ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮನ್ನು ಬೋಧಕರಾಗಿ ಸನ್ನದ್ಧಗೊಳಿಸುವ ವೈಯಕ್ತಿಕ ಅಧ್ಯಯನ

ನಮ್ಮನ್ನು ಬೋಧಕರಾಗಿ ಸನ್ನದ್ಧಗೊಳಿಸುವ ವೈಯಕ್ತಿಕ ಅಧ್ಯಯನ

ನಮ್ಮನ್ನು ಬೋಧಕರಾಗಿ ಸನ್ನದ್ಧಗೊಳಿಸುವ ವೈಯಕ್ತಿಕ ಅಧ್ಯಯನ

“ಈ ವಿಷಯಗಳನ್ನು ಪರ್ಯಾಲೋಚಿಸು; ನಿನ್ನ ಅಭಿವೃದ್ಧಿಯು ಎಲ್ಲ ವ್ಯಕ್ತಿಗಳಿಗೆ ತೋರಿಬರುವಂತೆ ಇವುಗಳಲ್ಲಿ ತಲ್ಲೀನನಾಗಿರು. ನಿನಗೂ ನಿನ್ನ ಬೋಧನೆಗೂ ಎಡೆಬಿಡದ ಗಮನವನ್ನು ಕೊಡು.”​—1 ತಿಮೊಥೆಯ 4:​15, 16, NW.

1. ಸಮಯ ಮತ್ತು ವೈಯಕ್ತಿಕ ಅಧ್ಯಯನದ ಬಗ್ಗೆ ಯಾವ ಮಾತು ಸತ್ಯ?

“ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ,” ಎನ್ನುತ್ತದೆ ಬೈಬಲು ಪ್ರಸಂಗಿ 3:1ರಲ್ಲಿ. ವೈಯಕ್ತಿಕ ಅಧ್ಯಯನದ ವಿಷಯದಲ್ಲೂ ಇದು ಖಂಡಿತವಾಗಿಯೂ ನಿಜವಾಗಿದೆ. ಅದು ತಪ್ಪಾದ ಸಮಯ ಇಲ್ಲವೆ ತಪ್ಪಾದ ಸ್ಥಳ ಆಗಿರುವಲ್ಲಿ, ಆತ್ಮಿಕ ವಿಷಯಗಳ ಕುರಿತು ಪರ್ಯಾಲೋಚಿಸಲು ಅನೇಕರಿಗೆ ಕಷ್ಟಕರವಾಗುತ್ತದೆ. ಉದಾಹರಣೆಗೆ, ದಿನವಿಡೀ ದುಡಿದ ಮೇಲೆ ಸಾಯಂಕಾಲ ಹೊಟ್ಟೆತುಂಬ ಊಟಮಾಡಿದ ಬಳಿಕ, ಅದರಲ್ಲೂ ನಿಮಗೆ ಪ್ರಿಯವಾಗಿರುವ ಆರಾಮಕುರ್ಚಿಯ ಮೇಲೆ ಒರಗಿ ಟಿವಿ ಮುಂದೆ ಕುಳಿತಿರುವಾಗ, ನಿಮಗೆ ಅಧ್ಯಯನ ಮಾಡಲು ಮನಸ್ಸಾಗುವುದೊ? ಅಸಂಭವ. ಹಾಗಾದರೆ ಇದಕ್ಕೆ ಪರಿಹಾರವೇನು? ನಮ್ಮ ಪ್ರಯತ್ನಗಳಿಂದ ಗರಿಷ್ಠ ಮಟ್ಟದ ಪ್ರಯೋಜನವನ್ನು ಪಡೆಯುವ ಉದ್ದೇಶದಿಂದ, ಅಧ್ಯಯನವನ್ನು ಯಾವಾಗ ಮತ್ತು ಎಲ್ಲಿ ಮಾಡಬೇಕೆಂಬುದನ್ನು ನಾವು ಆರಿಸಿಕೊಳ್ಳಬೇಕೆಂಬುದು ಸ್ಪಷ್ಟ.

2. ವೈಯಕ್ತಿಕ ಅಧ್ಯಯನಕ್ಕೆ ಯಾವುದು ಅನೇಕವೇಳೆ ಅತ್ಯುತ್ತಮ ಸಮಯವಾಗಿದೆ?

2 ಅನೇಕರಿಗೆ ಅಧ್ಯಯನಕ್ಕಾಗಿರುವ ಅತ್ಯುತ್ತಮ ಸಮಯವು, ಅವರ ಮನಸ್ಸು ಹೆಚ್ಚು ಚುರುಕಾಗಿರುವ ಮುಂಜಾನೆಯ ಸಮಯವಾಗಿದೆ. ಇತರರು ಮಧ್ಯಾಹ್ನದ ವಿರಾಮವನ್ನು ಚಿಕ್ಕ ಅಧ್ಯಯನದ ಅವಧಿಯಾಗಿ ಉಪಯೋಗಿಸುತ್ತಾರೆ. ಮುಂದಿನ ಉದಾಹರಣೆಗಳಲ್ಲಿ ಪ್ರಮುಖ ಆತ್ಮಿಕ ಕಾರ್ಯಗಳಿಗಾಗಿರುವ ಸಲಹೆಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಿರಿ. ಪುರಾತನ ಕಾಲದ ಇಸ್ರಾಯೇಲಿನ ದಾವೀದ ರಾಜನು ಹೀಗೆ ಬರೆದನು: “ಹೊತ್ತಾರೆ ನಿನ್ನ ಕೃಪೆಯು ನನಗೆ ಪ್ರಕಟವಾಗಲಿ; ನಿನ್ನಲ್ಲಿ ಭರವಸವಿಟ್ಟಿದ್ದೇನಲ್ಲಾ. ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು; ನನ್ನ ಮನಸ್ಸನ್ನು ನಿನ್ನಲ್ಲಿಯೇ ಇಟ್ಟಿದ್ದೇನೆ.” (ಕೀರ್ತನೆ 143:8) ಯೆಶಾಯ ಪ್ರವಾದಿಯೂ ತದ್ರೀತಿಯ ಗಣ್ಯತೆಯ ಭಾವವನ್ನು ತೋರಿಸುತ್ತಾ ಹೇಳಿದ್ದು: “ಬಳಲಿಹೋದವರನ್ನು ಮಾತುಗಳಿಂದ ಸುದಾರಿಸುವದಕ್ಕೆ ನಾನು ಬಲ್ಲವನಾಗುವಂತೆ ಕರ್ತನಾದ ಯೆಹೋವನು ಶಿಕ್ಷಿತರ ನಾಲಿಗೆಯನ್ನು ನನಗೆ ದಯಪಾಲಿಸಿದ್ದಾನೆ; ಬೆಳಬೆಳಗೂ ನನ್ನನ್ನು ಎಚ್ಚರಿಸಿ ಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಜಾಗರಗೊಳಿಸುತ್ತಾನೆ.” ಇಲ್ಲಿ ಮುಖ್ಯ ಸಂಗತಿಯೇನೆಂದರೆ, ದಿನದ ಯಾವುದೇ ಸಮಯವಾಗಿರಲಿ ನಾವು ಮಾನಸಿಕವಾಗಿ ಚುರುಕಾಗಿರುವಾಗಲೇ ಅಧ್ಯಯನ ಮಾಡಬೇಕು ಮತ್ತು ಯೆಹೋವನೊಂದಿಗೆ ಆಪ್ತ ರೀತಿಯಲ್ಲಿ ಮಾತಾಡಬೇಕು.​—ಯೆಶಾಯ 50:4, 5; ಕೀರ್ತನೆ 5:3; 88:13.

3. ಪರಿಣಾಮಕಾರಿ ಅಧ್ಯಯನಕ್ಕೆ ಯಾವ ಪರಿಸ್ಥಿತಿಗಳು ಅಪೇಕ್ಷಣೀಯವಾಗಿವೆ?

3 ಪರಿಣಾಮಕಾರಿ ಅಧ್ಯಯನಕ್ಕೆ ಇನ್ನೊಂದು ಅಗತ್ಯವು, ನಾವು ಅತಿ ಆರಾಮವಾಗಿರುವ ಕುರ್ಚಿ ಅಥವಾ ಸೋಫಾ ಮೇಲೆ ಕುಳಿತುಕೊಳ್ಳದಿರುವುದೇ. ಎಚ್ಚರವಾಗಿರುವ ಮಾರ್ಗವು ಅದಲ್ಲ. ನಾವು ಅಧ್ಯಯನ ಮಾಡುವಾಗ ನಮ್ಮ ಮನಸ್ಸು ಉತ್ತೇಜಕ ಸ್ಥಿತಿಯಲ್ಲಿರಬೇಕು ಮತ್ತು ತೀರ ಹೆಚ್ಚು ಶಾರೀರಿಕ ಆರಾಮವು ಅದಕ್ಕೆ ವ್ಯತಿರಿಕ್ತವಾದ ಸ್ಥಿತಿಯನ್ನು ಬರಮಾಡುತ್ತದೆ. ಅಧ್ಯಯನ ಮತ್ತು ಧ್ಯಾನಕ್ಕೆ ಅಪೇಕ್ಷಣೀಯವಾದ ಇನ್ನೊಂದು ಸಂಗತಿಯು, ತುಲನಾತ್ಮಕವಾದ ನೆಮ್ಮದಿ ಮತ್ತು ಅಪಕರ್ಷಣೆಗಳಿಲ್ಲದ ಸ್ಥಿತಿಯೇ. ರೇಡಿಯೊ, ಟಿವಿಯನ್ನು ಆನ್‌ ಇಟ್ಟು ಅಥವಾ ಮಕ್ಕಳು ನಿಮ್ಮ ಗಮನವನ್ನು ಸೆಳೆಯಲು ಸ್ಪರ್ಧಿಸುತ್ತಿರುವಾಗ ಅಧ್ಯಯನ ಮಾಡುವುದರಿಂದ ಅತ್ಯುತ್ತಮ ಫಲಿತಾಂಶಗಳು ಸಿಗಲಾರವು. ಯೇಸು ಧ್ಯಾನಿಸಲು ಬಯಸಿದಾಗ, ಪ್ರಶಾಂತವಾಗಿದ್ದ ಪ್ರದೇಶಕ್ಕೆ ಹೋಗುತ್ತಿದ್ದನು. ಪ್ರಾರ್ಥನೆಮಾಡಲಿಕ್ಕಾಗಿ ಏಕಾಂತ ಸ್ಥಳವನ್ನು ಹುಡುಕುವುದರ ಮೌಲ್ಯದ ಬಗ್ಗೆಯೂ ಅವನು ಮಾತಾಡಿದನು.​—ಮತ್ತಾಯ 6:6; 14:13; ಮಾರ್ಕ 6:30-32.

ಉತ್ತರ ಕೊಡುವಂತೆ ನಮ್ಮನ್ನು ಸನ್ನದ್ಧಗೊಳಿಸುವ ವೈಯಕ್ತಿಕ ಅಧ್ಯಯನ

4, 5. ಅಪೇಕ್ಷಿಸು ಬ್ರೋಷರ್‌ ಯಾವ ವಿಧಗಳಲ್ಲಿ ಪ್ರಾಯೋಗಿಕ ರೀತಿಯ ಸಹಾಯಕವಾಗಿದೆ?

4 ವಿಶೇಷವಾಗಿ ಒಬ್ಬನ ಯಥಾರ್ಥ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲಿಕ್ಕಾಗಿ ನಾವು ಒಂದು ವಿಷಯವನ್ನು ಹೆಚ್ಚು ಆಳವಾಗಿ ಅಗೆಯುವ ಉದ್ದೇಶದಿಂದ ವಿವಿಧ ಬೈಬಲ್‌ ಸಹಾಯಕಗಳನ್ನು ಉಪಯೋಗಿಸುವಲ್ಲಿ, ವೈಯಕ್ತಿಕ ಅಧ್ಯಯನವು ತೃಪ್ತಿಕರವಾಗುತ್ತದೆ. (1 ತಿಮೊಥೆಯ 1:4; 2 ತಿಮೊಥೆಯ 2:23) ಆರಂಭದ ಹಂತವಾಗಿ, ಅನೇಕ ಮಂದಿ ಹೊಸಬರು, ಈಗ 261 ಭಾಷೆಗಳಲ್ಲಿ ಲಭ್ಯವಿರುವ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? * ಎಂಬ ಬ್ರೋಷರನ್ನು ಅಧ್ಯಯನ ಮಾಡುತ್ತಾರೆ. ಇದು ತೀರ ಸರಳವಾದ, ಆದರೆ ಬೈಬಲಿನ ಮೇಲೆ ಪೂರ್ತಿ ಆಧಾರಿತವಾದ ನಿಷ್ಕೃಷ್ಟ ಪ್ರಕಾಶನವಾಗಿದೆ. ಸತ್ಯಾರಾಧನೆಗಾಗಿರುವ ದೇವರ ಆವಶ್ಯಕತೆಗಳಾವುವು ಎಂಬುದನ್ನು ಓದುಗರು ಒಡನೆ ತಿಳಿದುಕೊಳ್ಳುವಂತೆ ಇದು ಸಹಾಯಮಾಡುತ್ತದೆ. ಆದರೂ, ಅದರ ವಿನ್ಯಾಸವು ಪ್ರತಿ ವಿಷಯವನ್ನು ಸವಿವರವಾಗಿ ಅಧ್ಯಯನ ಮಾಡುವಷ್ಟು ಸ್ಥಳಾವಕಾಶವನ್ನು ಕೊಡುವುದಿಲ್ಲ. ನಿಮ್ಮ ಬೈಬಲ್‌ ವಿದ್ಯಾರ್ಥಿಯು ಚರ್ಚಿಸಲ್ಪಡುತ್ತಿರುವ ಕೆಲವು ಬೈಬಲ್‌ ವಿಷಯಗಳ ಸಂಬಂಧದಲ್ಲಿ ಶ್ರದ್ಧಾಪೂರ್ವಕವಾದ ಪ್ರಶ್ನೆಗಳನ್ನು ಹಾಕುವಲ್ಲಿ, ಅವನ ಆ ಬೈಬಲ್‌ ಪ್ರಶ್ನೆಗಳಿಗೆ ಉತ್ತರ ಕೊಡಲು ಸಹಾಯವಾಗುವಂತೆ ನೀವು ಹೆಚ್ಚಿನ ಬೈಬಲ್‌ ಮಾಹಿತಿಯನ್ನು ಹೇಗೆ ಪಡೆದುಕೊಳ್ಳುವಿರಿ?

5 ತಮ್ಮ ಸ್ವಂತ ಭಾಷೆಗಳಲ್ಲಿ ಸಿಡಿ-ರಾಮ್‌ನಲ್ಲಿ ವಾಚ್‌ಟವರ್‌ ಲೈಬ್ರರಿ ಇರುವವರಿಗೆ, ಕಂಪ್ಯೂಟರ್‌ನಲ್ಲಿ ಮಾಹಿತಿಯ ಅನೇಕ ಮೂಲಗಳು ಸುಲಭವಾಗಿ ಲಭ್ಯವಾಗುವವು. ಆದರೆ ಇಂತಹ ಉಪಕರಣವಿಲ್ಲದವರ ವಿಷಯವಾಗಿ ಏನು? ಅಪೇಕ್ಷಿಸು ಬ್ರೋಷರ್‌ನಲ್ಲಿರುವ ಎರಡು ಮುಖ್ಯ ವಿಷಯಗಳನ್ನು​—ವಿಶೇಷವಾಗಿ, ದೇವರು ಯಾರು? ಮತ್ತು ಯೇಸು ನಿಜವಾಗಿಯೂ ಯಾರಾಗಿದ್ದನು? ಎಂಬ ಪ್ರಶ್ನೆಗಳನ್ನು ಯಾರಾದರೂ ಕೇಳುವಲ್ಲಿ​—ನಾವು ಪರೀಕ್ಷಿಸಿ, ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿ, ಅವುಗಳಿಗೆ ಸವಿವರವಾದ ಉತ್ತರವನ್ನು ಹೇಗೆ ಕೊಡಬಲ್ಲೆವು ಎಂಬುದನ್ನು ನೋಡೋಣ.​—ವಿಮೋಚನಕಾಂಡ 5:2; ಲೂಕ 9:18-20; 1 ಪೇತ್ರ 3:15.

ದೇವರು ಯಾರು?

6, 7. (ಎ) ದೇವರ ವಿಷಯದಲ್ಲಿ ಯಾವ ಪ್ರಶ್ನೆಯೇಳುತ್ತದೆ? (ಬಿ) ಒಂದು ಭಾಷಣದಲ್ಲಿ ಒಬ್ಬ ಪಾದ್ರಿಯ ಗಂಭೀರ ಲೋಪವೇನಾಗಿತ್ತು?

6ಅಪೇಕ್ಷಿಸು ಬ್ರೋಷರಿನ ಎರಡನೆಯ ಪಾಠವು, ‘ದೇವರು ಯಾರು?’ ಎಂಬ ಮಹತ್ವಪೂರ್ಣ ಪ್ರಶ್ನೆಯನ್ನು ಉತ್ತರಿಸುತ್ತದೆ. ಇದೊಂದು ಮೂಲಭೂತ ತತ್ತ್ವವಾಗಿದೆ, ಏಕೆಂದರೆ ಒಬ್ಬನಿಗೆ ಸತ್ಯ ದೇವರು ಯಾರು ಎಂದು ಗೊತ್ತಿಲ್ಲದಿರುವಲ್ಲಿ ಅಥವಾ ಆತನ ಅಸ್ತಿತ್ವವನ್ನು ಸಂದೇಹಿಸುವಲ್ಲಿ ಅವನು ಸತ್ಯ ದೇವರನ್ನು ಆರಾಧಿಸಲಾರನು. (ರೋಮಾಪುರ 1:​19, 20; ಇಬ್ರಿಯ 11:6) ಹೀಗಿದ್ದರೂ, ಜನರು ಲೋಕವ್ಯಾಪಕವಾಗಿ ದೇವರು ಯಾರೆಂಬ ವಿಚಾರದಲ್ಲಿ ಅನೇಕಾನೇಕ ಕಲ್ಪನೆಗಳನ್ನು ನಂಬುತ್ತಾರೆ. (1 ಕೊರಿಂಥ 8:​4-6) ದೇವರು ಯಾರೆಂಬ ಪ್ರಶ್ನೆಗೆ ಪ್ರತಿಯೊಂದು ಧಾರ್ಮಿಕ ತತ್ತ್ವಜ್ಞಾನವು ವಿಭಿನ್ನವಾದ ಉತ್ತರವನ್ನು ಕೊಡುತ್ತದೆ. ಕ್ರೈಸ್ತಪ್ರಪಂಚದಲ್ಲಿ ಹೆಚ್ಚಿನ ಧರ್ಮಗಳು ದೇವರನ್ನು ಒಬ್ಬ ತ್ರಯೈಕ್ಯನಾಗಿ ದೃಷ್ಟಿಸುತ್ತವೆ. ಅಮೆರಿಕದ ಒಬ್ಬ ಪಾದ್ರಿಯು, “ನಿಮಗೆ ದೇವರ ಪರಿಚಯವಿದೆಯೊ?” ಎಂಬ ಶೀರ್ಷಿಕೆಯುಳ್ಳ ಭಾಷಣವನ್ನು ಕೊಟ್ಟಾಗ, ಅವನು ಹೀಬ್ರು ಶಾಸ್ತ್ರದಿಂದ ಅನೇಕ ಬಾರಿ ಉಲ್ಲೇಖಗಳನ್ನು ಎತ್ತಿ ಹೇಳಿದರೂ, ಒಂದೇ ಒಂದು ಬಾರಿಯೂ ದೈವಿಕ ನಾಮವನ್ನು ಉಚ್ಚರಿಸಲಿಲ್ಲ. ಅವನು ಯೆಹೋವ ಅಥವಾ ಯಾಹ್ವೆ ಎಂಬುದರ ಬದಲಾಗಿ ದ್ವಂದ್ವಾರ್ಥವುಳ್ಳ ಮತ್ತು ಅನಾಮಧೇಯವಾದ “ಕರ್ತನು” ಎಂಬ ಪದವನ್ನು ಉಪಯೋಗಿಸಿದ್ದ ಬೈಬಲ್‌ ಭಾಷಾಂತರದಿಂದ ಓದಿ ಹೇಳಿದನು.

7 ಆ ಪಾದ್ರಿಯು ಯೆರೆಮೀಯ 31:​33, 34ನ್ನು ಉಲ್ಲೇಖಿಸಿದಾಗ ಎಷ್ಟು ಮಹತ್ವಪೂರ್ಣವಾದ ಸಂಗತಿಯನ್ನು ಬಿಟ್ಟುಬಿಟ್ಟನು ಎಂಬುದನ್ನು ನೋಡಿರಿ: “ಒಬ್ಬನು ತನ್ನ ನೆರೆಹೊರೆಯವರನ್ನು ಕುರಿತು ಅಥವಾ ಅಣ್ಣ ತಮ್ಮಂದಿರನ್ನು ಕುರಿತು, ‘ಕರ್ತನನ್ನು [ಹೀಬ್ರು, “ಯೆಹೋವನನ್ನು”] ಅರಿತುಕೊ ಎಂದು ಬೋಧಿಸಬೇಕಾಗಿರುವದಿಲ್ಲ. ಚಿಕ್ಕವರಿಂದ ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ನನ್ನನ್ನು ಅರಿತುಕೊಳ್ಳುವರು.’ . . . ಇದು ಕರ್ತನಾದ [ಹೀಬ್ರು, ಯೆಹೋವನಾದ] ನನ್ನ ನುಡಿ.” ಅವನು ಉಪಯೋಗಿಸಿದ ಭಾಷಾಂತರವು ಯೆಹೋವ ಎಂಬ ವಿಶಿಷ್ಟ ದೈವಿಕ ನಾಮವನ್ನು ಬಿಟ್ಟುಬಿಟ್ಟಿತ್ತು.​—ಕೀರ್ತನೆ 103:​1, 2.

8. ದೇವರ ಹೆಸರನ್ನು ಉಪಯೋಗಿಸುವ ಮಹತ್ವವನ್ನು ಯಾವುದು ಚಿತ್ರಿಸುತ್ತದೆ?

8ಕೀರ್ತನೆ 8:​9, ಯೆಹೋವನ ಹೆಸರಿನ ಉಪಯೋಗವು ಏಕೆ ಅಷ್ಟು ಮಹತ್ವಪೂರ್ಣವಾಗಿದೆ ಎಂಬುದನ್ನು ಚಿತ್ರಿಸುತ್ತದೆ: “ನಮ್ಮ ಕರ್ತನಾದ ಯೆಹೋವನೇ, ನಿನ್ನ ನಾಮವು ಭೂಲೋಕದಲ್ಲೆಲ್ಲಾ ಎಷ್ಟೋ ಮಹಿಮೆಯುಳ್ಳದ್ದು.” ಈ ವಚನವನ್ನು ಈ ಭಾಷಾಂತರದೊಂದಿಗೆ ಹೋಲಿಸಿರಿ: “ಓ ಕರ್ತನೇ, ನಮ್ಮ ಕರ್ತನೇ, ನಿನ್ನ ನಾಮವು ಭೂಮ್ಯಾದ್ಯಂತ ಎಷ್ಟು ಉತ್ಕೃಷ್ಟ.” (ಕಿಂಗ್‌ ಜೇಮ್ಸ್‌ ವರ್ಷನ್‌; ಇದನ್ನೂ ನೋಡಿರಿ, ದ ನ್ಯೂ ಅಮೆರಿಕನ್‌ ಬೈಬಲ್‌, ದ ಹೋಲಿ ಬೈಬಲ್‌​—ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌, ತನಖ್‌​—ದಿ ಹೋಲಿ ಸ್ಕ್ರಿಪ್ಚರ್ಸ್‌.) ಆದರೂ, ಹಿಂದಿನ ಲೇಖನದಲ್ಲಿ ಹೇಳಲಾಗಿರುವಂತೆ, ಆತನ ವಾಕ್ಯವು ನಮ್ಮನ್ನು ಬೆಳಗಿಸುವಂತೆ ನಾವು ಬಿಡುವಲ್ಲಿ, ನಮಗೆ “ದೇವಜ್ಞಾನ” ದೊರೆಯಬಲ್ಲದು. ಆದರೆ ದೈವಿಕ ಹೆಸರಿನ ಮಹತ್ವದ ಬಗ್ಗೆ ನಮ್ಮ ಪ್ರಶ್ನೆಗಳನ್ನು ಯಾವ ಬೈಬಲ್‌ ಅಧ್ಯಯನ ಸಹಾಯಕವು ಸುಲಭವಾಗಿ ಉತ್ತರಿಸುವುದು?​—ಜ್ಞಾನೋಕ್ತಿ 2:​1-6.

9. (ಎ) ದೈವಿಕ ಹೆಸರನ್ನು ಉಪಯೋಗಿಸುವ ಮಹತ್ವವನ್ನು ವಿವರಿಸಲು ಯಾವ ಪ್ರಕಾಶನವು ಸಹಾಯಮಾಡಬಲ್ಲದು? (ಬಿ) ಅನೇಕ ಭಾಷಾಂತರಕಾರರು ದೇವರ ನಾಮಕ್ಕೆ ಗೌರವವನ್ನು ಕೊಡಲು ಹೇಗೆ ತಪ್ಪಿಹೋಗಿದ್ದಾರೆ?

9 ನಾವು 131 ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿರುವ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ನೋಡಬಹುದು. * “ದೇವರು​—ಆತನು ಯಾರು?” ಎಂಬ ಶೀರ್ಷಿಕೆಯುಳ್ಳ ನಾಲ್ಕನೆಯ ಅಧ್ಯಾಯವು (ಪುಟಗಳು 41-44, ಪ್ಯಾರಗ್ರಾಫ್‌ಗಳು 18-24), ಹೀಬ್ರು ಟೆಟ್ರಗ್ರ್ಯಾಮಟನ್‌ (“ನಾಲ್ಕು ಅಕ್ಷರಗಳು” ಎಂಬ ಅರ್ಥವಿರುವ ಗ್ರೀಕ್‌ ಪದ) ಹಳೆಯ ಹೀಬ್ರು ಗ್ರಂಥಪಾಠಗಳಲ್ಲಿ ಸುಮಾರು 7,000 ಬಾರಿ ಕಂಡುಬರುತ್ತದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಹೀಗಿದ್ದರೂ, ಪಾದ್ರಿಗಳೂ ಯೆಹೂದಿ ಮತದ ಮತ್ತು ಕ್ರೈಸ್ತಪ್ರಪಂಚದ ಭಾಷಾಂತರಕಾರರೂ ತಮ್ಮ ಬೈಬಲ್‌ ಭಾಷಾಂತರಗಳಿಂದ ಅದನ್ನು ಬೇಕುಬೇಕೆಂದೇ ತೆಗೆದುಬಿಟ್ಟಿದ್ದಾರೆ. * ಆತನ ಹೆಸರನ್ನು ಉಪಯೋಗಿಸಿ ಆತನನ್ನು ಕರೆಯಲಿಕ್ಕೇ ಅವರು ನಿರಾಕರಿಸುತ್ತಿರುವಾಗ, ತಮಗೆ ದೇವರ ಪರಿಚಯವಿದೆಯೆಂದೂ ತಾವು ಆತನೊಂದಿಗೆ ಸ್ವೀಕಾರಾರ್ಹ ಸಂಬಂಧದಲ್ಲಿದ್ದೇವೆಂದೂ ಅವರು ಹೇಗೆ ತಾನೇ ಹೇಳಿಕೊಳ್ಳಸಾಧ್ಯವಿದೆ? ಆತನ ಉದ್ದೇಶಗಳೇನು ಮತ್ತು ಆತನು ಯಾರು ಎಂಬ ವಿಷಯದ ತಿಳಿವಳಿಕೆಗೆ ಆತನ ನಿಜ ಹೆಸರೇ ದಾರಿಯನ್ನು ತೆರೆಯುತ್ತದೆ. ಅಲ್ಲದೆ, ದೇವರ ಹೆಸರನ್ನು ಉಪಯೋಗಿಸದೆ ಇರುವಲ್ಲಿ, ಯೇಸುವಿನ ಮಾದರಿ ಪ್ರಾರ್ಥನೆಯಲ್ಲಿರುವ “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ” ಎಂಬ ಭಾಗಕ್ಕೆ ಯಾವ ಬೆಲೆ ಇರುತ್ತದೆ?​—ಮತ್ತಾಯ 6:10; ಯೋಹಾನ 5:43; 17:6.

ಯೇಸು ಕ್ರಿಸ್ತನು ಯಾರು?

10. ಯೇಸುವಿನ ಜೀವನ ಮತ್ತು ಶುಶ್ರೂಷೆಯ ಬಗ್ಗೆ ಪೂರ್ಣವಾದ ಚಿತ್ರಣವನ್ನು ನಾವು ಯಾವ ವಿಧಗಳಲ್ಲಿ ಪಡೆಯಬಲ್ಲೆವು?

10ಅಪೇಕ್ಷಿಸು ಬ್ರೋಷರಿನಲ್ಲಿರುವ 3ನೆಯ ಪಾಠದ ಶೀರ್ಷಿಕೆಯು, “ಯೇಸು ಕ್ರಿಸ್ತನು ಯಾರು?” ಎಂಬುದಾಗಿದೆ. ಕೇವಲ ಆರು ಪ್ಯಾರಗ್ರಾಫ್‌ಗಳಲ್ಲಿ, ಅದು ಯೇಸುವಿನ ಮೂಲ ಮತ್ತು ಅವನು ಭೂಮಿಗೆ ಬಂದದ್ದರ ಉದ್ದೇಶದ ತೀರ ಸಂಕ್ಷಿಪ್ತ ಹೊರಮೇರೆಯನ್ನು ಕೊಡುತ್ತದೆ. ಆದರೂ, ನಿಮಗೆ ಅವನ ಜೀವನದ ಪೂರ್ಣ ವೃತ್ತಾಂತ ಬೇಕಾಗಿರುವಲ್ಲಿ, ಸುವಾರ್ತೆಗಳ ವೃತ್ತಾಂತಗಳನ್ನು ಬಿಟ್ಟರೆ, 111 ಭಾಷೆಗಳಲ್ಲಿ ಲಭ್ಯವಿರುವ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಪುಸ್ತಕಕ್ಕಿಂತ ಹೆಚ್ಚು ಉತ್ತಮವಾದ ಪುಸ್ತಕವೇ ಇಲ್ಲ. * ಈ ಪುಸ್ತಕವು ನಾಲ್ಕು ಸುವಾರ್ತೆಗಳಲ್ಲಿ ಆಧರಿಸಿರುವ ಕ್ರಿಸ್ತನ ಜೀವನ ಮತ್ತು ಬೋಧನೆಗಳ ಕಾಲಕ್ರಮಾನುಸಾರವಾದ ಪೂರ್ಣ ವೃತ್ತಾಂತವನ್ನು ಕೊಡುತ್ತದೆ. ಅದರ 133 ಅಧ್ಯಾಯಗಳು ಯೇಸುವಿನ ಜೀವನ ಮತ್ತು ಶುಶ್ರೂಷೆಯ ಆಗುಹೋಗುಗಳನ್ನು ಆವರಿಸುತ್ತವೆ. ಇನ್ನೊಂದು ವಿಭಜನ ವಿಧಾನಕ್ಕಾಗಿ ನೀವು, ಒಳನೋಟ (ಇಂಗ್ಲಿಷ್‌) ಪುಸ್ತಕದ ಸಂಪುಟ 2ರಲ್ಲಿ “ಜೀಸಸ್‌ ಕ್ರೈಸ್ಟ್‌” (ಯೇಸು ಕ್ರಿಸ್ತನು) ಎಂಬ ಶೀರ್ಷಿಕೆಯನ್ನು ನೋಡಬಹುದು.

11. (ಎ) ಯೇಸುವಿನ ಕುರಿತಾದ ತಮ್ಮ ನಂಬಿಕೆಯಲ್ಲಿ ಯೆಹೋವನ ಸಾಕ್ಷಿಗಳನ್ನು ಭಿನ್ನರನ್ನಾಗಿ ಮಾಡುವುದು ಯಾವುದು? (ಬಿ) ತ್ರಯೈಕ್ಯವನ್ನು ತಪ್ಪೆಂದು ಸ್ಪಷ್ಟವಾಗಿ ಸ್ಥಾಪಿಸುವ ಕೆಲವು ಬೈಬಲ್‌ ವಚನಗಳಾವುವು, ಮತ್ತು ಯಾವ ಪ್ರಕಾಶನವು ಈ ಸಂಬಂಧದಲ್ಲಿ ಸಹಾಯಕರವಾಗಿದೆ?

11 ಕ್ರೈಸ್ತಪ್ರಪಂಚದಲ್ಲಿ ಯೇಸುವಿನ ಸಂಬಂಧದಲ್ಲಿ ನಡೆಯುತ್ತಿರುವ ವಾಗ್ವಾದವು, ಅವನು “ದೇವರ ಮಗನು” ಆಗಿದ್ದಾನೊ “ಮಗನಾದ ದೇವರು” ಆಗಿದ್ದಾನೊ ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ಕ್ಯಾಥೊಲಿಕ್‌ ಚರ್ಚಿನ ಪ್ರಶ್ನೋತ್ತರ ಪಾಠ (ಇಂಗ್ಲಿಷ್‌)ವು ಯಾವುದನ್ನು “ಕ್ರೈಸ್ತ ನಂಬಿಕೆಯ ಕೇಂದ್ರೀಯ ರಹಸ್ಯ” ಎನ್ನುತ್ತದೋ ಆ ತ್ರಯೈಕ್ಯದ ಕುರಿತಾದ ವಿವಾದವಾಗಿದೆ. ಯೆಹೋವನ ಸಾಕ್ಷಿಗಳು, ಕ್ರೈಸ್ತಪ್ರಪಂಚದ ಧರ್ಮಗಳಿಂದ ಪ್ರತ್ಯೇಕರಾಗಿ ನಿಲ್ಲುತ್ತ, ಯೇಸುವಿನ ಮೂಲವು ದೈವಿಕವಾಗಿದ್ದರೂ ಅವನು ದೇವರಲ್ಲ ಎಂದು ನಂಬುತ್ತಾರೆ. ಈ ವಿಷಯದ ಅತ್ಯುತ್ಕೃಷ್ಟ ಚರ್ಚೆಯು, ನೀವು ತ್ರಯೈಕ್ಯವನ್ನು ನಂಬ ಬೇಕೋ? ಎಂಬ 95 ಭಾಷೆಗಳಲ್ಲಿ ಭಾಷಾಂತರವಾಗಿರುವ ಬ್ರೋಷರಿನಲ್ಲಿ ಕಂಡುಬರುತ್ತದೆ. * ತ್ರಯೈಕ್ಯ ತತ್ತ್ವವನ್ನು ತಪ್ಪೆಂದು ಸ್ಥಾಪಿಸಲು ಅದು ಉಪಯೋಗಿಸುವ ಅನೇಕ ವಚನಗಳಲ್ಲಿ ಮಾರ್ಕ 13:32 ಮತ್ತು 1 ಕೊರಿಂಥ 15:​24, 28 ಸೇರಿವೆ.

12. ಇನ್ನಾವ ಪ್ರಶ್ನೆಯು ನಮ್ಮ ಗಮನಕ್ಕೆ ಅರ್ಹವಾಗಿದೆ?

12 ದೇವರ ಮತ್ತು ಯೇಸು ಕ್ರಿಸ್ತನ ಕುರಿತಾದ ಈ ಚರ್ಚೆಗಳು, ಬೈಬಲ್‌ ಸತ್ಯದ ಪರಿಚಯವಿಲ್ಲದವರು ನಿಷ್ಕೃಷ್ಟ ಜ್ಞಾನವನ್ನು ಪಡೆಯುವಂತೆ ಸಹಾಯಮಾಡುವ ದೃಷ್ಟಿಯಿಂದ ನಾವು ಯಾವ ವಿಧಗಳಲ್ಲಿ ವೈಯಕ್ತಿಕ ಅಧ್ಯಯನವನ್ನು ಮಾಡಬಲ್ಲೆವೆಂಬುದನ್ನು ದೃಷ್ಟಾಂತಿಸುತ್ತವೆ. (ಯೋಹಾನ 17:3) ಆದರೆ ಕ್ರೈಸ್ತ ಸಭೆಯೊಂದಿಗೆ ಅನೇಕ ವರುಷಗಳಿಂದ ಜೊತೆಗೂಡುತ್ತಿರುವವರ ವಿಷಯದಲ್ಲೇನು? ಶೇಖರಿತ ಬೈಬಲ್‌ ಜ್ಞಾನದ ಹಿನ್ನೆಲೆ ಅವರಿಗಿರುವುದರಿಂದ, ಅವರು ಸಹ ಇನ್ನೂ ಯೆಹೋವನ ವಾಕ್ಯದ ವೈಯಕ್ತಿಕ ಅಧ್ಯಯನಕ್ಕೆ ಗಮನಕೊಡುವ ಆವಶ್ಯಕತೆ ಇದೆಯೆ?

“ಎಡೆಬಿಡದ ಗಮನ” ಏಕೆ?

13. ವೈಯಕ್ತಿಕ ಅಧ್ಯಯನದ ಕುರಿತು ಕೆಲವರಿಗೆ ಯಾವ ತಪ್ಪು ನೋಟವಿರಬಹುದು?

13 ಅನೇಕ ವರುಷಗಳಿಂದ ಸಭೆಯ ಸದಸ್ಯರಾಗಿರುವ ಕೆಲವರಿಗೆ, ತಾವು ಯೆಹೋವನ ಸಾಕ್ಷಿಗಳಾದಾಗ ಆರಂಭದ ಕೆಲವು ವರುಷಗಳಲ್ಲಿ ಪಡೆದುಕೊಂಡ ಬೈಬಲ್‌ ಜ್ಞಾನದ ಮೇಲೆ ಮಾತ್ರ ಹೊಂದಿಕೊಳ್ಳುವ ಅಭ್ಯಾಸ ಇರಬಹುದು. “ನನಗೆ ಹೊಸಬರಂತೆ ಗಂಭೀರವಾಗಿ ಅಧ್ಯಯನ ಮಾಡುವ ಅಗತ್ಯವಿಲ್ಲ. ಈ ಎಲ್ಲ ವರುಷಗಳಲ್ಲಿ ನಾನೆಷ್ಟೋ ಬಾರಿ ಬೈಬಲನ್ನೂ ಬೈಬಲ್‌ ಸಾಹಿತ್ಯಗಳನ್ನೂ ಓದಿದ್ದೇನೆ” ಎಂದು ತರ್ಕಿಸುವುದು ಸುಲಭ. ಆದರೆ ಇದು, “ನಾನು ಈಗ ನನ್ನ ಆಹಾರಪಥ್ಯಕ್ಕೆ ಹೆಚ್ಚು ಗಮನ ಕೊಡುವ ಅಗತ್ಯವೇ ಇಲ್ಲ. ಏಕೆಂದರೆ ನಾನು ಈ ಹಿಂದೆ ಎಷ್ಟೋ ಸಲ ಊಟಮಾಡಿದ್ದೇನೆ” ಎಂದು ಹೇಳಿದ ಹಾಗಾಗುತ್ತದೆ. ನಮ್ಮ ದೇಹವನ್ನು ಆರೋಗ್ಯಕರವಾಗಿಯೂ ಕ್ರಿಯಾಶೀಲವಾಗಿಯೂ ಇಟ್ಟುಕೊಳ್ಳಬೇಕಾದರೆ ಅದಕ್ಕೆ ಸರಿಯಾಗಿ ತಯಾರಿಸಲ್ಪಟ್ಟ, ಪುಷ್ಟಿಕರವಾದ ಆಹಾರದಿಂದ ಸತತವಾದ ಪೋಷಣೆಯ ಅಗತ್ಯವಿದೆಯೆಂಬುದು ನಮಗೆ ಗೊತ್ತಿದೆ. ಹೀಗಿರುವಾಗ, ನಮ್ಮ ಆತ್ಮಿಕ ಆರೋಗ್ಯ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳಬೇಕಾದರೆ ನಮಗೆ ಆತ್ಮಿಕ ಊಟ ಎಷ್ಟು ಹೆಚ್ಚು ಅಗತ್ಯ!​—ಇಬ್ರಿಯ 5:​12-14.

14. ಸ್ವತಃ ನಮಗೆ ಎಡೆಬಿಡದ ಗಮನವನ್ನು ಕೊಡುವ ಅಗತ್ಯ ಏಕಿದೆ?

14 ಆದುದರಿಂದ ನಾವು ದೀರ್ಘಕಾಲದಿಂದ ಬೈಬಲ್‌ ವಿದ್ಯಾರ್ಥಿಗಳಾಗಿರಲಿ ಇಲ್ಲದಿರಲಿ, ಪೌಲನು ಆಗಲೇ ಪ್ರೌಢನೂ ಜವಾಬ್ದಾರಿಯುತ ಮೇಲ್ವಿಚಾರಕನೂ ಆಗಿದ್ದ ತಿಮೊಥೆಯನಿಗೆ ಕೊಟ್ಟ ಸಲಹೆಗೆ ನಾವೆಲ್ಲರೂ ಕಿವಿಗೊಡುವುದು ಅಗತ್ಯ: “ನಿನಗೂ ನಿನ್ನ ಬೋಧನೆಗೂ ಎಡೆಬಿಡದ ಗಮನವನ್ನು ಕೊಡು. ಈ ವಿಷಯಗಳನ್ನು ಪಾಲಿಸುತ್ತಿರು. ಹಾಗೆ ಮಾಡುವಲ್ಲಿ, ನೀನು ನಿನ್ನನ್ನೂ ನಿನಗೆ ಕಿವಿಗೊಡುವವರನ್ನೂ ರಕ್ಷಿಸುವಿ.” (1 ತಿಮೊಥೆಯ 4:​15, 16, NW) ನಾವು ಪೌಲನ ಈ ಸಲಹೆಯನ್ನು ಏಕೆ ಹೃದಯಕ್ಕೆ ತೆಗೆದುಕೊಳ್ಳಬೇಕು? ನಮಗೂ “ಸೈತಾನನ ತಂತ್ರೋಪಾಯಗಳ” ಮತ್ತು “ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಯ” ವಿರುದ್ಧ ಹೋರಾಡಲಿಕ್ಕಿದೆಯೆಂದು ಪೌಲನು ತೋರಿಸಿಕೊಟ್ಟನೆಂಬುದನ್ನು ಜ್ಞಾಪಿಸಿಕೊಳ್ಳಿರಿ. ಮತ್ತು ಅಪೊಸ್ತಲ ಪೇತ್ರನು ಎಚ್ಚರಿಸಿದ್ದೇನೆಂದರೆ, ಪಿಶಾಚನು “ಯಾರನ್ನು ನುಂಗಲಿ ಎಂದು ಹುಡುಕುತ್ತಾ” ಇದ್ದಾನೆ ಮತ್ತು ಈ ‘ಯಾರು’ ನಮ್ಮಲ್ಲೊಬ್ಬರು ಆಗಿರಸಾಧ್ಯವಿದೆ. ಅಪಾಯದ ಯಾವುದೇ ಪ್ರಜ್ಞೆಯಿಲ್ಲದೆ ನಾವು ತೋರಿಸುವ ಆತ್ಮಸಂತೃಪ್ತಿಯ ಭಾವವು, ಅವನು ಆಕ್ರಮಣಮಾಡಲು ಕಾಯುತ್ತಿರುವ ಸುಸಂದರ್ಭವಾಗಿ ಪರಿಣಮಿಸಸಾಧ್ಯವಿದೆ.​—ಎಫೆಸ 6:11, 12; 1 ಪೇತ್ರ 5:8.

15. ಯಾವ ಆತ್ಮಿಕ ರಕ್ಷಣೋಪಾಯ ನಮಗಿದೆ, ಮತ್ತು ನಾವು ಅದನ್ನು ಹೇಗೆ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬಲ್ಲೆವು?

15 ಹಾಗಾದರೆ ಯಾವ ರಕ್ಷಣೋಪಾಯ ನಮಗಿದೆ? ಅಪೊಸ್ತಲ ಪೌಲನು ನಮಗೆ ಜ್ಞಾಪಕ ಹುಟ್ಟಿಸುವುದು: “ಕಠಿನ ಯುದ್ಧವು ನಡೆಯುವ ದಿವಸದಲ್ಲಿ ಆ ವೈರಿಗಳನ್ನು ಎದುರಿಸುವದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ಜಯಶಾಲಿಗಳಾಗಿ ನಿಲ್ಲುವದಕ್ಕೂ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು [“ರಕ್ಷಾಕವಚವನ್ನು,” NW] ತೆಗೆದುಕೊಳ್ಳಿರಿ.” (ಎಫೆಸ 6:13) ಆ ಆತ್ಮಿಕ ರಕ್ಷಾಕವಚದ ಕಾರ್ಯಸಾಧಕತೆಯು ಅದರ ಆರಂಭದ ಸ್ಥಿತಿಯ ಮೇಲಲ್ಲದೆ, ಅದನ್ನು ಯಾವಾಗಲೂ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದರ ಮೇಲೆಯೂ ಹೊಂದಿಕೊಂಡಿದೆ. ಆದುದರಿಂದ, ದೇವರಿಂದ ಬರುವ ಆ ಪೂರ್ಣವಾದ ರಕ್ಷಾಕವಚದಲ್ಲಿ ದೇವರ ವಾಕ್ಯದ ಸದ್ಯೋಚಿತ ಜ್ಞಾನವೂ ಸೇರಿರಬೇಕು. ಯೆಹೋವನು ತನ್ನ ವಾಕ್ಯ ಮತ್ತು ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದ ಮೂಲಕ ಪ್ರಕಟಪಡಿಸುವ ಸತ್ಯದ ತಿಳಿವಳಿಕೆಯ ವಿಷಯದಲ್ಲಿ ಸದ್ಯೋಚಿತರಾಗಿರುವ ಪ್ರಮುಖತೆಯನ್ನು ಇದು ತೋರಿಸುತ್ತದೆ. ನಮ್ಮ ಆತ್ಮಿಕ ರಕ್ಷಾಕವಚವನ್ನು ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳಲು ಬೈಬಲ್‌ ಮತ್ತು ಬೈಬಲ್‌ ಸಾಹಿತ್ಯಗಳ ಕ್ರಮಬದ್ಧವಾದ ವೈಯಕ್ತಿಕ ಅಧ್ಯಯನವು ಅಗತ್ಯವಾಗಿದೆ.​—ಮತ್ತಾಯ 24:45-47; ಎಫೆಸ 6:14, 15.

16. ನಮ್ಮ ‘ನಂಬಿಕೆಯೆಂಬ ಗುರಾಣಿಯು’ ಚೆನ್ನಾಗಿ ಕೆಲಸ ಮಾಡುತ್ತದೆಂಬದನ್ನು ಖಚಿತಪಡಿಸಿಕೊಳ್ಳಲು ನಾವೇನು ಮಾಡಬೇಕು?

16 ನಮ್ಮ ರಕ್ಷಣೋಪಾಯದ ಕವಚದಲ್ಲಿ ಒಂದು ಮುಖ್ಯ ಭಾಗವಾದ “ನಂಬಿಕೆಯೆಂಬ ಗುರಾಣಿ”ಯನ್ನು ಪೌಲನು ಎತ್ತಿತೋರಿಸುತ್ತಾನೆ. ಇದರಿಂದ ನಾವು ಸೈತಾನನ ಸುಳ್ಳು ಅಪವಾದಗಳ ಮತ್ತು ಧರ್ಮಭ್ರಷ್ಟ ಬೋಧನೆಗಳೆಂಬ ಅಗ್ನಿ ಬಾಣಗಳ ಪಥವನ್ನು ತಪ್ಪಿಸಿ, ಅವುಗಳನ್ನು ಆರಿಸಿಬಿಡಲು ಶಕ್ತರಾಗುತ್ತೇವೆ. (ಎಫೆಸ 6:16) ಆದುದರಿಂದ ನಮ್ಮ ನಂಬಿಕೆಯೆಂಬ ಗುರಾಣಿಯು ಎಷ್ಟು ಬಲವಾಗಿದೆ ಮತ್ತು ಅದನ್ನು ಸುಸ್ಥಿತಿಯಲ್ಲಿಟ್ಟು ಬಲಪಡಿಸಲು ನಾವು ಯಾವ ಕ್ರಮವನ್ನು ಕೈಕೊಳ್ಳಬೇಕೆಂಬುದನ್ನು ಪರಿಶೋಧಿಸುವುದು ಅಗತ್ಯ. ಉದಾಹರಣೆಗೆ ನೀವು ಹೀಗೆ ಕೇಳಿಕೊಳ್ಳಬಹುದು: ‘ಕಾವಲಿನಬುರುಜು ಪತ್ರಿಕೆಯನ್ನು ಉಪಯೋಗಿಸಿ ಮಾಡುವ ಸಾಪ್ತಾಹಿಕ ಬೈಬಲ್‌ ಅಧ್ಯಯನಕ್ಕೆ ನಾನು ಹೇಗೆ ತಯಾರಿಸುತ್ತೇನೆ? ಕೂಟದಲ್ಲಿ, ಚೆನ್ನಾಗಿ ಯೋಚಿಸಿರುವ ಉತ್ತರಗಳನ್ನು ಕೊಡುವ ಮೂಲಕ ‘ಪ್ರೀತಿ ಮತ್ತು ಸತ್ಕಾರ್ಯಗಳಿಗಾಗಿ’ ಪ್ರೇರಿಸಲು ಸಾಧ್ಯವಾಗುವಷ್ಟು ಅಧ್ಯಯನವನ್ನು ನಾನು ಮಾಡಿದ್ದೇನೊ? ಲೇಖನದಲ್ಲಿ ಸೂಚಿಸಿರುವುದಾದರೂ ಉದ್ಧರಿಸಲ್ಪಟ್ಟಿರದ ಶಾಸ್ತ್ರವಚನಗಳನ್ನು ನಾನು ಬೈಬಲಿನಲ್ಲಿ ತೆರೆದು ಓದಿನೋಡುತ್ತೇನೊ? ಕೂಟಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ಮೂಲಕ ನಾನು ಇತರರಿಗೆ ಪ್ರೋತ್ಸಾಹನೆ ನೀಡುತ್ತೇನೊ?’ ನಮ್ಮ ಆತ್ಮಿಕ ಆಹಾರವು ಘನವಾದದ್ದಾಗಿದೆ ಮತ್ತು ಅದರಿಂದ ಪೂರ್ಣ ಪ್ರಯೋಜನವನ್ನು ಪಡೆಯಲಿಕ್ಕೋಸ್ಕರ ನಾವು ಅದನ್ನು ಪೂರ್ತಿಯಾಗಿ ಜೀರ್ಣಿಸಿಕೊಳ್ಳಬೇಕು.​—ಇಬ್ರಿಯ 5:14; 10:24.

17. (ಎ) ನಮ್ಮ ಆತ್ಮಿಕತೆಯನ್ನು ಕೆಡವಲು ಪ್ರಯತ್ನಿಸುತ್ತಾ ಸೈತಾನನು ಯಾವ ವಿಷವನ್ನು ಉಪಯೋಗಿಸುತ್ತಿದ್ದಾನೆ? (ಬಿ) ಸೈತಾನನ ವಿಷಕ್ಕೆ ಎದುರಾಗಿರುವ ವಿಷಹಾರಿಯು ಯಾವುದು?

17 ಸೈತಾನನಿಗೆ ಅಪರಿಪೂರ್ಣ ಮಾನವರ ಬಲಹೀನತೆಗಳ ಒಳ್ಳೆಯ ಪರಿಚಯವಿದೆ ಮತ್ತು ಅವನ ತಂತ್ರೋಪಾಯಗಳು ಕುಟಿಲವಾಗಿವೆ. ಅವನು ತನ್ನ ದುಷ್ಪ್ರಭಾವವನ್ನು ಹಬ್ಬಿಸುವ ಒಂದು ಮಾರ್ಗವು, ಅಶ್ಲೀಲ ಸಾಹಿತ್ಯವನ್ನು ಟಿವಿ, ಇಂಟರ್‌ನೆಟ್‌, ವಿಡಿಯೋ ಮತ್ತು ಪುಸ್ತಕಗಳಲ್ಲಿ ತುಂಬ ಸುಲಭವಾಗಿ ದೊರೆಯುವಂತೆ ಮಾಡುವುದೇ. ಈ ವಿಷವು ತಮ್ಮ ಬಲಹೀನಗೊಳಿಸಲ್ಪಟ್ಟ ರಕ್ಷಣಾಸಾಧನಗಳನ್ನು ತೂರಿಹೋಗುವಂತೆ ಬಿಟ್ಟಿರುವ ಕಾರಣ, ಕೆಲವು ಮಂದಿ ಕ್ರೈಸ್ತರು ತಮ್ಮ ವಿಶೇಷ ಸೇವಾಸ್ಥಾನಗಳನ್ನು ಕಳೆದುಕೊಳ್ಳುವ ಸ್ಥಿತಿಗೆ ಇಲ್ಲವೆ ಅದಕ್ಕಿಂತಲೂ ಗಂಭೀರವಾದ ಪರಿಣಾಮಗಳಿಗೆ ತುತ್ತಾಗಿದ್ದಾರೆ. (ಎಫೆಸ 4:​17-19) ಹಾಗಾದರೆ ಸೈತಾನನ ಈ ಆತ್ಮಿಕ ವಿಷಕ್ಕೆ ಎದುರಾಗಿರುವ ವಿಷಹಾರಿಯು ಯಾವುದು? ನಾವು ನಮ್ಮ ಕ್ರಮವಾದ ವೈಯಕ್ತಿಕ ಬೈಬಲ್‌ ಅಧ್ಯಯನ, ನಮ್ಮ ಕ್ರೈಸ್ತ ಕೂಟಗಳು ಮತ್ತು ದೇವರಿಂದ ಬರುವ ಸಂಪೂರ್ಣ ರಕ್ಷಾಕವಚವನ್ನು ಅಸಡ್ಡೆ ಮಾಡಬಾರದು. ಇವೆಲ್ಲವು ಒಟ್ಟಿಗೆ, ಸರಿ ಯಾವುದು ತಪ್ಪು ಯಾವುದು ಎಂಬುದರ ಮಧ್ಯೆ ಇರುವ ಭೇದವನ್ನು ನಾವು ಅರಿಯುವಂಥ ಮತ್ತು ದೇವರು ದ್ವೇಷಿಸುವಂಥದ್ದನ್ನು ನಾವೂ ದ್ವೇಷಿಸುವಂಥ ಸಾಮರ್ಥ್ಯವನ್ನು ಕೊಡುತ್ತವೆ.​—ಕೀರ್ತನೆ 97:10; ರೋಮಾಪುರ 12:9.

18. ನಮ್ಮ ಆತ್ಮಿಕ ಹೋರಾಟದಲ್ಲಿ ‘ಪವಿತ್ರಾತ್ಮದ ಕತ್ತಿ’ ನಮಗೆ ಹೇಗೆ ಸಹಾಯಮಾಡಬಲ್ಲದು?

18 ನಾವು ಕ್ರಮದ ಬೈಬಲ್‌ ಅಧ್ಯಯನದ ರೂಢಿಗಳನ್ನು ಕಾಪಾಡಿಕೊಳ್ಳುವಲ್ಲಿ, ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನದ ಮುಖೇನ ಬರುವ ಸ್ಥಿರವಾದ ರಕ್ಷಣೋಪಾಯ ನಮಗಿರುವುದು ಮಾತ್ರವಲ್ಲ, ‘ಪವಿತ್ರಾತ್ಮದ ಕತ್ತಿ, ಅಂದರೆ ದೇವರ ವಾಕ್ಯ’ ಎಂಬ ಹೋರಾಟದ ಕಾರ್ಯಸಾಧಕ ಆಯುಧವೂ ನಮಗಿರುವುದು. ದೇವರ ವಾಕ್ಯವು, “ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” (ಎಫೆಸ 6:17; ಇಬ್ರಿಯ 4:12) ನಾವು ಆ “ಕತ್ತಿ”ಯನ್ನು ಬಳಸುವುದರಲ್ಲಿ ನಿಸ್ಸೀಮರಾಗುವಲ್ಲಿ, ಶೋಧನೆಗಳು ಬರುವಾಗ, ಅವು ಹಾನಿಕರವಲ್ಲದ್ದಾಗಿ ಅಥವಾ ಆಕರ್ಷಕವಾಗಿ ಕಂಡುಬರುವುದಾದರೂ, ಅವುಗಳನ್ನು ಆ ಕತ್ತಿಯಿಂದ ಸೀಳಿ, ಅವು ಕೆಡುಕನ ಮಾರಕವಾದ ಪಾಶವಾಗಿವೆ ಎಂಬುದನ್ನು ರಟ್ಟುಗೊಳಿಸುವೆವು. ನಮ್ಮಲ್ಲಿರುವ ಬೈಬಲಿನ ಜ್ಞಾನ ಮತ್ತು ತಿಳಿವಳಿಕೆಯ ಭಂಡಾರವು, ಕೆಟ್ಟದ್ದನ್ನು ತಳ್ಳಿಬಿಡುವಂತೆಯೂ ಉತ್ತಮವಾಗಿರುವುದನ್ನು ಮಾಡುವಂತೆಯೂ ಸಹಾಯಮಾಡುವುದು. ಆದಕಾರಣ, ನಾವೆಲ್ಲರೂ ಹೀಗೆ ಕೇಳಿಕೊಳ್ಳತಕ್ಕದ್ದು: ‘ನನ್ನ ಕತ್ತಿ ಹರಿತವಾಗಿದೆಯೆ ಇಲ್ಲವೆ ಮೊಂಡಾಗಿದೆಯೆ? ಆಕ್ರಮಣಕ್ಕೆ ಬಲನೀಡುವ ಬೈಬಲ್‌ ವಚನಗಳನ್ನು ಜ್ಞಾಪಿಸಿಕೊಳ್ಳುವುದು ನನಗೆ ಕಷ್ಟಕರವಾಗುತ್ತದೆಯೆ?’ ಆದುದರಿಂದ, ನಾವು ವೈಯಕ್ತಿಕ ಬೈಬಲ್‌ ಅಧ್ಯಯನದ ಒಳ್ಳೆಯ ರೂಢಿಗಳನ್ನು ಕಾಪಾಡಿಕೊಂಡು ಹೀಗೆ ಪಿಶಾಚನನ್ನು ಎದುರಿಸೋಣ.​—ಎಫೆಸ 4:​22-24.

19. ವೈಯಕ್ತಿಕ ಅಧ್ಯಯನದಲ್ಲಿ ನಿರತರಾಗಿರುವಲ್ಲಿ ನಾವು ಯಾವ ಪ್ರಯೋಜನಗಳನ್ನು ಪಡೆಯುವೆವು?

19 ಪೌಲನು ಬರೆದುದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.” ಪೌಲನು ತಿಮೊಥೆಯನಿಗೆ ಬರೆದ ಈ ಮಾತುಗಳನ್ನು ನಾವು ಹೃದಯಕ್ಕೆ ತೆಗೆದುಕೊಳ್ಳುವಲ್ಲಿ, ನಾವು ನಮ್ಮ ಸ್ವಂತ ಆತ್ಮಿಕತೆಯನ್ನು ಬಲಪಡಿಸಿ ನಮ್ಮ ಶುಶ್ರೂಷೆಯನ್ನು ಹೆಚ್ಚು ಕಾರ್ಯಸಾಧಕವಾಗಿ ಮಾಡಬಲ್ಲೆವು. ಆತ್ಮಿಕ ಹಿರಿಯರು ಮತ್ತು ಶುಶ್ರೂಷಾ ಸೇವಕರು ಸಭೆಗೆ ಹೆಚ್ಚು ಪ್ರಯೋಜನ ತರುವವರಾಗಿ ಪರಿಣಮಿಸಬಲ್ಲರು ಮತ್ತು ನಾವೆಲ್ಲರೂ ಸತ್ಯದಲ್ಲಿ ಸ್ಥಿರರಾಗಿ ನಿಲ್ಲಬಲ್ಲೆವು.​—2 ತಿಮೊಥೆಯ 3:16, 17; ಮತ್ತಾಯ 7:24-27.

[ಪಾದಟಿಪ್ಪಣಿಗಳು]

^ ಪ್ಯಾರ. 4 ಸಾಧಾರಣವಾಗಿ, ಅಪೇಕ್ಷಿಸು ಬ್ರೋಷರನ್ನು ಅಧ್ಯಯನ ಮಾಡುತ್ತಿರುವ ಹೊಸ ಆಸಕ್ತನು, ಅದನ್ನು ಮುಗಿಸಿದ ಬಳಿಕ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕವನ್ನು ಅಧ್ಯಯನ ಮಾಡುವನು. ಈ ಎರಡೂ ಪ್ರಕಾಶನಗಳು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿವೆ. ಇಲ್ಲಿ ಕೊಡಲ್ಪಟ್ಟಿರುವ ಸೂಚನೆಗಳು ಆತ್ಮಿಕ ಪ್ರಗತಿಯನ್ನು ಮಾಡಲಿಕ್ಕಾಗಿರುವ ತಡೆಗಳನ್ನು ತೆಗೆದುಹಾಕಲು ಸಹಾಯಮಾಡುವವು.

^ ಪ್ಯಾರ. 9 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ತಮ್ಮ ಭಾಷೆಯಲ್ಲಿ ಶಾಸ್ತ್ರಗಳ ಒಳನೋಟ (ಕನ್ನಡದಲ್ಲಿ ಲಭ್ಯವಿಲ್ಲ.) ಪ್ರಕಾಶನವನ್ನು ಹೊಂದಿರುವವರು, ಸಂಪುಟ 2ರಲ್ಲಿ “ಜೆಹೋವ” ಎಂಬ ಶೀರ್ಷಿಕೆಯ ಕೆಳಗೆ ಇದರ ಕುರಿತು ನೋಡಬಹುದು.

^ ಪ್ಯಾರ. 9 ಇದಕ್ಕೆ, ಕೆಲವು ಸ್ಪ್ಯಾನಿಷ್‌ ಮತ್ತು ಕ್ಯಾಟಲೋನಿಯನ್‌ ಭಾಷಾಂತರಕಾರರು ಹೀಬ್ರು ಟೆಟ್ರಗ್ರ್ಯಾಮಟನನ್ನು, “ಯಾವೇ,” “ಯಾಹ್ವೇ,” “ಜಾವೇ,” ಮತ್ತು “ಖೆಓವಾ” ಎಂದು ಭಾಷಾಂತರಿಸಿರುವುದು ಎದ್ದುಕಾಣುವಂಥ ಅಪವಾದಗಳಾಗಿವೆ.

^ ಪ್ಯಾರ. 10 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

^ ಪ್ಯಾರ. 11 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

ನಿಮಗೆ ಜ್ಞಾಪಕವಿದೆಯೆ?

• ಯಾವ ಪರಿಸ್ಥಿತಿಗಳು ಕಾರ್ಯಸಾಧಕವಾದ ವೈಯಕ್ತಿಕ ಅಧ್ಯಯನಕ್ಕೆ ಅನುಕೂಲವಾಗಿವೆ?

• ದೇವರ ನಾಮದ ಸಂಬಂಧದಲ್ಲಿ ಅನೇಕ ಬೈಬಲ್‌ ಭಾಷಾಂತರಗಳು ಯಾವ ತಪ್ಪನ್ನು ಮಾಡುತ್ತವೆ?

• ತ್ರಯೈಕ್ಯ ಬೋಧನೆಯನ್ನು ತಪ್ಪೆಂದು ಸ್ಥಾಪಿಸಲು ನೀವು ಯಾವ ಬೈಬಲ್‌ ವಚನಗಳನ್ನು ಉಪಯೋಗಿಸುವಿರಿ?

• ನಾವು ಅನೇಕ ವರ್ಷಕಾಲ ಸತ್ಯ ಕ್ರೈಸ್ತರಾಗಿದ್ದರೂ, ಸೈತಾನನ ತಂತ್ರೋಪಾಯಗಳಿಂದ ನಮ್ಮನ್ನು ಸಂರಕ್ಷಿಸಲು ನಾವೇನು ಮಾಡಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 19ರಲ್ಲಿರುವ ಚಿತ್ರಗಳು]

ಪರಿಣಾಮಕಾರಿಯಾದ ವೈಯಕ್ತಿಕ ಅಧ್ಯಯನಕ್ಕೆ ಸರಿಯಾದ ಹಿನ್ನೆಲೆ ಮತ್ತು ಕನಿಷ್ಠ ಅಪಕರ್ಷಣೆಗಳು ಇರಬೇಕು

[ಪುಟ 23ರಲ್ಲಿರುವ ಚಿತ್ರಗಳು]

ನಿಮ್ಮ “ಕತ್ತಿ” ಹರಿತವಾಗಿದೆಯೆ ಇಲ್ಲವೆ ಮೊಂಡಾಗಿದೆಯೆ?