ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಒಬ್ಬ ವ್ಯಕ್ತಿ ಬಲಾತ್ಕಾರ ಸಂಭೋಗದ ಬೆದರಿಕೆಗೊಳಗಾದರೆ ಕೂಗಿಕೊಳ್ಳಬೇಕು ಎಂದು ಬೈಬಲು ಏಕೆ ಹೇಳುತ್ತದೆ?

ಒಬ್ಬ ಬಲಾತ್ಕಾರಿಯ ಪಾಶವೀಯ ಆಕ್ರಮಣವನ್ನು ಸ್ವತಃ ಅನುಭವಿಸಿರದ ಯಾರಿಗೂ ಅದು ಹೇಗೆ ಒಬ್ಬಳ ಜೀವನವನ್ನು ನುಚ್ಚುನೂರುಗೊಳಿಸಬಲ್ಲದು ಎಂಬುದನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಬಲಾತ್ಕಾರ ಸಂಭೋಗಕ್ಕೆ ತುತ್ತಾದವಳಿಗೆ ಆ ಅನುಭವವು ಎಷ್ಟು ಭೀಕರವಾಗಿರುತ್ತದೆಂದರೆ, ಅದು ಅವಳ ಉಳಿದ ಜೀವಮಾನದಲ್ಲೆಲ್ಲಾ ಅವಳನ್ನು ಪೀಡಿಸುತ್ತಾ ಇರುವುದು. * ಕೆಲವು ವರ್ಷಗಳ ಹಿಂದೆ ಒಬ್ಬ ಬಲಾತ್ಕಾರಿಯಿಂದ ಆಕ್ರಮಣಕ್ಕೊಳಗಾದ ಒಬ್ಬ ಕ್ರೈಸ್ತ ಯುವತಿ ಹೇಳುವುದು: “ಆ ರಾತ್ರಿ ನಾನು ಅನುಭವಿಸಿದ ತೀವ್ರವಾದ ಭೀತಿಯನ್ನೇ ಆಗಲಿ, ಅಂದಿನಿಂದ ನಾನು ಜಯಿಸಬೇಕಾಗಿಬಂದ ಮಾನಸಿಕ ಆಫಾತವನ್ನೇ ಆಗಲಿ ವಿವರಿಸಲು ನನ್ನ ನಾಲಿಗೆಯೇ ಹೊರಳುವುದಿಲ್ಲ.” ಆದುದರಿಂದ ಅನೇಕರು ಈ ಭೀತಿದಾಯಕ ವಿಷಯದ ಕುರಿತು ಯೋಚಿಸುವುದೂ ಬೇಡವೆಂದು ಹೇಳುವುದೇಕೆ ಎಂಬುದು ಅರ್ಥಮಾಡಿಕೊಳ್ಳಬಹುದಾದ ಸಂಗತಿಯಾಗಿದೆ. ಆದರೂ, ಈ ದುಷ್ಟ ಲೋಕದಲ್ಲಿ ಬಲಾತ್ಕಾರ ಸಂಭೋಗದ ಬೆದರಿಕೆಯು ಒಂದು ವಾಸ್ತವಿಕತೆಯಾಗಿದೆ.

ಪೂರ್ವಕಾಲದಲ್ಲಿ ನಡೆದ ಬಲಾತ್ಕಾರ ಸಂಭೋಗ ಅಥವಾ ಅದರ ಯತ್ನದ ಕುರಿತಾಗಿ ವರದಿಮಾಡುವುದರಿಂದ ಬೈಬಲು ಹಿಂದಟ್ಟುವುದಿಲ್ಲ. (ಆದಿಕಾಂಡ 19:4-11; 34:1-7; 2 ಸಮುವೇಲ 13:1-14) ಆದರೆ ಅದು ಯಾರಾದರೂ ಬಲಾತ್ಕಾರ ಸಂಭೋಗದ ಬೆದರಿಕೆಗೊಳಗಾದರೆ ಏನು ಮಾಡಬೇಕು ಎಂಬ ವಿಷಯದಲ್ಲಿ ಸಲಹೆಯನ್ನೂ ಒದಗಿಸುತ್ತದೆ. ಈ ವಿಷಯದ ಕುರಿತು ಧರ್ಮಶಾಸ್ತ್ರವು ಏನು ಹೇಳುತ್ತದೆ ಎಂಬುದು ಧರ್ಮೋಪದೇಶಕಾಂಡ 22:​23-27ರಲ್ಲಿ ಕಂಡುಬರುತ್ತದೆ. ಇದು ಎರಡು ಸನ್ನಿವೇಶಗಳನ್ನು ಆವರಿಸುತ್ತದೆ. ಮೊದಲಿನ ಸನ್ನಿವೇಶದಲ್ಲಿ, ಒಬ್ಬ ಪುರುಷನು ಒಬ್ಬ ಯುವ ಸ್ತ್ರೀಯನ್ನು ಊರಿನಲ್ಲಿ ಕಂಡುಕೊಳ್ಳುತ್ತಾನೆ ಮತ್ತು ಅವಳೊಂದಿಗೆ ಸಂಗಮಿಸುತ್ತಾನೆ. ಆದರೂ, ಆ ಸ್ತ್ರೀ ಕಿರಿಚಾಡಲಿಲ್ಲ ಇಲ್ಲವೆ ಸಹಾಯಕ್ಕಾಗಿ ಕೂಗಿಕೊಳ್ಳಲಿಲ್ಲ. ಇದರ ಪರಿಣಾಮವಾಗಿ, ಅವಳು “ಊರಲ್ಲಿದ್ದು ಕೂಗಿಕೊಳ್ಳದೆಹೋದದರಿಂದ” ಅವಳು ಅಪರಾಧಿಯೆಂದು ತೀರ್ಪು ಮಾಡಲ್ಪಟ್ಟಳು. ಅವಳು ಕಿರಿಚಾಡುತ್ತಿದ್ದಲ್ಲಿ, ಅಕ್ಕಪಕ್ಕದಲ್ಲಿದ್ದ ಜನರು ಬಂದು ಅವಳಿಗೆ ಸಹಾಯಮಾಡಸಾಧ್ಯವಿತ್ತು. ಎರಡನೇ ಸನ್ನಿವೇಶದಲ್ಲಿ, ಒಬ್ಬ ಪುರುಷನು ಯುವ ಸ್ತ್ರೀಯೊಬ್ಬಳನ್ನು ಅಡವಿಯಲ್ಲಿ ಕಂಡುಕೊಳ್ಳುತ್ತಾನೆ, ಮತ್ತು ಅಲ್ಲಿ ಅವಳೊಂದಿಗೆ ‘ಬಲಾತ್ಕಾರದಿಂದ ಸಂಗಮಿಸುತ್ತಾನೆ.’ ಆತ್ಮಸಂರಕ್ಷಣೆಗೆಂದು, ಸ್ತ್ರೀ “ಕೂಗಿಕೊಂಡರೂ ತಪ್ಪಿಸುವವರು ಇರಲಿಲ್ಲ.” ಮೊದಲಿನ ಸನ್ನಿವೇಶದಲ್ಲಿನ ಸ್ತ್ರೀಗೆ ವ್ಯತಿರಿಕ್ತವಾಗಿ, ಈ ಸ್ತ್ರೀ ಆಕ್ರಮಣಕಾರನ ಕೃತ್ಯಗಳಿಗೆ ಮಣಿಯಲಿಲ್ಲ. ಅವಳು ಸಕ್ರಿಯವಾಗಿ ಅವನನ್ನು ಪ್ರತಿಭಟಿಸಿದಳು, ಸಹಾಯಕ್ಕಾಗಿ ಕೂಗಿಕೊಂಡಳು, ಆದರೆ ಆಕ್ರಮಣಕಾರನು ಅವಳನ್ನು ಸೋಲಿಸಿಬಿಟ್ಟನು. ಅವಳ ಕೂಗಿಕೊಳ್ಳುವಿಕೆ ಅವಳು ಬಲಾತ್ಕಾರ ಸಂಭೋಗಕ್ಕೆ ತನ್ನ ಇಷ್ಟಕ್ಕೆ ವಿರುದ್ಧವಾಗಿ ಬಲಿಯಾಗಿದ್ದಳು ಎಂಬುದನ್ನು ರುಜುಪಡಿಸುತ್ತದೆ; ಅವಳು ಅಪರಾಧಿಯಾಗಿರಲಿಲ್ಲ.

ಕ್ರೈಸ್ತರು ಇಂದು ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸಬೇಕಾಗಿಲ್ಲವಾದರೂ, ಅದರಲ್ಲಿ ತಿಳಿಸಲ್ಪಟ್ಟಿರುವ ಮೂಲತತ್ತ್ವಗಳು ಅವರಿಗೆ ನಿರ್ದೇಶನವನ್ನು ಒದಗಿಸುತ್ತವೆ. ಮೇಲೆ ಸೂಚಿಸಲ್ಪಟ್ಟ ದಾಖಲೆಯು, ಪ್ರತಿಭಟಿಸುವುದರ ಮತ್ತು ಸಹಾಯಕ್ಕಾಗಿ ಕೂಗಿಕೊಳ್ಳುವುದರ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಬಲಾತ್ಕಾರ ಸಂಭೋಗದ ಬೆದರಿಕೆಗೊಳಗಾಗುವಾಗ ಕೂಗಿಕೊಳ್ಳುವುದು ಪ್ರಾಯೋಗಿಕವಾದ ಮಾರ್ಗವಾಗಿದೆ ಎಂದು ಈಗಲೂ ಪರಿಗಣಿಸಲ್ಪಡುತ್ತದೆ. ಅಪರಾಧ ತಡೆಯುವಿಕೆಯ ಒಬ್ಬ ನಿಪುಣನು ಹೇಳಿದ್ದು: “ಒಬ್ಬ ಸ್ತ್ರೀ ಆಕ್ರಮಣಕ್ಕೊಳಗಾಗುವುದಾದರೆ, ಈಗಲೂ ಅವಳ ಬಳಿಯಿರುವ ಅತ್ಯುತ್ತಮ ಆಯುಧವು ಅವಳ ಗಟ್ಟಿಯಾದ ಕೂಗೇ ಆಗಿದೆ.” ಒಬ್ಬ ಸ್ತ್ರೀಯ ಕೂಗು ಇತರರ ಗಮನವನ್ನು ಸೆಳೆಯಬಹುದು, ಮತ್ತು ಆಗ ಅವರು ಅವಳಿಗೆ ಸಹಾಯಮಾಡಬಲ್ಲರು, ಅಥವಾ ಒಬ್ಬ ಆಕ್ರಮಣಕಾರನನ್ನು ಗಾಬರಿಗೊಳಿಸಿ ಅವನು ಬಿಟ್ಟುಹೋಗುವಂತೆ ಮಾಡಬಹುದು. ಒಬ್ಬ ಬಲಾತ್ಕಾರಿಯಿಂದ ಆಕ್ರಮಣಕ್ಕೊಳಗಾದ ಒಬ್ಬ ಯುವ ಕ್ರೈಸ್ತ ಸ್ತ್ರೀ ಹೇಳುವುದು: “ನನ್ನಿಂದ ಸಾಧ್ಯವಾದಷ್ಟು ಜೋರಾಗಿ ಕಿರುಚಿದೆ, ಮತ್ತು ಅವನು ಹಿಂದೆ ಸರಿದ. ಅವನು ಪುನಃ ನನ್ನ ಹತ್ತಿರ ಬಂದಾಗ, ನಾನು ಕಿರುಚಿಕೊಂಡು ಓಡಿದೆ. ಈ ಮುಂಚೆ, ‘ಗಟ್ಟಿಮುಟ್ಟಾದ ವ್ಯಕ್ತಿಯೊಬ್ಬನು ಈ ಒಂದೇ ಉದ್ದೇಶದೊಂದಿಗೆ ನನ್ನನ್ನು ಹಿಡಿದಿಡುವಾಗ ಕಿರುಚುವುದು ನನಗೆ ಹೇಗೆ ಸಹಾಯಮಾಡುವುದು?’ ಎಂದು ನಾನು ಸೋಜಿಗಪಡುತ್ತಿದ್ದೆ. ಆದರೆ ಅದು ಪರಿಣಾಮಕಾರಿಯಾಗಿದೆ ಎಂಬುದನ್ನು ನಾನು ಕಲಿತುಕೊಂಡೆ!”

ಒಬ್ಬ ಸ್ತ್ರೀಯ ಹೋರಾಟವನ್ನೆಲ್ಲ ಸೋಲಿಸಿ ಬಲಾತ್ಕಾರ ಸಂಭೋಗಮಾಡಲ್ಪಡುವ ದುಃಖಕರ ಪರಿಸ್ಥಿತಿಯಲ್ಲೂ, ಅವಳ ಹೋರಾಟ ಮತ್ತು ಸಹಾಯಕ್ಕಾಗಿ ಕೂಗಿಕೊಂಡದ್ದು ವ್ಯರ್ಥವಾಗಿರುವುದಿಲ್ಲ. ಅದಕ್ಕೆ ಬದಲಾಗಿ, ತನ್ನ ಆಕ್ರಮಣಕಾರನನ್ನು ಪ್ರತಿಭಟಿಸುವುದರಲ್ಲಿ ತನ್ನಿಂದಾದುದೆಲ್ಲವನ್ನೂ ಮಾಡಿದ್ದಳು ಎಂಬುದನ್ನು ಅದು ದೃಢಪಡಿಸುತ್ತದೆ. (ಧರ್ಮೋಪದೇಶಕಾಂಡ 22:26) ಈ ಅನಾಹುತವನ್ನು ಅನುಭವಿಸಿದರೂ, ಅವಳು ಆಗಲೂ ಒಂದು ಶುದ್ಧ ಮನಸ್ಸಾಕ್ಷಿ, ಸ್ವಗೌರವ ಮತ್ತು ದೇವರ ದೃಷ್ಟಿಯಲ್ಲಿ ತಾನು ಶುದ್ಧಳಾಗಿದ್ದೇನೆ ಎಂಬ ಖಾತ್ರಿಯನ್ನು ಹೊಂದಿರಬಲ್ಲಳು. ಈ ಘೋರ ಅನುಭವವು ಅವಳನ್ನು ಭಾವನಾತ್ಮಕವಾಗಿ ಘಾಸಿಗೊಳಿಸಿರಬಹುದಾದರೂ, ಆ ಆಕ್ರಮಣವನ್ನು ಪ್ರತಿರೋಧಿಸಲು ತನ್ನಿಂದಾದುದೆಲ್ಲವನ್ನೂ ತಾನು ಮಾಡಿದೆ ಎಂಬುದನ್ನು ತಿಳಿದಿರುವುದು, ಅವಳು ಕ್ರಮೇಣ ಉಪಶಮನವನ್ನು ಪಡೆದುಕೊಳ್ಳುವುದರಲ್ಲಿ ಬಹಳಷ್ಟು ಸಹಾಯಮಾಡುವುದು.

ಧರ್ಮೋಪದೇಶಕಾಂಡ 22:​23-27ರ ಅನ್ವಯವನ್ನು ಅರ್ಥಮಾಡಿಕೊಳ್ಳುವುದರಲ್ಲಿ, ಈ ಸಂಕ್ಷಿಪ್ತ ದಾಖಲೆಯು ಎಲ್ಲಾ ಸಂಭಾವ್ಯ ಪರಿಸ್ಥಿತಿಗಳನ್ನು ಆವರಿಸುವುದಿಲ್ಲ ಎಂಬುದನ್ನು ನಾವು ಗ್ರಹಿಸಬೇಕಾಗಿದೆ. ಉದಾಹರಣೆಗೆ, ಆಕ್ರಮಣಕ್ಕೊಳಗಾದ ಸ್ತ್ರೀ ಮೂಕಳಾಗಿರುವುದರಿಂದ, ಪ್ರಜ್ಞೆಯಿಲ್ಲದಿರುವುದರಿಂದ ಅಥವಾ ಭಯದಿಂದ ಸ್ತಂಭಿತಳಾಗುವುದರಿಂದ ಅಥವಾ ಅವಳು ಕೂಗಿಕೊಳ್ಳದಂತೆ ಅವಳ ಬಾಯಿ ಬಲವಂತವಾಗಿ ಮುಚ್ಚಲ್ಪಟ್ಟಿರುವುದರಿಂದ ಅಥವಾ ಬಟ್ಟೆಯಿಂದ ಕಟ್ಟಲ್ಪಟ್ಟಿರುವುದರಿಂದ ಕೂಗಿಕೊಳ್ಳಲು ಸಾಧ್ಯವಿಲ್ಲದೆ ಹೋಗುವ ಪರಿಸ್ಥಿತಿಯ ಕುರಿತು ಹೇಳಿಕೆ ನೀಡುವುದಿಲ್ಲ. ಆದರೂ, ಯೆಹೋವನಿಗೆ ಎಲ್ಲಾ ಅಂಶಗಳನ್ನು ಮತ್ತು ಹೇತುಗಳನ್ನು ಪರೀಕ್ಷಿಸಿನೋಡಲು ಸಾಧ್ಯವಿರುವ ಕಾರಣ, ಇಂತಹ ಪರಿಸ್ಥಿತಿಗಳಲ್ಲಿ ಆತನು ತಿಳಿವಳಿಕೆ ಮತ್ತು ನ್ಯಾಯದಿಂದ ವ್ಯವಹರಿಸುತ್ತಾನೆ, ಏಕೆಂದರೆ “ಆತನು ನಡಿಸುವದೆಲ್ಲಾ ನ್ಯಾಯ.” (ಧರ್ಮೋಪದೇಶಕಾಂಡ 32:4) ವಾಸ್ತವದಲ್ಲಿ ಏನು ಸಂಭವಿಸಿತು ಎಂಬುದು ಮತ್ತು ಆಕ್ರಮಣಮಾಡಿದವನನ್ನು ಪ್ರತಿಭಟಿಸುವುದರಲ್ಲಿ ಬಲಿಯಾದವಳು ಏನೆಲ್ಲಾ ಪ್ರಯತ್ನವನ್ನು ಮಾಡಿದಳು ಎಂಬುದು ಆತನಿಗೆ ತಿಳಿದಿದೆ. ಆದುದರಿಂದ, ಬಲಾತ್ಕಾರಕ್ಕೊಳಗಾದವಳು ಕೂಗಿಕೊಳ್ಳದ ಹೊರತು ಅಲ್ಲಿದ್ದ ಪರಿಸ್ಥಿತಿಗಳ ಕೆಳಗೆ ತನ್ನಿಂದಾದುದೆಲ್ಲವನ್ನೂ ಮಾಡಿರುವಲ್ಲಿ, ಅವಳು ಈ ವಿಚಾರವನ್ನು ಯೆಹೋವನಿಗೆ ಬಿಟ್ಟುಬಿಡಸಾಧ್ಯವಿದೆ.​—ಕೀರ್ತನೆ 55:22; 1 ಪೇತ್ರ 5:7.

ಹೀಗಿದ್ದರೂ, ಆಕ್ರಮಣಕ್ಕೊಳಗಾಗಿ ಕೆಡಿಸಲ್ಪಟ್ಟಿರುವ ಕೆಲವು ಮಂದಿ ಕ್ರೈಸ್ತ ಸ್ತ್ರೀಯರು ಅಪರಾಧಿ ಭಾವನೆಗಳಿಂದ ಸತತವಾದ ನೋವನ್ನು ಅನುಭವಿಸುತ್ತಾರೆ. ಆ ಘಟನೆಯ ಕುರಿತು ಯೋಚಿಸುವಾಗ, ಅದು ಸಂಭವಿಸದಂತೆ ತಡೆಯಲಿಕ್ಕಾಗಿ ತಾವು ಇನ್ನೂ ಹೆಚ್ಚನ್ನು ಮಾಡಬೇಕಿತ್ತೆಂದು ಅವರು ಎಣಿಸುತ್ತಾರೆ. ಆದರೂ, ತಮ್ಮನ್ನೇ ದೂಷಿಸಿಕೊಳ್ಳುವ ಬದಲು, ಬಲಾತ್ಕಾರಕ್ಕೆ ತುತ್ತಾದವರು ಯೆಹೋವನಿಗೆ ಪ್ರಾರ್ಥಿಸಬಹುದು, ಆತನ ಸಹಾಯವನ್ನು ಕೋರಬಹುದು, ಮತ್ತು ಆತನ ಮಹಾ ಪ್ರೀತಿದಯೆಯಲ್ಲಿ ನಂಬಿಕೆಯುಳ್ಳವರಾಗಿರಬಹುದು.​—ವಿಮೋಚನಕಾಂಡ 34:6; ಕೀರ್ತನೆ 86:5.

ಆದುದರಿಂದ, ಒಬ್ಬ ಬಲಾತ್ಕಾರಿಯನ್ನು ಎದುರುಗೊಂಡದ್ದರಿಂದ ಅವರಿಗಾದ ಭಾವನಾತ್ಮಕ ಘಾಸಿಗಳೊಂದಿಗೆ ಈಗಲೂ ಹೋರಾಡುತ್ತಿರುವ ಕ್ರೈಸ್ತ ಸ್ತ್ರೀಯರು ತಮಗಿರುವ ನೋವಿನ ಅನಿಸಿಕೆಗಳನ್ನು ಯೆಹೋವನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾನೆ ಎಂಬ ದೃಢಭರವಸೆಯುಳ್ಳವರಾಗಿರಬಲ್ಲರು. ದೇವರ ವಾಕ್ಯವು ಅವರಿಗೆ ಆಶ್ವಾಸನೆ ನೀಡುವುದು: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ. ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.” (ಕೀರ್ತನೆ 34:18) ತಮ್ಮ ವೇದನೆಯನ್ನು ನಿಭಾಯಿಸಿಕೊಂಡು ಹೋಗುವುದರಲ್ಲಿ ಹೆಚ್ಚಿನ ಸಹಾಯವು, ಕ್ರೈಸ್ತ ಸಭೆಯಲ್ಲಿರುವ ಜೊತೆ ವಿಶ್ವಾಸಿಗಳ ಯಥಾರ್ಥ ತಿಳಿವಳಿಕೆ ಮತ್ತು ಪ್ರೀತಿಯ ಬೆಂಬಲವನ್ನು ಸ್ವೀಕರಿಸುವುದರಿಂದ ಬರುವುದು. (ಯೋಬ 29:12; 1 ಥೆಸಲೊನೀಕ 5:14) ಮಾತ್ರವಲ್ಲದೆ, ಬಲಾತ್ಕಾರಕ್ಕೆ ಬಲಿಯಾದವರು ತಮ್ಮ ಗಮನವನ್ನು ಸಕಾರಾತ್ಮಕ ವಿಷಯಗಳ ಮೇಲೆ ಕೇಂದ್ರೀಕರಿಸಲು ಸ್ವತಃ ಮಾಡುವ ಪ್ರಯತ್ನಗಳು, ಅದು ಅವರಿಗೆ “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿ”ಯನ್ನು ಅನುಭವಿಸಲು ಸಹಾಯಮಾಡುವವು.​—ಫಿಲಿಪ್ಪಿ 4:6-9.

[ಪಾದಟಿಪ್ಪಣಿ]

^ ಪ್ಯಾರ. 3 ಈ ಲೇಖನವು ಬಲಾತ್ಕಾರಕ್ಕೊಳಗಾಗುವ ಸ್ತ್ರೀಯರ ಕುರಿತಾಗಿ ಮಾತಾಡುತ್ತಿರುವುದಾದರೂ, ಚರ್ಚಿಸಲ್ಪಡುವ ಮೂಲತತ್ತ್ವಗಳು ಬಲಾತ್ಕಾರ ಸಂಭೋಗದ ಬೆದರಿಕೆಗೊಳಗಾಗುವ ಪುರುಷರಿಗೂ ಅನ್ವಯಿಸುತ್ತವೆ.