ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನ ಜನನದ ದಾಖಲೆಯಿಂದ ಪಾಠಗಳು

ಯೇಸುವಿನ ಜನನದ ದಾಖಲೆಯಿಂದ ಪಾಠಗಳು

ಯೇಸುವಿನ ಜನನದ ದಾಖಲೆಯಿಂದ ಪಾಠಗಳು

ಕೋಟ್ಯಾಂತರ ಜನರು ಯೇಸುವಿನ ಜನನದ ಸುತ್ತಮುತ್ತಲು ನಡೆದ ಸಂಭವಗಳಿಂದ ಮಂತ್ರಮುಗ್ಧರಾಗುತ್ತಾರೆ. ಇದು ಕ್ರಿಸ್ಮಸ್‌ ಸಮಯದಲ್ಲಿ ಲೋಕಾದ್ಯಂತ ಪ್ರದರ್ಶಿಸಲ್ಪಡುವ ಯೇಸುವಿನ ಜನನದ ಕುರಿತಾದ ದೃಶ್ಯಗಳಲ್ಲಿ ಕಂಡುಬರುತ್ತದೆ. ಯೇಸುವಿನ ಜನನವನ್ನಾವರಿಸಿರುವ ಸಂಭವಗಳು ಆಕರ್ಷಕವಾಗಿದ್ದರೂ, ಅವು ಜನರ ಮನೋರಂಜನೆಗಾಗಿ ದಾಖಲಿಸಲ್ಪಟ್ಟಿಲ್ಲ. ಬದಲಿಗೆ, ಅವು ಉಪದೇಶಕ್ಕೂ ತಿದ್ದುಪಾಟಿಗೂ ಉಪಯುಕ್ತವಾಗಿರುವ ದೈವಪ್ರೇರಿತವಾದ ಶಾಸ್ತ್ರಗಳ ಭಾಗವಾಗಿವೆ.​—2 ತಿಮೊಥೆಯ 3:16.

ಕ್ರೈಸ್ತರು ಯೇಸುವಿನ ಜನ್ಮದಿನವನ್ನು ಆಚರಿಸಬೇಕೆಂದು ದೇವರು ಬಯಸುತ್ತಿದ್ದಲ್ಲಿ, ಬೈಬಲು ಸರಿಯಾದ ತಾರೀಖನ್ನು ಕೊಡುತ್ತಿತ್ತು. ಬೈಬಲ್‌ ಆ ತಾರೀಖನ್ನು ಕೊಡುತ್ತದೆಯೆ? ಕುರುಬರು ರಾತ್ರಿಯಲ್ಲಿ ಕುರಿಹಿಂಡುಗಳನ್ನು ಹೊಲದಲ್ಲಿ ಮೇಯಿಸುತ್ತಿದ್ದರೆಂದು ಹೇಳಿದ ಮೇಲೆ, 19ನೆಯ ಶತಮಾನದ ಬೈಬಲ್‌ ವಿದ್ವಾಂಸ, ಆಲ್ಬರ್ಟ್‌ ಬಾನ್ಸ್‌ ತೀರ್ಮಾನಿಸಿದ್ದು: “ನಮ್ಮ ರಕ್ಷಕನು ಡಿಸೆಂಬರ್‌ 25ಕ್ಕಿಂತ ಮೊದಲೇ ಜನಿಸಿದನೆಂದು ಇದರಿಂದ ವ್ಯಕ್ತವಾಗುತ್ತದೆ . . . ಆ ಸಮಯದಲ್ಲಿ, ವಿಶೇಷವಾಗಿ ಬೇತ್ಲೆಹೇಮಿನ ಆಸುಪಾಸಿನ ಎತ್ತರವಾದ ಮತ್ತು ಪರ್ವತಮಯ ಪ್ರದೇಶಗಳಲ್ಲಿ ತುಂಬ ಚಳಿ ಇರುತ್ತದೆ. ದೇವರು [ಯೇಸು] ಜನಿಸಿದ ಕಾಲವನ್ನು ಮರೆಮಾಡಿರುತ್ತಾನೆ. . . . ಆ ಸಮಯವನ್ನು ತಿಳಿಯುವುದು ಪ್ರಾಮುಖ್ಯವೂ ಆಗಿರಲಿಲ್ಲ; ಹಾಗಿರುತ್ತಿದ್ದಲ್ಲಿ, ದೇವರು ಅದರ ಕುರಿತಾದ ದಾಖಲೆಯನ್ನು ಸಂರಕ್ಷಿಸಿಡುತ್ತಿದ್ದನು.”

ಇದಕ್ಕೆ ವ್ಯತಿರಿಕ್ತವಾಗಿ, ನಾಲ್ವರೂ ಸುವಾರ್ತಾ ಲೇಖಕರು ಯೇಸು ಮರಣಹೊಂದಿದ ದಿನವನ್ನು ನಮಗೆ ಸ್ಪಷ್ಟವಾಗಿ ತಿಳಿಸಿರುತ್ತಾರೆ. ಅದು ಪಸ್ಕ ಹಬ್ಬದ ದಿನ, ವಸಂತ ಕಾಲದಲ್ಲಿ ಯೆಹೂದಿ ನೈಸಾನ್‌ ತಿಂಗಳ 14ನೆಯ ದಿನದಂದು ನಡೆಯಿತು. ಇದಲ್ಲದೆ, ತನ್ನ ಶಿಷ್ಯರು ತನ್ನ ಜ್ಞಾಪಕಾರ್ಥವಾಗಿ ಅದನ್ನು ಆಚರಿಸಬೇಕೆಂದು ಯೇಸು ನಿರ್ದಿಷ್ಟವಾಗಿ ಅವರಿಗೆ ಆಜ್ಞೆ ಕೊಟ್ಟನು. (ಲೂಕ 22:19) ಆದರೆ ಬೈಬಲಿನಲ್ಲಿ ಯೇಸುವಿನ ಇಲ್ಲವೆ ಬೇರಾವುದೇ ವ್ಯಕ್ತಿಯ ಜನ್ಮದಿನವನ್ನು ಆಚರಿಸುವುದರ ಬಗ್ಗೆ ಯಾವುದೇ ಆಜ್ಞೆಯು ಕೊಡಲ್ಪಟ್ಟಿಲ್ಲ. ವಿಷಾದಕರವಾದ ವಿಷಯವೇನಂದರೆ, ಯೇಸುವಿನ ಜನ್ಮದಿನದ ಕುರಿತಾದ ವಾಗ್ವಾದಗಳು ಆ ಸಮಯದಲ್ಲಿ ನಡೆದ ಹೆಚ್ಚು ಗಮನಾರ್ಹವಾದ ಘಟನೆಗಳನ್ನು ಮರೆಮಾಡಬಹುದು.

ದೇವರಿಂದ ಆಯ್ಕೆಮಾಡಲ್ಪಟ್ಟ ಹೆತ್ತವರು

ಇಸ್ರಾಯೇಲಿನ ಸಾವಿರಾರು ಕುಟುಂಬಗಳಲ್ಲಿ, ದೇವರು ತನ್ನ ಮಗನನ್ನು ಬೆಳೆಸಲು ಯಾವ ರೀತಿಯ ಹೆತ್ತವರನ್ನು ಆಯ್ಕೆಮಾಡಿದನು? ಪ್ರತಿಷ್ಠೆ ಮತ್ತು ಐಶ್ವರ್ಯಗಳಂತಹ ವಿಷಯಗಳು ಪ್ರಾಮುಖ್ಯವೆಂದು ಆತನು ನೆನಸಿದನೊ? ಇಲ್ಲ. ಅದರ ಬದಲು ಯೆಹೋವನು ಆ ಹೆತ್ತವರ ಆತ್ಮಿಕ ಗುಣಗಳನ್ನು ಗಮನಿಸಿದನು. ಲೂಕ 1:​46-55ರಲ್ಲಿರುವ ಮರಿಯಳ ಸ್ತುತಿಗೀತೆಯನ್ನು ಪರೀಕ್ಷಿಸಿರಿ. ಇದನ್ನು ಆಕೆ, ಅವಳಿಗೆ ಮೆಸ್ಸೀಯನ ತಾಯಿಯಾಗುವ ಸುಯೋಗದ ಕುರಿತು ಹೇಳಲ್ಪಟ್ಟಾಗ ಹಾಡಿದಳು. ಬೇರೆ ವಿಷಯಗಳೊಂದಿಗೆ ಆಕೆ ಹೇಳಿದ್ದು: “ನನ್ನ ಪ್ರಾಣವು ಕರ್ತನನ್ನು [“ಯೆಹೋವನನ್ನು,” NW] ಕೊಂಡಾಡುತ್ತದೆ, . . . ಆತನು ತನ್ನ ದಾಸಿಯ ದೀನಸ್ಥಿತಿಯ ಮೇಲೆ ಲಕ್ಷ್ಯವಿಟ್ಟಿದ್ದಾನೆ.” ತಾನು “ದೀನಸ್ಥಿತಿ”ಯವಳೆಂದು, ಯೆಹೋವನ ದಾಸಿಯೆಂದು ಆಕೆ ದೀನಭಾವದಿಂದ ದೃಷ್ಟಿಸಿಕೊಂಡಳು. ಇದಕ್ಕಿಂತಲೂ ಪ್ರಾಮುಖ್ಯವಾಗಿ, ಮರಿಯಳ ಹಾಡಿನ ಸುಂದರ ಸ್ತುತಿಯ ಅಭಿವ್ಯಕ್ತಿಗಳು, ಆಕೆ ಶಾಸ್ತ್ರಗಳ ಬಗ್ಗೆ ಒಳ್ಳೇ ಜ್ಞಾನವಿದ್ದ ಆತ್ಮಿಕ ವ್ಯಕ್ತಿಯಾಗಿದ್ದಳೆಂಬುದನ್ನು ತೋರಿಸುತ್ತವೆ. ಆಕೆ ಆದಾಮನ ಪಾಪಪೂರ್ಣ ವಂಶಸ್ಥಳಾಗಿದ್ದರೂ, ದೇವಪುತ್ರನ ಶಾರೀರಿಕ ತಾಯಿಯಾಗುವ ಆಯ್ಕೆಗೆ ಯೋಗ್ಯಳಾಗಿದ್ದಳು.

ಯೇಸುವಿನ ದತ್ತುತಂದೆಯಾಗಿ ಪರಿಣಮಿಸಿದ ಮರಿಯಳ ಗಂಡನ ವಿಷಯದಲ್ಲೇನು? ಯೋಸೇಫನು ಮರಗೆಲಸದ ಪ್ರಾಯೋಗಿಕ ಜ್ಞಾನವಿದ್ದ ವ್ಯಕ್ತಿಯಾಗಿದ್ದನು. ಅವನಿಗೆ ಕಷ್ಟಪಟ್ಟು ಕೈಕೆಲಸಮಾಡುವ ಸಿದ್ಧಮನಸ್ಸಿದ್ದುದರಿಂದ, ಐದು ಮಂದಿ ಗಂಡುಮಕ್ಕಳು ಮತ್ತು ಕಡಿಮೆಪಕ್ಷ ಇಬ್ಬರಾದರೂ ಹೆಣ್ಣುಮಕ್ಕಳಿದ್ದ ಆ ಕುಟುಂಬವನ್ನು ಅವನು ಪೋಷಿಸಲು ಶಕ್ತನಾಗಿದ್ದನು. (ಮತ್ತಾಯ 13:​55, 56) ಯೋಸೇಫನು ಧನಿಕನಾಗಿರಲಿಲ್ಲ. ಮರಿಯಳು ತನ್ನ ಚೊಚ್ಚಲಮಗನನ್ನು ದೇವಾಲಯಕ್ಕೆ ಕೊಂಡೊಯ್ಯುವ ಸಮಯ ಬಂದಾಗ, ಯಜ್ಞಾರ್ಪಿಸಲಿಕ್ಕಾಗಿ ಕುರಿಯನ್ನು ಒದಗಿಸಲು ಅಸಾಧ್ಯವಾದುದಕ್ಕಾಗಿ ಯೋಸೇಫನು ನಿರಾಶನಾಗಿದ್ದಿರಬೇಕು. ಕುರಿಗೆ ಬದಲು, ಅವರು ಬಡವರಿಗೆ ಅನುಮತಿಸಲ್ಪಟ್ಟಿದ್ದುದನ್ನು ಅರ್ಪಿಸಬೇಕಾಯಿತು. ಒಬ್ಬ ನವಜನಿತ ಗಂಡುಮಗುವಿನ ತಾಯಿಯ ಸಂಬಂಧದಲ್ಲಿ ದೇವರ ನಿಯಮವು ಹೇಳಿದ್ದು: “ಕುರಿಯನ್ನು ಕೊಡುವದಕ್ಕೆ ಗತಿಯಿಲ್ಲದಿದ್ದರೆ ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತಂದು ಸರ್ವಾಂಗಹೋಮಕ್ಕಾಗಿ ಒಂದನ್ನೂ ದೋಷಪರಿಹಾರಕ್ಕಾಗಿ ಒಂದನ್ನೂ ಸಮರ್ಪಿಸಬೇಕು. ಯಾಜಕನು ಅವಳಿಗೋಸ್ಕರ ದೋಷಪರಿಹಾರವನ್ನು ಮಾಡಿದಾಗ ಶುದ್ಧಳಾಗುವಳು.”​—ಯಾಜಕಕಾಂಡ 12:8; ಲೂಕ 2:22-24.

ಯೋಸೇಫನು “ಸಜ್ಜನನಾಗಿ”ದ್ದನೆಂದು ಬೈಬಲು ಹೇಳುತ್ತದೆ. (ಮತ್ತಾಯ 1:19) ಉದಾಹರಣೆಗೆ, ಅವನು ತನ್ನ ಕನ್ಯೆ ಪತ್ನಿಯೊಂದಿಗೆ, ಯೇಸು ಹುಟ್ಟುವ ವರೆಗೆ ಸಂಭೋಗಮಾಡಲಿಲ್ಲ. ಯೇಸುವಿನ ನಿಜ ತಂದೆ ಯಾರು ಎಂಬ ವಿಷಯದಲ್ಲಿ ತಪ್ಪಭಿಪ್ರಾಯ ಮೂಡುವುದನ್ನು ಇದು ತಡೆಗಟ್ಟಿತು. ಆ ನವ ವಿವಾಹಿತ ದಂಪತಿಗೆ ಒಂದೇ ಸೂರಿನಡಿಯಲ್ಲಿದ್ದೂ, ಲೈಂಗಿಕ ಸಂಬಂಧದಲ್ಲಿ ಒಳಗೂಡದೆ ಇರುವುದು ಸುಲಭವಾಗಿರದೇ ಇದ್ದಿರಬಹುದು. ಆದರೆ ಹಾಗೆ ಒಳಗೂಡದೆ ಇದ್ದುದು, ದೇವರ ಮಗನನ್ನು ಬೆಳೆಸಲು ಅವರಿಗಿದ್ದ ಸದವಕಾಶವನ್ನು ಅವರು ಅಮೂಲ್ಯವಾದದ್ದಾಗಿ ಪರಿಗಣಿಸಿದರೆಂಬುದನ್ನು ತೋರಿಸಿತು.​—ಮತ್ತಾಯ 1:​24, 25.

ಮರಿಯಳಂತೆಯೇ, ಯೋಸೇಫನೂ ಒಬ್ಬ ಆತ್ಮಿಕ ವ್ಯಕ್ತಿಯಾಗಿದ್ದನು. ಅವನು ಪ್ರತಿ ವರುಷ, ತನ್ನ ಕೆಲಸವನ್ನು ನಿಲ್ಲಿಸಿ, ವಾರ್ಷಿಕ ಪಸ್ಕ ಹಬ್ಬದಲ್ಲಿ ಉಪಸ್ಥಿತನಿರಲು ತನ್ನ ಕುಟುಂಬವನ್ನು ನಜರೇತಿನಿಂದ ಯೆರೂಸಲೇಮಿಗೆ ಮೂರು ದಿನ ಪಯಣಿಸಿ ಕರೆದೊಯ್ಯುತ್ತಿದ್ದನು. (ಲೂಕ 2:41) ಅಲ್ಲದೆ, ಯೋಸೇಫನು ಯುವ ಯೇಸುವನ್ನು, ಎಲ್ಲಿ ದೇವರ ವಾಕ್ಯವನ್ನು ಓದಿ ವಿವರಿಸಲಾಗುತ್ತಿತ್ತೊ ಅಂತಹ ಸ್ಥಳಿಕ ಸಭಾಮಂದಿರದ ಆರಾಧನೆಯಲ್ಲಿ ಭಾಗವಹಿಸುವ ಪದ್ಧತಿಯನ್ನು ಇಟ್ಟುಕೊಳ್ಳುವಂತೆ ತರಬೇತುಗೊಳಿಸಿದ್ದಿರಬೇಕು. (ಲೂಕ 2:51; 4:16) ಹೀಗೆ, ದೇವರು ತನ್ನ ಮಗನಿಗಾಗಿ ಯೋಗ್ಯರಾಗಿದ್ದ ಶಾರೀರಿಕ ತಾಯಿಯನ್ನೂ ದತ್ತುತಂದೆಯನ್ನೂ ಆಯ್ಕೆಮಾಡಿದನೆಂಬ ವಿಷಯದಲ್ಲಿ ಸ್ವಲ್ಪವೂ ಸಂದೇಹವಿಲ್ಲ.

ದೀನರಾಗಿದ್ದ ಕುರುಬರಿಗೆ ಮಹಾನ್‌ ಆಶೀರ್ವಾದ

ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದ ತನ್ನ ಹೆಂಡತಿಗೆ ಇದು ಪ್ರಯಾಸಕರವಾಗಿದ್ದರೂ, ಯೋಸೇಫನು ಕೈಸರನ ಆಜ್ಞೆಯ ಪ್ರಕಾರ ಖಾನೇಷುಮಾರಿ ಮಾಡಿಸಿಕೊಳ್ಳಲು ತನ್ನ ಪಿತೃಗಳ ಊರಿಗೆ ಪ್ರಯಾಣ ಬೆಳೆಸಿದನು. ಆ ದಂಪತಿಯು ಬೇತ್ಲೆಹೇಮಿಗೆ ಬಂದು ತಲಪಿದಾಗ, ಆ ಜನನಿಬಿಡವಾಗಿದ್ದ ಪಟ್ಟಣದಲ್ಲಿ ಅವರಿಗೆ ವಸತಿಸೌಕರ್ಯ ದೊರೆಯಲಿಲ್ಲ. ಹೀಗೆ ಪರಿಸ್ಥಿತಿಗಳು ಅವರು ಒಂದು ಕೊಟ್ಟಿಗೆಯನ್ನು ಉಪಯೋಗಿಸುವಂತೆ ನಿರ್ಬಂಧಿಸಿದವು. ಅಲ್ಲಿ ಯೇಸು ಜನಿಸಲಾಗಿ ಅವನನ್ನು ಒಂದು ಗೋದಲಿಯಲ್ಲಿ ಮಲಗಿಸಲಾಯಿತು. ಆ ದೀನ ಹೆತ್ತವರ ನಂಬಿಕೆಯನ್ನು ಬಲಪಡಿಸಲಿಕ್ಕಾಗಿ ಯೆಹೋವನು ಅವರಿಗೆ, ಈ ಹುಟ್ಟು ನಿಜವಾಗಿಯೂ ದೇವರ ಚಿತ್ತವಾಗಿತ್ತೆಂಬುದನ್ನು ದೃಢೀಕರಿಸಿದನು. ಅಂದರೆ, ಆ ದಂಪತಿಗಳಿಗೆ ಪುನರಾಶ್ವಾಸನೆ ನೀಡಲು ಆತನು ಬೇತ್ಲೆಹೇಮಿನ ಹಿರೀ ಪುರುಷರ ಒಂದು ಪ್ರತಿನಿಧಿ ತಂಡವನ್ನು ಕಳುಹಿಸಿದನೊ? ಇಲ್ಲ. ಇದಕ್ಕೆ ಬದಲಾಗಿ, ಯಾರು ತಮ್ಮ ಮಂದೆಗಳನ್ನು ಇಡೀ ರಾತ್ರಿ ಹೊಲದಲ್ಲಿ ಕಾಯುತ್ತಿದ್ದರೊ ಆ ಪರಿಶ್ರಮಿ ಜೀವಿಗಳಾದ ಕುರುಬರಿಗೆ ಯೆಹೋವ ದೇವರು ಈ ವಿಷಯವನ್ನು ತಿಳಿಯಪಡಿಸಿದನು.

ದೇವದೂತನು ಅವರಿಗೆ ಕಾಣಿಸಿಕೊಂಡು, ಅವರು ಬೇತ್ಲೆಹೇಮಿಗೆ ಹೋಗಬೇಕೆಂದೂ ಅಲ್ಲಿ ನವಜನಿತ ಮೆಸ್ಸೀಯನು “ಗೋದಲಿಯಲ್ಲಿ ಮಲಗಿರುವದನ್ನು” ಅವರು ಕಾಣುವರೆಂದೂ ಹೇಳಿದನು. ನವಜನಿತ ಮೆಸ್ಸೀಯನು ಹಟ್ಟಿಯಲ್ಲಿದ್ದಾನೆಂದು ಕೇಳಿದಾಗ ಈ ದೀನ ಮನುಷ್ಯರು ತಲ್ಲಣಗೊಂಡರೊ, ಮುಜುಗರಪಟ್ಟರೊ? ನಿಶ್ಚಯವಾಗಿಯೂ ಇಲ್ಲ! ಅವರು ತಡಮಾಡದೆ ತಮ್ಮ ಮಂದೆಗಳನ್ನು ಬಿಟ್ಟು ಬೇತ್ಲೆಹೇಮಿಗೆ ಹೊರಟರು. ಅವರು ಯೇಸುವನ್ನು ಕಂಡುಹಿಡಿದಾಗ, ದೇವದೂತನು ಏನು ಹೇಳಿದನೊ ಅದನ್ನು ಅವರು ಯೋಸೇಫನಿಗೂ ಮರಿಯಳಿಗೂ ತಿಳಿಸಿದರು. ಇದು, ಎಲ್ಲವೂ ದೇವರ ಉದ್ದೇಶಾನುಸಾರ ನಡೆಯುತ್ತಿದೆಯೆಂಬ ಆ ದಂಪತಿಯ ನಂಬಿಕೆಯನ್ನು ಬಲಪಡಿಸಿತೆಂಬುದರಲ್ಲಿ ಸಂಶಯವಿಲ್ಲ. ಆದರೆ “ಕುರುಬರು . . . ಎಲ್ಲಾ ಸಂಗತಿಗಳನ್ನು ಕೇಳಿ ನೋಡಿ ಅವುಗಳಿಗೋಸ್ಕರ ದೇವರನ್ನು ಕೊಂಡಾಡುತ್ತಾ ಸ್ತುತಿಸುತ್ತಾ ಹಿಂತಿರುಗಿ ಹೋದರು.” (ಲೂಕ 2:8-20) ಹೌದು, ದೇವಭಯವಿದ್ದ ಕುರುಬರಿಗೆ ಈ ವಿಷಯಗಳನ್ನು ತಿಳಿಯಪಡಿಸುವ ಮೂಲಕ ದೇವರು ಸರಿಯಾದ ಆಯ್ಕೆಯನ್ನು ಮಾಡಿದ್ದನು.

ಈ ಮೇಲಿನ ವಿಷಯಗಳಿಂದ, ನಾವು ಯೆಹೋವನ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ಯಾವ ರೀತಿಯ ವ್ಯಕ್ತಿಗಳಾಗಿರಬೇಕೆಂಬುದನ್ನು ಕಲಿತುಕೊಳ್ಳುತ್ತೇವೆ. ನಮಗೆ ಪ್ರತಿಷ್ಠೆ ಅಥವಾ ಐಶ್ವರ್ಯವನ್ನು ಬೆನ್ನಟ್ಟುವ ಅಗತ್ಯವಿಲ್ಲ. ಅದಕ್ಕೆ ಬದಲಾಗಿ, ಯೋಸೇಫ, ಮರಿಯ ಮತ್ತು ಕುರುಬರಂತೆ, ನಾವು ದೇವರಿಗೆ ವಿಧೇಯರಾಗಿ, ಆತ್ಮಿಕ ವಿಷಯಗಳನ್ನು ಪ್ರಾಪಂಚಿಕ ವಿಷಯಗಳಿಗಿಂತ ಮುಂದಿಡುತ್ತಾ ನಮಗೆ ಆತನ ಮೇಲಿರುವ ಪ್ರೀತಿಯನ್ನು ರುಜುಪಡಿಸಬೇಕು. ಹೌದು, ಯೇಸುವಿನ ಜನನದ ಸುಮಾರಿಗೆ ಸಂಭವಿಸಿದ ಘಟನೆಗಳ ದಾಖಲೆಯ ಕುರಿತು ಧ್ಯಾನಿಸುವ ಮೂಲಕ, ಕಲಿಯಲು ಉತ್ತಮ ಪಾಠಗಳು ಇವೆಯೆಂಬುದು ನಿಶ್ಚಯ.

[ಪುಟ 7ರಲ್ಲಿರುವ ಚಿತ್ರ]

ಮರಿಯಳು ಎರಡು ಪಾರಿವಾಳಗಳನ್ನು ಸಮರ್ಪಿಸಿದ್ದು ಏನನ್ನು ಸೂಚಿಸುತ್ತದೆ?

[ಪುಟ 7ರಲ್ಲಿರುವ ಚಿತ್ರ]

ದೇವರು ಯೇಸುವಿನ ಜನನದ ವಿಷಯವನ್ನು ಕೆಲವು ದೀನ ಕುರುಬರಿಗೆ ತಿಳಿಯಪಡಿಸುವ ಆಯ್ಕೆಮಾಡಿದನು