‘ಸತ್ಯದ ತುಟಿಗಳು ಶಾಶ್ವತವಾಗಿ ಬಾಳುವವು’
‘ಸತ್ಯದ ತುಟಿಗಳು ಶಾಶ್ವತವಾಗಿ ಬಾಳುವವು’
ಒಂದು ಚಿಕ್ಕ ಕಿಡಿಯು, ಇಡೀ ಕಾಡಿಗೆ ಬೆಂಕಿ ಹಚ್ಚಿಸಿ ಕಬಳಿಸಸಾಧ್ಯವಿರುವಂತೆ, ಅದು ಒಬ್ಬ ವ್ಯಕ್ತಿಯ ಇಡೀ ಬಾಳನ್ನೇ ಕಲುಷಿತಗೊಳಿಸಬಲ್ಲದು. ಅದು ವಿಷದಿಂದ ತುಂಬಿರಸಾಧ್ಯವಿದೆ, ಆದರೆ ಅದು “ಜೀವವೃಕ್ಷವು” ಸಹ ಆಗಿರಬಲ್ಲದು. (ಜ್ಞಾನೋಕ್ತಿ 15:4) ಜೀವನ್ಮರಣಗಳು ಅದರ ವಶದಲ್ಲಿವೆ. (ಜ್ಞಾನೋಕ್ತಿ 18:21) ಇದೆಲ್ಲವೂ, ಈ ಪುಟ್ಟ ಅಂಗವಾಗಿರುವ ನಮ್ಮ ನಾಲಿಗೆಗಿರುವ ಶಕ್ತಿಯಾಗಿದೆ. ಅದು ಇಡೀ ದೇಹಕ್ಕೆ ಬೆಂಕಿಹಚ್ಚಿಸಬಲ್ಲದು. (ಯಾಕೋಬ 3:5-9) ಹೀಗಿರುವುದರಿಂದ ನಾವು ನಾಲಿಗೆಯ ಮೇಲೆ ಕಾವಲನ್ನು ಇಡುವಲ್ಲಿ ನಾವು ವಿವೇಕಿಗಳೇ ಸರಿ.
ಬೈಬಲಿನ ಜ್ಞಾನೋಕ್ತಿ ಪುಸ್ತಕದ 12ನೆಯ ಅಧ್ಯಾಯದ ಎರಡನೆಯ ಭಾಗದಲ್ಲಿ, ಪ್ರಾಚೀನ ಇಸ್ರಾಯೇಲಿನ ರಾಜ ಸೊಲೊಮೋನನು, ನಾವು ನಮ್ಮ ಮಾತನ್ನು ಅಂಕೆಯಲ್ಲಿಡಲು ಸಹಾಯಮಾಡುವ ಅಮೂಲ್ಯ ಸಲಹೆಯನ್ನು ಕೊಡುತ್ತಾನೆ. ಬಾಯಿಂದ ಹೊರಡುವ ಮಾತುಗಳು, ಪರಿಣಾಮಗಳನ್ನು ಬರಿಸುತ್ತವೆ ಹಾಗೂ ಅವುಗಳನ್ನು ನುಡಿಯುವ ವ್ಯಕ್ತಿಯ ಗುಣಗಳ ಬಗ್ಗೆ ಬಹಳಷ್ಟನ್ನು ತಿಳಿಯಪಡಿಸುತ್ತವೆ ಎಂದು ವಿವೇಕಿಯಾದ ಆ ರಾಜನು, ಚುಟುಕಾದರೂ ಅರ್ಥಭರಿತವಾದ ಜ್ಞಾನೋಕ್ತಿಗಳಿಂದ ಸ್ಪಷ್ಟಪಡಿಸಿದನು. ‘ತನ್ನ ತುಟಿಗಳ ಕದವನ್ನು ಕಾಯಲು’ ಅಪೇಕ್ಷಿಸುವ ಯಾವುದೇ ವ್ಯಕ್ತಿಗೂ ಸೊಲೊಮೋನನ ದೇವಪ್ರೇರಿತ ಬುದ್ಧಿವಾದವು ಅತ್ಯಾವಶ್ಯಕವಾಗಿದೆ.—ಕೀರ್ತನೆ 141:3.
‘ಬೋನಿಗೆ ಬೀಳಿಸುವ ದೋಷ’
“ದುಷ್ಟನು ತುಟಿಗಳ ದೋಷದಿಂದ ಬೋನಿಗೆ ಬೀಳುವನು; ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು” ಎನ್ನುತ್ತಾನೆ ಸೊಲೊಮೋನನು. (ಜ್ಞಾನೋಕ್ತಿ 12:13) ಸುಳ್ಳುಹೇಳುವುದು ತುಟಿಗಳ ದೋಷವಾಗಿದ್ದು, ಸುಳ್ಳುಹೇಳುವವನಿಗೇ ಮರಣಕಾರಕ ಬೋನಾಗಿ ಪರಿಣಮಿಸುತ್ತದೆ. (ಪ್ರಕಟನೆ 21:8) ಅಪ್ರಾಮಾಣಿಕತೆಯು, ಶಿಕ್ಷೆಯನ್ನು ತಪ್ಪಿಸುವ ಇಲ್ಲವೆ ಒಂದು ಕಷ್ಟಕರವಾದ ಸನ್ನಿವೇಶದಿಂದ ತಪ್ಪಿಸಿಕೊಳ್ಳಲಿಕ್ಕಾಗಿರುವ ಸುಲಭವಾದ ದಾರಿಯಂತೆ ತೋರಬಹುದು. ಆದರೆ ಒಂದೇ ಸುಳ್ಳು, ಇನ್ನೂ ಅನೇಕಾನೇಕ ಸುಳ್ಳುಗಳಿಗೆ ನಡೆಸುತ್ತದೆಯಲ್ಲವೊ? ಚಿಕ್ಕ ಮೊತ್ತದ ಹಣದಿಂದ ಜೂಜಾಡಲು ಆರಂಭಿಸುವ ವ್ಯಕ್ತಿಯೊಬ್ಬನು, ತಾನು ಕಳೆದುಕೊಂಡಿರುವ ಹಣವನ್ನು ಮರಳಿಪಡೆಯಲು ಹೆಚ್ಚು ದೊಡ್ಡ ಮೊತ್ತದ ಹಣವನ್ನು ಹಾಕಲು ಸೆಳೆಯಲ್ಪಡುವಂತೆಯೇ, ಒಬ್ಬ ಸುಳ್ಳುಗಾರನು ತಾನೊಂದು ವಿಷಚಕ್ರದಲ್ಲಿ ಸಿಕ್ಕಿಬಿದ್ದಿದ್ದೇನೆಂಬದನ್ನು ಬೇಗನೆ ಕಂಡುಹಿಡಿಯುತ್ತಾನೆ.
ತುಟಿಗಳ ದೋಷವು ಒಬ್ಬ ವ್ಯಕ್ತಿಯನ್ನು ಬೋನಿನಲ್ಲಿ ಸಿಕ್ಕಿಸಿಹಾಕುತ್ತದೆ, ಏಕೆಂದರೆ ಇತರರಿಗೆ ಸುಳ್ಳುಹೇಳುವವನು ಕೊನೆಯಲ್ಲಿ ತನಗೇ ಸುಳ್ಳುಹೇಳುತ್ತಿರುತ್ತಾನೆ. ಉದಾಹರಣೆಗಾಗಿ, ಒಬ್ಬ ಸುಳ್ಳುಗಾರನಿಗೆ ವಾಸ್ತವದಲ್ಲಿ ಏನೂ ಗೊತ್ತಿಲ್ಲದಿದ್ದರೂ, ತನಗೆ ಬಹಳಷ್ಟು ಜ್ಞಾನವಿದೆ ಮತ್ತು ಬುದ್ಧಿವಂತನಾಗಿದ್ದೇನೆಂದು ಸುಲಭವಾಗಿ ತನಗೇ ಮನದಟ್ಟು ಮಾಡಬಲ್ಲನು. ಈ ರೀತಿಯಲ್ಲಿ ಅವನೊಂದು ಸುಳ್ಳು ಬದುಕನ್ನು ನಡೆಸಲಾರಂಭಿಸುತ್ತಾನೆ. ಹೌದು, “ಅವನು ತನ್ನನ್ನು ವಂಚಿಸಿಕೊಳ್ಳುವನು. ಅವನು ತನ್ನ ತಪ್ಪುಗಳನ್ನು ಕಾಣುವುದೂ ಇಲ್ಲ.” (ಕೀರ್ತನೆ 36:2, ಪರಿಶುದ್ಧ ಬೈಬಲ್*) ಸುಳ್ಳುಹೇಳುವುದು ಎಂಥ ಒಂದು ಬೋನು ಆಗಿ ಪರಿಣಮಿಸುವುದು! ಆದರೆ ಇನ್ನೊಂದು ಕಡೆ, ಶಿಷ್ಟನು ಇಂಥ ಕಷ್ಟಕರ ಸನ್ನಿವೇಶದಲ್ಲಿ ಸಿಕ್ಕಿಬೀಳುವುದಿಲ್ಲ. ಕಷ್ಟದಲ್ಲಿರುವಾಗಲೂ ಅವನು ಸುಳ್ಳನ್ನಾಡದಿರುವನು.
‘ಸುಖತರುವ ಫಲ’
ಅಪೊಸ್ತಲ ಪೌಲನು ಎಚ್ಚರಿಸುವುದು: “ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.” (ಗಲಾತ್ಯ 6:7) ಈ ಮೂಲತತ್ತ್ವವು ಖಂಡಿತವಾಗಿಯೂ ನಮ್ಮ ಮಾತು ಹಾಗೂ ಕ್ರಿಯೆಗಳಿಗೂ ಅನ್ವಯವಾಗುತ್ತದೆ. ಸೊಲೊಮೋನನು ತಿಳಿಸುವುದು: “ಬಾಯ ಫಲವಾಗಿ ಮನುಷ್ಯನು ಬೇಕಾದಷ್ಟು ಸುಖವನ್ನನುಭವಿಸುವನು; ಅವನ ಕೈಕೆಲಸದ ಫಲವು ಅವನಿಗೇ ಪ್ರಾಪ್ತವಾಗುವದು.”—ಜ್ಞಾನೋಕ್ತಿ 12:14.
‘ಸುಜ್ಞಾನವನ್ನು ನುಡಿಯುವಂಥ’ ಬಾಯಿ, ಸುಖತರುವಂಥ ಫಲವನ್ನು ಉತ್ಪಾದಿಸುತ್ತದೆ. (ಕೀರ್ತನೆ 37:30) ವಿವೇಕಕ್ಕಾಗಿ ಜ್ಞಾನವು ಆವಶ್ಯಕ, ಮತ್ತು ಯಾವ ಮಾನವನೂ ಎಲ್ಲಾ ಜ್ಞಾನದ ಮೂಲನಾಗಿರುವುದಿಲ್ಲ. ಎಲ್ಲರೂ ಉಪದೇಶಕ್ಕೆ ಕಿವಿಗೊಟ್ಟು, ಅದನ್ನು ಪಾಲಿಸುವ ಅಗತ್ಯವಿದೆ. ಇಸ್ರಾಯೇಲಿನ ರಾಜನು ಹೇಳುವುದು: “ಮೂಢನು ತನ್ನ ದಾರಿಯನ್ನೇ ಒಳ್ಳೆಯದೆಂದು ಭಾವಿಸಿಕೊಂಡಿರುತ್ತಾನೆ. ಜ್ಞಾನಿಯಾದರೊ ಉಪದೇಶಕ್ಕೆ ಕಿವಿಗೊಡುತ್ತಾನೆ.”—ಜ್ಞಾನೋಕ್ತಿ 12:15, ಪರಿಶುದ್ಧ ಬೈಬಲ್.*
ಯೆಹೋವನು, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸುವಂಥ ಪ್ರಕಾಶನಗಳನ್ನು ಬಳಸುತ್ತಾ, ತನ್ನ ವಾಕ್ಯ ಮತ್ತು ತನ್ನ ಸಂಸ್ಥೆಯ ಮೂಲಕ ನಮಗೆ ಸುದೃಢವಾದ ಸಲಹೆಯನ್ನು ಕೊಡುತ್ತಾನೆ. (ಮತ್ತಾಯ 24:45; 2 ತಿಮೊಥೆಯ 3:16) ಒಳ್ಳೇ ಬುದ್ಧಿವಾದವನ್ನು ತಳ್ಳಿಹಾಕಿ, ನಮ್ಮ ಇಷ್ಟದಂತೆಯೇ ಮಾಡುವುದು ಎಂಥ ಮೂರ್ಖತನವಾಗಿದೆ! ‘ಮನುಷ್ಯರಿಗೆ ಬುದ್ಧಿಕಲಿಸುವವನಾದ’ ಯೆಹೋವನು ತನ್ನ ಸಂವಾದ ಮಾಧ್ಯಮದ ಮುಖಾಂತರ ಸಲಹೆಯನ್ನು ಕೊಡುವಾಗ ನಾವು ‘ಕಿವಿಗೊಡುವುದರಲ್ಲಿ ತೀವ್ರ’ರಾಗಿರಬೇಕು.—ಯಾಕೋಬ 1:19; ಕೀರ್ತನೆ 94:10.
ಜಾಣರು ಮತ್ತು ಮೂರ್ಖರು, ಅವಮಾನಗಳಿಗೆ ಇಲ್ಲವೆ ತಪ್ಪಾದ ಟೀಕೆಯ ಮಾತುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಸೊಲೊಮೋನನು ಉತ್ತರಿಸುವುದು: “ಮೂರ್ಖನ ಸಿಟ್ಟು ತಟ್ಟನೆ ರಟ್ಟಾಗುವದು; ಜಾಣನು ಅವಮಾನವನ್ನು ಮರೆಮಾಡುವನು.”—ಜ್ಞಾನೋಕ್ತಿ 12:16.
ಒಬ್ಬ ಮೂರ್ಖ ವ್ಯಕ್ತಿಯೊಂದಿಗೆ ಯಾರಾದರೂ ಒರಟಾಗಿ ವರ್ತಿಸುವಲ್ಲಿ, ಅವನು “ತಟ್ಟನೆ” ಕೋಪದಿಂದ ಪ್ರತಿಕ್ರಿಯಿಸುತ್ತಾನೆ. ಆದರೆ ಒಬ್ಬ ವಿವೇಕಯುತ ವ್ಯಕ್ತಿಯು, ಸ್ವನಿಯಂತ್ರಣವನ್ನು ತೋರಿಸಲಿಕ್ಕಾಗಿ ದೇವರಾತ್ಮಕ್ಕಾಗಿ ಪ್ರಾರ್ಥಿಸುತ್ತಾನೆ. ಅವನು ದೇವರ ವಾಕ್ಯದಲ್ಲಿರುವ ಬುದ್ಧಿವಾದದ ಕುರಿತಾಗಿ ಮನನಮಾಡಲು ಸಮಯವನ್ನು ತೆಗೆದುಕೊಳ್ಳುತ್ತಾನೆ ಮತ್ತು “ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು” ಎಂಬ ಯೇಸುವಿನ ಮಾತುಗಳ ಕುರಿತಾಗಿ ಗಣ್ಯತಾಭಾವದಿಂದ ಪರ್ಯಾಲೋಚಿಸುತ್ತಾನೆ. (ಮತ್ತಾಯ 5:39) ಜಾಣನು, ‘ಯಾವನಾದರೂ ಕೇಡು ಮಾಡಿದರೆ, ಪ್ರತಿಯಾಗಿ ಕೇಡು ಮಾಡದಿರಲು’ ಬಯಸುವ ಕಾರಣ, ಅವನು ಎಚ್ಚರಿಕೆಯಿಲ್ಲದೆ ಮಾತಾಡುವುದರಿಂದ ತನ್ನ ತುಟಿಗಳನ್ನು ತಡೆದುಹಿಡಿಯುತ್ತಾನೆ. (ರೋಮಾಪುರ 12:17, ಪರಿಶುದ್ಧ ಬೈಬಲ್*) ಹಾಗೆಯೇ ನಾವು ಕೂಡ ನಮಗಾಗುವ ಯಾವುದೇ ಅವಮಾನವನ್ನು ಮರೆಮಾಡುವ ಮೂಲಕ ಆ ಕಿತ್ತಾಟವು ಮುಂದುವರಿಯುವುದನ್ನು ದೂರಮಾಡುತ್ತೇವೆ.
‘ಗುಣಪಡಿಸುವಂತ ಮಾತು’
ತುಟಿಗಳ ದೋಷವು, ಒಂದು ನ್ಯಾಯನಿರ್ಣಾಯಕ ಸನ್ನಿವೇಶದಲ್ಲಿ ಬಹಳಷ್ಟು ಹಾನಿಯನ್ನು ಮಾಡಬಲ್ಲದು. ಇಸ್ರಾಯೇಲಿನ ದೊರೆಯು ಹೇಳುವುದು: “ಸತ್ಯವನ್ನಾಡುವವನು ನ್ಯಾಯವನ್ನು ತೋರ್ಪಡಿಸುವನು; ಸುಳ್ಳುಸಾಕ್ಷಿಯು ಅಸತ್ಯಮಾಡುವನು.” (ಜ್ಞಾನೋಕ್ತಿ 12:17) ಸತ್ಯ ಸಾಕ್ಷಿಯು ಕೊಡುವ ಸಾಕ್ಷ್ಯವು ವಿಶ್ವಾಸಾರ್ಹವೂ ಭರವಸಯೋಗ್ಯವೂ ಆಗಿರುವುದರಿಂದ ನ್ಯಾಯವನ್ನು ತೋರ್ಪಡಿಸುತ್ತಾನೆ. ಅವನ ಮಾತುಗಳು ನ್ಯಾಯ ದೊರೆಯುವಂತೆ ನೆರವು ನೀಡುತ್ತವೆ. ಆದರೆ ಇನ್ನೊಂದು ಬದಿಯಲ್ಲಿ ಸುಳ್ಳುಸಾಕ್ಷಿಯು, ಅಸತ್ಯದಿಂದ ತುಂಬಿರುತ್ತಾನೆ ಮತ್ತು ಅವನು ನ್ಯಾಯವು ದೊರೆಯದಂತೆ ಮಾಡುತ್ತಾನೆ.
“ದುಡಿಕಿದ ಮಾತು ಖಡ್ಗದಂತೆ ನೋವುಮಾಡುತ್ತದೆ; ಜ್ಞಾನಿಯ ಮಾತು ಗುಣಪಡಿಸುತ್ತದೆ” ಎಂದು ಸೊಲೊಮೋನನು ಮುಂದುವರಿಸಿ ಹೇಳುತ್ತಾನೆ. (ಜ್ಞಾನೋಕ್ತಿ 12:18, ಪರಿಶುದ್ಧ ಬೈಬಲ್*) ಮಾತುಗಳು ಖಡ್ಗದಂತೆ ಇರಿದು, ಸ್ನೇಹಗಳನ್ನು ಉರುಳಿಸಿ, ತೊಂದರೆಯನ್ನು ಉಂಟುಮಾಡಬಲ್ಲವು. ಇಲ್ಲವೆ ಅವು ಹರ್ಷದಾಯಕವೂ ಹಿತಕರವೂ, ಸ್ನೇಹಗಳನ್ನು ಸಂರಕ್ಷಿಸುವಂಥವುಗಳೂ ಆಗಿರಬಲ್ಲವು. ಆದರೆ ಬಯ್ಗುಳಗಳು, ಕಿರುಚಾಟ, ಸತತ ಟೀಕೆ ಹಾಗೂ ಹೀನೈಸುವಂಥ ತಿರಸ್ಕಾರದ ಮಾತುಗಳು, ಗಾಢವಾದ ಭಾವಾತ್ಮಕ ಗಾಯಗಳನ್ನು ಉಂಟುಮಾಡುವ ತಿವಿತಗಳೇ ಆಗಿವೆಯಲ್ಲವೆ? ಈ ವಿಷಯದಲ್ಲಿ ನಾವು ಮಾಡುವ ಯಾವುದೇ ತಪ್ಪುಗಳನ್ನು, ಪ್ರಾಮಾಣಿಕ ಕ್ಷಮಾಯಾಚನೆಯ ಗುಣಪಡಿಸುವಂಥ ಮಾತುಗಳಿಂದ ತಿದ್ದುವುದು ಎಷ್ಟು ಒಳ್ಳೇದು!
ನಾವು ಜೀವಿಸುತ್ತಿರುವ ಈ ಕಷ್ಟಕರ ಸಮಯಗಳಲ್ಲಿ, ಅನೇಕರು ‘ಮುರಿದ ಮನಸ್ಸುಳ್ಳವರು’ ಮತ್ತು ‘ಕುಗ್ಗಿಹೋದವರು’ ಆಗಿರುವುದು ಅಚ್ಚರಿಗೊಳಿಸುವಂಥ ಸಂಗತಿಯೇನಲ್ಲ. (ಕೀರ್ತನೆ 34:18) ನಾವು ‘ಮನಗುಂದಿದವರನ್ನು ಧೈರ್ಯಪಡಿಸಿ’ ಮಾತಾಡುವಾಗ ಮತ್ತು ‘ಬಲಹೀನರಿಗೆ ಆಧಾರ’ವಾಗಿರುವಾಗ, ಬಾಯಿಂದ ಹೊರಡುವ ಮಾತುಗಳ ಗುಣಪಡಿಸುವ ಶಕ್ತಿಯನ್ನು ಪ್ರಯೋಗಿಸುತ್ತಿದ್ದೇವಲ್ಲವೊ? (1 ಥೆಸಲೊನೀಕ 5:14) ಹೌದು, ಸಹಾನುಭೂತಿಯ ಮಾತುಗಳು ಸಮಾನಸ್ಥರ ಹಾನಿಕಾರಕ ಒತ್ತಡದ ವಿರುದ್ಧ ಹೋರಾಡುತ್ತಿರುವ ಹದಿವಯಸ್ಕರನ್ನು ಉತ್ತೇಜಿಸಬಲ್ಲದು. ಯೋಚಿಸಿ ಆಡುವ ಮಾತುಗಳು ವಯಸ್ಸಾದವರಿಗೆ, ತಮ್ಮ ಆವಶ್ಯಕತೆಯಿದೆ ಮತ್ತು ತಮ್ಮನ್ನು ಪ್ರೀತಿಸಲಾಗುತ್ತಿದೆಯೆಂಬ ಪುನರಾಶ್ವಾಸನೆಯನ್ನು ಕೊಡಬಲ್ಲದು. ದಯಾಪರ ಮಾತುಗಳು ನಿಶ್ಚಯವಾಗಿಯೂ, ಅಸ್ವಸ್ಥರಾಗಿರುವವರ ಇಡೀ ದಿನವನ್ನು ಬೆಳಗಿಸಬಲ್ಲದು. ಗದರಿಕೆ ಸಹ “ಶಾಂತಭಾವದಿಂದ” ಕೊಡಲ್ಪಡುವಾಗ ಅದನ್ನು ಸ್ವೀಕರಿಸುವುದು ಸುಲಭವಾಗಿರುತ್ತದೆ. (ಗಲಾತ್ಯ 6:1) ಮತ್ತು ಒಬ್ಬ ವ್ಯಕ್ತಿಯು, ಕಿವಿಗೊಡುವ ಜನರಿಗೆ ದೇವರ ರಾಜ್ಯದ ಸುವಾರ್ತೆಯನ್ನು ಹಂಚಲಿಕ್ಕಾಗಿ ತನ್ನ ನಾಲಿಗೆಯನ್ನು ಉಪಯೋಗಿಸುವಾಗ ಅದೆಷ್ಟು ಗುಣಪಡಿಸುವಂಥ ಶಕ್ತಿಯನ್ನು ಹೊಂದಿರುತ್ತದೆ!
‘ಬಾಳುವ ತುಟಿ’
“ನಾಲಿಗೆ”ಗೆ ಸಮನಾರ್ಥಕ ಪದವಾಗಿ “ತುಟಿ” ಎಂಬ ಪದವನ್ನು ಉಪಯೋಗಿಸುತ್ತಾ, ಸೊಲೊಮೋನನು ತಿಳಿಸುವುದು: “ಸತ್ಯದ ತುಟಿ ಶಾಶ್ವತ; ಸುಳ್ಳಿನ ನಾಲಿಗೆ ಕ್ಷಣಿಕ.” (ಜ್ಞಾನೋಕ್ತಿ 12:19) “ಸತ್ಯದ ತುಟಿ” ಎಂಬ ಅಭಿವ್ಯಕ್ತಿಯು, ಹೀಬ್ರು ಭಾಷೆಯಲ್ಲಿ ಏಕವಚನದಲ್ಲಿದೆ, ಮತ್ತು ಅದಕ್ಕೆ ಕೇವಲ ಸತ್ಯಪೂರ್ಣ ಮಾತುಗಳಿಗಿಂತಲೂ ಗಾಢವಾದ ಅರ್ಥವಿದೆ. “ಅದು ಬಾಳಿಕೆ, ಸ್ಥಾಯಿತ್ವ ಮತ್ತು ವಿಶ್ವಾಸಾರ್ಹತೆಯಂಥ ಗುಣಗಳನ್ನು ಸೂಚಿಸುತ್ತದೆ” ಎಂದು ಒಂದು ಕೃತಿ ಹೇಳುತ್ತದೆ. “ಈ ರೀತಿಯ ಗುಣವುಳ್ಳ ಮಾತು . . . ನಿತ್ಯಕ್ಕೂ ಬಾಳುವುದು ಏಕೆಂದರೆ ಅದು . . . ಒಂದು ಕ್ಷಣ ವಂಚಿಸಲ್ಪಟ್ಟರೂ ಪರೀಕ್ಷೆಗೊಳಗಾದಾಗ, ಜಯಿಸಲಾಗದ . . . ಸುಳ್ಳಾಡುವ ನಾಲಿಗೆಯಂತಿರದೆ ವಿಶ್ವಾಸಾರ್ಹವಾದದ್ದಾಗಿದೆ ಎಂಬುದನ್ನು ಕಂಡುಕೊಳ್ಳಲಾಗುವುದು.”
ಆ ವಿವೇಕಿ ರಾಜನು ಹೀಗೆ ತಿಳಿಸುತ್ತಾನೆ: “ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ; ಹಿತೋಪದೇಶಕರ [“ಸಮಾಧಾನವನ್ನು ಅಪೇಕ್ಷಿಸುವವರ,” ಪರಿಶುದ್ಧ ಬೈಬಲ್*] ಮನಸ್ಸಿನಲ್ಲಿ ಉಲ್ಲಾಸ.” ಅವನು ಕೂಡಿಸಿ ಹೇಳುವುದು: “ಸಜ್ಜನರಿಗೆ ಯಾವ ಹಾನಿಯೂ ಸಂಭವಿಸದು; ದುರ್ಜನರಿಗೆ ಕೇಡು ತುಂಬಿ ತುಳುಕುವದು.”—ಜ್ಞಾನೋಕ್ತಿ 12:20, 21.
ಕೇಡನ್ನು ಮಾಡಲು ಸಂಚುಹೂಡುವವರು ಕೇವಲ ನೋವು ಮತ್ತು ಕಷ್ಟಾನುಭವವನ್ನು ಉಂಟುಮಾಡಬಲ್ಲರು. ಆದರೆ ಇನ್ನೊಂದು ಬದಿಯಲ್ಲಿ, ಸಮಾಧಾನವನ್ನು ಅಪೇಕ್ಷಿಸುವವರು, ನ್ಯಾಯವಾದದ್ದನ್ನು ಮಾಡುವದರಿಂದ ಬರುವ ಸಂತೃಪ್ತಿಯನ್ನು ಗಳಿಸುವರು. ಒಳ್ಳೇ ಪರಿಣಾಮಗಳನ್ನು ನೋಡುವ ಆನಂದವೂ ಜ್ಞಾನೋಕ್ತಿ 12:22.
ಅವರಿಗಿರುವುದು. ಅತಿ ಮಹತ್ವದ ಸಂಗತಿಯೇನೆಂದರೆ, ಅವರು ದೇವರ ಸಮ್ಮತಿಯನ್ನು ಪಡೆಯುವರು ಯಾಕೆಂದರೆ “ಸುಳ್ಳುತುಟಿ ಯೆಹೋವನಿಗೆ ಹೇಸು; ಸತ್ಯವಂತರು ಆತನಿಗೆ ಲೇಸು.”—‘ತಿಳಿದದ್ದನ್ನು ಗುಪ್ತಪಡಿಸುವ ಮಾತು’
ತನ್ನ ಮಾತುಗಳ ಕುರಿತಾಗಿ ಜಾಗ್ರತೆಯಿಂದಿರುವವನ ಮತ್ತು ಜಾಗ್ರತೆಯಿಂದಿರದವನ ನಡುವಿನ ಇನ್ನೊಂದು ವ್ಯತ್ಯಾಸವನ್ನು ವರ್ಣಿಸುತ್ತಾ, ಇಸ್ರಾಯೇಲಿನ ರಾಜನು ಹೇಳುವುದು: “ಜಾಣನು ತಿಳಿದದ್ದನ್ನು ಗುಪ್ತಪಡಿಸುವನು; ಮೂಢರ ಮನಸ್ಸು ಮೂರ್ಖತನವನ್ನು ಪ್ರಕಟಿಸುವದು.”—ಜ್ಞಾನೋಕ್ತಿ 12:23.
ಒಬ್ಬ ಜಾಣ ವ್ಯಕ್ತಿಗೆ ಯಾವಾಗ ಮಾತಾಡಬೇಕು ಮತ್ತು ಯಾವಾಗ ಮಾತಾಡಬಾರದು ಎಂಬುದು ತಿಳಿದಿರುತ್ತದೆ. ತನಗೆ ತಿಳಿದಿರುವ ಸಂಗತಿಗಳ ಕುರಿತಾಗಿ ದೊಡ್ಡ ಪ್ರದರ್ಶನ ಮಾಡುವುದರಿಂದ ತನ್ನನ್ನೇ ನಿಗ್ರಹಿಸುತ್ತಾ, ಅವನು ‘ತಿಳಿದದ್ದನ್ನು ಗುಪ್ತಪಡಿಸುತ್ತಾನೆ.’ ಆದರೆ ತನಗಿರುವ ತಿಳಿವಳಿಕೆಯನ್ನು ಅವನು ಯಾವಾಗಲೂ ಮರೆಮಾಚುತ್ತಾನೆಂದು ಇದರರ್ಥವಲ್ಲ. ಅದರ ಬದಲು, ಅದನ್ನು ಯಾವಾಗ ತೋರಿಸಿಕೊಡಬೇಕೆಂಬದರ ಬಗ್ಗೆ ಅವನು ವಿವೇಚಿಸುವವನಾಗಿದ್ದಾನೆ. ತದ್ವಿರುದ್ಧವಾಗಿ, ಮೂಢನು ಮುಂದಾಲೋಚನೆ ಇಲ್ಲದೆ ಮಾತಾಡಿ, ತನ್ನ ಮೂರ್ಖತನವನ್ನು ಎಲ್ಲರಿಗೂ ತಿಳಿಯಪಡಿಸುತ್ತಾನೆ. ಹೀಗಿರುವುದರಿಂದ ನಮ್ಮ ಮಾತುಗಳು ಕೊಂಚವಾಗಿರಲಿ, ಮತ್ತು ನಮ್ಮ ನಾಲಿಗೆಯು ಜಂಬ ಕೊಚ್ಚಿಕೊಳ್ಳುವುದರಿಂದ ದೂರವಿರಲಿ.
ವ್ಯತ್ಯಾಸಗಳನ್ನು ತೋರಿಸುವುದನ್ನು ಮುಂದುವರಿಸುತ್ತಾ, ಸೊಲೊಮೋನನು ಕಷ್ಟಪಟ್ಟು ದುಡಿಯುವುದರ ಮತ್ತು ಆಲಸ್ಯದ ಕುರಿತಾಗಿ ಒಂದು ಗಮನಾರ್ಹ ಸಂಗತಿಯನ್ನು ತಿಳಿಸುತ್ತಾನೆ. ಅವನು ಹೇಳುವುದು: “ಕಷ್ಟಪಟ್ಟು ಕೆಲಸ ಮಾಡುವವನು ಅಧಿಪತಿಯಾಗುವನು. ಸೋಮಾರಿಯನ್ನು ಗುಲಾಮನನ್ನಾಗಿ ಮಾಡಲಾಗುವುದು.” (ಜ್ಞಾನೋಕ್ತಿ 12:24*) ಪರಿಶ್ರಮವು ಅಭಿವೃದ್ಧಿ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ನಡೆಸಬಲ್ಲದು, ಆದರೆ ಸೋಮಾರಿತನವು ಗುಲಾಮಗಿರಿ ಮತ್ತು ಪರಾಧೀನತೆಗೆ ನಡೆಸಬಲ್ಲದು. “ಸಕಾಲದಲ್ಲಿ ಸೋಮಾರಿ ವ್ಯಕ್ತಿಯು, ಕಷ್ಟಪಟ್ಟು ಕೆಲಸಮಾಡುವ ವ್ಯಕ್ತಿಗೆ ದಾಸನಾಗುವನು” ಎಂದು ಒಬ್ಬ ವಿದ್ವಾಂಸನು ಹೇಳುತ್ತಾನೆ.
‘ಹಿಗ್ಗಿಸುವಂತಹ ಮಾತು’
ರಾಜ ಸೊಲೊಮೋನನು ಈಗ ಮಾನವ ಸ್ವಭಾವದ ಕುರಿತಾದ ತೀಕ್ಷ್ಣವಾದ ಅವಲೋಕನದೊಂದಿಗೆ, ಮಾತುಗಳ ಕುರಿತಾದ ವಿಷಯಕ್ಕೆ ಹಿಂದಿರುಗುತ್ತಾನೆ. “ಕಳವಳವು ಮನಸ್ಸನ್ನು [“ಹೃದಯವನ್ನು,” NW] ಕುಗ್ಗಿಸುವದು; ಕನಿಕರದ ಮಾತು ಅದನ್ನು ಹಿಗ್ಗಿಸುವದು” ಎಂದವನು ಹೇಳುತ್ತಾನೆ.—ಜ್ಞಾನೋಕ್ತಿ 12:25.
ಹೃದಯವು ದುಃಖದಿಂದ ಭಾರವಾಗುವಂತೆ ಮಾಡುವ ಅನೇಕಾನೇಕ ಕಳವಳಗಳು ಹಾಗೂ ಚಿಂತೆಗಳು ಇವೆ. ಆಗ ಆ ಭಾರವನ್ನು ಹಗುರಗೊಳಿಸಿ, ಹೃದಯವು ಹಿಗ್ಗುವಂತೆ ಮಾಡಲು, ಸಹಾನುಭೂತಿಯುಳ್ಳ ಒಬ್ಬ ವ್ಯಕ್ತಿಯಿಂದ ಉತ್ತೇಜನದ ಒಂದೆರಡು ಮಾತುಗಳು ಬೇಕಾಗುತ್ತವೆ. ಆದರೆ ನಮ್ಮ ಹೃದಯದಲ್ಲಿರುವ ಕಳವಳಬರಿಸುವಂಥ ಚಿಂತೆಯ ತೀವ್ರತೆಯ ಬಗ್ಗೆ ನಾವು ಹೃದಯಬಿಚ್ಚಿ ಮಾತಾಡದಿದ್ದರೆ, ಇತರರಿಗೆ ಅದರ ಬಗ್ಗೆ ಗೊತ್ತಾಗುವುದಾದರೂ ಹೇಗೆ? ಹೌದು, ನಾವು ಸಂಕಟದಲ್ಲಿರುವಾಗ ಇಲ್ಲವೆ ಖಿನ್ನಾವಸ್ಥೆಯಲ್ಲಿರುವಾಗ, ಸಹಾಯಮಾಡಬಲ್ಲ ಸಹಾನುಭೂತಿಯುಳ್ಳ ಒಬ್ಬ ವ್ಯಕ್ತಿಯಲ್ಲಿ ನಾವು ಅಂತರಂಗವನ್ನು ತೋಡಿಕೊಳ್ಳಬೇಕು. ಅದಲ್ಲದೆ, ನಾವು ನಮ್ಮ ಭಾವನೆಗಳನ್ನು ಮಾತುಗಳಲ್ಲಿ ವ್ಯಕ್ತಪಡಿಸುವಾಗ, ಅದು ನಮ್ಮ ಹೃದಯದ ಸಂಕಟವನ್ನು ಸ್ವಲ್ಪ ಮಟ್ಟಿಗೆ ಉಪಶಮನಗೊಳಿಸುತ್ತದೆ. ಹೀಗಿರುವುದರಿಂದ, ವಿವಾಹ ಸಂಗಾತಿ, ಹೆತ್ತವರಲ್ಲೊಬ್ಬರು ಇಲ್ಲವೆ ಕರುಣಾಭರಿತ ಮತ್ತು ಆತ್ಮಿಕ ಯೋಗ್ಯತೆಗಳುಳ್ಳ ಒಬ್ಬ ಸ್ನೇಹಿತರಲ್ಲಿ ಅಂತರಂಗವನ್ನು ತೋಡಿಕೊಳ್ಳುವುದು ಒಳ್ಳೇದು.
ಬೈಬಲಿನಲ್ಲಿ ಕಂಡುಕೊಳ್ಳಬಹುದಾದ ಉತ್ತೇಜನದ ಮಾತುಗಳಿಗಿಂತ ಅತ್ಯುತ್ತಮವಾದ ಮಾತುಗಳು ಇನ್ನೆಲ್ಲಿ ಸಿಕ್ಕಾವು? ಹೀಗಿರುವುದರಿಂದ, ದೇವರ ಪ್ರೇರಿತ ವಾಕ್ಯದ ಕುರಿತಾಗಿ ಗಣ್ಯತಾಪೂರ್ವಕವಾಗಿ ಧ್ಯಾನಮಾಡುವ ಮೂಲಕ ನಾವು ಆತನನ್ನು ಸಮೀಪಿಸಬೇಕು. ಆ ರೀತಿಯ ಚಿಂತನೆಯು ಖಂಡಿತವಾಗಿಯೂ, ಕಳವಳಗೊಂಡಿರುವ ಹೃದಯಕ್ಕೆ ಆನಂದವನ್ನೂ, ದುಃಖಭರಿತ ಕಣ್ಣುಗಳಿಗೆ ಪ್ರಕಾಶವನ್ನೂ ತರಬಲ್ಲದು. ಕೀರ್ತನೆಗಾರನು ಈ ಮಾತನ್ನು ದೃಢೀಕರಿಸುತ್ತಾ ಹೇಳುವುದು: “ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ. ಯೆಹೋವನ ಕೀರ್ತನೆ 19:7, 8.
ನಿಯಮಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ. ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತದೆ.”—ಪ್ರತಿಫಲದಾಯಕ ಮಾರ್ಗ
ಯಥಾರ್ಥವಂತರ ಮಾರ್ಗಕ್ಕೂ ದುಷ್ಟರ ಮಾರ್ಗಕ್ಕೂ ಇರುವ ವ್ಯತ್ಯಾಸವನ್ನು ತೋರಿಸುತ್ತಾ, ಇಸ್ರಾಯೇಲಿನ ರಾಜನು ಹೇಳುವುದು: “ನೀತಿವಂತನು ತನ್ನ ಸ್ವಂತ ಹುಲ್ಲುಗಾವಲನ್ನು ಬೇಹುನೋಡುತ್ತಾನೆ, ಆದರೆ ದುಷ್ಟರ ಮಾರ್ಗವು ಅವರನ್ನು ಅಲೆದಾಡುವಂತೆ ಮಾಡುತ್ತದೆ.” (ಜ್ಞಾನೋಕ್ತಿ 12:26, NW) ನೀತಿವಂತನು ತನ್ನ ಸ್ವಂತ ಹುಲ್ಲುಗಾವಲು, ಅಂದರೆ ಅವನು ಆಯ್ಕೆಮಾಡುವ ಒಡನಾಡಿಗಳು ಮತ್ತು ಸ್ನೇಹಿತರ ಕುರಿತಾಗಿ ಜಾಗ್ರತೆಯಿಂದಿರುತ್ತಾನೆ. ಅವನು ಅವರನ್ನು ವಿವೇಕದಿಂದ ಆಯ್ಕೆಮಾಡುತ್ತಾನೆ ಮತ್ತು ಅಪಾಯಕಾರಿಯಾದ ಸಂಪರ್ಕಗಳನ್ನು ದೂರವಿಡಲು ಪ್ರಯತ್ನಿಸುತ್ತಾನೆ. ಆದರೆ ಸಲಹೆಯನ್ನು ನಿರಾಕರಿಸಿ, ತಮಗೆ ಸರಿತೋಚಿದಂತೆಯೇ ಮಾಡಲು ಹಠಹಿಡಿಯುವ ದುಷ್ಟರು ಹಾಗಿರುವುದಿಲ್ಲ. ದಾರಿತಪ್ಪಿಸಲ್ಪಟ್ಟವರಾಗಿ, ಅವರು ಅತ್ತಿತ್ತ ಅಲೆದಾಡುತ್ತಿರುತ್ತಾರೆ.
ರಾಜ ಸೊಲೊಮೋನನು, ಸೋಮಾರಿಯ ಮತ್ತು ಕಷ್ಟಪಟ್ಟು ದುಡಿಯುವ ವ್ಯಕ್ತಿಯ ನಡುವಿನ ವ್ಯತ್ಯಾಸವನ್ನು ಮತ್ತೊಂದು ದೃಷ್ಟಿಕೋನದಿಂದ ನೋಡುತ್ತಾನೆ. “ಸೋಮಾರಿಯಾದ ಬೇಟೆಗಾರನು ಬೇಟೆಯಾಡುವುದಿಲ್ಲ. ಐಶ್ವರ್ಯವು ಕಷ್ಟಪಟ್ಟು ಕೆಲಸ ಮಾಡುವವನಿಗೆ ಬರುತ್ತದೆ.” (ಜ್ಞಾನೋಕ್ತಿ 12:27, ಪರಿಶುದ್ಧ ಬೈಬಲ್ *) ಮೈಗಳ್ಳನು—“ಸೋಮಾರಿ”ಯು “ಬೇಟೆಯಾಡುವುದಿಲ್ಲ,” ಇಲ್ಲವೆ ತನ್ನ ಬೇಟೆಯನ್ನು “ಸುಡುವುದಿಲ್ಲ.” (ನ್ಯೂ ಇಂಟರ್‌ನ್ಯಾಷನಲ್ ವರ್ಷನ್) ಹೌದು, ಅವನು ಯಾವ ಕೆಲಸವನ್ನು ಪ್ರಾರಂಭಿಸುತ್ತಾನೊ ಅದನ್ನು ಮುಗಿಸಲಾರನು. ಆದರೆ ಇನ್ನೊಂದು ಬದಿಯಲ್ಲಿ ಐಶ್ವರ್ಯವು, ಕಷ್ಟಪಟ್ಟು ಕೆಲಸಮಾಡುವುದರ ಪರ್ಯಾಯ ಪದವಾಗಿದೆ.
ಸೋಮಾರಿತನವು ಎಷ್ಟು ಹಾನಿಕರವಾಗಿದೆಯೆಂದರೆ, ಅಪೊಸ್ತಲ ಪೌಲನು ಥೆಸಲೊನೀಕದಲ್ಲಿದ್ದ ಜೊತೆ ಕ್ರೈಸ್ತರಿಗೆ ಪತ್ರ ಬರೆದು, ‘ಅಕ್ರಮವಾಗಿ ನಡೆಯುತ್ತಿದ್ದ,’ ಅಂದರೆ ಯಾವ ಕೆಲಸವನ್ನೂ ಮಾಡದೆ ಇತರರ ಕೆಲಸದಲ್ಲಿ ತಲೆಹಾಕುತ್ತಿದ್ದ ಕೆಲವೊಂದು ವ್ಯಕ್ತಿಗಳನ್ನು ತಿದ್ದಬೇಕಾಯಿತು. ಅಂಥವರು ಬೇರೆಯವರಿಗೆ ಭಾರವಾಗಿದ್ದರು. ಆದುದರಿಂದ ಪೌಲನು ಅವರಿಗೆ ಬಹಿರಂಗವಾಗಿ ಸಲಹೆಕೊಡುತ್ತಾ, ಅವರು ‘ತಮ್ಮ ಕೆಲಸವನ್ನು ನೋಡುತ್ತಾ ತಾವೇ ಸಂಪಾದಿಸಿದ್ದನ್ನು ಊಟಮಾಡುವಂತೆ’ ಬುದ್ಧಿವಾದವನ್ನು ಕೊಟ್ಟನು. ಮತ್ತು ಈ ದೃಢವಾದ ಸಲಹೆಗೆ ಅವರು ಪ್ರತಿಕ್ರಿಯೆ ತೋರಿಸದಿರುವಲ್ಲಿ, ಸಭೆಯಲ್ಲಿರುವ ಇತರರು ಅವರಿಂದ ‘ದೂರವಾಗಿರುವಂತೆ,’ ಅಂದರೆ ಸಾಮಾಜಿಕ ವಿಷಯಗಳಿಂದ ಅವರನ್ನು ಹೊರಗಿಡುವಂತೆ ಸೂಚಿಸಿದನು.—2 ಥೆಸಲೊನೀಕ 3:6-12.
ಕಷ್ಟಜೀವಿಗಳಾಗಿರುವಂತೆ ಸೊಲೊಮೋನನು ಕೊಟ್ಟ ಸಲಹೆಯನ್ನು ಮಾತ್ರವಲ್ಲ, ನಮ್ಮ ನಾಲಿಗೆಯ ಯೋಗ್ಯ ಬಳಕೆಯ ಕುರಿತಾದ ಅವನ ಬುದ್ಧಿವಾದವನ್ನೂ ನಾವು ಹೃದಯಕ್ಕೆ ತೆಗೆದುಕೊಳ್ಳಬೇಕು. ನಾವು ತುಟಿಗಳ ದೋಷದಿಂದ ದೂರವಿದ್ದು, ಒಂದು ಯಥಾರ್ಥ ಮಾರ್ಗಕ್ರಮವನ್ನು ಬೆನ್ನಟ್ಟುತ್ತಿರುವಾಗ, ಆ ಪುಟ್ಟ ಅಂಗವು ಗುಣಪಡಿಸುವಿಕೆಯನ್ನೂ ಹಿಗ್ಗುವಿಕೆಯನ್ನೂ ತರುವಂಥ ರೀತಿಯಲ್ಲಿ ಅದನ್ನು ಉಪಯೋಗಿಸಲು ಪ್ರಯತ್ನಿಸೋಣ. ಸೊಲೊಮೋನನು ನಮಗೆ ಆಶ್ವಾಸನೆಯನ್ನೀಯುವುದು: “ಧರ್ಮಮಾರ್ಗದಿಂದ ಜೀವಲಾಭವು; ಆ ಸುಪಥಮಾರ್ಗವು ಅಮರಣವೇ.”—ಜ್ಞಾನೋಕ್ತಿ 12:28.
[ಪಾದಟಿಪ್ಪಣಿ]
^ ಪ್ಯಾರ. 31 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
[ಪುಟ 27ರಲ್ಲಿರುವ ಚಿತ್ರಗಳು]
“ಜ್ಞಾನಿಯಾದರೊ ಉಪದೇಶಕ್ಕೆ ಕಿವಿಗೊಡುತ್ತಾನೆ”
[ಪುಟ 28ರಲ್ಲಿರುವ ಚಿತ್ರಗಳು]
“ಜ್ಞಾನಿಯ ಮಾತು ಗುಣಪಡಿಸುತ್ತದೆ”
[ಪುಟ 29ರಲ್ಲಿರುವ ಚಿತ್ರ]
ಒಬ್ಬ ನೆಚ್ಚಿನ ಸ್ನೇಹಿತನಲ್ಲಿ ಅಂತರಂಗವನ್ನು ತೋಡಿಕೊಳ್ಳುವುದು ಸಾಂತ್ವನವನ್ನು ತರಬಲ್ಲದು
[ಪುಟ 30ರಲ್ಲಿರುವ ಚಿತ್ರ]
ಗಣ್ಯತಾಭಾವದಿಂದ ದೇವರ ವಾಕ್ಯದ ಕುರಿತಾಗಿ ಧ್ಯಾನಮಾಡುವುದು, ಹೃದಯವು ಹಿಗ್ಗುವಂತೆ ಮಾಡುತ್ತದೆ