ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಎಚ್ಚರವಾಗಿರಿ”!

“ಎಚ್ಚರವಾಗಿರಿ”!

“ಎಚ್ಚರವಾಗಿರಿ”!

“ನಾನು ನಿಮಗೆ ಹೇಳಿದ್ದನ್ನು ಎಲ್ಲರಿಗೂ ಹೇಳುತ್ತೇನೆ. ಎಚ್ಚರವಾಗಿರಿ.”—ಮಾರ್ಕ 13:37.

1, 2. (ಎ) ತನ್ನ ಆಸ್ತಿಪಾಸ್ತಿಯನ್ನು ರಕ್ಷಿಸುವುದರ ವಿಷಯದಲ್ಲಿ ಒಬ್ಬ ಮನುಷ್ಯನು ಯಾವ ಪಾಠವನ್ನು ಕಲಿತನು? (ಬಿ) ಒಬ್ಬ ಕಳ್ಳನ ಬಗ್ಗೆ ಯೇಸು ಕೊಟ್ಟ ದೃಷ್ಟಾಂತದಿಂದ, ಎಚ್ಚರವಾಗಿರುವುದರ ಕುರಿತು ನಾವೇನನ್ನು ಕಲಿಯುತ್ತೇವೆ?

ಹ್ವಾನ್‌ ತನ್ನ ಎಲ್ಲಾ ಬೆಲೆಬಾಳುವ ಒಡವೆವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದನು. ಅವನದನ್ನು ತನ್ನ ಹಾಸಿಗೆಯಡಿಯಲ್ಲಿ ಇಟ್ಟಿದ್ದನು. ಅವನ ಅಭಿಪ್ರಾಯಕ್ಕನುಸಾರ, ಇಡೀ ಮನೆಯಲ್ಲಿ ಅದೇ ಅತಿ ಸುರಕ್ಷಿತವಾದ ಸ್ಥಳವಾಗಿತ್ತು. ಆದರೆ ಒಂದು ರಾತ್ರಿ, ಅವನೂ ಅವನ ಹೆಂಡತಿಯೂ ನಿದ್ರಿಸುತ್ತಿದ್ದಾಗ, ಒಬ್ಬ ಕಳ್ಳನು ಮಲಗುವ ಕೋಣೆಯನ್ನು ಪ್ರವೇಶಿಸಿದನು. ಆ ಕಳ್ಳನಿಗೆ ಎಲ್ಲಿ ಹುಡುಕಬೇಕೆಂಬುದು ಸರಿಯಾಗಿ ತಿಳಿದಿತ್ತು. ಅವನು ಸ್ವಲ್ಪವೂ ಸದ್ದುಮಾಡದೆ, ಹಾಸಿಗೆಯಡಿಯಲ್ಲಿದ್ದ ಒಂದೊಂದು ಬೆಲೆಬಾಳುವ ವಸ್ತುವನ್ನೂ, ಮಂಚದ ಪಕ್ಕದಲ್ಲಿದ್ದ ಮೇಜಿನಲ್ಲಿ ಹ್ವಾನ್‌ ಇಟ್ಟಿದ್ದ ಹಣವನ್ನೂ ತೆಗೆದುಕೊಂಡುಹೋದನು. ಮರುದಿನ ಬೆಳಗ್ಗೆ ಎದ್ದಾಗಲೇ ಹ್ವಾನ್‌ಗೆ ಕಳವಿನ ಬಗ್ಗೆ ಗೊತ್ತಾಯಿತು. ಅವನು ಕಲಿತಂಥ ವೇದನಾಮಯ ಪಾಠವನ್ನು ಬಹಳಷ್ಟು ವರ್ಷಗಳ ವರೆಗೆ ಅವನು ನೆನಪಿಡುವನು. ಅದೇನೆಂದರೆ, ನಿದ್ರಿಸುತ್ತಿರುವ ಮನುಷ್ಯನು ತನ್ನ ಸ್ವತ್ತುಗಳನ್ನು ರಕ್ಷಿಸಲಾರನು.

2 ಆತ್ಮಿಕ ಅರ್ಥದಲ್ಲೂ ಈ ಮಾತು ಸತ್ಯವಾಗಿದೆ. ಒಂದುವೇಳೆ ನಾವು ನಿದ್ದೆಹೋಗುವಲ್ಲಿ, ನಮ್ಮ ನಿರೀಕ್ಷೆಯನ್ನು ಮತ್ತು ನಂಬಿಕೆಯನ್ನು ನಾವು ರಕ್ಷಿಸಲಾರೆವು. ಆದುದರಿಂದಲೇ, ಪೌಲನು ಈ ಬುದ್ಧಿವಾದವನ್ನು ಕೊಟ್ಟನು: “ನಾವು ಇತರರಂತೆ ನಿದ್ದೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿರೋಣ.” (1 ಥೆಸಲೊನೀಕ 5:6) ಎಚ್ಚರವಾಗಿರುವುದು ಎಷ್ಟೊಂದು ಪ್ರಾಮುಖ್ಯವಾಗಿದೆ ಎಂಬದನ್ನು ತೋರಿಸಲು, ಯೇಸು ಒಬ್ಬ ಕಳ್ಳನ ದೃಷ್ಟಾಂತವನ್ನು ಉಪಯೋಗಿಸಿದನು. ತಾನು ನ್ಯಾಯಾಧಿಪತಿಯಾಗಿ ಬರುವ ಸಮಯಕ್ಕೆ ನಡೆಸುವ ಘಟನೆಗಳನ್ನು ವರ್ಣಿಸಿದ ಬಳಿಕ, ಅವನು ಎಚ್ಚರಿಸಿದ್ದು: “ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ. ಕಳ್ಳನು ಬರುವ ಜಾವ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಹಾಕಗೊಡಿಸುತ್ತಿರಲಿಲ್ಲವೆಂದು ತಿಳುಕೊಳ್ಳಿರಿ. ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.” (ಮತ್ತಾಯ 24:42-44) ಒಬ್ಬ ಕಳ್ಳನು, ತಾನು ಯಾವಾಗ ಬರುತ್ತೇನೆಂಬುದನ್ನು ಮುಂಚಿತವಾಗಿಯೇ ತಿಳಿಸಿ ಬರುವುದಿಲ್ಲ. ಯಾರೂ ತನ್ನನ್ನು ನಿರೀಕ್ಷಿಸದ ಗಳಿಗೆಯಲ್ಲಿ ಬರಲು ಅವನು ಕಾದುಕೊಂಡಿರುತ್ತಾನೆ. ಹಾಗೆಯೇ, ಯೇಸು ಹೇಳಿದಂತೆ, ಈ ವ್ಯವಸ್ಥೆಯ ಅಂತ್ಯವು ‘ನಾವು ನೆನಸದ ಗಳಿಗೆಯಲ್ಲಿ ಬರುವುದು.’

‘ಎಚ್ಚರವಾಗಿರಿ, ನಂಬಿಕೆಯಲ್ಲಿ ದೃಢವಾಗಿ ನಿಲ್ಲಿರಿ’

3. ತಮ್ಮ ಧಣಿಯು ಒಂದು ಮದುವೆಯಿಂದ ಹಿಂದಿರುಗಿ ಬರುವುದಕ್ಕಾಗಿ ಕಾಯುತ್ತಿರುವ ಆಳುಗಳ ದೃಷ್ಟಾಂತವನ್ನು ಉಪಯೋಗಿಸುತ್ತಾ, ಎಚ್ಚರವಾಗಿರುವುದರ ಮಹತ್ವವನ್ನು ಯೇಸು ಹೇಗೆ ತೋರಿಸಿದನು?

3 ಲೂಕನ ಸುವಾರ್ತೆಯಲ್ಲಿ ದಾಖಲಿಸಲ್ಪಟ್ಟಿರುವ ಮಾತುಗಳಲ್ಲಿ ಯೇಸು, ಕ್ರೈಸ್ತರನ್ನು ತಮ್ಮ ಧಣಿಯು ಒಂದು ಮದುವೆಯಿಂದ ಹಿಂದಿರುಗಿ ಬರುವುದಕ್ಕಾಗಿ ಕಾಯುತ್ತಿರುವ ಆಳುಗಳಿಗೆ ಹೋಲಿಸುತ್ತಾನೆ. ಅವನು ಆಗಮಿಸುವಾಗ ತಾವು ಎಚ್ಚರವಾಗಿದ್ದು, ಅವನನ್ನು ಬರಮಾಡಿಕೊಳ್ಳಲು ಸಿದ್ಧರಾಗಿರುವಂತೆ ಅವರು ಜಾಗರೂಕರಾಗಿರುವ ಅಗತ್ಯವಿದೆ. ಅದೇ ರೀತಿಯಲ್ಲಿ, ಯೇಸು ಹೇಳಿದ್ದು: “ನೀವು ಸಹ ಸಿದ್ಧವಾಗಿರ್ರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.” (ಲೂಕ 12:40) ಅನೇಕ ವರ್ಷಗಳಿಂದ ಯೆಹೋವನ ಸೇವೆಮಾಡಿರುವ ಕೆಲವರು, ನಾವು ಜೀವಿಸುತ್ತಿರುವ ಸಮಯದ ಕುರಿತಾದ ತುರ್ತು ಪ್ರಜ್ಞೆಯನ್ನು ಕಳೆದುಕೊಳ್ಳಬಹುದು. ಅಂತ್ಯ ಬರಲಿಕ್ಕಾಗಿ ಇನ್ನೂ ಬಹಳಷ್ಟು ಸಮಯವಿದೆ ಎಂಬ ತೀರ್ಮಾನಕ್ಕೂ ಅವರು ಬರಬಹುದು. ಆದರೆ ಆ ರೀತಿಯ ಯೋಚನೆಗಳು ಆತ್ಮಿಕ ವಿಷಯಗಳಿಂದ ನಮ್ಮ ಗಮನವನ್ನು ಬೇರೆ ಕಡೆಗೆ ತಿರುಗಿಸಿ, ನಮ್ಮನ್ನು ಆತ್ಮಿಕವಾಗಿ ತೂಕಡಿಸುವಂತೆ ಮಾಡಸಾಧ್ಯವಿರುವ ಅಪಕರ್ಷಣೆಗಳಾದ ಪ್ರಾಪಂಚಿಕ ಗುರಿಗಳತ್ತ ನಡೆಸಬಲ್ಲವು.​—ಲೂಕ 8:14; 21:​34, 35.

4. ಯಾವ ಮನವರಿಕೆಯು ನಾವು ಎಚ್ಚರವಾಗಿರುವಂತೆ ನಮ್ಮನ್ನು ಪ್ರಚೋದಿಸುವುದು, ಮತ್ತು ಯೇಸು ಇದನ್ನು ಹೇಗೆ ತೋರಿಸಿದನು?

4 ಯೇಸುವಿನ ದೃಷ್ಟಾಂತದಿಂದ ನಾವು ಇನ್ನೊಂದು ಪಾಠವನ್ನು ಕಲಿಯಬಲ್ಲೆವು. ತಮ್ಮ ಧಣಿಯು ಯಾವ ಹೊತ್ತಿನಲ್ಲಿ ಬರುತ್ತಾನೆಂದು ಆ ಆಳುಗಳಿಗೆ ಗೊತ್ತಿರಲಿಲ್ಲವಾದರೂ, ಯಾವ ರಾತ್ರಿ ಬರುತ್ತಾನೆಂದು ಅವರಿಗೆ ಗೊತ್ತಿದ್ದಂತೆ ತೋರುತ್ತದೆ. ತಮ್ಮ ಧಣಿಯು ಬೇರಾವುದೊ ರಾತ್ರಿಯಂದು ಬರಬಹುದೆಂದು ಅವರು ನೆನಸುತ್ತಿದ್ದಲ್ಲಿ, ಆ ಇಡೀ ರಾತ್ರಿ ಎಚ್ಚರದಿಂದಿರುವುದು ಕಷ್ಟಕರವಾಗಿರುತ್ತಿತ್ತು. ಆದರೆ, ಅವನು ಯಾವ ರಾತ್ರಿ ಬರುತ್ತಿದ್ದಾನೆಂಬುದು ಅವರಿಗೆ ಗೊತ್ತಿತ್ತು. ಮತ್ತು ಇದು, ಅವರು ಎಚ್ಚರವಾಗಿರುವಂತೆ ಬಲವಾದ ಪ್ರಚೋದನೆಯನ್ನು ನೀಡಿತು. ತದ್ರೀತಿಯಲ್ಲಿ, ನಾವು ಅಂತ್ಯದ ಸಮಯದಲ್ಲಿ ಜೀವಿಸುತ್ತಿದ್ದೇವೆ ಎಂಬದನ್ನು ಬೈಬಲ್‌ ಪ್ರವಾದನೆಗಳು ಸ್ಪಷ್ಟವಾಗಿ ಪ್ರಕಟಪಡಿಸುತ್ತವೆ. ಆದರೆ ಆ ಅಂತ್ಯವು ಬರುವ ದಿನವನ್ನಾಗಲಿ, ಗಳಿಗೆಯನ್ನಾಗಲಿ ಅವು ತಿಳಿಸುವುದಿಲ್ಲ. (ಮತ್ತಾಯ 24:36) ಅಂತ್ಯವು ಬರಲಿದೆ ಎಂಬ ನಮ್ಮ ನಂಬಿಕೆಯು, ಎಚ್ಚರವಾಗಿರುವಂತೆ ನಮಗೆ ಸಹಾಯಮಾಡುತ್ತದೆ. ಆದರೆ ಯೆಹೋವನ ದಿನವು ನಿಜವಾಗಿಯೂ ಸಮೀಪಿಸಿದೆ ಎಂಬುದು ನಮಗೆ ಮನದಟ್ಟಾಗಿರುವಲ್ಲಿ, ಎಚ್ಚರವಾಗಿರಲು ನಮಗೆ ಇನ್ನೂ ಬಲವಾದ ಪ್ರಚೋದನೆ ಇರುವುದು.​—ಚೆಫನ್ಯ 1:14.

5. ‘ಎಚ್ಚರವಾಗಿರುವ’ ವಿಷಯದಲ್ಲಿ ಪೌಲನು ಕೊಟ್ಟ ಬುದ್ಧಿವಾದಕ್ಕೆ ನಾವು ಹೇಗೆ ಪ್ರತಿಕ್ರಿಯೆ ತೋರಿಸಬಲ್ಲೆವು?

5 ಕೊರಿಂಥದವರಿಗೆ ಪತ್ರವನ್ನು ಬರೆಯುತ್ತಿದ್ದಾಗ ಪೌಲನು ಪ್ರೇರಿಸಿದ್ದು: “ಎಚ್ಚರವಾಗಿರಿ, ಕ್ರಿಸ್ತನಂಬಿಕೆಯಲ್ಲಿ ದೃಢವಾಗಿ ನಿಲ್ಲಿರಿ.” (1 ಕೊರಿಂಥ 16:13) ಹೌದು, ಎಚ್ಚರವಾಗಿರುವುದಕ್ಕೂ ಕ್ರಿಸ್ತನಂಬಿಕೆಯಲ್ಲಿ ದೃಢವಾಗಿ ನಿಲ್ಲುವುದಕ್ಕೂ ಸಂಬಂಧವಿದೆ. ನಾವು ಹೇಗೆ ಎಚ್ಚರವಾಗಿರಬಲ್ಲೆವು? ದೇವರ ವಾಕ್ಯದ ಹೆಚ್ಚು ಗಾಢವಾದ ಜ್ಞಾನವನ್ನು ಪಡೆಯುವ ಮೂಲಕವೇ. (2 ತಿಮೊಥೆಯ 3:​14, 15) ಒಳ್ಳೆಯ ವೈಯಕ್ತಿಕ ಅಧ್ಯಯನದ ರೂಢಿಗಳು ಮತ್ತು ಕ್ರಮವಾದ ಕೂಟದ ಹಾಜರಿಯು, ನಮ್ಮ ನಂಬಿಕೆಯನ್ನು ಬಲಪಡಿಸಲು ಸಹಾಯಮಾಡುತ್ತದೆ ಹಾಗೂ ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿಡುವುದು, ನಮ್ಮ ನಂಬಿಕೆಯ ಒಂದು ಮಹತ್ವಪೂರ್ಣ ಅಂಶವಾಗಿದೆ. ಆದುದರಿಂದ ನಾವು ಈ ವ್ಯವಸ್ಥೆಯ ಅಂತ್ಯವು ತುಂಬ ನಿಕಟವಾಗಿರುವ ಸಮಯದಲ್ಲಿ ಜೀವಿಸುತ್ತಿದ್ದೇವೆಂಬದನ್ನು ತೋರಿಸುವ ಶಾಸ್ತ್ರೀಯ ಪುರಾವೆಯನ್ನು ಆಗಿಂದಾಗ್ಗೆ ಪುನರ್ವಿಮರ್ಶಿಸುವುದು, ಬರಲಿರುವ ಆ ಅಂತ್ಯದ ಕುರಿತಾದ ಪ್ರಮುಖ ಸತ್ಯಗಳನ್ನು ಮರೆಯದಂತೆ ನಮಗೆ ಸಹಾಯಮಾಡುವುದು. * ಬೈಬಲ್‌ ಪ್ರವಾದನೆಯನ್ನು ನೆರವೇರಿಸುತ್ತಿರುವ ಲೋಕದ ಘಟನೆಗಳು ವಿಕಸಿಸುತ್ತಿರುವ ರೀತಿಯನ್ನು ಗಮನಿಸುವುದು ಸಹ ಒಳ್ಳೇದು. ಜರ್ಮನಿಯ ಒಬ್ಬ ಸಹೋದರರು ಬರೆದುದು: “ಪ್ರತಿ ಸಲ ನಾನು ವಾರ್ತೆಗಳನ್ನು ನೋಡುವಾಗ, ಆ ಯುದ್ಧಗಳು, ಭೂಕಂಪಗಳು, ಹಿಂಸಾಚಾರ, ಮತ್ತು ನಮ್ಮ ಭೂಗ್ರಹದ ಮಲಿನಗೊಳಿಸುವಿಕೆಯನ್ನು ವೀಕ್ಷಿಸುವಾಗ, ಅಂತ್ಯವು ಎಷ್ಟು ಹತ್ತಿರವಿದೆ ಎಂಬ ಸಂಗತಿಯನ್ನು ಅದು ಮನಸ್ಸಿಗೆ ಇನ್ನಷ್ಟು ನಾಟಿಸುತ್ತದೆ.”

6. ಸಮಯ ದಾಟಿದಂತೆ ಆತ್ಮಿಕವಾಗಿ ಎಚ್ಚರವಾಗಿರುವ ಸ್ಥಿತಿಯಿಂದ ಜಾರಿಹೋಗುವ ಪ್ರವೃತ್ತಿಯನ್ನು ಯೇಸು ಹೇಗೆ ದೃಷ್ಟಾಂತಿಸಿದನು?

6ಮಾರ್ಕ 13ನೆಯ ಅಧ್ಯಾಯದಲ್ಲಿ, ಯೇಸು ತನ್ನ ಹಿಂಬಾಲಕರಿಗೆ ಎಚ್ಚರವಾಗಿರುವಂತೆ ಕೊಟ್ಟ ಬುದ್ಧಿವಾದದ ಇನ್ನೊಂದು ವೃತ್ತಾಂತವನ್ನು ನೋಡುತ್ತೇವೆ. ಈ ಅಧ್ಯಾಯಕ್ಕನುಸಾರ, ಯೇಸು ಅವರ ಸನ್ನಿವೇಶವನ್ನು, ತನ್ನ ಯಜಮಾನನು ವಿದೇಶ ಪ್ರಯಾಣದಿಂದ ಹಿಂದಿರುಗುವುದಕ್ಕಾಗಿ ಕಾಯುತ್ತಿರುವ ಒಬ್ಬ ಬಾಗಲು ಕಾಯುವವನಿಗೆ ಹೋಲಿಸಿದನು. ತನ್ನ ಯಜಮಾನನು ಯಾವ ತಾಸಿನಲ್ಲಿ ಹಿಂದಿರುಗಿ ಬರುತ್ತಾನೆಂಬುದು ಬಾಗಲು ಕಾಯುವವನಿಗೆ ಗೊತ್ತಿರಲಿಲ್ಲ. ಅವನು ಕೇವಲ ಎಚ್ಚರವಾಗಿರಬೇಕಿತ್ತು ಅಷ್ಟೆ. ಯಜಮಾನನು ಬರಸಾಧ್ಯವಿದ್ದ ನಾಲ್ಕು ಭಿನ್ನ ಜಾವಗಳಿಗೆ ಯೇಸು ಸೂಚಿಸಿದನು. ನಾಲ್ಕನೆಯ ಜಾವವು, ಬೆಳಗ್ಗೆ ಮೂರರಿಂದ ಸೂರ್ಯೋದಯದ ವರೆಗೂ ಇರುತ್ತಿತ್ತು. ಆ ಕೊನೆಯ ಜಾವದಲ್ಲಿ, ಬಾಗಲು ಕಾಯುವವನು ಸುಲಭವಾಗಿ ತೂಕಡಿಸುವಿಕೆಗೆ ವಶನಾಗಸಾಧ್ಯವಿತ್ತು. ಒಬ್ಬ ಶತ್ರುವನ್ನು ಅನಿರೀಕ್ಷಿತವಾಗಿ ವಶಪಡಿಸಿಕೊಳ್ಳಲು, ಸೂರ್ಯೋದಯಕ್ಕಿಂತಲೂ ಒಂದು ತಾಸು ಮುಂಚಿನ ಸಮಯವನ್ನು ಸೈನಿಕರು ಅತ್ಯುತ್ತಮವಾದ ಸಮಯವಾಗಿ ಪರಿಗಣಿಸುತ್ತಾರೆಂದು ಹೇಳಲಾಗುತ್ತದೆ. ತದ್ರೀತಿಯಲ್ಲಿ, ಕಡೇ ದಿವಸಗಳ ಅಂತಿಮ ಭಾಗದಲ್ಲಿ, ನಮ್ಮ ಸುತ್ತಲಿನ ಜಗತ್ತು ಆತ್ಮಿಕಾರ್ಥದಲ್ಲಿ ಗಾಢವಾದ ನಿದ್ರೆಯಲ್ಲಿದೆ. ನಮಗಾದರೊ ಎಚ್ಚರವಾಗಿರಲು ಇದೇ ಅತ್ಯಂತ ಹೆಚ್ಚಿನ ಹೋರಾಟವನ್ನು ಮಾಡಬೇಕಾದ ಸಮಯವಾಗಿರಬಹುದು. (ರೋಮಾಪುರ 13:​11, 12) ಹೀಗಿರುವುದರಿಂದ, ಯೇಸು ತನ್ನ ದೃಷ್ಟಾಂತದಲ್ಲಿ ಪುನಃ ಪುನಃ ಪ್ರೇರಿಸುವುದು: “ನೋಡಿಕೊಳ್ಳಿರಿ, ಜಾಗರೂಕರಾಗಿರಿ. . . . ಎಚ್ಚರವಾಗಿರಿ; . . . ನಾನು ನಿಮಗೆ ಹೇಳಿದ್ದನ್ನು ಎಲ್ಲರಿಗೂ ಹೇಳುತ್ತೇನೆ. ಎಚ್ಚರವಾಗಿರಿ.”​—ಮಾರ್ಕ 13:32-37.

7. ಯಾವ ನೈಜ ಅಪಾಯವು ಇದೆ, ಮತ್ತು ಇದರಿಂದಾಗಿ ಬೈಬಲಿನಲ್ಲಿ ಯಾವ ಉತ್ತೇಜನವನ್ನು ನಾವು ಪದೇ ಪದೇ ಓದುತ್ತೇವೆ?

7 ತನ್ನ ಶುಶ್ರೂಷೆಯ ಸಮಯದಲ್ಲಿ ಹಾಗೂ ತನ್ನ ಪುನರುತ್ಥಾನದ ಬಳಿಕ, ಅನೇಕ ಬಾರಿ ಯೇಸು ಎಚ್ಚತ್ತಿರುವುದರ ಜರೂರಿಯನ್ನು ಉತ್ತೇಜಿಸಿದನು. ವಾಸ್ತವದಲ್ಲಿ, ಶಾಸ್ತ್ರಗಳು ಈ ವಿಷಯಗಳ ವ್ಯವಸ್ಥೆಯ ಅಂತ್ಯಕ್ಕೆ ಸೂಚಿಸುವ ಪ್ರತಿಯೊಂದು ಬಾರಿ, ಎಚ್ಚರವಾಗಿರುವಂತೆ ಅಥವಾ ಜಾಗರೂಕರಾಗಿರುವಂತೆ ಕೊಡಲ್ಪಟ್ಟಿರುವ ಎಚ್ಚರಿಕೆಯನ್ನೂ ನಾವು ನೋಡುತ್ತೇವೆ. * (ಲೂಕ 12:​38, 40; ಪ್ರಕಟನೆ 3:2; 16:​14-16) ಆತ್ಮಿಕ ತೂಕಡಿಸುವಿಕೆಯು ತುಂಬ ನೈಜವಾದೊಂದು ಅಪಾಯವಾಗಿದೆ ಎಂಬುದಂತೂ ಸ್ಪಷ್ಟ. ನಮಗೆಲ್ಲರಿಗೂ ಆ ಎಚ್ಚರಿಕೆಗಳ ಅಗತ್ಯವಿದೆ!​—1 ಕೊರಿಂಥ 10:12; 1 ಥೆಸಲೊನೀಕ 5:​2, 6.

ಎಚ್ಚರವಾಗಿರಲು ಅಸಮರ್ಥರಾದ ಮೂವರು ಅಪೊಸ್ತಲರು

8. ಗೆತ್ಸೇಮನೆ ತೋಟದಲ್ಲಿ ಯೇಸುವಿನ ಮೂವರು ಅಪೊಸ್ತಲರು, ಅವರು ಎಚ್ಚರವಾಗಿರುವಂತೆ ಅವನು ಮಾಡಿದ ವಿನಂತಿಗೆ ಹೇಗೆ ಪ್ರತಿಕ್ರಿಯಿಸಿದರು?

8 ಎಚ್ಚರವಾಗಿರಲು, ಒಳ್ಳೆಯ ಉದ್ದೇಶಕ್ಕಿಂತಲೂ ಹೆಚ್ಚಿನದ್ದರ ಆವಶ್ಯಕತೆಯಿದೆ. ಇದನ್ನು ನಾವು ಪೇತ್ರ, ಯಾಕೋಬ ಮತ್ತು ಯೋಹಾನರ ಮಾದರಿಯಿಂದ ನೋಡಬಲ್ಲೆವು. ಈ ಮೂವರು, ಯೇಸುವನ್ನು ನಿಷ್ಠೆಯಿಂದ ಹಿಂಬಾಲಿಸಿದ ಮತ್ತು ಅವನ ಕಡೆಗೆ ಗಾಢವಾದ ಮಮತೆಯುಳ್ಳ, ಆತ್ಮಿಕ ಮನೋಭಾವದ ಪುರುಷರಾಗಿದ್ದರು. ಹಾಗಿದ್ದರೂ, ಸಾ.ಶ. 33ರ ನೈಸಾನ್‌ 14ರ ರಾತ್ರಿ ಅವರು ಎಚ್ಚರದಿಂದಿರಲು ತಪ್ಪಿಹೋದರು. ಪಸ್ಕಹಬ್ಬವನ್ನು ಆಚರಿಸಿದ ಬಳಿಕ ಮೇಲಂತಸ್ತಿನ ಕೋಣೆಯಿಂದ ಹೊರಟ ಈ ಮೂವರು ಅಪೊಸ್ತಲರು ಯೇಸುವಿನೊಂದಿಗೆ ಗೆತ್ಸೇಮನೆ ತೋಟಕ್ಕೆ ಬಂದರು. ಅಲ್ಲಿ ಯೇಸು ಅವರಿಗೆ ಹೀಗಂದನು: “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ; ನೀವು ಇಲ್ಲೇ ಇದ್ದು ನನ್ನ ಸಂಗಡ ಎಚ್ಚರವಾಗಿರ್ರಿ.” (ಮತ್ತಾಯ 26:38) ಮೂರು ಸಲ ಯೇಸು ಕಟ್ಟಾಸಕ್ತಿಯಿಂದ ತನ್ನ ಸ್ವರ್ಗೀಯ ತಂದೆಗೆ ಪ್ರಾರ್ಥಿಸಿದನು. ಈ ಮೂರು ಸಲವೂ ಅವನು ತನ್ನ ಸ್ನೇಹಿತರ ಬಳಿಗೆ ಬಂದಾಗ, ಅವರು ನಿದ್ದೆಮಾಡುತ್ತಿದ್ದದ್ದನ್ನು ಅವನು ನೋಡಿದನು.​—ಮತ್ತಾಯ 26:​40, 43, 45.

9. ಅಪೊಸ್ತಲರ ತೂಕಡಿಸುವಿಕೆಗೆ ಕಾರಣ ಏನಾಗಿದ್ದಿರಬಹುದು?

9 ಈ ನಂಬಿಗಸ್ತ ಪುರುಷರು ಆ ರಾತ್ರಿಯಂದೇ ಯೇಸುವನ್ನು ನಿರಾಶೆಗೊಳಿಸಿದ್ದೇಕೆ? ಶಾರೀರಿಕ ದಣಿವು ಒಂದಂಶವಾಗಿತ್ತು. ಹೊತ್ತು ಮೀರಿತ್ತು, ಬಹುಶಃ ಮಧ್ಯರಾತ್ರಿ ದಾಟಿತ್ತು ಮತ್ತು ನಿದ್ದೆಯಿಂದ “ಅವರ ಕಣ್ಣುಗಳು ಭಾರವಾಗಿದ್ದವು.” (ಮತ್ತಾಯ 26:43) ಹಾಗಿದ್ದರೂ ಯೇಸು ಹೇಳಿದ್ದು: “ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು.”​—ಮತ್ತಾಯ 26:41.

10, 11. (ಎ) ಯೇಸು ದಣಿದಿದ್ದರೂ, ಗೆತ್ಸೇಮನೆ ತೋಟದಲ್ಲಿ ಎಚ್ಚರವಾಗಿರುವಂತೆ ಅವನಿಗೆ ಯಾವುದು ಸಹಾಯಮಾಡಿತು? (ಬಿ) ಎಚ್ಚರವಾಗಿರುವಂತೆ ಯೇಸು ಕೇಳಿಕೊಂಡಾಗ, ಮೂವರು ಅಪೊಸ್ತಲರಿಗೆ ಏನು ಸಂಭವಿಸಿತೊ ಅದರಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?

10 ನಿಸ್ಸಂದೇಹವಾಗಿಯೂ, ಆ ಐತಿಹಾಸಿಕ ರಾತ್ರಿಯಂದು ಯೇಸು ಸಹ ತುಂಬ ದಣಿದಿದ್ದನು. ಆದರೆ ನಿದ್ದೆಹೋಗುವ ಬದಲು, ತನಗಿದ್ದ ಸ್ವಾತಂತ್ರ್ಯದ ಆ ಅತ್ಯಾವಶ್ಯಕವಾದ ಕೊನೆಯ ಕ್ಷಣಗಳನ್ನು ಅವನು ತೀವ್ರವಾದ ಪ್ರಾರ್ಥನೆಯಲ್ಲಿ ಕಳೆದನು. ಕೆಲವು ದಿನಗಳ ಹಿಂದೆ, ಅವನು ತನ್ನ ಹಿಂಬಾಲಕರಿಗೆ ಪ್ರಾರ್ಥಿಸುವಂತೆ ಉತ್ತೇಜಿಸುತ್ತಾ ಹೇಳಿದ್ದು: “ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ.” (ಲೂಕ 21:36; ಎಫೆಸ 6:18) ನಾವು ಯೇಸುವಿನ ಸಲಹೆಯನ್ನು ಪಾಲಿಸಿ, ಪ್ರಾರ್ಥನೆಯ ವಿಷಯದಲ್ಲಿ ಅವನಿಟ್ಟಿರುವ ಉತ್ತಮ ಮಾದರಿಯನ್ನು ಅನುಸರಿಸುವಲ್ಲಿ, ನಾವು ಯೆಹೋವನಿಗೆ ಮಾಡುವ ಹೃತ್ಪೂರ್ವಕ ಭಿನ್ನಹಗಳು, ನಾವು ಆತ್ಮಿಕವಾಗಿ ಎಚ್ಚರವಾಗಿರುವಂತೆ ಸಹಾಯಮಾಡುವವು.

11 ಸ್ವಲ್ಪ ಸಮಯದೊಳಗೆ ತನ್ನ ದಸ್ತಗಿರಿಯಾಗುವುದು ಮತ್ತು ತಾನು ಮರಣಕ್ಕೆ ಒಪ್ಪಿಸಲ್ಪಡುವೆನೆಂಬುದನ್ನು ಯೇಸು ಗ್ರಹಿಸಿದ್ದನಾದರೂ, ಆ ಸಮಯದಲ್ಲಿ ಅವನ ಶಿಷ್ಯರು ಇದನ್ನು ಗ್ರಹಿಸಿರಲಿಲ್ಲ. ಅವನ ಪರೀಕ್ಷೆಗಳು, ಯಾತನಾ ಕಂಬದ ಮೇಲೆ ಅತಿ ಯಾತನಾಮಯವಾದ ಪರಮಾವಧಿಯನ್ನು ತಲಪಲಿದ್ದವು. ಈ ವಿಷಯಗಳ ಕುರಿತಾಗಿ ಯೇಸು ತನ್ನ ಅಪೊಸ್ತಲರಿಗೆ ಮುಂದಾಗಿಯೇ ಎಚ್ಚರಿಸಿದ್ದನು. ಆದರೆ ಅವನು ಏನು ಹೇಳುತ್ತಿದ್ದನೆಂಬುದು ಅವರಿಗೆ ಅರ್ಥವಾಗಿರಲಿಲ್ಲ. ಆದುದರಿಂದಲೇ, ಅವನು ಎಚ್ಚರದಿಂದಿದ್ದು ಪ್ರಾರ್ಥಿಸುತ್ತಿದ್ದಾಗ ಇವರು ನಿದ್ದೆಹೋದರು. (ಮಾರ್ಕ 14:​27-31; ಲೂಕ 22:​15-18) ಅಪೊಸ್ತಲರ ವಿಷಯದಲ್ಲಿ ಸತ್ಯವಾಗಿದ್ದಂತೆ, ನಮ್ಮ ಶರೀರವೂ ಬಲಹೀನವಾಗಿದೆ ಮತ್ತು ನಮಗಿನ್ನೂ ತಿಳಿದಿರದ ಕೆಲವೊಂದು ವಿಷಯಗಳಿವೆ. ಹಾಗಿದ್ದರೂ, ನಾವೀಗ ಜೀವಿಸುತ್ತಿರುವ ಸಮಯಗಳು ಎಷ್ಟು ತುರ್ತಿನದ್ದಾಗಿವೆ ಎಂಬದನ್ನು ವಿವೇಚಿಸದೆ ಹೋಗುವಲ್ಲಿ, ನಾವು ಸಹ ಆತ್ಮಿಕಾರ್ಥದಲ್ಲಿ ನಿದ್ದೆಹೋಗಬಹುದು. ಜಾಗರೂಕರಾಗಿರುವ ಮೂಲಕ ಮಾತ್ರ ನಾವು ಎಚ್ಚರದಿಂದಿರಬಲ್ಲೆವು.

ಮೂರು ಅತ್ಯಾವಶ್ಯಕ ಗುಣಗಳು

12. ನಾವು ಸ್ವಸ್ಥಚಿತ್ತರಾಗಿರುವುದನ್ನು ಪೌಲನು ಯಾವ ಮೂರು ಗುಣಗಳೊಂದಿಗೆ ಜೋಡಿಸುತ್ತಾನೆ?

12 ನಾವು ನಮ್ಮ ತುರ್ತು ಪ್ರಜ್ಞೆಯನ್ನು ಹೇಗೆ ಕಾಪಾಡಿಕೊಳ್ಳಬಲ್ಲೆವು? ಪ್ರಾರ್ಥನೆಯ ಮಹತ್ವವನ್ನೂ, ಯೆಹೋವನ ದಿನವನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಅಗತ್ಯವನ್ನೂ ನಾವೀಗಾಗಲೇ ಚರ್ಚಿಸಿದ್ದೇವೆ. ಇದಕ್ಕೆ ಕೂಡಿಸುತ್ತಾ, ನಾವು ಬೆಳೆಸಿಕೊಳ್ಳಬೇಕಾದ ಮೂರು ಅತ್ಯಾವಶ್ಯಕ ಗುಣಗಳನ್ನು ಪೌಲನು ತಿಳಿಸುತ್ತಾನೆ. ಅವನಂದದ್ದು: “ನಾವಾದರೋ ಹಗಲಿನವರಾಗಿರಲಾಗಿ ವಿಶ್ವಾಸಪ್ರೀತಿಗಳೆಂಬ ವಜ್ರಕವಚವನ್ನೂ ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ.” (1 ಥೆಸಲೊನೀಕ 5:8) ನಾವು ಆತ್ಮಿಕವಾಗಿ ಎಚ್ಚರವಾಗಿರುವುದರಲ್ಲಿ, ವಿಶ್ವಾಸ, ನಿರೀಕ್ಷೆ ಮತ್ತು ಪ್ರೀತಿಯ ಪಾತ್ರವನ್ನು ನಾವೀಗ ಸಂಕ್ಷಿಪ್ತವಾಗಿ ಪರಿಗಣಿಸೋಣ.

13. ನಮ್ಮನ್ನು ಜಾಗರೂಕರಾಗಿರಿಸುವುದರಲ್ಲಿ ನಂಬಿಕೆಯ ಪಾತ್ರವೇನು?

13 ಯೆಹೋವನು ಅಸ್ತಿತ್ವದಲ್ಲಿದ್ದಾನೆ ಮತ್ತು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ” ಎಂಬ ಅಚಲವಾದ ನಂಬಿಕೆ ನಮಗಿರಬೇಕು. (ಇಬ್ರಿಯ 11:6) ಅಂತ್ಯದ ಕುರಿತಾದ ಯೇಸುವಿನ ಪ್ರವಾದನೆಯ ಪ್ರಾರಂಭದ ಅಂದರೆ ಪ್ರಥಮ ಶತಮಾನದಲ್ಲಿನ ನೆರವೇರಿಕೆಯು, ನಮ್ಮ ಸಮಯದಲ್ಲಿನ ಅದರ ಮಹಾ ನೆರವೇರಿಕೆಯಲ್ಲಿ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ. ಮತ್ತು “[ಪ್ರವಾದನಾ ದರ್ಶನವು] ತಪ್ಪದೇ ನೆರವೇರುವುದು. ಅದು ತಡವಾಗುವುದಿಲ್ಲ” ಎಂದು ನಿಶ್ಚಿತರಾಗಿರುತ್ತಾ, ಯೆಹೋವನ ದಿನಕ್ಕಾಗಿ ಕಾತರದಿಂದ ಎದುರುನೋಡುತ್ತಾ ಇರಲು ನಮ್ಮ ನಂಬಿಕೆಯು ನಮಗೆ ಸಹಾಯಮಾಡುತ್ತದೆ.​—ಹಬಕ್ಕೂಕ 2:3, NW.

14. ನಾವು ಎಚ್ಚರವಾಗಿರಬೇಕಾದರೆ ನಿರೀಕ್ಷೆಯು ಹೇಗೆ ಅತ್ಯಾವಶ್ಯಕವಾಗಿದೆ?

14 ನಮ್ಮ ನಿಶ್ಚಿತ ನಿರೀಕ್ಷೆಯು “ಪ್ರಾಣಕ್ಕೆ ಲಂಗರದ” ಹಾಗಿದ್ದು, ಅದು ನಾವು ದೇವರ ವಾಗ್ದಾನಗಳ ನಿರ್ದಿಷ್ಟ ನೆರವೇರಿಕೆಗಾಗಿ ಕಾಯಬೇಕಾಗಿದ್ದರೂ ಕಷ್ಟಗಳನ್ನು ತಾಳಿಕೊಳ್ಳಲು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. (ಇಬ್ರಿಯ 6:​18, 19) 90ಕ್ಕಿಂತಲೂ ಹೆಚ್ಚು ವರ್ಷ ಪ್ರಾಯದವರಾಗಿರುವ ಮಾರ್ಗರೆಟ್‌ ಎಂಬ ಆತ್ಮಾಭಿಷಿಕ್ತ ಸಹೋದರಿಯು, 70 ವರ್ಷಗಳ ಹಿಂದೆ ದೀಕ್ಷಾಸ್ನಾನ ಪಡೆದುಕೊಂಡರು. ಅವರು ಒಪ್ಪಿಕೊಳ್ಳುವುದು: “ನನ್ನ ಪತಿ 1963ರಲ್ಲಿ ಕಾನ್ಸರ್‌ ರೋಗದಿಂದ ನರಳುತ್ತಿದ್ದಾಗ, ಅಂತ್ಯವು ಬೇಗನೆ ಬಂದಿದ್ದರೆ ಎಷ್ಟು ಒಳ್ಳೇದಿತ್ತೆಂದು ನನಗನಿಸುತ್ತಿತ್ತು. ಆದರೆ ನಾನು ಆಗ ನನ್ನ ಸ್ವಂತ ಅಭಿರುಚಿಗಳ ಬಗ್ಗೆ ಯೋಚಿಸುತ್ತಾ ಇದ್ದೆ ಎಂದು ನನಗೀಗ ಅನಿಸುತ್ತದೆ. ಈ ಕೆಲಸವು ಲೋಕದಲ್ಲೆಲ್ಲಾ ಎಷ್ಟರ ಮಟ್ಟಿಗೆ ವಿಸ್ತರಿಸುವುದೆಂಬುದರ ಕುರಿತಾದ ಕಲ್ಪನೆಯೂ ಆ ಸಮಯದಲ್ಲಿ ನಮಗೆ ಇರಲಿಲ್ಲ. ಈಗಲೂ, ಕೆಲಸವು ಈಗತಾನೇ ಆರಂಭಗೊಳ್ಳುತ್ತಿರುವ ಅನೇಕ ಸ್ಥಳಗಳಿವೆ. ಆದುದರಿಂದ ಯೆಹೋವನು ತಾಳ್ಮೆಯನ್ನು ತೋರಿಸಿದ್ದಕ್ಕಾಗಿ ನಾನು ಸಂತೋಷಪಡುತ್ತೇನೆ.” ಅಪೊಸ್ತಲ ಪೌಲನು ನಮಗೆ ಆಶ್ವಾಸನೆ ನೀಡುವುದು: “ತಾಳ್ಮೆಯಿಂದ ಅನುಭವಸಿದ್ಧಿ ಹುಟ್ಟುತ್ತದೆ, ಅನುಭವದಿಂದ ನಿರೀಕ್ಷಣ ಹುಟ್ಟುತ್ತದೆ. ಈ ನಿರೀಕ್ಷೆಯು ನಮ್ಮ ಆಶೆಯನ್ನು ಭಂಗಪಡಿಸುವದಿಲ್ಲ.”​—ರೋಮಾಪುರ 5:3-5.

15. ನಾವು ತುಂಬ ದೀರ್ಘ ಸಮಯದಿಂದ ಕಾಯುತ್ತಾ ಇರುವಂತೆ ತೋರುವುದಾದರೂ, ಪ್ರೀತಿಯು ನಮ್ಮನ್ನು ಹೇಗೆ ಪ್ರಚೋದಿಸುವುದು?

15 ಕ್ರೈಸ್ತ ಪ್ರೀತಿಯು ಒಂದು ಗಮನಾರ್ಹ ಗುಣವಾಗಿದೆ, ಏಕೆಂದರೆ ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಅದು ನಮ್ಮ ಮೂಲಭೂತ ಪ್ರೇರಣೆಯಾಗಿದೆ. ಯೆಹೋವನ ವೇಳಾಪಟ್ಟಿಯು ಏನೇ ಆಗಿರಲಿ, ನಾವಂತೂ ಆತನನ್ನು ಸೇವಿಸುತ್ತಿರುವುದು ಆತನ ಮೇಲಣ ಪ್ರೀತಿಯಿಂದಾಗಿಯೇ. ಮತ್ತು ನೆರೆಯವರಿಗಾಗಿರುವ ಪ್ರೀತಿಯು ನಾವು ರಾಜ್ಯದ ಸುವಾರ್ತೆಯನ್ನು ಸಾರುವಂತೆ ನಮ್ಮನ್ನು ಪ್ರಚೋದಿಸುತ್ತದೆ. ನಾವಿದನ್ನು ಎಷ್ಟು ದೀರ್ಘ ಸಮಯದ ವರೆಗೆ ಮಾಡುತ್ತಾ ಇರಬೇಕೆಂಬ ವಿಷಯದಲ್ಲಿ ದೇವರ ಚಿತ್ತವು ಏನೇ ಆಗಿರಲಿ, ಮತ್ತು ನಾವು ಅದೇ ಮನೆಗಳಿಗೆ ಪುನಃ ಎಷ್ಟೇ ಸಾರಿ ಹೋಗಬೇಕಾಗಿರಲಿ, ನಾವದನ್ನು ಮಾಡುತ್ತಾ ಇರುವೆವು. ಪೌಲನು ಬರೆದಂತೆ, “ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಇವುಗಳಲ್ಲಿ ದೊಡ್ಡದು ಪ್ರೀತಿಯೇ.” (1 ಕೊರಿಂಥ 13:13) ಪ್ರೀತಿಯೇ ನಾವು ತಾಳಿಕೊಳ್ಳುವಂತೆ ಮತ್ತು ಎಚ್ಚರವಾಗಿ ಉಳಿಯುವಂತೆ ನಮಗೆ ಸಹಾಯಮಾಡುತ್ತದೆ. “[ಪ್ರೀತಿಯು] ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.”​—1 ಕೊರಿಂಥ 13:7, 8.

“ನಿನಗಿರುವದನ್ನು ಹಿಡಿದುಕೊಂಡಿರು”

16. ನಮ್ಮ ಚಟುವಟಿಕೆಯನ್ನು ನಿಧಾನಗೊಳಿಸುವ ಬದಲು ನಾವು ಯಾವ ಮನೋಭಾವವನ್ನು ಬೆಳೆಸಿಕೊಳ್ಳಬೇಕು?

16 ನಾವೀಗ ಜೀವಿಸುತ್ತಿರುವ ಕಾಲವು ಬಹುಮುಖ್ಯವಾದದ್ದಾಗಿದ್ದು, ನಾವೀಗ ಕಡೇ ದಿವಸಗಳ ಕೊನೆ ಭಾಗದಲ್ಲಿದ್ದೇವೆಂಬದನ್ನು ಲೋಕದ ಘಟನೆಗಳು ಸತತವಾಗಿ ಜ್ಞಾಪಕಹುಟ್ಟಿಸುತ್ತಾ ಇವೆ. (2 ತಿಮೊಥೆಯ 3:​1-5) ಇದು, ನಮ್ಮ ಚಟುವಟಿಕೆಯನ್ನು ನಿಧಾನಗೊಳಿಸುವ ಸಮಯವಲ್ಲ ಬದಲಾಗಿ ‘ನಮಗಿರುವದನ್ನು ಹಿಡಿದುಕೊಂಡಿರುವ’ ಸಮಯವಾಗಿದೆ. (ಪ್ರಕಟನೆ 3:11) “ಪ್ರಾರ್ಥನೆಯ ವಿಷಯದಲ್ಲಿ ಎಚ್ಚರವಾಗಿರುವ” ಮೂಲಕ ಮತ್ತು ನಂಬಿಕೆ, ನಿರೀಕ್ಷೆ ಹಾಗೂ ಪ್ರೀತಿಯನ್ನು ಬೆಳೆಸಿಕೊಳ್ಳುವ ಮೂಲಕ, ನಾವು ಆ ಪರೀಕ್ಷೆಯ ಗಳಿಗೆಗಾಗಿ ಸ್ವತಃ ನಮ್ಮನ್ನು ಸಿದ್ಧಪಡಿಸಿಕೊಳ್ಳುವೆವು. (1 ಪೇತ್ರ 4:7, NW) ನಮಗೆ ಕರ್ತನ ಕೆಲಸದಲ್ಲಿ ಮಾಡಲು ಬಹಳಷ್ಟಿದೆ. ದೈವಭಕ್ತಿಯ ಕ್ರಿಯೆಗಳಲ್ಲಿ ಕಾರ್ಯಮಗ್ನರಾಗಿರುವುದು ನಮ್ಮನ್ನು ಪೂರ್ಣವಾಗಿ ಎಚ್ಚೆತ್ತಿರುವ ಸ್ಥಿತಿಯಲ್ಲಿಟ್ಟುಕೊಳ್ಳಲು ಸಹಾಯಮಾಡುವುದು.​—2 ಪೇತ್ರ 3:11.

17. (ಎ) ಸಾಂದರ್ಭಿಕ ಆಶಾಭಂಗಗಳು ನಮ್ಮನ್ನು ಏಕೆ ನಿರುತ್ತೇಜಿಸಬಾರದು? (21ನೆಯ ಪುಟದಲ್ಲಿರುವ ಚೌಕವನ್ನು ನೋಡಿರಿ.) (ಬಿ) ನಾವು ಯೆಹೋವನನ್ನು ಹೇಗೆ ಅನುಕರಿಸಬಲ್ಲೆವು, ಮತ್ತು ಹಾಗೆ ಮಾಡುವವರಿಗಾಗಿ ಯಾವ ಆಶೀರ್ವಾದವು ಕಾದಿದೆ?

17 ಯೆರೆಮೀಯನು ಬರೆದುದು: “ಯೆಹೋವನೇ ನನ್ನ ಪಾಲು, ಆದಕಾರಣ ಆತನನ್ನು ನಿರೀಕ್ಷಿಸುವೆನು ಎಂದು ನನ್ನ ಅಂತರಾತ್ಮವು ಅಂದುಕೊಳ್ಳುತ್ತದೆ. ಯೆಹೋವನು ತನ್ನನ್ನು ನಿರೀಕ್ಷಿಸುವವರಿಗೂ ಹುಡುಕುವವರಿಗೂ ಮಹೋಪಕಾರಿಯಾಗಿದ್ದಾನೆ. ಯೆಹೋವನ ರಕ್ಷಣಕಾರ್ಯವನ್ನು ಎದುರುನೋಡುತ್ತಾ ಶಾಂತವಾಗಿ ಕಾದುಕೊಂಡಿರುವದು ಒಳ್ಳೇದು.” (ಪ್ರಲಾಪಗಳು 3:24-26) ನಮ್ಮಲ್ಲಿ ಕೆಲವರು ಕೇವಲ ಸ್ವಲ್ಪ ಸಮಯದಿಂದ ಕಾದುಕೊಂಡಿದ್ದೇವೆ. ಇನ್ನಿತರರು, ಯೆಹೋವನ ರಕ್ಷಣೆಯನ್ನು ನೋಡಲಿಕ್ಕಾಗಿ ಅನೇಕಾನೇಕ ವರ್ಷಗಳಿಂದ ಕಾದಿದ್ದಾರೆ. ಆದರೆ ಮುಂದಿರುವ ನಿತ್ಯತೆಗೆ ಹೋಲಿಸುವಾಗ, ಈ ಕಾಯುವ ಅವಧಿಯು ಎಷ್ಟು ಚಿಕ್ಕದಾಗಿದೆ! (2 ಕೊರಿಂಥ 4:​16-18) ಯೆಹೋವನ ತಕ್ಕ ಸಮಯಕ್ಕಾಗಿ ನಾವು ಕಾಯುತ್ತಾ ಇರುವಾಗ, ನಾವು ಅತಿ ಪ್ರಾಮುಖ್ಯವಾದ ಕ್ರೈಸ್ತ ಗುಣಗಳನ್ನು ಬೆಳೆಸಿಕೊಳ್ಳಬಹುದು ಮತ್ತು ಇತರರು ಯೆಹೋವನ ತಾಳ್ಮೆಯ ಲಾಭವನ್ನು ಪಡೆದುಕೊಂಡು ಸತ್ಯವನ್ನು ಅಂಗೀಕರಿಸುವಂತೆ ನಾವು ಅವರಿಗೆ ಸಹಾಯಮಾಡಬಹುದು. ಹೀಗಿರುವುದರಿಂದ ನಾವೆಲ್ಲರೂ ಎಚ್ಚರವಾಗಿರೋಣ. ನಾವು ಯೆಹೋವನನ್ನು ಅನುಕರಿಸೋಣ ಮತ್ತು ತಾಳ್ಮೆಯಿಂದಿದ್ದು, ಆತನು ನಮಗೆ ಕೊಟ್ಟಿರುವ ನಿರೀಕ್ಷೆಗಾಗಿ ಕೃತಜ್ಞರಾಗಿರೋಣ. ಮತ್ತು ನಾವು ನಂಬಿಗಸ್ತಿಕೆಯಿಂದ ಜಾಗರೂಕರಾಗಿರುವಾಗ, ನಿತ್ಯ ಜೀವದ ನಿರೀಕ್ಷೆಯನ್ನು ಭದ್ರವಾಗಿ ಹಿಡಿದುಕೊಳ್ಳೋಣ. ಆಗ, ಈ ಪ್ರವಾದನ ವಾಗ್ದಾನಗಳು ನಮಗೂ ಖಂಡಿತವಾಗಿಯೂ ಅನ್ವಯವಾಗುವವು: “[ಯೆಹೋವನು] ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು; ದುಷ್ಟರು ತೆಗೆದುಹಾಕಲ್ಪಡುವದನ್ನು ನೀನು ನೋಡುವಿ.”​—ಕೀರ್ತನೆ 37:34.

[ಪಾದಟಿಪ್ಪಣಿಗಳು]

^ ಪ್ಯಾರ. 5 ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆಂದು ಸೂಚಿಸುವ ಆರು ಸಾಕ್ಷ್ಯಗಳನ್ನು ಪುನರ್ವಿಮರ್ಶಿಸುವುದು ಸಹಾಯಕಾರಿಯಾಗಿರಬಲ್ಲದು. ಅದನ್ನು ಕಾವಲಿನಬುರುಜು ಪತ್ರಿಕೆಯ 2000, ಜನವರಿ 15ರ ಸಂಚಿಕೆಯ 12-13ನೆಯ ಪುಟಗಳಲ್ಲಿ ಕೊಡಲಾಗಿತ್ತು.​—2 ತಿಮೊಥೆಯ 3:1.

^ ಪ್ಯಾರ. 7 “ಎಚ್ಚರವಾಗಿರು” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಕ್ರಿಯಾಪದದ ಕುರಿತು ಮಾತಾಡುತ್ತಾ, ನಿಘಂಟುಕಾರರಾದ ಡಬ್ಲ್ಯೂ. ಇ. ವೈನ್‌ ವಿವರಿಸುವುದೇನೆಂದರೆ, ಅದರ ಅಕ್ಷರಾರ್ಥ ‘ನಿದ್ದೆಯನ್ನು ಹೊಡೆದೋಡಿಸುವುದು’ ಎಂದಾಗಿದೆ ಮತ್ತು ಅದು “ಬರೀ ಜಾಗರಣೆಯಿಂದಿರುವುದನ್ನಲ್ಲ, ಬದಲಾಗಿ ಒಂದು ಕಾರ್ಯವನ್ನು ಮಾಡಲು ತತ್ಪರರಾಗಿರುವವರು ಜಾಗರೂಕರಾಗಿರುವುದನ್ನು ವ್ಯಕ್ತಪಡಿಸುತ್ತದೆ.”

ನೀವು ಹೇಗೆ ಉತ್ತರಿಸುವಿರಿ?

• ಈ ವಿಷಯಗಳ ವ್ಯವಸ್ಥೆಯ ಅಂತ್ಯವು ಸಮೀಪಿಸಿದೆ ಎಂಬ ನಮ್ಮ ನಿಶ್ಚಿತಾಭಿಪ್ರಾಯವನ್ನು ನಾವು ಹೇಗೆ ಬಲಪಡಿಸಬಲ್ಲೆವು?

• ಪೇತ್ರ, ಯಾಕೋಬ ಮತ್ತು ಯೋಹಾನರ ಮಾದರಿಗಳಿಂದ ಏನನ್ನು ಕಲಿಯಸಾಧ್ಯವಿದೆ?

• ಆತ್ಮಿಕವಾಗಿ ಎಚ್ಚರವಾಗಿರುವಂತೆ ಯಾವ ಮೂರು ಗುಣಗಳು ನಮಗೆ ಸಹಾಯಮಾಡುವವು?

• ಇದು ‘ನಮಗಿರುವದನ್ನು ಹಿಡಿದುಕೊಂಡಿರುವ’ ಸಮಯವಾಗಿದೆ ಏಕೆ?

[ಅಧ್ಯಯನ ಪ್ರಶ್ನೆಗಳು]

[ಪುಟ 21ರಲ್ಲಿರುವ ಚೌಕ/ಚಿತ್ರ]

‘ಕಾದುಕೊಂಡಿರುವವನು ಧನ್ಯನು.’​—ದಾನಿಯೇಲ 12:12

ನಿಮ್ಮ ಮನಸ್ಸಿನಲ್ಲಿ ಇದನ್ನು ಊಹಿಸಿಕೊಳ್ಳಿರಿ: ಪಹರೆಕಾಯುವವನೊಬ್ಬನಿಗೆ ತಾನು ಪಹರೆಕಾಯುತ್ತಿರುವ ಕಟ್ಟಡವನ್ನು ಒಬ್ಬ ಕಳ್ಳನು ಕನ್ನಹಾಕಲು ಯೋಜಿಸುತ್ತಿದ್ದಾನೆಂಬ ಶಂಕೆಯಿದೆ. ರಾತ್ರಿ ಸಮಯದಲ್ಲಿ, ಆ ಕಳ್ಳನು ಬಂದಿದ್ದಾನೆಂಬದನ್ನು ಸೂಚಿಸುವ ಯಾವುದೇ ಶಬ್ದಕ್ಕಾಗಿ ಆ ಪಹರೆಕಾಯುವವನು ಕಿವಿನಿಮಿರಿಸಿಕೊಂಡಿರುತ್ತಾನೆ. ತಾಸುಗಳು ಸರಿದಂತೆ, ಅವನು ತನ್ನ ಕಣ್ಣುಗಳನ್ನೂ ಕಿವಿಗಳನ್ನೂ ತೆರೆದಿಡಲು ತನ್ನ ಕೈಲಾದುದೆಲ್ಲವನ್ನೂ ಮಾಡುತ್ತಾನೆ. ಆದರೆ, ಮರಗಳಲ್ಲಿ ಬೀಸುತ್ತಿರುವ ಗಾಳಿಯ ಶಬ್ದ ಇಲ್ಲವೆ ಒಂದು ಬೆಕ್ಕು ಏನನ್ನೊ ಕೆಳಗುರುಳಿಸಿದ್ದರಿಂದಾಗಿ ಉಂಟಾದ ಶಬ್ದದಂಥ ಸುಳ್ಳು ಅಪಾಯಸೂಚನೆಗಳಿಂದ ಅವನು ಹೇಗೆ ಮೋಸಹೋಗಸಾಧ್ಯವಿದೆ ಎಂಬದನ್ನು ನಾವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.​—ಲೂಕ 12:​39, 40.

‘ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಇರುವವರ’ ವಿಷಯದಲ್ಲಿಯೂ ಹೀಗೆಯೇ ಆಗಬಲ್ಲದು. (1 ಕೊರಿಂಥ 1:7) ಯೇಸುವಿನ ಪುನರುತ್ಥಾನವಾದ ಕೂಡಲೆ ಅವನು ‘ಇಸ್ರಾಯೇಲ್‌ ಜನರಿಗೆ ರಾಜ್ಯವನ್ನು ತಿರಿಗಿ ಸ್ಥಾಪಿಸಿಕೊಡುವ’ನೆಂದು ಅಪೊಸ್ತಲರು ನೆನಸಿದ್ದರು. (ಅ. ಕೃತ್ಯಗಳು 1:6) ವರ್ಷಗಳಾನಂತರ, ಯೇಸುವಿನ ಪ್ರತ್ಯಕ್ಷತೆಯು ಭವಿಷ್ಯದಲ್ಲಾಗಲಿದೆ ಎಂಬದನ್ನು ಥೆಸಲೊನೀಕದಲ್ಲಿದ್ದ ಕ್ರೈಸ್ತರಿಗೆ ನೆನಪುಹುಟ್ಟಿಸಬೇಕಾಯಿತು. (2 ಥೆಸಲೊನೀಕ 2:​3, 8) ಯೆಹೋವನ ದಿನದ ಬಗ್ಗೆ ಕೆಲವರಿಗಿದ್ದ ನಿರೀಕ್ಷೆಗಳು ನೆರವೇರದೆ ಹೋದರೂ, ಯೇಸುವಿನ ಆ ಆರಂಭದ ಹಿಂಬಾಲಕರು, ಜೀವಕ್ಕೆ ನಡೆಸುತ್ತಿರುವ ದಾರಿಯನ್ನು ತೊರೆಯುವಂತೆ ಅದು ಮಾಡಲಿಲ್ಲ.​—ಮತ್ತಾಯ 7:13.

ನಮ್ಮ ದಿನದಲ್ಲಿ, ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಆಗಮನವು ತಡವಾಗುತ್ತಾ ಇದೆಯೆಂದು ತೋರುವುದರಿಂದ ಉಂಟಾಗುವ ನಿರಾಶೆಯು, ನಾವು ಎಚ್ಚರವಾಗಿರುವುದನ್ನು ನಿಲ್ಲಿಸುವಂತೆ ಮಾಡಬಾರದು. ಜಾಗರೂಕನಾಗಿರುವ ಪಹರೆಕಾಯುವವನು ಸುಳ್ಳು ಅಪಾಯಸೂಚನೆಯಿಂದ ಮೋಸಹೋಗಬಹುದಾದರೂ, ಅವನು ಎಚ್ಚರವಾಗಿರುವುದನ್ನು ಮುಂದುವರಿಸುತ್ತಾ ಇರಬೇಕು! ಅದು ಅವನ ಕೆಲಸ. ಕ್ರೈಸ್ತರ ವಿಷಯದಲ್ಲೂ ಇದು ಸತ್ಯ.

[ಪುಟ 18ರಲ್ಲಿರುವ ಚಿತ್ರ]

ಯೆಹೋವನ ದಿನವು ಸಮೀಪವಿದೆ ಎಂಬದು ನಿಮಗೆ ಮನದಟ್ಟಾಗಿದೆಯೊ?

[ಪುಟ 19ರಲ್ಲಿರುವ ಚಿತ್ರಗಳು]

ಕೂಟಗಳು, ಪ್ರಾರ್ಥನೆ ಮತ್ತು ಒಳ್ಳೆಯ ಅಧ್ಯಯನ ರೂಢಿಗಳು ನಾವು ಎಚ್ಚರವಾಗಿರುವಂತೆ ನಮಗೆ ಸಹಾಯಮಾಡುತ್ತವೆ

[ಪುಟ 22ರಲ್ಲಿರುವ ಚಿತ್ರ]

ಮಾರ್ಗರೆಟ್‌ಳಂತೆ ನಾವು ತಾಳ್ಮೆಯಿಂದ ಹಾಗೂ ಕ್ರಿಯಾಶೀಲರಾಗಿ ಎಚ್ಚರವಾಗಿರೋಣ