ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಂದು ಮತ್ತು ಇಂದು ಅವಳ ಜೀವಿತವು ಸಂಪೂರ್ಣವಾಗಿ ಬದಲಾಯಿತು

ಅಂದು ಮತ್ತು ಇಂದು ಅವಳ ಜೀವಿತವು ಸಂಪೂರ್ಣವಾಗಿ ಬದಲಾಯಿತು

“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು”

ಅಂದು ಮತ್ತು ಇಂದು ಅವಳ ಜೀವಿತವು ಸಂಪೂರ್ಣವಾಗಿ ಬದಲಾಯಿತು

ಮಾತ್ಸೆಪಾಂಗ್‌ಳಿಗೆ ಜೀವಿತವು ಎಷ್ಟು ಅಸಂತೋಷಕರವೂ ಅರ್ಥಹೀನವೂ ಆಗಿ ಪರಿಣಮಿಸಿತ್ತು! ಅವಳು ದಕ್ಷಿಣ ಆಫ್ರಿಕದ ಲಸೋಟೋ ಎಂಬ ಪಟ್ಟಣದಲ್ಲಿ ವಾಸಿಸುತ್ತಿದ್ದ ಒಬ್ಬ ಹುಡುಗಿಯಾಗಿದ್ದಳು. ಮಾತ್ಸೆಪಾಂಗ್‌ ಕ್ಯಾಥೊಲಿಕ್‌ ಧರ್ಮದಲ್ಲಿ ಬೆಳೆಸಲ್ಪಟ್ಟಿದ್ದಳು. ಆದರೂ, ದೇವರ ಸಮೀಪಕ್ಕೆ ಬರಲು ಸಹಾಯಮಾಡಲ್ಪಡುವುದಕ್ಕೆ ಬದಲಾಗಿ, ಅನೇಕ ವರ್ಷಗಳಿಂದ ಅವಳು ಸಂನ್ಯಾಸಿನಿಯರಿಂದ ನೈತಿಕವಾಗಿ ದುರುಪಚರಿಸಲ್ಪಟ್ಟಿದ್ದಳು. ಅವಳು ಅನೈತಿಕ ಕೃತ್ಯಗಳಲ್ಲಿ ಒಳಗೂಡುವಂತೆ ಮಾಡಲಿಕ್ಕಾಗಿ ಅವರು ಹಣವನ್ನು ಲಂಚವಾಗಿ ಉಪಯೋಗಿಸುತ್ತಿದ್ದರು.

ಇದರ ಫಲಿತಾಂಶವಾಗಿ, ಮಾತ್ಸೆಪಾಂಗ್‌ ಧರ್ಮದ ವಿಷಯದಲ್ಲಿ ಆಶಾಭಂಗಗೊಂಡಳು ಮತ್ತು ತನ್ನ ಮಾನವ ಸೃಷ್ಟಿಗಾಗಿ ನಿಜವಾಗಿಯೂ ಕಾಳಜಿಯನ್ನು ತೋರಿಸುವಂಥ ಒಬ್ಬ ಪ್ರೀತಿಯ ಸೃಷ್ಟಿಕರ್ತನಲ್ಲಿ ನಂಬಿಕೆಯಿಡಲು ಅಶಕ್ತಳಾದಳು. ತಾನು ಅನುಭವಿಸಿದ ನಿರ್ಲಕ್ಷ್ಯ ಹಾಗೂ ದುರುಪಚಾರದ ಕಾರಣದಿಂದ, ಮಾತ್ಸೆಪಾಂಗ್‌ಳ ಮನಸ್ಸಿನಲ್ಲಿ ಆಳವಾದ ಭಾವನಾತ್ಮಕ ಕಲೆಗಳು ಮತ್ತು ಸಂಪೂರ್ಣವಾಗಿ ಅನರ್ಹಳೆಂಬ ಅನಿಸಿಕೆಗಳು ಇದ್ದವು. ಅವಳು ಬೆಳೆಯುತ್ತಾ ಬಂದಂತೆ ತುಂಬ ಹಿಂಸಾತ್ಮಕ ಪ್ರವೃತ್ತಿಯವಳಾದಳು ಮತ್ತು ಆಕ್ರಮಣಶೀಲಳಾಗಿದ್ದಳು. ಇದು ಅವಳನ್ನು ಅಪರಾಧಿ ನಡವಳಿಕೆಗೆ ಮುನ್ನಡಿಸಿತು.

ಕಾಲಕ್ರಮೇಣ ಮಾತ್ಸೆಪಾಂಗ್‌ ಟ್ರೈನ್‌ಗಳಲ್ಲಿ ಜನರನ್ನು ಲೂಟಿಮಾಡುತ್ತಿದ್ದ ಒಂದು ಗ್ಯಾಂಗಿನ ಸದಸ್ಯಳಾಗಿ ಪರಿಣಮಿಸಿದಳು. ಅವಳನ್ನು ಬಂಧಿಸಿ, ದಕ್ಷಿಣ ಆಫ್ರಿಕದ ಸೆರೆಮನೆಯ ಶಿಕ್ಷೆಯನ್ನು ವಿಧಿಸಲಾಯಿತು. ಸಮಯಾನಂತರ ಅವಳು ತನ್ನ ಸ್ವಂತ ಸ್ಥಳವಾಗಿದ್ದ ಲಸೋಟೋಗೆ ಗಡೀಪಾರುಮಾಡಲ್ಪಟ್ಟಳು, ಮತ್ತು ಅಲ್ಲಿ ಅವಳು ದುಷ್ಕೃತ್ಯ, ಕುಡಿಕತನ, ಹಿಂಸಾಚಾರ, ಮತ್ತು ಅನೈತಿಕತೆಯ ಜೀವನವನ್ನು ಮುಂದುವರಿಸಿದಳು.

ತನ್ನ ಜೀವಿತದ ತೀರ ಹೀನ ಸ್ಥಿತಿಯಲ್ಲಿದ್ದಾಗ, ಹತಾಶೆಯಿಂದ ಮಾತ್ಸೆಪಾಂಗ್‌ ಸಹಾಯಕ್ಕಾಗಿ ದೇವರ ಬಳಿ ಬೇಡಿಕೊಂಡಳು. “ದೇವರೇ, ನಾನು ಬದುಕಿ ಉಳಿದರೆ, ನಿನ್ನ ಸೇವೆಮಾಡಲಿಕ್ಕಾಗಿ ನನ್ನಿಂದಾದುದೆಲ್ಲವನ್ನೂ ಮಾಡುವೆ” ಎಂದು ಅವಳು ಮಾತುಕೊಟ್ಟಳು.

ಸ್ವಲ್ಪದರಲ್ಲೇ, ಯೆಹೋವನ ಸಾಕ್ಷಿಗಳಾಗಿದ್ದ ಮಿಷನೆರಿಗಳು ಮಾತ್ಸೆಪಾಂಗ್‌ಳನ್ನು ಭೇಟಿಯಾದರು. ಅವರು ಅವಳೊಂದಿಗೆ ಬೈಬಲ್‌ ಅಭ್ಯಾಸವನ್ನು ನಡೆಸುವ ಪ್ರಸ್ತಾಪಮಾಡಿದರು. ತನ್ನ ಅಧ್ಯಯನದ ಮೂಲಕ ಅವಳು ದೇವರು ನಿರ್ಲಕ್ಷ್ಯ ಹಾಗೂ ತಾತ್ಸಾರ ಮನೋಭಾವದವನಾಗಿಲ್ಲ ಎಂಬುದನ್ನು ಮನಗಂಡಳು. ವಾಸ್ತವದಲ್ಲಿ, “ಸುಳ್ಳಿಗೆ ಮೂಲಪುರುಷ”ನಾಗಿರುವ ಸೈತಾನನು, ತಾವು ಅಯೋಗ್ಯರು ಎಂಬ ಅನಿಸಿಕೆಯನ್ನು ಕೆಲವರಲ್ಲಿ ಉಂಟುಮಾಡಲಿಕ್ಕಾಗಿ ಮತ್ತು ಯೆಹೋವನು ಎಂದಿಗೂ ಅವರನ್ನು ಪ್ರೀತಿಗೆ ಅರ್ಹರನ್ನಾಗಿ ಪರಿಗಣಿಸಸಾಧ್ಯವಿಲ್ಲ ಎಂಬುದನ್ನು ನಂಬುವಂತೆ ಮಾಡಲಿಕ್ಕಾಗಿ, ಕುಟಿಲ ಕೃತ್ಯಗಳನ್ನು ಮತ್ತು ವಂಚನಾತ್ಮಕ ತಂತ್ರೋಪಾಯಗಳನ್ನು ಉಪಯೋಗಿಸುತ್ತಾನೆ ಎಂಬುದನ್ನು ಅವಳು ಅರಿತುಕೊಂಡಳು.​—ಯೋಹಾನ 8:44; ಎಫೆಸ 6:11.

ಇದಕ್ಕೆ ಬದಲಾಗಿ, ನಮ್ಮ ಪಾಪಪೂರ್ಣ ಗತ ಬದುಕಿನ ಬಗ್ಗೆ ನಾವು ಪಶ್ಚಾತ್ತಾಪಪಟ್ಟು, ದೇವರ ಕ್ಷಮಾಪಣೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿ, ಆತನನ್ನು ಸಂತೋಷಪಡಿಸಲು ಶ್ರಮಿಸುವಲ್ಲಿ, ಸ್ವಸ್ಥಕರವಾದ ಸ್ವಗೌರವವನ್ನು ನಾವು ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ಮಾತ್ಸೆಪಾಂಗ್‌ ತಿಳಿದುಕೊಂಡಾಗ ಅವಳೆಷ್ಟು ಸಾಂತ್ವನವನ್ನು ಪಡೆದುಕೊಂಡಳು! “ದೇವರು ನಮ್ಮ ಹೃದಯಕ್ಕಿಂತ ದೊಡ್ಡ”ವನಾಗಿದ್ದಾನೆ ಮತ್ತು ಸ್ವತಃ ನಮ್ಮನ್ನು ನಾವು ಪರಿಗಣಿಸಿಕೊಳ್ಳುವುದಕ್ಕಿಂತಲೂ ಭಿನ್ನವಾದ ರೀತಿಯಲ್ಲಿ ಆತನು ನಮ್ಮನ್ನು ವೀಕ್ಷಿಸುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಅವಳಿಗೆ ಸಹಾಯಮಾಡಲಾಯಿತು.​—1 ಯೋಹಾನ 3:​19, 20.

ಕೀರ್ತನೆಗಾರನಾದ ದಾವೀದನ ಈ ಮಾತುಗಳನ್ನು ಓದಿ ಮಾತ್ಸೆಪಾಂಗ್‌ ಪುಳಕಿತಳಾದಳು: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ. ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.” (ಕೀರ್ತನೆ 34:18) “ಕುಗ್ಗಿಹೋದ” ಜನರಲ್ಲಿ ಒಬ್ಬಳಾಗಿದ್ದ ಇವಳು, ತನ್ನ ಸೇವಕರಲ್ಲಿ ಕೆಲವರು ಖಿನ್ನರಾದರೂ ಅಥವಾ ತಾವು ಅಮುಖ್ಯರು ಎಂಬ ಅನಿಸಿಕೆಗೆ ಒಳಗಾದರೂ, ಯೆಹೋವನು ಅವರನ್ನು ಎಂದಿಗೂ ತೊರೆಯುವುದಿಲ್ಲ ಎಂಬುದನ್ನು ಗ್ರಹಿಸಿದಳು. ತನ್ನೆಲ್ಲಾ ಕುರಿಗಳನ್ನು ದೇವರು ಪರಾಮರಿಸುತ್ತಾನೆ ಹಾಗೂ ಕಷ್ಟದ ಸಮಯದಲ್ಲಿ ಅವುಗಳನ್ನು ಪೋಷಿಸುತ್ತಾನೆ ಎಂಬುದನ್ನು ತಿಳಿದು ಅವಳ ಮನಸ್ಸಿಗೆ ಸಂತೋಷವಾಯಿತು. (ಕೀರ್ತನೆ 55:22; 1 ಪೇತ್ರ 5:​6, 7) ವಿಶೇಷವಾಗಿ ಅವಳು ಈ ಮಾತುಗಳಿಂದ ಪ್ರಚೋದಿತಳಾದಳು: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”​—ಯಾಕೋಬ 4:8.

ದೇವರ ವಾಕ್ಯವಾದ ಬೈಬಲಿನ ಶಕ್ತಿಯು ಮಾತ್ಸೆಪಾಂಗ್‌ಳ ಜೀವನದಲ್ಲಿ ಅತಿ ಬೇಗನೆ ಸುವ್ಯಕ್ತವಾಯಿತು. ಅವಳು ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗತೊಡಗಿದಳು ಮತ್ತು ತನ್ನ ಅಶಾಸ್ತ್ರೀಯ ರೂಢಿಗಳನ್ನು ಬಿಟ್ಟುಬಿಟ್ಟಳು. ಫಲಿತಾಂಶವೇನು? ದೇವರ ಪ್ರೀತಿ ಹಾಗೂ ಅನುಗ್ರಹವನ್ನು ಪಡೆಯಲು ತಾನು ಅನರ್ಹಳೆಂದು ಈಗ ಅವಳಿಗೆ ಅನಿಸುವುದಿಲ್ಲ. ಯೆಹೋವನ ಸಾಕ್ಷಿಯೋಪಾದಿ ಅವಳ ದೀಕ್ಷಾಸ್ನಾನವಾದಂದಿನಿಂದ, ರಾಜ್ಯದ ಸುವಾರ್ತೆಯ ಒಬ್ಬ ಘೋಷಕಳೋಪಾದಿ ಕ್ರೈಸ್ತ ಶುಶ್ರೂಷೆಯಲ್ಲಿ ಅವಳು ಸಾವಿರಾರು ತಾಸುಗಳನ್ನು ವ್ಯಯಿಸಿದ್ದಾಳೆ. ಗತ ಸಮಯದ ಭಾವನಾತ್ಮಕ ಕಲೆಗಳ ಹೊರತಾಗಿಯೂ, ಮಾತ್ಸೆಪಾಂಗ್‌ ಈಗ ಒಂದು ಸಂತೋಷಭರಿತ ಹಾಗೂ ಅರ್ಥಭರಿತವಾದ ಜೀವನವನ್ನು ನಡೆಸುತ್ತಿದ್ದಾಳೆ. ಜೀವನವನ್ನು ಉತ್ತಮಗೊಳಿಸಲು ಬೈಬಲಿಗಿರುವ ಶಕ್ತಿಯ ವಿಷಯದಲ್ಲಿ ಎಂಥ ನಿದರ್ಶನವಿದು!​—ಇಬ್ರಿಯ 4:12.

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

“ದೇವರೇ, ನಾನು ಬದುಕಿ ಉಳಿದರೆ, ನಿನ್ನ ಸೇವೆಮಾಡಲಿಕ್ಕಾಗಿ ನನ್ನಿಂದಾದುದೆಲ್ಲವನ್ನೂ ಮಾಡುವೆ”

[ಪುಟ 9ರಲ್ಲಿರುವ ಚೌಕ]

ಕಾರ್ಯಸಾಧಕ ಬೈಬಲ್‌ ಮೂಲತತ್ತ್ವಗಳು

ದುರುಪಚಾರಕ್ಕೆ ಒಳಗಾಗಿರುವ ವ್ಯಕ್ತಿಗಳಿಗೆ ಸಾಂತ್ವನ ನೀಡಿರುವಂಥ ಬೈಬಲ್‌ ಮೂಲತತ್ತ್ವಗಳಲ್ಲಿ ಈ ಕೆಳಗಿನವು ಒಳಗೂಡಿವೆ:

“ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ [ದೇವರ] ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.” (ಕೀರ್ತನೆ 94:19) ಆತನ ವಾಕ್ಯದಲ್ಲಿ ಕಂಡುಬರುವ ಯೆಹೋವನ “ಸಂತೈಸುವಿಕೆ”ಗಳು, ಅತ್ಯಧಿಕ ಸಾಂತ್ವನದ ಮೂಲವಾಗಿವೆ. ಮನನ ಮಾಡುವಿಕೆ ಹಾಗೂ ಪ್ರಾರ್ಥನೆಯ ಸಮಯದಲ್ಲಿ ಇವುಗಳನ್ನು ಪರಿಗಣಿಸುವುದು, ಕಳವಳವನ್ನುಂಟುಮಾಡುವಂಥ ಆಲೋಚನೆಗಳನ್ನು ನಿಗ್ರಹಿಸಲು ಸಹಾಯಮಾಡುತ್ತದೆ ಮತ್ತು ಅರ್ಥಮಾಡಿಕೊಳ್ಳುವಂಥ ಒಬ್ಬ ಸ್ನೇಹಿತನೋಪಾದಿ ದೇವರಲ್ಲಿ ಭರವಸೆಯನ್ನು ಮೂಡಿಸುತ್ತದೆ.

“ಮುರಿದ ಮನಸ್ಸುಳ್ಳವರನ್ನು [ಯೆಹೋವನು] ವಾಸಿಮಾಡುತ್ತಾನೆ; ಅವರ ಗಾಯಗಳನ್ನು ಕಟ್ಟುತ್ತಾನೆ.” (ಕೀರ್ತನೆ 147:3) ಯೆಹೋವನು ತೋರಿಸಿರುವ ಕರುಣೆ ಮತ್ತು ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಮೂಲಕ ನಮ್ಮ ಪಾಪಗಳನ್ನು ಕ್ಷಮಿಸಲಿಕ್ಕಾಗಿ ಆತನು ಮಾಡಿರುವ ಒದಗಿಸುವಿಕೆಯನ್ನು ನಾವು ಗಣ್ಯಮಾಡುವುದಾದರೆ, ಹೃದಯದಲ್ಲಿ ಇನ್ನೂ ಹೆಚ್ಚಿನ ಖಂಡನೆಯನ್ನು ಅನುಭವಿಸದೆ ನಾವು ದೃಢಭರವಸೆಯಿಂದ ದೇವರನ್ನು ಸಮೀಪಿಸಬಲ್ಲೆವು. ಇದು ಅಪೂರ್ವವಾದ ಸಾಂತ್ವನ ಹಾಗೂ ಮನಶ್ಶಾಂತಿಯನ್ನು ತರಬಲ್ಲದು.

“ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ [ಯೇಸು ಕ್ರಿಸ್ತನ] ಬಳಿಗೆ ಬರಲಾರನು; ಮತ್ತು ನಾನು ಅವನನ್ನು ಕಡೇದಿನದಲ್ಲಿ ಎಬ್ಬಿಸುವೆನು.” (ಯೋಹಾನ 6:44) ತನ್ನ ಪವಿತ್ರಾತ್ಮ ಹಾಗೂ ರಾಜ್ಯ ಸಾರುವಿಕೆಯ ಕೆಲಸದ ಮೂಲಕ ಯೆಹೋವನು ವೈಯಕ್ತಿಕವಾಗಿ ನಮ್ಮನ್ನು ತನ್ನ ಪುತ್ರನ ಕಡೆಗೆ ಸೆಳೆಯುತ್ತಾನೆ ಮತ್ತು ನಮಗೆ ನಿತ್ಯಜೀವದ ನಿರೀಕ್ಷೆಯನ್ನು ನೀಡುತ್ತಾನೆ.