ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು “ಉದಾರವಾಗಿ” ಕ್ಷಮಿಸುತ್ತಾನೆ

ಯೆಹೋವನು “ಉದಾರವಾಗಿ” ಕ್ಷಮಿಸುತ್ತಾನೆ

ಯೆಹೋವನು “ಉದಾರವಾಗಿ” ಕ್ಷಮಿಸುತ್ತಾನೆ

ಕ್ಷಮಾಪಣೆಯು, ಒಬ್ಬ ತಪ್ಪಿತಸ್ಥನನ್ನು ಕ್ಷಮಿಸುವ ಕ್ರಿಯೆಯಾಗಿದೆ; ಅವನ ತಪ್ಪಿಗಾಗಿ ಅವನೆಡೆಗೆ ಅಸಮಾಧಾನವನ್ನು ತೋರಿಸದೇ ಇರುವುದು ಹಾಗೂ ಅವನಿಗೆ ತಕ್ಕ ಶಾಸ್ತಿಯನ್ನು ಮಾಡಲು ತನಗಿರುವ ಹಕ್ಕನ್ನು ಬಿಟ್ಟುಕೊಡುವುದೇ ಆಗಿದೆ.

ದೇವರು ಇಸ್ರಾಯೇಲ್‌ ಜನಾಂಗಕ್ಕೆ ಕೊಟ್ಟ ಧರ್ಮಶಾಸ್ತ್ರಕ್ಕನುಸಾರ, ಒಬ್ಬ ವ್ಯಕ್ತಿಯು ದೇವರಿಗೆ ಅಥವಾ ಜೊತೆಮಾನವನಿಗೆ ವಿರುದ್ಧವಾಗಿ ಪಾಪ ಮಾಡಿದರೆ, ತನ್ನ ಪಾಪಗಳ ಕ್ಷಮಾಪಣೆಗಾಗಿ ಮೊದಲಾಗಿ ಧರ್ಮಶಾಸ್ತ್ರವು ವಿಧಿಸಿರುವ ಪ್ರಕಾರ ತನ್ನ ತಪ್ಪನ್ನು ಸರಿಪಡಿಸಬೇಕಿತ್ತು ಮತ್ತು ನಂತರ, ಹೆಚ್ಚಿನ ಸಂದರ್ಭಗಳಲ್ಲಿ ಯೆಹೋವನಿಗೆ ರಕ್ತವನ್ನು ಒಳಗೊಂಡ ಯಜ್ಞವನ್ನು ಅರ್ಪಿಸಬೇಕಿತ್ತು. (ಯಾಜಕಕಾಂಡ 5:5-6:7) ಆದುದರಿಂದ ಪೌಲನು ಈ ಮೂಲತತ್ತ್ವವನ್ನು ತಿಳಿಸಿದನು: “ಧರ್ಮಶಾಸ್ತ್ರದ ಪ್ರಕಾರ ಸ್ವಲ್ಪಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು; ರಕ್ತಧಾರೆಯಿಲ್ಲದೆ ಪಾಪಪರಿಹಾರ ಉಂಟಾಗುವದಿಲ್ಲ.” (ಇಬ್ರಿಯ 9:22) ಆದರೆ ವಾಸ್ತವದಲ್ಲಿ, ಪ್ರಾಣಿ ಯಜ್ಞಗಳ ರಕ್ತವು ಪಾಪಗಳನ್ನು ತೆಗೆದುಹಾಕಿ, ಒಬ್ಬ ವ್ಯಕ್ತಿಗೆ ಪರಿಪೂರ್ಣವಾಗಿ ಶುದ್ಧವಾದ ಮನಸ್ಸಾಕ್ಷಿಯನ್ನು ಕೊಡಸಾಧ್ಯವಿಲ್ಲ. (ಇಬ್ರಿಯ 10:1-4; 9:9, 13, 14) ಇದಕ್ಕೆ ವ್ಯತಿರಿಕ್ತವಾಗಿ, ಮುಂತಿಳಿಸಲ್ಪಟ್ಟ ಹೊಸ ಒಡಂಬಡಿಕೆಯು ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ನಿಜವಾದ ಕ್ಷಮಾಪಣೆಯನ್ನು ಸಾಧ್ಯಮಾಡಿತು. (ಯೆರೆಮೀಯ 31:33, 34; ಮತ್ತಾಯ 26:28; 1 ಕೊರಿಂಥ 11:25; ಎಫೆಸ 1:7) ಭೂಮಿಯಲ್ಲಿದ್ದಾಗಲೂ ಯೇಸು ಒಬ್ಬ ಪಾರ್ಶ್ವವಾಯುರೋಗಿಯನ್ನು ಗುಣಪಡಿಸುವ ಮೂಲಕ, ತನಗೆ ಪಾಪಗಳನ್ನು ಕ್ಷಮಿಸುವ ಅಧಿಕಾರವಿತ್ತೆಂಬುದನ್ನು ಪ್ರದರ್ಶಿಸಿದನು.​—ಮತ್ತಾಯ 9:2-7.

ಯೆಹೋವನು “ಉದಾರವಾಗಿ” ಕ್ಷಮಿಸುತ್ತಾನೆ ಎಂಬುದು, ಯೇಸುವಿನ ಸಾಮ್ಯಗಳಲ್ಲಿ ಸೂಚಿಸಲ್ಪಟ್ಟಿದೆ. ಆ ಸಾಮ್ಯಗಳಲ್ಲಿ ಒಂದು, ಪೋಲಿಹೋದ ಮಗನ ಕುರಿತಾಗಿತ್ತು ಮತ್ತು ಇನ್ನೊಂದು ಒಬ್ಬ ಸೇವಕನ 10,000 ತಲಾಂತುಗಳ (60,000,000 ದಿನಾರುಗಳು, ಅಥವಾ 40,000,000 ಡಾಲರ್‌ಗಳು) ಸಾಲವನ್ನು ಕ್ಷಮಿಸಿದ ಅರಸನ ಕುರಿತಾಗಿತ್ತು. ಆದರೆ ಆ ಸೇವಕನು ಒಬ್ಬ ಜೊತೆಸೇವಕನ ಕೇವಲ ನೂರು ದಿನಾರುಗಳ (70 ಡಾಲರ್‌ಗಳು) ಸಾಲವನ್ನು ಕ್ಷಮಿಸಲು ಸಿದ್ಧನಿರಲಿಲ್ಲ. (ಯೆಶಾಯ 55:​7, NW; ಲೂಕ 15:11-32; ಮತ್ತಾಯ 18:23-35) ಹಾಗಿದ್ದರೂ, ಯೆಹೋವನ ಕ್ಷಮಾಪಣೆಯು ಭಾವೋದ್ರೇಕಗಳಿಂದ ಪ್ರಚೋದಿಸಲ್ಪಡುವುದಿಲ್ಲ. ಆತನು ದುಷ್ಕೃತ್ಯಗಳನ್ನು ಶಿಕ್ಷಿಸದೆ ಇರುವುದಿಲ್ಲ. (ಕೀರ್ತನೆ 99:8) ಯೆಹೋವನು ಇಸ್ರಾಯೇಲ್ಯರ ಧರ್ಮಭ್ರಷ್ಟತೆಯನ್ನು ಕ್ಷಮಿಸುವದಿಲ್ಲ ಎಂಬುದಾಗಿ ಯೆಹೋಶುವನು ಅವರನ್ನು ಎಚ್ಚರಿಸಿದನು.​—ಯೆಹೋಶುವ 24:19, 20; ಯೆಶಾಯ 2:6-9ನ್ನು ಹೋಲಿಸಿರಿ.

ದೇವರ ಕ್ಷಮಾಪಣೆಯನ್ನು ಕೋರಲು ಮತ್ತು ಅದನ್ನು ಹೊಂದಲು ಆತನ ಒಂದು ಅಪೇಕ್ಷಿತ ವಿಧಾನವಿದೆ. ಒಬ್ಬ ವ್ಯಕ್ತಿಯು ತನ್ನ ಪಾಪವನ್ನು ಒಪ್ಪಿಕೊಂಡು, ಅದು ದೇವರಿಗೆ ವಿರುದ್ಧವಾದ ಒಂದು ಘೋರ ತಪ್ಪಾಗಿದೆ ಎಂಬುದನ್ನು ಅಂಗೀಕರಿಸಿ, ಅನಿರ್ಬಂಧಿತವಾಗಿ ಅದನ್ನು ಅರಿಕೆಮಾಡಿ, ಮಾಡಲ್ಪಟ್ಟ ತಪ್ಪಿಗೆ ಹೃತ್ಪೂರ್ವಕವಾದ ದುಃಖವನ್ನು ವ್ಯಕ್ತಪಡಿಸಿ, ಅಂತಹ ಮಾರ್ಗಕ್ರಮ ಅಥವಾ ಆಚರಣೆಯಿಂದ ತಿರುಗಿಕೊಳ್ಳುವ ದೃಢನಿರ್ಣಯವನ್ನು ಹೊಂದಿರಬೇಕು. (ಕೀರ್ತನೆ 32:5; 51:4; 1 ಯೋಹಾನ 1:8, 9; 2 ಕೊರಿಂಥ 7:8-11) ಅವನು ತಪ್ಪನ್ನು ಅಥವಾ ಮಾಡಲ್ಪಟ್ಟ ಹಾನಿಯನ್ನು ಸರಿಪಡಿಸಲು ತನ್ನಿಂದ ಸಾಧ್ಯವಿರುವುದೆಲ್ಲವನ್ನು ಮಾಡಲೇಬೇಕು. (ಮತ್ತಾಯ 5:23, 24) ಆಮೇಲೆ, ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ಕ್ಷಮಾಪಣೆಯನ್ನು ಕೇಳುತ್ತಾ, ಆತನು ದೇವರಿಗೆ ಪ್ರಾರ್ಥಿಸಬೇಕು.​—ಎಫೆಸ 1:7.

ವೈಯಕ್ತಿಕ ತಪ್ಪುಗಳಿಗಾಗಿ ಇತರರನ್ನು ಎಷ್ಟು ಬಾರಿ ಕ್ಷಮಿಸಬೇಕಾಗಿ ಬಂದರೂ ಕ್ಷಮಿಸುವುದು ಒಂದು ಕ್ರೈಸ್ತ ಆವಶ್ಯಕತೆಯಾಗಿದೆ. (ಲೂಕ 17:3, 4; ಎಫೆಸ 4:32; ಕೊಲೊಸ್ಸೆ 3:13) ಇತರರನ್ನು ಕ್ಷಮಿಸಲು ನಿರಾಕರಿಸುವವರನ್ನು ದೇವರು ಕ್ಷಮಿಸುವುದಿಲ್ಲ. (ಮತ್ತಾಯ 6:14, 15) ಹಾಗಿದ್ದರೂ, ಗಂಭೀರವಾದ ತಪ್ಪಿನ ಕಾರಣ ಒಬ್ಬ “ದುಷ್ಟ”ನು ಕ್ರೈಸ್ತ ಸಭೆಯಿಂದ ಹೊರಹಾಕಲ್ಪಟ್ಟಾಗಲೂ, ಅವನು ನಿಜವಾಗಿಯೂ ಪಶ್ಚಾತ್ತಾಪ ಪಟ್ಟಿದ್ದಾನೆ ಎಂಬದನ್ನು ರುಜುಪಡಿಸುವಲ್ಲಿ ತಕ್ಕ ಸಮಯದಲ್ಲಿ ಅವನು ಕ್ಷಮಾಪಣೆಯನ್ನು ಹೊಂದಬಹುದು. ಆ ಸಮಯದಲ್ಲಿ ಸಭೆಯಲ್ಲಿರುವ ಎಲ್ಲರೂ ಅವನಿಗೆ ತಮ್ಮ ಪ್ರೀತಿಯನ್ನು ನಿಶ್ಚಯಪಡಿಸಸಾಧ್ಯವಿದೆ. (1 ಕೊರಿಂಥ 5:13; 2 ಕೊರಿಂಥ 2:6-11) ಹಾಗಿದ್ದರೂ, ಬುದ್ಧಿಪೂರ್ವಕವಾಗಿ, ಬೇಕುಬೇಕೆಂದೇ ಪಶ್ಚಾತ್ತಾಪರಹಿತವಾಗಿ ಪಾಪ ಮಾಡುವವರನ್ನು ಕ್ರೈಸ್ತರು ಕ್ಷಮಿಸಬೇಕಾಗಿಲ್ಲ. ಯಾಕೆಂದರೆ ಅಂಥವರು ದೇವರಿಗೆ ವೈರಿಗಳಾಗುತ್ತಾರೆ.​—ಇಬ್ರಿಯ 10:26-31; ಕೀರ್ತನೆ 139:21, 22.

ಇತರರ ಪರವಾಗಿ​—ಇಡೀ ಸಭೆಯ ಪರವಾಗಿಯೂ​—ದೇವರ ಕ್ಷಮಾಪಣೆಗಾಗಿ ಪ್ರಾರ್ಥಿಸುವುದು ಯೋಗ್ಯವಾಗಿದೆ. ಇಸ್ರಾಯೇಲ್‌ ಜನಾಂಗದ ಪರವಾಗಿ ಮೋಶೆಯು ಇದನ್ನೇ ಮಾಡಿದನು. ಅವರ ಜನಾಂಗೀಯ ಪಾಪವನ್ನು ಅರಿಕೆಮಾಡಿ, ಅದಕ್ಕಾಗಿ ಕ್ಷಮಾಪಣೆಯನ್ನು ಕೇಳಿಕೊಂಡನು ಮತ್ತು ಯೆಹೋವನು ಅವನಿಗೆ ಕಿವಿಗೊಟ್ಟು, ಅನುಗ್ರಹವನ್ನು ತೋರಿಸಿದನು. (ಅರಣ್ಯಕಾಂಡ 14:19, 20) ಸೊಲೊಮೋನನು ಸಹ, ದೇವಾಲಯದ ಪ್ರತಿಷ್ಠಾಪನೆಯ ಸಮಯದಲ್ಲಿ, ಯೆಹೋವನು ತನ್ನ ಜನರನ್ನು, ಅವರು ಪಾಪಮಾಡಿ, ನಂತರ ತಮ್ಮ ಮಾರ್ಗದಿಂದ ಹಿಂದಿರುಗುವಲ್ಲಿ ಅವರನ್ನು ಕ್ಷಮಿಸಬೇಕೆಂದು ಪ್ರಾರ್ಥಿಸಿದನು. (1 ಅರಸುಗಳು 8:​30, 33-40, 46-52) ಸ್ವದೇಶಕ್ಕೆ ಹಿಂದಿರುಗಿ ಬಂದ ಯೆಹೂದ್ಯರ ಪಾಪಗಳನ್ನು ಬಹಿರಂಗವಾಗಿ ಅರಿಕೆಮಾಡುವುದರಲ್ಲಿ ಎಜ್ರನು ಪ್ರತಿನಿಧಿಯಾಗಿ ಕ್ರಿಯೆಗೈದನು. ಅವನ ಹೃತ್ಪೂರ್ವಕವಾದ ಪ್ರಾರ್ಥನೆ ಮತ್ತು ಪ್ರಚೋದನೆಯು, ಯೆಹೋವನ ಕ್ಷಮಾಪಣೆಯನ್ನು ಪಡೆಯಲು ಜನರು ಕ್ರಿಯೆಗೈಯುವಂತೆ ನಡೆಸಿತು. (ಎಜ್ರ 9:13-10:4, 10-19, 44) ಆತ್ಮಿಕವಾಗಿ ಅಸ್ವಸ್ಥನಾಗಿರುವವನು ತನಗೋಸ್ಕರ ಪ್ರಾರ್ಥಿಸಲು ಸಭೆಯ ಹಿರಿಯರನ್ನು ಕರೇಕಳುಹಿಸುವಂತೆ ಯಾಕೋಬನು ಉತ್ತೇಜಿಸಿದನು. ಮತ್ತು ಅವನು “ಪಾಪಮಾಡಿದವನಾಗಿದ್ದರೆ ಅದು ಪರಿಹಾರವಾಗುವದು” ಎಂದು ಹೇಳಿದನು. (ಯಾಕೋಬ 5:14-16) ಹಾಗಿದ್ದರೂ, “ಮರಣಕರವಾದ ಪಾಪವುಂಟು,” ಅದು ಪವಿತ್ರಾತ್ಮಕ್ಕೆ ವಿರುದ್ಧವಾಗಿ ಹಾಗೂ ಬೇಕುಬೇಕೆಂದೇ ರೂಢಿಯಾಗಿ ಮಾಡುವ ಪಾಪವಾಗಿದೆ ಮತ್ತು ಅದಕ್ಕೆ ಕ್ಷಮಾಪಣೆಯಿಲ್ಲ. ಈ ರೀತಿಯಲ್ಲಿ ಪಾಪಮಾಡುವವರಿಗಾಗಿ ಕ್ರೈಸ್ತನೊಬ್ಬನು ಪ್ರಾರ್ಥಿಸಬಾರದು.​—1 ಯೋಹಾನ 5:16; ಮತ್ತಾಯ 12:31; ಇಬ್ರಿಯ 10:26, 27.