ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಿಂಸೆಯನ್ನು ಅವರು ಜಯಿಸಿದರು

ಹಿಂಸೆಯನ್ನು ಅವರು ಜಯಿಸಿದರು

ಹಿಂಸೆಯನ್ನು ಅವರು ಜಯಿಸಿದರು

ಫ್ರೀಡ ಯೆಸ್‌ ಎಂಬವಳು 1911ರಲ್ಲಿ ಡೆನ್ಮಾರ್ಕ್‌ನಲ್ಲಿ ಜನಿಸಿದಳು. ಅಲ್ಲಿಂದ ತನ್ನ ಹೆತ್ತವರೊಂದಿಗೆ ಅವಳು ಉತ್ತರ ಜರ್ಮನಿಯ ಹುಸುಮ್‌ ಎಂಬಲ್ಲಿಗೆ ಸ್ಥಳಾಂತರಿಸಿದಳು. ವರ್ಷಾನಂತರ ಮ್ಯಾಜ್‌ಬರ್ಗ್‌ನಲ್ಲಿ ಅವಳಿಗೊಂದು ಕೆಲಸ ಸಿಕ್ಕಿತು. 1930ರಲ್ಲಿ ಅವಳು ಯೆಹೋವನ ಸಾಕ್ಷಿಗಳ ಆಗಿನ ಹೆಸರಾಗಿದ್ದ ಬೈಬಲ್‌ ವಿದ್ಯಾರ್ಥಿಯೋಪಾದಿ ದೀಕ್ಷಾಸ್ನಾನವನ್ನು ಪಡೆದುಕೊಂಡಳು. 1933ರಲ್ಲಿ ಹಿಟ್ಲರನು ಅಧಿಕಾರಕ್ಕೆ ಬಂದನು, ಮತ್ತು ಫ್ರೀಡಳಿಗೆ ಈ ಘಟನೆಯು, ಒಂದಲ್ಲ, ಬದಲಾಗಿ ಎರಡು ನಿರಂಕುಶ ಸರ್ಕಾರಗಳ ಕೈಯಲ್ಲಿ 23 ವರ್ಷಗಳ ದುರುಪಚಾರದ ಪ್ರಾರಂಭವಾಗಿತ್ತು.

ಮಾರ್ಚ್‌ 1933ರಲ್ಲಿ ಜರ್ಮನ್‌ ಸರಕಾರವು ಒಂದು ಸಾಮಾನ್ಯ ಚುನಾವಣೆಗೆ ಕರೆಕೊಟ್ಟಿತು. ಹ್ಯಾಂಬರ್ಗ್‌ನ ಸಮೀಪದಲ್ಲಿರುವ ನ್ಯೂಯನ್‌ಗ್ಯಾಮ್‌ ಸೆರೆಶಿಬಿರದ ಮುಖ್ಯಸ್ಥರಾದ ಡಾ. ಡೆಟ್‌ಲಿಫ್‌ ಗಾರ್ಬ್‌ ವಿವರಿಸುವುದು: “ರಾಷ್ಟ್ರೀಯ ಸಮಾಜವಾದಿಗಳು, ತಮ್ಮ ಅಧ್ಯಕ್ಷನೂ ಮುಖ್ಯಸ್ಥನೂ ಆಗಿದ್ದ ಅಡಾಲ್ಫ್‌ ಹಿಟ್ಲರನಿಗೆ ಅಧಿಕ ಸಂಖ್ಯಾತ ಮತಗಳ ಬೆಂಬಲವನ್ನು ಒತ್ತಾಯದಿಂದ ಪಡೆದುಕೊಳ್ಳಲು ಬಯಸಿದ್ದರು.” ಆದರೆ ಯೆಹೋವನ ಸಾಕ್ಷಿಗಳು ರಾಜಕೀಯವಾಗಿ ತಟಸ್ಥರಾಗಿ ಉಳಿಯಲಿಕ್ಕಾಗಿ ಮತ್ತು ‘ಲೋಕದ ಭಾಗವಾಗಿರದೇ’ ಇರಲಿಕ್ಕಾಗಿ ಯೇಸು ಕೊಟ್ಟ ಆದೇಶವನ್ನು ಪಾಲಿಸಿದರು. ಆದುದರಿಂದ ಅವರು ಓಟನ್ನು ಹಾಕಲಿಲ್ಲ. ಪರಿಣಾಮ? ಸಾಕ್ಷಿಗಳ ಮೇಲೆ ನಿಷೇಧವನ್ನು ತರಲಾಯಿತು.​—ಯೋಹಾನ 17:​16, NW.

ಫ್ರೀಡಳು ತನ್ನ ಕ್ರೈಸ್ತ ಚಟುವಟಿಕೆಗಳನ್ನು ಗುಪ್ತವಾಗಿ ನಡೆಸತೊಡಗಿದಳು, ಮತ್ತು ಕಾವಲಿನಬುರುಜು ಪತ್ರಿಕೆಯನ್ನು ಮುದ್ರಿಸಲು ಸಹ ನೆರವಾದಳು. “ನಮ್ಮ ಜೊತೆ ವಿಶ್ವಾಸಿಗಳಿಗಾಗಿ ಕೆಲವು ಪತ್ರಿಕೆಗಳನ್ನು ಸೆರೆಶಿಬಿರದೊಳಗೆ ಗುಟ್ಟಿನಿಂದ ತರಲಾಯಿತು” ಅನ್ನುತ್ತಾಳೆ ಅವಳು. ಅವಳನ್ನು 1940ರಲ್ಲಿ ದಸ್ತಗಿರಿಮಾಡಲಾಯಿತು ಮತ್ತು ಜರ್ಮನ್‌ ಪೊಲೀಸರ ತನಿಖೆಗೊಳಗಾಗಿ, ಅವಳು ಅನೇಕ ತಿಂಗಳುಗಳ ವರೆಗೆ ಏಕಾಂತ ಸೆರೆವಾಸವನ್ನು ಅನುಭವಿಸಿದಳು. ಅವಳು ಅದನ್ನು ತಾಳಿಕೊಂಡದ್ದು ಹೇಗೆ? ಅವಳನ್ನುವುದು: “ಪ್ರಾರ್ಥನೆಯೇ ನನಗೆ ಆಶ್ರಯವಾಯಿತು. ನಾನು ಬೆಳಗ್ಗೆ ಬೇಗನೆ ಎದ್ದು ಪ್ರಾರ್ಥಿಸತೊಡಗುತ್ತಾ, ದಿನದಲ್ಲಿ ಅನೇಕ ಬಾರಿ ಪ್ರಾರ್ಥಿಸಿದೆ. ಪ್ರಾರ್ಥನೆಯೇ ನನಗೆ ಬಲಕೊಟ್ಟಿತು ಮತ್ತು ಅತಿರೇಕವಾಗಿ ಚಿಂತೆಮಾಡದಂತೆ ಸಹಾಯಮಾಡಿತು.”​—ಫಿಲಿಪ್ಪಿ 4:​6, 7.

ಫ್ರೀಡಳಿಗೆ ಬಿಡುಗಡೆಯಾಯಿತು. ಆದರೆ 1944ರಲ್ಲಿ ಜರ್ಮನ್‌ ಪೊಲೀಸರು ಅವಳನ್ನು ಪುನಃ ದಸ್ತಗಿರಿಮಾಡಿದರು. ಈ ಸಾರಿ ವಾಲ್ಟಿಮ್‌ ಸೆರೆಮನೆಯಲ್ಲಿ ಅವಳಿಗೆ ಏಳು ವರ್ಷಗಳ ಶಿಕ್ಷೆಯಾಯಿತು. ಫ್ರೀಡ ಮುಂದರಿಸುತ್ತಾ ಅಂದದ್ದು: “ಸೆರೆಮನೆಯ ಕಾವಲುಗಾರರು ನನ್ನನ್ನು ಇತರ ಸ್ತ್ರೀಯರೊಂದಿಗೆ ಬಚ್ಚಲು ಮನೆಯಲ್ಲಿ ಕೆಲಸಕ್ಕೆ ಹಾಕಿದರು. ನಾನು ಹೆಚ್ಚಿನ ವೇಳೆ ಚಕಸ್ಲೆವಾಕಿಯದ ಒಬ್ಬ ಸೆರೆವಾಸಿಯೊಂದಿಗೆ ಇದ್ದದರಿಂದ, ನನ್ನ ನಂಬಿಕೆಯ ಕುರಿತು ಮತ್ತು ಯೆಹೋವನ ಕುರಿತು ಅವಳೊಂದಿಗೆ ಬಹಳ ಮಾತನಾಡಿದೆ. ಆ ಸಂಭಾಷಣೆಗಳು ನನ್ನ ನಂಬಿಕೆಯನ್ನು ಬಲವಾಗಿರಿಸಿದವು.”

ತಾತ್ಕಾಲಿಕ ಬಿಡುಗಡೆ

ಸೋವಿಯಟ್‌ ಪಡೆಗಳು ಮೇ 1945ರಲ್ಲಿ ವಾಲ್ಟಿಮ್‌ ಸೆರೆಮನೆಯಲ್ಲಿದ್ದವರೆಲ್ಲರನ್ನೂ ಬಿಡುಗಡೆಮಾಡಿದವು ಮತ್ತು ಫ್ರೀಡ ಮ್ಯಾಜ್‌ಬರ್ಗ್‌ಗೆ ಮತ್ತು ತನ್ನ ಸಾರ್ವಜನಿಕ ಶುಶ್ರೂಷೆಗೆ ಹಿಂದಿರುಗಲು ಸ್ವತಂತ್ರಳಾದಳು. ಆದರೆ ಸ್ವಲ್ಪ ಸಮಯದ ತನಕ ಮಾತ್ರ. ಸಾಕ್ಷಿಗಳು ಪುನಃ ದುರುಪಚಾರಕ್ಕೆ ಗುರಿಯಾದರು, ಆದರೆ ಈ ಸಾರಿ ಸೋವಿಯಟ್‌ ಆಕ್ರಮಿತ ಪ್ರದೇಶದ ಅಧಿಕಾರಿಗಳಿಂದ. ನಿರಂಕುಶವಾದದ ಸಂಶೋಧನಾ ಸಂಘಟನೆಯಾದ ಹಾನ್ನಾರೆಂಟ್‌ನ ಗರಾಲ್ಟ್‌ ಹ್ಯಾಕ್‌ ಬರೆಯುವುದು: “ಜರ್ಮನಿಯ ಎರಡೂ ನಿರಂಕುಶವಾದಿ ಪ್ರಭುತ್ವಗಳಿಂದ ಬಹಳಮಟ್ಟಿಗೆ ಸದಾ ಹಿಂಸೆಗೆ ಗುರಿಯಾದ ಕೆಲವೇ ಸಾಮಾಜಿಕ ಗುಂಪುಗಳಲ್ಲಿ ಯೆಹೋವನ ಸಾಕ್ಷಿಗಳೂ ಸೇರಿದ್ದಾರೆ.”

ಹೊಸದಾಗಿ ಆರಂಭಿಸಲ್ಪಟ್ಟ ಈ ದುರುಪಚಾರವೇಕೆ? ಪುನಃ ಮುಖ್ಯ ಪ್ರಶ್ನೆಯು ಕ್ರೈಸ್ತ ತಾಟಸ್ಥ್ಯವಾಗಿತ್ತು. 1948ರಲ್ಲಿ, ಪೂರ್ವ ಜರ್ಮನಿಯು ಪ್ರಜಾಶಾಸನ ಅಂದರೆ ರಾಜ್ಯದ ಮತದಾರರು ನೇರವಾದ ಮತದಾನ ಮಾಡುವ ಏರ್ಪಾಡನ್ನು ತಂದಿತು ಮತ್ತು ಹ್ಯಾಕ್‌ ವಿವರಿಸುವ ಮೇರೆಗೆ, “[ಯೆಹೋವನ ಸಾಕ್ಷಿಗಳ ಹಿಂಸೆಗೆ] ಮೂಲಭೂತ ಕಾರಣವು, ಅವರು ಆ ಪ್ರಜಾಶಾಸನದಲ್ಲಿ ಭಾಗವಹಿಸದೆ ಇದ್ದದ್ದೇ ಆಗಿತ್ತು.” 1950ರ ಆಗಸ್ಟ್‌ ತಿಂಗಳಿನಲ್ಲಿ ಪೂರ್ವ ಜರ್ಮನಿಯಲ್ಲಿ ಯೆಹೋವನ ಸಾಕ್ಷಿಗಳನ್ನು ನಿಷೇಧಿಸಲಾಯಿತು. ಫ್ರೀಡಳ ಸಹಿತ ನೂರಾರು ಮಂದಿ ಸಾಕ್ಷಿಗಳು ಬಂಧಿಸಲ್ಪಟ್ಟರು.

ಫ್ರೀಡಳು ಪುನಃ ಕೋರ್ಟಿಗೆ ಹಾಜರಾಗಬೇಕಾಯಿತು ಮತ್ತು ಅವಳಿಗೆ ಆರು ವರ್ಷಗಳ ಸೆರೆಮನೆ ಶಿಕ್ಷೆಯು ವಿಧಿಸಲ್ಪಟ್ಟಿತು. “ಈ ಬಾರಿ ನಾನು ಜೊತೆ ವಿಶ್ವಾಸಿಗಳೊಂದಿಗಿದ್ದೆ ಮತ್ತು ಈ ಸಹವಾಸವು ತುಂಬ ಸಹಾಯಕರವಾಗಿತ್ತು.” 1956ರಲ್ಲಿ ಅವಳಿಗೆ ಬಿಡುಗಡೆಯಾದಾಗ, ಅವಳು ಪಶ್ಚಿಮ ಜರ್ಮನಿಗೆ ಸ್ಥಳಾಂತರಿಸಿದಳು. ಈಗ 90 ವರ್ಷ ಪ್ರಾಯದವರಾಗಿರುವ ಫ್ರೀಡ, ಹುಸುಮ್‌ನಲ್ಲಿ ವಾಸಿಸುತ್ತಿದ್ದು, ಸತ್ಯ ದೇವರಾದ ಯೆಹೋವನ ಸೇವೆಯನ್ನು ಇನ್ನೂ ಮಾಡುತ್ತಿದ್ದಾರೆ.

ಫ್ರೀಡ ಎರಡು ನಿರಂಕುಶ ಪ್ರಭುತ್ವಗಳ ಕೆಳಗೆ 23 ವರ್ಷಗಳ ಹಿಂಸೆಯನ್ನು ಅನುಭವಿಸಿದಳು. “ನಾಜಿಗಳು ನನ್ನನ್ನು ಶಾರೀರಿಕವಾಗಿ ಮುಗಿಸಿಬಿಡಲು ಪ್ರಯತ್ನಿಸಿದರು; ಕಮ್ಯೂನಿಸ್ಟರು ನನ್ನ ಸ್ಥೈರ್ಯವನ್ನು ಮುರಿಯಲು ಯತ್ನಿಸಿದರು. ನನಗೆ ಬಲಸಿಕ್ಕಿದ್ದು ಎಲ್ಲಿಂದ? ಸ್ವಾತಂತ್ರ್ಯವಿದ್ದಾಗ ಒಳ್ಳೆಯ ಬೈಬಲಧ್ಯಯನದ ರೂಢಿಗಳು, ಏಕಾಂತವಾಸದಲ್ಲಿದ್ದಾಗ ಎಡೆಬಿಡದ ಪ್ರಾರ್ಥನೆ, ಸಾಧ್ಯವಾದಾಗಲ್ಲೆಲ್ಲಾ ಜೊತೆವಿಶ್ವಾಸಿಗಳ ಸಹವಾಸ, ಮತ್ತು ಸಿಕ್ಕಿರುವ ಪ್ರತಿಯೊಂದು ಸಂದರ್ಭದಲ್ಲಿ ಇತರರೊಂದಿಗೆ ನನ್ನ ನಂಬಿಕೆಯನ್ನು ಹಂಚಿಕೊಳ್ಳುವುದೇ ನನಗೆ ಬಲವನ್ನು ನೀಡಿತು.”

ಹಂಗೆರಿಯಲ್ಲಿ ಸರ್ವಾಧಿಕಾರ ತತ್ವ

ಯೆಹೋವನ ಸಾಕ್ಷಿಗಳು ಅನೇಕ ವರ್ಷಗಳ ವರೆಗೆ ಪಕ್ಷಪಾತವನ್ನು ತಾಳಿಕೊಂಡಿದ್ದ ಇನ್ನೊಂದು ದೇಶವೇ ಹಂಗೆರಿ. ಕೆಲವರು ಎರಡಲ್ಲ ಬದಲಾಗಿ ಮೂರು ನಿರಂಕುಶ ಪ್ರಭುತ್ವಗಳ ಕೈಯಲ್ಲಿ ಹಿಂಸೆಯನ್ನು ತಾಳಿಕೊಂಡಿದ್ದಾರೆ. ಒಂದು ಉದಾಹರಣೆಯು ಆ್ಯಡಮ್‌ ಸಿಂಗರ್‌ ಇವರದ್ದು. ಆ್ಯಡಮ್‌ 1922ರಲ್ಲಿ ಹಂಗೆರಿಯ ಪಾಕ್ಷ್‌ ಪಟ್ಟಣದಲ್ಲಿ ಜನಿಸಿದರು. ಅವರು ಪ್ರಾಟೆಸ್ಟಂಟ್‌ ಧರ್ಮಕ್ಕೆ ಸೇರಿದವರಾಗಿ ಬೆಳೆದರು. 1937ರಲ್ಲಿ ಕೆಲವು ಬೈಬಲ್‌ ವಿದ್ಯಾರ್ಥಿಗಳು ಆ್ಯಡಮ್‌ರ ಮನೆಯನ್ನು ಸಂದರ್ಶಿಸಿದರು, ಮತ್ತು ಆ್ಯಡಮ್‌ ಆ ಕೂಡಲೆ ಅವರ ಸಂದೇಶದಲ್ಲಿ ಆಸಕ್ತಿಯನ್ನು ತೋರಿಸಿದರು. ಅವರು ಬೈಬಲಿನಿಂದ ಏನನ್ನು ಕಲಿತರೊ ಅದು, ತಮ್ಮ ಚರ್ಚ್‌ನ ಬೋಧನೆಗಳು ಬೈಬಲಿಗನುಸಾರ ಇಲ್ಲವೆಂಬದನ್ನು ಅವರಿಗೆ ಮನದಟ್ಟುಮಾಡಿಸಿತು. ಆದುದರಿಂದ ಅವರು ಪ್ರಾಟೆಸ್ಟಂಟ್‌ ಚರ್ಚನ್ನು ಬಿಟ್ಟು, ಬೈಬಲ್‌ ವಿದ್ಯಾರ್ಥಿಗಳ ಬಹಿರಂಗ ಶುಶ್ರೂಷೆಯಲ್ಲಿ ಅವರ ಜೊತೆ ಸೇರಿದರು.

ಸರ್ವಾಧಿಕಾರದ ಪ್ರಭಾವವು ಹಂಗೆರಿಯಲ್ಲಿ ಬೆಳೆಯುತ್ತಾ ಇತ್ತು. ಆ್ಯಡಮ್‌ರು ಮನೆಮನೆಗೆ ಹೋಗಿ ಸಾರುವುದನ್ನು ಪೊಲೀಸರು ಹಲವಾರು ಸಲ ನೋಡಿದ್ದರಿಂದ ಅವರನ್ನು ಹಿಡಿದು ವಿಚಾರಣೆ ಮಾಡಿದರು. ಸಾಕ್ಷಿಗಳ ಮೇಲೆ ಒತ್ತಡವು ಹೆಚ್ಚಾಗುತ್ತಾ ಬಂತು, ಮತ್ತು 1939ರಲ್ಲಿ ಅವರ ಕೆಲಸವು ನಿಷೇಧಿಸಲ್ಪಟ್ಟಿತು. 1942ರಲ್ಲಿ ಆ್ಯಡಮ್‌ರನ್ನು ದಸ್ತಗಿರಿಮಾಡಿ, ಸೆರೆಮನೆಗೆ ಹಾಕಿ, ಸರಿಯಾಗಿ ಹೊಡೆಯಲಾಯಿತು. 19 ವರ್ಷ ಪ್ರಾಯದಲ್ಲಿ ಆ ಕಷ್ಟಾನುಭವವನ್ನು ಮತ್ತು ಅನೇಕ ತಿಂಗಳುಗಳ ಸೆರೆಮನೆಯ ವಾಸವನ್ನು ತಾಳಿಕೊಳ್ಳಲು ಅವರಿಗೆ ನೆರವಾದದ್ದು ಯಾವುದು? “ಇನ್ನೂ ಮನೆಯಲ್ಲಿದ್ದಾಗ ನಾನು ಬೈಬಲನ್ನು ಜಾಗ್ರತೆಯಿಂದ ಅಭ್ಯಾಸ ಮಾಡಿದ್ದೆ. ಅದರಿಂದಾಗಿ ಯೆಹೋವನ ಉದ್ದೇಶಗಳ ಮೂಲಭೂತ ತಿಳುವಳಿಕೆಯು ನನಗೆ ಸಿಕ್ಕಿತು.” ಕೊನೆಯಲ್ಲಿ ಯೆಹೋವನ ಸಾಕ್ಷಿಯಾಗಿ ಅವರಿಗೆ ದೀಕ್ಷಾಸ್ನಾನವಾದದ್ದು, ಸೆರೆಮನೆಯಿಂದ ಬಿಡುಗಡೆಯಾದ ಮೇಲೆಯೇ. 1942ರ ಆಗಸ್ಟ್‌ ತಿಂಗಳಿನಲ್ಲಿ ಅವರ ಮನೆಯ ಸಮೀಪದ ನದಿಯಲ್ಲಿ ಅವರಿಗೆ ದೀಕ್ಷಾಸ್ನಾನವಾಯಿತು, ಅದೂ ಕತ್ತಲೆಯ ಮರೆಯಲ್ಲಿ.

ಹಂಗೆರಿಯಲ್ಲಿ ಜೈಲುವಾಸ, ಸರ್ಬಿಯದಲ್ಲಿ ಕಾರ್ಮಿಕ ಶಿಬಿರ

ಅಷ್ಟರೊಳಗೆ, ಹಂಗೆರಿಯು ಎರಡನೆಯ ಲೋಕ ಯುದ್ಧದ ಸಮಯದಲ್ಲಿ, ಸೋವಿಯೆಟ್‌ ಯೂನಿಯನ್‌ನ ವಿರುದ್ಧವಾಗಿ ಜರ್ಮನಿಯೊಂದಿಗೆ ಕೂಡಿಕೊಂಡಿತು. 1942ರ ಶರತ್ಕಾಲದಲ್ಲಿ ಆ್ಯಡಮ್‌ರನ್ನು ಮಿಲಿಟರಿ ಸೇವೆಗೆ ಆಯ್ಕೆಮಾಡಲಾಯಿತು. ಅವರು ವರದಿಸಿದ್ದು: “ಬೈಬಲಿನಿಂದ ನಾನು ಏನನ್ನು ಕಲಿತಿದ್ದೆನೋ ಅದರ ಕಾರಣದಿಂದಾಗಿ ನಾನು ಮಿಲಿಟರಿಗೆ ಸೇರಲಾರೆ ಎಂದು ನಾನು ಹೇಳಿದೆ. ನನ್ನ ತಟಸ್ಥ ಸ್ಥಾನವನ್ನು ನಾನು ವಿವರಿಸಿ ಹೇಳಿದೆ.” ಅವರಿಗೆ 11 ವರ್ಷಗಳ ಜೈಲುವಾಸ ಸಿಕ್ಕಿತು. ಆದರೆ ಆ್ಯಡಮ್‌ ಹಂಗೆರಿಯಲ್ಲಿ ಬಹಳ ಸಮಯ ಇರಲಿಲ್ಲ.

ಇಸವಿ 1943ರಲ್ಲಿ 160 ಮಂದಿ ಯೆಹೋವನ ಸಾಕ್ಷಿಗಳನ್ನು ಬೇರೆ ಬೇರೆ ವಾಸಸ್ಥಾನಗಳಿಂದ ಒಟ್ಟುಸೇರಿಸಿ, ಅವರನ್ನು ದೋಣಿಗಳಲ್ಲಿ ತುಂಬಿಸಿ, ಡಾನ್ಯೂಬ್‌ ನದಿಯಾಚೆ ಸಾಗಿಸಿ ಸರ್ಬಿಯಕ್ಕೆ ರವಾನಿಸಲಾಯಿತು. ಅವರೊಂದಿಗೆ ಆ್ಯಡಮ್‌ ಕೂಡ ಇದ್ದರು. ಸರ್ಬಿಯದಲ್ಲಿ ಈ ಸೆರೆವಾಸಿಗಳು ಈಗ ಹಿಟ್ಲರನ ಮೂರನೆಯ ಶಾಸನದ ಕೆಳಗಿದ್ದರು. ಬಾರ್‌ನಲ್ಲಿದ್ದ ಕಾರ್ಮಿಕ ಶಿಬಿರದಲ್ಲಿ ಅವರನ್ನು ನಿರ್ಬಂಧಿಸಿ, ಒಂದು ತಾಮ್ರದ ಗಣಿಯಲ್ಲಿ ಕೆಲಸಮಾಡುವಂತೆ ಒತ್ತಾಯಿಸಲಾಯಿತು. ಸುಮಾರು ಒಂದು ವರ್ಷದ ಬಳಿಕ ಅವರನ್ನು ಪುನಃ ಹಂಗೆರಿಗೆ ರವಾನಿಸಲಾಯಿತು. ಅಲ್ಲಿ 1945ರಲ್ಲಿ ಸೋವಿಯಟ್‌ ಪಡೆಗಳಿಂದ ಆ್ಯಡಮ್‌ರಿಗೆ ಬಿಡುಗಡೆಯಾಯಿತು.

ಕಮ್ಯೂನಿಸ್ಟ್‌ ನಿಯಂತ್ರಣದ ಕೆಳಗೆ ಹಂಗೆರಿ

ಆದರೆ ಆ ಸ್ವಾತಂತ್ರ್ಯವು ಹೆಚ್ಚು ಕಾಲ ಬಾಳಲಿಲ್ಲ. 1940ರ ಕೊನೇ ವರ್ಷಗಳಲ್ಲಿ ಹಂಗೆರಿಯ ಕಮ್ಯೂನಿಸ್ಟ್‌ ಅಧಿಕಾರಿಗಳು, ಯುದ್ಧಕ್ಕೆ ಮುಂಚೆ ಸರ್ವಾಧಿಕಾರಿಗಳು ಮಾಡಿದಂತೆಯೇ ಯೆಹೋವನ ಸಾಕ್ಷಿಗಳ ಕಾರ್ಯಕ್ಕೆ ನಿರ್ಬಂಧವನ್ನು ಹಾಕಿದರು. 1952ರಲ್ಲಿ, ಈಗ 29 ವರುಷ ಪ್ರಾಯದವರೂ ಮದುವೆಯಾಗಿ ಇಬ್ಬರು ಮಕ್ಕಳಿದ್ದವರೂ ಆಗಿದ್ದ ಆ್ಯಡಮ್‌ರು ಪುನಃ ಮಿಲಿಟರಿ ಸೇವೆಯನ್ನು ನಿರಾಕರಿಸಿದಾಗ, ಅವರನ್ನು ದಸ್ತಗಿರಿ ಮಾಡಿ ಅವರ ಮೇಲೆ ಅಪರಾಧದ ಆರೋಪವನ್ನು ಹೊರಿಸಲಾಯಿತು. ಆ್ಯಡಮ್‌ ಕೊರ್ಟಿನಲ್ಲಿ ವಿವರಿಸುತ್ತಾ ಅಂದದ್ದು: “ನಾನು ಮಿಲಿಟರಿ ಸೇವೆಯನ್ನು ನಿರಾಕರಿಸಿದ್ದು ಇದು ಮೊದಲ ಸಾರಿಯಲ್ಲ. ಯುದ್ಧದ ಸಮಯದಲ್ಲಿ ನಾನು ಇದೇ ಕಾರಣಕ್ಕಾಗಿ ಸೆರೆಮನೆಗೆ ಹೋಗಿ, ಸರ್ಬಿಯಕ್ಕೆ ಗಡೀಪಾರು ಮಾಡಲ್ಪಟ್ಟೆ. ನಾನು ಮಿಲಿಟರಿಗೆ ಸೇರಲು ನಿರಾಕರಿಸುವುದು ನನ್ನ ಮನಸ್ಸಾಕ್ಷಿಯ ಕಾರಣಕ್ಕಾಗಿ. ನಾನೊಬ್ಬ ಯೆಹೋವನ ಸಾಕ್ಷಿ, ಮತ್ತು ರಾಜಕೀಯ ವಿಷಯಗಳಲ್ಲಿ ನಾನು ತಟಸ್ಥನು.” ಆ್ಯಡಮ್‌ರಿಗೆ ಎಂಟು ವರ್ಷಗಳ ಸೆರೆಮನೆ ಶಿಕ್ಷೆಯಾಯಿತು, ಮತ್ತು ಬಳಿಕ ಅದನ್ನು ನಾಲ್ಕು ವರ್ಷಕ್ಕೆ ಇಳಿಸಲಾಯಿತು.

ಆ್ಯಡಮ್‌ 1970ರ ದಶಕದ ಮಧ್ಯಭಾಗದ ತನಕ ದುರುಪಚಾರವನ್ನು ಅನುಭವಿಸುತ್ತಾ ಹೋದರು. ಅವರ ಹೆತ್ತವರ ಮನೆಗೆ ಬೈಬಲ್‌ ವಿದ್ಯಾರ್ಥಿಗಳು ಮೊದಲ ಸಾರಿ ಭೇಟಿಮಾಡಿ ಈಗ 35ಕ್ಕೂ ಹೆಚ್ಚು ವರ್ಷಗಳು ದಾಟಿದ್ದವು. ಈ ಸಮಯದಲ್ಲೆಲ್ಲಾ ಅವರಿಗೆ ಆರು ಕೋರ್ಟ್‌ಗಳಿಂದ 23 ವರ್ಷಗಳ ಶಿಕ್ಷೆಯು ವಿಧಿಸಲ್ಪಟ್ಟು, ಕಡಿಮೆಪಕ್ಷ ಹತ್ತು ಸೆರೆಮನೆ ಮತ್ತು ಶಿಬಿರಗಳಲ್ಲಿ ಬಂಧನವನ್ನು ಅನುಭವಿಸಿದರು. ಅವರು ಮೂರು ಪ್ರಭುತ್ವಗಳ ಕೆಳಗೆ ಸತತವಾದ ಹಿಂಸೆಯನ್ನು ತಾಳಿಕೊಂಡರು​—ಯುದ್ಧಕ್ಕೆ ಮುಂಚಿನ ಹಂಗೆರಿಯ ಸರ್ವಾಧಿಕಾರದಲ್ಲಿ, ಸರ್ಬಿಯದ ಜರ್ಮನ್‌ ರಾಷ್ಟ್ರೀಯ ಸಮಾಜವಾದದಲ್ಲಿ ಮತ್ತು ಶೀತಲಯುದ್ಧದ ಸಮಯದಲ್ಲಿ ಹಂಗೆರಿಯ ಕಮ್ಯೂನಿಸ್ಟರ ಕೈಯಲ್ಲಿ.

ಆ್ಯಡಮ್‌ ಈಗಲೂ ನಿಷ್ಠೆಯಿಂದ ದೇವರ ಸೇವೆ ಮಾಡುತ್ತಾ ತಮ್ಮ ಹುಟ್ಟೂರಾದ ಪಾಕ್ಷ್‌ ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. ಆ ಕಷ್ಟಗಳನ್ನು ಅಷ್ಟು ವಿಜಯೋತ್ಸಾಹದಿಂದ ತಾಳಿಕೊಳ್ಳಲು ಸಾಧ್ಯಮಾಡಿದ ಅಸಾಮಾನ್ಯ ಸಾಮರ್ಥ್ಯಗಳು ಅವರಲ್ಲಿವೆಯೊ? ಇಲ್ಲ. ಅವರು ವಿವರಿಸುವುದು:

“ಬೈಬಲ್‌ ಅಧ್ಯಯನ, ಪ್ರಾರ್ಥನೆ ಮತ್ತು ಜೊತೆ ವಿಶ್ವಾಸಿಗಳೊಂದಿಗಿನ ಸಹವಾಸಗಳು ಅತ್ಯಾವಶ್ಯಕವಾಗಿದ್ದವು. ಆದರೆ ನಾನು ಇನ್ನೂ ಎರಡು ವಿಷಯಗಳನ್ನು ಎತ್ತಿಹೇಳಲು ಬಯಸುತ್ತೇನೆ. ಮೊದಲನೆಯದು, ಯೆಹೋವನು ಶಕ್ತಿಯ ಮೂಲನು. ಆತನೊಂದಿಗಿನ ಆಪ್ತ ಸಂಬಂಧವೇ ನನ್ನ ಜೀವಾಳವಾಗಿತ್ತು. ಎರಡನೆಯದು, ರೋಮಾಪುರ 12ನೆಯ ಅಧ್ಯಾಯವನ್ನು ನಾನು ಮನಸ್ಸಿನಲ್ಲಿಟ್ಟೆ. ‘ಮುಯ್ಯಿಗೆ ಮುಯ್ಯಿ ತೀರಿಸಬೇಡ’ ಎಂದು ಅದು ಹೇಳುತ್ತದೆ. ಆದುದರಿಂದ ನಾನು ಯಾರ ವಿರುದ್ಧವೂ ಹಗೆಸಾಧಿಸಲಿಲ್ಲ. ನನ್ನನ್ನು ಹಿಂಸಿಸಿದವರಿಗೆ ಪ್ರತೀಕಾರಮಾಡುವ ಸಂದರ್ಭಗಳು ಅನೇಕವಿದ್ದವು, ಆದರೆ ನಾನು ಪ್ರತೀಕಾರ ಸಲ್ಲಿಸಲಿಲ್ಲ. ಯೆಹೋವನು ನಮಗೆ ಕೊಡುವ ಶಕ್ತಿಯನ್ನು, ಕೆಡುಕಿಗೆ ಪ್ರತಿಯಾಗಿ ಕೆಡುಕನ್ನು ಮಾಡಲು ನಾವು ಉಪಯೋಗಿಸಬಾರದು.”

ಎಲ್ಲಾ ಹಿಂಸೆಯ ಅಂತ್ಯ

ಫ್ರೀಡ ಮತ್ತು ಆ್ಯಡಮ್‌ ಈಗ ಯೆಹೋವನನ್ನು ಯಾವುದೇ ಅಡ್ಡಿಯಿಲ್ಲದೆ ಸೇವಿಸಲು ಶಕ್ತರಾಗಿದ್ದಾರೆ. ಆದರೂ ಅವರಿಗಾದ ಅನುಭವಗಳು ಧಾರ್ಮಿಕ ಹಿಂಸೆಯ ಕುರಿತು ಏನನ್ನು ಪ್ರಕಟಿಸುತ್ತವೆ? ಏನಂದರೆ, ಅಂಥ ಹಿಂಸೆಯು ಸಫಲವಾಗದು​—ಕಡಿಮೆಪಕ್ಷ ನಿಜ ಕ್ರೈಸ್ತರು ಅದರ ಗುರಿಯಾಗಿರುವಾಗ. ಯೆಹೋವನ ಸಾಕ್ಷಿಗಳನ್ನು ಹಿಂಸಿಸಲು ಬಹಳಷ್ಟು ಸಂಪನ್ಮೂಲಗಳು ವ್ಯಯವಾದರೂ ಮತ್ತು ಅದು ಕ್ರೂರ ಕಷ್ಟಾನುಭವವನ್ನು ಉಂಟುಮಾಡಿದರೂ, ಅದರ ಉದ್ದೇಶವು ಸಾಫಲ್ಯವನ್ನು ಪಡೆಯಲಿಲ್ಲ. ಎಲ್ಲಿ ಆ ಎರಡು ಮಹಾ ಸರ್ವಾಧಿಕಾರಿ ಪ್ರಭುತ್ವಗಳು ದಬ್ಬಾಳಿಕೆ ನಡಿಸುತ್ತಿದ್ದವೊ ಆ ಯುರೋಪಿನಲ್ಲಿ, ಯೆಹೋವನ ಸಾಕ್ಷಿಗಳು ಇಂದು ತುಂಬ ಏಳಿಗೆ ಹೊಂದುತ್ತಿದ್ದಾರೆ.

ಹಿಂಸೆಗೆ ಯೆಹೋವನ ಸಾಕ್ಷಿಗಳು ಹೇಗೆ ಪ್ರತಿವರ್ತನೆ ತೋರಿಸಿದರು? ಫ್ರೀಡ ಮತ್ತು ಆ್ಯಡಮ್‌ರ ವೃತ್ತಾಂತಗಳು ತೋರಿಸುವ ಪ್ರಕಾರ, ಅವರು ಬೈಬಲ್‌ ಸಲಹೆಯನ್ನು ಅನ್ವಯಿಸಿದರು: “ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.” (ರೋಮಾಪುರ 12:21) ಒಳ್ಳೇತನವು ಕೆಟ್ಟತನವನ್ನು ನಿಜವಾಗಿ ಜಯಿಸಬಲ್ಲದೊ? ಹೌದು, ಜಯಿಸಬಲ್ಲದು. ದೇವರಲ್ಲಿ ಬಲವಾದ ನಂಬಿಕೆಯಿಂದ ಅದು ಹೊರಹೊಮ್ಮುವಾಗ ಇದು ನಿಜ. ಯೂರೋಪಿನಲ್ಲಿ ಯೆಹೋವನ ಸಾಕ್ಷಿಗಳು ಹಿಂಸೆಯನ್ನು ಜಯಿಸಿದ್ದು ದೇವರಾತ್ಮದ ವಿಜಯವೂ, ಕೆಟ್ಟತನದ ಎದುರಿನಲ್ಲೂ ಒಳ್ಳೇದನ್ನು ಮಾಡುವುದರ ಶಕ್ತಿಯ ಪ್ರದರ್ಶನವೂ ಅಗಿತ್ತು. ಮತ್ತು ಈ ರೀತಿಯಲ್ಲಿ ಒಳಿತನ್ನು ಮಾಡುವುದು, ಪವಿತ್ರಾತ್ಮವು ದೀನ ಕ್ರೈಸ್ತರಲ್ಲಿ ಉತ್ಪಾದಿಸುವ ನಂಬಿಕೆಯಿಂದಾಗಿ ಫಲಿಸುತ್ತದೆ. (ಗಲಾತ್ಯ 5:​22, 23) ಇಂದಿನ ಹಿಂಸಾತ್ಮಕ ಲೋಕದಲ್ಲಿ, ನಾವೆಲ್ಲರೂ ಗಂಭೀರವಾಗಿ ಹೃದಯಕ್ಕೆ ತೆಗೆದುಕೊಳ್ಳಬಹುದಾದ ಒಂದು ಪಾಠವು ಅದಾಗಿದೆ.

[ಪುಟ 5ರಲ್ಲಿರುವ ಚಿತ್ರಗಳು]

ಫ್ರೀಡ ಯೆಸ್‌ (ಈಗ ಥೀಲೀ) ಕೈದುಮಾಡಲ್ಪಟ್ಟಾಗ ಮತ್ತು ಈಗ

[ಪುಟ 7ರಲ್ಲಿರುವ ಚಿತ್ರಗಳು]

ಆ್ಯಡಮ್‌ ಸಿಂಗರ್‌, ಅವರ ಸೆರೆವಾಸದ ಸಮಯದಲ್ಲಿ ಮತ್ತು ಈಗ