ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಡುಸಂಕಟವೆಂಬ ಧಗಧಗಿಸುವ ಆವಿಗೆಯಲ್ಲಿ ಶೋಧಿಸಲ್ಪಟ್ಟೆ

ಕಡುಸಂಕಟವೆಂಬ ಧಗಧಗಿಸುವ ಆವಿಗೆಯಲ್ಲಿ ಶೋಧಿಸಲ್ಪಟ್ಟೆ

ಜೀವನ ಕಥೆ

ಕಡುಸಂಕಟವೆಂಬ ಧಗಧಗಿಸುವ ಆವಿಗೆಯಲ್ಲಿ ಶೋಧಿಸಲ್ಪಟ್ಟೆ

ಪೆರಕ್ಲೀಸ್‌ ಯಾನೆರೀಸ್‌ ಅವರು ಹೇಳಿದಂತೆ

ಬೂಷ್ಟು ಹಿಡಿದಿರುವ ಸೆರೆಕೋಣೆಯ ತೇವಾಂಶದಿಂದ ಉಂಟಾದ ಚಳಿಯು ನನ್ನ ಮೂಳೆಗಳನ್ನು ತಣ್ಣಗಾಗಿಸಿತು. ಒಂದು ತೆಳುವಾದ ಕಂಬಳಿಯನ್ನು ಹೊದ್ದುಕೊಂಡು ನಾನೊಬ್ಬನೇ ಕುಳಿತುಕೊಂಡಿದ್ದಾಗ, ಎರಡು ದಿನಗಳ ಹಿಂದೆ ಪ್ರಜಾಸೈನಿಕರು ನನ್ನನ್ನು ನನ್ನ ಮನೆಯಿಂದಾಚೆ ಎಳೆದುಕೊಂಡು ಹೋಗಿ, ನನ್ನ ಯುವ ಪತ್ನಿ ಮತ್ತು ಅಸ್ವಸ್ಥರಾಗಿದ್ದ ನಮ್ಮ ಇಬ್ಬರು ಮಕ್ಕಳಿಂದ ನನ್ನನ್ನು ಬೇರ್ಪಡಿಸಿದಾಗ, ಅವಳ ಮುಖದ ಮೇಲಿದ್ದ ಭಾವನಾರಹಿತ ನೋಟವು ನನ್ನ ಕಣ್ಮುಂದೆ ಸುಳಿದಾಡುತ್ತಿದೆ. ನಂತರ, ನನ್ನ ಧಾರ್ಮಿಕ ನಂಬಿಕೆಗಳಿಗೆ ಸಹಮತಿಸದಿದ್ದ ನನ್ನ ಪತ್ನಿ ಒಂದು ಪಾರ್ಸೆಲ್‌ನೊಂದಿಗೆ ಈ ಚಿಕ್ಕ ಸಂದೇಶವನ್ನು ಕಳುಹಿಸಿದಳು: “ನಾನು ಈ ಕೇಕ್‌ಗಳನ್ನು ನಿಮಗೆ ಕಳುಹಿಸುತ್ತಿದ್ದೇನೆ, ಮತ್ತು ನೀವೂ ನಿಮ್ಮ ಮಕ್ಕಳಷ್ಟೇ ಅಸ್ವಸ್ಥರಾಗಬೇಕೆಂದು ಹಾರೈಸುತ್ತೇನೆ.” ನಾನು ಜೀವಂತನಾಗಿದ್ದು, ನನ್ನ ಕುಟುಂಬವನ್ನು ಪುನಃ ನೋಡುವೆನೋ?

ಇದು ನನ್ನ ಕ್ರೈಸ್ತ ನಂಬಿಕೆಯ ದೀರ್ಘ ಮತ್ತು ಕಷ್ಟಕರ ಹೋರಾಟದ ಕೇವಲ ಒಂದು ಘಟನೆಯಾಗಿತ್ತು. ಈ ಹೋರಾಟದಲ್ಲಿ ಕೌಟುಂಬಿಕ ವಿರೋಧ, ಸಾಮಾಜಿಕ ಬಹಿಷ್ಕಾರ, ಕಾನೂನು ಕದನಗಳು, ಮತ್ತು ಉಗ್ರ ಹಿಂಸೆಯು ಒಳಗೂಡಿತ್ತು. ಆದರೆ ನನ್ನಂತಹ ಒಬ್ಬ ಸಾಧುಸ್ವಭಾವದ ಮತ್ತು ದೇವಭಕ್ತ ವ್ಯಕ್ತಿಯು ಅಂತಹ ಘೋರ ಸ್ಥಳಕ್ಕೆ ತಲಪಿದ್ದು ಹೇಗೆ ಮತ್ತು ಏಕೆ? ದಯವಿಟ್ಟು ವಿವರಿಸಲು ಅನುಮತಿಸಿ.

ಭವ್ಯ ಕನಸುಳ್ಳ ಬಡ ಹುಡುಗ

ನಾನು 1909ರಲ್ಲಿ ಕ್ರೀಟ್‌ನ ಸ್ಟಾವ್ರೊಮೀನೋದಲ್ಲಿ ಹುಟ್ಟಿದಾಗ, ಇಡೀ ದೇಶವು ಯುದ್ಧ, ಬಡತನ ಮತ್ತು ಕ್ಷಾಮದ ಬಿಗಿಹಿಡಿತದಲ್ಲಿ ನರಳುತ್ತಿತ್ತು. ನಂತರ, ನಾನು ಮತ್ತು ನನ್ನ ನಾಲ್ಕು ಮಂದಿ ಒಡಹುಟ್ಟಿದವರು ಸ್ಪ್ಯಾನಿಷ್‌ ಫ್ಲೂವಿನ ಆಕ್ರಮಣವನ್ನು ಬಹಳ ಕಷ್ಟದಿಂದ ಪಾರಾದೆವು. ನಮಗೆ ಫ್ಲೂ ತಟ್ಟದಿರಲು ನಮ್ಮ ಹೆತ್ತವರು ಒಮ್ಮೊಮ್ಮೆ ಹಲವಾರು ವಾರಗಳ ವರೆಗೆ ನಮ್ಮನ್ನು ಮನೆಯಲ್ಲಿಯೇ ಕೂಡಿಹಾಕುತ್ತಿದ್ದದ್ದು ನನಗೆ ಇನ್ನೂ ಜ್ಞಾಪಕವಿದೆ.

ಒಬ್ಬ ಬಡ ರೈತರಾಗಿದ್ದ ತಂದೆಯವರು ತುಂಬ ಧಾರ್ಮಿಕ ವ್ಯಕ್ತಿಯಾಗಿದ್ದರೂ ಬಿಚ್ಚುಮನಸ್ಸಿನವರಾಗಿದ್ದರು. ಹಿಂದೆ ಅವರು ಫ್ರಾನ್ಸ್‌ ಮತ್ತು ಮಡಗಾಸ್ಕರ್‌ನಲ್ಲಿ ಜೀವಿಸಿದ್ದ ಕಾರಣ, ಧರ್ಮದ ಕುರಿತಾದ ಪ್ರಗತಿಪರ ವಿಚಾರಗಳಿಗೆ ಅವರು ಒಡ್ಡಲ್ಪಟ್ಟಿದ್ದರು. ಆದರೂ, ಪ್ರತಿ ಭಾನುವಾರ ಮಾಸ್‌ಗೆ ಹಾಜರಾಗುತ್ತಾ, ಸ್ಥಳಿಕ ಬಿಷಪರ ವಾರ್ಷಿಕ ಭೇಟಿಯ ಸಮಯದಲ್ಲಿ ಅವರು ನಮ್ಮ ಮನೆಯಲ್ಲಿ ಉಳಿಯುವಂತೆ ಆಮಂತ್ರಿಸುತ್ತಾ, ನಮ್ಮ ಕುಟುಂಬದ ಸದಸ್ಯರು ಗ್ರೀಕ್‌ ಆರ್ತಡಾಕ್ಸ್‌ ಚರ್ಚ್‌ಗೆ ನಿಷ್ಠರಾಗಿದ್ದರು. ನಾನು ಗಾಯಕ ವೃಂದದಲ್ಲಿ ಹಾಡುವ ಬಾಲಕರಲ್ಲಿ ಒಬ್ಬನಾಗಿದ್ದೆ, ಮತ್ತು ಒಬ್ಬ ಪಾದ್ರಿಯಾಗುವುದು ನನ್ನ ಜೀವನದ ಕನಸಾಗಿತ್ತು.

ಇಸವಿ 1929ರಲ್ಲಿ ನಾನು ಪೊಲೀಸ್‌ ದಳವನ್ನು ಸೇರಿದೆ. ತಂದೆ ತೀರಿಕೊಂಡಾಗ, ನಾನು ಉತ್ತರ ಗ್ರೀಸ್‌ನಲ್ಲಿರುವ ಥೆಸಲೊನೈಕದಲ್ಲಿ ಸೇವೆ ಸಲ್ಲಿಸುತ್ತಿದ್ದೆ. ನಾನು ಸಾಂತ್ವನ ಮತ್ತು ಆತ್ಮಿಕ ಜ್ಞಾನೋದಯವನ್ನು ಹುಡುಕುತ್ತಾ, ಆ್ಯಥೋಸ್‌ ಪರ್ವತದ ಪೊಲೀಸ್‌ ದಳಕ್ಕೆ ವರ್ಗಾವಣೆಯನ್ನು ಪಡೆದುಕೊಳ್ಳಲು ಶಕ್ತನಾದೆ. ಇದು ಆರ್ತಡಾಕ್ಸ್‌ ಕ್ರೈಸ್ತರಿಂದ “ಪರಿಶುದ್ಧಪರ್ವತ”ವೆಂದು ಪೂಜ್ಯವಾಗಿ ಪರಿಗಣಿಸಲ್ಪಡುತ್ತಿದ್ದ ಕ್ರೈಸ್ತ ಸಂನ್ಯಾಸಿಗಳ ಒಂದು ಸಮಾಜವಾಗಿತ್ತು. * ನಾನು ಅಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದೆ ಮತ್ತು ತುಂಬ ಹತ್ತಿರದಿಂದ ಸಂನ್ಯಾಸಿ ಜೀವನವನ್ನು ಗಮನಿಸಿದೆ. ದೇವರ ಇನ್ನೂ ಹತ್ತಿರಕ್ಕೆ ಎಳೆಯಲ್ಪಡುವ ಬದಲು, ಅಲ್ಲಿನ ಸಂನ್ಯಾಸಿಗಳ ಮುಚ್ಚುಮರೆಯಿಲ್ಲದ ಅನೈತಿಕತೆ ಮತ್ತು ಭ್ರಷ್ಟಾಚಾರದಿಂದಾಗಿ ನನ್ನಲ್ಲಿ ಅಸಹ್ಯಹುಟ್ಟಿತು. ನಾನು ಗೌರವಿಸುತ್ತಿದ್ದ ಚರ್ಚಿನ ಮುಖ್ಯಸ್ಥನೊಬ್ಬನು ನನ್ನ ಬಳಿ ಅನೈತಿಕ ಪ್ರಸ್ತಾವಗಳನ್ನು ಮಾಡಿದಾಗ ನನ್ನಲ್ಲಿ ಅತಿಯಾದ ಹೇವರಿಕೆಯುಂಟಾಯಿತು. ಇಷ್ಟು ಭ್ರಮನಿರಸನವಾದರೂ, ನಾನು ಆಗಲೂ ದೇವರನ್ನು ಸೇವಿಸಲು ಮತ್ತು ಒಬ್ಬ ಪಾದ್ರಿಯಾಗಲು ಬಯಸಿದೆ. ನಾನೊಂದು ಪಾದ್ರಿಯ ನಿಲುವಂಗಿಯನ್ನು ಧರಿಸಿಕೊಂಡು ಜ್ಞಾಪಕಾರ್ಥವಾಗಿ ಒಂದು ಫೋಟೋ ಸಹ ತೆಗಿಸಿಕೊಂಡೆ. ಸಮಯಾನಂತರ, ನಾನು ಕ್ರೀಟ್‌ಗೆ ಹಿಂದಿರುಗಿದೆ.

“ಅವನೊಬ್ಬ ಪಿಶಾಚಿ!”

ಇಸವಿ 1942ರಲ್ಲಿ, ಒಂದು ಗೌರವಾನ್ವಿತ ಕುಟುಂಬದವಳಾಗಿದ್ದ ಫ್ರೋಸೀನೀ ಎಂಬ ಸುಂದರಿಯನ್ನು ನಾನು ಮದುವೆಯಾದೆ. ನನ್ನ ಪತ್ನಿಯ ಕುಟುಂಬದವರು ತುಂಬ ಧಾರ್ಮಿಕರಾಗಿದ್ದುದರಿಂದ, ನಾನು ಒಬ್ಬ ಪಾದ್ರಿಯಾಗಬೇಕೆಂಬ ನನ್ನ ತೀರ್ಮಾನವನ್ನು ಮದುವೆಯು ಇನ್ನಷ್ಟು ದೃಢಪಡಿಸಿತು. * ನಾನು ಆ್ಯಥೆನ್ಸ್‌ಗೆ ಹೋಗಿ ಒಂದು ಸೆಮಿನೆರಿಯಲ್ಲಿ ಅಧ್ಯಯನ ಮಾಡಲು ದೃಢತೀರ್ಮಾನವನ್ನು ಮಾಡಿದ್ದೆ. 1943ರ ಅಂತ್ಯದಷ್ಟಕ್ಕೆ, ನಾನು ಪ್ರಯಾಣಕ್ಕಾಗಿ ಕ್ರೀಟ್‌ನ ಇರಾಕ್ಲೀಓದ ಬಂದರಿಗೆ ಹೋದರೂ ಆ್ಯಥೆನ್ಸ್‌ಗೆ ಹೋಗಲಿಲ್ಲ. ನಾನು ಅಷ್ಟರೊಳಗೆ ಆತ್ಮಿಕ ಚೈತನ್ಯದ ಬೇರೊಂದು ಮೂಲವನ್ನು ಕಂಡುಕೊಂಡಿದ್ದದ್ದು ಇದಕ್ಕೆ ಕಾರಣವಾಗಿರಬಹುದು. ಏನು ಸಂಭವಿಸಿತ್ತು?

ಕೆಲವು ವರ್ಷಗಳಿಂದ, ಯೆಹೋವನ ಸಾಕ್ಷಿಯಾಗಿದ್ದ ಎಮಾನ್ವೀಲ್‌ ಲೀಓನೂಡಾಕೀಸ್‌ ಎಂಬ ಒಬ್ಬ ಶ್ರದ್ಧಾಪೂರ್ವಕ ಯುವ ಪ್ರಚಾರಕನು ಕ್ರೀಟ್‌ ದೇಶದಾದ್ಯಂತ ಜ್ಞಾನೋದಯ ನೀಡುವಂಥ ಬೈಬಲ್‌ ಸತ್ಯಗಳನ್ನು ಬೋಧಿಸುತ್ತಿದ್ದನು. * ಕೆಲವರು, ಸಾಕ್ಷಿಗಳು ದೇವರ ವಾಕ್ಯದ ವಿಷಯದಲ್ಲಿ ಕೊಡುತ್ತಿದ್ದ ಸ್ಪಷ್ಟವಾದ ತಿಳಿವಳಿಕೆಯಿಂದ ಆಕರ್ಷಿಸಲ್ಪಟ್ಟು, ಸುಳ್ಳು ಧರ್ಮವನ್ನು ತೊರೆದಿದ್ದರು. ಹತ್ತಿರದ ಸಿಟೀಯ ನಗರದಲ್ಲಿ, ಹುರುಪುಳ್ಳ ಸಾಕ್ಷಿಗಳ ಒಂದು ಗುಂಪು ಸಂಘಟಿಸಲ್ಪಟ್ಟಿತ್ತು. ಇದು ಸ್ಥಳಿಕ ಬಿಷಪರನ್ನು ಸಿಟ್ಟುಗೊಳಿಸಿತು​—ಏಕೆಂದರೆ ಅಮೆರಿಕದಲ್ಲಿ ಸ್ವಲ್ಪ ಕಾಲ ಜೀವಿಸಿದ್ದ ಅವರು, ಯೆಹೋವನ ಸಾಕ್ಷಿಗಳು ಎಷ್ಟು ಪರಿಣಾಮಕಾರಿ ಪ್ರಚಾರಕರಾಗಿದ್ದಾರೆ ಎಂಬುದನ್ನು ಮೊದಲೇ ತಿಳಿದಿದ್ದರು. ಹೇಗಾದರೂ ಮಾಡಿ ಈ “ಪಾಷಂಡ ಮತ”ವನ್ನು ತಮ್ಮ ಆಧಿಪತ್ಯದ ಕ್ಷೇತ್ರದಿಂದ ತೊಲಗಿಸಿಬಿಡಲು ಅವರು ದೃಢಸಂಕಲ್ಪಮಾಡಿದ್ದರು. ಇವರ ಪ್ರಚೋದನೆಯ ಮೇರೆಗೆ, ಪೊಲೀಸರು ವಿಭಿನ್ನವಾದ ಸುಳ್ಳು ಆಪಾದನೆಗಳನ್ನು ಹೊರಿಸಿ, ಕ್ರಮವಾಗಿ ಸಾಕ್ಷಿಗಳನ್ನು ಸೆರೆಮನೆಗೆ ಮತ್ತು ನ್ಯಾಯಾಲಯಗಳ ಕಟಕಟೆಗೆ ಎಳೆದೊಯ್ಯುತ್ತಿದ್ದರು.

ಈ ಸಾಕ್ಷಿಗಳಲ್ಲಿ ಒಬ್ಬರು ನನಗೆ ಬೈಬಲ್‌ ಸತ್ಯಗಳನ್ನು ವಿವರಿಸಲು ಪ್ರಯತ್ನಿಸಿದರು, ಆದರೆ ನನಗೆ ಆಸಕ್ತಿಯಿಲ್ಲವೆಂದು ಅವರು ನೆನಸಿದರು. ಆದುದರಿಂದ ನನ್ನ ಬಳಿ ಮಾತಾಡುವಂತೆ ಒಬ್ಬ ಹೆಚ್ಚು ಅನುಭವೀ ಶುಶ್ರೂಷಕನನ್ನು ಅವರು ಕಳುಹಿಸಿದರು. ನನ್ನ ಒರಟಾದ ಪ್ರತಿಕ್ರಿಯೆಯು, ಆ ಸಾಕ್ಷಿಯು ಆ ಚಿಕ್ಕ ಗುಂಪಿಗೆ ಹಿಂದಿರುಗಿ ಹೀಗೆ ವರದಿಸುವಂತೆ ಮಾಡಿತು: “ಪೆರಕ್ಲೀಸ್‌ ಒಬ್ಬ ಸಾಕ್ಷಿಯಾಗುವುದು ಅಸಾಧ್ಯ. ಅವನೊಬ್ಬ ಪಿಶಾಚಿ!”

ವಿರೋಧದ ಪ್ರಥಮ ಅನುಭವ

ಆದರೆ ದೇವರು ನನ್ನನ್ನು ಹಾಗೆ ವೀಕ್ಷಿಸದೇ ಇದ್ದದಕ್ಕಾಗಿ ನಾನು ಸಂತೋಷಿತನಾಗಿದ್ದೇನೆ. ಯೆಹೋವನ ಸಾಕ್ಷಿಗಳು ಸತ್ಯವನ್ನು ಬೋಧಿಸುತ್ತಾರೆ ಎಂಬುದನ್ನು ಮನಗಂಡಿದ್ದ ನನ್ನ ತಮ್ಮನಾದ ಡಿಮಾಸ್‌ಥನೀಸ್‌, 1945ರ ಅಕ್ಟೋಬರ್‌ ತಿಂಗಳಿನಲ್ಲಿ ಗೋಳಾಡುವ ಎಲ್ಲರನ್ನೂ ಸಂತೈಸಿರಿ (ಇಂಗ್ಲಿಷ್‌) * ಎಂಬ ಪುಸ್ತಿಕೆಯನ್ನು ನನಗೆ ಕೊಟ್ಟನು. ಅದರಲ್ಲಿದ್ದ ವಿಷಯವು ನನ್ನನ್ನು ಪ್ರಭಾವಿಸಿತು. ನಾವು ತಕ್ಷಣವೇ ಆರ್ತಡಾಕ್ಸ್‌ ಚರ್ಚಿಗೆ ಹೋಗುವುದನ್ನು ನಿಲ್ಲಿಸಿದೆವು, ಸಿಟೀಯದಲ್ಲಿದ್ದ ಆ ಚಿಕ್ಕ ಗುಂಪಿಗೆ ಸೇರಿದೆವು, ಮತ್ತು ನಾವು ಹೊಸದಾಗಿ ಕಂಡುಕೊಂಡಿದ್ದ ನಂಬಿಕೆಯ ಕುರಿತು ನಮ್ಮ ಒಡಹುಟ್ಟಿದವರಿಗೆ ಸಾಕ್ಷಿಕೊಟ್ಟೆವು. ಅವರೆಲ್ಲರೂ ಬೈಬಲ್‌ ಸತ್ಯವನ್ನು ಸ್ವೀಕರಿಸಿದರು. ಸುಳ್ಳು ಧರ್ಮವನ್ನು ತೊರೆಯಬೇಕೆಂಬ ನನ್ನ ತೀರ್ಮಾನವು, ನಿರೀಕ್ಷಿಸಲಾದಂತೆಯೇ ನನ್ನ ಪತ್ನಿ ಮತ್ತು ಅವಳ ಕುಟುಂಬದಿಂದ ಬಹಿಷ್ಕಾರ ಮತ್ತು ದ್ವೇಷವನ್ನು ಬರಮಾಡಿತು. ಸ್ವಲ್ಪ ಕಾಲ ನನ್ನ ಮಾವನವರು ನನ್ನೊಟ್ಟಿಗೆ ಮಾತಾಡುವುದನ್ನೂ ನಿಲ್ಲಿಸಿಬಿಟ್ಟರು. ಮನೆಯಲ್ಲಿ ಭಿನ್ನಾಭಿಪ್ರಾಯಗಳು ಮತ್ತು ಸತತವಾದ ಒತ್ತಡವು ತಲೆದೋರಿತು. ಇದರ ಹೊರತೂ, 1945ರ ಮೇ 21ರಂದು ನನಗೆ ಮತ್ತು ಡಿಮಾಸ್‌ಥನೀಸ್‌ಗೆ ಸಹೋದರ ಮಿನೊಸ್‌ ಕೊಕಿನಕಿಸ್‌ ಅವರು ದೀಕ್ಷಾಸ್ನಾನ ಕೊಟ್ಟರು. *

ಕೊನೆಗೂ ನನ್ನ ಕನಸು ನನಸಾಯಿತು, ಮತ್ತು ನಾನು ದೇವರ ಒಬ್ಬ ಪ್ರಾಮಾಣಿಕ ಶುಶ್ರೂಷಕನಾಗಲು ಶಕ್ತನಾದೆ! ಮನೆಯಿಂದ ಮನೆಯ ಸೇವೆಯಲ್ಲಿ ನಾನು ಕಳೆದ ಮೊದಲ ದಿನವನ್ನು ನಾನು ಈಗಲೂ ಜ್ಞಾಪಿಸಿಕೊಳ್ಳಬಲ್ಲೆ. 35 ಪುಸ್ತಿಕೆಗಳನ್ನು ನನ್ನ ಬ್ಯಾಗ್‌ನಲ್ಲಿ ತುಂಬಿಸಿಕೊಂಡು, ನಾನೊಬ್ಬನೇ ಬಸ್ಸನ್ನು ಹತ್ತಿ ಒಂದು ಹಳ್ಳಿಗೆ ಹೋದೆ. ಸ್ವಲ್ಪ ನಾಚಿಕೆಯೊಂದಿಗೆ, ನಾನು ಮನೆಯಿಂದ ಮನೆಗೆ ಹೋಗಲು ಪ್ರಾರಂಭಿಸಿದೆ. ನಾನು ಎಷ್ಟು ದೂರ ಸಾರುತ್ತಾ ಹೋದೆನೋ, ನನ್ನ ಧೈರ್ಯವೂ ಅಷ್ಟೇ ಹೆಚ್ಚಿತು. ಕುಪಿತಗೊಂಡ ಒಬ್ಬ ಪಾದ್ರಿಯು ನನ್ನ ಬಳಿಗೆ ಬಂದಾಗ, ಅವನೊಟ್ಟಿಗೆ ಪೊಲೀಸ್‌ ಸ್ಟೇಷನ್‌ಗೆ ಹೋಗಬೇಕೆಂಬ ಅವನ ಸತತವಾದ ಒತ್ತಾಯವನ್ನು ಧೈರ್ಯದಿಂದ ನಿರಾಕರಿಸಲು ನಾನು ಶಕ್ತನಾಗಿದ್ದೆ. ಇಡೀ ಹಳ್ಳಿಯನ್ನು ಸಂದರ್ಶಿಸಿದ ಬಳಿಕವೇ ನಾನು ಹೊರಡುವೆ ಎಂದು ಹೇಳಿದೆ, ಮತ್ತು ಹಾಗೆಯೇ ಮಾಡಿದೆ. ನಾನು ಎಷ್ಟು ಸಂತೋಷಿತನಾದೆ ಎಂದರೆ, ನಾನು ಬಸ್ಸಿಗಾಗಿ ಕಾಯುವ ಬದಲು 15 ಕಿಲೊಮೀಟರ್‌ಗಳಷ್ಟು ದೂರ ನಡೆದು ಮನೆ ತಲಪಿದೆ.

ಕ್ರೂರ ಹಿಂಸಕರ ಕೈಯಲ್ಲಿ

ಇಸವಿ 1945ರ ಸೆಪ್ಟೆಂಬರ್‌ ತಿಂಗಳಿನಲ್ಲಿ, ಸಿಟೀಯದಲ್ಲಿ ಹೊಸದಾಗಿ ಸ್ಥಾಪಿಸಲ್ಪಟ್ಟ ನಮ್ಮ ಸಭೆಯಲ್ಲಿ ನನಗೆ ಹೆಚ್ಚಿನ ಜವಾಬ್ದಾರಿಗಳು ಕೊಡಲ್ಪಟ್ಟವು. ಶೀಘ್ರವೇ ಗ್ರೀಸ್‌ನಲ್ಲಿ ಆಂತರಿಕ ಯುದ್ಧವು ಪ್ರಾರಂಭವಾಯಿತು. ಪಕ್ಷಾವಲಂಬಿ ಗುಂಪುಗಳು ಉಗ್ರ ದ್ವೇಷದೊಂದಿಗೆ ತಮ್ಮತಮ್ಮೊಳಗೆ ಜಗಳವಾಡಿದವು. ಆ ಸಂದರ್ಭದ ಲಾಭವನ್ನು ತೆಗೆದುಕೊಳ್ಳುತ್ತಾ, ತಮಗೆ ತೋಚಿದಂಥ ಯಾವುದೇ ವಿಧವನ್ನು ಉಪಯೋಗಿಸಿ ಸಾಕ್ಷಿಗಳನ್ನು ತೊಲಗಿಸಿಬಿಡುವಂತೆ ಅಲ್ಲಿನ ಬಿಷಪರು ಸ್ಥಳಿಕ ಗೆರಿಲ್ಲಾ ಗುಂಪೊಂದನ್ನು ಪ್ರೇರಿಸಿದರು. (ಯೋಹಾನ 16:2) ಈ ಗೆರಿಲ್ಲಾ ತಂಡವು ನಮ್ಮ ಗ್ರಾಮದತ್ತ ಬಸ್ಸಿನಲ್ಲಿ ಬರುತ್ತಿದ್ದಾಗ, ತಮ್ಮ “ದೇವದತ್ತ” ನೇಮಕವನ್ನು ಪೂರೈಸಲಿರುವ ಯೋಜನೆಗಳ ಕುರಿತು ಅವರು ಮಾತಾಡಿಕೊಳ್ಳುತ್ತಿರುವುದನ್ನು ಕೇಳಿಸಿಕೊಂಡ ಒಬ್ಬ ಸ್ನೇಹಪರ ಸ್ತ್ರೀ, ಇದರ ವಿಷಯದಲ್ಲಿ ನಮ್ಮನ್ನು ಎಚ್ಚರಿಸಿದಳು. ನಾವು ಅಡಗಿಕೊಂಡೆವು, ಮತ್ತು ನಮ್ಮ ಸಂಬಂಧಿಕನೊಬ್ಬನು ನಮ್ಮ ಪರವಾಗಿ ಕ್ರಿಯೆಗೈದನು. ಹೀಗೆ ನಮ್ಮ ಪ್ರಾಣಗಳು ಉಳಿಸಲ್ಪಟ್ಟವು.

ಇದು ಬರಲಿದ್ದ ಹೆಚ್ಚಿನ ಸಂಕಟದ ಕೇವಲ ಪ್ರಥಮ ಹೆಜ್ಜೆಯಾಗಿತ್ತು. ಹೊಡೆತಗಳು ಮತ್ತು ಬೆದರಿಕೆಗಳು ಸರ್ವಸಾಮಾನ್ಯವಾದವು. ನಮ್ಮ ಎದುರಾಳಿಗಳು, ನಾವು ಚರ್ಚಿಗೆ ಹಿಂದಿರುಗುವಂತೆ, ನಮ್ಮ ಮಕ್ಕಳಿಗೆ ಚರ್ಚಿನಲ್ಲಿ ದೀಕ್ಷಾಸ್ನಾನ ಕೊಡಿಸುವಂತೆ, ಮತ್ತು ಶಿಲುಬೆಯ ಸನ್ನೆಯನ್ನು ಮಾಡುವಂತೆ ನಮ್ಮನ್ನು ಒತ್ತಾಯಿಸಲು ಪ್ರಯತ್ನಿಸಿದರು. ಒಂದು ಸಂದರ್ಭದಲ್ಲಿ, ಅವರು ನನ್ನ ತಮ್ಮನನ್ನು ಅವನು ಸತ್ತುಹೋದನೆಂದು ಅವರಿಗನಿಸುವ ತನಕ ಹೊಡೆದರು. ನನ್ನ ಇಬ್ಬರು ತಂಗಿಯರ ಬಟ್ಟೆಗಳು ಹರಿಯಲ್ಪಟ್ಟು, ನಂತರ ಅವರು ಹೊಡೆಯಲ್ಪಡುವುದನ್ನು ನೋಡಿ ನನ್ನ ಮನಸ್ಸಿಗೆ ತುಂಬ ನೋವಾಯಿತು. ಆ ಸಮಯಾವಧಿಯಲ್ಲಿ, ಚರ್ಚು ಎಂಟು ಮಂದಿ ಯೆಹೋವನ ಸಾಕ್ಷಿಗಳ ಮಕ್ಕಳಿಗೆ ಒತ್ತಾಯದಿಂದ ದೀಕ್ಷಾಸ್ನಾನ ಮಾಡಿಸಿತು.

ಇಸವಿ 1949ರಲ್ಲಿ ನನ್ನ ತಾಯಿ ತೀರಿಕೊಂಡರು. ಶವಸಂಸ್ಕಾರದ ಪರವಾನಗಿಗಾಗಿ ನಾವು ಕಾನೂನುಬದ್ಧ ಆವಶ್ಯಕತೆಗಳಿಗನುಸಾರ ನಡೆದುಕೊಂಡಿಲ್ಲ ಎಂದು ನಮ್ಮನ್ನು ದೂಷಿಸುತ್ತಾ ಪಾದ್ರಿಯು ಪುನಃ ನಮ್ಮ ಹಿಂದೆ ಬಿದ್ದನು. ನಾನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾದೆ ಮತ್ತು ಬಿಡುಗಡೆಮಾಡಲ್ಪಟ್ಟೆ. ಇದು ಒಂದು ದೊಡ್ಡ ಸಾಕ್ಷಿಯನ್ನು ಕೊಟ್ಟಿತು, ಏಕೆಂದರೆ ಮೊಕದ್ದಮೆಯ ಪೀಠಿಕಾ ಹೇಳಿಕೆಗಳಲ್ಲಿ ಯೆಹೋವನ ನಾಮವು ಕೇಳಿಬಂತು. “ನಮಗೆ ಬುದ್ಧಿ ಕಲಿಸಲು” ನಮ್ಮ ವೈರಿಗಳ ಬಳಿಯಿದ್ದ ಒಂದೇ ವಿಧಾನವು ನಮ್ಮನ್ನು ದಸ್ತಗಿರಿ ಮಾಡಿ ಗಡೀಪಾರು ಮಾಡುವುದೇ ಆಗಿತ್ತು. 1949ರ ಏಪ್ರಿಲ್‌ನಲ್ಲಿ ಹಾಗೆಯೇ ಆಯಿತು.

ಧಗಧಗಿಸುವ ಆವಿಗೆಯೊಳಗೆ

ದಸ್ತಗಿರಿ ಮಾಡಲ್ಪಟ್ಟ ಮೂವರು ಸಹೋದರರಲ್ಲಿ ನಾನೂ ಒಬ್ಬನಾಗಿದ್ದೆ. ನಾನು ಸ್ಥಳಿಕ ಪೊಲೀಸ್‌ ಸ್ಟೇಷನ್‌ನಲ್ಲಿದ್ದಾಗ ನನ್ನ ಪತ್ನಿ ನನ್ನನ್ನು ನೋಡಲೂ ಬರಲಿಲ್ಲ. ನಮ್ಮ ಮೊದಲ ತಂಗುಸ್ಥಾನ, ಇರಾಕ್ಲೀಓದಲ್ಲಿರುವ ಒಂದು ಸೆರೆಮನೆಯಾಗಿತ್ತು. ಆರಂಭದಲ್ಲಿ ವಿವರಿಸಲ್ಪಟ್ಟಂತೆ ನಾನು ಒಬ್ಬೊಂಟಿಗನಾಗಿದ್ದೆ ಮತ್ತು ತುಂಬ ನಿರುತ್ಸಾಹಗೊಂಡಿದ್ದೆ. ನಾನು ಯೆಹೋವನ ಸಾಕ್ಷಿಯಾಗಿರದಿದ್ದ ಒಬ್ಬ ಯುವ ಪತ್ನಿ ಮತ್ತು ಎರಡು ಕೂಸುಗಳನ್ನು ಬಿಟ್ಟು ಬಂದಿದ್ದೆ. ಆದುದರಿಂದ ನಾನು ಸಹಾಯಕ್ಕಾಗಿ ಯೆಹೋವನ ಬಳಿ ಎಡೆಬಿಡದೆ ಪ್ರಾರ್ಥಿಸಿದೆ. ಇಬ್ರಿಯ 13:5ರಲ್ಲಿ ದಾಖಲಿಸಲ್ಪಟ್ಟಿರುವಂಥ ದೇವರ ಮಾತುಗಳು ನನ್ನ ಮನಸ್ಸಿಗೆ ಬಂದವು: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.” ಯೆಹೋವನಲ್ಲಿ ನನ್ನ ಪೂರ್ಣ ಭರವಸವನ್ನಿಡುವುದು ಎಷ್ಟು ವಿವೇಕಭರಿತವಾಗಿದೆ ಎಂಬುದನ್ನು ನಾನು ಗ್ರಹಿಸಿದೆ.​—ಜ್ಞಾನೋಕ್ತಿ 3:5.

ನಮ್ಮನ್ನು ಗ್ರೀಸ್‌ನ ಆ್ಯಟಿಕ ಬಂದರಿನಾಚೆ ಒಂದು ಬಂಜರು ದ್ವೀಪವಾದ ಮಾಕ್ರೊನಿಸೊಸ್‌ಗೆ ಗಡೀಪಾರು ಮಾಡಲಾಗುವುದೆಂದು ನಮಗೆ ತಿಳಿದುಬಂತು. ಆ ಹೆಸರನ್ನು ಕೇಳಿದರೆ ಸಾಕು, ಜನರು ನಡುಗುತ್ತಿದ್ದರು. ಏಕೆಂದರೆ ಅಲ್ಲಿನ ಸೆರೆ ಶಿಬಿರವು ಚಿತ್ರಹಿಂಸೆ ಮತ್ತು ಗುಲಾಮ ಚಾಕರಿಗಾಗಿ ಕುಖ್ಯಾತವಾಗಿತ್ತು. ಸೆರೆಮನೆಗೆ ಹೋಗುವ ದಾರಿಯಲ್ಲಿ, ನಮ್ಮ ಪ್ರಯಾಣವು ಪೈರೀಅಸ್‌ನಲ್ಲಿ ನಿಂತಿತು. ನಮ್ಮ ಕೈಗಳಲ್ಲಿ ಇನ್ನೂ ಬೇಡಿಗಳಿದ್ದವಾದರೂ, ನಮ್ಮ ಕೆಲವು ಜೊತೆ ವಿಶ್ವಾಸಿಗಳು ದೋಣಿಯೊಳಗೆ ಬಂದು ನಮ್ಮನ್ನು ತಬ್ಬಿಕೊಂಡಾಗ ನಾವು ಪ್ರೋತ್ಸಾಹಿಸಲ್ಪಟ್ಟೆವು.​—ಅ. ಕೃತ್ಯಗಳು 28:14, 15.

ಮಾಕ್ರೊನಿಸೊಸ್‌ನಲ್ಲಿ ಜೀವನವು ಒಂದು ದುಃಸ್ವಪ್ನವಾಗಿತ್ತು. ಬೆಳಗ್ಗಿನಿಂದ ಹಿಡಿದು ರಾತ್ರಿ ವರೆಗೆ ಸೈನಿಕರು ಸೆರೆವಾಸಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದರು. ಅನೇಕ ಸಾಕ್ಷ್ಯೇತರರು ತಮ್ಮ ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡರು, ಇತರರು ಸತ್ತುಹೋದರು, ಮತ್ತು ದೊಡ್ಡ ಸಂಖ್ಯೆಯಲ್ಲಿ ಜನರು ಶಾರೀರಿಕವಾಗಿ ಅಂಗವಿಕಲರಾದರು. ರಾತ್ರಿ ವೇಳೆಯಲ್ಲಿ, ಚಿತ್ರಹಿಂಸೆಗೊಳಗಾಗುತ್ತಿದ್ದವರ ಚೀತ್ಕಾರಗಳು ಮತ್ತು ನರಳಾಟಗಳು ನಮಗೆ ಕೇಳಿಬರುತ್ತಿದ್ದವು. ಅಲ್ಲಿನ ಶೀತಲ ರಾತ್ರಿಗಳಂದು ನನ್ನ ತೆಳುವಾದ ಕಂಬಳಿಯು ಸ್ವಲ್ಪ ಕಾವನ್ನು ಮಾತ್ರ ಕೊಡುತ್ತಿತ್ತು.

ಕ್ರಮೇಣ, ಯೆಹೋವನ ಸಾಕ್ಷಿಗಳು ಶಿಬಿರದಲ್ಲಿ ಪ್ರಖ್ಯಾತರಾದರು, ಏಕೆಂದರೆ ಪ್ರತಿ ದಿನ ಬೆಳಗ್ಗೆ ಹಾಜರಿ ಕೂಗುವಾಗ ಈ ಹೆಸರು ಕರೆಯಲ್ಪಡುತ್ತಿತ್ತು. ಆದುದರಿಂದ, ಸಾಕ್ಷಿಯನ್ನು ಕೊಡಲು ನಮಗೆ ಅನೇಕ ಸಂದರ್ಭಗಳಿದ್ದವು. ಯೆಹೋವನಿಗೆ ತನ್ನ ಜೀವನವನ್ನು ಸಮರ್ಪಿಸುವಷ್ಟರ ಮಟ್ಟಿಗೆ ಪ್ರಗತಿಯನ್ನು ಮಾಡಿದ್ದ ಒಬ್ಬ ರಾಜಕೀಯ ಸೆರೆವಾಸಿಗೆ ದೀಕ್ಷಾಸ್ನಾನ ಕೊಡುವ ಸುಯೋಗವೂ ನನಗೆ ಸಿಕ್ಕಿತು.

ನಾನು ಗಡೀಪಾರು ಮಾಡಲ್ಪಟ್ಟ ಸಮಯದಾದ್ಯಂತ ನನ್ನ ಪತ್ನಿಗೆ ಪತ್ರಗಳನ್ನು ಬರೆಯುತ್ತಾ ಇದ್ದೆ. ಆದರೆ ನನಗೆ ಅವಳಿಂದ ಒಂದೇ ಒಂದು ಪ್ರತ್ಯುತ್ತರವೂ ಸಿಗಲಿಲ್ಲ. ಆದರೂ, ಇದು ಕೇವಲ ಒಂದು ತಾತ್ಕಾಲಿಕ ಅಹಿತಕರ ಸನ್ನಿವೇಶವಾಗಿದೆ ಮತ್ತು ನಾವು ಪುನಃ ಒಮ್ಮೆ ಸಂತೋಷದಿಂದಿರುವೆವು ಎಂಬ ಸಾಂತ್ವನವನ್ನು ನೀಡುತ್ತಾ, ಕೋಮಲಭಾವನೆಯೊಂದಿಗೆ ಪತ್ರ ಬರೆಯುವುದರಿಂದ ಇದು ನನ್ನನ್ನು ತಡೆದುಹಿಡಿಯಲಿಲ್ಲ.

ತನ್ಮಧ್ಯೆ, ಹೆಚ್ಚಿನ ಸಹೋದರರ ಬರೋಣವು ನಮ್ಮ ಸಂಖ್ಯೆಯು ಹೆಚ್ಚುವಂತೆ ಮಾಡಿತು. ಆಫೀಸ್‌ನಲ್ಲಿ ಕೆಲಸಮಾಡುತ್ತಿದ್ದ ಕಾರಣ, ಶಿಬಿರದ ದಳಪತಿಯವರ ಪರಿಚಯ ಬೆಳೆಸಿಕೊಳ್ಳಲು ನನಗೆ ಸಾಧ್ಯವಾಯಿತು. ಅವರು ಸಾಕ್ಷಿಗಳನ್ನು ಗೌರವಿಸುತ್ತಿದ್ದುದರಿಂದ, ಆ್ಯಥೆನ್ಸ್‌ನ ನಮ್ಮ ಆಫೀಸ್‌ನಿಂದ ನಾವು ಕೆಲವು ಬೈಬಲ್‌ ಸಾಹಿತ್ಯವನ್ನು ಪಡೆದುಕೊಳ್ಳಬಹುದೋ ಎಂದು ಅವರನ್ನು ಕೇಳಲು ನಾನು ಧೈರ್ಯ ಮಾಡಿದೆ. “ಅದು ಸಾಧ್ಯವೇ ಇಲ್ಲ. ಆದರೆ, ಆ್ಯಥೆನ್ಸ್‌ನಲ್ಲಿರುವ ನಿಮ್ಮ ಜನರು ಅದನ್ನು ನಿಮಗೆ ಕಳುಹಿಸುವ ಲಗೇಜ್‌ನಲ್ಲಿ ಪ್ಯಾಕ್‌ಮಾಡಿ, ಅದರ ಮೇಲೆ ನನ್ನ ಹೆಸರನ್ನು ಬರೆದು, ಅದನ್ನು ನನಗೇಕೆ ಕಳುಹಿಸಿಕೊಡಬಾರದು?” ಎಂದು ಅವರು ಹೇಳಿದರು. ನಾನು ಬೆಕ್ಕಸಬೆರಗಾದೆ! ಕೆಲವು ದಿನಗಳ ಬಳಿಕ, ಆಗಮಿಸಿದ್ದ ಒಂದು ದೋಣಿಯಿಂದ ಸರಕನ್ನು ನಾವು ಇಳಿಸುತ್ತಿದ್ದಾಗ, ಒಬ್ಬ ಪೊಲೀಸನು ದಳಪತಿಯ ಬಳಿ ಬಂದು ಸೆಲ್ಯೂಟ್‌ ಹೊಡೆದು, “ಸರ್‌, ನಿಮ್ಮ ಲಗೇಜ್‌ ಬಂದಿದೆ” ಎಂದು ಹೇಳಿದನು. ಅವರು “ಯಾವ ಲಗೇಜ್‌?” ಎಂದು ಪ್ರತ್ಯುತ್ತರಿಸಿದರು. ನಾನು ಆಗ ಹತ್ತಿರದಲ್ಲೇ ಇದ್ದೆ ಮತ್ತು ಆ ಸಂಭಾಷಣೆಯನ್ನು ಕೇಳಿಸಿಕೊಂಡಿದ್ದೆ. ನಾನು ಅವರಿಗೆ ಮೆಲ್ಲನೆ ಹೇಳಿದೆ: “ಅದು ಪ್ರಾಯಶಃ ನಮ್ಮದಾಗಿರಬೇಕು. ನೀವು ಅಪ್ಪಣೆ ಕೊಟ್ಟಂತೆ ಅದು ನಿಮ್ಮ ಹೆಸರಿನಲ್ಲಿ ಕಳುಹಿಸಲ್ಪಟ್ಟಿರಬೇಕು.” ನಾವು ಆತ್ಮಿಕವಾಗಿ ಪೋಷಿಸಲ್ಪಡುವುದನ್ನು ಖಚಿತಪಡಿಸಿಕೊಳ್ಳಲು ಯೆಹೋವನು ಒದಗಿಸಿದ ಒಂದು ವಿಧಾನವು ಅದಾಗಿತ್ತು.

ಒಂದು ಅನಿರೀಕ್ಷಿತ ಆಶೀರ್ವಾದ—ನಂತರ ಹೆಚ್ಚಿನ ಸಂಕಟ

ಇಸವಿ 1950ರ ಕೊನೆಗೆ ನನ್ನನ್ನು ಬಿಡುಗಡೆ ಮಾಡಲಾಯಿತು. ನಾನು ಅಸ್ವಸ್ಥನಾಗಿ, ಮುಖವೆಲ್ಲ ಬಿಳಿಚಿಕೊಂಡು, ತುಂಬ ಬಡಕಲಾಗಿ, ಮತ್ತು ಹಿಂದಿರುಗಿದಾಗ ಎಂಥ ಸ್ವಾಗತ ಸಿಗುವುದೋ ಎಂಬ ಅನಿಶ್ಚಿತತೆಯೊಂದಿಗೆ ಮನೆಗೆ ಹಿಂದೆರಳಿದೆ. ನನ್ನ ಪತ್ನಿ ಮತ್ತು ಮಕ್ಕಳನ್ನು ಪುನಃ ನೋಡಿ ನಾನು ಅದೆಷ್ಟು ಸಂತೋಷಿಸಿದೆ! ಇನ್ನೂ ಹೆಚ್ಚಾಗಿ, ಫ್ರೋಸೀನೀಯ ಹಗೆತನವು ಕಡಿಮೆಗೊಂಡಿರುವುದನ್ನು ನೋಡುವುದು ನನ್ನನ್ನು ಆಶ್ಚರ್ಯಗೊಳಿಸಿತು. ಸೆರೆಮನೆಯಿಂದ ನಾನು ಬರೆದ ಪತ್ರಗಳು ಪರಿಣಾಮಕಾರಿಯಾಗಿದ್ದವು. ನನ್ನ ತಾಳ್ಮೆ ಮತ್ತು ಪಟ್ಟುಹಿಡಿಯುವಿಕೆಯಿಂದ ಫ್ರೋಸೀನೀ ಪ್ರಭಾವಿತಳಾಗಿದ್ದಳು. ಸ್ವಲ್ಪ ಸಮಯದ ನಂತರ, ನಾನು ಒಂದು ದೀರ್ಘವಾದ, ಸಮಾಧಾನಪಡಿಸುವ ಸಂಭಾಷಣೆಯನ್ನು ಅವಳೊಂದಿಗೆ ಮಾಡಿದೆ. ಅವಳು ಒಂದು ಬೈಬಲ್‌ ಅಧ್ಯಯನವನ್ನು ಸ್ವೀಕರಿಸಿದಳು ಮತ್ತು ಯೆಹೋವನಲ್ಲಿ ಹಾಗೂ ಆತನ ವಾಗ್ದಾನಗಳಲ್ಲಿ ನಂಬಿಕೆಯನ್ನು ಬೆಳೆಸಿಕೊಂಡಳು. ನನ್ನ ಜೀವಿತದ ಅತ್ಯಾನಂದಕರ ದಿನಗಳಲ್ಲಿ ಒಂದು, 1952ರಲ್ಲಿ ಆಗಮಿಸಿತು​—ಅಂದು ನಾನು ಅವಳಿಗೆ ಯೆಹೋವನ ಒಬ್ಬ ಸಮರ್ಪಿತ ಸೇವಕಿಯಾಗಿ ದೀಕ್ಷಾಸ್ನಾನ ಮಾಡಿಸಿದೆ!

ಇಸವಿ 1955ರಲ್ಲಿ, ಪ್ರತಿಯೊಬ್ಬ ಪಾದ್ರಿಗೆ ಕ್ರೈಸ್ತಪ್ರಪಂಚವೋ ಕ್ರೈಸ್ತತ್ವವೋ​—ಯಾವುದು “ಲೋಕದ ಬೆಳಕು” ಆಗಿದೆ? (ಇಂಗ್ಲಿಷ್‌) ಎಂಬ ಪುಸ್ತಿಕೆಯನ್ನು ವಿತರಿಸುವ ಕಾರ್ಯಾಚರಣೆಯನ್ನು ಆರಂಭಿಸಿದೆವು. ನನ್ನನ್ನು ದಸ್ತಗಿರಿ ಮಾಡಲಾಯಿತು ಮತ್ತು ಅನೇಕ ಜೊತೆ ಸಾಕ್ಷಿಗಳೊಂದಿಗೆ ವಿಚಾರಣೆಗೆ ತರಲಾಯಿತು. ಯೆಹೋವನ ಸಾಕ್ಷಿಗಳ ವಿರುದ್ಧ ಎಷ್ಟೊಂದು ಮೊಕದ್ದಮೆಗಳು ಇದ್ದವೆಂದರೆ, ಅವುಗಳನ್ನು ಕೇಳಿಸಿಕೊಳ್ಳಲಿಕ್ಕಾಗಿಯೇ ನ್ಯಾಯಾಲಯವು ಒಂದು ವಿಶೇಷ ಸೆಷನ್‌ ಅನ್ನು ಏರ್ಪಡಿಸಬೇಕಾಗಿತ್ತು. ಆ ದಿನ, ಪ್ರಾಂತದ ಇಡೀ ಕೂನೂನು ಸಂಘಟನೆಯೇ ಹಾಜರಿತ್ತು ಮತ್ತು ನ್ಯಾಯಾಲಯವು ಪಾದ್ರಿಗಳಿಂದ ಕಿಕ್ಕಿರಿದಿತ್ತು. ಒಬ್ಬ ಬಿಷಪರು ಹಜಾರಗಳಲ್ಲಿ ಅತ್ತಿಂದಿತ್ತ ತಿರುಗುತ್ತಿದ್ದರು. ಪಾದ್ರಿಗಳಲ್ಲೊಬ್ಬನು ನನ್ನ ವಿರುದ್ಧ ಮತಾಂತರಿಸುವಿಕೆಯ ದೂರನ್ನು ದಾಖಲಿಸಿದ್ದನು. ನ್ಯಾಯಾಧೀಶರು ಅವನಿಗೆ ಹೀಗೆ ಕೇಳಿದರು: “ಒಂದು ಬ್ರೋಷರನ್ನು ಓದಿದ ಮಾತ್ರಕ್ಕೆ ಒಬ್ಬನು ಮತಾಂತರಗೊಳ್ಳುವಷ್ಟು ದುರ್ಬಲವಾದ ಧರ್ಮ ನಿನ್ನದೋ?” ಆ ಪಾದ್ರಿಯ ಬಾಯಿಂದ ಮಾತೇ ಹೊರಡಲಿಲ್ಲ. ನನ್ನನ್ನು ಬಿಡುಗಡೆ ಮಾಡಲಾಯಿತು, ಆದರೆ ಕೆಲವು ಸಹೋದರರಿಗೆ ಆರು ತಿಂಗಳುಗಳ ಸೆರೆವಾಸವನ್ನು ವಿಧಿಸಲಾಯಿತು.

ಮುಂದಿನ ವರ್ಷಗಳಲ್ಲಿ, ನಮ್ಮನ್ನು ಹಲವು ಬಾರಿ ದಸ್ತಗಿರಿ ಮಾಡಲಾಯಿತು, ಮತ್ತು ನ್ಯಾಯಾಲಯದಲ್ಲಿ ನಮ್ಮ ಮೊಕದ್ದಮೆಗಳು ಹೆಚ್ಚಾಗುತ್ತಾ ಹೋದವು. ವಿಚಾರಣೆಗಳನ್ನು ನಿರ್ವಹಿಸಿಕೊಂಡು ಹೋಗುವುದು ನಮ್ಮ ವಕೀಲರನ್ನು ಯಾವಾಗಲೂ ಕಾರ್ಯಮಗ್ನರನ್ನಾಗಿರಿಸಿತು. ನನ್ನನ್ನು ಒಟ್ಟು 17 ಬಾರಿ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ವಿರೋಧವಿದ್ದರೂ, ನಾವು ನಮ್ಮ ಸಾರುವ ಚಟುವಟಿಕೆಯಲ್ಲಿ ಕ್ರಮಬದ್ಧರಾಗಿದ್ದೆವು. ನಾವು ಈ ಪಂಥಾಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದೆವು, ಮತ್ತು ಆ ಧಗಧಗಿಸುವ ಪರೀಕ್ಷೆಗಳು ನಮ್ಮ ನಂಬಿಕೆಯನ್ನು ಪರಿಷ್ಕೃತಗೊಳಿಸಿದವು.​—ಯಾಕೋಬ 1:2, 3.

ಹೊಸ ಸುಯೋಗಗಳು ಮತ್ತು ಪಂಥಾಹ್ವಾನಗಳು

ಇಸವಿ 1957ರಲ್ಲಿ ನಾವು ಆ್ಯಥೆನ್ಸ್‌ಗೆ ಸ್ಥಳಾಂತರಿಸಿದೆವು. ಶೀಘ್ರವೇ ನಾನು ಹೊಸದಾಗಿ ಸ್ಥಾಪಿಸಲ್ಪಟ್ಟ ಒಂದು ಸಭೆಯಲ್ಲಿ ಸೇವೆ ಸಲ್ಲಿಸಲು ನೇಮಿಸಲ್ಪಟ್ಟೆ. ನನ್ನ ಪತ್ನಿಯ ಮನಃಪೂರ್ವಕ ಸಹಕಾರವು, ನಾವು ನಮ್ಮ ಜೀವಿತವನ್ನು ಸರಳವಾಗಿಟ್ಟುಕೊಳ್ಳಲು ಮತ್ತು ನಮ್ಮ ಆದ್ಯತೆಗಳನ್ನು ಆತ್ಮಿಕ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸಲು ಅವಕಾಶ ನೀಡಿತು. ಹೀಗೆ ನಾವು ಸಾರುವ ಕೆಲಸಕ್ಕೆ ನಮ್ಮ ಹೆಚ್ಚಿನ ಸಮಯವನ್ನು ಅರ್ಪಿಸಲು ಸಾಧ್ಯವಾಯಿತು. ವರ್ಷಗಳು ಕಳೆದಂತೆ, ಅಗತ್ಯವಿರುವ ಹಲವಾರು ಸಭೆಗಳಿಗೆ ಹೋಗುವಂತೆ ನಮ್ಮನ್ನು ಕೇಳಿಕೊಳ್ಳಲಾಯಿತು.

ಇಸವಿ 1963ರಲ್ಲಿ ನನ್ನ ಮಗನು 21 ವರ್ಷದವನಾದನು ಮತ್ತು ಅವನು ಒತ್ತಾಯದ ಮಿಲಿಟರಿ ಸೇವೆಗೆ ಸೇರಿಕೊಳ್ಳಬೇಕಿತ್ತು. ತಮ್ಮ ತಟಸ್ಥ ನಿಲುವಿನ ಕಾರಣ, ಒತ್ತಾಯದ ಮಿಲಿಟರಿ ಸೇವೆಗೆ ಒಳಗಾದ ಎಲ್ಲಾ ಸಾಕ್ಷಿಗಳು ಹೊಡೆತಗಳಿಗೆ, ಅವಹೇಳನಗಳಿಗೆ, ಮತ್ತು ಅಪಮಾನಗಳಿಗೆ ತುತ್ತಾದರು. ನನ್ನ ಮಗನ ಅನುಭವವೂ ಅದೇ ಆಗಿತ್ತು. ಅವನು ಹಿಂದಿನ ಸಮಗ್ರತಾ ಪಾಲಕರ ಮಾದರಿಯನ್ನು ಹಿಂಬಾಲಿಸುವಂತೆ ಅವನನ್ನು ಸಂಕೇತ ರೂಪದಲ್ಲಿ ಪ್ರೋತ್ಸಾಹಿಸಲಿಕ್ಕಾಗಿ, ನಾನು ಅವನಿಗೆ ಮಾಕ್ರೊನಿಸೊಸ್‌ನಿಂದ ತಂದಿದ್ದ ನನ್ನ ಕಂಬಳಿಯನ್ನು ಕೊಟ್ಟೆ. ಕರೆಯಲ್ಪಟ್ಟ ಸಹೋದರರು ಮಿಲಿಟರಿ ನ್ಯಾಯಾಲಯದ ಮುಂದೆ ವಿಚಾರಣೆಗೊಳಗಾದರು ಮತ್ತು ಸಾಮಾನ್ಯವಾಗಿ ಎರಡರಿಂದ ನಾಲ್ಕು ವರ್ಷಗಳ ಸೆರೆವಾಸದ ತೀರ್ಪನ್ನು ಪಡೆದುಕೊಂಡರು. ಬಿಡುಗಡೆ ಮಾಡಲ್ಪಟ್ಟಾಗ, ಅವರು ಪುನಃ ಕರೆಯಲ್ಪಟ್ಟು ಮತ್ತೊಮ್ಮೆ ಸೆರೆಮನೆಗೆ ಕಳುಹಿಸಲ್ಪಡುತ್ತಿದ್ದರು. ಒಬ್ಬ ಧಾರ್ಮಿಕ ಶುಶ್ರೂಷಕನೋಪಾದಿ ನಾನು ಹಲವಾರು ಸೆರೆಮನೆಗಳಿಗೆ ಭೇಟಿ ನೀಡಲು ಸಾಧ್ಯವಾಯಿತು, ಮತ್ತು ನನ್ನ ಮಗ ಹಾಗೂ ಇತರ ನಂಬಿಗಸ್ತ ಸಾಕ್ಷಿಗಳೊಂದಿಗೆ ಕೆಲವೊಮ್ಮೆ ಸಂಪರ್ಕ ಮಾಡುವ ಸಾಧ್ಯತೆಯಿತ್ತು. ನನ್ನ ಮಗನನ್ನು ಆರು ವರ್ಷಗಳಿಗಿಂತ ಹೆಚ್ಚು ಕಾಲ ಸೆರೆಯಲ್ಲಿಡಲಾಯಿತು.

ಯೆಹೋವನು ನಮ್ಮನ್ನು ಹೊತ್ತು ಸಂತೈಸಿದನು

ಗ್ರೀಸ್‌ನಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಪುನಃಸ್ಥಾಪಿಸಲ್ಪಟ್ಟ ಬಳಿಕ, ನಾನು ರ್ಹೋಡ್ಸ್‌ ದ್ವೀಪದಲ್ಲಿ ತಾತ್ಕಾಲಿಕವಾಗಿ ಒಬ್ಬ ಸ್ಪೆಷಲ್‌ ಪಯನೀಯರನೋಪಾದಿ ಸೇವೆ ಸಲ್ಲಿಸುವ ಸುಯೋಗ ನನಗೆ ಸಿಕ್ಕಿತು. ನಂತರ 1986ರಲ್ಲಿ, ನಾನು ಎಲ್ಲಿ ನನ್ನ ಕ್ರೈಸ್ತ ಜೀವನೋದ್ಯೋಗವನ್ನು ಆರಂಭಿಸಿದ್ದೇನೋ ಆ ಕ್ರೀಟ್‌ನ ಸಿಟೀಯದಲ್ಲಿ ಒಂದು ಅಗತ್ಯವು ಎದ್ದಿತು. ನಾನು ಈ ನೇಮಕವನ್ನು ಪಡೆದುಕೊಳ್ಳಲು ಪುಳಕಿತನಾದೆ; ಏಕೆಂದರೆ ನನ್ನ ಯೌವನದಿಂದ ನಾನು ಅರಿತಿದ್ದ ಪ್ರೀತಿಯ ಜೊತೆ ವಿಶ್ವಾಸಿಗಳೊಂದಿಗೆ ಪುನಃ ಸೇವೆ ಮಾಡುವುದನ್ನು ಈ ನೇಮಕವು ಸಾಧ್ಯಗೊಳಿಸಿತು.

ನನ್ನ ಕುಟುಂಬದ ಹಿರಿಯ ಪುರುಷನಾಗಿರುವ ನನಗೆ, ನನ್ನ ಸಂಬಂಧಿಕರಲ್ಲಿ 70 ಮಂದಿ ಯೆಹೋವನನ್ನು ನಿಷ್ಠೆಯಿಂದ ಸೇವಿಸುತ್ತಿರುವುದನ್ನು ನೋಡುವುದು ಸಂತೋಷವನ್ನು ತಂದಿದೆ. ಮತ್ತು ಈ ಸಂಖ್ಯೆಯು ಬೆಳೆಯುತ್ತಾ ಇದೆ. ಕೆಲವರು ಹಿರಿಯರಾಗಿ, ಶುಶ್ರೂಷಾ ಸೇವಕರಾಗಿ, ಪಯನೀಯರರಾಗಿ, ಬೆತೆಲಿಗರಾಗಿ, ಮತ್ತು ಸಂಚರಣ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು 58 ವರ್ಷಗಳಿಂದಲೂ ನನ್ನ ನಂಬಿಕೆಯು ಕಡುಸಂಕಟವೆಂಬ ಧಗಧಗಿಸುವ ಆವಿಗೆಯಲ್ಲಿ ಶೋಧಿಸಲ್ಪಟ್ಟಿತು. ಈಗ ನಾನು 93 ವರ್ಷ ಪ್ರಾಯದವನಾಗಿದ್ದೇನೆ, ಮತ್ತು ಗತಿಸಿಹೋದ ಕಾಲವನ್ನು ಹಿಂತಿರುಗಿ ನೋಡುವಾಗ, ದೇವರನ್ನು ಸೇವಿಸಿರುವುದರ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ಆತನು ನನಗೆ ಬಲವನ್ನು ಒದಗಿಸುತ್ತಾ ಈ ಪ್ರೀತಿಭರಿತ ಆಮಂತ್ರಣಕ್ಕೆ ಪ್ರತಿಕ್ರಿಯಿಸುವಂತೆ ಮಾಡಿದ್ದಾನೆ: “ಕಂದಾ, ನನ್ನ ಕಡೆಗೆ ಮನಸ್ಸುಕೊಡು, ನಿನ್ನ ಕಣ್ಣುಗಳು ನನ್ನ ಮಾರ್ಗಗಳಲ್ಲಿ ಆನಂದಿಸಲಿ.”​—ಜ್ಞಾನೋಕ್ತಿ 23:26.

[ಪಾದಟಿಪ್ಪಣಿಗಳು]

^ ಪ್ಯಾರ. 9 ಇಸವಿ 1999, ಡಿಸೆಂಬರ್‌ 1ರ ಕಾವಲಿನಬುರುಜುವಿನ 30-1ನೇ ಪುಟಗಳನ್ನು ನೋಡಿರಿ.

^ ಪ್ಯಾರ. 11 ಗ್ರೀಕ್‌ ಆರ್ತಡಾಕ್ಸ್‌ ಚರ್ಚ್‌ನ ಪಾದ್ರಿಗಳು ಮದುವೆಮಾಡಿಕೊಳ್ಳಲು ಅನುಮತಿಸಲ್ಪಡುತ್ತಾರೆ.

^ ಪ್ಯಾರ. 12 ಎಮಾನ್ವೀಲ್‌ ಲೀಓನೂಡಾಕೀಸ್‌ ಅವರ ಜೀವನ ಕಥೆಗಾಗಿ, 1999, ಸೆಪ್ಟೆಂಬರ್‌ 1ರ ಕಾವಲಿನಬುರುಜುವಿನ 25-9ನೆಯ ಪುಟಗಳನ್ನು ನೋಡಿರಿ.

^ ಪ್ಯಾರ. 15 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ, ಆದರೆ ಈಗ ಮುದ್ರಿಸಲ್ಪಡುತ್ತಿಲ್ಲ.

^ ಪ್ಯಾರ. 15 ಮಿನೊಸ್‌ ಕೊಕಿನಕಿಸ್‌ ಅವರನ್ನು ಒಳಗೊಂಡ ಒಂದು ಕೂನೂನುಬದ್ಧ ವಿಜಯದ ಕುರಿತು ಓದಲಿಕ್ಕಾಗಿ, 1993, ಸೆಪ್ಟೆಂಬರ್‌ 1ರ ಕಾವಲಿನಬುರುಜುವಿನ 27-31ನೇ ಪುಟಗಳನ್ನು ನೋಡಿರಿ.

[ಪುಟ 27ರಲ್ಲಿರುವ ಚೌಕ]

ಮಾಕ್ರೊನಿಸೊಸ್‌ ಭೀಕರವಾದ ದ್ವೀಪ

ಇಸವಿ 1947ರಿಂದ 1957ರ ವರೆಗೆ, ಅಂದರೆ ಹತ್ತು ವರ್ಷಗಳ ವರೆಗೆ ನಿರಾರ್ದ್ರವೂ ನಿರ್ಜನವೂ ಆಗಿದ್ದ ಮಾಕ್ರೊನಿಸೊಸ್‌ ದ್ವೀಪವು, 1,00,000 ಸೆರೆವಾಸಿಗಳ ಬೀಡಾಗಿತ್ತು. ಇವರ ನಡುವೆ, ತಮ್ಮ ಕ್ರೈಸ್ತ ತಾಟಸ್ಥ್ಯದಿಂದಾಗಿ ಅಲ್ಲಿಗೆ ಕಳುಹಿಸಲ್ಪಟ್ಟಿದ್ದ ಅನೇಕಾನೇಕ ನಂಬಿಗಸ್ತ ಸಾಕ್ಷಿಗಳೂ ಇದ್ದರು. ಇವರನ್ನು ಗಡೀಪಾರು ಮಾಡುವಂತೆ ಚಿತಾವಣೆ ನೀಡಿದವರು ಸಾಮಾನ್ಯವಾಗಿ ಗ್ರೀಕ್‌ ಆರ್ತಡಾಕ್ಸ್‌ ಪಾದ್ರಿ ವರ್ಗದವರಾಗಿದ್ದರು; ಇವರು ಸಾಕ್ಷಿಗಳ ಮೇಲೆ ಕಮ್ಯೂನಿಸ್ಟರೆಂಬ ಸುಳ್ಳು ಅಪವಾದವನ್ನು ಹೊರಿಸಿದರು.

ಮಾಕ್ರೊನಿಸೊಸ್‌ನಲ್ಲಿ “ಸುಧಾರಣೆ”ಗೆಂದು ಉಪಯೋಗಿಸಲ್ಪಟ್ಟ ಕಾರ್ಯವಿಧಾನದ ಕುರಿತು, ಗ್ರೀಕ್‌ ಎನ್‌ಸೈಕ್ಲಪೀಡೀಯ ಪಾಪೀರೋಸ್‌ ಲರೂಸ್‌ ಬ್ರಿಟ್ಯಾನಿಕ ಹೇಳುವುದು: “ಕ್ರೂರವಾದ ಚಿತ್ರಹಿಂಸೆಯ ಕ್ರಮಗಳು, . . . ಒಂದು ನಾಗರಿಕ ರಾಷ್ಟ್ರಕ್ಕೆ ಅಸ್ವೀಕರಣೀಯವಾಗಿದ್ದಂಥ ಜೀವಿಸುವ ಸ್ಥಿತಿಗತಿಗಳು, ಮತ್ತು ನಿವಾಸಿಗಳ ಕಡೆಗೆ ಕಾವಲುಗಾರರ ಕೀಳ್ಮಟ್ಟದ ವರ್ತನೆಯು . . . ಗ್ರೀಸಿನ ಇತಿಹಾಸಕ್ಕೆ ಒಂದು ಕಳಂಕವಾಗಿದೆ.”

ಕೆಲವು ಸಾಕ್ಷಿಗಳಿಗೆ, ಅವರು ತಮ್ಮ ನಂಬಿಕೆಗಳನ್ನು ತ್ಯಜಿಸದ ಹೊರತು ಎಂದಿಗೂ ಬಿಡುಗಡೆ ಮಾಡಲ್ಪಡುವುದಿಲ್ಲ ಎಂದು ಹೇಳಲಾಗಿತ್ತು. ಆದರೂ, ಸಾಕ್ಷಿಗಳ ಸಮಗ್ರತೆಯು ಅಚಲವಾಗಿತ್ತು. ಇದಲ್ಲದೆ, ಕೆಲವು ರಾಜಕೀಯ ಸೆರೆವಾಸಿಗಳು ಸಾಕ್ಷಿಗಳೊಂದಿಗಾದ ಸಂಪರ್ಕದಿಂದಾಗಿ ಬೈಬಲ್‌ ಸತ್ಯವನ್ನು ಸ್ವೀಕರಿಸಿದರು ಕೂಡ.

[ಪುಟ 27ರಲ್ಲಿರುವ ಚಿತ್ರ]

ದಂಡನೆಯ ಪಾಳೆಯವಾದ ಮಾಕ್ರೊನಿಸೊಸ್‌ ದ್ವೀಪದಲ್ಲಿ ನಾನು (ಎಡಗಡೆಯಿಂದ ನಾಲ್ಕನೆಯವನು) ಮತ್ತು ಮಿನೊಸ್‌ ಕೊಕಿನಕಿಸ್‌ (ಬಲಗಡೆಯಿಂದ ಮೂರನೆಯವರು)

[ಪುಟ 29ರಲ್ಲಿರುವ ಚಿತ್ರ]

ನಾನು ಯೌವನ ಪ್ರಾಯದಲ್ಲಿ ಸೇವೆಮಾಡಿದ್ದ ಕ್ರೀಟ್‌ನ ಸಿಟೀಯದಲ್ಲಿ ಒಬ್ಬ ಜೊತೆ ಸಾಕ್ಷಿಯೊಂದಿಗೆ ಸೇವೆ ಸಲ್ಲಿಸುತ್ತಿರುವುದು