ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಉದ್ಯೋಗ ಸುರಕ್ಷೆ ಮತ್ತು ಸಂತೃಪ್ತಿಗಳು ಬೆದರಿಕೆಗೊಳಗಾಗಿವೆ

ಉದ್ಯೋಗ ಸುರಕ್ಷೆ ಮತ್ತು ಸಂತೃಪ್ತಿಗಳು ಬೆದರಿಕೆಗೊಳಗಾಗಿವೆ

ಉದ್ಯೋಗ ಸುರಕ್ಷೆ ಮತ್ತು ಸಂತೃಪ್ತಿಗಳು ಬೆದರಿಕೆಗೊಳಗಾಗಿವೆ

ವಿಶ್ವ ಸಂಸ್ಥೆಯಿಂದ ಜಾರಿಗೆ ತರಲ್ಪಟ್ಟ ಮಾನವ ಹಕ್ಕುಗಳ ಸಾರ್ವತ್ರಿಕ ಪ್ರಕಟನೆಗನುಸಾರ, “ಕೆಲಸಮಾಡುವ ಹಕ್ಕು” ಸರ್ವ ಮಾನವರಿಗೂ ಮೂಲಭೂತವಾದದ್ದಾಗಿದೆ. ಆದರೂ, ಯಾವಾಗಲೂ ಈ ವಿಶೇಷ ಹಕ್ಕಿನ ಖಾತ್ರಿ ಇರುವುದಿಲ್ಲ. ಉದ್ಯೋಗ ಸುರಕ್ಷೆಯು, ಸ್ಥಳಿಕ ಆರ್ಥಿಕ ವ್ಯವಸ್ಥೆಗಳ ಸಾಮಾನ್ಯ ಸ್ಥಿತಿಯಿಂದ ಹಿಡಿದು ಜಾಗತಿಕ ಮಾರುಕಟ್ಟೆಯ ವರೆಗೂ ಇರುವ ಅನೇಕ ವಿಷಯಗಳ ಮೇಲೆ ಅವಲಂಬಿಸಿದೆ. ಹಾಗಿದ್ದರೂ, ಉದ್ಯೋಗವನ್ನು ಕಳೆದುಕೊಂಡಾಗ ಅಥವಾ ಅದು ಬೆದರಿಕೆಗೊಳಗಾಗುವಾಗ, ಅನೇಕವೇಳೆ ಬಹಿರಂಗ ಪ್ರದರ್ಶನಗಳು, ಗಲಭೆಗಳು, ಮತ್ತು ಸ್ಟ್ರೈಕ್‌ಗಳು ನಡೆಯುತ್ತವೆ. ಕೆಲವು ದೇಶಗಳು ಮಾತ್ರ ಇದರಿಂದ ವಿಮುಕ್ತವಾಗಿವೆ. ಒಬ್ಬ ಲೇಖಕನು ಹೇಳಿದ್ದೇನೆಂದರೆ, “ಕೆಲಸ” ಎಂಬ ಪದವೇ “ಎಂದಿನಂತೆ ತೀವ್ರವಾದ ಭಾವನೆಗಳನ್ನು ಸಿಡಿದೆಬ್ಬಿಸುವಂಥ ಒಂದು ಪದವಾಗಿದೆ.”

ಉದ್ಯೋಗವು ನಮಗೆ ಅನೇಕ ಕಾರಣಗಳಿಗಾಗಿ ತುಂಬ ಪ್ರಾಮುಖ್ಯವಾಗಿದೆ. ಇದು ನಮಗೆ ಆದಾಯವನ್ನು ಒದಗಿಸುತ್ತದೆ ಮಾತ್ರವಲ್ಲ, ನಮ್ಮ ಮಾನಸಿಕ ಹಾಗೂ ಭಾವನಾತ್ಮಕ ಹಿತಕ್ಷೇಮಕ್ಕೂ ಸಹಾಯಮಾಡುತ್ತದೆ. ಸಮಾಜದ ಉತ್ಪನ್ನಕಾರಕ ಸದಸ್ಯನಾಗಿರಬೇಕು ಮತ್ತು ಜೀವನದಲ್ಲಿ ಒಂದು ಉದ್ದೇಶವನ್ನು ಹೊಂದಿರಬೇಕು ಎಂಬ ಮಾನವ ಬಯಕೆಯನ್ನು ಸಹ ಇದು ಪೂರೈಸುತ್ತದೆ. ಅಷ್ಟುಮಾತ್ರವಲ್ಲ, ಸ್ವಲ್ಪ ಮಟ್ಟಿಗಿನ ಸ್ವಗೌರವವನ್ನು ಸಹ ಇದು ನಮ್ಮಲ್ಲಿ ಉಂಟುಮಾಡುತ್ತದೆ. ಆದುದರಿಂದಲೇ, ತಮ್ಮ ಆವಶ್ಯಕತೆಗಳನ್ನು ಪೂರೈಸಲು ಬೇಕಾಗಿರುವುದಕ್ಕಿಂತಲೂ ಹೆಚ್ಚು ಹಣವಂಥರಾಗಿರುವ ಕೆಲವರು ಅಥವಾ ನಿವೃತ್ತಿ ಪಡೆಯಲು ಅರ್ಹರಾಗಿರುವವರು ಸಹ ಉದ್ಯೋಗದಲ್ಲಿ ಮುಂದುವರಿಯಲು ಇಷ್ಟಪಡುತ್ತಾರೆ. ಹೌದು, ಕೆಲಸವು ಎಷ್ಟು ಪ್ರಾಮುಖ್ಯವಾಗಿದೆಯೆಂದರೆ, ಅದರ ಕೊರತೆಯು ಸಾಮಾನ್ಯವಾಗಿ ಗಂಭೀರವಾದ ಸಾಮಾಜಿಕ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಇನ್ನೊಂದು ಕಡೆಯಲ್ಲಿ, ಒಂದು ಉದ್ಯೋಗವಿರುವುದಾದರೂ ಕೆಲಸದ ಸ್ಥಳದಲ್ಲಿನ ವಿಪರೀತವಾದ ಒತ್ತಡದಿಂದಾಗಿ ಎಂದೂ ತಮ್ಮ ಕೆಲಸದಲ್ಲಿ ಆನಂದವನ್ನು ಪಡೆದುಕೊಳ್ಳದಿರುವವರೂ ಇದ್ದಾರೆ. ದೃಷ್ಟಾಂತಕ್ಕಾಗಿ, ಇಂದಿನ ಅತ್ಯಧಿಕ ಸ್ಪರ್ಧಾತ್ಮಕ ಮಾರುಕಟ್ಟೆಯ ಕಾರಣದಿಂದಾಗಿ, ಖರ್ಚುವೆಚ್ಚಗಳನ್ನು ತಗ್ಗಿಸುವ ಸಲುವಾಗಿ ಹೆಚ್ಚೆಚ್ಚು ಕಂಪನಿಗಳು ತಮ್ಮ ಸಿಬ್ಬಂದಿಯನ್ನು ಕಡಿಮೆಮಾಡಿವೆ. ಇದು, ಉಳಿದಿರುವ ನೌಕರರ ಮೇಲೆ ಹೆಚ್ಚು ಕೆಲಸವನ್ನು ಹೇರಬಹುದಾದ್ದರಿಂದ ಇವರು ಹೆಚ್ಚಿನ ಕೆಲಸವನ್ನು ಮಾಡಬೇಕಾಗಬಹುದು.

ಜೀವನವನ್ನು ಹೆಚ್ಚು ಸುಲಭಗೊಳಿಸಿ, ಕೆಲಸವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆಂದು ಎಣಿಸಲಾಗಿರುವಂಥ ಆಧುನಿಕ ತಾಂತ್ರಿಕತೆಯು, ವಾಸ್ತವದಲ್ಲಿ ಕೆಲಸದ ಸ್ಥಳದಲ್ಲಿ ಇನ್ನೂ ಅನೇಕ ಒತ್ತಡಗಳನ್ನು ಕೂಡಿಸಿರಬಹುದು. ಉದಾಹರಣೆಗೆ, ಕಂಪ್ಯೂಟರ್‌ಗಳು, ಫ್ಯಾಕ್ಸ್‌ ಯಂತ್ರಗಳು, ಮತ್ತು ಇಂಟರ್‌ನೆಟ್‌ಗಳು, ಕೆಲಸದ ತಾಸುಗಳ ನಂತರ ಜನರು ತಮ್ಮ ಕೆಲಸವನ್ನು ಮನೆಯಲ್ಲಿಯೂ ಮಾಡುವಂತೆ ಸಾಧ್ಯಗೊಳಿಸಿರುವುದರಿಂದ, ಮನೆ ಮತ್ತು ಆಫೀಸಿನ ನಡುವೆ ಯಾವುದೇ ವ್ಯತ್ಯಾಸವು ಇಲ್ಲದಂತಾಗುತ್ತಿದೆ. ತನ್ನ ಕಂಪನಿಯಿಂದ ಸಿಕ್ಕಿರುವ ಪೇಜರ್‌ ಮತ್ತು ಮೋಬೈಲ್‌ ಫೋನ್‌ಗಳು, ಇನ್ನೊಂದು ತುದಿಯಿಂದ ತನ್ನ ಬಾಸ್‌ ಎಳೆಯುತ್ತಾ ಇರುವ ಅದೃಶ್ಯ ಹಗ್ಗದಂತಿವೆ ಎಂದು ಒಬ್ಬ ಕೆಲಸಗಾರನಿಗನಿಸಿತು.

ವೇಗದಿಂದ ಬದಲಾಗುತ್ತಿರುವ ಆರ್ಥಿಕ ಮತ್ತು ಕೆಲಸದ ಪರಿಸರದಲ್ಲಿರುವ ಅನೇಕ ಮಂದಿ ವೃದ್ಧರಲ್ಲಿ, ತಮ್ಮಿಂದ ಸಾಕಷ್ಟು ಪ್ರತಿಫಲಗಳು ಸಿಗುತ್ತಿರುವಾಗಲೇ ತಮ್ಮನ್ನು ಇನ್ನು ಮುಂದೆ ನಿಷ್ಪ್ರಯೋಜಕರಂತೆ ಪರಿಗಣಿಸಲಾಗುವುದೋ ಎಂಬ ಭಯವು ಹೆಚ್ಚುತ್ತಿದೆ. ಈ ವಿಷಯದಲ್ಲಿ, ಮಾನವ ಹಕ್ಕುಗಳ ಮಾಜಿ ಕಮಿಷನರರಾದ ಕ್ರಿಸ್‌ ಸಿಡೋಟೀ ಹೇಳಿದ್ದು: “ನೀವು 40ಕ್ಕಿಂತ ಕಡಿಮೆ ಪ್ರಾಯದವರಾಗಿಲ್ಲದಿರುವಲ್ಲಿ, ನೀವು ಕಂಪ್ಯೂಟರುಗಳನ್ನು ಮತ್ತು ಹೊಸ ತಾಂತ್ರಿಕತೆಯನ್ನು ನಿರ್ವಹಿಸಲು ಶಕ್ತರಾಗಿರುವುದಿಲ್ಲ ಎಂಬ ಏಕಪ್ರಕಾರದ ಕಲ್ಪನೆಯು ವ್ಯಾಪಕವಾಗಿರುವಂತೆ ತೋರುತ್ತದೆ.” ಆದುದರಿಂದ, ಯಾರನ್ನು ಈ ಹಿಂದೆ ತಮ್ಮ ಜೀವನದ ಅತ್ಯಂತ ಯಶಸ್ವಿಕರ ಹಂತದಲ್ಲಿರುವುದಾಗಿ ಪರಿಗಣಿಸಲಾಗುತ್ತಿತ್ತೋ ಅಂಥ ದಕ್ಷ ಕೆಲಸಗಾರರು ಇಂದಿನ ದಿನಗಳಲ್ಲಿ ಪ್ರಯೋಜನಕ್ಕೆ ಬಾರದಿರುವಷ್ಟು ವೃದ್ಧರಾಗಿ ಪರಿಗಣಿಸಲ್ಪಡುತ್ತಾರೆ. ಎಷ್ಟು ದುರಂತಮಯ ವಿಚಾರವಿದು!

ಈ ಮುಂಚೆ ಕಂಪನಿಗಳಲ್ಲಿ ಕಠಿನ ಕೆಲಸದ ಕಡೆಗೆ ಸಾಮಾನ್ಯವಾಗಿ ತೋರಿಸಲ್ಪಡುತ್ತಿದ್ದ ನೈತಿಕ ಮೌಲ್ಯ ಹಾಗೂ ನಿಷ್ಠೆಯು, ಇತ್ತೀಚಿನ ವರ್ಷಗಳಲ್ಲಿ ತೀರ ಹೀನಮಟ್ಟಕ್ಕಿಳಿದಿದೆ. “ಸ್ಟಾಕ್‌ ಮಾರುಕಟ್ಟೆಯಲ್ಲಿನ ಚಿಕ್ಕಪುಟ್ಟ ಏರುಪೇರುಗಳಿಂದಾಗಿ ಸಂಸ್ಥಾಪನೆಗಳು ತಮ್ಮ ನೌಕರರನ್ನು ಕೆಲಸದಿಂದ ತೆಗೆದುಹಾಕುವಾಗ, ಸಂಸ್ಥಾಪನಾ ನಿಷ್ಠೆಯು ಗತ ಸಂಗತಿಯಾಗಿಬಿಡುತ್ತದೆ” ಎಂದು ಲೀಬೇರಾಸ್ಯೋನ್‌ ಎಂಬ ಫ್ರೆಂಚ್‌ ಪತ್ರಿಕೆ ಹೇಳಿತು. “ಆದರೆ ನೀವು ಕೆಲಸಮಾಡಲೇಬೇಕು ಎಂಬುದಂತೂ ಖಂಡಿತ, ಕಂಪನಿಗಾಗಿ ಅಲ್ಲ ಬದಲಾಗಿ ನಿಮ್ಮ ವೈಯಕ್ತಿಕ ಹಿತಕ್ಷೇಮಕ್ಕಾಗಿ ಮಾತ್ರ.”

ಇಂಥ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿರುವುದಾದರೂ ಕೆಲಸಕ್ಕಾಗಿರುವ ಮೂಲಭೂತ ಮಾನವ ಆವಶ್ಯಕತೆಯು ಮಾತ್ರ ಇನ್ನೂ ಮುಂದುವರಿಯುತ್ತಿದೆ. ಹಾಗಾದರೆ, ತೀವ್ರಗತಿಯಲ್ಲಿ ಬದಲಾಗುತ್ತಿರುವ ನಮ್ಮ ಸಮಯಗಳಲ್ಲಿ, ಒಬ್ಬನು ಐಹಿಕ ಕೆಲಸದ ಕುರಿತು ಒಂದು ಸಮತೂಕ ನೋಟವನ್ನು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ ಮತ್ತು ಅದೇ ಸಮಯದಲ್ಲಿ ಸುರಕ್ಷೆಯ ಪ್ರಜ್ಞೆಯೊಂದಿಗೆ ಉದ್ಯೋಗ ಸಂತೃಪ್ತಿಯನ್ನು ಕಾಪಾಡಿಕೊಳ್ಳಸಾಧ್ಯವಿದೆ?

[ಪುಟ 3ರಲ್ಲಿರುವ ಚಿತ್ರ]

ಆಧುನಿಕ ತಾಂತ್ರಿಕತೆಯು ಕೆಲಸದ ಸ್ಥಳದಲ್ಲಿ ಇನ್ನೂ ಅನೇಕ ಒತ್ತಡಗಳನ್ನು ಕೂಡಿಸಿರಬಹುದು