ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬದಲಾಗುತ್ತಿರುವ ಪರಿಸ್ಥಿತಿಗಳ ಸದುಪಯೋಗವನ್ನು ಮಾಡಿರಿ

ಬದಲಾಗುತ್ತಿರುವ ಪರಿಸ್ಥಿತಿಗಳ ಸದುಪಯೋಗವನ್ನು ಮಾಡಿರಿ

ಬದಲಾಗುತ್ತಿರುವ ಪರಿಸ್ಥಿತಿಗಳ ಸದುಪಯೋಗವನ್ನು ಮಾಡಿರಿ

ನೆದರ್‌ಲೆಂಡ್ಸ್‌ನಲ್ಲಿ ಜೀವಿಸುತ್ತಿರುವ ಪೆಮ್‌, ಯಾನ್‌, ಡ್ರಿಸ್‌ ಮತ್ತು ಒಟೊ ಎಂಬ ನಾಲ್ವರು ಕ್ರೈಸ್ತ ಹಿರಿಯರು, ಹಲವಾರು ರೀತಿಗಳಲ್ಲಿ ಒಂದೇ ಸಮಾನರಾಗಿದ್ದಾರೆ. ಈ ನಾಲ್ವರೂ ವಿವಾಹಿತರು ಮತ್ತು ಮಕ್ಕಳುಳ್ಳವರಾಗಿದ್ದಾರೆ. ಅದಲ್ಲದೆ ಕೆಲವು ವರ್ಷಗಳ ಹಿಂದೆ, ಅವರೆಲ್ಲರೂ ಪೂರ್ಣಸಮಯದ ಐಹಿಕ ಉದ್ಯೋಗದಲ್ಲಿದ್ದರು ಮತ್ತು ಸುಖಸೌಕರ್ಯಗಳಿಂದ ಕೂಡಿದ ಮನೆಗಳಲ್ಲಿ ವಾಸಿಸುತ್ತಿದ್ದರು. ಆದರೂ ಇವರೆಲ್ಲರೂ ಐಹಿಕ ಉದ್ಯೋಗವನ್ನು ಬಿಟ್ಟು, ತಮ್ಮೆಲ್ಲ ಸಮಯ ಮತ್ತು ಶಕ್ತಿಯನ್ನು ರಾಜ್ಯಾಭಿರುಚಿಗಳ ಪ್ರವರ್ಧನೆಗಾಗಿ ಮೀಸಲಾಗಿಡಲು ಆರಂಭಿಸಿದರು. ಈ ಬದಲಾವಣೆಯನ್ನು ಮಾಡಲು ಅವರನ್ನು ಶಕ್ತರನ್ನಾಗಿ ಮಾಡಿದ್ದು ಯಾವುದು? ಆ ನಾಲ್ವರೂ, ಬದಲಾಗುತ್ತಿರುವ ಪರಿಸ್ಥಿತಿಗಳ ಸದುಪಯೋಗವನ್ನು ಮಾಡಿದ್ದರು.

ಬದಲಾಗುತ್ತಿರುವ ಪರಿಸ್ಥಿತಿಗಳು ಕಾಲಕ್ರಮೇಣ ನಮ್ಮೆಲ್ಲರ ಮೇಲೆ ಪರಿಣಾಮ ಬೀರುತ್ತವೆ ಎಂಬುದಂತೂ ನಿಜ. ಮದುವೆಯಾಗುವುದು, ಮಕ್ಕಳನ್ನು ಪಡೆಯುವುದು, ಅಥವಾ ವಯಸ್ಸಾದ ಹೆತ್ತವರನ್ನು ಪರಾಮರಿಸುವುದು ಮುಂತಾದ ಅನೇಕ ಬದಲಾವಣೆಗಳು ಹೆಚ್ಚಿನ ಜವಾಬ್ದಾರಿಗಳನ್ನು ತರುತ್ತವೆ. ಕೆಲವು ಬದಲಾವಣೆಗಳಾದರೋ, ನಮ್ಮ ಕ್ರಿಸ್ತೀಯ ಶುಶ್ರೂಷೆಯನ್ನು ವಿಸ್ತರಿಸಲು ನಮಗೆ ಹೆಚ್ಚಿನ ಸ್ವಾತಂತ್ರ್ಯವನ್ನು ಕೊಡುತ್ತವೆ. (ಮತ್ತಾಯ 9:37, 38) ಉದಾಹರಣೆಗೆ, ನಮ್ಮ ವಯಸ್ಕ ಮಕ್ಕಳು ಬೇರೆ ಮನೆಮಾಡಬಹುದು, ಅಥವಾ ನಾವು ಕೆಲಸದಿಂದ ನಿವೃತ್ತರಾಗಬಹುದು.

ಅಲ್ಲದೆ ನಾವು ಬಯಸಲಿ ಬಯಸದಿರಲಿ, ನಮ್ಮ ಪರಿಸ್ಥಿತಿಗಳು ಬದಲಾಗಬಹುದೆಂಬುದು ನಿಜ ಸಂಗತಿಯಾಗಿದ್ದರೂ, ಕೆಲವು ಕ್ರೈಸ್ತರು ತಮ್ಮ ಪರಿಸ್ಥಿತಿಗಳಲ್ಲಿ ಬದಲಾವಣೆಗಳನ್ನು ಸ್ವತಃ ತರಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಇದು ಶುಶ್ರೂಷೆಯಲ್ಲಿ ತಮ್ಮ ಪಾಲನ್ನು ಹೆಚ್ಚಿಸಲು ಅವರಿಗೆ ಸಂದರ್ಭಗಳನ್ನು ತೆರೆದಿದೆ. ಪೆಮ್‌, ಯಾನ್‌, ಡ್ರಿಸ್‌ ಮತ್ತು ಒಟೊ ಎಂಬವರು ಮಾಡಿದ್ದು ಇದನ್ನೇ. ಹೇಗೆ?

ಮಕ್ಕಳು ಮನೆಯಿಂದ ಪ್ರತ್ಯೇಕಹೋಗುವಾಗ

ಪೆಮ್‌ ಒಂದು ಫಾರ್ಮೆಸಿಯಲ್ಲಿ ಬುಕ್‌ಕೀಪರ್‌ ಆಗಿ ಕೆಲಸಮಾಡುತ್ತಿದ್ದ. ಅವನು ಮತ್ತು ಅವನ ಪತ್ನಿ ಆ್ಯನಿ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಅನೇಕಸಾರಿ ಆಕ್ಸಿಲಿಯರಿ ಪಯನೀಯರರಾಗಿ ಸೇವೆ ಮಾಡುತ್ತಿದ್ದರು. ಪೆಮ್‌ ಮತ್ತು ಆ್ಯನಿ, ಪಯನೀಯರ್‌ ಸೇವೆಯಲ್ಲಿದ್ದ ಇತರರೊಂದಿಗೆ ವಿಶ್ರಾಂತಿಕರ ವಿನೋದದ ಸಹವಾಸಕ್ಕಾಗಿಯೂ ಏರ್ಪಾಡನ್ನು ಮಾಡಿದ್ದರು. “ಬೇರೆ ರೀತಿಯ ಸಹವಾಸವು ಉಂಟುಮಾಡಬಹುದಾಗಿದ್ದ ಸಮಸ್ಯೆಗಳಿಂದ ಇದು ಸಂರಕ್ಷಣೆಯನ್ನು ನೀಡಿತ್ತು” ಎಂದವರು ಹೇಳುತ್ತಾರೆ. ತಮ್ಮ ಹೆತ್ತವರ ಉತ್ತಮ ಮಾದರಿಯಿಂದ ಉತ್ತೇಜನ ಪಡೆದವರಾಗಿ, ಆ ಇಬ್ಬರೂ ಹೆಣ್ಣುಮಕ್ಕಳು ತಮ್ಮ ಹೈಸ್ಕೂಲ್‌ ಶಿಕ್ಷಣವನ್ನು ಮುಗಿಸಿದ ಕೂಡಲೆ ರೆಗ್ಯುಲರ್‌ ಪಯನೀಯರರಾದರು.

ತಮ್ಮ ಮಕ್ಕಳು ಮನೆಯಿಂದ ಪ್ರತ್ಯೇಕಹೋದಾಗ, ತಮ್ಮ ಪರಿಸ್ಥಿತಿಗಳಲ್ಲಾದ ಈ ಬದಲಾವಣೆಯು ಅವರೀಗ ಆಸಕ್ತಿಕರ ಸ್ಥಳಗಳಿಗೆ ಪ್ರಯಾಣಿಸಲು ಇಲ್ಲವೆ ಬೇರೆ ರೀತಿಯ ವಿರಾಮದ ಚಟುವಟಿಕೆಯಲ್ಲಿ ಆನಂದವನ್ನು ಪಡೆಯಲು ಬಳಸಬಹುದಾದ ಹೆಚ್ಚು ಸ್ವಾತಂತ್ರ್ಯ ಮತ್ತು ಆರ್ಥಿಕ ಸೌಲಭ್ಯವನ್ನು ಕೊಟ್ಟಿದೆಯೆಂಬದನ್ನು ಪೆಮ್‌ ಮತ್ತು ಆ್ಯನಿ ಕಂಡುಹಿಡಿದರು. ಆದರೆ ಈ ದಂಪತಿ ತಮ್ಮ ಬದಲಾದ ಪರಿಸ್ಥಿತಿಗಳನ್ನು ಕ್ರೈಸ್ತ ಶುಶ್ರೂಷೆಯನ್ನು ವಿಸ್ತರಿಸಲಿಕ್ಕಾಗಿ ಬಳಸಲು ನಿಶ್ಚಯಿಸಿದರು. ಆದ್ದರಿಂದ ಪೆಮ್‌ ತನ್ನ ಧಣಿಯಿಂದ ವಾರದಲ್ಲಿ ಒಂದು ದಿನ ಕಡಿಮೆ ಕೆಲಸಮಾಡಲು ಅನುಮತಿಯನ್ನು ಪಡೆದುಕೊಂಡನು. ತದನಂತರ, ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ಕೆಲಸಮಾಡುವ ಏರ್ಪಾಡನ್ನು ಮಾಡಿಕೊಂಡನು. ಕಡಿಮೆ ಕೆಲಸಮಾಡುತ್ತಿರುವುದರಿಂದ ಕಡಿಮೆ ಸಂಬಳದಲ್ಲೇ ಜೀವನವನ್ನು ನಡೆಸುವುದನ್ನು ಅರ್ಥೈಸಿತು. ಆದರೂ ಅವರದನ್ನು ಯಶಸ್ವಿಯಾಗಿ ನಿಭಾಯಿಸಿದರು ಮತ್ತು 1991ರಲ್ಲಿ ಪೆಮ್‌ ರೆಗ್ಯುಲರ್‌ ಪಯನೀಯರನೋಪಾದಿ ತನ್ನ ಹೆಂಡತಿಯನ್ನು ಜೊತೆಗೂಡಿದನು.

ಆಮೇಲೆ ಪೆಮ್‌ರನ್ನು, ಯೆಹೋವನ ಸಾಕ್ಷಿಗಳ ಎಸೆಂಬ್ಲಿ ಹಾಲ್‌ ಒಂದನ್ನು ನೋಡಿಕೊಳ್ಳುವ ಸಹಾಯಕನಾಗಲು ಕೇಳಲಾಯಿತು. ಈ ಆಮಂತ್ರಣವನ್ನು ಸ್ವೀಕರಿಸಲಿಕ್ಕಾಗಿ, ಈ ದಂಪತಿಯು 30 ವರ್ಷಗಳಿಂದ ವಾಸಮಾಡಿಕೊಂಡಿದ್ದ ಮನೆಯನ್ನು ಬಿಟ್ಟು ಎಸೆಂಬ್ಲಿ ಹಾಲ್‌ನ ಆವರಣದಲ್ಲಿದ್ದ ಒಂದು ವಾಸದ ಕೊಠಡಿಗೆ ಸ್ಥಳಾಂತರಿಸಬೇಕಾಗಿತ್ತು. ಆದರೂ ಅವರು ಸ್ಥಳಾಂತರಿಸಿದರು. ಅದು ಕಷ್ಟಕರವಾಗಿತ್ತೋ? ಮನೆಯ ಹಂಬಲ ಉಂಟಾದಾಗಲೆಲ್ಲ, “ನಾನು ಲೋಟನ ಹೆಂಡತಿಯಂತಿದ್ದೇನೊ?” ಎಂದು ನನ್ನನ್ನೇ ಕೇಳಿಕೊಳ್ಳುತ್ತಿದ್ದೆ ಎಂದು ಆ್ಯನಿ ಉತ್ತರಿಸುತ್ತಾಳೆ. ಅವಳು ‘ಹಿಂದಿರುಗಿ ನೋಡಲು’ ನಿರಾಕರಿಸಿದಳು.​—ಆದಿಕಾಂಡ 19:26; ಲೂಕ 17:32.

ತಾವು ಮಾಡಿದ ನಿರ್ಣಯವು ಅನೇಕ ಆಶೀರ್ವಾದಗಳಿಗೆ ನಡೆಸಿದೆ ಎಂಬುದು ಪೆಮ್‌ ಮತ್ತು ಆ್ಯನಿಯವರ ಅನಿಸಿಕೆ. ಬೇರೆ ಅನೇಕ ವಿಷಯಗಳೊಂದಿಗೆ, ಅವರು ಎಸೆಂಬ್ಲಿ ಹಾಲ್‌ನಲ್ಲಿ ತಾವು ಸಲ್ಲಿಸುತ್ತಿರುವ ಸೇವೆಯಲ್ಲಿ, ಜಿಲ್ಲಾ ಅಧಿವೇಶನಗಳಿಗಾಗಿ ನಡೆಯುವ ತಯಾರಿಯಲ್ಲಿ, ಮತ್ತು ಆ ಹಾಲ್‌ನಲ್ಲಿ ಭಾಷಣ ಕೊಡುವ ಸರ್ಕಿಟ್‌ ಮೇಲ್ವಿಚಾರಕರೊಂದಿಗಿನ (ಸಂಚರಣ ಸೇವಕರು) ಸಂಪರ್ಕದಲ್ಲಿ ಆನಂದಿಸುತ್ತಾರೆ. ಒಮ್ಮೊಮ್ಮೆ ಪೆಮ್‌ ಬದಲಿ ಸರ್ಕಿಟ್‌ ಮೇಲ್ವಿಚಾರಕನಾಗಿ ಸೇವೆಮಾಡುವಾಗ ಅವರು ವಿವಿಧ ಸಭೆಗಳನ್ನು ಸಂದರ್ಶಿಸುತ್ತಾರೆ.

ತಮ್ಮ ಸೇವೆಯನ್ನು ವಿಸ್ತರಿಸುವುದರಲ್ಲಿ ಈ ದಂಪತಿಯು ಯಶಸ್ವಿಯಾಗಲು ಯಾವುದು ಸಹಾಯಮಾಡಿತು? ಪೆಮ್‌ ಹೇಳುವುದು: “ನಿಮ್ಮ ಜೀವಿತದಲ್ಲಿ ಒಂದು ದೊಡ್ಡ ಬದಲಾವಣೆಯಾಗುವಾಗ, ಆ ಹೊಸ ಪರಿಸ್ಥಿತಿಗಳನ್ನು ಅತ್ಯುತ್ತಮವಾಗಿ ಸದುಪಯೋಗಿಸಲು ನೀವು ದೃಢನಿರ್ಧಾರವುಳ್ಳವರಾಗಿರಬೇಕು.”

ಜೀವನವನ್ನು ಇನ್ನೂ ಸರಳೀಕರಿಸುವುದು

ಯಾನ್‌ ಮತ್ತು ಅವನ ಪತ್ನಿಯಾದ ವಟ್‌ಗೆ ಮೂವರು ಮಕ್ಕಳಿದ್ದಾರೆ. ಪೆಮ್‌ ಮತ್ತು ಅವನ ಕುಟುಂಬದಂತೆ, ಯಾನ್‌ ತನ್ನ ಪರಿಸ್ಥಿತಿಗಳಲ್ಲಿ ಬದಲಾವಣೆಗಳಾದಾಗ ಅದರ ಸದುಪಯೋಗವನ್ನು ಮಾಡಿದನು. ಯಾನ್‌ಗೆ ಅನೇಕ ವರುಷಗಳಿಂದ ಒಂದು ಬ್ಯಾಂಕ್‌ನಲ್ಲಿ ಒಳ್ಳೇ ಸಂಬಳ ಕೊಡುತ್ತಿದ್ದ ಕೆಲಸವಿತ್ತು ಮತ್ತು ತನ್ನ ಕುಟುಂಬಕ್ಕೆ ಸುಖಸೌಕರ್ಯವುಳ್ಳ ಜೀವನ ಶೈಲಿಯನ್ನು ಒದಗಿಸಿದ್ದನು. ಆದರೂ ತನ್ನ ಶುಶ್ರೂಷೆಯನ್ನು ವಿಸ್ತರಿಸುವ ಒಂದು ಉತ್ಕಟ ಬಯಕೆಯು ಅವನಲ್ಲಿ ಬೆಳೆಯುತ್ತಿತ್ತು. ಅವನು ವಿವರಿಸುವುದು: “ನನ್ನ ಜೀವನ ಕ್ರಮದಲ್ಲಿ, ಸತ್ಯಕ್ಕಾಗಿದ್ದ ನನ್ನ ಕೃತಜ್ಞತೆಯು ಗಾಢವಾಗುತ್ತಾ ಬಂತು, ಮತ್ತು ಯೆಹೋವನಿಗಾಗಿ ನನ್ನ ಪ್ರೀತಿಯು ಬೆಳೆಯುತ್ತಾ ಹೋಯಿತು.” ಆದುದರಿಂದ 1986ರಲ್ಲಿ, ತನ್ನ ಪರಿಸ್ಥಿತಿಗಳಲ್ಲಿ ಯಾನ್‌ ಒಂದು ಬದಲಾವಣೆಯನ್ನು ಮಾಡಿದನು. ಅವನನ್ನುವುದು: “ಆಫೀಸಿನಲ್ಲಿ ಒಂದು ಪುನರ್‌ ಸಂಘಟನೆಯಾದಾಗ ನಾನು ಆ ಸಂದರ್ಭದ ಸದುಪಯೋಗವನ್ನು ಮಾಡಿ, ಕಡಿಮೆ ತಾಸುಗಳ ಕೆಲಸವನ್ನು ಅಂದರೆ ವಾರದಲ್ಲಿ ಮೂರು ದಿನ ಮಾತ್ರ ಕೆಲಸವನ್ನು ಮಾಡತೊಡಗಿದೆ. ನನ್ನ ವೇತನವೂ 40 ಪ್ರತಿಶತ ಕಡಿಮೆಯಾಯಿತು. ನಮ್ಮ ಮನೆಯನ್ನು ಮಾರಿ, ರಾಜ್ಯ ಪ್ರಜಾರಕರ ಹೆಚ್ಚಿನ ಅಗತ್ಯವಿದ್ದ ಕ್ಷೇತ್ರದಲ್ಲಿ ಸೇವೆಮಾಡಲು ಒಂದು ದೋಣಿ-ಮನೆಯನ್ನು ಖರೀದಿಸಿದೆ. ಆಮೇಲೆ ನಾನು ಶೀಘ್ರ ನಿವೃತ್ತಿಯ ಏರ್ಪಾಡನ್ನೂ ಸದುಪಯೋಗಿಸಿಕೊಂಡೆ. ಹೀಗೆ ನನ್ನ ಆದಾಯವು ಇನ್ನೊಂದು 20 ಪ್ರತಿಶತ ಕಡಿಮೆಯಾಯಿತು. ಆದರೆ 1993ರಲ್ಲಿ ನಾನೊಬ್ಬ ಕ್ರಮದ ಪಯನೀಯರನಾಗಿ ಸೇವೆಯನ್ನಾರಂಭಿಸಲು ಶಕ್ತನಾದೆ.”

ಇಂದು ಯಾನ್‌, ಹಾಸ್ಪಿಟಲ್‌ ಲಿಯಸನ್‌ ಕಮಿಟಿಯ ಒಬ್ಬ ಸದಸ್ಯನಾಗಿದ್ದಾನೆ ಮತ್ತು ಕ್ರಮವಾಗಿ ಅಧಿವೇಶನ ಮೇಲ್ವಿಚಾರಕನಾಗಿಯೂ ಸೇವೆಮಾಡುತ್ತಾನೆ. ಅವನ ಹೆಂಡತಿ ವಟ್‌ಳ ಆರೋಗ್ಯವು ಒಳ್ಳೇದಿಲ್ಲವಾದರೂ, ಆಕೆ ಆಗಿಂದಾಗ್ಯೆ ಆಕ್ಸಿಲಿಯರಿ ಪಯನೀಯರಳಾಗಿ ಸೇವೆಮಾಡುತ್ತಿದ್ದಾಳೆ. ಎಲ್ಲಾ ಮೂರು ಮಂದಿ ಮಕ್ಕಳೂ ಈಗ ವಿವಾಹವಾಗಿ, ತಮ್ಮ ಸಂಗಾತಿಗಳೊಂದಿಗೆ ರಾಜ್ಯದ ಹುರುಪಿನ ಶುಶ್ರೂಷಕರಾಗಿದ್ದಾರೆ.

ಕಡಿಮೆ ಖರ್ಚಿನ ಜೀವನ ಮಟ್ಟಕ್ಕೆ ಹೊಂದಿಕೊಳ್ಳಲು ಯಾನ್‌ ಮತ್ತು ವಟ್‌ ಶಕ್ತರಾದದ್ದು ಹೇಗೆ? ಯಾನ್‌ ಉತ್ತರಿಸುವುದು: “ನಮ್ಮಲ್ಲಿ ಹೆಚ್ಚು ಹಣವೂ ಸಮೃದ್ಧಿಯೂ ಇದ್ದ ದಿನಗಳಲ್ಲಿ, ನಾವು ಭೌತಿಕ ವಸ್ತುಗಳಿಗೆ ಹಚ್ಚಿಕೊಳ್ಳದಿರುವಂತೆ ಖಚಿತಪಡಿಸಿಕೊಂಡೆವು. ಈ ದಿನಗಳಲ್ಲಿ, ಏನನ್ನಾದರೂ ಪಡೆದುಕೊಳ್ಳುವುದಕ್ಕೆ ಮುಂಚೆ ಸ್ವಲ್ಪ ಹೆಚ್ಚು ಹೊತ್ತು ಕಾಯಬೇಕಾದ ತುಸು ಅನಾನುಕೂಲತೆ ಇದೆಯಾದರೂ, ನಾವು ಪಡೆದುಕೊಂಡಿರುವ ಆತ್ಮಿಕ ಆಶೀರ್ವಾದಗಳು ಮತ್ತು ಸೇವಾ ಸದವಕಾಶಗಳು ಅದನ್ನು ಹೇರಳವಾಗಿ ಭರ್ತಿಮಾಡಿಕೊಡುತ್ತವೆ.”

ಯಾನ್‌ ಮತ್ತು ವಟ್‌ನಂತೆ, ಡ್ರಿಸ್‌ ಮತ್ತು ಅವನ ಪತ್ನಿ ಯೆನಿ ಸಹ, ರಾಜ್ಯಾಭಿರುಚಿಗಳಿಗೆ ಹೆಚ್ಚು ಸಮಯವನ್ನು ಕೊಡಲಿಕ್ಕಾಗಿ ತಮ್ಮ ಜೀವನವನ್ನು ಸರಳವಾಗಿಡುವ ನಿರ್ಧಾರವನ್ನು ಮಾಡಿದರು. ಡ್ರಿಸ್‌ ಮತ್ತು ಯೆನಿ, ತಮಗೆ ಮಗುವಾಗುವ ತನಕ ಪಯನೀಯರ್‌ ಸೇವೆಯನ್ನು ಮುಂದುವರಿಸಿದರು. ಅನಂತರ ತನ್ನ ಕುಟುಂಬದ ಪರಿಪಾಲನೆಗಾಗಿ ಡ್ರಿಸ್‌ ಒಂದು ದೊಡ್ಡ ಕಂಪೆನಿಯಲ್ಲಿ ಕಾರ್ಯನಿರ್ವಾಹಕನಾಗಿ ಕೆಲಸಮಾಡಿದನು. ಅವನ ಧಣಿಗಳು ಅವನ ಕೆಲಸವನ್ನು ಗಣನೆಗೆ ತಂದು ಮೇಲಿನ ಹುದ್ದೆಗೆ ಬಡತಿ ನೀಡಿದರು. ಆದರೆ ಡ್ರಿಸ್‌ ಆ ಬಡತಿಯನ್ನು ನಿರಾಕರಿಸಿದನು ಯಾಕಂದರೆ ಅದನ್ನು ಅವನು ಸ್ವೀಕರಿಸುತ್ತಿದ್ದರೆ ಕ್ರೈಸ್ತ ಚಟುವಟಿಕೆಗಳಿಗಾಗಿ ಕಡಿಮೆ ಸಮಯವು ಸಿಗುತ್ತಿತ್ತು.

ಕುಟುಂಬವನ್ನು ಬೆಳೆಸುವುದರ ಹಾಗೂ ಯೆನಿಯ ಅಸ್ವಸ್ಥ ತಾಯಿಯ ಪರಾಮರಿಕೆಯು, ಈ ದಂಪತಿಯ ಸಮಯ ಮತ್ತು ಶಕ್ತಿಯಲ್ಲಿ ಬಹಳಷ್ಟನ್ನು ಆವಶ್ಯಪಡಿಸುತ್ತಿತ್ತು. ಆದರೂ ಅವರು ಪಯನೀಯರ್‌ ಆತ್ಮವನ್ನು ಬೆಳೆಸುತ್ತಾ ಮುಂದರಿದರು. ಇದನ್ನು ಮಾಡಲು ಅವರಿಗೆ ಸಹಾಯಮಾಡಿದ್ದು ಯಾವುದು? ಯೆನಿ ವಿವರಿಸುವುದು: “ನಮ್ಮ ಮನೆಯಲ್ಲಿ ಪಯನೀಯರರು ವಾಸಮಾಡುತ್ತಿದ್ದರು, ಪಯನೀಯರರನ್ನು ನಾವು ಊಟಕ್ಕೆ ಕರೆಯುತ್ತಿದ್ದೆವು, ಮತ್ತು ಸರ್ಕಿಟ್‌ ಮೇಲ್ವಿಚಾರಕರಿಗೆ ನಾವು ವಾಸಸ್ಥಳವನ್ನು ನೀಡುತ್ತಿದ್ದೆವು.” ಡ್ರಿಸ್‌ ಕೂಡಿಸುವುದು: “ನಾವು ಜೀವನವನ್ನು ಸರಳವಾಗಿಟ್ಟೆವು ಮತ್ತು ಸಾಲಮಾಡುವುದರಿಂದ ದೂರವಿದ್ದೆವು. ನಾವು ದೊಡ್ಡ ವ್ಯಾಪಾರ ವ್ಯವಹಾರಗಳನ್ನು ಎಂದೂ ತೆಗೆದುಕೊಳ್ಳಬಾರದು ಇಲ್ಲವೆ ಒಂದು ಮನೆಯನ್ನು ಖರೀದಿಸಬಾರದೆಂಬ ನಿರ್ಣಯವನ್ನು ಮಾಡಿದೆವು. ಕಾರಣವೇನೆಂದರೆ, ಮುಂದಕ್ಕೆ ನಾವು ಅವುಗಳಿಗೆ ಕಟ್ಟುಬೀಳಬಾರದು.”

ರಾಜ್ಯಾಭಿರುಚಿಗಳಿಗಾಗಿ ಹೆಚ್ಚಿನ ಸಮಯವನ್ನು ಅನುಮತಿಸುವಂಥ ಪರಿಸ್ಥಿತಿಗಳನ್ನು ನಿರ್ಮಿಸಲು ಡ್ರಿಸ್‌ ಮತ್ತು ಯೆನಿ ಮಾಡಿದಂಥ ನಿರ್ಣಯವು, ಪ್ರತಿಫಲದಾಯಕ ಫಲಿತಾಂಶಗಳನ್ನು ತಂದಿತು. ಅವರ ಇಬ್ಬರೂ ಗಂಡುಮಕ್ಕಳು ಈಗ ಹಿರಿಯರಾಗಿದ್ದು, ಅವರಲ್ಲೊಬ್ಬನು ತನ್ನ ಹೆಂಡತಿಯೊಂದಿಗೆ ಪಯನೀಯರ್‌ ಸೇವೆಮಾಡುತ್ತಿದ್ದಾನೆ. ಡ್ರಿಸ್‌ ಮತ್ತು ಯೆನಿ ವಿಶೇಷ ಪಯನೀಯರರಾಗಿ ಸೇವೆಮಾಡಿದರು, ಮತ್ತು ನಂತರ ಯೆನಿ ಡ್ರಿಸ್‌ನೊಂದಿಗೆ ಸರ್ಕಿಟ್‌ ಸೇವೆಯಲ್ಲೂ ಜೊತೆಗೂಡಿದಳು. ಈಗ ಅವರು ಬೆತೆಲಿನಲ್ಲಿ ಸ್ವಯಂಸೇವಕರಾಗಿದ್ದಾರೆ, ಮತ್ತು ಅಲ್ಲಿ ಡ್ರಿಸ್‌ ಬ್ರಾಂಚ್‌ ಕಮಿಟಿಯ ಸದಸ್ಯರೋಪಾದಿ ಸೇವೆಸಲ್ಲಿಸುತ್ತಿದ್ದಾರೆ.

ಶೀಘ್ರ ನಿವೃತ್ತಿ

ಡ್ರಿಸ್‌ ಮತ್ತು ಯೆನಿಯಂತೆ, ಒಟೊ ಮತ್ತು ಅವನ ಪತ್ನಿ ಜೂಡಿಯು ಸಹ ತಮಗೆ ಇಬ್ಬರು ಹೆಣ್ಣು ಮಕ್ಕಳಾಗುವ ಮುಂಚೆ ಪಯನೀಯರರಾಗಿದ್ದರು. ಜೂಡಿ ಮೊದಲ ಬಾರಿ ಗರ್ಭಿಣಿಯಾಗಿದ್ದಾಗ, ಒಟೊಗೆ ಶಾಲಾ ಶಿಕ್ಷಕನ ಕೆಲಸ ಸಿಕ್ಕಿತು.

ಮಕ್ಕಳು ಬೆಳೆಯುತ್ತಿದ್ದಾಗ, ಒಟೊ ಮತ್ತು ಜೂಡಿ ತಮ್ಮ ಮನೆಗೆ ಪಯನೀಯರರನ್ನು ಅತಿಥಿಗಳಾಗಿ ಆಗಿಂದಾಗ್ಯೆ ಆಮಂತ್ರಿಸುತ್ತಿದ್ದರು. ಈ ರೀತಿ ಈ ಪೂರ್ಣ ಸಮಯದ ಕ್ರೈಸ್ತ ಸೇವಕರ ಆನಂದವನ್ನು ಮಕ್ಕಳು ಕಾಣುವಂಥಾಯಿತು. ಸಮಯಾನಂತರ, ಅವರ ಹಿರಿಯ ಮಗಳು ಪಯನೀಯರಳಾದಳು. ತರುವಾಯ ಆಕೆ ಗಿಲ್ಯಡ್‌ ಶಾಲೆಗೆ ಹಾಜರಾಗಿ, ಈಗ ತನ್ನ ಗಂಡನೊಂದಿಗೆ ಆಫ್ರಿಕ ದೇಶವೊಂದರಲ್ಲಿ ಮಿಷನೆರಿ ಸೇವೆಯನ್ನು ಮಾಡುತ್ತಿದ್ದಾಳೆ. ಅವರ ಕಿರಿಯ ಮಗಳು 1987ರಲ್ಲಿ ಪಯನೀಯರ್‌ ಸೇವೆಯನ್ನು ಆರಂಭಿಸಿದಳು ಮತ್ತು ಜೂಡಿ ಅವಳನ್ನು ಜೊತೆಗೂಡಿದಳು.

ಬದಲಾದ ಪರಿಸ್ಥಿತಿಗಳು ಒಟೊ ಶಾಲೆಯಲ್ಲಿ ಕಡಿಮೆ ತಾಸುಗಳಿಗಾಗಿ ಕೆಲಸವನ್ನು ಮಾಡುವಂತೆ ಅನುಮತಿಸಿದಾಗ, ಅವನಿಗೆ ಸಿಕ್ಕಿದ ಅಧಿಕ ಸಮಯವನ್ನು ಪಯನೀಯರ್‌ ಸೇವೆಮಾಡಲು ಉಪಯೋಗಿಸಿದನು. ಕಟ್ಟಕಡೆಗೆ, ಆ ಕೆಲಸವನ್ನೇ ಬಿಟ್ಟುಬಿಟ್ಟನು. ಇಂದು ಸಂಚರಣ ಸೇವೆಯಲ್ಲಿರುವ ಒಟೊ, ಶಿಕ್ಷಕನೋಪಾದಿ ತನಗಿರುವ ಸಾಮರ್ಥ್ಯವನ್ನು ಸಭೆಗಳನ್ನು ಆತ್ಮಿಕವಾಗಿ ಬಲಪಡಿಸಲು ಉಪಯೋಗಿಸುತ್ತಿದ್ದಾನೆ.

ಉದ್ಯೋಗದಿಂದ ಶೀಘ್ರ ನಿವೃತ್ತಿಯನ್ನು ಪಡೆಯುವವರಿಗೆ ಒಟೊ ಕೊಡುವ ಕಿವಿಮಾತೇನು? “ನೀವು ಕೆಲಸದಿಂದ ನಿವೃತ್ತಿ ಪಡೆಯುವಾಗ, ಒಂದೆರಡು ವರ್ಷ ಹಾಯಾಗಿರೋಣ ಎಂದು ನಿರ್ಣಯಿಸಬೇಡಿರಿ. ‘ಹಾಯಾಗಿ ಇರುವುದಕ್ಕೆ’ ಒಗ್ಗಿಹೋಗುವುದು ತೀರ ಸುಲಭ. ನಿಮಗೆ ಗೊತ್ತಾಗುವ ಮುಂಚೆಯೇ, ನೀವು ಪಯನೀಯರ್‌ ಸೇವೆಯ ಬಗ್ಗೆ ಮರೆತುಬಿಡುವಿರಿ. ಇದಕ್ಕೆ ಬದಲಾಗಿ, ನಿವೃತ್ತಿಯಾದ ಕೂಡಲೆ ನಿಮ್ಮ ಶುಶ್ರೂಷಾ ಚಟುವಟಿಕೆಯನ್ನು ಅಧಿಕಗೊಳಿಸಲು ಆರಂಭಿಸಿರಿ.”

ನಿಮ್ಮ ಜೀವನಾನುಭವದ ಸದುಪಯೋಗ ಮಾಡುವುದು

ಪೆಮ್‌, ಯಾನ್‌, ಡ್ರಿಸ್‌ ಮತ್ತು ಒಟೊನಂಥ ಸಹೋದರರಿಗೆ ಅವರ ಯೌವನದಲ್ಲಿದ್ದಂಥ ಶಕ್ತಿ ಮತ್ತು ಸಾಮರ್ಥ್ಯವು ಈಗ ಇಲ್ಲವೆಂಬುದು ಒಪ್ಪತಕ್ಕ ಮಾತು. ಆದರೆ ಅವರಲ್ಲಿ ಹೆಚ್ಚಿನ ಪ್ರೌಢತೆ, ಅನುಭವ ಮತ್ತು ವಿವೇಕವು ಇದೆ. (ಜ್ಞಾನೋಕ್ತಿ 20:29) ತಂದೆಗಳಾಗಿರುವುದರ ಅರ್ಥವೇನು ಎಂದು ಅವರಿಗೆ ತಿಳಿದಿದೆ, ಮತ್ತು ತಮ್ಮ ಪತ್ನಿಯರೊಂದಿಗೆ ಕೆಲಸಮಾಡಿರುವುದರಿಂದಾಗಿ, ತಾಯಿಯಾಗಿರುವುದರಲ್ಲಿ ಏನೆಲ್ಲ ಒಳಗೂಡಿರುತ್ತದೆ ಎಂಬ ವಿಷಯವೂ ಅವರಿಗೆ ಸ್ವಲ್ಪಮಟ್ಟಿಗೆ ತಿಳಿದಿದೆ. ತಮ್ಮ ಪತ್ನಿಯರೊಂದಿಗೆ ಅವರು ಕುಟುಂಬ ಸಮಸ್ಯೆಗಳನ್ನು ನಿರ್ವಹಿಸಿದ್ದಾರೆ ಮತ್ತು ತಮ್ಮ ಮಕ್ಕಳಿಗಾಗಿ ದೇವಪ್ರಭುತ್ವಾತ್ಮಕ ಗುರಿಗಳನ್ನು ಇಟ್ಟರು. ಒಟೊ ಹೇಳುವುದು: “ಕುಟುಂಬದೊಂದಿಗೆ ವ್ಯವಹರಿಸುವ ವಿಷಯದಲ್ಲಿ ನಾನು ಸರ್ಕಿಟ್‌ ಮೇಲ್ವಿಚಾರಕನೋಪಾದಿ ಸಲಹೆಯನ್ನು ನೀಡುವಾಗ, ನಾನು ವ್ಯಾವಹಾರಿಕ ಸಲಹೆಯನ್ನು ನೀಡಲು ಶಕ್ತನಾಗಿದ್ದೇನೆ ಯಾಕಂದರೆ ಸ್ವತಃ ನಾನು ಒಂದು ಕುಟುಂಬವನ್ನು ಬೆಳೆಸಿದ್ದೇನೆ.” ಅದೇ ರೀತಿಯಲ್ಲಿ, ತಂದೆಯೋಪಾದಿ ಡ್ರಿಸ್‌ನಿಗಿರುವ ಅನುಭವವು, ಅನೇಕಾನೇಕ ಯುವ ಕೆಲಸಗಾರರಿರುವ ಬೆತೆಲ್‌ ಕುಟುಂಬಕ್ಕೆ ಅವನನ್ನು ಒಬ್ಬ ಅಮೂಲ್ಯ ಸದಸ್ಯನನ್ನಾಗಿ ಮಾಡುತ್ತದೆ.

ಹೌದು, ಸಭೆಯಲ್ಲಿರುವ ವಿವಿಧ ಅಗತ್ಯಗಳನ್ನು ನಿರ್ವಹಿಸುವರೆ ಅಂಥ ವೈಯಕ್ತಿಕ ಜ್ಞಾನವು ಆ ಸಹೋದರರಿಗೆ ಸಹಾಯಮಾಡುತ್ತದೆ. ಅವರ ಅನುಭವವು, ಅವರು ಉಪಯೋಗಿಸುವ ಸಾಧನಗಳನ್ನು ಹರಿತಗೊಳಿಸಿವೆಯೊ ಎಂಬಂತಿದ್ದು, ಅವರಿಗಿರುವ ಶಕ್ತಿಸಾಮರ್ಥ್ಯವನ್ನು ಅವರು ಅತಿ ಹೆಚ್ಚಿನ ಪ್ರಯೋಜನವನ್ನು ತರುವಂಥ ರೀತಿಯಲ್ಲಿ ಉಪಯೋಗಿಸುತ್ತಾರೆ. (ಪ್ರಸಂಗಿ 10:10) ವಾಸ್ತವದಲ್ಲಿ ಅನೇಕವೇಳೆ ಅವರು, ಕೊಡಲ್ಪಟ್ಟಿರುವ ಒಂದು ನಿರ್ದಿಷ್ಟ ಸಮಯಾವಧಿಯಲ್ಲಿ, ಶಾರೀರಿಕವಾಗಿ ಸುದೃಢರಾಗಿದ್ದರೂ ಕಡಿಮೆ ಅನುಭವವಿರುವವರಿಗಿಂತಲೂ ಹೆಚ್ಚನ್ನು ಪೂರೈಸಲು ಶಕ್ತರಾಗಿರುತ್ತಾರೆ.

ಅಂಥ ಸಹೋದರರು, ಅವರ ಪತ್ನಿಯರೊಂದಿಗೆ ಯೆಹೋವನ ಜನರ ನಡುವೆ ಇರುವ ಯುವ ಜನರಿಗೆ ಉತ್ತಮ ಮಾದರಿಗಳಾಗಿದ್ದಾರೆ. ನಮ್ಮ ಪ್ರಕಾಶನಗಳಲ್ಲಿ ವರದಿಯಾಗಿರುವ ಅನೇಕ ಸವಾಲುಗಳನ್ನೂ ಪ್ರತಿಫಲಗಳನ್ನೂ ಇವರಂಥ ದಂಪತಿಗಳು ವೈಯಕ್ತಿಕವಾಗಿ ಅನುಭವಿಸಿದ್ದಾರೆಂಬುದನ್ನು ಯುವ ಜನರು ಅವಲೋಕಿಸುತ್ತಾರೆ. ಪ್ರಾಯದಲ್ಲಿ ವೃದ್ಧನಾಗಿದ್ದರೂ ಒಂದು ಪಂಥಾಹ್ವಾನದಾಯಕ ನೇಮಕವನ್ನು ವಿನಂತಿಸಿದ ಕಾಲೇಬನಂತೆ, ಸ್ವತ್ಯಾಗದ ಹುರುಪನ್ನು ತೋರಿಸುವ ಇಂಥ ಸ್ತ್ರೀಪುರುಷರನ್ನು ನೋಡುವುದು ಪ್ರೋತ್ಸಾಹನೀಯ ಸಂಗತಿಯಾಗಿದೆ.​—ಯೆಹೋಶುವ 14:10-12.

ಅವರ ನಂಬಿಕೆಯನ್ನು ಅನುಕರಿಸಿರಿ

ಈ ಲೇಖನದಲ್ಲಿ ತಿಳಿಸಲ್ಪಟ್ಟಿರುವ ದಂಪತಿಗಳ ನಂಬಿಕೆಯನ್ನು ಮತ್ತು ಅವರ ಕ್ರಿಯೆಗಳನ್ನು ಪ್ರಾಯಶಃ ನೀವು ಅನುಕರಿಸಬಲ್ಲಿರೊ? ಅವರ ಜೀವನ ಮಾರ್ಗವು ಸತ್ಯದ ಮೇಲೆ ಕೇಂದ್ರೀಕೃತವಾಗಿತ್ತೆಂಬುದನ್ನು ಜ್ಞಾಪಕದಲ್ಲಿಡಿರಿ. ಅವರು ತಮ್ಮ ಮಕ್ಕಳಲ್ಲಿ ಪಯನೀಯರ್‌ ಸೇವೆಯನ್ನು ಮಾಡುವ ಹಂಬಲವನ್ನು ಬೆಳೆಸಿದರು. ಯಾನ್‌ ಹೇಳುವಂತೆ, ಅವರು ಅದನ್ನು “ಯೆಹೋವನಿಗಾಗಿ ಮತ್ತು ಆತನ ಸಂಸ್ಥೆಗಾಗಿರುವ ಪ್ರೀತಿಯ ವಿಷಯದಲ್ಲಿ ಮಾದರಿಯನ್ನಿಡುವ ಮೂಲಕ, ಸುಸಹವಾಸಕ್ಕಾಗಿ ಏರ್ಪಾಡುಗಳನ್ನು ಮಾಡುವ ಮೂಲಕ ಮತ್ತು ಮಕ್ಕಳು ಆರ್ಥಿಕವಾಗಿ ತಮ್ಮನ್ನು ತಾವೇ ಬೆಂಬಲಿಸಿಕೊಳ್ಳುವಂತೆ ಕಲಿಸುವ ಮೂಲಕ” ಮಾಡಿದರು. ಅವರು ಕುಟುಂಬವಾಗಿ ಕೆಲಸಮಾಡಿದರು ಮತ್ತು ಕುಟುಂಬವಾಗಿ ಆಟವಾಡಿದರು. “ರಜೆಯ ಅವಧಿಯಲ್ಲಿ ಇಡೀ ಕುಟುಂಬವು ಬೆಳಿಗ್ಗೆ ರೂಢಿಯಾಗಿ ಸಾರುವ ಕಾರ್ಯಕ್ಕಾಗಿ ಹೋಗುತ್ತಿತ್ತು ಮತ್ತು ಮಧ್ಯಾಹ್ನದ ಮೇಲೆ ವಿನೋದಕ್ರೀಡೆಗಳಲ್ಲಿ ಆನಂದಿಸುತ್ತಿದ್ದೆವು” ಎಂದು ಪೆಮ್‌ ಜ್ಞಾಪಿಸಿಕೊಳ್ಳುತ್ತಾನೆ.

ಅದಲ್ಲದೆ, ಈ ಕ್ರೈಸ್ತರು ಮುಂದಾಗಿ ಯೋಜನೆಗಳನ್ನು ಮಾಡಿದರು. ಆದುದರಿಂದ ಅವರ ಪರಿಸ್ಥಿತಿಗಳು ಬದಲಾದಾಗ, ಹೊಸ ಸನ್ನಿವೇಶದ ಸದುಪಯೋಗವನ್ನು ಮಾಡಲು ಅವರು ಸಿದ್ಧರಾಗಿದ್ದರು. ಅವರು ಗುರಿಗಳನ್ನು ಇಟ್ಟರು ಮತ್ತು ಆ ಗುರಿಗಳನ್ನು ಬೇಗನೆ ಮುಟ್ಟಲಾಗುವಂಥ ನಿರ್ಣಯಗಳನ್ನು ಮಾಡಿದರು. ಐಹಿಕ ಉದ್ಯೋಗವನ್ನು ಕಡಿಮೆಗೊಳಿಸುವ ಮಾರ್ಗಗಳಿಗಾಗಿ ಹುಡುಕಿದರು ಮತ್ತು ಕಡಿಮೆ ಸಂಬಳದಲ್ಲಿ ಸುಧಾರಿಸಿಕೊಂಡು ಹೋಗಲು ಸಿದ್ಧರಾಗಿದ್ದರು. (ಫಿಲಿಪ್ಪಿ 1:10) ಅವರ ಹೆಂಡತಿಯರು ಅವರಿಗೆ ಪೂರ್ಣ ಬೆಂಬಲವನ್ನಿತ್ತರು. “ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭವನ್ನು” ಪ್ರವೇಶಿಸುವ ಬಲವಾದ ಅಪೇಕ್ಷೆ ಅವರೆಲ್ಲರಿಗೆ ಇದ್ದುದರಿಂದ, ಯೆಹೋವನ ಹೇರಳವಾದ ಆಶೀರ್ವಾದಗಳನ್ನು ಅವರು ಆನಂದಿಸುತ್ತಿದ್ದಾರೆ.​—1 ಕೊರಿಂಥ 16:9; ಜ್ಞಾನೋಕ್ತಿ 10:22.

ಶುಶ್ರೂಷೆಯಲ್ಲಿ ನಿಮ್ಮ ಪಾಲನ್ನು ಹೆಚ್ಚಿಸುವ ಅದೇ ರೀತಿಯ ಅಪೇಕ್ಷೆಯು ನಿಮಗಿದೆಯೆ? ಹಾಗಾದರೆ, ಬದಲಾಗುತ್ತಿರುವ ಪರಿಸ್ಥಿತಿಗಳನ್ನು ಸದುಪಯೋಗ ಮಾಡುವುದೇ ಅದರ ಕೀಲಿ ಕೈಯಾಗಿರಬಹುದು.

[ಪುಟ 20ರಲ್ಲಿರುವ ಚಿತ್ರ]

ಪೆಮ್‌ ಮತ್ತು ಆ್ಯನಿ ಎಸೆಂಬ್ಲಿ ಹಾಲ್‌ ಅನ್ನು ನೋಡಿಕೊಳ್ಳುವುದು

[ಪುಟ 20ರಲ್ಲಿರುವ ಚಿತ್ರ]

ಯಾನ್‌ ಮತ್ತು ವಟ್‌ ಸಾರುವ ಕಾರ್ಯದಲ್ಲಿ ಭಾಗವಹಿಸುತ್ತಿರುವುದು

[ಪುಟ 21ರಲ್ಲಿರುವ ಚಿತ್ರ]

ಡ್ರಿಸ್‌ ಮತ್ತು ಯೆನಿ ಬೆತೆಲಿನಲ್ಲಿ ಸೇವೆಮಾಡುತ್ತಿರುವುದು

[ಪುಟ 21ರಲ್ಲಿರುವ ಚಿತ್ರ]

ಒಟೊ ಮತ್ತು ಜೂಡಿ ಮುಂದಿನ ಸಭೆಯನ್ನು ಸಂದರ್ಶಿಸಲಿಕ್ಕಾಗಿ ಸಿದ್ಧರಾಗುತ್ತಿರುವುದು