ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಪ್ರಕಟನೆ 20:8ರಿಂದ, ಅಂತಿಮ ಪರೀಕ್ಷೆಯ ಸಮಯದಲ್ಲಿ ಅತ್ಯಧಿಕ ಸಂಖ್ಯೆಯ ಜನರು ಸೈತಾನನಿಂದ ಪಥಭ್ರಷ್ಟಗೊಳಿಸಲ್ಪಡುವರು ಎಂಬ ತೀರ್ಮಾನಕ್ಕೆ ನಾವು ಬರಬೇಕೋ?
ಪ್ರಕಟನೆ 20:8, ಮೆಸ್ಸೀಯನ ರಾಜ್ಯದ ಸಹಸ್ರವರ್ಷದಾಳಿಕೆಯ ಅಂತ್ಯದಲ್ಲಿ ಭೂಮಿಯ ಮೇಲೆ ಜೀವಿಸುತ್ತಿರುವ ಜನರ ಮೇಲೆ ಸೈತಾನನು ಅಂತಿಮವಾಗಿ ಮಾಡುವ ಆಕ್ರಮಣದ ಕುರಿತು ವರ್ಣಿಸುತ್ತದೆ. ಸೈತಾನನ ಕುರಿತಾಗಿ ಮಾತಾಡುತ್ತಾ ಆ ವಚನವು ಹೇಳುವುದು: “ಅವನು ಹೊರಗೆ ಬಂದು ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ ಗೋಗ್ ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸಿ ಅವರನ್ನು ಯುದ್ಧಕ್ಕೆ ಕೂಡಿಸುವನು; ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವದು.”
ವೈಜ್ಞಾನಿಕ ವಿಧಾನಗಳು ಹಾಗೂ ಉಪಕರಣಗಳ ಬಳಕೆಯಲ್ಲಿ ಹೆಚ್ಚಿನ ಪ್ರಗತಿಯು ಮಾಡಲ್ಪಟ್ಟಿರುವುದಾದರೂ, ‘ಸಮುದ್ರದ ಮರಳು’ ಇನ್ನೂ ಕೂಡ ಅಜ್ಞಾತ ಪ್ರಮಾಣ ಅಥವಾ ಸಂಖ್ಯೆಯಾಗಿಯೇ ಉಳಿದಿದೆ. ಹೀಗೆ, ಆ ಅಭಿವ್ಯಕ್ತಿಯು ಅಜ್ಞಾತವಾದ, ಅನಿಶ್ಚಿತ ಸಂಖ್ಯೆಯನ್ನು ಸೂಚಿಸುತ್ತದೆ ಎಂದು ಹೇಳಸಾಧ್ಯವಿದೆ. ಆದರೆ ಇದು ಅಪಾರವಾದ, ವಿಪರೀತವಾದ, ಬೃಹತ್ಸಂಖ್ಯೆಯನ್ನು ಸೂಚಿಸುತ್ತದೋ, ಅಥವಾ ಕೇವಲ ಅಜ್ಞಾತವಾಗಿದ್ದರೂ ಗಣನೀಯ ಪ್ರಮಾಣದ ಇಲ್ಲವೆ ಗಮನಾರ್ಹ ಸಂಖ್ಯೆಯನ್ನು ಸೂಚಿಸುತ್ತದೊ?
ಬೈಬಲಿನಲ್ಲಿ ‘ಸಮುದ್ರದ ಮರಳಿನಷ್ಟು’ ಎಂಬ ಅಭಿವ್ಯಕ್ತಿಯು ಬೇರೆ ಬೇರೆ ವಿಧಗಳಲ್ಲಿ ಉಪಯೋಗಿಸಲ್ಪಟ್ಟಿದೆ. ಉದಾಹರಣೆಗೆ, ಆದಿಕಾಂಡ 41:49ರಲ್ಲಿ ನಾವು ಓದುವುದು: “[ಯೋಸೇಫನು] ದವಸಧಾನ್ಯವನ್ನು ಸಮುದ್ರದ ಉಸಬಿನಷ್ಟು ರಾಶಿರಾಶಿಯಾಗಿ ಕೂಡಿಸಿ ಲೆಕ್ಕಮಾಡುವದನ್ನು ಬಿಟ್ಟುಬಿಟ್ಟನು; ಅದನ್ನು ಲೆಕ್ಕಮಾಡುವದಕ್ಕೆ ಆಗದೆಹೋಯಿತು.” ಇಲ್ಲಿ ಅದು ಲೆಕ್ಕಿಸಲು ಅಸಾಧ್ಯವಾದಷ್ಟಿದೆ ಎಂಬುದರ ಮೇಲೆ ಒತ್ತುಕೊಡಲ್ಪಟ್ಟಿದೆ. ತದ್ರೀತಿಯಲ್ಲಿ, ಯೆಹೋವನು ಹೇಳಿದ್ದು: “ನಾನು ನನ್ನ ದಾಸನಾದ ದಾವೀದನ ಸಂತಾನವನ್ನು ಅಸಂಖ್ಯಾತವಾದ ನಕ್ಷತ್ರಗಣದಷ್ಟು ಹೆಚ್ಚಿಸುವೆನು; . . . ಅಳೆಯಲಾಗದ ಸಮುದ್ರತೀರದ ಉಸುಬಿನಷ್ಟು ವೃದ್ಧಿಪಡಿಸುವೆನು.” ಸ್ವರ್ಗದಲ್ಲಿರುವ ನಕ್ಷತ್ರಗಳ ಸಂಖ್ಯೆ ಹಾಗೂ ಸಮುದ್ರತೀರದ ಉಸುಬಿನ ಸಂಖ್ಯೆಯು ಲೆಕ್ಕಿಸಲಸಾಧ್ಯವಾಗಿರುವುದು ಎಷ್ಟು ನಿಶ್ಚಯವಾಗಿದೆಯೋ, ಅಷ್ಟೇ ನಿಶ್ಚಯವಾಗಿ ಯೆಹೋವನು ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವನು.—ಯೆರೆಮೀಯ 33:22.
‘ಸಮುದ್ರದ ಮರಳಿನಷ್ಟು’ ಎಂಬ ಅಭಿವ್ಯಕ್ತಿಯು ಅನೇಕವೇಳೆ ಗಣನೀಯ ಪ್ರಮಾಣದ ಹಾಗೂ ಪ್ರಭಾವಶೀಲ ಪರಿಮಾಣದ ಅಥವಾ ಗಾತ್ರದ ಏನನ್ನಾದರೂ ಸೂಚಿಸುತ್ತದೆ. ಗಿಲ್ಗಾಲಿನಲ್ಲಿದ್ದ ಇಸ್ರಾಯೇಲ್ಯರು, ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡಿದ್ದ “ಸಮುದ್ರದ ಮರಳಿನಷ್ಟು ಅಸಂಖ್ಯವಾದ” ಫಿಲಿಷ್ಟಿಯ ಸೈನಿಕರಿಂದಾಗಿ ಬಹಳವಾಗಿ ಗಲಿಬಿಲಿಗೊಂಡಿದ್ದರು. (1 ಸಮುವೇಲ 13:5, 6; ನ್ಯಾಯಸ್ಥಾಪಕರು 7:12) ಮತ್ತು “ದೇವರು ಸೊಲೊಮೋನನಿಗೆ ಸಮುದ್ರತೀರದ ಉಸುಬಿನಷ್ಟು ಅಪರಿಮಿತವಾದ ಜ್ಞಾನವಿವೇಕಗಳನ್ನೂ ಮನೋವಿಶಾಲತೆಯನ್ನೂ ಅನುಗ್ರಹಿಸಿದನು.” (1 ಅರಸುಗಳು 4:29) ಈ ಎರಡೂ ಸಂದರ್ಭಗಳಲ್ಲಿ ಯಾವುದರ ಕುರಿತಾಗಿ ಮಾತಾಡಲಾಗಿತ್ತೋ ಅದು ಗಣನೀಯ ಪ್ರಮಾಣದ್ದಾಗಿತ್ತಾದರೂ, ಅದು ಪರಿಮಿತವಾಗಿತ್ತು.
‘ಸಮುದ್ರದ ಮರಳು’ ಎಂಬ ಅಭಿವ್ಯಕ್ತಿಯು, ಅದು ಅಪಾರವಾಗಿದೆ ಎಂಬುದನ್ನು ಸೂಚಿಸದೆಯೇ ಒಂದು ಅಜ್ಞಾತ ಸಂಖ್ಯೆಯನ್ನು ಪ್ರತಿನಿಧಿಸಬಹುದು. ಯೆಹೋವನು ಅಬ್ರಹಾಮನಿಗೆ ಹೇಳಿದ್ದು: “ನಿನ್ನ ಸಂತತಿಯನ್ನು ಹೆಚ್ಚಿಸೇ ಹೆಚ್ಚಿಸುವೆನು; ಅದನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದಲ್ಲಿರುವ ಉಸುಬಿನಂತೆಯೂ ಅಸಂಖ್ಯವಾಗಿ ಮಾಡುವೆನು.” (ಆದಿಕಾಂಡ 22:17) ಇದೇ ವಾಗ್ದಾನವನ್ನು ಅಬ್ರಹಾಮನ ಮೊಮ್ಮಗನಾದ ಯಾಕೋಬನಿಗೆ ಪುನಃ ತಿಳಿಸುವಾಗ ಯೆಹೋವನು “ಭೂಮಿಯ ಧೂಳಿನಂತೆ” ಎಂಬ ಅಭಿವ್ಯಕ್ತಿಯನ್ನು ಉಪಯೋಗಿಸಿದನು. ಇದನ್ನೇ ಯಾಕೋಬನು “ಸಮುದ್ರದ ಉಸುಬಿನಂತೆ” ಎಂದು ಪುನರುಚ್ಚರಿಸಿದನು. (ಆದಿಕಾಂಡ 28:14; 32:12) ಆದರೆ ಕೊನೆಗೆ, ಯೇಸು ಕ್ರಿಸ್ತನಲ್ಲದೆ, ಅಬ್ರಹಾಮನ “ಸಂತತಿಯು,” ಯೇಸು ಯಾವುದನ್ನು “ಚಿಕ್ಕ ಹಿಂಡು” ಎಂದು ಕರೆದನೋ ಆ 1,44,000 ಮಂದಿಯ ಸಂಖ್ಯೆಯಾಗಿ ಪರಿಣಮಿಸಿತು.—ಲೂಕ 12:32; ಗಲಾತ್ಯ 3:16, 29; ಪ್ರಕಟನೆ 7:4; 14:1, 3.
ಈ ಉದಾಹರಣೆಗಳಿಂದ ನಾವೇನನ್ನು ಕಲಿಯುತ್ತೇವೆ? ‘ಸಮುದ್ರದ ಮರಳಿನಷ್ಟು’ ಎಂಬ ಅಭಿವ್ಯಕ್ತಿಯು ಯಾವಾಗಲೂ ಅಪರಿಮಿತವಾದ, ಬೃಹತ್ಸಂಖ್ಯೆಯನ್ನು ಅರ್ಥೈಸುವುದಿಲ್ಲ; ಅಥವಾ ಅದು ಯಾವಾಗಲೂ ತೀರ ಅಪಾರವಾದ ಇಲ್ಲವೆ ವಿಪರೀತ ದೊಡ್ಡ ಗಾತ್ರದ ಏನನ್ನಾದರೂ ವರ್ಣಿಸಲು ಉಪಯೋಗಿಸಲ್ಪಡುವುದಿಲ್ಲ. ಅನೇಕವೇಳೆ ಇದು ಅಜ್ಞಾತವಾದ ಆದರೆ ಸಾಕಷ್ಟು ದೊಡ್ಡ ಪ್ರಮಾಣದ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಹೀಗೆ, ಸೈತಾನನು ದೇವಜನರ ಮೇಲೆ ಅಂತಿಮ ಆಕ್ರಮಣವನ್ನು ಮಾಡುವುದರಲ್ಲಿ ಅವನನ್ನು ಬೆಂಬಲಿಸುವ ದಂಗೆಕೋರ ಗುಂಪು ಅಪರಿಮಿತವಾಗಿರುವುದಿಲ್ಲ, ಆದರೆ ಗಣನೀಯ ಪ್ರಮಾಣದ್ದು ಹಾಗೂ ಬೆದರಿಕೆಯನ್ನೊಡ್ಡುವಷ್ಟು ದೊಡ್ಡದು ಆಗಿರುತ್ತದೆ ಎಂಬುದನ್ನು ನಂಬುವುದು ಸಮಂಜಸವಾದದ್ದಾಗಿದೆ. ಆದರೂ, ಸದ್ಯಕ್ಕೆ ಆ ಸಂಖ್ಯೆಯು ಅಜ್ಞಾತವಾಗಿಯೇ ಉಳಿದಿದೆ.