ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕರ್ತನ ಸಂಧ್ಯಾ ಭೋಜನವು ನಿಮಗೆ ಯಾವ ಅರ್ಥದಲ್ಲಿದೆ?

ಕರ್ತನ ಸಂಧ್ಯಾ ಭೋಜನವು ನಿಮಗೆ ಯಾವ ಅರ್ಥದಲ್ಲಿದೆ?

ಕರ್ತನ ಸಂಧ್ಯಾ ಭೋಜನವು ನಿಮಗೆ ಯಾವ ಅರ್ಥದಲ್ಲಿದೆ?

“ಯಾವನಾದರೂ ಅಯೋಗ್ಯವಾಗಿ ಕರ್ತನ ರೊಟ್ಟಿಯನ್ನು ತಿಂದರೆ ಇಲ್ಲವೆ ಆತನ ಪಾತ್ರೆಯಲ್ಲಿ ಪಾನಮಾಡಿದರೆ ಅವನು ಕರ್ತನ ದೇಹಕ್ಕೂ ರಕ್ತಕ್ಕೂ ದ್ರೋಹಮಾಡಿದವನಾಗಿರುವನು.”​—1 ಕೊರಿಂಥ 11:27.

1. ಇಸವಿ 2003ಕ್ಕಾಗಿ ಯೋಜಿಸಲ್ಪಟ್ಟಿರುವ ಅತ್ಯಂತ ಪ್ರಾಮುಖ್ಯ ಘಟನೆಯು ಯಾವುದು, ಮತ್ತು ಅದರ ಮೂಲವು ಏನಾಗಿದೆ?

ಇಸವಿ 2003ಕ್ಕಾಗಿ ಯೋಜಿಸಲ್ಪಟ್ಟಿರುವ ಅತ್ಯಂತ ಪ್ರಾಮುಖ್ಯ ಘಟನೆಯು, ಏಪ್ರಿಲ್‌ 16ರ ಸೂರ್ಯಾಸ್ತಮಾನದ ನಂತರ ನಡೆಯಲಿದೆ. ಆಗ ಯೆಹೋವನ ಸಾಕ್ಷಿಗಳು ಯೇಸು ಕ್ರಿಸ್ತನ ಮರಣದ ಜ್ಞಾಪಕವನ್ನು ಆಚರಿಸಲು ಕೂಡಿಬರುವರು. ಹಿಂದಿನ ಲೇಖನದಲ್ಲಿ ತೋರಿಸಲ್ಪಟ್ಟಿರುವಂತೆ, ಯೇಸು ಮತ್ತು ಅವನ ಅಪೊಸ್ತಲರು ಸಾ.ಶ. 33ರ ನೈಸಾನ್‌ 14ರಂದು ಪಸ್ಕಹಬ್ಬವನ್ನು ಆಚರಿಸಿದ ನಂತರ, ಕರ್ತನ ಸಂಧ್ಯಾ ಭೋಜನವೆಂದೂ ಕರೆಯಲಾಗಿರುವ ಈ ಆಚರಣೆಯನ್ನು ಯೇಸು ಸ್ಥಾಪಿಸಿದನು. ಜ್ಞಾಪಕದ ಹುಳಿಯಿಲ್ಲದ ರೊಟ್ಟಿ ಮತ್ತು ಕೆಂಪು ದ್ರಾಕ್ಷಾಮದ್ಯವೆಂಬ ಕುರುಹುಗಳು, ಕ್ರಿಸ್ತನ ಪಾಪರಹಿತ ದೇಹವನ್ನೂ ಸುರಿಸಲ್ಪಟ್ಟ ರಕ್ತವನ್ನೂ ಸಾಂಕೇತಿಸುತ್ತವೆ. ಕೇವಲ ಈ ಒಂದು ಯಜ್ಞವು, ಮಾನವಕುಲವು ಬಾಧ್ಯತೆಯಾಗಿ ಪಡೆದಿರುವ ಪಾಪಮರಣಗಳಿಂದ ವಿಮೋಚನೆಯನ್ನು ಕೊಡಬಲ್ಲದು.​—ರೋಮಾಪುರ 5:12; 6:23.

2. ಒಂದನೆಯ ಕೊರಿಂಥ 11:27ರಲ್ಲಿ ಯಾವ ಎಚ್ಚರಿಕೆಯು ದಾಖಲಿಸಲ್ಪಟ್ಟಿದೆ?

2 ಜ್ಞಾಪಕದ ಕುರುಹುಗಳಲ್ಲಿ ಪಾಲ್ಗೊಳ್ಳುವವರು ಅದನ್ನು ಯೋಗ್ಯವಾಗಿ ಗೌರವಾರ್ಹವಾದ ರೀತಿಯಲ್ಲಿ ಮಾಡಬೇಕು. ಪ್ರಾಚೀನ ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಪತ್ರವನ್ನು ಬರೆದಾಗ ಇದನ್ನು ಸ್ಪಷ್ಟಪಡಿಸಿದನು, ಏಕೆಂದರೆ ಅಲ್ಲಿ ಕರ್ತನ ಸಂಧ್ಯಾ ಭೋಜನವನ್ನು ಯೋಗ್ಯವಾದ ರೀತಿಯಲ್ಲಿ ಆಚರಿಸಲಾಗುತ್ತಿರಲಿಲ್ಲ. (1 ಕೊರಿಂಥ 11:​20-22) ಪೌಲನು ಬರೆದುದು: “ಯಾವನಾದರೂ ಅಯೋಗ್ಯವಾಗಿ ಕರ್ತನ ರೊಟ್ಟಿಯನ್ನು ತಿಂದರೆ ಇಲ್ಲವೆ ಆತನ ಪಾತ್ರೆಯಲ್ಲಿ ಪಾನಮಾಡಿದರೆ ಅವನು ಕರ್ತನ ದೇಹಕ್ಕೂ ರಕ್ತಕ್ಕೂ ದ್ರೋಹಮಾಡಿದವನಾಗಿರುವನು.” (1 ಕೊರಿಂಥ 11:27) ಆ ಮಾತುಗಳ ತಾತ್ಪರ್ಯವೇನು?

ಕೆಲವರು ಅದನ್ನು ಅಯೋಗ್ಯವಾಗಿ ಆಚರಿಸಿದರು

3. ಕರ್ತನ ಸಂಧ್ಯಾ ಭೋಜನದ ಆಚರಣೆಗಳಲ್ಲಿ ಕೊರಿಂಥದ ಅನೇಕ ಮಂದಿ ಕ್ರೈಸ್ತರು ಹೇಗೆ ನಡೆದುಕೊಳ್ಳುತ್ತಿದ್ದರು?

3 ಕೊರಿಂಥದ ಅನೇಕ ಮಂದಿ ಕ್ರೈಸ್ತರು ಅಯೋಗ್ಯವಾಗಿ ಜ್ಞಾಪಕದ ಕುರುಹುಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರ ನಡುವೆ ಒಡಕುಗಳಿದ್ದವು. ಮತ್ತು ಕಡಿಮೆಪಕ್ಷ ಸ್ವಲ್ಪ ಸಮಯದ ವರೆಗೆ, ಕೆಲವರು ತಮ್ಮ ರಾತ್ರಿಯೂಟವನ್ನು ತಂದು, ಕೂಟಕ್ಕೆ ಮುಂಚೆ ಇಲ್ಲವೆ ಕೂಟದ ಸಮಯದಲ್ಲಿ ಅದನ್ನು ತಿನ್ನುತ್ತಿದ್ದರು. ಅನೇಕವೇಳೆ ಅವರು ಅತಿಯಾಗಿ ತಿಂದುಕುಡಿಯುತ್ತಿದ್ದರು. ಅವರು ಮಾನಸಿಕವಾಗಿ ಅಥವಾ ಆತ್ಮಿಕವಾಗಿ ಎಚ್ಚರಿಕೆಯ ಸ್ಥಿತಿಯಲ್ಲಿರಲಿಲ್ಲ. ಇದರಿಂದಾಗಿ ಅವರು ‘ಕರ್ತನ ದೇಹಕ್ಕೂ ರಕ್ತಕ್ಕೂ ದ್ರೋಹಮಾಡಿದವರಾದರು.’ ರಾತ್ರಿಯೂಟವನ್ನು ಮಾಡದೆ ಬಂದವರಿಗೆ ಹಸಿವೆಯಾಗುತ್ತಿದ್ದುದರಿಂದ ಆ ರೀತಿಯಲ್ಲಿ ಅವರು ಅಪಕರ್ಷಿತರಾಗುತ್ತಿದ್ದರು. ಹೌದು, ಅನೇಕರು ಗೌರವವಿಲ್ಲದೆ ಮತ್ತು ಆ ಘಟನೆಯ ಗಂಭೀರತೆಯ ಪೂರ್ಣ ಗ್ರಹಿಕೆಯಿಲ್ಲದೆ ಆ ಕುರುಹುಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಹೀಗಿರಲಾಗಿ, ಅವರು ಸ್ವತಃ ತಮ್ಮ ಮೇಲೆ ನ್ಯಾಯತೀರ್ಪನ್ನು ಬರಮಾಡಿಕೊಂಡದ್ದರಲ್ಲಿ ಆಶ್ಚರ್ಯವೇನೂ ಇಲ್ಲ!​—1 ಕೊರಿಂಥ 11:​27-34.

4, 5. ರೂಢಿಯಂತೆ ಜ್ಞಾಪಕದ ಕುರುಹುಗಳಲ್ಲಿ ಪಾಲ್ಗೊಳ್ಳುವವರು ಸ್ವಪರಿಶೀಲನೆಮಾಡುವುದು ಏಕೆ ಅತ್ಯಾವಶ್ಯಕವಾಗಿದೆ?

4 ಪ್ರತಿ ವರ್ಷ ಜ್ಞಾಪಕದ ದಿನವು ಹತ್ತಿರವಾಗುತ್ತಾ ಇರುವಾಗ, ರೂಢಿಯಂತೆ ಕುರುಹುಗಳಲ್ಲಿ ಪಾಲ್ಗೊಳ್ಳುವವರು ಸ್ವಪರಿಶೀಲನೆ ಮಾಡಿಕೊಳ್ಳುವುದು ಅತ್ಯಾವಶ್ಯಕ. ಈ ಸಹಭಾಗಿ ಭೋಜನದಲ್ಲಿ ಯೋಗ್ಯ ರೀತಿಯಲ್ಲಿ ಪಾಲ್ಗೊಳ್ಳಬೇಕಾದರೆ ಅವರು ಸ್ವಸ್ಥವಾದ ಆತ್ಮಿಕ ಸ್ಥಿತಿಯಲ್ಲಿರಬೇಕು. ಯೇಸುವಿನ ಯಜ್ಞಕ್ಕಾಗಿ ಅಗೌರವವನ್ನು ಇಲ್ಲವೆ ತಿರಸ್ಕಾರವನ್ನು ತೋರಿಸುವಂಥ ಯಾವುದೇ ವ್ಯಕ್ತಿಯು, ಅಶುದ್ಧಾವಸ್ಥೆಯಲ್ಲಿ ಸಹಭಾಗಿ ಭೋಜನದಲ್ಲಿ ಪಾಲ್ಗೊಳ್ಳುತ್ತಿದ್ದ ಯಾವುದೇ ಇಸ್ರಾಯೇಲ್ಯನಂತೆ ‘ದೇವಜನರ ಕುಲದಿಂದ ತೆಗೆದುಹಾಕಲ್ಪಡುವ’ ಅಪಾಯದಲ್ಲಿರುವನು.​—ಯಾಜಕಕಾಂಡ 7:20; ಇಬ್ರಿಯ 10:​28-31.

5 ಪೌಲನು ಜ್ಞಾಪಕವನ್ನು, ಪ್ರಾಚೀನ ಇಸ್ರಾಯೇಲಿನಲ್ಲಿನ ಸಹಭಾಗಿ ಭೋಜನಕ್ಕೆ ಹೋಲಿಸಿದನು. ಕುರುಹುಗಳಲ್ಲಿ ಪಾಲ್ಗೊಳ್ಳುವವರು ಕ್ರಿಸ್ತನಲ್ಲಿ ಪಾಲುಗಾರರಾಗಿರುವುದರ ಕುರಿತಾಗಿ ಮಾತಾಡಿದ ನಂತರ ಅವನು ಹೇಳಿದ್ದು: “ನೀವು ಕರ್ತನ [“ಯೆಹೋವನ,” NW] ಪಾತ್ರೆ ಮತ್ತು ದೆವ್ವಗಳ ಪಾತ್ರೆ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಕುಡಿಯಲಾರಿರಿ; ಕರ್ತನ [“ಯೆಹೋವನ,” NW] ಪಂಕ್ತಿ ಮತ್ತು ದೆವ್ವಗಳ ಪಂಕ್ತಿ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಊಟಮಾಡಲಾರಿರಿ.” (1 ಕೊರಿಂಥ 10:16-21) ಸಾಮಾನ್ಯವಾಗಿ ಜ್ಞಾಪಕದ ಕುರುಹುಗಳಲ್ಲಿ ಪಾಲ್ಗೊಳ್ಳುತ್ತಿರುವ ಒಬ್ಬ ವ್ಯಕ್ತಿಯು ಒಂದು ಗಂಭೀರ ಪಾಪವನ್ನು ಮಾಡುವಲ್ಲಿ, ಅವನು ಇದನ್ನು ಯೆಹೋವನಿಗೆ ಅರಿಕೆಮಾಡಿ, ಸಭೆಯ ಹಿರಿಯರ ಆತ್ಮಿಕ ನೆರವನ್ನೂ ಕೋರಬೇಕು. (ಜ್ಞಾನೋಕ್ತಿ 28:13; ಯಾಕೋಬ 5:​13-16) ಅವನು ನಿಜವಾಗಿಯೂ ಪಶ್ಚಾತ್ತಾಪಪಟ್ಟು, ಅದಕ್ಕೆ ತಕ್ಕಂಥ ಫಲವನ್ನು ಉತ್ಪಾದಿಸುವಲ್ಲಿ, ಅವನು ಕುರುಹುಗಳಲ್ಲಿ ಪಾಲ್ಗೊಳ್ಳುವುದು ಅಯೋಗ್ಯವಾಗಿರದು.​—ಲೂಕ 3:8.

ಗೌರವಪೂರ್ಣ ಪ್ರೇಕ್ಷಕರೋಪಾದಿ ಹಾಜರಾಗುವುದು

6. ಕರ್ತನ ಸಂಧ್ಯಾ ಭೋಜನದಲ್ಲಿ ಪಾಲ್ಗೊಳ್ಳುವ ಸುಯೋಗವನ್ನು ದೇವರು ಯಾರಿಗಾಗಿ ಕಾಯ್ದಿರಿಸಿದ್ದಾನೆ?

6 ಕ್ರಿಸ್ತನ 1,44,000 ಮಂದಿ ಸಹೋದರರಲ್ಲಿ ಉಳಿಕೆಯವರಿಗೆ ಈಗ ಒಳಿತನ್ನು ಮಾಡುತ್ತಿರುವವರು, ಕರ್ತನ ಸಂಧ್ಯಾ ಭೋಜನದಲ್ಲಿ ಪಾಲ್ಗೊಳ್ಳಬೇಕೊ? (ಮತ್ತಾಯ 25:​31-40; ಪ್ರಕಟನೆ 14:1) ಇಲ್ಲ. ದೇವರು ಆ ಸುಯೋಗವನ್ನು, ‘ಕ್ರಿಸ್ತನೊಂದಿಗೆ ಬಾಧ್ಯರಾಗಿರಲಿಕ್ಕಾಗಿ’ ಆತನು ಪವಿತ್ರಾತ್ಮದಿಂದ ಅಭಿಷೇಕಿಸಿರುವ ವ್ಯಕ್ತಿಗಳಿಗಾಗಿ ಮಾತ್ರ ಕಾದಿರಿಸಿದ್ದಾನೆ. (ರೋಮಾಪುರ 8:​14-18; 1 ಯೋಹಾನ 2:20) ಹಾಗಾದರೆ, ರಾಜ್ಯದಾಳಿಕೆಯಲ್ಲಿ ಭೌಗೋಲಿಕ ಪರದೈಸವೊಂದರಲ್ಲಿ ಸದಾಕಾಲ ಜೀವಿಸಲು ನಿರೀಕ್ಷಿಸುತ್ತಿರುವವರ ಸ್ಥಾನವೇನಾಗಿದೆ? (ಲೂಕ 23:43; ಪ್ರಕಟನೆ 21:​3, 4) ಅವರು ಸ್ವರ್ಗೀಯ ನಿರೀಕ್ಷೆಯುಳ್ಳ ಯೇಸುವಿನ ಜೊತೆ ಬಾಧ್ಯಸ್ಥರಲ್ಲದೆ ಇರುವುದರಿಂದ, ಅವರು ಕೇವಲ ಗೌರವಪೂರ್ಣ ಪ್ರೇಕ್ಷಕರೋಪಾದಿ ಜ್ಞಾಪಕಕ್ಕೆ ಹಾಜರಾಗುತ್ತಾರೆ.​—ರೋಮಾಪುರ 6:​3-5.

7. ಪ್ರಥಮ ಶತಮಾನದ ಕ್ರೈಸ್ತರಿಗೆ, ತಾವು ಜ್ಞಾಪಕದ ಕುರುಹುಗಳಲ್ಲಿ ಪಾಲ್ಗೊಳ್ಳಬೇಕೆಂಬುದು ಏಕೆ ತಿಳಿದಿತ್ತು?

7 ಪ್ರಥಮ ಶತಮಾನದಲ್ಲಿದ್ದ ಸತ್ಯ ಕ್ರೈಸ್ತರು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಿದ್ದರು. ಅವರಲ್ಲಿ ಅನೇಕರು, ವಿವಿಧ ಭಾಷೆಗಳಲ್ಲಿ ಮಾತಾಡುವಂಥ ಪವಿತ್ರಾತ್ಮದ ಅದ್ಭುತಕರ ವರದಾನಗಳಲ್ಲಿ ಒಂದು ಇಲ್ಲವೆ ಹೆಚ್ಚನ್ನು ಉಪಯೋಗಿಸಲು ಶಕ್ತರಾಗಿದ್ದರು. ಆದುದರಿಂದ, ಅಂಥ ವ್ಯಕ್ತಿಗಳಿಗೆ ತಾವು ಆತ್ಮಾಭಿಷಿಕ್ತರಾಗಿದ್ದೇವೆ ಮತ್ತು ಜ್ಞಾಪಕದ ಕುರುಹುಗಳಲ್ಲಿ ತಾವು ಪಾಲ್ಗೊಳ್ಳಬೇಕು ಎಂಬದನ್ನು ತಿಳಿಯುವುದು ಕಷ್ಟಕರವಾಗಿರದೇ ಇದ್ದಿರಬಹುದು. ಆದರೆ ನಮ್ಮ ಸಮಯದಲ್ಲಿ ಒಬ್ಬ ವ್ಯಕ್ತಿಯು ಆತ್ಮಾಭಿಷಿಕ್ತನಾಗಿದ್ದಾನೊ ಇಲ್ಲವೊ ಎಂಬದನ್ನು, ಇವುಗಳಂಥ ಪ್ರೇರಿತ ಮಾತುಗಳ ಆಧಾರದ ಮೇಲೆ ನಿರ್ಣಯಿಸಸಾಧ್ಯವಿದೆ: “ಯಾರಾರು ದೇವರ ಆತ್ಮನಿಂದ ನಡಿಸಿಕೊಳ್ಳುತ್ತಾರೋ ಅವರು ದೇವರ ಮಕ್ಕಳು. ನೀವು ತಿರಿಗಿ ಭಯದಲ್ಲಿ ಬೀಳುವ ಹಾಗೆ ದಾಸನ ಭಾವವನ್ನು ಹೊಂದಿದವರಲ್ಲ, ಮಗನ ಭಾವವನ್ನು ಹೊಂದಿದವರಾಗಿದ್ದೀರಿ. ಈ ಭಾವದಿಂದ ನಾವು ದೇವರನ್ನು ಅಪ್ಪಾ, ತಂದೆಯೇ, ಎಂದು ಕೂಗುತ್ತೇವೆ.”​—ರೋಮಾಪುರ 8:14, 15.

8. ಮತ್ತಾಯ ಅಧ್ಯಾಯ 13ರಲ್ಲಿ ತಿಳಿಸಲ್ಪಟ್ಟಿರುವ ‘ಗೋದಿ’ ಮತ್ತು ‘ಹಣಜಿಗಳು’ ಯಾರನ್ನು ಪ್ರತಿನಿಧಿಸುತ್ತವೆ?

8 ಶತಮಾನಗಳಾದ್ಯಂತ ನಿಜವಾದ ಅಭಿಷಿಕ್ತ ಜನರು, ‘ಹಣಜಿ’ಗಳು ಇಲ್ಲವೆ ಸುಳ್ಳು ಕ್ರೈಸ್ತರ ಒಂದು ಹೊಲದಲ್ಲಿ ‘ಗೋದಿ’ಯೋಪಾದಿ ಬೆಳೆದರು. (ಮತ್ತಾಯ 13:​24-30, 36-43) 1870ಗಳಿಂದ ಹಿಡಿದು, ‘ಗೋದಿಯು’ ಹೆಚ್ಚೆಚ್ಚು ಪ್ರತ್ಯಕ್ಷವಾಯಿತು, ಮತ್ತು ಹಲವಾರು ವರ್ಷಗಳ ನಂತರ ಅಭಿಷಿಕ್ತ ಕ್ರೈಸ್ತ ಮೇಲ್ವಿಚಾರಕರಿಗೆ ಹೀಗನ್ನಲಾಯಿತು: “[ಜ್ಞಾಪಕಕ್ಕಾಗಿ] ಕೂಡಿಬರುವವರ ಮುಂದೆ ಹಿರಿಯರು . . . ಈ ಷರತ್ತುಗಳನ್ನು ಇಡಬೇಕು​—(1) [ಕ್ರಿಸ್ತನ] ರಕ್ತದಲ್ಲಿ ನಂಬಿಕೆ; ಮತ್ತು (2) ಕರ್ತನಿಗೆ ಮತ್ತು ಆತನ ಸೇವೆಗೆ ಮರಣಪರ್ಯಂತ ಸಮರ್ಪಣೆ. ಈ ರೀತಿಯ ನಂಬಿಕೆಯಿರುವವರು ಮತ್ತು ಸಮರ್ಪಣೆಮಾಡಿರುವವರು ಕರ್ತನ ಮರಣವನ್ನು ಆಚರಿಸುವುದರಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸಲ್ಪಡಬೇಕು.”​—ಶಾಸ್ತ್ರಗಳ ಅಧ್ಯಯನ (ಇಂಗ್ಲಿಷ್‌), ಶ್ರೇಣಿ VI, ದ ನ್ಯೂ ಕ್ರಿಯೇಷನ್‌, ಪುಟ 473. *

“ಬೇರೆ ಕುರಿ”ಗಳಿಗಾಗಿ ಹುಡುಕುವುದು

9. ‘ಮಹಾ ಸಮೂಹದವರು’ ಯಾರೆಂಬದು 1935ರಲ್ಲಿ ಹೇಗೆ ಸ್ಪಷ್ಟಗೊಳಿಸಲ್ಪಟ್ಟಿತು, ಮತ್ತು ಇದು ಜ್ಞಾಪಕದ ಕುರುಹುಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕೆಲವರ ಮೇಲೆ ಹೇಗೆ ಪರಿಣಾಮ ಬೀರಿತು?

9 ಸಕಾಲದಲ್ಲಿ, ಯೆಹೋವನ ಸಂಸ್ಥೆಯು ಕ್ರಿಸ್ತನ ಅಭಿಷಿಕ್ತ ಹಿಂಬಾಲಕರ ಜೊತೆಗೆ ಇನ್ನಿತರರ ಮೇಲೆಯೂ ಗಮನವನ್ನು ಕೇಂದ್ರೀಕರಿಸಲಾರಂಭಿಸಿತು. ಈ ವಿಷಯದಲ್ಲಿ ಒಂದು ಗಮನಾರ್ಹ ವಿಕಸನವು 1930ಗಳ ಮಧ್ಯಭಾಗದಲ್ಲಿ ನಡೆಯಿತು. ಅದಕ್ಕೆ ಮುಂಚೆ, ದೇವಜನರು ಪ್ರಕಟನೆ 7:9ರ ‘ಮಹಾ ಸಮೂಹವನ್ನು’ ಒಂದು ದ್ವಿತೀಯ ಆತ್ಮಿಕ ವರ್ಗವಾಗಿ ಪರಿಗಣಿಸಿದ್ದು, ಅದು ಸ್ವರ್ಗದಲ್ಲಿ 1,44,000 ಮಂದಿ ಪುನರುತ್ಥಿತ ಅಭಿಷಿಕ್ತರೊಂದಿಗೆ ಜೊತೆಗೂಡಲಿರುವುದು ಮತ್ತು ಆ ಗುಂಪಿನವರು ಕ್ರಿಸ್ತನ ಮದಲಗಿತ್ತಿ ವರ್ಗದ ಸಖಿಯರು ಅಥವಾ ಸಂಗಡಿಗರಾಗಿ ಇರುವರು ಎಂದು ನೆನಸುತ್ತಿದ್ದರು. (ಕೀರ್ತನೆ 45:​14, 15; ಪ್ರಕಟನೆ 7:4; 21:​2, 9) ಆದರೆ 1935ರ ಮೇ 31ರಂದು, ಅಮೆರಿಕದ ವಾಷಿಂಗ್ಟನ್‌ ಡಿ.ಸಿ.ಯಲ್ಲಿ ನಡೆಸಲಾದ ಯೆಹೋವನ ಸಾಕ್ಷಿಗಳ ಒಂದು ಅಧಿವೇಶನದಲ್ಲಿ ಕೊಡಲ್ಪಟ್ಟ ಭಾಷಣವೊಂದರಲ್ಲಿ, “ಮಹಾ ಸಮೂಹವು” ಅಂತ್ಯದ ಸಮಯದಲ್ಲಿ ಜೀವಿಸುತ್ತಿರುವ ‘ಬೇರೆ ಕುರಿಗಳಿಗೆ’ ಸೂಚಿತವಾಗಿದೆ ಎಂಬದನ್ನು ಶಾಸ್ತ್ರಾಧಾರದಿಂದ ವಿವರಿಸಲಾಯಿತು. (ಯೋಹಾನ 10:16) ಈ ಅಧಿವೇಶನದ ನಂತರ, ಹಿಂದೆ ಜ್ಞಾಪಕದ ಕುರುಹುಗಳನ್ನು ಸೇವಿಸುತ್ತಿದ್ದವರು, ತಮಗೆ ಸ್ವರ್ಗೀಯ ನಿರೀಕ್ಷೆಯಲ್ಲ ಬದಲಾಗಿ ಭೂನಿರೀಕ್ಷೆಯಿದೆ ಎಂಬದನ್ನು ಗ್ರಹಿಸಿ, ಆ ಕುರುಹುಗಳಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಿದರು.

10. ಸದ್ಯದ ದಿನದ ‘ಬೇರೆ ಕುರಿಗಳ’ ನಿರೀಕ್ಷೆ ಹಾಗೂ ಜವಾಬ್ದಾರಿಗಳನ್ನು ನೀವು ಹೇಗೆ ವರ್ಣಿಸುವಿರಿ?

10 ವಿಶೇಷವಾಗಿ 1935ರಂದಿನಿಂದ, “ಬೇರೆ ಕುರಿ”ಗಳಾಗುವವರಿಗಾಗಿ, ಪ್ರಾಯಶ್ಚಿತ್ತದಲ್ಲಿ ನಂಬಿಕೆಯಿರುವವರಿಗಾಗಿ, ದೇವರಿಗೆ ತಮ್ಮನ್ನೇ ಸಮರ್ಪಿಸಿಕೊಂಡವರಿಗಾಗಿ, ಮತ್ತು ರಾಜ್ಯ ಸಾರುವಿಕೆಯ ಚಟುವಟಿಕೆಯಲ್ಲಿ ಅಭಿಷಿಕ್ತರ ‘ಚಿಕ್ಕ ಹಿಂಡನ್ನು’ ಬೆಂಬಲಿಸುವವರಿಗಾಗಿ ಅನ್ವೇಷಣೆಯು ನಡೆಯುತ್ತಾ ಇದೆ. (ಲೂಕ 12:32) ಈ ಬೇರೆ ಕುರಿಗಳು ಭೂಮಿಯ ಮೇಲೆ ಸದಾಕಾಲ ಜೀವಿಸಲು ನಿರೀಕ್ಷಿಸುತ್ತಾರೆ, ಆದರೆ ಬೇರೆಲ್ಲಾ ವಿಧಗಳಲ್ಲಿ ಅವರು ಸದ್ಯದ ದಿನದ ರಾಜ್ಯ ಬಾಧ್ಯಸ್ಥರ ಉಳಿಕೆಯವರಂತೆಯೇ ಇದ್ದಾರೆ. ಯೆಹೋವನನ್ನು ಆರಾಧಿಸಿ, ಧರ್ಮಶಾಸ್ತ್ರಕ್ಕೆ ಅಧೀನರಾದ ಪ್ರಾಚೀನ ಇಸ್ರಾಯೇಲಿನಲ್ಲಿದ್ದ ಅನ್ಯಜನರಂತೆಯೇ ಇಂದಿನ ಬೇರೆ ಕುರಿಗಳು ಆತ್ಮಿಕ ಇಸ್ರಾಯೇಲಿನ ಸದಸ್ಯರೊಂದಿಗೆ ಸುವಾರ್ತೆಯನ್ನು ಸಾರುವುದರಂಥ ಕ್ರೈಸ್ತ ಜವಾಬ್ದಾರಿಗಳನ್ನು ಸ್ವೀಕರಿಸುತ್ತಾರೆ. (ಗಲಾತ್ಯ 6:16) ಆದರೆ ಆಗ ಹೇಗೆ ಅನ್ಯಜನರಲ್ಲಿ ಯಾರೂ ಇಸ್ರಾಯೇಲಿನ ರಾಜ ಇಲ್ಲವೆ ಯಾಜಕನಾಗಲು ಸಾಧ್ಯವಿರಲಿಲ್ಲವೋ ಹಾಗೆಯೇ ಈ ಬೇರೆ ಕುರಿಗಳಲ್ಲಿ ಯಾರೂ ಸ್ವರ್ಗೀಯ ರಾಜ್ಯದಲ್ಲಿ ಆಳಲು ಇಲ್ಲವೆ ಯಾಜಕರಾಗಿ ಸೇವೆಸಲ್ಲಿಸಲು ಸಾಧ್ಯವಿಲ್ಲ.​—ಧರ್ಮೋಪದೇಶಕಾಂಡ 17:15.

11. ಒಬ್ಬ ವ್ಯಕ್ತಿಯ ದೀಕ್ಷಾಸ್ನಾನದ ತಾರೀಖು, ಅವನ ನಿರೀಕ್ಷೆಯೊಂದಿಗೆ ಏಕೆ ಸಂಬಂಧವನ್ನು ಹೊಂದಿರಬಲ್ಲದು?

11 ಹೀಗೆ 1930ರ ದಶಕದೊಳಗೆ, ಸ್ವರ್ಗೀಯ ವರ್ಗದವರ ಆಯ್ಕೆಮಾಡುವ ಕೆಲಸವು ಬಹುಮಟ್ಟಿಗೆ ಪೂರ್ಣಗೊಂಡಿತ್ತೆಂಬದು ಸ್ಪಷ್ಟವಾಗುತ್ತಾ ಬಂತು. ಈಗ ಅನೇಕ ದಶಕಗಳಿಂದ ಭೂನಿರೀಕ್ಷೆಯಿರುವ ಬೇರೆ ಕುರಿಗಳಿಗಾಗಿ ಅನ್ವೇಷಣೆಯು ನಡೆಯುತ್ತಾ ಇದೆ. ಒಬ್ಬ ಅಭಿಷಿಕ್ತ ವ್ಯಕ್ತಿಯು ಅಪನಂಬಿಗಸ್ತನಾಗುವಲ್ಲಿ, 1,44,000 ಮಂದಿಯಲ್ಲಿ ಉಂಟಾಗಿರುವ ಈ ಖಾಲಿಸ್ಥಾನವನ್ನು ಭರ್ತಿಮಾಡಲು, ಬೇರೆ ಕುರಿಗಳ ನಡುವೆ ದೀರ್ಘ ಸಮಯದಿಂದ ನಂಬಿಗಸ್ತಿಕೆಯಿಂದ ದೇವರ ಸೇವೆಮಾಡಿರುವ ಒಬ್ಬ ವ್ಯಕ್ತಿಯು ಕರೆಯಲ್ಪಡುವುದು ಅತಿ ಹೆಚ್ಚು ಸಂಭವನೀಯ.

ತಪ್ಪಾದ ಊಹೆಗಳಿಗೆ ಕಾರಣ

12. ಒಬ್ಬ ವ್ಯಕ್ತಿಯು ಯಾವ ಪರಿಸ್ಥಿತಿಗಳಲ್ಲಿ ಜ್ಞಾಪಕದ ಕುರುಹುಗಳಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಬೇಕು, ಮತ್ತು ಏಕೆ?

12 ಅಭಿಷಿಕ್ತ ಕ್ರೈಸ್ತರಿಗೆ, ತಮಗೆ ಸ್ವರ್ಗೀಯ ಕರೆ ಸಿಕ್ಕಿದೆ ಎಂಬ ವಿಷಯದಲ್ಲಿ ಖಂಡಿತವಾದ ಖಾತ್ರಿಯಿರುತ್ತದೆ. ಆದರೆ ಈ ರೀತಿಯ ಕರೆ ಸಿಕ್ಕಿರದಂಥ ಕೆಲವು ವ್ಯಕ್ತಿಗಳು ಜ್ಞಾಪಕದ ಕುರುಹುಗಳಲ್ಲಿ ಪಾಲ್ಗೊಳ್ಳುತ್ತಿರುವಲ್ಲಿ ಆಗೇನು? ತಮಗೆ ಸ್ವರ್ಗೀಯ ನಿರೀಕ್ಷೆಯಿಲ್ಲವೆಂದು ಅವರಿಗೆ ಈಗ ತಿಳಿದುಬಂದಿರಲಾಗಿ, ಅವರು ಹಾಗೆ ಮಾಡುವುದನ್ನು ನಿಲ್ಲಿಸುವಂತೆ ಅವರ ಮನಸ್ಸಾಕ್ಷಿಯು ಖಂಡಿತವಾಗಿಯೂ ನಿರ್ಬಂಧಿಸುವುದು. ತನಗೆ ಅಂಥ ಕರೆಯೇ ಸಿಕ್ಕಿಲ್ಲವೆಂದು ತಿಳಿದಿದ್ದೂ, ತಾನು ಸ್ವರ್ಗೀಯ ರಾಜನೂ ಯಾಜಕನೂ ಆಗಿರುವಂತೆ ಕರೆಯಲ್ಪಟ್ಟಿದ್ದೇನೆಂದು ಹೇಳಿಕೊಳ್ಳುವ ಯಾವುದೇ ವ್ಯಕ್ತಿಯ ಮೇಲೆ ದೇವರ ಕೃಪಾದೃಷ್ಟಿ ಇರುವುದಿಲ್ಲ. (ರೋಮಾಪುರ 9:16; ಪ್ರಕಟನೆ 20:6) ಆರೋನನ ವಂಶಸ್ಥರಿಗೆ ಸೇರಿರುವ ಯಾಜಕತ್ವವನ್ನು ಗಿಟ್ಟಿಸಿಕೊಳ್ಳಲು, ಅಹಂಭಾವದಿಂದ ಪ್ರಯತ್ನಿಸಿದ ಲೇವ್ಯನಾದ ಕೋರಹನನ್ನು ಯೆಹೋವನು ಹತಿಸಿದನು. (ವಿಮೋಚನಕಾಂಡ 28:1; ಅರಣ್ಯಕಾಂಡ 16:​4-11, 31-35) ತಾನು ಅಜ್ಞಾನದಿಂದಾಗಿ ಜ್ಞಾಪಕದ ಕುರುಹುಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದೇನೆಂದು ಒಬ್ಬ ಕ್ರೈಸ್ತನು ಗ್ರಹಿಸುವಲ್ಲಿ, ಅವನು/ಳು ಅದನ್ನು ಕೂಡಲೇ ನಿಲ್ಲಿಸಿ, ನಮ್ರತೆಯಿಂದ ಯೆಹೋವನ ಕ್ಷಮೆಗಾಗಿ ಬೇಡಿಕೊಳ್ಳಬೇಕು.​—ಕೀರ್ತನೆ 19:13.

13, 14. ಕೆಲವರು, ತಮಗೆ ಸ್ವರ್ಗೀಯ ಕರೆಯಿದೆಯೆಂದು ಏಕೆ ತಪ್ಪಾಗಿ ಊಹಿಸಿಕೊಳ್ಳಬಹುದು?

13 ಆದರೆ ತಮಗೆ ಸ್ವರ್ಗೀಯ ಕರೆ ಇದೆಯೆಂದು ಕೆಲವರು ಏಕೆ ತಪ್ಪಾಗಿ ಊಹಿಸಿಕೊಳ್ಳಬಹುದು? ವಿವಾಹ ಸಂಗಾತಿಯ ಸಾವು ಇಲ್ಲವೆ ಬೇರಾವುದೊ ದುರಂತವು, ಅವರಿಗೆ ಭೂಮಿಯ ಮೇಲೆ ಬದುಕುವ ಆಸೆಯೇ ಬತ್ತಿಹೋಗುವಂತೆ ಮಾಡಿರಬಹುದು. ಅಥವಾ ತಾನೊಬ್ಬ ಅಭಿಷಿಕ್ತ ಕ್ರೈಸ್ತನೆಂದು ಹೇಳಿಕೊಳ್ಳುವ ಆಪ್ತಮಿತ್ರನೊಬ್ಬನಿಗಿರುವ ನಿರೀಕ್ಷೆಯೇ ತನಗೂ ಇರಬೇಕೆಂಬ ಆಸೆ ಅವರಿಗಿರಬಹುದು. ಆದರೆ, ಈ ಸುಯೋಗದ ಪಟ್ಟಿಗೆ ಯಾರನ್ನು ಸೇರಿಸಬೇಕೆಂಬ ಕೆಲಸವನ್ನು ದೇವರು ಬೇರಾರಿಗೂ ನೇಮಿಸಿಲ್ಲ. ಮತ್ತು ಅವರು ಅಭಿಷೇಕಿಸಲ್ಪಟ್ಟಿದ್ದಾರೆಂದು ದೃಢೀಕರಿಸುವಂಥ ಸಂದೇಶಗಳನ್ನು ಕೊಡುವ ಧ್ವನಿಗಳನ್ನು ಕೇಳಿಸಿಕೊಳ್ಳುವಂತೆ ಮಾಡುವ ಮೂಲಕವೂ ಆತನು ರಾಜ್ಯ ಬಾಧ್ಯಸ್ಥರನ್ನು ಅಭಿಷೇಕಿಸುವುದಿಲ್ಲ.

14 ಎಲ್ಲಾ ಒಳ್ಳೇ ಜನರು ಸ್ವರ್ಗಕ್ಕೆ ಹೋಗುತ್ತಾರೆಂಬ ತಪ್ಪಾದ ಧಾರ್ಮಿಕ ವಿಚಾರವು ಸಹ, ತಮಗೆ ಸ್ವರ್ಗೀಯ ಕರೆಯಿದೆಯೆಂದು ಕೆಲವರು ನೆನಸುವಂತೆ ಮಾಡಬಹುದು. ಆದುದರಿಂದ ಗತಕಾಲದ ತಪ್ಪು ದೃಷ್ಟಿಕೋನಗಳು ಇಲ್ಲವೆ ಇತರ ಅಂಶಗಳು ನಮ್ಮನ್ನು ಪ್ರಭಾವಿಸುವುದರ ವಿರುದ್ಧ ನಾವು ಎಚ್ಚರಿಕೆಯಿಂದಿರುವ ಅಗತ್ಯವಿದೆ. ದೃಷ್ಟಾಂತಕ್ಕಾಗಿ ಕೆಲವರು ತಮ್ಮನ್ನೇ ಹೀಗೆ ಕೇಳಿಕೊಳ್ಳಬಹುದು: ‘ನನ್ನ ಭಾವನೆಗಳ ಮೇಲೆ ಪರಿಣಾಮ ಬೀರುವಂಥ ಔಷಧಗಳನ್ನು ನಾನು ಬಳಸುತ್ತಿದ್ದೇನೊ? ನಾನು ತಪ್ಪಾಗಿ ಅರ್ಥಮಾಡಿಕೊಳ್ಳಬಹುದಾದ ರೀತಿಯ ಗಾಢವಾದ ಭಾವನೆಗಳನ್ನು ಹೊಂದುವ ಪ್ರವೃತ್ತಿ ನನಗಿದೆಯೊ?’

15, 16. ತಾವು ಅಭಿಷಿಕ್ತರಾಗಿದ್ದೇವೆಂದು ಕೆಲವರು ಏಕೆ ತಪ್ಪಾದ ನಿರ್ಣಯಕ್ಕೆ ಬರಬಹುದು?

15 ಕೆಲವರು ತಮ್ಮನ್ನು ಹೀಗೆ ಕೇಳಿಕೊಳ್ಳಬಹುದು: ‘ನಾನು ಒಬ್ಬ ಪ್ರತಿಷ್ಠಿತ ವ್ಯಕ್ತಿಯಾಗಲು ಬಯಸುತ್ತೇನೊ? ಈಗ ಇಲ್ಲವೆ ಭವಿಷ್ಯತ್ತಿನಲ್ಲಿ ಕ್ರಿಸ್ತನೊಂದಿಗೆ ಜೊತೆ ಬಾಧ್ಯಸ್ಥನೋಪಾದಿ ನಾನು ಅಧಿಕಾರಕ್ಕಾಗಿ ಅತ್ಯಾಸೆಪಡುತ್ತಿದ್ದೇನೊ?’ ಪ್ರಥಮ ಶತಮಾನದಲ್ಲಿ ರಾಜ್ಯ ಬಾಧ್ಯಸ್ಥರು ಕರೆಯಲ್ಪಟ್ಟಾಗ, ಅವರಲ್ಲಿ ಎಲ್ಲರಿಗೂ ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನಗಳು ಇರಲಿಲ್ಲ. ಮತ್ತು ಸ್ವರ್ಗೀಯ ಕರೆಯುಳ್ಳ ವ್ಯಕ್ತಿಗಳು ಎಂದೂ ಪ್ರಖ್ಯಾತಿಗಾಗಿ ಪ್ರಯತ್ನಪಡುವುದಿಲ್ಲ ಇಲ್ಲವೆ ತಾವು ಅಭಿಷಿಕ್ತರಾಗಿದ್ದೇವೆಂದು ಕೊಚ್ಚಿಕೊಳ್ಳುವುದಿಲ್ಲ. ‘ಕ್ರಿಸ್ತನ ಮನಸ್ಸುಳ್ಳ’ವರಿಂದ ನಿರೀಕ್ಷಿಸಲಾಗುವಂಥ ನಮ್ರತೆಯನ್ನು ಅವರು ಪ್ರದರ್ಶಿಸುತ್ತಾರೆ.​—1 ಕೊರಿಂಥ 2:16.

16 ಕೆಲವರು, ತಮ್ಮಲ್ಲಿ ಬಹಳಷ್ಟು ಬೈಬಲ್‌ ಜ್ಞಾನವಿರುವುದರಿಂದ ತಮಗೆ ಸ್ವರ್ಗೀಯ ಕರೆ ಸಿಕ್ಕಿದೆಯೆಂಬ ತೀರ್ಮಾನಕ್ಕೆ ಬರಬಹುದು. ಆದರೆ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಡುವುದರಿಂದ ಅಸಾಮಾನ್ಯವಾದ ತಿಳಿವಳಿಕೆಯು ಬರುವುದಿಲ್ಲ. ಏಕೆಂದರೆ ಪೌಲನು ನಿರ್ದಿಷ್ಟ ಅಭಿಷಿಕ್ತ ವ್ಯಕ್ತಿಗಳಿಗೂ ಉಪದೇಶ ಹಾಗೂ ಸಲಹೆಯನ್ನು ಕೊಡಬೇಕಾಯಿತು. (1 ಕೊರಿಂಥ 3:​1-4; ಇಬ್ರಿಯ 5:​11-14) ತನ್ನೆಲ್ಲಾ ಜನರಿಗೂ ಆತ್ಮಿಕ ಆಹಾರವನ್ನು ಒದಗಿಸುವುದಕ್ಕಾಗಿ ದೇವರ ಒಂದು ಏರ್ಪಾಡಿದೆ. (ಮತ್ತಾಯ 24:​45-47) ಆದುದರಿಂದ, ತಾನೊಬ್ಬ ಅಭಿಷಿಕ್ತ ಕ್ರೈಸ್ತನಾಗಿರುವುದರಿಂದ, ಭೂನಿರೀಕ್ಷೆಯುಳ್ಳ ಬೇರೆಲ್ಲರಿಗಿಂತಲೂ ತನಗೆ ಶ್ರೇಷ್ಠವಾದ ವಿವೇಕವಿದೆಯೆಂದು ಯಾರೂ ನೆನಸಬಾರದು. ಒಬ್ಬನು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಿದ್ದಾನೆಂಬುದು, ಶಾಸ್ತ್ರೀಯ ಪ್ರಶ್ನೆಗಳನ್ನು ಉತ್ತರಿಸುವುದರಲ್ಲಿ, ಸಾಕ್ಷಿಕೊಡುವುದರಲ್ಲಿ, ಇಲ್ಲವೆ ಬೈಬಲ್‌ ಭಾಷಣಗಳನ್ನು ಕೊಡುವುದರಲ್ಲಿ ಅವನಿಗಿರುವ ಕೌಶಲದಿಂದ ಸೂಚಿಸಲ್ಪಡುವುದಿಲ್ಲ. ಏಕೆಂದರೆ, ಭೂನಿರೀಕ್ಷೆಯುಳ್ಳ ಕ್ರೈಸ್ತರು ಸಹ ಈ ಕ್ಷೇತ್ರಗಳಲ್ಲಿ ಕೌಶಲವುಳ್ಳವರಾಗಿರುತ್ತಾರೆ.

17. ಆತ್ಮದಿಂದ ಅಭಿಷಿಕ್ತರಾಗುವುದು ಯಾವುದರ ಮೇಲೆ ಮತ್ತು ಯಾರ ಮೇಲೆ ಹೊಂದಿಕೊಂಡಿರುತ್ತದೆ?

17 ಒಬ್ಬ ಜೊತೆ ವಿಶ್ವಾಸಿಯು ಸ್ವರ್ಗೀಯ ಕರೆಯ ಕುರಿತಾಗಿ ಕೇಳಿದರೆ, ಒಬ್ಬ ಹಿರಿಯನು ಇಲ್ಲವೆ ಮತ್ತೊಬ್ಬ ಪ್ರೌಢ ಕ್ರೈಸ್ತನು ಆ ವಿಷಯದ ಕುರಿತು ಅವನೊಂದಿಗೆ ಚರ್ಚಿಸಬಹುದು. ಆದರೆ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗಾಗಿ ಈ ವಿಷಯದಲ್ಲಿ ನಿರ್ಣಯವನ್ನು ಮಾಡಲಾರನು. ನಿಜವಾಗಿ ಈ ಕರೆಯನ್ನು ಪಡೆದಿರುವವನೊಬ್ಬನು, ತನಗೆ ಈ ನಿರೀಕ್ಷೆ ಇದೆಯೊ ಎಂದು ಇತರರೊಂದಿಗೆ ಕೇಳುವ ಅಗತ್ಯವಿರುವುದಿಲ್ಲ. ಅಭಿಷಿಕ್ತರು, ‘ಪುನರ್ಜನ್ಮ [“ಹೊಸ ಜನ್ಮ,” NW] ಹೊಂದಿದವರಾಗಿದ್ದಾರೆ; ಮತ್ತು ಆ ಜನ್ಮವು ನಾಶವಾಗುವ ಬೀಜದಿಂದ ಉಂಟಾದದ್ದಲ್ಲ, ನಾಶವಾಗದ ಬೀಜದಿಂದಲೇ ಉಂಟಾದದ್ದು, ಅದು ದೇವರ ಸದಾಜೀವವುಳ್ಳ ವಾಕ್ಯದ ಮೂಲಕವಾಗಿ ಉಂಟಾಗಿದೆ.’ (1 ಪೇತ್ರ 1:23) ತನ್ನ ಆತ್ಮ ಮತ್ತು ವಾಕ್ಯದ ಮೂಲಕ ದೇವರು ಒಬ್ಬ ವ್ಯಕ್ತಿಯಲ್ಲಿ ‘ಬೀಜವನ್ನು’ ಬಿತ್ತುತ್ತಾನೆ, ಮತ್ತು ಇದು ಅವನನ್ನು ಸ್ವರ್ಗೀಯ ನಿರೀಕ್ಷೆಯುಳ್ಳ ‘ನೂತನಸೃಷ್ಟಿ’ಯನ್ನಾಗಿ ಮಾಡುತ್ತದೆ. (2 ಕೊರಿಂಥ 5:17) ಮತ್ತು ಯೆಹೋವನೇ ಆ ಆಯ್ಕೆಯನ್ನು ಮಾಡುತ್ತಾನೆ. ಅಭಿಷೇಕಿಸಲ್ಪಡುವುದು, ‘ಮನುಷ್ಯನು ಇಚ್ಛೈಸುವದರಿಂದಾಗಲಿ ಪ್ರಯತ್ನಿಸುವದರಿಂದಾಗಲಿ ದೊರೆಯದೆ ದೇವರು ಕರುಣಿಸುವದರಿಂದಲೇ ದೊರೆಯುತ್ತದೆ.’ (ರೋಮಾಪುರ 9:16) ಹಾಗಾದರೆ ತನಗೆ ಸ್ವರ್ಗೀಯ ಕರೆ ಸಿಕ್ಕಿದೆಯೆಂಬ ವಿಷಯದಲ್ಲಿ ಒಬ್ಬ ವ್ಯಕ್ತಿಯು ಹೇಗೆ ನಿಶ್ಚಿತನಾಗಿರಬಲ್ಲನು?

ಅವರು ಏಕೆ ನಿಶ್ಚಿತರಾಗಿದ್ದಾರೆ?

18. ದೇವರ ಆತ್ಮವು, ಅಭಿಷಿಕ್ತರ ಆತ್ಮದೊಂದಿಗೆ ಹೇಗೆ ಸಾಕ್ಷಿಹೇಳುತ್ತದೆ?

18 ದೇವರಾತ್ಮದ ಸಾಕ್ಷಿಯು, ಅಭಿಷಿಕ್ತ ಕ್ರೈಸ್ತರಿಗೆ ಸ್ವರ್ಗೀಯ ಪ್ರತೀಕ್ಷೆಗಳಿವೆಯೆಂಬದನ್ನು ಅವರಿಗೆ ಮನದಟ್ಟುಮಾಡಿಸುತ್ತದೆ. ಪೌಲನು ಬರೆದುದು: “ನೀವು . . . ಮಗನ ಭಾವವನ್ನು ಹೊಂದಿದವರಾಗಿದ್ದೀರಿ. ಈ ಭಾವದಿಂದ ನಾವು ದೇವರನ್ನು ಅಪ್ಪಾ, ತಂದೆಯೇ, ಎಂದು ಕೂಗುತ್ತೇವೆ. ನಾವು ದೇವರ ಮಕ್ಕಳಾಗಿದ್ದೇವೆಂಬದಕ್ಕೆ ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತಾನೆ. ಮಕ್ಕಳಾಗಿದ್ದರೆ ಬಾಧ್ಯರಾಗಿದ್ದೇವೆ; ದೇವರಿಗೆ ಬಾಧ್ಯರು, ಕ್ರಿಸ್ತನೊಂದಿಗೆ ಬಾಧ್ಯರು. ಹೇಗಂದರೆ ಕ್ರಿಸ್ತನಿಗೆ ಸಂಭವಿಸಿದ ಬಾಧೆಗಳಲ್ಲಿ ನಾವು ಪಾಲುಗಾರರಾಗುವದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.” (ರೋಮಾಪುರ 8:15-17) ಪವಿತ್ರಾತ್ಮದ ಪ್ರಭಾವದ ಕೆಳಗೆ, ಅಭಿಷಿಕ್ತರ ಆತ್ಮ ಇಲ್ಲವೆ ಪ್ರಬಲವಾದ ಮನೋಭಾವವು, ಶಾಸ್ತ್ರಗಳು ಯೆಹೋವನ ಆತ್ಮಿಕ ಮಕ್ಕಳ ಕುರಿತಾಗಿ ಏನನ್ನು ತಿಳಿಸುತ್ತವೋ ಅದನ್ನು ಅವರು ತಮಗೆ ಅನ್ವಯಿಸಿಕೊಳ್ಳುವಂತೆ ಪ್ರಚೋದಿಸುತ್ತದೆ. (1 ಯೋಹಾನ 3:2) ದೇವರಾತ್ಮವು ಅವರಿಗೆ, ತಾವು ಆತನ ಪುತ್ರರಾಗಿದ್ದೇವೆಂಬ ಪ್ರಜ್ಞೆಯನ್ನು ಕೊಡುತ್ತದೆ ಮತ್ತು ಅವರಲ್ಲಿ ಒಂದು ಅಪೂರ್ವವಾದ ನಿರೀಕ್ಷೆಯನ್ನು ಹುಟ್ಟಿಸುತ್ತದೆ. (ಗಲಾತ್ಯ 4:​6, 7) ಹೌದು, ಭೂಮಿಯ ಮೇಲೆ ಪರಿಪೂರ್ಣ ಮಾನವರೋಪಾದಿ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ನಿತ್ಯಜೀವವನ್ನು ಆನಂದಿಸುವುದು ಅತ್ಯದ್ಭುತ ವಿಷಯವಾಗಿರುವುದು. ಆದರೆ ಅಭಿಷಿಕ್ತರಿಗೆ ದೇವರಿಂದ ಈ ರೀತಿಯ ನಿರೀಕ್ಷೆಯು ಸಿಕ್ಕಿರುವುದಿಲ್ಲ. ದೇವರು ತನ್ನ ಆತ್ಮದ ಮೂಲಕ ಅವರೊಳಗೆ ಎಷ್ಟೊಂದು ಬಲವಾದ ಸ್ವರ್ಗೀಯ ನಿರೀಕ್ಷೆಯನ್ನು ಉತ್ಪಾದಿಸಿದ್ದಾನೆಂದರೆ, ಅವರು ಎಲ್ಲಾ ಭೂಸಂಬಂಧಗಳನ್ನು ಮತ್ತು ನಿರೀಕ್ಷೆಗಳನ್ನು ತ್ಯಾಗಮಾಡಲು ಸಿದ್ಧರಿರುತ್ತಾರೆ.​—2 ಕೊರಿಂಥ 5:​1-5, 8; 2 ಪೇತ್ರ 1:​13, 14.

19. ಒಬ್ಬ ಅಭಿಷಿಕ್ತ ಕ್ರೈಸ್ತನ ಜೀವನದಲ್ಲಿ ಹೊಸ ಒಡಂಬಡಿಕೆಯ ಪಾತ್ರವೇನು?

19 ಅಭಿಷಿಕ್ತ ಕ್ರೈಸ್ತರಿಗೆ ತಮ್ಮ ಸ್ವರ್ಗೀಯ ನಿರೀಕ್ಷೆಯ ಬಗ್ಗೆ, ತಾವು ಹೊಸ ಒಡಂಬಡಿಕೆಯೊಳಗೆ ಸೇರಿಸಲ್ಪಟ್ಟಿದ್ದೇವೆಂಬದರ ಬಗ್ಗೆ ನಿಶ್ಚಯವಿದೆ. ಜ್ಞಾಪಕವನ್ನು ಸ್ಥಾಪಿಸುತ್ತಿದ್ದಾಗ ಯೇಸು ಇದನ್ನು ತಿಳಿಸಿದನು: “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.” (ಲೂಕ 22:20) ದೇವರು ಮತ್ತು ಅಭಿಷಿಕ್ತರು ಈ ಹೊಸ ಒಡಂಬಡಿಕೆಯಲ್ಲಿ ಪಾಲಿಗರಾಗಿದ್ದಾರೆ. (ಯೆರೆಮೀಯ 31:​31-34; ಇಬ್ರಿಯ 12:​22-24) ಯೇಸು ಇವರ ನಡುವೆ ಮಧ್ಯಸ್ಥಗಾರನಾಗಿದ್ದಾನೆ. ಕ್ರಿಸ್ತನ ಸುರಿಸಲ್ಪಟ್ಟ ರಕ್ತದಿಂದಾಗಿ ಜಾರಿಗೆ ಬಂದಿರುವ ಈ ಹೊಸ ಒಡಂಬಡಿಕೆಯು, ಕೇವಲ ಯೆಹೂದ್ಯರೊಳಗಿಂದ ಮಾತ್ರವಲ್ಲದೆ ಅನ್ಯ ಜನಾಂಗಗಳಿಂದಲೂ ಯೆಹೋವನ ಹೆಸರಿಗಾಗಿ ಒಂದು ಪ್ರಜೆಯನ್ನು ಆರಿಸಿಕೊಂಡು, ಅವರನ್ನು ಅಬ್ರಹಾಮನ ‘ಸಂತತಿಯ’ ಭಾಗವನ್ನಾಗಿ ಮಾಡಿತು. (ಗಲಾತ್ಯ 3:​26-29; ಅ. ಕೃತ್ಯಗಳು 15:14) ಈ ‘ಶಾಶ್ವತವಾದ ಒಡಂಬಡಿಕೆಯು,’ ಎಲ್ಲಾ ಆತ್ಮಿಕ ಇಸ್ರಾಯೇಲ್ಯರು ಪರಲೋಕದಲ್ಲಿ ಅಮರವಾದ ಜೀವನಕ್ಕೆ ಪುನರುತ್ಥಾನಗೊಳಿಸಲ್ಪಡುವುದನ್ನು ಸಾಧ್ಯಗೊಳಿಸುತ್ತದೆ.​—ಇಬ್ರಿಯ 13:20.

20. ಅಭಿಷಿಕ್ತರನ್ನು ಕ್ರಿಸ್ತನೊಂದಿಗಿನ ಯಾವ ಒಡಂಬಡಿಕೆಯೊಳಗೆ ಸೇರಿಸಿಕೊಳ್ಳಲಾಗುತ್ತದೆ?

20 ಅಭಿಷಿಕ್ತರಿಗೆ ತಮ್ಮ ನಿರೀಕ್ಷೆಯ ಬಗ್ಗೆ ನಿಶ್ಚಯವಿದೆ. ಅವರನ್ನು ಇನ್ನೊಂದು ಒಡಂಬಡಿಕೆಯೊಳಗೂ, ಅಂದರೆ ರಾಜ್ಯದ ಒಡಂಬಡಿಕೆಯೊಳಗೂ ಸೇರಿಸಿಕೊಳ್ಳಲಾಗಿದೆ. ಕ್ರಿಸ್ತನೊಂದಿಗಿನ ಅವರ ಪಾಲ್ಗೊಳ್ಳುವಿಕೆಯ ಬಗ್ಗೆ ಯೇಸು ಹೇಳಿದ್ದು: “ನೀವು ನನ್ನ ಕಷ್ಟಗಳಲ್ಲಿ ನನ್ನೊಂದಿಗೆ ಅಂಟಿಕೊಂಡವರು; ಮತ್ತು ನನ್ನ ತಂದೆಯು ನನ್ನೊಂದಿಗೆ ಒಂದು ರಾಜ್ಯಕ್ಕೋಸ್ಕರವಾಗಿ ಒಂದು ಒಡಂಬಡಿಕೆಯನ್ನು ಮಾಡಿಕೊಂಡಂತೆ, ನಾನೂ ನಿಮ್ಮೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ.” (ಲೂಕ 22:28-30, NW) ಕ್ರಿಸ್ತನ ಮತ್ತು ಅವನ ಜೊತೆ ಅರಸರ ನಡುವಣ ಈ ಒಡಂಬಡಿಕೆಯು ಸದಾಕಾಲಕ್ಕೂ ಜಾರಿಯಲ್ಲಿರುವುದು.​—ಪ್ರಕಟನೆ 22:5.

ಜ್ಞಾಪಕದ ಕಾಲಾವಧಿ​—ಆಶೀರ್ವದಿತ ಸಮಯ

21. ಜ್ಞಾಪಕದ ಕಾಲಾವಧಿಯಿಂದ ನಾವು ಯಾವ ಅತಿ ದೊಡ್ಡ ಪ್ರಯೋಜನವನ್ನು ಪಡೆಯಬಲ್ಲೆವು?

21 ಜ್ಞಾಪಕದ ಕಾಲಾವಧಿಯ ಆಶೀರ್ವಾದಗಳೋ ಅನೇಕ. ಆ ಅವಧಿಗಾಗಿ ನೇಮಿಸಲ್ಪಟ್ಟಿರುವ ಬೈಬಲ್‌ ವಾಚನದಿಂದ ನಾವು ಪ್ರಯೋಜನ ಪಡೆಯಬಲ್ಲೆವು. ಇದು, ಪ್ರಾರ್ಥನೆಗಾಗಿ, ಯೇಸುವಿನ ಭೂಜೀವಿತ ಹಾಗೂ ಮರಣ, ಮತ್ತು ರಾಜ್ಯ ಸಾರುವಿಕೆಯ ಕೆಲಸದಲ್ಲಿ ಭಾಗವಹಿಸುವಿಕೆಗಾಗಿಯೂ ವಿಶೇಷವಾಗಿ ಅತ್ಯುತ್ತಮವಾದ ಸಮಯವಾಗಿದೆ. (ಕೀರ್ತನೆ 77:12; ಫಿಲಿಪ್ಪಿ 4:​6, 7) ಮತ್ತು ಜ್ಞಾಪಕಾಚರಣೆಯೇ ನಮಗೆ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಸಂಬಂಧದಲ್ಲಿ ದೇವರು ಮತ್ತು ಕ್ರಿಸ್ತನು ತೋರಿಸಿರುವ ಪ್ರೀತಿಯನ್ನು ನೆನಪಿಗೆ ತರುತ್ತದೆ. (ಮತ್ತಾಯ 20:28; ಯೋಹಾನ 3:16) ಈ ಒದಗಿಸುವಿಕೆಯು ನಮಗೆ ನಿರೀಕ್ಷೆಯನ್ನೂ ಸಾಂತ್ವನವನ್ನೂ ಕೊಡುತ್ತದೆ ಮತ್ತು ಅದು ಕ್ರಿಸ್ತನಂಥ ಜೀವನಕ್ರಮವನ್ನು ಬೆನ್ನಟ್ಟುವ ನಮ್ಮ ದೃಢನಿರ್ಧಾರವನ್ನು ಇನ್ನಷ್ಟು ಬಲಪಡಿಸಬೇಕು. (ವಿಮೋಚನಕಾಂಡ 34:6; ಇಬ್ರಿಯ 12:3) ಜ್ಞಾಪಕವು, ದೇವರ ಸೇವಕರೋಪಾದಿ ನಮ್ಮ ಸಮರ್ಪಣೆಗನುಸಾರ ಜೀವಿಸುವಂತೆ ಮತ್ತು ಆತನ ಪ್ರಿಯ ಪುತ್ರನ ನಿಷ್ಠಾವಂತ ಹಿಂಬಾಲಕರಾಗಿರುವಂತೆಯೂ ನಮ್ಮನ್ನು ಬಲಪಡಿಸಬೇಕು.

22. ಮಾನವಕುಲಕ್ಕೆ ದೇವರು ಕೊಟ್ಟಿರುವ ಅತ್ಯಂತ ಮಹಾನ್‌ ಕೊಡುಗೆ ಯಾವುದಾಗಿದೆ, ಮತ್ತು ಅದಕ್ಕಾಗಿ ಗಣ್ಯತೆಯನ್ನು ತೋರಿಸುವ ಒಂದು ವಿಧ ಯಾವುದು?

22 ಯೆಹೋವನು ನಮಗೆ ಎಂಥೆಂಥ ಉತ್ತಮ ವರದಾನಗಳನ್ನು ಕೊಡುತ್ತಾನೆ! (ಯಾಕೋಬ 1:17) ನಮಗೆ ಆತನ ವಾಕ್ಯದ ಮಾರ್ಗದರ್ಶನ, ಆತನ ಆತ್ಮದ ಸಹಾಯ, ಮತ್ತು ನಿತ್ಯಜೀವದ ನಿರೀಕ್ಷೆಯಿದೆ. ಅಭಿಷಿಕ್ತರ ಮತ್ತು ನಂಬಿಕೆಯನ್ನು ತೋರಿಸುವ ಇತರರೆಲ್ಲರ ಪಾಪಗಳ ನಿಮಿತ್ತ ಅರ್ಪಿಸಲ್ಪಟ್ಟ ಯೇಸುವಿನ ಯಜ್ಞವು, ದೇವರು ಕೊಟ್ಟಿರುವ ಅತ್ಯಂತ ಶ್ರೇಷ್ಠವಾದ ವರದಾನವಾಗಿದೆ. (1 ಯೋಹಾನ 2:​1, 2) ಹಾಗಾದರೆ ಯೇಸುವಿನ ಮರಣವು ನಿಮಗೆ ಎಷ್ಟು ಮಹತ್ವಪೂರ್ಣ ಸಂಗತಿಯಾಗಿದೆ? ಕರ್ತನ ಸಂಧ್ಯಾ ಭೋಜನವನ್ನು ಆಚರಿಸಲಿಕ್ಕಾಗಿ 2003, ಏಪ್ರಿಲ್‌ 16ರಂದು ಸೂರ್ಯಾಸ್ತಮಾನದ ನಂತರ ಕೂಡಿಬರುವ ಮೂಲಕ, ಅದಕ್ಕಾಗಿ ಕೃತಜ್ಞತೆಯನ್ನು ತೋರಿಸುವವರಲ್ಲಿ ನೀವೂ ಒಬ್ಬರಾಗಿರುವಿರೊ?

[ಪಾದಟಿಪ್ಪಣಿ]

^ ಪ್ಯಾರ. 8 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ, ಆದರೆ ಈಗ ಮುದ್ರಿಸಲ್ಪಡುತ್ತಿಲ್ಲ.

ನಿಮ್ಮ ಉತ್ತರಗಳೇನು?

• ಜ್ಞಾಪಕದ ಕುರುಹುಗಳಲ್ಲಿ ಯಾರು ಪಾಲ್ಗೊಳ್ಳಬೇಕು?

• ‘ಬೇರೆ ಕುರಿಗಳು’ ಕೇವಲ ಗೌರವಪೂರ್ಣ ಪ್ರೇಕ್ಷಕರೋಪಾದಿ ಕರ್ತನ ಸಂಧ್ಯಾ ಭೋಜನಕ್ಕೆ ಏಕೆ ಹಾಜರಾಗುತ್ತಾರೆ?

• ಕ್ರಿಸ್ತನ ಮರಣದ ಜ್ಞಾಪಕದ ಸಮಯದಲ್ಲಿ ತಾವು ರೊಟ್ಟಿಯನ್ನೂ ದ್ರಾಕ್ಷಾಮದ್ಯವನ್ನೂ ಸೇವಿಸಬೇಕೆಂದು ಅಭಿಷಿಕ್ತ ಕ್ರೈಸ್ತರಿಗೆ ಹೇಗೆ ಗೊತ್ತಾಗುತ್ತದೆ?

• ಜ್ಞಾಪಕದ ಕಾಲಾವಧಿಯು ಯಾವುದಕ್ಕಾಗಿ ಸುಸಮಯವಾಗಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 18ರಲ್ಲಿರುವ ನಕ್ಷೆ/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಜ್ಞಾಪಕದ ಹಾಜರಿ

ಲಕ್ಷಗಳಲ್ಲಿ

1,55,97,746

15

14

1,31,47,201

13

12

11

10

 9

 8

 7

 6

 5

49,25,643

 4

 3

 2

 1

8,78,303

63,146

1935 1955 1975 1995 2002

[ಪುಟ 18ರಲ್ಲಿರುವ ಚಿತ್ರ]

ನೀವು ಈ ವರ್ಷದ ಕರ್ತನ ಸಂಧ್ಯಾ ಭೋಜನಕ್ಕೆ ಹಾಜರಿರುವಿರೊ?

[ಪುಟ 21ರಲ್ಲಿರುವ ಚಿತ್ರಗಳು]

ಹೆಚ್ಚಿನ ಬೈಬಲ್‌ ವಾಚನ ಮತ್ತು ರಾಜ್ಯ ಸಾರುವಿಕೆಯ ಕೆಲಸದಲ್ಲಿ ಭಾಗವಹಿಸುವುದಕ್ಕಾಗಿ, ಜ್ಞಾಪಕದ ಕಾಲಾವಧಿಯು ಒಂದು ಸುಸಮಯವಾಗಿದೆ