ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮಗೆ ತಿಳಿದಿಲ್ಲದಿರಬಹುದಾದ ಒಬ್ಬ ದೇವರಲ್ಲಿ ನಂಬಿಕೆಯಿಡುವುದು

ನಮಗೆ ತಿಳಿದಿಲ್ಲದಿರಬಹುದಾದ ಒಬ್ಬ ದೇವರಲ್ಲಿ ನಂಬಿಕೆಯಿಡುವುದು

ನಮಗೆ ತಿಳಿದಿಲ್ಲದಿರಬಹುದಾದ ಒಬ್ಬ ದೇವರಲ್ಲಿ ನಂಬಿಕೆಯಿಡುವುದು

ಜರ್ಮನಿಯ ಮೂವರು ವ್ಯಕ್ತಿಗಳಲ್ಲಿ ಇಬ್ಬರು ದೇವರಲ್ಲಿ ನಂಬಿಕೆ ಇಡುತ್ತಾರೆ. ಆದರೂ, ತಾವು ನಂಬುವಂಥ ದೇವರ ಕುರಿತು ವಿವರಣೆ ನೀಡುವಂತೆ ಒಂದು ಸಾವಿರಕ್ಕಿಂತ ಹೆಚ್ಚಿನ ಜನರಿಗೆ ಕೇಳಿದಾಗ, ಅವರಲ್ಲಿ ಹೆಚ್ಚುಕಡಿಮೆ ಪ್ರತಿಯೊಬ್ಬರೂ ವಿಭಿನ್ನವಾದ ಉತ್ತರವನ್ನು ಕೊಟ್ಟರು. “ಜರ್ಮನಿಯ ಜನರಲ್ಲಿರುವ ವೈವಿಧ್ಯತೆಯಂತೆಯೇ ದೇವರ ಕುರಿತಾದ ಅವರ ವೈಯಕ್ತಿಕ ಅಭಿಪ್ರಾಯಗಳು ಸಹ ಪ್ರತಿಯೊಬ್ಬರಲ್ಲೂ ಭಿನ್ನವಾಗಿವೆ” ಎಂದು ಫೋಕಸ್‌ ಪತ್ರಿಕೆಯು ವರದಿಸುತ್ತದೆ. ದೇವರಲ್ಲಿ ನಂಬಿಕೆ ಇಡುವುದು ಶ್ಲಾಘನೀಯವಾಗಿರುವುದಾದರೂ, ಆತನು ಯಾವ ರೀತಿಯ ದೇವರಾಗಿದ್ದಾನೆ ಎಂಬುದನ್ನು ತಿಳಿಯದೆ ಆತನಲ್ಲಿ ನಂಬಿಕೆ ಇಡುವುದು ಶೋಚನೀಯವಲ್ಲವೇ?

ದೇವರ ಸ್ವಭಾವ ಅಥವಾ ವ್ಯಕ್ತಿತ್ವದ ಕುರಿತಾದ ಈ ರೀತಿಯ ಅನಿಶ್ಚಿತತೆಯು ಕೇವಲ ಜರ್ಮನಿಯ ಗಡಿಗಳಿಗೆ ಸೀಮಿತವಾಗಿಲ್ಲ; ಅದು ಯೂರೋಪಿನಲ್ಲೂ ಕಂಡುಬರುತ್ತದೆ. ಆಸ್ಟ್ರೀಯ, ಬ್ರಿಟನ್‌, ಮತ್ತು ನೆದರ್ಲೆಂಡ್ಸ್‌ನಲ್ಲಿ ನಡೆಸಲ್ಪಟ್ಟ ಒಂದು ಸಮೀಕ್ಷೆಯು ದೇವರನ್ನು, ಆತನು “ಒಂದು ಅಪಾರ ಶಕ್ತಿ ಅಥವಾ ವಿವರಿಸಲು ಅಸಾಧ್ಯವಾದ ಒಂದು ರಹಸ್ಯ”ವಾಗಿದ್ದಾನೆಂಬ ವ್ಯಾಪಕವಾದ ಅಭಿಪ್ರಾಯವನ್ನು ಬಯಲುಗೊಳಿಸಿತು. ವಿಶೇಷವಾಗಿ ಯುವ ಜನರ ಮಧ್ಯದಲ್ಲಿ, ಮಾತ್ರವಲ್ಲದೆ ಆತನಲ್ಲಿ ನಂಬಿಕೆಯಿಡುವ ಯುವ ಜನರ ಮಧ್ಯದಲ್ಲೂ ಆತನು ತಿಳಿವಳಿಕೆಗೆ ಮೀರಿದ ವಿಷಯವಾಗಿದ್ದಾನೆ.

ನೀವು ದೇವರನ್ನು ವೈಯಕ್ತಿಕವಾಗಿ ತಿಳಿದಿದ್ದೀರೋ?

ಒಬ್ಬ ವ್ಯಕ್ತಿಯ ಕುರಿತು ತಿಳಿದಿರುವುದು ಮತ್ತು ಆ ವ್ಯಕ್ತಿಯ ಕುರಿತು ವೈಯಕ್ತಿಕವಾಗಿ ತಿಳಿದಿರುವುದರ ಮಧ್ಯೆ ಅಜಗಜಾಂತರವಿದೆ. ವ್ಯಕ್ತಿಯೊಬ್ಬನ​—ದೂರದೇಶದ ಒಬ್ಬ ಚಕ್ರವರ್ತಿ, ಹೆಸರುವಾಸಿಯಾದ ಒಬ್ಬ ಕ್ರೀಡಾಪಟು, ಅಥವಾ ಚಿತ್ರರಂಗದ ಒಬ್ಬ ತಾರೆಯ​—ಕುರಿತು ತಿಳಿದಿರುವುದೆಂದರೆ, ಆ ವ್ಯಕ್ತಿ ಅಸ್ತಿತ್ವದಲ್ಲಿದ್ದಾನೆ ಎಂಬುದನ್ನು ಅಂಗೀಕರಿಸುವುದಾಗಿದೆ ಅಷ್ಟೇ. ಆದರೆ ಒಬ್ಬನ ಕುರಿತು ವೈಯಕ್ತಿಕವಾಗಿ ತಿಳಿಯುವುದರಲ್ಲಿ ಇದಕ್ಕಿಂತಲೂ ಹೆಚ್ಚು ವಿಷಯಗಳು ಒಳಗೂಡಿವೆ. ಇದರಲ್ಲಿ ಆ ವ್ಯಕ್ತಿಯ ಗುಣಲಕ್ಷಣಗಳು, ನಡತೆ, ಅನಿಸಿಕೆಗಳು, ಇಷ್ಟಾನಿಷ್ಟಗಳು, ಹಾಗೂ ಭವಿಷ್ಯದ ಕುರಿತಾದ ಯೋಜನೆಗಳ ಕುರಿತು ತಿಳಿದಿರುವುದು ಒಳಗೂಡಿದೆ. ಒಬ್ಬ ವ್ಯಕ್ತಿಯ ಕುರಿತು ವೈಯಕ್ತಿಕವಾಗಿ ತಿಳಿದುಕೊಳ್ಳಲು ಬಯಸುವುದು, ಆ ವ್ಯಕ್ತಿಯೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳಲು ದಾರಿಯನ್ನು ತೆರೆಯುತ್ತದೆ.

ಲಕ್ಷಾಂತರ ಜನರು, ದೇವರ ಕುರಿತಾದ ನಾಮಮಾತ್ರದ ತಿಳಿವಳಿಕೆಯನ್ನು ಹೊಂದಿರುವುದು ಅಥವಾ ಕೇವಲ ದೇವರೊಬ್ಬನು ಅಸ್ತಿತ್ವದಲ್ಲಿದ್ದಾನೆ ಎಂದು ಮಾತ್ರ ತಿಳಿದಿರುವುದು ಸಾಲದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅವರು ದೇವರ ಕುರಿತು ಆಪ್ತವಾಗಿ ತಿಳಿದುಕೊಳ್ಳುವ ಮೂಲಕ ಪ್ರಗತಿಯನ್ನು ಮಾಡಿದ್ದಾರೆ. ಇದರಿಂದ ಅವರು ಪ್ರಯೋಜನವನ್ನು ಪಡೆದುಕೊಂಡಿದ್ದಾರೋ? ಉತ್ತರ ಜರ್ಮನಿಯಲ್ಲಿ ಜೀವಿಸುತ್ತಿರುವ, ಈ ಮೊದಲು ಕೇವಲ ದೇವರ ಕುರಿತು ಒಂದು ಸಾಮಾನ್ಯ ನಂಬಿಕೆಯಿದ್ದ ಪಾಲ್‌ ಎಂಬ ವ್ಯಕ್ತಿಯು ಆತನನ್ನು ಹೆಚ್ಚು ಉತ್ತಮವಾಗಿ ಪರಿಚಯಿಸಿಕೊಳ್ಳಲು ತೀರ್ಮಾನಿಸಿದನು. ಪಾಲ್‌ ವಿವರಿಸುವುದು: “ದೇವರ ಕುರಿತು ತಿಳಿದುಕೊಳ್ಳಲಿಕ್ಕಾಗಿ ಸಮಯ ಮತ್ತು ಪ್ರಯತ್ನ ಬೇಕಾಗುತ್ತದೆ ನಿಜ, ಆದರೆ ಅದರ ಲಾಭಾಂಶಗಳು ಹೆಚ್ಚು. ಸೃಷ್ಟಿಕರ್ತನೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿರುವುದು ದಿನನಿತ್ಯದ ಜೀವನವನ್ನು ಹೆಚ್ಚು ಉತ್ತಮಗೊಳಿಸುತ್ತದೆ.”

ದೇವರನ್ನು ನಿಕಟವಾಗಿ ತಿಳಿದುಕೊಳ್ಳುವುದರಲ್ಲಿ ಸಮಯ ಮತ್ತು ಪ್ರಯತ್ನವನ್ನು ವ್ಯಯಿಸುವುದು ಪ್ರಯೋಜನದಾಯಕವಾಗಿದೆಯೋ? ದಯವಿಟ್ಟು ಮುಂದಿನ ಲೇಖನವನ್ನು ಓದಿರಿ.

[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]

ಒಬ್ಬ ವ್ಯಕ್ತಿಯ ಕುರಿತು ತಿಳಿದಿರುವುದು ಮತ್ತು ಆ ವ್ಯಕ್ತಿಯ ಕುರಿತು ವೈಯಕ್ತಿಕವಾಗಿ ತಿಳಿದಿರುವುದರ ಮಧ್ಯೆ ಅಜಗಜಾಂತರವಿದೆ