ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸ್ಥಿರಚಿತ್ತನಾಗಿರು, ಧೈರ್ಯದಿಂದಿರು!”

“ಸ್ಥಿರಚಿತ್ತನಾಗಿರು, ಧೈರ್ಯದಿಂದಿರು!”

“ಸ್ಥಿರಚಿತ್ತನಾಗಿರು, ಧೈರ್ಯದಿಂದಿರು!”

“ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ.”​—ಯೋಹಾನ 16:33.

1. ಕಾನಾನ್‌ ದೇಶದಲ್ಲಿ ಇಸ್ರಾಯೇಲ್ಯರಿಗೆ ಏನು ಕಾದಿತ್ತೋ ಅದರಿಂದಾಗಿ, ಅವರಿಗೆ ಯಾವ ಪ್ರೋತ್ಸಾಹ ದೊರೆಯಿತು?

ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವುದಕ್ಕಾಗಿ ಯೋರ್ದನ್‌ ಹೊಳೆಯನ್ನು ಇನ್ನೇನು ದಾಟಲಿದ್ದಾಗ, ಮೋಶೆಯು ಅವರಿಗೆ ಹೀಗಂದನು: “ನೀವು ಶೂರರಾಗಿ ಧೈರ್ಯದಿಂದಿರ್ರಿ; ಅವರಿಗೆ ಅಂಜಬೇಡಿರಿ, ಕಳವಳಪಡಬೇಡಿರಿ. ನಿಮ್ಮ ದೇವರಾದ ಯೆಹೋವನೇ ನಿಮ್ಮ ಸಂಗಡ ಇರುತ್ತಾನಲ್ಲಾ.” ಅನಂತರ, ಮೋಶೆಯು ಇಸ್ರಾಯೇಲ್ಯರನ್ನು ಕಾನಾನ್‌ ದೇಶದೊಳಗೆ ನಡೆಸಲಿದ್ದ ಯೆಹೋಶುವನನ್ನು ಕರೆದು, ಧೈರ್ಯದಿಂದ ಮುಂದೊತ್ತುವ ಬುದ್ಧಿವಾದವನ್ನು ವೈಯಕ್ತಿಕವಾಗಿ ಪುನರುಚ್ಚರಿಸಿದನು. (ಧರ್ಮೋಪದೇಶಕಾಂಡ 31:6, 7) ಬಳಿಕ ಯೆಹೋವನು ತಾನೇ, ಯೆಹೋಶುವನನ್ನು ಪ್ರೋತ್ಸಾಹಿಸುತ್ತಾ ಅಂದದ್ದು: “ಸ್ಥಿರಚಿತ್ತನಾಗಿರು, ಪೂರ್ಣಧೈರ್ಯದಿಂದಿರು . . . ಸ್ಥಿರಚಿತ್ತನಾಗಿರು, ಧೈರ್ಯದಿಂದಿರು.” (ಯೆಹೋಶುವ 1:6, 7, 9) ಅಂಥ ಬುದ್ಧಿವಾದದ ಮಾತುಗಳು ಸಮಯೋಚಿತವಾಗಿದ್ದವು. ಏಕೆಂದರೆ ಯೋರ್ದನಿನ ಆಚೆಕಡೆ ಜೀವಿಸುತ್ತಿದ್ದ ಬಲಾಢ್ಯ ಶತ್ರುಗಳನ್ನು ಎದುರಿಸಲು ಇಸ್ರಾಯೇಲ್ಯರಿಗೆ ಧೈರ್ಯವು ಅಗತ್ಯವಾಗಿತ್ತು.

2. ನಾವು ಇಂದು ಯಾವ ಪರಿಸ್ಥಿತಿಯಲ್ಲಿದ್ದೇವೆ, ಮತ್ತು ನಮಗೆ ಏನು ಅಗತ್ಯ?

2 ಇಂದು ಸತ್ಯ ಕ್ರೈಸ್ತರು ಬೇಗನೆ ಒಂದು ವಾಗ್ದತ್ತ ಹೊಸ ಲೋಕವನ್ನು ಪ್ರವೇಶಿಸಲಿಕ್ಕಿದ್ದಾರೆ. ಮತ್ತು ಯೆಹೋಶುವನಂತೆ ಅವರು ಸಹ ಧೈರ್ಯದಿಂದಿರುವ ಅಗತ್ಯವಿದೆ. (2 ಪೇತ್ರ 3:13; ಪ್ರಕಟನೆ 7:14) ಆದರೆ ನಮ್ಮ ಸನ್ನಿವೇಶವಾದರೊ ಯೆಹೋಶುವನ ಸನ್ನಿವೇಶಕ್ಕಿಂತ ಭಿನ್ನವಾಗಿದೆ. ಯೆಹೋಶುವನು ಖಡ್ಗ ಬರ್ಜಿಗಳನ್ನುಪಯೋಗಿಸಿ ಹೋರಾಡಿದನು. ನಮ್ಮ ಹೋರಾಟವಾದರೊ ಒಂದು ಆತ್ಮಿಕ ಹೋರಾಟವಾಗಿದೆ ಮತ್ತು ಅಕ್ಷರಾರ್ಥ ಶಸ್ತ್ರಗಳನ್ನು ನಾವೆಂದೂ ಉಪಯೋಗಿಸುವುದಿಲ್ಲ. (ಯೆಶಾಯ 2:​2-4; ಎಫೆಸ 6:​11-17) ಅಷ್ಟಲ್ಲದೆ ಯೆಹೋಶುವನು ವಾಗ್ದತ್ತ ದೇಶವನ್ನು ಪ್ರವೇಶಿಸಿದ ನಂತರವೂ ಅನೇಕ ಭಯಂಕರ ಯುದ್ಧಗಳಲ್ಲಿ ಹೋರಾಡಬೇಕಾಯಿತು. ಆದರೆ ನಮ್ಮ ಅತಿ ತೀಕ್ಷ್ಣವಾದ ಹೋರಾಟಗಳನ್ನು ನಾವು ಈಗಲೇ, ಅಂದರೆ ಹೊಸ ಲೋಕವನ್ನು ಪ್ರವೇಶಿಸುವುದಕ್ಕೆ ಮುಂಚೆಯೇ ಎದುರಿಸುತ್ತಿದ್ದೇವೆ. ನಮಗೆ ಧೈರ್ಯವು ಅಗತ್ಯವಾಗಿರುವ ಕೆಲವು ಸನ್ನಿವೇಶಗಳ ಕುರಿತು ನಾವೀಗ ಚರ್ಚಿಸೋಣ.

ನಾವೇಕೆ ಹೋರಾಡಬೇಕು?

3. ನಮ್ಮ ಮುಖ್ಯ ವಿರೋಧಿಯ ಕುರಿತು ಬೈಬಲು ಏನನ್ನು ತಿಳಿಯಪಡಿಸುತ್ತದೆ?

3 ಅಪೊಸ್ತಲ ಯೋಹಾನನು ಬರೆದದ್ದು: “ನಾವು ದೇವರಿಂದ ಹುಟ್ಟಿದವರೆಂದೂ ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ ಎಂದೂ ನಮಗೆ ಗೊತ್ತದೆ.” (1 ಯೋಹಾನ 5:19) ಈ ಮಾತುಗಳು, ಕ್ರೈಸ್ತರು ನಂಬಿಕೆಯನ್ನು ಕಾಪಾಡಿಕೊಳ್ಳಲು ಏಕೆ ಹೋರಾಡಬೇಕು ಎಂಬುದಕ್ಕೆ ಒಂದು ಮೂಲ ಕಾರಣವನ್ನು ಸೂಚಿಸುತ್ತವೆ. ಒಬ್ಬ ಕ್ರೈಸ್ತನು ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುವಾಗ, ಅದು ಸ್ವಲ್ಪಮಟ್ಟಿಗೆ ಪಿಶಾಚನಾದ ಸೈತಾನನಿಗೆ ಅಪಜಯವಾಗಿರುತ್ತದೆ. ಆದುದರಿಂದ ಸೈತಾನನು “ಗರ್ಜಿಸುವ ಸಿಂಹ”ದೋಪಾದಿಯಲ್ಲಿ ನಂಬಿಗಸ್ತ ಕ್ರೈಸ್ತರನ್ನು ಭಯಭರಿತರನ್ನಾಗಿ ಮಾಡಿ ನುಂಗಿಬಿಡಲು ಪ್ರಯತ್ನಿಸುತ್ತಾನೆ. (1 ಪೇತ್ರ 5:8) ಹೌದು, ಅವನು ಅಭಿಷಿಕ್ತ ಕ್ರೈಸ್ತರು ಮತ್ತು ಅವರ ಸಂಗಡಿಗರ ಮೇಲೂ ಯುದ್ಧಮಾಡುತ್ತಾನೆ. (ಪ್ರಕಟನೆ 12:17) ಈ ಯುದ್ಧದಲ್ಲಿ ಅವನು, ಮನುಷ್ಯರನ್ನು ಸಾಧನವಾಗಿ ಉಪಯೋಗಿಸುತ್ತಾನೆ. ಇವರು ತಿಳಿದೊ ತಿಳಿಯದೆಯೋ ಅವನ ಹೇತುಗಳನ್ನು ಪೂರೈಸುತ್ತಾರೆ. ಸೈತಾನನನ್ನು ಮತ್ತು ಅವನ ಎಲ್ಲಾ ಕಾರ್ಯಕರ್ತರನ್ನು ಎದುರಿಸಿ ದೃಢವಾಗಿ ನಿಲ್ಲಲು ಧೈರ್ಯವು ಅತ್ಯಗತ್ಯ.

4. ಯೇಸು ಯಾವ ಎಚ್ಚರಿಕೆಯನ್ನು ಕೊಟ್ಟನು, ಆದರೆ ಸತ್ಯ ಕ್ರೈಸ್ತರು ಯಾವ ಗುಣವನ್ನು ಪ್ರದರ್ಶಿಸಿದ್ದಾರೆ?

4 ಸೈತಾನನೂ ಅವನ ಕಾರ್ಯಕರ್ತರೂ ಸತತೋತ್ಸಾಹದಿಂದ ಸುವಾರ್ತೆಯನ್ನು ವಿರೋಧಿಸುವರೆಂದು ಯೇಸುವಿಗೆ ಗೊತ್ತಿತ್ತು. ಆದುದರಿಂದ ಅವನು ತನ್ನ ಹಿಂಬಾಲಕರನ್ನು ಎಚ್ಚರಿಸಿದ್ದು: “ನಿಮ್ಮನ್ನು ಉಪದ್ರವಕ್ಕೆ ಒಪ್ಪಿಸಿ ಕೊಲ್ಲುವರು; ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ಹಗೆಮಾಡುವರು.” (ಮತ್ತಾಯ 24:9) ಆ ಮಾತುಗಳು ಒಂದನೆಯ ಶತಮಾನದಲ್ಲಿ ನಿಜವಾಗಿಯೂ ನೆರವೇರಿದವು ಮತ್ತು ಇಂದು ಸಹ ನಿಜವಾಗಿ ನೆರವೇರುತ್ತಿವೆ. ನಿಶ್ಚಯವಾಗಿ ಕೆಲವು ಆಧುನಿಕ ದಿನದ ಯೆಹೋವನ ಸಾಕ್ಷಿಗಳು ಅನುಭವಿಸಿರುವ ಹಿಂಸೆಯು, ಇತಿಹಾಸದಲ್ಲೆಲ್ಲಾ ನಡೆದ ಬೇರಾವುದೇ ಹಿಂಸೆಯಷ್ಟೇ ಕ್ರೂರವಾದದ್ದಾಗಿದೆ. ಆದರೂ ಸತ್ಯ ಕ್ರೈಸ್ತರು ಅಂಥ ಒತ್ತಡದ ಎದುರಿನಲ್ಲಿ ಧೈರ್ಯದಿಂದಿದ್ದಾರೆ. “ಮನುಷ್ಯನ ಭಯ ಉರುಲು” ಎಂದವರಿಗೆ ಗೊತ್ತು ಮತ್ತು ಅವರು ಒಂದು ಉರುಲಲ್ಲಿ ಸಿಕ್ಕಿಬೀಳಲು ಬಯಸುವುದಿಲ್ಲ.​—ಜ್ಞಾನೋಕ್ತಿ 29:25.

5, 6. (ಎ) ಯಾವ ಪರಿಸ್ಥಿತಿಗಳು ನಮ್ಮಿಂದ ಧೈರ್ಯವನ್ನು ಅವಶ್ಯಪಡಿಸುತ್ತವೆ? (ಬಿ) ನಂಬಿಗಸ್ತ ಕ್ರೈಸ್ತರ ಧೈರ್ಯವು ಪರೀಕ್ಷೆಗೊಳಗಾದಾಗ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ?

5 ಹಿಂಸೆಯಲ್ಲದೆ ಇನ್ನು ಬೇರೆ ಹೋರಾಟಗಳೂ ನಮಗಿವೆ. ಇದಕ್ಕೂ ನಮಗೆ ಧೈರ್ಯದ ಅಗತ್ಯವಿದೆ. ಕೆಲವು ಪ್ರಚಾರಕರಿಗೆ, ಅಪರಿಚಿತರೊಂದಿಗೆ ಸುವಾರ್ತೆಯ ಕುರಿತು ಮಾತಾಡುವುದು ಒಂದು ಹೋರಾಟವಾಗಿದೆ. ದೇಶಕ್ಕೆ ಅಥವಾ ದೇಶದ ಧ್ವಜಕ್ಕೆ ಸ್ವಾಮಿನಿಷ್ಠೆಯ ಪ್ರತಿಜ್ಞೆಯನ್ನು ಪಠಿಸುವಂತೆ ಕೇಳಲ್ಪಡುವಾಗ, ಕೆಲವು ಶಾಲಾ ಮಕ್ಕಳ ಧೈರ್ಯವು ಪರೀಕ್ಷೆಗೊಳಗಾಗುತ್ತದೆ. ಅಂಥ ಪ್ರತಿಜ್ಞೆಯು ಕಾರ್ಯತಃ ಒಂದು ಧಾರ್ಮಿಕ ಅಭಿವ್ಯಕ್ತಿಯಾಗಿರುವ ಕಾರಣ, ಕ್ರೈಸ್ತ ಮಕ್ಕಳು ದೇವರಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ವರ್ತಿಸಲು ಧೈರ್ಯದಿಂದ ದೃಢಸಂಕಲ್ಪವನ್ನು ಮಾಡಿದ್ದಾರೆ. ಮತ್ತು ಅವರ ಈ ಒಳ್ಳೆಯ ದಾಖಲೆಯು ಹೃದಯೋಲ್ಲಾಸವನ್ನು ತಂದಿರುತ್ತದೆ.

6 ದೇವರ ಸೇವಕರ ವಿರುದ್ಧವಾಗಿ ಅಪಪ್ರಚಾರವನ್ನು ಹರಡಿಸಲಿಕ್ಕಾಗಿ ವಿರೋಧಿಗಳು ವಾರ್ತಾಮಾಧ್ಯಮವನ್ನು ಪ್ರಭಾವಿಸುವಾಗ ಅಥವಾ “ಕಾನೂನಿನ ಮೂಲಕ ಕೇಡುಕಲ್ಪಿಸಿ” ಸತ್ಯಾರಾಧನೆಯನ್ನು ನಿರ್ಬಂಧಿಸಲು ಪ್ರಯತ್ನಿಸುವಾಗ ಸಹ ನಮಗೆ ಧೈರ್ಯವು ಅಗತ್ಯವಾಗಿ ಬೇಕು. (ಕೀರ್ತನೆ 94:​20, NW) ಉದಾಹರಣೆಗಾಗಿ, ವಾರ್ತಾಪತ್ರಗಳು, ರೇಡಿಯೊ ಅಥವಾ ಟೆಲಿವಿಷನ್‌ ವರದಿಗಳು ಯೆಹೋವನ ಸಾಕ್ಷಿಗಳ ಕುರಿತು ತಿರಿಚಲ್ಪಟ್ಟ ಸುದ್ದಿಗಳನ್ನು ಕೊಡುವಾಗ ಇಲ್ಲವೆ ಶುದ್ಧ ಸುಳ್ಳುಗಳನ್ನು ಹಬ್ಬಿಸುವಾಗ ನಮಗೆ ಹೇಗನಿಸಬೇಕು? ನಾವು ಚಕಿತರಾಗಿ ಬೆಚ್ಚಿಬೀಳಬೇಕೊ? ಇಲ್ಲ. ಇಂಥ ಸಂಗತಿಗಳನ್ನು ನಾವು ನಿರೀಕ್ಷಿಸುತ್ತೇವೆ. (ಕೀರ್ತನೆ 109:2) ಮತ್ತು ಕೆಲವರು ಅಂಥ ಸುಳ್ಳುಗಳನ್ನು ಹಾಗೂ ತಿರಿಚಲ್ಪಟ್ಟ ಸುದ್ದಿಗಳನ್ನು ನಂಬುವಾಗಲೂ ನಮಗೆ ಆಶ್ಚರ್ಯವಾಗುವುದಿಲ್ಲ, ಯಾಕಂದರೆ “ಮೂಢನು ಯಾವ ಮಾತನ್ನಾದರೂ ನಂಬುವನು.” (ಜ್ಞಾನೋಕ್ತಿ 14:15) ಆದರೆ ನಿಷ್ಠಾವಂತ ಕ್ರೈಸ್ತರು ತಮ್ಮ ಸಹೋದರರ ಕುರಿತು ಹೇಳಲ್ಪಡುವ ಪ್ರತಿಯೊಂದು ಮಾತನ್ನೂ ನಂಬಲು ನಿರಾಕರಿಸುತ್ತಾರೆ, ಮತ್ತು ಯಾವುದೇ ಅಪಪ್ರಚಾರವು ಅವರನ್ನು ಕ್ರೈಸ್ತ ಕೂಟಗಳನ್ನು ತಪ್ಪಿಸುವಂತೆ, ಕ್ಷೇತ್ರ ಸೇವೆಯನ್ನು ಕಡಿಮೆಮಾಡುವಂತೆ ಅಥವಾ ನಂಬಿಕೆಯಲ್ಲಿ ನಿರ್ಬಲರಾಗುವಂತೆ ಮಾಡಲು ಅವರು ಬಿಡುವುದಿಲ್ಲ. ವ್ಯತಿರಿಕ್ತವಾಗಿ ಅವರು, “ನಿಂದೆಗೆ ಅವಕಾಶಕೊಡದೆ ಎಲ್ಲಾ ಸಂಗತಿಗಳಲ್ಲಿ [ತಮ್ಮನ್ನು] ದೇವರ ಸೇವಕರೆಂದು . . . ಸಮ್ಮತರಾಗಿ” ಮಾಡಿಕೊಳ್ಳುತ್ತಾರೆ. ಅವರು “ಮಾನ ಅವಮಾನ ಕೀರ್ತಿ ಅಪಕೀರ್ತಿ [ವಿರೋಧಿಗಳಿಂದ] ಮೋಸಗಾರರೆನಿಸಿಕೊಂಡರೂ [ವಾಸ್ತವದಲ್ಲಿ] ಸತ್ಯವಂತರು” ಆಗಿದ್ದಾರೆ.​—2 ಕೊರಿಂಥ 6:4, 8.

7. ಯಾವ ಪರೀಕ್ಷಾತ್ಮಕ ಪ್ರಶ್ನೆಗಳನ್ನು ನಾವು ಸ್ವತಃ ಕೇಳಿಕೊಳ್ಳಬೇಕು?

7 ತಿಮೊಥೆಯನಿಗೆ ಬರೆದ ಪತ್ರದಲ್ಲಿ ಪೌಲನಂದದ್ದು: ‘ದೇವರು ನಮಗೆ ಕೊಟ್ಟಿರುವ ಆತ್ಮವು ಬಲದ . . . ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ. ಆದದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ ಸಾಕ್ಷಿಯ ವಿಷಯದಲ್ಲಿ ನಾಚಿಕೆಪಡದಿರು.’ (2 ತಿಮೊಥೆಯ 1:7, 8; ಮಾರ್ಕ 8:38) ಈ ಮಾತುಗಳನ್ನು ಓದಿದ ಮೇಲೆ ನಾವು ನಮ್ಮನ್ನು ಹೀಗೆ ಕೇಳಿಕೊಳ್ಳಬಹುದು: ‘ನನ್ನ ಧಾರ್ಮಿಕ ನಂಬಿಕೆಗಳ ಕುರಿತು ನಾನು ನಾಚಿಕೆಪಡುತ್ತೇನೋ ಅಥವಾ ನಾನು ಧೈರ್ಯಶಾಲಿಯಾಗಿದ್ದೇನೋ? ನಾನು ಕೆಲಸ ಮಾಡುವ ಸ್ಥಳದಲ್ಲಿ (ಅಥವಾ ಶಾಲೆಯಲ್ಲಿ) ನನ್ನ ಸುತ್ತಮುತ್ತಲಿರುವವರಿಗೆ ನಾನು ಒಬ್ಬ ಯೆಹೋವನ ಸಾಕ್ಷಿಯಾಗಿದ್ದೇನೆಂದು ಹೇಳುತ್ತೇನೊ ಇಲ್ಲವೆ ಆ ನಿಜತ್ವವನ್ನು ಮುಚ್ಚಿಡಲು ಪ್ರಯತ್ನಿಸುತ್ತೇನೊ? ಇತರರಿಗಿಂತ ಭಿನ್ನನಾಗಿರಲು ನನಗೆ ನಾಚಿಕೆಯಾಗುತ್ತದೊ ಇಲ್ಲವೆ, ಯೆಹೋವನೊಂದಿಗೆ ನನಗಿರುವ ಸಂಬಂಧದಿಂದಾಗಿ, ಭಿನ್ನನಾಗಿರುವುದರಲ್ಲಿ ಹೆಮ್ಮೆಪಡುತ್ತೇನೊ?’ ಸುವಾರ್ತೆಯನ್ನು ಸಾರುವ ವಿಷಯದಲ್ಲಿ ಯಾರಿಗಾದರೂ ಹೆದರಿಕೆಯ ಭಾವನೆಗಳಿರುವುದಾದರೆ ಅಥವಾ ಜನಪ್ರಿಯವಲ್ಲದ ಒಂದು ನಿಲುವನ್ನು ತೆಗೆದುಕೊಳ್ಳುವುದರಲ್ಲಿ ನಕಾರಾತ್ಮಕ ಭಾವವಿರುವುದಾದರೆ, ಯೆಹೋವನು ಯೆಹೋಶುವನಿಗೆ ಕೊಟ್ಟ ಈ ಬುದ್ಧಿವಾದವನ್ನು ಅವನು ಜ್ಞಾಪಕಕ್ಕೆ ತರಲಿ: “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು.” ಈ ಮಾತನ್ನು ಎಂದಿಗೂ ಮರೆಯದಿರಿ, ಅದೇನೆಂದರೆ​—ನಮ್ಮ ಸಹೋದ್ಯೋಗಿಗಳ ಅಥವಾ ಸಹಪಾಠಿಗಳ ಅಭಿಪ್ರಾಯವಲ್ಲ, ಬದಲಾಗಿ ಯೆಹೋವನ ಮತ್ತು ಯೇಸು ಕ್ರಿಸ್ತನ ದೃಷ್ಟಿಕೋನವೇ ಮಹತ್ವಪೂರ್ಣವಾಗಿದೆ.​—ಗಲಾತ್ಯ 1:10.

ಧೈರ್ಯವನ್ನು ಹೇಗೆ ಬೆಳೆಸಿಕೊಳ್ಳುವುದು?

8, 9. (ಎ) ಒಂದು ಸಂದರ್ಭದಲ್ಲಿ, ಆರಂಭದ ಕ್ರೈಸ್ತರ ಧೈರ್ಯವು ಪರೀಕ್ಷೆಗೊಳಗಾದದ್ದು ಹೇಗೆ? (ಬಿ) ಬೆದರಿಕೆಗಳು ಹಾಕಲ್ಪಟ್ಟಾಗ ಪೇತ್ರಯೋಹಾನರು ಹೇಗೆ ಪ್ರತಿಕ್ರಿಯಿಸಿದರು, ಮತ್ತು ಅವರೂ ಅವರ ಸಹೋದರರೂ ಏನನ್ನು ಅನುಭವಿಸಿದರು?

8 ಈ ಕಷ್ಟಕರವಾದ ಸಮಯಗಳಲ್ಲಿ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವುದನ್ನು ಶಕ್ಯಗೊಳಿಸುವ ಧೈರ್ಯವನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು? ಆರಂಭದ ಕ್ರೈಸ್ತರು ಧೈರ್ಯವನ್ನು ಬೆಳೆಸಿಕೊಂಡದ್ದು ಹೇಗೆ? ಯೆರೂಸಲೇಮಿನ ಮುಖ್ಯ ಯಾಜಕರೂ ಹಿರೀಪುರುಷರೂ ಪೇತ್ರಯೋಹಾನರಿಗೆ ಯೇಸುವಿನ ಹೆಸರಿನಲ್ಲಿ ಸಾರುವುದನ್ನು ನಿಲ್ಲಿಸುವಂತೆ ಹೇಳಿದಾಗ, ಅಲ್ಲಿ ಏನು ಸಂಭವಿಸಿತೆಂಬುದನ್ನು ಪರಿಗಣಿಸಿರಿ. ಆ ಶಿಷ್ಯರು ಸಾರುವುದನ್ನು ನಿಲ್ಲಿಸಲು ನಿರಾಕರಿಸಿದಾಗ, ಅವರಿಗೆ ಬೆದರಿಕೆಯನ್ನು ಹಾಕಿ ಬಿಟ್ಟುಬಿಡಲಾಯಿತು. ತದನಂತರ, ಅವರು ತಮ್ಮ ಸಹೋದರರನ್ನು ಕೂಡಿಕೊಂಡು ಅವರೆಲ್ಲರೂ ಏಕಮನಸ್ಸಿನಿಂದ ದೇವರಿಗೆ ಪ್ರಾರ್ಥನೆಮಾಡುತ್ತಾ ಅಂದದ್ದು: “ಕರ್ತನೇ, [“ಯೆಹೋವನೇ,” NW] ಈಗ ನೀನು ಅವರ ಬೆದರಿಸುವಿಕೆಗಳನ್ನು ನೋಡಿ . . . ನಿನ್ನ ದಾಸರು ನಿನ್ನ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ ಅನುಗ್ರಹಿಸು.” (ಅ. ಕೃತ್ಯಗಳು 4:13-29) ಇದಕ್ಕೆ ಪ್ರತಿಕ್ರಿಯಿಸುತ್ತಾ ಯೆಹೋವನು ಅವರನ್ನು ಪವಿತ್ರಾತ್ಮದಿಂದ ಬಲಪಡಿಸಿದನು, ಮತ್ತು ಯೆಹೂದಿ ಮುಖಂಡರು ಅನಂತರ ದೃಢೀಕರಿಸಿದಂತೆ, ಅವರು ‘ಯೆರೂಸಲೇಮನ್ನು ತಮ್ಮ ಉಪದೇಶದಿಂದ ತುಂಬಿಸಿದರು.’​—ಅ. ಕೃತ್ಯಗಳು 5:28.

9 ಆ ಸಂದರ್ಭದಲ್ಲಿ ಸಂಭವಿಸಿದ್ದೇನೆಂಬುದನ್ನು ನಾವು ವಿಶ್ಲೇಷಿಸೋಣ. ಯೆಹೂದಿ ಮುಖಂಡರಿಂದ ಶಿಷ್ಯರು ಹೆದರಿಸಲ್ಪಟ್ಟಾಗ, ಆ ಒತ್ತಡದಿಂದಾಗಿ ಸಾರುವುದನ್ನು ನಿಲ್ಲಿಸಿಬಿಡುವುದು ಒಳ್ಳೆಯದೆಂದು ಅವರು ಪರಿಗಣಿಸಲಿಲ್ಲ. ಬದಲಾಗಿ ಸಾರುತ್ತಾ ಮುಂದುವರಿಯಲು ಬೇಕಾದ ಧೈರ್ಯಕ್ಕಾಗಿ ಅವರು ಪ್ರಾರ್ಥಿಸಿದರು. ತದನಂತರ, ತಮ್ಮ ಪ್ರಾರ್ಥನೆಗೆ ಹೊಂದಿಕೆಯಲ್ಲಿ ಅವರು ಕಾರ್ಯನಡಿಸಿದರು, ಮತ್ತು ಯೆಹೋವನು ತನ್ನಾತ್ಮದಿಂದ ಅವರನ್ನು ಬಲಪಡಿಸಿದನು. ಅವರ ಅನುಭವವು, ಪೌಲನು ವರುಷಗಳಾನಂತರ ಇನ್ನೊಂದು ಪ್ರತ್ಯೇಕ ಸಂದರ್ಭದಲ್ಲಿ ಬರೆದಂಥ ಸಂಗತಿಯು, ಕ್ರೈಸ್ತರು ಹಿಂಸಿಸಲ್ಪಟ್ಟಾಗ ಅವರಿಗೆ ಅನ್ವಯಿಸುತ್ತದೆಂದು ತೋರಿಸುತ್ತದೆ. ಪೌಲನು ಹೇಳಿದ್ದು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.”​—ಫಿಲಿಪ್ಪಿ 4:13.

10. ಸಹಜವಾಗಿಯೇ ಪುಕ್ಕಲು ಸ್ವಭಾವದವರಾಗಿರುವವರಿಗೆ ಯೆರೆಮೀಯನ ಅನುಭವವು ಹೇಗೆ ಸಹಾಯಮಾಡುತ್ತದೆ?

10 ಆದರೂ ವ್ಯಕ್ತಿಯೊಬ್ಬನು ಸಹಜವಾಗಿಯೆ ಪುಕ್ಕಲು ಸ್ವಭಾವದವನಾಗಿರುವಲ್ಲಿ ಆಗೇನು? ಹಾಗಿದ್ದರೂ ಅವನು ವಿರೋಧದ ಎದುರಿನಲ್ಲೂ ಧೈರ್ಯದಿಂದ ಯೆಹೋವನ ಸೇವೆ ಮಾಡಬಲ್ಲನೊ? ಖಂಡಿತವಾಗಿಯೂ ಮಾಡಬಲ್ಲನು! ಯೆರೆಮೀಯನನ್ನು ಯೆಹೋವನು ಪ್ರವಾದಿಯಾಗಿ ನೇಮಿಸಿದಾಗ ಅವನು ತೋರಿಸಿದ ಪ್ರತಿಕ್ರಿಯೆಯನ್ನು ಜ್ಞಾಪಿಸಿಕೊಳ್ಳಿರಿ. “ನಾನು ಬಾಲಕನು” ಎಂದು ಆ ಯುವಕನು ಹೇಳಿದನು. ತಾನು ಆ ನೇಮಕಕ್ಕೆ ತಕ್ಕವನಲ್ಲವೆಂದು ಅವನಿಗನಿಸುತ್ತಿತ್ತೆಂಬುದು ಆ ಪ್ರತಿಕ್ರಿಯೆಯಿಂದ ವ್ಯಕ್ತವಾಗುತ್ತದೆ. ಆದರೂ ಯೆಹೋವನು ಅವನನ್ನು ಪ್ರೋತ್ಸಾಹಿಸುತ್ತಾ ಅಂದದ್ದು: “ಬಾಲಕನೆನ್ನ ಬೇಡ; ಯಾರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಅವರೆಲ್ಲರ ಬಳಿಗೆ ನೀನು ಹೋಗೇ ಹೋಗುವಿ; ನಾನು ಆಜ್ಞಾಪಿಸುವದನ್ನೆಲ್ಲಾ ನುಡಿಯಲೇ ನುಡಿಯುವಿ. ಅವರಿಗೆ ಅಂಜಬೇಡ; ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು.” (ಯೆರೆಮೀಯ 1:6-10) ಯೆರೆಮೀಯನಿಗೆ ಯೆಹೋವನಲ್ಲಿ ದೃಢಭರವಸವಿತ್ತು. ಅದರ ಫಲವಾಗಿ, ಅವನಿಗೆ ಸಾರುವ ಬಗ್ಗೆ ಇದ್ದ ಹಿಂಜರಿಕೆಯನ್ನು ಅವನು ಯೆಹೋವನ ಶಕ್ತಿಯಿಂದ ಜಯಿಸಿ, ಇಸ್ರಾಯೇಲಿನಲ್ಲಿ ಒಬ್ಬ ಗಮನಾರ್ಹವಾದ ಧೀರ ಸಾಕ್ಷಿಯಾಗಿ ಪರಿಣಮಿಸಿದನು.

11. ಯೆರೆಮೀಯನ ಹಾಗೆ ಧೈರ್ಯಶಾಲಿಗಳಾಗಿರಲು ಇಂದು ಕ್ರೈಸ್ತರಿಗೆ ಯಾವುದು ಸಹಾಯಮಾಡುತ್ತದೆ?

11 ಯೆರೆಮೀಯನಿಗೆ ಸಿಕ್ಕಿದಂಥ ರೀತಿಯ ನಿಯೋಗವೇ ಇಂದು ಅಭಿಷಿಕ್ತ ಕ್ರೈಸ್ತರಿಗೂ ಇದೆ. “ಬೇರೆ ಕುರಿಗಳ” “ಮಹಾ ಸಮೂಹ”ದಿಂದ ಬೆಂಬಲಿಸಲ್ಪಟ್ಟಿರುವ ಇವರು, ನಿರಾಸಕ್ತಿ, ನಿಂದೆ ಮತ್ತು ಹಿಂಸೆಯ ಎದುರಿನಲ್ಲಿಯೂ ಯೆಹೋವನ ಉದ್ದೇಶಗಳನ್ನು ಸಾರುತ್ತಾ ಮುಂದುವರಿಯುತ್ತಿದ್ದಾರೆ. (ಪ್ರಕಟನೆ 7:9; ಯೋಹಾನ 10:16) “ಅಂಜಬೇಡ” ಎಂಬುದಾಗಿ ಯೆಹೋವನು ಯೆರೆಮೀಯನಿಗೆ ನುಡಿದ ಮಾತುಗಳಿಂದ ಅವರು ಪ್ರೋತ್ಸಾಹವನ್ನು ಪಡೆದುಕೊಳ್ಳುತ್ತಿದ್ದಾರೆ. ತಾವು ದೇವರಿಂದ ನೇಮಿಸಲ್ಪಟ್ಟಿದ್ದೇವೆ ಮತ್ತು ಆತನ ಸಂದೇಶವನ್ನು ಸಾರುತ್ತಿದ್ದೇವೆ ಎಂಬುದನ್ನು ಅವರೆಂದೂ ಮರೆಯುವುದಿಲ್ಲ.​—2 ಕೊರಿಂಥ 2:17.

ಅನುಕರಣಯೋಗ್ಯ ಧೈರ್ಯದ ಮಾದರಿಗಳು

12. ಯೇಸು ಧೈರ್ಯದ ಯಾವ ಅತ್ಯುತ್ತಮ ಮಾದರಿಯನ್ನು ಒದಗಿಸಿರುತ್ತಾನೆ, ಮತ್ತು ಅವನು ತನ್ನ ಹಿಂಬಾಲಕರನ್ನು ಪ್ರೋತ್ಸಾಹಿಸಿದ್ದು ಹೇಗೆ?

12 ಯೆರೆಮೀಯನಂತೆ ಧೈರ್ಯದಿಂದ ಕ್ರಿಯೆಗೈದಿರುವವರ ಮಾದರಿಗಳ ಕುರಿತು ನಾವು ಧ್ಯಾನಿಸುವುದಾದರೆ, ಧೈರ್ಯವನ್ನು ವಿಕಸಿಸಿಕೊಳ್ಳಲು ಬೇಕಾದ ಸಹಾಯವು ನಮಗೆ ದೊರಕುವದು. (ಕೀರ್ತನೆ 77:12) ಉದಾಹರಣೆಗಾಗಿ, ಯೇಸುವಿನ ಶುಶ್ರೂಷೆಯನ್ನು ನಾವು ಪರಿಶೀಲಿಸುವಾಗ, ಸೈತಾನನಿಂದ ಶೋಧನೆಗೊಳಗಾದಾಗ ಮತ್ತು ಅನಂತರ ಯೆಹೂದಿ ಮುಖಂಡರ ಜಗ್ಗದ ವಿರೋಧವನ್ನು ಎದುರಿಸಿದಾಗ ಅವನು ತೋರಿಸಿದ ಧೈರ್ಯದಿಂದ ನಾವು ಪ್ರಭಾವಿತರಾಗುತ್ತೇವೆ. (ಲೂಕ 4:​1-13; 20:​19-47) ಯೆಹೋವನ ಬಲದಿಂದಾಗಿ ಯೇಸುವನ್ನು ಯಾರೂ ಅಲುಗಾಡಿಸಲು ಸಾಧ್ಯವಿರಲಿಲ್ಲ. ತನ್ನ ಮರಣಕ್ಕೆ ಸ್ವಲ್ಪ ಮುಂಚೆ ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ.” (ಯೋಹಾನ 16:33; 17:16) ಯೇಸುವಿನ ಶಿಷ್ಯರು ಅವನ ಮಾದರಿಯನ್ನು ಅನುಕರಿಸಿದ್ದಲ್ಲಿ, ಅವರೂ ಲೋಕವನ್ನು ಜಯಿಸುವವರಾಗಿರುವರು. (1 ಯೋಹಾನ 2:6; ಪ್ರಕಟನೆ 2:​7, 11, 17, 26) ಆದರೆ ಅವರಿಗೆ “ಧೈರ್ಯ”ವು ಅಗತ್ಯವಾಗಿರುವುದು.

13. ಪೌಲನು ಫಿಲಿಪ್ಪಿಯವರಿಗೆ ಯಾವ ಪ್ರೋತ್ಸಾಹವನ್ನು ಕೊಟ್ಟನು?

13 ಯೇಸುವಿನ ಮರಣಾನಂತರ ಕೆಲವು ವರ್ಷಗಳು ಕಳೆದ ಬಳಿಕ, ಪೌಲ ಮತ್ತು ಸೀಲರು ಫಿಲಿಪ್ಪಿಯಲ್ಲಿ ಸೆರೆಮನೆಗೆ ಹಾಕಲ್ಪಟ್ಟರು. ಆಮೇಲೆ, ಪೌಲನು ಫಿಲಿಪ್ಪಿ ಸಭೆಯನ್ನು ಪ್ರೋತ್ಸಾಹಿಸುತ್ತ “[ಅವರ] ವಿರೋಧಿಗಳಿಗೆ ಯಾವ ವಿಷಯದಲ್ಲಾದರೂ ಹೆದರದೆ ಒಂದೇ ಆತ್ಮದಲ್ಲಿ ದೃಢವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೋಸ್ಕರ ಐಕ್ಯಮತ್ಯದಿಂದ ಹೋರಾಡುತ್ತಾ” ಇರುವಂತೆ ಬುದ್ಧಿಹೇಳಿದನು. ಇದನ್ನು ಮಾಡುವುದಕ್ಕಾಗಿ ಅವರನ್ನು ಬಲಪಡಿಸಲು ಪೌಲನು ಅಂದದ್ದು: “ನೀವು ಹೀಗಿರುವದು [ಅಂದರೆ ಕ್ರೈಸ್ತರು ಹಿಂಸಿಸಲ್ಪಡುವುದು] ವಿರೋಧಿಗಳ [ಹಿಂಸಕರ] ನಾಶನಕ್ಕೂ ನಿಮ್ಮ ರಕ್ಷಣೆಗೂ ದೇವರಿಂದಾದ ಪ್ರಮಾಣವಾಗಿದೆ. ಹೇಗಂದರೆ ಕ್ರಿಸ್ತನ ಮೇಲೆ ನಂಬಿಕೆಯಿಡುವದೂ ಆತನಿಗೋಸ್ಕರ ಬಾಧೆಯನ್ನನುಭವಿಸುವದೂ ನಿಮಗೆ ಅನುಗ್ರಹವಾಗಿ ದೊರೆಯಿತು.”​—ಫಿಲಿಪ್ಪಿ 1:​27-29.

14. ಪೌಲನ ಧೈರ್ಯವು ರೋಮಿನ ಸಹೋದರರ ಮೇಲೆ ಯಾವ ಪರಿಣಾಮವನ್ನು ಬೀರಿತು?

14 ಪೌಲನು ಫಿಲಿಪ್ಪಿಯಲ್ಲಿದ್ದ ಸಭೆಗೆ ಬರೆದಾಗ, ಅವನು ಪುನಃ ಸೆರೆಮನೆಯಲ್ಲಿದ್ದನು, ಆದರೆ ಈ ಸಾರಿ ರೋಮಿನಲ್ಲಿದ್ದನು. ಆದರೂ ಅವನು ಧೈರ್ಯದಿಂದ ಇತರರಿಗೆ ಸಾರುತ್ತಾ ಹೋದನು. ಫಲಿತಾಂಶವೇನಾಯಿತು? ಅವನು ಬರೆದದ್ದು: “ನನ್ನ ಬೇಡಿಗಳು ಕ್ರಿಸ್ತನ ನಿಮಿತ್ತವೇ ಎಂದು ಅರಮನೆಯ ಪಹರೆಯವರೆಲ್ಲರಿಗೂ ಮಿಕ್ಕಾದವರೆಲ್ಲರಿಗೂ ಪ್ರಸಿದ್ಧವಾಯಿತು. ಇದಲ್ಲದೆ ಸಹೋದರರಲ್ಲಿ ಬಹಳ ಜನರು ನನ್ನ ಬೇಡಿಗಳಿಂದಲೇ ಕರ್ತನಲ್ಲಿ ಭರವಸವುಳ್ಳವರಾಗಿ ದೇವರ ವಾಕ್ಯವನ್ನು ನಿರ್ಭಯದಿಂದ ಹೇಳುವದಕ್ಕೆ ಇನ್ನೂ ವಿಶೇಷ ಧೈರ್ಯ ಹೊಂದಿದ್ದಾರೆ.”​—ಫಿಲಿಪ್ಪಿ 1:13, 14.

15. ಧೈರ್ಯಶಾಲಿಗಳಾಗಿರುವ ನಮ್ಮ ದೃಢ ನಿರ್ಧಾರವನ್ನು ಬಲಪಡಿಸುವ ನಂಬಿಕೆಯ ಉತ್ತಮ ಮಾದರಿಗಳನ್ನು ನಾವು ಎಲ್ಲಿ ಕಂಡುಕೊಳ್ಳಬಹುದು?

15 ಪೌಲನ ಮಾದರಿಯು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಮತ್ತು ನಿರಂಕುಶ ಪ್ರಭುತ್ವ ಅಥವಾ ಪಾದ್ರಿವರ್ಗದ ಆಡಳಿತದ ಕೆಳಗಿರುವ ಅನೇಕ ದೇಶಗಳಲ್ಲಿ ಹಿಂಸೆಯನ್ನು ತಾಳಿಕೊಂಡಿರುವ ಆಧುನಿಕ ದಿನದ ಕ್ರೈಸ್ತರ ಮಾದರಿಗಳು ಸಹ ಅದೇ ರೀತಿಯಲ್ಲಿ ಪ್ರೋತ್ಸಾಹವನ್ನೀಯುತ್ತವೆ. ಇವರಲ್ಲಿ ಅನೇಕರ ವೃತ್ತಾಂತಗಳು, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಹಾಗೂ ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್‌)ಗಳಲ್ಲಿ ವರದಿಯಾಗಿವೆ. ಆ ವೃತ್ತಾಂತಗಳನ್ನು ನೀವು ಓದುವಾಗ, ಯಾರ ಕುರಿತು ಆ ವೃತ್ತಾಂತಗಳು ತಿಳಿಸುತ್ತವೊ ಅವರೆಲ್ಲರೂ ನಮ್ಮಂತೆಯೇ ಸಾಧಾರಣ ವ್ಯಕ್ತಿಗಳಾಗಿದ್ದರು ಎಂಬುದನ್ನು ನೆನಪಿನಲ್ಲಿಡಿರಿ. ಆದರೆ ಅವರು ಅತಿ ಕಷ್ಟಕರ ಪರಿಸ್ಥಿತಿಗಳಲ್ಲಿದ್ದಾಗ, ಅವರಿಗೆ ಬಲಾಧಿಕ್ಯವನ್ನು ಕೊಟ್ಟವನು ಯೆಹೋವನೇ. ಆದುದರಿಂದಲೇ ಅವರು ತಾಳಿಕೊಳ್ಳಲು ಶಕ್ತರಾದರು. ಪರಿಸ್ಥಿತಿಗಳು ಅಗತ್ಯಪಡಿಸುವಲ್ಲಿ, ಯೆಹೋವನು ನಮಗೂ ಅದೇ ರೀತಿಯ ಬಲವನ್ನು ಅನುಗ್ರಹಿಸುವನೆಂಬ ಖಾತರಿಯು ನಮಗಿರಬಲ್ಲದು.

ನಮ್ಮ ಧೀರ ನಿಲುವು ಯೆಹೋವನಿಗೆ ಸಂತೋಷವನ್ನೂ ಗೌರವವನ್ನೂ ತರುತ್ತದೆ

16, 17. ಇಂದು ನಾವೊಂದು ಧೈರ್ಯಶಾಲಿ ಮನೋಭಾವವನ್ನು ಹೇಗೆ ವಿಕಸಿಸಸಾಧ್ಯವಿದೆ?

16 ಯಾವನು ಸತ್ಯಕ್ಕಾಗಿ ಮತ್ತು ನೀತಿಗಾಗಿ ದೃಢವಾಗಿ ನಿಲ್ಲುತ್ತಾನೊ ಅವನು ಧೈರ್ಯವಂತನು. ಒಳಗೆ ಹೆದರಿಕೆಯಾಗುತ್ತಿದ್ದರೂ ಹಾಗೆ ಮಾಡುವವನು ಇನ್ನಷ್ಟು ಹೆಚ್ಚು ಧೈರ್ಯವಂತನು. ವಾಸ್ತವದಲ್ಲಿ ಯಾವನೇ ಕ್ರೈಸ್ತನು, ನಿಜವಾಗಿಯೂ ಯೆಹೋವನ ಚಿತ್ತವನ್ನು ಮಾಡಬಯಸುತ್ತಾನಾದರೆ, ಸದಾ ದೇವರ ಮೇಲೆ ಆತುಕೊಂಡು ಇರುತ್ತಾನಾದರೆ, ನಂಬಿಗಸ್ತನಾಗಿ ಉಳಿಯಲು ದೃಢ ನಿರ್ಧಾರ ಮಾಡಿರುತ್ತಾನಾದರೆ ಮತ್ತು ತನ್ನಂಥ ಅಸಂಖ್ಯಾತ ವ್ಯಕ್ತಿಗಳಿಗೆ ಹಿಂದೆ ಯೆಹೋವನು ಬಲಕೊಟ್ಟದ್ದನ್ನು ಯಾವಾಗಲೂ ಜ್ಞಾಪಿಸಿಕೊಳ್ಳುತ್ತಾನಾದರೆ ಅವನು ಧೈರ್ಯಶಾಲಿಯಾಗಿರಬಲ್ಲನು. ಅಷ್ಟುಮಾತ್ರವಲ್ಲದೆ, ನಮ್ಮ ಧೀರ ನಿಲುವು ಯೆಹೋವನನ್ನು ಸಂತೋಷಪಡಿಸಿ ಆತನಿಗೆ ಗೌರವವನ್ನು ತರುತ್ತದೆ ಎಂಬುದನ್ನು ನಾವು ಮನಗಾಣುವಾಗ, ನಿರ್ಬಲರಾಗದಿರಲು ನಾವು ಇನ್ನಷ್ಟು ಹೆಚ್ಚು ದೃಢ ನಿಶ್ಚಯವುಳ್ಳವರಾಗುವೆವು. ನಾವು ಆತನನ್ನು ಗಾಢವಾಗಿ ಪ್ರೀತಿಸುತ್ತಿರುವುದರಿಂದ ಅಪಹಾಸ್ಯವನ್ನೂ ದುರುಪಚಾರವನ್ನೂ ತಾಳಿಕೊಳ್ಳಲು ಸಿದ್ಧರಾಗಿರುವೆವು.​—1 ಯೋಹಾನ 2:5; 4:18.

17 ನಮ್ಮ ನಂಬಿಕೆಗಾಗಿ ನಾವು ಕಷ್ಟಾನುಭವಿಸುತ್ತಿರುವಾಗ, ನಾವೇನೊ ಪಾಪಮಾಡಿದ್ದರಿಂದಲೆ ಹೀಗಾಗಿದೆ ಎಂದು ಇದರರ್ಥವಲ್ಲವೆಂಬುದನ್ನು ಎಂದಿಗೂ ಮರೆಯದಿರಿ. (1 ಪೇತ್ರ 3:17) ನಾವು ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯುತ್ತಿರುವ ಕಾರಣದಿಂದಲೂ, ಸತ್ಕಾರ್ಯವನ್ನು ನಡಿಸುವುದರಿಂದಲೂ ಮತ್ತು ಈ ಲೋಕದ ಭಾಗವಾಗಿರದಿರುವುದರಿಂದಲೂ ಕಷ್ಟಾನುಭವಿಸುತ್ತಿದ್ದೇವೆ. ಈ ವಿಷಯದಲ್ಲಿ ಅಪೊಸ್ತಲ ಪೇತ್ರನಂದದ್ದು: “ಒಳ್ಳೇದನ್ನು ಮಾಡಿ ಬಾಧೆಪಡುವದರಲ್ಲಿ ನೀವು ತಾಳ್ಮೆಯಿಂದಿದ್ದರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ.” ಪೇತ್ರನು ಹೀಗೂ ಅಂದಿದ್ದಾನೆ: “ದೇವರ ಚಿತ್ತಾನುಸಾರ ಬಾಧೆಪಡುವವರು ಒಳ್ಳೇದನ್ನು ಮಾಡುವವರಾಗಿದ್ದು ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿಕರ್ತನಿಗೆ ಒಪ್ಪಿಸಲಿ.” (1 ಪೇತ್ರ 2:20; 4:19) ಹೌದು, ನಮ್ಮ ನಂಬಿಕೆಯು ನಮ್ಮ ಪ್ರಿಯ ದೇವರಾದ ಯೆಹೋವನನ್ನು ಸಂತೋಷಪಡಿಸುತ್ತದೆ ಮತ್ತು ಆತನಿಗೆ ಗೌರವವನ್ನು ತರುತ್ತದೆ. ಧೈರ್ಯಶಾಲಿಗಳಾಗಿರಲು ಎಷ್ಟೊಂದು ಪ್ರಬಲವಾದ ಕಾರಣವಿದು!

ಸರ್ಕಾರಿ ಅಧಿಕಾರಿಗಳೊಂದಿಗೆ ಮಾತಾಡುವುದು

18, 19. ಒಬ್ಬ ನ್ಯಾಯಾಧೀಶನ ಮುಂದೆ ನಾವು ಧೈರ್ಯದ ನಿಲುವನ್ನು ತೆಗೆದುಕೊಳ್ಳುವಾಗ, ಯಾವ ಸಂದೇಶವನ್ನು ನಾವು ಕಾರ್ಯತಃ ತಿಳಿಯಪಡಿಸುತ್ತೇವೆ?

18 ಯೇಸು ತನ್ನ ಹಿಂಬಾಲಕರಿಗೆ ಅವರು ಹಿಂಸಿಸಲ್ಪಡಲಿರುವರು ಎಂದು ಹೇಳಿದಾಗ, ಇದನ್ನೂ ಹೇಳಿದನು: “ಅವರು [ಜನರು] ನಿಮ್ಮನ್ನು ನ್ಯಾಯ ವಿಚಾರಣೆಯ ಸಭೆಗಳಿಗೆ ಎಳಕೊಂಡು ಹೋಗುವರು; ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದಕ್ಕೂ ಅರಸುಗಳ ಮುಂದಕ್ಕೂ ತೆಗೆದುಕೊಂಡು ಹೋಗುವರು. ಹೀಗೆ ಅವರಿಗೂ ಅನ್ಯಜನಗಳಿಗೂ ಸಾಕ್ಷಿಯಾಗುವದು.” (ಮತ್ತಾಯ 10:17, 18) ಸುಳ್ಳಾರೋಪಗಳ ಕಾರಣದಿಂದಾಗಿ, ಒಬ್ಬ ನ್ಯಾಯಾಧಿಪತಿಯ ಮುಂದೆ ಅಥವಾ ಅಧಿಪತಿಯ ಮುಂದೆ ನಾವು ಕರೆಯಲ್ಪಡುವಾಗ, ನಮಗೆ ಧೈರ್ಯವು ಬೇಕೇಬೇಕು. ಆದರೂ ಅಂಥ ಸಂದರ್ಭಗಳನ್ನು ಆ ಜನರಿಗೆ ಸಾಕ್ಷಿಕೊಡುವ ಸಂದರ್ಭಗಳಾಗಿ ನಾವು ಉಪಯೋಗಿಸುವಾಗ, ನಾವು ಒಂದು ಕಷ್ಟಕರ ಸನ್ನಿವೇಶವನ್ನು ಸದುಪಯೋಗಕ್ಕೆ ಹಾಕಿ, ಒಂದು ಮಹತ್ವಪೂರ್ಣ ಸಂಗತಿಯನ್ನು ಪೂರೈಸುವೆವು. ಕಾರ್ಯತಃ, ನಮ್ಮ ನ್ಯಾಯವಿಚಾರಕರಿಗೆ ನಾವು ಕೀರ್ತನೆ 2ರಲ್ಲಿ ದಾಖಲಾಗಿರುವ ಯೆಹೋವನ ಮಾತುಗಳನ್ನು ತಿಳಿಯಪಡಿಸುತ್ತೇವೆ: “ಅರಸುಗಳಿರಾ, ವಿವೇಕಿಗಳಾಗಿರ್ರಿ; ದೇಶಾಧಿಪತಿಗಳಿರಾ, ಬುದ್ಧಿಮಾತುಗಳಿಗೆ ಕಿವಿಗೊಡಿರಿ. ಯೆಹೋವನನ್ನು ಭಯಭಕ್ತಿಯಿಂದ ಸೇವಿಸಿರಿ.” (ಕೀರ್ತನೆ 2:10, 11) ಯೆಹೋವನ ಸಾಕ್ಷಿಗಳು ಕೋರ್ಟಿನಲ್ಲಿ ಸುಳ್ಳಾರೋಪಗಳಿಗೆ ಗುರಿಯಾದಾಗಲೆಲ್ಲ, ಅನೇಕವೇಳೆ ನ್ಯಾಯಾಧೀಶರು ಆರಾಧನಾ ಸ್ವಾತಂತ್ರ್ಯವನ್ನು ಎತ್ತಿಹಿಡಿದಿರುತ್ತಾರೆ ಮತ್ತು ನಾವು ಅವರಿಗೆ ಕೃತಜ್ಞರಾಗಿರುತ್ತೇವೆ. ಆದರೂ ಕೆಲವು ನ್ಯಾಯಾಧೀಶರುಗಳು ವಿರೋಧಿಗಳಿಂದ ಪ್ರಭಾವಿಸಲ್ಪಡಲು ತಮ್ಮನ್ನು ಬಿಟ್ಟುಕೊಟ್ಟಿರುತ್ತಾರೆ. ಅಂಥವರಿಗೆ ದೇವರ ವಾಕ್ಯವು ಹೇಳುವುದು: “ಬುದ್ಧಿಮಾತುಗಳಿಗೆ ಕಿವಿಗೊಡಿರಿ.”

19 ಯೆಹೋವ ದೇವರ ನಿಯಮವೇ ಸರ್ವಶ್ರೇಷ್ಠ ನಿಯಮವೆಂಬುದನ್ನು ನ್ಯಾಯಾಧೀಶರು ಮನಗಾಣಬೇಕು. ನ್ಯಾಯಾಧೀಶರೂ ಸೇರಿ ಮಾನವರೆಲ್ಲರೂ ಯೆಹೋವ ದೇವರಿಗೂ ಯೇಸು ಕ್ರಿಸ್ತನಿಗೂ ಲೆಕ್ಕವೊಪ್ಪಿಸಬೇಕಾಗಿದೆ ಎಂಬುದನ್ನು ಅವರು ನೆನಪಿನಲ್ಲಿಡಬೇಕು. (ರೋಮಾಪುರ 14:10) ನಮ್ಮ ವಿಷಯದಲ್ಲಾದರೊ, ಮಾನವ ನ್ಯಾಯಾಧೀಶರುಗಳಿಂದ ನಮಗೆ ನ್ಯಾಯ ಸಿಗಲಿ ಸಿಗದಿರಲಿ, ಧೈರ್ಯಶಾಲಿಗಳಾಗಿರಲು ನಮಗೆ ಸಕಾರಣವಿದೆ; ಯಾಕಂದರೆ ಯೆಹೋವನು ನಮಗೆ ಬೆಂಬಲ ಕೊಡುತ್ತಾನೆ. ಬೈಬಲು ಅನ್ನುವುದು: “ಆತನ ಮೊರೆಹೊಕ್ಕವರೆಲ್ಲರು ಧನ್ಯರು.”​—ಕೀರ್ತನೆ 2:12.

20. ಹಿಂಸೆ ಮತ್ತು ಮಾನಹಾನಿಕರವಾದ ಮಾತನ್ನು ನಾವು ತಾಳಿಕೊಳ್ಳಬೇಕಾಗುವಲ್ಲಿ ನಾವೇಕೆ ಧನ್ಯರಾಗಿರಬಲ್ಲೆವು?

20 ಪರ್ವತ ಪ್ರಸಂಗದಲ್ಲಿ ಯೇಸುವಂದದ್ದು: “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಹೀಗೆಯೇ ಹಿಂಸೆಪಡಿಸಿದರಲ್ಲಾ.” (ಮತ್ತಾಯ 5:11, 12) ಹೌದು, ಹಿಂಸೆಯು ತಾನೇ ಉಲ್ಲಾಸಕರವಲ್ಲವೆಂಬುದು ನಿಶ್ಚಯ. ಆದರೆ ವಾರ್ತಾಮಾಧ್ಯಮದಲ್ಲಿ ಮಾನಹಾನಿಕರವಾದ ವರದಿಗಳು ಕೊಡಲ್ಪಟ್ಟಾಗ್ಯೂ, ಹಿಂಸೆಯು ಬಂದಾಗ್ಯೂ, ನಾವು ದೃಢವಾಗಿ ನಿಲ್ಲುವುದು ಸಂತೋಷಪಡಲು ಒಂದು ಕಾರಣವೇ ಸರಿ. ಯೆಹೋವನನ್ನು ನಾವು ಮೆಚ್ಚಿಸುತ್ತಿದ್ದೇವೆ ಮತ್ತು ನಾವು ಪ್ರತಿಫಲವನ್ನು ಪಡೆಯಲಿರುವೆವು ಎಂದಿದರ ಅರ್ಥವಾಗಿರುತ್ತದೆ. ನಮ್ಮ ಧೈರ್ಯಭರಿತ ನಿಲುವು ನಮಗಿರುವ ನಂಬಿಕೆಯು ನಿಜವಾದದ್ದಾಗಿದೆ ಎಂಬುದನ್ನು ತೋರಿಸುತ್ತದೆ ಮತ್ತು ಯೆಹೋವನ ಸಮ್ಮತಿಯನ್ನು ಪಡೆಯುವ ಆಶ್ವಾಸನೆಯನ್ನು ಕೊಡುತ್ತದೆ. ಯೆಹೋವನಲ್ಲಿ ನಮಗೆ ಪೂರ್ಣ ಭರವಸವಿದೆ ಎಂದು ಅದು ತೋರಿಸುತ್ತದೆ ನಿಶ್ಚಯ. ಅಂಥ ಭರವಸವು ಒಬ್ಬ ಕ್ರೈಸ್ತನಿಗೆ ಅತ್ಯಾವಶ್ಯಕ. ಅದು ಹೇಗೆಂದು ಮುಂದಿನ ಲೇಖನವು ತೋರಿಸುವುದು.

ನೀವೇನನ್ನು ಕಲಿತಿರಿ?

• ಇಂದು ಯಾವ ಪರಿಸ್ಥಿತಿಗಳು ನಾವು ಧೈರ್ಯಶಾಲಿಗಳಾಗಿರುವುದನ್ನು ಅವಶ್ಯಪಡಿಸುತ್ತವೆ?

• ಧೈರ್ಯವನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು?

• ಧೈರ್ಯದ ಕೆಲವು ಉತ್ತಮ ಮಾದರಿಗಳು ಯಾವುವು?

• ನಾವು ಧೈರ್ಯದಿಂದ ಕಾರ್ಯನಡಿಸಲು ಅಪೇಕ್ಷಿಸುವುದು ಯಾಕೆ?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರಗಳು]

ಜರ್ಮನಿಯಲ್ಲಿ ಸಿಮೋನ್‌ ಆರ್ನಾಲ್ಡ್‌ (ಈಗ ಲೀಬ್ಸ್‌ಟರ್‌), ಮಲಾವಿಯಲ್ಲಿ ವಿಡಾಸ್‌ ಮ್ಯಾಡೊನಾ, ಮತ್ತು ಯೂಕ್ರೇನ್‌ನಲ್ಲಿ ಲಿಡಿಯಾ ಹಾಗೂ ಆಲೀಕ್ಸೀ ಕುರ್ಡಾಸ್‌ ಇವರೆಲ್ಲರೂ ಧೈರ್ಯವನ್ನು ಪ್ರದರ್ಶಿಸಿ ಸೈತಾನನನ್ನು ವಿರೋಧಿಸಿದರು

[ಪುಟ 10ರಲ್ಲಿರುವ ಚಿತ್ರಗಳು]

ಸುವಾರ್ತೆಯ ವಿಷಯದಲ್ಲಿ ನಾವು ನಾಚಿಕೆಪಡುವುದಿಲ್ಲ

[ಪುಟ 11ರಲ್ಲಿರುವ ಚಿತ್ರ]

ಸೆರೆಮನೆಯಲ್ಲಿ ಪೌಲನು ತೋರಿಸಿದ ಧೈರ್ಯವು ಸುವಾರ್ತೆಯನ್ನು ಪ್ರವರ್ಧಿಸಲು ಬಹಳಷ್ಟನ್ನು ಮಾಡಿತು

[ಪುಟ 12ರಲ್ಲಿರುವ ಚಿತ್ರ]

ನಾವು ಧೈರ್ಯದಿಂದ ನಮ್ಮ ಶಾಸ್ತ್ರಾಧಾರಿತ ನಿಲುವನ್ನು ಒಬ್ಬ ನ್ಯಾಯಾಧೀಶನಿಗೆ ವಿವರಿಸುವುದಾದರೆ, ನಾವೊಂದು ಮಹತ್ವಪೂರ್ಣ ಸಂದೇಶವನ್ನು ನೀಡುತ್ತೇವೆ