ನಿಮಗೆ ಸುವಾರ್ತೆಯಲ್ಲಿ ನಿಜವಾಗಿಯೂ ನಂಬಿಕೆ ಇದೆಯೆ?
ನಿಮಗೆ ಸುವಾರ್ತೆಯಲ್ಲಿ ನಿಜವಾಗಿಯೂ ನಂಬಿಕೆ ಇದೆಯೆ?
“ದೇವರ ರಾಜ್ಯವು ಸಮೀಪಿಸಿತು, ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ.”—ಮಾರ್ಕ 1:15.
1, 2. ಮಾರ್ಕ 1:14, 15ನ್ನು ನೀವು ಹೇಗೆ ವಿವರಿಸುವಿರಿ?
ಅದು ಸಾ.ಶ. 30ನೆಯ ವರುಷವಾಗಿತ್ತು. ಯೇಸು ಕ್ರಿಸ್ತನು ಗಲಿಲಾಯದಲ್ಲಿನ ತನ್ನ ಮಹಾ ಶುಶ್ರೂಷೆಯನ್ನು ಆರಂಭಿಸಿದ್ದನು. ಅವನು “ದೇವರ ಸುವಾರ್ತೆಯನ್ನು” ಸಾರುತ್ತಿದ್ದನು ಮತ್ತು ಗಲಿಲಾಯದ ಅನೇಕರು, “ಕಾಲ ಪರಿಪೂರ್ಣವಾಯಿತು, ದೇವರ ರಾಜ್ಯವು ಸಮೀಪಿಸಿತು, ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ” ಎಂಬ ಅವನ ಹೇಳಿಕೆಯಿಂದ ಪ್ರಚೋದಿತರಾದರು.—ಮಾರ್ಕ 1:14, 15.
2 ಯೇಸು ತನ್ನ ಶುಶ್ರೂಷೆಯನ್ನು ಆರಂಭಿಸುವ “ಕಾಲ” ಮತ್ತು ದೇವರ ಒಪ್ಪಿಗೆಯನ್ನು ಪಡೆಯುವಂಥ ರೀತಿಯಲ್ಲಿ ಜನರು ನಿರ್ಣಯವನ್ನು ಮಾಡಬೇಕಾದ ಕಾಲವು ಬಂದಿತ್ತು. (ಲೂಕ 12:54-56) ನಿಯುಕ್ತ ರಾಜನೋಪಾದಿ ಯೇಸು ಅಲ್ಲಿದ್ದರಿಂದ ‘ದೇವರ ರಾಜ್ಯವು ಸಮೀಪವಾಗಿತ್ತು.’ ಅವನ ಸಾರುವ ಕೆಲಸವು ಸಹೃದಯಿಗಳು ಪಶ್ಚಾತ್ತಾಪಪಡುವಂತೆ ಪ್ರಚೋದಿಸಿತು. ಆದರೆ ಅವರು ‘ಸುವಾರ್ತೆಯಲ್ಲಿ ನಂಬಿಕೆಯನ್ನು’ ಹೇಗೆ ವ್ಯಕ್ತಪಡಿಸಿದರು ಮತ್ತು ನಾವು ಹೇಗೆ ವ್ಯಕ್ತಪಡಿಸಬೇಕು?
3. ಜನರು ಸುವಾರ್ತೆಯಲ್ಲಿ ತಮಗೆ ನಂಬಿಕೆಯಿದೆ ಎಂಬುದನ್ನು ಏನನ್ನು ಮಾಡುವುದರ ಮೂಲಕ ತೋರಿಸಿದ್ದಾರೆ?
3 ಯೇಸುವಿನಂತೆ, ಅಪೊಸ್ತಲ ಪೇತ್ರನೂ ಜನರು ಪಶ್ಚಾತ್ತಾಪಪಡುವಂತೆ ಪ್ರೋತ್ಸಾಹಿಸಿದನು. ಸಾ.ಶ. 33ರ ಪಂಚಾಶತ್ತಮದಲ್ಲಿ ಯೆರೂಸಲೇಮಿನಲ್ಲಿದ್ದ ಯೆಹೂದ್ಯರನ್ನು ಸಂಬೋಧಿಸುತ್ತಾ ಪೇತ್ರನು ಹೇಳಿದ್ದು: “ನಿಮ್ಮ ಪಾಪಗಳು ಪರಿಹಾರವಾಗುವದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನ ಮೇಲೆ ದೀಕ್ಷಾಸ್ನಾನಮಾಡಿಸಿಕೊಳ್ಳಿರಿ, ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ.” ಆಗ ಸಾವಿರಾರು ಮಂದಿ ಪಶ್ಚಾತ್ತಾಪಪಟ್ಟು, ದೀಕ್ಷಾಸ್ನಾನ ಹೊಂದಿ, ಯೇಸುವಿನ ಶಿಷ್ಯರಾದರು. (ಅ. ಕೃತ್ಯಗಳು 2:38, 41; 4:4) ಸಾ.ಶ. 36ರಲ್ಲಿ, ಪಶ್ಚಾತ್ತಾಪಪಟ್ಟ ಅನ್ಯರೂ ಅದೇ ರೀತಿಯ ಹೆಜ್ಜೆಗಳನ್ನು ತೆಗೆದುಕೊಂಡರು. (ಅ. ಕೃತ್ಯಗಳು 10:1-48) ನಮ್ಮ ದಿನಗಳಲ್ಲಿ, ಸುವಾರ್ತೆಯಲ್ಲಿನ ನಂಬಿಕೆಯು ಸಾವಿರಾರು ಜನರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡು, ದೀಕ್ಷಾಸ್ನಾನ ಹೊಂದುವಂತೆ ಪ್ರಚೋದಿಸುತ್ತಿದೆ. ಅವರು ರಕ್ಷಣೆಯ ಸುವಾರ್ತೆಯನ್ನು ಅಂಗೀಕರಿಸಿ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನು ತೋರಿಸುತ್ತಿದ್ದಾರೆ. ಇದಲ್ಲದೆ, ಅವರು ನೀತಿಯನ್ನು ಅಭ್ಯಸಿಸುತ್ತಾ, ದೇವರ ರಾಜ್ಯದ ಪಕ್ಷದಲ್ಲಿ ತಮ್ಮ ನಿಲುವನ್ನು ತೆಗೆದುಕೊಂಡಿದ್ದಾರೆ.
4. ನಂಬಿಕೆಯೆಂದರೇನು?
4 ಆದರೆ ನಂಬಿಕೆಯೆಂದರೇನು? ಅಪೊಸ್ತಲ ಪೌಲನು ಬರೆದುದು: “ನಂಬಿಕೆಯು ನಿರೀಕ್ಷಿತ ಸಂಗತಿಗಳ ನಿಶ್ಚಿತ ನಿರೀಕ್ಷಣೆಯೂ, ನಿಜತ್ವಗಳು ಕಾಣದಿರುವುದಾದರೂ ಅವುಗಳ ಪ್ರತ್ಯಕ್ಷ ನಿದರ್ಶನವೂ ಆಗಿದೆ.” (ಇಬ್ರಿಯ 11:1, NW) ನಮ್ಮ ನಂಬಿಕೆಯು, ದೇವರು ತನ್ನ ವಾಕ್ಯದಲ್ಲಿ ವಾಗ್ದಾನಿಸಿರುವಂಥದ್ದೆಲ್ಲವೂ ಈಗಾಗಲೇ ನೆರವೇರಿದೆಯೋ ಎಂಬ ನಿಶ್ಚಿತತೆಯನ್ನು ನಮ್ಮಲ್ಲಿ ಉಂಟುಮಾಡುತ್ತದೆ. ನಾವು ಇಂಥಿಂಥ ಆಸ್ತಿಯ ಒಡೆಯರು ಎಂಬುದಕ್ಕೆ ಸ್ವಾಮ್ಯಪತ್ರ ನಮ್ಮಲ್ಲಿದೆಯೊ ಎಂಬಂತೆ ಇದು ಇದೆ. ಈ ನಂಬಿಕೆಯು “ಪ್ರತ್ಯಕ್ಷ ನಿದರ್ಶನ” ಅಥವಾ ಅದೃಶ್ಯ ಸಂಗತಿಗಳ ವಿಷಯದಲ್ಲಿ ದೃಢನಿಶ್ಚಯಕ್ಕೆ ರುಜುವಾತು ಕೂಡ ಆಗಿದೆ. ನಮ್ಮ ಮಾನಸಿಕ ಗ್ರಹಣಶಕ್ತಿ ಮತ್ತು ಹೃತ್ಪೂರ್ವಕ ಕೃತಜ್ಞತೆಯು, ಅಂತಹ ಸಂಗತಿಗಳನ್ನು ನಾವು ಕಂಡಿರದಿದ್ದರೂ ಅವು ವಾಸ್ತವವಾಗಿವೆ ಎಂಬದನ್ನು ನಮಗೆ ಮನಗಾಣಿಸುತ್ತದೆ.—2 ಕೊರಿಂಥ 5:7; ಎಫೆಸ 1:18.
ನಮಗೆ ನಂಬಿಕೆಯ ಅಗತ್ಯವಿದೆ!
5. ನಂಬಿಕೆಯು ಅಷ್ಟೊಂದು ಪ್ರಾಮುಖ್ಯವೇಕೆ?
5 ನಾವು ಆತ್ಮಿಕ ಆವಶ್ಯಕತೆಯುಳ್ಳವರಾಗಿ ಹುಟ್ಟಿರುವುದಾದರೂ ನಂಬಿಕೆಯುಳ್ಳವರಾಗಿ ಹುಟ್ಟುವುದಿಲ್ಲ. ವಾಸ್ತವವೇನಂದರೆ, ‘ಎಲ್ಲರಲ್ಲಿ ನಂಬಿಕೆಯಿಲ್ಲ.’ (2 ಥೆಸಲೊನೀಕ 3:2) ಆದರೂ, ದೇವರ ವಾಗ್ದಾನಗಳಿಗೆ ಬಾಧ್ಯರಾಗಬೇಕಾದರೆ ಕ್ರೈಸ್ತರಿಗೆ ನಂಬಿಕೆ ಇರಲೇಬೇಕು. (ಇಬ್ರಿಯ 6:12) ನಂಬಿಕೆಯ ಅನೇಕ ಉದಾಹರಣೆಗಳನ್ನು ಉದ್ಧರಿಸಿದ ನಂತರ ಪೌಲನು ಬರೆದುದು: “ಇಷ್ಟುಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲು ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ.” (ಇಬ್ರಿಯ 12:1, 2) ನಮಗೆ ಸುಲಭವಾಗಿ “ಹತ್ತಿಕೊಳ್ಳುವ ಪಾಪ” ಯಾವುದು? ಅದು ನಂಬಿಕೆಯ ಕೊರತೆಯಾಗಿದೆ, ನಮ್ಮಲ್ಲಿ ಒಂದು ಸಮಯದಲ್ಲಿದ್ದ ನಂಬಿಕೆಯ ನಷ್ಟವೂ ಆಗಿದೆ. ನಾವು ಬಲವಾದ ನಂಬಿಕೆಯನ್ನು ಕಾಪಾಡಿಕೊಳ್ಳಬೇಕಾದರೆ, “ಯೇಸುವಿನ ಮೇಲೆ ದೃಷ್ಟಿಯಿಟ್ಟು” ಅವನ ಮಾದರಿಯನ್ನು ಅನುಸರಿಸಬೇಕು. ನಾವು ಅನೈತಿಕತೆಯನ್ನು ತ್ಯಜಿಸಿ, ಶರೀರಭಾವದ ಕರ್ಮಗಳೊಂದಿಗೆ ಹೋರಾಡಿ, ಪ್ರಾಪಂಚಿಕತೆ, ಲೌಕಿಕ ತತ್ತ್ವಜ್ಞಾನ ಮತ್ತು ಅಶಾಸ್ತ್ರೀಯ ಸಂಪ್ರದಾಯಗಳಿಂದಲೂ ದೂರವಿರಬೇಕು. (ಗಲಾತ್ಯ 5:19-21; ಕೊಲೊಸ್ಸೆ 2:8; 1 ತಿಮೊಥೆಯ 6:9, 10; ಯೂದ 3, 4) ಇದಲ್ಲದೆ, ದೇವರು ನಮ್ಮೊಂದಿಗಿದ್ದಾನೆಂದೂ ಆತನ ವಾಕ್ಯದಲ್ಲಿರುವ ಸಲಹೆಯು ನಿಜವಾಗಿಯೂ ಕಾರ್ಯಸಾಧಕವಾಗಿದೆಯೆಂದೂ ನಾವು ನಂಬತಕ್ಕದ್ದು.
6, 7. ನಂಬಿಕೆಗಾಗಿ ಪ್ರಾರ್ಥಿಸುವುದು ಯೋಗ್ಯವಾಗಿದೆ ಏಕೆ?
6 ನಮ್ಮ ಸ್ವಂತ ದೃಢನಿಶ್ಚಯತೆಯ ಮೂಲಕ ನಾವು ನಮ್ಮೊಳಗೆ ನಂಬಿಕೆಯನ್ನು ಉತ್ಪಾದಿಸಲಾರೆವು. ನಂಬಿಕೆಯು ದೇವರ ಪವಿತ್ರಾತ್ಮದ ಅಥವಾ ಕ್ರಿಯಾಶೀಲ ಶಕ್ತಿಯ ಫಲದ ಭಾಗವಾಗಿದೆ. (ಗಲಾತ್ಯ 5:22, 23) ಹಾಗಾದರೆ ನಮ್ಮ ನಂಬಿಕೆಯು ಬಲಗೊಳ್ಳಬೇಕಾದರೆ ನಾವೇನು ಮಾಡಬೇಕು? ಯೇಸು ಹೇಳಿದ್ದು: “ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.” (ಲೂಕ 11:13) ಹೌದು, ನಾವು ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸೋಣ. ಏಕೆಂದರೆ ತೀರ ಪರೀಕ್ಷಾತ್ಮಕ ಸನ್ನಿವೇಶಗಳ ಕೆಳಗೂ ದೇವರ ಚಿತ್ತವನ್ನು ಮಾಡಲು ಬೇಕಾಗಿರುವ ನಂಬಿಕೆಯನ್ನು ಅದು ನಮ್ಮಲ್ಲಿ ಉತ್ಪಾದಿಸಬಲ್ಲದು.—ಎಫೆಸ 3:20.
7 ಹೆಚ್ಚು ನಂಬಿಕೆಗಾಗಿ ಪ್ರಾರ್ಥಿಸುವುದು ಯೋಗ್ಯವಾಗಿದೆ. ಒಬ್ಬ ಹುಡುಗನಲ್ಲಿದ್ದ ದೆವ್ವವನ್ನು ಯೇಸು ಬಿಡಿಸಲಿದ್ದಾಗ, ಆ ಹುಡುಗನ ತಂದೆಯು ಬೇಡಿಕೊಂಡದ್ದು: “ನಂಬುತ್ತೇನೆ, ನನಗೆ ನಂಬಿಕೆ ಕಡಿಮೆಯಾಗಿದ್ದರೂ ಸಹಾಯಮಾಡು.” (ಮಾರ್ಕ 9:24) “ನಮ್ಮ ನಂಬಿಕೆಯನ್ನು ಹೆಚ್ಚಿಸು” ಎಂದು ಯೇಸುವಿನ ಶಿಷ್ಯರು ಹೇಳಿದರು. (ಲೂಕ 17:5) ಆದುದರಿಂದ, ದೇವರು ಅಂತಹ ಪ್ರಾರ್ಥನೆಗಳಿಗೆ ಉತ್ತರ ಕೊಡುತ್ತಾನೆಂಬ ಭರವಸೆಯಿಂದ ನಾವು ನಂಬಿಕೆಗಾಗಿ ಪ್ರಾರ್ಥಿಸೋಣ.—1 ಯೋಹಾನ 5:14.
ದೇವರ ವಾಕ್ಯದಲ್ಲಿನ ನಂಬಿಕೆಯು ಅತ್ಯಾವಶ್ಯಕ
8. ದೇವರ ವಾಕ್ಯದಲ್ಲಿನ ನಂಬಿಕೆಯು ನಮಗೆ ಹೇಗೆ ಸಹಾಯಮಾಡಬಲ್ಲದು?
8 ಯೇಸು ತನ್ನ ಯಜ್ಞಾರ್ಪಿತ ಮರಣಕ್ಕೆ ತುಸು ಮುಂಚೆ ತನ್ನ ಶಿಷ್ಯರಿಗೆ ಹೇಳಿದ್ದು: “ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.” (ಯೋಹಾನ 14:1) ಕ್ರೈಸ್ತರಾಗಿರುವ ನಮಗೆ ದೇವರಲ್ಲಿಯೂ ಆತನ ಕುಮಾರನಲ್ಲಿಯೂ ನಂಬಿಕೆಯಿದೆ ನಿಜ. ಆದರೆ ದೇವರ ವಾಕ್ಯದ ಕುರಿತಾಗಿ ಏನು? ನಾವು ಅದನ್ನು ಅಧ್ಯಯನ ಮಾಡಿ, ಅದು ನಮಗೆ ಲಭ್ಯವಿರುವ ಅತ್ಯಂತ ಉತ್ತಮ ಸಲಹೆ ಮತ್ತು ಮಾರ್ಗದರ್ಶನವನ್ನು ಒದಗಿಸುತ್ತದೆಂಬ ಭರವಸೆಯಿಂದ ಅದನ್ನು ಅನ್ವಯಿಸಿಕೊಳ್ಳುವಲ್ಲಿ, ಅದು ನಮ್ಮ ಜೀವನಕ್ಕೆ ಪ್ರಯೋಜನ ತರುವಂತಹ ಶಕ್ತಿಯುತವಾದ ಪ್ರಭಾವವನ್ನು ಬೀರಬಲ್ಲದು.—ಇಬ್ರಿಯ 4:12.
9, 10. ಯಾಕೋಬ 1:5-8ರಲ್ಲಿ ನಂಬಿಕೆಯ ಕುರಿತು ಏನು ಹೇಳಲ್ಪಟ್ಟಿದೆಯೋ ಅದನ್ನು ನೀವು ಹೇಗೆ ವಿವರಿಸುವಿರಿ?
9 ಅಪರಿಪೂರ್ಣ ಮಾನವರಾಗಿರುವ ನಮ್ಮ ಜೀವನವು ಕಷ್ಟತೊಂದರೆಗಳಿಂದ ತುಂಬಿದೆ. ಆದರೂ, ದೇವರ ವಾಕ್ಯದಲ್ಲಿನ ನಂಬಿಕೆಯು ನಮಗೆ ನಿಜವಾಗಿಯೂ ಸಹಾಯಮಾಡಬಲ್ಲದು. (ಯೋಬ 14:1) ಉದಾಹರಣೆಗೆ, ಒಂದು ಪರೀಕ್ಷೆ ಬರುವಾಗ ಅದನ್ನು ಹೇಗೆ ಎದುರಿಸುವುದೆಂದು ನಮಗೆ ತಿಳಿದಿರುವುದಿಲ್ಲ ಎಂದು ನೆನಸೋಣ. ದೇವರ ವಾಕ್ಯವು ನಮಗೆ ಈ ಸಲಹೆಯನ್ನು ನೀಡುತ್ತದೆ: “ನಿಮ್ಮಲ್ಲಿ ಯಾವನಿಗಾದರೂ ಜ್ಞಾನ [“ವಿವೇಕ,” NW] ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ [“ಕೇಳಿಕೊಳ್ಳುತ್ತಾ ಇರಲಿ,” NW], ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ. ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಟ್ಟು ಕೇಳಿಕೊಳ್ಳಬೇಕು [“ನಂಬಿಕೆಯಿಂದ ಕೇಳಿಕೊಳ್ಳುತ್ತಾ ಇರಬೇಕು,” NW]. ಸಂದೇಹಪಡುವವನೋ ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯಂತೆ ಅಲೆಯುತ್ತಿರುವನು. ಆ ಮನುಷ್ಯನು ತಾನು ಕರ್ತನಿಂದ [“ಯೆಹೋವನಿಂದ,” NW] ಏನಾದರೂ ಹೊಂದುವೆನೆಂದು ಭಾವಿಸದೆ ಇರಲಿ; ಅವನು ಎರಡು ಮನಸ್ಸುಳ್ಳವನೂ ತನ್ನ ನಡತೆಯಲ್ಲೆಲ್ಲಾ ಚಂಚಲನೂ ಆಗಿದ್ದಾನೆ.”—ಯಾಕೋಬ 1:5-8.
10 ನಮ್ಮಲ್ಲಿ ವಿವೇಕದ ಕೊರತೆಯಿದ್ದು, ನಾವು ಅದಕ್ಕಾಗಿ ಪ್ರಾರ್ಥಿಸಿದರೆ ಯೆಹೋವ ದೇವರು ನಮ್ಮನ್ನು ನಿಂದಿಸುವುದಿಲ್ಲ. ಬದಲಾಗಿ, ನಾವು ಆ ಪರೀಕ್ಷೆಯನ್ನು ಯೋಗ್ಯ ರೀತಿಯಲ್ಲಿ ವೀಕ್ಷಿಸುವಂತೆ ಆತನು ನಮಗೆ ಸಹಾಯಮಾಡುವನು. ಜೊತೆ ವಿಶ್ವಾಸಿಗಳಿಂದ ಅಥವಾ ನಾವು ಬೈಬಲ್ ಅಧ್ಯಯನಮಾಡುವಾಗ, ಸಹಾಯಕರವಾದ ಶಾಸ್ತ್ರವಚನಗಳು ನಮ್ಮ ಗಮನಕ್ಕೆ ತರಲ್ಪಡಬಹುದು. ಅಥವಾ ಯೆಹೋವನ ಪವಿತ್ರಾತ್ಮವು ನಮ್ಮನ್ನು ಬೇರೊಂದು ರೀತಿಯಲ್ಲಿ ಮಾರ್ಗದರ್ಶಿಸಬಹುದು. ನಾವು “ಸಂದೇಹಪಡದೆ ನಂಬಿಕೆಯಿಂದ ಕೇಳಿಕೊಳ್ಳುತ್ತಾ” ಇರುವಲ್ಲಿ, ನಾವು ಪರೀಕ್ಷೆಗಳನ್ನು ನಿಭಾಯಿಸುವಂತೆ ನಮ್ಮ ಸ್ವರ್ಗೀಯ ತಂದೆಯು ನಮಗೆ ವಿವೇಕವನ್ನು ದಯಪಾಲಿಸುವನು. ಆದರೆ ನಾವು ಸಮುದ್ರದ ಗಾಳಿಯಿಂದ ಬಡಿಯಲ್ಪಡುವ ತೆರೆಯಂತಿರುವಲ್ಲಿ, ದೇವರಿಂದ ಏನನ್ನೂ ಪಡೆಯಲು ನಿರೀಕ್ಷಿಸಲಾರೆವು. ಏಕೆ? ಏಕೆಂದರೆ, ನಾವು ಪ್ರಾರ್ಥನೆಯಲ್ಲಿ ಅಥವಾ ಬೇರೆ ವಿಷಯಗಳಲ್ಲಿ—ಹೌದು, ದೇವರಲ್ಲಿ ನಂಬಿಕೆಯನ್ನು ತೋರಿಸುವುದರಲ್ಲಿಯೂ, ಎರಡು ಮನಸ್ಸುಳ್ಳವರೂ ಚಂಚಲರೂ ಆಗಿದ್ದೇವೆಂದೇ ಇದರರ್ಥ. ಆದುದರಿಂದ, ದೇವರ ವಾಕ್ಯದಲ್ಲಿ ಮತ್ತು ಅದು ಒದಗಿಸುವಂಥ ಮಾರ್ಗದರ್ಶನದಲ್ಲಿ ನಮಗೆ ಸ್ಥಿರ ನಂಬಿಕೆಯಿರಬೇಕು. ಅದು ನಮಗೆ ಹೇಗೆ ಸಹಾಯ ಮತ್ತು ಮಾರ್ಗದರ್ಶನವನ್ನು
ನೀಡುತ್ತದೆಂಬುದರ ಬಗ್ಗೆ ನಾವು ಕೆಲವು ಉದಾಹರಣೆಗಳನ್ನು ಪರಿಗಣಿಸೋಣ.ನಂಬಿಕೆ ಮತ್ತು ಪೋಷಣೆ
11. ದೇವರ ವಾಕ್ಯದಲ್ಲಿನ ನಂಬಿಕೆಯು ನಮ್ಮ ದೈನಂದಿನ ಅಗತ್ಯಗಳ ಕುರಿತು ಯಾವ ಆಶ್ವಾಸನೆಯನ್ನು ನೀಡುತ್ತದೆ?
11 ನಾವೀಗ ಬೇಕಾದಂಥ ಆಹಾರ ಅಥವಾ ಮನೆಯಿಲ್ಲದವರಾಗಿ ಇಲ್ಲವೆ ಬಡವರಾಗಿರುವಲ್ಲಿ ಆಗೇನು? ಯೆಹೋವನು ನಮ್ಮ ದೈನಂದಿನ ಆವಶ್ಯಕತೆಗಳನ್ನು ಪೂರೈಸಿ, ಕೊನೆಗೆ ತನ್ನನ್ನು ಪ್ರೀತಿಸುವವರೆಲ್ಲರಿಗೆ ಹೊಸ ವಿಷಯಗಳ ವ್ಯವಸ್ಥೆಯಲ್ಲಿ ಸಮೃದ್ಧ ಒದಗಿಸುವಿಕೆಯನ್ನು ಮಾಡುವನು ಎಂಬ ನಿಶ್ಚಿತ ನಿರೀಕ್ಷಣೆಯನ್ನು, ದೇವರ ವಾಕ್ಯದಲ್ಲಿನ ನಂಬಿಕೆಯು ನಮಗೆ ನೀಡುತ್ತದೆ. (ಕೀರ್ತನೆ 72:16; ಲೂಕ 11:2, 3) ಯೆಹೋವನು ತನ್ನ ಪ್ರವಾದಿಯಾಗಿದ್ದ ಎಲೀಯನಿಗೆ ಬರಗಾಲದ ಸಮಯದಲ್ಲಿ ಆಹಾರವನ್ನು ಹೇಗೆ ಒದಗಿಸಿದನೆಂಬುದನ್ನು ನೆನಪಿಸಿಕೊಳ್ಳುವುದು ನಮಗೆ ಪ್ರೋತ್ಸಾಹದಾಯಕವಾಗಿರಬಹುದು. ತದನಂತರ, ಒಬ್ಬ ಸ್ತ್ರೀ, ಆಕೆಯ ಮಗ ಮತ್ತು ಎಲೀಯರು ಜೀವದಿಂದ ಉಳಿಯಲಿಕ್ಕಾಗಿ ದೇವರು ಅದ್ಭುತಕರವಾಗಿ ಹಿಟ್ಟು ಮತ್ತು ಎಣ್ಣೆಯ ಸರಬರಾಯಿ ಖಾಲಿಯಾಗದೆ ಇರುವಂತೆ ಏರ್ಪಡಿಸಿದನು. (1 ಅರಸುಗಳು 17:2-16) ಅದೇ ವಿಧದಲ್ಲಿ, ಬಾಬೆಲು ಯೆರೂಸಲೇಮಿಗೆ ಮುತ್ತಿಗೆ ಹಾಕಿದಾಗ ಯೆಹೋವನು ಪ್ರವಾದಿಯಾಗಿದ್ದ ಯೆರೆಮೀಯನ ಅಗತ್ಯಗಳನ್ನು ಪೂರೈಸಿದನು. (ಯೆರೆಮೀಯ 37:21) ಯೆರೆಮೀಯ ಮತ್ತು ಎಲೀಯರಿಗೆ ತಿನ್ನಲು ಕೊಂಚವೇ ಇತ್ತಾದರೂ, ಯೆಹೋವನು ಅವರ ಪರಾಮರಿಕೆ ಮಾಡಿದನು. ಇಂದು ಆತನಲ್ಲಿ ನಂಬಿಕೆಯಿಡುವವರನ್ನೂ ಆತನು ಹಾಗೆಯೇ ಪರಾಮರಿಸುತ್ತಾನೆ.—ಮತ್ತಾಯ 6:11, 25-34.
12. ನಂಬಿಕೆಯು ನಮಗೆ ಮೂಲ ಆಹಾರವನ್ನು ಪಡೆಯಲು ಹೇಗೆ ಸಹಾಯಮಾಡುವುದು?
12 ನಂಬಿಕೆ ಹಾಗೂ ಅದರ ಜೊತೆಗೆ ಬೈಬಲ್ ಮೂಲತತ್ತ್ವಗಳ ಅನ್ವಯವು ನಮ್ಮನ್ನು ಪ್ರಾಪಂಚಿಕವಾಗಿ ಧನಿಕರನ್ನಾಗಿ ಮಾಡುವುದಿಲ್ಲವಾದರೂ, ಅದು ನಮಗೆ ಮೂಲ ಆವಶ್ಯಕತೆಗಳನ್ನು ಪಡೆದುಕೊಳ್ಳಲು ಸಹಾಯಮಾಡುವುದು. ದೃಷ್ಟಾಂತಕ್ಕಾಗಿ: ನಾವು ಪ್ರಾಮಾಣಿಕರೂ, ಸಮರ್ಥರೂ, ಕಷ್ಟಪಟ್ಟು ಕೆಲಸಮಾಡುವವರೂ ಆಗಿರಬೇಕೆಂದು ಬೈಬಲು ನಮಗೆ ಸಲಹೆ ನೀಡುತ್ತದೆ. (ಜ್ಞಾನೋಕ್ತಿ 22:29; ಪ್ರಸಂಗಿ 5:18, 19; 2 ಕೊರಿಂಥ 8:21) ಒಬ್ಬ ಒಳ್ಳೆಯ ಕೆಲಸಗಾರರು ಎಂಬ ಸತ್ಕೀರ್ತಿಯನ್ನು ಹೊಂದಿರುವುದರ ಮೌಲ್ಯವನ್ನು ನಾವೆಂದಿಗೂ ಕಡಿಮೆ ಅಂದಾಜುಮಾಡಬಾರದು. ಒಳ್ಳೇ ಕೆಲಸಗಳು ವಿರಳವಾಗಿರುವಂಥ ಸ್ಥಳಗಳಲ್ಲಿಯೂ, ಪ್ರಾಮಾಣಿಕರೂ, ಕುಶಲರೂ, ಶ್ರಮಶೀಲರೂ ಆಗಿರುವವರಿಗೆ ಇತರರಿಗಿಂತ ಹೆಚ್ಚು ಉದ್ಯೋಗ ಸಂದರ್ಭಗಳು ದೊರೆಯುತ್ತವೆ. ಇಂತಹ ಕೆಲಸಗಾರರಿಗೆ ಪ್ರಾಪಂಚಿಕವಾಗಿ ಸ್ವಲ್ಪವೇ ಇರಬಹುದಾದರೂ, ಅವರಿಗೆ ಸಾಮಾನ್ಯವಾಗಿ ಮೂಲಭೂತ ಆವಶ್ಯಕತೆಗಳು ದೊರೆಯುವುದಲ್ಲದೆ, ತಾವೇ ದುಡಿದು ಸಂಪಾದಿಸಿರುವ ಹಣದಿಂದ ಊಟಮಾಡುವ ತೃಪ್ತಿಯೂ ಇರುವುದು.—2 ಥೆಸಲೊನೀಕ 3:11, 12.
ಶೋಕವನ್ನು ಸಹಿಸಿಕೊಳ್ಳಲು ನಂಬಿಕೆಯು ಸಹಾಯಮಾಡುತ್ತದೆ
13, 14. ನಾವು ದುಃಖವನ್ನು ಸಹಿಸಿಕೊಳ್ಳುವಂತೆ ನಂಬಿಕೆಯು ನಮಗೆ ಹೇಗೆ ಸಹಾಯಮಾಡುವುದು?
13 ಪ್ರಿಯನೊಬ್ಬನು ಮರಣಪಟ್ಟಾಗ ಶೋಕಿಸುವುದು ಸ್ವಾಭಾವಿಕವೆಂದು ದೇವರ ವಾಕ್ಯವು ವಾಸ್ತವಿಕವಾಗಿ ತೋರಿಸುತ್ತದೆ. ನಂಬಿಗಸ್ತ ಮೂಲಪಿತನಾಗಿದ್ದ ಅಬ್ರಹಾಮನು ತನ್ನ ಪ್ರಿಯ ಪತ್ನಿಯಾಗಿದ್ದ ಸಾರಳ ಮರಣಕ್ಕಾಗಿ ಶೋಕಿಸಿದನು. (ಆದಿಕಾಂಡ 23:2) ತನ್ನ ಮಗ ಅಬ್ಷಾಲೋಮನು ಸತ್ತನೆಂದು ಕೇಳಿದ ಕೂಡಲೆ ದಾವೀದನು ಶೋಕತಪ್ತನಾದನು. (2 ಸಮುವೇಲ 18:33) ಪರಿಪೂರ್ಣ ಮನುಷ್ಯನಾಗಿದ್ದ ಯೇಸು ಕೂಡ ತನ್ನ ಮಿತ್ರ ಲಾಜರನ ಮರಣದ ಸಮಯದಲ್ಲಿ ಅತ್ತನು. (ಯೋಹಾನ 11:35, 36) ಒಬ್ಬ ಪ್ರಿಯ ವ್ಯಕ್ತಿಯು ಸಾಯುವಾಗ ನಾವು ತುಂಬ ಶೋಕಿತರಾಗಬಹುದಾದರೂ, ದೇವರ ವಾಕ್ಯದಲ್ಲಿರುವ ವಾಗ್ದಾನಗಳಲ್ಲಿ ನಮಗಿರುವ ನಂಬಿಕೆಯು ಅಂತಹ ದುಃಖವನ್ನು ನಾವು ಸಹಿಸಿಕೊಳ್ಳುವಂತೆ ನಮಗೆ ಸಹಾಯಮಾಡಬಲ್ಲದು.
ಅ. ಕೃತ್ಯಗಳು 24:15) ದೊಡ್ಡ ಸಂಖ್ಯೆಯಲ್ಲಿ ಜನರನ್ನು ಪುನಃ ಜೀವಂತಗೊಳಿಸುವ ದೇವರ ಆ ಏರ್ಪಾಡಿನಲ್ಲಿ ನಾವು ನಂಬಿಕೆಯನ್ನಿಡುವ ಆವಶ್ಯಕತೆಯಿದೆ. (ಯೋಹಾನ 5:28, 29) ಅವರಲ್ಲಿ, ಈಗ ಮರಣದಲ್ಲಿ ನಿದ್ರಿಸುತ್ತಿರುವ ಮತ್ತು ದೇವರ ನೂತನ ಲೋಕದಲ್ಲಿ ನಡೆಯಲಿರುವ ಪುನರುತ್ಥಾನಕ್ಕಾಗಿ ಕಾದುಕೊಂಡಿರುವ ಅಬ್ರಹಾಮ ಮತ್ತು ಸಾರ, ಇಸಾಕ ಮತ್ತು ರೆಬೆಕ್ಕ, ಯಾಕೋಬ ಮತ್ತು ಲೇಯರು ಇರುವರು. (ಆದಿಕಾಂಡ 49:29-32) ನಮ್ಮ ಪ್ರಿಯರು ಈ ಭೂಮಿಯಲ್ಲಿ ಜೀವಿಸಲಿಕ್ಕಾಗಿ ಮರಣದ ನಿದ್ರೆಯಿಂದ ಎಬ್ಬಿಸಲ್ಪಡುವಾಗ ಎಂತಹ ಹರ್ಷವು ಇರುವುದು! (ಪ್ರಕಟನೆ 20:11-15) ಈಮಧ್ಯೆ, ನಂಬಿಕೆಯು ಸಕಲ ದುಃಖವನ್ನು ನೀಗಿಸದಿದ್ದರೂ, ವಿಯೋಗದ ದುಃಖವನ್ನು ಸಹಿಸಿಕೊಳ್ಳಲು ನಮಗೆ ಸಹಾಯಮಾಡುವ ದೇವರಿಗೆ ಇದು ನಮ್ಮನ್ನು ಸಮೀಪವಾಗಿರಿಸುವುದು.—ಕೀರ್ತನೆ 121:1-3; 2 ಕೊರಿಂಥ 1:3.
14 ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದೆಂಬ ನಿರೀಕ್ಷೆ ದೇವರಲ್ಲಿ ನನಗಿದೆ’ ಎಂದನು ಪೌಲನು. (ನಂಬಿಕೆಯು ಖಿನ್ನರನ್ನು ಬಲಪಡಿಸುತ್ತದೆ
15, 16. (ಎ) ನಂಬಿಕೆಯಿರುವವರ ಮಧ್ಯೆ ಖಿನ್ನತೆಯು ಸಾಮಾನ್ಯ ಸಂಗತಿಯೆಂದು ನಾವೇಕೆ ಹೇಳಬಲ್ಲೆವು? (ಬಿ) ಖಿನ್ನತೆಯನ್ನು ನಿಭಾಯಿಸಲು ನಾವೇನು ಮಾಡಬಲ್ಲೆವು?
15 ನಂಬಿಕೆಯಿರುವವರು ಸಹ ಖಿನ್ನತೆಗೆ ಬಲಿಯಾಗುವ ಸಾಧ್ಯತೆಯಿದೆಯೆಂದು ದೇವರ ವಾಕ್ಯವು ತೋರಿಸುತ್ತದೆ. ಕಠಿನ ಪರೀಕ್ಷೆಯ ಕಾಲದಲ್ಲಿ, ದೇವರು ತನ್ನ ಕೈಬಿಟ್ಟಿದ್ದಾನೆಂದು ಯೋಬನು ನೆನಸಿದನು. (ಯೋಬ 29:2-5) ಯೆರೂಸಲೇಮ್ ಮತ್ತು ಅದರ ಗೋಡೆಗಳ ಹಾಳುಬೀಳುವಿಕೆಯು ನೆಹೆಮೀಯನನ್ನು ಖಿನ್ನನನ್ನಾಗಿ ಮಾಡಿತು. (ನೆಹೆಮೀಯ 2:1-3) ಯೇಸುವನ್ನು ಅಲ್ಲಗಳೆದ ಮೇಲೆ ಪೇತ್ರನು ಎಷ್ಟು ಮನಗುಂದಿದವನಾದನೆಂದರೆ, ಅವನು “ಬಹು ವ್ಯಥೆಪಟ್ಟು ಅತ್ತನು.” (ಲೂಕ 22:62) ಮತ್ತು ಥೆಸಲೊನೀಕ ಸಭೆಯಲ್ಲಿದ್ದ ಜೊತೆ ವಿಶ್ವಾಸಿಗಳಿಗೆ, “ಮನಗುಂದಿದವರನ್ನು ಧೈರ್ಯ”ಪಡಿಸುವಂತೆ ಪೌಲನು ಪ್ರೋತ್ಸಾಹಿಸಿದನು. (1 ಥೆಸಲೊನೀಕ 5:14) ಈ ಕಾರಣದಿಂದ, ಇಂದು ನಂಬಿಕೆಯಿರುವವರ ಮಧ್ಯೆ ಖಿನ್ನರಾಗಿರುವವರೂ ಇರುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಹಾಗಾದರೆ, ಖಿನ್ನತೆಯನ್ನು ನಿಭಾಯಿಸಲು ನಾವೇನು ಮಾಡಬಲ್ಲೆವು?
16 ನಮಗೆ ಗಂಭೀರವಾದ ಅನೇಕ ಸಮಸ್ಯೆಗಳನ್ನು ಎದುರಿಸಲಿಕ್ಕಿರುವುದರಿಂದ ನಾವು ಖಿನ್ನರಾಗಿರಬಹುದು. ಅವೆಲ್ಲವನ್ನೂ ಜೊತೆಯಾಗಿ ಒಂದು ದೊಡ್ಡ ಸಮಸ್ಯೆಯೆಂದು ಪರಿಗಣಿಸುವ ಬದಲು, ಬೈಬಲ್ ಮೂಲತತ್ತ್ವಗಳನ್ನು ಉಪಯೋಗಿಸಿ ಅವುಗಳನ್ನು ಒಂದೊಂದಾಗಿ ಬಗೆಹರಿಸಲು ನಮಗೆ ಸಾಧ್ಯವಾಗಬಹುದು. ಇದು ನಮ್ಮ ಖಿನ್ನತೆಯನ್ನು ಕಡಿಮೆಗೊಳಿಸಲು ಸಹಾಯಮಾಡೀತು. ಸಮತೂಕದ ಚಟುವಟಿಕೆ ಮತ್ತು ಸಾಕಷ್ಟು ವಿಶ್ರಾಂತಿಯೂ ಸಹಾಯಕರವಾಗಿರಬಹುದು. ಒಂದು ವಿಷಯವಂತೂ ಖಂಡಿತ: ದೇವರಲ್ಲಿಯೂ ಆತನ ವಾಕ್ಯದಲ್ಲಿಯೂ ಇರುವ ನಂಬಿಕೆಯು ನಮ್ಮ ಆತ್ಮಿಕ ಹಿತಕ್ಷೇಮವನ್ನು ವರ್ಧಿಸುತ್ತದೆ. ಏಕೆಂದರೆ ಆತನು ನಮ್ಮನ್ನು ನಿಜವಾಗಿಯೂ ಪರಾಮರಿಸುತ್ತಾನೆಂಬ ನಮ್ಮ ದೃಢನಿಶ್ಚಯವನ್ನು ಅದು ಬಲಪಡಿಸುತ್ತದೆ.
17. ಯೆಹೋವನು ನಮ್ಮ ವಿಷಯದಲ್ಲಿ ಚಿಂತಿಸುತ್ತಾನೆಂಬುದು ನಮಗೆ ಹೇಗೆ ಗೊತ್ತಿದೆ?
17 ಪೇತ್ರನು ನಮಗೆ ಈ ಸಾಂತ್ವನದಾಯಕ ಆಶ್ವಾಸನೆಯನ್ನು ಕೊಡುತ್ತಾನೆ: “ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು. ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:6, 7) ಕೀರ್ತನೆಗಾರನು ಹಾಡಿದ್ದು: “ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನೂ ಕುಗ್ಗಿದವರನ್ನೆಲ್ಲಾ ಉದ್ಧರಿಸುವವನೂ ಆಗಿದ್ದಾನೆ.” (ಕೀರ್ತನೆ 145:14) ನಾವು ಈ ಆಶ್ವಾಸನೆಗಳನ್ನು ನಂಬಬೇಕು, ಏಕೆಂದರೆ ಅವು ದೇವರ ವಾಕ್ಯದಲ್ಲಿ ಕಂಡುಬರುತ್ತವೆ. ಖಿನ್ನತೆಯು ಮುಂದುವರಿಯುತ್ತಾ ಹೋಗಬಹುದಾದರೂ, ನಾವು ನಮ್ಮ ಸ್ವರ್ಗೀಯ ತಂದೆಯ ಮೇಲೆ ನಮ್ಮ ಎಲ್ಲಾ ಚಿಂತಾಭಾರವನ್ನು ಹಾಕಬಲ್ಲೆವೆಂಬ ತಿಳಿವಳಿಕೆಯು ನಮ್ಮ ನಂಬಿಕೆಯನ್ನು ಎಷ್ಟು ಬಲಗೊಳಿಸುತ್ತದೆ!
ನಂಬಿಕೆ ಮತ್ತು ಬೇರೆ ಪರೀಕ್ಷೆಗಳು
18, 19. ಕಾಯಿಲೆಯನ್ನು ನಿಭಾಯಿಸಿ, ರೋಗಿಗಳಾದ ಜೊತೆ ವಿಶ್ವಾಸಿಗಳಿಗೆ ಸಾಂತ್ವನ ನೀಡಲು ನಂಬಿಕೆಯು ನಮಗೆ ಹೇಗೆ ಸಹಾಯ ನೀಡುತ್ತದೆ?
18 ಗಂಭೀರವಾದ ಕಾಯಿಲೆಯಿಂದ ನಾವಾಗಲಿ ನಮ್ಮ ಫಿಲಿಪ್ಪಿ 2:25-30; 1 ತಿಮೊಥೆಯ 5:23; 2 ತಿಮೊಥೆಯ 4:20) ಇದಲ್ಲದೆ, “ದಿಕ್ಕಿಲ್ಲದವನನ್ನು ಪರಾಂಬರಿಸುವವನ” ವಿಷಯದಲ್ಲಿ, “ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು; ಅವನ ರೋಗವನ್ನೆಲ್ಲಾ ಪರಿಹರಿಸಿ ಆರೋಗ್ಯವನ್ನುಂಟುಮಾಡಿದಿಯಲ್ಲಾ” ಎಂದು ಕೀರ್ತನೆಗಾರನು ಹಾಡಿದನು. (ಕೀರ್ತನೆ 41:1-3) ಕೀರ್ತನೆಗಾರನ ಈ ಮಾತುಗಳು, ನಾವು ರೋಗಿಗಳಾದ ಜೊತೆವಿಶ್ವಾಸಿಗಳಿಗೆ ಸಾಂತ್ವನ ನೀಡುವಂತೆ ನಮಗೆ ಹೇಗೆ ಸಹಾಯಮಾಡಬಲ್ಲವು?
ಪ್ರಿಯರಾಗಲಿ ನರಳುತ್ತಿರುವಾಗ, ನಾವು ನಮ್ಮ ನಂಬಿಕೆಯ ಮಹಾ ಪರೀಕ್ಷೆಯನ್ನು ಅನುಭವಿಸಬಹುದು. ಎಪಫ್ರೊದೀತ, ತಿಮೊಥೆಯ ಮತ್ತು ತ್ರೊಫಿಮರಂಥ ಕ್ರೈಸ್ತರು ಅದ್ಭುತಕರವಾಗಿ ವಾಸಿಮಾಡಲ್ಪಟ್ಟರು ಎಂದು ಬೈಬಲು ಹೇಳುವುದಿಲ್ಲವಾದರೂ, ಯೆಹೋವನು ಅವರಿಗೆ ಸಹಿಸಿಕೊಳ್ಳಲು ಸಹಾಯ ನೀಡಿದನೆಂಬುದು ನಿಸ್ಸಂದೇಹ. (19 ಆತ್ಮಿಕ ನೆರವನ್ನು ಒದಗಿಸುವಂಥ ಒಂದು ವಿಧವು ರೋಗಿಗಳೊಂದಿಗೆ ಅವರಿಗಾಗಿ ಪ್ರಾರ್ಥಿಸುವುದೇ ಆಗಿದೆ. ಇಂದು ಅದ್ಭುತಕರವಾದ ವಾಸಿಯಾಗುವಿಕೆಯನ್ನು ನಾವು ಕೇಳಿಕೊಳ್ಳುವುದಿಲ್ಲವಾದರೂ, ಆ ಕಾಯಿಲೆಯನ್ನು ತಾಳಿಕೊಳ್ಳುವಂತೆ ದೇವರು ಅವರಿಗೆ ಮನೋಬಲವನ್ನು ಮತ್ತು ಈ ದೌರ್ಬಲ್ಯದ ಸಮಯಗಳನ್ನು ಸಹಿಸಿಕೊಳ್ಳಲು ಆತ್ಮಿಕ ಶಕ್ತಿಯನ್ನು ಕೊಡಲಿ ಎಂದು ನಾವು ಬೇಡಿಕೊಳ್ಳಬಹುದು. ಯೆಹೋವನು ಅವರ ಪೋಷಣೆಯನ್ನು ಮಾಡುವನು ಮತ್ತು “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು” ಎಂದು ವರ್ಣಿಸಲಾಗಿರುವ ಸಮಯವನ್ನು ಅವರು ಮುನ್ನೋಡುವ ಮೂಲಕ ಅವರ ನಂಬಿಕೆಯು ಬಲಗೊಳಿಸಲ್ಪಡುವುದು. (ಯೆಶಾಯ 33:24) ಪುನರುತ್ಥಿತ ಯೇಸು ಕ್ರಿಸ್ತನ ಮೂಲಕ ಮತ್ತು ದೇವರ ರಾಜ್ಯದ ಮುಖೇನ ವಿಧೇಯ ಮಾನವಕುಲವು, ಪಾಪ, ರೋಗ ಮತ್ತು ಮರಣದಿಂದ ಶಾಶ್ವತ ಬಿಡುಗಡೆಯನ್ನು ಪಡೆಯುವುದು ಎಂದು ತಿಳಿಯುವುದು ಎಷ್ಟು ಸಾಂತ್ವನದಾಯಕ! ಈ ಮಹಾ ಪ್ರತೀಕ್ಷೆಗಳಿಗಾಗಿ ನಾವು “ಸಮಸ್ತರೋಗಗಳನ್ನು ವಾಸಿಮಾಡುವವನು” ಆಗಿರುವ ಯೆಹೋವನಿಗೆ ಉಪಕಾರಸ್ತುತಿ ಮಾಡುತ್ತೇವೆ.—ಕೀರ್ತನೆ 103:1-3; ಪ್ರಕಟನೆ 21:1-5.
20. ವೃದ್ಧಾಪ್ಯದ “ಕಷ್ಟದ ದಿನ”ಗಳಲ್ಲಿ ನಂಬಿಕೆಯು ನಮ್ಮನ್ನು ಹೊತ್ತುಕೊಂಡು ಹೋಗಬಲ್ಲದೆಂದು ಏಕೆ ಹೇಳಸಾಧ್ಯವಿದೆ?
20 ವೃದ್ಧಾಪ್ಯದ “ಕಷ್ಟದ ದಿನಗಳು” ಬಂದು, ನಮ್ಮ ಆರೋಗ್ಯ ಮತ್ತು ಶಕ್ತಿಯು ಕುಂದುವಾಗ ಸಹ ನಂಬಿಕೆಯು ನಾವು ತಾಳಿಕೊಳ್ಳುವಂತೆ ಸಹಾಯಮಾಡಬಲ್ಲದು. (ಪ್ರಸಂಗಿ 12:1-7) ಆದಕಾರಣ, ನಮ್ಮಲ್ಲಿ ವೃದ್ಧರಾಗಿರುವವರು, ವೃದ್ಧನಾಗುತ್ತಿದ್ದ ಕೀರ್ತನೆಗಾರನು ಹಾಡಿದಂತೆ ಪ್ರಾರ್ಥಿಸಸಾಧ್ಯವಿದೆ: “ಕರ್ತನಾದ ಯೆಹೋವನೇ, ಬಾಲ್ಯಾರಭ್ಯ ನನ್ನ ನಿರೀಕ್ಷೆಯೂ ಭರವಸವೂ ನೀನಲ್ಲವೋ? ವೃದ್ಧಾಪ್ಯದಲ್ಲಿ ನನ್ನನ್ನು ಧಿಕ್ಕರಿಸಬೇಡ; ನನ್ನ ಬಲವು ಕುಂದಿದಾಗ ಕೈಬಿಡಬೇಡ.” (ಕೀರ್ತನೆ 71:5, 9) ದೇವರ ಸೇವೆ ಮಾಡುತ್ತಾ ವೃದ್ಧರಾಗಿರುವ ನಮ್ಮ ಅನೇಕ ಜೊತೆ ಕ್ರೈಸ್ತರಂತೆಯೇ ಕೀರ್ತನೆಗಾರನು ಯೆಹೋವನ ಬೆಂಬಲದ ಆವಶ್ಯಕತೆಯನ್ನು ಮನಗಂಡನು. ತಮ್ಮ ನಂಬಿಕೆಯ ಕಾರಣ, ಯೆಹೋವನ ನಿತ್ಯವಾದ ಹಸ್ತಗಳ ವಿಫಲಗೊಳ್ಳದ ಬೆಂಬಲವು ತಮಗಿದೆ ಎಂಬ ವಿಷಯದಲ್ಲಿ ಅವರು ಖಾತ್ರಿಯಿಂದಿರಬಹುದು.—ಧರ್ಮೋಪದೇಶಕಾಂಡ 33:27.
ದೇವರ ವಾಕ್ಯದಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳಿರಿ
21, 22. ನಮಗೆ ನಂಬಿಕೆಯಿರುವಲ್ಲಿ, ಅದು ದೇವರೊಂದಿಗೆ ನಮಗಿರುವ ಸಂಬಂಧದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
21 ಸುವಾರ್ತೆಯಲ್ಲಿ ಮತ್ತು ದೇವರ ಇಡೀ ವಾಕ್ಯದಲ್ಲಿನ ನಂಬಿಕೆಯು, ನಾವು ಯೆಹೋವನಿಗೆ ಹೆಚ್ಚೆಚ್ಚು ಸಮೀಪವಾಗುವಂತೆ ನಮಗೆ ಸಹಾಯಮಾಡುತ್ತದೆ. (ಯಾಕೋಬ 4:8) ಆತನು ನಮ್ಮ ಪರಮಾಧಿಕಾರಿ ಕರ್ತನೆಂಬುದು ನಿಜವಾದರೂ, ಆತನು ನಮ್ಮ ಸೃಷ್ಟಿಕರ್ತನೂ ತಂದೆಯೂ ಆಗಿದ್ದಾನೆ. (ಯೆಶಾಯ 64:8; ಮತ್ತಾಯ 6:9; ಅ. ಕೃತ್ಯಗಳು 4:24) ಕೀರ್ತನೆಗಾರನು ಹಾಡಿದ್ದು: “ನನ್ನ ತಂದೆಯೂ ದೇವರೂ ಆಶ್ರಯದುರ್ಗವೂ ನೀನೇ.” (ಕೀರ್ತನೆ 89:26) ಮತ್ತು ನಾವು ಯೆಹೋವನಲ್ಲಿ ಮತ್ತು ಆತನ ಪ್ರೇರಿತ ವಾಕ್ಯದಲ್ಲಿ ನಂಬಿಕೆಯನ್ನಿಡುತ್ತಾ ಹೋಗುವಲ್ಲಿ, ನಾವೂ ಆತನನ್ನು ರಕ್ಷಣೆಯ “ಆಶ್ರಯದುರ್ಗ”ವಾಗಿ ಪರಿಗಣಿಸಬಲ್ಲೆವು. ಎಷ್ಟೊಂದು ಹೃದಯೋಲ್ಲಾಸಕರ ಸುಯೋಗವಿದು!
22 ಯೆಹೋವನು ಆತ್ಮಜನಿತ ಕ್ರೈಸ್ತರ ಮತ್ತು ಭೂನಿರೀಕ್ಷೆಯಿರುವ ಅವರ ಸಂಗಾತಿಗಳ ಪಿತನಾಗಿದ್ದಾನೆ. (ರೋಮಾಪುರ 8:15) ಮತ್ತು ನಮ್ಮ ಸ್ವರ್ಗೀಯ ತಂದೆಯಲ್ಲಿ ನಮಗಿರುವ ನಂಬಿಕೆಯು ಎಂದಿಗೂ ನಿರಾಶೆಗೆ ನಡೆಸದು. ದಾವೀದನು ಹೇಳಿದ್ದು: “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.” (ಕೀರ್ತನೆ 27:10) ಇದಲ್ಲದೆ ನಮಗೆ ಈ ಆಶ್ವಾಸನೆಯೂ ಇದೆ: “ಯೆಹೋವನು . . . ತನ್ನ ಮಹೋನ್ನತ ನಾಮದ ನಿಮಿತ್ತವಾಗಿ ನಿಮ್ಮನ್ನು ಕೈಬಿಡುವದೇ ಇಲ್ಲ.”—1 ಸಮುವೇಲ 12:22.
23. ನಾವು ಯೆಹೋವನೊಂದಿಗೆ ಶಾಶ್ವತವಾದ ಸಂಬಂಧದಲ್ಲಿ ಆನಂದಿಸಬೇಕಾದರೆ ನಮ್ಮಿಂದ ಏನು ಕೇಳಿಕೊಳ್ಳಲ್ಪಡುತ್ತದೆ?
23 ಯೆಹೋವನೊಂದಿಗೆ ಶಾಶ್ವತವಾದ ಸಂಬಂಧದಲ್ಲಿ ಆನಂದಿಸಬೇಕಾದರೆ, ನಮಗೆ ಸುವಾರ್ತೆಯಲ್ಲಿ ನಂಬಿಕೆಯಿರಬೇಕು ಮತ್ತು ಶಾಸ್ತ್ರವಚನಗಳು ನಿಜವಾಗಿಯೂ ಏನಾಗಿವೆಯೋ ಅವುಗಳಾಗಿ, ಅಂದರೆ ದೇವರ ವಾಕ್ಯವಾಗಿ ಅವನ್ನು ಅಂಗೀಕರಿಸಬೇಕು. (1 ಥೆಸಲೊನೀಕ 2:13) ನಮಗೆ ಯೆಹೋವನಲ್ಲಿ ಸಂಪೂರ್ಣ ನಂಬಿಕೆಯಿದ್ದು, ಆತನ ವಾಕ್ಯವು ನಮ್ಮ ದಾರಿಯನ್ನು ಬೆಳಗಿಸುವಂತೆ ನಾವು ಅನುಮತಿಸತಕ್ಕದ್ದು. (ಕೀರ್ತನೆ 119:105; ಜ್ಞಾನೋಕ್ತಿ 3:5, 6) ಆತನ ಕನಿಕರ, ಕರುಣೆ ಮತ್ತು ಸಹಾಯದ ಭರವಸೆಯುಳ್ಳವರಾಗಿ ನಾವು ಆತನಿಗೆ ಪ್ರಾರ್ಥಿಸುವುದಾದರೆ, ನಮ್ಮ ನಂಬಿಕೆಯು ಬೆಳೆಯುವುದು.
24. ರೋಮಾಪುರ 14:8ರಲ್ಲಿ ಯಾವ ಸಾಂತ್ವನ ನೀಡುವ ವಿಚಾರವು ತಿಳಿಸಲ್ಪಟ್ಟಿದೆ?
24 ನಾವು ನಮ್ಮನ್ನೇ ದೇವರಿಗೆ ನಿತ್ಯಕ್ಕೂ ಸಮರ್ಪಿಸಿಕೊಳ್ಳುವಂತೆ ನಂಬಿಕೆಯು ಪ್ರಚೋದಿಸಿತು. ಬಲವಾದ ನಂಬಿಕೆಯುಳ್ಳವರಾಗಿರುವುದರಿಂದ, ನಾವು ಸಾಯಲೇಬೇಕಾದ ಸಂದರ್ಭ ಬಂದರೂ, ನಾವು ಪುನರುತ್ಥಾನದ ನಿರೀಕ್ಷೆಯಿರುವ ಆತನ ಸಮರ್ಪಿತ ಸೇವಕರಾಗಿದ್ದೇವೆ. ಹೌದು, “ಬದುಕಿದರೂ ಸತ್ತರೂ ನಾವು ಕರ್ತ [“ಯೆಹೋವ,” NW]ನವರೇ.” (ರೋಮಾಪುರ 14:8) ನಾವು ನಮ್ಮ ಭರವಸೆಯನ್ನು ದೇವರ ವಾಕ್ಯದಲ್ಲಿಟ್ಟು, ಸುವಾರ್ತೆಯಲ್ಲಿ ನಂಬಿಕೆಯನ್ನಿಡುತ್ತಾ ಮುಂದುವರಿಯುವಾಗ, ಆ ಸಾಂತ್ವನ ನೀಡುವ ವಿಚಾರವನ್ನು ನಮ್ಮ ಹೃದಯದಲ್ಲಿಟ್ಟುಕೊಳ್ಳೋಣ.
ನೀವು ಹೇಗೆ ಉತ್ತರಿಸುವಿರಿ?
• ನಂಬಿಕೆಯೆಂದರೇನು, ಮತ್ತು ಈ ಗುಣವು ನಮಗೇಕೆ ಅಗತ್ಯ?
• ನಮಗೆ ಸುವಾರ್ತೆಯಲ್ಲಿ ಮತ್ತು ದೇವರ ಇಡೀ ವಾಕ್ಯದಲ್ಲಿ ನಂಬಿಕೆಯಿರುವುದು ಅತ್ಯಾವಶ್ಯಕವೇಕೆ?
• ನಂಬಿಕೆಯು ನಾವು ವಿವಿಧ ಪರೀಕ್ಷೆಗಳನ್ನು ಎದುರಿಸುವಂತೆ ಹೇಗೆ ಸಹಾಯಮಾಡುತ್ತದೆ?
• ನಂಬಿಕೆಯನ್ನು ಕಾಪಾಡಿಕೊಳ್ಳಲು ಯಾವುದು ನಮಗೆ ಸಹಾಯಮಾಡುವುದು?
[ಅಧ್ಯಯನ ಪ್ರಶ್ನೆಗಳು]
[ಪುಟ 12ರಲ್ಲಿರುವ ಚಿತ್ರಗಳು]
ಯೆರೆಮೀಯ ಮತ್ತು ಎಲೀಯರಲ್ಲಿ ನಂಬಿಕೆಯಿದ್ದ ಕಾರಣ ಯೆಹೋವನು ಅವರನ್ನು ಪೋಷಿಸಿದನು
[ಪುಟ 13ರಲ್ಲಿರುವ ಚಿತ್ರಗಳು]
ಯೋಬ, ಪೇತ್ರ ಮತ್ತು ನೆಹೆಮೀಯರಲ್ಲಿ ಬಲವಾದ ನಂಬಿಕೆಯಿತ್ತು
[ಪುಟ 15ರಲ್ಲಿರುವ ಚಿತ್ರಗಳು]
ಯೆಹೋವನೊಂದಿಗೆ ಶಾಶ್ವತ ಸಂಬಂಧವನ್ನು ಇಟ್ಟುಕೊಳ್ಳಬೇಕಾದರೆ, ನಮಗೆ ಸುವಾರ್ತೆಯಲ್ಲಿ ನಂಬಿಕೆಯಿರತಕ್ಕದ್ದು