ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಷ್ಟಾನುಭವಿಸುತ್ತಿರುವವರಿಗೆ ಸಾಂತ್ವನ

ಕಷ್ಟಾನುಭವಿಸುತ್ತಿರುವವರಿಗೆ ಸಾಂತ್ವನ

ಕಷ್ಟಾನುಭವಿಸುತ್ತಿರುವವರಿಗೆ ಸಾಂತ್ವನ

ದೇವರು ಕಷ್ಟಾನುಭವವನ್ನು ಏಕೆ ಅನುಮತಿಸಿದ್ದಾನೆಂಬ ಪ್ರಶ್ನೆಯು ಶತಮಾನಗಳಾದ್ಯಂತ ಅನೇಕ ತತ್ತ್ವಜ್ಞಾನಿಗಳನ್ನೂ ದೇವತಾಶಾಸ್ತ್ರಜ್ಞರನ್ನೂ ತಬ್ಬಿಬ್ಬುಗೊಳಿಸಿದೆ. ದೇವರು ಸರ್ವಶಕ್ತನಾಗಿರುವುದರಿಂದ, ಆತನೇ ಈ ಎಲ್ಲ ಕಷ್ಟಾನುಭವಕ್ಕೆ ಸಂಪೂರ್ಣವಾಗಿ ಜವಾಬ್ದಾರನಾಗಿರಬೇಕೆಂದು ಕೆಲವರು ವಾದಿಸಿದ್ದಾರೆ. ದ ಕ್ಲೆಮೆಂಟೈನ್‌ ಹೋಮಿಲಿಸ್‌ ಎಂಬ ಎರಡನೆಯ ಶತಮಾನದ ಒಂದು ಸಂದೇಹಾಸ್ಪದ ಕೃತಿಯ ಲೇಖಕನು, ದೇವರು ಲೋಕವನ್ನು ಎರಡೂ ಕೈಗಳಿಂದ ಆಳುತ್ತಾನೆ ಎಂದು ಹೇಳಿದನು. ತನ್ನ “ಎಡಗೈ” ಆಗಿರುವ ಪಿಶಾಚನಿಂದ ಅವನು ಕಷ್ಟ ಹಾಗೂ ತೊಂದರೆಗಳನ್ನು ಉಂಟುಮಾಡುತ್ತಾನೆ, ಮತ್ತು ತನ್ನ “ಬಲಗೈ” ಆಗಿರುವ ಯೇಸುವಿನ ಮೂಲಕ ಅವನು ರಕ್ಷಣಾಶೀರ್ವಾದಗಳನ್ನು ಕೊಡುತ್ತಾನೆ.

ದೇವರು ಕಷ್ಟಾನುಭವಕ್ಕೆ ಕಾರಣನಲ್ಲದಿದ್ದರೂ ಆತನು ಅದನ್ನು ಅನುಮತಿಸಿದ್ದಾನೆಂಬ ಮಾತನ್ನು ಅಂಗೀಕರಿಸಲಾಗದ ಇತರರು, ಕಷ್ಟಾನುಭವಗಳು ಅಸ್ತಿತ್ವದಲ್ಲೇ ಇಲ್ಲವೆಂದು ಹೇಳುವ ಆಯ್ಕೆಮಾಡಿದ್ದಾರೆ. “ದುಷ್ಟತನ ಎಂಬುದು ಒಂದು ಭ್ರಮೆಯಷ್ಟೇ, ಅದಕ್ಕೆ ನಿಜವಾದ ಆಧಾರವಿಲ್ಲ” ಎಂದು ಮೇರಿ ಬೇಕರ್‌ ಎಡೀ ಬರೆದರು. “ಪಾಪ, ರೋಗ ಮತ್ತು ಮರಣಗಳನ್ನು ಅಸ್ತಿತ್ವದಲ್ಲಿಲ್ಲದಂಥವುಗಳಾಗಿ ಪರಿಗಣಿಸಿದರೆ, ಅವು ಮಾಯವಾಗಿ ಬಿಡುವವು.”​—ಶಾಸ್ತ್ರಗಳ ಕೀಲಿ ಕೈಯೊಂದಿಗೆ ವಿಜ್ಞಾನ ಮತ್ತು ಆರೋಗ್ಯ (ಇಂಗ್ಲಿಷ್‌).

ವಿಶೇಷವಾಗಿ ಮೊದಲನೆಯ ವಿಶ್ವ ಯುದ್ಧದಿಂದ ಹಿಡಿದು ನಮ್ಮೀ ದಿನಗಳ ವರೆಗೆ ಇತಿಹಾಸದಲ್ಲಿ ನಡೆದಿರುವ ಘಟನೆಗಳ ಫಲಿತಾಂಶವಾಗಿ ಅನೇಕರು, ದೇವರು ಕಷ್ಟಾನುಭವವನ್ನು ತಡೆಯಲು ಅಸಮರ್ಥನಾಗಿದ್ದಾನೆಂಬ ತೀರ್ಮಾನಕ್ಕೆ ಬಂದಿದ್ದಾರೆ. “ನನ್ನ ಅಭಿಪ್ರಾಯಕ್ಕನುಸಾರ, ಯೆಹೂದ್ಯರ ಮತ್ತು ಇತರರ ಸಾಮೂಹಿಕ ಹತ್ಯಾಕಾಂಡವು, ದೇವರಿಗೆ ತಕ್ಕಂಥ ಗುಣ ಎಂದೆಣಿಸಲಾಗುತ್ತಿದ್ದ ‘ಸರ್ವಶಕ್ತನು’ ಎಂಬ ಪದವನ್ನು ಆತನಿಗಾಗಿ ಬಳಸುವುದನ್ನೇ ನಿರ್ಮೂಲಗೊಳಿಸಿದೆ,” ಎಂದು ಯೆಹೂದಿ ವಿದ್ವಾಂಸರಾದ ಡೇವಿಡ್‌ ವುಲ್ಫ್‌ ಸಿಲ್ವರ್‌ಮನ್‌ ಬರೆದರು. ಅವರು ಕೂಡಿಸಿ ಹೇಳಿದ್ದು: “ದೇವರನ್ನು ನಾವು ಯಾವುದಾದರೊಂದು ವಿಧದಲ್ಲಿ ಅರ್ಥಮಾಡಿಕೊಳ್ಳಲು ಶಕ್ತರಾಗಿರಬೇಕಾದರೆ, ಆತನ ಒಳ್ಳೇತನವು ದುಷ್ಟತನದ ಅಸ್ತಿತ್ವದೊಂದಿಗೆ ಹೊಂದಿಕೊಂಡುಹೋಗಬೇಕು, ಮತ್ತು ಈ ಮಾತು ಆತನು ಸರ್ವಶಕ್ತನಾಗಿರದಿದ್ದರೆ ಮಾತ್ರ ಸತ್ಯವಾಗಿರಬಲ್ಲದು.”

ಆದರೆ, ಕಷ್ಟಾನುಭವಕ್ಕೆ ದೇವರು ಹೇಗೊ ಕಾರಣನಾಗಿದ್ದಾನೆ, ಅದನ್ನು ತಡೆಗಟ್ಟಲು ಅಶಕ್ತನಾಗಿದ್ದಾನೆ, ಇಲ್ಲವೆ ಕಷ್ಟಾನುಭವವೆಂಬದು ಕೇವಲ ನಮ್ಮ ಮನಸ್ಸಿನ ಊಹೆಯಾಗಿದೆ ಎಂಬ ಹೇಳಿಕೆಗಳು, ಕಷ್ಟಾನುಭವವನ್ನು ಅನುಭವಿಸುತ್ತಿರುವವರಿಗೆ ಯಾವುದೇ ಸಾಂತ್ವನವನ್ನು ನೀಡುವುದಿಲ್ಲ. ಇನ್ನೂ ಪ್ರಾಮುಖ್ಯವಾದ ಸಂಗತಿಯೇನೆಂದರೆ, ಅಂಥ ಭಾವನೆಗಳು ಬೈಬಲಿನ ಪುಟಗಳಲ್ಲಿ ವರ್ಣಿಸಲ್ಪಟ್ಟಿರುವಂಥ ನ್ಯಾಯವಂತ, ಶಕ್ತಿಯುತ, ಹಾಗೂ ಕಾಳಜಿವಹಿಸುವಂಥ ದೇವರ ಗುಣಗಳಿಗೆ ತದ್ವಿರುದ್ಧವಾದ ವಿಷಯಗಳಾಗಿವೆ. (ಯೋಬ 34:​10, 12; ಯೆರೆಮೀಯ 32:17; 1 ಯೋಹಾನ 4:8) ಹಾಗಾದರೆ, ಕಷ್ಟಾನುಭವವನ್ನು ಏಕೆ ಅನುಮತಿಸಲಾಗಿದೆ ಎಂಬ ಕಾರಣದ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ಕಷ್ಟಾನುಭವವು ಹೇಗೆ ಆರಂಭಗೊಂಡಿತು?

ದೇವರು ಮನುಷ್ಯರನ್ನು ಸೃಷ್ಟಿಸಿದ್ದು ಕಷ್ಟಾನುಭವಿಸಲಿಕ್ಕಾಗಿ ಅಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಆತನು ಪ್ರಥಮ ಮಾನವ ಜೋಡಿಯಾಗಿದ್ದ ಆದಾಮಹವ್ವರಿಗೆ ಪರಿಪೂರ್ಣ ದೇಹಮನಸ್ಸುಗಳನ್ನು ದಯಪಾಲಿಸಿದನು, ಮನಮೋಹಕವಾದ ಉದ್ಯಾನವನವನ್ನು ಅವರ ಮನೆಯಾಗಿ ಸಿದ್ಧಪಡಿಸಿದನು ಮತ್ತು ಅರ್ಥಪೂರ್ಣವಾದ ಹಾಗೂ ತೃಪ್ತಿದಾಯಕವಾದ ಕೆಲಸವನ್ನು ಅವರಿಗೆ ಕೊಟ್ಟನು. (ಆದಿಕಾಂಡ 1:​27, 28, 31; 2:8) ಆದರೆ ಅವರ ಈ ಸಂತೋಷವು ನಿರಂತರವಾಗಿ ಮುಂದುವರಿಯಬೇಕಾಗಿದ್ದರೆ, ಅವರು ದೇವರ ಆಳ್ವಿಕೆಯನ್ನೂ, ಯಾವುದು ಒಳ್ಳೇದು ಯಾವುದು ಕೆಟ್ಟದ್ದು ಎಂಬದನ್ನು ನಿರ್ಣಯಿಸುವ ಆತನ ಹಕ್ಕನ್ನೂ ಅಂಗೀಕರಿಸಬೇಕಾಗಿತ್ತು. ಈ ದೈವಿಕ ವಿಶೇಷಾಧಿಕಾರವು, “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರ”ದಿಂದ ಪ್ರತಿನಿಧಿಸಲ್ಪಟ್ಟಿತ್ತು. (ಆದಿಕಾಂಡ 2:17) ಆ ಮರದ ಹಣ್ಣನ್ನು ತಿನ್ನಬಾರದೆಂಬ ದೇವರ ಆಜ್ಞೆಗೆ ವಿಧೇಯರಾಗುವ ಮೂಲಕ ಆದಾಮಹವ್ವರು ಆತನಿಗೆ ತಮ್ಮ ಅಧೀನತೆಯನ್ನು ಪ್ರದರ್ಶಿಸಸಾಧ್ಯವಿತ್ತು. *

ಆದಾಮಹವ್ವರು ದೇವರಿಗೆ ವಿಧೇಯರಾಗಲು ತಪ್ಪಿಹೋದದ್ದು ದುರಂತಕರ ಸಂಗತಿಯಾಗಿತ್ತು. ಸಮಯಾನಂತರ ಪಿಶಾಚನಾಗಿ ಪರಿಣಮಿಸಿದ, ಸೈತಾನನು ಎಂದು ಗುರುತಿಸಲ್ಪಟ್ಟ ಒಬ್ಬ ದಂಗೆಕೋರ ಆತ್ಮಜೀವಿಯು, ದೇವರಿಗೆ ವಿಧೇಯಳಾಗುವುದರಿಂದ ಅವಳ ಹಿತಸಾಧನೆಯಾಗುವುದಿಲ್ಲ ಎಂದು ಹೇಳಿ ಹವ್ವಳ ಮನವೊಲಿಸಿದನು. ಅವನಿಗನುಸಾರ, ದೇವರು ಅವಳಿಂದ ತುಂಬ ಅಪೇಕ್ಷಣೀಯವಾದ ಒಂದು ಸಂಗತಿಯನ್ನು ಅಂದರೆ ಸ್ವಾತಂತ್ರ್ಯವನ್ನು, ಯಾವುದು ಒಳ್ಳೇದು ಮತ್ತು ಯಾವುದು ಕೆಟ್ಟದ್ದು ಎಂಬದನ್ನು ಸ್ವತಃ ಆಯ್ಕೆಮಾಡುವ ಹಕ್ಕನ್ನು ಅವಳಿಂದ ತಡೆದುಹಿಡಿದಿದ್ದನು. ಅವಳು ಆ ಮರದ ಹಣ್ಣನ್ನು ತಿಂದರೆ, ‘ಅವಳ ಕಣ್ಣುಗಳು ತೆರೆಯುವವು; ಅವಳು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವಳಾಗುವಳು’ ಎಂದು ಸೈತಾನನು ಹೇಳಿದನು. (ಆದಿಕಾಂಡ 3:​1-6; ಪ್ರಕಟನೆ 12:9) ಸರ್ವಸ್ವಾತಂತ್ರ್ಯವನ್ನು ಪಡೆಯುವ ಪ್ರತೀಕ್ಷೆಯಿಂದ ಆಕರ್ಷಿತಳಾಗಿ, ಹವ್ವಳು ಆ ನಿಷೇಧಿತ ಹಣ್ಣನ್ನು ತಿಂದಳು ಮತ್ತು ಆದಾಮನೂ ಅದನ್ನೇ ಮಾಡಿದನು.

ಅದೇ ದಿನ, ಆದಾಮಹವ್ವರು ತಮ್ಮ ದಂಗೆಯ ಪರಿಣಾಮಗಳನ್ನು ಅನುಭವಿಸಲಾರಂಭಿಸಿದರು. ದೇವರ ಆಳ್ವಿಕೆಯನ್ನು ತಿರಸ್ಕರಿಸಿದ್ದರಿಂದಾಗಿ, ದೇವರಿಗೆ ಅಧೀನರಾಗಿರುವುದರಿಂದ ಅವರಿಗೆ ಸಿಗುತ್ತಿದ್ದ ಸಂರಕ್ಷಣೆಯೂ ಆಶೀರ್ವಾದಗಳೂ ಇನ್ನಿಲ್ಲವಾದವು. ದೇವರು ಅವರನ್ನು ಪರದೈಸದಿಂದ ತೆಗೆದುಹಾಕಿದನು ಮತ್ತು ಆತನು ಆದಾಮನಿಗೆ ಹೇಳಿದ್ದು: “ನಿನ್ನ ನಿಮಿತ್ತ ಭೂಮಿಗೆ ಶಾಪ ಬಂತು. ನಿನ್ನ ಜೀವಮಾನವೆಲ್ಲಾ ದುಡಿದು ದುಡಿದು ಭೂಮಿಯ ಹುಟ್ಟುವಳಿಯನ್ನು ತಿನ್ನಬೇಕು. ನೀನು ತಿರಿಗಿ ಮಣ್ಣಿಗೆ ಸೇರುವ ತನಕ ಬೆವರಿಡುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು.” (ಆದಿಕಾಂಡ 3:17, 19) ಆದಾಮಹವ್ವರು ರೋಗ, ನೋವು, ವೃದ್ಧಾಪ್ಯ ಮತ್ತು ಮರಣಕ್ಕೆ ತುತ್ತಾದರು. ಅಂದಿನಿಂದ ಕಷ್ಟಾನುಭವವು ಮಾನವ ಅನುಭವದ ಒಂದು ಭಾಗವಾಗಿಬಿಟ್ಟಿತು.​—ಆದಿಕಾಂಡ 5:29.

ವಿವಾದಾಂಶವನ್ನು ಇತ್ಯರ್ಥಗೊಳಿಸುವುದು

ಆದರೆ ಯಾರಾದರೂ ಹೀಗೆ ಕೇಳಬಹುದು: ‘ಆದಾಮಹವ್ವರ ಪಾಪವನ್ನು ದೇವರು ಸುಮ್ಮನೆ ಅಲಕ್ಷಿಸಬಹುದಿತ್ತು ಅಲ್ಲವೆ?’ ಇಲ್ಲ, ಏಕೆಂದರೆ ಆತನು ಹಾಗೆ ಮಾಡುತ್ತಿದ್ದರೆ ಆತನ ಅಧಿಕಾರಕ್ಕಾಗಿದ್ದ ಗೌರವವು ಇನ್ನೂ ಕುಗ್ಗಿಹೋಗಿ, ಭವಿಷ್ಯದಲ್ಲಿನ ದಂಗೆಗಳನ್ನು ಪ್ರೋತ್ಸಾಹಿಸುತ್ತಾ ಇನ್ನೂ ಹೆಚ್ಚಿನ ಕಷ್ಟಾನುಭವಗಳಲ್ಲಿ ಅದು ಪರಿಣಮಿಸುತ್ತಿತ್ತು. (ಪ್ರಸಂಗಿ 8:11) ಇದಕ್ಕೆ ಕೂಡಿಸಿ, ಅಂಥ ಅವಿಧೇಯತೆಯನ್ನು ದೇವರು ಮನ್ನಿಸುತ್ತಿದ್ದಲ್ಲಿ, ಅದು ಆತನನ್ನೇ ಆ ತಪ್ಪಿನಲ್ಲಿ ಒಬ್ಬ ಸಹಭಾಗಿಯಾಗಿ ಮಾಡುತ್ತಿತ್ತು. ಬೈಬಲ್‌ ಬರಹಗಾರನಾದ ಮೋಶೆಯು ನಮಗೆ ಜ್ಞಾಪಕಹುಟ್ಟಿಸುವುದು: “ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.” (ಧರ್ಮೋಪದೇಶಕಾಂಡ 32:4) ತನ್ನ ಸ್ವಂತ ಮೂಲತತ್ತ್ವಗಳಿಗನುಸಾರ ಕಾರ್ಯನಡಿಸಲಿಕ್ಕಾಗಿ, ಆದಾಮಹವ್ವರು ತಮ್ಮ ಅವಿಧೇಯತೆಯ ಫಲಿತಾಂಶಗಳನ್ನು ಅನುಭವಿಸುವಂತೆ ದೇವರು ಅನುಮತಿಸಲೇಬೇಕಾಯಿತು.

ಆ ಪ್ರಥಮ ಮಾನವ ಜೋಡಿಯನ್ನು, ಅವರ ದಂಗೆಯನ್ನು ಚಿತಾಯಿಸಿದಂಥ ಅದೃಶ್ಯ ವ್ಯಕ್ತಿಯಾದ ಸೈತಾನನೊಂದಿಗೆ ದೇವರು ಆ ಕೂಡಲೆ ಏಕೆ ನಾಶಮಾಡಲಿಲ್ಲ? ಹಾಗೆ ಮಾಡುವ ಶಕ್ತಿ ಖಂಡಿತವಾಗಿಯೂ ಆತನಿಗಿತ್ತು. ಹಾಗೆ ಮಾಡುತ್ತಿದ್ದಲ್ಲಿ, ಕಷ್ಟಾನುಭವ ಮತ್ತು ಮರಣದ ಬಾಧ್ಯತೆಯನ್ನು ಪಡೆದಿರುವ ಒಂದು ಸಂತಾನವನ್ನು ಆದಾಮಹವ್ವರು ಹುಟ್ಟಿಸುವ ಪ್ರಮೇಯವೇ ಏಳುತ್ತಿರಲಿಲ್ಲ. ಆದರೆ ದೈವಿಕ ಶಕ್ತಿಯ ಆ ಪ್ರದರ್ಶನವು, ತನ್ನ ಬುದ್ಧಿವಂತ ಸೃಷ್ಟಿಜೀವಿಗಳ ಮೇಲೆ ದೇವರಿಗಿರುವ ಅಧಿಕಾರದ ಹಕ್ಕೊತ್ತಾಯವನ್ನು ಸಾಬೀತುಗೊಳಿಸುತ್ತಿರಲಿಲ್ಲ. ಅಲ್ಲದೆ, ಆದಾಮಹವ್ವರು ಮಕ್ಕಳಿಲ್ಲದೆ ಸಾಯುತ್ತಿದ್ದಲ್ಲಿ, ಅವರ ಪರಿಪೂರ್ಣ ವಂಶಜರೊಂದಿಗೆ ಭೂಮಿಯನ್ನು ತುಂಬಿಸುವ ತನ್ನ ಉದ್ದೇಶವನ್ನು ದೇವರು ಪೂರೈಸಲಾರನೆಂಬ ಸೂಚನೆಯನ್ನು ಅದು ಕೊಡುತ್ತಿತ್ತು. (ಆದಿಕಾಂಡ 1:28) ಮತ್ತು “ದೇವರು ಮಾನವನಂತಿಲ್ಲ . . . ತಾನು ಮಾಡುತ್ತೇನೆಂದು ಹೇಳಿದರೆ, ಅದನ್ನು ಖಂಡಿತ ಮಾಡುವನು. ಯೆಹೋವನು ವಾಗ್ದಾನಮಾಡಿದರೆ, ಅದನ್ನು ನೆರವೇರಿಸುತ್ತಾನೆ.”​—ಅರಣ್ಯಕಾಂಡ 23:19, ಪರಿಶುದ್ಧ ಬೈಬಲ್‌. *

ತನ್ನ ಪರಿಪೂರ್ಣ ವಿವೇಕಕ್ಕನುಸಾರ, ಯೆಹೋವ ದೇವರು ಪರಿಮಿತ ಸಮಯದ ವರೆಗೆ ಆ ದಂಗೆಯು ಮುಂದುವರಿಯಲು ಅನುಮತಿಸುವಂತೆ ನಿರ್ಧರಿಸಿದನು. ದೇವರಿಂದ ಸ್ವತಂತ್ರರಾಗುವುದರ ಮೂಲಕ ಬರುವ ಫಲಿತಾಂಶಗಳನ್ನು ಅನುಭವಿಸಲು ಆ ದಂಗೆಕೋರರಿಗೆ ಸಾಕಷ್ಟು ಸಮಯಾವಕಾಶವು ಸಿಗಲಿತ್ತು. ಮಾನವಕುಲಕ್ಕೆ ದೈವಿಕ ಮಾರ್ಗದರ್ಶನದ ಅಗತ್ಯವಿದೆ ಮತ್ತು ದೇವರ ಆಳ್ವಿಕೆಯು ಮಾನವನ ಅಥವಾ ಸೈತಾನನ ಆಳ್ವಿಕೆಗಿಂತಲೂ ಶ್ರೇಷ್ಠವಾಗಿದೆ ಎಂಬದನ್ನು ಇತಿಹಾಸವು ಸಂದೇಹರಹಿತವಾದ ರೀತಿಯಲ್ಲಿ ಪ್ರದರ್ಶಿಸಲಿತ್ತು. ಅದೇ ಸಮಯದಲ್ಲಿ, ಭೂಮಿಗಾಗಿ ದೇವರಿಗಿದ್ದ ಮೂಲ ಉದ್ದೇಶವು ಪೂರೈಸಲ್ಪಡುವಂತೆ ಆತನು ಕ್ರಮಗಳನ್ನು ಕೈಗೊಂಡನು. ‘ಸೈತಾನನ ತಲೆಯನ್ನು ಜಜ್ಜಿ,’ ಅವನ ದಂಗೆ ಮತ್ತು ಅದರ ಹಾನಿಕಾರಕ ಪರಿಣಾಮಗಳನ್ನು ಒಂದೇ ಸಾರಿ ನಿರ್ಮೂಲಗೊಳಿಸುವ ಒಂದು “ಸಂತಾನವು” ಬರುವುದೆಂದು ಆತನು ವಾಗ್ದಾನಿಸಿದನು.​—ಆದಿಕಾಂಡ 3:15.

ಯೇಸು ಕ್ರಿಸ್ತನು ಆ ವಾಗ್ದತ್ತ ಸಂತಾನವಾಗಿದ್ದನು. “ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರವೇ ದೇವಕುಮಾರನು ಪ್ರತ್ಯಕ್ಷನಾದನು” ಎಂದು ನಾವು 1 ಯೋಹಾನ 3:8ರಲ್ಲಿ ಓದುತ್ತೇವೆ. ತನ್ನ ಪರಿಪೂರ್ಣ ಮಾನವ ಜೀವವನ್ನು ಅರ್ಪಿಸಿ, ಆದಾಮನ ಮಕ್ಕಳು ಬಾಧ್ಯತೆಯಾಗಿ ಪಡೆದಂಥ ಪಾಪಮರಣಗಳಿಂದ ಅವರನ್ನು ಬಿಡಿಸಲಿಕ್ಕಾಗಿ ಬೇಕಾಗಿದ್ದ ಪ್ರಾಯಶ್ಚಿತ್ತ ಬೆಲೆಯನ್ನು ತೆರುವ ಮೂಲಕ ಅವನಿದನ್ನು ಮಾಡಿದನು. (ಯೋಹಾನ 1:29; 1 ತಿಮೊಥೆಯ 2:​5, 6) ಯೇಸುವಿನ ಯಜ್ಞದಲ್ಲಿ ನಿಜವಾಗಿಯೂ ನಂಬಿಕೆಯನ್ನಿಡುವವರಿಗೆ, ಕಷ್ಟಾನುಭವಗಳಿಂದ ಶಾಶ್ವತವಾದ ಉಪಶಮನವು ವಾಗ್ದಾನಿಸಲ್ಪಟ್ಟಿದೆ. (ಯೋಹಾನ 3:16; ಪ್ರಕಟನೆ 7:17) ಇದು ಯಾವಾಗ ಸಂಭವಿಸುವುದು?

ಕಷ್ಟಾನುಭವಕ್ಕೆ ಅಂತ್ಯ

ದೇವರ ಅಧಿಕಾರದ ತಿರಸ್ಕರಿಸುವಿಕೆಯು, ವರ್ಣಿಸಲಸಾಧ್ಯವಾದಷ್ಟು ಕಷ್ಟಾನುಭವವನ್ನು ಉಂಟುಮಾಡಿದೆ. ಹೀಗಿರುವುದರಿಂದ, ಮಾನವರ ಕಷ್ಟಾನುಭವವನ್ನು ಅಂತ್ಯಗೊಳಿಸಲು ಮತ್ತು ಭೂಮಿಗಾಗಿದ್ದ ತನ್ನ ಮೂಲ ಉದ್ದೇಶವನ್ನು ಪೂರೈಸಲು ದೇವರು ತನ್ನ ಅಧಿಕಾರದ ವಿಶೇಷವಾದ ಅಭಿವ್ಯಕ್ತಿಯನ್ನು ಉಪಯೋಗಿಸಬೇಕೆಂಬದು ಯಥೋಚಿತ. “ಪರಲೋಕದಲ್ಲಿರುವ ನಮ್ಮ ತಂದೆಯೇ, . . . ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ಯೇಸು ತನ್ನ ಹಿಂಬಾಲಕರಿಗೆ ಪ್ರಾರ್ಥಿಸುವಂತೆ ಕಲಿಸಿದಾಗ, ಈ ದೈವಿಕ ಏರ್ಪಾಡಿನ ಕುರಿತು ಅವನು ಹೇಳಿದನು. (ಓರೆ ಅಕ್ಷರಗಳು ನಮ್ಮವು.)​—ಮತ್ತಾಯ 6:9, 10.

ತಮ್ಮ ಸ್ವಂತ ಸರಕಾರಗಳನ್ನು ಪ್ರಯೋಗಿಸಿ ನೋಡಲು ಮಾನವರಿಗೆ ದೇವರು ಅನುಮತಿಸಿರುವ ಸಮಯವು ಇನ್ನೇನು ಅಂತ್ಯಗೊಳ್ಳಲಿದೆ. ಬೈಬಲ್‌ ಪ್ರವಾದನೆಯನ್ನು ನೆರವೇರಿಸುತ್ತಾ, ಆತನ ರಾಜ್ಯವು 1914ರಲ್ಲಿ ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿತು, ಮತ್ತು ಯೇಸು ಕ್ರಿಸ್ತನು ಅದರ ರಾಜನಾದನು. * ಬೇಗನೆ, ಅದು ಎಲ್ಲಾ ಮಾನವ ಸರಕಾರಗಳನ್ನು ಭಂಗಪಡಿಸಿ ನಿರ್ನಾಮಮಾಡುವುದು.​—ದಾನಿಯೇಲ 2:44.

ಯೇಸು ಸಂಕ್ಷಿಪ್ತಾವಧಿಯ ತನ್ನ ಭೂಶುಶ್ರೂಷೆಯ ಸಮಯದಲ್ಲಿ, ದೈವಿಕ ಆಳ್ವಿಕೆಯ ಪುನಸ್ಸ್ಥಾಪನೆಯು ಮಾನವಜಾತಿಗೆ ತರಲಿದ್ದ ಆಶೀರ್ವಾದಗಳ ಮುನ್ನೋಟವನ್ನು ನೀಡಿದನು. ಮಾನವ ಸಮಾಜದಲ್ಲಿ ಬಡವರೂ, ಭೇದಭಾವಕ್ಕೆ ಗುರಿಯಾದವರೂ ಆಗಿದ್ದ ಸದಸ್ಯರಿಗಾಗಿ ಯೇಸು ಕರುಣೆಯನ್ನು ತೋರಿಸಿದನೆಂಬ ಪ್ರಮಾಣವನ್ನು ಸುವಾರ್ತಾ ಪುಸ್ತಕಗಳು ಒದಗಿಸುತ್ತವೆ. ಅವನು ಅಸ್ವಸ್ಥರನ್ನು ಗುಣಪಡಿಸಿದನು, ಹಸಿದಿದ್ದವರಿಗೆ ಉಣಿಸಿದನು, ಮತ್ತು ಸತ್ತವರನ್ನು ಪುನರುತ್ಥಾನಗೊಳಿಸಿದನು. ಪ್ರಾಕೃತಿಕ ಶಕ್ತಿಗಳು ಸಹ ಅವನ ಮಾತಿಗೆ ವಿಧೇಯವಾದವು. (ಮತ್ತಾಯ 11:5; ಮಾರ್ಕ 4:​37-39; ಲೂಕ 9:​11-16) ಎಲ್ಲಾ ವಿಧೇಯ ಮಾನವಕುಲವು ಪ್ರಯೋಜನಹೊಂದುವಂತೆ, ಯೇಸು ತನ್ನ ಪ್ರಾಯಶ್ಚಿತ್ತ ಯಜ್ಞದ ಶುದ್ಧೀಕರಿಸುವ ಪರಿಣಾಮವನ್ನು ಉಪಯೋಗಿಸುವಾಗ, ಅವನು ಏನನ್ನು ಸಾಧಿಸುವನು ಎಂಬದನ್ನು ಊಹಿಸಿಕೊಳ್ಳಿ! ಕ್ರಿಸ್ತನ ಆಳ್ವಿಕೆಯ ಮುಖಾಂತರ, ದೇವರು “[ಮಾನವಜಾತಿಯ] ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ” ಎಂದು ಬೈಬಲ್‌ ವಾಗ್ದಾನಿಸುತ್ತದೆ.​—ಪ್ರಕಟನೆ 21:4.

ಕಷ್ಟಾನುಭವಿಸುತ್ತಿರುವವರಿಗೆ ಸಾಂತ್ವನ

ನಮ್ಮ ಪ್ರೀತಿಭರಿತ ಮತ್ತು ಸರ್ವಶಕ್ತ ದೇವರಾದ ಯೆಹೋವನು ನಮ್ಮ ಕುರಿತು ಕಾಳಜಿವಹಿಸುತ್ತಾನೆ ಮತ್ತು ಅತಿ ಬೇಗನೆ ಮಾನವಕುಲಕ್ಕೆ ಉಪಶಮನವನ್ನು ತರುವನೆಂಬ ತಿಳಿವಳಿಕೆಯು ಎಷ್ಟು ಉತ್ತೇಜನದಾಯಕವಾಗಿದೆ! ಸಾಮಾನ್ಯವಾಗಿ, ಗಂಭೀರವಾಗಿ ಅಸ್ವಸ್ಥನಾಗಿರುವ ಒಬ್ಬ ರೋಗಿಯು, ಅವನನ್ನು ಗುಣಪಡಿಸುವಂಥ ಚಿಕಿತ್ಸೆಯು ಎಷ್ಟೇ ವೇದನಾಭರಿತವಾಗಿದ್ದರೂ, ಆ ಚಿಕಿತ್ಸೆಯನ್ನು ಸ್ವೀಕರಿಸಲು ಅವನು ಸಿದ್ಧನಿರುತ್ತಾನೆ. ಅದೇ ರೀತಿಯಲ್ಲಿ, ದೇವರು ವಿಷಯಗಳನ್ನು ನಿರ್ವಹಿಸುವಂಥ ರೀತಿಯು ನಿತ್ಯ ಆಶೀರ್ವಾದಗಳನ್ನು ತರುವುದೆಂದು ನಮಗೆ ತಿಳಿದಿರುವಲ್ಲಿ, ನಮ್ಮ ಮುಂದೆ ಯಾವುದೇ ತಾತ್ಕಾಲಿಕ ಕಷ್ಟಗಳು ಬಂದರೂ ಅದನ್ನು ತಾಳಿಕೊಳ್ಳುವಂತೆ ಆ ತಿಳಿವಳಿಕೆಯು ನಮಗೆ ಸಹಾಯಮಾಡಬಲ್ಲದು.

ಹಿಂದಿನ ಲೇಖನದಲ್ಲಿ ತಿಳಿಸಲ್ಪಟ್ಟಿದ್ದ ರಿಕಾರ್ಡೊ, ಬೈಬಲ್‌ ಪ್ರವಾದನೆಗಳಿಂದ ಸಾಂತ್ವನವನ್ನು ಪಡೆದುಕೊಳ್ಳಲು ಕಲಿತಿರುವ ಒಬ್ಬ ವ್ಯಕ್ತಿಯಾಗಿದ್ದಾನೆ. ಅವನು ಮರುಜ್ಞಾಪಿಸಿಕೊಳ್ಳುವುದು: “ನನ್ನ ಹೆಂಡತಿಯ ಮರಣದ ನಂತರ, ನನಗೆ ಎಲ್ಲರಿಂದಲೂ ದೂರವಿರಲು ತುಂಬ ಮನಸ್ಸಾಗುತ್ತಿತ್ತು. ಆದರೆ ಹೀಗೆ ಮಾಡುವುದು ನನ್ನ ಹೆಂಡತಿಯನ್ನು ವಾಪಸ್ಸು ತರಲಾರದು, ಬದಲಿಗೆ ನನ್ನ ಭಾವನಾತ್ಮಕ ಸ್ಥಿತಿಯನ್ನು ಇನ್ನೂ ಕೆಡಿಸುವುದೆಂದು ನನಗೆ ಬೇಗನೆ ಅರಿವಾಯಿತು.” ಹಾಗೆ ಮಾಡುವ ಬದಲು ರಿಕಾರ್ಡೊ, ಕ್ರೈಸ್ತ ಕೂಟಗಳಿಗೆ ಹಾಜರಾಗುವ ಮತ್ತು ಇತರರೊಂದಿಗೆ ಬೈಬಲಿನ ಸಂದೇಶವನ್ನು ಹಂಚಿಕೊಳ್ಳುವ ತನ್ನ ನಿಯತಕ್ರಮಕ್ಕೆ ಎಂದಿನಂತೆ ಅಂಟಿಕೊಂಡನು. “ನಾನು ಯೆಹೋವನ ಪ್ರೀತಿಪರ ಬೆಂಬಲವನ್ನು ಅನುಭವಿಸಿ, ತೀರ ಚಿಕ್ಕದಾಗಿ ತೋರಿದಂಥ ವಿಷಯಗಳಲ್ಲೂ ಆತನು ನನ್ನ ಪ್ರಾರ್ಥನೆಗಳನ್ನು ಉತ್ತರಿಸಿದ್ದನ್ನು ಗಮನಿಸಿದಂತೆ ನಾನು ಆತನಿಗೆ ಇನ್ನೂ ಆಪ್ತನಾದೆ” ಎಂದು ರಿಕಾರ್ಡೊ ಹೇಳುತ್ತಾನೆ. “ದೇವರ ಪ್ರೀತಿಯ ಈ ಅರಿವು ತಾನೇ, ನಾನು ನಿಶ್ಚಯವಾಗಿಯೂ ಹಿಂದೆಂದೂ ಅನುಭವಿಸಿರದಂಥ ಈ ಅತ್ಯಂತ ಆಘಾತಕರ ಪರೀಕ್ಷೆಯನ್ನು ತಾಳಿಕೊಳ್ಳಲು ನನ್ನನ್ನು ಶಕ್ತನನ್ನಾಗಿಸಿತು.” ಅವನು ಒಪ್ಪಿಕೊಳ್ಳುವುದು: “ನನ್ನ ಪತ್ನಿಯ ಅನುಪಸ್ಥಿತಿಯು ನನ್ನನ್ನು ಈಗಲೂ ತುಂಬ ಕಾಡುತ್ತದಾದರೂ, ಯೆಹೋವನು ಏನನ್ನು ಸಂಭವಿಸುವಂತೆ ಅನುಮತಿಸುತ್ತಾನೊ ಅದು ನಮಗೆ ಶಾಶ್ವತವಾದ ಹಾನಿಯನ್ನು ಮಾಡಲಾರದೆಂಬದನ್ನು ನಾನು ದೃಢವಾಗಿ ನಂಬುತ್ತೇನೆ.”

ರಿಕಾರ್ಡೊ ಮತ್ತು ಇತರ ಲಕ್ಷಾಂತರ ಜನರಂತೆ ನೀವು ಸಹ, ಮಾನವಕುಲದ ಸದ್ಯದ ಕಷ್ಟಾನುಭವವನ್ನು ‘ಯಾರೂ ಜ್ಞಾಪಿಸಿಕೊಳ್ಳದ, ಅದು ನೆನಪಿಗೂ ಬಾರದಿರುವ’ ಸಮಯಕ್ಕಾಗಿ ಹಂಬಲಿಸುತ್ತೀರೊ? (ಯೆಶಾಯ 65:17) ನೀವು ಬೈಬಲಿನ ಈ ಮುಂದಿನ ಬುದ್ಧಿವಾದವನ್ನು ಅನುಸರಿಸಿದರೆ, ದೇವರ ರಾಜ್ಯದ ಆಶೀರ್ವಾದಗಳು ನಿಮಗೆ ನಿಲುಕುತ್ತವೆ ಎಂಬ ಆಶ್ವಾಸನೆ ನಿಮಗಿರಲಿ: “ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ.”​—ಯೆಶಾಯ 55:6.

ನೀವಿದನ್ನು ಮಾಡುವಂತೆ ಸಹಾಯಮಾಡಲಿಕ್ಕಾಗಿ, ದೇವರ ವಾಕ್ಯದ ವಾಚನ ಮತ್ತು ಜಾಗರೂಕ ಅಧ್ಯಯನಕ್ಕೆ ನಿಮ್ಮ ಜೀವನದಲ್ಲಿ ಪ್ರಮುಖ ಸ್ಥಾನವನ್ನು ಕೊಡಿರಿ. ದೇವರನ್ನೂ ಆತನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿದುಕೊಳ್ಳಿರಿ. ದೇವರ ಮಟ್ಟಗಳಿಗನುಸಾರವಾಗಿ ಜೀವಿಸಲು ಪ್ರಯತ್ನಿಸಿರಿ, ಮತ್ತು ಹೀಗೆ ಆತನ ಪರಮಾಧಿಕಾರಕ್ಕೆ ಅಧೀನರಾಗಲು ಸಿದ್ಧರಿದ್ದೀರೆಂಬದನ್ನು ತೋರಿಸಿರಿ. ಈ ಮಾರ್ಗಕ್ರಮವು, ನೀವು ಈಗ ಎದುರಿಸಬೇಕಾಗಬಹುದಾದ ಪರೀಕ್ಷೆಗಳ ನಡುವೆಯೂ ಹೆಚ್ಚಿನ ಸಂತೋಷವನ್ನು ತರುವುದು. ಮತ್ತು ಭವಿಷ್ಯತ್ತಿನಲ್ಲಿ, ನೀವು ಕಷ್ಟಾನುಭವದಿಂದ ಮುಕ್ತವಾಗಿರುವ ಒಂದು ಲೋಕದಲ್ಲಿ ಜೀವನವನ್ನು ಆನಂದಿಸುವುದರಲ್ಲಿ ಇದು ಫಲಿಸುವುದು.​—ಯೋಹಾನ 17:3.

[ಪಾದಟಿಪ್ಪಣಿಗಳು]

^ ಪ್ಯಾರ. 7 ಆದಿಕಾಂಡ 2:17ಕ್ಕಾಗಿ ಕೊಡಲ್ಪಟ್ಟಿರುವ ಪಾದಟಿಪ್ಪಣಿಯಲ್ಲಿ, ದ ಜೆರೂಸಲೇಮ್‌ ಬೈಬಲ್‌ “ಒಳ್ಳೇದರ ಮತ್ತು ಕೆಟ್ಟದ್ದರ ಜ್ಞಾನ”ವನ್ನು “ಯಾವುದು ಒಳ್ಳೇದು ಮತ್ತು ಯಾವುದು ಕೆಟ್ಟದ್ದು ಎಂಬದನ್ನು ನಿರ್ಣಯಮಾಡುವ ಹಾಗೂ ಅದಕ್ಕನುಸಾರ ಕ್ರಿಯೆಗೈಯುವ ಅಧಿಕಾರ, ತಾನೊಬ್ಬ ಸೃಷ್ಟಿಜೀವಿ ಎಂಬ ತನ್ನ ಸ್ಥಾನಮಾನವನ್ನು ಅಂಗೀಕರಿಸಲು ನಿರಾಕರಿಸುವಂಥ ಪೂರ್ಣ ನೈತಿಕ ಸ್ವಾತಂತ್ರ್ಯದ ಹಕ್ಕುಕೇಳಿಕೆ” ಆಗಿದೆಯೆಂದು ವಿವರಿಸುತ್ತದೆ. ಅದು ಕೂಡಿಸಿ ಹೇಳುವುದು: “ಪ್ರಪ್ರಥಮ ಪಾಪವು, ದೇವರ ಪರಮಾಧಿಕಾರದ ಮೇಲೆ ಮಾಡಲ್ಪಟ್ಟ ಆಕ್ರಮಣವೇ ಆಗಿತ್ತು.”

^ ಪ್ಯಾರ. 12 Taken from the HOLY BIBLE: Kannada EASY-TO-READ VERSION © 1997 by World Bible Translation Centre, Inc. and used by permission.

^ ಪ್ಯಾರ. 17 ಇಸವಿ 1914ರೊಂದಿಗೆ ಸಂಬಂಧಿಸಿರುವ ಬೈಬಲ್‌ ಪ್ರವಾದನೆಯ ವಿಸ್ತೃತ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 10 ಮತ್ತು 11ನೆಯ ಅಧ್ಯಾಯಗಳನ್ನು ನೋಡಿರಿ.

[ಪುಟ 6, 7ರಲ್ಲಿರುವ ಚೌಕ]

ನಾವು ಕಷ್ಟಾನುಭವವನ್ನು ಹೇಗೆ ನಿಭಾಯಿಸಬಹುದು?

“ನಿಮ್ಮ ಚಿಂತೆಯನ್ನೆಲ್ಲಾ [ದೇವರ] ಮೇಲೆ ಹಾಕಿರಿ.” (1 ಪೇತ್ರ 5:7) ನಾವು ಕಷ್ಟಾನುಭವವನ್ನು ತಾಳಿಕೊಳ್ಳುತ್ತಿರುವಾಗ ಇಲ್ಲವೆ ನಮ್ಮ ಪ್ರಿಯ ವ್ಯಕ್ತಿಯೊಬ್ಬರು ಕಷ್ಟಾನುಭವಿಸುತ್ತಿರುವುದನ್ನು ನೋಡುವಾಗ, ಗಲಿಬಿಲಿ, ಕೋಪ ಮತ್ತು ನಮ್ಮ ಕೈಬಿಡಲಾಗಿದೆಯೆಂಬಂಥ ಅನಿಸಿಕೆಗಳು ಬರುವುದು ತೀರ ಸ್ವಾಭಾವಿಕ. ಹಾಗಿದ್ದರೂ, ಯೆಹೋವನು ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾನೆಂಬ ಆಶ್ವಾಸನೆ ನಿಮಗಿರಲಿ. (ವಿಮೋಚನಕಾಂಡ 3:7; ಯೆಶಾಯ 63:9) ಪ್ರಾಚೀನಕಾಲದ ನಂಬಿಗಸ್ತ ಪುರುಷರಂತೆ, ನಾವು ಆತನ ಮುಂದೆ ಮನಬಿಚ್ಚಿ ಮಾತಾಡಿ, ನಮಗಿರುವ ಎಲ್ಲಾ ಶಂಕೆಗಳು ಮತ್ತು ಚಿಂತೆಗಳನ್ನು ವ್ಯಕ್ತಪಡಿಸಬಲ್ಲೆವು. (ವಿಮೋಚನಕಾಂಡ 5:22; ಯೋಬ 10:​1-3; ಯೆರೆಮೀಯ 14:19; ಹಬಕ್ಕೂಕ 1:13) ಆತನು ಅದ್ಭುತಕರವಾಗಿ ನಮ್ಮ ಪರೀಕ್ಷೆಗಳನ್ನು ತೆಗೆದುಹಾಕದೆ ಇರಬಹುದು, ಆದರೆ ನಾವು ಮಾಡುವ ಹೃತ್ಪೂರ್ವಕ ಪ್ರಾರ್ಥನೆಗಳಿಗೆ ಉತ್ತರದೋಪಾದಿ, ನಾವು ಆ ಪರೀಕ್ಷೆಗಳೊಂದಿಗೆ ಹೋರಾಡಲು ಬೇಕಾದ ವಿವೇಕ ಮತ್ತು ಬಲವನ್ನು ಆತನು ದಯಪಾಲಿಸಬಲ್ಲನು.​—ಯಾಕೋಬ 1:​5, 6.

“ನೀವು ಅನುಭವಿಸುತ್ತಿರುವ ಯಾತನಾಮಯ ಪರೀಕ್ಷೆಯನ್ನು ನಿಮಗೆ ವಿಚಿತ್ರವಾದ ಏನೋ ಸಂಭವಿಸುತ್ತಿದೆಯೋ ಎಂಬಂತೆ ನೋಡಿ ಆಶ್ಚರ್ಯಪಡಬೇಡಿರಿ.” (1 ಪೇತ್ರ 4:​12, ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌) ಪೇತ್ರನು ಇಲ್ಲಿ ಹಿಂಸೆಯ ಕುರಿತಾಗಿ ಮಾತಾಡುತ್ತಿದ್ದಾನೆ, ಆದರೆ ಅವನ ಮಾತುಗಳು ಒಬ್ಬ ವಿಶ್ವಾಸಿಯು ತಾಳಿಕೊಳ್ಳುತ್ತಿರಬಹುದಾದ ಯಾವುದೇ ರೀತಿಯ ಕಷ್ಟಕ್ಕೆ ಸೂಕ್ತವಾಗಿಯೇ ಸಮಾನವಾಗಿ ಅನ್ವಯವಾಗುತ್ತವೆ. ಮಾನವರು ಜೀವನದ ಮೂಲಭೂತ ಆವಶ್ಯಕತೆಗಳ ಅಭಾವ, ಅಸ್ವಸ್ಥತೆ ಮತ್ತು ಪ್ರಿಯ ಜನರ ನಷ್ಟವನ್ನು ಅನುಭವಿಸುತ್ತಾರೆ. “ಕಾಲ ಮತ್ತು ಮುಂಗಾಣದ ಸಂಭವವು” ಎಲ್ಲರ ಮೇಲೂ ಬಂದೆರಗುತ್ತದೆಂದು ಬೈಬಲ್‌ ಹೇಳುತ್ತದೆ. (ಪ್ರಸಂಗಿ 9:​11, NW) ಸದ್ಯಕ್ಕೆ ಇಂಥ ವಿಷಯಗಳು ಮನುಷ್ಯರ ಪಾಡಾಗಿವೆ. ಇದನ್ನು ಗ್ರಹಿಸುವುದು, ಕಷ್ಟ ಮತ್ತು ಕೇಡು ಸಂಭವಿಸುವಾಗ ಅದರೊಂದಿಗೆ ವ್ಯವಹರಿಸಲು ನಮಗೆ ಸಹಾಯಮಾಡುವುದು. (1 ಪೇತ್ರ 5:9) ಎಲ್ಲದಕ್ಕಿಂತಲೂ ಹೆಚ್ಚಾಗಿ, “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ” ಎಂಬ ಪುನರಾಶ್ವಾಸನೆಯನ್ನು ಜ್ಞಾಪಿಸಿಕೊಳ್ಳುವುದು, ವಿಶೇಷವಾದ ಸಾಂತ್ವನದ ಮೂಲವಾಗಿರುವುದು.​—ಕೀರ್ತನೆ 34:15; ಜ್ಞಾನೋಕ್ತಿ 15:3; 1 ಪೇತ್ರ 3:12.

‘ಕ್ರೈಸ್ತ ನಿರೀಕ್ಷೆಯಲ್ಲಿ ಉಲ್ಲಾಸಿಸಿರಿ.’ (ರೋಮಾಪುರ 12:​12,) ಕಳೆದುಹೋಗಿರುವ ಸಂತೋಷದ ಕುರಿತಾಗಿಯೇ ಯೋಚಿಸುತ್ತಾ ಇರುವ ಬದಲು, ಎಲ್ಲಾ ರೀತಿಯ ಕಷ್ಟಾನುಭವವನ್ನು ಅಂತ್ಯಗೊಳಿಸುವ ವಿಷಯದಲ್ಲಿ ದೇವರು ಮಾಡಿರುವ ವಾಗ್ದಾನದ ಕುರಿತು ನಾವು ಧ್ಯಾನಿಸಸಾಧ್ಯವಿದೆ. (ಪ್ರಸಂಗಿ 7:10) ಈ ಸುಸ್ಥಾಪಿತ ನಿರೀಕ್ಷೆಯು, ತಲೆಯನ್ನು ಕಾಪಾಡುವ ಒಂದು ಶಿರಸ್ತ್ರಾಣದಂತೆ ನಮ್ಮನ್ನು ಕಾಪಾಡುವುದು. ಬದುಕಿನಲ್ಲಿ ಎದುರಾಗುವ ಕೇಡುಗಳ ಗುದ್ದುಗಳನ್ನು ಈ ನಿರೀಕ್ಷೆಯು ಮೃದುಗೊಳಿಸುತ್ತದೆ. ಮತ್ತು ಈ ಕೇಡು ನಮ್ಮ ಮಾನಸಿಕ, ಭಾವನಾತ್ಮಕ ಇಲ್ಲವೆ ಆತ್ಮಿಕ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸದಿರುವುದನ್ನು ಖಚಿತಪಡಿಸಿಕೊಳ್ಳಲು ಸಹಾಯಮಾಡುತ್ತದೆ.​—1 ಥೆಸಲೊನೀಕ 5:8.

[ಪುಟ 5ರಲ್ಲಿರುವ ಚಿತ್ರ]

ಆದಾಮಹವ್ವರು ದೇವರ ಆಳ್ವಿಕೆಯನ್ನು ತಿರಸ್ಕರಿಸಿದರು

[ಪುಟ 7ರಲ್ಲಿರುವ ಚಿತ್ರ]

ಕಷ್ಟಾನುಭವದಿಂದ ಮುಕ್ತವಾಗಿರುವ ಲೋಕವೊಂದನ್ನು ದೇವರು ವಾಗ್ದಾನಿಸುತ್ತಾನೆ