ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಕೋರ್ಟಿನಲ್ಲಿ ಒಬ್ಬ ಕ್ರೈಸ್ತನು ಬೈಬಲಿನ ಮೇಲೆ ಕೈಯಿಟ್ಟು, ಸತ್ಯವನ್ನೇ ಹೇಳುತ್ತೇನೆಂದು ಪ್ರಮಾಣ ಮಾಡುವುದು ಶಾಸ್ತ್ರೀಯವಾಗಿ ಅಂಗೀಕಾರಾರ್ಹವಾಗಿದೆಯೊ?

ಈ ವಿಷಯದಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ನಿರ್ಣಯವನ್ನು ಮಾಡತಕ್ಕದ್ದು. (ಗಲಾತ್ಯ 6:5) ಆದರೆ ಕೋರ್ಟಿನಲ್ಲಿ ಸತ್ಯವನ್ನು ಹೇಳುತ್ತೇನೆಂದು ಪ್ರಮಾಣ ಮಾಡುವುದನ್ನು ಬೈಬಲು ನಿಷೇಧಿಸುವುದಿಲ್ಲ.

ಪ್ರಮಾಣ ಮಾಡುವುದು ದೀರ್ಘಕಾಲದಿಂದಲೂ ಬಂದಿರುವ ಒಂದು ವ್ಯಾಪಕ ರೂಢಿಯಾಗಿರುತ್ತದೆ. ಉದಾಹರಣೆಗೆ, ಪುರಾತನ ಕಾಲದಲ್ಲಿ ಗ್ರೀಕರು ಪ್ರಮಾಣ ಮಾಡುತ್ತಿದ್ದಾಗ ಆಕಾಶದ ಕಡೆಗೆ ಕೈಯೆತ್ತುತ್ತಿದ್ದರು ಅಥವಾ ಬಲಿಪೀಠವನ್ನು ಮುಟ್ಟುತ್ತಿದ್ದರು. ಒಬ್ಬ ರೋಮನ್‌ ವ್ಯಕ್ತಿಯು ಪ್ರಮಾಣ ಮಾಡುತ್ತಿದ್ದಾಗ, ಅವನು ತನ್ನ ಕೈಯಲ್ಲಿ ಒಂದು ಕಲ್ಲನ್ನು ಹಿಡಿದುಕೊಂಡು ಹೀಗೆ ಶಪಥಮಾಡಿದನು: “[ಜೂಪಿಟರ್‌ ದೇವನು] ನಗರವನ್ನೂ ದುರ್ಗವನ್ನೂ ರಕ್ಷಿಸುವಾಗ, ಒಂದುವೇಳೆ ನಾನು ಉದ್ದೇಶಪೂರ್ವಕವಾಗಿ ವಂಚಿಸುವಲ್ಲಿ, ನಾನು ಈ ಕಲ್ಲನ್ನು ದೂರ ಎಸೆಯುವಂತೆಯೇ ಜೂಪಿಟರನು ನನ್ನನ್ನು ಎಲ್ಲಾ ಒಳ್ಳೆಯ ವಿಷಯಗಳಿಂದ ದೂರ ಎಸೆಯಲಿ.”​—ಜಾನ್‌ ಮೆಕ್ಲಿಂಟೊಕ್‌ ಮತ್ತು ಜೇಮ್ಸ್‌ ಸ್ಟ್ರಾಂಗ್‌ರ ಸೈಕ್ಲಪೀಡಿಯ ಆಫ್‌ ಬಿಬ್ಲಿಕಲ್‌, ಥಿಯಲಾಜಿಕಲ್‌ ಆ್ಯಂಡ್‌ ಎಕ್ಲೀಸಿಯಾಸ್ಟಿಕಲ್‌ ಲಿಟರೇಚರ್‌, ಸಂಪುಟ VII, ಪುಟ 260.

ಇಂತಹ ಕ್ರಿಯೆಗಳು, ಯಾರು ಮಾನವರನ್ನು ನೋಡಬಲ್ಲನೊ ಮತ್ತು ಯಾವನಿಗೆ ಅವರು ಉತ್ತರವಾದಿಗಳಾಗಿದ್ದಾರೊ ಅಂತಹ ದೈವಿಕ ಶಕ್ತಿಯ ಅಸ್ತಿತ್ವವನ್ನು ಗುರುತಿಸಲು ಮಾನವಕುಲಕ್ಕಿರುವ ಪ್ರವೃತ್ತಿಯ ಸೂಚನೆಗಳಾಗಿದ್ದವು. ಯೆಹೋವನ ಸತ್ಯಾರಾಧಕರು ಪೂರ್ವಕಾಲದಿಂದಲೂ ತಾವು ಏನು ಹೇಳುತ್ತೇವೋ ಹಾಗೂ ಮಾಡುತ್ತೇವೊ ಅದನ್ನು ದೇವರು ಬಲ್ಲನು ಎಂಬುದನ್ನು ಗ್ರಹಿಸಿದ್ದರು. (ಜ್ಞಾನೋಕ್ತಿ 5:21; 15:3) ಅವರು ದೇವರ ಸನ್ನಿಧಿಯಲ್ಲಿದ್ದಾರೊ ಎಂಬಂತೆ ಅಥವಾ ಆತನು ಸಾಕ್ಷಿಯಾಗಿದ್ದಾನೊ ಎಂಬಂತೆ ಪ್ರಮಾಣಗಳನ್ನು ಮಾಡಿದರು. ದೃಷ್ಟಾಂತಕ್ಕೆ, ಬೋವಜನು, ದಾವೀದನು, ಸೊಲೊಮೋನನು ಮತ್ತು ಚಿದ್ಕೀಯರು ಹಾಗೆ ಮಾಡಿದರು. (ರೂತಳು 3:13; 2 ಸಮುವೇಲ 3:35; 1 ಅರಸುಗಳು 2:23, 24; ಯೆರೆಮೀಯ 38:16) ಸತ್ಯದೇವರ ಆರಾಧಕರು, ಇತರರು ಅವರನ್ನು ಪ್ರಮಾಣಕ್ಕೆ ಒಳಪಡಿಸುವಂತೆಯೂ ಬಿಟ್ಟುಕೊಟ್ಟರು. ಅಬ್ರಹಾಮ ಮತ್ತು ಯೇಸು ಕ್ರಿಸ್ತನ ವಿಷಯದಲ್ಲಿ ಇದು ನಿಜವಾಗಿತ್ತು.​—ಆದಿಕಾಂಡ 21:22-24; ಮತ್ತಾಯ 26:63, 64.

ಯೆಹೋವನ ಮುಂದೆ ಪ್ರಮಾಣ ಮಾಡುವವನು ಕೆಲವು ಸಲ ಅದರ ಜೊತೆಗೆ ಒಂದು ಭಾವಾಭಿನಯವನ್ನು ಮಾಡುತ್ತಿದ್ದನು. ಅಬ್ರಾಮ (ಅಬ್ರಹಾಮ)ನು ಸೊದೋಮಿನ ಅರಸನಿಗೆ ಹೇಳಿದ್ದು: “ಭೂಮ್ಯಾಕಾಶಗಳನ್ನು ನಿರ್ಮಾಣಮಾಡಿದ ಪರಾತ್ಪರದೇವರಾಗಿರುವ ಯೆಹೋವನ ಕಡೆಗೆ ಕೈಯೆತ್ತಿ ಪ್ರಮಾಣಮಾಡುತ್ತೇನೆ.” (ಆದಿಕಾಂಡ 14:22) ಪ್ರವಾದಿ ದಾನಿಯೇಲನೊಂದಿಗೆ ಮಾತಾಡುತ್ತಿದ್ದ ಒಬ್ಬ ದೇವದೂತನು, “ಎಡಬಲಕೈಗಳನ್ನು ಆಕಾಶದ ಕಡೆಗೆ ಎತ್ತಿಕೊಂಡು​—ಶಾಶ್ವತಜೀವಸ್ವರೂಪನಾಣೆ” ಎಂದು ಹೇಳಿದನು. (ದಾನಿಯೇಲ 12:7) ದೇವರು ಸಹ ಪ್ರಮಾಣ ಮಾಡಲು ಸಾಂಕೇತಿಕವಾಗಿ ಕೈಯೆತ್ತುತ್ತಾನೆಂದು ಸೂಚಿಸಲಾಗಿದೆ.​—ಧರ್ಮೋಪದೇಶಕಾಂಡ 32:40; ಯೆಶಾಯ 62:8.

ಪ್ರಮಾಣ ಮಾಡುವುದಕ್ಕೆ ಶಾಸ್ತ್ರೀಯ ಆಕ್ಷೇಪಣೆಯೇನಿಲ್ಲ. ಆದರೂ, ಒಬ್ಬ ಕ್ರೈಸ್ತನು ತಾನು ಮಾಡುವ ಪ್ರತಿಯೊಂದು ಹೇಳಿಕೆಯನ್ನೂ ಪ್ರಮಾಣ ಮಾಡಿ ಹೇಳಬೇಕೆಂದಿಲ್ಲ. “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ” ಎಂದು ಯೇಸು ಹೇಳಿದನು. (ಓರೆ ಅಕ್ಷರಗಳು ನಮ್ಮವು.) (ಮತ್ತಾಯ 5:33-37) ಶಿಷ್ಯ ಯಾಕೋಬನು ಇದನ್ನೇ ಒತ್ತಿಹೇಳಿದನು. “ಆಣೆ ಇಡಲೇ ಬೇಡಿರಿ” ಎಂದು ಅವನು ಹೇಳಿದಾಗ, ಚಿಕ್ಕಪುಟ್ಟ ವಿಷಯಗಳ ಮೇಲೆ ಪ್ರಮಾಣ ಮಾಡುವುದರ ವಿರುದ್ಧ ಅವನು ಎಚ್ಚರಿಸುತ್ತಿದ್ದನು. (ಯಾಕೋಬ 5:12) ಆದರೆ ಯೇಸುವಾಗಲಿ ಯಾಕೋಬನಾಗಲಿ, ಕೋರ್ಟಿನಲ್ಲಿ ಸತ್ಯ ಹೇಳಲು ಪ್ರಮಾಣ ಮಾಡುವುದು ತಪ್ಪೆಂದು ಹೇಳಿಲ್ಲ.

ಹಾಗಾದರೆ, ಕೋರ್ಟಿನಲ್ಲಿ ಒಬ್ಬ ಕ್ರೈಸ್ತನಿಗೆ ತನ್ನ ಸಾಕ್ಷಿ ಸತ್ಯವೆಂದು ಪ್ರಮಾಣ ಮಾಡು ಎಂದು ಹೇಳಲ್ಪಡುವಲ್ಲಿ ಆಗೇನು? ಹಾಗೆ ಪ್ರಮಾಣ ಮಾಡಸಾಧ್ಯವಿದೆ ಎಂದು ಅವನು ಅಭಿಪ್ರಯಿಸಬಹುದು. ಇಲ್ಲವೆ ತಾನು ಸುಳ್ಳಾಡುತ್ತಿಲ್ಲವೆಂಬ ಸ್ಥಿರೀಕರಣ ಹೇಳಿಕೆಯನ್ನು ಮಾಡಲು ಅವನಿಗೆ ಅನುಮತಿ ದೊರೆಯಬಹುದು.​—ಗಲಾತ್ಯ 1:20.

ಕೋರ್ಟಿನ ಕ್ರಮವು, ಪ್ರಮಾಣ ಮಾಡುವಾಗ ಕೈಯೆತ್ತಬೇಕು ಇಲ್ಲವೆ ಬೈಬಲಿನ ಮೇಲೆ ಕೈಯಿಡಬೇಕು ಎಂದಿರುವಲ್ಲಿ, ಒಬ್ಬ ಕ್ರೈಸ್ತನು ಅದನ್ನು ಅಂಗೀಕರಿಸುವ ಆಯ್ಕೆಮಾಡಬಹುದು. ಪ್ರಮಾಣ ಮಾಡುವಾಗ ಭಾವಾಭಿನಯ ಮಾಡುವಂಥ ಶಾಸ್ತ್ರೀಯ ದೃಷ್ಟಾಂತಗಳು ಅವನ ಮನಸ್ಸಿನಲ್ಲಿರಬಹುದು. ಒಬ್ಬ ಕ್ರೈಸ್ತನಿಗಾದರೋ, ಒಂದು ಪ್ರಮಾಣವನ್ನು ಮಾಡುತ್ತಿರುವಾಗ ಒಂದು ನಿರ್ದಿಷ್ಟ ಭಾವಾಭಿನಯವನ್ನು ಮಾಡುವುದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದುದು, ತಾನು ಸತ್ಯವನ್ನು ಹೇಳಲು ದೇವರ ಮುಂದೆ ಪ್ರಮಾಣ ಮಾಡುತ್ತಿದ್ದೇನೆಂಬದನ್ನು ಜ್ಞಾಪಕದಲ್ಲಿಡುವುದೇ ಆಗಿದೆ. ಇಂತಹ ಪ್ರಮಾಣ ಮಾಡುವಿಕೆಯು ಗಂಭೀರವಾದ ವಿಚಾರವಾಗಿದೆ. ಅಂತಹ ಸನ್ನಿವೇಶದಲ್ಲಿ ಒಬ್ಬ ಕ್ರೈಸ್ತನು ತನಗೆ ಕೇಳಲ್ಪಡುವ ಪ್ರಶ್ನೆಗೆ ತಾನು ಉತ್ತರ ಕೊಡಸಾಧ್ಯವಿದೆ ಮತ್ತು ಕೊಡಬೇಕು ಎಂದೆಣಿಸುವಲ್ಲಿ, ಒಬ್ಬ ಕ್ರೈಸ್ತನು ಸದಾ ಮಾಡಬಯಸುವಂತೆಯೇ, ತಾನು ಸತ್ಯವನ್ನು ಹೇಳುವ ಪ್ರಮಾಣಕ್ಕೊಳಗಾಗಿದ್ದೇನೆ ಎಂಬುದನ್ನು ಅವನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.