ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮಗುವಿನ ಹೃದಯವನ್ನು ಮಾರ್ಗದರ್ಶನವಿಲ್ಲದೆ ಬಿಡಬೇಡಿರಿ!

ನಿಮ್ಮ ಮಗುವಿನ ಹೃದಯವನ್ನು ಮಾರ್ಗದರ್ಶನವಿಲ್ಲದೆ ಬಿಡಬೇಡಿರಿ!

ನಿಮ್ಮ ಮಗುವಿನ ಹೃದಯವನ್ನು ಮಾರ್ಗದರ್ಶನವಿಲ್ಲದೆ ಬಿಡಬೇಡಿರಿ!

ಒಬ್ಬ ನಿಪುಣ ಕುಂಬಾರನು ತನ್ನ ಕೈಯಲ್ಲಿರುವ ನಿಷ್ಪ್ರಯೋಜಕವಾದ ಜೇಡಿಮಣ್ಣಿನ ಮುದ್ದೆಗೆ, ಆಕರ್ಷಕವಾದ ಪಾತ್ರೆಯ ರೂಪವನ್ನು ಕೊಡಬಲ್ಲನು. ಈ ನಿಷ್ಪ್ರಯೋಜಕ ವಸ್ತುವಿನಿಂದ ಇಷ್ಟೊಂದು ಆಕರ್ಷಕ ಹಾಗೂ ಪ್ರಯೋಜನದಾಯಕ ವಸ್ತುಗಳನ್ನು ಮಾಡುವ ಕರಕುಶಲಿಗರು ತುಂಬ ವಿರಳ. ಸಾವಿರಾರು ವರ್ಷಗಳಿಂದಲೂ ಸಮಾಜವು, ಬಟ್ಟಲುಗಳು, ತಟ್ಟೆಗಳು, ಅಡಿಗೆಮಾಡುವ ಪಾತ್ರೆಗಳು, ಶೇಖರಿಸಿಡುವುದಕ್ಕಾಗಿ ಜಾಡಿಗಳು ಮತ್ತು ಆಲಂಕಾರಿಕ ಹೂಕುಂಡಗಳಿಗಾಗಿ ಕುಂಬಾರರ ಮೇಲೆ ಅವಲಂಬಿಸಿದೆ.

ಹೆತ್ತವರು ಸಹ, ತಮ್ಮ ಮಕ್ಕಳ ಗುಣಲಕ್ಷಣಗಳನ್ನೂ ವ್ಯಕ್ತಿತ್ವವನ್ನೂ ಉತ್ತಮ ರೀತಿಯಲ್ಲಿ ರೂಪಿಸುವ ಮೂಲಕ ಸಮಾಜಕ್ಕೆ ಒಂದು ಅತ್ಯಮೂಲ್ಯ ಕಾಣಿಕೆಯನ್ನು ಕೊಡುತ್ತಾರೆ. ಬೈಬಲು, ನಮ್ಮಲ್ಲಿ ಪ್ರತಿಯೊಬ್ಬರನ್ನೂ ಜೇಡಿಮಣ್ಣಿಗೆ ಹೋಲಿಸುತ್ತದೆ ಮತ್ತು ದೇವರು ಹೆತ್ತವರಿಗೆ, ತಮ್ಮ ಮಕ್ಕಳೆಂಬ ‘ಜೇಡಿಮಣ್ಣನ್ನು’ ರೂಪಿಸುವ ಅತ್ಯಾವಶ್ಯಕ ಕೆಲಸವನ್ನು ನೇಮಿಸಿದ್ದಾನೆ. (ಯೋಬ 33:6; ಆದಿಕಾಂಡ 18:19) ಮಣ್ಣಿನ ಒಂದು ಸುಂದರ ಕೃತಿಯನ್ನು ರಚಿಸುವಂತೆಯೇ, ಒಂದು ಮಗುವನ್ನು ಒಬ್ಬ ಜವಾಬ್ದಾರಿಯುತ, ಸಮತೋಲನ ಭಾವದ ವಯಸ್ಕನನ್ನಾಗಿ ಮಾರ್ಪಡಿಸುವುದು ಸುಲಭದ ಕೆಲಸವಾಗಿರುವುದಿಲ್ಲ. ಮತ್ತು ಈ ರೀತಿಯ ಮಾರ್ಪಾಟು ಆಕಸ್ಮಿಕವಾಗಿಯೂ ಸಂಭವಿಸುವುದಿಲ್ಲ.

ನಮ್ಮ ಮಕ್ಕಳ ಹೃದಯಗಳನ್ನು ರೂಪಿಸಲು ಪ್ರಯತ್ನಿಸುತ್ತಿರುವ ಇತರ ಅನೇಕ ಶಕ್ತಿಶಾಲಿ ಪ್ರಭಾವಗಳಿವೆ. ಆದರೆ ದುಃಖದ ಸಂಗತಿಯೇನೆಂದರೆ, ಇವುಗಳಲ್ಲಿ ಅನೇಕ ಪ್ರಭಾವಗಳು ವಿನಾಶಕಾರಿಯಾಗಿವೆ. ಆದುದರಿಂದ ಒಂದು ಮಗುವಿನ ಹೃದಯವನ್ನು ಯಾವುದೇ ಮಾರ್ಗದರ್ಶನವಿಲ್ಲದೆ ಬೆಳೆಯಲು ಬಿಟ್ಟುಬಿಡುವ ಬದಲು, ಅವನು ‘ಮುಪ್ಪಿನಲ್ಲಿಯೂ ಓರೆಯಾಗನು’ ಎಂಬ ಭರವಸೆಯೊಂದಿಗೆ ವಿವೇಕಿಗಳಾದ ಹೆತ್ತವರು ಮಗುವನ್ನು ‘ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ’ ತರಬೇತಿಗೊಳಿಸುವರು.​—ಜ್ಞಾನೋಕ್ತಿ 22:6.

ಒಂದು ಮಗುವನ್ನು ಸಾಕಿಸಲಹುವ ದೀರ್ಘವಾದ ಹಾಗೂ ರೋಮಾಂಚಕರ ಕೆಲಸದ ಸಮಯದಲ್ಲಿ, ವಿವೇಕಿ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳ ಹೃದಯಕ್ಕೆ ಅಪಾಯದ ಬೆದರಿಕೆಯನ್ನೊಡ್ಡುತ್ತಿರುವ ನಕಾರಾತ್ಮಕ ಪ್ರಭಾವಗಳನ್ನು ನಿವಾರಿಸಲು ಸಮಯವನ್ನು ತೆಗೆದುಕೊಳ್ಳಬೇಕಾಗಬಹುದು. ಅವರು ಮಗುವಿಗೆ, ‘ಕ್ರೈಸ್ತ ಪಾಲನೆಪೋಷಣೆಗೆ ಸೇರಿರುವ ಉಪದೇಶವನ್ನೂ ತಿದ್ದುಪಾಟನ್ನೂ’ ತಾಳ್ಮೆಯಿಂದ ಕೊಡುವಾಗ, ಅವರ ಪ್ರೀತಿಯು ಬಹಳಷ್ಟು ಪರೀಕ್ಷೆಗೊಳಪಡಿಸಲ್ಪಡುವುದು. (ಎಫೆಸ 6:​4, ದ ನ್ಯೂ ಇಂಗ್ಲಿಷ್‌ ಬೈಬಲ್‌) ನಿಜ, ಹೆತ್ತವರು ಮಗುವಿನ ಜೀವನದ ಪ್ರಾರಂಭದಲ್ಲೇ ಈ ತರಬೇತಿಯನ್ನು ಆರಂಭಿಸುವಲ್ಲಿ, ಅವರ ಕೆಲಸವು ಇನ್ನೂ ಸುಲಭವಾಗುವುದು.

ಶೀಘ್ರ ಆರಂಭ

ತಮಗೆ ಬೇಕಾದಂತೆ ರೂಪಿಸಬಲ್ಲ, ಆದರೆ ಅದೇ ಸಮಯದಲ್ಲಿ ಅದಕ್ಕೆ ಕೊಡಲ್ಪಟ್ಟಿರುವ ರೂಪವನ್ನು ಹಿಡಿದಿಟ್ಟುಕೊಳ್ಳಲು ಸಾಕಷ್ಟು ದೃಢವಾಗಿರುವ ಜೇಡಿಮಣ್ಣಿನಲ್ಲಿ ಕೆಲಸವನ್ನು ಮಾಡುವುದು ಕುಂಬಾರರಿಗೆ ಇಷ್ಟ. ಜೇಡಿಮಣ್ಣನ್ನು ನಯಗೊಳಿಸಿದ ನಂತರ, ಅವರದನ್ನು ಆರು ತಿಂಗಳುಗಳೊಳಗೆ ಉಪಯೋಗಿಸಲು ಇಷ್ಟಪಡುತ್ತಾರೆ. ಅದೇ ರೀತಿಯಲ್ಲಿ, ಹೆತ್ತವರು ತಮ್ಮ ಮಗುವಿನ ಹೃದಯಕ್ಕೆ ರೂಪವನ್ನು ಕೊಡಲಾರಂಭಿಸಲು ಅತ್ಯುತ್ತಮವಾದ ಸಮಯವು, ಅದು ಅತ್ಯಂತ ಗ್ರಹಣಶೀಲ ಮತ್ತು ಸುಲಭವಾಗಿ ರೂಪಿಸಲ್ಪಡಸಾಧ್ಯವಿರುವಾಗಲೇ ಆಗಿದೆ.

ಮಕ್ಕಳ ತಜ್ಞರಿಗನುಸಾರ, ಒಂದು ಮಗುವಿಗೆ ಎಂಟು ತಿಂಗಳುಗಳಾಗುವಷ್ಟರಲ್ಲಿ, ಅದು ತನ್ನ ಮಾತೃಭಾಷೆಯ ಧ್ವನಿಗಳನ್ನು ಗುರುತಿಸಲು ಕಲಿತುಕೊಂಡಿರುತ್ತದೆ, ತನ್ನ ಹೆತ್ತವರೊಂದಿಗೆ ಒಂದು ಆಪ್ತ ಬಂಧವನ್ನು ಬೆಸೆದುಕೊಂಡಿರುತ್ತದೆ, ಇಂದ್ರಿಯಗಳ ಮೂಲಕ ಅರಿಯುವ ಕೌಶಲಗಳನ್ನು ಬೆಳೆಸಿಕೊಂಡಿರುತ್ತದೆ, ಮತ್ತು ಆಗಲೇ ತನ್ನ ಸುತ್ತಲಿನ ಜಗತ್ತನ್ನು ತಿಳಿದುಕೊಳ್ಳಲು ಪ್ರಾರಂಭಿಸುತ್ತದೆ. ಆದುದರಿಂದ, ಮಗು ಇನ್ನೂ ಎಳೆಯದಾಗಿರುವಾಗಲೇ ಅದರ ಹೃದಯವನ್ನು ರೂಪಿಸಲು ಆರಂಭಿಸುವುದು ಸೂಕ್ತವಾದ ಸಮಯವಾಗಿರುತ್ತದೆ. ತಿಮೊಥೆಯನಂತೆ ನಿಮ್ಮ ಮಗು, ‘ಚಿಕ್ಕಂದಿನಿಂದಲೇ ಪರಿಶುದ್ಧಗ್ರಂಥಗಳ ಪರಿಚಯಮಾಡಿಕೊಂಡರೆ’ ಅದೆಷ್ಟು ಲಾಭಕರವಾಗಿರುವುದು!​—2 ತಿಮೊಥೆಯ 3:15. *

ಶಿಶುಗಳು ಸ್ವಾಭಾವಿಕವಾಗಿಯೇ ತಮ್ಮ ಹೆತ್ತವರನ್ನು ಅನುಕರಿಸುತ್ತವೆ. ಅವು ಹೆತ್ತವರ ಧ್ವನಿಗಳು, ಅಭಿವ್ಯಕ್ತಿಗಳು ಮತ್ತು ಹಾವಭಾವಗಳನ್ನು ನಕಲುಮಾಡುತ್ತವೆ. ಅಷ್ಟುಮಾತ್ರವಲ್ಲದೆ, ತಮ್ಮ ಹೆತ್ತವರು ಪ್ರೀತಿ, ದಯೆ ಮತ್ತು ಕರುಣೆಯಂಥ ಗುಣಗಳನ್ನು ಪ್ರದರ್ಶಿಸುವುದನ್ನು ನೋಡಿ, ಅಂಥ ಗುಣಗಳ ಕುರಿತಾಗಿಯೂ ಕಲಿಯುತ್ತವೆ. ನಾವು ನಮ್ಮ ಮಗುವನ್ನು ಯೆಹೋವನ ನಿಯಮಗಳಿಗನುಸಾರ ತರಬೇತಿಗೊಳಿಸಲು ಬಯಸುವಲ್ಲಿ, ಪ್ರಪ್ರಥಮವಾಗಿ ದೇವರ ಆಜ್ಞೆಗಳು ನಮ್ಮ ಹೃದಯಗಳಲ್ಲಿರಬೇಕು. ಅಂಥ ಹೃತ್ಪೂರ್ವಕ ಗಣ್ಯತೆಯು, ಹೆತ್ತವರು ಕ್ರಮವಾಗಿ ತಮ್ಮ ಮಕ್ಕಳೊಂದಿಗೆ ಯೆಹೋವನ ಮತ್ತು ಆತನ ವಾಕ್ಯದ ಕುರಿತಾಗಿ ಮಾತಾಡುವಂತೆ ಪ್ರಚೋದಿಸುವುದು. ಬೈಬಲು ಪ್ರೇರೇಪಿಸುವುದು: “ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” (ಧರ್ಮೋಪದೇಶಕಾಂಡ 6:6, 7) ತಮ್ಮ ಇಬ್ಬರು ಚಿಕ್ಕ ಮಕ್ಕಳೊಂದಿಗೆ ಅವರು ಇದನ್ನು ಹೇಗೆ ಮಾಡುತ್ತಾರೆಂಬದನ್ನು ಫ್ರಾನ್ಸಿಸ್ಕೋ ಮತ್ತು ರೋಸಾ ವಿವರಿಸುತ್ತಾರೆ. *

“ಪ್ರತಿನಿತ್ಯದ ಸಂಭಾಷಣೆಗಳಲ್ಲದೆ, ನಮ್ಮ ಮಕ್ಕಳೊಂದಿಗೆ ನಾವು ಪ್ರತಿದಿನ ಕಡಿಮೆಪಕ್ಷ 15 ನಿಮಿಷ ಮಾತಾಡಲು ಪ್ರಯತ್ನಿಸುತ್ತೇವೆ. ಒಂದು ಸಮಸ್ಯೆಯಿದೆಯೆಂಬದನ್ನು ನಾವು ಪತ್ತೆಹಚ್ಚುವಲ್ಲಿ, ನಾವು ಹೆಚ್ಚು ಸಮಯವನ್ನು ಕಳೆಯುತ್ತೇವೆ. ಮತ್ತು ನಾವು ನಿಜವಾಗಿಯೂ ಸಮಸ್ಯೆಗಳನ್ನು ಎದುರಿಸುತ್ತೇವೆ. ಉದಾಹರಣೆಗಾಗಿ, ನಮ್ಮ ಐದು ವರ್ಷ ಪ್ರಾಯದ ಮಗನು ಇತ್ತೀಚೆಗೆ ಶಾಲೆಯಿಂದ ಮನೆಗೆ ಬಂದು, ತಾನು ಯೆಹೋವನನ್ನು ನಂಬುವುದಿಲ್ಲವೆಂದು ನಮಗಂದನು. ಏಕೆಂದರೆ ಅವನ ಸಹಪಾಠಿಗಳಲ್ಲೊಬ್ಬನು ಅವನನ್ನು ಕೀಟಲೆಮಾಡಿ, ದೇವರೇ ಇಲ್ಲವೆಂದು ಹೇಳಿದನಂತೆ.”

ಈ ಹೆತ್ತವರು, ಮಕ್ಕಳು ತಮ್ಮ ಸೃಷ್ಟಿಕರ್ತನಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆಯೆಂಬುದನ್ನು ಗ್ರಹಿಸಿದರು. ಅಂಥ ನಂಬಿಕೆಯು, ಅವರಿಗೆ ದೇವರ ಸೃಷ್ಟಿಯ ಕಡೆಗಿರುವ ಸ್ವಾಭಾವಿಕವಾದ ಆಕರ್ಷಣೆಯ ಮೇಲೆ ಕಟ್ಟಲ್ಪಡಸಾಧ್ಯವಿದೆ. ಮಕ್ಕಳು ಒಂದು ಪಶುವನ್ನು ಮುಟ್ಟಲು, ಹೂವುಗಳನ್ನು ಕೀಳಲು, ಇಲ್ಲವೆ ಸಮುದ್ರ ತೀರದಲ್ಲಿರುವ ಮರಳಿನಲ್ಲಿ ಆಡಲು ಎಷ್ಟೊಂದು ಇಷ್ಟಪಡುತ್ತಾರೆ! ಆದುದರಿಂದ, ಸೃಷ್ಟಿ ಹಾಗೂ ಸೃಷ್ಟಿಕರ್ತನ ನಡುವೆ ಯಾವ ಸಂಬಂಧವಿದೆ ಎಂಬದನ್ನು ಅವರು ನೋಡುವಂತೆ ಹೆತ್ತವರು ಸಹಾಯಮಾಡಬಹುದು. (ಕೀರ್ತನೆ 100:3; 104:​24, 25) ಯೆಹೋವನ ಸೃಷ್ಟಿಗಾಗಿ ಹೆತ್ತವರು ವಿಕಸಿಸುವಂಥ ವಿಸ್ಮಯ ಹಾಗೂ ಗೌರವವು, ಮಗುವಿನ ಮನಸ್ಸಿನಲ್ಲಿ ಜೀವನದಾದ್ಯಂತ ಉಳಿಯಬಲ್ಲದು. (ಕೀರ್ತನೆ 111:​2, 10) ಅಂಥ ಗಣ್ಯತೆಯ ಜೊತೆಯಲ್ಲೇ, ಮಗುವು ದೇವರನ್ನು ಸಂತೋಷಪಡಿಸುವ ಒಂದು ಬಯಕೆ ಮತ್ತು ಆತನನ್ನು ಅಸಂತೋಷಪಡಿಸುವ ಭಯವನ್ನೂ ಬೆಳೆಸಿಕೊಳ್ಳಬಲ್ಲದು. ಇದು ‘ಕೆಟ್ಟದ್ದರಿಂದ ದೂರಹೋಗುವಂತೆ’ ಅವನನ್ನು ಪ್ರಚೋದಿಸಬಲ್ಲದು.​—ಜ್ಞಾನೋಕ್ತಿ 16:6.

ಹೆಚ್ಚಿನ ಎಳೆಯ ಮಕ್ಕಳು ಕೂತೂಹಲಿಗಳೂ, ಬೇಗನೆ ಕಲಿಯುವವರೂ ಆಗಿರುವುದಾದರೂ, ವಿಧೇಯತೆಯನ್ನು ತೋರಿಸುವುದು ಅವರಿಗೆ ಅಷ್ಟೊಂದು ಸುಲಭದ ಸಂಗತಿಯಾಗಿರುವುದಿಲ್ಲ. (ಕೀರ್ತನೆ 51:5) ಮನಬಂದಂತೆ ಮಾಡಿ ಸ್ವತಂತ್ರರಾಗಿರಲು ಇಲ್ಲವೆ ತಮಗೆ ಬೇಕಾದದ್ದೆಲ್ಲವೂ ಸಿಗಲೇಬೇಕೆಂದು ಅವರು ಕೆಲವೊಮ್ಮೆ ಹಠಹಿಡಿಯಬಹುದು. ಆದರೆ ಈ ರೀತಿಯ ಮನೋಭಾವಗಳು ಅವರಲ್ಲಿ ತಳವೂರುವುದನ್ನು ತಡೆಯಲು ಹೆತ್ತವರಿಗೆ ದೃಢತೆ, ತಾಳ್ಮೆ, ಮತ್ತು ಶಿಸ್ತು ಇರಬೇಕಾಗಿದೆ. (ಎಫೆಸ 6:4) ಐದು ಮಂದಿ ಮಕ್ಕಳನ್ನು ಯಶಸ್ವಿಯಾಗಿ ಬೆಳೆಸಿರುವ ಫಿಲಿಸ್‌ ಮತ್ತು ಪೌಲ್‌ರ ಅನುಭವ ಹೀಗಿದೆ.

ಫಿಲಿಸ್‌ ಜ್ಞಾಪಿಸಿಕೊಳ್ಳುವುದು: “ಪ್ರತಿಯೊಂದು ಮಗುವಿನ ವ್ಯಕ್ತಿತ್ವವು ವಿಭಿನ್ನವಾಗಿದ್ದರೂ, ಅವರಲ್ಲಿ ಎಲ್ಲರಿಗೂ ತಮ್ಮ ಮನಸ್ಸಿಗೆ ತೋಚಿದಂತೆ ಮಾಡಿ ಸ್ವತಂತ್ರರಾಗಿರುವ ಬಯಕೆ ಇತ್ತು. ಇದು ಕಷ್ಟಕರವಾಗಿದ್ದರೂ, ಅವರು ಕಟ್ಟಕಡೆಗೆ ‘ಇಲ್ಲ’ ಎಂಬ ಪದದ ಅರ್ಥವನ್ನು ಗ್ರಹಿಸಿದರು.” ಅವಳ ಗಂಡ ಪೌಲ್‌ ಹೇಳಿದ್ದು: “ಅವರು ಅರ್ಥಮಾಡಿಕೊಳ್ಳುವಷ್ಟು ದೊಡ್ಡವರಾದಾಗ, ನಾವು ಮಾಡುತ್ತಿದ್ದ ನಿರ್ಣಯಗಳಿಗೆ ಕಾರಣಗಳೇನೆಂಬದನ್ನು ಅವರಿಗೆ ವಿವರಿಸುತ್ತಿದ್ದೆವು. ನಾವು ಯಾವಾಗಲೂ ದಯಾಪರರಾಗಿರಲು ಪ್ರಯತ್ನಿಸಿದರೂ, ನಮಗಿರುವ ದೇವದತ್ತ ಅಧಿಕಾರವನ್ನು ಗೌರವಿಸುವಂತೆ ಅವರಿಗೆ ಕಲಿಸಿದ್ದೇವೆ.”

ಒಂದು ಮಗು ರೂಪುಗೊಳ್ಳುವ ವರುಷಗಳು ಅದಕ್ಕೆ ಸಮಸ್ಯೆಗಳನ್ನು ತರಬಹುದಾದರೂ, ಅಪ್ರೌಢ ಹೃದಯವು ಅನೇಕ ಹೊಸ ಪರೀಕ್ಷೆಗಳನ್ನು ಎದುರಿಸುವಂಥ ಹದಿಪ್ರಾಯದ ವರುಷಗಳಲ್ಲೇ ಅತ್ಯಂತ ದೊಡ್ಡ ಸಮಸ್ಯೆ ಬರುತ್ತದೆಂದು ಹೆಚ್ಚಿನ ಹೆತ್ತವರು ಕಂಡುಕೊಳ್ಳುತ್ತಾರೆ.

ಒಬ್ಬ ಹದಿವಯಸ್ಕನ ಹೃದಯವನ್ನು ತಲಪುವುದು

ಜೇಡಿಮಣ್ಣು ಒಣಗಿಹೋಗುವ ಮುಂಚೆ ಕುಂಬಾರನು ತನ್ನ ಕೆಲಸವನ್ನು ಮಾಡಿಮುಗಿಸಬೇಕು. ಇನ್ನೂ ಸ್ವಲ್ಪ ಸಮಯವನ್ನು ಪಡೆದುಕೊಳ್ಳಲಿಕ್ಕಾಗಿ, ಜೇಡಿಮಣ್ಣನ್ನು ತೇವವಾಗಿಡಲು ಹಾಗೂ ಸುನಮ್ಯವಾಗಿಡಲು ಅವನು ನೀರನ್ನು ಸೇರಿಸಬಹುದು. ಅದೇ ರೀತಿಯಲ್ಲಿ, ತಮ್ಮ ಹದಿವಯಸ್ಕನ ಹೃದಯವು ಹಠಮಾರಿಯಾಗುವುದನ್ನು ತಡೆಯಲು ಹೆತ್ತವರು ತುಂಬ ಪರಿಶ್ರಮಪಡಬೇಕು. ನಿಜ, ಅವರ ಮುಖ್ಯ ಸಾಧನವು ಬೈಬಲ್‌ ಆಗಿದೆ. ಅದರ ಸಹಾಯದಿಂದ ಅವರು ‘ಖಂಡಿಸಿ, ತಿದ್ದಿ, ತಮ್ಮ ಮಗುವನ್ನು ಸಕಲಸತ್ಕಾರ್ಯಕ್ಕೆ ಸನ್ನದ್ಧಗೊಳಿಸಬಲ್ಲರು.’​—2 ತಿಮೊಥೆಯ 3:​15-17.

ಆದರೆ ಒಬ್ಬ ಹದಿವಯಸ್ಕನು, ಅವನು ಚಿಕ್ಕವನಿದ್ದಾಗ ಹೆತ್ತವರ ಬುದ್ಧಿವಾದವನ್ನು ಸ್ವೀಕರಿಸುತ್ತಿದ್ದಷ್ಟು ಸಿದ್ಧಮನಸ್ಸಿನಿಂದ ಈಗ ಸ್ವೀಕರಿಸಲಿಕ್ಕಿಲ್ಲ. ಹದಿವಯಸ್ಕರು ತಮ್ಮ ಸಮಾನಸ್ಥರಿಗೆ ಹೆಚ್ಚು ಗಮನವನ್ನು ಕೊಡಲಾರಂಭಿಸಬಹುದು. ಆದುದರಿಂದ ಹೆತ್ತವರೊಂದಿಗೆ ಮುಚ್ಚುಮರೆಯಿಲ್ಲದೆ ಮತ್ತು ಪ್ರಯಾಸವಿಲ್ಲದೆ ನಡೆಯುತ್ತಿದ್ದ ಸಂವಾದವು ಈಗ ಕ್ಷೀಣಿಸಬಹುದು. ಹೆತ್ತವರ ಮತ್ತು ಮಕ್ಕಳ ಪಾತ್ರಗಳು ಒಂದು ಹೊಸ ರಂಗವನ್ನು ಪ್ರವೇಶಿಸುವಾಗ, ಇದು ಹೆಚ್ಚಿನ ತಾಳ್ಮೆ ಮತ್ತು ಕುಶಲತೆಯನ್ನು ಅಗತ್ಯಪಡಿಸುವ ಸಮಯವಾಗಿದೆ. ಆ ಹದಿವಯಸ್ಕನು ತನ್ನಲ್ಲಾಗುತ್ತಿರುವ ಶಾರೀರಿಕ ಮತ್ತು ಭಾವನಾತ್ಮಕ ಬದಲಾವಣೆಗಳಿಗೆ ಹೊಂದಿಕೊಳ್ಳಲಿಕ್ಕಿರುತ್ತದೆ. ಅವನು ತನ್ನ ಉಳಿದ ಜೀವಮಾನವನ್ನು ಬಾಧಿಸಬಲ್ಲ ನಿರ್ಣಯಗಳನ್ನು ಮಾಡಲು ಹಾಗೂ ಗುರಿಗಳನ್ನು ಇಡಲು ಆರಂಭಿಸಬೇಕು. (2 ತಿಮೊಥೆಯ 2:22) ಈ ಪಂಥಾಹ್ವಾನದಾಯಕ ಸಮಯಾವಧಿಯಾದ್ಯಂತ ಅವನು ತನ್ನ ಹೃದಯದ ಮೇಲೆ ಧ್ವಂಸಕಾರಕ ಪ್ರಭಾವವನ್ನು ಬೀರಬಲ್ಲ ಒಂದು ಶಕ್ತಿ, ಅಂದರೆ ಸಮಾನಸ್ಥರ ಒತ್ತಡದೊಂದಿಗೆ ವ್ಯವಹರಿಸಬೇಕಾಗುತ್ತದೆ.

ಅಂಥ ಒತ್ತಡವು, ಎದ್ದುಕಾಣುವಂಥ ಒಂದೇ ಒಂದು ಘಟನೆಯಲ್ಲಿ ಬರುವುದು ಅಪರೂಪ. ಅದರ ಬದಲು ಅದು ಸಾಮಾನ್ಯವಾಗಿ, ದುರ್ಬಲಗೊಳಿಸುವಂಥ ಹೇಳಿಕೆಗಳು ಇಲ್ಲವೆ ಸಂದರ್ಭಗಳ ಒಂದು ಸರಮಾಲೆಯ ಮೂಲಕ ವ್ಯಕ್ತಪಡಿಸಲ್ಪಡುತ್ತದೆ. ಮತ್ತು ಇವು ಅನೇಕರಲ್ಲಿರುವ ಒಂದು ಬಲಹೀನ ಅಂಶದ ಮೇಲೆ ದಾಳಿಮಾಡುತ್ತವೆ. ಆ ಅಂಶವೇನು? ಬೇರೆ ಯುವ ಜನರು ತನ್ನನ್ನು ತಿರಸ್ಕರಿಸುವರೆಂಬ ಆಳವಾಗಿ ಬೇರೂರಿರುವ ಭಯವೇ. ಸ್ವಪ್ರಜ್ಞೆ ಹಾಗೂ ಇತರರಿಂದ ಸ್ವೀಕರಿಸಲ್ಪಡಬೇಕೆಂಬ ಭಾವನೆಗಳ ಆಂತರಿಕ ಹೋರಾಟದಿಂದಾಗಿ, ಒಬ್ಬ ಯುವ ವ್ಯಕ್ತಿಯು ಇತರ ಯುವ ಜನರು ಪ್ರವರ್ಧಿಸುವಂಥ ‘ಲೋಕದಲ್ಲಿರುವವುಗಳನ್ನು’ ಸಮ್ಮತಿಸಲಾರಂಭಿಸಬಹುದು.​—1 ಯೋಹಾನ 2:​15-17; ರೋಮಾಪುರ 12:2.

ಈ ಪರಿಸ್ಥಿತಿಯನ್ನು ಇನ್ನಷ್ಟು ಕೆಟ್ಟದಾಗಿಸುವ ಸಂಗತಿಯೇನೆಂದರೆ, ಅಪರಿಪೂರ್ಣ ಹೃದಯದ ಸ್ವಾಭಾವಿಕ ಆಸೆಗಳು, ಅವನ ಸಮಾನಸ್ಥರು ಕೊಡುವ ಸಂದೇಶಕ್ಕೆ ಇನ್ನಷ್ಟು ಒತ್ತನ್ನು ನೀಡಬಹುದು. “ಮಜಾಮಾಡು” ಮತ್ತು “ನಿನಗೆ ಬೇಕಾದದ್ದನ್ನು ಮಾಡು” ಎಂಬಂಥ ಮಾತುಗಳು ತುಂಬ ಆಕರ್ಷಣೀಯವಾಗಿ ಧ್ವನಿಸಬಹುದು. ಮಾರಿಯಾ ತನ್ನ ಅನುಭವವನ್ನು ಜ್ಞಾಪಿಸಿಕೊಳ್ಳುವುದು: “ಯುವ ಜನರಿಗೆ, ಫಲಿತಾಂಶಗಳ ಕುರಿತಾಗಿ ತಲೆಕೆಡಿಸಿಕೊಳ್ಳದೆ ಪೂರ್ಣ ರೀತಿಯಲ್ಲಿ ಮಜಾಮಾಡುವ ಹಕ್ಕಿದೆಯೆಂದು ನಂಬುತ್ತಿದ್ದ ಜೊತೆ ಹದಿವಯಸ್ಕರಿಗೆ ನಾನು ಕಿವಿಗೊಟ್ಟೆ. ನನ್ನ ಶಾಲಾ ಸ್ನೇಹಿತರು ಏನೇನು ಮಾಡುತ್ತಿದ್ದರೊ ಅದನ್ನೇ ನಾನೂ ಮಾಡಲು ಬಯಸುತ್ತಿದ್ದದ್ದರಿಂದ, ನಾನು ಇನ್ನೇನು ಗಂಭೀರವಾದ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳಲಿದ್ದೆ.” ಒಬ್ಬ ಹೆತ್ತವರೋಪಾದಿ ನೀವು, ಇಂಥ ಒತ್ತಡವನ್ನು ನಿಮ್ಮ ಹದಿವಯಸ್ಕ ಮಗನು ಜಯಿಸಬೇಕೆಂದು ಬಯಸಬಹುದಾದರೂ, ನೀವದನ್ನು ಹೇಗೆ ಮಾಡಬಲ್ಲಿರಿ?

ನಿಮ್ಮ ನಡೆನುಡಿಗಳಿಂದ ನೀವು ಅವನ ಕುರಿತಾಗಿ ಚಿಂತಿಸುತ್ತೀರೆಂಬ ಆಶ್ವಾಸನೆ ಹಾಗೂ ಪುನರಾಶ್ವಾಸನೆಯನ್ನು ಕೊಡಿರಿ. ವಿಷಯಗಳ ಬಗ್ಗೆ ಅವನಿಗೆ ಹೇಗನಿಸುತ್ತದೆಂಬದನ್ನು ಕಂಡುಹಿಡಿಯಲು ಮತ್ತು ಅವನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಇವು, ನೀವು ಶಾಲೆಯಲ್ಲಿ ಎದುರಿಸಿದಂಥ ಸಮಸ್ಯೆಗಳಿಗಿಂತಲೂ ಹೆಚ್ಚು ಕಷ್ಟಕರವಾಗಿರಬಹುದು. ವಿಶೇಷವಾಗಿ ಈ ಸಮಯದಲ್ಲಿ ನಿಮ್ಮ ಮಗನು, ತಾನು ಮನಬಿಚ್ಚಿ ಮಾತಾಡಬಹುದಾದ ಒಬ್ಬ ವ್ಯಕ್ತಿಯೋಪಾದಿ ನಿಮ್ಮನ್ನು ಪರಿಗಣಿಸಬೇಕಾದ ಅಗತ್ಯವಿದೆ. (ಜ್ಞಾನೋಕ್ತಿ 20:5) ಅವನ ದೇಹ ಭಾಷೆ ಇಲ್ಲವೆ ಮನಃಸ್ಥಿತಿಗಳಿಂದ ನೀವು ಅವನಲ್ಲಿರುವ ಸಂಕಟ ಇಲ್ಲವೆ ಗಲಿಬಿಲಿಯನ್ನು ಗಮನಿಸಬಹುದು. ಅವನ ಮೌನ ಕೂಗುಗಳಿಗೆ ಸ್ಪಂದಿಸಿರಿ ಮತ್ತು ‘ಅವನ ಹೃದಯವನ್ನು ದೃಢಪಡಿಸಿರಿ.’​—ಕೊಲೊಸ್ಸೆ 2:2.

ಆದರೆ ಯಾವುದು ಸರಿಯಾಗಿದೆಯೊ ಅದಕ್ಕಾಗಿ ದೃಢರಾಗಿರುವುದು ಪ್ರಾಮುಖ್ಯವಾಗಿದೆ ನಿಜ. ಆಗಾಗ್ಗೆ ಹೆತ್ತವರು ಮತ್ತು ಮಗುವಿನ ನಡುವೆ ಸಂಘರ್ಷಣೆಯುಂಟಾಗುತ್ತದೆ, ಆದರೆ ತಮ್ಮ ನಿರ್ಣಯವು ಸಾಧಾರವುಳ್ಳದ್ದಾಗಿರುವಾಗ ತಾವು ಬಿಟ್ಟುಕೊಡಬಾರದು ಎಂಬದನ್ನು ಅನೇಕ ಹೆತ್ತವರು ಕಂಡುಕೊಂಡಿದ್ದಾರೆ. ಆದರೆ ಇನ್ನೊಂದು ಕಡೆಯಲ್ಲಿ, ಪ್ರೀತಿಪರ ಶಿಸ್ತನ್ನು ಕೊಡಬೇಕೊ ಬಾರದೊ ಮತ್ತು ಅದನ್ನು ಕೊಡುವ ಅಗತ್ಯವಿರುವಲ್ಲಿ ಹೇಗೆ ಕೊಡಬೇಕು ಎಂಬದನ್ನು ನಿರ್ಣಯಿಸುವ ಮುಂಚೆ ನಿಮಗೆ ಆ ಸನ್ನಿವೇಶವು ಸ್ಪಷ್ಟವಾಗಿ ಅರ್ಥವಾಗಿದೆ ಎಂಬದನ್ನು ಖಚಿತಪಡಿಸಿಕೊಳ್ಳಿರಿ.​—ಜ್ಞಾನೋಕ್ತಿ 18:13.

ಸಭೆಯೊಳಗಿಂದಲೂ ಪರೀಕ್ಷೆಗಳು

ಒಂದು ಮಣ್ಣಿನ ಪಾತ್ರೆಯ ಕೆಲಸವು ಪೂರ್ತಿಯಾಗಿರುವಂತೆ ತೋರಬಹುದು, ಆದರೆ ಅದನ್ನು ಒಲೆಯಲ್ಲಿ ಹಾಕಿ ಸುಡದಿದ್ದರೆ, ಏನನ್ನು ಹಿಡಿದಿಟ್ಟುಕೊಳ್ಳುವಂತೆ ಅದು ವಿನ್ಯಾಸಿಸಲ್ಪಟ್ಟಿದೆಯೊ ಆ ದ್ರವಪದಾರ್ಥಗಳೇ ಅದನ್ನು ಸವೆಯಿಸಬಲ್ಲವು. ಬೈಬಲು ಪರೀಕ್ಷೆಗಳು ಮತ್ತು ತೊಂದರೆಗಳನ್ನು ಅಂಥ ಒಂದು ಸುಡುವ ಪ್ರಕ್ರಿಯೆಗೆ ಹೋಲಿಸುತ್ತದೆ, ಏಕೆಂದರೆ ನಾವು ನಿಜವಾಗಿಯೂ ಯಾವ ರೀತಿಯ ವ್ಯಕ್ತಿಗಳಾಗಿದ್ದೇವೆಂಬದನ್ನು ಅವು ತೋರಿಸುತ್ತವೆ. ಬೈಬಲು ವಿಶೇಷವಾಗಿ ನಮ್ಮ ನಂಬಿಕೆಯ ಪರೀಕ್ಷೆಗಳ ಕುರಿತಾಗಿ ಮಾತಾಡುತ್ತಿದೆ ಎಂಬುದು ನಿಜವಾಗಿರುವುದಾದರೂ, ಸಾಮಾನ್ಯವಾಗಿ ನೋಡುವುದಾದರೆ ಆ ಅಂಶವು ಬೇರೆ ಪರೀಕ್ಷೆಗಳಿಗೂ ಅನ್ವಯವಾಗುತ್ತದೆ. (ಯಾಕೋಬ 1:​2-4) ಆದರೆ ಆಶ್ಚರ್ಯಕರ ಸಂಗತಿಯೇನೆಂದರೆ, ಯುವ ಜನರು ಎದುರಿಸಬಹುದಾದ ಕೆಲವೊಂದು ಕಷ್ಟಕರ ಪರೀಕ್ಷೆಗಳು ಸಭೆಯೊಳಗಿಂದಲೇ ಬರಬಹುದು.

ನಿಮ್ಮ ಹದಿವಯಸ್ಕ ಮಗನು/ಳು ಒಳ್ಳೇ ಆತ್ಮಿಕ ಆರೋಗ್ಯದಿಂದ ನಳನಳಿಸುತ್ತಿರುವಂತೆ ತೋರಬಹುದಾದರೂ, ಒಳಗಿಂದೊಳಗೆ ಅವನು/ಳು ಒಂದು ವಿಭಾಜಿತ ಹೃದಯದೊಂದಿಗೆ ಹೆಣಗಾಡುತ್ತಿರಬಹುದು. (1 ಅರಸುಗಳು 18:21) ದೃಷ್ಟಾಂತಕ್ಕಾಗಿ, ಮೇಗನ್‌ ಎಂಬವಳು, ರಾಜ್ಯ ಸಭಾಗೃಹಕ್ಕೆ ಬರುತ್ತಿದ್ದ ಇತರ ಯುವ ಜನರಿಂದ ಹೊರಹೊಮ್ಮುತ್ತಿದ್ದ ಲೌಕಿಕ ವಿಚಾರಗಳನ್ನು ಎದುರಿಸಿದಳು:

“ಕ್ರೈಸ್ತತ್ವವು ಬೇಸರಹಿಡಿಸುವಂಥದ್ದಾಗಿದೆ ಮತ್ತು ಮಜಾಮಾಡಲು ಒಂದು ತಡೆಯಾಗಿದೆಯೆಂದು ಪರಿಗಣಿಸಿದಂಥ ಯುವ ಜನರ ಒಂದು ಗುಂಪಿನಿಂದ ನಾನು ಪ್ರಭಾವಿಸಲ್ಪಟ್ಟೆ. ಅವರು ಹೀಗೆಲ್ಲಾ ಹೇಳುತ್ತಿದ್ದರು: ‘ನನಗೆ 18 ವರ್ಷ ಪ್ರಾಯವಾದ ಕೂಡಲೆ ನಾನು ಸತ್ಯವನ್ನು ಬಿಟ್ಟುಹೋಗುವೆ,’ ಇಲ್ಲವೆ, ‘ಸತ್ಯದಿಂದ ಹೊರಹೋಗಲು ನಾನು ತುದಿಗಾಲಲ್ಲಿ ನಿಂತಿದ್ದೇನೆ.’ ಅವರ ಈ ಮಾತುಗಳೊಂದಿಗೆ ಸಮ್ಮತಿಸದಿದ್ದವರನ್ನು ಅವರು ‘ಸಂಭಾವಿತರು’ ಎಂದು ಕರೆಯುತ್ತಾ ಅವರನ್ನು ದೂರವಿಡುತ್ತಿದ್ದರು.”

ಕೆಟ್ಟ ಮನೋಭಾವವುಳ್ಳ ಒಬ್ಬಿಬ್ಬರು ಇದ್ದರೆ ಸಾಕು, ಅವರು ಉಳಿದವರೆಲ್ಲರನ್ನೂ ಕೆಡಿಸಬಲ್ಲರು. ಒಂದು ಗುಂಪಿನಲ್ಲಿರುವ ವ್ಯಕ್ತಿಗಳು ಸಾಮಾನ್ಯವಾಗಿ, ಅಧಿಕಾಂಶ ವ್ಯಕ್ತಿಗಳು ಏನು ಮಾಡುತ್ತಾರೋ ಅದನ್ನೇ ಅನುಕರಿಸುತ್ತಾರೆ. ಮೂರ್ಖತನ ಮತ್ತು ಮೊಂಡುಧೈರ್ಯವು, ವಿವೇಕ ಹಾಗೂ ಸಭ್ಯತೆಯನ್ನು ತುಳಿದುಹಾಕಬಹುದು. ತಮ್ಮ ಗುಂಪಿನಲ್ಲಿದ್ದ ಬೇರೆಲ್ಲರಂತೆ ಮಾಡಲು ಹೋದದ್ದರಿಂದ ತೊಂದರೆಯಲ್ಲಿ ಸಿಕ್ಕಿಬಿದ್ದಿರುವ ಕ್ರೈಸ್ತ ಯುವ ಜನರ ದುಃಖಕರ ಪ್ರಸಂಗಗಳು ಅನೇಕ ದೇಶಗಳಲ್ಲಿ ನಡೆದಿವೆ.

ನಿಜ, ಹದಿವಯಸ್ಕರಿಗೆ ಇಂಥಿಷ್ಟು ಪ್ರಮಾಣದ ಆನಂದಮಯ ಸಹವಾಸವು ಬೇಕು. ಒಬ್ಬ ಹೆತ್ತವರೋಪಾದಿ ನೀವು ಇದನ್ನು ಹೇಗೆ ಒದಗಿಸಬಹುದು? ಅವರ ಮನೋರಂಜನೆಯ ಕುರಿತು ಗಂಭೀರವಾಗಿ ಯೋಚಿಸಿರಿ, ಮತ್ತು ಕುಟುಂಬದೊಂದಿಗೆ ಇಲ್ಲವೆ ಯುವ ಜನರು ಹಾಗೂ ವಯಸ್ಕರು ಸೇರಿರುವ ಒಂದು ಗುಂಪಿನೊಂದಿಗೆ ಆಸಕ್ತಿಕರವಾದ ಚಟುವಟಿಕೆಗಳನ್ನು ಯೋಜಿಸಿರಿ. ನಿಮ್ಮ ಮಗುವಿನ ಸ್ನೇಹಿತರನ್ನು ನೀವು ಪರಿಚಯಮಾಡಿಕೊಳ್ಳಿ. ಅವರನ್ನು ಒಂದು ಊಟಕ್ಕೆ ಕರೆಯಿರಿ, ಇಲ್ಲವೆ ಒಂದು ಸಾಯಂಕಾಲವನ್ನು ಅವರೊಂದಿಗೆ ಕಳೆಯಿರಿ. (ರೋಮಾಪುರ 12:13) ನಿಮ್ಮ ಮಗು ಸಂಗೀತೋಪಕರಣವೊಂದನ್ನು ನುಡಿಸುವ ಇಲ್ಲವೆ ಇನ್ನೊಂದು ಭಾಷೆ ಅಥವಾ ಒಂದು ಕಸಬನ್ನು ಕರಗತಗೊಳಿಸಿಕೊಳ್ಳುವುದರಂಥ ಒಂದು ಹಿತಕರವಾದ ಚಟುವಟಿಕೆಯನ್ನು ಬೆನ್ನಟ್ಟುವಂತೆ ಉತ್ತೇಜಿಸಿರಿ. ಬಹುಮಟ್ಟಿಗೆ, ಅವನಿದನ್ನು ಮನೆಯಲ್ಲಿನ ಸುರಕ್ಷಿತ ವಾತಾವರಣದೊಳಗೇ ಮಾಡಲು ಶಕ್ತನಾಗಿರುವನು.

ಶಾಲಾ ಶಿಕ್ಷಣವು ಒಂದು ಸುರಕ್ಷೆಯಾಗಿರಬಲ್ಲದು

ಒಬ್ಬ ಹದಿವಯಸ್ಕನ ಶಾಲಾ ಶಿಕ್ಷಣವು ಸಹ, ಅವನು ಮನೋರಂಜನೆಯನ್ನು ಸರಿಯಾದ ಸ್ಥಾನದಲ್ಲಿರಿಸುವಂತೆ ಸಹಾಯಮಾಡಬಲ್ಲದು. ಒಂದು ದೊಡ್ಡ ಶಾಲೆಯಲ್ಲಿ 20 ವರ್ಷಗಳಿಂದ ಒಬ್ಬ ನಿರ್ವಹಣಾಡಳಿತ ಅಧಿಕಾರಿಯಾಗಿರುವ ಲೋಲಿ ಎಂಬವರು ಹೇಳುವುದು: “ಅನೇಕಾನೇಕ ಸಾಕ್ಷಿಗಳು ಶಾಲೆಗೆ ಹೋಗುತ್ತಿರುವುದನ್ನು ನೋಡಿದ್ದೇನೆ. ಅವರಲ್ಲಿ ಅನೇಕರ ನಡತೆಯು ಶ್ಲಾಘನಾರ್ಹವಾಗಿತ್ತು, ಆದರೆ ಅವರಲ್ಲಿ ಕೆಲವರು ಬೇರೆ ವಿದ್ಯಾರ್ಥಿಗಳಿಂದ ಯಾವುದೇ ರೀತಿಯಲ್ಲಿ ಭಿನ್ನರಾಗಿರಲಿಲ್ಲ. ಒಳ್ಳೆಯ ಮಾದರಿಗಳಾಗಿದ್ದವರು, ತಮ್ಮ ಪಾಠಗಳಲ್ಲಿ ಆಸಕ್ತಿಯನ್ನು ವಹಿಸಿದವರಾಗಿದ್ದರು. ಹೆತ್ತವರು ತಮ್ಮ ಮಕ್ಕಳ ಶಾಲಾ ಪ್ರಗತಿಯಲ್ಲಿ ಸಕ್ರಿಯವಾದ ಆಸಕ್ತಿಯನ್ನು ವಹಿಸುವುದು, ಅವರ ಶಿಕ್ಷಕರ ಪರಿಚಯ ಮಾಡಿಕೊಳ್ಳುವುದು, ಮತ್ತು ಒಂದು ಒಳ್ಳೇ ರಿಪೋರ್ಟನ್ನು ಹೊಂದುವುದು ಪ್ರಾಮುಖ್ಯವಾಗಿದೆ ಎಂಬ ವಿಚಾರವನ್ನು ತಮ್ಮ ಮಕ್ಕಳಿಗೆ ಮನದಟ್ಟುಮಾಡುವಂತೆ ನಾನು ಹೆತ್ತವರಿಗೆ ಬಲವಾದ ಸಲಹೆಯನ್ನು ಕೊಡುವೆ. ತುಂಬ ಉತ್ಕೃಷ್ಟ ಮಟ್ಟಗಳನ್ನು ತಲಪುವವರು ಕೆಲವರೇ ಆದರೂ, ಎಲ್ಲರೂ ತೃಪ್ತಿದಾಯಕ ಮಟ್ಟಗಳನ್ನು ತಲಪಿ, ತಮ್ಮ ಶಿಕ್ಷಕರ ಗೌರವವನ್ನು ಸಂಪಾದಿಸಬಲ್ಲರು.”

ಅಂಥ ಶಾಲಾ ಶಿಕ್ಷಣವು ಹದಿವಯಸ್ಕರಿಗೆ ಆತ್ಮಿಕವಾಗಿಯೂ ಪ್ರಗತಿಮಾಡುವಂತೆ ಸಹಾಯಮಾಡಬಲ್ಲದು. ಅದು ಅವರಿಗೆ ಒಳ್ಳೇ ಅಧ್ಯಯನ ರೂಢಿಗಳನ್ನು, ಮಾನಸಿಕ ಶಿಸ್ತನ್ನು ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಕಲಿಸಬಲ್ಲದು. ಚೆನ್ನಾಗಿ ಓದುವ ಮತ್ತು ವಿಚಾರಗಳನ್ನು ಗ್ರಹಿಸುವ ಅವರ ಸಾಮರ್ಥ್ಯವು, ಅವರು ದೇವರ ವಾಕ್ಯದ ಹೆಚ್ಚು ಉತ್ತಮ ವಿದ್ಯಾರ್ಥಿಗಳೂ ಶಿಕ್ಷಕರೂ ಆಗುವಂತೆ ನಿಸ್ಸಂದೇಹವಾಗಿಯೂ ಉತ್ತೇಜಿಸುವುದು. (ನೆಹೆಮೀಯ 8:8) ಅವರ ಶಾಲಾಕೆಲಸ ಮತ್ತು ಅವರ ಆತ್ಮಿಕ ಅಧ್ಯಯನಗಳ ಆವಶ್ಯಕತೆಗಳು, ಅವರು ಮನೋರಂಜನೆಯನ್ನು ಅದರ ತಕ್ಕ ಸ್ಥಾನದಲ್ಲಿಡುವಂತೆ ಸಹಾಯಮಾಡಬಲ್ಲದು.

ಹೆತ್ತವರಾದ ನಿಮಗೂ ಯೆಹೋವನಿಗೂ ಕೀರ್ತಿ

ಪ್ರಾಚೀನ ಗ್ರೀಸ್‌ನಲ್ಲಿನ ಅನೇಕ ಹೂಕುಂಡಗಳಲ್ಲಿ, ಕುಂಬಾರನ ಮತ್ತು ಅಲಂಕಾರಮಾಡಿದವನ ಹಸ್ತಾಕ್ಷರಗಳಿರುತ್ತಿದ್ದವು. ಹಾಗೆಯೇ, ಕುಟುಂಬದಲ್ಲಿ ಮಕ್ಕಳನ್ನು ರೂಪಿಸುವವರು ಸಾಮಾನ್ಯವಾಗಿ ಇಬ್ಬರಾಗಿರುತ್ತಾರೆ. ತಂದೆ ಮತ್ತು ತಾಯಿ ಇಬ್ಬರೂ ಮಗುವಿನ ಹೃದಯವನ್ನು ರೂಪಿಸುವುದರಲ್ಲಿ ಪಾಲ್ಗೊಳ್ಳುತ್ತಾರೆ, ಮತ್ತು ಈ ಕಾರಣದಿಂದ ಸಾಂಕೇತಿಕವಾಗಿ ನಿಮ್ಮ ಮಗು ಇಬ್ಬರ “ಹಸ್ತಾಕ್ಷರಗಳನ್ನೂ” ಹೊಂದಿರುತ್ತದೆ. ಒಬ್ಬ ಯಶಸ್ವಿ ಕುಂಬಾರನಂತೆ ಮತ್ತು/ಇಲ್ಲವೆ ಅಲಂಕಾರಮಾಡುವವರಂತೆ, ಯೋಗ್ಯತೆ ಹಾಗೂ ಸೌಂದರ್ಯವುಳ್ಳ ಒಬ್ಬ ಯುವ ವ್ಯಕ್ತಿಯನ್ನು ರೂಪಿಸುವುದರಲ್ಲಿ ನೀವು ಮಾಡಿರುವ ಕೆಲಸದ ಕುರಿತು ನೀವೇ ಹೆಮ್ಮೆಪಡಬಹುದು.​—ಜ್ಞಾನೋಕ್ತಿ 23:​24, 25.

ಈ ದೊಡ್ಡ ಪ್ರಯತ್ನದ ಯಶಸ್ಸು, ನೀವು ಎಷ್ಟರ ಮಟ್ಟಿಗೆ ನಿಮ್ಮ ಮಗುವಿನ ಹೃದಯವನ್ನು ರೂಪಿಸಿದ್ದೀರೆಂಬದರ ಮೇಲೆ ಬಹಳಷ್ಟು ಹೊಂದಿಕೊಂಡಿರುವುದು. “ದೇವರ ಧರ್ಮೋಪದೇಶವು ಅವನ ಹೃದಯದಲ್ಲಿರುವದು; ಅವನು ಜಾರುವದೇ ಇಲ್ಲ” ಎಂದು ನೀವು ಸಹ ಹೇಳುವಂತಾಗಲಿ ಎಂದು ಹಾರೈಸುತ್ತೇವೆ. (ಕೀರ್ತನೆ 37:31) ಒಂದು ಮಗುವಿನ ಹೃದಯದ ಸ್ಥಿತಿಯು ಬಹಳ ಪ್ರಾಮುಖ್ಯವಾದದ್ದಾಗಿದೆ. ಆದುದರಿಂದ ಅದನ್ನು ಮಾರ್ಗದರ್ಶನವಿಲ್ಲದೆ ಬಿಡಲು ಸಾಧ್ಯವೇ ಇಲ್ಲ.

[ಪಾದಟಿಪ್ಪಣಿಗಳು]

^ ಪ್ಯಾರ. 8 ಕೆಲವು ಹೆತ್ತವರು ತಮ್ಮ ನವಜಾತ ಶಿಶುವಿಗೆ ಬೈಬಲನ್ನು ಓದಿಹೇಳುತ್ತಾರೆ. ಆ ಶಾಂತವಾದ ಧ್ವನಿ ಮತ್ತು ಆನಂದದಾಯಕ ಅನುಭವವು, ಮಗುವಿನ ಉಳಿದ ಜೀವಮಾನದಾದ್ಯಂತ ಅವನಲ್ಲಿ ಓದುವಿಕೆಗಾಗಿ ಗಣ್ಯತೆಯನ್ನು ಕೆರಳಿಸಬಹುದು.

^ ಪ್ಯಾರ. 9 ಕೆಲವೊಂದು ಹೆಸರುಗಳು ಬದಲಾಯಿಸಲ್ಪಟ್ಟಿವೆ.