕೊಡುವುದನ್ನು ಜಾರಿಗೆ ತಂದಿರುವ ಚರ್ಚ್‌ಗಳು ಶಾಸ್ತ್ರವನ್ನು ಸರಿಯಾಗಿ ಅನ್ವಯಿಸುತ್ತಿವೆಯೊ? ಅಥವಾ ಕೆಲವು ಧರ್ಮಗಳು ತಮ್ಮ ಕುರಿಗಳನ್ನು ಬೋಳಿಸಲಿಕ್ಕಾಗಿ ಅವರಲ್ಲಿ ದೇವರ ಶಿಕ್ಷಾಭಯವನ್ನು ಹುಟ್ಟಿಸುತ್ತಿವೆಯೊ? ನಾವು ದಿವಾಳಿಯಾಗುವ ತನಕ ಕೊಡುವಂತೆ ದೇವರು ನಿಜವಾಗಿಯೂ ಅಪೇಕ್ಷಿಸುತ್ತಾನೊ?’
[ಪಾದಟಿಪ್ಪಣಿ]
^ ಪ್ಯಾರ. 3 ದಶಮಾಂಶವು ಒಬ್ಬ ವ್ಯಕ್ತಿಯ ಒಟ್ಟು ಆದಾಯದ 10 ಪ್ರತಿಶತವೆಂದು ವಿಶದೀಕರಿಸಲ್ಪಟ್ಟಿದೆ.