ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕರ್ತನ ಸಂಧ್ಯಾ ಭೋಜನವನ್ನು ಏಕೆ ಆಚರಿಸಬೇಕು?

ಕರ್ತನ ಸಂಧ್ಯಾ ಭೋಜನವನ್ನು ಏಕೆ ಆಚರಿಸಬೇಕು?

ಕರ್ತನ ಸಂಧ್ಯಾ ಭೋಜನವನ್ನು ಏಕೆ ಆಚರಿಸಬೇಕು?

“ನಾನು ನಿಮಗೆ ತಿಳಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು.”​—1 ಕೊರಿಂಥ 11:23.

1, 2. ಸಾ.ಶ. 33ರ ಪಸ್ಕಹಬ್ಬದ ರಾತ್ರಿಯಂದು ಯೇಸು ಏನು ಮಾಡಿದನು?

ಯೆಹೋವನ ಏಕಜಾತ ಪುತ್ರನು ಅಲ್ಲಿ ಹಾಜರಿದ್ದನು. ‘ಅವನ ಕಷ್ಟಗಳಲ್ಲಿ ಅವನೊಂದಿಗೆ ಅಂಟಿಕೊಂಡಿದ್ದ’ 11 ಮಂದಿ ಪುರುಷರು ಸಹ ಅಲ್ಲಿದ್ದರು. (ಲೂಕ 22:​28, NW) ಅದು ಸಾ.ಶ. 33, ಮಾರ್ಚ್‌ 31ರ ಗುರುವಾರದ ಸಾಯಂಕಾಲವಾಗಿತ್ತು. ಮತ್ತು ಅಂದು ಹುಣ್ಣಿಮೆಯ ಚಂದ್ರನು ಯೆರೂಸಲೇಮಿನ ಆಕಾಶವನ್ನು ಅಲಂಕರಿಸಿರುವ ಸಾಧ್ಯತೆಯಿದೆ. ಯೇಸು ಕ್ರಿಸ್ತನೂ ಅವನ ಅಪೊಸ್ತಲರೂ ಪಸ್ಕಹಬ್ಬದ ಆಚರಣೆಯನ್ನು ಆಗತಾನೇ ಮುಗಿಸಿದ್ದರು. ವಿಶ್ವಾಸಘಾತಕ ಇಸ್ಕರಿಯೋತ ಯೂದನನ್ನು ಕಳುಹಿಸಲಾಗಿತ್ತಾದರೂ, ಉಳಿದವರಿಗೆ ಅಲ್ಲಿಂದ ಹೊರಡುವ ಸಮಯ ಇನ್ನೂ ಬಂದಿರಲಿಲ್ಲ. ಏಕೆ? ಏಕೆಂದರೆ ಯೇಸು ತುಂಬ ಮಹತ್ವಪೂರ್ಣವಾದ ವಿಷಯವೊಂದನ್ನು ಮಾಡಲಿದ್ದನು. ಅದೇನಾಗಿತ್ತು?

2 ಸುವಾರ್ತಾ ಲೇಖಕನಾದ ಮತ್ತಾಯನು ಅಲ್ಲಿದ್ದದ್ದರಿಂದ, ಅವನೇ ಅದನ್ನು ನಮಗೆ ತಿಳಿಸಲಿ. ಅವನು ಬರೆದುದು: “ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಮುರಿದು ಶಿಷ್ಯರಿಗೆ ಕೊಟ್ಟು​—ತಕ್ಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ [“ದೇಹವನ್ನು ಸೂಚಿಸುತ್ತದೆ,” NW] ಅಂದನು. ಆ ಮೇಲೆ ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅವರಿಗೆ ಕೊಟ್ಟು​—ಇದರಲ್ಲಿರುವದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ [“ರಕ್ತವನ್ನು ಸೂಚಿಸುತ್ತದೆ,” NW], ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ. . . . ಅಂದನು.” (ಮತ್ತಾಯ 26:26-29) ಇದು ಕೇವಲ ಒಂದೇ ಸಲ ನಡೆದ ಘಟನೆಯಾಗಿತ್ತೊ? ಅದರ ವಿಶೇಷತೆಯೇನಾಗಿತ್ತು? ಅದು ಇಂದು ನಮಗೆ ಯಾವುದೇ ರೀತಿಯಲ್ಲಿ ಮಹತ್ವಪೂರ್ಣವಾಗಿದೆಯೊ?

“ಇದನ್ನು ಮಾಡುತ್ತಾ ಇರಿ”

3. ಯೇಸು ಸಾ.ಶ. 33, ನೈಸಾನ್‌ 14ರ ರಾತ್ರಿಯಂದು ಏನನ್ನು ಮಾಡಿದನೊ ಅದೇಕೆ ಮಹತ್ವಪೂರ್ಣವಾಗಿತ್ತು?

3 ಸಾ.ಶ. 33, ನೈಸಾನ್‌ 14ರ ರಾತ್ರಿಯಂದು ಯೇಸು ಕ್ರಿಸ್ತನು ಏನು ಮಾಡಿದನೋ ಅದು, ಅವನ ಜೀವಿತದಲ್ಲಿ ಆಕಸ್ಮಿಕವಾಗಿ ಸಂಭವಿಸಿದಂಥ ಘಟನೆಯಾಗಿರಲಿಲ್ಲ. ಕೊರಿಂಥದಲ್ಲಿದ್ದ ಅಭಿಷಿಕ್ತ ಕ್ರೈಸ್ತರಿಗೆ ಬರೆದಂಥ ಪತ್ರದಲ್ಲಿ ಅಪೊಸ್ತಲ ಪೌಲನು ಈ ಘಟನೆಯ ಕುರಿತಾಗಿ ಚರ್ಚಿಸಿದನು. ಯೇಸು ಈ ಘಟನೆಯನ್ನು ಆರಂಭಿಸಿ 20 ವರ್ಷಗಳು ಕಳೆದಿದ್ದರೂ, ಅಲ್ಲಿ ಅದನ್ನು ಇನ್ನೂ ಆಚರಿಸಲಾಗುತ್ತಿತ್ತು. ಸಾ.ಶ. 33ರಲ್ಲಿ ಯೇಸು ಮತ್ತು ಆ 11 ಮಂದಿ ಅಪೊಸ್ತಲರೊಂದಿಗೆ ಪೌಲನು ಇರಲಿಲ್ಲವಾದರೂ, ಖಂಡಿತವಾಗಿಯೂ ಅವನು ಈ ಅಪೊಸ್ತಲರಲ್ಲಿ ಕೆಲವರಿಂದ ಆ ಸಂದರ್ಭದಲ್ಲಿ ಏನು ನಡೆಯಿತೆಂಬದನ್ನು ತಿಳಿದುಕೊಂಡಿದ್ದನು. ಇದಲ್ಲದೆ, ಪೌಲನಿಗೆ ಪ್ರೇರಿತ ಪ್ರಕಟನೆಯ ಮೂಲಕ ಆ ಘಟನೆಯ ಅಂಶಗಳು ದೃಢೀಕರಿಸಲ್ಪಟ್ಟವೆಂಬುದು ಸುವ್ಯಕ್ತ. ಪೌಲನಂದದ್ದು: “ನಾನು ನಿಮಗೆ ತಿಳಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನಂದರೆ​—ಕರ್ತನಾದ ಯೇಸು ತಾನು ಹಿಡಿದು ಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು​—ಇದು ನಿಮಗೋಸ್ಕರವಾಗಿರುವ ನನ್ನ ದೇಹ [“ದೇಹವನ್ನು ಸೂಚಿಸುತ್ತದೆ,” NW]; ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ [“ಮಾಡುತ್ತಾ ಇರಿ,” NW] ಅಂದನು. ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು​—ಈ ಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ; ನೀವು ಇದರಲ್ಲಿ ಪಾನಮಾಡುವಾಗೆಲ್ಲಾ ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಪಾನಮಾಡಿರಿ [“ಇದನ್ನು ಮಾಡುತ್ತಾ ಇರಿ,” NW] ಅಂದನು.”​—1 ಕೊರಿಂಥ 11:23-25.

4. ಕ್ರೈಸ್ತರು ಕರ್ತನ ಸಂಧ್ಯಾ ಭೋಜನವನ್ನು ಏಕೆ ಆಚರಿಸಬೇಕು?

4 “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ [“ಮಾಡುತ್ತಾ ಇರಿ,” NW]” ಎಂದು ಯೇಸು ಆಜ್ಞಾಪಿಸಿದನೆಂಬದನ್ನು ಸುವಾರ್ತಾ ಲೇಖಕನಾದ ಲೂಕನು ದೃಢೀಕರಿಸುತ್ತಾನೆ. (ಲೂಕ 22:19) ಈ ಮಾತುಗಳನ್ನು ಹೀಗೂ ಭಾಷಾಂತರಿಸಲಾಗಿದೆ: “ನನ್ನ ಸ್ಮರಣೆಯಲ್ಲಿ ಇದನ್ನು ಮಾಡಿರಿ” (ಟುಡೇಸ್‌ ಇಂಗ್ಲಿಷ್‌ ವರ್ಷನ್‌) ಮತ್ತು “ನನ್ನ ಜ್ಞಾಪಕಾರ್ಥವಾಗಿ ಇದನ್ನು ಮಾಡಿರಿ.” (ದ ಜೆರೂಸಲೇಮ್‌ ಬೈಬಲ್‌) ವಾಸ್ತವದಲ್ಲಿ ಈ ಆಚರಣೆಯನ್ನು ಹೆಚ್ಚಾಗಿ ಕ್ರಿಸ್ತನ ಮರಣದ ಜ್ಞಾಪಕವೆಂದು ಕರೆಯಲಾಗುತ್ತದೆ. ಪೌಲನು ಇದನ್ನು ಕರ್ತನ ಸಂಧ್ಯಾ ಭೋಜನ ಎಂದೂ ಕರೆಯುತ್ತಾನೆ. ಇದೊಂದು ಸೂಕ್ತವಾದ ಹೆಸರಾಗಿದೆ, ಏಕೆಂದರೆ ಇದನ್ನು ರಾತ್ರಿ ಸಮಯದಲ್ಲಿ ಆರಂಭಿಸಲಾಗಿತ್ತು. (1 ಕೊರಿಂಥ 11:20) ಕ್ರೈಸ್ತರಿಗೆ ಕರ್ತನ ಸಂಧ್ಯಾ ಭೋಜನವನ್ನು ಆಚರಿಸುವಂತೆ ಆಜ್ಞಾಪಿಸಲಾಗಿದೆ. ಆದರೆ ಈ ಆಚರಣೆಯನ್ನು ಏಕೆ ಸ್ಥಾಪಿಸಲಾಯಿತು?

ಅದನ್ನು ಏಕೆ ಆರಂಭಿಸಲಾಯಿತು?

5, 6. (ಎ) ಯೇಸು ಜ್ಞಾಪಕಾಚರಣೆಯನ್ನು ಸ್ಥಾಪಿಸಲು ಒಂದು ಕಾರಣವೇನಾಗಿತ್ತು? (ಬಿ) ಕರ್ತನ ಸಂಧ್ಯಾ ಭೋಜನವು ಸ್ಥಾಪಿಸಲ್ಪಡಲು ಇನ್ನೊಂದು ಕಾರಣವನ್ನು ತಿಳಿಸಿರಿ.

5 ಜ್ಞಾಪಕಾಚರಣೆಯನ್ನು ಸ್ಥಾಪಿಸಲಿಕ್ಕಾಗಿದ್ದ ಒಂದು ಕಾರಣವು, ಯೇಸುವಿನ ಮರಣದಿಂದ ಪೂರೈಸಲ್ಪಟ್ಟ ಒಂದು ಉದ್ದೇಶದೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಅವನು ತನ್ನ ಸ್ವರ್ಗೀಯ ತಂದೆಯ ಪರಮಾಧಿಕಾರದ ಸಮರ್ಥಕನಾಗಿ ಪ್ರಾಣಬಿಟ್ಟನು. ಹೀಗೆ, ಮನುಷ್ಯರು ದೇವರನ್ನು ಕೇವಲ ಸ್ವಾರ್ಥ ಉದ್ದೇಶಗಳಿಂದಾಗಿ ಸೇವಿಸುತ್ತಾರೆಂಬ ತಪ್ಪಾರೋಪವನ್ನು ಹೊರಿಸಿದ್ದ ಪಿಶಾಚನಾದ ಸೈತಾನನು ಒಬ್ಬ ಸುಳ್ಳುಗಾರನಾಗಿದ್ದಾನೆಂದು ಕ್ರಿಸ್ತನು ರುಜುಪಡಿಸಿದನು. (ಯೋಬ 2:​1-5) ಯೇಸುವಿನ ನಂಬಿಗಸ್ತಿಕೆಯ ಮರಣವು, ಸೈತಾನನ ಈ ಹೇಳಿಕೆಯು ಸುಳ್ಳಾಗಿದೆಯೆಂಬದನ್ನು ರುಜುಪಡಿಸಿ, ಯೆಹೋವನ ಮನಸ್ಸನ್ನು ಸಂತೋಷಪಡಿಸಿತು.​—ಜ್ಞಾನೋಕ್ತಿ 27:11.

6 ಕರ್ತನ ಸಂಧ್ಯಾ ಭೋಜನವು ಸ್ಥಾಪಿಸಲ್ಪಡಲು ಇನ್ನೊಂದು ಕಾರಣವೇನೆಂದರೆ, ಒಬ್ಬ ಪರಿಪೂರ್ಣ, ಪಾಪರಹಿತ ಮಾನವನೋಪಾದಿ ತನ್ನ ಮರಣದ ಮುಖಾಂತರ ಯೇಸು ‘ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು ಕೊಟ್ಟನು’ ಎಂಬದನ್ನು ನಮಗೆ ಜ್ಞಾಪಕ ಹುಟ್ಟಿಸುವುದೇ ಆಗಿತ್ತು. (ಮತ್ತಾಯ 20:28) ಪ್ರಥಮ ಮನುಷ್ಯನು ದೇವರ ವಿರುದ್ಧ ಪಾಪಮಾಡಿದಾಗ, ಅವನು ಪರಿಪೂರ್ಣ ಮಾನವ ಜೀವವನ್ನೂ ಅದರೊಂದಿಗೆ ಬರುವಂಥ ಎಲ್ಲಾ ಪ್ರತೀಕ್ಷೆಗಳನ್ನೂ ಕಳೆದುಕೊಂಡನು. ಆದರೆ ಯೇಸು ಹೇಳಿದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಹೌದು, “ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.” (ರೋಮಾಪುರ 6:23) ಕರ್ತನ ಸಂಧ್ಯಾ ಭೋಜನದ ಆಚರಣೆಯು, ಯೆಹೋವನೂ ಆತನ ಮಗನೂ, ಯೇಸುವಿನ ಯಜ್ಞಾರ್ಪಿತ ಮರಣದ ಮುಖಾಂತರ ತೋರಿಸಿದಂಥ ಮಹಾ ಪ್ರೀತಿಯನ್ನು ನಮ್ಮ ನೆನಪಿಗೆ ತರುತ್ತದೆ. ಆ ಪ್ರೀತಿಯನ್ನು ನಾವೆಷ್ಟು ಗಣ್ಯಮಾಡಬೇಕು!

ಅದನ್ನು ಯಾವಾಗ ಆಚರಿಸಬೇಕು?

7. ಅಭಿಷಿಕ್ತ ಕ್ರೈಸ್ತರು ಜ್ಞಾಪಕದ ಕುರುಹುಗಳನ್ನು ಸೇವಿಸುವಷ್ಟು ಸಾರಿ ಕರ್ತನ ಮರಣವನ್ನು ಪ್ರಸಿದ್ಧಪಡಿಸುವುದು ಹೇಗೆ?

7 ಕರ್ತನ ಸಂಧ್ಯಾ ಭೋಜನದ ಕುರಿತಾಗಿ ಪೌಲನು ಹೇಳಿದ್ದು: “ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.” (1 ಕೊರಿಂಥ 11:26) ಅಭಿಷಿಕ್ತ ಕ್ರೈಸ್ತರಲ್ಲಿ ಪ್ರತಿಯೊಬ್ಬರು ತಮ್ಮ ಮರಣ ಪರ್ಯಂತ ಜ್ಞಾಪಕದ ಕುರುಹುಗಳಲ್ಲಿ ಪಾಲ್ಗೊಳ್ಳುವರು. ಹೀಗೆ ಅವರು ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ದೇವರ ಒದಗಿಸುವಿಕೆಯಲ್ಲಿ ತಮಗಿರುವ ನಂಬಿಕೆಯನ್ನು, ಯೆಹೋವ ದೇವರ ಮತ್ತು ಲೋಕದ ಸಮ್ಮುಖದಲ್ಲಿ ಪದೇ ಪದೇ ಪ್ರಸಿದ್ಧಪಡಿಸುವರು.

8. ಅಭಿಷಿಕ್ತ ಜನರ ಸಮೂಹದವರು, ಎಷ್ಟರ ತನಕ ಕರ್ತನ ಸಂಧ್ಯಾ ಭೋಜನವನ್ನು ಆಚರಿಸುವರು?

8 ಅಭಿಷಿಕ್ತ ಕ್ರೈಸ್ತರ ಸಮೂಹದವರು, ಕ್ರಿಸ್ತನ ಮರಣದ ಜ್ಞಾಪಕವನ್ನು ಎಷ್ಟರ ತನಕ ಆಚರಿಸುವರು? “ಆತನು ಬರುವ ತನಕ” ಎಂದು ಪೌಲನು ಹೇಳಿದನು. ಇದರರ್ಥ, ಯೇಸುವಿನ ‘ಪ್ರತ್ಯಕ್ಷತೆಯ’ ಅವಧಿಯಲ್ಲಿ, ಪುನರುತ್ಥಾನದ ಮೂಲಕ ತನ್ನ ಅಭಿಷಿಕ್ತ ಹಿಂಬಾಲಕರನ್ನು ಸ್ವರ್ಗಕ್ಕೆ ಕೊಂಡೊಯ್ಯಲು ಅವನು ಬರುವ ತನಕ ಈ ಆಚರಣೆಗಳು ಮುಂದುವರಿಯುವವು ಎಂಬುದು ಸುವ್ಯಕ್ತ. (1 ಥೆಸಲೊನೀಕ 4:​14-17) ಇದು ಯೇಸು ತನ್ನ 11 ಮಂದಿ ನಿಷ್ಠಾವಂತ ಅಪೊಸ್ತಲರಿಗೆ ಹೇಳಿದ ಈ ಮಾತುಗಳೊಂದಿಗೆ ಹೊಂದಿಕೆಯಲ್ಲಿದೆ: “ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧಮಾಡಿದ ಮೇಲೆ ತಿರಿಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಯಾಕಂದರೆ ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು.”​—ಯೋಹಾನ 14:3.

9. ಮಾರ್ಕ 14:25ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳ ಅರ್ಥವೇನು?

9 ಯೇಸು ಜ್ಞಾಪಕವನ್ನು ಸ್ಥಾಪಿಸಿದಾಗ, ದ್ರಾಕ್ಷಾಮದ್ಯದ ಪಾತ್ರೆಗೆ ಸೂಚಿಸುತ್ತಾ ತನ್ನ ನಂಬಿಗಸ್ತ ಅಪೊಸ್ತಲರಿಗೆ ಹೀಗಂದನು: “ನಾನು ದೇವರ ರಾಜ್ಯದಲ್ಲಿ ದ್ರಾಕ್ಷಾರಸವನ್ನು [“ದ್ರಾಕ್ಷಾಮದ್ಯವನ್ನು,” NW] ಹೊಸದಾಗಿ ಕುಡಿಯುವ ದಿನದ ವರೆಗೂ ಅದನ್ನು ಇನ್ನು ಕುಡಿಯುವದೇ ಇಲ್ಲ.” (ಮಾರ್ಕ 14:25) ಯೇಸು ಪರಲೋಕದಲ್ಲಿ ಅಕ್ಷರಶಃವಾದ ದ್ರಾಕ್ಷಾಮದ್ಯವನ್ನು ಕುಡಿಯದಿರುವ ಕಾರಣ, ಅವನು ಹೀಗಂದಾಗ ದ್ರಾಕ್ಷಾಮದ್ಯದಿಂದ ಕೆಲವೊಮ್ಮೆ ಸಾಂಕೇತಿಸಲ್ಪಟ್ಟಿರುವ ಆನಂದವು ಅವನ ಮನಸ್ಸಿನಲ್ಲಿದ್ದಿರಬೇಕು. (ಕೀರ್ತನೆ 104:15; ಪ್ರಸಂಗಿ 10:19) ರಾಜ್ಯದಲ್ಲಿ ಒಟ್ಟಿಗಿರುವುದು, ಅವನು ಮತ್ತು ಅವನ ನಿಕಟ ಹಿಂಬಾಲಕರು ಅತ್ಯುತ್ಸುಕತೆಯ ಹಂಬಲದೊಂದಿಗೆ ಎದುರುನೋಡಿರುವ ಒಂದು ಆನಂದಮಯ ಅನುಭವವಾಗಿರುವುದು.​—ರೋಮಾಪರ 6:23; 2 ಕೊರಿಂಥ 5:2.

10. ಜ್ಞಾಪಕಾಚರಣೆಯನ್ನು ಎಷ್ಟು ಸಾರಿ ಆಚರಿಸಬೇಕು?

10 ಯೇಸುವಿನ ಮರಣದ ಸ್ಮಾರಕೋತ್ಸವವನ್ನು ಪ್ರತಿ ತಿಂಗಳು, ಪ್ರತಿ ವಾರ, ಇಲ್ಲವೆ ಪ್ರತಿ ದಿನವೂ ಆಚರಿಸಬೇಕೊ? ಇಲ್ಲ. ಯೇಸುವು ಕರ್ತನ ಸಂಧ್ಯಾ ಭೋಜನವನ್ನು ಸ್ಥಾಪಿಸಿದ ಮತ್ತು ಅವನು ಕೊಲ್ಲಲ್ಪಟ್ಟ ದಿನವು ಪಸ್ಕಹಬ್ಬದ ದಿನವಾಗಿತ್ತು. ಮತ್ತು ಈ ಪಸ್ಕಹಬ್ಬವನ್ನು, ಸಾ.ಶ.ಪೂ. 1513ರಲ್ಲಿ ಐಗುಪ್ತದ ದಾಸತ್ವದಿಂದಾದ ಇಸ್ರಾಯೇಲ್ಯರ ಬಿಡುಗಡೆಯ “ಜ್ಞಾಪಕಾರ್ಥವಾಗಿ” ಆಚರಿಸಲಾಗುತ್ತಿತ್ತು. (ವಿಮೋಚನಕಾಂಡ 12:14) ಪಸ್ಕಹಬ್ಬವನ್ನು ವರ್ಷದಲ್ಲಿ ಕೇವಲ ಒಮ್ಮೆ, ಅಂದರೆ ನೈಸಾನ್‌ ಎಂಬ ಯೆಹೂದಿ ತಿಂಗಳ 14ನೆಯ ದಿನದಂದು ಆಚರಿಸಲಾಗುತ್ತಿತ್ತು. (ವಿಮೋಚನಕಾಂಡ 12:​1-6; ಯಾಜಕಕಾಂಡ 23:5) ಯೇಸುವಿನ ಮರಣದ ಸ್ಮಾರಕೋತ್ಸವವನ್ನು ಸಹ ಪಸ್ಕಹಬ್ಬದಷ್ಟೇ ಸಾರಿ ಅಂದರೆ ಕೇವಲ ವರ್ಷಕ್ಕೊಮ್ಮೆ ಮಾತ್ರ ಆಚರಿಸಬೇಕು, ಪ್ರತಿ ತಿಂಗಳು, ಪ್ರತಿ ವಾರ ಇಲ್ಲವೆ ಪ್ರತಿ ದಿನವಲ್ಲ ಎಂಬುದನ್ನು ಇದು ಸೂಚಿಸುತ್ತದೆ.

11, 12. ಆದಿಕಾಲದ ಜ್ಞಾಪಕಾಚರಣೆಗಳ ಕುರಿತಾಗಿ ಇತಿಹಾಸವು ಏನನ್ನು ಪ್ರಕಟಪಡಿಸುತ್ತದೆ?

11 ಹಾಗಾದರೆ ಜ್ಞಾಪಕವನ್ನು ನೈಸಾನ್‌ 14ರಂದು ವರ್ಷಕ್ಕೊಮ್ಮೆ ಮಾತ್ರ ಆಚರಿಸುವುದು ಸೂಕ್ತವಾಗಿದೆ. ಒಂದು ಕೃತಿಯು ಹೀಗನ್ನುತ್ತದೆ: “ಏಷಿಯಾ ಮೈನರ್‌ನ ಕ್ರೈಸ್ತರನ್ನು ಕ್ವಾರ್ಟೊಡೆಸೆಮನ್ಸ್‌ [ಹದಿನಾಲ್ಕರವರು] ಎಂದು ಕರೆಯಲಾಗುತ್ತಿತ್ತು. ಇದು ಏಕೆಂದರೆ, ಪಾಸ್ಕಾವನ್ನು [ಕರ್ತನ ಸಂಧ್ಯಾ ಭೋಜನವನ್ನು] ಯಾವುದೇ ಬದಲಾವಣೆಯಿಲ್ಲದೆ, ನೈಸಾನ್‌ 14ರಂದೇ ಆಚರಿಸುವ ಪದ್ಧತಿ ಅವರಿಗಿತ್ತು . . . ಆ ತಾರೀಖು ಶುಕ್ರವಾರ ಇಲ್ಲವೆ ವಾರದ ಬೇರಾವುದೇ ದಿನವೂ ಬರಸಾಧ್ಯವಿತ್ತು.”​—ದ ನ್ಯೂ ಶ್ಯಾಫ್‌-ಹರ್ಟ್‌ಸೋಗ್‌ ಎನ್‌ಸೈಕ್ಲಪೀಡಿಯ ಆಫ್‌ ರಿಲಿಜಸ್‌ ನಾಲೆಜ್‌, ಸಂಪುಟ IV, ಪುಟ 44.

12 ಸಾ.ಶ. ಎರಡನೆಯ ಶತಮಾನದ ಈ ಆಚರಣೆಯ ಕುರಿತಾಗಿ ಹೇಳುತ್ತಾ ಇತಿಹಾಸಕಾರ ಜೆ. ಎಲ್‌. ವಾನ್‌ ಮೋಶೈಮ್‌ ತಿಳಿಸುವುದೇನೆಂದರೆ, ಕ್ವಾರ್ಟೊಡೆಸೆಮನ್ಸರು “ಕ್ರಿಸ್ತನ ಮಾದರಿಯನ್ನು ಒಂದು ನಿಯಮದಷ್ಟೇ ಅಧಿಕಾರವುಳ್ಳದ್ದಾಗಿ ಪರಿಗಣಿಸುತ್ತಿದ್ದ” ಕಾರಣದಿಂದಲೇ ಜ್ಞಾಪಕವನ್ನು ನೈಸಾನ್‌ 14ರಂದು ಆಚರಿಸುತ್ತಿದ್ದರು. ಇನ್ನೊಬ್ಬ ಇತಿಹಾಸಕಾರನು ತಿಳಿಸಿದ್ದು: “ಏಷಿಯಾದಲ್ಲಿರುವ ಕ್ವಾರ್ಟೊಡೆಸೆಮನ್‌ ಚರ್ಚುಗಳ ಬಳಕೆಯು, ಜೆರೂಸಲೇಮ್‌ ಚರ್ಚಿನ ಬಳಕೆಗೆ ಹೊಂದಿಕೆಯಲ್ಲಿತ್ತು. 2ನೇ ಶತಮಾನದಲ್ಲಿ ಈ ಚರ್ಚುಗಳು, ನೈಸಾನ್‌ 14ರಂದು ನಡೆಯುವ ಪಾಸ್ಕಾದಂದು, ಕ್ರಿಸ್ತನ ಮರಣದಿಂದ ಜಾರಿಗೆ ಬಂದ ವಿಮೋಚನೆಯನ್ನು ಆಚರಿಸುತ್ತಿದ್ದವು.”​—ಸ್ಟುಡ್ಯಾ ಪಾಟ್ರಿಸ್ಟೀಕಾ, ಸಂಪುಟ V, 1962, ಪುಟ 8.

ರೊಟ್ಟಿಯ ಸೂಚಿತಾರ್ಥ

13. ಕರ್ತನ ಸಂಧ್ಯಾ ಭೋಜನವನ್ನು ಸ್ಥಾಪಿಸುವಾಗ ಯೇಸು ಯಾವ ರೀತಿಯ ರೊಟ್ಟಿಯನ್ನು ಉಪಯೋಗಿಸಿದನು?

13 ಯೇಸು ಜ್ಞಾಪಕವನ್ನು ಸ್ಥಾಪಿಸಿದಾಗ, ‘ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು [ಅಪೊಸ್ತಲರಿಗೆ] ಕೊಟ್ಟನು.’ (ಮಾರ್ಕ 14:22) ಆ ಸಂದರ್ಭದಲ್ಲಿ ಲಭ್ಯವಿದ್ದ ರೊಟ್ಟಿಯು, ಆಗತಾನೇ ಪಸ್ಕಕ್ಕಾಗಿ ಬಳಸಲಾಗಿದ್ದ ರೊಟ್ಟಿಯಾಗಿತ್ತು. (ವಿಮೋಚನಕಾಂಡ 13:​6-10) ಹುಳಿಯನ್ನು ಬೆರಸದೇ ತಯಾರಿಸಲ್ಪಟ್ಟದ್ದರಿಂದ ಅದು ಚಪ್ಪಟ್ಟೆಯೂ ಗರಿಗರಿಯೂ ಆಗಿದ್ದು, ಹಂಚಲಿಕ್ಕಾಗಿ ಅದನ್ನು ಮುರಿಯಬೇಕಾಗಿತ್ತು. ಯೇಸು ಸಾವಿರಾರು ಜನರಿಗೆ ಅದ್ಭುತ ರೀತಿಯಲ್ಲಿ ರೊಟ್ಟಿಯನ್ನು ಹೆಚ್ಚಿಸಿದಾಗ, ಅದು ಸಹ ತೆಳುವಾಗಿದ್ದು, ಗರಿಗರಿಯಾಗಿತ್ತೆಂದು ಹೇಳಬಹುದು, ಏಕೆಂದರೆ ಅದನ್ನು ಹಂಚಲಾಗುವಂತೆ ಅವನದನ್ನು ಮುರಿದನು. (ಮತ್ತಾಯ 14:19; 15:36) ಹೀಗಿರುವುದರಿಂದ, ಜ್ಞಾಪಕದ ರೊಟ್ಟಿಯನ್ನು ಮುರಿಯುವ ಕ್ರಿಯೆಗೆ ಯಾವುದೇ ಆತ್ಮಿಕ ಮಹತ್ವಾರ್ಥವಿಲ್ಲ ಎಂಬುದು ಸುವ್ಯಕ್ತ.

14. (ಎ) ಜ್ಞಾಪಕದ ರೊಟ್ಟಿಯು ಹುಳಿಯಿಲ್ಲದ್ದಾಗಿರುವುದು ತಕ್ಕದ್ದಾಗಿದೆ ಏಕೆ? (ಬಿ) ಕರ್ತನ ಸಂಧ್ಯಾ ಭೋಜನದಲ್ಲಿ ಬಳಸಲಿಕ್ಕಾಗಿ ಯಾವ ರೀತಿಯ ರೊಟ್ಟಿಯನ್ನು ಪಡೆದುಕೊಳ್ಳಬಹುದು ಇಲ್ಲವೆ ತಯಾರಿಸಬಹುದು?

14 ಜ್ಞಾಪಕವನ್ನು ಆರಂಭಿಸುತ್ತಿದ್ದಾಗ, ಬಳಸಲ್ಪಟ್ಟ ರೊಟ್ಟಿಯ ಕುರಿತಾಗಿ ಯೇಸು ಹೇಳಿದ್ದು: “ಇದು ನಿಮಗೋಸ್ಕರವಾಗಿರುವ ನನ್ನ ದೇಹವನ್ನು ಸೂಚಿಸುತ್ತದೆ.” (1 ಕೊರಿಂಥ 11:​24, NW; ಮಾರ್ಕ 14:​22) ಅದು ಹುಳಿಯಿಲ್ಲದ ರೊಟ್ಟಿಯಾಗಿದ್ದದ್ದು ತಕ್ಕದ್ದಾಗಿತ್ತು. ಏಕೆ? ಏಕೆಂದರೆ ಹುಳಿಯು ಕೆಟ್ಟತನ, ದುಷ್ಟತನ ಇಲ್ಲವೆ ಪಾಪವನ್ನು ಸೂಚಿಸಬಲ್ಲದು. (1 ಕೊರಿಂಥ 5:​6-8) ಆ ರೊಟ್ಟಿಯು ಯೇಸುವಿನ ಪರಿಪೂರ್ಣ, ಪಾಪರಹಿತ ಮಾನವ ದೇಹವನ್ನು ಪ್ರತಿನಿಧಿಸಿತು, ಮತ್ತು ಇದು ಪ್ರಾಯಶ್ಚಿತ್ತ ಯಜ್ಞದೋಪಾದಿ ಅರ್ಪಿಸಲ್ಪಟ್ಟದ್ದು ತಕ್ಕದ್ದಾಗಿತ್ತು. (ಇಬ್ರಿಯ 7:26; 10:​5-10) ಯೆಹೋವನ ಸಾಕ್ಷಿಗಳು ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ಜ್ಞಾಪಕಾಚರಣೆಗಳಲ್ಲಿ ಹುಳಿಯಿಲ್ಲದ ರೊಟ್ಟಿಯನ್ನು ಉಪಯೋಗಿಸುವ ಮೂಲಕ ಯೇಸು ಇಟ್ಟಂಥ ಮಾದರಿಯನ್ನು ಅನುಸರಿಸುತ್ತಾರೆ. ಕೆಲವೊಂದು ಕಡೆಗಳಲ್ಲಿ, ಈರುಳ್ಳಿ ಇಲ್ಲವೆ ಮೊಟ್ಟೆಗಳಂಥ ಹೆಚ್ಚಿನ ಪದಾರ್ಥಗಳು ಹಾಕಲ್ಪಟ್ಟಿರದ, ಯೆಹೂದ್ಯರು ಬಳಸುವಂಥ ಹುಳಿಯಿಲ್ಲದ ಗರಿಗರಿಯಾದ ಬಿಸ್ಕತ್ತುಗಳನ್ನು ಬಳಸುತ್ತಾರೆ. ಇಲ್ಲದಿದ್ದಲ್ಲಿ, ಸ್ವಲ್ಪ ಪ್ರಮಾಣದ ಹಿಟ್ಟನ್ನು (ಸಾಧ್ಯವಿರುವಲ್ಲಿ ಗೋಧಿ ಹಿಟ್ಟನ್ನು) ಸ್ವಲ್ಪ ನೀರಿನೊಂದಿಗೆ ಬೆರೆಸಿ ಹುಳಿಯಿಲ್ಲದ ರೊಟ್ಟಿಯನ್ನು ತಯಾರಿಸಬಹುದು. ಕಣಕವನ್ನು ತೆಳುವಾಗಿ ಲಟಿಸಿ, ಅದು ಗರಿಗರಿಯಾಗುವ ವರೆಗೆ ಸ್ವಲ್ಪ ಎಣ್ಣೆ ಲೇಪವಿರುವ ಕಾವಲಿಯಲ್ಲಿ ಅದನ್ನು ಸುಡಬೇಕು.

ದ್ರಾಕ್ಷಾಮದ್ಯದ ಸೂಚಿತಾರ್ಥ

15. ಕ್ರಿಸ್ತನು ತನ್ನ ಮರಣದ ಜ್ಞಾಪಕವನ್ನು ಸ್ಥಾಪಿಸುತ್ತಿದ್ದಾಗ ಆ ಪಾತ್ರೆಯಲ್ಲಿ ಏನಿತ್ತು?

15 ಹುಳಿಯಿಲ್ಲದ ರೊಟ್ಟಿಯನ್ನು ಹಂಚಿದ ನಂತರ, ಯೇಸು ಒಂದು ಪಾತ್ರೆಯನ್ನು ತೆಗೆದುಕೊಂಡು “ಸ್ತೋತ್ರಮಾಡಿ [ಅಪೊಸ್ತಲರಿಗೆ] ಕೊಟ್ಟನು; ಅವರೆಲ್ಲರೂ ಅದರಲ್ಲಿ ಕುಡಿದರು.” ಯೇಸು ವಿವರಿಸುತ್ತಾ ಹೇಳಿದ್ದು: “ಇದು ನನ್ನ ರಕ್ತ [“ರಕ್ತವನ್ನು ಸೂಚಿಸುತ್ತದೆ,” NW], ಇದು ಒಡಂಬಡಿಕೆಯ ರಕ್ತ; ಇದು ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ.” (ಮಾರ್ಕ 14:​23, 24) ಆ ಪಾತ್ರೆಯಲ್ಲಿ ಏನಿತ್ತು? ಹುಳಿಹಿಡಿಸದ ದ್ರಾಕ್ಷಾರಸವಲ್ಲ, ಬದಲಾಗಿ ಹುಳಿಹಿಡಿದಿರುವ ದ್ರಾಕ್ಷಾಮದ್ಯವೇ. ಕನ್ನಡ ಬೈಬಲಿನಲ್ಲಿ ದ್ರಾಕ್ಷಾರಸವೆಂದು ಹೇಳಲ್ಪಟ್ಟಾಗಲೆಲ್ಲಾ, ಅದು ದ್ರಾಕ್ಷೆ ಹಣ್ಣಿನ ಹುಳಿಹಿಡಿಯದಿರುವಂಥ ರಸವನ್ನಲ್ಲ, ಬದಲಾಗಿ ದ್ರಾಕ್ಷಾಮದ್ಯವನ್ನು ಸೂಚಿಸುತ್ತದೆ. ಉದಾಹರಣೆಗೆ, ಯೇಸು ಹೇಳಿದಂತೆ ‘ಹಳೆಯ ಬುದ್ದಲಿಗಳನ್ನು’ ಒಡೆಯುವಂಥದ್ದು, ಹುಳಿಹಿಡಿಸಿದ ದ್ರಾಕ್ಷಾಮದ್ಯವೇ ಹೊರತು ಬರಿಯ ದ್ರಾಕ್ಷಾರಸವಲ್ಲ. ಮತ್ತು ಒಂದು ಮದುವೆ ಔತಣದಲ್ಲಿ ಯೇಸು ಅದ್ಭುತ ರೀತಿಯಲ್ಲಿ ನೀರನ್ನು ದ್ರಾಕ್ಷಾಮದ್ಯವಾಗಿ ಪರಿವರ್ತಿಸಿದಾಗ, ಔತಣದ ಪಾರುಪತ್ಯಗಾರನು ಮದಲಿಂಗನಿಗೆ ಹೀಗಂದನು: “ಎಲ್ಲರು ಹಿರಿದಿನ ದ್ರಾಕ್ಷಾರಸವನ್ನು [“ದ್ರಾಕ್ಷಾಮದ್ಯವನ್ನು,” NW] ಮೊದಲು ಕೊಟ್ಟು ಅಮಲೇರಿದ ಮೇಲೆ ಕಿರಿದಿನ ದ್ರಾಕ್ಷಾರಸವನ್ನು [“ದ್ರಾಕ್ಷಾಮದ್ಯವನ್ನು,” NW] ಕೊಡುತ್ತಾರೆ; ನೀನು ಹಿರಿದಿನ ದ್ರಾಕ್ಷಾರಸವನ್ನು [“ದ್ರಾಕ್ಷಾಮದ್ಯವನ್ನು,” NW] ಇದುವರೆಗೂ ಇಟ್ಟುಕೊಂಡಿದ್ದೀ.” (ಮತ್ತಾಯ 9:17; ಯೋಹಾನ 2:10) ಪಸ್ಕದ ಆಚರಣೆಯ ಸಮಯದಲ್ಲಿ ದ್ರಾಕ್ಷಾಮದ್ಯವನ್ನು ಕುಡಿಯಲಾಗಿತ್ತು, ಮತ್ತು ಕ್ರಿಸ್ತನು ತನ್ನ ಮರಣದ ಜ್ಞಾಪಕವನ್ನು ಸ್ಥಾಪಿಸುತ್ತಿದ್ದಾಗ ಅದನ್ನೇ ಉಪಯೋಗಿಸಿದನು.

16, 17. ಜ್ಞಾಪಕಾಚರಣೆಗಳಿಗಾಗಿ ಯಾವ ವಿಧದ ದ್ರಾಕ್ಷಾಮದ್ಯವು ತಕ್ಕದ್ದಾಗಿದೆ, ಮತ್ತು ಏಕೆ?

16 ಆ ಪಾತ್ರೆಯಲ್ಲಿದ್ದ ಪದಾರ್ಥವು ಪ್ರತಿನಿಧಿಸುತ್ತಿದ್ದಂಥ ಯೇಸುವಿನ ಸುರಿಸಲ್ಪಟ್ಟ ರಕ್ತಕ್ಕೆ, ಕೇವಲ ಕೆಂಪು ದ್ರಾಕ್ಷಾಮದ್ಯವು ಸೂಕ್ತವಾದ ಪ್ರತೀಕವಾಗಿದೆ. ಯೇಸು ತಾನೇ ಹೇಳಿದ್ದು: “ಇದು ನನ್ನ ರಕ್ತ [“ರಕ್ತವನ್ನು ಸೂಚಿಸುತ್ತದೆ,” NW], ಇದು ಒಡಂಬಡಿಕೆಯ ರಕ್ತ; ಇದು ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ.” ಮತ್ತು ಅಪೊಸ್ತಲ ಪೇತ್ರನು ಬರೆದುದು: “ನಿಮ್ಮ ಹಿರಿಯರು ಕಲಿಸಿಕೊಟ್ಟ ವ್ಯರ್ಥವಾದ ನಡವಳಿಕೆಯಿಂದ ನಿಮಗೆ [ಅಭಿಷಿಕ್ತ ಕ್ರೈಸ್ತರಿಗೆ] ಬಿಡುಗಡೆಯಾದದ್ದು ಬೆಳ್ಳಿ ಭಂಗಾರ ಮೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ. ಪೂರ್ಣಾಂಗವಾದ ನಿಷ್ಕಳಂಕ ಯಜ್ಞದ ಕುರಿಯ ರಕ್ತದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಎಂದು ಬಲ್ಲಿರಲ್ಲವೇ.”​—1 ಪೇತ್ರ 1:18, 19.

17 ಜ್ಞಾಪಕವನ್ನು ಸ್ಥಾಪಿಸುತ್ತಿದ್ದಾಗ ಯೇಸು ಕೆಂಪು ದ್ರಾಕ್ಷಾಮದ್ಯವನ್ನು ಬಳಸಿದನೆಂಬುದು ನಿಸ್ಸಂದೇಹ. ಆದರೆ ಇಂದಿನ ಕೆಲವೊಂದು ಕೆಂಪು ದ್ರಾಕ್ಷಾಮದ್ಯಗಳು ಆ ರೀತಿಯದ್ದಾಗಿರುವುದಿಲ್ಲ. ಏಕೆಂದರೆ ಅವುಗಳಿಗೆ ಮದ್ಯಸಾರವನ್ನು ಸೇರಿಸಿ ಅದನ್ನು ಬಲಪಡಿಸಲಾಗುತ್ತದೆ ಅಥವಾ ಅವುಗಳಿಗೆ ಗಿಡಮೂಲಿಕೆಗಳು ಮತ್ತು ಸಂಬಾರ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಯೇಸುವಿನ ರಕ್ತವು ಸಂಪೂರ್ಣ ರೀತಿಯಲ್ಲಿ ತೃಪ್ತಿದಾಯಕವಾಗಿದ್ದು, ಅದಕ್ಕೆ ಏನನ್ನೂ ಸೇರಿಸುವ ಅಗತ್ಯವಿರಲಿಲ್ಲ. ಹೀಗಿರುವುದರಿಂದ, ಪೋರ್ಟ್‌, ಶೆರಿ ಮತ್ತು ವರ್ಮೌತ್‌ನಂಥ ವೈನುಗಳು ತಕ್ಕದ್ದಾಗಿರುವುದಿಲ್ಲ. ಜ್ಞಾಪಕಕ್ಕಾಗಿ ಬಳಸಲ್ಪಡುವ ಪಾತ್ರೆಯಲ್ಲಿ, ಸಿಹಿಯಾಗಿರದ ಮತ್ತು ಮದ್ಯಸಾರವನ್ನು ಸೇರಿಸುವ ಮೂಲಕ ಬಲಪಡಿಸಲ್ಪಟ್ಟಿರದ ಕೆಂಪು ದ್ರಾಕ್ಷಾಮದ್ಯ ಇರಬೇಕು. ಮನೆಯಲ್ಲಿ ತಯಾರಿಸಲ್ಪಟ್ಟಿರುವ ಸಿಹಿಯಾಗಿರದ ಕೆಂಪು ದ್ರಾಕ್ಷಾಮದ್ಯವನ್ನು ಮತ್ತು ರೆಡ್‌ ಬರ್ಗಂಡಿ ಹಾಗೂ ಕ್ಲ್ಯಾರೆಟ್‌ನಂಥ ವೈನ್‌ಗಳನ್ನು ಉಪಯೋಗಿಸಸಾಧ್ಯವಿದೆ.

18. ಜ್ಞಾಪಕದ ರೊಟ್ಟಿ ಮತ್ತು ದ್ರಾಕ್ಷಾಮದ್ಯದ ಸಂಬಂಧದಲ್ಲಿ ಯೇಸು ಒಂದು ಅದ್ಭುತವನ್ನು ಏಕೆ ನಡೆಸಲಿಲ್ಲ?

18 ಈ ಭೋಜನವನ್ನು ಸ್ಥಾಪಿಸುತ್ತಿದ್ದಾಗ ಯೇಸು ಒಂದು ಅದ್ಭುತವನ್ನು ನಡೆಸಿ, ಆ ಕುರುಹುಗಳನ್ನು ನಿಜವಾಗಿ ತನ್ನ ಮಾಂಸ ಹಾಗೂ ರಕ್ತವನ್ನಾಗಿ ಪರಿವರ್ತಿಸಲಿಲ್ಲ. ಏಕೆಂದರೆ ಮಾನವ ಮಾಂಸವನ್ನು ತಿನ್ನುವುದು ಮತ್ತು ರಕ್ತವನ್ನು ಕುಡಿಯುವುದು, ನರಭಕ್ಷಣೆಯಾಗಿರುವುದು ಅಂದರೆ ದೇವರ ನಿಯಮದ ಉಲ್ಲಂಘನೆಯಾಗಿರುವುದು. (ಆದಿಕಾಂಡ 9:​3, 4; ಯಾಜಕಕಾಂಡ 17:10) ಆ ಸಾಯಂಕಾಲದಂದು, ಯೇಸುವಿನ ಬಳಿ ಅವನ ಇಡೀ ದೇಹ ಮತ್ತು ಎಲ್ಲಾ ರಕ್ತವಿತ್ತು. ಏಕೆಂದರೆ ನೈಸಾನ್‌ 14ರ ಅದೇ ಯೆಹೂದಿ ದಿನದ ಮುಂದಿನ ಮಧ್ಯಾಹ್ನದಂದು ಅವನ ದೇಹವನ್ನು ಒಂದು ಪರಿಪೂರ್ಣ ಯಜ್ಞವಾಗಿ ಅರ್ಪಿಸಲಾಯಿತು ಮತ್ತು ರಕ್ತವನ್ನು ಸುರಿಸಲಾಯಿತು. ಹೀಗಿರುವುದರಿಂದ, ಜ್ಞಾಪಕದ ಆ ರೊಟ್ಟಿ ಮತ್ತು ದ್ರಾಕ್ಷಾಮದ್ಯವು ಕ್ರಿಸ್ತನ ರಕ್ತಮಾಂಸವನ್ನು ಕೇವಲ ಪ್ರತಿನಿಧಿಸುತ್ತಿದ್ದು, ಸಾಂಕೇತಿಕ ಅರ್ಥವುಳ್ಳದ್ದಾಗಿದೆಯಷ್ಟೆ. *

ಜ್ಞಾಪಕ​—ಸಹಭಾಗಿ ಭೋಜನ

19. ಕರ್ತನ ಸಂಧ್ಯಾ ಭೋಜನದ ಆಚರಣೆಯಲ್ಲಿ ಒಂದಕ್ಕಿಂತಲೂ ಹೆಚ್ಚು ಪ್ಲೇಟ್‌ ಹಾಗೂ ಗ್ಲಾಸ್‌ಗಳನ್ನು ಏಕೆ ಉಪಯೋಗಿಸಸಾಧ್ಯವಿದೆ?

19 ಯೇಸು ಜ್ಞಾಪಕವನ್ನು ಸ್ಥಾಪಿಸಿದಾಗ, ಅವನು ತನ್ನ ನಂಬಿಗಸ್ತ ಅಪೊಸ್ತಲರಿಗೆ ಒಂದೇ ಪಾತ್ರೆಯಿಂದ ಕುಡಿಯುವಂತೆ ಆಮಂತ್ರಿಸಿದನು. ಮತ್ತಾಯನ ಸುವಾರ್ತೆಯು ಹೀಗನ್ನುತ್ತದೆ: “ಆ ಮೇಲೆ [ಯೇಸು] ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅವರಿಗೆ ಕೊಟ್ಟು​—ಇದರಲ್ಲಿರುವದನ್ನು ಎಲ್ಲರೂ ಕುಡಿಯಿರಿ” ಎಂದು ಹೇಳಿದನು. (ಮತ್ತಾಯ 26:27) ಹಲವಾರು ಪಾತ್ರೆಗಳನ್ನು ಅಲ್ಲ, ಬದಲಾಗಿ ಕೇವಲ ಒಂದೇ “ಪಾತ್ರೆಯನ್ನು” ಉಪಯೋಗಿಸುವುದು ಒಂದು ಸಮಸ್ಯೆಯಾಗಿರಲಿಲ್ಲ, ಯಾಕೆಂದರೆ ಆ ಸಂದರ್ಭದಲ್ಲಿ ಪಾಲ್ಗೊಳ್ಳುತ್ತಿದ್ದವರು ಕೇವಲ 11 ಮಂದಿ ಆಗಿದ್ದರು ಮತ್ತು ಅವರೆಲ್ಲರೂ ಒಂದೇ ಮೇಜಿನ ಬಳಿ ಕುಳಿತುಕೊಂಡಿದ್ದು, ಅವರು ಒಬ್ಬರು ಇನ್ನೊಬ್ಬರಿಗೆ ಸುಲಭವಾಗಿ ಆ ಪಾತ್ರೆಯನ್ನು ದಾಟಿಸಸಾಧ್ಯವಿತ್ತು. ಈ ವರ್ಷ, ಲೋಕವ್ಯಾಪಕವಾಗಿ ಇರುವ ಯೆಹೋವನ ಸಾಕ್ಷಿಗಳ 94,000ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ ಲಕ್ಷಾಂತರ ಜನರು ಕರ್ತನ ಸಂಧ್ಯಾ ಭೋಜನಕ್ಕಾಗಿ ಕೂಡಿಬರುವರು. ಒಂದೇ ರಾತ್ರಿಯಂದು ಈ ಆಚರಣೆಗಾಗಿ ಇಷ್ಟೊಂದು ಮಂದಿ ಕೂಡಿಬರುತ್ತಿರುವುದರಿಂದ, ಎಲ್ಲರಿಗಾಗಿಯೂ ಒಂದೇ ಗ್ಲಾಸ್‌ ಅನ್ನು ಉಪಯೋಗಿಸಲು ಸಾಧ್ಯವಿಲ್ಲದಿರಬಹುದು. ಆದರೆ ನಿರ್ದಿಷ್ಟ ಸಮಯಾವಧಿಯೊಳಗೆ ಸಭಿಕರಿಗೆಲ್ಲಾ ಅದು ದಾಟಿಸಲ್ಪಡುವಂತೆ ದೊಡ್ಡ ಸಭೆಗಳಲ್ಲಿ ಹಲವಾರು ಗ್ಲಾಸ್‌ಗಳನ್ನು ಉಪಯೋಗಿಸಲಾಗುತ್ತದೆ. ಅದೇ ರೀತಿಯಲ್ಲಿ ರೊಟ್ಟಿಗಾಗಿಯೂ ಒಂದಕ್ಕಿಂತ ಹೆಚ್ಚು ಪ್ಲೇಟ್‌ಗಳನ್ನು ಉಪಯೋಗಿಸಬಹುದು. ಆ ಪಾತ್ರೆ ಇಲ್ಲವೆ ಗ್ಲಾಸ್‌ಗೆ ಇಂಥಿಂಥದ್ದೇ ವಿನ್ಯಾಸ ಇರಬೇಕೆಂದು ಶಾಸ್ತ್ರಗಳಲ್ಲಿ ಎಲ್ಲಿಯೂ ಸೂಚಿಸಲ್ಪಟ್ಟಿಲ್ಲ. ಆದರೆ, ಅದು ಮತ್ತು ಪ್ಲೇಟ್‌ ಸಹ ಆ ಸಂದರ್ಭದ ಘನತೆಗೆ ತಕ್ಕದ್ದಾಗಿರಬೇಕು. ಒಂದು ಗ್ಲಾಸ್‌ ಅನ್ನು ದಾಟಿಸುವಾಗ ಅದರಲ್ಲಿರುವ ದ್ರಾಕ್ಷಾಮದ್ಯವು ಚೆಲ್ಲಿಹೋಗುವಷ್ಟರ ಮಟ್ಟಿಗೆ ಅದನ್ನು ತುಂಬಿಸದೇ ಇರುವುದು ಬುದ್ಧಿವಂತಿಕೆಯ ಸಂಗತಿಯಾಗಿದೆ.

20, 21. ಜ್ಞಾಪಕವು ಒಂದು ಸಹಭಾಗಿ ಭೋಜನವಾಗಿದೆಯೆಂದು ನಾವೇಕೆ ಹೇಳಬಹುದು?

20 ರೊಟ್ಟಿಗಾಗಿ ಒಂದಕ್ಕಿಂತಲೂ ಹೆಚ್ಚು ಪ್ಲೇಟ್‌ಗಳು ಮತ್ತು ದ್ರಾಕ್ಷಾಮದ್ಯಕ್ಕಾಗಿ ಒಂದಕ್ಕಿಂತಲೂ ಹೆಚ್ಚು ಗ್ಲಾಸ್‌ಗಳು ಉಪಯೋಗಿಸಲ್ಪಡುವುದಾದರೂ, ಜ್ಞಾಪಕವು ಒಂದು ಸಹಭಾಗಿ ಭೋಜನವಾಗಿದೆ. * ಪ್ರಾಚೀನ ಇಸ್ರಾಯೇಲಿನಲ್ಲಿ, ಒಬ್ಬ ಮನುಷ್ಯನು ದೇವರ ಆಲಯಕ್ಕೆ ಒಂದು ಪಶುವನ್ನು ತಂದು, ಅಲ್ಲಿ ಅದು ಹತಿಸಲ್ಪಡುವ ಮೂಲಕ ಒಂದು ಸಹಭಾಗಿ ಭೋಜನವನ್ನು ಏರ್ಪಡಿಸಸಾಧ್ಯವಿತ್ತು. ಆ ಪಶುವಿನ ಒಂದು ಭಾಗವನ್ನು ಯಜ್ಞವೇದಿಯ ಮೇಲೆ ಸುಡಲಾಗುತ್ತಿತ್ತು, ಇನ್ನೊಂದು ಭಾಗವು ಅಲ್ಲಿ ಸೇವೆ ಮಾಡುತ್ತಿರುವ ಯಾಜಕನಿಗೆ ಹೋಗುತ್ತಿತ್ತು, ಮತ್ತೊಂದು ಭಾಗವು ಆರೋನನ ಯಾಜಕ ಪುತ್ರರಿಗೆ ಕೊಡಲ್ಪಟ್ಟು, ಆ ಭೋಜನದಲ್ಲಿ ಆ ಯಜ್ಞವನ್ನು ಅರ್ಪಿಸುತ್ತಿದ್ದವನೂ ಅವನ ಕುಟುಂಬವೂ ಪಾಲ್ಗೊಳ್ಳುತ್ತಿತ್ತು. (ಯಾಜಕಕಾಂಡ 3:​1-16; 7:​28-36) ಜ್ಞಾಪಕದಲ್ಲೂ ಪಾಲ್ಗೊಳ್ಳುವಿಕೆಯು ಇರುವುದರಿಂದ, ಅದು ಕೂಡ ಒಂದು ಸಹಭಾಗಿ ಭೋಜನವಾಗುತ್ತದೆ.

21 ಯೆಹೋವನು ಈ ಏರ್ಪಾಡಿನ ಮೂಲಕರ್ತನಾಗಿರುವುದರಿಂದ, ಆತನು ಈ ಸಹಭಾಗಿ ಭೋಜನದಲ್ಲಿ ಒಳಗೂಡಿದ್ದಾನೆ. ಯೇಸು ಆ ಯಜ್ಞವಾಗಿದ್ದಾನೆ, ಮತ್ತು ಅಭಿಷಿಕ್ತ ಕ್ರೈಸ್ತರು ಜೊತೆ ಭಾಗಿಗಳೋಪಾದಿ ಆ ಕುರುಹುಗಳಲ್ಲಿ ಪಾಲ್ಗೊಳ್ಳುತ್ತಾರೆ. ಯೆಹೋವನ ಮೇಜಿನ ಬಳಿ ತಿನ್ನುವುದು, ಕುರುಹುಗಳಲ್ಲಿ ಪಾಲ್ಗೊಳ್ಳುತ್ತಿರುವವರು ಆತನೊಂದಿಗೆ ಸಮಾಧಾನದಿಂದಿದ್ದಾರೆ ಎಂಬದನ್ನು ಸೂಚಿಸುತ್ತದೆ. ಅದಕ್ಕನುಗುಣವಾಗಿ ಪೌಲನು ಬರೆದುದು: “ನಾವು ದೇವಸ್ತೋತ್ರಮಾಡಿ ಪಾತ್ರೆಯಲ್ಲಿ ಪಾನಮಾಡುವದು ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಿದ್ದೇವೆಂಬದನ್ನು ಸೂಚಿಸುತ್ತದಲ್ಲವೇ. ನಾವು ರೊಟ್ಟಿಯನ್ನು ಮುರಿದು ತಿನ್ನುವದು ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗಿದ್ದೇವೆಂಬದನ್ನು ಸೂಚಿಸುತ್ತದಲ್ಲವೇ. ರೊಟ್ಟಿಯು ಒಂದೇಯಾಗಿರುವದರಿಂದ ಅನೇಕರಾಗಿರುವ ನಾವು ಒಂದೇ ದೇಹದಂತಿದ್ದೇವೆ; ಯಾಕಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲುತಕ್ಕೊಂಡು ತಿನ್ನುತ್ತೇವೆ.”​—1 ಕೊರಿಂಥ 10:16, 17.

22. ಜ್ಞಾಪಕದ ಕುರಿತಾದ ಯಾವ ಪ್ರಶ್ನೆಗಳು ಪರಿಗಣಿಸಲಿಕ್ಕಾಗಿ ಉಳಿದಿವೆ?

22 ಕರ್ತನ ಸಂಧ್ಯಾ ಭೋಜನವು, ಯೆಹೋವನ ಸಾಕ್ಷಿಗಳ ನಡುವೆ ಇರುವ ಒಂದೇ ಒಂದು ವಾರ್ಷಿಕ ಧಾರ್ಮಿಕ ಆಚರಣೆಯಾಗಿದೆ. ಇದು ಯಥೋಚಿತವಾಗಿದೆ ಏಕೆಂದರೆ ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” ಜ್ಞಾಪಕದ ಸಮಯದಲ್ಲಿ ನಾವು ಯೇಸುವಿನ ಮರಣದ ಸ್ಮಾರಕೋತ್ಸವವನ್ನು ಆಚರಿಸುತ್ತೇವೆ. ಈ ಮರಣವು ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿದಿತ್ತು. ನಾವೀಗಾಗಲೇ ಗಮನಿಸಿರುವಂತೆ, ಈ ಸಹಭಾಗಿ ಭೋಜನದಲ್ಲಿ ರೊಟ್ಟಿಯು ಕ್ರಿಸ್ತನ ಯಜ್ಞಾರ್ಪಿತ ಮಾನವ ದೇಹವನ್ನು, ಮತ್ತು ದ್ರಾಕ್ಷಾಮದ್ಯವು ಅವನಿಂದ ಸುರಿಸಲ್ಪಟ್ಟ ರಕ್ತವನ್ನು ಚಿತ್ರಿಸುತ್ತದೆ. ಆದರೂ ಈ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಸೇವಿಸುವವರು ತೀರ ಕೊಂಚ ಮಂದಿ. ಹೀಗೇಕೆ? ಅದರಲ್ಲಿ ಪಾಲ್ಗೊಳ್ಳದಿರುವ ಲಕ್ಷಾಂತರ ಮಂದಿಗೆ ಜ್ಞಾಪಕವು ನಿಜ ಮಹತ್ವವುಳ್ಳದ್ದಾಗಿದೆಯೊ? ನಿಜವಾಗಿಯೂ, ಕರ್ತನ ಸಂಧ್ಯಾ ಭೋಜನವು ನಿಮಗೆ ಎಷ್ಟು ಮಹತ್ವಪೂರ್ಣವಾಗಿರಬೇಕು?

[ಪಾದಟಿಪ್ಪಣಿಗಳು]

^ ಪ್ಯಾರ. 18 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ, ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌), ಸಂಪುಟ 2, ಪುಟ 271ನ್ನು ನೋಡಿರಿ.

^ ಪ್ಯಾರ. 20 “ಸಹಭಾಗಿ ಯಜ್ಞ” ಎಂಬ ಪದವನ್ನು ಕನ್ನಡ ಬೈಬಲಿನಲ್ಲಿ “ಸಮಾಧಾನ ಯಜ್ಞ” ಎಂದು ಭಾಷಾಂತರಿಸಲಾಗಿದೆ. ಇಲ್ಲಿ “ಸಮಾಧಾನ”ಕ್ಕಾಗಿರುವ ಹೀಬ್ರು ಪದವು ಬಹುವಚನದಲ್ಲಿದೆ, ಮತ್ತು ಇದು ಅಂಥ ಯಜ್ಞಗಳಲ್ಲಿ ಪಾಲ್ಗೊಳ್ಳುವುದು ದೇವರೊಂದಿಗೂ ಜೊತೆ ಆರಾಧಕರೊಂದಿಗೂ ಸಮಾಧಾನದಲ್ಲಿ ಫಲಿಸುತ್ತದೆ ಎಂಬದನ್ನು ಸೂಚಿಸುತ್ತದೆ.

ನಿಮ್ಮ ಉತ್ತರಗಳೇನು?

• ಕರ್ತನ ಸಂಧ್ಯಾ ಭೋಜನವನ್ನು ಯೇಸು ಆರಂಭಿಸಿದ್ದೇಕೆ?

• ಜ್ಞಾಪಕವನ್ನು ಎಷ್ಟು ಬಾರಿ ಆಚರಿಸಬೇಕು?

• ಜ್ಞಾಪಕದ ಹುಳಿಯಿಲ್ಲದ ರೊಟ್ಟಿಯ ಮಹತ್ವಾರ್ಥವೇನು?

• ಜ್ಞಾಪಕದ ದ್ರಾಕ್ಷಾಮದ್ಯವು ಏನನ್ನು ಪ್ರತಿನಿಧಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ಯೇಸುವು ಕರ್ತನ ಸಂಧ್ಯಾ ಭೋಜನವನ್ನು ಸ್ಥಾಪಿಸಿದನು