ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
“ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ” ಎಂದು ಹೇಳಿದಾಗ ಪೌಲನು ಏನನ್ನು ಅರ್ಥೈಸಿದನು?
ಯೇಸುವಿನ ಮರಣದ ಸ್ಮಾರಕದ ಸ್ಥಾಪನೆಯ ಸಮಯಕ್ಕೆ ಸೂಚಿಸುತ್ತಾ ಪೌಲನು ಬರೆದುದು: “ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.” (1 ಕೊರಿಂಥ 11:25, 26) ಇಲ್ಲಿ ಬಳಸಲ್ಪಟ್ಟಿರುವ ‘ಮಾಡುವಷ್ಟು ಸಾರಿ’ ಎಂಬ ಪದಗಳು, ಕ್ರಿಸ್ತನ ಮರಣವನ್ನು ಅನೇಕ ಸಾರಿ ಅಂದರೆ ಪದೇ ಪದೇ ಆಚರಿಸಬೇಕು ಎಂಬದನ್ನು ಸೂಚಿಸುತ್ತವೆಂದು ಕೆಲವರಿಗನಿಸುತ್ತದೆ. ಹೀಗಿರುವುದರಿಂದ, ಅವರು ಕೇವಲ ವರ್ಷಕ್ಕೊಮ್ಮೆ ಅಲ್ಲ ಬದಲಾಗಿ ಅದಕ್ಕಿಂತಲೂ ಹೆಚ್ಚು ಸಾರಿ ಅದನ್ನು ಆಚರಿಸುತ್ತಾರೆ. ಪೌಲನ ಅರ್ಥ ಇದಾಗಿತ್ತೋ?
ಯೇಸು ತನ್ನ ಮರಣದ ಸ್ಮಾರಕವನ್ನು ಆರಂಭಿಸಿ ಈಗ ಬಹುಮಟ್ಟಿಗೆ 2,000 ವರ್ಷಗಳೇ ಸಂದಿವೆ. ಆದುದರಿಂದ, ಸ್ಮಾರಕವನ್ನು ಕೇವಲ ವರ್ಷಕ್ಕೊಮ್ಮೆ ಆಚರಿಸಿದರೂ, ಅದನ್ನು ಸಾ.ಶ. 33ರಂದಿನಿಂದ ಎಷ್ಟೋ ಸಾರಿ ಆಚರಿಸಲಾಗಿದೆ ಎಂದರ್ಥ. ಆದರೆ 1 ಕೊರಿಂಥ 11:25, 26ರ ಪೂರ್ವಾಪರ ವಚನಗಳಲ್ಲಿ ಪೌಲನು, ಸ್ಮಾರಕವನ್ನು ಎಷ್ಟು ಸಾರಿ ಆಚರಿಸಬೇಕು ಎಂಬುದರ ಬಗ್ಗೆ ಅಲ್ಲ ಬದಲಾಗಿ ಹೇಗೆ ಆಚರಿಸಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದನು. ಮೂಲ ಗ್ರೀಕ್ ಭಾಷೆಯಲ್ಲಿ ಅವನು, “ಅನೇಕ ಸಲ” ಇಲ್ಲವೆ “ಪದೇ ಪದೇ” ಎಂಬರ್ಥವಿರುವ ಪೊಲಾಕೀಸ್ ಎಂಬ ಪದವನ್ನು ಬಳಸಲಿಲ್ಲ. ಅದಕ್ಕೆ ಬದಲಾಗಿ ಅವನು ಆಸಾಕೀಸ್ ಎಂಬ ಪದವನ್ನು ಬಳಸಿದನು. ಇದರರ್ಥ, “ಮಾಡುವಷ್ಟು ಸಾರಿ” ಎಂದಾಗಿದ್ದು, ಇದು “ಯಾವುದೇ ಸಂದರ್ಭದಲ್ಲಿ,” “ಪ್ರತಿ ಸಲ” ಎಂಬರ್ಥವಿರುವ ನುಡಿಗಟ್ಟಾಗಿದೆ. ‘ಪ್ರತಿ ಸಲ ನೀವಿದನ್ನು ಮಾಡುವಾಗ, ಕರ್ತನ ಮರಣವನ್ನು ಪ್ರಸಿದ್ಧಪಡಿಸುತ್ತಾ ಇರುತ್ತೀರಿ’ ಎಂದು ಪೌಲನು ಹೇಳುತ್ತಾ ಇದ್ದನು.
ಹಾಗಾದರೆ ಯೇಸುವಿನ ಮರಣದ ಸ್ಮಾರಕವು ಎಷ್ಟು ಸಾರಿ ಆಚರಿಸಲ್ಪಡಬೇಕು? ಅದನ್ನು ಕೇವಲ ವರ್ಷಕ್ಕೊಮ್ಮೆ ಆಚರಿಸುವುದು ಯಥೋಚಿತವಾಗಿದೆ. ಅದು ನಿಜವಾಗಿಯೂ ಒಂದು ಸ್ಮಾರಕ ಆಗಿದೆ, ಮತ್ತು ಸ್ಮಾರಕ ದಿನಗಳನ್ನು ಸಾಮಾನ್ಯವಾಗಿ ವಾರ್ಷಿಕವಾಗಿ ಆಚರಿಸಲಾಗುತ್ತದೆ. ಅದಲ್ಲದೆ, ಯೇಸು ಯೆಹೂದಿ ಪಸ್ಕಹಬ್ಬದ ದಿನದಂದು ಮರಣಪಟ್ಟನು, ಮತ್ತು ಈ ಪಸ್ಕಹಬ್ಬವನ್ನು ವರ್ಷಕ್ಕೊಮ್ಮೆ ಆಚರಿಸಲಾಗುತ್ತಿತ್ತು. ಸೂಕ್ತವಾಗಿಯೇ ಪೌಲನು ಯೇಸುವನ್ನು ‘ಪಸ್ಕದ ಯಜ್ಞದ ಕುರಿ’ ಎಂದು ಕರೆದಿದ್ದಾನೆ. ಏಕೆಂದರೆ ಮೊದಲನೆಯ ಪಸ್ಕ ಯಜ್ಞವು ಸ್ವಾಭಾವಿಕ ಇಸ್ರಾಯೇಲ್ಯರ ಚೊಚ್ಚಲ ಮಕ್ಕಳನ್ನು ಐಗುಪ್ತದಲ್ಲಿ ಸಂರಕ್ಷಿಸಿ, ಆ ಜನಾಂಗವು ದಾಸತ್ವದಿಂದ ಹೊರಬರುವ ಮಾರ್ಗವನ್ನು ತೆರೆದಂತೆಯೇ, ಯೇಸುವಿನ ಯಜ್ಞಾರ್ಪಿತ ಮರಣವು ಆತ್ಮಿಕ ಇಸ್ರಾಯೇಲ್‌ಗೆ ಜೀವದ ಮಾರ್ಗವನ್ನು ತೆರೆಯಿತು. (1 ಕೊರಿಂಥ 5:7; ಗಲಾತ್ಯ 6:16) ವಾರ್ಷಿಕ ಯೆಹೂದಿ ಪಸ್ಕಹಬ್ಬದೊಂದಿಗಿನ ಈ ಸಂಬಂಧವು, ಯೇಸುವಿನ ಮರಣದ ಸ್ಮಾರಕವು ವರ್ಷಕ್ಕೊಮ್ಮೆ ಮಾತ್ರ ಆಚರಿಸಲ್ಪಡಬೇಕೆಂಬದಕ್ಕೆ ಇನ್ನೂ ಹೆಚ್ಚಿನ ಸಾಕ್ಷ್ಯವಾಗಿದೆ.
ಅಷ್ಟುಮಾತ್ರವಲ್ಲದೆ, ಪೌಲನು ಯೇಸುವಿನ ಮರಣವನ್ನು ಇನ್ನೊಂದು ಯೆಹೂದಿ ಹಬ್ಬದೊಂದಿಗೆ ಜೊತೆಗೂಡಿಸಿದನು. ಅದು ಸರ್ವದೋಷಪರಿಹಾರಕ ದಿನವಾಗಿದೆ. ಇಬ್ರಿಯ 9:25, 26ರಲ್ಲಿ ನಾವು ಹೀಗೆ ಓದುತ್ತೇವೆ: “ಇದಲ್ಲದೆ ಮಹಾಯಾಜಕನು ವರುಷ ವರುಷವೂ [ಸರ್ವದೋಷಪರಿಹಾರಕ ದಿನದಂದು] ಅನ್ಯರಕ್ತವನ್ನು ತೆಗೆದುಕೊಂಡು ಪವಿತ್ರಾಲಯದಲ್ಲಿ ಪ್ರವೇಶಿಸುವ ಪ್ರಕಾರ ಆತನು [ಯೇಸು] ತನ್ನನ್ನು ಅನೇಕ ಸಾರಿ ಸಮರ್ಪಿಸುವದಕ್ಕೆ ಪರಲೋಕದಲ್ಲಿ ಪ್ರವೇಶಿಸಲಿಲ್ಲ; . . . ಆದರೆ ಒಂದೇ ಸಾರಿ ಯುಗಗಳ ಸಮಾಪ್ತಿಯಲ್ಲೇ ಆತನು ಪಾಪನಿವಾರಣೆಮಾಡಬೇಕೆಂಬ ಉದ್ದೇಶದಿಂದ ತನ್ನನ್ನು ಯಜ್ಞಮಾಡಿಕೊಳ್ಳುವವನಾಗಿ ಪ್ರತ್ಯಕ್ಷನಾದನು.” ಯೇಸುವಿನ ಯಜ್ಞವು ಆ ವಾರ್ಷಿಕ ಸರ್ವದೋಷಪರಿಹಾರಕ ದಿನದ ಯಜ್ಞವನ್ನು ಸ್ಥಾನಪಲ್ಲಟಗೊಳಿಸಿರುವುದರಿಂದ, ಅವನ ಮರಣದ ಸ್ಮಾರಕವನ್ನು ವಾರ್ಷಿಕವಾಗಿ ಆಚರಿಸುವುದು ಯೋಗ್ಯವಾಗಿದೆ. ಅದಕ್ಕಿಂತಲೂ ಹೆಚ್ಚು ಬಾರಿ ಸ್ಮಾರಕವನ್ನು ಆಚರಿಸಲು ಯಾವುದೇ ಶಾಸ್ತ್ರೀಯ ಕಾರಣವಿಲ್ಲ.
ಇದಕ್ಕೆ ಹೊಂದಿಕೆಯಲ್ಲಿ, ಇತಿಹಾಸಕಾರ ಜಾನ್ ಲಾರೆನ್ಸ್ ಫಾನ್ ಮೊಶೈಮ್ ವರದಿಸುವುದೇನೆಂದರೆ, ಎರಡನೆಯ ಶತಮಾನದಲ್ಲಿ ಏಷಿಯಾ ಮೈನರ್‌ನಲ್ಲಿದ್ದ ಕ್ರೈಸ್ತರಿಗೆ, ಯೇಸುವಿನ ಮರಣದ ಸ್ಮಾರಕವನ್ನು “ಯೆಹೂದ್ಯರ ಮೊದಲ ತಿಂಗಳ [ನೈಸಾನ್] ಹದಿನಾಲ್ಕನೆಯ ದಿನದಂದು” ಆಚರಿಸುವ ವಾಡಿಕೆಯಿತ್ತು. ನಂತರದ ವರ್ಷಗಳಲ್ಲೇ, ಅದನ್ನು ವರ್ಷದಲ್ಲಿ ಒಂದಕ್ಕಿಂತಲೂ ಹೆಚ್ಚು ಸಾರಿ ಆಚರಿಸುವುದು ಕ್ರೈಸ್ತಪ್ರಪಂಚದಲ್ಲಿ ರೂಢಿಯಾಯಿತು.