ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಂತೆಯೇ ಇತರರನ್ನು ವೀಕ್ಷಿಸಲು ಪ್ರಯತ್ನಿಸಿರಿ

ಯೆಹೋವನಂತೆಯೇ ಇತರರನ್ನು ವೀಕ್ಷಿಸಲು ಪ್ರಯತ್ನಿಸಿರಿ

ಯೆಹೋವನಂತೆಯೇ ಇತರರನ್ನು ವೀಕ್ಷಿಸಲು ಪ್ರಯತ್ನಿಸಿರಿ

“ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.”​—1 ಸಮುವೇಲ 16:7.

1, 2. ಎಲೀಯಾಬನ ಕುರಿತಾಗಿ, ಸಮುವೇಲನಿಗಿಂತ ಯೆಹೋವನ ದೃಷ್ಟಿಕೋನವು ಹೇಗೆ ಭಿನ್ನವಾಗಿತ್ತು, ಮತ್ತು ಇದರಿಂದ ನಾವೇನನ್ನು ಕಲಿಯಬಲ್ಲೆವು?

ಯೆಹೋವನು ಸಾ.ಶ.ಪೂ. 11ನೆಯ ಶತಮಾನದಲ್ಲಿ ಪ್ರವಾದಿಯಾದ ಸಮುವೇಲನನ್ನು ಒಂದು ಗುಪ್ತ ಕೆಲಸಕ್ಕಾಗಿ ಕಳುಹಿಸಿದನು. ಆ ಪ್ರವಾದಿಯು, ಇಷಯನೆಂಬ ವ್ಯಕ್ತಿಯ ಮನೆಗೆ ಹೋಗಿ, ಅವನ ಪುತ್ರರಲ್ಲೊಬ್ಬನನ್ನು ಇಸ್ರಾಯೇಲಿನ ಭಾವೀ ರಾಜನಾಗಿ ಅಭಿಷೇಕಿಸುವಂತೆ ಆಜ್ಞಾಪಿಸಿದನು. ಸಮುವೇಲನ ದೃಷ್ಟಿಯು ಇಷಯನ ಜ್ಯೇಷ್ಠಪುತ್ರನಾದ ಎಲೀಯಾಬನ ಮೇಲೆ ಬಿದ್ದ ಕೂಡಲೇ, ದೇವರು ಆಯ್ಕೆಮಾಡಿರುವವನು ತನಗೆ ಸಿಕ್ಕಿದನೆಂದು ಅವನು ನಿಶ್ಚಯಿಸಿದನು. ಆದರೆ ಯೆಹೋವನು ಹೇಳಿದ್ದು: “ನೀನು ಅವನ ಚೆಲುವಿಕೆಯನ್ನೂ ನೀಳವನ್ನೂ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.” (1 ಸಮುವೇಲ 16:6, 7) ಯೆಹೋವನು ಎಲೀಯಾಬನನ್ನು ವೀಕ್ಷಿಸಿದಂಥ ರೀತಿಯಲ್ಲೇ ವೀಕ್ಷಿಸಲು ಸಮುವೇಲನು ತಪ್ಪಿಹೋದನು. *

2 ಮಾನವರು ಇತರರನ್ನು ಅಳೆಯುವಾಗ ಎಷ್ಟು ಸುಲಭವಾಗಿ ತಪ್ಪನ್ನು ಮಾಡಬಲ್ಲರು! ಒಂದು ಬದಿಯಲ್ಲಿ, ಹೊರಗಿನಿಂದ ಆಕರ್ಷಕವಾಗಿದ್ದರೂ ಒಳಗಿಂದ ನೀತಿನಿಷ್ಠೆಗಳಿಲ್ಲದ ವ್ಯಕ್ತಿಗಳಿಂದ ನಾವು ಮೋಸಹೋಗಬಹುದು. ಇನ್ನೊಂದು ಬದಿಯಲ್ಲಿ, ಯಾರ ವ್ಯಕ್ತಿತ್ವ ಲಕ್ಷಣಗಳು ನಮಗೆ ಕಿರಿಕಿರಿಯನ್ನುಂಟು ಮಾಡುತ್ತಿರಬಹುದೊ, ಆ ನಿಷ್ಕಲ್ಮಷ ಮನಸ್ಸಿನ ವ್ಯಕ್ತಿಗಳ ಕಡೆಗಿನ ನಮ್ಮ ಅಭಿಪ್ರಾಯವು ಕಠೋರವಾದದ್ದೂ ಕಟ್ಟುನಿಟ್ಟಿನದ್ದೂ ಆಗಿರಬಹುದು.

3, 4. (ಎ) ಇಬ್ಬರು ಕ್ರೈಸ್ತರ ನಡುವೆ ಸಮಸ್ಯೆಯೇಳುವಲ್ಲಿ, ಅವರಿಬ್ಬರೂ ಏನನ್ನು ಮಾಡಲು ದೃಢನಿರ್ಣಯಮಾಡಬೇಕು? (ಬಿ) ಒಬ್ಬ ಜೊತೆ ವಿಶ್ವಾಸಿಯೊಂದಿಗೆ ನಮಗೊಂದು ಗಂಭೀರವಾದ ಮನಸ್ತಾಪವಿರುವಲ್ಲಿ ನಾವು ಸ್ವತಃ ಯಾವ ಪ್ರಶ್ನೆಗಳನ್ನು ಕೇಳಬೇಕು?

3 ನಾವು ಇತರರ ಬಗ್ಗೆ, ನಮಗೆ ಅನೇಕ ವರ್ಷಗಳಿಂದ ಪರಿಚಯವಿದ್ದವರ ಬಗ್ಗೆಯೂ, ಬೇಗನೆ ತೀರ್ಪುಮಾಡುವಾಗ ಸಮಸ್ಯೆಗಳೇಳಬಲ್ಲವು. ಪ್ರಾಯಶಃ ಒಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದ ಒಬ್ಬ ಕ್ರೈಸ್ತರೊಂದಿಗೆ ನೀವು ಜಗಳವಾಡಿರಬಹುದು. ನೀವು ಆ ಬಿರುಕನ್ನು ಸರಿಪಡಿಸಲು ಬಯಸುತ್ತೀರೊ? ಇದನ್ನು ಮಾಡುವಂತೆ ನಿಮಗೆ ಏನು ಸಹಾಯಮಾಡುವುದು?

4 ನಿಮ್ಮ ಆ ಕ್ರೈಸ್ತ ಸಹೋದರ ಇಲ್ಲವೆ ಸಹೋದರಿಯತ್ತ ಕೂಲಂಕಷ, ದೀರ್ಘ ಹಾಗೂ ಸಕಾರಾತ್ಮಕವಾದ ದೃಷ್ಟಿಯನ್ನೇಕೆ ಹರಿಸಬಾರದು? ಮತ್ತು ಇದನ್ನು ಮಾಡುವಾಗ ಯೇಸುವಿನ ಈ ಮಾತುಗಳನ್ನು ಪರಿಗಣಿಸಿರಿ: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.” (ಯೋಹಾನ 6:44) ನಂತರ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿರಿ: ‘ಯೆಹೋವನು ಈ ವ್ಯಕ್ತಿಯನ್ನು ತನ್ನ ಮಗನ ಬಳಿ ಎಳೆದದ್ದು ಏಕೆ? ಈ ವ್ಯಕ್ತಿಯಲ್ಲಿ ಯಾವ ಅಪೇಕ್ಷಣೀಯ ಗುಣಗಳಿವೆ? ಈ ಗುಣಲಕ್ಷಣಗಳನ್ನು ನಾನು ಉಪೇಕ್ಷಿಸುತ್ತಿದ್ದೇನೊ ಇಲ್ಲವೆ ಮಹತ್ವವಿಲ್ಲದ್ದಾಗಿ ಪರಿಗಣಿಸುತ್ತಿದ್ದೇನೊ? ನಾವು ಆರಂಭದಲ್ಲಿ ಸ್ನೇಹಿತರಾದದ್ದು ಯಾವ ಕಾರಣಕ್ಕಾಗಿ? ಆಗ ಈ ವ್ಯಕ್ತಿಯೆಡೆಗೆ ನನ್ನನ್ನು ಆಕರ್ಷಿಸಿದಂಥ ವಿಷಯಗಳೇನಾಗಿದ್ದವು?’ ಆರಂಭದಲ್ಲಿ ನಿಮಗೆ ಆ ವ್ಯಕ್ತಿಯ ಒಳ್ಳೆಯ ಗುಣಗಳ ಕುರಿತಾಗಿ ಯೋಚಿಸಲು ಕಷ್ಟವಾಗಬಹುದು. ಮತ್ತು ನಿಮಗೆ ಆ ವ್ಯಕ್ತಿಯ ಕುರಿತು ದೀರ್ಘ ಸಮಯದಿಂದಲೂ ನೋವಿನ ಭಾವನೆಗಳಿರುವಲ್ಲಿ ಹೀಗೆ ಮಾಡುವುದು ವಿಶೇಷವಾಗಿ ಕಷ್ಟಕರವಾಗಿರಬಹುದು. ಆದರೆ ನಿಮ್ಮಿಬ್ಬರ ನಡುವಿನ ಆ ಕಂದರವನ್ನು ಮುಚ್ಚುವುದರಲ್ಲಿ ಇದೊಂದು ಅತ್ಯಾವಶ್ಯಕ ಹೆಜ್ಜೆಯಾಗಿದೆ. ಇದನ್ನು ಹೇಗೆ ಮಾಡಸಾಧ್ಯವಿದೆ ಎಂಬುದನ್ನು ದೃಷ್ಟಾಂತಿಸಲು, ಅವರು ಮಾಡಿದ ತಪ್ಪುಗಳ ಆಧಾರದಿಂದ ಕೆಲವೊಮ್ಮೆ ನಕರಾತ್ಮಕವಾಗಿ ದೃಷ್ಟಿಸಲಾಗುವ ಇಬ್ಬರು ಪುರುಷರ ಸಕರಾತ್ಮಕ ಗುಣಗಳ ಕಡೆಗೆ ನಾವು ಗಮನಹರಿಸೋಣ. ಇವರು ಪ್ರವಾದಿಯಾದ ಯೋನ ಮತ್ತು ಅಪೊಸ್ತಲ ಪೇತ್ರ ಆಗಿದ್ದಾರೆ.

ಯೋನನ ಕಡೆಗೆ ಒಂದು ಪ್ರಾಮಾಣಿಕ ನೋಟ

5. ಯೋನನಿಗೆ ಯಾವ ನೇಮಕವನ್ನು ಕೊಡಲಾಯಿತು, ಮತ್ತು ಅವನು ಹೇಗೆ ಪ್ರತಿಕ್ರಿಯಿಸಿದನು?

5 ಯೆಹೋವಾಷನ ಮಗನಾದ ರಾಜ IIನೆಯ ಯಾರೋಬ್ಬಾಮನ ದಿನಗಳಲ್ಲಿ, ಯೋನನು ಉತ್ತರ ರಾಜ್ಯವಾದ ಇಸ್ರಾಯೇಲಿಗೆ ಒಬ್ಬ ಪ್ರವಾದಿಯೋಪಾದಿ ಸೇವೆಸಲ್ಲಿಸಿದನು. (2 ಅರಸುಗಳು 14:​23-25) ಒಂದು ದಿನ ಯೆಹೋವನು ಯೋನನಿಗೆ ಇಸ್ರಾಯೇಲನ್ನು ಬಿಟ್ಟು, ಬಲಿಷ್ಠವಾದ ಅಶ್ಶೂರ ಸಾಮ್ರಾಜ್ಯದ ರಾಜಧಾನಿಯಾದ ನಿನೆವೆಗೆ ಹೋಗುವಂತೆ ಆಜ್ಞಾಪಿಸಿದನು. ಅವನ ನೇಮಕವೇನಾಗಿತ್ತು? ಅವರ ದೊಡ್ಡ ನಗರವು ನಾಶವಾಗಲಿದೆಯೆಂದು ಅಲ್ಲಿನ ನಿವಾಸಿಗಳಿಗೆ ಎಚ್ಚರಿಸುವುದೇ ಆಗಿತ್ತು. (ಯೋನ 1:​1, 2) ಆದರೆ ದೇವರ ನಿರ್ದೇಶನವನ್ನು ಪಾಲಿಸುವ ಬದಲು, ಯೋನನು ಓಡಿಹೋದನು! ಅವನು ನಿನೆವೆಯಿಂದ ತುಂಬ ದೂರದಲ್ಲಿದ್ದ ತಾರ್ಷೀಷಿಗೆ ಹೊರಟಿದ್ದ ಒಂದು ಹಡಗನ್ನು ಹತ್ತಿದನು.​—ಯೋನ 1:3.

6. ಯೆಹೋವನು ಯೋನನನ್ನು ನಿನೆವೆಗೆ ಹೋಗುವಂತೆ ಆಯ್ಕೆಮಾಡಿದ್ದೇಕೆ?

6 ನೀವು ಯೋನನ ಕುರಿತಾಗಿ ಯೋಚಿಸುವಾಗ ನಿಮ್ಮ ಮನಸ್ಸಿಗೆ ಏನು ಬರುತ್ತದೆ? ಅವನೊಬ್ಬ ಅವಿಧೇಯ ಪ್ರವಾದಿಯಾಗಿದ್ದನೆಂದು ನೀವು ನೆನಸುತ್ತೀರೊ? ಮೇಲುನೋಟಕ್ಕೆ ಅವನು ಹಾಗೆ ತೋರಬಹುದು. ಆದರೆ ದೇವರು ಯೋನನನ್ನು ಪ್ರವಾದಿಯಾಗಿ ನೇಮಿಸಿದ್ದು ಅವನು ಅವಿಧೇಯನಾಗಿದದ್ದರಿಂದಲೊ? ಖಂಡಿತವಾಗಿಯೂ ಇಲ್ಲ. ಯೋನನಲ್ಲಿ ನಿಶ್ಚಯವಾಗಿಯೂ ಕೆಲವೊಂದು ಅಪೇಕ್ಷಣೀಯ ಗುಣಗಳಿದ್ದಿರಲೇಬೇಕು. ಒಬ್ಬ ಪ್ರವಾದಿಯೋಪಾದಿ ಅವನಿಗಿದ್ದ ದಾಖಲೆಯನ್ನು ಪರಿಗಣಿಸಿರಿ.

7. ಇಸ್ರಾಯೇಲಿನಲ್ಲಿ ಯೋನನು ಯಾವ ಪರಿಸ್ಥಿತಿಗಳಲ್ಲಿ ಯೆಹೋವನ ಸೇವೆಮಾಡುತ್ತಿದ್ದನು, ಮತ್ತು ಈ ತಿಳುವಳಿಕೆಯು ಅವನ ಕುರಿತಾಗಿ ನಿಮಗಿರುವ ಅಭಿಪ್ರಾಯದ ಮೇಲೆ ಹೇಗೆ ಪರಿಣಾಮಬೀರುತ್ತದೆ?

7 ವಾಸ್ತವದಲ್ಲಿ ಯೋನನು, ಯಾವುದೇ ಪ್ರತಿಕ್ರಿಯೆ ಸಿಗದಂಥ ಕ್ಷೇತ್ರವಾದ ಇಸ್ರಾಯೇಲಿನಲ್ಲಿ ನಂಬಿಗಸ್ತಿಕೆಯಿಂದ ದುಡಿದಿದ್ದನು. ಯೋನನ ಸಮಯದಷ್ಟಕ್ಕೆ ಬದುಕಿದ್ದ ಪ್ರವಾದಿಯಾದ ಆಮೋಸನು, ಆ ಸಮಯದ ಇಸ್ರಾಯೇಲ್ಯರನ್ನು ಪ್ರಾಪಂಚಿಕಭಾವದ ಭೋಗಾನ್ವೇಷಕರು ಎಂದು ವರ್ಣಿಸುತ್ತಾನೆ. * ಆ ದೇಶದಲ್ಲಿ ಕೆಟ್ಟ ಸಂಗತಿಗಳು ನಡೆಯುತ್ತಾ ಇದ್ದರೂ, ಇಸ್ರಾಯೇಲ್ಯರು ಅವುಗಳಿಗೆ ಲಕ್ಷ್ಯವನ್ನೇ ಕೊಡುತ್ತಿರಲಿಲ್ಲ. (ಆಮೋಸ 3:​13-15; 4:4; 6:​4-6) ಆದರೂ, ಯೋನನು ನಂಬಿಗಸ್ತಿಕೆಯಿಂದ ಅವರಿಗೆ ಸಾರುವ ತನ್ನ ನೇಮಕವನ್ನು ಪೂರೈಸಿದನು. ಮತ್ತು ನೀವು ಸುವಾರ್ತೆಯ ಒಬ್ಬ ಘೋಷಕರಾಗಿರುವಲ್ಲಿ, ಸ್ವಸಂತೃಪ್ತರೂ, ಉದಾಸೀನಭಾವದವರೂ ಆಗಿರುವ ಜನರೊಂದಿಗೆ ಮಾತಾಡುವುದು ಎಷ್ಟು ಕಷ್ಟಕರವಾಗಿದೆ ಎಂಬುದು ನಿಮಗೆ ತಿಳಿದೇ ಇದೆ. ಹಾಗಾದರೆ, ಯೋನನಿಗೆ ಬಲಹೀನತೆಗಳಿದ್ದವು ಎಂಬುದನ್ನು ನಾವು ಅಂಗೀಕರಿಸುತ್ತೇವಾದರೂ, ನಂಬಿಕೆಹೀನ ಇಸ್ರಾಯೇಲ್ಯರಿಗೆ ಸಾರಿದಾಗ ಅವನು ತೋರಿಸಿದಂಥ ನಂಬಿಗಸ್ತಿಕೆ ಮತ್ತು ತಾಳ್ಮೆ ಎಂಬ ಗುಣಗಳನ್ನು ಅಲಕ್ಷಿಸದಿರೋಣ.

8. ನಿನೆವೆಯಲ್ಲಿ ಒಬ್ಬ ಇಸ್ರಾಯೇಲ್ಯ ಪ್ರವಾದಿಗೆ ಯಾವ ಪಂಥಾಹ್ವಾನಗಳು ಎದುರುಗೊಳ್ಳಲಿದ್ದವು?

8 ಆದರೆ ನಿನೆವೆಗೆ ಹೋಗುವ ನೇಮಕವು ಅದಕ್ಕಿಂತಲೂ ಹೆಚ್ಚು ಕಷ್ಟಕರವಾದ ನೇಮಕವಾಗಿತ್ತು. ಆ ನಗರವನ್ನು ತಲಪಲು ಯೋನನು 800 ಕಿಲೊಮೀಟರ್‌ಗಳಷ್ಟು ದೂರದ ವರೆಗೆ ನಡೆದುಹೋಗಬೇಕಿತ್ತು. ಇದು, ಸುಮಾರು ಒಂದು ತಿಂಗಳಿನಷ್ಟು ಸಮಯವನ್ನು ಹಿಡಿಯುವ ಪ್ರಯಾಸಕರ ಪ್ರಯಾಣವಾಗಿತ್ತು. ಅಲ್ಲಿ ತಲಪಿದಾಗ, ತಮ್ಮ ಕ್ರೂರತೆಗಾಗಿ ಕುಖ್ಯಾತರಾಗಿದ್ದ ಅಶ್ಶೂರ್ಯರಿಗೆ ಯೋನನು ಸಾರಬೇಕಿತ್ತು. ಆ ಅಶ್ಶೂರ್ಯರ ಯುದ್ಧಗಳಲ್ಲಿ ಕ್ರೂರ ಚಿತ್ರಹಿಂಸೆಯು ನಿತ್ಯ ವೈಶಿಷ್ಟ್ಯವಾಗಿತ್ತು. ಅವರು ತಮ್ಮ ಪಾಶವೀಯತೆಯ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದರು ಸಹ. ಆದುದರಿಂದ ನಿನೆವೆಯು “ರಕ್ತಮಯಪುರಿ” ಎಂದು ಕರೆಯಲ್ಪಡುತ್ತಿದ್ದದ್ದು ಸ್ವಲ್ಪವೂ ಆಶ್ಚರ್ಯವನ್ನುಂಟು ಮಾಡುವುದಿಲ್ಲ!​—ನಹೂಮ 3:​1, 7.

9. ಒಂದು ಭಯಂಕರ ಬಿರುಗಾಳಿಯು ನಾವಿಕರ ಜೀವಕ್ಕೆ ಬೆದರಿಕೆಯನ್ನೊಡ್ಡಿದಾಗ, ಯೋನನು ಯಾವ ಗುಣಗಳನ್ನು ಪ್ರದರ್ಶಿಸಿದನು?

9 ಯೆಹೋವನ ಆಜ್ಞೆಗೆ ವಿಧೇಯನಾಗಲು ಹಿಂದೇಟು ಹಾಕುತ್ತಾ, ಯೋನನು ತನ್ನ ನೇಮಕದಿಂದ ತುಂಬ ದೂರದ ವರೆಗೆ ಕೊಂಡೊಯ್ಯುವ ಒಂದು ಹಡಗನ್ನು ಹತ್ತಿದನು. ಹಾಗಿದ್ದರೂ ಯೆಹೋವನು ತನ್ನ ಪ್ರವಾದಿಯ ಕೈಬಿಡಲಿಲ್ಲ ಇಲ್ಲವೆ ಅವನ ಸ್ಥಾನದಲ್ಲಿ ಬೇರೊಬ್ಬನನ್ನು ನೇಮಿಸಲಿಲ್ಲ. ಅದಕ್ಕೆ ಬದಲಾಗಿ, ಯೋನನು ತನ್ನ ನೇಮಕದ ಗಂಭೀರತೆಯನ್ನು ಗ್ರಹಿಸಿಕೊಳ್ಳುವಂತೆ ಯೆಹೋವನು ಕಾರ್ಯವೆಸಗಿದನು. ದೇವರು ಸಮುದ್ರದಲ್ಲಿ ಒಂದು ಭಯಂಕರ ಬಿರುಗಾಳಿಯೇಳುವಂತೆ ಮಾಡಿದನು. ಯೋನನು ಪ್ರಯಾಣಿಸುತ್ತಿದ್ದ ಹಡಗು ಅಲೆಗಳಿಂದ ಅತ್ತಿತ್ತ ಹೊಯ್ದಾಡುತ್ತಾ ಇತ್ತು. ಯೋನನಿಂದಾಗಿ ನಿರಪರಾಧಿಗಳಾದ ಜನರು ಸಾಯಲಿದ್ದರು! (ಯೋನ 1:4) ಯೋನನು ಹೇಗೆ ಪ್ರತಿಕ್ರಿಯಿಸಲಿದ್ದನು? ತನ್ನಿಂದಾಗಿ, ಹಡಗಿನಲ್ಲಿರುವ ಇತರರು ತಮ್ಮ ಜೀವವನ್ನು ಕಳೆದುಕೊಳ್ಳಬಾರದೆಂಬ ಕಾರಣಕ್ಕಾಗಿ, ಯೋನನು ಅವರಿಗೆ ಹೀಗಂದನು: “ನನ್ನನ್ನೆತ್ತಿ ಸಮುದ್ರದಲ್ಲಿ ಹಾಕಿರಿ; ನಿಮ್ಮ ಮೇಲೆ ಎದ್ದಿರುವ ಸಮುದ್ರವು ಶಾಂತವಾಗುವದು.” (ಯೋನ 1:12) ಆ ನಾವಿಕರು ಕೊನೆಯಲ್ಲಿ ಯೋನನನ್ನು ಎತ್ತಿ ನೀರಿಗೆಸೆದಾಗ, ಯೆಹೋವನು ತನ್ನನ್ನು ಸಮುದ್ರದಿಂದ ರಕ್ಷಿಸುವನೆಂದು ನೆನಸಲಿಕ್ಕಾಗಿ ಅವನಿಗೆ ಯಾವುದೇ ಕಾರಣವಿರಲಿಲ್ಲ. (ಯೋನ 1:15) ಹಾಗಿದ್ದರೂ, ಆ ನಾವಿಕರು ಸಾಯದಂತೆ ಯೋನನು ತನ್ನ ಪ್ರಾಣವನ್ನು ಕೊಡಲೂ ಸಿದ್ಧನಿದ್ದನು. ನಾವಿಲ್ಲಿ, ಧೈರ್ಯ, ನಮ್ರತೆ ಮತ್ತು ಪ್ರೀತಿಯ ಗುಣಗಳು ಪ್ರದರ್ಶಿಸಲ್ಪಡುವುದನ್ನು ನೋಡುವುದಿಲ್ಲವೊ?

10. ಯೋನನ ನೇಮಕವನ್ನು ಯೆಹೋವನು ನವೀಕರಿಸಿದ ನಂತರ ಏನು ಸಂಭವಿಸಿತು?

10 ಕಟ್ಟಕಡೆಗೆ, ಯೆಹೋವನು ಯೋನನನ್ನು ರಕ್ಷಿಸಿದನು. ಯೋನನ ಇತ್ತೀಚಿನ ಕೃತ್ಯಗಳು, ಅವನು ಮುಂದೆ ದೇವರ ಪ್ರತಿನಿಧಿಯೋಪಾದಿ ಸೇವೆಸಲ್ಲಿಸಲು ಅವನನ್ನು ಅನರ್ಹನನ್ನಾಗಿ ಮಾಡಿತೋ? ಇಲ್ಲ. ನಿನೆವೆಯವರ ಬಳಿ ಹೋಗಿ ಸಾರುವಂತೆ ಅವನಿಗಿರುವ ನೇಮಕವನ್ನು ಯೆಹೋವನು ಪುನಃ ಒಮ್ಮೆ ದಯೆ ಮತ್ತು ಪ್ರೀತಿಯಿಂದ ಯೋನನಿಗೆ ತಿಳಿಸಿದನು. ಯೋನ ನಿನೆವೆಗೆ ಬಂದು ತಲಪಿದಾಗ, ಅವನು ಅಲ್ಲಿನ ನಿವಾಸಿಗಳಿಗೆ, ಅವರ ಘೋರ ಕೆಟ್ಟತನವು ದೇವರ ಗಮನಕ್ಕೆ ಬಂದಿದೆ ಮತ್ತು ಅವರ ನಗರವು 40 ದಿನಗಳಲ್ಲಿ ನಾಶವಾಗಲಿದೆಯೆಂದು ಧೈರ್ಯದಿಂದ ತಿಳಿಸಿದನು. (ಯೋನ 1:2; 3:4) ಯೋನನ ನೇರವಾದ ಸಂದೇಶವನ್ನು ಕೇಳಿದ ಬಳಿಕ, ನಿನೆವೆಯವರು ಪಶ್ಚಾತ್ತಾಪಪಟ್ಟರು ಮತ್ತು ಅವರ ನಗರವು ಉಳಿಸಲ್ಪಟ್ಟಿತ್ತು.

11. ಯೋನನು ಒಂದು ಅಮೂಲ್ಯ ಪಾಠವನ್ನು ಕಲಿತನೆಂಬುದು ಯಾವುದು ಸೂಚಿಸುತ್ತದೆ?

11 ಆದರೆ ಇನ್ನೂ ಯೋನನಿಗೆ ಸರಿಯಾದ ದೃಷ್ಟಿಕೋನವಿರಲಿಲ್ಲ. ಹಾಗಿದ್ದರೂ, ಯೆಹೋವನು ಒಂದು ಪ್ರಾಯೋಗಿಕ ಉದಾಹರಣೆಯ ಮೂಲಕ, ತಾನು ಹೊರಗಿನ ತೋರಿಕೆಗಿಂತಲೂ ಹೆಚ್ಚನ್ನು ನೋಡಿ, ಹೃದಯವನ್ನು ಪರೀಕ್ಷಿಸುವವನಾಗಿದ್ದೇನೆಂಬದನ್ನು ಯೋನನು ಕಲಿಯುವಂತೆ ತಾಳ್ಮೆಯಿಂದ ಸಹಾಯಮಾಡಿದನು. (ಯೋನ 4:​5-11) ಯೋನನು ಇದರಿಂದ ಒಂದು ಅಮೂಲ್ಯವಾದ ಪಾಠವನ್ನು ಕಲಿತುಕೊಂಡನು ಎಂಬುದು, ಸ್ವತಃ ಅವನೇ ದಾಖಲಿಸಿದಂಥ ಒಂದು ಪ್ರಾಮಾಣಿಕ ವೃತ್ತಾಂತದಲ್ಲಿ ವ್ಯಕ್ತವಾಗುತ್ತದೆ. ಆ ವೃತ್ತಾಂತದಲ್ಲಿ ತನ್ನ ಕುಂದುಕೊರತೆಗಳ ಕುರಿತಾಗಿ ಬರೆಯುವ, ಅದರಲ್ಲೂ ವಿಶೇಷವಾಗಿ ಪೇಚಿಗೀಡುಮಾಡುವಂಥ ರೀತಿಯ ವಿವರಗಳನ್ನು ಸೇರಿಸುವುದು, ಅವನಿಗಿದ್ದ ನಮ್ರತೆಯ ಇನ್ನೊಂದು ಸಾಕ್ಷ್ಯವಾಗಿದೆ. ಮತ್ತು ತಪ್ಪನ್ನು ಮಾಡಿದ್ದೇನೆಂದು ಒಪ್ಪಿಕೊಳ್ಳಲಿಕ್ಕಾಗಿ ಧೈರ್ಯವು ಬೇಕಾಗುತ್ತದೆ!

12. (ಎ) ಜನರ ಕುರಿತಾಗಿ ಯೆಹೋವನಿಗಿರುವ ಅಭಿಪ್ರಾಯವೇ ಯೇಸುವಿಗೂ ಇದೆಯೆಂದು ನಮಗೆ ಹೇಗೆ ತಿಳಿದಿದೆ? (ಬಿ) ನಾವು ಯಾರಿಗೆ ಸುವಾರ್ತೆಯನ್ನು ಸಾರುತ್ತೇವೊ ಆ ಜನರ ಕುರಿತಾಗಿ ನಾವು ಯಾವ ದೃಷ್ಟಿಕೋನವನ್ನು ಹೊಂದಿರುವಂತೆ ನಮ್ಮನ್ನು ಉತ್ತೇಜಿಸಲಾಗಿದೆ? (ಪುಟ 18ರಲ್ಲಿರುವ ಚೌಕವನ್ನು ನೋಡಿರಿ.)

12 ಶತಮಾನಗಳಾಂತರ, ಯೋನನ ಜೀವನದಲ್ಲಿನ ಒಂದು ಘಟನೆಯ ಕುರಿತಾಗಿ ಯೇಸು ಕ್ರಿಸ್ತನು ಸಕಾರಾತ್ಮಕ ಹೇಳಿಕೆಯನ್ನು ಮಾಡಿದನು. ಅವನಂದದ್ದು: “ಯೋನನು ಹೇಗೆ ಮೂರು ದಿನ ರಾತ್ರಿ ಹಗಲು ದೊಡ್ಡ ಮೀನಿನ ಹೊಟ್ಟೆಯೊಳಗೆ ಇದ್ದನೋ, ಹಾಗೆಯೇ ಮನುಷ್ಯಕುಮಾರನು ಮೂರು ದಿನ ರಾತ್ರಿ ಹಗಲು ಭೂಗರ್ಭದೊಳಗೆ ಇರುವನು.” (ಮತ್ತಾಯ 12:40) ಯೋನನ ಪುನರುತ್ಥಾನವಾದಾಗ, ತನ್ನ ಜೀವಿತದಲ್ಲಿನ ಈ ಕರಾಳ ಅವಧಿಯೊಂದಿಗೆ ಯೇಸು ಸಮಾಧಿಯಲ್ಲಿನ ತನ್ನ ಸಮಯಾವಧಿಯನ್ನು ಹೋಲಿಸಿದ್ದನೆಂಬದು ಅವನಿಗೆ ತಿಳಿದುಬರುವುದು. ತನ್ನ ಸೇವಕರು ತಪ್ಪುಗಳನ್ನು ಮಾಡುವಾಗ ಅವರನ್ನು ತಿರಸ್ಕರಿಸಿಬಿಡದಂಥ ಒಬ್ಬ ದೇವರ ಸೇವೆಮಾಡಲು ನಾವು ಆನಂದಿಸುವುದಿಲ್ಲವೊ? ಕೀರ್ತನೆಗಾರನು ಬರೆದುದು: “ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ. ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತನೆ 103:13, 14) ಆದರೆ ಈ “ಧೂಳಿ”ಯು, ಇಂದಿನ ಅನೇಕ ಅಪರಿಪೂರ್ಣ ಜನರ ಸಮೇತ ದೇವರ ಪವಿತ್ರಾತ್ಮದ ಬೆಂಬಲದಿಂದ ಬಹಳಷ್ಟನ್ನು ಸಾಧಿಸಬಲ್ಲದು!

ಪೇತ್ರನ ಕುರಿತಾದ ಸಮತೋಲನದ ಅಭಿಪ್ರಾಯ

13. ಪೇತ್ರನ ಯಾವ ಗುಣಲಕ್ಷಣಗಳು ಮನಸ್ಸಿಗೆ ಬರಬಹುದು, ಆದರೆ ಯೇಸು ಅವನನ್ನು ಒಬ್ಬ ಅಪೊಸ್ತಲನಾಗಿ ಆಯ್ಕೆಮಾಡಿದ್ದೇಕೆ?

13 ನಾವೀಗ ಸಂಕ್ಷಿಪ್ತವಾಗಿ ಎರಡನೆಯ ಉದಾಹರಣೆಯನ್ನು ಪರಿಗಣಿಸೋಣ. ಅದು ಅಪೊಸ್ತಲ ಪೇತ್ರನದ್ದಾಗಿದೆ. ಪೇತ್ರನನ್ನು ವರ್ಣಿಸುವಂತೆ ನಿಮ್ಮನ್ನು ಕೇಳಲಾಗುವಲ್ಲಿ, ನೀವು ಕೂಡಲೇ, ಆತುರದಿಂದ ವರ್ತಿಸುವವ ಮತ್ತು ಮಿತಿಮೀರಿದ ಭರವಸೆಯುಳ್ಳವ ಎಂಬ ಗುಣಲಕ್ಷಣಗಳ ಕುರಿತಾಗಿ ಯೋಚಿಸುತ್ತೀರೊ? ಕೆಲವೊಮ್ಮೆ ಪೇತ್ರನು ಅಂಥ ಗುಣಲಕ್ಷಣಗಳನ್ನು ತೋರಿಸಿದ್ದನೆಂಬುದು ನಿಜ. ಆದರೆ ನಿಜವಾಗಿಯೂ ಪೇತ್ರನು ಆತುರದಿಂದ ವರ್ತಿಸುವವನು ಇಲ್ಲವೆ ಮಿತಿಮೀರಿದ ಭರವಸೆಯುಳ್ಳ ವ್ಯಕ್ತಿ ಆಗಿರುತ್ತಿದ್ದಲ್ಲಿ, ಯೇಸು ಅವನನ್ನು ತನ್ನ 12 ಮಂದಿ ಅಪೊಸ್ತಲರಲ್ಲಿ ಒಬ್ಬನಾಗಿರುವಂತೆ ಆಯ್ಕೆಮಾಡುತ್ತಿದ್ದನೊ? (ಲೂಕ 6:​12-14) ಖಂಡಿತವಾಗಿಯೂ ಇಲ್ಲ! ಸ್ಪಷ್ಟವಾಗಿಯೇ ಯೇಸು ಆ ದೋಷಗಳನ್ನು ಕಡೆಗಣಿಸಿ, ಪೇತ್ರನ ಸಕಾರಾತ್ಮಕ ಗುಣಗಳನ್ನು ವಿವೇಚಿಸಿತಿಳಿದುಕೊಂಡನು.

14. (ಎ) ಮುಚ್ಚುಮರೆಯಿಲ್ಲದೆ ಆಡಿಬಿಡುವ ಪೇತ್ರನ ಸ್ವಭಾವಕ್ಕೆ ಕಾರಣ ಏನಾಗಿರಬಹುದು? (ಬಿ) ಪೇತ್ರನು ಪದೇ ಪದೇ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ನಾವೇಕೆ ಕೃತಜ್ಞರಾಗಿರಬೇಕು?

14 ಪೇತ್ರನು ಕೆಲವೊಮ್ಮೆ ಬೇರೆ ಅಪೊಸ್ತಲರಿಗಾಗಿ ಪ್ರತಿನಿಧಿಯೋಪಾದಿ ವರ್ತಿಸುತ್ತಿದ್ದನು. ಕೆಲವರು ಇದನ್ನು, ಅವನ ವಿನಯಶೀಲತೆಯ ಕೊರತೆಗೆ ಸಾಕ್ಷ್ಯದೋಪಾದಿ ದೃಷ್ಟಿಸಬಹುದು. ಆದರೆ ವಿಷಯವು ಹಾಗಿತ್ತೊ? ಪೇತ್ರನು ಇತರ ಅಪೊಸ್ತಲರಿಗಿಂತ, ಬಹುಶಃ ಸ್ವತಃ ಯೇಸುವಿಗಿಂತಲೂ ಹಿರಿಯವನಾಗಿದ್ದಿರಬಹುದು ಎಂದು ಕೆಲವರು ಹೇಳುತ್ತಾರೆ. ಆ ಮಾತು ನಿಜವಾಗಿರುವಲ್ಲಿ, ಬಹಳಷ್ಟು ಸಲ ಪೇತ್ರನೇ ಮಾತಾಡಲು ಮೊದಲಿಗನಾಗಿರುತ್ತಿದ್ದದ್ದು ಏಕೆಂಬುದಕ್ಕೆ ಇದು ಕಾರಣವನ್ನು ಕೊಡುತ್ತದೆ. (ಮತ್ತಾಯ 16:22) ಪರಿಗಣಿಸಲಿಕ್ಕಾಗಿ ಇನ್ನೊಂದು ಅಂಶವೂ ಇದೆ. ಪೇತ್ರನು ಒಬ್ಬ ಆತ್ಮಿಕ ವ್ಯಕ್ತಿಯಾಗಿದ್ದನು. ಅವನಿಗಿದ್ದ ಜ್ಞಾನ ದಾಹವು, ಪ್ರಶ್ನೆಗಳನ್ನು ಕೇಳುವಂತೆ ಅವನನ್ನು ಪ್ರಚೋದಿಸಿದವು. ಮತ್ತು ಅವನ ಈ ಪ್ರಶ್ನೆಗಳು ನಮಗೆ ಪ್ರಯೋಜನವನ್ನು ತಂದಿವೆ. ಪೇತ್ರನ ಪ್ರಶ್ನೆಗಳಿಗೆ ಉತ್ತರಿಸುತ್ತಾ ಯೇಸು ಅನೇಕ ಅಮೂಲ್ಯವಾದ ಹೇಳಿಕೆಗಳನ್ನು ಮಾಡಿದ್ದಾನೆ ಮತ್ತು ಇವು ಬೈಬಲಿನಲ್ಲಿ ಸಂರಕ್ಷಿಸಲ್ಪಟ್ಟಿವೆ. ಉದಾಹರಣೆಗಾಗಿ, ಪೇತ್ರನು ಮಾಡಿದ ಒಂದು ಹೇಳಿಕೆಗೆ ಪ್ರತಿಕ್ರಿಯೆಯಲ್ಲೇ ಯೇಸು ‘ನಂಬಿಗಸ್ತ ಮನೆವಾರ್ತೆಯವನ’ ಕುರಿತಾಗಿ ಮಾತಾಡಿದನು. (ಲೂಕ 12:​41-44) ಮತ್ತು ಪೇತ್ರನ ಈ ಪ್ರಶ್ನೆಯನ್ನು ಪರಿಗಣಿಸಿರಿ: “ನಾವು ಎಲ್ಲಾ ಬಿಟ್ಟುಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ನಮಗೆ ಏನು ದೊರಕುವದು”? ಇದು, ಯೇಸುವಿನ ಈ ಬಲವರ್ಧಕ ವಾಗ್ದಾನಕ್ಕೆ ನಡೆಸಿತು: “ನನ್ನ ಹೆಸರಿನ ನಿಮಿತ್ತ ಮನೆಗಳನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಂದೆಯನ್ನಾಗಲಿ ತಾಯಿಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ಬಿಟ್ಟುಬಿಟ್ಟಿರುವವರೆಲ್ಲರಿಗೆ ಅನೇಕ ಪಾಲು ಹೆಚ್ಚಾಗಿ ಸಿಕ್ಕುವದು; ಮತ್ತು ಅವರು ನಿತ್ಯಜೀವಕ್ಕೆ ಬಾಧ್ಯರಾಗುವರು.”​—ಮತ್ತಾಯ 15:15; 18:21, 22; 19:27-29.

15. ಪೇತ್ರನು ನಿಜವಾಗಿಯೂ ನಿಷ್ಠಾವಂತನಾಗಿದ್ದನೆಂದು ಏಕೆ ಹೇಳಸಾಧ್ಯವಿದೆ?

15 ಪೇತ್ರನಿಗೆ ಇನ್ನೊಂದು ಒಳ್ಳೇ ಗುಣವಿತ್ತು​—ಅವನು ನಿಷ್ಠಾವಂತನಾಗಿದ್ದನು. ಯೇಸುವಿನ ಶಿಷ್ಯರಲ್ಲಿ ಅನೇಕರು, ಅವನ ಬೋಧನೆಗಳಲ್ಲೊಂದನ್ನು ಅರ್ಥಮಾಡಿಕೊಳ್ಳಲು ಅಶಕ್ತರಾದಮಾತ್ರಕ್ಕೆ ಅವನನ್ನು ಹಿಂಬಾಲಿಸುವುದನ್ನೇ ಬಿಟ್ಟುಬಿಟ್ಟಾಗ, 12 ಅಪೊಸ್ತಲರ ಪರವಾಗಿ ಹಿಂಜರಿಕೆಯಿಲ್ಲದೆ ಮಾತಾಡುತ್ತಾ ಹೀಗಂದವನು ಪೇತ್ರನೇ: “ಸ್ವಾಮೀ, ನಿನ್ನನ್ನು ಬಿಟ್ಟು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು.” (ಯೋಹಾನ 6:66-68) ಈ ಮಾತುಗಳು ಯೇಸುವಿಗೆ ಎಷ್ಟೊಂದು ನೆಮ್ಮದಿಯನ್ನು ತಂದಿರಬಹುದು! ಆದರೆ ಮುಂದೆ, ಅವರ ಯಜಮಾನನನ್ನು ದಸ್ತಗಿರಿಮಾಡಲು ಜನರ ಗುಂಪು ಬಂದಾಗ ಅವನ ಅಪೊಸ್ತಲರಲ್ಲಿ ಹೆಚ್ಚಿನವರು ಓಡಿಹೋದರು. ಪೇತ್ರನಾದರೊ ಜನಸಮೂಹವನ್ನು ದೂರದಿಂದಲೇ ಹಿಂಬಾಲಿಸಿದನು ಮತ್ತು ನೇರವಾಗಿ ಮಹಾಯಾಜಕನ ಅಂಗಳದೊಳಗೆ ಹೋದನು. ಪುಕ್ಕಲುತನವಲ್ಲ ಬದಲಾಗಿ ಧೈರ್ಯದಿಂದಾಗಿಯೇ ಅವನಲ್ಲಿಗೆ ಹೋದನು. ಯೇಸುವಿನ ವಿಚಾರಣೆಯಾಗುತ್ತಿದ್ದಾಗ ಪೇತ್ರನು, ಬೆಂಕಿಯ ಬಳಿಯಲ್ಲಿ ಚಳಿಕಾಯಿಸುತ್ತಿದ್ದ ಯೆಹೂದ್ಯರ ಗುಂಪಿನೊಂದಿಗೆ ಸೇರಿದನು. ಮಹಾಯಾಜಕನ ಸೇವಕರಲ್ಲೊಬ್ಬನು ಅವನ ಗುರುತುಹಿಡಿದು, ಅವನು ಸಹ ಯೇಸುವಿನೊಂದಿಗಿರುವುದಾಗಿ ಆರೋಪಹೊರಿಸಿದನು. ಪೇತ್ರನು ತನ್ನ ಯಜಮಾನನನ್ನು ಅಲ್ಲಗಳೆದದ್ದು ನಿಜವಾದರೂ, ಅಪೊಸ್ತಲರಲ್ಲಿ ಹೆಚ್ಚಿನವರು ಎದುರಿಸಲು ಧೈರ್ಯಮಾಡದಿದ್ದ ಆ ಅಪಾಯಕಾರಿ ಸನ್ನಿವೇಶದಲ್ಲಿರುವಂತೆ ಮಾಡಿದಂಥದ್ದು, ಪೇತ್ರನಿಗೆ ಯೇಸುವಿನ ಕಡೆಗಿದ್ದ ನಿಷ್ಠೆ ಮತ್ತು ಚಿಂತೆಯೇ ಎಂಬುದನ್ನು ನಾವು ಮರೆಯದಿರೋಣ.​—ಯೋಹಾನ 18:​15-27.

16. ಯೋನ ಮತ್ತು ಪೇತ್ರನ ಸಕಾರಾತ್ಮಕ ಗುಣಗಳನ್ನು ನಾವು ಯಾವ ಪ್ರಾಯೋಗಿಕ ಕಾರಣಕ್ಕಾಗಿ ಪರಿಗಣಿಸಿದ್ದೇವೆ?

16 ಪೇತ್ರನಿಗಿದ್ದ ಸಕಾರಾತ್ಮಕ ಗುಣಗಳು, ಅವನ ಕುಂದುಕೊರತೆಗಳನ್ನು ಎಷ್ಟೋ ಹೆಚ್ಚಾಗಿ ಮೀರಿಸಿದವು. ಯೋನನ ವಿಷಯದಲ್ಲೂ ಇದು ಸತ್ಯವಾಗಿದೆ. ಈಗ ನಾವು ಯೋನ ಮತ್ತು ಪೇತ್ರನ ಬಗ್ಗೆ ಸಾಮಾನ್ಯಕ್ಕಿಂತಲೂ ಹೆಚ್ಚು ಸಕಾರಾತ್ಮಕವಾದ ದೃಷ್ಟಿಕೋನದಿಂದ ನೋಡಿದಂತೆಯೇ, ನಮ್ಮ ಸದ್ಯದ ದಿನದ ಆತ್ಮಿಕ ಸಹೋದರ ಸಹೋದರಿಯರನ್ನು ನಾವು ಅಳೆಯುವಾಗಲೂ ಅದೇ ರೀತಿಯಲ್ಲಿ ಹೆಚ್ಚು ಸಕಾರಾತ್ಮಕರಾಗಿರುವಂತೆ ನಮ್ಮನ್ನೇ ತರಬೇತಿಗೊಳಿಸಬೇಕು. ಹಾಗೆ ಮಾಡುವುದು, ಅವರೊಂದಿಗೆ ಹೆಚ್ಚು ಉತ್ತಮವಾದ ಸಂಬಂಧಕ್ಕೆ ನಡೆಸುವುದು. ಆದರೆ ಇದನ್ನು ಮಾಡುವ ಅಗತ್ಯವೇಕಿದೆ?

ಇಂದು ಆ ಪಾಠವನ್ನು ಅನ್ವಯಿಸಿಕೊಳ್ಳುವುದು

17, 18. (ಎ)ಕ್ರೈಸ್ತರ ನಡುವೆ ಮನಸ್ತಾಪಗಳು ಏಕೆ ಬೆಳೆಯಬಹುದು? (ಬಿ) ಜೊತೆ ವಿಶ್ವಾಸಿಗಳೊಂದಿಗಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಯಾವ ಬೈಬಲ್‌ ಸಲಹೆಯು ನಮಗೆ ಸಹಾಯಮಾಡಬಲ್ಲದು?

17 ಎಲ್ಲಾ ಆರ್ಥಿಕ ಮಟ್ಟಗಳ ಹಾಗೂ ಶಿಕ್ಷಣಿಕ ಮತ್ತು ಜಾತೀಯ ಹಿನ್ನೆಲೆಗಳಿಂದ ಬಂದಿರುವ ಸ್ತ್ರೀಪುರುಷರು, ಮಕ್ಕಳು ಇಂದು ಯೆಹೋವನನ್ನು ಐಕ್ಯದಿಂದ ಸೇವಿಸುತ್ತಿದ್ದಾರೆ. (ಪ್ರಕಟನೆ 7:​9, 10) ಕ್ರೈಸ್ತ ಸಭೆಯಲ್ಲಿ ನಾವು ಎಷ್ಟೊಂದು ವೈವಿಧ್ಯಮಯ ವ್ಯಕ್ತಿತ್ವಗಳನ್ನು ನೋಡುತ್ತೇವೆ! ನಾವು ನಿಕಟ ಸಂಪರ್ಕದಲ್ಲಿದ್ದು ದೇವರನ್ನು ಸೇವಿಸುತ್ತಿರುವುದರಿಂದ, ಆಗಾಗ್ಗೆ ಘರ್ಷಣೆಗಳು ತಲೆದೋರುವುದು ಅನಿವಾರ್ಯ.​—ರೋಮಾಪುರ 12:10; ಫಿಲಿಪ್ಪಿ 2:3.

18 ನಮ್ಮ ಸಹೋದರರ ಕುಂದುಕೊರತೆಗಳ ಬಗ್ಗೆ ನಾವು ಕಣ್ಮುಚ್ಚಿಕೊಂಡು ಇರದಿದ್ದರೂ, ನಾವು ಅವುಗಳ ಮೇಲೆಯೇ ನಮ್ಮ ಇಡೀ ಗಮನವನ್ನು ಕೇಂದ್ರೀಕರಿಸುವುದಿಲ್ಲ. ಅದರ ಬದಲು ನಾವು ಯೆಹೋವನನ್ನು ಅನುಕರಿಸಲು ಪ್ರಯತ್ನಿಸುತ್ತೇವೆ. ಆತನ ಬಗ್ಗೆ ಕೀರ್ತನೆಗಾರನು ಹೀಗೆ ಹಾಡಿದನು: “ಕರ್ತನೇ, [“ಯೆಹೋವನೇ,” NW] ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?” (ಕೀರ್ತನೆ 130:3) ನಮ್ಮ ಮಧ್ಯೆ ಒಡಕನ್ನು ಉಂಟುಮಾಡಬಹುದಾದ ವ್ಯಕ್ತಿತ್ವದ ಗುಣಲಕ್ಷಣಗಳ ಮೇಲೆಯೇ ನಮ್ಮ ಗಮನವನ್ನು ಕೇಂದ್ರೀಕರಿಸುವ ಬದಲು, “ನಾವು ಸಮಾಧಾನಕ್ಕೂ ಪರಸ್ಪರ ಭಕ್ತಿವೃದ್ಧಿಗೂ ಅನುಕೂಲವಾಗಿರುವವುಗಳನ್ನು ಸಾಧಿಸಿಕೊಳ್ಳೋಣ.” (ರೋಮಾಪುರ 14:19) ನಾವು ಪ್ರತಿಯೊಬ್ಬರನ್ನೂ ದೇವರು ವೀಕ್ಷಿಸುವಂತೆಯೇ ವೀಕ್ಷಿಸಲು ಪ್ರಯತ್ನಿಸುತ್ತೇವೆ. ಅಂದರೆ ದೋಷಗಳನ್ನು ಕಡೆಗಣಿಸಿ, ಒಳ್ಳೇ ಗುಣಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತೇವೆ. ನಾವು ಹೀಗೆ ಮಾಡುವಾಗ, ಅದು ನಾವು “ಒಬ್ಬರಿಗೊಬ್ಬರು ಸೈರಿಸಿಕೊಂಡು” ಹೋಗುವಂತೆ ಸಹಾಯಮಾಡುತ್ತದೆ.​—ಕೊಲೊಸ್ಸೆ 3:13.

19. ಗಂಭೀರವಾದ ಮನಸ್ತಾಪಗಳನ್ನು ಇತ್ಯರ್ಥಗೊಳಿಸುವುದರಲ್ಲಿ ಒಬ್ಬ ಕ್ರೈಸ್ತನು ತೆಗೆದುಕೊಳ್ಳಬಹುದಾದ ವ್ಯಾವಹಾರಿಕ ಹೆಜ್ಜೆಗಳ ಪಟ್ಟಿಮಾಡಿರಿ.

19 ಆದರೆ, ನಮ್ಮ ಮನಸ್ಸನ್ನು ಕೊರೆಯುತ್ತಾ ಇರುವಂಥ ಮನಸ್ತಾಪಗಳು ಏಳುವಲ್ಲಿ ಆಗೇನು? (ಕೀರ್ತನೆ 4:4) ನಿಮ್ಮ ಮತ್ತು ಒಬ್ಬ ಜೊತೆ ವಿಶ್ವಾಸಿಯ ನಡುವೆ ಈ ರೀತಿ ಆಗಿದೆಯೊ? ಹಾಗಿರುವಲ್ಲಿ, ಇದನ್ನು ಇತ್ಯರ್ಥಗೊಳಿಸಲು ಏಕೆ ಪ್ರಯತ್ನಿಸಬಾರದು? (ಆದಿಕಾಂಡ 32:​13-15) ಮೊದಲಾಗಿ, ಯೆಹೋವನಿಗೆ ಪ್ರಾರ್ಥಿಸಿ, ಆತನ ಮಾರ್ಗದರ್ಶನಕ್ಕಾಗಿ ಕೇಳಿರಿ. ಅನಂತರ, ಆ ವ್ಯಕ್ತಿಯ ಒಳ್ಳೆಯ ಗುಣಗಳನ್ನು ಮನಸ್ಸಿನಲ್ಲಿಟ್ಟುಕೊಂಡು, “ಜ್ಞಾನದ ಲಕ್ಷಣವಾಗಿರುವ ಶಾಂತಗುಣದಿಂದ” ಅವನನ್ನು ಸಮೀಪಿಸಿರಿ. (ಯಾಕೋಬ 3:13) ನೀವು ಅವನೊಂದಿಗೆ ಸಮಾಧಾನವನ್ನು ಮಾಡಲು ಬಯಸುತ್ತೀರೆಂದು ಅವನಿಗೆ ಹೇಳಿರಿ. ಈ ಪ್ರೇರಿತ ಸಲಹೆಯನ್ನೂ ನೆನಪಿನಲ್ಲಿಡಿ: ‘ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಿ. ಕೋಪಿಸುವದರಲ್ಲಿಯೂ ನಿಧಾನವಾಗಿರಿ.’ (ಯಾಕೋಬ 1:19) ‘ಕೋಪಿಸುವುದರಲ್ಲಿ ನಿಧಾನವಾಗಿರಿ’ ಎಂಬ ಬುದ್ಧಿವಾದವು, ನಿಮ್ಮೆದುರಿಗಿರುವ ವ್ಯಕ್ತಿಯು ನಿಮ್ಮ ಕೋಪವನ್ನೆಬ್ಬಿಸಬಹುದಾದ ಯಾವುದೊ ವಿಷಯವನ್ನು ಮಾಡಬಹುದು ಇಲ್ಲವೆ ಹೇಳಬಹುದು ಎಂಬುದನ್ನು ಪರೋಕ್ಷವಾಗಿ ಸೂಚಿಸುತ್ತದೆ. ಹಾಗಾಗುವಲ್ಲಿ, ಸ್ವನಿಯಂತ್ರಣವನ್ನು ಕಾಪಾಡಿಕೊಳ್ಳಲಿಕ್ಕಾಗಿ ಯೆಹೋವನ ಬಳಿ ಸಹಾಯವನ್ನು ಕೇಳಿರಿ. (ಗಲಾತ್ಯ 5:​22, 23) ನಿಮ್ಮ ಸಹೋದರನು ತನ್ನ ಮನಸ್ಸಿನಲ್ಲಿದ್ದದ್ದನ್ನು ಹೇಳುವಂತೆ ಅನುಮತಿಸಿರಿ ಮತ್ತು ನೀವು ಜಾಗ್ರತೆಯಿಂದ ಕಿವಿಗೊಡಿರಿ. ಅವನು ಹೇಳುವಂಥ ಎಲ್ಲಾ ವಿಷಯದೊಂದಿಗೆ ನೀವು ಸಮ್ಮತಿಸದಿದ್ದರೂ, ನಡುವೆ ಬಾಯಿ ಹಾಕಬೇಡಿ. ಅವನ ಅಭಿಪ್ರಾಯವು ಒಂದುವೇಳೆ ತಪ್ಪಾಗಿರಲೂಬಹುದು. ಆದರೆ ಈ ಕ್ಷಣ ಅವನು ಹಾಗೆ ನೆನಸುತ್ತಾನೆ ಮತ್ತು ಭಾವಿಸುತ್ತಾನೆಂಬದನ್ನು ನೀವು ಅಂಗೀಕರಿಸಬೇಕು. ಸಮಸ್ಯೆಯನ್ನು ಅವನ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸಿರಿ. ಮತ್ತು ಇದರಲ್ಲಿ, ನಿಮ್ಮ ಸಹೋದರನ ದೃಷ್ಟಿಕೋನದಿಂದ ನಿಮ್ಮನ್ನು ನೀವೇ ಅಳೆಯುವುದು ಒಳಗೂಡಿದೆ.​—ಜ್ಞಾನೋಕ್ತಿ 18:17.

20. ಭಿನ್ನಾಭಿಪ್ರಾಯಗಳನ್ನು ಇತ್ಯರ್ಥಗೊಳಿಸುತ್ತಿರುವಾಗ, ಇನ್ನೂ ಯಾವ ಹೆಜ್ಜೆಗಳು ಸಮಾಧಾನ ಮಾಡುವುದರಲ್ಲಿ ಫಲಿಸಬಹುದು?

20 ಮಾತಾಡುವ ಸರದಿ ನಿಮ್ಮದಾಗಿರುವಾಗ, ಇಂಪಾಗಿ ಮಾತಾಡಿರಿ. (ಕೊಲೊಸ್ಸೆ 4:6) ನೀವು ಅವನಲ್ಲಿ ಏನನ್ನು ಇಷ್ಟಪಡುತ್ತೀರೆಂದು ನಿಮ್ಮ ಸಹೋದರನಿಗೆ ಹೇಳಿರಿ. ಆ ಮನಸ್ತಾಪವು ಹುಟ್ಟುವುದಕ್ಕೆ ಕಾರಣವಾದಂಥ, ನೀವು ಮಾಡಿದ ಯಾವುದೇ ವಿಷಯಕ್ಕಾಗಿ ಕ್ಷಮೆಯಾಚಿಸಿರಿ. ನಿಮ್ಮ ನಮ್ರ ಪ್ರಯತ್ನಗಳು ಸಮಾಧಾನದಲ್ಲಿ ಫಲಿಸುವಲ್ಲಿ, ಯೆಹೋವನಿಗೆ ಉಪಕಾರವನ್ನು ಸಲ್ಲಿಸಿರಿ. ಹಾಗಾಗದಿರುವಲ್ಲಿ, ಸಮಾಧಾನವನ್ನು ಮಾಡಲಿಕ್ಕಾಗಿ ಮುಂದಿನ ಅವಕಾಶಗಳಿಗಾಗಿ ಹುಡುಕುತ್ತಾ, ಯೆಹೋವನ ಮಾರ್ಗದರ್ಶನವನ್ನು ಕೋರುತ್ತಾ ಇರಿ.​—ರೋಮಾಪುರ 12:18.

21. ಯೆಹೋವನು ವೀಕ್ಷಿಸುವಂತೆಯೇ ಇತರರನ್ನು ವೀಕ್ಷಿಸಲು ಈ ಚರ್ಚೆಯು ನಿಮಗೆ ಹೇಗೆ ಸಹಾಯಮಾಡಿದೆ?

21 ಯೆಹೋವನು ತನ್ನ ಎಲ್ಲಾ ಸೇವಕರನ್ನು ಪ್ರೀತಿಸುತ್ತಾನೆ. ನಮಗೆ ಅಪರಿಪೂರ್ಣತೆಗಳಿದ್ದರೂ ಆತನು ನಮ್ಮೆಲ್ಲರನ್ನು ಉಪಯೋಗಿಸಲು ಸಂತೋಷಪಡುತ್ತಾನೆ. ಇತರರ ಬಗ್ಗೆ ಆತನಿಗಿರುವ ಅಭಿಪ್ರಾಯದ ಕುರಿತಾಗಿ ನಾವು ಹೆಚ್ಚನ್ನು ಕಲಿಯುತ್ತಾ ಹೋದಂತೆ, ನಮ್ಮ ಸಹೋದರ ಸಹೋದರಿಯರಿಗಾಗಿರುವ ನಮ್ಮ ಪ್ರೀತಿಯು ಬೆಳೆಯುವುದು. ಒಬ್ಬ ಜೊತೆ ಕ್ರೈಸ್ತನಿಗಾಗಿರುವ ನಮ್ಮ ಪ್ರೀತಿಯು ತಣ್ಣಗಾಗಿರುವಲ್ಲಿ, ಅದನ್ನು ಪುನಃ ಹೊತ್ತಿಸಬಹುದು. ಇತರರ ವಿಷಯದಲ್ಲಿ ಸಕಾರಾತ್ಮಕವಾದ ದೃಷ್ಟಿಕೋನವನ್ನು ತೋರಿಸಲು, ಹೌದು ಯೆಹೋವನು ಅವರನ್ನು ವೀಕ್ಷಿಸುವಂತೆಯೇ ವೀಕ್ಷಿಸಲು ನಾವು ದೃಢನಿರ್ಧಾರದ ಪ್ರಯತ್ನವನ್ನು ಮಾಡುವಲ್ಲಿ ನಮಗೆಂಥ ಆಶೀರ್ವಾದವು ದೊರಕುವುದು!

[ಪಾದಟಿಪ್ಪಣಿಗಳು]

^ ಪ್ಯಾರ. 1 ಸುರಸುಂದರನಾದ ಎಲೀಯಾಬನು, ಇಸ್ರಾಯೇಲಿನ ರಾಜನಾಗಲು ಯೋಗ್ಯನಾಗಿರಲಿಲ್ಲ ಎಂಬುದು ಮುಂದೆ ಸ್ಪಷ್ಟವಾಯಿತು. ಏಕೆಂದರೆ, ಫಿಲಿಷ್ಟ್ಯದ ದೈತ್ಯ ಗೊಲ್ಯಾತನು ಇಸ್ರಾಯೇಲ್ಯರಿಗೆ ತನ್ನೊಂದಿಗೆ ಹೋರಾಡುವಂತೆ ಸವಾಲೆಸೆದಾಗ, ಇಸ್ರಾಯೇಲಿನ ಬೇರೆಲ್ಲ ಪುರುಷರಂತೆ ಎಲೀಯಾಬನು ಭಯದಿಂದ ಮುದುರಿಹೋದನು.​—1 ಸಮುವೇಲ 17:​11, 28-30.

^ ಪ್ಯಾರ. 7 ಕೆಲವೊಂದು ದೊಡ್ಡ ವಿಜಯಗಳು ಮತ್ತು ತಮ್ಮ ಹಿಂದಿನ ಕ್ಷೇತ್ರದ ಪುನಸ್ಸ್ಥಾಪನೆ ಹಾಗೂ ಇದರ ಫಲಿತಾಂಶವಾಗಿ ಸಂಗ್ರಹಿಸಲ್ಪಟ್ಟಿರಬಹುದಾದ ಕಪ್ಪದಿಂದಾಗಿ IIನೆಯ ಯಾರೊಬ್ಬಾಮನು, ಉತ್ತರ ರಾಜ್ಯದ ಐಶ್ವರ್ಯವನ್ನು ಹೆಚ್ಚಿಸಲಿಕ್ಕಾಗಿ ಬಹಳಷ್ಟನ್ನು ಮಾಡಿದನೆಂದು ವ್ಯಕ್ತವಾಗುತ್ತದೆ.​—2 ಸಮುವೇಲ 8:6; 2 ಅರಸುಗಳು 14:​23-28; 2 ಪೂರ್ವಕಾಲವೃತ್ತಾಂತ 8:​3, 4; ಆಮೋಸ 6:2.

ನೀವು ಹೇಗೆ ಉತ್ತರಿಸುವಿರಿ?

• ಯೆಹೋವನು ತನ್ನ ನಂಬಿಗಸ್ತ ಸೇವಕರ ಕುಂದುಕೊರತೆಗಳನ್ನು ಯಾವ ದೃಷ್ಟಿಕೋನದಿಂದ ನೋಡುತ್ತಾನೆ?

• ಯೋನ ಮತ್ತು ಪೇತ್ರರ ಯಾವ ಸಕಾರಾತ್ಮಕ ಗುಣಗಳನ್ನು ನೀವು ತಿಳಿಸಬಹುದು?

• ನಿಮ್ಮ ಕ್ರೈಸ್ತ ಸಹೋದರರ ಕುರಿತು ನೀವು ಯಾವ ದೃಷ್ಟಿಕೋನವನ್ನು ಕಾಪಾಡಿಕೊಳ್ಳಲು ದೃಢನಿರ್ಧಾರವನ್ನು ಮಾಡಿದ್ದೀರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 18ರಲ್ಲಿರುವ ಚೌಕ]

ಇತರರು ದೇವರ ದೃಷ್ಟಿಗೆ ಹೇಗೆ ತೋರುತ್ತಾರೆ ಎಂಬುದರ ಕುರಿತು ಯೋಚಿಸಿರಿ

ಯೋನನ ಬೈಬಲ್‌ ವೃತ್ತಾಂತದ ಕುರಿತು ನೀವು ಧ್ಯಾನಿಸುವಾಗ, ನೀವು ಯಾರಿಗೆ ಕ್ರಮವಾಗಿ ಸುವಾರ್ತೆಯನ್ನು ಸಾರುತ್ತೀರೊ ಆ ಜನರ ಕಡೆಗೆ ಒಂದು ಹೊಸ ನೋಟವನ್ನು ಬೀರುವ ಅಗತ್ಯವಿರುವುದನ್ನು ಮನಗಾಣುತ್ತೀರೊ? ಆ ಜನರು ಇಸ್ರಾಯೇಲ್ಯರಂತೆ ಸ್ವಸಂತೃಪ್ತರು ಇಲ್ಲವೆ ಉದಾಸೀನಭಾವದವರು ಆಗಿ, ಅಥವಾ ದೇವರ ಸಂದೇಶಕ್ಕೆ ವಿರೋಧಿಗಳಾಗಿರುವಂತೆ ತೋರಬಹುದು. ಹಾಗಿದ್ದರೂ, ಅವರು ಯೆಹೋವ ದೇವರ ದೃಷ್ಟಿಯಲ್ಲಿ ಹೇಗೆ ತೋರುತ್ತಾರೆ? ಯೋನನ ಸಾರುವಿಕೆಯಿಂದಾಗಿ, ಪಶ್ಚಾತ್ತಾಪಪಟ್ಟ ನಿನೆವೆಯ ರಾಜನಂತೆಯೇ, ಈ ವಿಷಯಗಳ ವ್ಯವಸ್ಥೆಯಲ್ಲಿ ಪ್ರಮುಖರಾಗಿರುವ ಕೆಲವರು ಸಹ ಯೆಹೋವನ ಕಡೆಗೆ ತಿರುಗಬಹುದು.​—ಯೋನ 3:​6, 7.

[ಪುಟ 15ರಲ್ಲಿರುವ ಚಿತ್ರ]

ಯೆಹೋವನು ಇತರರನ್ನು ವೀಕ್ಷಿಸುವಂತೆಯೇ ನೀವೂ ವೀಕ್ಷಿಸುತ್ತೀರೊ?

[ಪುಟ 16, 17ರಲ್ಲಿರುವ ಚಿತ್ರ]

ಯೋನನ ಅನುಭವದ ಕುರಿತು ಯೇಸು ಒಂದು ಸಕಾರಾತ್ಮಕ ಅಂಶವನ್ನು ಕಂಡುಹಿಡಿದು ತಿಳಿಸಿದನು