ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ವಾಕ್ಯದ ವೈಯಕ್ತಿಕ ಅಧ್ಯಯನದಲ್ಲಿ ಆನಂದಿಸಿರಿ

ದೇವರ ವಾಕ್ಯದ ವೈಯಕ್ತಿಕ ಅಧ್ಯಯನದಲ್ಲಿ ಆನಂದಿಸಿರಿ

ದೇವರ ವಾಕ್ಯದ ವೈಯಕ್ತಿಕ ಅಧ್ಯಯನದಲ್ಲಿ ಆನಂದಿಸಿರಿ

“ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು.”​—ಕೀರ್ತನೆ 77:12.

1, 2. (ಎ) ನಾವು ಧ್ಯಾನಿಸಲಿಕ್ಕಾಗಿ ಸಮಯವನ್ನು ಏಕೆ ಬದಿಗಿರಿಸಬೇಕು? (ಬಿ) “ಧ್ಯಾನಿಸುವುದು” ಮತ್ತು “ಪರ್ಯಾಲೋಚಿಸುವುದು” ಎಂಬುದರ ಅರ್ಥವೇನು?

ಯೇಸು ಕ್ರಿಸ್ತನ ಶಿಷ್ಯರೋಪಾದಿ ನಾವು, ದೇವರೊಂದಿಗಿನ ನಮ್ಮ ಸಂಬಂಧ ಮತ್ತು ನಾವು ಆತನನ್ನು ಸೇವಿಸುತ್ತಿರುವ ಉದ್ದೇಶದ ವಿಷಯದಲ್ಲಿ ಗಾಢವಾದ ಆಸಕ್ತಿಯುಳ್ಳವರಾಗಿರಬೇಕು. ಆದರೆ ಇಂದು, ಜನರ ಜೀವಿತವು ಎಷ್ಟು ವೇಗಗತಿಯದ್ದಾಗಿದೆ ಅಂದರೆ ಜನರು ಧ್ಯಾನಿಸಲು ಸಮಯವನ್ನು ಬದಿಗಿರಿಸುವುದಿಲ್ಲ. ಅವರು ಪ್ರಾಪಂಚಿಕತೆ, ಬಳಕೆಯ ವಸ್ತುಗಳ ಕೊಳ್ಳುವಿಕೆ ಮತ್ತು ಉದ್ದೇಶವಿಲ್ಲದ ವಿನೋದಾನ್ವೇಷಣೆಯ ಗಡಿಬಿಡಿಯಲ್ಲಿ ಪೂರ್ಣವಾಗಿ ಮುಳುಗಿದ್ದಾರೆ. ಇಂತಹ ವ್ಯರ್ಥ ಪ್ರಯತ್ನಗಳಿಂದ ನಾವು ಹೇಗೆ ದೂರವಿರಬಲ್ಲೆವು? ನಾವು ಪ್ರತಿದಿನ ಊಟಮಾಡುವುದು ಮತ್ತು ನಿದ್ರೆಮಾಡುವುದರಂತಹ ಅಗತ್ಯ ಕಾರ್ಯಗಳಿಗಾಗಿ ಸಮಯವನ್ನು ಬದಿಗಿರಿಸುವಂತೆಯೇ, ಯೆಹೋವನ ಕಾರ್ಯ ಮತ್ತು ಪ್ರವರ್ತನೆಗಳ ಕುರಿತು ಧ್ಯಾನಿಸಲು ಸಹ ಸಮಯವನ್ನು ಬದಿಗಿರಿಸತಕ್ಕದ್ದು.​—ಧರ್ಮೋಪದೇಶಕಾಂಡ 8:3; ಮತ್ತಾಯ 4:4.

2 ನೀವು ಧ್ಯಾನಿಸಲಿಕ್ಕಾಗಿ ಎಂದಾದರೂ ಸಮಯವನ್ನು ತೆಗೆದುಕೊಳ್ಳುವುದುಂಟೊ? ಆದರೆ ಧ್ಯಾನಿಸುವುದೆಂದರೇನು? ಆ ಪದವನ್ನು ಒಂದು ಶಬ್ದಕೋಶವು, “ಯಾವುದಾದರೊಂದು ವಿಷಯದ ಮೇಲೆ ಒಬ್ಬನ ಯೋಚನೆಗಳನ್ನು ಕೇಂದ್ರೀಕರಿಸುವುದು: ಆಲೋಚಿಸುವುದು ಇಲ್ಲವೆ ಪರ್ಯಾಲೋಚನೆ ಮಾಡುವುದು” ಎಂದು ಅರ್ಥನಿರೂಪಿಸುತ್ತದೆ. “ಪರ್ಯಾಲೋಚಿಸುವುದು” ಎಂಬ ಪದದ ಅರ್ಥ, “ಒಂದು ವಿಷಯದ ಕುರಿತಾಗಿ ವಿಚಾರ ಮಾಡುವುದು: ವಿಮರ್ಶಿಸುವುದು . . . ವಿಶೇಷವಾಗಿ, ಮೌನವಾಗಿ, ಗಂಭೀರವಾಗಿ ಮತ್ತು ಗಾಢವಾಗಿ ಆಲೋಚಿಸುವುದು ಇಲ್ಲವೆ ಪರಿಗಣಿಸುವುದು.” ಇದು ನಮಗೆ ಯಾವ ಅರ್ಥದಲ್ಲಿದೆ?

3. ಆತ್ಮಿಕ ಅಭಿವೃದ್ಧಿಯನ್ನು ಮಾಡುವುದು ಯಾವುದರೊಂದಿಗೆ ನೇರವಾಗಿ ಸಂಬಂಧಿಸಲ್ಪಟ್ಟಿದೆ?

3 ಒಂದು ವಿಷಯವೇನಂದರೆ, ಇದು ಅಪೊಸ್ತಲ ಪೌಲನು ಜೊತೆ ಸೇವಕ ತಿಮೊಥೆಯನಿಗೆ ಏನು ಹೇಳಿದನೊ ಅದನ್ನು ನಮಗೆ ಜ್ಞಾಪಕ ಹುಟ್ಟಿಸಬೇಕು: “ನಾನು ಬರುವ ತನಕ ವೇದಪಾರಾಯಣವನ್ನೂ ಪ್ರಸಂಗವನ್ನೂ ಉಪದೇಶವನ್ನೂ ಮಾಡುವದರಲ್ಲಿ ಆಸಕ್ತನಾಗಿರು. . . . ಈ ಕಾರ್ಯಗಳನ್ನು ಸಾಧಿಸಿಕೊಳ್ಳುವದರಲ್ಲಿ ಆಸಕ್ತನಾಗಿರು. [“ಈ ವಿಷಯಗಳ ಕುರಿತು ಪರ್ಯಾಲೋಚಿಸು, ಅವುಗಳಲ್ಲಿ ತಲ್ಲೀನನಾಗು,” NW] ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವದು.” ಹೌದು, ಅಭಿವೃದ್ಧಿ ಮತ್ತು ಪ್ರಗತಿಯನ್ನು ನಿರೀಕ್ಷಿಸಲಾಗಿತ್ತು. ಮತ್ತು ಪೌಲನ ಮಾತುಗಳು, ಆತ್ಮಿಕ ವಿಷಯಗಳನ್ನು ಪರ್ಯಾಲೋಚಿಸುವುದು ಹಾಗೂ ಅಭಿವೃದ್ಧಿಮಾಡುವುದರ ಮಧ್ಯೆ ನೇರವಾದ ಸಂಬಂಧವಿದೆ ಎಂಬುದನ್ನು ತೋರಿಸಿದವು. ಇದು ಇಂದು ಸಹ ನಿಜವಾಗಿದೆ. ಆತ್ಮಿಕ ಅಭಿವೃದ್ಧಿಯನ್ನು ಮಾಡುವ ಸಂತೃಪ್ತಿಯನ್ನು ಅನುಭವಿಸಬೇಕಾದರೆ, ನಾವು ಈಗಲೂ ದೇವರ ವಾಕ್ಯದ ವಿಷಯಗಳ ಸಂಬಂಧದಲ್ಲಿ ‘ಪರ್ಯಾಲೋಚಿಸುವ’ ಮತ್ತು ಅದರಲ್ಲಿ ‘ತಲ್ಲೀನರಾಗುವ’ ಅಗತ್ಯವಿದೆ.​—1 ತಿಮೊಥೆಯ 4:13-15.

4. ಯೆಹೋವನ ವಾಕ್ಯವನ್ನು ಕ್ರಮವಾಗಿ ಪರ್ಯಾಲೋಚಿಸುವಂತೆ ನಿಮಗೆ ಸಹಾಯಮಾಡಲು, ಯಾವ ಉಪಕರಣಗಳನ್ನು ನೀವು ಉಪಯೋಗಿಸಬಲ್ಲಿರಿ?

4 ಧ್ಯಾನಿಸಲು ಅತ್ಯುತ್ತಮ ಸಮಯವನ್ನು ಆಯ್ಕೆಮಾಡುವುದು, ನಿಮ್ಮ ಮತ್ತು ನಿಮ್ಮ ಕುಟುಂಬದ ದಿನಚರಿಯ ಮೇಲೆ ಹೊಂದಿಕೊಂಡಿದೆ. ಅನೇಕರು ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಎಂಬ ಪುಸ್ತಿಕೆಯಿಂದ ಓದುವ ಮೂಲಕ, ಮುಂಜಾನೆಯೇ ಒಂದು ಬೈಬಲ್‌ ವಚನದ ಕುರಿತು ಪರ್ಯಾಲೋಚಿಸುತ್ತಾರೆ. ವಾಸ್ತವವೇನಂದರೆ, ಲೋಕದಾದ್ಯಂತವಿರುವ ಬೆತೆಲ್‌ ಗೃಹಗಳ ಸುಮಾರು 20,000 ಸ್ವಯಂ ಸೇವಕರು ದಿನದ ಬೈಬಲ್‌ ವಚನವನ್ನು 15 ನಿಮಿಷಗಳ ವರೆಗೆ ಪರಿಗಣಿಸುವುದರೊಂದಿಗೆ ತಮ್ಮ ದಿನವನ್ನು ಆರಂಭಿಸುತ್ತಾರೆ. ಪ್ರತಿದಿನ, ಬೆತೆಲ್‌ ಕುಟುಂಬದಲ್ಲಿ ಕೇವಲ ಕೆಲವರು ಮಾತ್ರ ಹೇಳಿಕೆಗಳನ್ನು ಮಾಡುತ್ತಾರಾದರೂ, ಮಿಕ್ಕವರು ಅಲ್ಲಿ ಏನು ಹೇಳಲಾಗುತ್ತದೊ ಮತ್ತು ಓದಲಾಗುತ್ತದೊ ಅದರ ಬಗ್ಗೆ ಪರ್ಯಾಲೋಚಿಸುತ್ತಾರೆ. ಬೇರೆ ಸಾಕ್ಷಿಗಳು ತಮ್ಮ ಕೆಲಸಗಳಿಗೆ ಹೋಗುವಾಗ ಯೆಹೋವನ ವಾಕ್ಯದ ಕುರಿತು ಪರ್ಯಾಲೋಚಿಸುತ್ತಾರೆ. ಅವರು ಕೆಲವು ಭಾಷೆಗಳಲ್ಲಿ ಲಭ್ಯವಿರುವ ಬೈಬಲಿನ ಮತ್ತು ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳ ಆಡಿಯೊಕ್ಯಾಸೆಟ್‌ಗಳನ್ನು ನುಡಿಸಿ ಕೇಳುತ್ತಾರೆ. ಅನೇಕ ಗೃಹಿಣಿಯರು ಮನೆಗೆಲಸವನ್ನು ಮಾಡುತ್ತಿರುವ ಸಮಯದಲ್ಲಿ ಇದನ್ನು ಕೇಳಿಸಿಕೊಳ್ಳುತ್ತಾರೆ. ಅವರು ಕಾರ್ಯತಃ ಕೀರ್ತನೆಗಾರನಾದ ಆಸಾಫನನ್ನು ಅನುಕರಿಸುತ್ತಾರೆ. ಅವನು ಬರೆದುದು: “ಯೆಹೋವನ ಕೃತ್ಯಗಳನ್ನು ವರ್ಣಿಸುವೆನು; ಪೂರ್ವದಿಂದ ನೀನು ನಡಿಸಿದ ಅದ್ಭುತಗಳನ್ನು ನೆನಪು ಮಾಡಿಕೊಳ್ಳುವೆನು. ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು.”​—ಕೀರ್ತನೆ 77:11, 12.

ಸರಿಯಾದ ಮನೋಭಾವವು ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ

5. ವೈಯಕ್ತಿಕ ಅಧ್ಯಯನ ನಮಗೆ ಏಕೆ ಪ್ರಾಮುಖ್ಯವಾಗಿರಬೇಕು?

5 ಟಿವಿ, ವಿಡಿಯೋ ಮತ್ತು ಕಂಪ್ಯೂಟರ್‌ಗಳ ನಮ್ಮ ಈ ಆಧುನಿಕ ಯುಗದಲ್ಲಿ, ಅಧಿಕಾಂಶ ಜನರು ಈಗ ಓದಲು ಇಷ್ಟಪಡುವುದಿಲ್ಲ. ಆದರೆ ಯೆಹೋವನ ಸಾಕ್ಷಿಗಳ ಮಧ್ಯೆ ಈ ಮಾತು ಖಂಡಿತವಾಗಿಯೂ ಸತ್ಯವಾಗಿರಬಾರದು. ಎಷ್ಟೆಂದರೂ ಬೈಬಲ್‌ ವಾಚನವು ನಮ್ಮನ್ನು ಯೆಹೋವನಿಗೆ ಜೋಡಿಸುವ ಜೀವರಕ್ಷಕ ಹಗ್ಗದಂತಿದೆ. ಸಾವಿರಾರು ವರುಷಗಳ ಹಿಂದೆ, ಯೆಹೋಶುವನು ಮೋಶೆಯ ತರುವಾಯ ಇಸ್ರಾಯೇಲಿನ ನಾಯಕನಾದನು. ಯೆಹೋವನ ಆಶೀರ್ವಾದವನ್ನು ಪಡೆಯಲು ಯೆಹೋಶುವನು ತಾನೇ ದೇವರ ವಾಕ್ಯವನ್ನು ಓದಬೇಕಾಗಿತ್ತು. (ಯೆಹೋಶುವ 1:8; ಕೀರ್ತನೆ 1:​1, 2) ಇದು ಇಂದು ಸಹ ಒಂದು ಆವಶ್ಯಕ ವಿಷಯವಾಗಿದೆ. ಆದರೆ ಮಿತ ವಿದ್ಯಾಭ್ಯಾಸದ ಕಾರಣ ಕೆಲವರಿಗೆ ಓದುವುದು ಕಷ್ಟಕರವಾದೀತು ಅಥವಾ ಅದು ಅವರಿಗೆ ಬೇಸರಹಿಡಿಸುವಂಥದ್ದಾಗಿರಬಹುದು. ಹಾಗಿರುವಾಗ, ದೇವರ ವಾಕ್ಯವನ್ನು ಓದುವ ಮತ್ತು ಅಧ್ಯಯನ ಮಾಡುವ ಅಪೇಕ್ಷೆಯು ಬರುವಂತೆ ನಮಗೆ ಯಾವುದು ಸಹಾಯಮಾಡಬಲ್ಲದು? ಇದಕ್ಕೆ ಉತ್ತರವು ಜ್ಞಾನೋಕ್ತಿ 2:​1-6ರಲ್ಲಿ ದಾಖಲೆಯಾಗಿರುವ ಅರಸ ಸೊಲೊಮೋನನ ಮಾತುಗಳಲ್ಲಿ ಕಂಡುಬರುತ್ತದೆ. ನಾವು ಅವುಗಳನ್ನು ಕೂಡಿ ಚರ್ಚಿಸೋಣ.

6. ದೇವರ ಜ್ಞಾನದ ಕುರಿತು ನಮಗೆ ಯಾವ ಮನೋಭಾವವಿರಬೇಕು?

6 ನಮಗೆ ಆರಂಭದಲ್ಲಿ ಈ ಬುದ್ಧಿವಾದವು ದೊರೆಯುತ್ತದೆ: “ನನ್ನ ಮಗನೇ, ನಿನ್ನ ಕಿವಿಯಿಂದ ವಿವೇಕಕ್ಕೆ ಗಮನಕೊಡಲು, ನಿನ್ನ ಹೃದಯವನ್ನು ವಿವೇಚನಾಶಕ್ತಿಯೆಡೆಗೆ ಬಗ್ಗಿಸಲು ನೀನು ನನ್ನ ಮಾತುಗಳನ್ನು ಅಂಗೀಕರಿಸಿದರೆ ಮತ್ತು ನಿನ್ನಲ್ಲಿ ನನ್ನ ಸ್ವಂತ ಆಜ್ಞೆಗಳನ್ನು ಶೇಖರಿಸಿದರೆ . . .” (ಜ್ಞಾನೋಕ್ತಿ 2:1, 2, NW) ಈ ಮಾತುಗಳಿಂದ ನಾವೇನನ್ನು ಕಲಿಯುತ್ತೇವೆ? ದೇವರ ವಾಕ್ಯದ ಅಧ್ಯಯನ ಮಾಡುವ ಜವಾಬ್ದಾರಿಯು ನಮ್ಮಲ್ಲಿ ಒಬ್ಬೊಬ್ಬರ ಮೇಲೂ ವ್ಯಕ್ತಿಗತವಾಗಿ ಬೀಳುತ್ತದೆಂದೇ. ಅಲ್ಲಿ ತಿಳಿಸಲ್ಪಟ್ಟಿರುವ, “ನೀನು ನನ್ನ ಮಾತುಗಳನ್ನು ಅಂಗೀಕರಿಸಿದರೆ” ಎಂಬ ಷರತ್ತನ್ನು ಗಮನಿಸಿರಿ. ಅದೊಂದು ದೊಡ್ಡ ಅಂಶವಾಗಿದೆ, ಏಕೆಂದರೆ ಮಾನವಕುಲದಲ್ಲಿ ಹೆಚ್ಚಿನವರು ದೇವರ ವಾಕ್ಯಕ್ಕೆ ಗಮನವನ್ನೇ ಕೊಡುವುದಿಲ್ಲ. ದೇವರ ವಾಕ್ಯವನ್ನು ಅಧ್ಯಯನ ಮಾಡುವುದರಲ್ಲಿ ನಮಗೆ ಸಂತೋಷ ದೊರೆಯಬೇಕಾದರೆ, ನಾವು ಯೆಹೋವನ ಮಾತುಗಳನ್ನು ಅಂಗೀಕರಿಸಲು ಇಷ್ಟಪಟ್ಟು, ಅವುಗಳನ್ನು ನಾವು ಕಳೆದುಕೊಳ್ಳಲು ಅಪೇಕ್ಷಿಸದ ನಿಧಿಯಂತೆ ನೋಡಿಕೊಳ್ಳಬೇಕು. ನಮ್ಮ ದಿನಚರಿಯಿಂದಾಗಿ, ನಾವು ದೇವರ ವಾಕ್ಯವನ್ನು ಔದಾಸೀನ್ಯದಿಂದ ಅಥವಾ ಸಂಶಯದಿಂದ ನೋಡಲು ಆರಂಭಿಸುವಷ್ಟು ಕಾರ್ಯಮಗ್ನರು ಅಥವಾ ಅಪಕರ್ಷಿತರಾಗುವಂತೆ ನಾವು ಎಂದೂ ಬಿಡಬಾರದು.​—ರೋಮಾಪುರ 3:​3, 4.

7. ಸಾಧ್ಯವಿರುವಾಗೆಲ್ಲ ನಾವು ಕ್ರೈಸ್ತ ಕೂಟಗಳಲ್ಲಿ ಉಪಸ್ಥಿತರಿದ್ದು ಗಮನಕೊಡಬೇಕು ಏಕೆ?

7 ನಮ್ಮ ಕ್ರೈಸ್ತ ಕೂಟಗಳಲ್ಲಿ ದೇವರ ವಾಕ್ಯವು ವಿವರಿಸಲ್ಪಡುವಾಗ ನಾವು ನಿಜವಾಗಿಯೂ ‘ಗಮನಕೊಟ್ಟು’ ಜಾಗರೂಕತೆಯಿಂದ ಕಿವಿಗೊಡುತ್ತೇವೊ? (ಎಫೆಸ 4:​20, 21) ನಾವು ವಿವೇಚನಾಶಕ್ತಿಯನ್ನು ಗಳಿಸುವರೆ ‘ಹೃದಯವನ್ನು ಬಗ್ಗಿಸುತ್ತೇವೊ’? ಪ್ರಾಯಶಃ ಭಾಷಣಕಾರನು ತುಂಬ ಅನುಭವಸ್ಥನಾಗಿರಲಿಕ್ಕಿಲ್ಲ. ಆದರೆ ಅವನು ದೇವರ ವಾಕ್ಯವನ್ನು ಉಪಯೋಗಿಸಿ ಮಾತಾಡುತ್ತಿರುವಾಗ, ನಮ್ಮ ಜಾಗರೂಕ ಗಮನವನ್ನು ಪಡೆಯಲು ಅವನು ಅರ್ಹನಾಗಿದ್ದಾನೆ. ಆದರೆ ಯೆಹೋವನ ವಿವೇಕಕ್ಕೆ ಗಮನಕೊಡಲಿಕ್ಕಾಗಿ, ಮೊದಲಾಗಿ ನಾವು ಸಾಧ್ಯವಿರುವಾಗೆಲ್ಲ ಕೂಟಗಳಲ್ಲಿ ಉಪಸ್ಥಿತರಾಗಿರಬೇಕು ಎಂಬುದಂತೂ ಖಂಡಿತ. (ಜ್ಞಾನೋಕ್ತಿ 18:1) ಯೆರೂಸಲೇಮಿನ ಆ ಮೇಲಂತಸ್ತಿನ ಕೋಣೆಯಲ್ಲಿ, ಸಾ.ಶ. 33ರ ಪಂಚಾಶತ್ತಮದಂದು ಕೂಟಕ್ಕೆ ಅನುಪಸ್ಥಿತರಾಗಿದ್ದವರಿಗೆ ಆಗಿರಬಹುದಾದ ನಿರಾಶೆಯನ್ನು ತುಸು ಊಹಿಸಿಕೊಳ್ಳಿರಿ! ನಮ್ಮ ಕೂಟಗಳು ಅದರಷ್ಟು ಪ್ರೇಕ್ಷಣೀಯವಾಗಿರದಿದ್ದರೂ, ನಮ್ಮ ಮೂಲ ಪಠ್ಯಪುಸ್ತಕವಾದ ಬೈಬಲು ಅಲ್ಲಿ ಚರ್ಚಿಸಲ್ಪಡುತ್ತದೆ. ಹೀಗೆ, ನಾವು ಗಮನಕೊಡುವಲ್ಲಿ ಮತ್ತು ಏನು ಹೇಳಲ್ಪಡುತ್ತದೊ ಅದನ್ನು ನಮ್ಮ ಬೈಬಲುಗಳಲ್ಲಿ ಓದುವಲ್ಲಿ, ಪ್ರತಿಯೊಂದು ಕೂಟವೂ ಆಶೀರ್ವಾದದಾಯಕವಾಗಿರಬಲ್ಲದು.​—ಅ. ಕೃತ್ಯಗಳು 2:1-4; ಇಬ್ರಿಯ 10:24, 25.

8, 9. (ಎ) ವೈಯಕ್ತಿಕ ಅಧ್ಯಯನವು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತದೆ? (ಬಿ) ಚಿನ್ನದ ಮೌಲ್ಯವನ್ನು ದೇವರ ಜ್ಞಾನದ ತಿಳಿವಳಿಕೆಗೆ ಹೇಗೆ ಹೋಲಿಸುವಿರಿ?

8 ಆ ವಿವೇಕಿ ರಾಜನ ಮುಂದಿನ ಮಾತುಗಳು ಹೀಗಿವೆ: “ಅಲ್ಲದೆ ನೀನು ತಿಳಿವಳಿಕೆಗಾಗಿ ಮೊರೆಯಿಟ್ಟು ವಿವೇಚನಾಶಕ್ತಿಗಾಗಿ ಕೂಗಿಕೊಂಡರೆ . . .” (ಜ್ಞಾನೋಕ್ತಿ 2:​3, NW) ಈ ಮಾತುಗಳು ನಮಗೆ ಯಾವ ಮನೋಭಾವವನ್ನು ವ್ಯಕ್ತಪಡಿಸುತ್ತವೆ? ದೇವರ ವಾಕ್ಯವನ್ನು ತಿಳಿದುಕೊಳ್ಳಬೇಕೆಂಬ ಶ್ರದ್ಧಾಪೂರ್ವಕವಾದ ಅಪೇಕ್ಷೆಯನ್ನೇ. ಯೆಹೋವನ ಚಿತ್ತವನ್ನು ಗ್ರಹಿಸಲಿಕ್ಕಾಗಿ, ವಿವೇಚನಾಶಕ್ತಿಯನ್ನು ಸಂಪಾದಿಸಲಿಕ್ಕಾಗಿ ದೇವರ ವಾಕ್ಯವನ್ನು ಅಧ್ಯಯನ ಮಾಡಲಪೇಕ್ಷಿಸುವ ಸಿದ್ಧಮನಸ್ಸನ್ನು ಅವು ಸೂಚಿಸುತ್ತವೆ. ಇದಕ್ಕೆ ನಿಶ್ಚಯವಾಗಿಯೂ ಪ್ರಯತ್ನ ಅಗತ್ಯ ಮತ್ತು ಇದು ನಮ್ಮನ್ನು ಸೊಲೊಮೋನನ ಮುಂದಣ ಮಾತುಗಳಿಗೂ ದೃಷ್ಟಾಂತಕ್ಕೂ ನಡೆಸುತ್ತದೆ.​—ಎಫೆಸ 5:​15-17.

9 ಅವನು ಮುಂದುವರಿಸುವುದು: “ಅದನ್ನು [ತಿಳಿವಳಿಕೆಯನ್ನು] ಬೆಳ್ಳಿಯಂತೆಯೂ ಗುಪ್ತ ನಿಕ್ಷೇಪದಂತೆಯೂ ಹುಡುಕಿದರೆ . . .” (ಜ್ಞಾನೋಕ್ತಿ 2:​4, NW) ಇದು, ಅಮೂಲ್ಯ ಲೋಹಗಳು ಎಂದೆಣಿಸಲ್ಪಟ್ಟಿರುವ ಚಿನ್ನಬೆಳ್ಳಿಗಳನ್ನು ಹುಡುಕಲು ಜನರು ಮಾಡಿರುವ ಗಣಿಗಾರಿಕೆಯ ಸಾಧನೆಗಳ ಬಗ್ಗೆ ನಾವು ಯೋಚಿಸುವಂತೆ ಮಾಡುತ್ತದೆ. ಮನುಷ್ಯರು ಚಿನ್ನಕ್ಕಾಗಿ ಇತರರನ್ನು ಕೊಲೆಮಾಡಿದ್ದಾರೆ. ಇತರರು ಚಿನ್ನವನ್ನು ಹುಡುಕುವುದರಲ್ಲಿ ತಮ್ಮ ಇಡೀ ಜೀವಮಾನವನ್ನು ಕಳೆದಿರುತ್ತಾರೆ. ಆದರೆ ಚಿನ್ನಕ್ಕೆ ಯಾವ ನಿಜ ಮೌಲ್ಯ ಇದೆ? ನೀವು ಮರುಭೂಮಿಯಲ್ಲಿ ದಾರಿತಪ್ಪಿ ಅಲೆದಾಡುತ್ತಿರುವಾಗ ಬಾಯಾರಿಕೆಯಿಂದ ತಹತಹಿಸುತ್ತಿರುವಲ್ಲಿ, ನೀವು ಯಾವುದನ್ನು ಇಷ್ಟಪಡುವಿರಿ? ಚಿನ್ನದ ಗಟ್ಟಿಯನ್ನೋ, ಒಂದು ಗ್ಲಾಸು ನೀರನ್ನೊ? ಹೀಗಿದ್ದರೂ, ಕೃತಕ ಹಾಗೂ ಸದಾ ಏರಿಳಿತವಾಗುವ ಮೌಲ್ಯವುಳ್ಳ ಈ ಚಿನ್ನಕ್ಕಾಗಿ ಮನುಷ್ಯರು ಎಷ್ಟು ಹುರುಪಿನಿಂದ ಹುಡುಕಿದ್ದಾರೆ! * ಹಾಗಾದರೆ ವಿವೇಕ, ವಿವೇಚನಾಶಕ್ತಿ ಮತ್ತು ದೇವರ ಹಾಗೂ ಆತನ ಚಿತ್ತದ ಕುರಿತಾದ ತಿಳಿವಳಿಕೆಯನ್ನು ಹುಡುಕಲು ನಮ್ಮಲ್ಲಿ ಇದಕ್ಕಿಂತ ಎಷ್ಟು ಹೆಚ್ಚು ಹುರುಪು ಇರಬೇಕು! ಆದರೆ ಇಂತಹ ಅನ್ವೇಷಣೆಯ ಪ್ರಯೋಜನಗಳೇನು?​—ಕೀರ್ತನೆ 19:7-10; ಜ್ಞಾನೋಕ್ತಿ 3:13-18.

10. ನಾವು ದೇವರ ವಾಕ್ಯವನ್ನು ಅಧ್ಯಯನ ಮಾಡುವಲ್ಲಿ ಏನನ್ನು ಪಡೆಯಬಲ್ಲೆವು?

10 ಸೊಲೊಮೋನನ ಮಾತು ಮುಂದುವರಿಯುತ್ತದೆ: “ಆಗ ನೀನು ಯೆಹೋವನ ಭಯವನ್ನು ಅರಿತು ದೇವಜ್ಞಾನವನ್ನು ಪಡೆದುಕೊಳ್ಳುವಿ.” (ಜ್ಞಾನೋಕ್ತಿ 2:​5, NW) ಪಾಪಪೂರ್ಣ ಮಾನವರಾದ ನಾವು ವಿಶ್ವದ ಪರಮಾಧಿಕಾರಿ ಪ್ರಭುವಾದ ಯೆಹೋವ ‘ದೇವರ ಜ್ಞಾನವನ್ನು’ ಪಡೆದುಕೊಳ್ಳಬಲ್ಲೆವು ಎಂಬುದು ಎಷ್ಟು ಬೆರಗುಗೊಳಿಸುವ ವಿಚಾರವಾಗಿದೆ! (ಕೀರ್ತನೆ 73:28; ಅ. ಕೃತ್ಯಗಳು 4:24) ಈ ಲೋಕದ ತತ್ತ್ವಜ್ಞಾನಿಗಳೂ ಜ್ಞಾನಿಗಳೆಂದು ಹೇಳಿಕೊಳ್ಳುವವರೂ ಶತಮಾನಗಳಿಂದ ಜೀವ ಮತ್ತು ವಿಶ್ವದ ಕುರಿತಾದ ಮರ್ಮಗಳನ್ನು ಅರಿಯಲು ಪ್ರಯತ್ನಿಸಿದ್ದಾರೆ. ಆದರೆ ಅವರು “ದೇವಜ್ಞಾನವನ್ನು” ಪಡೆಯಲು ತಪ್ಪಿಹೋಗಿದ್ದಾರೆ. ಏಕೆ? ಅದು ದೇವರ ವಾಕ್ಯದಲ್ಲಿ ಸಾವಿರಾರು ವರ್ಷಗಳಿಂದ ಲಭ್ಯವಿರುವುದಾದರೂ, ಅವರು ಅದನ್ನು ತೀರ ಸರಳವಾದದ್ದೆಂದು ತಳ್ಳಿಹಾಕುತ್ತಾರೆ ಮತ್ತು ಈ ಕಾರಣದಿಂದ ಅದನ್ನು ಅಂಗೀಕರಿಸಿ ಗ್ರಹಿಸಲು ತಪ್ಪಿಹೋಗುತ್ತಾರೆ.​—1 ಕೊರಿಂಥ 1:​18-21.

11. ವೈಯಕ್ತಿಕ ಅಧ್ಯಯನದಿಂದ ಬರುವ ಕೆಲವು ಪ್ರಯೋಜನಗಳಾವುವು?

11 ಸೊಲೊಮೋನನು ಎತ್ತಿತೋರಿಸುವ ಇನ್ನೊಂದು ಉದ್ದೇಶವು ಇಲ್ಲಿದೆ: “ಯೆಹೋವನೇ ವಿವೇಕವನ್ನು ಕೊಡುತ್ತಾನೆ; ಆತನ ಬಾಯಿಂದ ಜ್ಞಾನವೂ ವಿವೇಚನಾಶಕ್ತಿಯೂ ಹೊರಡುತ್ತದೆ.” (ಜ್ಞಾನೋಕ್ತಿ 2:​6, NW) ವಿವೇಕ, ಜ್ಞಾನ ಮತ್ತು ವಿವೇಚನಾಶಕ್ತಿಯನ್ನು ಹುಡುಕಲು ಇಷ್ಟಪಡುವ ಯಾವನಿಗೂ ಯೆಹೋವನು ಅವುಗಳನ್ನು ಉದಾರವಾಗಿ ಕೊಡುತ್ತಾನೆ. ಆದುದರಿಂದ, ದೇವರ ವಾಕ್ಯದ ವೈಯಕ್ತಿಕ ಅಧ್ಯಯನವು ನಮ್ಮಿಂದ ಪ್ರಯತ್ನ, ಶಿಸ್ತು ಮತ್ತು ಆತ್ಮತ್ಯಾಗವನ್ನು ಕೇಳಿಕೊಳ್ಳುತ್ತದಾದರೂ, ಅದನ್ನು ಗಣ್ಯಮಾಡಲು ನಮಗೆ ಪ್ರತಿಯೊಂದು ಕಾರಣವೂ ಇದೆ. ಕಡಿಮೆಪಕ್ಷ ನಮ್ಮ ಬಳಿ ಬೈಬಲಿನ ಮುದ್ರಿತ ಪ್ರತಿಗಳಾದರೂ ಇವೆ ಮತ್ತು ಪೂರ್ವಕಾಲದ ಕೆಲವರು ಕೈಬರಹದ ಪ್ರತಿಗಳನ್ನು ಮಾಡಬೇಕಾಗಿದ್ದಂತೆ ನಮಗೆ ಮಾಡುವ ಅಗತ್ಯವಿಲ್ಲದಿರುವುದಕ್ಕಾಗಿ ನಾವೆಷ್ಟು ಕೃತಜ್ಞರಾಗಿರಬೇಕು!​—ಧರ್ಮೋಪದೇಶಕಾಂಡ 17:​18, 19.

ಯೆಹೋವನಿಗೆ ಯೋಗ್ಯರಾಗಿ ನಡೆಯುವುದು

12. ದೇವಜ್ಞಾನವನ್ನು ಪಡೆಯುವ ನಮ್ಮ ಬೆನ್ನಟ್ಟುವಿಕೆಯ ಉದ್ದೇಶವು ಏನಾಗಿರಬೇಕು?

12 ವೈಯಕ್ತಿಕ ಅಧ್ಯಯನವನ್ನು ಮಾಡುವುದರಲ್ಲಿ ನಮ್ಮ ಉದ್ದೇಶ ಏನಾಗಿರಬೇಕು? ನಾವು ಇತರರಿಗಿಂತ ಉತ್ತಮರಾಗಿದ್ದೇವೆಂದು ತೋರಿಸಿಕೊಳ್ಳಬೇಕೆಂದೊ? ಇತರರಿಗಿಂತಲೂ ನಮಗೆ ಶ್ರೇಷ್ಠವಾದ ಜ್ಞಾನವಿದೆಯೆಂದು ತೋರಿಸಲಿಕ್ಕೊ? ಕಾರ್ಯತಃ, ‘ನಡೆದಾಡುವಂಥ ಬೈಬಲ್‌ ವಿಶ್ವಕೋಶ’ಗಳಾಗಬೇಕೆಂದೊ? ಅಲ್ಲ. ಅದರ ಬದಲು ನಮ್ಮ ಗುರಿಯು, ನಾವು ಕ್ರಿಯೆಯಲ್ಲಿ ಕ್ರೈಸ್ತರಾಗಿರುವುದು, ಕ್ರಿಸ್ತನ ಚೈತನ್ಯದಾಯಕ ಮನೋಭಾವದಿಂದ ಇತರರಿಗೆ ಸದಾ ಸಹಾಯ ನೀಡಲು ಸಿದ್ಧರಾಗಿರುವುದೇ ಆಗಿದೆ. (ಮತ್ತಾಯ 11:​28-30) ಅಪೊಸ್ತಲ ಪೌಲನು ಎಚ್ಚರಿಸಿದ್ದು: “ಜ್ಞಾನವು ಉಬ್ಬಿಸುತ್ತದೆ, ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ.” (1 ಕೊರಿಂಥ 8:1) ಆದಕಾರಣ, ಮೋಶೆಯು ಯೆಹೋವನೊಂದಿಗೆ ಮಾತಾಡಿದಾಗ ಪ್ರದರ್ಶಿಸಿದ ದೀನ ಮನೋಭಾವವೇ ನಮ್ಮಲ್ಲಿಯೂ ಇರಬೇಕು: “ನನಗೆ ನಿನ್ನ ದಯೆ ದೊರಕಿದ್ದಾದರೆ ನಾನು ನಿನ್ನನ್ನು ಬಲ್ಲವನಾಗಿರುವಂತೆ ನಿನ್ನ ಮಾರ್ಗವನ್ನು ನನಗೆ ತೋರಿಸು.” (ವಿಮೋಚನಕಾಂಡ 33:13) ಹೌದು, ಮನುಷ್ಯರ ಮುಂದೆ ನಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಲಿಕ್ಕಾಗಿ ಅಲ್ಲ ಬದಲಾಗಿ ದೇವರನ್ನು ಮೆಚ್ಚಿಸಲಿಕ್ಕಾಗಿ ನಾವು ಜ್ಞಾನವನ್ನು ಪಡೆಯಲು ಅಪೇಕ್ಷಿಸಬೇಕು. ನಾವು ದೇವರ ಅರ್ಹ, ದೀನ ಸೇವಕರಾಗಲು ಬಯಸಬೇಕು. ಆ ಗುರಿಯನ್ನು ನಾವು ಹೇಗೆ ತಲಪಬಲ್ಲೆವು?

13. ಒಬ್ಬನು ದೇವರ ಅರ್ಹನಾದ ಸೇವಕನಾಗಬೇಕಾದರೆ ಏನು ಅಗತ್ಯ?

13 ದೇವರನ್ನು ಮೆಚ್ಚಿಸುವ ವಿಧದ ಬಗ್ಗೆ ಪೌಲನು ತಿಮೊಥೆಯನಿಗೆ ಹೀಗೆ ಸಲಹೆ ಕೊಡುತ್ತಾನೆ: “ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ [“ಬಳಸುವವನೂ,” NW] ಆಗಿರು.” (2 ತಿಮೊಥೆಯ 2:15) ‘ಸರಿಯಾಗಿ ಬಳಸು’ ಎಂಬ ಮಾತುಗಳು, ಮೂಲತಃ “ನೇರವಾಗಿ ಕತ್ತರಿಸುವುದು” ಅಥವಾ ‘ನೇರವಾಗಿ ಕತ್ತರಿಸಲು’ ಎಂಬ ಅರ್ಥವಿರುವ ಸಂಯುಕ್ತ ಗ್ರೀಕ್‌ ಕ್ರಿಯಾಪದದಿಂದ ಬಂದಿವೆ. (ಕಿಂಗ್‌ಡಮ್‌ ಇಂಟರ್‌ಲಿನೀಯರ್‌) ಕೆಲವು ಮಂದಿ ವಿದ್ವಾಂಸರಿಗನುಸಾರ ಇದು, ಒಬ್ಬ ದರ್ಜಿಯು ಒಂದು ನಮೂನೆಗನುಸಾರ ಬಟ್ಟೆಯನ್ನು ಕತ್ತರಿಸುವುದು, ರೈತನು ಗದ್ದೆಯಲ್ಲಿ ನೇಗಿಲ ಸಾಲನ್ನು ಉಳುವುದು, ಇನ್ನು ಮುಂತಾದ ವಿಚಾರಗಳನ್ನು ಸೂಚಿಸುತ್ತದೆ. ಹೇಗಿದ್ದರೂ, ಅಂತ್ಯ ಪರಿಣಾಮವು ನೆಟ್ಟಗೆ ಇಲ್ಲವೆ ನೇರವಾದುದಾಗಿರಬೇಕು. ಮುಖ್ಯ ವಿಷಯವೇನಂದರೆ, ತಿಮೊಥೆಯನು ದೇವರ ಅರ್ಹ ಹಾಗೂ ಸಮ್ಮತಿಯುಳ್ಳ ಸೇವಕನಾಗಬೇಕಾದರೆ, ತನ್ನ ಬೋಧನೆ ಮತ್ತು ವರ್ತನೆಯು ಸತ್ಯ ವಾಕ್ಯಾನುಸಾರವಾಗಿದೆ ಎಂಬುದನ್ನು ಅವನು ಖಚಿತಪಡಿಸಿಕೊಳ್ಳಬೇಕಾಗಿತ್ತು.​—1 ತಿಮೊಥೆಯ 4:16.

14. ನಮ್ಮ ವೈಯಕ್ತಿಕ ಅಧ್ಯಯನವು ನಮ್ಮ ನಡೆನುಡಿಗಳನ್ನು ಹೇಗೆ ಪ್ರಭಾವಿಸಬೇಕು?

14 ಕೊಲೊಸ್ಸೆಯಲ್ಲಿದ್ದ ಜೊತೆ ಕ್ರೈಸ್ತರನ್ನು ಪ್ರೋತ್ಸಾಹಿಸಿದಾಗ ಪೌಲನು ಅದನ್ನೇ ಒತ್ತಿಹೇಳುತ್ತಾ, ಅವರು “ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ದೇವಜ್ಞಾನದಿಂದ ಅಭಿವೃದ್ಧಿಯಾಗುತ್ತಿ”ರುವ ಮೂಲಕ “ಆತನಿಗೆ [“ಯೆಹೋವನಿಗೆ,” NW] ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿರ”ಬೇಕೆಂದು ಹೇಳಿದನು. (ಕೊಲೊಸ್ಸೆ 1:10) ಇಲ್ಲಿ ಪೌಲನು, ಯೆಹೋವನಿಗೆ ಯೋಗ್ಯರಾಗಿರುವುದನ್ನು “ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ” ಇರುವುದಕ್ಕೆ ಹಾಗೂ “ದೇವಜ್ಞಾನದಲ್ಲಿ ಅಭಿವೃದ್ಧಿ” ಹೊಂದುವುದಕ್ಕೆ ಸಂಬಂಧಿಸುತ್ತಾನೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಯೆಹೋವನ ಎಣಿಕೆಯಲ್ಲಿ, ನಾವು ಜ್ಞಾನವನ್ನು ಎಷ್ಟು ಬೆಲೆಯುಳ್ಳದ್ದೆಂದು ಪರಿಗಣಿಸುತ್ತೇವೆಂಬುದು ಮಾತ್ರವಲ್ಲದೆ, ನಡೆನುಡಿಯಲ್ಲಿ ದೇವರ ವಾಕ್ಯಕ್ಕೆ ನಾವು ಎಷ್ಟು ಒತ್ತಾಗಿ ಅಂಟಿಕೊಳ್ಳುತ್ತೇವೆಂಬುದೂ ಪ್ರಾಮುಖ್ಯವಾಗಿದೆ. (ರೋಮಾಪುರ 2:​21, 22) ಇದರರ್ಥ, ನಾವು ದೇವರನ್ನು ಮೆಚ್ಚಿಸಬೇಕಾದರೆ, ನಮ್ಮ ವೈಯಕ್ತಿಕ ಅಧ್ಯಯನವು ನಮ್ಮ ಆಲೋಚನೆಗಳನ್ನೂ ನಮ್ಮ ನಡತೆಯನ್ನೂ ಪ್ರಭಾವಿಸಬೇಕು.

15. ನಮ್ಮ ಮನಸ್ಸು ಮತ್ತು ಆಲೋಚನೆಗಳನ್ನು ನಾವು ಹೇಗೆ ಕಾಪಾಡಿಕೊಂಡು ನಿಯಂತ್ರಿಸಬಲ್ಲೆವು?

15 ಇಂದು ಸೈತಾನನು ಒಂದು ಮಾನಸಿಕ ಯುದ್ಧವನ್ನು ಉತ್ತೇಜಿಸುತ್ತಾ ನಮ್ಮ ಆತ್ಮಿಕತೆಯನ್ನು ನಾಶಮಾಡಬೇಕೆಂದು ಹಠಹಿಡಿದಿದ್ದಾನೆ. (ರೋಮಾಪುರ 7:​14-25) ಆದುದರಿಂದ, ನಮ್ಮ ದೇವರಾದ ಯೆಹೋವನಿಗೆ ಯೋಗ್ಯರಾಗಿ ನಡೆದುಕೊಳ್ಳಲಿಕ್ಕಾಗಿ ನಾವು ನಮ್ಮ ಮನಸ್ಸನ್ನೂ ಆಲೋಚನೆಗಳನ್ನೂ ಕಾಪಾಡಿಕೊಂಡು, ಅವುಗಳನ್ನು ನಿಯಂತ್ರಿಸಬೇಕು. ಇದಕ್ಕಾಗಿ ನಮ್ಮಲ್ಲಿರುವ ಆಯುಧವು, ‘ಎಲ್ಲಾ ಆಲೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿಯಲು’ ಶಕ್ತವಾಗಿರುವ “ದೇವಜ್ಞಾನ”ವೇ ಆಗಿದೆ. ನಮ್ಮ ಮನಸ್ಸಿನಿಂದ ನಾವು ಸ್ವಾರ್ಥಪರ, ಶಾರೀರಿಕ ಆಲೋಚನೆಗಳನ್ನು ಹೊರದೂಡಲು ಬಯಸುವುದರಿಂದ, ದೈನಂದಿನ ಬೈಬಲ್‌ ಅಧ್ಯಯನಕ್ಕೆ ಗಮನಕೊಡಲು ಇದು ನಮಗೆ ಇನ್ನೂ ಹೆಚ್ಚಿನ ಕಾರಣವನ್ನು ಕೊಡುತ್ತದೆ.​—2 ಕೊರಿಂಥ 10:5.

ತಿಳಿವಳಿಕೆಗೆ ಸಹಾಯಕಗಳು

16. ಯೆಹೋವನು ನಮಗೆ ಬೋಧಿಸುವಾಗ ನಾವು ಹೇಗೆ ಪ್ರಯೋಜನ ಪಡೆದುಕೊಳ್ಳಬಲ್ಲೆವು?

16 ಯೆಹೋವನ ಬೋಧನೆಯು ಆತ್ಮಿಕ ಹಾಗೂ ಶಾರೀರಿಕ ಪ್ರಯೋಜನಗಳನ್ನು ತರುತ್ತದೆ. ಅದು ಅನಾಸಕ್ತಿಕರವಾದ, ಪ್ರಾಯೋಗಿಕ ಬೆಲೆಯಿಲ್ಲದ ದೇವತಾಶಾಸ್ತ್ರವಲ್ಲ. ಆದುದರಿಂದ ನಾವು ಹೀಗೆ ಓದುತ್ತೇವೆ: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.” (ಯೆಶಾಯ 48:17) ಯೆಹೋವನು ನಮ್ಮನ್ನು, ಆತನ ಪ್ರಯೋಜನದಾಯಕವಾದ ದಾರಿಯಲ್ಲಿ ನಡೆಯುವಂತೆ ಮಾಡುವುದು ಹೇಗೆ? ಮೊದಲನೆಯದಾಗಿ, ಆತನ ಪ್ರೇರಿತ ವಾಕ್ಯವಾದ ಪವಿತ್ರ ಬೈಬಲು ನಮ್ಮಲ್ಲಿದೆ. ಇದು ನಾವು ಸದಾ ವಿಚಾರಿಸಿ ನೋಡುವ ನಮ್ಮ ಮೂಲ ಪಠ್ಯಪುಸ್ತಕವಾಗಿದೆ. ಈ ಕಾರಣದಿಂದಲೇ, ಕ್ರೈಸ್ತ ಕೂಟಗಳಲ್ಲಿ ಬೈಬಲನ್ನು ತೆರೆದಿಟ್ಟು, ಹೇಳಲಾಗುವ ವಿಷಯಗಳನ್ನು ಅನುಸರಿಸುವುದು ಸಮರ್ಪಕವಾಗಿದೆ. ಹೀಗೆ ಮಾಡುವುದರಿಂದ ಸಿಗುವ ಪ್ರಯೋಜನಕರವಾದ ಪರಿಣಾಮಗಳನ್ನು, ಅಪೊಸ್ತಲರ ಕೃತ್ಯಗಳು 8ನೆಯ ಅಧ್ಯಾಯದಲ್ಲಿ ದಾಖಲೆಯಾಗಿರುವ ಆ ಐಥಿಯೋಪ್ಯದ ಕಂಚುಕಿಯ ದೃಷ್ಟಾಂತದಿಂದ ನೋಡಬಲ್ಲೆವು.

17. ಐಥಿಯೋಪ್ಯದ ಕಂಚುಕಿಯ ಸಂಬಂಧದಲ್ಲಿ ಏನಾಯಿತು, ಮತ್ತು ಅದು ಏನನ್ನು ಚಿತ್ರಿಸುತ್ತದೆ?

17 ಐಥಿಯೋಪ್ಯದ ಕಂಚುಕಿಯು ಯೆಹೂದ ಮತಕ್ಕೆ ಪರಿವರ್ತನೆ ಹೊಂದಿದವನಾಗಿದ್ದನು. ಅವನು ದೇವರನ್ನು ಯಥಾರ್ಥತೆಯಿಂದ ನಂಬಿ, ಶಾಸ್ತ್ರಾಧ್ಯಯನ ಮಾಡುವವನಾಗಿದ್ದನು. ತನ್ನ ರಥದಲ್ಲಿ ಪಯಣಿಸುತ್ತಿದ್ದು ಯೆಶಾಯನ ಪುಸ್ತಕವನ್ನು ಓದುತ್ತಿದ್ದಾಗ, ಫಿಲಿಪ್ಪನು ಅವನ ರಥದ ಪಕ್ಕದಲ್ಲಿ ಓಡುತ್ತಾ, “ನೀನು ಓದುವದು ನಿನಗೆ ತಿಳಿಯುತ್ತದೊ?” ಎಂದು ಕೇಳಿದನು. ಆಗ ಕಂಚುಕಿಯ ಉತ್ತರ ಏನಾಗಿತ್ತು? “ಯಾರಾದರೂ ನನಗೆ ಅರ್ಥ ತಿಳಿಸಿಕೊಟ್ಟ ಹೊರತು ಅದು ನನಗೆ ಹೇಗೆ ತಿಳಿದೀತು ಎಂದು ಹೇಳಿ​—ನೀನು ರಥವನ್ನು ಹತ್ತಿ ನನ್ನ ಬಳಿಯಲ್ಲಿ ಕೂತುಕೋ ಎಂಬದಾಗಿ ಫಿಲಿಪ್ಪನನ್ನು ಕೇಳಿಕೊಂಡನು.” ಆಗ ಪವಿತ್ರಾತ್ಮದಿಂದ ನಿರ್ದೇಶಿತನಾದ ಫಿಲಿಪ್ಪನು, ಕಂಚುಕಿಯು ಯೆಶಾಯನ ಪ್ರವಾದನೆಯ ಅರ್ಥವನ್ನು ಗ್ರಹಿಸುವಂತೆ ಸಹಾಯಮಾಡಿದನು. (ಅ. ಕೃತ್ಯಗಳು 8:27-35) ಇದು ಏನನ್ನು ಸೂಚಿಸುತ್ತದೆ? ನಾವು ಖಾಸಗಿಯಾಗಿ ಬೈಬಲನ್ನು ಓದುವುದು ಸಾಲದೆಂದೇ. ಯೆಹೋವನು ತನ್ನ ಆತ್ಮದ ಮೂಲಕ ನಾವು ತಕ್ಕ ಸಮಯದಲ್ಲಿ ತನ್ನ ವಾಕ್ಯವನ್ನು ತಿಳಿದುಕೊಳ್ಳುವಂತೆ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗವನ್ನು ಉಪಯೋಗಿಸುತ್ತಾನೆ. ಅದನ್ನು ಹೇಗೆ ಮಾಡಲಾಗುತ್ತದೆ?​—ಮತ್ತಾಯ 24:45-47; ಲೂಕ 12:42.

18. ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗವು ನಮಗೆ ಹೇಗೆ ಸಹಾಯ ನೀಡುತ್ತದೆ?

18 ಆ ಆಳು ವರ್ಗವನ್ನು “ನಂಬಿಗಸ್ತನೂ ವಿವೇಕಿಯೂ” ಆದಂಥ ಆಳು ಎಂದು ನಿರೂಪಿಸಲಾಗಿರುವುದಾದರೂ, ಅದು ತಪ್ಪೇ ಮಾಡುವುದಿಲ್ಲವೆಂದು ಯೇಸು ಹೇಳಲಿಲ್ಲ. ಆ ನಂಬಿಗಸ್ತ ಅಭಿಷಿಕ್ತ ಸಹೋದರರ ಗುಂಪಿನಲ್ಲಿ ಅಪರಿಪೂರ್ಣ ಕ್ರೈಸ್ತರು ಇನ್ನೂ ಇದ್ದಾರೆ. ಅವರಲ್ಲಿ ಎಷ್ಟೇ ಸದುದ್ದೇಶವಿರುವುದಾದರೂ, ಪ್ರಥಮ ಶತಮಾನದ ಪುರುಷರು ಕೆಲವು ಸಲ ಮಾಡಿದ್ದಂತೆ, ಇವರೂ ತಪ್ಪುಗಳನ್ನು ಮಾಡುವ ಸಾಧ್ಯತೆಯಿದೆ. (ಅ. ಕೃತ್ಯಗಳು 10:9-15; ಗಲಾತ್ಯ 2:8, 11-14) ಆದರೂ ಅವರ ಉದ್ದೇಶವು ಶುದ್ಧವಾಗಿದೆ, ಮತ್ತು ಅವರು ದೇವರ ವಾಕ್ಯ ಹಾಗೂ ವಾಗ್ದಾನಗಳಲ್ಲಿ ನಮ್ಮ ನಂಬಿಕೆಯನ್ನು ವರ್ಧಿಸಲು ಬೈಬಲ್‌ ಅಧ್ಯಯನ ಸಹಾಯಕಗಳನ್ನು ಕೊಡುವಂತೆ ಯೆಹೋವನು ಅವರನ್ನು ಉಪಯೋಗಿಸುತ್ತಿದ್ದಾನೆ. ಈ ಆಳು, ವೈಯಕ್ತಿಕ ಅಧ್ಯಯನಕ್ಕಾಗಿ ನಮಗೆ ಕೊಟ್ಟಿರುವ ಮೂಲ ಸಹಾಯಕವು, ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ ಬೈಬಲಾಗಿದೆ. ಅದು ಈಗ ಪೂರ್ಣವಾಗಿ ಇಲ್ಲವೆ ಆಂಶಿಕವಾಗಿ 42 ಭಾಷೆಗಳಲ್ಲಿ ಲಭ್ಯವಿದ್ದು, ಹಲವಾರು ಆವೃತ್ತಿಗಳಲ್ಲಿ ಅದರ 11 ಕೋಟಿ 40 ಲಕ್ಷ ಪ್ರತಿಗಳು ಮುದ್ರಿತವಾಗಿವೆ. ನಾವು ಅದನ್ನು ನಮ್ಮ ವೈಯಕ್ತಿಕ ಅಧ್ಯಯನದಲ್ಲಿ ಹೇಗೆ ಕಾರ್ಯಸಾಧಕವಾಗಿ ಉಪಯೋಗಿಸಬಲ್ಲೆವು?​—2 ತಿಮೊಥೆಯ 3:​14-17.

19. ನೂತನ ಲೋಕ ಭಾಷಾಂತರ​—ರೆಫರೆನ್ಸ್‌ಗಳೊಂದಿಗೆ ಬೈಬಲಿನಲ್ಲಿ ವೈಯಕ್ತಿಕ ಅಧ್ಯಯನದಲ್ಲಿ ಸಹಾಯಕರವಾಗಿರಬಲ್ಲ ಕೆಲವು ವೈಶಿಷ್ಟ್ಯಗಳಾವುವು?

19 ಉದಾಹರಣೆಗೆ, ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ​—ರೆಫರೆನ್ಸ್‌ಗಳೊಂದಿಗೆ ಬೈಬಲನ್ನು ತೆಗೆದುಕೊಳ್ಳಿರಿ. ಅದರಲ್ಲಿ ಅಡ್ಡಉಲ್ಲೇಖದ ಕಾಲಮ್‌ಗಳು, ಪಾದಟಿಪ್ಪಣಿಗಳು, “ಬೈಬಲ್‌ ಪದಾನುಕ್ರಮಣಿಕೆ” ಮತ್ತು “ಪಾದಟಿಪ್ಪಣಿ ಪದಾನುಕ್ರಮಣಿಕೆ”ಯ ರೂಪದಲ್ಲಿ ಒಂದು ಸಂಕ್ಷಿಪ್ತ ಆಕಾರಾದಿ ಇದೆ ಮಾತ್ರವಲ್ಲ, ನಕ್ಷೆ ಮತ್ತು ರೇಖಾಪಟಗಳು ಸೇರಿರುವ 43 ವಿಷಯಗಳನ್ನು ಸಂಪೂರ್ಣವಾಗಿ ಆವರಿಸುವ ಒಂದು ಪರಿಶಿಷ್ಟವಿದೆ. ಈ ಅದ್ವಿತೀಯ ಬೈಬಲ್‌ ಭಾಷಾಂತರದಲ್ಲಿ ಉಪಯೋಗಿಸಲಾಗಿರುವ ಅನೇಕ ಮೂಲ ಗ್ರಂಥಗಳ ಕುರಿತಾದ ವಿವರಣೆಯನ್ನು ಕೊಡುವ “ಪೀಠಿಕೆ” ಸಹ ಇದರಲ್ಲಿದೆ. ನಿಮಗೆ ಅರ್ಥವಾಗುವ ಭಾಷೆಯಲ್ಲಿ ಇದು ದೊರೆಯುವಲ್ಲಿ, ಸರ್ವಪ್ರಕಾರದಲ್ಲಿಯೂ ಈ ವೈಶಿಷ್ಟ್ಯಗಳ ಪರಿಚಯವನ್ನು ಚೆನ್ನಾಗಿ ಮಾಡಿಕೊಂಡು ಅದನ್ನು ಉಪಯೋಗಿಸಿರಿ. ಹೇಗಿದ್ದರೂ, ನಮ್ಮ ಅಧ್ಯಯನ ಏರ್ಪಾಡಿನ ಆರಂಭದ ಹಂತವು ಬೈಬಲ್‌ ಆಗಿರುತ್ತದೆ. ಮತ್ತು ನಮ್ಮ ಬಳಿ, ಕಡಿಮೆಪಕ್ಷ ಹೀಬ್ರು ಶಾಸ್ತ್ರಗಳಲ್ಲಿ ದೈವಿಕ ನಾಮವನ್ನು ಸರಿಯಾಗಿ ಒತ್ತಿಹೇಳುತ್ತಾ, ದೇವರ ರಾಜ್ಯಾಳಿಕೆಯನ್ನು ಎತ್ತಿ ತೋರಿಸುವ ಒಂದು ಭಾಷಾಂತರ ಇರುವುದು ಸಂತೋಷದ ಸಂಗತಿಯಾಗಿದೆ.​—ಕೀರ್ತನೆ 149:​1-9; ದಾನಿಯೇಲ 2:44; ಮತ್ತಾಯ 6:9, 10.

20. ವೈಯಕ್ತಿಕ ಅಧ್ಯಯನದ ಕುರಿತಾದ ಯಾವ ಪ್ರಶ್ನೆಗಳು ಈಗ ಉತ್ತರವನ್ನು ಅಪೇಕ್ಷಿಸುತ್ತವೆ?

20 ಈಗ ನಾವು ಹೀಗೆ ಕೇಳಬಹುದು: ‘ಬೈಬಲಿನ ಅರ್ಥವನ್ನು ಗ್ರಹಿಸಲು ನಮಗೆ ಇನ್ನೆಷ್ಟು ಸಹಾಯದ ಅಗತ್ಯವಿದೆ? ವೈಯಕ್ತಿಕ ಅಧ್ಯಯನಕ್ಕೆ ನಾವು ಹೇಗೆ ಸಮಯವನ್ನು ಬದಿಗಿರಿಸಬಹುದು? ನಮ್ಮ ಅಧ್ಯಯನವನ್ನು ನಾವು ಹೇಗೆ ಹೆಚ್ಚು ಪರಿಣಾಮಕಾರಿಯಾಗಿಸಬಲ್ಲೆವು? ನಮ್ಮ ಅಧ್ಯಯನವು ಬೇರೆಯವರನ್ನು ಹೇಗೆ ಪ್ರಭಾವಿಸಬೇಕು?’ ನಮ್ಮ ಕ್ರೈಸ್ತ ಅಭಿವೃದ್ಧಿಯ ಈ ಮಹತ್ವಪೂರ್ಣ ಅಂಶಗಳನ್ನು ಮುಂದಿನ ಲೇಖನವು ಪರಿಗಣಿಸುವುದು.

[ಪಾದಟಿಪ್ಪಣಿ]

^ ಪ್ಯಾರ. 9 ವರುಷ 1979ರಿಂದ ಹಿಡಿದು ಚಿನ್ನದ ಮೌಲ್ಯವು 1980ರಲ್ಲಿ 31 ಗ್ರಾಮ್‌ಗಳಿಗೆ 850 ಡಾಲರಿನಷ್ಟು ಉಚ್ಚ ಬೆಲೆಯಿಂದ 1999ರಲ್ಲಿ 31 ಗ್ರಾಮ್‌ಗಳಿಗೆ 252.80 ಡಾಲರಿನಷ್ಟು ಕಡಿಮೆ ಬೆಲೆಯ ಏರಿಳಿತವನ್ನು ಕಂಡಿದೆ.

ನಿಮಗೆ ಜ್ಞಾಪಕವಿದೆಯೆ?

• “ಧ್ಯಾನಿಸುವುದು” ಮತ್ತು “ಪರ್ಯಾಲೋಚಿಸುವುದು” ಎಂಬುದರ ಅರ್ಥವೇನು?

• ದೇವರ ವಾಕ್ಯದ ಅಧ್ಯಯನದ ವಿಷಯದಲ್ಲಿ ನಮ್ಮ ಮನೋಭಾವ ಏನಾಗಿರಬೇಕು?

• ವೈಯಕ್ತಿಕ ಅಧ್ಯಯನವನ್ನು ಮಾಡುವುದರಲ್ಲಿ ನಮ್ಮ ಉದ್ದೇಶವು ಏನಾಗಿರಬೇಕು?

• ಬೈಬಲಿನ ತಿಳಿವಳಿಕೆ ಪಡೆಯಲು ಯಾವ ಸಹಾಯಕಗಳು ನಮಗಿವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ಬೆತೆಲ್‌ ಕುಟುಂಬದ ಸದಸ್ಯರು ಪ್ರತಿದಿನ ಒಂದು ಬೈಬಲ್‌ ವಚನವನ್ನು ಪರ್ಯಾಲೋಚಿಸುವುದನ್ನು ಆತ್ಮಿಕವಾಗಿ ಬಲದಾಯಕವಾದದ್ದಾಗಿ ಕಂಡುಕೊಳ್ಳುತ್ತಾರೆ

[ಪುಟ 15ರಲ್ಲಿರುವ ಚಿತ್ರಗಳು]

ನಾವು ಪಯಣಿಸುವಾಗ ಬೈಬಲ್‌ ಟೇಪ್‌ಗಳನ್ನು ಕೇಳಿಸಿಕೊಳ್ಳುವುದರಿಂದ ಬೆಲೆಬಾಳುವ ಸಮಯವನ್ನು ಸದುಪಯೋಗಿಸಿಕೊಳ್ಳಬಲ್ಲೆವು

[ಪುಟ 16ರಲ್ಲಿರುವ ಚಿತ್ರ]

ಚಿನ್ನವನ್ನು ಗಳಿಸಲು ಜನರು ಕಠಿನವಾಗಿ ದೀರ್ಘಕಾಲ ಕೆಲಸ ಮಾಡಿದರು. ಆದರೆ, ದೇವರ ವಾಕ್ಯವನ್ನು ಅಧ್ಯಯನ ಮಾಡಲು ನೀವು ಎಷ್ಟು ಪ್ರಯತ್ನಪಡುತ್ತೀರಿ?

[ಕೃಪೆ]

Courtesy of California State Parks, 2002

[ಪುಟ 17ರಲ್ಲಿರುವ ಚಿತ್ರಗಳು]

ಬೈಬಲು ನಿತ್ಯಜೀವಕ್ಕೆ ನಡೆಸಬಲ್ಲ ಒಂದು ನಿಕ್ಷೇಪವಾಗಿದೆ