ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ನಂಬಿಕೆಯು ಎಷ್ಟು ಬಲವಾದದ್ದಾಗಿದೆ?

ನಿಮ್ಮ ನಂಬಿಕೆಯು ಎಷ್ಟು ಬಲವಾದದ್ದಾಗಿದೆ?

ನಿಮ್ಮ ನಂಬಿಕೆಯು ಎಷ್ಟು ಬಲವಾದದ್ದಾಗಿದೆ?

“ನಂಬಿಕೆಯ ವಿಷಯದಲ್ಲಿ ದೃಢನಿಂತಿದ್ದೀರಿ.”​—2 ಕೊರಿಂಥ 1:24.

1, 2. ನಮಗೆ ನಂಬಿಕೆಯಿರಬೇಕು ಏಕೆ, ಮತ್ತು ಅದು ಹೇಗೆ ಹೆಚ್ಚು ಬಲಗೊಳ್ಳಬಲ್ಲದು?

ತಮ್ಮಲ್ಲಿ ನಂಬಿಕೆ ಇರಲೇಬೇಕೆಂಬುದು ಯೆಹೋವನ ಸೇವಕರಿಗೆ ಗೊತ್ತಿದೆ. ವಾಸ್ತವವೇನಂದರೆ, “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ.” (ಇಬ್ರಿಯ 11:6) ಆದಕಾರಣ, ನಾವು ದೇವರ ಪವಿತ್ರಾತ್ಮಕ್ಕಾಗಿಯೂ ಅದರ ಅಪೇಕ್ಷಣೀಯ ಫಲದ ಭಾಗವಾಗಿರುವ ನಂಬಿಕೆಗಾಗಿಯೂ ವಿವೇಕದಿಂದ ಪ್ರಾರ್ಥಿಸುತ್ತೇವೆ. (ಲೂಕ 11:13; ಗಲಾತ್ಯ 5:22, 23) ಜೊತೆ ವಿಶ್ವಾಸಿಗಳ ನಂಬಿಕೆಯನ್ನು ಅನುಕರಿಸುವುದೂ ನಮ್ಮಲ್ಲಿ ಈ ಗುಣವನ್ನು ಬಲಗೊಳಿಸಬಲ್ಲದು.​—2 ತಿಮೊಥೆಯ 1:5; ಇಬ್ರಿಯ 13:7.

2 ದೇವರ ವಾಕ್ಯವು ಎಲ್ಲಾ ಕ್ರೈಸ್ತರಿಗಾಗಿ ತಿಳಿಸಿರುವ ಮಾರ್ಗವನ್ನು ಬೆನ್ನಟ್ಟುವುದರಲ್ಲಿ ನಾವು ಪಟ್ಟುಹಿಡಿಯುವಲ್ಲಿ, ನಮ್ಮ ನಂಬಿಕೆಯು ಹೆಚ್ಚು ಬಲಗೊಳ್ಳುವುದು. ದೈನಂದಿನ ಬೈಬಲ್‌ ವಾಚನ ಮತ್ತು ‘ನಂಬಿಗಸ್ತ ಮನೆವಾರ್ತೆಯವನ’ ಮೂಲಕ ಒದಗಿಸಲ್ಪಡುತ್ತಿರುವ ಪ್ರಕಾಶನಗಳ ಸಹಾಯದಿಂದ ಮಾಡಲ್ಪಡುವ ಶಾಸ್ತ್ರವಚನಗಳ ಶ್ರದ್ಧಾಪೂರ್ವಕವಾದ ಅಧ್ಯಯನದಿಂದ ಅತ್ಯಧಿಕ ನಂಬಿಕೆಯು ಫಲಿಸಬಲ್ಲದು. (ಲೂಕ 12:42-44; ಯೆಹೋಶುವ 1:7, 8) ಮತ್ತು ಕ್ರೈಸ್ತ ಕೂಟಗಳು, ಸಮ್ಮೇಳನಗಳು ಹಾಗೂ ಅಧಿವೇಶನಗಳಲ್ಲಿ ನಮ್ಮ ಕ್ರಮಬದ್ಧವಾದ ಉಪಸ್ಥಿತಿಯು, ನಾವು ಇತರರ ನಂಬಿಕೆಯಿಂದ ಪರಸ್ಪರ ಪ್ರೋತ್ಸಾಹಿಸಲ್ಪಡುವಂತೆ ಮಾಡುತ್ತದೆ. (ರೋಮಾಪುರ 1:11, 12; ಇಬ್ರಿಯ 10:24, 25) ಅಲ್ಲದೆ, ನಾವು ಶುಶ್ರೂಷೆಯಲ್ಲಿ ಇತರರೊಂದಿಗೆ ಮಾತಾಡುವಾಗ ನಮ್ಮ ನಂಬಿಕೆಯು ಇನ್ನಷ್ಟು ಬಲಗೊಳ್ಳುವುದು.​—ಕೀರ್ತನೆ 145:10-13; ರೋಮಾಪುರ 10:11-15.

3. ನಂಬಿಕೆಯ ಸಂಬಂಧದಲ್ಲಿ, ನಮ್ಮನ್ನು ಪ್ರೀತಿಸುವಂಥ ಕ್ರೈಸ್ತ ಹಿರಿಯರಿಂದ ನಾವು ಯಾವ ಸಹಾಯವನ್ನು ಪಡೆಯುತ್ತೇವೆ?

3 ನಮ್ಮನ್ನು ಪ್ರೀತಿಸುವಂಥ ಕ್ರೈಸ್ತ ಹಿರಿಯರು ಶಾಸ್ತ್ರೀಯ ಸಲಹೆ ಮತ್ತು ಪ್ರೋತ್ಸಾಹವನ್ನು ನೀಡುವ ಮೂಲಕ, ನಮ್ಮ ನಂಬಿಕೆಯನ್ನು ಕಟ್ಟಲು ನಮಗೆ ಸಹಾಯಮಾಡುತ್ತಾರೆ. ಅವರ ಮನೋಭಾವವು ಅಪೊಸ್ತಲ ಪೌಲನ ಮನೋಭಾವದಂತಿದೆ. ಅವನು ಕೊರಿಂಥದವರಿಗೆ ಹೇಳಿದ್ದು: “ನಿಮ್ಮ ಸಂತೋಷಕ್ಕೆ ನಾವು ಸಹಾಯಕರಾಗಿದ್ದೇವೆ; ನಂಬಿಕೆಯ ವಿಷಯದಲ್ಲಿ ದೃಢನಿಂತಿದ್ದೀರಿ.” (2 ಕೊರಿಂಥ 1:23, 24) ಇನ್ನೊಂದು ಭಾಷಾಂತರವು ಹೇಳುವುದು: “ನಿಮ್ಮನ್ನು ಸಂತೋಷಪಡಿಸಲು ನಾವು ನಿಮ್ಮೊಂದಿಗೆ ಕೆಲಸ ಮಾಡುತ್ತಿದ್ದೇವೆ. ಏಕೆಂದರೆ ನಿಮ್ಮ ನಂಬಿಕೆಯು ಬಲವಾಗಿದೆ.” (ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌) ನೀತಿವಂತರು ನಂಬಿಕೆಯ ಕಾರಣದಿಂದ ಬದುಕುತ್ತಾರೆ. ಬೇರೆ ಯಾರೂ ನಮ್ಮ ಪರವಾಗಿ ನಂಬಿಕೆಯನ್ನು ಹೊಂದಿರಲು ಸಾಧ್ಯವಿಲ್ಲ ಅಥವಾ ನಮ್ಮನ್ನು ನಿಷ್ಠರಾದ ಸಮಗ್ರತೆಪಾಲಕರಾಗಿ ಮಾಡಸಾಧ್ಯವಿಲ್ಲ. ಆದುದರಿಂದ ಈ ಸಂಬಂಧದಲ್ಲಿ, ‘ನಮ್ಮ ಹೊರೆಯನ್ನು ನಾವೇ ಹೊರಬೇಕು.’​—ಗಲಾತ್ಯ 3:11; 6:5.

4. ದೇವರ ನಂಬಿಗಸ್ತ ಸೇವಕರ ಶಾಸ್ತ್ರೀಯ ವೃತ್ತಾಂತಗಳು ನಮ್ಮ ನಂಬಿಕೆಯನ್ನು ಬಲಪಡಿಸಲು ಹೇಗೆ ಸಹಾಯಮಾಡಬಲ್ಲವು?

4 ಶಾಸ್ತ್ರವಚನಗಳಲ್ಲಿ ನಂಬಿಗಸ್ತರ ವೃತ್ತಾಂತಗಳು ತುಂಬಿವೆ. ನಮಗೆ ಅವರ ಪ್ರಮುಖ ಕೃತ್ಯಗಳಲ್ಲಿ ಅನೇಕವು ಪರಿಚಯವಿರಬಹುದು ನಿಜ, ಆದರೆ ಅವರು ಪ್ರತಿದಿನ ತೋರಿಸಿದ, ಪ್ರಾಯಶಃ ಅವರ ದೀರ್ಘಾಯುಸ್ಸಿನ ಜೀವನದಲ್ಲಿ ತೋರಿಸಿದ ನಂಬಿಕೆಯ ಪರಿಚಯ ನಮಗಿದೆಯೆ? ನಮ್ಮ ಸನ್ನಿವೇಶಗಳಿಗೆ ಹೋಲುತ್ತಿದ್ದ ಸನ್ನಿವೇಶಗಳಲ್ಲಿ ಅವರು ಹೇಗೆ ಈ ಗುಣವನ್ನು ತೋರಿಸಿದರು ಎಂಬುದರ ಕುರಿತು ಈಗ ಮನನಮಾಡುವುದು, ನಮ್ಮ ಸ್ವಂತ ನಂಬಿಕೆಯನ್ನು ಬಲಪಡಿಸಲು ಸಹಾಯಮಾಡಬಲ್ಲದು.

ನಂಬಿಕೆಯು ನಮಗೆ ಧೈರ್ಯವನ್ನು ಕೊಡುತ್ತದೆ

5. ನಾವು ದೇವರ ವಾಕ್ಯವನ್ನು ಧೈರ್ಯದಿಂದ ಸಾರುವಂತೆ ನಂಬಿಕೆಯು ನಮ್ಮನ್ನು ಬಲಪಡಿಸುತ್ತದೆಂಬುದಕ್ಕೆ ಯಾವ ಶಾಸ್ತ್ರೀಯ ಪುರಾವೆಯಿದೆ?

5 ದೇವರ ವಾಕ್ಯವನ್ನು ಧೈರ್ಯದಿಂದ ಘೋಷಿಸುವಂತೆ ನಂಬಿಕೆಯು ನಮ್ಮನ್ನು ಬಲಪಡಿಸುತ್ತದೆ. ಹನೋಕನು, ದೇವರು ತರಲಿದ್ದ ನ್ಯಾಯತೀರ್ಪಿನ ಕುರಿತು ಧೈರ್ಯದಿಂದ ಮುಂತಿಳಿಸಿದನು. ಅವನಂದದ್ದು: “ಇಗೋ ಕರ್ತನು [“ಯೆಹೋವನು,” NW] ಲಕ್ಷಾಂತರ ಪರಿಶುದ್ಧದೂತರನ್ನು ಕೂಡಿಕೊಂಡು ಎಲ್ಲರಿಗೆ ನ್ಯಾಯತೀರಿಸುವದಕ್ಕೂ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನ್ನ ಮೇಲೆ ಹೇಳಿದ ಎಲ್ಲಾ ಕಠಿನವಾದ ಮಾತುಗಳ ವಿಷಯವಾಗಿ ಅವರನ್ನು ಖಂಡಿಸುವದಕ್ಕೂ ಬಂದನು.” (ಯೂದ 14, 15) ಇಂತಹ ಮಾತುಗಳನ್ನು ಕೇಳಿಸಿಕೊಂಡ ಹನೋಕನ ಅಧಾರ್ಮಿಕ ವೈರಿಗಳು ಅವನನ್ನು ಕೊಲ್ಲಬಯಸಿದರೆಂಬುದು ನಿಶ್ಚಯ. ಆದರೂ, ಅವನು ನಂಬಿಕೆಯಿಂದ ನಿರ್ಭೀತನಾಗಿ ಸಾರಿದನು. ಮತ್ತು ದೇವರು ಅವನಿಗೆ ಮರಣದ ನಿದ್ರೆಯನ್ನು ಬರಮಾಡಿ, ಅಂದರೆ ಮರಣದ ಸಂಕಟಗಳನ್ನು ಅವನು ಅನುಭವಿಸದಂತೆ ಮಾಡಿ, ಅವನನ್ನು ‘ಕರೆದುಕೊಂಡನು.’ (ಆದಿಕಾಂಡ 5:24; ಇಬ್ರಿಯ 11:5) ನಾವು ಇಂದು ಅಂತಹ ಅದ್ಭುತಗಳನ್ನು ಅನುಭವಿಸುವುದಿಲ್ಲವಾದರೂ, ನಾವು ನಂಬಿಕೆ ಮತ್ತು ಧೈರ್ಯದಿಂದ ಆತನ ವಾಕ್ಯವನ್ನು ಸಾರಲಿಕ್ಕಾಗಿ ನಾವು ಮಾಡುವ ಪ್ರಾರ್ಥನೆಗಳನ್ನು ಯೆಹೋವನು ಉತ್ತರಿಸುತ್ತಾನೆ.​—ಅ. ಕೃತ್ಯಗಳು 4:​24-31.

6. ದೇವದತ್ತ ನಂಬಿಕೆ ಮತ್ತು ಧೈರ್ಯವು ನೋಹನಿಗೆ ಹೇಗೆ ಸಹಾಯಮಾಡಿತು?

6 ನೋಹನು ನಂಬಿಕೆಯಿಂದ, “ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು.” (ಇಬ್ರಿಯ 11:7; ಆದಿಕಾಂಡ 6:13-22) ನೋಹನು ತನ್ನ ಸಮಕಾಲೀನರಿಗೆ ದೇವರ ಎಚ್ಚರಿಕೆಯನ್ನು ಘೋಷಿಸುವವನೂ ಧೈರ್ಯದಿಂದ “ಸುನೀತಿಯನ್ನು ಸಾರುವವನೂ” ಆಗಿದ್ದನು. (2 ಪೇತ್ರ 2:5) ಬರಲಿದ್ದ ಜಲಪ್ರಳಯದ ಕುರಿತಾದ ಅವನ ಸಂದೇಶದ ಬಗ್ಗೆ ಅವರು ಅಪಹಾಸ್ಯಮಾಡಿದ್ದಿರಬಹುದು; ಆ ಜನರಂತೆಯೇ ಇಂದು, ಈ ವಿಷಯಗಳ ವ್ಯವಸ್ಥೆಯು ಅತಿ ಬೇಗನೆ ಅಂತ್ಯಗೊಳ್ಳಲಿದೆ ಎಂಬುದಕ್ಕೆ ನಾವು ಶಾಸ್ತ್ರೀಯ ರುಜುವಾತನ್ನು ನೀಡುವಾಗ, ಕೆಲವರು ನಮ್ಮನ್ನು ಅಪಹಾಸ್ಯಮಾಡುತ್ತಾರೆ. (2 ಪೇತ್ರ 3:​3-12) ಆದರೂ, ಹನೋಕ ಮತ್ತು ನೋಹರಂತೆ, ನಮಗಿರುವ ದೇವದತ್ತ ನಂಬಿಕೆ ಮತ್ತು ಧೈರ್ಯದ ಕಾರಣ ನಾವು ಇಂತಹ ಸಂದೇಶವನ್ನು ಜನರಿಗೆ ತಿಳಿಸಬಲ್ಲೆವು.

ನಂಬಿಕೆಯು ನಾವು ತಾಳಿಕೊಳ್ಳುವಂತೆ ಮಾಡುತ್ತದೆ

7. ಅಬ್ರಹಾಮನು ಮತ್ತು ಇತರರು ನಂಬಿಕೆ ಮತ್ತು ತಾಳ್ಮೆಯನ್ನು ತೋರಿಸಿದ್ದು ಹೇಗೆ?

7 ವಿಶೇಷವಾಗಿ ಈ ದುಷ್ಟ ವ್ಯವಸ್ಥೆಯ ಅಂತ್ಯಕ್ಕಾಗಿ ನಾವು ಕಾಯುತ್ತಿರುವಾಗ, ನಮಗೆ ನಂಬಿಕೆ ಮತ್ತು ತಾಳ್ಮೆ ಅಗತ್ಯ. ‘ನಂಬಿಕೆಯಿಂದ ವಾಗ್ದಾನಗಳಿಗಾಗಿ ಕಾದಿದ್ದವರಲ್ಲಿ’ ದೇವಭಯವಿದ್ದ ಮೂಲಪಿತೃ ಅಬ್ರಹಾಮನು ಒಬ್ಬನಾಗಿದ್ದನು. (ಇಬ್ರಿಯ 6:​11, 12) ನಂಬಿಕೆಯಿಂದಲೇ ಅವನು ಸರ್ವ ಅನುಕೂಲಗಳೂ ಇದ್ದ ಊರ್‌ ಪಟ್ಟಣವನ್ನು ಬಿಟ್ಟು, ದೇವರು ಅವನಿಗೆ ವಾಗ್ದಾನಿಸಿದ್ದ ವಿದೇಶದಲ್ಲಿ ಪರಕೀಯನಾಗಿ ಜೀವಿಸಿದನು. ಇಸಾಕನೂ ಯಾಕೋಬನೂ ಅದೇ ವಾಗ್ದಾನಕ್ಕೆ ಬಾಧ್ಯಸ್ಥರಾಗಿದ್ದರು. “ಇವರೆಲ್ಲರು ವಾಗ್ದಾನದ ಫಲಗಳನ್ನು ಹೊಂದದೆ ಅವುಗಳನ್ನು ದೂರದಿಂದ ನೋಡಿ ಉಲ್ಲಾಸದೊಡನೆ ವಂದಿಸಿ ನಂಬಿಕೆಯುಳ್ಳವರಾಗಿ ಮೃತರಾದರು.” ಆದರೆ ನಂಬಿಕೆಯಿಂದ “ಅವರು ಪರಲೋಕವೆಂಬ [“ಪರಲೋಕಕ್ಕೆ ಸೇರಿರುವ,” NW] ಉತ್ತಮದೇಶವನ್ನು” ನಿಲುಕಿಸಿಕೊಂಡರು. ಅದೇ ರೀತಿಯಲ್ಲಿ ದೇವರು “ಅವರಿಗೋಸ್ಕರ ಪಟ್ಟಣವನ್ನು ಸಿದ್ಧಮಾಡಿದ್ದಾನೆ.” (ಇಬ್ರಿಯ 11:8-16) ಹೌದು, ಅಬ್ರಹಾಮ, ಇಸಾಕ, ಯಾಕೋಬರು ಮತ್ತು ದೇವಭಯವಿದ್ದ ಅವರ ಪತ್ನಿಯರು, ಯಾವುದರ ಆಳಿಕೆಯ ಕೆಳಗೆ ಭೂಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡಲಿರುವರೋ ಆ ದೇವರ ಸ್ವರ್ಗೀಯ ರಾಜ್ಯಕ್ಕಾಗಿ ತಾಳ್ಮೆಯಿಂದ ಕಾದಿದ್ದರು.

8. ಅಬ್ರಹಾಮ, ಇಸಾಕ ಮತ್ತು ಯಾಕೋಬರು ಯಾವುದರ ಎದುರಿನಲ್ಲಿ ತಾಳ್ಮೆ ಮತ್ತು ನಂಬಿಕೆಯನ್ನು ತೋರಿಸಿದರು?

8 ಅಬ್ರಹಾಮ, ಇಸಾಕ ಮತ್ತು ಯಾಕೋಬರು ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ವಾಗ್ದತ್ತ ದೇಶವು ಅವರ ನಿಯಂತ್ರಣದ ಕೆಳಗೆ ಬರಲೂ ಇಲ್ಲ, ಅಬ್ರಹಾಮನ ಸಂತತಿಯ ಮೂಲಕ ಎಲ್ಲಾ ಜನಾಂಗಗಳು ತಮ್ಮನ್ನು ಆಶೀರ್ವದಿಸಿಕೊಳ್ಳುವುದನ್ನು ಅವರು ನೋಡಲೂ ಇಲ್ಲ. (ಆದಿಕಾಂಡ 15:5-7; 22:15-18) ‘ದೇವರು ಕಟ್ಟುವ ಪಟ್ಟಣವು’ ನೂರಾರು ವರ್ಷಗಳ ಬಳಿಕವೇ ಅಸ್ತಿತ್ವಕ್ಕೆ ಬರುವುದಾದರೂ, ಈ ಪುರುಷರು ತಮ್ಮ ಜೀವಮಾನವೆಲ್ಲ ನಂಬಿಕೆ ಮತ್ತು ತಾಳ್ಮೆಯನ್ನು ಪ್ರದರ್ಶಿಸಿದರು. ಆದಕಾರಣ, ಇಂದು ಮೆಸ್ಸೀಯನ ರಾಜ್ಯವು ಸ್ವರ್ಗದಲ್ಲಿ ವಾಸ್ತವಿಕವಾಗಿ ಅಸ್ತಿತ್ವದಲ್ಲಿರುವುದರಿಂದ, ನಾವೂ ನಂಬಿಕೆ ಮತ್ತು ತಾಳ್ಮೆಯನ್ನು ಪ್ರದರ್ಶಿಸಲೇಬೇಕು.​—ಕೀರ್ತನೆ 42:5, 11; 43:5.

ನಂಬಿಕೆಯು ನಮಗೆ ಅತ್ಯುನ್ನತ ಗುರಿಗಳನ್ನು ನೀಡುತ್ತದೆ

9. ಗುರಿಗಳು ಮತ್ತು ಉದ್ದೇಶಗಳನ್ನು ನಂಬಿಕೆಯು ಹೇಗೆ ಪ್ರಭಾವಿಸುತ್ತದೆ?

9 ಆ ನಂಬಿಗಸ್ತ ಮೂಲಪಿತೃಗಳು ಎಂದೂ ಕಾನಾನ್ಯರ ಕೀಳ್ಮಟ್ಟದ ಜೀವನ ಶೈಲಿಗಳನ್ನು ಮೈಗೂಡಿಸಿಕೊಳ್ಳಲಿಲ್ಲ. ಏಕೆಂದರೆ ಅವರ ಗುರಿಗಳೂ ಉದ್ದೇಶಗಳೂ ಹೆಚ್ಚು ಉನ್ನತವಾಗಿದ್ದವು. ಅದೇ ರೀತಿಯಲ್ಲಿ, ನಂಬಿಕೆಯು ನಮಗೆ ಆತ್ಮಿಕ ಗುರಿಗಳನ್ನು ಕೊಟ್ಟು, ಕೆಡುಕನಾಗಿರುವ ಪಿಶಾಚನಾದ ಸೈತಾನನ ಅಂಕೆಯಲ್ಲಿರುವ ಈ ಲೋಕದಲ್ಲಿ ಬೆರೆತು ವಿಲೀನವಾಗದಂತೆ ನಮ್ಮನ್ನು ತಡೆದುಕೊಳ್ಳಲು ಬೇಕಾದ ಶಕ್ತಿಯನ್ನು ಕೊಡುತ್ತದೆ.​—1 ಯೋಹಾನ 2:15-17; 5:19.

10. ಯೋಸೇಫನು ಲೌಕಿಕ ಪ್ರಾಧಾನ್ಯತೆಗಿಂತ ಎಷ್ಟೋ ಉನ್ನತವಾದ ಗುರಿಯನ್ನು ಬೆನ್ನಟ್ಟಿದನೆಂಬುದು ನಮಗೆ ಹೇಗೆ ಗೊತ್ತು?

10 ಯಾಕೋಬನ ಮಗನಾಗಿದ್ದ ಯೋಸೇಫನು ದೇವರ ಮಾರ್ಗದರ್ಶನಕ್ಕನುಸಾರ ಐಗುಪ್ತದ ಆಹಾರಾಡಳಿತಗಾರನಾದನು. ಆದರೆ ಈ ಲೋಕದ ಗಣ್ಯ ಪುರುಷನಾಗುವುದು ಅವನ ಗುರಿಯಾಗಿರಲಿಲ್ಲ. ಯೆಹೋವನ ವಾಗ್ದಾನಗಳ ನೆರವೇರಿಕೆಯಲ್ಲಿ ನಂಬಿಕೆಯುಳ್ಳವನಾಗಿ, 110 ವರ್ಷ ವಯಸ್ಸಿನ ಯೋಸೇಫನು ತನ್ನ ಸಹೋದರರಿಗೆ ಹೇಳಿದ್ದು: “ನನಗೆ ಅವಸಾನಕಾಲ ಸಮೀಪಿಸಿತು. ಆದರೆ ದೇವರು ನಿಶ್ಚಯವಾಗಿ ನಿಮ್ಮನ್ನು ಪರಾಂಬರಿಸಿ ಈ ದೇಶದಿಂದ ತಾನು ಅಬ್ರಹಾಮ್‌ ಇಸಾಕ್‌ ಯಾಕೋಬರಿಗೆ ಕೊಡುತ್ತೇನೆಂದು ಪ್ರಮಾಣವಾಗಿ ಹೇಳಿದ ದೇಶಕ್ಕೆ ನೀವು ಹೋಗಿ ಸೇರುವಂತೆ ಮಾಡುವನೆಂದು ತಿಳಿದುಕೊಳ್ಳಿರಿ.” ವಾಗ್ದತ್ತ ದೇಶದಲ್ಲಿ ತನ್ನನ್ನು ಹೂಣಬೇಕೆಂದು ಯೋಸೇಫನು ಕೇಳಿಕೊಂಡನು. ಅವನು ಮರಣಪಟ್ಟ ಬಳಿಕ ಅವನ ದೇಹದ ಶವಸಂರಕ್ಷಣೆಮಾಡಿ, ಐಗುಪ್ತದೇಶದಲ್ಲಿ ಅದನ್ನು ಒಂದು ಶವಪೆಟ್ಟಿಗೆಯಲ್ಲಿ ಇರಿಸಲಾಗಿದ್ದರೂ, ಇಸ್ರಾಯೇಲ್ಯರು ಐಗುಪ್ತದ ಗುಲಾಮಗಿರಿಯಿಂದ ವಿಮೋಚಿಸಲ್ಪಟ್ಟಾಗ, ಯೋಸೇಫನ ಎಲುಬುಗಳನ್ನು ವಾಗ್ದತ್ತ ದೇಶದಲ್ಲಿ ಹೂಣಿಡಲಿಕ್ಕಾಗಿ ಮೋಶೆಯು ಅವುಗಳನ್ನು ತನ್ನ ಸಂಗಡ ತೆಗೆದುಕೊಂಡುಹೋದನು. (ಆದಿಕಾಂಡ 50:22-26; ವಿಮೋಚನಕಾಂಡ 13:19) ಯೋಸೇಫನಂತಹ ನಂಬಿಕೆಯು ನಾವು ಲೌಕಿಕ ಪ್ರಾಧಾನ್ಯತೆಗಿಂತ ಹೆಚ್ಚು ಉನ್ನತವಾದ ಗುರಿಗಳನ್ನು ಬೆನ್ನಟ್ಟುವಂತೆ ನಮ್ಮನ್ನು ಪ್ರೇರಿಸಬೇಕು.​—1 ಕೊರಿಂಥ 7:​29-31.

11. ಮೋಶೆಗೆ ಆತ್ಮಿಕ ಗುರಿಗಳಿದ್ದವೆಂಬುದನ್ನು ಅವನು ಯಾವ ವಿಧದಲ್ಲಿ ರುಜುಪಡಿಸಿದನು?

11 ಮೋಶೆಯು, ಐಗುಪ್ತದ ರಾಜ ಕುಟುಂಬದ ಸುಶಿಕ್ಷಿತ ಸದಸ್ಯನೋಪಾದಿ ‘ಸ್ವಲ್ಪಕಾಲ ಪಾಪಭೋಗಗಳನ್ನು ಅನುಭವಿಸುವದಕ್ಕಿಂತ ದೇವರ ಜನರೊಂದಿಗೆ ಕಷ್ಟವನ್ನನುಭವಿಸುವದೇ ಒಳ್ಳೇದೆಂದು ತೀರ್ಮಾನಿಸಿಕೊಂಡನು.’ (ಇಬ್ರಿಯ 11:23-26; ಅ. ಕೃತ್ಯಗಳು 7:20-22) ಇದರಿಂದ ಅವನಿಗೆ ಲೌಕಿಕ ಘನತೆ ಮತ್ತು ಪ್ರಾಯಶಃ ಒಂದು ಅಲಂಕೃತವಾದ ಶವಪೆಟ್ಟಿಗೆಯಲ್ಲಿ ಐಗುಪ್ತದ ಪ್ರಸಿದ್ಧ ನಿವೇಶನವೊಂದರಲ್ಲಿ ವೈಭವಭರಿತ ಶವಸಂಸ್ಕಾರವನ್ನು ಪಡೆಯುವ ಸಂದರ್ಭವು ಕೈತಪ್ಪಿಹೋಯಿತು. ಆದರೆ ‘ದೇವರ ಮನುಷ್ಯನು,’ ಧರ್ಮಶಾಸ್ತ್ರದೊಡಂಬಡಿಕೆಯ ಮಧ್ಯಸ್ಥಗಾರನು, ಯೆಹೋವನ ಪ್ರವಾದಿ ಮತ್ತು ಬೈಬಲ್‌ ಲೇಖಕನಾಗುವಂಥ ಸುಯೋಗಕ್ಕೆ ಹೋಲಿಸುವಾಗ, ಆ ಪ್ರಶಸ್ತಿಯು ಯಾವ ಬೆಲೆಯದ್ದಾಗಿರುತ್ತಿತ್ತು? (ಎಜ್ರ 3:2) ಹಾಗಾದರೆ ನೀವು ಪ್ರತಿಷ್ಠಿತವಾದ ಲೌಕಿಕ ಬಡ್ತಿಗಾಗಿ ಆಶಿಸುತ್ತೀರೊ ಇಲ್ಲವೆ ನಂಬಿಕೆಯು ನಿಮಗೆ ಇದಕ್ಕಿಂತಲೂ ಹೆಚ್ಚು ಉನ್ನತವಾದ ಆತ್ಮಿಕ ಗುರಿಗಳನ್ನು ನೀಡಿದೆಯೆ?

ನಂಬಿಕೆಯು ತೃಪ್ತಿಕರವಾದ ಜೀವನವನ್ನು ಫಲಿಸುತ್ತದೆ

12. ನಂಬಿಕೆಯು ರಹಾಬಳ ಜೀವನದ ಮೇಲೆ ಯಾವ ಪ್ರಭಾವವನ್ನು ಬೀರಿತು?

12 ನಂಬಿಕೆಯು ಜನರಿಗೆ ಉನ್ನತ ಗುರಿಗಳನ್ನು ಕೊಡುವುದು ಮಾತ್ರವಲ್ಲ, ತೃಪ್ತಿಕರವಾದ ಜೀವನವನ್ನೂ ನೀಡುತ್ತದೆ. ಯೆರಿಕೋ ಪಟ್ಟಣದ ರಹಾಬಳು ಒಬ್ಬ ಸೂಳೆಯೋಪಾದಿ ತನ್ನ ಜೀವನವು ಎಷ್ಟು ಅರ್ಥರಹಿತವಾದದ್ದಾಗಿದೆ ಎಂಬುದನ್ನು ಕಂಡುಕೊಂಡಿದ್ದಿರಬೇಕು. ಆದರೆ ಆಕೆ ನಂಬಿಕೆಯನ್ನು ತೋರಿಸಲು ತೊಡಗಿದಾಗ ಎಷ್ಟೊಂದು ಬದಲಾವಣೆಯಾಯಿತು! ಇಸ್ರಾಯೇಲ್ಯ ಗೂಢಚಾರರು ತಮ್ಮ ಕಾನಾನ್ಯ ವೈರಿಗಳಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗುವಂತೆ “ರಹಾಬಳು [ಆ] ಗೂಢಚಾರರನ್ನು ತನ್ನ ಮನೆಯಲ್ಲಿ ಸೇರಿಸಿಕೊಂಡು ಬೇರೆ ದಾರಿಯಿಂದ ಅವರನ್ನು ಕಳುಹಿಸಿದ್ದರಲ್ಲಿ [ನಂಬಿಕೆಯ] ಕ್ರಿಯೆಗಳಿಂದಲೇ ನೀತಿವಂತಳೆಂಬ ನಿರ್ಣಯವನ್ನು ಹೊಂದಿದ”ಳು. (ಯಾಕೋಬ 2:24-26) ಯೆಹೋವನು ಸತ್ಯ ದೇವರೆಂದು ಒಪ್ಪಿಕೊಂಡ ರಹಾಬಳು, ತನ್ನ ವೇಶ್ಯಾವೃತ್ತಿಯನ್ನು ತ್ಯಜಿಸುವ ಮೂಲಕವೂ ನಂಬಿಕೆಯನ್ನು ತೋರಿಸಿದಳು. (ಯೆಹೋಶುವ 2:9-11; ಇಬ್ರಿಯ 11:30, 31) ಆಕೆ ಅವಿಶ್ವಾಸಿಯಾದ ಕಾನಾನ್ಯನನ್ನಲ್ಲ, ಬದಲಾಗಿ ಯೆಹೋವನ ಸೇವಕನೊಬ್ಬನನ್ನು ಮದುವೆಯಾದಳು. (ಧರ್ಮೋಪದೇಶಕಾಂಡ 7:3, 4; 1 ಕೊರಿಂಥ 7:39) ರಹಾಬಳಿಗೆ ಮೆಸ್ಸೀಯನ ಪೂರ್ವಜಳಾಗುವ ಮಹಾ ಸುಯೋಗವು ದೊರಕಿತು. (1 ಪೂರ್ವಕಾಲವೃತ್ತಾಂತ 2:3-15; ರೂತಳು 4:20-22; ಮತ್ತಾಯ 1:5, 6) ಅನೈತಿಕ ಜೀವನವನ್ನು ತ್ಯಜಿಸಿರುವ ಇನ್ನಿತರರಂತೆ, ಆಕೆಗೆ ಇನ್ನೊಂದು ಪ್ರತಿಫಲವು ದೊರೆಯುವುದು. ಅದೇನೆಂದರೆ, ಭೂಪರದೈಸಿನಲ್ಲಿ ಜೀವಿಸಲಿಕ್ಕಾಗಿ ಪುನರುತ್ಥಾನ.

13. ಬತ್ಷೆಬೆಯ ಸಂಬಂಧದಲ್ಲಿ ದಾವೀದನು ಹೇಗೆ ತಪ್ಪುಮಾಡಿದನು, ಆದರೆ ಅವನು ಯಾವ ಮನೋಭಾವವನ್ನು ಪ್ರದರ್ಶಿಸಿದನು?

13 ತನ್ನ ಪಾಪಭರಿತ ಜೀವನ ಮಾರ್ಗವನ್ನು ತ್ಯಜಿಸಿದ ಬಳಿಕ ರಹಾಬಳು ಪ್ರಾಮಾಣಿಕ ಜೀವನವನ್ನು ನಡೆಸಿಕೊಂಡು ಮುಂದುವರಿದಳೆಂಬುದು ಸುವ್ಯಕ್ತ. ಆದರೆ ದೀರ್ಘಕಾಲದಿಂದ ದೇವರ ಸಮರ್ಪಿತ ಸೇವಕರಾಗಿದ್ದ ಕೆಲವರು, ಗುರುತರವಾದ ತಪ್ಪುಗಳನ್ನು ಮಾಡಿದ್ದಾರೆ. ರಾಜ ದಾವೀದನು ಬತ್ಷೆಬೆಯೊಂದಿಗೆ ವ್ಯಭಿಚಾರ ಮಾಡಿ, ಆಕೆಯ ಗಂಡನು ಯುದ್ಧದಲ್ಲಿ ಕೊಲ್ಲಲ್ಪಡುವಂತೆ ಮಾಡಿ, ಆಕೆಯನ್ನು ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು. (2 ಸಮುವೇಲ 11:​1-27) ಬಳಿಕ ತೀವ್ರವಾದ ಶೋಕದಿಂದ ಪಶ್ಚಾತ್ತಾಪಪಡುತ್ತಾ ದಾವೀದನು ಯೆಹೋವನ ಬಳಿ, “ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ” ಎಂದು ಬೇಡಿಕೊಂಡನು. ದಾವೀದನು ದೇವರಾತ್ಮವನ್ನು ಕಳೆದುಕೊಳ್ಳಲಿಲ್ಲ. ಯೆಹೋವನು ತನ್ನ ಕರುಣೆಯಲ್ಲಿ, “ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು” ತಿರಸ್ಕರಿಸುವುದಿಲ್ಲ ಎಂಬ ನಂಬಿಕೆ ಅವನಿಗಿತ್ತು. (ಕೀರ್ತನೆ 51:11, 17; 103:10-14) ತಮ್ಮ ನಂಬಿಕೆಯ ಕಾರಣದಿಂದಾಗಿ ದಾವೀದನೂ ಬತ್ಷೆಬೆಯೂ ಮೆಸ್ಸೀಯನ ಪೂರ್ವಿಕರಾಗುವ ಪ್ರತಿಫಲವನ್ನು ಪಡೆದರು.​—1 ಪೂರ್ವಕಾಲವೃತ್ತಾಂತ 3:5; ಮತ್ತಾಯ 1:6, 16; ಲೂಕ 3:23, 31.

ಆಶ್ವಾಸನೆಯ ಮೂಲಕ ಬಲಹೊಂದುವ ನಂಬಿಕೆ

14. ಗಿದ್ಯೋನನಿಗೆ ಯಾವ ಆಶ್ವಾಸನೆ ದೊರೆಯಿತು, ಮತ್ತು ಈ ವೃತ್ತಾಂತವು ನಮ್ಮ ನಂಬಿಕೆಯನ್ನು ಹೇಗೆ ಪ್ರಭಾವಿಸಬಹುದು?

14 ನಾವು ನಂಬಿಕೆಯಿಂದ ನಡೆಯುತ್ತೇವಾದರೂ, ಕೆಲವು ಸಲ ದೈವಿಕ ಸಹಾಯದ ಆಶ್ವಾಸನೆ ನಮಗೆ ಬೇಕಾಗಬಹುದು. “ನಂಬಿಕೆಯ ಮೂಲಕ . . . ರಾಜ್ಯಗಳನ್ನು ಸ್ವಾಧೀನಮಾಡಿಕೊಂಡ” ನ್ಯಾಯಸ್ಥಾಪಕರಲ್ಲಿ ಒಬ್ಬನಾಗಿದ್ದ ಗಿದ್ಯೋನನ ವಿಷಯದಲ್ಲಿ ಇದು ನಿಜವಾಗಿತ್ತು. (ಇಬ್ರಿಯ 11:32, 33) ಮಿದ್ಯಾನ್ಯರೂ ಅವರ ಮಿತ್ರರೂ ಇಸ್ರಾಯೇಲ್ಯರ ಮೇಲೆ ದಾಳಿಮಾಡಿದಾಗ ದೇವರಾತ್ಮವು ಗಿದ್ಯೋನನನ್ನು ಆವರಿಸಿತು. ಯೆಹೋವನು ತನ್ನೊಂದಿಗಿದ್ದಾನೆಂಬ ಆಶ್ವಾಸನೆಯನ್ನು ಅಪೇಕ್ಷಿಸುತ್ತಾ, ಅವನು ಪರೀಕ್ಷೆಯೊಂದನ್ನು ಮಾಡಿದನು. ಕಣದಲ್ಲಿ ರಾತ್ರಿಯೆಲ್ಲಾ ಒಂದು ತುಪ್ಪಟವು ಇಡಲ್ಪಟ್ಟಿತು. ಮೊದಲನೆಯ ಪರೀಕ್ಷೆಯಲ್ಲಿ, ಮಂಜು ತುಪ್ಪಟದ ಮೇಲೆ ಮಾತ್ರ ಬಿದ್ದಿತ್ತು ಮತ್ತು ಸುತ್ತಲಿನ ನೆಲವೆಲ್ಲಾ ಒಣಗಿತ್ತು. ಎರಡನೆಯ ಪರೀಕ್ಷೆಯಲ್ಲಿ ಸನ್ನಿವೇಶವು ವ್ಯತಿರಿಕ್ತವಾಗಿತ್ತು. ಈ ಆಶ್ವಾಸನೆಗಳಿಂದ ಬಲಹೊಂದಿ, ಮುಂಜಾಗ್ರತೆ ವಹಿಸುವುದರಲ್ಲಿ ಜಾಣನಾಗಿದ್ದ ಗಿದ್ಯೋನನು ನಂಬಿಕೆಯಿಂದ ಕಾರ್ಯನಡಿಸಿ, ಇಸ್ರಾಯೇಲ್‌ನ ವೈರಿಗಳನ್ನು ಸೋಲಿಸಿದನು. (ನ್ಯಾಯಸ್ಥಾಪಕರು 6:33-40; 7:19-25) ಒಂದು ತೀರ್ಮಾನವನ್ನು ಮಾಡಬೇಕಾಗಿರುವಾಗ ಆಶ್ವಾಸನೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುವುದು, ನಮಗೆ ನಂಬಿಕೆಯ ಕೊರತೆಯಿದೆ ಎಂಬುದನ್ನು ಸೂಚಿಸುವುದಿಲ್ಲ. ಬದಲಿಗೆ, ಬೈಬಲನ್ನು ಮತ್ತು ಕ್ರೈಸ್ತ ಪ್ರಕಾಶನಗಳನ್ನು ಸಂಪರ್ಕಿಸುವ ಮೂಲಕ ಮತ್ತು ತೀರ್ಮಾನಗಳನ್ನು ಮಾಡುವಾಗ ದೇವರಾತ್ಮದ ಮಾರ್ಗದರ್ಶನಕ್ಕಾಗಿ ಬೇಡಿಕೊಳ್ಳುವ ಮೂಲಕ, ನಾವು ನಿಜವಾಗಿಯೂ ನಂಬಿಕೆಯನ್ನು ತೋರಿಸುತ್ತೇವೆ.​—ರೋಮಾಪುರ 8:​26, 27.

15. ಬಾರಾಕನ ನಂಬಿಕೆಯ ಕುರಿತು ಮನನಮಾಡುವುದು ನಮಗೆ ಯಾವ ರೀತಿಯ ಸಹಾಯವನ್ನು ನೀಡೀತು?

15 ನ್ಯಾಯಸ್ಥಾಪಕ ಬಾರಾಕನ ನಂಬಿಕೆಯು, ಪ್ರೋತ್ಸಾಹನೆಯ ರೂಪದಲ್ಲಿ ಕೊಡಲ್ಪಟ್ಟ ಆಶ್ವಾಸನೆಯಿಂದ ಬಲಗೊಂಡಿತು. ಕಾನಾನ್ಯ ರಾಜನಾಗಿದ್ದ ಯಾಬೀನನ ದಬ್ಬಾಳಿಕೆಯಿಂದ ಇಸ್ರಾಯೇಲ್ಯರನ್ನು ಬಿಡುಗಡೆಮಾಡಲು ಅವನು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ದೆಬೋರಳೆಂಬ ಪ್ರವಾದಿನಿಯು ಅವನನ್ನು ಪ್ರೋತ್ಸಾಹಿಸಿದಳು. ಬಾರಾಕನು ನಂಬಿಕೆ ಮತ್ತು ದೈವಿಕ ಬೆಂಬಲದ ಪುನರಾಶ್ವಾಸನೆಯಿಂದಾಗಿ, ನ್ಯೂನವಾಗಿ ಸಜ್ಜಿತರಾಗಿದ್ದ 10,000 ಮಂದಿ ಸೈನಿಕರನ್ನು ಯುದ್ಧಕ್ಕೆ ನಡೆಸಿ, ಸೀಸೆರನ ನ್ಯಾಯಕತ್ವದಲ್ಲಿದ್ದ ಯಾಬೀನನ ಎಷ್ಟೋ ದೊಡ್ಡ ಸೈನ್ಯವನ್ನು ಸೋಲಿಸಿದನು. ಈ ವಿಜಯವನ್ನು, ದೆಬೋರ ಮತ್ತು ಬಾರಾಕರ ರೋಮಾಂಚಕ ಸಂಗೀತದಲ್ಲಿ ಹಾಡಿ ಆಚರಿಸಲಾಯಿತು. (ನ್ಯಾಯಸ್ಥಾಪಕರು 4:​1-5:31) ಬಾರಾಕನು ಇಸ್ರಾಯೇಲಿನ ದೇವನೇಮಿತ ನಾಯಕನಾಗಿ ಕಾರ್ಯನಡಿಸುವಂತೆ ದೆಬೋರಳು ಅವನನ್ನು ಪ್ರೋತ್ಸಾಹಿಸಿದಳು ಮತ್ತು ನಂಬಿಕೆಯ ಮೂಲಕ “ಪರರ ದಂಡುಗಳನ್ನು ಓಡಿಸಿಬಿಟ್ಟ” ಯೆಹೋವನ ಸೇವಕರಲ್ಲಿ ಅವನು ಒಬ್ಬನಾಗಿದ್ದನು. (ಇಬ್ರಿಯ 11:34) ನಂಬಿಕೆಯಿಂದ ವರ್ತಿಸಿದ್ದಕ್ಕಾಗಿ ದೇವರು ಬಾರಾಕನನ್ನು ಆಶೀರ್ವದಿಸಿದ ವಿಧದ ಕುರಿತು ಮನನಮಾಡುವುದರಿಂದ, ಯೆಹೋವನ ಸೇವೆಯಲ್ಲಿ ನಮಗೆ ಸಿಗುವ ಒಂದು ಪಂಥಾಹ್ವಾನದಾಯಕ ನೇಮಕದ ಕುರಿತು ತುಸು ಹಿಂಜರಿಯುವ ಸ್ವಭಾವ ನಮಗಿರುವಲ್ಲಿ, ಅದನ್ನು ಸ್ವೀಕರಿಸುವಂತೆ ನಂಬಿಕೆಯು ನಮ್ಮನ್ನು ಪ್ರೇರೇಪಿಸುವುದು.

ನಂಬಿಕೆಯು ಶಾಂತಿಯನ್ನು ಪ್ರವರ್ಧಿಸುತ್ತದೆ

16. ಲೋಟನೊಂದಿಗೆ ಸಮಾಧಾನಕ್ಕಾಗಿ ಪ್ರಯತ್ನಿಸುವುದರಲ್ಲಿ ಅಬ್ರಹಾಮನು ಯಾವ ಉತ್ತಮ ಮಾದರಿಯನ್ನಿಟ್ಟನು?

16 ದೇವರ ಸೇವೆಯಲ್ಲಿ ಕಷ್ಟಕರವಾದ ನೇಮಕಗಳನ್ನು ಪೂರೈಸಲು ನಂಬಿಕೆಯು ನಮಗೆ ಸಹಾಯಮಾಡುವಂತೆಯೇ, ಅದು ಇತರರೊಂದಿಗೆ ಶಾಂತಿ ಸಂಬಂಧವನ್ನೂ ಪ್ರವರ್ಧಿಸುತ್ತದೆ. ವೃದ್ಧ ಅಬ್ರಹಾಮನ ಮತ್ತು ಅವನ ಚಿಕ್ಕಪ್ರಾಯದ ಸೋದರಳಿಯ ಲೋಟನ ದನಕಾಯುವವರು ಉತ್ತಮ ಹುಲ್ಲುಗಾವಲನ್ನು ಆರಿಸಿಕೊಳ್ಳುವುದರ ಬಗ್ಗೆ ಜಗಳವಾಡಿದ ಕಾರಣ ಅವರು ಪ್ರತ್ಯೇಕರಾಗುವ ಆವಶ್ಯಕತೆ ಎದ್ದಾಗ, ಲೋಟನು ಉತ್ತಮ ಹುಲ್ಲುಗಾವಲನ್ನು ಆರಿಸಿಕೊಳ್ಳುವಂತೆ ಅಬ್ರಹಾಮನು ಬಿಟ್ಟನು. (ಆದಿಕಾಂಡ 13:​7-12) ಈ ಸಮಸ್ಯೆಯನ್ನು ಬಗೆಹರಿಸುವುದರಲ್ಲಿ ದೇವರ ಸಹಾಯವನ್ನು ಯಾಚಿಸುತ್ತಾ ಅಬ್ರಹಾಮನು ನಂಬಿಕೆಯಿಂದ ಪ್ರಾರ್ಥಿಸಿದ್ದಿರಬೇಕು. ತನ್ನ ಸ್ವಂತ ಅಭಿರುಚಿಯನ್ನು ಪ್ರಥಮವಾಗಿಡುವ ಬದಲು ಅವನು ವಿಷಯಗಳನ್ನು ಶಾಂತಿಯಿಂದ ಬಗೆಹರಿಸಿದನು. ನಮಗೆ ಒಬ್ಬ ಕ್ರೈಸ್ತ ಸಹೋದರನೊಂದಿಗೆ ವಾಗ್ವಾದವು ಉಂಟಾಗುವಲ್ಲಿ, ಪ್ರೀತಿಪೂರ್ವಕ ಪರಿಗಣನೆಯನ್ನು ತೋರಿಸುವ ವಿಷಯದಲ್ಲಿ ಅಬ್ರಹಾಮನ ಮಾದರಿಯನ್ನು ಮನಸ್ಸಿನಲ್ಲಿಟ್ಟು ನಾವು ನಂಬಿಕೆಯಿಂದ ಪ್ರಾರ್ಥಿಸಿ, “ಸಮಾಧಾನವನ್ನು ಹಾರೈ”ಸೋಣ.​—1 ಪೇತ್ರ 3:​10-12.

17. ಪೌಲ, ಬಾರ್ನಬ ಮತ್ತು ಮಾರ್ಕರ ಮಧ್ಯೆ ಉಂಟಾಗಿದ್ದ ಒಡಕು ಶಾಂತಿಯುತ ರೀತಿಯಲ್ಲಿ ಸರಿಮಾಡಲ್ಪಟ್ಟಿತೆಂದು ನಾವು ಏಕೆ ಹೇಳಬಲ್ಲೆವು?

17 ನಂಬಿಕೆಯಿಂದ ಕ್ರೈಸ್ತ ಮೂಲತತ್ತ್ವಗಳನ್ನು ಅನ್ವಯಿಸುವುದು ಶಾಂತಿಯನ್ನು ಪ್ರವರ್ಧಿಸಲು ನಮಗೆ ಹೇಗೆ ಸಹಾಯಮಾಡುತ್ತದೆಂಬುದರ ಕುರಿತು ಚಿಂತಿಸಿರಿ. ಪೌಲನು ತನ್ನ ಎರಡನೆಯ ಮಿಷನೆರಿ ಪ್ರಯಾಣವನ್ನು ಆರಂಭಿಸುವ ಮುಂಚೆ, ಮೊದಲು ಕುಪ್ರದ್ವೀಪಕ್ಕೆ ಮತ್ತು ಏಷಿಯ ಮೈನರಿನ ಸಭೆಗಳಿಗೆ ಪುನಃ ಭೇಟಿಕೊಡುವ ಅವನ ಪ್ರಸ್ತಾಪಕ್ಕೆ ಬಾರ್ನಬನು ಒಪ್ಪಿದನು. ಆದರೆ ತನ್ನ ಸೋದರಬಂಧುವಾಗಿದ್ದ ಮಾರ್ಕನನ್ನು ತನ್ನೊಂದಿಗೆ ಕರೆದೊಯ್ಯುವುದು ಬಾರ್ನಬನ ಅಪೇಕ್ಷೆಯಾಗಿತ್ತು. ಪೌಲನು ಇದಕ್ಕೆ ಒಪ್ಪಲಿಲ್ಲ, ಏಕೆಂದರೆ ಈ ಮಾರ್ಕನು ಅವರನ್ನು ಪಂಫುಲ್ಯದಲ್ಲಿ ಅರ್ಧದಲ್ಲೇ ಬಿಟ್ಟುಹೋಗಿದ್ದನು. ಆಗ “ತೀಕ್ಷ್ಣ ವಾಗ್ವಾದವುಂಟಾಗಿ,” ಇದರ ದೆಸೆಯಿಂದ ಅವರು ಅಗಲುವಂತಾಯಿತು. ಬಾರ್ನಬನು ಮಾರ್ಕನನ್ನು ಕರೆದುಕೊಂಡು ಕುಪ್ರದ್ವೀಪಕ್ಕೆ ಹೋದಾಗ, ಪೌಲನು ಸೀಲನನ್ನು ಜೊತೆಗೆ ಕರೆದುಕೊಂಡು “ಸಿರಿಯ ಕಿಲಿಕ್ಯ ಸೀಮೆಗಳಲ್ಲಿ ಸಂಚರಿಸುತ್ತಾ ಸಭೆಗಳನ್ನು ದೃಢಪಡಿಸಿದನು.” (ಅ. ಕೃತ್ಯಗಳು 15:36-41) ಸಮಯಾನಂತರ ಈ ಒಡಕು ಸರಿಮಾಡಲ್ಪಟ್ಟಿತ್ತೆಂದು ವ್ಯಕ್ತವಾಗುತ್ತದೆ. ಏಕೆಂದರೆ ಈ ಮಾರ್ಕನು ರೋಮ್‌ನಲ್ಲಿ ಪೌಲನ ಜೊತೆಗಿದ್ದದ್ದು ಮಾತ್ರವಲ್ಲ, ಪೌಲನು ಅವನ ಕುರಿತು ಒಳ್ಳೇ ಮಾತುಗಳನ್ನೂ ಆಡಿದನು. (ಕೊಲೊಸ್ಸೆ 4:10; ಫಿಲೆಮೋನ 23, 24) ಸಾ.ಶ. 65ರಲ್ಲಿ ಪೌಲನು ರೋಮಿನಲ್ಲಿ ಕೈದಿಯಾಗಿದ್ದಾಗ, ಅವನು ತಿಮೊಥೆಯನಿಗೆ, “ಮಾರ್ಕನನ್ನು ಸಂಗಡ ಕರಕೊಂಡು ಬಾ, ಅವನು ನನಗೆ ಸೇವೆಗಾಗಿ ಉಪಯುಕ್ತನಾಗಿದ್ದಾನೆ” ಎಂದು ಹೇಳಿದನು. (2 ತಿಮೊಥೆಯ 4:11) ಪೌಲನು ತನ್ನ ಹಾಗೂ ಬಾರ್ನಬ ಮತ್ತು ಮಾರ್ಕರ ಸಂಬಂಧವನ್ನು ನಂಬಿಕೆಯ ಪ್ರಾರ್ಥನೆಗಳ ವಸ್ತುವಿಷಯವಾಗಿ ಮಾಡಿದ್ದನೆಂಬುದು ಸುವ್ಯಕ್ತ, ಮತ್ತು ಇದರಿಂದಾಗಿ “ದೇವಶಾಂತಿ”ಯೊಂದಿಗೆ ಸಂಬಂಧಿಸಿದ್ದ ನೆಮ್ಮದಿ ಅಲ್ಲಿ ಫಲಿಸಿತು.​—ಫಿಲಿಪ್ಪಿ 4:​6, 7.

18. ಯುವೊದ್ಯ ಮತ್ತು ಸಂತುಕೆಯ ವಿಷಯದಲ್ಲಿ ಏನು ಸಂಭವಿಸಿದ್ದಿರಬಹುದು?

18 ಅಪರಿಪೂರ್ಣರಾಗಿರುವುದರಿಂದ, “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು.” (ಯಾಕೋಬ 3:2) ಇಬ್ಬರು ಕ್ರೈಸ್ತ ಸ್ತ್ರೀಯರ ಮಧ್ಯೆ ಭಿನ್ನಾಭಿಪ್ರಾಯಗಳು ಎದ್ದಾಗ, ಅವರ ಕುರಿತು ಪೌಲನು ಬರೆದುದು: “ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿರ್ರಿಯೆಂದು ಯುವೊದ್ಯಳನ್ನೂ ಸಂತುಕೆಯನ್ನೂ ಪ್ರಬೋಧಿಸುತ್ತೇನೆ. . . . ಅವರಿಗೆ ಸಹಾಯಕನಾಗಿರಬೇಕೆಂದು ನಿನ್ನನ್ನೂ ಕೇಳಿಕೊಳ್ಳುತ್ತೇನೆ. ಅವರು . . . ನನ್ನ ಕೂಡ ಸುವಾರ್ತೆಗೋಸ್ಕರ ಪ್ರಯಾಸಪಟ್ಟವರು.” (ಫಿಲಿಪ್ಪಿ 4:1-3) ಈ ದೇವಭಕ್ತ ಸ್ತ್ರೀಯರು ಮತ್ತಾಯ 5:​23, 24ರಲ್ಲಿ ದಾಖಲಿಸಲ್ಪಟ್ಟಿರುವಂತಹ ಸಲಹೆಯನ್ನು ಅನ್ವಯಿಸಿಕೊಂಡು, ಶಾಂತಿಯುತ ರೀತಿಯಲ್ಲಿ ತಮ್ಮ ಸಮಸ್ಯೆಯನ್ನು ಬಗೆಹರಿಸಿರುವುದು ಹೆಚ್ಚು ಸಂಭವನೀಯ. ಶಾಸ್ತ್ರೀಯ ಮೂಲತತ್ತ್ವಗಳನ್ನು ನಂಬಿಕೆಯಿಂದ ಅನ್ವಯಿಸಿಕೊಳ್ಳುವುದು, ಇಂದು ಶಾಂತಿಯನ್ನು ಪ್ರವರ್ಧಿಸಲು ಬಹಳಷ್ಟು ಸಹಾಯಮಾಡುವುದು ಎಂಬುದಂತೂ ಖಂಡಿತ.

ನಂಬಿಕೆಯು ನಾವು ತಾಳಿಕೊಳ್ಳುವಂತೆ ಶಕ್ತರನ್ನಾಗಿ ಮಾಡುತ್ತದೆ

19. ಯಾವ ಕಷ್ಟದ ಪರಿಸ್ಥಿತಿಯು ಇಸಾಕ ಮತ್ತು ರೆಬೆಕ್ಕರ ನಂಬಿಕೆಯನ್ನು ಕೆಡವಿಹಾಕಲಿಲ್ಲ?

19 ನಂಬಿಕೆಯ ಮೂಲಕ ನಾವು ಕಷ್ಟಗಳನ್ನೂ ತಾಳಿಕೊಳ್ಳಬಲ್ಲೆವು. ನಮ್ಮ ಕುಟುಂಬದ ದೀಕ್ಷಾಸ್ನಾನ ಪಡೆದಿರುವ ಸದಸ್ಯನೊಬ್ಬನು ಒಬ್ಬ ಅವಿಶ್ವಾಸಿಯನ್ನು ಮದುವೆಯಾಗುವ ಮೂಲಕ ದೇವರಿಗೆ ಅವಿಧೇಯನಾಗಿರುವುದರಿಂದ ನಾವು ಪ್ರಾಯಶಃ ಸಂಕಟಪಡುತ್ತಿರಬಹುದು. (1 ಕೊರಿಂಥ 7:39) ತಮ್ಮ ಪುತ್ರ ಏಸಾವನು ದೇವಭಕ್ತಿಯಿಲ್ಲದ ಸ್ತ್ರೀಯರನ್ನು ಮದುವೆಮಾಡಿಕೊಂಡ ಕಾರಣ ಇಸಾಕ ಮತ್ತು ರೆಬೆಕ್ಕರು ಸಂಕಟಪಟ್ಟರು. ಅವನ ಹಿತ್ತಿಯ ಪತ್ನಿಯರು ಅವರಿಗೆ ಎಷ್ಟು “ಮನೋವ್ಯಥೆ” ಉಂಟುಮಾಡಿದರೆಂದರೆ, ರೆಬೆಕ್ಕಳು ಹೇಳಿದ್ದು: “ಹಿತ್ತಿಯರಾದ ಈ ಸ್ತ್ರೀಯರ ದೆಸೆಯಿಂದ ನನಗೆ ಬೇಸರವಾಯಿತು. ಯಾಕೋಬನೂ ಈ ದೇಶದವರಲ್ಲಿ ಹೆಣ್ಣನ್ನು ಆದುಕೊಂಡು ಇಂಥಾ ಹಿತ್ತಿಯಸ್ತ್ರೀಯನ್ನು ಮದುವೆಮಾಡಿಕೊಂಡರೆ ನಾನು ಇನ್ನೂ ಬದುಕುವದರಿಂದ ಪ್ರಯೋಜನವೇನು.” (ಆದಿಕಾಂಡ 26:34, 35; 27:46) ಆದರೂ, ಈ ಪರೀಕ್ಷಾತ್ಮಕ ಪರಿಸ್ಥಿತಿಯು ಇಸಾಕ ಮತ್ತು ರೆಬೆಕ್ಕರ ನಂಬಿಕೆಯನ್ನು ಕೆಡವಿಹಾಕಲಿಲ್ಲ. ಕಷ್ಟಕರ ಪರಿಸ್ಥಿತಿಗಳು ನಮಗೆ ಸವಾಲೊಡ್ಡುವಲ್ಲಿ, ನಾವು ಬಲವಾದ ನಂಬಿಕೆಯನ್ನು ಕಾಪಾಡಿಕೊಳ್ಳೋಣ.

20. ನೊವೊಮಿ ಮತ್ತು ರೂತರಲ್ಲಿ ನಮಗೆ ನಂಬಿಕೆಯ ಯಾವ ಉದಾಹರಣೆಗಳಿವೆ?

20 ವೃದ್ಧೆಯಾಗಿದ್ದ ವಿಧವೆ ನೊವೊಮಿ ಯೆಹೂದದವಳಾಗಿದ್ದು, ಯೆಹೂದದ ಕೆಲವೊಂದು ಸ್ತ್ರೀಯರು ಮೆಸ್ಸೀಯನ ಪೂರ್ವಜರಾಗಬಹುದಾದ ಪುತ್ರರನ್ನು ಹಡೆಯುವರೆಂಬುದನ್ನು ತಿಳಿದವಳಾಗಿದ್ದಳು. ಆಕೆಯ ಪುತ್ರರು ಸಂತಾನವಿಲ್ಲದವರಾಗಿ ಸತ್ತಿದ್ದರು ಮತ್ತು ಆಕೆಗೆ ಗರ್ಭಧರಿಸುವ ಪ್ರಾಯವು ಮೀರಿಹೋಗಿತ್ತು. ಹೀಗಿರುವುದರಿಂದ, ಆಕೆಯ ಕುಟುಂಬವು ಮೆಸ್ಸೀಯನ ವಂಶಾವಳಿಯ ಭಾಗವಾಗಿರುವ ಸಾಧ್ಯತೆಯು ತೀರ ಕಡಿಮೆಯಾಗಿತ್ತು ಎಂಬುದು ನಿಶ್ಚಯ. ಹೀಗಿದ್ದರೂ, ಆಕೆಯ ಸೊಸೆಯಾಗಿದ್ದ ವಿಧವೆ ರೂತಳು ವೃದ್ಧ ಬೋವಜನ ಹೆಂಡತಿಯಾಗಿ, ಅವನ ಮಗನನ್ನು ಹೆತ್ತು, ಮೆಸ್ಸೀಯನಾದ ಯೇಸುವಿನ ಪೂರ್ವಜಳಾದಳು! (ಆದಿಕಾಂಡ 49:10, 33; ರೂತಳು 1:3-5; 4:13-22; ಮತ್ತಾಯ 1:1, 5) ನೊವೊಮಿ ಮತ್ತು ರೂತರ ನಂಬಿಕೆಯು ಸಂಕಟಗಳನ್ನು ತಾಳಿಕೊಂಡು ಅವರಿಗೆ ಹರ್ಷವನ್ನು ತಂದಿತು. ಕಷ್ಟಗಳ ನಡುವೆಯೂ ನಾವು ನಂಬಿಕೆಯನ್ನು ಕಾಪಾಡಿಕೊಳ್ಳುವಲ್ಲಿ ಮಹಾ ಸಂತೋಷವು ನಮಗೂ ದೊರೆಯುವುದು.

21. ನಂಬಿಕೆ ನಮಗೇನು ಮಾಡುತ್ತದೆ, ಮತ್ತು ನಮ್ಮ ದೃಢನಿಶ್ಚಯ ಏನಾಗಿರಬೇಕು?

21 ನಾಳಿನ ದಿನವು ನಮ್ಮಲ್ಲಿ ಒಬ್ಬೊಬ್ಬರಿಗೆ ವ್ಯಕ್ತಿಗತವಾಗಿ ಏನನ್ನು ತರಬಹುದೆಂದು ಹೇಳಸಾಧ್ಯವಿಲ್ಲವಾದರೂ, ನಂಬಿಕೆಯ ಮೂಲಕ ನಮ್ಮ ಮುಂದೆ ಬರುವ ಯಾವುದೇ ಪಂಥಾಹ್ವಾನವನ್ನು ನಾವು ಎದುರಿಸಬಲ್ಲೆವು. ನಂಬಿಕೆಯು ನಮ್ಮನ್ನು ಧೈರ್ಯವಂತರನ್ನಾಗಿಯೂ ತಾಳ್ಮೆಯುಳ್ಳವರನ್ನಾಗಿಯೂ ಮಾಡುತ್ತದೆ. ಅದು ನಮಗೆ ಉನ್ನತ ಗುರಿಗಳನ್ನು ಮತ್ತು ಪ್ರತಿಫಲದಾಯಕ ಜೀವನವನ್ನು ಕೊಡುತ್ತದೆ. ನಂಬಿಕೆಯು, ಬೇರೆಯವರೊಂದಿಗೆ ನಮಗಿರುವ ಸಂಬಂಧದ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಿ, ಎದುರಾಗುವ ಕಷ್ಟಸಂಕಟಗಳನ್ನು ಪಾರಾಗಿ ಉಳಿಯುತ್ತದೆ. ಆದುದರಿಂದಲೇ, ನಾವು “ನಂಬುವವರಾಗಿ ಪ್ರಾಣರಕ್ಷಣೆಯನ್ನು” ಹೊಂದುವವರಾಗಿರೋಣ. (ಇಬ್ರಿಯ 10:39) ನಮ್ಮನ್ನು ಪ್ರೀತಿಸುವ ದೇವರಾದ ಯೆಹೋವನ ಬಲದಲ್ಲಿ ಮತ್ತು ಆತನ ಮಹಿಮೆಗಾಗಿ ನಾವು ಬಲವಾದ ನಂಬಿಕೆಯನ್ನು ತೋರಿಸುತ್ತಾ ಇರೋಣ.

ನೀವು ಹೇಗೆ ಉತ್ತರ ಕೊಡುವಿರಿ?

• ನಂಬಿಕೆಯು ನಮ್ಮನ್ನು ಧೈರ್ಯಶಾಲಿಗಳಾಗಿ ಮಾಡುತ್ತದೆಂಬುದಕ್ಕೆ ಯಾವ ಶಾಸ್ತ್ರೀಯ ರುಜುವಾತಿದೆ?

• ನಂಬಿಕೆಯು ನಮಗೆ ಪ್ರತಿಫಲದಾಯಕ ಜೀವನವನ್ನು ಒದಗಿಸುತ್ತದೆಂದು ನಾವು ಏಕೆ ಹೇಳಬಲ್ಲೆವು?

• ನಂಬಿಕೆಯು ಶಾಂತಿಯನ್ನು ವರ್ಧಿಸುವುದು ಹೇಗೆ?

• ಕಷ್ಟಗಳನ್ನು ತಾಳಿಕೊಳ್ಳಲು ನಂಬಿಕೆಯು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆಂಬುದಕ್ಕೆ ಯಾವ ಪುರಾವೆಯಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 16ರಲ್ಲಿರುವ ಚಿತ್ರಗಳು]

ನಂಬಿಕೆಯು ನೋಹ ಮತ್ತು ಹನೋಕರಿಗೆ ಯೆಹೋವನ ಸಂದೇಶಗಳನ್ನು ಸಾರಲು ಧೈರ್ಯವನ್ನು ನೀಡಿತು

[ಪುಟ 17ರಲ್ಲಿರುವ ಚಿತ್ರಗಳು]

ಮೋಶೆಯಂಥ ನಂಬಿಕೆಯು ನಾವು ಆತ್ಮಿಕ ಗುರಿಗಳನ್ನು ಬೆನ್ನಟ್ಟುವಂತೆ ಪ್ರಚೋದಿಸುತ್ತದೆ

[ಪುಟ 18ರಲ್ಲಿರುವ ಚಿತ್ರಗಳು]

ದೈವಿಕ ಸಹಾಯದ ಆಶ್ವಾಸನೆಯು ಬಾರಾಕ್‌, ದೆಬೋರ ಮತ್ತು ಗಿದ್ಯೋನರ ನಂಬಿಕೆಯನ್ನು ಬಲಪಡಿಸಿತು