ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಧಿಸಲ್ಪಟ್ಟ ಯೆಹೋವನ ಸಾಕ್ಷಿಗಳನ್ನು ಸ್ಮರಿಸಲಾಗುತ್ತದೆ

ವಧಿಸಲ್ಪಟ್ಟ ಯೆಹೋವನ ಸಾಕ್ಷಿಗಳನ್ನು ಸ್ಮರಿಸಲಾಗುತ್ತದೆ

ವಧಿಸಲ್ಪಟ್ಟ ಯೆಹೋವನ ಸಾಕ್ಷಿಗಳನ್ನು ಸ್ಮರಿಸಲಾಗುತ್ತದೆ

ಇಸವಿ 2002ರ ಮಾರ್ಚ್‌ 7ರಂದು, ಪಶ್ಚಿಮ ಹಂಗೆರಿಯ ಕಾರ್‌ಮೆಂಡ್‌ ಪಟ್ಟಣದಲ್ಲಿ ಒಂದು ಸ್ಮಾರಕ ಫಲಕವನ್ನು ಅನಾವರಣಗೊಳಿಸಲಾಯಿತು. ಇದು 1945ರಲ್ಲಿ ನಾಸಿಗಳಿಂದ ಹತ್ಯೆಗೈಯಲ್ಪಟ್ಟ ಮೂವರು ಯೆಹೋವನ ಸಾಕ್ಷಿಗಳ ಮರಣದ ಸ್ಮಾರಕವನ್ನು ಆಚರಿಸಲಿಕ್ಕಾಗಿತ್ತು.

ಈ ಸ್ಮಾರಕ ಫಲಕವನ್ನು, ಹುನ್ಯಾಡೀ ರೋಡ್‌ನಲ್ಲಿರುವ ಅಗ್ನಿಶಾಮಕ ಇಲಾಖೆಯ ಆಧುನಿಕ ದಿನದ ಮುಖ್ಯಕಾರ್ಯಾಲಯದ ಗೋಡೆಗೆ ಜೋಡಿಸಲಾಗಿತ್ತು. ಆ ಸಾರ್ವಜನಿಕ ವಧೆಯು ಸಂಭವಿಸಿದ್ದು ಈ ಸ್ಥಳದಲ್ಲೇ. ಆ ಸ್ಮಾರಕ ಫಲಕವು, ‘1945ರ ಮಾರ್ಚ್‌ ತಿಂಗಳಿನಲ್ಲಿ ಆತ್ಮಸಾಕ್ಷಿಕ ಆಕ್ಷೇಪಕರೋಪಾದಿ ವಧಿಸಲ್ಪಟ್ಟಿದ್ದ ಕ್ರೈಸ್ತರ’ ನೆನಪಿಗಾಗಿ ಸಮರ್ಪಿಸಲ್ಪಟ್ಟಿತ್ತು. ‘ಆಂಟಾಲ್‌ ಹಾನಿಚ್‌ (1911-1945), ಬರ್ಟಾಲಾನ್‌ ಸಾಬಾ (1921-1945), ಯಾನಾಶ್‌ ಸಾನ್‌ಡಾರ್‌ (1923-1945), 2002, ಯೆಹೋವನ ಸಾಕ್ಷಿಗಳು.’

ಈ ವಧೆಗಳು IIನೇ ಲೋಕ ಯುದ್ಧವು ಕೊನೆಗೊಳ್ಳುವ ಎರಡು ತಿಂಗಳಿಗೆ ಮುಂಚೆಯಷ್ಟೇ ನಡೆಸಲ್ಪಟ್ಟಿದ್ದವು. ಈ ಕ್ರೈಸ್ತರನ್ನು ಏಕೆ ಹತಿಸಲಾಯಿತು? ವಾಶ್‌ ನೇಪೆ ಎಂಬ ಹಂಗೆರಿಯನ್‌ ವಾರ್ತಾಪತ್ರಿಕೆಯು ಹೀಗೆ ವಿವರಿಸುತ್ತದೆ: “ಜರ್ಮನಿಯಲ್ಲಿ ಹಿಟ್ಲರನು ಅಧಿಕಾರಕ್ಕೆ ಬಂದ ಬಳಿಕ, ಕೇವಲ ಯೆಹೂದ್ಯರು ಮಾತ್ರವಲ್ಲ ನಂಬಿಗಸ್ತ ಯೆಹೋವನ ಸಾಕ್ಷಿಗಳು ಸಹ ತಮ್ಮ ಧಾರ್ಮಿಕ ನಿಶ್ಚಿತಾಭಿಪ್ರಾಯವನ್ನು ತೊರೆಯದಿರುವಲ್ಲಿ, ಅವರನ್ನು ಹಿಂಸೆ ಮತ್ತು ಚಿತ್ರಹಿಂಸೆ, ಕೂಟಶಿಬಿರ ಹಾಗೂ ಮರಣಕ್ಕೆ ಗುರಿಪಡಿಸಲಾಗುತ್ತಿತ್ತು. . . . 1945ರ ಮಾರ್ಚ್‌ ತಿಂಗಳಿನಲ್ಲಿ, ಹಂಗೆರಿಯ ಪಶ್ಚಿಮ ಭಾಗದಲ್ಲೆಲ್ಲಾ ಭಯವು ತಾಂಡವವಾಡುತ್ತಿತ್ತು. . . . ಈ ಭೀಕರ ಸನ್ನಿವೇಶದ ಒಂದು ಭಾಗವು, ಯೆಹೋವನ ಸಾಕ್ಷಿಗಳ ಸದಸ್ಯರನ್ನು ಗಡೀಪಾರುಮಾಡಿ ಕೊಲ್ಲುವುದಾಗಿತ್ತು.”

ಆ ಸ್ಮಾರಕ ಫಲಕವನ್ನು ಅನಾವರಣಗೊಳಿಸುವುದರ ಸಂಬಂಧದಲ್ಲಿ ನಡೆದ ಕಾರ್ಯಕ್ರಮವು ಎರಡು ಭಾಗಗಳಾಗಿ ವರ್ಗೀಕರಿಸಲ್ಪಟ್ಟಿತ್ತು. ಮೊದಲನೆಯ ಭಾಗವು ಬಾಟ್‌ಟ್ಯಾನೀ ಕಾಸಲ್‌ನ ಥಿಯೇಟರ್‌ನಲ್ಲಿ ಜರುಗಿತು. ಅಲ್ಲಿನ ಭಾಷಣಕರ್ತರುಗಳು, ಬುಡಪೆಸ್ಟ್‌ನಲ್ಲಿರುವ ಹತ್ಯಾಕಾಂಡ ದಾಖಲೆ ಸಂಗ್ರಹಣ ಕೇಂದ್ರದ ಮುಖ್ಯಸ್ಥರಾಗಿರುವ ಪ್ರೊಫೆಸರ್‌ ಸಾಬೋಚ್‌ ಸೀಟಾ; ಹಂಗೆರಿಯನ್‌ ಮಾನವಹಕ್ಕು, ಅಲ್ಪಸಂಖ್ಯಾತರು ಮತ್ತು ಧಾರ್ಮಿಕ ವಿಚಾರಗಳ ಪಾರ್ಲಿಮೆಂಟ್‌ ಕಮಿಟಿಯ ಸದಸ್ಯರಾಗಿರುವ ಲಾಸ್ಲೋ ಡೋನಾತ್‌; ಮತ್ತು ಈಗ ಪಟ್ಟಣದ ಇತಿಹಾಸಕಾರರಾಗಿದ್ದು, ಆ ವಧೆಗಳನ್ನು ಕಣ್ಣಾರೆ ನೋಡಿರುವ ಕಾಲ್ಮಾನ್‌ ಕೋಮ್ಯಾಚೀ ಅವರಾಗಿದ್ದರು. ಅಲ್ಲಿ ಹಾಜರಿದ್ದ 500ಕ್ಕಿಂತಲೂ ಹೆಚ್ಚು ಜನರು ಕಾರ್ಯಕ್ರಮದ ಎರಡನೆಯ ಭಾಗಕ್ಕಾಗಿ ಪಟ್ಟಣದ ಇನ್ನೊಂದು ಬದಿಗೆ ನಡೆದುಕೊಂಡು ಹೋದರು. ಈ ಎರಡನೆಯ ಭಾಗವು ಸ್ಮಾರಕ ಫಲಕದ ಅನಾವರಣವೇ ಆಗಿದ್ದು, ಕಾರ್‌ಮೆಂಡ್‌ ಪಟ್ಟಣದ ಮೇಯರ್‌ ಆಗಿರುವ ಯೋಸೆಫ್‌ ಹೋನ್‌ಫೀಯವರು ಇದನ್ನು ಉದ್ಘಾಟಿಸಿದರು.

ಯಾನಾಶ್‌ ಸಾನ್‌ಡಾರ್‌ ತಮ್ಮ ಬೀಳ್ಕೊಡುವಿಕೆಯ ಪತ್ರದಲ್ಲಿ, ತನ್ನ ಕ್ರೈಸ್ತ ಸಹೋದರ ಸಹೋದರಿಯರು ಅಳದಿರುವಂತೆ ಪ್ರೋತ್ಸಾಹಿಸಿದರು. ಅವರು ಬರೆದುದು: “ಪ್ರಕಟನೆ 2:10ರಲ್ಲಿ ಕಂಡುಬರುವ ‘ನೀನು ಸಾಯಬೇಕಾದರೂ ನಂಬಿಗಸ್ತನಾಗಿರು’ ಎಂಬ ಯೋಹಾನನ ಮಾತುಗಳು ಈಗಲೂ ನನ್ನ ಮನಸ್ಸಿನಲ್ಲಿವೆ . . . ನನಗೋಸ್ಕರ ಅಳಬೇಡಿರೆಂದು ನನ್ನ ಕುಟುಂಬದ ಸದಸ್ಯರಿಗೆ ತಿಳಿಸಿರಿ, ಏಕೆಂದರೆ ನಾನು ಸತ್ಯಕ್ಕೋಸ್ಕರ ಸಾಯುತ್ತಿದ್ದೇನೆ, ಅಪರಾಧಿಯಾಗಿ ಅಲ್ಲ.”

[ಪುಟ 32ರಲ್ಲಿರುವ ಚಿತ್ರ]

ಬರ್ಟಾಲಾನ್‌ ಸಾಬಾ

[ಪುಟ 32ರಲ್ಲಿರುವ ಚಿತ್ರ]

ಆಂಟಾಲ್‌ ಹಾನಿಚ್‌

[ಪುಟ 32ರಲ್ಲಿರುವ ಚಿತ್ರ]

ಯಾನಾಶ್‌ ಸಾನ್‌ಡಾರ್‌