ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧಾರ್ಮಿಕ ಹಿಂಸೆ ಯಾತಕ್ಕಾಗಿ?

ಧಾರ್ಮಿಕ ಹಿಂಸೆ ಯಾತಕ್ಕಾಗಿ?

ಧಾರ್ಮಿಕ ಹಿಂಸೆ ಯಾತಕ್ಕಾಗಿ?

ಜನರನ್ನು ಅವರ ಧರ್ಮದ ಕಾರಣದಿಂದಾಗಿ ಹಿಂಸಿಸಬೇಕೆಂದು ನೀವು ನೆನಸುತ್ತೀರೋ? ಬಹುಶಃ ಇಲ್ಲ. ಕಡಿಮೆಪಕ್ಷ ಅವರು ಎಲ್ಲಿಯ ವರೆಗೆ ಬೇರೆ ಧರ್ಮದವರ ಹಕ್ಕುಗಳಿಗೆ ಅಡ್ಡಬರುವುದಿಲ್ಲವೊ ಅಲ್ಲಿಯ ವರೆಗೆ ಅವರನ್ನು ಹಿಂಸಿಸಬಾರದೆಂದು ನೀವು ನೆನಸಬಹುದು. ಆದರೂ ಧಾರ್ಮಿಕ ಹಿಂಸೆಯು ದೀರ್ಘ ಸಮಯದಿಂದ ಇತ್ತು ಮತ್ತು ಈಗಲೂ ಮುಂದುವರಿಯುತ್ತಿದೆ. ಉದಾಹರಣೆಗಾಗಿ, 20ನೆಯ ಶತಮಾನದಾದ್ಯಂತ ಯೂರೋಪಿನಲ್ಲಿ ಮತ್ತು ಲೋಕದ ಇತರ ಭಾಗಗಳಲ್ಲಿರುವ ಯೆಹೋವನ ಸಾಕ್ಷಿಗಳಲ್ಲಿ ಅನೇಕರ ಧಾರ್ಮಿಕ ಹಕ್ಕುಗಳನ್ನು ಪದೇ ಪದೇ ಅಪಹರಿಸಲಾಯಿತು ಮತ್ತು ಅವರನ್ನು ಕ್ರೂರವಾಗಿ ಹಿಂಸಿಸಲಾಯಿತು.

ಆ ಸಮಯದಲ್ಲಿ, ಯೆಹೋವನ ಸಾಕ್ಷಿಗಳು ಯೂರೋಪಿನ ಎರಡೂ ಪ್ರಧಾನ ನಿರಂಕುಶ ಪ್ರಭುತ್ವಗಳ ಕೆಳಗೆ ಕ್ರೂರವೂ ಕ್ರಮಬದ್ಧವೂ ಆದ ದೀರ್ಘಕಾಲದ ಹಿಂಸೆಯನ್ನು ಅನುಭವಿಸಿದರು. ಧಾರ್ಮಿಕ ಹಿಂಸೆಯ ಕುರಿತಾದ ಅವರ ಅನುಭವವು ನಮಗೆ ಏನನ್ನು ಕಲಿಸುತ್ತದೆ? ಮತ್ತು ಅವರು ಕಷ್ಟಾನುಭವಕ್ಕೆ ತೋರಿಸಿದ ಪ್ರತಿಕ್ರಿಯೆಯಿಂದ ನಾವೇನನ್ನು ಕಲಿಯಸಾಧ್ಯವಿದೆ?

“ಲೋಕದ ಭಾಗವಾಗಿಲ್ಲ”

ಯೆಹೋವನ ಸಾಕ್ಷಿಗಳು ನಿಯಮಪಾಲಕರೂ, ಶಾಂತಿಪ್ರಿಯರೂ ಮತ್ತು ನೈತಿಕವಾಗಿ ಸತ್ಯವಂತರಾದ ಜನರೂ ಆಗಿರಲು ಪ್ರಯತ್ನಿಸುತ್ತಾರೆ. ಅವರು ಸರ್ಕಾರಗಳನ್ನು ವಿರೋಧಿಸುವುದಿಲ್ಲ ಅಥವಾ ಅವುಗಳೊಂದಿಗೆ ಸಂಘರ್ಷಗಳನ್ನು ಮಾಡುವುದಿಲ್ಲ, ಇಲ್ಲವೆ ಅವರು ಹುತಾತ್ಮರಾಗಲು ಬಯಸುವುದರಿಂದ ಹಿಂಸೆಯನ್ನು ಕೆರಳಿಸುವುದೂ ಇಲ್ಲ. ಈ ಕ್ರೈಸ್ತರು ರಾಜಕೀಯವಾಗಿ ತಟಸ್ಥರಾಗಿದ್ದಾರೆ. ಇದು ಯೇಸುವಿನ ಈ ಮಾತುಗಳಿಗೆ ಹೊಂದಿಕೆಯಲ್ಲಿದೆ: “ನಾನು ಲೋಕದವನಲ್ಲದೆ ಇರುವ ಪ್ರಕಾರ [ನನ್ನ ಹಿಂಬಾಲಕರೂ] ಲೋಕದವರಲ್ಲ [“ಲೋಕದ ಭಾಗವಾಗಿಲ್ಲ,” NW].” (ಯೋಹಾನ 17:16) ಹೆಚ್ಚಿನ ಸರ್ಕಾರಗಳು ಯೆಹೋವನ ಸಾಕ್ಷಿಗಳ ತಟಸ್ಥ ನಿಲುವನ್ನು ಅಂಗೀಕರಿಸುತ್ತವೆ. ಆದರೆ ನಿರಂಕುಶ ಪ್ರಭುಗಳಿಗಾದರೋ, ಕ್ರೈಸ್ತರು ಈ ಲೋಕದ ಭಾಗವಾಗಿರಬಾರದು ಎಂಬ ಬೈಬಲಿನ ಆವಶ್ಯಕತೆಯ ಕಡೆಗೆ ಯಾವ ಆದರವೂ ಇಲ್ಲ.

ಜರ್ಮನಿಯ ಹೈಡಲ್‌ಬರ್ಗ್‌ ಯೂನಿರ್ವಸಿಟಿಯಲ್ಲಿ ನವೆಂಬರ್‌ 2000ದಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಇದಕ್ಕೆ ಕಾರಣವನ್ನು ವಿವರಿಸಲಾಯಿತು. ಈ ಸಮ್ಮೇಳನದ ಮುಖ್ಯ ವಿಷಯವು, “ನಿಗ್ರಹ ಮತ್ತು ಆತ್ಮಪ್ರತಿಷ್ಠಾಪನೆ: ರಾಷ್ಟ್ರೀಯ ಸಮಾಜವಾದ ಮತ್ತು ಕಮೂನಿಸ್ಟ್‌ ಪ್ರಭುತ್ವದ ಕೆಳಗೆ ಯೆಹೋವನ ಸಾಕ್ಷಿಗಳು” ಎಂಬುದಾಗಿತ್ತು. ನಿರಂಕುಶವಾದದ ಸಂಶೋಧನೆಗಾಗಿರುವ ಹಾನ್ನಾರೆಂಟ್‌ ಸಂಘಟನೆಯ ಡಾ. ಕ್ಲಾಮೆನ್ಸ್‌ ಫಾಲ್ನ್‌ಹಾಲ್ಸ್‌ ಹೀಗೆ ಹೇಳಿದರು: “ನಿರಂಕುಶ ಪ್ರಭುತ್ವಗಳು ತಮ್ಮ ಚಟುವಟಿಕೆಗಳನ್ನು ಕೇವಲ ರಾಜಕೀಯಕ್ಕೆ ಸೀಮಿತಗೊಳಿಸುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಸಂಪೂರ್ಣ ಅಧೀನತೆಯನ್ನು ನಿರ್ಬಂಧಪಡಿಸುವ ಮೂಲಕವೂ ಅವು ತಮ್ಮ ಅಧಿಕಾರವನ್ನು ಚಲಾಯಿಸುತ್ತವೆ.”

ಸತ್ಯ ಕ್ರೈಸ್ತರು ತಮ್ಮ “ಸಂಪೂರ್ಣ ಅಧೀನತೆ”ಯನ್ನು ಒಂದು ಮಾನವ ಸರಕಾರಕ್ಕೆ ನೀಡಲಾರರು. ಯಾಕೆಂದರೆ ಯೆಹೋವ ದೇವರಿಗೆ ಮಾತ್ರ ತಮ್ಮ ಸಂಪೂರ್ಣ ನಿಷ್ಠೆಯನ್ನು ಕೊಡುವೆವೆಂದು ಅವರು ಪ್ರತಿಜ್ಞೆಮಾಡಿದ್ದಾರೆ. ನಿರಂಕುಶ ಪ್ರಭುತ್ವಗಳ ಕೆಳಗೆ ಜೀವಿಸುವ ಸಾಕ್ಷಿಗಳು, ರಾಜ್ಯದ ಬೇಡಿಕೆಗಳು ಮತ್ತು ಅವರ ನಂಬಿಕೆಯ ಆವಶ್ಯಕತೆಗಳು ಕೆಲವು ಸಾರಿ ಘರ್ಷಣೆಗೊಳಗಾಗುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ. ಅಂಥ ಘರ್ಷಣೆಗಳ ಎದುರಿನಲ್ಲಿ ಅವರೇನು ಮಾಡಿರುತ್ತಾರೆ? ಗತಕಾಲದಲ್ಲಿ, ಅನೇಕಸಲ ಯೆಹೋವನ ಸಾಕ್ಷಿಗಳು ತಮ್ಮ ಜೀವಿತಗಳಲ್ಲಿ, ಯೇಸು ಕ್ರಿಸ್ತನ ಶಿಷ್ಯರಿಂದ ವ್ಯಕ್ತಪಡಿಸಲ್ಪಟ್ಟ ಮೂಲತತ್ತ್ವವನ್ನೇ ಅನ್ವಯಿಸಿಕೊಂಡಿದ್ದಾರೆ: ‘ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು.’​—ಅ. ಕೃತ್ಯಗಳು 5:29.

ಸಾವಿರಾರು ಮಂದಿ ಯೆಹೋವನ ಸಾಕ್ಷಿಗಳು ತಮ್ಮ ಧಾರ್ಮಿಕ ನಂಬಿಕೆಗಳಿಗೆ ನಿಷ್ಠೆಯನ್ನು ತೋರಿಸುತ್ತಾ, ಅತಿ ಕ್ರೂರವಾದ ಹಿಂಸೆಯ ಮಧ್ಯೆಯೂ ರಾಜಕೀಯ ವ್ಯವಹಾರಗಳ ಸಂಬಂಧದಲ್ಲಿ ತಟಸ್ಥರಾಗಿ ಉಳಿದಿದ್ದಾರೆ. ಅವರು ತಾಳಿಕೊಳ್ಳಲು ಶಕ್ತರಾದದ್ದು ಹೇಗೆ? ಹಾಗೆ ಮಾಡಲು ಅವರಿಗೆ ಬಲ ಎಲ್ಲಿಂದ ಸಿಕ್ಕಿತು? ಅವರೇ ಇದನ್ನು ಹೇಳಲಿ. ಮತ್ತು ಅವರ ಅನುಭವಗಳಿಂದ ಪ್ರತಿಯೊಬ್ಬರೂ​—ಸಾಕ್ಷಿಗಳು ಹಾಗೂ ಸಾಕ್ಷ್ಯೇತರರು​—ಏನನ್ನು ಕಲಿಯಬಹುದೆಂಬದನ್ನು ನಾವು ನೋಡೋಣ.

[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]

ಜರ್ಮನಿಯ ಯೆಹೋವನ ಸಾಕ್ಷಿಗಳು ಇಪ್ಪತ್ತನೆಯ ಶತಮಾನದ ಎರಡೂ ನಿರಂಕುಶ ಪ್ರಭುತ್ವಗಳಿಂದ ಕ್ರೂರ ಹಾಗೂ ದೀರ್ಘಕಾಲದ ಹಿಂಸೆಯನ್ನು ಅನುಭವಿಸಿದರು

[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಿರಂಕುಶ ಪ್ರಭುತ್ವಗಳು⁠ತಮ್ಮ ಚಟುವಟಿಕೆಗಳನ್ನು ಕೇವಲ ರಾಜಕೀಯಕ್ಕೆ ಸೀಮಿತಗೊಳಿಸುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಸಂಪೂರ್ಣ ಅಧೀನತೆಯನ್ನು ನಿರ್ಬಂಧಪಡಿಸುವ ಮೂಲಕವೂ ಅವು ತಮ್ಮ ಅಧಿಕಾರವನ್ನು ಚಲಾಯಿಸುತ್ತವೆ.”—ಡಾ. ಕ್ಲಾಮೆನ್ಸ್‌ ಫಾಲ್ನ್‌ಹಾಲ್ಸ್‌

[ಪುಟ 4ರಲ್ಲಿರುವ ಚಿತ್ರ]

ಕುಸ್‌ರೋ ಕುಟುಂಬದವರು ತಮ್ಮ ನಂಬಿಕೆಯನ್ನು ರಾಜಿಮಾಡಿಕೊಳ್ಳದ ಕಾರಣ ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು

[ಪುಟ 4ರಲ್ಲಿರುವ ಚಿತ್ರ]

ಜೋಹಾನ್ಸ್‌ ಹಾಮ್ಸ್‌ರ ನಂಬಿಕೆಗಳ ಕಾರಣದಿಂದ ಅವರನ್ನು ನಾಸಿ ಸೆರೆಮನೆಯೊಂದರಲ್ಲಿ ಹತಿಸಲಾಯಿತು