ಅವಳ ಪಟ್ಟುಹಿಡಿಯುವಿಕೆಗೆ ಪ್ರತಿಫಲ ದೊರೆಯಿತು
ಅವಳ ಪಟ್ಟುಹಿಡಿಯುವಿಕೆಗೆ ಪ್ರತಿಫಲ ದೊರೆಯಿತು
ಅನೇಕ ಸಹೃದಯಿಗಳ ಅಪೇಕ್ಷೆಯು, ತಮ್ಮ ಪ್ರಿಯರು ಸಹ ದೇವರ ಉದ್ದೇಶಗಳ ಕುರಿತು ಕಲಿತು, ಸಂತೋಷದ ಜೀವಿತವನ್ನು ಅನುಭವಿಸಬೇಕೆಂಬುದೇ ಆಗಿದೆ. ಒಬ್ಬ ವ್ಯಕ್ತಿಯು ತನ್ನನ್ನು ದೇವರಿಗೆ ಸಮರ್ಪಿಸಿಕೊಳ್ಳುವಾಗ, ಆ ವಿವೇಕಪೂರ್ಣ ನಿರ್ಣಯವನ್ನು ತೆಗೆದುಕೊಳ್ಳಲಿಕ್ಕೆ, ಇತರರು ಅಂದರೆ ಚಿಕ್ಕವರೂ ದೊಡ್ಡವರೂ ತಮ್ಮ ಸದ್ವರ್ತನೆಯ ಮೂಲಕ ಸಹಾಯಮಾಡಿದ್ದಿರಬಹುದು. ಮೆಕ್ಸಿಕೊ ದೇಶದ ಕೇಆರೀಮ್ ಎಂಬ ಹದಿಹರೆಯದ ಹುಡುಗಿಯೊಬ್ಬಳ ವಿಷಯದಲ್ಲಿ ಇದು ನಿಜವಾಗಿತ್ತು. ಅವಳು ಯೆಹೋವನ ಸಾಕ್ಷಿಗಳ ವಿಶೇಷ ಸಮ್ಮೇಳನ ದಿನದಂದು ಈ ಕೆಳಗಿನ ಪತ್ರವನ್ನು ಸಹೋದರರಿಗೆ ಬರೆದು ಕೊಟ್ಟಳು:
“ನನ್ನ ಸಂತೋಷಾನಂದಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದಿದ್ದೇನೆ. ಕಾರಣವೇನೆಂಬುದನ್ನು ನಿಮಗೆ ಹೇಳುವೆ. ಹದಿನೆಂಟು ವರುಷಗಳ ಹಿಂದೆ, ನಾನಿನ್ನೂ ಹುಟ್ಟಿರದಿದ್ದಾಗ, ನನ್ನ ತಂದೆತಾಯಿಗಳು ಸತ್ಯವನ್ನು ಕಲಿತರು. ನನ್ನ ತಾಯಿ ಸತ್ಯದಲ್ಲಿ ಪ್ರಗತಿಯನ್ನು ಮಾಡಿದರು ಮತ್ತು ತರುವಾಯ ನಾನೂ ನನ್ನ ತಮ್ಮನೂ ಸತ್ಯಕ್ಕೆ ಬಂದೆವು. ನಾವು ಜೊತೆಗೂಡಿ, ನಮ್ಮ ತಂದೆಯವರೂ ಜೀವನದ ಮಾರ್ಗಕ್ಕೆ ಬರುವಂತಾಗಲಿ ಎಂದು ಯೆಹೋವನಿಗೆ ಪ್ರಾರ್ಥಿಸಿದೆವು. ಈಗ ಹದಿನೆಂಟು ವರುಷಗಳು ಸಂದಿವೆ ಮತ್ತು ಇವತ್ತಿನ ದಿನವು ನಮಗೆ ಅತಿ ವಿಶೇಷವಾದ ದಿನವಾಗಿದೆ. ನನ್ನ ತಂದೆ ಇಂದು ದೀಕ್ಷಾಸ್ನಾನ ಹೊಂದಲಿದ್ದಾರೆ. ದೀರ್ಘ ಸಮಯದಿಂದಲೂ ನಾವು ಕಾದುಕೊಂಡಿದ್ದ ಈ ಕ್ಷಣವು ಬರುವ ಮುಂಚೆಯೇ ಯೆಹೋವನು ಅಂತ್ಯವನ್ನು ತರದಿದ್ದುದಕ್ಕಾಗಿ ನಾನು ಆತನಿಗೆ ಆಭಾರಿಯಾಗಿದ್ದೇನೆ. ಯೆಹೋವನೇ, ನಿನಗೆ ಉಪಕಾರ!”
ಈ ಎಲ್ಲ ವರ್ಷಗಳಲ್ಲಿ, 1 ಪೇತ್ರ 3:1, 2ರ ಪ್ರೇರಿತ ಸಲಹೆಯಲ್ಲಿ ಸೇರಿರುವ ಮೂಲತತ್ತ್ವಗಳು ಈ ಯುವತಿಯ ಕುಟುಂಬದ ಮನಸ್ಸಿನಲ್ಲಿದ್ದವು ಎಂಬುದಂತೂ ಖಂಡಿತ. ಆ ವಚನವು ಹೇಳುವುದು: “ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.” ಮತ್ತು ಕೇಆರೀಮ್ ನಿಶ್ಚಯವಾಗಿಯೂ ಧರ್ಮೋಪದೇಶಕಾಂಡ 5:16ರಲ್ಲಿರುವ, “ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು” ಎಂಬ ಮಾತುಗಳನ್ನು ಅನ್ವಯಿಸಿಕೊಂಡಿದ್ದಳು. ಇಂತಹ ಮೂಲತತ್ತ್ವಗಳನ್ನು ಅನ್ವಯಿಸಿಕೊಂಡು, ಯೆಹೋವನ ಮೇಲೆ ತಾಳ್ಮೆಯಿಂದ ಕಾದುಕೊಂಡಿದ್ದಕ್ಕಾಗಿ, ಕೇಆರೀಮ್ ಮತ್ತು ಆಕೆಯ ಕುಟುಂಬವು ನಿಶ್ಚಯವಾಗಿಯೂ ಆಶೀರ್ವಾದಗಳನ್ನು ಪಡೆದುಕೊಂಡಿತು.