ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಜ್ಯವನ್ನು ಪ್ರಥಮವಾಗಿ ಹುಡುಕುವುದು—ಸುರಕ್ಷೆ ಹಾಗೂ ಸಂತೋಷದ ಜೀವನ

ರಾಜ್ಯವನ್ನು ಪ್ರಥಮವಾಗಿ ಹುಡುಕುವುದು—ಸುರಕ್ಷೆ ಹಾಗೂ ಸಂತೋಷದ ಜೀವನ

ಜೀವನ ಕಥೆ

ರಾಜ್ಯವನ್ನು ಪ್ರಥಮವಾಗಿ ಹುಡುಕುವುದು​—ಸುರಕ್ಷೆ ಹಾಗೂ ಸಂತೋಷದ ಜೀವನ

ಜೆತೆ ಸುನಲ್‌ ಅವರು ಹೇಳಿದಂತೆ

ಬೆಳಗ್ಗಿನ ಉಪಾಹಾರದ ಬಳಿಕ ರೇಡಿಯೊದಲ್ಲಿ ನಮಗೆ ಈ ಪ್ರಕಟನೆ ಕೇಳಿಬಂತು: “ಯೆಹೋವನ ಸಾಕ್ಷಿಗಳು ಕಾನೂನುಬಾಹಿರರು. ಅವರ ಕೆಲಸವನ್ನು ನಿಷೇಧಿಸಲಾಗಿದೆ.”

ಅದು 1950ನೆಯ ಇಸವಿಯಾಗಿತ್ತು. ನಾವು ನಾಲ್ವರು ಇಪ್ಪತ್ತು ವರ್ಷಪ್ರಾಯದ ಮಹಿಳೆಯರು, ಡೊಮಿನಿಕನ್‌ ರಿಪಬ್ಲಿಕ್‌ನಲ್ಲಿ ಯೆಹೋವನ ಸಾಕ್ಷಿಗಳ ಮಿಷನೆರಿಗಳಾಗಿ ಸೇವೆಮಾಡುತ್ತಿದ್ದೆವು. ನಾವು ಅಲ್ಲಿಗೆ ಆಗಮಿಸಿ ಒಂದು ವರ್ಷವಾಗಿತ್ತು ಅಷ್ಟೆ.

ನನ್ನ ಜೀವಿತದಲ್ಲಿ ಮಿಷನೆರಿ ಸೇವೆಯು ಯಾವಾಗಲೂ ಒಂದು ಧ್ಯೇಯವಾಗಿರಲಿಲ್ಲ. ಚಿಕ್ಕವಳಾಗಿದ್ದಾಗ ನಾನು ಚರ್ಚಿಗೆ ಹೋಗುತ್ತಿದ್ದೆ ನಿಜ. ನನ್ನ ತಂದೆಯಾದರೊ Iನೆಯ ವಿಶ್ವ ಯುದ್ಧದ ಸಮಯದಲ್ಲೆ ಚರ್ಚಿಗೆ ಹೋಗುವುದನ್ನು ನಿಲ್ಲಿಸಿದ್ದರು. 1933ರಲ್ಲಿ ಎಪಿಸ್‌ಕಾಪಲ್‌ ಚರ್ಚಿನಲ್ಲಿ ನನ್ನ ದೃಢೀಕರಣವಾಯಿತು. ಆ ದಿನ ಬಿಷಪರು ಬೈಬಲಿನಿಂದ ಒಂದೇ ಒಂದು ವಚನವನ್ನು ಓದಿದರು. ಅನಂತರ ರಾಜಕೀಯದ ಬಗ್ಗೆ ಭಾಷಣ ಬಿಗಿಯಲಾರಂಭಿಸಿದರು. ತಾಯಿಯೆಷ್ಟು ಖೇಧಗೊಂಡರೆಂದರೆ, ಆ ಮೇಲೆ ಅವರು ಮುಂದೆಂದೂ ಚರ್ಚಿನೊಳಗೆ ಕಾಲಿರಿಸಲಿಲ್ಲ.

ನಮ್ಮ ಜೀವನ ರೀತಿ ಬದಲಾಯಿತು

ನನ್ನ ಹೆತ್ತವರಾದ ವಿಲ್ಯಮ್‌ ಕಾರ್ಲ್‌ ಮತ್ತು ಮೇರಿ ಏಡಮ್ಸ್‌ ಅವರಿಗೆ ಐದು ಮಂದಿ ಮಕ್ಕಳು. ಗಂಡುಮಕ್ಕಳ ಹೆಸರು ಡಾನ್‌, ಜೋಯೆಲ್‌ ಮತ್ತು ಕಾರ್ಲ್‌. ನಾನು ದೊಡ್ಡವಳು ಮತ್ತು ನನ್ನ ತಂಗಿ ಜಾಯ್‌ ಎಲ್ಲರಿಗಿಂತ ಚಿಕ್ಕವಳು. ನನ್ನ 13ನೆಯ ವಯಸ್ಸಿನಲ್ಲಿ ನಾನೊಮ್ಮೆ ಶಾಲೆಯಿಂದ ಮನೆಗೆ ಬಂದಾಗ, ತಾಯಿಯವರು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಪುಸ್ತಿಕೆಯೊಂದನ್ನು ಓದುತ್ತಾ ಇದ್ದರು. ರಾಜ್ಯವೇ ಲೋಕದ ನಿರೀಕ್ಷೆ (ಇಂಗ್ಲಿಷ್‌) ಎಂಬ ಶೀರ್ಷಿಕೆ ಅದಕ್ಕಿತ್ತು. “ಇದೇ ಸತ್ಯ” ಎಂದು ತಾಯಿ ನನಗೆ ಹೇಳಿದರು.

ತಾವು ಬೈಬಲಿನಿಂದ ಕಲಿಯುತ್ತಿದ್ದ ವಿಷಯಗಳನ್ನು ತಾಯಿಯವರು ನಮಗೆಲ್ಲರಿಗೆ ತಿಳಿಸುತ್ತಿದ್ದರು. “ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ” ಎಂಬ ಯೇಸುವಿನ ಬುದ್ಧಿವಾದದ ಮಹತ್ವವನ್ನು ಅವರು ತಮ್ಮ ಮಾತು ಹಾಗೂ ಮಾದರಿಯ ಮೂಲಕ ನಮ್ಮಲ್ಲಿ ಅಚ್ಚೊತ್ತಿಸಿದರು.​—ಮತ್ತಾಯ 6:33.

ನಾನು ಯಾವಾಗಲೂ ಆದರಪೂರ್ವಕವಾಗಿ ಕಿವಿಗೊಡುತ್ತಿರಲಿಲ್ಲ. “ಅಮ್ಮ, ನೀವು ನನಗೆ ಸಾರಬೇಡಿರಿ. ನೀವು ಅದನ್ನು ನಿಲ್ಲಿಸದಿದ್ದರೆ ನಾನು ನಿಮಗಾಗಿ ಪಾತ್ರೆಗಳನ್ನು ಒರೆಸುವುದನ್ನು ನಿಲ್ಲಿಸುವೆ” ಎಂದೊಮ್ಮೆ ನಾನಂದೆ. ಆದರೆ ಅವರು ಪಟ್ಟುಹಿಡಿದು ಜಾಣ್ಮೆಯಿಂದ ನಮ್ಮೊಂದಿಗೆ ಮಾತಾಡುವದನ್ನು ಮುಂದುವರಿಸಿದರು. ಮಕ್ಕಳಾದ ನಮ್ಮೆಲ್ಲರನ್ನು ಅವರು ಕ್ರಮವಾಗಿ ಬೈಬಲ್‌ ಕೂಟಗಳಿಗೆ ಕರೆದೊಯ್ಯುತ್ತಿದ್ದರು. ಆ ಕೂಟಗಳು, ಅಮೆರಿಕದ ಇಲಿನೊಯಿಸ್‌ನ ಎಲ್ಮ್‌ಹರ್ಸ್ಟ್‌ನಲ್ಲಿದ್ದ ನಮ್ಮ ಮನೆಯಿಂದ ತುಸು ದೂರದಲ್ಲಿದ್ದ ಕ್ಲಾರ ರಾಯನ್‌ರ ಮನೆಯಲ್ಲಿ ನಡೆಯುತ್ತಿದ್ದವು.

ಕ್ಲಾರ ಪಿಯಾನೊ ನುಡಿಸುವುದನ್ನು ಕಲಿಸುತ್ತಿದ್ದಳು. ಅವಳ ವಿದ್ಯಾರ್ಥಿಗಳು ವಾರ್ಷಿಕ ಕಛೇರಿಗಳಲ್ಲಿ ಸಾರ್ವಜನಿಕರ ಮುಂದೆ ಪಿಯಾನೊ ನುಡಿಸುತ್ತಿದ್ದಾಗ, ಅವಳು ಈ ಸಂದರ್ಭಗಳನ್ನು ದೇವರ ರಾಜ್ಯ ಮತ್ತು ಪುನರುತ್ಥಾನದ ನಿರೀಕ್ಷೆಯ ಕುರಿತು ಮಾತಾಡಲು ಉಪಯೋಗಿಸುತ್ತಿದ್ದಳು. ನಾನು ಏಳು ವರ್ಷ ಪ್ರಾಯದಿಂದಲೇ ಪಿಟೀಲು ಬಾರಿಸಲು ಕಲಿತಿದ್ದು, ನನಗೆ ಸಂಗೀತದಲ್ಲಿ ಆಸಕ್ತಿಯಿದ್ದ ಕಾರಣ, ಕ್ಲಾರ ಹೇಳುತ್ತಿದ್ದ ವಿಷಯಗಳಿಗೆ ಕಿವಿಗೊಟ್ಟೆ.

ಬೇಗನೆ, ಮಕ್ಕಳಾಗಿದ್ದ ನಾವು ನಮ್ಮ ತಾಯಿಯೊಂದಿಗೆ ಷಿಕಾಗೋದ ಪಶ್ಚಿಮ ಭಾಗದ ಸಭಾ ಕೂಟಗಳಿಗೆ ಹಾಜರಾಗತೊಡಗಿದೆವು. ಅದಕ್ಕಾಗಿ ಬಸ್ಸು ಮತ್ತು ಸ್ಟ್ರೀಟ್‌ಕಾರ್‌ಗಳಲ್ಲಿ ತುಂಬ ದೂರ ಪ್ರಯಾಣಮಾಡಬೇಕಾಗಿತ್ತು. ಆದರೆ ಅದು ರಾಜ್ಯವನ್ನು ಪ್ರಥಮವಾಗಿ ಹುಡುಕುವುದರ ಅರ್ಥವೇನು ಎಂಬ ವಿಷಯದಲ್ಲಿ ನಮ್ಮ ಆರಂಭದ ತರಬೇತಿಯ ಭಾಗವಾಗಿತ್ತು. ನಮ್ಮ ತಾಯಿಯವರು ದೀಕ್ಷಾಸ್ನಾನ ಪಡೆದುಕೊಂಡು ಮೂರು ವರ್ಷಗಳು ಕಳೆದ ನಂತರ, 1938ರಲ್ಲಿ ನಾನು ಅವರೊಂದಿಗೆ ಷಿಕಾಗೋದಲ್ಲಿ ನಡೆದ ಯೆಹೋವನ ಸಾಕ್ಷಿಗಳ ಅಧಿವೇಶನಕ್ಕೆ ಹಾಜರಾದೆ. ಇದಕ್ಕಾಗಿ 50 ನಗರಗಳು ರೇಡಿಯೊಟೆಲಿಫೋನಿನ ಸಂಪರ್ಕದಲ್ಲಿ ಜೋಡಿಸಲ್ಪಟ್ಟಿದ್ದವು. ನಾನು ಅಲ್ಲಿ ಕೇಳಿದ ವಿಷಯಗಳು ನನ್ನ ಹೃದಯವನ್ನು ಸ್ಪರ್ಶಿಸಿದವು.

ಆದರೂ, ನನ್ನ ಸಂಗೀತ ಪ್ರೇಮವು ಸಹ ನನ್ನ ಹೃದಯದ ತಂತುಗಳನ್ನು ಬಿಗಿದುಹಿಡಿದಿತ್ತು. 1938ರಲ್ಲಿ ನನ್ನ ಹೈಸ್ಕೂಲ್‌ ಶಿಕ್ಷಣ ಮುಗಿಯಿತು. ಮತ್ತು ನನ್ನ ತಂದೆ ನನ್ನನ್ನು ಷಿಕಾಗೋದ ಅಮೆರಿಕನ್‌ ಕನ್ಸರ್‌ವೆಟರಿ ಸಂಗೀತ ಶಾಲೆಗೆ ಸೇರಿಸಿದರು. ಹೀಗೆ ಮುಂದಿನ ಎರಡು ವರ್ಷಗಳಲ್ಲಿ ನಾನು ಸಂಗೀತ ಅಧ್ಯಯನ ನಡೆಸಿದೆ, ಎರಡು ವಾದ್ಯ ವೃಂದಗಳಲ್ಲಿ ಪಿಟೀಲು ನುಡಿಸಿದೆ ಮತ್ತು ಸಂಗೀತ ಕ್ಷೇತ್ರದಲ್ಲಿ ಜೀವನ ವೃತ್ತಿಯನ್ನು ರಚಿಸುವುದರ ಕುರಿತು ಯೋಚಿಸಿದೆ.

ನನ್ನ ಪಿಟೀಲು ಶಿಕ್ಷಕರಾದ ಹರ್ಬಟ್‌ ಬಟ್ಲರ್‌, ಯೂರೋಪನ್ನು ಬಿಟ್ಟು ಅಮೆರಿಕದಲ್ಲಿ ವಾಸಿಸಲು ಬಂದಿದ್ದರು. ನಾನು ಅವರಿಗೆ ನಿರಾಶ್ರಿತರು (ಇಂಗ್ಲಿಷ್‌) * ಎಂಬ ಪುಸ್ತಿಕೆಯನ್ನು ಓದಲು ಕೊಟ್ಟೆ. ಅವರದನ್ನು ಓದುವರೆಂದು ನಾನು ನೆನಸಿದೆ. ಅವರು ಅದನ್ನು ಓದಿದರು ಮತ್ತು ಮರುವಾರದ ನನ್ನ ಪಾಠದ ಬಳಿಕ ಅವರಂದದ್ದು: “ಜೆತೆ, ನೀನು ಪಿಟೀಲನ್ನು ಚೆನ್ನಾಗಿ ನುಡಿಸುತ್ತೀ. ಈ ರೀತಿ ನೀನು ವ್ಯಾಸಂಗವನ್ನು ಮುಂದರಿಸಿದ್ದಲ್ಲಿ, ರೇಡಿಯೊ ವಾದ್ಯ ವೃಂದದಲ್ಲಿ ನಿನಗೆ ಕೆಲಸ ಸಿಕ್ಕೀತು, ಇಲ್ಲವೆ ನೀನು ಸಂಗೀತದ ಶಿಕ್ಷಕಿಯಾಗಬಲ್ಲೆ.” ನಂತರ ನಾನು ಕೊಟ್ಟ ಪುಸ್ತಿಕೆಯನ್ನು ಮುಟ್ಟಿ ಅವರಂದದ್ದು: “ಆದರೆ, ನಿನ್ನ ಮನಸ್ಸೆಲ್ಲಾ ಇದರಲ್ಲೇ ಇದೆಯೆಂದು ನನಗನಿಸುತ್ತದೆ. ನೀನು ಇದನ್ನೇ ನಿನ್ನ ಜೀವನ ವೃತ್ತಿಯನ್ನಾಗಿ ಏಕೆ ಮಾಡಬಾರದು?”

ನಾನು ಅದರ ಕುರಿತು ಗಂಭೀರವಾಗಿ ಯೋಚಿಸಿದೆ. ಸಂಗೀತ ಶಾಲೆಯಲ್ಲಿ ವ್ಯಾಸಂಗ ಮುಂದುವರಿಸುವ ಬದಲಾಗಿ, ನಾನು ತಾಯಿಯೊಂದಿಗೆ ಯೆಹೋವನ ಸಾಕ್ಷಿಗಳ ಅಧಿವೇಶನಕ್ಕೆ ಹಾಜರಾದೆ. ಅದು 1940ನೆಯ ಜುಲೈ ತಿಂಗಳಿನಲ್ಲಿ ಮಿಶಿಗನ್‌ನ ಡೆಟ್ರಾಟ್‌ನಲ್ಲಿ ನಡೆಯಿತು. ನಾವು ಟ್ರೈಲರ್‌ ಸಿಟಿಯ ಡೇರೆಗಳಲ್ಲಿ ಉಳಿದುಕೊಂಡೆವು. ನನ್ನ ಪಿಟೀಲು ನನ್ನ ಜೊತೆಯಲ್ಲಿ ಬಂದಿತ್ತು ನಿಶ್ಚಯ ಮತ್ತು ಅಧಿವೇಶನದ ವಾದ್ಯ ವೃಂದದೊಂದಿಗೆ ನಾನೂ ಪಿಟೀಲನ್ನು ನುಡಿಸಿದೆ. ಆದರೆ ಟ್ರೈಲರ್‌ ಸಿಟಿಯಲ್ಲಿ ನನಗೆ ಅನೇಕ ಪಯನೀಯರರು (ಪೂರ್ಣ ಸಮಯದ ಸೌವಾರ್ತಿಕರು) ಭೇಟಿಯಾದರು. ಅವರೆಲ್ಲರೂ ಬಹಳ ಸಂತೋಷದಿಂದಿದ್ದರು. ನಾನು ದೀಕ್ಷಾಸ್ನಾನ ಪಡೆದುಕೊಳ್ಳಲು ಮತ್ತು ಪಯನೀಯರ್‌ ಸೇವೆಗೆ ಅರ್ಜಿಹಾಕಲು ನಿರ್ಣಯಿಸಿದೆ. ಜೀವಮಾನವಿಡೀ ಪೂರ್ಣಸಮಯದ ಸೇವೆಯಲ್ಲಿ ಮುಂದುವರಿಯಲು ನಾನು ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಿದೆ.

ನನ್ನ ಹುಟ್ಟೂರಲ್ಲೇ ನನ್ನ ಪಯನೀಯರ್‌ ಸೇವೆಯನ್ನು ಆರಂಭಿಸಿದೆ. ಅನಂತರ ಷಿಕಾಗೋದಲ್ಲಿ ಸೇವೆಮಾಡಿದೆ, ಮತ್ತು 1943ರಲ್ಲಿ ಕೆಂಟಕ್ಕಿಗೆ ಸ್ಥಳಾಂತರಿಸಿದೆ. ಆ ಬೇಸಗೆಯಲ್ಲಿ, ಜಿಲ್ಲಾ ಅಧಿವೇಶನಕ್ಕೆ ಸ್ವಲ್ಪ ಮುಂಚೆ ನನಗೆ ಗಿಲ್ಯಡ್‌ ಶಾಲೆಯ ಎರಡನೆಯ ಕ್ಲಾಸಿಗೆ ಹಾಜರಾಗಲು ಆಮಂತ್ರಣ ಸಿಕ್ಕಿತು. ಅಲ್ಲಿ ಮಿಷನೆರಿ ಸೇವೆಗಾಗಿ ನನಗೆ ತರಬೇತಿ ದೊರೆಯಲಿತ್ತು. ಸೆಪ್ಟೆಂಬರ್‌ 1943ರಲ್ಲಿ ಆ ಕ್ಲಾಸ್‌ ಆರಂಭಗೊಳ್ಳಲಿತ್ತು.

ಆ ಬೇಸಗೆಯ ಅಧಿವೇಶನದಲ್ಲಿ ನಾನು ಒಬ್ಬ ಸಾಕ್ಷಿಯ ಮನೆಯಲ್ಲಿ ಉಳಿದುಕೊಂಡಿದ್ದೆ. ನನಗೆ ಬೇಕಾದ ಬಟ್ಟೆಗಳನ್ನು ಅವರ ಮಗಳ ಕಪಾಟಿನಿಂದ ಆರಿಸಿಕೊಳ್ಳುವಂತೆ ಅವರು ಹೇಳಿದರು. ಅವರ ಮಗಳು ಮಿಲಿಟರಿಗೆ ಸೇರಿಕೊಂಡದ್ದರಿಂದ ತನ್ನೆಲ್ಲಾ ವಸ್ತುಗಳನ್ನು ಕೊಟ್ಟುಬಿಡುವಂತೆ ತಾಯಿಗೆ ಹೇಳಿಹೋಗಿದ್ದಳು. ನನಗಾದರೋ ಈ ಆವಶ್ಯಕ ಒದಗಿಸುವಿಕೆಗಳು ಯೇಸುವಿನ ವಾಗ್ದಾನದ ನೆರವೇರಿಕೆಯಾಗಿದ್ದವು: “ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾಯ 6:33) ಗಿಲ್ಯಡ್‌ ಶಾಲೆಯಲ್ಲಿನ ಐದು ತಿಂಗಳುಗಳು ಬೇಗನೆ ಹಾರಿಹೋದವು. 1944ರ ಜನವರಿ 31ರಂದು ನನಗೆ ಪದವಿ ಪ್ರಾಪ್ತಿಯಾದಾಗ ನಾನು ಮಿಷನೆರಿ ಸೇವೆಯನ್ನಾರಂಭಿಸಲು ತುದಿಗಾಲಲ್ಲಿ ನಿಂತಿದ್ದೆ.

ಅವರು ಸಹ ಪೂರ್ಣಸಮಯದ ಸೇವೆಯನ್ನು ಆರಿಸಿಕೊಂಡರು

ನನ್ನ ಅಮ್ಮ 1942ರಲ್ಲೇ ಪಯನೀಯರ್‌ ಸೇವೆಯನ್ನು ಆರಂಭಿಸಿದ್ದರು. ಆ ಸಮಯದಲ್ಲಿ ನನ್ನ ಮೂವರು ತಮ್ಮಂದಿರು ಮತ್ತು ತಂಗಿ ಇನ್ನೂ ಶಾಲೆಗೆ ಹೋಗುತ್ತಿದ್ದರು. ಅಮ್ಮ ಅನೇಕ ಸಾರಿ ಶಾಲಾನಂತರ ಅವರನ್ನು ಭೇಟಿಯಾಗಿ, ಅವರನ್ನು ತನ್ನ ಜೊತೆಯಲ್ಲಿ ಕ್ಷೇತ್ರ ಸೇವೆಗೆ ಕರೆದೊಯ್ಯುತ್ತಿದ್ದರು. ಮನೆಗೆಲಸಗಳನ್ನು ಮಾಡುವುದನ್ನು ಸಹ ಅವರಿಗೆ ಕಲಿಸಿಕೊಟ್ಟರು. ದಿನದ ಸಮಯದಲ್ಲಿ ಕ್ಷೇತ್ರ ಸೇವೆಮಾಡಲಾಗುವಂತೆ, ಇಸ್ತ್ರಿಮಾಡುವುದು ಮುಂತಾದ ಆವಶ್ಯಕ ಕೆಲಸಗಳನ್ನು ಮಾಡಲು ಅವರು ಸ್ವತಃ ರಾತ್ರಿ ಬಹಳ ತಡವಾಗಿ ನಿದ್ರೆಮಾಡುತ್ತಿದ್ದರು.

ಜನವರಿ 1943ರಲ್ಲಿ ನಾನು ಕೆಂಟಕ್ಕಿಯಲ್ಲಿ ಪಯನೀಯರ್‌ ಸೇವೆಮಾಡುತ್ತಿದ್ದಾಗ, ನನ್ನ ತಮ್ಮ ಡಾನ್‌ ಸಹ ಪಯನೀಯರನಾದನು. ಇದು ನನ್ನ ತಂದೆಯವರನ್ನು ನಿರಾಶೆಗೊಳಿಸಿತು. ಯಾಕೆಂದರೆ ಅವರಿಗೆ ಮತ್ತು ಅಮ್ಮನಿಗೆ ಹೇಗೆ ಕಾಲೇಜ್‌ ಶಿಕ್ಷಣವಿತ್ತೋ ಹಾಗೆಯೇ ತಮ್ಮ ಮಕ್ಕಳೆಲ್ಲರೂ ಕಾಲೇಜ್‌ ಶಿಕ್ಷಣವನ್ನು ಪಡೆಯಬೇಕೆಂದು ಅವರು ಅಪೇಕ್ಷಿಸಿದ್ದರು. ಸುಮಾರು ಎರಡು ವರ್ಷಗಳ ಕಾಲ ಪಯನೀಯರ್‌ ಸೇವೆಯನ್ನು ಮಾಡಿದ ನಂತರ, ಡಾನ್‌ನನ್ನು ಅಮೆರಿಕದ ಯೆಹೋವನ ಸಾಕ್ಷಿಗಳ ಬ್ರೂಕ್‌ಲಿನ್‌ ಮುಖ್ಯ ಕಾರ್ಯಾಲಯದಲ್ಲಿದ್ದ ಸಿಬ್ಬಂದಿಯ ಭಾಗವಾಗಿ ತನ್ನ ಪೂರ್ಣಸಮಯದ ಸೇವೆಯನ್ನು ಮುಂದುವರಿಸುವಂತೆ ಕರೆಯಲಾಯಿತು.

ಜೋಯೆಲ್‌ 1943ರ ಜೂನ್‌ ತಿಂಗಳಿನಲ್ಲಿ, ಮನೆಯಲ್ಲಿ ಅಪ್ಪಅಮ್ಮಂದಿರೊಟ್ಟಿಗೆ ಇರುವಾಗಲೇ ಪಯನೀಯರ್‌ ಸೇವೆಯನ್ನು ಆರಂಭಿಸಿದ್ದನು. ಆ ಸಮಯದಲ್ಲಿ ತಂದೆಯವರನ್ನು ಒಂದು ಅಧಿವೇಶನಕ್ಕೆ ಹಾಜರಾಗುವಂತೆ ಮಾಡಲು ಅವನು ಬಹಳ ಪ್ರಯತ್ನಿಸಿದರೂ ಸಫಲನಾಗಲಿಲ್ಲ. ಆದರೆ ಆ ಕ್ಷೇತ್ರದಲ್ಲಿ ಒಂದು ಗೃಹ ಬೈಬಲ್‌ ಅಧ್ಯಯನವನ್ನು ಆರಂಭಿಸುವುದರಲ್ಲಿ ಜೋಯೆಲ್‌ ಅಸಫಲನಾದಾಗ, “ಸತ್ಯವು ನಿಮ್ಮನ್ನು ಬಿಡುಗಡೆ ಮಾಡುತ್ತದೆ” (ಇಂಗ್ಲಿಷ್‌) ಎಂಬ ಪುಸ್ತಕವನ್ನು ಅಧ್ಯಯನಮಾಡಲು ತಂದೆಯವರು ಒಪ್ಪಿದರು. ಅವರು ಸುಲಭವಾಗಿ ಉತ್ತರವನ್ನು ಕೊಡುತ್ತಿದ್ದರಾದರೂ, ಪುಸ್ತಕದಲ್ಲಿ ಹೇಳಿದ್ದ ವಿಷಯಗಳಿಗಾಗಿ ಶಾಸ್ತ್ರೀಯ ಪುರಾವೆಗಳನ್ನು ಕೊಡುವಂತೆ ಅವರು ಜೋಯಲ್‌ನನ್ನು ಒತ್ತಾಯಿಸುತ್ತಿದ್ದರು. ಇದು ಜೋಯಲ್‌ ಬೈಬಲ್‌ ಸತ್ಯಗಳನ್ನು ತನ್ನದಾಗಿ ಮಾಡಿಕೊಳ್ಳುವಂತೆ ಸಹಾಯಮಾಡಿತು.

ಶುಶ್ರೂಷಕನೋಪಾದಿ ಡಾನ್‌ಗೆ ಮಿಲಿಟರಿ ಸೇವೆಯಿಂದ ವಿನಾಯಿತಿಯನ್ನು ಕೊಟ್ಟಿದ್ದ ಸಿಲೆಕ್ಟಿವ್‌ ಸರ್ವಿಸ್‌ ಬೋರ್ಡ್‌ ತನಗೂ ಆ ವಿನಾಯಿತಿಯನ್ನು ಕೊಡುವದೆಂದು ಜೋಯೆಲ್‌ ನಿರೀಕ್ಷಿಸಿದ್ದನು. ಆದರೆ ಅವನೆಷ್ಟು ಚಿಕ್ಕಪ್ರಾಯದವನಾಗಿ ತೋರುತ್ತಿದ್ದನೆಂಬದನ್ನು ಅವರು ಕಂಡಾಗ, ಅವನನ್ನು ಶುಶ್ರೂಷಕನಾಗಿ ವರ್ಗೀಕರಿಸಲು ಅವರು ನಿರಾಕರಿಸಿದರು ಮತ್ತು ಮಿಲಿಟರಿ ಸೇವೆಗೆ ಸೇರುವಂತೆ ನೋಟೀಸ್‌ ಕಳುಹಿಸಿದರು. ಅದಕ್ಕೆ ಅವನು ಒಪ್ಪದಿದ್ದಾಗ, ಅರೆಸ್ಟ್‌ ವಾರಂಟ್‌ ಬಂತು. ಎಫ್‌. ಬಿ. ಐ. ಪೊಲೀಸರು ಅವನನ್ನು ಹಿಡಿದು, ಕುಕ್‌ ಕೌಂಟಿ ಸೆರೆಮನೆಯಲ್ಲಿ ಮೂರು ದಿನಗಳ ತನಕ ಇಟ್ಟರು.

ತಂದೆಯವರು ನಮ್ಮ ಮನೆಯನ್ನು ಜಾಮೀನಾಗಿಟ್ಟು ಅವನನ್ನು ಸೆರೆಮನೆಯಿಂದ ಬಿಡಿಸಿದರು. ತದನಂತರ, ತದ್ರೀತಿಯ ಸನ್ನಿವೇಶಕ್ಕೆ ಒಳಗಾದ ಬೇರೆ ಯುವ ಸಾಕ್ಷಿಗಳಿಗಾಗಿಯೂ ಅವರು ಅದನ್ನು ಮಾಡಿದರು. ಈ ಅನ್ಯಾಯವು ತಂದೆಯವರನ್ನು ಸಿಟ್ಟಿಗೆಬ್ಬಿಸಿತು ಮತ್ತು ಇದಕ್ಕಾಗಿ ಅಪ್ಪೀಲು ಮಾಡಸಾಧ್ಯವೊ ಎಂದು ನೋಡುವುದಕ್ಕಾಗಿ ಅವರು ಜೋಯಲ್‌ನೊಂದಿಗೆ ವಾಷಿಂಗ್‌ಟನ್‌ಗೆ ಹೋದರು. ಕಟ್ಟಕಡೆಗೆ ಜೋಯೆಲ್‌ ಶುಶ್ರೂಷಕನಾಗಿ ವರ್ಗೀಕರಿಸಲ್ಪಟ್ಟನು ಮತ್ತು ಮೊಕದ್ದಮೆಯು ವಜಾಮಾಡಲ್ಪಟ್ಟಿತು. ಮಿಷನೆರಿ ನೇಮಕದಲ್ಲಿದ್ದ ನನಗೆ ತಂದೆ ಪತ್ರ ಬರೆಯುತ್ತಾ ಅಂದದ್ದು: “ಈ ವಿಜಯಕ್ಕಾಗಿ ಶ್ರೇಯಸ್ಸು ಯೆಹೋವನಿಗೇ ಸಲ್ಲಬೇಕು ಎಂದೆಣಿಸುತ್ತೇನೆ!” 1946ನೆಯ ಆಗಸ್ಟ್‌ ತಿಂಗಳ ಅಂತ್ಯದೊಳಗೆ, ಬ್ರೂಕ್‌ಲಿನ್‌ ಮುಖ್ಯ ಕಾರ್ಯಾಲಯದ ಸಿಬ್ಬಂದಿಯ ಸದಸ್ಯನಾಗಲು ಜೋಯಲ್‌ಗೂ ಕರೆಬಂತು.

ಕಾರ್ಲ್‌ 1947ರಲ್ಲಿ ತನ್ನ ಹೈಸ್ಕೂಲ್‌ ಶಿಕ್ಷಣವನ್ನು ಮುಗಿಸುವ ಮುಂಚೆ, ಅನೇಕಸಲ ಶಾಲಾ ರಜಾದಿನಗಳಲ್ಲಿ ಪಯನೀಯರ್‌ ಸೇವೆಮಾಡಿ ಆಮೇಲೆ ರೆಗ್ಯುಲರ್‌ ಪಯನೀಯರನಾದನು. ತಂದೆಯ ಆರೋಗ್ಯವು ಕ್ಷೀಣಿಸುತ್ತಾ ಇದ್ದದ್ದರಿಂದ, ಕಾರ್ಲ್‌ ಅವರ ವ್ಯಾಪಾರದಲ್ಲಿ ನೆರವಾದನು. ಆಮೇಲೆ ಅವನು ಬೇರೆ ಕಡೆ ಪಯನೀಯರ್‌ ನೇಮಕವನ್ನು ಸ್ವೀಕರಿಸಿದನು. 1947ರ ಕೊನೆಯಲ್ಲಿ ಡಾನ್‌ ಮತ್ತು ಜೋಯಲ್‌ನೊಂದಿಗೆ ಕಾರ್ಲ್‌ ಸಹ ಬ್ರೂಕ್‌ಲಿನ್‌ನಲ್ಲಿ ಬೆತೆಲ್‌ ಕುಟುಂಬದ ಸದಸ್ಯನಾಗಿ ಸೇವೆ ಸಲ್ಲಿಸಲು ಆರಂಭಿಸಿದನು.

ಜಾಯ್‌ ಹೈಸ್ಕೂಲ್‌ ಶಿಕ್ಷಣ ಮುಗಿಸಿದಾಗ, ಪಯನೀಯರ್‌ ಸೇವೆಯನ್ನು ಆರಂಭಿಸಿದಳು. ಅನಂತರ 1951ರಲ್ಲಿ, ಬೆತೆಲ್‌ ಸೇವೆಯಲ್ಲಿ ತನ್ನ ಸಹೋದರರೊಂದಿಗೆ ಜತೆಗೂಡಿದಳು. ಅವಳು ಅಲ್ಲಿ ಹೌಸ್‌ಕೀಪರ್‌ ಆಗಿ ಹಾಗೂ ಚಂದಾ ವಿಭಾಗದಲ್ಲೂ ಕೆಲಸಮಾಡಿದಳು. 1955ರಲ್ಲಿ ಬೆತೆಲ್‌ ಕುಟುಂಬದ ಒಬ್ಬ ಸದಸ್ಯನಾದ ರಾಜರ್‌ ಮಾರ್ಗನ್‌ನೊಂದಿಗೆ ಅವಳ ವಿವಾಹವಾಯಿತು. ಸುಮಾರು ಏಳು ವರ್ಷಗಳ ತರುವಾಯ, ತಮ್ಮ ಸ್ವಂತ ಕುಟುಂಬವನ್ನು ಹೊಂದುವ ಆಯ್ಕೆಯನ್ನು ಮಾಡಿ ಅವರು ಬೆತೆಲನ್ನು ಬಿಟ್ಟುಹೋದರು. ಅವರಿಗೆ ಇಬ್ಬರು ಮಕ್ಕಳಾದರು ಮತ್ತು ಅವರು ಸಹ ಯೆಹೋವನ ಸೇವೆಯನ್ನು ಮಾಡುತ್ತಿದ್ದಾರೆ.

ಮಕ್ಕಳೆಲ್ಲರೂ ಪೂರ್ಣಸಮಯದ ಸೇವೆಯಲ್ಲಿದ್ದಾಗ, ತಾಯಿಯವರು ತಂದೆಗೆ ಅಗತ್ಯವಿದ್ದ ಪ್ರೋತ್ಸಾಹವನ್ನು ನೀಡುತ್ತಾ ಬಂದದರಿಂದ, ತಂದೆಯವರು ಸಹ ಯೆಹೋವನಿಗೆ ತಮ್ಮ ಜೀವನವನ್ನು ಸಮರ್ಪಿಸಿ, 1952ರಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡರು. ಅಂದಿನಿಂದ 15 ವರ್ಷಗಳ ವರೆಗೆ, ತಮ್ಮ ಮರಣದ ತನಕವೂ ರಾಜ್ಯದ ಸತ್ಯವನ್ನು ಇತರರಿಗೆ ಹಂಚುವುದರಲ್ಲಿ ಅವರು ತುಂಬ ಬುದ್ಧಿವಂತಿಕೆಯನ್ನು ಉಪಯೋಗಿಸಿ ಬೇರೆ ಬೇರೆ ವಿಧಾನಗಳನ್ನು ಕಂಡುಹಿಡಿದರು. ಅವರ ಕಾಯಿಲೆಯು ಅವರನ್ನು ಬಹಳಷ್ಟು ನಿರ್ಬಂಧಿಸಿದರೂ ಅವರಿದನ್ನು ಮಾಡಿದರು.

ತಂದೆಯವರ ಅಸೌಖ್ಯದ ನಿಮಿತ್ತವಾಗಿ ತಾಯಿಗೆ ಸ್ವಲ್ಪ ಸಮಯ ಪಯನೀಯರ್‌ ಸೇವೆಯನ್ನು ನಿಲ್ಲಿಸಬೇಕಾಯಿತಾದರೂ, ಆಮೇಲೆ ಅವರು ತಮ್ಮ ಮರಣದ ತನಕ ಪಯನೀಯರ್‌ ಸೇವೆಯಲ್ಲಿ ಮುಂದುವರಿದರು. ಅವರ ಬಳಿ ಎಂದೂ ಒಂದು ಕಾರ್‌ ಇರಲಿಲ್ಲ; ಅವರಿಗೆ ಸೈಕಲ್‌ ತುಳಿಯಲು ಸಹ ಬರುತ್ತಿರಲಿಲ್ಲ. ಗಿಡ್ಡ ದೇಹದವರಾಗಿದ್ದ ಅವರು ಎಲ್ಲಾ ಕಡೆ ನಡೆದುಕೊಂಡೇ ಹೋಗುತ್ತಿದ್ದರು. ಅನೇಕವೇಳೆ ದೂರದೂರದ ಹಳ್ಳಿಗಾಡುಗಳಿಗೂ ಹೋಗಿ ಬೈಬಲಧ್ಯಯನ ನಡಿಸುತ್ತಿದ್ದರು.

ಮಿಷನೆರಿ ಕ್ಷೇತ್ರದಲ್ಲಿ

ಗಿಲ್ಯಡ್‌ ಶಾಲೆಯಲ್ಲಿ ಪದವಿ ಪ್ರಾಪ್ತಿಯಾದ ಮೇಲೆ, ನಮ್ಮ ಒಂದು ಚಿಕ್ಕ ಗುಂಪು ಪ್ರಯಾಣಕ್ಕೆ ಬೇಕಾದ ಶಾಸನಬದ್ಧ ಕಾಗದಪತ್ರಗಳು ದೊರೆಯುವ ವರೆಗೆ, ನ್ಯೂ ಯಾರ್ಕ್‌ ಸಿಟಿಯಲ್ಲಿ ಒಂದು ವರ್ಷ ಪಯನೀಯರ್‌ ಸೇವೆಯನ್ನು ಮಾಡಿತು. 1945ರಲ್ಲಿ ನಮ್ಮ ಹೊಸ ನೇಮಕವಾದ ಕ್ಯೂಬಕ್ಕೆ ಹೊರಟೆವು. ಅಲ್ಲಿ ನಾವು ಕ್ರಮೇಣ, ಒಂದು ಹೊಸ ಜೀವನ ರೀತಿಗೆ ಹೊಂದಿಕೊಂಡೆವು. ನಮ್ಮ ಸಾರುವಿಕೆಗೆ ಒಳ್ಳೇ ಪ್ರತಿವರ್ತನೆ ದೊರೆಯಿತು ಮತ್ತು ನಮಗೆಲ್ಲರಿಗೂ ಬೇಗನೆ ಅನೇಕಾನೇಕ ಬೈಬಲ್‌ ಅಧ್ಯಯನಗಳು ದೊರೆತವು. ಆಮೇಲೆ ಪುನಃ ಡೊಮಿನಿಕನ್‌ ರಿಪಬ್ಲಿಕ್‌ನಲ್ಲಿ ಸೇವೆಮಾಡುವ ನೇಮಕ ನಮಗೆ ದೊರೆಯಿತು. ಒಂದು ದಿನ ನನಗೆ ಒಬ್ಬಾಕೆ ಸ್ತ್ರೀಯು ಭೇಟಿಯಾದಳು. ತನ್ನ ಗಿರಾಕಿಯಾಗಿದ್ದ ಸೂಸನ್‌ ಎನ್‌ಫ್ರಾ ಎಂಬ ಒಬ್ಬ ಫ್ರೆಂಚ್‌ ಮಹಿಳೆಯನ್ನು ನಾನು ಭೇಟಿಯಾಗುವಂತೆ ಆಕೆ ಒತ್ತಾಯಿಸಿದಳು. ಬೈಬಲನ್ನು ತಿಳಿಯಲು ಆ ಮಹಿಳೆಗೆ ಸಹಾಯವು ಬೇಕಿತ್ತು.

ಸೂಸನ್‌ ಒಬ್ಬ ಯೆಹೂದಿಯಾಗಿದ್ದಳು. ಹಿಟ್ಲರನು ಫ್ರಾನ್ಸ್‌ ದೇಶವನ್ನು ಆಕ್ರಮಿಸಿದಾಗ, ಅವಳ ಗಂಡನು ಅವಳನ್ನೂ ಅವರ ಇಬ್ಬರು ಮಕ್ಕಳನ್ನೂ ಬೇರೊಂದು ದೇಶಕ್ಕೆ ಒಯ್ದನು. ಬೇಗನೆ ಸೂಸನ್‌ ತಾನು ಕಲಿಯುತ್ತಿದ್ದ ವಿಷಯಗಳನ್ನು ಇತರರಿಗೆ ತಿಳಿಸತೊಡಗಿದಳು. ಅವಳು ಮೊದಲಾಗಿ, ಅವಳನ್ನು ಭೇಟಿಮಾಡುವಂತೆ ನನಗೆ ಹೇಳಿದ ಸ್ತ್ರೀಗೆ ಮತ್ತು ಅನಂತರ ಅವಳ ಫ್ರೆಂಚ್‌ ಮಿತ್ರಳಾದ ಬ್ಲಾನ್ಶ್‌ ಎಂಬವಳಿಗೆ ಸಾಕ್ಷಿಕೊಟ್ಟಳು. ಇಬ್ಬರೂ ದೀಕ್ಷಾಸ್ನಾನ ಹೊಂದುವಷ್ಟು ಪ್ರಗತಿಯನ್ನು ಮಾಡಿದರು.

“ನನ್ನ ಮಕ್ಕಳಿಗೆ ಸಹಾಯಮಾಡಲು ನಾನೇನು ಮಾಡಲಿ?” ಎಂದು ಸೂಸನ್‌ ನನ್ನನ್ನು ಕೇಳಿದಳು. ಅವಳ ಮಗನು ವೈದ್ಯಕೀಯಶಾಸ್ತ್ರವನ್ನು ಕಲಿಯುತ್ತಿದ್ದ ಮತ್ತು ಮಗಳು ಬ್ಯಾಲೆ ಡಾನ್ಸ್‌ ಅಭ್ಯಾಸ ಮಾಡುತ್ತಿದ್ದಳು. ನ್ಯೂ ಯಾರ್ಕಿನ ರೇಡಿಯೊ ಸಿಟಿ ಮ್ಯೂಸಿಕ್‌ ಹಾಲ್‌ನಲ್ಲಿ ನರ್ತಿಸುವ ನಿರೀಕ್ಷೆ ಅವಳಿಗಿತ್ತು. ಸೂಸನ್‌ ಅವರಿಗೆ ವಾಚ್‌ಟವರ್‌ ಮತ್ತು ಎವೇಕ್‌! ಪತ್ರಿಕೆಗಳ ಚಂದಾಗಳನ್ನು ಕಳುಹಿಸಿದಳು. ಪರಿಣಾಮವಾಗಿ, ಸೂಸನ್‌ಳ ಮಗ, ಅವನ ಪತ್ನಿ ಹಾಗೂ ಅವನ ಪತ್ನಿಯ ಅವಳಿ ಸೋದರಿಯು ಯೆಹೋವನ ಸಾಕ್ಷಿಗಳಾದರು. ಸೂಸನ್‌ಳ ಗಂಡ ಲೂವಿಗೆ, ಯೆಹೋವನ ಸಾಕ್ಷಿಗಳಲ್ಲಿ ತನ್ನ ಪತ್ನಿಗಿದ್ದ ಆಸಕ್ತಿಯನ್ನು ಕಂಡು ಕಳವಳವಾಯಿತು, ಯಾಕಂದರೆ ಅಷ್ಟರಲ್ಲಿ ಡೊಮಿನಿಕನ್‌ ರಿಪಬ್ಲಿಕ್‌ ಸರ್ಕಾರವು ನಮ್ಮ ಕಾರ್ಯವನ್ನು ನಿಷೇಧಿಸಿತ್ತು. ಆದರೆ ಇಡೀ ಕುಟುಂಬವು ಅಮೆರಿಕಕ್ಕೆ ಸ್ಥಳಾಂತರಿಸಿದಾಗ, ಕಟ್ಟಕಡೆಗೆ ಅವನೂ ಒಬ್ಬ ಸಾಕ್ಷಿಯಾದನು.

ಬ್ಯಾನ್‌ ಕೆಳಗಿದ್ದರೂ ಇನ್ನೂ ಸೇವೆಮಾಡುತ್ತಿರುವುದು

ನಾವು 1949ರಲ್ಲಿ ಡೊಮಿನಿಕನ್‌ ರಿಪಬ್ಲಿಕ್‌ಗೆ ಬಂದ ಸ್ವಲ್ಪ ಸಮಯದ ನಂತರವೇ ಯೆಹೋವನ ಸಾಕ್ಷಿಗಳ ಕಾರ್ಯವು ಅಲ್ಲಿ ನಿಷೇಧಿಸಲ್ಪಟ್ಟರೂ, ಮನುಷ್ಯರಿಗಿಂತಲೂ ಹೆಚ್ಚಾಗಿ ದೇವರಿಗೆ ವಿಧೇಯರಾಗಬೇಕೆಂಬದೇ ನಮ್ಮ ದೃಢನಿರ್ಧಾರವಾಗಿತ್ತು. (ಅ. ಕೃತ್ಯಗಳು 5:29) ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದಂತೆಯೇ, ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಮೂಲಕ ನಾವು ಅದನ್ನು ಪ್ರಥಮವಾಗಿ ಹುಡುಕಿದೆವು. (ಮತ್ತಾಯ 24:14) ಆದರೂ, ನಮ್ಮ ಸಾರುವ ಕೆಲಸದಲ್ಲಿ “ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ” ಆಗಿರಲು ಕಲಿತೆವು. (ಮತ್ತಾಯ 10:16) ಉದಾಹರಣೆಗೆ ನನ್ನ ಪಿಟೀಲು ನನಗೆ ಬಹಳ ಸಹಾಯಮಾಡಿತು. ನಾನು ಬೈಬಲಭ್ಯಾಸಗಳನ್ನು ನಡೆಸುತ್ತಿದ್ದಾಗ ಅದು ನನ್ನ ಜೊತೆಗೆ ಇರುತ್ತಿತ್ತು. ನನ್ನ ವಿದ್ಯಾರ್ಥಿಗಳಾದರೊ ಪಿಟೀಲು ವಾದಕರಾಗಲಿಲ್ಲ ಬದಲಾಗಿ ಅನೇಕ ಕುಟುಂಬಗಳು ಯೆಹೋವನ ಸೇವಕರಾದವು!

ನಿಷೇಧವು ವಿಧಿಸಲ್ಪಟ್ಟ ಬಳಿಕ, ನಾಲ್ಕು ಮಂದಿ ಹುಡುಗಿಯರಾಗಿದ್ದ ನಮ್ಮನ್ನು​—ನಾನು, ಮೇರಿ ಎನ್ಯೊಲ್‌, ಸೋಫಿಯ ಸೊವಿಕ್‌, ಮತ್ತು ಈಡಿತ್‌ ಮಾರ್ಗನ್‌​—ಸಾನ್‌ ಫ್ರಾನ್ಸಿಸ್ಕೊ ಡ ಮಕಾರೀಸ್‌ ಮಿಷನೆರಿ ಗೃಹದಿಂದ, ರಾಜಧಾನಿಯಾದ ಸ್ಯಾಂಟೊ ಡೊಮಿಂಗೊದಲ್ಲಿದ್ದ ಬ್ರಾಂಚ್‌ ಆಫೀಸಿನ ಮಿಷನೆರಿ ಗೃಹಕ್ಕೆ ಸ್ಥಳಾಂತರಿಸಲಾಯಿತು. ಆದರೆ ಪ್ರತಿ ತಿಂಗಳು ಒಂದು ಸಂಗೀತ ಪಾಠವನ್ನು ಕಲಿಸಲಿಕ್ಕಾಗಿ ನಾನು ನನ್ನ ಹಿಂದಿನ ನೇಮಕಕ್ಕೆ ಹೋಗುತ್ತಿದ್ದೆ. ನನ್ನ ಪಿಟೀಲು ಪೆಟ್ಟಿಗೆಯಲ್ಲಿ ನಮ್ಮ ಕ್ರೈಸ್ತ ಸಹೋದರರಿಗಾಗಿ ಆತ್ಮಿಕ ಆಹಾರವನ್ನು ಒಯ್ಯುವಂತೆ ಇದು ಸಹಾಯಮಾಡಿತು. ಮತ್ತು ಹಿಂದಿರುಗಿ ಬರುತ್ತಿದ್ದಾಗ ಅವರ ಸಾಕ್ಷಿ ಕಾರ್ಯದ ವರದಿಗಳನ್ನು ನಾನು ತರುತ್ತಿದ್ದೆ.

ಸಾನ್‌ ಫ್ರಾನ್ಸಿಸ್ಕೊ ಡ ಮಕಾರೀಸ್‌ನ ಸಹೋದರರು ತಾಟಸ್ಥ್ಯದ ತಮ್ಮ ಕ್ರೈಸ್ತ ನಿಲುವಿಗಾಗಿ ಸಾಂಟಿಯಾಗೊದಲ್ಲಿ ಸೆರೆಗೆ ಹಾಕಲ್ಪಟ್ಟಾಗ, ಅವರಿಗೆ ಹಣವನ್ನು ಮತ್ತು ಸಾಧ್ಯವಾದರೆ ಬೈಬಲುಗಳನ್ನು ಕೊಂಡೊಯ್ಯಲು ಮತ್ತು ಅವರ ಕ್ಷೇಮ ಸಮಾಚಾರವನ್ನು ಅವರ ಕುಟುಂಬಗಳಿಗಾಗಿ ತರಲು ನನ್ನನ್ನು ಕೇಳಲಾಯಿತು. ಸಾಂಟಿಯಾಗೊ ಸೆರೆಮನೆಯ ಕಾವಲುಗಾರರು ನನ್ನ ಕಂಕುಳಲ್ಲಿದ್ದ ಪಿಟೀಲು ಪೆಟ್ಟಿಗೆಯನ್ನು ಕಂಡು “ಇದೇತಕ್ಕೆ?” ಎಂದು ಪ್ರಶ್ನಿಸಿದರು. “ಅವರ ಮನೋರಂಜನೆಗಾಗಿ” ಎಂದು ನಾನು ಉತ್ತರಕೊಟ್ಟೆ.

ನಾನು ನುಡಿಸುತ್ತಿದ್ದ ಹಾಡುಗಳಲ್ಲಿ ಒಂದು, ನಾಜೀ ಕೂಟ ಶಿಬಿರದಲ್ಲಿ ಒಬ್ಬ ಸಾಕ್ಷಿಯು ರಚಿಸಿದ ಒಂದು ಹಾಡಾಗಿತ್ತು. ಯೆಹೋವನ ಸಾಕ್ಷಿಗಳ ಸಂಗೀತ ಪುಸ್ತಕದಲ್ಲಿ ಅದೀಗ 29ನೆಯ ಹಾಡಾಗಿದೆ. ಸೆರೆಯಲ್ಲಿದ್ದ ನಮ್ಮ ಸಹೋದರರು ಅದನ್ನು ಹಾಡಲು ಕಲಿಯುವಂತೆ ನಾನು ಅದನ್ನು ನುಡಿಸುತ್ತಿದ್ದೆ.

ಅನೇಕ ಮಂದಿ ಸಾಕ್ಷಿಗಳನ್ನು ಸರಕಾರದ ಮುಖ್ಯಾಧಿಕಾರಿ ಟ್ರುಜಿಲೊಗೆ ಸೇರಿದ್ದ ಒಂದು ಫಾರ್ಮ್‌ಗೆ ಸ್ಥಳಾಂತರಿಸಲಾಗಿತ್ತೆಂದು ನನಗೆ ತಿಳಿದುಬಂತು. ಅದು ಬಸ್ಸು ಹೋಗುವ ರಸ್ತೆಯ ಸಮೀಪವಿದೆಯೆಂದು ನನಗೆ ಹೇಳಲಾಯಿತು. ಆದುದರಿಂದ ಮಧ್ಯಾಹ್ನದಷ್ಟಕ್ಕೆ ನಾನು ಬಸ್ಸಿನಿಂದಿಳಿದು, ಆ ಫಾರ್ಮ್‌ಗೆ ಹೋಗುವ ದಾರಿಯ ಬಗ್ಗೆ ವಿಚಾರಿಸಿದೆ. ಒಂದು ಚಿಕ್ಕ ಅಂಗಡಿಯ ಮಾಲಿಕನು ಬೆಟ್ಟಗಳ ಸಾಲಿನ ಆಚೆಗೆ ಕೈ ತೋರಿಸುತ್ತ, ತನ್ನ ಕುದುರೆಯನ್ನೂ ದಾರಿತೋರಿಸಲು ಒಬ್ಬ ಹುಡುಗನನ್ನೂ ಕಳುಹಿಸುವೆ, ಆದರೆ ಕುದುರೆಗೆ ಗ್ಯಾರಂಟಿಯಾಗಿ ನನ್ನ ಪಿಟೀಲನ್ನು ಒತ್ತೆಯಿಡಬೇಕೆಂದು ಹೇಳಿದನು.

ಆ ಬೆಟ್ಟದ ಸಾಲಿನ ಆಚೆಕಡೆ ನಾವು ಒಂದು ನದಿಯನ್ನು ದಾಟಲಿಕ್ಕಿತ್ತು. ಕುದುರೆ ಈಜುತ್ತಾ ಹೋದಾಗ ನಾವಿಬ್ಬರೂ ಅದರ ಮೇಲೆ ಕುಳಿತೆವು. ಅಲ್ಲಿ ಗಿಳಿಗಳ ಗುಂಪೊಂದು ನಮ್ಮ ಕಣ್ಣಿಗೆ ಬಿತ್ತು. ಅವುಗಳ ಹಸುರು ನೀಲಿ ಬಣ್ಣಗಳ ವರ್ಣರಂಜಿತ ಗರಿಗಳು ಬಿಸಿಲಲ್ಲಿ ಕಂಗೊಳಿಸುತ್ತಿದ್ದವು. ಅವೆಷ್ಟು ಸುಂದರವಾಗಿದ್ದವೆಂದರೆ, “ಅವನ್ನು ಅಷ್ಟು ಚೆಂದದ ಪಕ್ಷಿಗಳಾಗಿ ಮಾಡಿದ್ದಕ್ಕಾಗಿ ನಿನಗೆ ಉಪಕಾರ ಯೆಹೋವನೇ” ಎಂದು ನಾನು ಪ್ರಾರ್ಥಿಸಿದೆ. ಕೊನೆಗೆ ಸಂಜೆ ನಾಲ್ಕು ಗಂಟೆಗೆ ನಾವು ಆ ಫಾರ್ಮ್‌ ಅನ್ನು ಮುಟ್ಟಿದೆವು. ಅಲ್ಲಿದ್ದ ಸೈನಿಕನು ಸಹೋದರರೊಂದಿಗೆ ನಾನು ಮಾತಾಡುವಂತೆ ಮತ್ತು ನಾನು ತಂದ ವಸ್ತುಗಳನ್ನು, ಒಂದು ಪುಟ್ಟ ಬೈಬಲನ್ನು ಸಹ ಕೊಡುವಂತೆ ದಯೆಯಿಂದ ಅನುಮತಿಸಿದನು.

ಅಲ್ಲಿಂದ ಹಿಂದಿರುಗಿ ಬರುವಾಗ ನಾನು ದಾರಿಯಿಡೀ ಪ್ರಾರ್ಥಿಸಿದೆ, ಏಕೆಂದರೆ ಈಗ ಕತ್ತಲಾಗಿತ್ತು ಮತ್ತು ಆ ಅಂಗಡಿಯನ್ನು ತಲಪಿದಾಗ ನಾವು ಮಳೆಯಿಂದ ನೆನೆದು ಒದ್ದೆಯಾಗಿ ಹೋಗಿದ್ದೆವು. ಆ ದಿನದ ಕೊನೆಯ ಬಸ್ಸು ಹೊರಟುಹೋಗಿತ್ತಾದ್ದರಿಂದ ನನಗಾಗಿ ಒಂದು ಲಾರಿಯನ್ನು ಕೂಗುಹಾಕಿ ನಿಲ್ಲಿಸುವಂತೆ ಅಂಗಡಿ ಮಾಲಿಕನಿಗೆ ಹೇಳಿದೆ. ಇಬ್ಬರು ಗಂಡಸರೊಂದಿಗೆ ಲಾರಿ ಪ್ರಯಾಣಮಾಡುವುದು ಸುರಕ್ಷಿತವಾಗಿರುವುದೊ? ಅವರಲ್ಲೊಬ್ಬನು ನನಗೆ ಕೇಳಿದ್ದು: “ನಿನಗೆ ಸೋಫಿಯಳ ಪರಿಚಯವಿದೆಯೆ? ಅವಳು ನನ್ನ ತಂಗಿಯೊಂದಿಗೆ ಅಧ್ಯಯನ ನಡಿಸಿದ್ದಳು.” ಇದು ನನ್ನ ಪ್ರಾರ್ಥನೆಗೆ ಯೆಹೋವನ ಉತ್ತರವಾಗಿದೆಯೆಂದು ನನಗನಿಸಿತು! ಅವರು ನನ್ನನ್ನು ಸಾಂಟೊ ಡೊಮಿಂಗೋಗೆ ಸುರಕ್ಷಿತವಾಗಿ ತಲಪಿಸಿದರು.

ಇಸವಿ 1953ರಲ್ಲಿ ನ್ಯೂ ಯಾರ್ಕಿನ ಯಾಂಕಿ ಸ್ಟೇಡಿಯಮ್‌ನಲ್ಲಿ ನಡೆದ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾಗಿದ್ದ ಡೊಮಿನಿಕನ್‌ ರಿಪಬ್ಲಿಕ್‌ ಪ್ರತಿನಿಧಿಗಳಲ್ಲಿ ನಾನೂ ಒಬ್ಬಳಾಗಿದ್ದೆ. ತಂದೆಯವರೂ ಸೇರಿ ನನ್ನ ಇಡೀ ಕುಟುಂಬವು ಅಲ್ಲಿ ಹಾಜರಿತ್ತು. ಡೊಮಿನಿಕನ್‌ ರಿಪಬ್ಲಿಕ್‌ನಲ್ಲಿ ಸಾರುವ ಕಾರ್ಯದ ಕುರಿತಾದ ವರದಿಯ ನಂತರ, ನನಗೂ ನನ್ನ ಮಿಷನೆರಿ ಸಂಗಾತಿಯಾದ ಮೇರಿ ಎನ್ಯೊಲ್‌ಳಿಗೂ ಆ ಕಾರ್ಯಕ್ರಮದಲ್ಲಿ ಒಂದು ಚಿಕ್ಕ ಪಾತ್ರವಿತ್ತು. ನಿಷೇಧದ ಕೆಳಗೆ ನಾವು ಹೇಗೆ ಸಾರಿದೆವು ಎಂಬದನ್ನು ನಾವು ಅಭಿನಯಿಸಿ ತೋರಿಸಿದೆವು.

ಸಂಚರಣ ಕೆಲಸದ ವಿಶೇಷ ಆನಂದಗಳು

ಆ ಬೇಸಗೆಯಲ್ಲಿ ನನಗೆ ರೂಡಲ್ಫ್‌ ಸುನಲ್‌ ಅವರ ಪರಿಚಯವಾಯಿತು ಮತ್ತು ಮುಂದಿನ ವರ್ಷದಲ್ಲಿ ಅವರು ನನ್ನ ಪತಿಯಾದರು. ಅವರ ಕುಟುಂಬದವರು ಪೆನ್ಸಿಲ್‌ವೇನಿಯದ ಅಲಿಗನಿಯಲ್ಲಿ, Iನೆಯ ವಿಶ್ವ ಯುದ್ಧದ ಸ್ವಲ್ಪ ಸಮಯಾನಂತರ ಸಾಕ್ಷಿಗಳಾದರು. ಕ್ರೈಸ್ತ ತಾಟಸ್ಥ್ಯಕ್ಕಾಗಿ, IIನೆಯ ವಿಶ್ವ ಯುದ್ಧದ ಸಮಯದಲ್ಲಿ ಸೆರೆಮನೆವಾಸವನ್ನು ಅನುಭವಿಸಿದ ಬಳಿಕ, ನ್ಯೂ ಯಾರ್ಕ್‌ನ ಬ್ರೂಕ್‌ಲಿನ್‌ನಲ್ಲಿ ಅವರು ಬೆತೆಲ್‌ ಸೇವೆಗಿಳಿದರು. ನಮ್ಮ ವಿವಾಹದ ಸ್ವಲ್ಪ ಸಮಯದೊಳಗೆ ಅವರು ಸಂಚರಣ ಮೇಲ್ವಿಚಾರಕರೋಪಾದಿ ಸಭೆಗಳನ್ನು ಸಂದರ್ಶಿಸುವ ಕೆಲಸಕ್ಕಾಗಿ ಆಮಂತ್ರಿಸಲ್ಪಟ್ಟರು. ಮುಂದಿನ 18 ವರುಷ ನಾನು ಅವರೊಂದಿಗೆ ಸರ್ಕಿಟ್‌ ಸೇವೆಯಲ್ಲಿ ಜೊತೆಗೂಡಿದೆ.

ನಮ್ಮ ಸರ್ಕಿಟ್‌ ಕೆಲಸವು ನಮ್ಮನ್ನು ಪೆನ್ಸಿಲ್‌ವೇನಿಯ, ವೆಸ್ಟ್‌ ವರ್ಜಿನಿಯ, ನ್ಯೂ ಹೆಮ್ಸ್‌ಶಯರ್‌, ಮ್ಯಾಸಚೂಸೆಸ್ಟ್‌ ಮುಂತಾದ ರಾಜ್ಯಗಳಿಗೆ ಕರೆದೊಯ್ದಿತು. ನಾವು ಸಾಮಾನ್ಯವಾಗಿ ನಮ್ಮ ಕ್ರೈಸ್ತ ಸಹೋದರರ ಮನೆಗಳಲ್ಲೇ ಉಳಿದುಕೊಂಡೆವು. ಅವರ ಒಳ್ಳೆಯ ಪರಿಚಯಮಾಡಿಕೊಳ್ಳುವುದು ಮತ್ತು ಅವರೊಂದಿಗೆ ಸೇವೆಮಾಡುವುದು ವಿಶೇಷ ಆನಂದದ ಸಂದರ್ಭವಾಗಿತ್ತು. ನಮಗೆ ತೋರಿಸಲ್ಪಟ್ಟ ಪ್ರೀತಿ ಮತ್ತು ಆತಿಥ್ಯವು ಯಾವಾಗಲೂ ಹೃತ್ಪೂರ್ವಕವೂ ನೈಜವೂ ಆಗಿತ್ತು. ನನ್ನ ಸಹೋದರ ಜೋಯೆಲ್‌, ನನ್ನ ಹಿಂದಣ ಮಿಷನೆರಿ ಸಂಗಾತಿ ಮೇರಿ ಎನ್ಯೊಲ್‌ಳನ್ನು ಮದುವೆಯಾದ ಬಳಿಕ, ಅವರು ಮೂರು ವರ್ಷಗಳ ವರೆಗೆ ಸಂಚರಣ ಕೆಲಸದಲ್ಲಿದ್ದು, ಪೆನ್ಸಿಲ್‌ವೇನಿಯ ಮತ್ತು ಮಿಶಿಗನ್‌ ಸಭೆಗಳನ್ನು ಸಂದರ್ಶಿಸಿದರು. ತದನಂತರ 1958ರಲ್ಲಿ ಜೋಯೆಲ್‌ನನ್ನು ಪುನಃ ಬೆತೆಲ್‌ ಕುಟುಂಬದ ಸದಸ್ಯನಾಗುವಂತೆ ಆಮಂತ್ರಿಸಲಾಯಿತು. ಈ ಸಾರಿ ಮೇರಿ ಅವನೊಂದಿಗೆ ಜತೆಗೂಡಿದಳು.

ಕಾರ್ಲ್‌ ಸುಮಾರು ಏಳು ವರ್ಷ ಬೆತೆಲಿನ ಸೇವೆ ಮಾಡಿದ ಬಳಿಕ ಹೆಚ್ಚಿನ ಅನುಭವವನ್ನು ಪಡೆದುಕೊಳ್ಳಲಿಕ್ಕಾಗಿ ಕೆಲವು ತಿಂಗಳುಗಳ ವರೆಗೆ ಸರ್ಕಿಟ್‌ ಕೆಲಸಕ್ಕೆ ನೇಮಿಸಲ್ಪಟ್ಟನು. ಅನಂತರ ಅವನು ಗಿಲ್ಯಡ್‌ ಶಾಲೆಯ ಶಿಕ್ಷಕನಾಗಿ ನೇಮಿಸಲ್ಪಟ್ಟನು. 1963ರಲ್ಲಿ ಅವನು ಬಾಬ್‌ಳನ್ನು ಮದುವೆಯಾದನು. ಅವಳು ನಂಬಿಗಸ್ತಿಕೆಯಿಂದ ಬೆತೆಲಿನಲ್ಲಿ ಸೇವೆಮಾಡುತ್ತಾ, 2002ರ ಅಕ್ಟೋಬರ್‌ ತಿಂಗಳಿನಲ್ಲಿ ತೀರಿಕೊಂಡಳು.

ಡಾನ್‌ ಬೆತೆಲ್‌ನಲ್ಲಿ ಕಳೆದ ಅನೇಕ ವರ್ಷಗಳಲ್ಲಿ, ಆಗಿಂದಾಗ್ಯೆ ಪರದೇಶಗಳಿಗೆ ಸಂಚರಿಸಿ ಬ್ರಾಂಚ್‌ ಆಫೀಸಿನ ಸಿಬ್ಬಂದಿಗಳಿಗೆ ಮತ್ತು ಮಿಷನೆರಿ ಕ್ಷೇತ್ರಗಳಲ್ಲಿರುವವರಿಗೆ ನೆರವು ನೀಡಿದ್ದಾನೆ. ಅವನ ನೇಮಕಗಳು ಅವನನ್ನು ಪೌರಸ್ತ್ಯ ದೇಶಗಳು, ಆಫ್ರಿಕ, ಯೂರೋಪ್‌ ಮತ್ತು ಅಮೆರಿಕದ ವಿವಿಧ ಭಾಗಗಳಿಗೆ ಒಯ್ದಿವೆ. ಡಾನ್‌ನ ನಿಷ್ಠಾವಂತ ಪತ್ನಿ ಡೆಲರೆಸ್‌ ಅನೇಕಾವರ್ತಿ ಅವನ ಜೊತೆಯಲ್ಲಿ ಪ್ರಯಾಣಮಾಡುತ್ತಾಳೆ.

ನಮ್ಮ ಪರಿಸ್ಥಿತಿಗಳು ಬದಲಾದವು

ದೀರ್ಘಕಾಲದ ಅಸ್ವಸ್ಥತೆಯ ಬಳಿಕ ನನ್ನ ತಂದೆ ತೀರಿಕೊಂಡರು. ಆದರೆ ಸಾಯುವ ಮುಂಚೆ ಅವರು ನನಗೆ, ನಾವು ಯೆಹೋವ ದೇವರ ಸೇವೆಯನ್ನು ಆರಿಸಿಕೊಂಡದ್ದಕ್ಕಾಗಿ ಅವರಿಗೆ ತುಂಬ ಸಂತೋಷವಿದೆಯೆಂದು ಹೇಳಿದರು. ಅವರು ನಮಗಾಗಿ ಯೋಜಿಸಿದ್ದ ಕಾಲೇಜ್‌ ಶಿಕ್ಷಣವನ್ನು ಬೆನ್ನಟ್ಟಿ ಹೋಗಿದ್ದಲ್ಲಿ ದೊರಕಬಹುದಾಗಿದ್ದ ಆಶೀರ್ವಾದಗಳಿಗಿಂತ ಎಷ್ಟೋ ಹೆಚ್ಚು ಆಶೀರ್ವಾದಗಳನ್ನು ನಾವು ಪಡೆದಿದ್ದೇವೆ ಎಂದರವರು. ನನ್ನ ತಾಯಿಯವರು ನನ್ನ ತಂಗಿ ಜಾಯ್‌ಳ ಮನೆಯ ಹತ್ತಿರ ಇರಲಿಕ್ಕಾಗಿ ಸ್ಥಳಾಂತರಿಸುವ ವಿಲೆವಾರಿಯನ್ನು ಮಾಡಿದ ಬಳಿಕ, ನನ್ನ ಗಂಡ ಮತ್ತು ನಾನು ನ್ಯೂ ಇಂಗ್ಲೆಂಡ್‌ನಲ್ಲೇ ಅನೇಕ ಪಯನೀಯರ್‌ ನೇಮಕಗಳನ್ನು ಸ್ವೀಕರಿಸಿದೆವು. ಹೀಗೆ ಆಗ ನಮ್ಮ ಸಹಾಯದ ಅಗತ್ಯವಿದ್ದ ಅವರ ತಾಯಿಯ ಹತ್ತಿರ ನಾವು ಇರಲು ಸಾಧ್ಯವಾಯಿತು. ಅವರ ತಾಯಿಯು ತೀರಿಕೊಂಡ ಬಳಿಕ, ನನ್ನ ಅಮ್ಮ ನಮ್ಮೊಂದಿಗೆ 13 ವರ್ಷಗಳನ್ನು ಕಳೆದರು. ಅನಂತರ ಜನವರಿ 18, 1987ರಲ್ಲಿ ಅವರು 93ನೆಯ ವಯಸ್ಸಿನಲ್ಲಿ ತಮ್ಮ ಭೂನೇಮಕವನ್ನು ಮುಗಿಸಿದರು.

ತನ್ನ ಎಲ್ಲಾ ಮಕ್ಕಳನ್ನು ಯೆಹೋವನ ಪ್ರೀತಿ ಮತ್ತು ಸೇವೆಯಲ್ಲಿ ಬೆಳೆಸಿಕೊಂಡು ಬಂದದ್ದಕ್ಕಾಗಿ ಆಗಿಂದಾಗ್ಯೆ ಅವರ ಮಿತ್ರರು ಅವರನ್ನು ಪ್ರಶಂಸಿಸುತ್ತಿದ್ದಾಗ, ನಮ್ಮ ಅಮ್ಮ ವಿನಯಶೀಲತೆಯಿಂದ, “ನನಗೆ ಬೀಜಬಿತ್ತಲು ಸಿಕ್ಕಿದಂಥ ‘ನೆಲ’ ಒಳ್ಳೆಯದಾಗಿತ್ತು, ಅಷ್ಟೆ” ಎಂದು ಹೇಳುತ್ತಿದ್ದರು. (ಮತ್ತಾಯ 13:23) ಹುರುಪು ಮತ್ತು ದೀನತೆಯಲ್ಲಿ ಅತ್ಯುತ್ತಮ ಮಾದರಿಗಳಾಗಿದ್ದ ದೇವಭಯವುಳ್ಳ ಹೆತ್ತವರನ್ನು ಹೊಂದಿರುವುದು ಅದೆಂಥ ದೊಡ್ಡ ಆಶೀರ್ವಾದವಾಗಿತ್ತು!

ಈಗಲೂ ರಾಜ್ಯವೇ ಪ್ರಥಮ

ನಾವು ದೇವರ ರಾಜ್ಯವನ್ನು ನಮ್ಮ ಜೀವನದಲ್ಲಿ ಪ್ರಥಮವಾಗಿಡುವುದನ್ನು ಮುಂದುವರಿಸಿದ್ದೇವೆ ಮತ್ತು ಇತರರೊಂದಿಗೆ ಹಂಚಿಕೊಳ್ಳುವುದರ ಕುರಿತಾದ ಯೇಸುವಿನ ಬುದ್ಧಿವಾದವನ್ನು ಅನ್ವಯಿಸಿಕೊಳ್ಳಲು ಸಹ ಪ್ರಯತ್ನಿಸಿದ್ದೇವೆ. (ಲೂಕ 6:38; 14:12-14) ಯೆಹೋವನು ಪ್ರತಿಯಾಗಿ ನಮ್ಮ ಆವಶ್ಯಕತೆಗಳನ್ನು ಉದಾರವಾಗಿ ಪೂರೈಸಿದ್ದಾನೆ. ನಮ್ಮ ಜೀವನವು ಸುರಕ್ಷಿತವೂ ಸಂತೋಷಕರವೂ ಆದ ಜೀವನವಾಗಿರುತ್ತದೆ.

ರೂಡಿ ಮತ್ತು ನಾನು, ನಮ್ಮ ಸಂಗೀತ ಪ್ರೇಮವನ್ನು ಕಳೆದುಕೊಂಡಿಲ್ಲ. ಇದೇ ರೀತಿಯ ಸಂಗೀತ ಪ್ರೇಮವಿರುವ ಇತರರು ಒಂದು ಸಂಜೆ ಸಹವಾಸಕ್ಕಾಗಿ ನಮ್ಮ ಮನೆಗೆ ಬರುವಾಗ, ನಾವು ನಿಜವಾಗಿ ಹರ್ಷಿಸುತ್ತೇವೆ. ಮತ್ತು ನಾವು ಒಟ್ಟುಗೂಡಿ ಸಂಗೀತದ ಉಪಕರಣಗಳನ್ನು ನುಡಿಸುತ್ತೇವೆ. ಆದರೆ ಸಂಗೀತವು ನನ್ನ ಜೀವನ ವೃತ್ತಿಯಾಗಿಲ್ಲ. ಅದು ಜೀವನಕ್ಕೆ ಕೂಡಿಸಲ್ಪಟ್ಟ ಒಂದು ಆನಂದವಾಗಿದೆ. ಈಗ ನಾನೂ ನನ್ನ ಪತಿಯೂ ನಮ್ಮ ಪಯನೀಯರ್‌ ಸೇವೆಯ ಫಲಗಳನ್ನು, ಈ ಎಲ್ಲಾ ವರ್ಷಗಳಾದ್ಯಂತ ನಾವು ಸಹಾಯಮಾಡಿದ ಜನರನ್ನು ಕಾಣುವುದರಲ್ಲಿ ಆನಂದವನ್ನು ಪಡೆಯುತ್ತೇವೆ.

ಸದ್ಯ ಆರೋಗ್ಯ ಸಮಸ್ಯೆಗಳಿದ್ದರೂ, ಪೂರ್ಣ ಸಮಯದ ಶುಶ್ರೂಷೆಯಲ್ಲಿ ನಾವು ಕಳೆದ ಈ 60ಕ್ಕಿಂತಲೂ ಹೆಚ್ಚು ವರ್ಷಗಳು ಅತಿ ಸಂತೋಷದಾಯಕವೂ ಸುರಕ್ಷಿತವೂ ಆದದ್ದಾಗಿವೆ ಎಂದು ನಾನು ನಿಮಗೆ ಹೇಳಬಲ್ಲೆ. ಪ್ರತಿದಿನ ಬೆಳಗ್ಗೆ ನಾನು ಏಳುವಾಗ, ಎಷ್ಟೋ ವರ್ಷಗಳ ಹಿಂದೆ ನಾನು ಪೂರ್ಣ ಸಮಯದ ಸೇವೆಗಿಳಿದಾಗ ಯೆಹೋವನಿಗೆ ಮಾಡಿದ ಪ್ರಾರ್ಥನೆಯನ್ನು ಆತನು ಕೇಳಿದ್ದಕ್ಕಾಗಿ ಉಪಕಾರ ಹೇಳುತ್ತೇನೆ, ಮತ್ತು ‘ಇವತ್ತು ದೇವರ ರಾಜ್ಯವನ್ನು ಪ್ರಥಮವಾಗಿ ಹುಡುಕುವುದು ಹೇಗೆ?’ ಎಂದು ಯೋಚಿಸುತ್ತೇನೆ.

[ಪಾದಟಿಪ್ಪಣಿ]

^ ಪ್ಯಾರ. 14 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ, ಆದರೆ ಈಗ ಮುದ್ರಿಸಲ್ಪಡುವುದಿಲ್ಲ.

[ಪುಟ 24ರಲ್ಲಿರುವ ಚಿತ್ರ]

ನಮ್ಮ ಕುಟುಂಬ 1948ರಲ್ಲಿ (ಎಡದಿಂದ ಬಲಕ್ಕೆ): ಜೊಯ್‌, ಡಾನ್‌, ಅಮ್ಮ, ಜೋಯೆಲ್‌, ಕಾರ್ಲ್‌, ನಾನು ಮತ್ತು ತಂದೆಯವರು

[ಪುಟ 25ರಲ್ಲಿರುವ ಚಿತ್ರ]

ತಾಯಿಯವರು ಶುಶ್ರೂಷೆಯಲ್ಲಿ ಹುರುಪಿನ ಮಾದರಿಯನ್ನಿಟ್ಟರು

[ಪುಟ 26ರಲ್ಲಿರುವ ಚಿತ್ರ]

ಕಾರ್ಲ್‌, ಡಾನ್‌, ಜೋಯೆಲ್‌, ಜಾಯ್‌ ಮತ್ತು ನಾನು​— ಇಂದು ಸುಮಾರು 50 ವರ್ಷಗಳ ಬಳಿಕ

[ಪುಟ 27ರಲ್ಲಿರುವ ಚಿತ್ರ]

ಎಡದಿಂದ ಬಲಕ್ಕೆ: ನಾನು, ಮೇರಿ ಎನ್ಯೊಲ್‌, ಸೋಫಿಯ ಸೊವಿಕ್‌ ಮತ್ತು ಈಡಿತ್‌ ಮಾರ್ಗನ್‌, ಡೊಮಿನಿಕನ್‌ ರಿಪಬ್ಲಿಕ್‌ನಲ್ಲಿ ಮಿಷನೆರಿಗಳಾಗಿ

[ಪುಟ 28ರಲ್ಲಿರುವ ಚಿತ್ರ]

1953ರಲ್ಲಿ ಯಾಂಕಿ ಸ್ಟೇಡಿಯಮ್‌ನಲ್ಲಿ ಮೇರಿ (ಎಡದಲ್ಲಿ)ಯೊಂದಿಗೆ

[ಪುಟ 29ರಲ್ಲಿರುವ ಚಿತ್ರ]

ನನ್ನ ಗಂಡ ಸರ್ಕಿಟ್‌ ಕೆಲಸದಲ್ಲಿದ್ದಾಗ ಅವರೊಂದಿಗೆ