“ನೀನು ಹೇಳಿದ್ದು ಸರಿ, ಜೀವನವು ಬಲು ಸುಂದರವೇ!”
“ನೀನು ಹೇಳಿದ್ದು ಸರಿ, ಜೀವನವು ಬಲು ಸುಂದರವೇ!”
ಜೀವನದ ನಿಜ ಅರ್ಥವೇನೆಂಬದನ್ನು ನೀವು ತಿಳಿಯಲು ಇಷ್ಟಪಡುತ್ತೀರೊ? ಪೋಲೆಂಡ್‌ನ ಶ್ಕೆಚೀನ್ ಎಂಬ ನಗರದಲ್ಲಿ ವಾಸಿಸುತ್ತಿರುವ ಹದಿನೆಂಟು ವರ್ಷ ಪ್ರಾಯದ ಮಾಗ್ಡಲೇನಾ ಎಂಬವಳು, ತನ್ನ ಪ್ರೌಢ ಶಾಲೆಯ ಸಹಪಾಠಿಯಾಗಿದ್ದ ಕಾಟಾರ್‌ಸೀನಾಳಿಗೆ ಇದನ್ನು ತಿಳಿದುಕೊಳ್ಳಲು ಸಹಾಯಮಾಡಿದಳು. ತಾನೊಬ್ಬ ನಾಸ್ತಿಕಳೆಂದು ಕಾಟಾರ್‌ಸೀನಾಳು ಕಂಠೋಕ್ತವಾಗಿ ಹೇಳಿಕೊಳ್ಳುತ್ತಿದ್ದಳು. ಆದರೆ ಮಾಗ್ಡಲೇನಾ ಅವಳೊಂದಿಗೆ ಬೈಬಲಿನ ಕುರಿತು ಮಾತಾಡಿದಾಗ, ಅವಳು ಪ್ರಾಮಾಣಿಕವಾಗಿ ಆಸಕ್ತಿಯನ್ನು ತೋರಿಸಿದಳು.
ಮಾಗ್ಡಲೇನಾ ಬೈಬಲ್‌ನಿಂದ ಏನೆಲ್ಲಾ ಹೇಳುತ್ತಿದ್ದಳೋ ಅದನ್ನು ಕಾಟಾರ್‌ಸೀನಾಳು ಇಷ್ಟಪಡುತ್ತಿದ್ದರೂ, ಅವಳಿಗೆ ಅದನ್ನು ಪೂರ್ಣವಾಗಿ ಸ್ವೀಕರಿಸಲು ಆಗುತ್ತಿರಲಿಲ್ಲ. ಕಾಟಾರ್‌ಸೀನಾ ಒಮ್ಮೆ ಮ್ಯಾಗ್ಡಲೇನಾಳೊಂದಿಗೆ ನಿಜ ಸ್ನೇಹಿತರ ಕುರಿತಾಗಿ ಮಾತಾಡುತ್ತಿದ್ದಾಗ, ಅವಳು ಕೇಳಿದ್ದು: “ನಿನ್ನ ಬಳಿ ಬೈಬಲ್ ಇದೆ; ನೀನು ಯಾವ ಮೂಲತತ್ತ್ವಗಳನ್ನು ಪಾಲಿಸಬೇಕು ಮತ್ತು ಯಾವ ರೀತಿಯ ಮಿತ್ರರಿಗಾಗಿ ಹುಡುಕಬೇಕೆಂಬುದು ನಿನಗೆ ಗೊತ್ತಿದೆ. ಆದರೆ ಸದ್ಯಕ್ಕಾದರೂ ಅಂಥ ಮೂಲತತ್ತ್ವಗಳನ್ನು ಅಂಗೀಕರಿಸಲಾಗದವರ ಕುರಿತಾಗಿ ಏನು?”
ಕಾಟಾರ್‌ಸೀನಾಳು ಇಂಗ್ಲೆಂಡ್‌ನ ಲಂಡನಿಗೆ ಪ್ರಯಾಣಿಸಿದಾಗ ಒಂದು ದೊಡ್ಡ ಬದಲಾವಣೆಯಾಯಿತು. ಅಲ್ಲಿದ್ದ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿಗೆ ಅವಳು ಭೇಟಿಯಿತ್ತಳು, ಮತ್ತು ಅಲ್ಲಿ ಅವಳ ಕಡೆಗೆ ತೋರಿಸಲಾದ ದಯೆಯು ಅವಳ ಮನಸ್ಸಿನ ಮೇಲೆ ಪರಿಣಾಮಬೀರಿತು. ಅವಳಿಗಾಗಿ ಬಾಗಿಲನ್ನು ತೆರೆದು, ಅವಳು ಏನು ಹೇಳುತ್ತಿದ್ದಳೊ ಅದರಲ್ಲಿ ನಿಜವಾದ ಆಸಕ್ತಿಯನ್ನು ತೋರಿಸಿದಂಥ ಸರಳ ಕೃತ್ಯಗಳು ಅವಳನ್ನು ಆಕರ್ಷಿಸಿದವು.
ಹೊಸ ಶಾಲಾ ವರ್ಷವು ಸೆಪ್ಟೆಂಬರ್ 2001ರಲ್ಲಿ ಆರಂಭವಾದಾಗ, ಕಾಟಾರ್‌ಸೀನಾಳು ಒಂದು ಕ್ರಮದ ಬೈಬಲ್ ಅಧ್ಯಯನವನ್ನು ಮಾಡಲು ಒಪ್ಪಿಕೊಂಡಳು. ಬೈಬಲ್ ಮೂಲತತ್ತ್ವಗಳಿಗಾಗಿ ಅವಳ ಗಣ್ಯತೆಯು ಹೆಚ್ಚುತ್ತಾ ಇದೆ, ಮತ್ತು ತನ್ನ ದಿನನಿತ್ಯದ ಜೀವನದಲ್ಲಿ ಅವಳದನ್ನು ಅನ್ವಯಿಸಿಕೊಳ್ಳಲು ಆರಂಭಿಸಿದ್ದಾಳೆ. ಇತ್ತೀಚೆಗೆ ಅವಳು ಮಾಗ್ಡಲೇನಾಳ ಬಳಿ ಮನಬಿಚ್ಚಿ ಹೇಳಿದ್ದು: “ನಾನೊಂದು ಹೊಸ ಬದುಕನ್ನು ಆರಂಭಿಸುತ್ತಿದ್ದೇನೇನೊ ಎಂದು ನನಗನಿಸುತ್ತಿದೆ.” ತನ್ನ ಸೆಲ್ ಫೋನ್ ಮೂಲಕ ಅವಳು ಮಾಗ್ಡಲೇನಾಳಿಗೆ ಈ ಪುಟ್ಟ ಸಂದೇಶವನ್ನೂ ಕಳುಹಿಸಿದಳು: “ನಮ್ಮ ಇಂದಿನ ಅಧ್ಯಯನಕ್ಕಾಗಿ ನಿನಗೆ ತುಂಬ ಉಪಕಾರ! ನೀನು ಹೇಳಿದ್ದು ಸರಿ, ಜೀವನವು ಬಲು ಸುಂದರವೇ! ಅದಕ್ಕಾಗಿ ನಾವು ಯಾರಿಗೆ ಉಪಕಾರ ಹೇಳಬೇಕೆಂಬದನ್ನು ತಿಳಿದಿರುವುದು ಅದ್ಭುತಕರವಾದ ಸಂಗತಿಯಾಗಿದೆ!”