ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಕೈಗಳನ್ನು ಬಲಪಡಿಸಿರಿ

ನಿಮ್ಮ ಕೈಗಳನ್ನು ಬಲಪಡಿಸಿರಿ

ನಿಮ್ಮ ಕೈಗಳನ್ನು ಬಲಪಡಿಸಿರಿ

ಬೈಬಲಿನಲ್ಲಿ ಕೈ ಎಂಬ ಶಬ್ದವನ್ನು ನೂರಾರು ಬಾರಿ ಸೂಚಿಸಿ ಮಾತಾಡಲಾಗಿದೆ. ಕೈಗಳನ್ನು ಒಳಗೊಂಡ ನುಡಿಗಟ್ಟುಗಳು ವಿಭಿನ್ನವಾದ ರೀತಿಗಳಲ್ಲಿ ಉಪಯೋಗಿಸಲ್ಪಟ್ಟಿವೆ. ಉದಾಹರಣೆಗೆ, ಶುದ್ಧಹಸ್ತವು ಯಥಾರ್ಥತೆಯನ್ನು ಸೂಚಿಸುತ್ತದೆ. (2 ಸಮುವೇಲ 22:21; ಕೀರ್ತನೆ 24:3, 4) ಕೈನೀಡುವುದೆಂದರೆ, ಇತರರಿಗೆ ಉದಾರಭಾವವನ್ನು ತೋರಿಸುವುದನ್ನು ಅರ್ಥೈಸುತ್ತದೆ. (ಧರ್ಮೋಪದೇಶಕಾಂಡ 15:11; ಕೀರ್ತನೆ 145:16) ಪ್ರಾಣವನ್ನು ಅಪಾಯಕ್ಕೊಡ್ಡುವವನು ತನ್ನ ಜೀವವನ್ನು ತನ್ನ ಕೈಯಲ್ಲಿ ಹಿಡಿದಿದ್ದಾನೆಂದು ಹೇಳಲಾಗಿದೆ. (1 ಸಮುವೇಲ 19:5) ಕೈಗಳನ್ನು ಜೋಲುಬಿಡುವುದೆಂದರೆ, ನಿರುತ್ಸಾಹಗೊಳ್ಳುವುದನ್ನು ಅರ್ಥೈಸುತ್ತದೆ. (2 ಪೂರ್ವಕಾಲವೃತ್ತಾಂತ 15:7) ಕೈಗಳನ್ನು ಬಲಪಡಿಸುವುದೆಂದರೆ, ದೃಢಮನಸ್ಸುಳ್ಳವರಾಗಿ ಕ್ರಿಯೆಗೈಯುವಂತೆ ಬಲಹೊಂದುವುದಾಗಿದೆ.​—1 ಸಮುವೇಲ 23:​16, NW.

ಇಂದು ನಮ್ಮ ಕೈಗಳನ್ನು ತ್ವರಿತಗತಿಯಿಂದ ಬಲಪಡಿಸುವ ಅಗತ್ಯವಿದೆ. ನಾವು ನಿಭಾಯಿಸಲು ಕಷ್ಟಕರವಾಗಿರುವ “ಕಠಿನಕಾಲ”ಗಳಲ್ಲಿ ಜೀವಿಸುತ್ತಾ ಇದ್ದೇವೆ. (2 ತಿಮೊಥೆಯ 3:1) ನಾವು ನಿರುತ್ಸಾಹಗೊಳ್ಳುವಾಗ, ಪ್ರಯತ್ನವನ್ನು ಬಿಟ್ಟುಬಿಡುವುದು ಇಲ್ಲವೆ ಕೈಗಳನ್ನು ಜೋಲುಬಿಡುವುದು ಮಾನವ ಪ್ರವೃತ್ತಿಯಾಗಿದೆ. ಹದಿಹರೆಯದವರು ಶಾಲೆಯನ್ನು ಬಿಡುವುದು, ಗಂಡಂದಿರು ತಮ್ಮ ಕುಟುಂಬಗಳನ್ನು ತ್ಯಜಿಸುವುದು, ಮತ್ತು ತಾಯಂದಿರು ತಮ್ಮ ಮಕ್ಕಳನ್ನು ತೊರೆಯುವುದು, ನಮಗೆ ನೋಡಸಿಗುವ ಸಾಮಾನ್ಯ ನೋಟವಾಗಿದೆ. ಕ್ರೈಸ್ತರೋಪಾದಿ ನಾವು ದೇವರಿಗೆ ಸಲ್ಲಿಸುವ ಸೇವೆಯಲ್ಲಿ ಎದುರಿಸುವ ಪರೀಕ್ಷೆಗಳನ್ನು ತಾಳಿಕೊಳ್ಳಲು ನಮ್ಮ ಕೈಗಳನ್ನು ಬಲಪಡಿಸಿಕೊಳ್ಳುವ ಅಗತ್ಯವಿದೆ. (ಮತ್ತಾಯ 24:13) ಹೀಗೆ ಮಾಡುವುದರಿಂದ ನಾವು ಯೆಹೋವನ ಮನಸ್ಸನ್ನು ಸಂತೋಷಪಡಿಸುತ್ತೇವೆ.​—ಜ್ಞಾನೋಕ್ತಿ 27:11.

ಕೈಗಳು ಬಲಪಡಿಸಲ್ಪಡುವ ವಿಧ

ಯೆರೂಸಲೇಮಿನಲ್ಲಿ ಯೆಹೋವನ ಆಲಯದ ಪುನರ್ನಿರ್ಮಾಣ ಕೆಲಸವನ್ನು ಪೂರೈಸುವುದಕ್ಕಾಗಿ ಎಜ್ರನ ದಿನದಲ್ಲಿದ್ದ ಯೆಹೂದ್ಯರು ತಮ್ಮ ಕೈಗಳನ್ನು ಬಲಪಡಿಸಿಕೊಳ್ಳಬೇಕಾಗಿತ್ತು. ಅವರ ಕೈಗಳು ಹೇಗೆ ಬಲಪಡಿಸಲ್ಪಟ್ಟವು? ದಾಖಲೆಯು ಹೇಳುವುದು: “ಇಸ್ರಾಯೇಲ್‌ದೇವರ ಆಲಯವನ್ನು ಕಟ್ಟುವದರಲ್ಲಿ ಅಶ್ಶೂರದ ಅರಸನು ತಮಗೆ ಸಹಾಯಮಾಡುವಂತೆ [“ತಮ್ಮ ಕೈಗಳನ್ನು ಬಲಪಡಿಸುವಂತೆ,” NW] ಯೆಹೋವನು ಅವನ ಮನಸ್ಸನ್ನು ತಿರುಗಿಸಿ ತಮಗೆ ಸಂತೋಷವನ್ನು ಉಂಟುಮಾಡಿದ್ದಾನೆ ಎಂದು ಹರ್ಷಿಸುತ್ತಾ ಏಳು ದಿವಸಗಳ ವರೆಗೂ ಹುಳಿಯಿಲ್ಲದ ರೊಟ್ಟಿಗಳ ಜಾತ್ರೆಯನ್ನು ಆಚರಿಸಿದರು.” (ಎಜ್ರ 6:22) ತನ್ನ ಕಾರ್ಯಕಾರಿ ಶಕ್ತಿಯ ಮೂಲಕವೇ ಯೆಹೋವನು “ಅಶ್ಶೂರದ ಅರಸನು” ದೇವಜನರು ತಮ್ಮ ಸ್ವದೇಶಕ್ಕೆ ಹಿಂದಿರುಗುವಂತೆ ಅನುಮತಿಸಲು ಪ್ರೇರೇಪಿಸಿದನು, ಮತ್ತು ತಾವು ಆರಂಭಿಸಿದ ಕೆಲಸವನ್ನು ಪೂರ್ಣಗೊಳಿಸುವಂತೆ ಜನರ ಹೃದಮನಗಳನ್ನು ಉತ್ತೇಜಿಸಿದನು.

ನಂತರ ಯೆರೂಸಲೇಮಿನ ಗೋಡೆಗಳ ಜೀರ್ಣೋದ್ಧಾರ ಮಾಡಬೇಕಾಗಿದ್ದಾಗ, ಈ ಕೆಲಸಕ್ಕಾಗಿ ನೆಹೆಮೀಯನು ತನ್ನ ಸಹೋದರರ ಕೈಗಳನ್ನು ಬಲಪಡಿಸಿದನು. ನಾವು ಓದುವುದು: “ನನ್ನ ದೇವರ ಕೃಪಾಹಸ್ತವು ನನ್ನನ್ನು ಪಾಲಿಸಿದ್ದನ್ನೂ ಅರಸನು ನನಗೆ ಹೇಳಿದ್ದನ್ನೂ ಅವರಿಗೆ ವಿವರಿಸಿದೆನು. ಆಗ ಅವರು​—ಬನ್ನಿರಿ, ಕಟ್ಟೋಣ ಎಂದು ಹೇಳಿ ಆ ಒಳ್ಳೇ ಕೆಲಸಕ್ಕೆ ಕೈಹಾಕಲು ಧೈರ್ಯಗೊಂಡರು.” ಬಲಪಡಿಸಲ್ಪಟ್ಟ ಕೈಗಳೊಂದಿಗೆ, ನೆಹೆಮೀಯನು ಮತ್ತು ಅವನ ಜೊತೆ ಯೆಹೂದ್ಯರು ಯೆರೂಸಲೇಮಿನ ಗೋಡೆಗಳನ್ನು ಕೇವಲ 52 ದಿನಗಳಲ್ಲಿ ಪೂರ್ಣಗೊಳಿಸಲು ಶಕ್ತರಾದರು!​—ನೆಹೆಮೀಯ 2:18; ನೆಹೆಮೀಯ 6:9, 15.

ತದ್ರೀತಿಯಲ್ಲಿ, ರಾಜ್ಯದ ಸುವಾರ್ತೆಯನ್ನು ಸಾರುವಂತೆ ಯೆಹೋವನು ನಮ್ಮ ಕೈಗಳನ್ನು ಬಲಪಡಿಸುತ್ತಾನೆ. (ಮತ್ತಾಯ 24:14) ಆತನು ಇದನ್ನು, ‘ಸಕಲಸತ್ಕಾರ್ಯಗಳನ್ನು [ಮಾಡಲು] ಬೇಕಾದ ಅನುಕೂಲತೆಯನ್ನು ಅನುಗ್ರಹಿಸುವ’ ಮೂಲಕ ಮಾಡುತ್ತಾನೆ. (ಇಬ್ರಿಯ 13:21) ಅತಿ ಉತ್ತಮವಾದ ಸಾಧನಗಳನ್ನು ಆತನು ನಮ್ಮ ಕೈಗೊಪ್ಪಿಸಿದ್ದಾನೆ. ನಾವು ಲೋಕದಾದ್ಯಂತವಿರುವ ಜನರನ್ನು ತಲಪುವಂತಾಗಲು ನಮ್ಮಲ್ಲಿ ಬೈಬಲು ಮತ್ತು ಬೈಬಲಾಧಾರಿತ ಪುಸ್ತಕಗಳು, ಪತ್ರಿಕೆಗಳು, ಬ್ರೋಷರ್‌ಗಳು, ಟ್ರ್ಯಾಕ್ಟ್‌ಗಳು, ಮತ್ತು ಆಡಿಯೋ ಹಾಗೂ ವಿಡಿಯೋ ರೆಕಾರ್ಡಿಂಗ್‌ಗಳು ಇವೆ. ವಾಸ್ತವದಲ್ಲಿ, ನಮ್ಮ ಪ್ರಕಾಶನಗಳು 380ಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಲಭ್ಯವಿವೆ. ಮಾತ್ರವಲ್ಲದೆ, ಸಭಾ ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳ ಮೂಲಕ, ಈ ಉತ್ತಮ ಉಪಕರಣವಾದ ನಮ್ಮ ಪ್ರಕಾಶನಗಳನ್ನು ನಮ್ಮ ಶುಶ್ರೂಷೆಯನ್ನು ಪೂರೈಸುವುದರಲ್ಲಿ ನಾವು ಹೇಗೆ ಉಪಯೋಗಿಸುವುದು ಎಂಬ ವಿಷಯದಲ್ಲಿ ಯೆಹೋವನು ನಮಗೆ ದೇವಪ್ರಭುತ್ವಾತ್ಮಕ ಶಿಕ್ಷಣ ಮತ್ತು ತರಬೇತಿಯನ್ನು ನೀಡುತ್ತಾನೆ.

ಯೆಹೋವನು ಎಷ್ಟೋ ವಿಧಗಳಲ್ಲಿ ನಮ್ಮ ಕೈಗಳನ್ನು ಬಲಪಡಿಸುವುದಾದರೂ, ನಾವು ನಮ್ಮ ಪಾಲಿನ ಪ್ರಯತ್ನವನ್ನು ಮಾಡಬೇಕೆಂದು ಆತನು ಬಯಸುತ್ತಾನೆ. ಅರಾಮ್ಯ ಆಕ್ರಮಣಕಾರರ ವಿರುದ್ಧ ಹೋರಾಡಲಿಕ್ಕಾಗಿ ಪ್ರವಾದಿಯಾದ ಎಲೀಷನ ಬಳಿ ಸಹಾಯವನ್ನು ಕೋರಲು ಬಂದಿದ್ದ ರಾಜ ಯೋವಾಷನಿಗೆ ಎಲೀಷನು ಏನು ಹೇಳಿದನು ಎಂಬುದನ್ನು ಜ್ಞಾಪಿಸಿಕೊಳ್ಳಿ. ಕೆಲವು ಬಾಣಗಳನ್ನು ತೆಗೆದುಕೊಂಡು ಅದರಿಂದ ನೆಲವನ್ನು ಹೊಡೆಯುವಂತೆ ಎಲೀಷನು ರಾಜನಿಗೆ ಹೇಳಿದನು. ಬೈಬಲ್‌ ವೃತ್ತಾಂತವು ಹೇಳುವುದು: “ಅವನು ಮೂರು ಸಾರಿ ಹೊಡೆದು ಸುಮ್ಮನೆ ನಿಂತನು. ಆಗ ದೇವರ ಮನುಷ್ಯನು ಅವನ ಮೇಲೆ ಕೋಪಗೊಂಡು​—ನೀನು ಐದಾರು ಸಾರಿ ಹೊಡೆಯಬೇಕಾಗಿತ್ತು. ಹಾಗೆ ಮಾಡಿದ್ದರೆ ಅರಾಮ್ಯರು ನಿರ್ನಾಮವಾಗಿ ಹೋಗುವ ವರೆಗೂ ಅವರ ಮೇಲೆ ನಿನಗೆ ಜಯದೊರಕುತ್ತಿತ್ತು. ನೀನು ಮೂರೇ ಸಾರಿ ಹೊಡೆದದರಿಂದ ಅವರನ್ನು ಮೂರು ಸಾರಿ ಮಾತ್ರ ಸೋಲಿಸುವಿ ಎಂದು ಹೇಳಿದನು.” (2 ಅರಸುಗಳು 13:18, 19) ಹುರುಪಿನಿಂದ ವರ್ತಿಸಲು ತಪ್ಪಿಹೋದದ್ದರಿಂದ, ಯೋವಾಷನು ಅರಾಮ್ಯರನ್ನು ಪ್ರತಿಭಟಿಸುವುದರಲ್ಲಿ ಸೀಮಿತ ಯಶಸ್ಸನ್ನು ಮಾತ್ರ ಗಳಿಸಿದನು.

ಯೆಹೋವನು ನಮಗೆ ಏನನ್ನು ಒಪ್ಪಿಸಿದ್ದಾನೋ ಅದನ್ನು ಸಾಧಿಸುವುದರಲ್ಲಿಯೂ ಇದೇ ಮೂಲತತ್ತ್ವವು ನಮಗೂ ಅನ್ವಯಿಸುತ್ತದೆ. ನಮ್ಮ ಮಾರ್ಗದಲ್ಲಿರುವ ಅಡಚಣೆಗಳ ಕುರಿತೋ ಅಥವಾ ನೇಮಕವು ಎಷ್ಟು ಕಷ್ಟಕರವಾಗಿರಬಹುದು ಎಂಬುದರ ಕುರಿತೋ ಚಿಂತಿಸುವ ಬದಲು, ನಾವು ಅವುಗಳನ್ನು ಹುರುಪಿನಿಂದ ಮತ್ತು ಪೂರ್ಣ ಮನಸ್ಸಿನಿಂದ ಮಾಡಬೇಕು. ನಾವು ನಮ್ಮ ಕೈಗಳನ್ನು ಬಲಪಡಿಸಿಕೊಳ್ಳಬೇಕು ಮತ್ತು ಸಹಾಯಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳಬೇಕು.​—ಯೆಶಾಯ 35:3, 4.

ಯೆಹೋವನು ನಮ್ಮ ಕೈಗಳನ್ನು ಬಲಪಡಿಸುವನು

ಯೆಹೋವನು ಖಂಡಿತ ನಾವು ಆತನ ಚಿತ್ತವನ್ನು ಮಾಡುವುದರಲ್ಲಿ ನಮಗೆ ಸಹಾಯಮಾಡುವನು ಮತ್ತು ನಮ್ಮ ಕೈಗಳನ್ನು ಬಲಪಡಿಸುವನು. ಆದರೂ ದೇವರು ಒಂದು ಅದ್ಭುತವನ್ನು ಮಾಡಿ ನಮಗೋಸ್ಕರ ಸಕಲವನ್ನೂ ಮಾಡನು ಎಂಬುದು ನಿಜ. ನಾವು ನಮ್ಮ ಪಾಲನ್ನು ಮಾಡುವಂತೆ ಆತನು ಅಪೇಕ್ಷಿಸುತ್ತಾನೆ​—ಬೈಬಲನ್ನು ದಿನಾಲೂ ಓದುವುದು, ಕೂಟಗಳಿಗಾಗಿ ತಯಾರಿಸುವುದು ಮತ್ತು ಕ್ರಮವಾಗಿ ಹಾಜರಾಗುವುದು, ಶುಶ್ರೂಷೆಯಲ್ಲಿ ಸಾಧ್ಯವಾದಷ್ಟು ಭಾಗವಹಿಸುವುದು, ಮತ್ತು ಆತನಿಗೆ ನಿತ್ಯವೂ ಪ್ರಾರ್ಥಿಸುವುದು. ನಮಗೆ ಸಂದರ್ಭವಿರುವಾಗ ನಾವು ನಮ್ಮ ಪಾಲನ್ನು ನಂಬಿಗಸ್ತಿಕೆಯಿಂದ ಮತ್ತು ಶ್ರದ್ಧೆಯಿಂದ ಮಾಡುವುದಾದರೆ, ನಮ್ಮಿಂದ ಯೆಹೋವನು ಏನನ್ನು ಅಪೇಕ್ಷಿಸುತ್ತಾನೋ ಅದನ್ನು ಮಾಡಲು ಆತನು ನಮ್ಮನ್ನು ಬಲಪಡಿಸುವನು.​—ಫಿಲಿಪ್ಪಿ 4:13.

ಒಂದೇ ವರ್ಷದಲ್ಲಿ ತನ್ನ ಪತ್ನಿ ಮತ್ತು ತಾಯಿಯನ್ನು ಮರಣದಲ್ಲಿ ಕಳೆದುಕೊಂಡ ಒಬ್ಬ ಕ್ರೈಸ್ತನ ಪರಿಸ್ಥಿತಿಯನ್ನು ಪರಿಗಣಿಸಿರಿ. ಈ ವಿಷಯದಲ್ಲಿ ಅವನು ಇನ್ನೂ ನೋವನ್ನು ಅನುಭವಿಸುತ್ತಿರುವಾಗಲೇ, ಅವನ ಸೊಸೆ ಸಹ ಕ್ರೈಸ್ತ ಜೀವನ ಮಾರ್ಗವನ್ನು ತೊರೆದು ಅವನ ಮಗನನ್ನು ಬಿಟ್ಟುಹೋದಳು. “ನಾವು ನಮ್ಮ ಪರೀಕ್ಷೆಗಳನ್ನು ಆರಿಸಿಕೊಳ್ಳಲು ಅಥವಾ ಅವುಗಳ ಸಮಯವನ್ನು ನಿರ್ಧರಿಸಲು ಇಲ್ಲವೆ ಅವುಗಳ ಸಂಭವ ಪ್ರಮಾಣವನ್ನು ತೀರ್ಮಾನಿಸಲು ಸಾಧ್ಯವಿಲ್ಲ ಎಂಬುದನ್ನು ನಾನು ಕಲಿತುಕೊಂಡೆ,” ಎಂದು ಈ ಸಹೋದರನು ಹೇಳಿದನು. ಆದರೂ ಜೀವನದಲ್ಲಿ ಮುಂದೆ ಸಾಗಲು ಈ ಸಹೋದರನು ಬಲವನ್ನು ಹೇಗೆ ಕಂಡುಕೊಳ್ಳುತ್ತಾನೆ? “ಪ್ರಾರ್ಥನೆ ಮತ್ತು ವೈಯಕ್ತಿಕ ಅಧ್ಯಯನವು ನನಗೆ ತೇಲು ಕವಚದಂತಿದ್ದು, ನಾನು ಮುಳುಗಿಹೋಗುವುದರಿಂದ ನನ್ನನ್ನು ಕಾಪಾಡಿದೆ. ಮತ್ತು ನನ್ನ ಆತ್ಮಿಕ ಸಹೋದರ ಸಹೋದರಿಯರ ಬೆಂಬಲವು ನನಗೆ ಸಾಂತ್ವನವನ್ನು ತಂದಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ಕಷ್ಟಕರ ಪರಿಸ್ಥಿತಿಗಳು ತಲೆದೋರುವ ಮುನ್ನ ಯೆಹೋವನೊಂದಿಗೆ ಒಂದು ಒಳ್ಳೆಯ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳುವುದರ ಪ್ರಮುಖತೆಯನ್ನು ನಾನು ಗ್ರಹಿಸಲು ಶಕ್ತನಾಗಿದ್ದೇನೆ.”

ಜೀವನದಲ್ಲಿ ನಿಮ್ಮ ಅನುಭವವು ಏನೇ ಆಗಿರಲಿ, ಯೆಹೋವನಲ್ಲಿ ಪೂರ್ಣ ಭರವಸೆಯನ್ನಿಡಲು ಮತ್ತು ನಮ್ಮ ಕೈಗಳನ್ನು ಬಲಪಡಿಸಲಿಕ್ಕಾಗಿ ಆತನು ಮಾಡುವ ಎಲ್ಲಾ ಏರ್ಪಾಡುಗಳ ಸದುಪಯೋಗವನ್ನು ಮಾಡಿಕೊಳ್ಳಲು ದೃಢಮನಸ್ಸುಳ್ಳವರಾಗಿರ್ರಿ. ಆಗ ನೀವು ಯೆಹೋವನಿಗೆ ಶ್ರೇಷ್ಠ ಗುಣಮಟ್ಟದ ಸೇವೆಯನ್ನು ಸಲ್ಲಿಸಲು ಶಕ್ತರಾಗಿರುವಿರಿ ಮತ್ತು ಹೀಗೆ ಆತನ ಪವಿತ್ರ ನಾಮಕ್ಕೆ ಸ್ತೋತ್ರವನ್ನೂ ಘನತೆಯನ್ನೂ ತರುವಿರಿ.​—ಇಬ್ರಿಯ 13:15.

[ಪುಟ 31ರಲ್ಲಿರುವ ಚಿತ್ರ]

ಹುರುಪಿನಿಂದ ವರ್ತಿಸಲು ತಪ್ಪಿಹೋದದ್ದರಿಂದ, ಅರಾಮ್ಯರ ವಿರುದ್ಧ ಮಾಡಿದ ಹೋರಾಟದಲ್ಲಿ ಯೋವಾಷನಿಗೆ ಸೀಮಿತ ಯಶಸ್ಸು ಮಾತ್ರ ದೊರೆಯಿತು