ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆದಿ ಕ್ರೈಸ್ತರು ಮತ್ತು ಮೋಶೆಯ ಧರ್ಮಶಾಸ್ತ್ರ

ಆದಿ ಕ್ರೈಸ್ತರು ಮತ್ತು ಮೋಶೆಯ ಧರ್ಮಶಾಸ್ತ್ರ

ಆದಿ ಕ್ರೈಸ್ತರು ಮತ್ತು ಮೋಶೆಯ ಧರ್ಮಶಾಸ್ತ್ರ

“ಧರ್ಮಶಾಸ್ತ್ರವು ನಮ್ಮನ್ನು ಕಾಯುವ ಆಳಿನಂತಾಗಿ . . . ಕ್ರಿಸ್ತನಲ್ಲಿಗೆ ಸೇರುವ ತನಕ ಅದು ನಮ್ಮನ್ನು ಕಾಯುತ್ತದೆ.”​—ಗಲಾತ್ಯ 3:24.

1, 2. ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾದ ಇಸ್ರಾಯೇಲ್ಯರಿಗೆ ಸಿಕ್ಕಿದಂಥ ಕೆಲವು ಪ್ರಯೋಜನಗಳಾವವು?

ಯೆಹೋವನು ಸಾ.ಶ.ಪೂ. 1513ರಲ್ಲಿ ಇಸ್ರಾಯೇಲ್ಯರಿಗೆ ಒಂದು ನಿಯಮ ವ್ಯವಸ್ಥೆಯನ್ನು ಕೊಟ್ಟನು. ಅವರು ತನ್ನ ಮಾತಿಗೆ ವಿಧೇಯರಾಗುವಲ್ಲಿ, ಅವರನ್ನು ಆಶೀರ್ವದಿಸುವೆನೆಂದೂ, ಅವರು ಸಂತೋಷಕರ, ಸಂತೃಪ್ತಿದಾಯಕ ಜೀವನಗಳನ್ನು ಅನುಭವಿಸುವರೆಂದೂ ಆತನು ಹೇಳಿದನು.​—ವಿಮೋಚನಕಾಂಡ 19:​5, 6.

2 ಮೋಶೆಯ ಧರ್ಮಶಾಸ್ತ್ರ ಇಲ್ಲವೆ ಕೇವಲ “ಧರ್ಮಶಾಸ್ತ್ರ” ಎಂದು ಕರೆಯಲ್ಪಟ್ಟ ಆ ನಿಯಮಾವಳಿಯು, “ಪರಿಶುದ್ಧವೂ ನ್ಯಾಯವೂ ಹಿತವೂ” ಆಗಿತ್ತು. (ರೋಮಾಪುರ 7:12) ಅದು ದಯೆ, ಪ್ರಾಮಾಣಿಕತೆ, ನೈತಿಕತೆ ಮತ್ತು ನೆರೆಹೊರೆ ಭಾವದಂಥ ಸದ್ಗುಣಗಳಿಗೆ ಇಂಬುಕೊಟ್ಟಿತು. (ವಿಮೋಚನಕಾಂಡ 23:​4, 5; ಯಾಜಕಕಾಂಡ 19:14; ಧರ್ಮೋಪದೇಶಕಾಂಡ 15:13-​15; 22:​10, 22) ಯೆಹೂದ್ಯರು ಪರಸ್ಪರರನ್ನು ಪ್ರೀತಿಸುವಂತೆಯೂ ಧರ್ಮಶಾಸ್ತ್ರವು ಪ್ರೇರೇಪಿಸಿತು. (ಯಾಜಕಕಾಂಡ 19:18) ಅಷ್ಟುಮಾತ್ರವಲ್ಲದೆ, ಅವರು ಧರ್ಮಶಾಸ್ತ್ರಕ್ಕೆ ಅಧೀನರಾಗಿರದಿದ್ದ ಅನ್ಯಜನರೊಂದಿಗೆ ಬೆರೆಯಲೂ ಬಾರದಿತ್ತು ಅಥವಾ ಅವರೊಳಗಿಂದ ಹೆಂಡತಿಯರನ್ನು ತೆಗೆದುಕೊಳ್ಳಲೂ ಬಾರದಿತ್ತು. (ಧರ್ಮೋಪದೇಶಕಾಂಡ 7:​3, 4) ಮೋಶೆಯ ಧರ್ಮಶಾಸ್ತ್ರವು ಯೆಹೂದ್ಯರ ಮತ್ತು ಅನ್ಯಜನರ ನಡುವೆ ಒಂದು “ಅಡ್ಡಗೋಡೆ”ಯಂತಿದ್ದು, ವಿಧರ್ಮಿ ಯೋಚನಾರೀತಿ ಹಾಗೂ ಆಚರಣೆಗಳಿಂದ ದೇವಜನರು ಭ್ರಷ್ಟರಾಗುವುದನ್ನು ತಡೆಯಿತು.​—ಎಫೆಸ 2:​14, 15; ಯೋಹಾನ 18:28.

3. ಧರ್ಮಶಾಸ್ತ್ರವನ್ನು ಯಾರೂ ಪರಿಪೂರ್ಣವಾಗಿ ಪಾಲಿಸಲು ಅಶಕ್ತರಾಗಿದ್ದದ್ದು ಯಾವ ಪರಿಣಾಮವನ್ನು ಬೀರಿತು?

3 ಆದರೆ, ಧರ್ಮಶಾಸ್ತ್ರಕ್ಕೆ ವಿಧೇಯರಾಗುವ ವಿಷಯದಲ್ಲಿ ತುಂಬ ಕಟ್ಟುನಿಟ್ಟಿನವರಾಗಿದ್ದ ಯೆಹೂದ್ಯರು ಸಹ, ದೇವರ ಆ ನಿಯಮಗಳನ್ನು ಪರಿಪೂರ್ಣ ಮಟ್ಟಿಗೆ ಪಾಲಿಸಲು ಶಕ್ತರಾಗಿರಲಿಲ್ಲ. ಇದರರ್ಥ, ಯೆಹೋವನು ಅವರಿಂದ ತೀರ ಹೆಚ್ಚನ್ನು ಅಪೇಕ್ಷಿಸುತ್ತಿದ್ದನೆಂದಾಗಿತ್ತೊ? ಇಲ್ಲ. ಆ ಧರ್ಮಶಾಸ್ತ್ರವು ಇಸ್ರಾಯೇಲಿಗೆ ಕೊಡಲ್ಪಟ್ಟ ಕಾರಣಗಳಲ್ಲೊಂದು, “ಇಂಥಿಂಥದು ಅಪರಾಧವೆಂದು” ತೋರಿಸುವುದೇ ಆಗಿತ್ತು. (ಗಲಾತ್ಯ 3:19) ಧರ್ಮಶಾಸ್ತ್ರವು ಪ್ರಾಮಾಣಿಕ ಹೃದಯದ ಯೆಹೂದ್ಯರಲ್ಲಿ, ತಮಗೊಬ್ಬ ವಿಮೋಚಕನ ತೀವ್ರ ಅಗತ್ಯವಿದೆ ಎಂಬ ಅರಿವನ್ನು ಉಂಟುಮಾಡಿತು. ಮತ್ತು ಆ ವಿಮೋಚಕನು ಬಂದಾಗ, ನಂಬಿಗಸ್ತ ಯೆಹೂದ್ಯರು ಹರ್ಷಿಸಿದರು. ಏಕೆಂದರೆ, ಪಾಪ ಹಾಗೂ ಮರಣದ ಶಾಪದಿಂದ ಅವರ ಬಿಡುಗಡೆಯು ಹತ್ತಿರವಾಗಿತ್ತು!​—ಯೋಹಾನ 1:29.

4. ಧರ್ಮಶಾಸ್ತ್ರವು ಯಾವ ಅರ್ಥದಲ್ಲಿ, ‘ಕ್ರಿಸ್ತನಲ್ಲಿಗೆ ಸೇರುವ ತನಕ ಕಾಯುವ ಆಳಿನಂತಾಗಿತ್ತು’?

4 ಮೋಶೆಯ ಧರ್ಮಶಾಸ್ತ್ರವು ಒಂದು ತಾತ್ಕಾಲಿಕ ಏರ್ಪಾಡಾಗಿರಲಿತ್ತು. ಜೊತೆ ಕ್ರೈಸ್ತರಿಗೆ ಬರೆಯುತ್ತಾ ಅಪೊಸ್ತಲ ಪೌಲನು ಅದರ ಬಗ್ಗೆ ಹೇಳಿದ್ದು: ‘ಕ್ರಿಸ್ತನಲ್ಲಿಗೆ ಸೇರುವ ತನಕ ಅದು ಕಾಯುವ ಆಳಿನಂತಿದೆ.’ (ಗಲಾತ್ಯ 3:​24) ಪುರಾತನಕಾಲದ ಒಬ್ಬ ಆಳು, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದನು ಮತ್ತು ಮನೆಗೆ ಹಿಂತರುತ್ತಿದ್ದನು. ಅವನ ಕೆಲಸ ಮಕ್ಕಳನ್ನು ಉಪಾಧ್ಯಾಯನ ಬಳಿಗೆ ಕರೆದುಕೊಂಡು ಹೋಗುವುದಾಗಿತ್ತು. ಅದೇ ರೀತಿಯಲ್ಲಿ, ಮೋಶೆಯ ಧರ್ಮಶಾಸ್ತ್ರವು, ದೇವಭೀರು ಯೆಹೂದ್ಯರನ್ನು ಕ್ರಿಸ್ತನ ಬಳಿಗೆ ನಡೆಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿತ್ತು. ಯೇಸು ತನ್ನ ಹಿಂಬಾಲಕರಿಗೆ “ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂದು ಮಾತುಕೊಟ್ಟನು. (ಮತ್ತಾಯ 28:20) ಆದುದರಿಂದ ಕ್ರೈಸ್ತ ಸಭೆಯು ರಚಿಸಲ್ಪಟ್ಟ ನಂತರ ಆ ‘ಆಳಿಗೆ’ ಅಂದರೆ ಧರ್ಮಶಾಸ್ತ್ರಕ್ಕೆ, ಮುಂದೆ ಯಾವುದೇ ಉದ್ದೇಶವಿರಲಿಲ್ಲ. (ರೋಮಾಪುರ 10:4; ಗಲಾತ್ಯ 3:25) ಆದರೆ ಈ ಅತ್ಯಾವಶ್ಯಕವಾದ ಸತ್ಯವನ್ನು ಗ್ರಹಿಸುವುದರಲ್ಲಿ ಕೆಲವು ಮಂದಿ ಯೆಹೂದಿ ಕ್ರೈಸ್ತರು ಮಂದರಾಗಿದ್ದರು. ಆದುದರಿಂದ, ಯೇಸುವಿನ ಪುನರುತ್ಥಾನದ ನಂತರವೂ ಅವರು ಧರ್ಮಶಾಸ್ತ್ರದ ಕೆಲವೊಂದು ಅಂಶಗಳನ್ನು ಪಾಲಿಸುವುದನ್ನು ಮುಂದುವರಿಸಿದರು. ಇನ್ನಿತರರಾದರೊ, ತಮ್ಮ ಯೋಚನಾರೀತಿಯಲ್ಲಿ ಹೊಂದಾಣಿಕೆಗಳನ್ನು ಮಾಡಿದರು. ಹಾಗೆ ಮಾಡುವ ಮೂಲಕ, ಅವರು ಇಂದು ನಮಗಾಗಿ ಒಂದು ಒಳ್ಳೇ ಮಾದರಿಯನ್ನಿಟ್ಟರು. ಅದು ಹೇಗೆಂಬುದನ್ನು ನಾವೀಗ ನೋಡೋಣ.

ಕ್ರೈಸ್ತ ಬೋಧನೆಗಳ ಬಗ್ಗೆ ಹೊಸ ತಿಳಿವಳಿಕೆ

5. ಪೇತ್ರನಿಗೆ ದರ್ಶನದಲ್ಲಿ ಯಾವ ಸೂಚನೆಗಳು ಸಿಕ್ಕಿದವು, ಮತ್ತು ಅವನಿಗೇಕೆ ದಿಗ್ಭ್ರಮೆಯಾಯಿತು?

5 ಸಾ.ಶ. 36ರಲ್ಲಿ, ಕ್ರೈಸ್ತ ಅಪೊಸ್ತಲನಾದ ಪೇತ್ರನು ಒಂದು ಗಮನಾರ್ಹವಾದ ದರ್ಶನವನ್ನು ಕಂಡನು. ಆ ಸಮಯದಲ್ಲಿ, ಸ್ವರ್ಗದಿಂದ ಬಂದ ಒಂದು ವಾಣಿಯು, ಧರ್ಮಶಾಸ್ತ್ರಕ್ಕನುಸಾರ ಅಶುದ್ಧವಾಗಿದ್ದ ಪಶುಪಕ್ಷಿಗಳನ್ನು ಕೊಂದು ತಿನ್ನುವಂತೆ ಅವನಿಗೆ ಆಜ್ಞೆಯನ್ನಿತ್ತಿತ್ತು. ಇದನ್ನು ಕೇಳಿ, ಪೇತ್ರನು ದಿಗ್ಭ್ರಮೆಗೊಂಡನು! ಅವನು “ಎಂದೂ ಹೊಲೆ ಪದಾರ್ಥವನ್ನಾಗಲಿ ಅಶುದ್ಧ ಪದಾರ್ಥವನ್ನಾಗಲಿ ತಿಂದವನಲ್ಲ.” ಆದರೆ ಆ ವಾಣಿಯು ಅವನಿಗೆ ಹೇಳಿದ್ದು: “ದೇವರು ಶುದ್ಧಮಾಡಿದ್ದನ್ನು ನೀನು ಹೊಲೆ ಎನ್ನಬೇಡ.” (ಅ. ಕೃತ್ಯಗಳು 10:​9-15) ಧರ್ಮಶಾಸ್ತ್ರಕ್ಕೆ ಕಟ್ಟುನಿಟ್ಟಾಗಿ ಅಂಟಿಕೊಳ್ಳುವ ಬದಲು, ಪೇತ್ರನು ತನ್ನ ದೃಷ್ಟಿಕೋನವನ್ನು ಸರಿಪಡಿಸಿಕೊಂಡನು. ಇದು ಅವನು ದೇವರ ಉದ್ದೇಶಗಳ ಕುರಿತಾಗಿ ಒಂದು ಬೆರಗುಗೊಳಿಸುವ ವಿಷಯವನ್ನು ಕಂಡುಹಿಡಿಯುವಂತೆ ಮುನ್ನಡೆಸಿತು.

6, 7. ತಾನು ಅನ್ಯಜನರಿಗೂ ಈಗ ಸಾರಬಹುದೆಂಬ ತೀರ್ಮಾನಕ್ಕೆ ಬರುವಂತೆ ಪೇತ್ರನು ಶಕ್ತನಾದದ್ದು ಹೇಗೆ, ಮತ್ತು ಅವನು ಬಹುಶಃ ಇನ್ನೂ ಯಾವ ತೀರ್ಮಾನಗಳಿಗೆ ಬಂದನು?

6 ನಡೆದಂಥ ಸಂಗತಿ ಇದು: ಪೇತ್ರನು ಉಳಿದುಕೊಂಡಿದ್ದ ಮನೆಗೆ ಮೂವರು ಪುರುಷರು ಹೋಗಿ, ಪೇತ್ರನು ಅವರೊಂದಿಗೆ ಕೊರ್ನೇಲ್ಯನೆಂಬ ಸುನ್ನತಿಯಿಲ್ಲದ ಒಬ್ಬ ದೇವಭಕ್ತ ಅನ್ಯಜನಾಂಗದ ವ್ಯಕ್ತಿಯ ಮನೆಗೆ ಹೋಗುವಂತೆ ಕೇಳಿಕೊಂಡರು. ಪೇತ್ರನು ಆ ಪುರುಷರನ್ನು ಮನೆಯೊಳಕ್ಕೆ ಕರೆಸಿ, ಅವರನ್ನು ಉಪಚರಿಸಿದನು. ತನಗಾದ ದರ್ಶನದ ಅರ್ಥವನ್ನು ಅರ್ಥಮಾಡಿಕೊಂಡವನಾಗಿ, ಮರುದಿನ ಪೇತ್ರನು ಆ ಪುರುಷರೊಂದಿಗೆ ಕೊರ್ನೇಲ್ಯನ ಮನೆಗೆ ಹೋದನು. ಅಲ್ಲಿ ಯೇಸು ಕ್ರಿಸ್ತನ ಕುರಿತಾಗಿ ಪೇತ್ರನು ಸಮಗ್ರ ಸಾಕ್ಷಿಯನ್ನು ಕೊಟ್ಟನು. ಆ ಸಮಯದಲ್ಲಿ ಪೇತ್ರನು ಹೀಗಂದನು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.” ಕೊರ್ನೇಲ್ಯನು ಮಾತ್ರವಲ್ಲದೆ, ಅವನ ಬಂಧುಬಳಗದವರು ಸಹ ಯೇಸುವಿನಲ್ಲಿ ನಂಬಿಕೆಯನ್ನಿಟ್ಟರು, ಮತ್ತು “ವಾಕ್ಯವನ್ನು ಕೇಳಿದವರೆಲ್ಲರ ಮೇಲೆ ಪವಿತ್ರಾತ್ಮವು ಇಳಿಯಿತು.” ಈ ವಿಷಯದಲ್ಲಿ ಯೆಹೋವನ ಹಸ್ತವಿರುವುದನ್ನು ಗ್ರಹಿಸಿ, ಪೇತ್ರನು ಅವರಿಗೆ “ನೀವು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿಕೊಳ್ಳಬೇಕೆಂದು ಅಪ್ಪಣೆಕೊಟ್ಟನು.”​—ಅ. ಕೃತ್ಯಗಳು 10:​17-48.

7 ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಲ್ಲದ ಅನ್ಯಜನರು ಈಗ ಯೇಸು ಕ್ರಿಸ್ತನ ಹಿಂಬಾಲಕರಾಗಸಾಧ್ಯವಿದೆ ಎಂಬ ತೀರ್ಮಾನಕ್ಕೆ ಬರುವಂತೆ ಸಾಧ್ಯಮಾಡಿದಂಥ ವಿಷಯ ಯಾವುದು? ಆತ್ಮಿಕ ವಿವೇಚನಾಶಕ್ತಿಯೇ. ದೇವರು ಸುನ್ನತಿಯಿಲ್ಲದ ಅನ್ಯರ ಮೇಲೆ ತನ್ನಾತ್ಮವನ್ನು ಸುರಿಸಿ ತನ್ನ ಅನುಗ್ರಹವನ್ನು ವ್ಯಕ್ತಪಡಿಸಿದ್ದರಿಂದ, ಅವರು ದೀಕ್ಷಾಸ್ನಾನಕ್ಕೆ ಸ್ವೀಕಾರಾರ್ಹರೆಂದು ಪೇತ್ರನು ವಿವೇಚಿಸಿದನು. ಅನ್ಯಜನಾಂಗದ ಕ್ರೈಸ್ತರು ದೀಕ್ಷಾಸ್ನಾನಪಡೆಯಲಿಕ್ಕಾಗಿ, ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸಬೇಕೆಂಬ ಷರತ್ತನ್ನು ದೇವರು ಇಟ್ಟಿರಲಿಲ್ಲವೆಂಬುದನ್ನು ಪೇತ್ರನು ಅದೇ ಸಮಯದಲ್ಲಿ ಗ್ರಹಿಸಿದನೆಂಬುದು ವ್ಯಕ್ತವಾಗುತ್ತದೆ. ನೀವು ಹಿಂದೆ ಆ ಸಮಯದಲ್ಲಿ ಜೀವಿಸುತ್ತಿದ್ದಲ್ಲಿ, ನಿಮ್ಮ ದೃಷ್ಟಿಕೋನದಲ್ಲಿ ಹೊಂದಾಣಿಕೆಗಳನ್ನು ಮಾಡಲು ಪೇತ್ರನಷ್ಟೇ ಸಿದ್ಧಮನಸ್ಸನ್ನು ತೋರಿಸುತ್ತಿದ್ದೀರೊ?

ಕೆಲವರು ಆ ‘ಆಳನ್ನೇ’ ಹಿಂಬಾಲಿಸುವುದನ್ನು ಮುಂದುವರಿಸಿದರು

8. ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದ ಕೆಲವು ಮಂದಿ ಕ್ರೈಸ್ತರು, ಸುನ್ನತಿಯ ಕುರಿತಾಗಿ ಪೇತ್ರನ ದೃಷ್ಟಿಕೋನಕ್ಕಿಂತ ಭಿನ್ನವಾದ ಯಾವ ದೃಷ್ಟಿಕೋನವನ್ನು ಹೊಂದಿದ್ದರು, ಮತ್ತು ಏಕೆ?

8 ಕೊರ್ನೇಲ್ಯನ ಮನೆಯನ್ನು ಬಿಟ್ಟುಹೋದ ನಂತರ, ಪೇತ್ರನು ಯೆರೂಸಲೇಮಿಗೆ ಹೋದನು. ಸುನ್ನತಿಯಿಲ್ಲದ ಅನ್ಯಜನರೂ “ದೇವರ ವಾಕ್ಯವನ್ನು ಅಂಗೀಕರಿಸಿದರೆಂಬ” ಸುದ್ದಿಯು ಅಲ್ಲಿದ್ದ ಸಭೆಗೆ ತಲಪಿತ್ತು. ಮತ್ತು ಈ ವಿಷಯವು ಕೆಲವು ಯೆಹೂದಿ ಶಿಷ್ಯರ ಮನಸ್ಸನ್ನು ಕಲಕಿಬಿಟ್ಟಿತು. (ಅ. ಕೃತ್ಯಗಳು 11:​1-3) ಅನ್ಯಜನರು ಯೇಸುವಿನ ಹಿಂಬಾಲಕರಾಗಬಲ್ಲರೆಂಬದನ್ನು “ಸುನ್ನತಿಯವರು” ಒಪ್ಪಿಕೊಂಡರೂ, ಈ ಯೆಹೂದ್ಯೇತರ ಜನಾಂಗದವರು ರಕ್ಷಣೆಯನ್ನು ಪಡೆಯಲಿಕ್ಕಾಗಿ ಧರ್ಮಶಾಸ್ತ್ರವನ್ನು ಪಾಲಿಸಲೇಬೇಕೆಂದು ಪಟ್ಟುಹಿಡಿದರು. ಆದರೆ ಇನ್ನೊಂದು ಕಡೆ, ಅಂದರೆ ಎಲ್ಲಿ ಯೆಹೂದಿ ಕ್ರೈಸ್ತರ ಸಂಖ್ಯೆ ಕಡಿಮೆಯಿದ್ದು, ಅನ್ಯಜನರು ಪ್ರಬಲರಾಗಿದ್ದ ಕ್ಷೇತ್ರಗಳಲ್ಲಿ, ಸುನ್ನತಿಯನ್ನು ಮಾಡಿಸಿಕೊಳ್ಳಬೇಕೆಂಬ ವಿವಾದಾಂಶವಿರಲಿಲ್ಲ. ಈ ಎರಡೂ ದೃಷ್ಟಿಕೋನಗಳು ಸುಮಾರು 13 ವರ್ಷಗಳ ವರೆಗೆ ಹಾಗೆಯೇ ಇದ್ದವು. (1 ಕೊರಿಂಥ 1:10) ಆ ಆರಂಭದ ಕ್ರೈಸ್ತರಿಗೆ, ವಿಶೇಷವಾಗಿ ಯೆಹೂದಿ ಕ್ಷೇತ್ರಗಳಲ್ಲಿ ವಾಸಿಸುತ್ತಿದ್ದ ಅನ್ಯಜನರಿಗೆ ಅದೆಂಥ ಒಂದು ಪರೀಕ್ಷೆಯಾಗಿದ್ದಿರಬಹುದು!

9. ಸುನ್ನತಿಯ ವಿವಾದಾಂಶವು ಇತ್ಯರ್ಥವಾಗುವುದು ಏಕೆ ಅತ್ಯಾವಶ್ಯಕವಾಗಿತ್ತು?

9 ಸಾ.ಶ. 49ರಲ್ಲಿ ಈ ವಿವಾದಾಂಶವು ಕೊನೆಗೆ ಪರಾಕಾಷ್ಠೆಗೇರಿತು. ಆಗ ಯೆರೂಸಲೇಮಿನಿಂದ ಕ್ರೈಸ್ತರು, ಪೌಲನು ಎಲ್ಲಿ ಸಾರುತ್ತಿದ್ದನೊ ಆ ಸಿರಿಯದ ಅಂತಿಯೋಕ್ಯಕ್ಕೆ ಬಂದರು. ಅಲ್ಲಿ ಅವರು, ಅನ್ಯಜನಾಂಗದ ಮತಾಂತರಿಗಳು, ಧರ್ಮಶಾಸ್ತ್ರಕ್ಕನುಸಾರ ಸುನ್ನತಿಮಾಡಿಸಿಕೊಳ್ಳಬೇಕೆಂದು ಕಲಿಸಲಾರಂಭಿಸಿದರು. ಮತ್ತು ಆಗ ಅವರ ಮತ್ತು ಪೌಲ ಹಾಗೂ ಬಾರ್ನಬರ ನಡುವೆ ಬಹಳಷ್ಟು ಭೇದವುಂಟಾಯಿತು! ಈ ವಿವಾದಾಂಶವು ಇತ್ಯರ್ಥಗೊಳಿಸಲ್ಪಡದಿದ್ದಲ್ಲಿ, ಯೆಹೂದಿ ಹಿನ್ನಲೆಯಿಂದಾಗಲಿ, ಅನ್ಯಜನಾಂಗದ ಹಿನ್ನೆಲೆಯಿಂದಾಗಲಿ ಬಂದಿರುವ ಕೆಲವು ಕ್ರೈಸ್ತರು ನಿಶ್ಚಯವಾಗಿಯೂ ಮುಗ್ಗರಿಸಿ ಬೀಳಲಿದ್ದರು. ಹೀಗಿರುವುದರಿಂದ, ಪೌಲನು ಮತ್ತು ಇನ್ನೂ ಕೆಲವರು ಯೆರೂಸಲೇಮಿಗೆ ಹೋಗಿ, ಕ್ರೈಸ್ತ ಆಡಳಿತ ಮಂಡಳಿಯು ಈ ವಿವಾದಾಂಶವನ್ನು ಶಾಶ್ವತವಾಗಿ ಇತ್ಯರ್ಥಗೊಳಿಸಲು ಕೇಳಿಕೊಳ್ಳುವಂತೆ ಏರ್ಪಾಡುಗಳನ್ನು ಮಾಡಲಾಯಿತು.​—ಅ. ಕೃತ್ಯಗಳು 15:​1, 2, 24.

ವಾಸ್ತವದಲ್ಲಿ ಒಂದು ಭಿನ್ನಭಿಪ್ರಾಯ​—ನಂತರ, ಐಕ್ಯ

10. ಅನ್ಯಜನರ ಸ್ಥಾನಮಾನವೇನು ಎಂಬುದರ ಕುರಿತಾಗಿ ನಿರ್ಣಯವನ್ನು ಮಾಡುವ ಮುಂಚೆ ಆಡಳಿತ ಮಂಡಲಿಯು ಪರಿಗಣಿಸಿದಂಥ ಕೆಲವೊಂದು ಅಂಶಗಳಾವವು?

10 ಏರ್ಪಡಿಸಲಾದ ಒಂದು ಕೂಟದಲ್ಲಿ, ಬಹುಶಃ ಕೆಲವರು ಸುನ್ನತಿಯ ಪರವಾಗಿ ವಾದಿಸಿದರು ಮತ್ತು ಇತರರು ಇದಕ್ಕೆ ವಿರುದ್ಧವಾದ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದರು. ಆದರೆ ಭಾವಾವೇಶವು ಆ ಕೂಟದಲ್ಲಿ ಮೇಲುಗೈಯನ್ನು ಪಡೆಯಲಿಲ್ಲ. ತುಂಬ ವಾಗ್ವಾದವಾದ ನಂತರ, ಅಪೊಸ್ತಲರಾದ ಪೇತ್ರ ಮತ್ತು ಪೌಲರು, ಯೆಹೋವನು ಸುನ್ನತಿಮಾಡಿರದವರ ನಡುವೆ ನಡೆಸಿದಂಥ ಸೂಚಕಕಾರ್ಯಗಳನ್ನು ವರ್ಣಿಸಲಾರಂಭಿಸಿದರು. ದೇವರು, ಸುನ್ನತಿಯಿಲ್ಲದ ಅನ್ಯರ ಮೇಲೆಯೂ ಪವಿತ್ರಾತ್ಮವನ್ನು ಸುರಿಸಿದ್ದನೆಂದು ಅವರು ವಿವರಿಸಿದರು. ಕಾರ್ಯತಃ ಅವರು ಹೀಗೆ ಕೇಳುತ್ತಿದ್ದರು: ‘ಯಾರನ್ನು ದೇವರೇ ಅಂಗೀಕರಿಸಿದ್ದಾನೊ ಅಂಥವರನ್ನು ಕ್ರೈಸ್ತ ಸಭೆಯು ತಿರಸ್ಕರಿಸುವುದು ಸರಿಯೊ?’ ತದನಂತರ ಶಿಷ್ಯನಾದ ಯಾಕೋಬನು, ಶಾಸ್ತ್ರದಿಂದ ಒಂದು ಭಾಗವನ್ನು ಓದಿದನು. ಇದು, ಆ ವಿಷಯದ ಕುರಿತಾಗಿ ಯೆಹೋವನ ಚಿತ್ತವೇನಾಗಿದೆ ಎಂಬುದನ್ನು ವಿವೇಚಿಸಲು ಅಲ್ಲಿ ಹಾಜರಿದ್ದವರೆಲ್ಲರಿಗೂ ಸಹಾಯಮಾಡಿತು.​—ಅ. ಕೃತ್ಯಗಳು 15:​4-17.

11. ಸುನ್ನತಿಯ ಕುರಿತಾದ ನಿರ್ಣಯವನ್ನು ಮಾಡುವುದರಲ್ಲಿ ಯಾವ ಅಂಶವು ಒಳಗೂಡಿರಲಿಲ್ಲ, ಮತ್ತು ಆ ನಿರ್ಣಯದ ಮೇಲೆ ಯೆಹೋವನ ಆಶೀರ್ವಾದವಿತ್ತೆಂಬದನ್ನು ಯಾವುದು ತೋರಿಸುತ್ತದೆ?

11 ಎಲ್ಲರ ಗಮನವೂ ಆಡಳಿತ ಮಂಡಲಿಯ ಮೇಲಿತ್ತು. ಅವರೆಲ್ಲರೂ ಯೆಹೂದಿ ಹಿನ್ನೆಲೆಯವರಾಗಿರುವುದರಿಂದ, ಅವರು ಸುನ್ನತಿಯನ್ನು ಮಾಡಿಸಿಕೊಳ್ಳುವುದರ ಪರವಾಗಿರುವ ಒಂದು ನಿರ್ಣಯವನ್ನು ಮಾಡುವರೊ? ಇಲ್ಲ. ಈ ನಂಬಿಗಸ್ತ ಪುರುಷರು ಶಾಸ್ತ್ರಗಳನ್ನು ಮತ್ತು ದೇವರ ಪವಿತ್ರಾತ್ಮದ ಮಾರ್ಗದರ್ಶನವನ್ನು ಅನುಸರಿಸಲು ದೃಢನಿರ್ಧಾರವುಳ್ಳವರಾಗಿದ್ದರು. ಅನ್ಯಜನಾಂಗದ ಕ್ರೈಸ್ತರು ಸುನ್ನತಿಮಾಡಿಸಿ, ಮೋಶೆಯ ಧರ್ಮಶಾಸ್ತ್ರದ ಅಧೀನದಲ್ಲಿ ಬರುವ ಅಗತ್ಯವಿಲ್ಲವೆಂದು, ಸಂಬಂಧಪಟ್ಟ ಎಲ್ಲಾ ಸಾಕ್ಷ್ಯವನ್ನು ಕೇಳಿಸಿಕೊಂಡ ನಂತರ ಆಡಳಿತ ಮಂಡಳಿಯು ಸರ್ವಾನುಮತದಿಂದ ಒಪ್ಪಿಕೊಂಡಿತು. ಈ ಸುದ್ದಿಯನ್ನು ಸಹೋದರರು ಕೇಳಿಸಿಕೊಂಡಾಗ, ಅವರು ಹರ್ಷಿಸಿದರು ಮತ್ತು ಸಭೆಗಳು “ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಾ ಬಂದವು.” ಸ್ಪಷ್ಟವಾದ ದೇವಪ್ರಭುತ್ವ ನಿರ್ದೇಶನಕ್ಕೆ ಅಧೀನರಾದ ಕ್ರೈಸ್ತರಿಗೆ, ಒಂದು ದೃಢವಾದ, ಶಾಸ್ತ್ರೀಯ ಉತ್ತರವು ಸಿಕ್ಕಿತು. (ಅ. ಕೃತ್ಯಗಳು 15:​19-23, 28, 29; 16:​1-5) ಆದರೆ ಒಂದು ಪ್ರಾಮುಖ್ಯ ಪ್ರಶ್ನೆಗೆ ಇನ್ನೂ ಉತ್ತರವು ಸಿಕ್ಕಿರಲಿಲ್ಲ.

ಯೆಹೂದಿ ಕ್ರೈಸ್ತರ ಕುರಿತಾಗಿ ಏನು?

12. ಯಾವ ಪ್ರಶ್ನೆಯು ಬಗೆಹರಿಸಲ್ಪಟ್ಟಿರಲಿಲ್ಲ?

12 ಅನ್ಯಜನಾಂಗದ ಕ್ರೈಸ್ತರು ಸುನ್ನತಿಮಾಡಿಸಿಕೊಳ್ಳುವ ಅಗತ್ಯವಿಲ್ಲವೆಂದು ಆಡಳಿತ ಮಂಡಲಿಯು ಸ್ಪಷ್ಟವಾಗಿ ಸೂಚಿಸಿತ್ತು. ಆದರೆ ಯೆಹೂದಿ ಕ್ರೈಸ್ತರ ಕುರಿತಾಗಿ ಏನು? ಆಡಳಿತ ಮಂಡಲಿಯು, ಪ್ರಶ್ನೆಯ ಆ ಭಾಗವನ್ನು ನಿರ್ದಿಷ್ಟವಾಗಿ ಬಗೆಹರಿಸಿರಲಿಲ್ಲ.

13. ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವುದು ರಕ್ಷಣೆಗಾಗಿ ಆವಶ್ಯಕವೆಂದು ಪ್ರತಿಪಾದಿಸುವುದು ಏಕೆ ತಪ್ಪಾಗಿತ್ತು?

13 ‘ಧರ್ಮಶಾಸ್ತ್ರದಲ್ಲಿ ಅಭಿಮಾನಿಗಳಾಗಿದ್ದ’ ಕೆಲವು ಮಂದಿ ಯೆಹೂದಿ ಕ್ರೈಸ್ತರು, ತಮ್ಮ ಮಕ್ಕಳಿಗೆ ಸುನ್ನತಿಮಾಡಿಸುವುದನ್ನು ಮತ್ತು ಧರ್ಮಶಾಸ್ತ್ರದ ನಿರ್ದಿಷ್ಟ ವೈಶಿಷ್ಟ್ಯಗಳನ್ನು ಪಾಲಿಸುವುದನ್ನು ಮುಂದುವರಿಸಿದರು. (ಅ. ಕೃತ್ಯಗಳು 21:20) ಇನ್ನೂ ಕೆಲವರು, ಮತ್ತೊಂದು ಹೆಜ್ಜೆ ಮುಂದೆ ಹೋದರು. ಅಂದರೆ, ರಕ್ಷಣೆಗಾಗಿ ಯೆಹೂದಿ ಕ್ರೈಸ್ತರು ಧರ್ಮಶಾಸ್ತ್ರವನ್ನು ಪಾಲಿಸುವುದು ಆವಶ್ಯಕವೆಂದು ಅವರು ಪಟ್ಟುಹಿಡಿದು ಹೇಳಿದರು. ಆದರೆ ಇದು ಅವರ ಗಂಭೀರವಾದ ತಪ್ಪುತಿಳಿವಳಿಕೆಯಾಗಿತ್ತು. ಉದಾಹರಣೆಗಾಗಿ, ಒಬ್ಬ ಕ್ರೈಸ್ತನು ಪಾಪಗಳ ಕ್ಷಮೆಗಾಗಿ ಒಂದು ಪ್ರಾಣಿಯಜ್ಞವನ್ನು ಹೇಗೆ ಅರ್ಪಿಸಸಾಧ್ಯವಿತ್ತು? ಏಕೆಂದರೆ ಕ್ರಿಸ್ತನ ಯಜ್ಞವು ಅಂಥ ಎಲ್ಲಾ ಯಜ್ಞಗಳನ್ನು ರದ್ದುಗೊಳಿಸಿತ್ತು. ಮತ್ತು ಯೆಹೂದ್ಯರು ಅನ್ಯಜನಾಂಗದವರೊಂದಿಗೆ ನಿಕಟ ಸಹವಾಸವನ್ನು ಮಾಡಬಾರದೆಂಬ ಧರ್ಮಶಾಸ್ತ್ರದ ಆವಶ್ಯಕತೆಯ ಕುರಿತಾಗಿ ಏನು? ಹುರುಪುಳ್ಳ ಕ್ರೈಸ್ತ ಸೌವಾರ್ತಿಕರು ಆ ಎಲ್ಲಾ ಕಟ್ಟುಪಾಡುಗಳನ್ನು ಪಾಲಿಸಿ, ಅದೇ ಸಮಯದಲ್ಲಿ ಯೇಸು ಕಲಿಸಿದಂಥ ಎಲ್ಲಾ ವಿಷಯಗಳನ್ನು ಅನ್ಯಜನರಿಗೆ ಕಲಿಸುವ ನೇಮಕವನ್ನು ಪೂರೈಸುವುದು ತುಂಬ ಕಷ್ಟಕರವಾಗಿರುತ್ತಿತ್ತು. (ಮತ್ತಾಯ 28:​19, 20; ಅ. ಕೃತ್ಯಗಳು 1:8; 10:28) * ಆಡಳಿತ ಮಂಡಳಿಯ ಒಂದು ಕೂಟದಲ್ಲಿ ಈ ವಿಷಯವನ್ನು ಸ್ಪಷ್ಟೀಕರಿಸಲಾಯಿತು ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ. ಹೀಗಿದ್ದರೂ, ಕ್ರೈಸ್ತ ಸಭೆಯು ಯಾವುದೇ ಸಹಾಯವಿಲ್ಲದೆ ಬಿಡಲ್ಪಡಲಿಲ್ಲ.

14. ಪೌಲನ ಪ್ರೇರಿತ ಪತ್ರಗಳು ಧರ್ಮಶಾಸ್ತ್ರದ ಕುರಿತಾಗಿ ಯಾವ ಮಾರ್ಗದರ್ಶನವನ್ನು ಒದಗಿಸಿದವು?

14 ಈಗ ಮಾರ್ಗದರ್ಶನವು, ಆಡಳಿತ ಮಂಡಳಿಯಿಂದ ಒಂದು ಪತ್ರದ ರೂಪದಲ್ಲಲ್ಲ ಬದಲಾಗಿ ಅಪೊಸ್ತಲರಿಂದ ಬರೆಯಲ್ಪಟ್ಟ ಹೆಚ್ಚಿನ ಪ್ರೇರಿತ ಪತ್ರಗಳ ಮೂಲಕ ಬಂತು. ಉದಾಹರಣೆಗಾಗಿ, ಅಪೊಸ್ತಲ ಪೌಲನು, ರೋಮ್‌ನಲ್ಲಿ ಜೀವಿಸುತ್ತಿದ್ದ ಯೆಹೂದ್ಯರಿಗೂ ಅನ್ಯಜನಾಂಗದವರಿಗೂ ಬಲವಾದ ಸಂದೇಶವನ್ನು ಕಳುಹಿಸಿದನು. ಅವರಿಗೆ ಬರೆದ ಪತ್ರದಲ್ಲಿ, ಒಬ್ಬ ನಿಜ ಯೆಹೂದ್ಯನು ಯಾರಾಗಿದ್ದಾನೆಂಬದನ್ನು ಹೇಳುತ್ತಾ, “ಒಳಗೆ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿ” ಎಂದು ಹೇಳಿದನು. (ರೋಮಾಪುರ 2:28, 29) ಕ್ರೈಸ್ತರು ಇನ್ನು ಮುಂದೆ ಧರ್ಮಶಾಸ್ತ್ರಕ್ಕೆ ಅಧೀನರಾಗಿಲ್ಲವೆಂಬುದನ್ನು ರುಜುಪಡಿಸಲು ಪೌಲನು ಅದೇ ಪತ್ರದಲ್ಲಿ ಒಂದು ದೃಷ್ಟಾಂತವನ್ನು ಉಪಯೋಗಿಸಿದನು. ಸ್ತ್ರೀಯೊಬ್ಬಳು, ಒಂದು ಸಲ ಇಬ್ಬರು ಪುರುಷರಿಗೆ ವಿವಾಹಿತಳಾಗಿರಲು ಸಾಧ್ಯವಿಲ್ಲವೆಂದು ಅವನು ವಾದಿಸಿದನು. ಆದರೆ ಒಂದುವೇಳೆ ಅವಳ ಗಂಡನು ಸಾಯುವಲ್ಲಿ, ಅವಳು ಪುನಃ ಮದುವೆಮಾಡಿಕೊಳ್ಳಲು ಸ್ವತಂತ್ರಳಾಗಿದ್ದಾಳೆ. ಪೌಲನು ನಂತರ ಈ ದೃಷ್ಟಾಂತವನ್ನು ಅನ್ವಯಿಸುತ್ತಾ ತೋರಿಸಿದ್ದೇನೆಂದರೆ, ಕ್ರೈಸ್ತರು ಏಕಕಾಲದಲ್ಲಿ ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರೂ ಕ್ರಿಸ್ತನಿಗೆ ಸೇರಿದವರೂ ಆಗಿರಲು ಸಾಧ್ಯವಿಲ್ಲ. ಅವರು ಕ್ರಿಸ್ತನೊಂದಿಗೆ ಐಕ್ಯರಾಗಲು ಸಾಧ್ಯವಾಗುವಂತೆ ‘ಧರ್ಮಶಾಸ್ತ್ರದ ಪಾಲಿಗೆ ಸತ್ತವರಾಗಬೇಕಿತ್ತು.’​—ರೋಮಾಪುರ 7:​1-5.

ವಿಷಯವನ್ನು ಗ್ರಹಿಸಲು ನಿಧಾನಿಗಳು

15, 16. ತಾವು ಧರ್ಮಶಾಸ್ತ್ರವನ್ನು ಪಾಲಿಸುವ ಹಂಗಿನಲ್ಲಿಲ್ಲವೆಂಬ ವಿಷಯವನ್ನು ಕೆಲವು ಯೆಹೂದಿ ಕ್ರೈಸ್ತರು ಅರ್ಥಮಾಡಿಕೊಳ್ಳಲು ತಪ್ಪಿಹೋದದ್ದೇಕೆ, ಮತ್ತು ಆತ್ಮಿಕವಾಗಿ ಎಚ್ಚರವಾಗಿರುವ ಅಗತ್ಯವನ್ನು ಇದು ಹೇಗೆ ತೋರಿಸುತ್ತದೆ?

15 ಧರ್ಮಶಾಸ್ತ್ರದ ಕುರಿತಾದ ಪೌಲನ ತರ್ಕಸರಣಿಯು, ವಾದಕ್ಕೆಡೆಯಿಲ್ಲದ್ದಾಗಿತ್ತು. ಹಾಗಾದರೆ, ಕೆಲವು ಮಂದಿ ಯೆಹೂದಿ ಕ್ರೈಸ್ತರು ಅದನ್ನು ಅರ್ಥಮಾಡಲು ತಪ್ಪಿಹೋದದ್ದು ಹೇಗೆ? ಒಂದು ಕಾರಣವೇನೆಂದರೆ, ಅವರಲ್ಲಿ ಆತ್ಮಿಕ ವಿವೇಚನಾಶಕ್ತಿಯ ಕೊರತೆಯಿತ್ತು. ಉದಾಹರಣೆಗಾಗಿ ಅವರು ಗಟ್ಟಿಯಾದ ಆತ್ಮಿಕ ಆಹಾರವನ್ನು ತೆಗೆದುಕೊಳ್ಳುವುದನ್ನು ನಿರ್ಲಕ್ಷಿಸಿದರು. (ಇಬ್ರಿಯ 5:​11-14) ಅವರು ಕ್ರೈಸ್ತ ಕೂಟಗಳಿಗೂ ಕ್ರಮವಾಗಿ ಹಾಜರಾಗುತ್ತಿರಲಿಲ್ಲ. (ಇಬ್ರಿಯ 10:​23-25) ಕೆಲವರು ವಿಷಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ ಇರಲು ಇನ್ನೊಂದು ಕಾರಣ, ಧರ್ಮಶಾಸ್ತ್ರದ ಸ್ವರೂಪವೇ ಆಗಿರಬಹುದು. ಅದು, ದೇವಾಲಯ ಮತ್ತು ಯಾಜಕತ್ವದಂಥ ನೋಡಬಹುದಾದ, ಅನುಭವಿಸಸಾಧ್ಯವಿದ್ದ ಮತ್ತು ಸ್ಪರ್ಶಿಸಸಾಧ್ಯವಿದ್ದ ವಿಷಯಗಳ ಮೇಲೆ ಕೇಂದ್ರಿತವಾಗಿತ್ತು. ಆತ್ಮಿಕತೆಯ ಕೊರತೆಯಿದ್ದ ಒಬ್ಬ ವ್ಯಕ್ತಿಗೆ ಕ್ರೈಸ್ತತ್ವದ ಹೆಚ್ಚು ಆಳವಾದ ಮೂಲತತ್ತ್ವಗಳನ್ನು ಅಂಗೀಕರಿಸುವುದಕ್ಕಿಂತಲೂ, ಧರ್ಮಶಾಸ್ತ್ರವನ್ನು ಅಂಗೀಕರಿಸುವುದು ಹೆಚ್ಚು ಸುಲಭವಾಗಿರುತ್ತಿತ್ತು. ಏಕೆಂದರೆ ಕ್ರೈಸ್ತತ್ವದ ಮೂಲತತ್ತ್ವಗಳು, ಅದೃಶ್ಯವಾದ ನಿಜತ್ವಗಳ ಮೇಲೆ ಕೇಂದ್ರೀಕರಿಸಿದ್ದವು.​—2 ಕೊರಿಂಥ 4:18.

16 ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದ ಕೆಲವರು, ಧರ್ಮಶಾಸ್ತ್ರವನ್ನು ಪಾಲಿಸಲು ಉತ್ಸುಕರಾಗಿರಲು ಮತ್ತೊಂದು ಕಾರಣವು, ಪೌಲನು ಗಲಾತ್ಯದವರಿಗೆ ಬರೆದಂಥ ಪತ್ರದಲ್ಲಿ ತಿಳಿಸಲ್ಪಟ್ಟಿತ್ತು. ಈ ಜನರು, ಬೇರೆಯವರು ತಮ್ಮನ್ನು ಗೌರವಸ್ಥರೋಪಾದಿ, ಒಂದು ಪ್ರಧಾನ ಧರ್ಮದ ಸದಸ್ಯರಾಗಿ ದೃಷ್ಟಿಸಬೇಕೆಂದು ಅಪೇಕ್ಷಿಸುತ್ತಿದ್ದರೆಂದು ಅವನು ವಿವರಿಸಿದನು. ಸಮುದಾಯದಲ್ಲಿ ಕ್ರೈಸ್ತರೋಪಾದಿ ಇತರರಿಗಿಂತ ಭಿನ್ನರಾಗಿ ಎದ್ದುಕಾಣುವ ಬದಲು, ಸಮಾಜದ ಭಾಗವಾಗಿರಲು ಅವರು ಬಹುಮಟ್ಟಿಗೆ ಯಾವುದೇ ರೀತಿಯಲ್ಲಿ ರಾಜಿಮಾಡಿಕೊಳ್ಳಲು ಸಿದ್ಧರಿದ್ದರು. ದೇವರ ಸಮ್ಮತಿಯನ್ನು ಪಡೆಯುವುದಕ್ಕಿಂತಲೂ ಮನುಷ್ಯರ ಸಮ್ಮತಿಯನ್ನು ಪಡೆಯುವುದರಲ್ಲಿ ಅವರು ಹೆಚ್ಚು ಆಸಕ್ತರಾಗಿದ್ದರು.​—ಗಲಾತ್ಯ 6:12.

17. ಧರ್ಮಶಾಸ್ತ್ರವನ್ನು ಪಾಲಿಸುವುದರ ಕುರಿತಾದ ಸರಿಯಾದ ದೃಷ್ಟಿಕೋನವು ಯಾವಾಗ ಪೂರ್ಣವಾಗಿ ಸ್ಪಷ್ಟವಾಯಿತು?

17 ಪೌಲನ ಮತ್ತು ಇತರರ ದೇವಪ್ರೇರಿತ ಬರಹಗಳನ್ನು ಜಾಗರೂಕತೆಯಿಂದ ಅಭ್ಯಾಸಮಾಡಿದ ವಿವೇಚನಾಭರಿತ ಕ್ರೈಸ್ತರು, ಧರ್ಮಶಾಸ್ತ್ರದ ಕುರಿತಾಗಿ ಸರಿಯಾದ ತೀರ್ಮಾನಕ್ಕೆ ಬಂದರು. ಆದರೆ, ಮೋಶೆಯ ಧರ್ಮಶಾಸ್ತ್ರದ ಕುರಿತಾದ ಯೋಗ್ಯವಾದ ದೃಷ್ಟಿಕೋನವು ಎಲ್ಲಾ ಯೆಹೂದಿ ಕ್ರೈಸ್ತರಿಗೂ, ಯಾವುದೇ ಸಂದೇಹಕ್ಕೂ ಅವಕಾಶವಿಲ್ಲದಂಥ ರೀತಿಯಲ್ಲಿ ಸ್ಪಷ್ಟವಾದದ್ದು ಸಾ.ಶ. 70ರಲ್ಲೇ. ಆಗ, ಯೆರೂಸಲೇಮು, ಅದರ ಆಲಯ ಮತ್ತು ಅದರ ಯಾಜಕತ್ವಕ್ಕೆ ಸಂಬಂಧಪಟ್ಟ ದಾಖಲೆಗಳು ನಾಶವಾಗುವಂತೆ ದೇವರು ಅನುಮತಿಸಿದಾಗ ಈ ಮಾತು ಸ್ಪಷ್ಟವಾಯಿತು. ಇನ್ನು ಯಾವ ವ್ಯಕ್ತಿಯೂ ಧರ್ಮಶಾಸ್ತ್ರದ ಎಲ್ಲಾ ವೈಶಿಷ್ಟ್ಯಗಳನ್ನು ಪಾಲಿಸುವುದನ್ನು ಇದು ಅಸಾಧ್ಯಗೊಳಿಸಿತು.

ಆ ಪಾಠವನ್ನು ಇಂದು ಅನ್ವಯಿಸಿಕೊಳ್ಳುವುದು

18, 19. (ಎ) ಆತ್ಮಿಕವಾಗಿ ಆರೋಗ್ಯವಂತರಾಗಿರಲು ನಾವು ಯಾವ ಮನೋಭಾವಗಳನ್ನು ಅಂಗೀಕರಿಸಬೇಕು ಮತ್ತು ಯಾವ ಮನೋಭಾವಗಳಿಂದ ದೂರವಿರಬೇಕು? (ಬಿ) ಜವಾಬ್ದಾರಿಯುತ ಸಹೋದರರಿಂದ ನಾವು ಪಡೆಯುವಂಥ ನಿರ್ದೇಶನವನ್ನು ಅನುಸರಿಸುವುದರ ಕುರಿತಾಗಿ ಪೌಲನ ಮಾದರಿಯು ನಮಗೇನನ್ನು ಕಲಿಸುತ್ತದೆ? (ಪುಟ 24ರಲ್ಲಿರುವ ಚೌಕವನ್ನು ನೋಡಿರಿ.)

18 ಎಷ್ಟೋ ದೀರ್ಘ ಸಮಯದ ಹಿಂದೆ ನಡೆದಂಥ ಈ ಘಟನೆಗಳನ್ನು ಪರಿಗಣಿಸಿದ ಬಳಿಕ, ನೀವು ಬಹುಶಃ ಹೀಗೆ ಯೋಚಿಸುತ್ತಿರಬಹುದು: ‘ನಾನು ಒಂದುವೇಳೆ ಆ ಕಾಲದಲ್ಲಿ ಜೀವಿಸುತ್ತಿದ್ದಲ್ಲಿ, ದೇವರ ಚಿತ್ತವು ಪ್ರಗತಿಪರವಾಗಿ ಪ್ರಕಟವಾಗುತ್ತಿದ್ದಾಗ ನಾನು ಹೇಗೆ ಪ್ರತಿಕ್ರಿಯಿಸುತ್ತಿದ್ದೆ? ನಾನು ನನ್ನ ಸ್ವಂತ ಸಂಪ್ರದಾಯಬದ್ಧ ದೃಷ್ಟಿಕೋನಗಳಿಗೇ ಗಟ್ಟಿಯಾಗಿ ಅಂಟಿಕೊಳ್ಳುತ್ತಿದ್ದೆನೊ? ಇಲ್ಲವೆ, ಧರ್ಮಶಾಸ್ತ್ರದ ಕುರಿತಾದ ಯೋಗ್ಯ ತಿಳಿವಳಿಕೆಯು ಸ್ಪಷ್ಟವಾಗುವ ವರೆಗೂ ತಾಳ್ಮೆಯಿಂದಿರುತ್ತಿದ್ದೆನೊ? ಮತ್ತು ಅದು ಸ್ಪಷ್ಟವಾದಾಗಲೂ, ನಾನು ಹೃತ್ಪೂರ್ವಕವಾಗಿ ಬೆಂಬಲವನ್ನು ಕೊಡುತ್ತಿದ್ದೆನೊ?’

19 ನಾವು ಆ ಸಮಯದಲ್ಲಿ ಜೀವಿಸುತ್ತಿದ್ದಲ್ಲಿ ಹೇಗೆ ಪ್ರತಿಕ್ರಿಯಿಸುತ್ತಿದ್ದೇವು ಎಂಬುದರ ಬಗ್ಗೆ ನಾವು ನಿಶ್ಚಿತವಾಗಿ ಹೇಳಸಾಧ್ಯವಿಲ್ಲ ನಿಜ. ಆದರೆ ನಾವು ಹೀಗೆ ಕೇಳಿಕೊಳ್ಳಬಹುದು: ‘ಬೈಬಲ್‌ ತಿಳಿವಳಿಕೆಯ ಬಗ್ಗೆ ಸ್ಪಷ್ಟೀಕರಣಗಳು ಬರುವಾಗ ನಾನು ಹೇಗೆ ಪ್ರತಿಕ್ರಿಯಿಸುತ್ತೇನೆ? (ಮತ್ತಾಯ 24:45) ಶಾಸ್ತ್ರೀಯ ನಿರ್ದೇಶನವು ಕೊಡಲ್ಪಡುವಾಗ, ನಾನದರ ಪ್ರತಿಯೊಂದೂ ಅಕ್ಷರವನ್ನು ಪಾಲಿಸುವುದಲ್ಲದೆ ಅದರ ಹಿಂದಿರುವ ಆತ್ಮವನ್ನು ಪಾಲಿಸುತ್ತಾ, ಅನ್ವಯಿಸಿಕೊಳ್ಳಲು ಪ್ರಯತ್ನಿಸುತ್ತೇನೊ? (1 ಕೊರಿಂಥ 14:20) ಮನಸ್ಸಿನಲ್ಲಿ ಸುಳಿದಾಡುತ್ತಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಳ್ಳಲಿಕ್ಕಾಗಿ ನಾನು ತಾಳ್ಮೆಯಿಂದ ಕಾಯುತ್ತೇನೊ?’ ನಾವು ಎಂದೂ ‘ತಪ್ಪಿಹೋಗದಂತೆ,’ ಇಂದು ಲಭ್ಯವಿರುವ ಆತ್ಮಿಕ ಆಹಾರವನ್ನು ಸದುಪಯೋಗಿಸೋಣ. (ಇಬ್ರಿಯ 2:1) ಯೆಹೋವನು ತನ್ನ ವಾಕ್ಯ, ತನ್ನ ಆತ್ಮ, ಮತ್ತು ತನ್ನ ಭೂಸಂಸ್ಥೆಯ ಮುಖಾಂತರ ನಿರ್ದೇಶನವನ್ನು ಕೊಡುವಾಗ ನಾವು ಜಾಗರೂಕತೆಯಿಂದ ಕಿವಿಗೊಡೋಣ. ನಾವು ಹಾಗೆ ಮಾಡುವಲ್ಲಿ, ಯೆಹೋವನು ನಮ್ಮನ್ನು ಆನಂದದಾಯಕವೂ ತೃಪ್ತಿದಾಯಕವೂ ಆದ ಅಂತ್ಯವಿಲ್ಲದ ಜೀವನದೊಂದಿಗೆ ಆಶೀರ್ವದಿಸುವನು.

[ಪಾದಟಿಪ್ಪಣಿ]

^ ಪ್ಯಾರ. 13 ಪೇತ್ರನು ಸಿರಿಯದ ಅಂತಿಯೋಕ್ಯವನ್ನು ಭೇಟಿಮಾಡಿದಾಗ, ಅನ್ಯಜನಾಂಗದ ವಿಶ್ವಾಸಿಗಳೊಂದಿಗೆ ಹೃತ್ಪೂರ್ವಕವಾದ ಸಹವಾಸದಲ್ಲಿ ಆನಂದಿಸಿದನು. ಆದರೆ ಯೆರೂಸಲೇಮಿನಿಂದ ಯೆಹೂದಿ ಕ್ರೈಸ್ತರು ಅಲ್ಲಿಗೆ ಬಂದಾಗ, ಪೇತ್ರನು ‘ಸುನ್ನತಿಯವರಾದ ಅವರಿಗೆ ಭಯಪಟ್ಟು ಅನ್ಯಜನರನ್ನು ಬಿಟ್ಟು ತನ್ನನ್ನು ಪ್ರತ್ಯೇಕಿಸಿಕೊಂಡನು.’ ಈ ಗೌರವಾನ್ವಿತ ಅಪೊಸ್ತಲನು ತಮ್ಮೊಂದಿಗೆ ಊಟಮಾಡಲು ನಿರಾಕರಿಸಿದಾಗ, ಆ ಅನ್ಯಜನಾಂಗದ ಮತಾಂತರಿಗಳ ಮನಸ್ಸಿಗೆ ಎಷ್ಟು ನೋವಾಗಿರಬೇಕೆಂಬುದನ್ನು ನೀವು ಊಹಿಸಿಕೊಳ್ಳಬಲ್ಲಿರಿ.​—ಗಲಾತ್ಯ 2:​11-13.

ನೀವು ಹೇಗೆ ಪ್ರತಿಕ್ರಿಯಿಸುವಿರಿ?

• ಮೋಶೆಯ ಧರ್ಮಶಾಸ್ತ್ರವು, ‘ಕ್ರಿಸ್ತನಲ್ಲಿಗೆ ಸೇರುವ ತನಕ ಕಾಯುವ ಆಳಿನಂತಿದ್ದದ್ದು’ ಹೇಗೆ?

• ಸತ್ಯದ ತಿಳುವಳಿಕೆಯಲ್ಲಿನ ಹೊಂದಾಣಿಕೆಗಳಿಗೆ ಪೇತ್ರನು ಮತ್ತು ‘ಸುನ್ನತಿಯವರು’ ಪ್ರತಿಕ್ರಿಯಿಸಿದಂಥ ರೀತಿಯಲ್ಲಿನ ಭಿನ್ನತೆಗಳನ್ನು ವಿವರಿಸಿರಿ.

• ಯೆಹೋವನು ಇಂದು ಸತ್ಯವನ್ನು ಪ್ರಕಟಿಸುವ ವಿಧದ ಕುರಿತಾಗಿ ನೀವೇನನ್ನು ಕಲಿತಿದ್ದೀರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 24ರಲ್ಲಿರುವ ಚೌಕ/ಚಿತ್ರ]

ಪೌಲನು ಒಂದು ಪರೀಕ್ಷೆಯನ್ನು ಎದುರಿಸುತ್ತಾನೆ

ಯಶಸ್ವಿಪೂರ್ವಕವಾಗಿ ಒಂದು ಮಿಷನೆರಿ ಪ್ರವಾಸವನ್ನು ಮುಗಿಸಿದ ನಂತರ, ಪೌಲನು ಸಾ.ಶ. 56ರಲ್ಲಿ ಯೆರೂಸಲೇಮಿಗೆ ಆಗಮಿಸುತ್ತಾನೆ. ಅಲ್ಲಿ ಅವನಿಗಾಗಿ ಒಂದು ಪರೀಕ್ಷೆ ಕಾದಿತ್ತು. ಧರ್ಮಶಾಸ್ತ್ರವನ್ನು ಪಕ್ಕಕ್ಕೆ ತಳ್ಳಲಾಗಿದೆ ಎಂಬುದನ್ನು ಅವನು ಕಲಿಸುತ್ತಾನೆಂಬ ಸುದ್ದಿಯು ಸಭೆಯನ್ನು ತಲಪಿತ್ತು. ಹೊಸದಾಗಿ ಮತಾಂತರಿಸಿದ್ದ ಯೆಹೂದಿ ಕ್ರೈಸ್ತರು, ಧರ್ಮಶಾಸ್ತ್ರದ ಕುರಿತಾದ ಪೌಲನ ಮುಚ್ಚುಮರೆಯಿಲ್ಲದ ಮಾತಿನಿಂದ ಮುಗ್ಗರಿಸಿ, ಕ್ರೈಸ್ತರಿಗೆ ಯೆಹೋವನ ಏರ್ಪಾಡುಗಳ ಬಗ್ಗೆ ಗೌರವವಿಲ್ಲ ಎಂಬ ತೀರ್ಮಾನಕ್ಕೆ ಬರುಬಹುದೆಂದು ಅಲ್ಲಿನ ಹಿರಿಯರಿಗೆ ಹೆದರಿಕೆಯಿತ್ತು. ಆ ಸಭೆಯಲ್ಲಿ ಹರಕೆಯನ್ನು ಮಾಡಿದ್ದ, ಬಹುಶಃ ನಾಜೀರನ ಹರಕೆಯನ್ನು ಮಾಡಿದ್ದ ನಾಲ್ಕು ಮಂದಿ ಯೆಹೂದಿ ಕ್ರೈಸ್ತರಿದ್ದರು. ಮತ್ತು ತಮ್ಮ ಹರಕೆಯ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಅವರು ದೇವಾಲಯಕ್ಕೆ ಹೋಗಬೇಕಾಗುತ್ತಿತ್ತು.

ಈ ಹಿರೀ ಪುರುಷರು ಪೌಲನಿಗೆ, ಆ ನಾಲ್ಕು ಮಂದಿಯೊಂದಿಗೆ ದೇವಾಲಯಕ್ಕೆ ಹೋಗಿ, ಅವರ ಖರ್ಚುವೆಚ್ಚಗಳನ್ನು ತೀರಿಸುವಂತೆ ಕೇಳಿಕೊಂಡರು. ಪೌಲನು ಕಡಿಮೆಪಕ್ಷ ಎರಡು ಪ್ರೇರಿತ ಪತ್ರಗಳನ್ನು ಬರೆಯುತ್ತಾ, ಅದರಲ್ಲಿ ರಕ್ಷಣೆಗಾಗಿ ಧರ್ಮಶಾಸ್ತ್ರವನ್ನು ಪಾಲಿಸುವ ಆವಶ್ಯಕತೆಯಿಲ್ಲ ಎಂಬುದಾಗಿ ವಾದಿಸಿದ್ದನು. ಆದರೆ ಅವನು ಇತರರ ಮನಸ್ಸಾಕ್ಷಿಗಳ ಕುರಿತಾಗಿ ಪರಿಗಣನೆಯುಳ್ಳವನಾಗಿದ್ದನು. ಈ ಹಿಂದೆ ಅವನು ಹೀಗೆ ಬರೆದಿದ್ದನು: “ನಿಯಮಗಳಿಗೆ ಅಧೀನರಾದವರನ್ನು ಸಂಪಾದಿಸಿಕೊಳ್ಳುವದಕ್ಕಾಗಿ ಅವರಿಗೆ ನಿಯಮಗಳಿಗೆ ಅಧೀನನಂತಾದೆನು.” (1 ಕೊರಿಂಥ 9:​20-23) ಅತ್ಯಾವಶ್ಯಕವಾದ ಶಾಸ್ತ್ರೀಯ ಮೂಲತತ್ತ್ವಗಳು ಒಳಗೊಂಡಿರುವಲ್ಲೆಲ್ಲ ಎಂದೂ ರಾಜಿಮಾಡಿಕೊಳ್ಳದೆ, ಹಿರೀ ಪುರುಷರ ಸಲಹೆಯನ್ನು ತಾನು ಅಂಗೀಕರಿಸಬಲ್ಲೆನೆಂದು ಪೌಲನಿಗನಿಸಿತು. (ಅ. ಕೃತ್ಯಗಳು 21:​15-26) ಅವನು ಹಾಗೆ ಮಾಡುವುದು ತಪ್ಪಾಗಿರಲಿಲ್ಲ. ಹರಕೆಗಳ ಕುರಿತಾದ ಏರ್ಪಾಡಿನಲ್ಲಿ ಅಶಾಸ್ತ್ರೀಯವಾದ ಯಾವುದೇ ಸಂಗತಿಯಿರಲಿಲ್ಲ, ಮತ್ತು ಆಲಯವನ್ನು ವಿಗ್ರಹಾರಾಧನೆಗಾಗಿ ಅಲ್ಲ ಬದಲಾಗಿ ಶುದ್ಧಾರಾಧನೆಗಾಗಿ ಉಪಯೋಗಿಸಲಾಗಿತ್ತು. ಆದುದರಿಂದ, ವಿಘ್ನವನ್ನುಂಟುಮಾಡಲು ಯಾವುದೇ ಕಾರಣವನ್ನು ಕೊಡದಿರಲಿಕ್ಕಾಗಿ, ಪೌಲನು ಆ ಹಿರೀ ಪುರುಷರು ವಿನಂತಿಸಿದಂತೆ ಮಾಡಿದನು. (1 ಕೊರಿಂಥ 8:13) ಇದನ್ನು ಮಾಡಲು ಪೌಲನು ತುಂಬ ನಮ್ರತೆಯನ್ನು ತೋರಿಸಬೇಕಾಯಿತೆಂಬುದು ನಿಸ್ಸಂದೇಹ. ಈ ವಾಸ್ತವಾಂಶವು ಅವನಿಗಾಗಿರುವ ನಮ್ಮ ಗಣ್ಯತೆಯನ್ನು ಗಾಢವಾಗಿಸುತ್ತದೆ.

[ಪುಟ 22, 23ರಲ್ಲಿರುವ ಚಿತ್ರ]

ಕ್ರೈಸ್ತರ ನಡುವೆ ಮೋಶೆಯ ಧರ್ಮಶಾಸ್ತ್ರದ ಕುರಿತಾದ ಪರಸ್ಪರ ಭಿನ್ನ ಅಭಿಪ್ರಾಯಗಳು ಕೆಲವು ವರ್ಷಗಳವರೆಗೆ ಇದ್ದವು