ನನ್ನ ಬದುಕನ್ನೇ ಬದಲಾಯಿಸಿದಂಥ ಒಂದು ಚಿಕ್ಕ ಸಂದೇಶ
ಜೀವನ ಕಥೆ
ನನ್ನ ಬದುಕನ್ನೇ ಬದಲಾಯಿಸಿದಂಥ ಒಂದು ಚಿಕ್ಕ ಸಂದೇಶ
ಐರೀನ್ ಹೋಕ್ಸ್‌ಟೆನ್‌ಬಾಕ್ ಅವರು ಹೇಳಿದಂತೆ
ಇಸವಿ 1972ರ ಒಂದು ಮಂಗಳವಾರ ಸಾಯಂಕಾಲದಂದು ಇದು ಸಂಭವಿಸಿತು. ನಾನಾಗ 16 ವರ್ಷ ಪ್ರಾಯದವಳಾಗಿದ್ದೆ ಮತ್ತು ನೆದರ್ಲೆಂಡ್ಸ್‌ನ ಬ್ರಾಬಂಟ್ ಎಂಬ ಪ್ರಾಂತದಲ್ಲಿರುವ ಐಂಟ್‌ಹೋವನ್ ಎಂಬ ನಗರದಲ್ಲಿ ನನ್ನ ಹೆತ್ತವರೊಂದಿಗೆ ಒಂದು ಧಾರ್ಮಿಕ ಕೂಟಕ್ಕೆ ಹೋಗಿದ್ದೆ. ನನಗಲ್ಲಿ ಭಯವಾಗುತ್ತಾ ಇತ್ತು ಮತ್ತು ನಾನು ಬೇರಾವುದೇ ಸ್ಥಳದಲ್ಲಿ ಇರುತ್ತಿದ್ದರೆ ಎಷ್ಟೋ ಒಳ್ಳೇದಿತ್ತೆಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಇದ್ದೆ. ಆಗಲೇ ಇಬ್ಬರು ಯುವತಿಯರು ನನ್ನ ಕೈಗೆ ಒಂದು ಚಿಕ್ಕ ಚೀಟಿಯನ್ನು ತುರುಕಿದರು. ಅದರಲ್ಲಿ ಈ ಸಂದೇಶವಿತ್ತು: “ಪ್ರಿಯ ಐರೀನ್, ನಾವು ನಿನಗೆ ಸಹಾಯಮಾಡಲು ಸಂತೋಷಪಡುವೆವು.” ಆ ಚೀಟಿಯು ನನ್ನ ಬದುಕನ್ನೇ ಹೇಗೆ ಬದಲಾಯಿಸಲಿದೆ ಎಂಬದರ ಬಗ್ಗೆ ನನಗೆ ಆಗ ಸ್ವಲ್ಪವೂ ತಿಳಿದಿರಲಿಲ್ಲ. ಆದರೆ ಮುಂದೇನಾಯಿತು ಎಂಬದನ್ನು ತಿಳಿಸುವ ಮುಂಚೆ, ನನ್ನ ಹಿನ್ನೆಲೆಯ ಬಗ್ಗೆ ಒಂದಿಷ್ಟನ್ನು ನಿಮಗೆ ಹೇಳುವೆ.
ನಾನು ಹುಟ್ಟಿದ್ದು, ಇಂಡೊನೇಷಿಯಾದ ಬಲೀಟಂಗ್ ಎಂಬ ದ್ವೀಪದಲ್ಲಿ. ಉಷ್ಣವಲಯದ ಆ ದ್ವೀಪದ ಕೆಲವೊಂದು ಶಬ್ದಗಳು, ಅಂದರೆ ಗಾಳಿಯಲ್ಲಿ ಹೊಯ್ದಾಡುತ್ತಿರುವ ತಾಳೆಮರಗಳ ಮರ್ಮರ ಶಬ್ದ, ಹತ್ತಿರದಲ್ಲೇ ಹರಿಯುತ್ತಿದ್ದ ನದಿಯ ಮೊರೆತ, ನಮ್ಮ ಮನೆಯ ಸುತ್ತಲೂ ಆಡುತ್ತಿದ್ದ ಮಕ್ಕಳ ಕಿಲಕಿಲ ನಗು, ಹಾಗೂ ನಮ್ಮ ಮನೆಯಲ್ಲೆಲ್ಲ ತುಂಬಿಕೊಂಡಿದ್ದ ಸಂಗೀತದ ಧ್ವನಿ ನನಗಿನ್ನೂ ಜ್ಞಾಪಕವಿದೆ. 1960ರಲ್ಲಿ ನಾನು ನಾಲ್ಕು ವರ್ಷದವಳಾಗಿದ್ದಾಗ, ನಮ್ಮ ಕುಟುಂಬವು ಇಂಡೊನೇಷಿಯಾದಿಂದ ನೆದರ್ಲೆಂಡ್ಸ್‌ಗೆ ಸ್ಥಳಾಂತರಿಸಿತು. ನಾವು ಹಡಗಿನಲ್ಲಿ ಆ ದೀರ್ಘವಾದ ಪ್ರಯಾಣವನ್ನು ಮಾಡಿದೆವು ಮತ್ತು ನನಗೆ ವಿಶೇಷವಾಗಿ ನೆನಪಿರುವ ಶಬ್ದವು, ನನ್ನೊಂದಿಗೆ ಕೊಂಡೊಯ್ದಿದ್ದ ನನ್ನ ಅಚ್ಚುಮೆಚ್ಚಿನ ಆಟಿಕೆಯದ್ದಾಗಿದೆ. ಅದು ಡೋಲುಗಳಿದ್ದ ಒಂದು ಪುಟ್ಟ ಕೋಡಂಗಿಯಾಗಿತ್ತು. ನಾನು ಏಳು ವರ್ಷದವಳಾಗಿದ್ದಾಗ, ನನಗೆ ಬಂದ ಒಂದು ಕಾಯಿಲೆಯಿಂದಾಗಿ ನನ್ನ ಶ್ರವಣಶಕ್ತಿಯನ್ನು ಕಳೆದುಕೊಂಡೆ, ಮತ್ತು ಅಂದಿನಿಂದ ನಾನು ನನ್ನ ಸುತ್ತಲಿನ ಯಾವುದೇ ಶಬ್ದಗಳನ್ನು ಕೇಳಲು ಶಕ್ತಳಾಗಿಲ್ಲ. ನನ್ನ ಬಳಿ ಈಗ ಉಳಿದಿರುವಂಥದ್ದು ಆ ಶಬ್ದಗಳ ಸ್ಮರಣೆ ಮಾತ್ರ.
ಕಿವುಡಿಯಾಗಿ ಬೆಳೆಯುವುದು
ನನ್ನ ಹೆತ್ತವರ ಪ್ರೀತಿಪರ ಆರೈಕೆಯಿಂದಾಗಿ, ಕಿವುಡಿಯಾಗಿರುವುದರ ಪರಿಣಾಮಗಳು ಏನೆಂಬದನ್ನು ನಾನು ಪೂರ್ಣವಾಗಿ ಗ್ರಹಿಸಲಿಲ್ಲ.
ನಾನು ಚಿಕ್ಕವಳಾಗಿದ್ದಾಗ, ನನ್ನ ದೊಡ್ಡ ಗಾತ್ರದ ಶ್ರವಣಸಾಧನವೂ ನನಗೊಂದು ರೀತಿಯ ಆಟಿಕೆಯಂತಿತ್ತು. ಅದರಿಂದಾಗಿ ನನಗೆ ಹೆಚ್ಚೇನೂ ಸಹಾಯವಾಗಲಿಲ್ಲ. ನೆರೆಹೊರೆಯಲ್ಲಿದ್ದ ಮಕ್ಕಳು ನನ್ನೊಂದಿಗೆ ಮಾತುಸಂಪರ್ಕ ಮಾಡಲಿಕ್ಕಾಗಿ, ಕಾಲ್ನಡಗೆಯ ಪಕ್ಕದಾರಿಗಳಲ್ಲಿ ಉದ್ದುದ್ದ ಸಂಭಾಷಣೆಗಳನ್ನು ಬರೆಯುತ್ತಿದ್ದರು, ಮತ್ತು ನಾನು ನನ್ನ ಸ್ವಂತ ಧ್ವನಿಯನ್ನು ಕೇಳಿಸಿಕೊಳ್ಳಲು ಅಶಕ್ತಳಾಗಿದ್ದರೂ ಬಾಯಿಮಾತಿನ ಮೂಲಕ ಅವರಿಗೆ ಉತ್ತರಿಸುತ್ತಿದ್ದೆ.ನಾನು ಬೆಳೆಯುತ್ತಾ ಹೋದಂತೆ, ನನ್ನ ಸುತ್ತಲಿರುವ ಜನರಿಗಿಂತ ನಾನು ಭಿನ್ನಳಾಗಿದ್ದೇನೆಂಬ ಅರಿವು ನನಗಾಯಿತು. ನನ್ನ ಕಿವುಡುತನದಿಂದಾಗಿ ಕೆಲವರು ನನ್ನನ್ನು ಕೀಟಲೆಮಾಡುವುದನ್ನೂ, ಇನ್ನಿತರರು ನನ್ನಿಂದ ದೂರವಿರುವುದನ್ನೂ ಗಮನಿಸಿದೆ. ನನ್ನನ್ನು ಪ್ರತ್ಯೇಕಿಸಲಾಗುತ್ತಿದೆ ಮತ್ತು ನಾನು ಒಂಟಿಯಾಗಿದ್ದೇನೆಂಬ ಭಾವನೆ ನನ್ನಲ್ಲಿ ಹುಟ್ಟಿಕೊಂಡಿತು. ಕಿವುಡಿಯಾಗಿರುವುದರ ಅರ್ಥ ಏನೆಂಬದನ್ನು ನಾನು ಗ್ರಹಿಸಲಾರಂಭಿಸಿದೆ, ಮತ್ತು ನಾನು ದೊಡ್ಡವಳಾಗುತ್ತಾ ಹೋದಂತೆ, ಕಿವಿಕೇಳಿಸುತ್ತಿದ್ದ ಜನರ ಬಗ್ಗೆ ನನ್ನ ಹೆದರಿಕೆ ಹೆಚ್ಚುತ್ತಾ ಹೋಯಿತು.
ನಾನು ಕಿವುಡರಿಗಾಗಿದ್ದ ಒಂದು ವಿಶೇಷ ಶಾಲೆಗೆ ಹಾಜರಾಗಲು ಸಾಧ್ಯವಾಗುವಂತೆ, ನನ್ನ ಹೆತ್ತವರು ಇಡೀ ಕುಟುಂಬವನ್ನು ಲಿಮ್‌ಬರ್ಗ್ ಪ್ರಾಂತದಲ್ಲಿದ್ದ ಒಂದು ಹಳ್ಳಿಯಿಂದ ಐಂಟ್‌ಹೋವನ್ ನಗರಕ್ಕೆ ಸ್ಥಳಾಂತರಿಸಿದರು. ಅಲ್ಲಿ ನನ್ನ ತಂದೆ ಒಂದು ಉದ್ಯೋಗವನ್ನು ಹುಡುಕತೊಡಗಿದರು, ಮತ್ತು ನನ್ನ ತಮ್ಮಂದಿರು ಹಾಗೂ ಅಕ್ಕಂದಿರು ಒಂದು ಹೊಸ ಶಾಲೆಗೆ ಹೋಗಲಾರಂಭಿಸಿದರು. ನನಗೋಸ್ಕರ ಅವರು ಮಾಡಿದಂಥ ಎಲ್ಲ ಹೊಂದಾಣಿಕೆಗಳಿಗಾಗಿ ನಾನು ಆಭಾರಿಯಾಗಿದ್ದೇನೆ. ಶಾಲೆಯಲ್ಲಿ ನನಗೆ, ನನ್ನ ಧ್ವನಿಯ ಪ್ರಮಾಣವನ್ನು ಮಾರ್ಪಡಿಸುವ ಮತ್ತು ಮಾತುಗಳನ್ನು ಹೆಚ್ಚು ಸ್ಪಷ್ಟವಾಗಿ ಉಚ್ಚರಿಸುವ ವಿಧವನ್ನು ಕಲಿಸಲಾಯಿತು. ಮತ್ತು ಶಿಕ್ಷಕರು ಸಂಕೇತ ಭಾಷೆಯನ್ನು ಉಪಯೋಗಿಸದಿದ್ದರೂ, ನನ್ನ ಸಹಪಾಠಿಗಳು ನನಗದನ್ನು ಕಲಿಸಿದರು.
ನನ್ನದೇ ಆದ ಪ್ರಪಂಚದಲ್ಲಿ
ನಾನು ಬೆಳೆಯುತ್ತಾ ಇದ್ದಂತೆ, ನನ್ನ ಹೆತ್ತವರು ನನ್ನೊಂದಿಗೆ ಸಂವಾದಮಾಡಲು ತುಂಬ ಕಷ್ಟಪಟ್ಟು ಪ್ರಯತ್ನಿಸಿದರು. ಆದರೆ ನಾನು ಅರ್ಥಮಾಡಿಕೊಳ್ಳಲಾಗದ ಅನೇಕ ವಿಷಯಗಳಿದ್ದವು. ಉದಾಹರಣೆಗಾಗಿ, ನನ್ನ ಹೆತ್ತವರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನ ಮಾಡುತ್ತಿದ್ದರೆಂಬದು ನನಗೆ ಅರ್ಥವಾಗಲಿಲ್ಲ. ಆದರೆ ಒಂದು ದಿನ ನಮ್ಮ ಕುಟುಂಬವು, ಬಹಳಷ್ಟು ಜನರು ಕುರ್ಚಿಗಳ ಮೇಲೆ ಕುಳಿತುಕೊಂಡಿದ್ದ ಒಂದು ಸ್ಥಳಕ್ಕೆ ಭೇಟಿ ನೀಡಿದ್ದು ನನಗೆ ಜ್ಞಾಪಕವಿದೆ. ಅವರೆಲ್ಲರೂ ಮುಂದಕ್ಕೆ ನೋಡುತ್ತಾ ಇದ್ದರು, ಕೆಲವೊಮ್ಮೆ ಚಪ್ಪಾಳೆ ತಟ್ಟುತ್ತಿದ್ದರು, ಮತ್ತು ಆಗೊಮ್ಮೆ ಈಗೊಮ್ಮೆ ಎದ್ದುನಿಲ್ಲುತ್ತಿದ್ದರು. ಆದರೆ ಈ ಜನರು ಅದೆಲ್ಲವನ್ನು ಏಕೆ ಮಾಡುತ್ತಿದ್ದರೆಂಬುದು ನನಗೆ ತಿಳಿದಿರಲಿಲ್ಲ. ಬಹಳಷ್ಟು ಸಮಯದ ನಂತರ, ನನಗೆ ತಿಳಿದುಬಂದದ್ದೇನೆಂದರೆ ನಾನು ಆಗ ಯೆಹೋವನ ಸಾಕ್ಷಿಗಳ ಒಂದು ಅಧಿವೇಶನಕ್ಕೆ ಹಾಜರಾಗಿದ್ದೆ. ಐಂಟ್‌ಹೋವನ್ ನಗರದಲ್ಲಿದ್ದ ಒಂದು ಚಿಕ್ಕ ಸಭಾಗೃಹಕ್ಕೂ ನನ್ನ ಹೆತ್ತವರು ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ನಾನು ಹಾಯಾಗಿರುತ್ತಿದ್ದೆ, ಏಕೆಂದರೆ ಎಲ್ಲರೂ ದಯಾಪರರಾಗಿದ್ದರು ಮತ್ತು ನನ್ನ ಕುಟುಂಬವು ಸಂತೋಷದಿಂದಿರುವಂತೆ ತೋರುತ್ತಿತ್ತು. ಆದರೆ ನಾವು ಯಾವಾಗಲೂ ಅಲ್ಲಿಗೆ ಏಕೆ ಹೋಗುತ್ತಿದ್ದೆವೆಂಬುದು ನನಗೆ ಗೊತ್ತಿರಲಿಲ್ಲ. ಆ ಚಿಕ್ಕ ಸಭಾಗೃಹವು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವಾಗಿತ್ತೆಂಬುದು ನನಗೀಗ ತಿಳಿದಿದೆ.
ಅಸಂತೋಷಕರ ಸಂಗತಿಯೇನೆಂದರೆ, ಹಾಜರಿದ್ದವರಲ್ಲಿ ಯಾರೂ ನನಗೆ ಅಲ್ಲಿನ ಕಾರ್ಯಕ್ರಮವನ್ನು ಸಂಕೇತ ಭಾಷೆಯಲ್ಲಿ ತಿಳಿಸಲಿಲ್ಲ. ಅಲ್ಲಿ ಉಪಸ್ಥಿತರಿದ್ದವರು ನನಗೆ ಸಹಾಯಮಾಡಲು ಬಯಸುತ್ತಿದ್ದರೂ, ನನ್ನ ಕಿವುಡುತನದೊಂದಿಗೆ ಹೇಗೆ ವ್ಯವಹರಿಸುವುದೆಂಬದು ಅವರಿಗೆ ಗೊತ್ತಿರಲಿಲ್ಲವೆಂಬ ಸಂಗತಿಯು ನನಗೀಗ ಅರ್ಥವಾಗುತ್ತಿದೆ. ಈ ಕೂಟಗಳಲ್ಲಿ ನನ್ನನ್ನು ಪ್ರತ್ಯೇಕಿಸಲಾಗುತ್ತಿದೆಯೆಂದು ನನಗನಿಸುತ್ತಿದ್ದು, ‘ಇಲ್ಲಿರುವ ಬದಲು ನಾನು ಶಾಲೆಯಲ್ಲಿರುತ್ತಿದ್ದರೆ ಎಷ್ಟೋ ಒಳ್ಳೇದಿತ್ತು’ ಎಂದು ಯೋಚಿಸುತ್ತಿದ್ದೆ. ಆದರೆ ಆ ವಿಚಾರವು ನನ್ನ ಮನಸ್ಸಿನಲ್ಲಿದ್ದಾಗ, ಆ ಇಬ್ಬರು ಯುವತಿಯರು ಒಂದು ಕಾಗದದ ತುಂಡಿನ ಮೇಲೆ ಏನನ್ನೊ ಗೀಚಿ, ಅದನ್ನು ನನಗೆ ದಾಟಿಸಿದರು. ಅದೇ, ಪೀಠಿಕೆಯಲ್ಲಿ ನಾನು ತಿಳಿಸಿದ ಚೀಟಿಯಾಗಿತ್ತು. ಈ ಚೀಟಿಯಲ್ಲಿದ್ದ ಸಂದೇಶವೇ, ನನ್ನ ಪ್ರತ್ಯೇಕವಾಸದ ಪ್ರಪಂಚದಿಂದ ನನ್ನನ್ನು ಹೊರತರುವ ಒಂದು ಅಮೂಲ್ಯ ಸ್ನೇಹದ ಆರಂಭವಾಗಿತ್ತು ಎಂಬುದು ನನಗೆ ಗೊತ್ತಿರಲಿಲ್ಲ.
ಒಂದು ಅಮೂಲ್ಯವಾದ ಸ್ನೇಹವನ್ನು ಬೆಳೆಸುವುದು
ಆ ಚೀಟಿಯನ್ನು ಕಳುಹಿಸಿದ ಕಾಲೆಟ್ ಮತ್ತು ಹೆರ್ಮೀನ್ ಎಂಬವರು, 20 ವರ್ಷ ಪ್ರಾಯವನ್ನು ದಾಟಿದವರಾಗಿದ್ದರು. ನಾನು ಹೋಗಿದ್ದಂಥ ಯೆಹೋವನ ಸಾಕ್ಷಿಗಳ ಸಭೆಯಲ್ಲಿ ಅವರು ರೆಗ್ಯುಲರ್ ಪಯನೀಯರ್ ಇಲ್ಲವೆ ಪೂರ್ಣ ಸಮಯದ ಶುಶ್ರೂಷಕರಾಗಿದ್ದರೆಂದು ನನಗೆ ಅನಂತರ ತಿಳಿದುಬಂತು. ಕಾಲೆಟ್ ಮತ್ತು ಹೆರ್ಮೀನ್‌ರಿಗೆ ನಿಜವಾಗಿ ಸಂಕೇತ ಭಾಷೆ ಗೊತ್ತಿರದಿದ್ದರೂ, ಅವರು ನನ್ನೊಂದಿಗೆ ಮಾತಾಡುತ್ತಿದ್ದಾಗ, ನಾನು ಹೇಗೊ ಅವರ ತುಟಿಗಳನ್ನು ಓದುತ್ತಿದ್ದೆ ಮತ್ತು ಈ ರೀತಿಯಲ್ಲಿ ನಾವು ಸಾಧಾರಣ ಮಟ್ಟಿಗೆ ಚೆನ್ನಾಗಿಯೇ ಸಂವಾದ ಮಾಡುತ್ತಿದ್ದೆವು.
ನನ್ನೊಂದಿಗೆ ಬೈಬಲ್ ಅಧ್ಯಯನ ನಡೆಸಬಹುದೊ ಎಂದು ಕಾಲೆಟ್ ಮತ್ತು ಹೆರ್ಮೀನ್ ನನ್ನ ಹೆತ್ತವರಿಗೆ ಕೇಳಿದಾಗ, ಅವರಿಗೆ ತುಂಬ ಸಂತೋಷವಾಯಿತು. ಆದರೆ ಈ ಯುವತಿಯರು ಕೇವಲ ಅಧ್ಯಯನ ನಡೆಸುವುದಕ್ಕಿಂತಲೂ ಹೆಚ್ಚನ್ನು ಮಾಡಿದರು. ರಾಜ್ಯ ಸಭಾಗೃಹದಲ್ಲಿ ನಡೆಯುತ್ತಿದ್ದ ಕೂಟಗಳನ್ನು ವಿವರಿಸಿ ಹೇಳಲು, ಹಾಗೂ ಸಭೆಯಲ್ಲಿದ್ದ ಇತರರೊಂದಿಗಿನ ಒಡನಾಟದಲ್ಲಿ ನನ್ನನ್ನು ಒಳಗೂಡಿಸಲು ಅವರು ಬಹಳಷ್ಟು ಪ್ರಯತ್ನವನ್ನು ಮಾಡಿದರು. ಸಾರುವ ಕಾರ್ಯದಲ್ಲಿ ಉಪಯೋಗಿಸಲಿಕ್ಕಾಗಿ ಬೈಬಲ್ ನಿರೂಪಣೆಗಳನ್ನು ನನ್ನೊಂದಿಗೆ ಪ್ರ್ಯಾಕ್ಟಿಸ್ ಮಾಡಿದರು, ಮತ್ತು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗಾಗಿ ವಿದ್ಯಾರ್ಥಿ ಭಾಷಣಗಳನ್ನು ತಯಾರಿಸಲೂ ಅವರು ನನಗೆ
ಸಹಾಯಮಾಡಿದರು. ಸ್ವಲ್ಪ ಊಹಿಸಿಕೊಳ್ಳಿರಿ, ಈಗ ಕಿವಿಕೇಳಿಸುತ್ತಿದ್ದ ಜನರ ಗುಂಪಿನ ಮುಂದೆ ಇದ್ದು, ಒಂದು ಭಾಷಣವನ್ನೂ ಕೊಡುವಷ್ಟು ಧೈರ್ಯ ನನಗೆ ಬಂದಿತ್ತು!ಇದಲ್ಲದೆ, ಕಾಲೆಟ್ ಮತ್ತು ಹೆರ್ಮೀನ್ ನಾನು ಅವರಲ್ಲಿ ಭರವಸೆಯನ್ನಿಡಬಲ್ಲೆ ಎಂಬ ಭಾವನೆಯನ್ನು ನನ್ನಲ್ಲಿ ಮೂಡಿಸಿದರು. ಅವರು ತಾಳ್ಮೆಯಿಂದಿರುತ್ತಿದ್ದರು ಮತ್ತು ನನಗೆ ಕಿವಿಗೊಡುತ್ತಿದ್ದರು. ನಾನು ಮಾಡುತ್ತಿದ್ದ ತಪ್ಪುಗಳ ಬಗ್ಗೆ ನಾವು ನಗಾಡುತ್ತಿದ್ದೆವಾದರೂ, ಅವರು ಎಂದೂ ನನ್ನನ್ನು ಕೀಟಲೆಮಾಡಲಿಲ್ಲ, ಇಲ್ಲವೆ ನನ್ನ ಸಹವಾಸವು ಅವರಿಗೆ ಮುಜುಗರವೆನಿಸುತ್ತಿರಲಿಲ್ಲ. ಅವರು ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು ಮತ್ತು ನನ್ನನ್ನು ತಮಗೆ ಸಮಾನನಾದ ವ್ಯಕ್ತಿಯೋಪಾದಿ ಉಪಚರಿಸಿದರು. ಈ ದಯಾಭರಿತ ಹುಡುಗಿಯರು ನನಗೆ ಸುಂದರವಾದ ಕೊಡುಗೆಯನ್ನು ಕೊಟ್ಟರು; ಅವರ ಪ್ರೀತಿ ಮತ್ತು ಸ್ನೇಹವೇ ಆ ಕೊಡುಗೆಯಾಗಿತ್ತು.
ಇದಕ್ಕಿಂತಲೂ ಹೆಚ್ಚು ಪ್ರಾಮುಖ್ಯ ವಿಷಯವೇನೆಂದರೆ, ನಾನು ಭರವಸೆಯಿಡಬಹುದಾದಂಥ ಒಬ್ಬ ಸ್ನೇಹಿತನೋಪಾದಿ ನನ್ನ ದೇವರಾದ ಯೆಹೋವನೊಂದಿಗೆ ಪರಿಚಿತಳಾಗುವಂತೆ ಕಾಲೆಟ್ ಮತ್ತು ಹೆರ್ಮೀನ್ ನನಗೆ ಕಲಿಸಿದರು. ನಾನು ರಾಜ್ಯ ಸಭಾಗೃಹದಲ್ಲಿ ಕುಳಿತಿರುವುದನ್ನು ಯೆಹೋವನು ನೋಡಿದ್ದನು, ಮತ್ತು ನಾನು ಕಿವುಡಿಯಾಗಿರುವುದರಿಂದ ಉಂಟಾಗುವ ಸಮಸ್ಯೆಗಳು ಆತನಿಗೆ ಅರ್ಥವಾಗುತ್ತಿದ್ದವು ಎಂದು ಅವರು ನನಗೆ ವಿವರಿಸಿದರು. ನಮ್ಮೆಲ್ಲರಲ್ಲೂ ಯೆಹೋವನಿಗಾಗಿದ್ದ ಪ್ರೀತಿಯೇ, ಮೂವರನ್ನೂ ಸ್ನೇಹಿತರೋಪಾದಿ ಒಟ್ಟುಗೂಡಿಸಿದ್ದಕ್ಕಾಗಿ ನಾನೆಷ್ಟು ಆಭಾರಿಯಾಗಿದ್ದೇನೆ! ಯೆಹೋವನು ನನ್ನ ವಿಷಯದಲ್ಲಿ ತೋರಿಸುತ್ತಿದ್ದ ಕಾಳಜಿಯಿಂದ ಮತ್ತು ಆತನಿಗಾಗಿ ನನ್ನಲ್ಲಿದ್ದ ಪ್ರೀತಿಯಿಂದ ಪ್ರೇರಿತಳಾಗಿ, ನಾನು 1975ರ ಜುಲೈ ತಿಂಗಳಿನಲ್ಲಿ ನೀರಿನ ದೀಕ್ಷಾಸ್ನಾನದ ಮೂಲಕ ಆತನಿಗೆ ನನ್ನ ಸಮರ್ಪಣೆಯನ್ನು ಸಂಕೇತಿಸಿದೆ.
ಒಬ್ಬ ವಿಶೇಷ ಸ್ನೇಹಿತನೊಂದಿಗೆ ಜೊತೆಗೂಡಿ ಹೋಗುವುದು
ಮುಂದಿನ ವರ್ಷಗಳಲ್ಲಿ ನನಗೆ ಹೆಚ್ಚೆಚ್ಚು ಕ್ರೈಸ್ತ ಸಹೋದರ ಸಹೋದರಿಯರ ಪರಿಚಯವಾಯಿತು. ಒಬ್ಬ ಸಹೋದರರಾದರೋ ನನಗೆ ತೀರ ವಿಶೇಷವಾದ ಸ್ನೇಹಿತರಾದರು, ಮತ್ತು ನಾವು 1980ರಲ್ಲಿ ಮದುವೆಯಾದೆವು. ತದನಂತರ ಸ್ವಲ್ಪ ಸಮಯದಲ್ಲೇ, ನಾನೊಬ್ಬ ಪಯನೀಯರಳೋಪಾದಿ ಸೇವೆಸಲ್ಲಿಸಲಾರಂಭಿಸಿದೆ ಮತ್ತು 1994ರಲ್ಲಿ ನನ್ನ ಪತಿ ಹ್ಯಾರಿ ಮತ್ತು ನಾನು, ಡಚ್ ಸಂಕೇತ ಭಾಷಾ ಕ್ಷೇತ್ರದಲ್ಲಿ ವಿಶೇಷ ಪಯನೀಯರರೋಪಾದಿ ಸೇವೆಸಲ್ಲಿಸುವ ನೇಮಕವನ್ನು ಪಡೆದೆವು. ಮುಂದಿನ ವರ್ಷ ನನ್ನ ಮುಂದೆ ಅತಿ ಕಷ್ಟಕರವಾದ ನೇಮಕವಿತ್ತು. ಕಿವಿಕೇಳಿಸುತ್ತಿದ್ದ ನನ್ನ ಪತಿಯವರು ಬದಲಿ ಸರ್ಕಿಟ್ ಮೇಲ್ವಿಚಾರಕರೋಪಾದಿ ಬೇರೆ ಬೇರೆ ಸಭೆಗಳನ್ನು ಸಂದರ್ಶಿಸುವಾಗ ನಾನು ಅವರೊಂದಿಗೆ ಜೊತೆಗೂಡುವುದೇ.
ನಾನು ಇದನ್ನು ಈ ರೀತಿಯಲ್ಲಿ ನಿಭಾಯಿಸುತ್ತೇನೆ. ನಾನು ಒಂದು ಸಭೆಯನ್ನು ಪ್ರಥಮ ಬಾರಿ ಭೇಟಿಮಾಡುವಾಗ, ತಡಮಾಡದೆ ಸಾಧ್ಯವಿರುವಷ್ಟು ಮಂದಿ ಸಹೋದರ ಸಹೋದರಿಯರ ಬಳಿಗೆ ಹೋಗಿ, ನನ್ನನ್ನೇ ಪರಿಚಯಿಸಿಕೊಳ್ಳುತ್ತೇನೆ. ನಾನು ಕಿವುಡಿಯಾಗಿದ್ದೇನೆ, ಮತ್ತು ಅವರು ನನ್ನೊಂದಿಗೆ ನಿಧಾನವಾಗಿ ಮಾತಾಡಿ, ಅದೇ ಸಮಯದಲ್ಲಿ ಅವರು ನನ್ನ ಮುಖವನ್ನು ನೋಡುವಂತೆ ಕೇಳಿಕೊಳ್ಳುತ್ತೇನೆ. ಮತ್ತು ಪ್ರಥಮ ಬಾರಿ ಹೋದಾಗಲೇ ನಾನು ಸಭಾ ಕೂಟಗಳಲ್ಲಿ ಉತ್ತರವನ್ನು ಕೊಡಲೂ ಪ್ರಯತ್ನಿಸುತ್ತೇನೆ. ಆ ವಾರದ ಕೂಟಗಳಲ್ಲಿ ಹಾಗೂ ಕ್ಷೇತ್ರ ಸೇವೆಯಲ್ಲಿ ಯಾರಾದರೂ ನನ್ನ ಪರವಾಗಿ ಅನುವಾದಮಾಡಲು ಸಿದ್ಧರಿದ್ದಾರೊ ಎಂದು ಕೇಳುತ್ತೇನೆ.
ಈ ಕಾರ್ಯವಿಧಾನವು ಎಷ್ಟು ಪರಿಣಾಮಕಾರಿಯಾಗಿದೆ ಅಂದರೆ, ನನ್ನ ಸಹೋದರ ಸಹೋದರಿಯರು ನನಗೆ ಕಿವಿಕೇಳಿಸುವುದಿಲ್ಲ ಎಂಬದನ್ನೇ ಮರೆತುಬಿಡುತ್ತಾರೆ, ಮತ್ತು ಇದು ಹಾಸ್ಯಮಯ ಸನ್ನಿವೇಶಗಳಲ್ಲಿ ಪರಿಣಮಿಸುತ್ತದೆ. ಉದಾಹರಣೆಗಾಗಿ, ನಾನು ಪಟ್ಟಣದಲ್ಲಿ ನಡೆಯುತ್ತಾ ಹೋಗುತ್ತಿರುವಾಗ, ಅವರು ಕಾರ್‌ನಲ್ಲಿ ಹಾದುಹೋಗುವಾಗ ನನ್ನನ್ನು ಅಭಿನಂದಿಸಲಿಕ್ಕಾಗಿ ಹಾರ್ನ್ ಮಾಡುತ್ತಾ ಇದ್ದರೆಂದೂ, ಆದರೆ ನಾನು ಸಹಜವಾಗಿಯೇ ಯಾವುದೇ ಪ್ರತಿಕ್ರಿಯೆಯನ್ನು
ತೋರಿಸಲಿಲ್ಲವೆಂದೂ ಅವರು ನನಗೆ ಹೇಳುತ್ತಾರೆ. ಕೆಲವೊಮ್ಮೆ ನಾನು ಸಹ ನನ್ನ ಸ್ವಂತ ಇತಿಮಿತಿಗಳನ್ನು ಮರೆತುಬಿಡುತ್ತೇನೆ. ಉದಾಹರಣೆಗೆ, ನನ್ನ ಗಂಡನ ಕಿವಿಯಲ್ಲಿ ನಾನು ಏನಾದರೂ ಗುಟ್ಟಿನ ವಿಷಯವನ್ನು ಪಿಸುಗುಟ್ಟಲು ಪ್ರಯತ್ನಿಸುತ್ತಿರುವಾಗ, ಒಮ್ಮೆಲೇ ಅವರ ಮುಖ ಕೆಂಪೇರುವುದನ್ನು ನೋಡುವಾಗಲೇ, ನನ್ನ “ಪಿಸುಮಾತು” ಸ್ವಲ್ಪ ಹೆಚ್ಚೇ ಗಟ್ಟಿಯಾಗಿತ್ತೆಂದು ನನಗೆ ಗೊತ್ತಾಗುತ್ತದೆ.ಮಕ್ಕಳು ಅನಿರೀಕ್ಷಿತವಾದ ವಿಧಗಳಲ್ಲಿ ನನಗೆ ಸಹಾಯಮಾಡುತ್ತಾರೆ. ನಾವು ಪ್ರಥಮ ಬಾರಿ ಭೇಟಿ ನೀಡಿದ ಒಂದು ಸಭೆಯಲ್ಲಿ, ರಾಜ್ಯ ಸಭಾಗೃಹದಲ್ಲಿದ್ದ ಕೆಲವರು ನನ್ನೊಂದಿಗೆ ಮಾತಾಡಲು ಹಿಂಜರಿಯುತ್ತಿದ್ದರೆಂಬುದನ್ನು ಒಂಬತ್ತು ವರ್ಷ ಪ್ರಾಯದ ಒಬ್ಬ ಹುಡುಗನು ಗಮನಿಸಿದ್ದನು. ಈ ವಿಷಯದಲ್ಲಿ ಏನಾದರೂ ಮಾಡಬೇಕೆಂದು ಅವನು ತೀರ್ಮಾನಿಸಿದನು. ಅವನು ನನ್ನ ಹತ್ತಿರ ಬಂದು, ನನ್ನ ಕೈಹಿಡಿದು, ನನ್ನನ್ನು ರಾಜ್ಯ ಸಭಾಗೃಹದ ಮಧ್ಯಭಾಗಕ್ಕೆ ಕರೆದುಕೊಂಡುಹೋಗಿ ನಿಲ್ಲಿಸಿದನು. ಆಮೇಲೆ ತನ್ನಿಂದ ಸಾಧ್ಯವಿರುವಷ್ಟು ಎತ್ತರದ ಧ್ವನಿಯಲ್ಲಿ ಅವನು ಹೀಗಂದನು: “ನಾನು ನಿಮಗೆ ಐರೀನರನ್ನು ಪರಿಚಯಿಸಲು ಬಯಸುತ್ತೇನೆ—ಅವರು ಕಿವುಡರಾಗಿದ್ದಾರೆ!” ಆಗ ಅಲ್ಲಿ ಉಪಸ್ಥಿತರಿದ್ದವರು ನನ್ನ ಹತ್ತಿರ ಬಂದು, ತಮ್ಮ ಪರಿಚಯವನ್ನು ಮಾಡಿಕೊಂಡರು.
ಸರ್ಕಿಟ್ ಕೆಲಸದಲ್ಲಿ ನನ್ನ ಗಂಡನೊಂದಿಗೆ ಒಡಗೂಡಿ ಹೋಗುವಾಗ, ನನ್ನ ಸ್ನೇಹಿತರ ವೃತ್ತವು ದೊಡ್ಡದಾಗುತ್ತಾ ಹೋಗುತ್ತದೆ. ನನ್ನನ್ನು ಪ್ರತ್ಯೇಕಿಸಲಾಗಿದೆ ಮತ್ತು ನಾನು ಒಂಟಿಯಾಗಿದ್ದೇನೆಂದು ನಾನೆಣಿಸುತ್ತಿದ್ದ ಆ ವರ್ಷಗಳಿಂದ ಈಗ ನನ್ನ ಬದುಕು ಎಷ್ಟು ಭಿನ್ನವಾಗಿದೆ! ಕಾಲೆಟ್ ಮತ್ತು ಹೆರ್ಮೀನರು ಆ ಚಿಕ್ಕ ಚೀಟಿಯನ್ನು ನನ್ನ ಕೈಯೊಳಗೆ ತುರುಕಿದಂದಿನಿಂದ, ನಾನು ಸ್ನೇಹದ ಶಕ್ತಿಯನ್ನು ಅನುಭವಿಸಿದ್ದೇನೆ, ಮತ್ತು ನನಗೆ ತುಂಬ ವಿಶೇಷವಾದ ಜನರಾಗಿ ಪರಿಣಮಿಸಿದ ವ್ಯಕ್ತಿಗಳನ್ನು ಭೇಟಿಯಾಗಿದ್ದೇನೆ. ಎಲ್ಲಕ್ಕಿಂತಲೂ ಮಿಗಿಲಾಗಿ, ನಾನು ಯೆಹೋವನನ್ನು ತಿಳಿದುಕೊಂಡಿದ್ದೇನೆ. ಆತನು ಎಲ್ಲರಿಗಿಂತಲೂ ಹೆಚ್ಚು ಅಮೂಲ್ಯ ಸ್ನೇಹಿತನಾಗಿದ್ದಾನೆ. (ರೋಮಾಪುರ 8:38, 39) ಆ ಚಿಕ್ಕ ಸಂದೇಶವು ನನ್ನ ಬದುಕನ್ನು ಎಷ್ಟೊಂದು ಬದಲಾಯಿಸಿತು!
[ಪುಟ 24ರಲ್ಲಿರುವ ಚಿತ್ರ]
ನನ್ನ ಅಚ್ಚುಮೆಚ್ಚಿನ ಆಟಿಕೆಯ ಶಬ್ದ ನನಗೀಗಲೂ ನೆನಪಿದೆ
[ಪುಟ 25ರಲ್ಲಿರುವ ಚಿತ್ರಗಳು]
ಶುಶ್ರೂಷೆಯಲ್ಲಿ ಮತ್ತು ನನ್ನ ಗಂಡ ಹ್ಯಾರಿಯೊಂದಿಗೆ