ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ”

“ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ”

“ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ”

ಯೇಸುವಿನ ಮರಣದ ದಿನ, ಅಂದರೆ ಯೆಹೂದ್ಯರ ನೈಸಾನ್‌ ತಿಂಗಳ 14ನೆಯ ದಿನವು, ಸಾ.ಶ. 33, ಮಾರ್ಚ್‌ 31ರ ಗುರುವಾರದಂದು ಸೂರ್ಯಾಸ್ತಮಾನದ ನಂತರ ಆರಂಭಗೊಂಡಿತು. ಆ ದಿನ ಸಾಯಂಕಾಲ ಯೇಸು ಮತ್ತು ಅವನ ಅಪೊಸ್ತಲರು ಪಸ್ಕಹಬ್ಬವನ್ನು ಆಚರಿಸಲಿಕ್ಕಾಗಿ ಯೆರೂಸಲೇಮಿನಲ್ಲಿದ್ದ ಮನೆಯೊಂದರ ಮೇಲಂತಸ್ತಿನ ಕೋಣೆಯಲ್ಲಿ ಕೂಡಿಬಂದರು. “ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ” ಹೋಗಲು ಸಿದ್ಧನಾಗಿದ್ದ ಯೇಸು, ತನ್ನ ಅಪೊಸ್ತಲರನ್ನು ಕೊನೆಯ ವರೆಗೂ ಪ್ರೀತಿಸಿದನೆಂಬುದನ್ನು ತೋರಿಸಿದನು. (ಯೋಹಾನ 13:1) ಹೇಗೆ? ಮುಂದೆ ಸಂಭವಿಸಲಿದ್ದ ಸಂಗತಿಗಳ ವಿಷಯದಲ್ಲಿ ಅವರನ್ನು ಸಿದ್ಧಪಡಿಸುತ್ತಾ, ಅವರಿಗೆ ಮಹತ್ವಭರಿತ ಪಾಠಗಳನ್ನು ಕಲಿಸುವ ಮೂಲಕವೇ.

ರಾತ್ರಿಯಾಗುತ್ತಾ ಬಂದಂತೆ ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ.” (ಯೋಹಾನ 16:33) ಅವನ ಈ ದಿಟ್ಟ ಹೇಳಿಕೆಯ ಅರ್ಥವೇನಾಗಿತ್ತು? ಭಾಗಶಃ ಅದು ಹೀಗಿತ್ತು: ‘ಈ ಲೋಕದಲ್ಲಿರುವ ಕೆಟ್ಟತನವು ನನ್ನಲ್ಲಿ ಕಹಿ ಮನೋಭಾವವನ್ನು ಉಂಟುಮಾಡಿಲ್ಲ ಅಥವಾ ಅದು ನಾನು ಸೇಡನ್ನು ತೀರಿಸಿಕೊಳ್ಳುವಂತೆಯೂ ಮಾಡಿಲ್ಲ. ಈ ಲೋಕವು ತನ್ನ ಅಚ್ಚಿನಲ್ಲಿ ನನ್ನನ್ನು ರೂಪಿಸುವಂತೆ ನಾನು ಅನುಮತಿಸಿಲ್ಲ. ನಿಮ್ಮ ವಿಷಯದಲ್ಲಿಯೂ ಇದು ನಿಜವಾಗಸಾಧ್ಯವಿದೆ.’ ತನ್ನ ಭೂಜೀವಿತದ ಆ ಅಂತಿಮ ತಾಸುಗಳಲ್ಲಿ ಯೇಸು ತನ್ನ ನಂಬಿಗಸ್ತ ಅಪೊಸ್ತಲರಿಗೆ ಕಲಿಸಿದ ವಿಷಯಗಳು, ಅವರು ಸಹ ಅದೇ ರೀತಿಯಲ್ಲಿ ಲೋಕವನ್ನು ಜಯಿಸುವಂತೆ ಸಹಾಯಮಾಡಲಿದ್ದವು.

ಇಂದು ಲೋಕದಲ್ಲಿ ಕೆಟ್ಟತನವು ಅತ್ಯಧಿಕವಾಗಿದೆ ಎಂಬುದನ್ನು ಯಾರು ತಾನೇ ಅಲ್ಲಗಳೆಯುವರು? ಅನ್ಯಾಯಗಳು ಹಾಗೂ ಅರ್ಥಹೀನ ಹಿಂಸಾಕೃತ್ಯಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಇವು ನಮ್ಮಲ್ಲಿ ಹಗೆತನವನ್ನು ಉಂಟುಮಾಡುತ್ತವೋ ಅಥವಾ ಮುಯ್ಯಿಗೆ ಮುಯ್ಯಿ ತೀರಿಸುವಂತೆ ನಮ್ಮನ್ನು ಪ್ರಲೋಭಿಸುತ್ತವೋ? ನಮ್ಮ ಸುತ್ತಲಿರುವ ನೈತಿಕ ಅವನತಿಯಿಂದ ನಾವು ಹೇಗೆ ಪ್ರಭಾವಿಸಲ್ಪಟ್ಟಿದ್ದೇವೆ? ಇದಕ್ಕೆ ಕೂಡಿಸಿ, ನಮಗೆ ನಮ್ಮ ಮಾನವ ಅಪರಿಪೂರ್ಣತೆಗಳೂ ಪಾಪಪೂರ್ಣ ಪ್ರವೃತ್ತಿಗಳೂ ಇವೆ ಮತ್ತು ಹೊರಗಿನ ದುಷ್ಟ ಲೋಕ ಹಾಗೂ ನಮ್ಮೊಳಗೇ ಇರುವ ಕೆಟ್ಟ ಪ್ರವೃತಿಗಳೆಂಬ ಎರಡು ಕದನರಂಗಗಳಲ್ಲಿ ನಾವು ಹೋರಾಟವನ್ನು ನಡೆಸಬೇಕಾಗಿದೆ. ದೇವರ ಸಹಾಯವಿಲ್ಲದೆ ಕೊನೆಗೆ ಜಯಶಾಲಿಗಳಾಗಿ ಪರಿಣಮಿಸುವೆವೆಂದು ನಾವು ನಿಜವಾಗಿಯೂ ನಿರೀಕ್ಷೆಯಿಂದಿರಬಲ್ಲೆವೋ? ನಾವು ಆತನ ಸಹಾಯವನ್ನು ಹೇಗೆ ಪಡೆದುಕೊಳ್ಳಬಲ್ಲೆವು? ಶಾರೀರಿಕ ಪ್ರವೃತ್ತಿಗಳನ್ನು ವಿರೋಧಿಸಲು ನಮಗೆ ಸಹಾಯಮಾಡುವ ಯಾವ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕು? ಉತ್ತರಗಳಿಗಾಗಿ, ಯೇಸು ತನ್ನ ಭೂಜೀವಿತದ ಕೊನೆಯ ದಿನದಂದು ತನ್ನ ಪ್ರಿಯ ಶಿಷ್ಯರಿಗೆ ಏನನ್ನು ಕಲಿಸಿದನೋ ಅದನ್ನು ನಾವೀಗ ಪರಿಗಣಿಸೋಣ.

ದೀನಭಾವದಿಂದ ಅಹಂಕಾರವನ್ನು ಜಯಿಸಿರಿ

ಉದಾಹರಣೆಗೆ, ಅಹಂಕಾರ ಅಥವಾ ಅಹಂಭಾವದ ಸಮಸ್ಯೆಯನ್ನು ಪರಿಗಣಿಸಿರಿ. ಇದರ ಕುರಿತು ಬೈಬಲು ಹೇಳುವುದು: “ಗರ್ವದಿಂದ ಭಂಗ, ಉಬ್ಬಿನಿಂದ ದೊಬ್ಬು.” (ಜ್ಞಾನೋಕ್ತಿ 16:18) ಶಾಸ್ತ್ರವಚನಗಳು ನಮಗೆ ಹೀಗೂ ಸಲಹೆ ನೀಡುತ್ತವೆ: “ಯಾವನಾದರೂ ಅಲ್ಪನಾಗಿದ್ದು ತಾನು ದೊಡ್ಡವನೆಂದು ಭಾವಿಸಿಕೊಂಡರೆ ತನ್ನನ್ನು ತಾನೇ ಮೋಸಗೊಳಿಸಿದವನಾಗಿದ್ದಾನೆ.” (ಗಲಾತ್ಯ 6:3) ಹೌದು, ಅಹಂಕಾರವು ನಿಜವಾಗಿಯೂ ವಿನಾಶಕರವಾಗಿದೆ ಮತ್ತು ವಂಚನಾತ್ಮಕವಾಗಿದೆ. ನಾವು “ಗರ್ವ, ಅಹಂಭಾವ”ವನ್ನು ದ್ವೇಷಿಸುವುದು ವಿವೇಕಯುತವಾಗಿರುವುದು.​—ಜ್ಞಾನೋಕ್ತಿ 8:13.

ಗರ್ವ ಹಾಗೂ ಅಹಂಕಾರದ ವಿಷಯದಲ್ಲಿ ಯೇಸುವಿನ ಅಪೊಸ್ತಲರಿಗೆ ಒಂದು ಸಮಸ್ಯೆಯಿತ್ತೋ? ಕಡಿಮೆಪಕ್ಷ ಒಂದು ಸಂದರ್ಭದಲ್ಲಿಯಾದರೂ, ತಮ್ಮಲ್ಲಿ ಯಾರು ಹೆಚ್ಚಿನವನು ಎಂಬುದರ ಕುರಿತು ಅವರು ವಾಗ್ವಾದಮಾಡಿದರು. (ಮಾರ್ಕ 9:​33-37) ಇನ್ನೊಂದು ಸಂದರ್ಭದಲ್ಲಿ, ಯಾಕೋಬ ಮತ್ತು ಯೋಹಾನರು ರಾಜ್ಯದಲ್ಲಿ ತಮಗೆ ಪ್ರಧಾನ ಸ್ಥಾನಗಳನ್ನು ಕೊಡಬೇಕೆಂದು ಬೇಡಿಕೊಂಡರು. (ಮಾರ್ಕ 10:​35-45) ತನ್ನ ಶಿಷ್ಯರು ಈ ಪ್ರವೃತ್ತಿಯನ್ನು ತಮ್ಮಿಂದ ತೆಗೆದುಹಾಕುವಂತೆ ಅವರಿಗೆ ಸಹಾಯಮಾಡಲು ಯೇಸು ಅಪೇಕ್ಷಿಸಿದನು. ಆದುದರಿಂದ, ಪಸ್ಕದೂಟವನ್ನು ಮಾಡುತ್ತಿದ್ದಾಗ, ಅವನು ಊಟವನ್ನು ಬಿಟ್ಟು ಎದ್ದು ಒಂದು ಕೈಪಾವುಡವನ್ನು ನಡುವಿಗೆ ಕಟ್ಟಿಕೊಂಡು, ತನ್ನ ಶಿಷ್ಯರ ಕಾಲುಗಳನ್ನು ತೊಳೆಯತೊಡಗಿದನು. ಅವರು ಯಾವ ಪಾಠವನ್ನು ಕಲಿಯಬೇಕೆಂದು ಯೇಸು ಬಯಸಿದನೋ ಅದರ ವಿಷಯದಲ್ಲಿ ಅವನು ಬಿಚ್ಚುಮನಸ್ಸಿನವನಾಗಿದ್ದನು. ಯೇಸು ಹೇಳಿದ್ದು: “ಕರ್ತನೂ ಗುರುವೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಳೆದಿರಲಾಗಿ ನೀವು ಸಹ ಒಬ್ಬರ ಕಾಲನ್ನು ಒಬ್ಬರು ತೊಳೆಯುವ ಹಂಗಿನವರಾಗಿದ್ದೀರಿ.” (ಯೋಹಾನ 13:14) ಅಹಂಕಾರವನ್ನು ಅದರ ವಿರುದ್ಧ ಗುಣವಾದ ದೀನಭಾವದಿಂದ ಭರ್ತಿಮಾಡಿಕೊಳ್ಳಬೇಕು.

ಆದರೂ ಅಹಂಕಾರವನ್ನು ಜಯಿಸುವುದು ಅಷ್ಟೇನೂ ಸುಲಭವಾದದ್ದಲ್ಲ. ಆ ದಿನ ಸಾಯಂಕಾಲ ಯೇಸು ತನ್ನನ್ನು ಹಿಡಿದುಕೊಡಲಿಕ್ಕಿದ್ದ ಇಸ್ಕರಿಯೋತ ಯೂದನನ್ನು ಕಳುಹಿಸಿದ ಬಳಿಕ, 11 ಮಂದಿ ಅಪೊಸ್ತಲರಲ್ಲಿ ತೀವ್ರವಾದ ವಾಗ್ವಾದವುಂಟಾಯಿತು. ಯಾವ ವಿಷಯದ ಕುರಿತು? ಅವರಲ್ಲಿ ಯಾರು ಹೆಚ್ಚಿನವನು ಎಂಬುದರ ಕುರಿತೇ! ಆಗ ಅವರನ್ನು ಬೈಯುವುದಕ್ಕೆ ಬದಲಾಗಿ, ಇತರರ ಸೇವೆಮಾಡುವುದರ ಪ್ರಾಮುಖ್ಯತೆಯನ್ನು ಯೇಸು ಪುನಃ ತಾಳ್ಮೆಯಿಂದ ಒತ್ತಿಹೇಳಿದನು. ಅವನು ಹೇಳಿದ್ದು: “ಅನ್ಯದೇಶದ ಅರಸರು ತಮ್ಮ ತಮ್ಮ ಜನಗಳ ಮೇಲೆ ದೊರೆತನಮಾಡುತ್ತಾರೆ, ಮತ್ತು ಅವರ ಮೇಲೆ ಅಧಿಕಾರ ನಡಿಸುವವರು ಧರ್ಮಿಷ್ಠರೆನಿಸಿಕೊಳ್ಳುತ್ತಾರೆ. ನೀವು ಹಾಗಿರಬಾರದು; ನಿಮ್ಮಲ್ಲಿ ಹೆಚ್ಚಿನವನು ಚಿಕ್ಕವನಂತಾಗಬೇಕು, ಮುಖ್ಯಸ್ಥನು ಸೇವಕನಂತಾಗಬೇಕು.” ತನ್ನ ಮಾದರಿಯ ಕುರಿತು ಅವರಿಗೆ ಜ್ಞಾಪಕ ಹುಟ್ಟಿಸುತ್ತಾ ಅವನು ಕೂಡಿಸಿ ಹೇಳಿದ್ದು: “ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ.”​—ಲೂಕ 22:​24-27.

ಆ ಅಪೊಸ್ತಲರು ಅವನು ಹೇಳಿದ್ದರ ಅರ್ಥವನ್ನು ಗ್ರಹಿಸಿದರೋ? ಹೌದು ಎಂಬುದು ಸುವ್ಯಕ್ತ. ವರ್ಷಗಳಾನಂತರ ಅಪೊಸ್ತಲ ಪೇತ್ರನು ಬರೆದುದು: “ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ; ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ಕರುಣೆಯೂ ದೀನಭಾವವೂ ಉಳ್ಳವರಾಗಿರಿ.” (1 ಪೇತ್ರ 3:8) ನಾವು ಸಹ ದೀನಭಾವದಿಂದ ಅಹಂಕಾರವನ್ನು ಜಯಿಸುವುದು ಎಷ್ಟು ಅತ್ಯಾವಶ್ಯಕವಾಗಿದೆ! ನಾವು ಕೀರ್ತಿ, ಅಧಿಕಾರ ಅಥವಾ ಸ್ಥಾನಮಾನವನ್ನು ಬೆನ್ನಟ್ಟುವುದರಲ್ಲಿ ಸಿಕ್ಕಿಬೀಳದಿರುವುದು ವಿವೇಕಯುತವಾದದ್ದಾಗಿದೆ. “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ” ಎಂದು ಬೈಬಲು ಹೇಳುತ್ತದೆ. (ಯಾಕೋಬ 4:6) ತದ್ರೀತಿಯಲ್ಲಿ, ಒಂದು ಪುರಾತನ ಜ್ಞಾನೋಕ್ತಿಯು ಹೇಳುವುದು: “ಧನ ಮಾನ ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ.”​—ಜ್ಞಾನೋಕ್ತಿ 22:4.

ದ್ವೇಷವನ್ನು ಜಯಿಸುವುದು​—ಹೇಗೆ?

ಲೋಕದಲ್ಲಿ ಸರ್ವಸಾಮಾನ್ಯವಾಗಿರುವ ಇನ್ನೊಂದು ಪ್ರವೃತ್ತಿಯನ್ನು ಪರಿಗಣಿಸಿರಿ. ಅದು ದ್ವೇಷವಾಗಿದೆ. ಭಯ, ಅಜ್ಞಾನ, ಪೂರ್ವಕಲ್ಪಿತ ಅಭಿಪ್ರಾಯ, ದಬ್ಬಾಳಿಕೆ, ಅನ್ಯಾಯ, ರಾಷ್ಟ್ರೀಯತೆ, ಜಾತಿವಾದ ಅಥವಾ ಕುಲವಾದದ ಕಾರಣಕ್ಕಾಗಿ ದ್ವೇಷವು ತಲೆದೋರಿದೆಯಾದರೂ, ಈ ದ್ವೇಷವು ಎಲ್ಲಾ ಕಡೆಗಳಲ್ಲಿಯೂ ಹಬ್ಬಿರುವಂತೆ ತೋರುತ್ತದೆ. (2 ತಿಮೊಥೆಯ 3:​1-4) ಯೇಸುವಿನ ದಿನದಲ್ಲೂ ದ್ವೇಷವು ವ್ಯಾಪಕವಾಗಿತ್ತು. ಯೆಹೂದಿ ಸಮಾಜದಲ್ಲಿ ಸುಂಕವಸೂಲಿಗಾರರು ದ್ವೇಷಿತ ಜಾತಿಭ್ರಷ್ಟರಾಗಿದ್ದರು. ಯೆಹೂದ್ಯರಿಗೂ ಸಮಾರ್ಯದವರಿಗೂ ಹೊಕ್ಕುಬಳಕೆಯಿರಲಿಲ್ಲ. (ಯೋಹಾನ 4:9) ಮತ್ತು ಅನ್ಯರು ಅಥವಾ ಯೆಹೂದ್ಯೇತರರು ಸಹ ಯೆಹೂದ್ಯರಿಂದ ತುಚ್ಛೀಕರಿಸಲ್ಪಡುತ್ತಿದ್ದರು. ಆದರೂ, ಕಾಲಕ್ರಮೇಣ ಯೇಸು ಸ್ಥಾಪಿಸಿದ ಆರಾಧನಾ ವಿಧಾನವು, ಎಲ್ಲಾ ಜನಾಂಗಗಳ ಜನರನ್ನು ಅಂಗೀಕರಿಸಲಿತ್ತು. (ಅ. ಕೃತ್ಯಗಳು 10:​34, 35; ಗಲಾತ್ಯ 3:28) ಆದುದರಿಂದ ಅವನು ತನ್ನ ಶಿಷ್ಯರಿಗೆ ಹೊಸದಾದ ಒಂದು ವಿಷಯವನ್ನು ಪ್ರೀತಿಪೂರ್ವಕವಾಗಿ ನೀಡಿದನು.

ಯೇಸು ತಿಳಿಸಿದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು.” ಅವರು ಈ ರೀತಿಯ ಪ್ರೀತಿಯನ್ನು ತೋರಿಸಲು ಕಲಿಯಬೇಕಿತ್ತು, ಏಕೆಂದರೆ ಅವನು ಮುಂದುವರಿಸಿ ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:​34, 35) ಯಾವ ಅರ್ಥದಲ್ಲಿ ಈ ಆಜ್ಞೆಯು ಹೊಸದಾಗಿತ್ತೆಂದರೆ, “ನಿಮ್ಮ ನೆರೆಯವರನ್ನು ನಿಮ್ಮಂತೆಯೇ” ಪ್ರೀತಿಸುವುದಕ್ಕಿಂತಲೂ ಹೆಚ್ಚಿನದ್ದು ಇದರಲ್ಲಿ ಒಳಗೂಡಿತ್ತು. (ಯಾಜಕಕಾಂಡ 19:18) ಯಾವ ರೀತಿಯಲ್ಲಿ? ಹೀಗೆ ಹೇಳುವ ಮೂಲಕ ಯೇಸು ವಿಷಯವನ್ನು ಸ್ಪಷ್ಟಪಡಿಸಿದನು: “ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನಾನು ಕೊಡುವ ಆಜ್ಞೆಯಾಗಿದೆ. ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ.” (ಯೋಹಾನ 15:​12, 13) ಅವರು ಪರಸ್ಪರರಿಗಾಗಿ ಮತ್ತು ಇತರರಿಗಾಗಿ ತಮ್ಮ ಜೀವಗಳನ್ನೇ ತ್ಯಾಗಮಾಡಲು ಸಿದ್ಧಮನಸ್ಕರಾಗಿರಬೇಕಿತ್ತು.

ಅಪರಿಪೂರ್ಣ ಮಾನವರು ತಮ್ಮ ಜೀವಿತಗಳಿಂದ ಮತ್ಸರಭರಿತ ದ್ವೇಷವನ್ನು ಹೇಗೆ ತೆಗೆದುಹಾಕಸಾಧ್ಯವಿದೆ? ಅದಕ್ಕೆ ಬದಲಾಗಿ ಸ್ವತ್ಯಾಗದ ಪ್ರೀತಿಯನ್ನು ಬೆಳೆಸಿಕೊಳ್ಳುವ ಮೂಲಕವೇ. ಎಲ್ಲಾ ಕುಲಸಂಬಂಧಿತ, ಸಾಂಸ್ಕೃತಿಕ, ಧಾರ್ಮಿಕ, ಮತ್ತು ರಾಜಕೀಯ ಹಿನ್ನೆಲೆಗಳಿಂದ ಬಂದ ಲಕ್ಷಾಂತರ ವ್ಯಕ್ತಿಗಳು ಈ ರೀತಿಯ ಪ್ರೀತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಅವರೆಲ್ಲರೂ ಈಗ ಒಂದೇ ಐಕ್ಯ, ದ್ವೇಷಮುಕ್ತ ಸಮುದಾಯದಲ್ಲಿ ಸಂಯೋಜಿಸಲ್ಪಡುತ್ತಿದ್ದಾರೆ. ಅದು ಯೆಹೋವನ ಸಾಕ್ಷಿಗಳ ಭೌಗೋಲಿಕ ವಿಶ್ವವ್ಯಾಪಿ ಸಹೋದರರ ಬಳಗವೇ ಆಗಿದೆ. ಅವರು ಅಪೊಸ್ತಲ ಯೋಹಾನನ ಪ್ರೇರಿತ ಮಾತುಗಳನ್ನು ಮನಸ್ಸಿಗೆ ತೆಗೆದುಕೊಳ್ಳುತ್ತಾರೆ: “ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ, ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವದಿಲ್ಲವೆಂಬದು ನಿಮಗೆ ಗೊತ್ತಾಗಿದೆ.” (1 ಯೋಹಾನ 3:15) ನಿಜ ಕ್ರೈಸ್ತರು ಯಾವುದೇ ಯುದ್ಧದಲ್ಲಿ ಒಳಗೂಡಲು ನಿರಾಕರಿಸುತ್ತಾರೆ ಮಾತ್ರವಲ್ಲ ಒಬ್ಬರು ಇನ್ನೊಬ್ಬರಿಗಾಗಿ ಪ್ರೀತಿಯನ್ನು ತೋರಿಸಲು ಸಹ ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುತ್ತಾರೆ.

ಆದರೂ, ಯಾರು ನಮ್ಮ ಜೊತೆ ವಿಶ್ವಾಸಿಗಳಾಗಿಲ್ಲವೋ ಅವರ ಬಗ್ಗೆ ಮತ್ತು ನಮ್ಮ ಕಡೆಗೆ ದ್ವೇಷವನ್ನು ತೋರಿಸಬಹುದಾದವರ ಬಗ್ಗೆ ನಮಗೆ ಯಾವ ಮನೋಭಾವವಿರಬೇಕು? ಯಾತನಾ ಕಂಭದ ಮೇಲೆ ತೂಗುಹಾಕಲ್ಪಟ್ಟಿದ್ದಾಗ, ತನ್ನ ವಧಕಾರರ ಪರವಾಗಿ ಮಾಡಿದ ಪ್ರಾರ್ಥನೆಯಲ್ಲಿ ಯೇಸು ಹೇಳಿದ್ದು: “ತಂದೆಯೇ, ಅವರಿಗೆ ಕ್ಷಮಿಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು.” (ಲೂಕ 23:34) ದ್ವೇಷಭರಿತ ಜನರು ಶಿಷ್ಯನಾಗಿದ್ದ ಸ್ತೆಫನನನ್ನು ಕಲ್ಲೆಸೆದು ಕೊಂದಾಗ, ಅವನ ಅಂತಿಮ ನುಡಿಗಳು ಹೀಗಿದ್ದವು: “ಕರ್ತನೇ [“ಯೆಹೋವನೇ,” NW], ಈ ಪಾಪವನ್ನು ಅವರ ಮೇಲೆ ಹೊರಿಸಬೇಡ.” (ಅ. ಕೃತ್ಯಗಳು 7:60) ಯೇಸು ಮತ್ತು ಸ್ತೆಫನರು, ತಮ್ಮನ್ನು ದ್ವೇಷಿಸಿದಂಥ ಜನರ ಬಗ್ಗೆಯೂ ಒಳಿತನ್ನು ಬಯಸಿದರು. ಅವರ ಹೃದಯಗಳಲ್ಲಿ ಹಗೆತನವಿರಲಿಲ್ಲ. “ಎಲ್ಲರಿಗೆ ಒಳ್ಳೇದನ್ನು ಮಾಡೋಣ” ಎಂದು ಬೈಬಲು ನಮಗೆ ಸಲಹೆ ನೀಡುತ್ತದೆ.​—ಗಲಾತ್ಯ 6:10.

‘ಸದಾಕಾಲಕ್ಕಾಗಿ ಸಹಾಯಕ’

ತನ್ನ 11 ಮಂದಿ ಅಪೊಸ್ತಲರೊಂದಿಗಿನ ಕೂಟವು ಮುಂದುವರಿದಂತೆ, ಇನ್ನು ಮುಂದೆ ತಾನು ಶಾರೀರಿಕವಾಗಿ ಅವರೊಂದಿಗೆ ಇರುವುದಿಲ್ಲ ಎಂಬುದನ್ನು ಯೇಸು ಅವರಿಗೆ ತಿಳಿಸಿದನು. (ಯೋಹಾನ 14:28; 16:28) ಆದರೆ ಅವನು ಅವರಿಗೆ ಆಶ್ವಾಸನೆ ನೀಡಿದ್ದು: “ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು.” (ಯೋಹಾನ 14:16) ವಾಗ್ದಾನಿಸಲ್ಪಟ್ಟ ಸಹಾಯಕವು ದೇವರ ಪವಿತ್ರಾತ್ಮವೇ ಆಗಿತ್ತು. ಇದು ಅವರಿಗೆ ಶಾಸ್ತ್ರವಚನಗಳ ಗಹನವಾದ ವಿಚಾರಗಳನ್ನು ಕಲಿಸಲಿತ್ತು ಮತ್ತು ಯೇಸು ತನ್ನ ಭೂಶುಶ್ರೂಷೆಯ ಸಮಯದಲ್ಲಿ ಅವರಿಗೆ ಏನನ್ನು ಕಲಿಸಿದ್ದನೋ ಆ ವಿಷಯಗಳನ್ನು ಅವರ ಮನಸ್ಸುಗಳಿಗೆ ಹಿಂತರಲಿತ್ತು.​—ಯೋಹಾನ 14:26.

ಇಂದು ಪವಿತ್ರಾತ್ಮವು ನಮಗೆ ಹೇಗೆ ಸಹಾಯಮಾಡಬಲ್ಲದು? ಬೈಬಲು ದೇವರ ಪ್ರೇರಿತ ವಾಕ್ಯವಾಗಿದೆ. ಪ್ರವಾದನೆಗಳನ್ನು ನುಡಿಯಲು ಮತ್ತು ಬೈಬಲನ್ನು ಬರೆಯಲು ಉಪಯೋಗಿಸಲ್ಪಟ್ಟ ಪುರುಷರು, “ಪವಿತ್ರಾತ್ಮ ಪ್ರೇರಿತರಾಗಿ”ದ್ದರು. (2 ಪೇತ್ರ 1:​20, 21; 2 ತಿಮೊಥೆಯ 3:16) ನಾವು ಶಾಸ್ತ್ರವಚನಗಳನ್ನು ಅಧ್ಯಯನ ಮಾಡುವುದು ಮತ್ತು ನಾವು ಕಲಿತುಕೊಳ್ಳುವ ವಿಷಯಗಳನ್ನು ಅನ್ವಯಿಸಿಕೊಳ್ಳುವುದು, ನಮಗೆ ಜ್ಞಾನ, ವಿವೇಕ, ತಿಳಿವಳಿಕೆ, ಒಳನೋಟ, ವಿವೇಚನಾಶಕ್ತಿ, ಮತ್ತು ಆಲೋಚನಾ ಸಾಮರ್ಥ್ಯವನ್ನು ಕೊಡುತ್ತದೆ. ಹೀಗಿರುವುದರಿಂದ, ಈ ದುಷ್ಟ ಲೋಕದ ಒತ್ತಡಗಳನ್ನು ಎದುರಿಸಲು ನಾವು ಹೆಚ್ಚು ಉತ್ತಮ ರೀತಿಯಲ್ಲಿ ಸಿದ್ಧರಾಗಿಲ್ಲವೋ?

ಇನ್ನೊಂದು ವಿಧದಲ್ಲಿಯೂ ಪವಿತ್ರಾತ್ಮವು ಒಂದು ಸಹಾಯಕವಾಗಿದೆ. ದೇವರ ಪವಿತ್ರಾತ್ಮವು ಒಳ್ಳೇದಕ್ಕಾಗಿರುವ ಪ್ರಬಲ ಶಕ್ತಿಯಾಗಿದ್ದು, ಅದರ ಪ್ರಭಾವಕ್ಕೆ ಒಳಗಾದವರು ದೈವಿಕ ಗುಣಗಳನ್ನು ತೋರಿಸುವಂತೆ ಅವರನ್ನು ಸಮರ್ಥರನ್ನಾಗಿ ಮಾಡುತ್ತದೆ. “ದೇವರಾತ್ಮನಿಂದ ಉಂಟಾಗುವ ಫಲವೇನಂದರೆ​—ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ ಇಂಥವುಗಳೇ” ಎಂದು ಬೈಬಲು ಹೇಳುತ್ತದೆ. ಅನೈತಿಕತೆ, ಹಗೆತನ, ಹೊಟ್ಟೆಕಿಚ್ಚು, ಸಿಟ್ಟು ಹಾಗೂ ಇನ್ನಿತರ ಶಾರೀರಿಕ ಪ್ರವೃತ್ತಿಗಳನ್ನು ಜಯಿಸಲು ನಮಗೆ ಬೇಕಾಗಿರುವ ಗುಣಗಳು ಇವೇ ಅಲ್ಲವೋ?​—ಗಲಾತ್ಯ 5:​19-23.

ದೇವರಾತ್ಮದ ಮೇಲೆ ಅವಲಂಬಿತರಾಗಿರುವ ಮೂಲಕ, ಯಾವುದೇ ತೊಂದರೆ ಅಥವಾ ಸಂಕಟದೊಂದಿಗೆ ವ್ಯವಹರಿಸಲಿಕ್ಕಾಗಿ ಬೇಕಾಗಿರುವ “ಬಲಾಧಿಕ್ಯ”ವನ್ನು ಸಹ ನಾವು ಪಡೆದುಕೊಳ್ಳಸಾಧ್ಯವಿದೆ. (2 ಕೊರಿಂಥ 4:7) ಪವಿತ್ರಾತ್ಮವು ಪರೀಕ್ಷೆಗಳನ್ನು ಅಥವಾ ಶೋಧನೆಗಳನ್ನು ತೆಗೆದುಹಾಕುವುದಿಲ್ಲವಾದರೂ, ಖಂಡಿತವಾಗಿಯೂ ಅವುಗಳನ್ನು ತಾಳಿಕೊಳ್ಳಲು ಅದು ನಮಗೆ ಸಹಾಯಮಾಡಬಲ್ಲದು. (1 ಕೊರಿಂಥ 10:13) “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ” ಎಂದು ಅಪೊಸ್ತಲ ಪೌಲನು ಬರೆದನು. (ಫಿಲಿಪ್ಪಿ 4:13) ತನ್ನ ಪವಿತ್ರಾತ್ಮದ ಮೂಲಕ ದೇವರು ನಮಗೆ ಅಂಥ ಬಲವನ್ನು ದಯಪಾಲಿಸುತ್ತಾನೆ. ಆ ಪವಿತ್ರಾತ್ಮಕ್ಕಾಗಿ ನಾವೆಷ್ಟು ಕೃತಜ್ಞರಾಗಿರಸಾಧ್ಯವಿದೆ! ಯಾರು ‘ಯೇಸುವನ್ನು ಪ್ರೀತಿಸಿ ಅವನ ಆಜ್ಞೆಗಳನ್ನು ಕೈಕೊಂಡು ನಡೆಯುತ್ತಾರೋ’ ಅವರಿಗೆ ಇದು ವಾಗ್ದಾನಿಸಲ್ಪಟ್ಟಿದೆ.​—ಯೋಹಾನ 14:15.

“ನನ್ನ ಪ್ರೀತಿಯಲ್ಲಿ ನೆಲೆಗೊಂಡಿರ್ರಿ”

ಒಬ್ಬ ಮಾನವನೋಪಾದಿ ತನ್ನ ಜೀವಿತದ ಅಂತಿಮ ರಾತ್ರಿಯಂದು, ತನ್ನ ಅಪೊಸ್ತಲರಿಗೆ ಯೇಸು ಇದನ್ನೂ ಹೇಳಿದನು: “ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಕೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ತಂದೆಗೆ ಪ್ರಿಯನಾಗಿರುವನು.” (ಯೋಹಾನ 14:21) “ನನ್ನ ಪ್ರೀತಿಯಲ್ಲಿ ನೆಲೆಗೊಂಡಿರ್ರಿ” ಎಂದು ಅವನು ಅವರನ್ನು ಉತ್ತೇಜಿಸಿದನು. (ಯೋಹಾನ 15:9) ತಂದೆಯ ಹಾಗೂ ಮಗನ ಪ್ರೀತಿಯಲ್ಲಿ ನೆಲೆಗೊಂಡಿರುವುದು, ನಮ್ಮೊಳಗಿರುವ ಪಾಪಪೂರ್ಣ ಪ್ರವೃತ್ತಿಗಳೊಂದಿಗೆ ಮತ್ತು ಹೊರಗಿನ ದುಷ್ಟ ಲೋಕದೊಂದಿಗಿನ ನಮ್ಮ ಹೋರಾಟದಲ್ಲಿ ನಮಗೆ ಹೇಗೆ ಸಹಾಯಮಾಡುತ್ತದೆ?

ಒಂದುವೇಳೆ ಪಾಪಪೂರ್ಣ ಪ್ರವೃತ್ತಿಗಳನ್ನು ನಿಯಂತ್ರಿಸಲಿಕ್ಕಾಗಿರುವ ಬಲವಾದ ಪ್ರಚೋದನೆಯ ಕೊರತೆಯು ನಮಗಿರುವುದಾದರೆ, ನಾವು ನಿಜವಾಗಿಯೂ ಅವುಗಳನ್ನು ನಿಯಂತ್ರಿಸಬಲ್ಲೆವೋ? ಯೆಹೋವ ದೇವರೊಂದಿಗೆ ಮತ್ತು ಆತನ ಮಗನೊಂದಿಗೆ ಒಂದು ಒಳ್ಳೇ ಸಂಬಂಧವನ್ನು ಹೊಂದಿರಲು ಬಯಸುವುದಕ್ಕಿಂತಲೂ ಹೆಚ್ಚು ಮಹತ್ವಭರಿತವಾದ ಇನ್ಯಾವ ಪ್ರೋತ್ಸಾಹನೆಯು ನಮಗಿರಸಾಧ್ಯವಿದೆ? ತನ್ನ ಹದಿಪ್ರಾಯದ ಆರಂಭದಿಂದಲೂ ಅನೈತಿಕ ಜೀವನ ಶೈಲಿಯಲ್ಲೇ ಜೀವಿಸಿದ್ದು, ಈಗ ಆ ಜೀವನ ಶೈಲಿಯ ವಿರುದ್ಧ ಬಲವಾದ ಹೋರಾಟವನ್ನು ನಡಿಸುತ್ತಿರುವ ಅರ್ನೇಸ್ಟೋ * ಎಂಬ ಯುವಕನು ವಿವರಿಸುವುದು: “ನಾನು ದೇವರನ್ನು ಪ್ರಸನ್ನಗೊಳಿಸಲು ಬಯಸಿದೆ, ಮತ್ತು ನಾನು ಜೀವಿಸುತ್ತಿದ್ದ ಜೀವನ ರೀತಿಯು ಆತನಿಗೆ ಸ್ವೀಕಾರಾರ್ಹವಾಗಿಲ್ಲ ಎಂಬುದನ್ನು ಬೈಬಲಿನಿಂದ ಕಲಿತೆ. ಆದುದರಿಂದ, ನಾನು ದೇವರ ಮಾರ್ಗದರ್ಶನಗಳನ್ನು ಅನುಸರಿಸುವಂಥ ಒಬ್ಬ ಭಿನ್ನ ರೀತಿಯ ವ್ಯಕ್ತಿಯಾಗಲು ನಿರ್ಧರಿಸಿದೆ. ಪ್ರತಿ ದಿನ ನಾನು ನನ್ನ ಮನಸ್ಸಿಗೆ ಬರುತ್ತಿದ್ದಂಥ ನಕಾರಾತ್ಮಕ, ಕೆಟ್ಟ ಆಲೋಚನೆಗಳ ವಿರುದ್ಧ ಹೋರಾಟ ನಡೆಸಬೇಕಿತ್ತು. ಆದರೆ ನಾನು ಈ ಹೋರಾಟವನ್ನು ಜಯಿಸಲು ನಿರ್ಧರಿಸಿದ್ದೆ, ಮತ್ತು ದೇವರ ಸಹಾಯಕ್ಕಾಗಿ ನಾನು ಎಡೆಬಿಡದೆ ಪ್ರಾರ್ಥಿಸಿದೆ. ಎರಡು ವರ್ಷಗಳ ಬಳಿಕ ಈ ಕೆಟ್ಟ ಆಲೋಚನೆಗಳ ವಿಪರೀತ ಸ್ಥಿತಿಯು ಕೊನೆಗೊಂಡಿತಾದರೂ, ಈಗಲೂ ನಾನು ನನ್ನನ್ನು ಕಟ್ಟುನಿಟ್ಟಾಗಿರಿಸಿಕೊಂಡಿದ್ದೇನೆ.”

ಹೊರಗಿನ ಲೋಕದೊಂದಿಗಿನ ಹೋರಾಟದ ವಿಷಯದಲ್ಲಿ, ಯೆರೂಸಲೇಮಿನ ಆ ಮೇಲಂತಸ್ತಿನ ಕೋಣೆಯನ್ನು ಬಿಟ್ಟುಹೋಗುವುದಕ್ಕೆ ಮೊದಲು ಯೇಸು ಮಾಡಿದ ಮುಕ್ತಾಯದ ಪ್ರಾರ್ಥನೆಯನ್ನು ಪರಿಗಣಿಸಿರಿ. ತನ್ನ ಶಿಷ್ಯರ ಪರವಾಗಿ ಅವನು ತನ್ನ ತಂದೆಗೆ ಪ್ರಾರ್ಥಿಸುತ್ತಾ ಬೇಡಿಕೊಂಡದ್ದು: “ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.” (ಯೋಹಾನ 17:​15, 16) ಎಷ್ಟು ಪುನರಾಶ್ವಾಸನದಾಯಕ ಮಾತುಗಳಿವು! ತನ್ನನ್ನು ಪ್ರೀತಿಸುವವರನ್ನು ಯೆಹೋವನು ಕಾಪಾಡುತ್ತಾನೆ ಮತ್ತು ಅವರು ಲೋಕದಿಂದ ಪ್ರತ್ಯೇಕರಾಗಿರಲು ಪ್ರಯತ್ನಿಸುವಾಗ ಅವರಿಗೆ ಬಲವನ್ನು ನೀಡುತ್ತಾನೆ.

‘ನಂಬಿಕೆಯನ್ನಿಡಿರಿ’

ಯೇಸುವಿನ ಆಜ್ಞೆಗಳನ್ನು ಪಾಲಿಸುವುದು, ದುಷ್ಟ ಲೋಕ ಹಾಗೂ ನಮ್ಮ ಪಾಪಪೂರ್ಣ ಪ್ರವೃತ್ತಿಗಳ ವಿರುದ್ಧ ನಡೆಸುವ ಹೋರಾಟದಲ್ಲಿ ನಾವು ಜಯಶಾಲಿಗಳಾಗಲು ಖಂಡಿತವಾಗಿಯೂ ಸಹಾಯಮಾಡುತ್ತದೆ. ಇಂಥ ವಿಜಯಗಳು ಪ್ರಾಮುಖ್ಯವಾಗಿರುವುದಾದರೂ, ಅವು ಲೋಕವನ್ನಾಗಲಿ ಬಾಧ್ಯತೆಯಾಗಿ ಬಂದ ಪಾಪವನ್ನಾಗಲಿ ತೆಗೆದುಹಾಕಲಾರವು. ಆದರೆ ನಾವು ಹತಾಶರಾಗುವ ಅಗತ್ಯವಿಲ್ಲ.

“ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು” ಎಂದು ಬೈಬಲು ತಿಳಿಸುತ್ತದೆ. (1 ಯೋಹಾನ 2:17) ‘ತನ್ನನ್ನು ನಂಬುವವರೆಲ್ಲರನ್ನೂ’ ಪಾಪ ಮತ್ತು ಮರಣದಿಂದ ಕಾಪಾಡಲಿಕ್ಕಾಗಿ ಯೇಸು ತನ್ನ ಜೀವವನ್ನೇ ತೆತ್ತನು. (ಯೋಹಾನ 3:16) ಹೀಗೆ, ದೇವರ ಚಿತ್ತ ಮತ್ತು ಉದ್ದೇಶಗಳ ಕುರಿತಾದ ಜ್ಞಾನದಲ್ಲಿ ನಾವು ಬೆಳೆಯುತ್ತಾ ಹೋದಂತೆ, ಯೇಸುವಿನ ಬುದ್ಧಿವಾದವನ್ನು ಮನಸ್ಸಿಗೆ ತೆಗೆದುಕೊಳ್ಳೋಣ: “ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.”​—ಯೋಹಾನ 14:1.

[ಪಾದಟಿಪ್ಪಣಿ]

^ ಪ್ಯಾರ. 22 ಇಲ್ಲಿ ಒಂದು ಬದಲಿ ಹೆಸರು ಉಪಯೋಗಿಸಲ್ಪಟ್ಟಿದೆ.

[ಪುಟ 6, 7ರಲ್ಲಿರುವ ಚಿತ್ರ]

“ನನ್ನ ಪ್ರೀತಿಯಲ್ಲಿ ನೆಲೆಗೊಂಡಿರ್ರಿ” ಎಂದು ಯೇಸು ತನ್ನ ಅಪೊಸ್ತರನ್ನು ಉತ್ತೇಜಿಸಿದನು

[ಪುಟ 7ರಲ್ಲಿರುವ ಚಿತ್ರ]

ಪಾಪ ಮತ್ತು ಅದರ ಪರಿಣಾಮಗಳಿಂದ ವಿಮುಕ್ತಿಯು ಬೇಗನೆ ವಾಸ್ತವವಾಗಲಿದೆ