ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನನ್ನ ವಾಕ್ಯದಲ್ಲಿ ನೆಲೆಗೊಂಡಿರಿ’

‘ನನ್ನ ವಾಕ್ಯದಲ್ಲಿ ನೆಲೆಗೊಂಡಿರಿ’

‘ನನ್ನ ವಾಕ್ಯದಲ್ಲಿ ನೆಲೆಗೊಂಡಿರಿ’

‘ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿರುವಿರಿ.’​—ಯೋಹಾನ 8:​31.

1. (ಎ) ಯೇಸು ಸ್ವರ್ಗಕ್ಕೆ ಹಿಂದಿರುಗಿ ಹೋದಾಗ ಭೂಮಿಯಲ್ಲಿ ಏನನ್ನು ಬಿಟ್ಟುಹೋದನು? (ಬಿ) ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?

ಕ್ರೈಸ್ತತ್ವದ ಸ್ಥಾಪಕನಾದ ಯೇಸು ಕ್ರಿಸ್ತನು ಸ್ವರ್ಗಕ್ಕೆ ಹಿಂದಿರುಗಿದಾಗ, ತಾನು ಬರೆದಿದ್ದ ಪುಸ್ತಕಗಳನ್ನೊ, ಕಟ್ಟಿದ ಸ್ಮಾರಕಗಳನ್ನೊ, ತಾನು ಶೇಖರಿಸಿದ್ದ ಸಂಪತ್ತನ್ನೊ ಬಿಟ್ಟು ಹೋಗಲಿಲ್ಲ. ಆದರೆ ಅವನು ಶಿಷ್ಯರನ್ನು ಹಾಗೂ ಶಿಷ್ಯರಾಗಲಿಕ್ಕಾಗಿ ಬೇಕಾಗುವ ನಿರ್ದಿಷ್ಟ ಆವಶ್ಯಕತೆಗಳನ್ನು ಬಿಟ್ಟುಹೋದದ್ದಂತೂ ಖಂಡಿತ. ವಾಸ್ತವವೇನಂದರೆ, ಯೋಹಾನನ ಸುವಾರ್ತೆಯಲ್ಲಿ, ತನ್ನ ಶಿಷ್ಯರಾಗುವವರು ಪೂರೈಸಲೇಬೇಕಾಗಿರುವ ಮೂರು ಪ್ರಮುಖ ಆವಶ್ಯಕತೆಗಳನ್ನು ಯೇಸು ಹೇಳಿದನೆಂದು ನಾವು ತಿಳಿಯುತ್ತೇವೆ. ಈ ಆವಶ್ಯಕತೆಗಳಾವುವು? ಅವುಗಳನ್ನು ಪೂರೈಸಲು ನಾವೇನು ಮಾಡಸಾಧ್ಯವಿದೆ? ಮತ್ತು ನಾವು ಇಂದು ವೈಯಕ್ತಿಕವಾಗಿ ಕ್ರಿಸ್ತನ ಶಿಷ್ಯರಾಗಲು ಅರ್ಹರಾಗುವುದನ್ನು ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು? *

2. ಯೋಹಾನನ ಸುವಾರ್ತೆಯಲ್ಲಿ ದಾಖಲೆಯಾಗಿರುವಂತೆ, ಶಿಷ್ಯತ್ವಕ್ಕಾಗಿರುವ ಒಂದು ಪ್ರಮುಖ ಆವಶ್ಯಕತೆ ಯಾವುದು?

2 ತನ್ನ ಮರಣಕ್ಕೆ ಸುಮಾರು ಆರು ತಿಂಗಳ ಮೊದಲು ಯೇಸು ಯೆರೂಸಲೇಮಿಗೆ ಹೋಗಿ, ಅಲ್ಲಿ ಒಂದು ವಾರದುದ್ದದ ಪರ್ಣಶಾಲೆಗಳ ಹಬ್ಬವನ್ನು ಆಚರಿಸಲಿಕ್ಕಾಗಿ ಕೂಡಿಬಂದಿದ್ದ ಜನರಿಗೆ ಸಾರಿದನು. ಇದರ ಪರಿಣಾಮವಾಗಿ, ಹಬ್ಬವು ಅರ್ಧ ಮುಗಿಯುವಷ್ಟರಲ್ಲಿ, “ಜನರಲ್ಲಿ ಅನೇಕರು ಆತನನ್ನು ನಂಬಿ”ದರು. ಯೇಸು ತನ್ನ ಸಾರುವಿಕೆಯನ್ನು ಮುಂದುವರಿಸುತ್ತಾ ಹೋದ ಕಾರಣ ಹಬ್ಬದ ಕೊನೆಯ ದಿನದಲ್ಲಿ, ಪುನಃ “ಅನೇಕರು ಆತನಲ್ಲಿ ನಂಬಿಕೆಯಿಟ್ಟರು.” (ಯೋಹಾನ 7:10, 14, 31, 37; 8:30) ಆ ಸಮಯದಲ್ಲಿ, ಯೇಸು ತನ್ನ ಗಮನವನ್ನು ಈ ಹೊಸ ವಿಶ್ವಾಸಿಗಳ ಕಡೆಗೆ ಹರಿಸಿ, ಶಿಷ್ಯತ್ವಕ್ಕಾಗಿರುವ ಒಂದು ಪ್ರಮುಖ ಆವಶ್ಯಕತೆಯನ್ನು ತಿಳಿಸಿದನು. ಇದನ್ನು ಅಪೊಸ್ತಲ ಯೋಹಾನನು ದಾಖಲೆ ಮಾಡಿದನು: ‘ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿರುವಿರಿ.’​—ಯೋಹಾನ 8:​31.

3. ಒಬ್ಬನು ‘[ಯೇಸುವಿನ] ವಾಕ್ಯದಲ್ಲಿ ನೆಲೆಗೊಳ್ಳಬೇಕಾದರೆ’ ಯಾವ ಗುಣ ಅಗತ್ಯ?

3 ಹಾಗೆ ಹೇಳಿದಾಗ, ಹೊಸ ವಿಶ್ವಾಸಿಗಳಿಗೆ ನಂಬಿಕೆಯ ಕೊರತೆಯಿತ್ತೆಂದು ಯೇಸು ಸೂಚಿಸಲಿಲ್ಲ. ಬದಲಿಗೆ, ಅವರು ಅವನ ವಾಕ್ಯದಲ್ಲಿ ನೆಲೆಗೊಳ್ಳುವಲ್ಲಿ, ಅವರು ತಾಳ್ಮೆಯನ್ನು ತೋರಿಸುವಲ್ಲಿ ತನ್ನ ನಿಜ ಶಿಷ್ಯರಾಗುವ ಸದವಕಾಶ ಅವರಿಗಿತ್ತು ಎಂದು ಅವನು ತೋರಿಸಿದನು. ಅವರು ಅವನ ಮಾತನ್ನು ಅಂಗೀಕರಿಸಿದ್ದರು ಮತ್ತು ಈಗ ಅವರಿಗೆ ಅದರಲ್ಲಿ ಮುಂದುವರಿಯುವ ಆವಶ್ಯಕತೆಯಿತ್ತು. (ಯೋಹಾನ 4:34; ಇಬ್ರಿಯ 3:14) ತನ್ನ ಹಿಂಬಾಲಕರಿಗೆ ತಾಳ್ಮೆಯು ಎಷ್ಟು ಪ್ರಾಮುಖ್ಯವಾಗಿದೆ ಎಂದು ಅವನು ಪರಿಗಣಿಸಿದನೆಂದರೆ, ತನ್ನ ಅಪೊಸ್ತಲರೊಂದಿಗಿನ ಅವನ ಕಡೆಯ ಸಂಭಾಷಣೆಯಲ್ಲಿ ಯೇಸು ಎರಡಾವರ್ತಿ, “ನನ್ನನ್ನು ಹಿಂಬಾಲಿಸು [“ಹಿಂಬಾಲಿಸುತ್ತಾ ಇರು,” NW]” ಎಂದು ಅವರಲ್ಲೊಬ್ಬನನ್ನು ಪ್ರೋತ್ಸಾಹಿಸಿದನು. (ಯೋಹಾನ 21:​19, 22) ಮತ್ತು ಅನೇಕ ಮಂದಿ ಆದಿಕ್ರೈಸ್ತರು ಹಾಗೆಯೇ ಮಾಡಿದರು. (2 ಯೋಹಾನ 4) ಅವರು ತಾಳಿಕೊಳ್ಳುವಂತೆ ಯಾವುದು ಸಹಾಯಮಾಡಿತು?

4. ಆದಿಕ್ರೈಸ್ತರು ತಾಳಿಕೊಳ್ಳುವಂತೆ ಅವರನ್ನು ಶಕ್ತಗೊಳಿಸಿದ್ದು ಯಾವುದು?

4 ಸುಮಾರು ಏಳು ದಶಕಗಳ ವರೆಗೆ ಕ್ರಿಸ್ತನ ನಂಬಿಗಸ್ತ ಶಿಷ್ಯನಾಗಿದ್ದ ಅಪೊಸ್ತಲ ಯೋಹಾನನು ಒಂದು ಪ್ರಮುಖಾಂಶವನ್ನು ಎತ್ತಿ ತೋರಿಸಿದನು. ಅವನು ನಂಬಿಗಸ್ತ ಕ್ರೈಸ್ತರನ್ನು ಪ್ರಶಂಸಿಸುತ್ತಾ ಹೇಳಿದ್ದು: “ನೀವು ಶಕ್ತರಾಗಿರುವದರಿಂದಲೂ ದೇವರ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿರುವದರಿಂದಲೂ ನೀವು ಕೆಡುಕನನ್ನು ಜಯಿಸಿ”ರುತ್ತೀರಿ. ಕ್ರಿಸ್ತನ ಆ ಶಿಷ್ಯರು ತಾಳಿಕೊಂಡರು ಇಲ್ಲವೆ ದೇವರ ವಾಕ್ಯದಲ್ಲಿ ನೆಲೆಗೊಂಡರು, ಏಕೆಂದರೆ ದೇವರ ವಾಕ್ಯವು ಅವರಲ್ಲಿ ನೆಲೆಗೊಂಡಿತ್ತು. ಅವರಿಗೆ ಅದರ ಕುರಿತು ಹೃತ್ಪೂರ್ವಕವಾದ ಗಣ್ಯತೆಯಿತ್ತು. (1 ಯೋಹಾನ 2:14, 24) ಅದರಂತೆಯೇ ಇಂದು, ‘ಕಡೇ ವರೆಗೂ ತಾಳಿಕೊಳ್ಳಲು’ ದೇವರ ವಾಕ್ಯವು ನಮ್ಮಲ್ಲಿ ನೆಲೆಗೊಂಡಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. (ಮತ್ತಾಯ 24:13) ನಾವು ಅದನ್ನು ಹೇಗೆ ಮಾಡಬಲ್ಲೆವು? ಯೇಸು ಕೊಟ್ಟ ಒಂದು ಸಾಮ್ಯವು ಅದಕ್ಕೆ ಉತ್ತರವನ್ನು ಒದಗಿಸುತ್ತದೆ.

‘ವಾಕ್ಯವನ್ನು ಕೇಳುವುದು’

5. (ಎ) ಯೇಸುವಿನ ಸಾಮ್ಯಗಳಲ್ಲೊಂದರಲ್ಲಿ ವಿಭಿನ್ನ ರೀತಿಯ ಯಾವ ನೆಲಗಳು ತಿಳಿಸಲ್ಪಟ್ಟಿವೆ? (ಬಿ) ಯೇಸುವಿನ ಸಾಮ್ಯದಲ್ಲಿ ಬೀಜವೂ ನೆಲವೂ ಯಾವುದನ್ನು ಪ್ರತಿನಿಧಿಸುತ್ತದೆ?

5 ಯೇಸು ಬೀಜ ಬಿತ್ತುವವನ ಒಂದು ಸಾಮ್ಯವನ್ನು ಕೊಟ್ಟನು. ಅದು ಮತ್ತಾಯ, ಮಾರ್ಕ ಮತ್ತು ಲೂಕರ ಸುವಾರ್ತೆಗಳಲ್ಲಿ ದಾಖಲಿಸಲ್ಪಟ್ಟಿದೆ. (ಮತ್ತಾಯ 13:1-9, 18-23; ಮಾರ್ಕ 4:1-9, 14-20; ಲೂಕ 8:4-8, 11-15) ನೀವು ಆ ವೃತ್ತಾಂತಗಳನ್ನು ಓದುವಾಗ, ಒಂದೇ ವಿಧದ ಬೀಜವು ವಿವಿಧ ರೀತಿಯ ನೆಲದಲ್ಲಿ ಬಿದ್ದು, ವಿವಿಧ ಫಲಗಳನ್ನು ಕೊಡುತ್ತದೆಂಬದೇ ಆ ಸಾಮ್ಯದ ಪ್ರಧಾನ ಅಂಶವಾಗಿದೆ ಎಂಬುದನ್ನು ಗಮನಿಸುವಿರಿ. ಮೊದಲನೆಯ ರೀತಿಯ ನೆಲವು ಗಟ್ಟಿಯಾದದ್ದು, ಎರಡನೆಯದ್ದು ತೆಳ್ಳಗಿತ್ತು, ಮತ್ತು ಮೂರನೆಯದ್ದು ಮುಳ್ಳುಗಿಡಗಳಿಂದ ತುಂಬಿದಂಥದ್ದಾಗಿತ್ತು. ಆದರೆ ಈ ಮೇಲಿನವುಗಳಿಗೆ ಅಸದೃಶವಾಗಿ ನಾಲ್ಕನೆಯ ರೀತಿಯ ನೆಲವು “ಒಳ್ಳೆಯ” ನೆಲವಾಗಿದೆ. ಯೇಸು ತಾನೇ ವಿವರಿಸಿದಂತೆ, ಆ ಬೀಜವು ದೇವರ ವಾಕ್ಯದಲ್ಲಿ ಕಂಡುಬರುವ ರಾಜ್ಯದ ಸಂದೇಶವಾಗಿದೆ, ಮತ್ತು ಮಣ್ಣು ಜನರ ವಿಭಿನ್ನ ಹೃದಯ ಪರಿಸ್ಥಿತಿಗಳನ್ನು ಪ್ರತಿನಿಧಿಸುತ್ತದೆ. ವಿವಿಧ ರೀತಿಯ ನೆಲದಿಂದ ಚಿತ್ರಿಸಲ್ಪಟ್ಟಿರುವ ಜನರಲ್ಲಿ ಕೆಲವೊಂದು ಹೋಲಿಕೆಗಳು ಇವೆಯಾದರೂ, ಒಳ್ಳೆಯ ನೆಲದಿಂದ ಚಿತ್ರಿಸಲ್ಪಟ್ಟವರಲ್ಲಿ ಇತರರಿಂದ ಪ್ರತ್ಯೇಕಿಸುವ ಒಂದು ಗುಣವಿದೆ.

6. (ಎ) ಯೇಸುವಿನ ಸಾಮ್ಯದಲ್ಲಿ ನಾಲ್ಕನೆಯ ರೀತಿಯ ನೆಲವು ಬೇರೆ ಮೂರು ರೀತಿಯ ನೆಲಗಳಿಗಿಂತ ಭಿನ್ನವಾಗಿರುವುದು ಹೇಗೆ, ಮತ್ತು ಇದರರ್ಥವೇನು? (ಬಿ) ಕ್ರಿಸ್ತನ ಶಿಷ್ಯರೋಪಾದಿ ತಾಳ್ಮೆಯನ್ನು ತೋರಿಸಲು ಏನು ಅಗತ್ಯ?

6ಲೂಕ 8:​12-15ರಲ್ಲಿರುವ ವೃತ್ತಾಂತವು, ಆ ನಾಲ್ಕು ಸಂದರ್ಭಗಳಲ್ಲಿಯೂ ಜನರು ‘ವಾಕ್ಯವನ್ನು ಕೇಳುತ್ತಾರೆ’ ಎಂಬದನ್ನು ತೋರಿಸುತ್ತದೆ. ಆದರೆ “ಸುಗುಣವುಳ್ಳ ಒಳ್ಳೆಯ ಹೃದಯ” ಇರುವವರು ‘ವಾಕ್ಯವನ್ನು ಕೇಳುವುದಕ್ಕಿಂತ’ ಹೆಚ್ಚಿನದ್ದನ್ನು ಮಾಡುತ್ತಾರೆ. ಅವರು ಅದನ್ನು “ಹೃದಯದಲ್ಲಿ ಇಟ್ಟುಕೊಂಡು ತಾಳ್ಮೆಯಿಂದ ಫಲವನ್ನು ಕೊಡುತ್ತಾರೆ.” ಸುಗುಣವುಳ್ಳ ಆ ಒಳ್ಳೆಯ ನೆಲ, ಮೃದುವೂ ಆಳವೂ ಆಗಿರುವುದರಿಂದ, ಆ ಬೀಜದ ಬೇರುಗಳು ಭದ್ರವಾಗಿ ಬೇರೂರಿ, ಫಲಿತಾಂಶವಾಗಿ ಆ ಬೀಜ ಚಿಗುರಿ ಫಲ ಬಿಡುತ್ತದೆ. (ಲೂಕ 8:8) ತದ್ರೀತಿಯಲ್ಲಿ, ಉತ್ತಮ ಹೃದಯ ಇರುವವರು ದೇವರ ವಾಕ್ಯವನ್ನು ಅರ್ಥಮಾಡಿಕೊಂಡು, ಅದನ್ನು ಬೆಲೆಯುಳ್ಳದ್ದೆಂದು ಎಣಿಸಿ, ಮೈಗೂಡಿಸಿಕೊಳ್ಳುತ್ತಾರೆ. (ರೋಮಾಪುರ 10:10; 2 ತಿಮೊಥೆಯ 2:7) ದೇವರ ವಾಕ್ಯವು ಅವರೊಳಗೆ ನೆಲೆಗೊಂಡಿರುತ್ತದೆ. ಇದರ ಪರಿಣಾಮವಾಗಿ ಅವರು ತಾಳ್ಮೆಯಿಂದ ಫಲಬಿಡುತ್ತಾರೆ. ಹೀಗಿರುವುದರಿಂದ, ಕ್ರೈಸ್ತ ಶಿಷ್ಯರಾಗಿ ತಾಳ್ಮೆಯನ್ನು ತೋರಿಸಲು ದೇವರ ವಾಕ್ಯಕ್ಕೆ ಗಾಢವಾದ, ಹೃತ್ಪೂರ್ವಕ ಮಾನ್ಯತೆಯನ್ನು ನೀಡುವ ಅಗತ್ಯವಿದೆ. (1 ತಿಮೊಥೆಯ 4:15) ಆದರೆ ನಾವು ದೇವರ ವಾಕ್ಯಕ್ಕಾಗಿ ಅಂತಹ ಹೃತ್ಪೂರ್ವಕ ಮಾನ್ಯತೆಯನ್ನು ಹೇಗೆ ಬೆಳೆಸಿಕೊಳ್ಳಬಲ್ಲೆವು?

ಹೃದಯಾವಸ್ಥೆ ಮತ್ತು ಅರ್ಥಭರಿತ ಧ್ಯಾನ

7. ಉತ್ತಮ ಹೃದಯದೊಂದಿಗೆ ಯಾವ ಚಟುವಟಿಕೆಯು ನಿಕಟವಾಗಿ ಜೋಡಿಸಲ್ಪಟ್ಟಿದೆ?

7 ಸುಗುಣವುಳ್ಳ ಒಳ್ಳೆಯ ಹೃದಯವನ್ನು ಬೈಬಲು ಯಾವ ಚಟುವಟಿಕೆಯೊಂದಿಗೆ ಪದೇ ಪದೇ ಜೋಡಿಸುತ್ತದೆಂಬದನ್ನು ಗಮನಿಸಿರಿ. “ನೀತಿವಂತನ ಹೃದಯ ಉತ್ತರ ಕೊಡಲಿಕ್ಕಾಗಿ ಧ್ಯಾನಿಸುತ್ತದೆ.” (ಜ್ಞಾನೋಕ್ತಿ 15:​28, NW) “ಯೆಹೋವನೇ, ನನ್ನ ಶರಣನೇ, ನನ್ನ ವಿಮೋಚಕನೇ, ನನ್ನ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ.” (ಓರೆ ಅಕ್ಷರಗಳು ನಮ್ಮವು.) (ಕೀರ್ತನೆ 19:14) “ನನ್ನ ಹೃದಯವು [“ಹೃದಯದ ಧ್ಯಾನವು,” NW] ವಿವೇಕವನ್ನು ಫಲಿಸುವದು.”​—ಕೀರ್ತನೆ 49:3.

8. (ಎ) ಬೈಬಲನ್ನು ಓದುವಾಗ ನಾವೇನು ಮಾಡಬೇಕು ಮತ್ತು ಏನು ಮಾಡಬಾರದು? (ಬಿ) ದೇವರ ವಾಕ್ಯದ ಕುರಿತು ಪ್ರಾರ್ಥನಾಪೂರ್ವಕವಾಗಿ ಧ್ಯಾನ ಮಾಡುವುದರಿಂದ ನಮಗೆ ಯಾವ ಪ್ರಯೋಜನಗಳು ಸಿಗುತ್ತವೆ? (“‘ಸತ್ಯದಲ್ಲಿ ಸ್ಥಿರವಾಗಿ’ ಇರುವುದು” ಎಂಬ ಚೌಕವನ್ನು ಕೂಡಿಸಿರಿ.)

8 ಈ ಬೈಬಲ್‌ ಲೇಖಕರಂತೆ, ನಾವೂ ದೇವರ ವಾಕ್ಯದ ಕುರಿತು ಮತ್ತು ಆತನ ಕಾರ್ಯಗಳ ಕುರಿತು ಕೃತಜ್ಞತಾಪೂರ್ವಕವಾಗಿಯೂ ಪ್ರಾರ್ಥನಾಪೂರ್ವಕವಾಗಿಯೂ ಧ್ಯಾನಿಸುವುದು ಅಗತ್ಯ. ಬೈಬಲನ್ನು ಅಥವಾ ಬೈಬಲಾಧಾರಿತ ಸಾಹಿತ್ಯಗಳನ್ನು ಓದುವಾಗ, ಅವಸರದಿಂದ ಒಂದರಿಂದ ಇನ್ನೊಂದು ಸುಂದರ ಪ್ರಾಕೃತಿಕ ತಾಣಕ್ಕೆ ಓಡಿ, ಎಲ್ಲಾ ದೃಶ್ಯಗಳನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದರೂ ಆ ದೃಶ್ಯಗಳನ್ನು ನೋಡಿ ಆನಂದಿಸದ ಪ್ರವಾಸಿಗಳಂತೆ ನಾವು ವರ್ತಿಸಬಾರದು. ಬದಲಿಗೆ, ಬೈಬಲನ್ನು ಅಧ್ಯಯನ ಮಾಡುವಾಗ, ದೃಶ್ಯದ ಸೌಂದರ್ಯವನ್ನು ಆಸ್ವಾದಿಸಲಿಕ್ಕೊ ಎಂಬಂತೆ ನಾವು ಸಮಯವನ್ನು ತೆಗೆದುಕೊಳ್ಳಬೇಕು. * ನಾವು ಓದುವ ವಿಷಯದ ಕುರಿತು ನಿಧಾನವಾಗಿ ಧ್ಯಾನ ಮಾಡುವಾಗ ದೇವರ ವಾಕ್ಯವು ನಮ್ಮ ಹೃದಯವನ್ನು ಸ್ಪರ್ಶಿಸುತ್ತದೆ. ಅದು ನಮ್ಮ ಭಾವಾವೇಶವನ್ನು ಸ್ಪರ್ಶಿಸಿ, ನಮ್ಮ ಆಲೋಚನಾ ರೀತಿಯನ್ನು ರೂಪಿಸುತ್ತದೆ. ನಮ್ಮ ಖಾಸಗಿ ವಿಚಾರಗಳನ್ನು ಪ್ರಾರ್ಥನೆಯಲ್ಲಿ ದೇವರ ಬಳಿ ಹೇಳಿಕೊಳ್ಳುವಂತೆಯೂ ಅದು ನಮ್ಮನ್ನು ಪ್ರೇರಿಸುತ್ತದೆ. ಈ ಕಾರಣದಿಂದ, ನಮ್ಮ ಮತ್ತು ಯೆಹೋವನ ಮಧ್ಯೆ ಇರುವ ಅಂಟಿಕೆ ಬಲಗೊಳ್ಳುತ್ತದೆ ಮತ್ತು ದೇವರಲ್ಲಿ ನಮಗಿರುವ ಪ್ರೀತಿಯು ಕಷ್ಟಕರ ಪರಿಸ್ಥಿತಿಗಳಲ್ಲಿಯೂ ನಾವು ಯೇಸುವನ್ನು ಅನುಸರಿಸುತ್ತಾ ಮುಂದುವರಿಯುವಂತೆ ನಮ್ಮನ್ನು ಪ್ರೇರಿಸುತ್ತದೆ. (ಮತ್ತಾಯ 10:22) ನಾವು ಕಡೇ ವರೆಗೂ ನಂಬಿಗಸ್ತರಾಗಿ ಉಳಿಯಲು ಬಯಸುವುದಾದರೆ, ದೇವರ ಮಾತುಗಳ ಕುರಿತು ಧ್ಯಾನಿಸುವುದು ಅಗತ್ಯ.​—ಲೂಕ 21:19.

9. ನಮ್ಮ ಹೃದಯಗಳು ದೇವರ ವಾಕ್ಯವನ್ನು ಅಂಗೀಕರಿಸುವ ಸ್ಥಿತಿಯಲ್ಲಿರುವುದನ್ನು ನಾವು ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು?

9 ದೇವರ ವಾಕ್ಯವೆಂಬ ಬೀಜವು ಬೆಳೆಯುವಾಗ ಅದಕ್ಕೆ ತಡೆಗಳು ಬರುತ್ತವೆಂದು ಸಹ ಯೇಸುವಿನ ಸಾಮ್ಯವು ತೋರಿಸುತ್ತದೆ. ಆದಕಾರಣ, ನಾವು ನಂಬಿಗಸ್ತ ಶಿಷ್ಯರಾಗಿ ಉಳಿಯಬೇಕಾದರೆ, ನಾವು (1) ಆ ಸಾಮ್ಯದಲ್ಲಿ ಹೇಳಲಾದ ಅನನುಕೂಲಕರ ನೆಲದ ಸ್ಥಿತಿಯು ಪ್ರತಿನಿಧಿಸುವಂಥ ತಡೆಗಳನ್ನು ಗುರುತಿಸಬೇಕು ಮತ್ತು (2) ಅವುಗಳನ್ನು ಸರಿಪಡಿಸಲು ಅಥವಾ ಅವುಗಳನ್ನು ದೂರವಿರಿಸಲು ಕ್ರಮ ಕೈಕೊಳ್ಳಬೇಕು. ಈ ರೀತಿಯಲ್ಲಿ ನಾವು ನಮ್ಮ ಹೃದಯವು ರಾಜ್ಯದ ಬೀಜವನ್ನು ಅಂಗೀಕರಿಸುವ ಸ್ಥಿತಿಯಲ್ಲಿದೆಯೆಂಬದನ್ನು ಮತ್ತು ಫಲಬಿಡುತ್ತಾ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಬಲ್ಲೆವು.

“ದಾರಿಯ ಮಗ್ಗುಲಲ್ಲಿ”​—ಅಪಕರ್ಷಿತರಾಗಿರುವುದು

10. ಯೇಸುವಿನ ಸಾಮ್ಯದಲ್ಲಿರುವ ಮೊದಲನೆಯ ರೀತಿಯ ನೆಲವನ್ನು ವರ್ಣಿಸಿರಿ, ಮತ್ತು ಅದರ ಅರ್ಥವನ್ನು ವಿವರಿಸಿರಿ.

10 ಬೀಜವು ಬಿದ್ದ ಮೊದಲನೆಯ ರೀತಿಯ ನೆಲವು ‘ದಾರಿಯ ಮಗ್ಗುಲು’ ಆಗಿತ್ತು. ಅಲ್ಲಿ ಅದು ‘ತುಳಿಯಲ್ಪಟ್ಟಿತ್ತು.’ (ಲೂಕ 8:5) ಹೊಲದ ನಡುವೆ ಇರುವ ದಾರಿಯ ಮಗ್ಗುಲಿನ ನೆಲವು ಪಾದಚಾರಿಗಳ ಅಡ್ಡಾಡುವಿಕೆಯಿಂದ ಗಟ್ಟಿಯಾಗಿರುತ್ತದೆ. (ಮಾರ್ಕ 2:23) ಹಾಗೆಯೇ, ಈ ಲೋಕದ ಆಗುಹೋಗುಗಳು ತಮ್ಮ ಸಮಯ ಮತ್ತು ಶಕ್ತಿಯನ್ನು ಅನುಚಿತವಾಗಿ ಉಪಯೋಗಿಸಿಕೊಳ್ಳುವಂತೆ ಬಿಡುವವರು, ದೇವರ ವಾಕ್ಯಕ್ಕಾಗಿ ಹೃತ್ಪೂರ್ವಕವಾದ ಗಣ್ಯತೆಯನ್ನು ಬೆಳೆಸಿಕೊಳ್ಳಲಿಕ್ಕಾಗಿ ತೀರ ಅಪಕರ್ಷಿಸಲ್ಪಟ್ಟಿರುವುದನ್ನು ನೋಡಬಹುದು. ಅವರು ವಾಕ್ಯವನ್ನು ಕೇಳಿದರೂ ಅದರ ಕುರಿತು ಧ್ಯಾನ ಮಾಡುವುದಿಲ್ಲ. ಆದುದರಿಂದ ಅವರ ಹೃದಯವು ಪ್ರತಿಕ್ರಿಯೆ ತೋರಿಸದ ಸ್ಥಿತಿಯಲ್ಲಿಯೇ ಉಳಿಯುತ್ತದೆ. ಅವರು ಅದಕ್ಕಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವ ಮೊದಲೇ “ಸೈತಾನನು ಬಂದು ಅವರು ನಂಬಿ ರಕ್ಷಣೆ ಹೊಂದಬಾರದೆಂದು ವಾಕ್ಯವನ್ನು ಅವರ ಹೃದಯದಿಂದ ತೆಗೆದುಬಿಡುತ್ತಾನೆ.” (ಲೂಕ 8:12) ಇದನ್ನು ತಡೆಯಸಾಧ್ಯವಿದೆಯೆ?

11. ನಮ್ಮ ಹೃದಯಾವಸ್ಥೆಯು ಗಟ್ಟಿಯಾದ ನೆಲವಾಗುವುದನ್ನು ನಾವು ಹೇಗೆ ತಡೆಯಬಲ್ಲೆವು?

11 ಹೃದಯವು ದಾರಿಯ ಮಗ್ಗುಲಿನ ಫಲಹೀನ ನೆಲವಾಗಿ ಪರಿಣಮಿಸುವುದನ್ನು ತಡೆಯಲು ಮಾಡಸಾಧ್ಯವಿರುವ ಸಂಗತಿಗಳೊ ಅನೇಕವಿವೆ. ತುಳಿಯಲ್ಪಟ್ಟು ಗಟ್ಟಿಯಾಗಿರುವ ಮಣ್ಣು ಉಳಲ್ಪಡುವಲ್ಲಿ ಮತ್ತು ಪಾದಚಾರಿಗಳನ್ನು ಆ ದಾರಿಯಲ್ಲಿ ನಡೆಯದಂತೆ ಬೇರೆ ದಾರಿಗೆ ತಿರುಗಿಸುವಲ್ಲಿ, ಆ ನೆಲವು ಮೃದುವಾಗುವುದು ಮತ್ತು ಫಲದಾಯಕವಾಗುವುದು. ಹಾಗೆಯೇ, ದೇವರ ವಾಕ್ಯದ ಅಧ್ಯಯನ ಮತ್ತು ಧ್ಯಾನಕ್ಕೆ ಸಮಯವನ್ನು ತೆಗೆದುಕೊಳ್ಳುವಲ್ಲಿ ಹೃದಯವು ಉತ್ತಮವಾದ, ಫಲೋತ್ಪಾದಕ ನೆಲವಾಗಿ ಪರಿಣಮಿಸಬಲ್ಲದು. ಮುಖ್ಯ ವಿಷಯವೇನಂದರೆ, ಜೀವನದ ಲೌಕಿಕ ವಿಷಯಗಳಿಂದಾಗಿ ನಾವು ವಿಪರೀತವಾಗಿ ಅಪಕರ್ಷಿತರಾಗಬಾರದು. (ಲೂಕ 12:​13-15) ಬದಲಿಗೆ, ಜೀವನದ “ಹೆಚ್ಚು ಪ್ರಾಮುಖ್ಯವಾದ ವಿಷಯಗಳ” ಕುರಿತಾಗಿ ಪರ್ಯಾಲೋಚಿಸಲು ಸಮಯವನ್ನು ಲಭ್ಯಗೊಳಿಸುವುದನ್ನು ಖಚಿತಪಡಿಸಿಕೊಳ್ಳಿರಿ.​—ಫಿಲಿಪ್ಪಿ 1:9-11, NW.

“ಬಂಡೆಯ ಮೇಲೆ”​—ಭಯಭೀತರಾಗಿರುವುದು

12. ಯೇಸುವಿನ ಸಾಮ್ಯದಲ್ಲಿ ತಿಳಿಸಲ್ಪಟ್ಟಿರುವ ಎರಡನೆಯ ರೀತಿಯ ನೆಲದಲ್ಲಿ ಮೊಳಕೆಯು ಬಾಡಿಹೋಗಲು ನಿಜವಾದ ಕಾರಣವೇನು?

12 ಎರಡನೆಯ ರೀತಿಯ ನೆಲದ ಮೇಲೆ ಬೀಜವು ಬೀಳುವಾಗ, ಮೊದಲನೆಯ ಬೀಜದಂತೆ ಅದು ಮೇಲೆಯೇ ಉಳಿಯುವುದಿಲ್ಲ. ಅದು ಬೇರುಬಿಟ್ಟು ಮೊಳಕೆಯೊಡೆಯುತ್ತದೆ. ಆದರೆ ಸೂರ್ಯನು ಉದಯಿಸಿದಾಗ, ಬಿಸಿಲಿನ ಶಾಖದ ಕಾರಣ ಆ ಮೊಳಕೆಯು ಬಾಡಿ ಒಣಗಿಹೋಗುತ್ತದೆ. ಆದರೆ, ಈ ವಿಶಿಷ್ಟ ವಿವರವನ್ನು ಗಮನಿಸಿರಿ. ಆ ಮೊಳಕೆ ಬಾಡಿಹೋಗುವುದರ ನಿಜ ಕಾರಣವು ಶಾಖವಲ್ಲ. ಏಕೆಂದರೆ ಒಳ್ಳೆಯ ನೆಲದಿಂದ ಬರುವ ಮೊಳಕೆಯೂ ಸೂರ್ಯನಿಗೆ ಒಡ್ಡಲ್ಪಡುತ್ತದಾದರೂ ಅದು ಬಾಡಿಹೋಗದೆ ಚೆನ್ನಾಗಿ ಬೆಳೆಯುತ್ತದೆ. ಹಾಗಾದರೆ ವ್ಯತ್ಯಾಸವೇನು? ಯೇಸು ವಿವರಿಸುವಂತೆ, “ಅಲ್ಲಿ ಮಣ್ಣು ತೆಳ್ಳಗಿದ್ದದರಿಂದ” ಮತ್ತು “ತ್ಯಾವವಿಲ್ಲದ ಕಾರಣ” ಈ ಮೊಳಕೆಯು ಬಾಡಿಹೋಗುತ್ತದೆ. (ಮತ್ತಾಯ 13:5, 6; ಲೂಕ 8:6) ಮೇಲ್ಮಣ್ಣಿನ ತೆಳ್ಳಗಿನ ಪದರದ ಕೆಳಗಿರುವ ‘ಬಂಡೆಯು,’ ಆ ಬೀಜವು ಅದರ ಬೇರುಗಳನ್ನು ತೇವ ಮತ್ತು ಸ್ಥಿರತೆಯನ್ನು ಪಡೆಯುವಷ್ಟು ಆಳಕ್ಕೆ ಹೋಗುವುದರಿಂದ ತಡೆಯುತ್ತದೆ. ಮಣ್ಣು ತೆಳ್ಳಗಿರುವ ಕಾರಣ ಆ ಮೊಳಕೆ ಬಾಡಿಹೋಗುತ್ತದೆ.

13. ಯಾವ ರೀತಿಯ ಜನರು ತೆಳ್ಳಗಿನ ನೆಲದಂತಿದ್ದಾರೆ, ಮತ್ತು ಅವರು ಪ್ರತಿವರ್ತಿಸುವ ರೀತಿಗೆ ಹೆಚ್ಚು ಗಹನವಾದ ಒಂದು ಕಾರಣವೇನು?

13 ಸಾಮ್ಯದ ಈ ಭಾಗವು, ‘ದೇವರ ವಾಕ್ಯವನ್ನು ಸಂತೋಷದಿಂದ ಅಂಗೀಕರಿಸಿ,’ “ಸ್ವಲ್ಪಕಾಲ” ಯೇಸುವನ್ನು ಹುರುಪಿನಿಂದ ಹಿಂಬಾಲಿಸುವ ವ್ಯಕ್ತಿಗಳನ್ನು ಸೂಚಿಸುತ್ತದೆ. (ಲೂಕ 8:13) ‘ಸಂಕಟ ಅಥವಾ ಹಿಂಸೆ’ಯ ತೀಕ್ಷ್ಣ ಶಾಖಕ್ಕೆ ಒಡ್ಡಲ್ಪಡುವಾಗ, ಅವರು ಎಷ್ಟು ಭಯಭೀತರಾಗುತ್ತಾರೆಂದರೆ, ಅವರು ತಮ್ಮ ಸಂತೋಷ ಮತ್ತು ಶಕ್ತಿಯನ್ನು ಕಳೆದುಕೊಂಡು ಕ್ರಿಸ್ತನನ್ನು ಹಿಂಬಾಲಿಸುವುದನ್ನು ನಿಲ್ಲಿಸಿಬಿಡುತ್ತಾರೆ. (ಮತ್ತಾಯ 13:21) ಆದರೆ ಅವರ ಭಯಕ್ಕಿರುವ ಹೆಚ್ಚು ಗಹನವಾದ ಕಾರಣವು ವಿರೋಧವಾಗಿರುವುದಿಲ್ಲ. ಏಕೆಂದರೆ, ಕ್ರಿಸ್ತನ ಶಿಷ್ಯರಲ್ಲಿ ಲಕ್ಷಾಂತರ ಮಂದಿ ವಿವಿಧ ರೀತಿಯ ಸಂಕಟವನ್ನು ತಾಳಿಕೊಂಡರೂ ನಂಬಿಗಸ್ತರಾಗಿಯೇ ಉಳಿಯುತ್ತಾರೆ. (2 ಕೊರಿಂಥ 2:4; 7:5) ಕೆಲವರು ಭಯಭೀತರಾಗಿ ಸತ್ಯದಿಂದ ಬಿದ್ದುಹೋಗುವ ನಿಜ ಕಾರಣವು, ಅವರ ಬಂಡೆಯಂತಹ ಹೃದಯಾವಸ್ಥೆಯು ಅವರು ಭಕ್ತಿವರ್ಧಕ ಮತ್ತು ಆಧ್ಯಾತ್ಮಿಕ ವಿಷಯಗಳ ಕುರಿತು ಸಾಕಷ್ಟು ಆಳವಾಗಿ ಧ್ಯಾನಿಸುವುದರಿಂದ ಅವರನ್ನು ತಡೆಯುತ್ತಿರುವುದೇ ಆಗಿದೆ. ಆದಕಾರಣ, ಅವರು ಯೆಹೋವನಿಗಾಗಿಯೂ ಆತನ ವಾಕ್ಯಕ್ಕಾಗಿಯೂ ಬೆಳೆಸಿಕೊಳ್ಳುವ ಮಾನ್ಯತೆಯು, ಆಳವಿಲ್ಲದ್ದೂ ವಿರೋಧವನ್ನು ತಡೆಯಲು ತೀರ ಬಲಹೀನವೂ ಆದದ್ದಾಗಿರುತ್ತದೆ. ಇಂತಹ ಫಲಿತಾಂಶವನ್ನು ಒಬ್ಬನು ಹೇಗೆ ತಡೆಯಬಲ್ಲನು?

14. ಒಬ್ಬ ವ್ಯಕ್ತಿಯ ಹೃದಯಾವಸ್ಥೆಯು ತೆಳ್ಳಗಿನ ನೆಲದಂತಾಗುವುದನ್ನು ತಡೆಯಲು ಅವನು ಯಾವ ಕ್ರಮಗಳನ್ನು ಕೈಕೊಳ್ಳಬೇಕು?

14 ಒಬ್ಬ ವ್ಯಕ್ತಿಯು ತನ್ನಲ್ಲಿ ಆಳವಾಗಿ ಬೇರೂರಿರುವ ವೈಷಮ್ಯ, ಬೇಗನೆ ವ್ಯಕ್ತವಾಗದ ಸ್ವಾರ್ಥ ಅಭಿರುಚಿ, ಅಥವಾ ತದ್ರೀತಿಯ ಗಡುಸಾದ ಆದರೆ ಗುಪ್ತವಾದ ಅನಿಸಿಕೆಗಳಂತಹ ಬಂಡೆಸದೃಶವಾದ ತಡೆಗಳು ಹೃದಯದಲ್ಲಿರದಂತೆ ನಿಶ್ಚಯಪಡಿಸಿಕೊಳ್ಳಬೇಕು. ಅಂತಹ ತಡೆಯು ಈಗಾಗಲೇ ಇರುವುದಾದರೆ, ದೇವರ ವಾಕ್ಯವು ಬೀರುವ ಶಕ್ತಿಯು ಅದನ್ನು ತೆಗೆದುಹಾಕಬಲ್ಲದು. (ಯೆರೆಮೀಯ 23:29; ಎಫೆಸ 4:22; ಇಬ್ರಿಯ 4:12) ಆ ಬಳಿಕ ಪ್ರಾರ್ಥನಾಪೂರ್ವಕವಾದ ಧ್ಯಾನವು ಆ ವ್ಯಕ್ತಿಯ ಹೃದಯದಲ್ಲಿ ‘ವಾಕ್ಯವು ಬೇರೂರುವಂತೆ’ ಪ್ರಚೋದಿಸುವುದು. (ಯಾಕೋಬ 1:21) ಇದು ನಮಗೆ ನಿರುತ್ತೇಜನದ ಸಮಯಗಳನ್ನು ನಿಭಾಯಿಸಲು ಬೇಕಾಗುವ ಬಲವನ್ನೂ ಪರೀಕ್ಷೆಗಳೆದುರಿನಲ್ಲಿ ನಂಬಿಗಸ್ತರಾಗಿ ಉಳಿಯಲು ಬೇಕಾಗುವ ಧೈರ್ಯವನ್ನೂ ಕೊಡುವುದು.

“ಮುಳ್ಳುಗಿಡಗಳ ನಡುವೆ”​—ವಿಭಾಗಿತರಾಗಿರುವುದು

15. (ಎ) ಯೇಸು ಹೇಳಿದ ಮೂರನೆಯ ರೀತಿಯ ಮಣ್ಣು ಏಕೆ ನಮ್ಮ ವಿಶೇಷ ಗಮನಕ್ಕೆ ಅರ್ಹವಾಗಿದೆ? (ಬಿ) ಮೂರನೆಯ ರೀತಿಯ ನೆಲಕ್ಕೆ ಕ್ರಮೇಣ ಏನಾಗುತ್ತದೆ, ಮತ್ತು ಏಕೆ?

15 ಮುಳ್ಳುಗಿಡಗಳಿರುವ ಮೂರನೆಯ ರೀತಿಯ ನೆಲವು ವಿಶೇಷವಾಗಿ ನಮ್ಮ ಗಮನಕ್ಕೆ ಅರ್ಹವಾಗಿದೆ, ಏಕೆಂದರೆ ಕೆಲವು ವಿಧಗಳಲ್ಲಿ ಅದು ಒಳ್ಳೆಯ ನೆಲಕ್ಕೆ ಹೋಲುತ್ತದೆ. ಒಳ್ಳೆಯ ನೆಲದಂತೆ ಮುಳ್ಳಿರುವ ನೆಲವು ಸಹ ಬೀಜವು ಬೇರುಬಿಟ್ಟು ಮೊಳಕೆಯೊಡೆಯುವಂತೆ ಅನುಮತಿಸುತ್ತದೆ. ಆರಂಭದಲ್ಲಿ ಹೊಸ ಸಸಿಯು ಈ ಎರಡೂ ರೀತಿಯ ನೆಲದಲ್ಲಿ ಬೆಳೆಯುವಾಗ ಯಾವ ವ್ಯತ್ಯಾಸವೂ ತೋರಿಬರುವುದಿಲ್ಲ. ಆದರೆ ಸಮಯಾನಂತರ, ಸಸಿಯನ್ನು ಕ್ರಮೇಣ ಅಡಗಿಸಿಬಿಡುವ ಒಂದು ಪರಿಸ್ಥಿತಿಯುಂಟಾಗುತ್ತದೆ. ಒಳ್ಳೆಯ ನೆಲಕ್ಕೆ ಅಸದೃಶವಾಗಿ, ಈ ನೆಲದಲ್ಲಿ ಮುಳ್ಳುಗಿಡಗಳು ಹುಲುಸಾಗಿ ಬೆಳೆಯುತ್ತವೆ. ಆ ನೆಲದಿಂದ ಸಸಿಯು ಬೆಳೆದುಬರುವಾಗ, ‘ಅದರ ಸಂಗಡ ಮುಳ್ಳುಗಿಡಗಳು ಬೆಳೆಯುತ್ತಾ’ ಪೈಪೋಟಿಗಿಳಿಯುತ್ತವೆ. ಸ್ವಲ್ಪ ಸಮಯ ಇವೆರಡೂ ಆಹಾರ, ಬೆಳಕು ಮತ್ತು ಜಾಗಕ್ಕಾಗಿ ಹೋರಾಡುತ್ತವಾದರೂ, ಕ್ರಮೇಣ ಮುಳ್ಳುಗಳು ಆ ಸಸಿಯನ್ನು ಆವರಿಸಿ ‘ಅದನ್ನು ಅಡಗಿಸಿಬಿಡುತ್ತವೆ.’​—ಲೂಕ 8:7.

16. (ಎ) ಯಾವ ವ್ಯಕ್ತಿಗಳು ಮುಳ್ಳಿನ ನೆಲವನ್ನು ಹೋಲುತ್ತಾರೆ? (ಬಿ) ಮೂರು ಸುವಾರ್ತಾ ವೃತ್ತಾಂತಗಳಿಗನುಸಾರ, ಮುಳ್ಳುಗಿಡಗಳು ಯಾವುದನ್ನು ಪ್ರತಿನಿಧಿಸುತ್ತವೆ?​—ಪಾದಟಿಪ್ಪಣಿಯನ್ನು ನೋಡಿ.

16 ಮುಳ್ಳುಗಿಡಗಳಿರುವ ನೆಲದೊಂದಿಗೆ ಯಾವ ರೀತಿಯ ಜನರು ಹೋಲುತ್ತಾರೆ? ಯೇಸು ವಿವರಿಸಿದ್ದು: “ಬೇರೆ ಕೆಲವರು ವಾಕ್ಯವನ್ನು ಕೇಳಿದ ಮೇಲೆ ಬರಬರುತ್ತಾ ಈ ಜೀವಮಾನದಲ್ಲಿ ಆಗುವ ಚಿಂತೆ ಐಶ್ವರ್ಯ ಭೋಗಗಳಿಂದ ಅಡಗಿಸಲ್ಪಟ್ಟು ಫಲವನ್ನು ಮಾಗಿಸುವದಿಲ್ಲ.” (ಲೂಕ 8:14) ಬಿತ್ತುವವನ ಬೀಜ ಮತ್ತು ಮುಳ್ಳುಗಿಡಗಳು ನೆಲದಲ್ಲಿ ಏಕಕಾಲದಲ್ಲಿ ಬೆಳೆಯುವಂತೆಯೇ, ಕೆಲವರು ದೇವರ ವಾಕ್ಯಕ್ಕಾಗಿ ಮತ್ತು ಅದೇ ಸಮಯ, ‘ಈ ಜೀವಮಾನದ ಭೋಗ’ಕ್ಕಾಗಿಯೂ ತಮ್ಮ ಜೀವನದಲ್ಲಿ ಸ್ಥಳಾವಕಾಶವನ್ನು ಕೊಡಲು ಪ್ರಯತ್ನಿಸುತ್ತಾರೆ. ದೇವರ ವಾಕ್ಯದ ಸತ್ಯವು ಅವರ ಹೃದಯದಲ್ಲಿ ಬಿತ್ತಲ್ಪಟ್ಟಿದೆ, ಆದರೆ ಅವರ ಗಮನಕ್ಕಾಗಿ ಪೈಪೋಟಿ ನಡೆಸುತ್ತಿರುವ ಇತರ ಬೆನ್ನಟ್ಟುವಿಕೆಗಳಿಂದಾಗಿ ಅದು ಸ್ಪರ್ಧೆಗೊಳಗಾಗುತ್ತದೆ. ಅವರ ಸಾಂಕೇತಿಕ ಹೃದಯವು ವಿಭಾಗಿಸಲ್ಪಡುತ್ತದೆ. (ಲೂಕ 9:​57-62) ಇದು ದೇವರ ವಾಕ್ಯವನ್ನು ಪ್ರಾರ್ಥನಾಪೂರ್ವಕವಾಗಿ ಮತ್ತು ಅರ್ಥಪೂರ್ಣವಾಗಿ ಧ್ಯಾನಿಸಲು ಸಾಕಷ್ಟು ಸಮಯವನ್ನು ಕೊಡುವುದರಿಂದ ಅವರನ್ನು ತಡೆಯುತ್ತದೆ. ಅವರು ದೇವರ ವಾಕ್ಯವನ್ನು ಪೂರ್ತಿಯಾಗಿ ಹೀರಿಕೊಳ್ಳಲು ತಪ್ಪುತ್ತಾರೆ ಮತ್ತು ಹೀಗೆ ಅವರು ತಾಳಿಕೊಳ್ಳಲು ಬೇಕಾಗುವ ಹೃತ್ಪೂರ್ವಕ ಗಣ್ಯತೆಯ ಕೊರತೆಯುಳ್ಳವರಾಗುತ್ತಾರೆ. ಕ್ರಮೇಣ ಅವರ ಆಧ್ಯಾತ್ಮಿಕ ಅಭಿರುಚಿಗಳನ್ನು ಆಧ್ಯಾತ್ಮಿಕವಲ್ಲದ ಬೆನ್ನಟ್ಟುವಿಕೆಗಳು ಎಷ್ಟೊಂದು ಮಬ್ಬುಗವಿಸುತ್ತವೆಂದರೆ, ಅವು ಪೂರ್ಣವಾಗಿ “ಅಡಗಿಸಲ್ಪ”ಡುತ್ತವೆ. * ಯೆಹೋವನನ್ನು ಪೂರ್ಣಹೃದಯದಿಂದ ಪ್ರೀತಿಸದವರಿಗೆ ಎಷ್ಟು ದುಃಖಕರವಾದ ಅಂತ್ಯ!​—ಮತ್ತಾಯ 6:24; 22:37.

17. ಯೇಸುವಿನ ಸಾಮ್ಯವು ಹೇಳಿರುವ ಆ ಸಾಂಕೇತಿಕ ಮುಳ್ಳುಗಿಡಗಳಿಂದ ಅಡಗಿಸಲ್ಪಡದೆ ಇರಬೇಕಾದರೆ, ನಾವು ಜೀವನದಲ್ಲಿ ಯಾವ ಆಯ್ಕೆಗಳನ್ನು ಮಾಡುವುದು ಅಗತ್ಯ?

17 ಪ್ರಾಪಂಚಿಕ ಚಿಂತೆಗಳಿಗಿಂತ ಹೆಚ್ಚಾಗಿ ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆಯನ್ನು ನೀಡುವುದರಿಂದ, ಈ ಲೋಕದ ಬೇನೆಗಳು ಮತ್ತು ಭೋಗಗಳು ನಮ್ಮನ್ನು ಅಡಗಿಸಿಬಿಡುವುದರಿಂದ ನಾವು ತಪ್ಪಿಸಿಕೊಳ್ಳುವೆವು. (ಮತ್ತಾಯ 6:31-33; ಲೂಕ 21:34-36) ಬೈಬಲ್‌ ವಾಚನ ಮತ್ತು ನಾವು ಓದಿದ ವಿಷಯದ ಕುರಿತಾದ ಧ್ಯಾನವನ್ನು ಎಂದಿಗೂ ಅಸಡ್ಡೆಮಾಡಬಾರದು. ನಮ್ಮ ಜೀವನವನ್ನು ಸಾಧ್ಯವಾಗುವಷ್ಟು ಸರಳೀಕರಿಸುವಲ್ಲಿ, ನಾವು ಏಕಾಗ್ರತೆಯ ಹಾಗೂ ಪ್ರಾರ್ಥನಾಪೂರ್ವಕವಾದ ಧ್ಯಾನಕ್ಕೆ ಹೆಚ್ಚು ಸಮಯವನ್ನು ಕಂಡುಕೊಳ್ಳುವೆವು. (1 ತಿಮೊಥೆಯ 6:​6-8) ಫಲಕೊಡುವ ಸಸಿಗೆ ಹೆಚ್ಚು ಆಹಾರ, ಬೆಳಕು ಮತ್ತು ಜಾಗವನ್ನು ಕೊಡಲಿಕ್ಕಾಗಿಯೊ ಎಂಬಂತೆ ಆ ಮುಳ್ಳುಗಿಡಗಳನ್ನು ನೆಲದಿಂದ ಕಿತ್ತುಹಾಕಿರುವ ದೇವರ ಸೇವಕರು ಯೆಹೋವನ ಆಶೀರ್ವಾದವನ್ನು ಅನುಭವಿಸುತ್ತಿದ್ದಾರೆ. ಸಾಂಡ್ರ ಎಂಬ 26 ವಯಸ್ಸಿನಾಕೆ ಹೇಳುವುದು: “ಸತ್ಯದಲ್ಲಿ ನನಗೆ ಸಿಕ್ಕಿರುವ ಆಶೀರ್ವಾದಗಳ ಕುರಿತು ನಾನು ಧ್ಯಾನಿಸುವಾಗ, ಅದನ್ನು ಹೋಲುವ ಯಾವುದನ್ನೂ ಈ ಲೋಕವು ಕೊಡಲಾರದು ಎಂಬದನ್ನು ನಾನು ಮನಗಂಡಿದ್ದೇನೆ!”​—ಕೀರ್ತನೆ 84:11.

18. ನಾವು ದೇವರ ವಾಕ್ಯದಲ್ಲಿ ನೆಲೆಗೊಂಡು, ಕ್ರೈಸ್ತರಾಗಿ ಹೇಗೆ ತಾಳಿಕೊಳ್ಳಬಲ್ಲೆವು?

18 ಆದುದರಿಂದ, ದೇವರ ವಾಕ್ಯವು ನಮ್ಮಲ್ಲಿ ನೆಲೆಗೊಂಡಿರುವಷ್ಟು ಕಾಲ, ಆಬಾಲವೃದ್ಧರಾದ ನಾವೆಲ್ಲರೂ ದೇವರ ವಾಕ್ಯದಲ್ಲಿ ನೆಲೆಗೊಂಡಿದ್ದು, ಕ್ರಿಸ್ತನ ಶಿಷ್ಯರೋಪಾದಿ ತಾಳಿಕೊಳ್ಳುವೆವು ಎಂಬುದು ಸ್ಪಷ್ಟ. ಆದಕಾರಣ, ನಮ್ಮ ಸಾಂಕೇತಿಕ ಹೃದಯದ ನೆಲವು ಎಂದಿಗೂ ಗಟ್ಟಿಯಾಗಿ, ತೆಳ್ಳಗಿನ ನೆಲ ಉಳ್ಳದ್ದಾಗಿ ಮತ್ತು ಮುಳ್ಳುಗಿಡಗಳಿಂದ ಅಡಗಿಸಲ್ಪಟ್ಟದ್ದಾಗಿ ಇರುವ ಬದಲು, ಮೃದುವಾಗಿಯೂ ಆಳವಾಗಿಯೂ ಉಳಿಯುವಂತೆ ನೋಡಿಕೊಳ್ಳೋಣ. ಈ ರೀತಿಯಲ್ಲಿ, ನಾವು ದೇವರ ವಾಕ್ಯವನ್ನು ಪೂರ್ಣವಾಗಿ ಹೀರಿಕೊಂಡು, “ತಾಳ್ಮೆಯಿಂದ ಫಲವನ್ನು” ಬಿಡಲು ಶಕ್ತರಾಗುವೆವು.​—ಲೂಕ 8:15.

[ಪಾದಟಿಪ್ಪಣಿಗಳು]

^ ಪ್ಯಾರ. 1 ಈ ಲೇಖನದಲ್ಲಿ, ಈ ಮೂರು ಆವಶ್ಯಕತೆಗಳಲ್ಲಿ ಮೊದಲನೆಯದನ್ನು ನಾವು ಚರ್ಚಿಸಲಿದ್ದೇವೆ. ಇನ್ನೆರಡನ್ನು ಮುಂದಿನ ಲೇಖನಗಳಲ್ಲಿ ಚರ್ಚಿಸುವೆವು.

^ ಪ್ಯಾರ. 8 ನೀವು ಓದಿರುವ ಒಂದು ಬೈಬಲ್‌ ಭಾಗದ ಕುರಿತು ಪ್ರಾರ್ಥನಾಪೂರ್ವಕವಾಗಿ ಧ್ಯಾನಿಸಲು, ಉದಾಹರಣೆಗೆ, ನೀವು ಹೀಗೆ ಕೇಳಿಕೊಳ್ಳಬಹುದು: ‘ಇದು ಯೆಹೋವನ ಗುಣಗಳಲ್ಲಿ ಒಂದನ್ನು ಇಲ್ಲವೆ ಹೆಚ್ಚಿನ ಗುಣಗಳನ್ನು ಪ್ರಕಟಪಡಿಸುತ್ತದೊ? ಇದು ಬೈಬಲಿನ ಮುಖ್ಯ ವಿಷಯಕ್ಕೆ ಹೇಗೆ ಸಂಬಂಧಿಸುತ್ತದೆ? ಇದನ್ನು ನಾನು ಹೇಗೆ ನನ್ನ ಜೀವಿತದಲ್ಲಿ ಅನ್ವಯಿಸಿಕೊಳ್ಳಬಲ್ಲೆ ಅಥವಾ ಇತರರಿಗೆ ಸಹಾಯಮಾಡಲು ಉಪಯೋಗಿಸಬಲ್ಲೆ?’

^ ಪ್ಯಾರ. 16 ಯೇಸುವಿನ ಸಾಮ್ಯದ ಮೂರು ಸುವಾರ್ತಾ ವೃತ್ತಾಂತಗಳಿಗನುಸಾರ, ಈ ಲೋಕದ ಬೇನೆಗಳು ಮತ್ತು ಭೋಗಗಳು ಆ ಬೀಜವನ್ನು ಅಡಗಿಸುತ್ತವೆ: “ಪ್ರಪಂಚದ ಚಿಂತೆ,” “ಐಶ್ವರ್ಯದಿಂದುಂಟಾಗುವ ಮೋಸ,” “ಇತರ ವಿಷಯಗಳ ಮೇಲಣ ಆಶೆಗಳು” ಹಾಗೂ ‘ಈ ಜೀವಮಾನದ ಭೋಗಗಳು.’​—ಮಾರ್ಕ 4:19; ಮತ್ತಾಯ 13:22; ಲೂಕ 8:14; ಯೆರೆಮೀಯ 4:3, 4.

ನಿಮ್ಮ ಉತ್ತರಗಳೇನು?

• ನಾವು ‘ಯೇಸುವಿನ ವಾಕ್ಯದಲ್ಲಿ ನೆಲೆಗೊಂಡಿರುವ’ ಅಗತ್ಯವಿದೆ ಏಕೆ?

• ದೇವರ ವಾಕ್ಯವು ನಮ್ಮ ಹೃದಯದಲ್ಲಿ ನೆಲೆಗೊಂಡಿರುವಂತೆ ನಾವು ಹೇಗೆ ಬಿಡಬಲ್ಲೆವು?

• ಯೇಸು ಹೇಳಿದ ನಾಲ್ಕು ವಿಭಿನ್ನ ರೀತಿಯ ನೆಲದಿಂದ ಯಾವ ರೀತಿಯ ವ್ಯಕ್ತಿಗಳು ಪ್ರತಿನಿಧಿಸಲ್ಪಟ್ಟಿದ್ದಾರೆ?

• ದೇವರ ವಾಕ್ಯದ ಕುರಿತಾಗಿ ಧ್ಯಾನಿಸಲು ನೀವು ಸಮಯವನ್ನು ಹೇಗೆ ಕಂಡುಕೊಳ್ಳಬಲ್ಲಿರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚೌಕ/ಚಿತ್ರ]

“ಸತ್ಯದಲ್ಲಿ ಸ್ಥಿರವಾಗಿ” ಇರುವುದು

ದೀರ್ಘಕಾಲದಿಂದ ಕ್ರಿಸ್ತನ ಶಿಷ್ಯರಾಗಿರುವ ಅನೇಕರು ತಾವು “ಸತ್ಯದಲ್ಲಿ ಸ್ಥಿರವಾಗಿ” ಇದ್ದೇವೆಂಬದನ್ನು ಸದಾ ರುಜುಪಡಿಸಿ ತೋರಿಸುತ್ತಾರೆ. (2 ಪೇತ್ರ 1:12) ಅವರು ತಾಳಿಕೊಳ್ಳುವಂತೆ ಯಾವುದು ಸಹಾಯಮಾಡುತ್ತದೆ? ಅವರ ಹೇಳಿಕೆಗಳಲ್ಲಿ ಕೆಲವನ್ನು ಪರ್ಯಾಲೋಚಿಸಿರಿ.

“ನಾನು ಪ್ರತಿದಿನವನ್ನು ಬೈಬಲಿನ ಒಂದು ಭಾಗವನ್ನು ಓದಿ, ಪ್ರಾರ್ಥನೆ ಮಾಡಿ ಮುಗಿಸುತ್ತೇನೆ. ಬಳಿಕ ನಾನು ಏನು ಓದಿದೆನೊ ಅದರ ಕುರಿತು ಯೋಚಿಸುತ್ತೇನೆ.”​—ಜೀನ್‌, 1939ರಲ್ಲಿ ದೀಕ್ಷಾಸ್ನಾನಪಡೆದರು.

“ಎಷ್ಟೋ ಉನ್ನತ ಸ್ಥಾನದಲ್ಲಿರುವ ಯೆಹೋವನು ನಮ್ಮನ್ನು ಅಷ್ಟು ಗಾಢವಾಗಿ ಹೇಗೆ ಪ್ರೀತಿಸುತ್ತಾನೆಂಬುದರ ಕುರಿತು ಧ್ಯಾನ ಮಾಡುವುದು, ನನಗೆ ಸುರಕ್ಷಿತವಾಗಿರುವ ಭಾವನೆಯನ್ನೂ, ನಂಬಿಗಸ್ತನಾಗಿ ಉಳಿಯಲು ಬಲವನ್ನೂ ಕೊಡುತ್ತದೆ.”​—ಪೆಟ್ರಿಷ, 1946ರಲ್ಲಿ ದೀಕ್ಷಾಸ್ನಾನಪಡೆದರು.

“ಉತ್ತಮ ಬೈಬಲ್‌ ಅಧ್ಯಯನ ರೂಢಿಗಳಿಗೆ ಅಂಟಿಕೊಳ್ಳುವ ಮೂಲಕ ಮತ್ತು ‘ದೇವರ ಅಗಾಧವಾದ ವಿಷಯ’ಗಳಲ್ಲಿ ಮಗ್ನಳಾಗಿರುವ ಮೂಲಕ, ನಾನು ಯೆಹೋವನ ಸೇವೆಯಲ್ಲಿ ಮುಂದುವರಿಯಲು ಶಕ್ತಳಾಗಿದ್ದೇನೆ.”​—1 ಕೊರಿಂಥ 2:10; ಆನ, 1939ರಲ್ಲಿ ದೀಕ್ಷಾಸ್ನಾನಪಡೆದರು.

“ನಾನು ಬೈಬಲನ್ನು ಮತ್ತು ನಮ್ಮ ಬೈಬಲಾಧಾರಿತ ಸಾಹಿತ್ಯಗಳನ್ನು ನನ್ನ ಹೃದಯ ಹಾಗೂ ಇಂಗಿತಗಳನ್ನು ಪರೀಕ್ಷಿಸುವ ಉದ್ದೇಶದಿಂದ ಓದುತ್ತೇನೆ.”​—ಸೆಲ್ಡ, 1943ರಲ್ಲಿ ದೀಕ್ಷಾಸ್ನಾನಪಡೆದರು.

“ನಾನು ಹೊರಗೆ ಹೋಗಿ ನಡೆದಾಡುತ್ತಾ, ಪ್ರಾರ್ಥನೆಯಲ್ಲಿ ಯೆಹೋವನೊಂದಿಗೆ ಮಾತಾಡಿ, ನನ್ನ ಭಾವನೆಗಳನ್ನು ಆತನಿಗೆ ಹೇಳುವ ಸಮಯಗಳೇ ನನ್ನ ಅತ್ಯುತ್ತಮ ಸಮಯಗಳಾಗಿವೆ.”​—ರಾಲ್ಫ್‌, 1947ರಲ್ಲಿ ದೀಕ್ಷಾಸ್ನಾನಪಡೆದರು.

“ದಿನದ ವಚನವನ್ನು ಪರಿಗಣಿಸಿ, ಬೈಬಲಿನ ಒಂದು ಭಾಗವನ್ನು ಓದಿ ನಾನು ದಿನವನ್ನು ಆರಂಭಿಸುತ್ತೇನೆ. ಇದು ಇಡೀ ದಿನ ಒಂದು ಹೊಸ ವಿಷಯದ ಕುರಿತು ಧ್ಯಾನಮಾಡುವ ಸಂದರ್ಭವನ್ನು ನನಗೆ ಕೊಡುತ್ತದೆ.”​—ಮರೀ, 1935ರಲ್ಲಿ ದೀಕ್ಷಾಸ್ನಾನಪಡೆದರು.

“ನನಗೆ ಬೈಬಲ್‌ ಪುಸ್ತಕಗಳ ವಚನಾನುಕ್ರಮವಾದ ಚರ್ಚೆಗಳು ನಿಜವಾದ ಟಾನಿಕ್‌ನಂತಿವೆ.”​—ಡ್ಯಾನಿಯೆಲ್‌, 1946ರಲ್ಲಿ ದೀಕ್ಷಾಸ್ನಾನಪಡೆದರು.

ದೇವರ ವಾಕ್ಯದ ಕುರಿತು ಪ್ರಾರ್ಥನಾಪೂರ್ವಕವಾಗಿ ಧ್ಯಾನಿಸಲು ನೀವು ಯಾವಾಗ ಸಮಯವನ್ನು ತೆಗೆದುಕೊಳ್ಳುತ್ತೀರಿ?​—ದಾನಿಯೇಲ 6:10; ಮಾರ್ಕ 1:35; ಅ. ಕೃತ್ಯಗಳು 10:9.

[ಪುಟ 13ರಲ್ಲಿರುವ ಚಿತ್ರ]

ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆಯನ್ನು ನೀಡುವ ಮೂಲಕ ನಾವು “ತಾಳ್ಮೆಯಿಂದ ಫಲವನ್ನು” ಕೊಡಬಲ್ಲೆವು