ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಎಲ್ಲಾ ಮನುಷ್ಯರ ಕಡೆಗೆ ಪೂರ್ಣ ಸೌಮ್ಯಭಾವವನ್ನು” ತೋರಿಸಿರಿ

“ಎಲ್ಲಾ ಮನುಷ್ಯರ ಕಡೆಗೆ ಪೂರ್ಣ ಸೌಮ್ಯಭಾವವನ್ನು” ತೋರಿಸಿರಿ

“ಎಲ್ಲಾ ಮನುಷ್ಯರ ಕಡೆಗೆ ಪೂರ್ಣ ಸೌಮ್ಯಭಾವವನ್ನು” ತೋರಿಸಿರಿ

“ವಿವೇಚನಾಶಕ್ತಿಯುಳ್ಳವರಾಗಿರಲು, ಎಲ್ಲಾ ಮನುಷ್ಯರ ಕಡೆಗೆ ಪೂರ್ಣ ಸೌಮ್ಯಭಾವವನ್ನು ತೋರಿಸಲು . . . ಅವರಿಗೆ ಜ್ಞಾಪಕಹುಟ್ಟಿಸುತ್ತಾ ಇರು.”​—ತೀತ 3:​1, 2, NW.

1. ಸೌಮ್ಯಭಾವವನ್ನು ತೋರಿಸುವುದು ಯಾವಾಗಲೂ ಏಕೆ ಸುಲಭವಾಗಿರುವುದಿಲ್ಲ?

“ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ” ಎಂದು ಅಪೊಸ್ತಲ ಪೌಲನು ಬರೆದನು. (1 ಕೊರಿಂಥ 11:1) ಇಂದಿನ ದೇವರ ಸೇವಕರೆಲ್ಲರೂ ಈ ಬುದ್ಧಿವಾದವನ್ನು ಅನುಸರಿಸಲು ಬಹಳವಾಗಿ ಪ್ರಯತ್ನಿಸುತ್ತಾರೆ. ಇದು ಅಷ್ಟೇನೂ ಸುಲಭವಾದದ್ದಲ್ಲ ಎಂಬುದು ಒಪ್ಪತಕ್ಕ ಸಂಗತಿಯೇ. ಏಕೆಂದರೆ, ಕ್ರಿಸ್ತನ ಮಾದರಿಗೆ ಹೊಂದಿಕೆಯಲ್ಲಿಲ್ಲದಿರುವಂಥ ಸ್ವಾರ್ಥಪರ ಬಯಕೆಗಳನ್ನು ಹಾಗೂ ಮಾನಸಿಕ ಪ್ರವೃತ್ತಿಗಳನ್ನು ನಮ್ಮ ಪ್ರಥಮ ಮಾನವ ಹೆತ್ತವರಿಂದ ನಾವು ಬಾಧ್ಯತೆಯಾಗಿ ಪಡೆದಿದ್ದೇವೆ. (ರೋಮಾಪುರ 3:23; 7:21-25) ಆದರೂ, ಸೌಮ್ಯಭಾವವನ್ನು ತೋರಿಸುವ ವಿಷಯದಲ್ಲಿ ಹೇಳುವುದಾದರೆ, ಒಂದುವೇಳೆ ಪ್ರಯತ್ನವನ್ನು ಮಾಡುವಲ್ಲಿ ನಾವೆಲ್ಲರೂ ಯಶಸ್ಸನ್ನು ಪಡೆಯಸಾಧ್ಯವಿದೆ. ಕೇವಲ ನಮ್ಮ ಸ್ವಂತ ದೃಢನಿರ್ಧಾರದ ಮೇಲೆ ಆತುಕೊಳ್ಳುವುದು ಮಾತ್ರವೇ ಸಾಕಾಗಲಾರದು. ಹಾಗಾದರೆ ಇನ್ನೂ ಯಾವುದರ ಆವಶ್ಯಕತೆಯಿದೆ?

2. ನಾವು “ಎಲ್ಲಾ ಮನುಷ್ಯರ ಕಡೆಗೆ ಪೂರ್ಣ ಸೌಮ್ಯಭಾವವನ್ನು” ಹೇಗೆ ತೋರಿಸಸಾಧ್ಯವಿದೆ?

2 ದೈವಿಕ ಸೌಮ್ಯಭಾವವು ಪವಿತ್ರಾತ್ಮದ ಫಲಗಳಲ್ಲಿ ಒಂದಾಗಿದೆ. ದೇವರ ಕ್ರಿಯಾಶೀಲ ಶಕ್ತಿಯ ಮಾರ್ಗದರ್ಶನಗಳಿಗೆ ನಾವು ಎಷ್ಟು ಹೆಚ್ಚಾಗಿ ವಿಧೇಯರಾಗುತ್ತೇವೊ ಅದರ ಫಲಗಳು ಆಗ ನಮ್ಮಲ್ಲಿ ಅಷ್ಟೇ ಹೆಚ್ಚಾಗಿ ವ್ಯಕ್ತವಾಗುತ್ತವೆ. ಆಗ ಮಾತ್ರ, ನಾವು ಪ್ರತಿಯೊಬ್ಬರ ಕಡೆಗೆ “ಪೂರ್ಣ ಸೌಮ್ಯಭಾವವನ್ನು” ತೋರಿಸಲು ಶಕ್ತರಾಗುವೆವು. (ತೀತ 3:2, NW) ನಾವು ಯೇಸುವಿನ ಉದಾಹರಣೆಯನ್ನು ಹೇಗೆ ಅನುಸರಿಸಸಾಧ್ಯವಿದೆ ಮತ್ತು ನಮ್ಮೊಂದಿಗೆ ಸಹವಾಸಮಾಡುವವರು ‘ಚೈತನ್ಯವನ್ನು’ ಕಂಡುಕೊಳ್ಳಲು ಶಕ್ತರಾಗುವಂತೆ ಏನು ಮಾಡಸಾಧ್ಯವಿದೆ ಎಂಬುದನ್ನು ನಾವೀಗ ಪರಿಶೀಲಿಸೋಣ.​—ಮತ್ತಾಯ 11:29; ಗಲಾತ್ಯ 5:22, 23.

ಕುಟುಂಬದಲ್ಲಿ

3. ಕುಟುಂಬದ ಯಾವ ಸನ್ನಿವೇಶವು ಪ್ರಾಪಂಚಿಕ ಆತ್ಮವನ್ನು ಪ್ರತಿಬಿಂಬಿಸುತ್ತದೆ?

3 ಸೌಮ್ಯಭಾವವು ಅತ್ಯಗತ್ಯವಾಗಿರುವ ಒಂದು ಕ್ಷೇತ್ರವು ಕುಟುಂಬ ವೃತ್ತವೇ ಆಗಿದೆ. ವಾಹನ ಅಪಘಾತಗಳು ಹಾಗೂ ಮಲೇರಿಯಾ ರೋಗಗಳಿಗಿಂತಲೂ ಹೆಚ್ಚಾಗಿ ಕುಟುಂಬದ ಹಿಂಸಾಚಾರವು ಸ್ತ್ರೀಯರ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನು ಒಡ್ಡುತ್ತದೆಂದು ಲೋಕಾರೋಗ್ಯ ಸಂಸ್ಥೆಯು ಅಂದಾಜುಮಾಡುತ್ತದೆ. ಉದಾಹರಣೆಗೆ, ಇಂಗ್ಲೆಂಡ್‌ನ ಲಂಡನಿನಲ್ಲಿ ವರದಿಮಾಡಲ್ಪಟ್ಟ ಹಿಂಸಾತ್ಮಕ ದುಷ್ಕೃತ್ಯಗಳಲ್ಲಿ, 25 ಪ್ರತಿಶತವು ಗೃಹ ಹಿಂಸಾಚಾರವಾಗಿತ್ತು. “ಕಿರಿಚಾಡುತ್ತಾ ಹಾಗೂ ನಿಂದಾತ್ಮಕ ಮಾತುಗಳನ್ನಾಡುತ್ತಾ” ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಂಥ ಜನರನ್ನು ಪೊಲೀಸರು ಆಗಿಂದಾಗ್ಗೆ ಭೇಟಿಯಾಗುತ್ತಾರೆ. ಆದರೆ ಇದಕ್ಕಿಂತಲೂ ಕೆಟ್ಟ ಸಂಗತಿಯೇನೆಂದರೆ, “ದ್ವೇಷ”ವು ತಮ್ಮ ಸಂಬಂಧಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತೆ ಕೆಲವು ದಂಪತಿಗಳು ಅನುಮತಿಸಿದ್ದಾರೆ. ಈ ಎಲ್ಲಾ ವರ್ತನೆಯು “ಪ್ರಾಪಂಚಿಕ ಆತ್ಮ”ದ ದುಃಖಕರ ಪ್ರತಿಬಿಂಬವಾಗಿದೆ ಮತ್ತು ಇಂಥ ವರ್ತನೆಗೆ ಕ್ರೈಸ್ತ ಕುಟುಂಬಗಳಲ್ಲಿ ಅವಕಾಶವಿಲ್ಲ.​—ಎಫೆಸ 4:31; 1 ಕೊರಿಂಥ 2:12.

4. ಸೌಮ್ಯಭಾವವು ಕುಟುಂಬದ ಮೇಲೆ ಯಾವ ಪರಿಣಾಮವನ್ನು ಬೀರಬಲ್ಲದು?

4 ಲೌಕಿಕ ಪ್ರವೃತ್ತಿಗಳನ್ನು ಪ್ರತಿರೋಧಿಸಲಿಕ್ಕಾಗಿ ನಮಗೆ ದೇವರಾತ್ಮದ ಅಗತ್ಯವಿದೆ. “ಯೆಹೋವನ ಆತ್ಮವು ಎಲ್ಲಿದೆಯೋ ಅಲ್ಲಿ ಸ್ವಾತಂತ್ರ್ಯವಿದೆ.” (2 ಕೊರಿಂಥ 3:​17, NW) ಪ್ರೀತಿ, ದಯೆ, ಆತ್ಮನಿಯಂತ್ರಣ, ಹಾಗೂ ದೀರ್ಘಶಾಂತಿಯು ಅಪರಿಪೂರ್ಣ ಗಂಡಹೆಂಡತಿಯರ ಐಕ್ಯಭಾವವನ್ನು ಇನ್ನಷ್ಟು ಬಲಗೊಳಿಸುತ್ತದೆ. (ಎಫೆಸ 5:33) ಸೌಮ್ಯ ಪ್ರಕೃತಿಯು ಮನೆಯಲ್ಲಿನ ವಾತಾವರಣವನ್ನು ಹೆಚ್ಚು ಆನಂದಕರವಾದದ್ದಾಗಿ ಮಾಡುತ್ತದೆ ಮತ್ತು ಇದು ಅನೇಕ ಕುಟುಂಬಗಳನ್ನು ಹಾಳುಮಾಡುತ್ತಿರುವ ಜಗಳ ಹಾಗೂ ಕಿತ್ತಾಟಕ್ಕೆ ವ್ಯತಿರಿಕ್ತವಾದ ಸಂತೋಷಕರ ಪರಿಸರವನ್ನು ಉಂಟುಮಾಡುತ್ತದೆ. ಒಬ್ಬ ವ್ಯಕ್ತಿಯು ಏನು ಹೇಳುತ್ತಾನೋ ಅದು ಪ್ರಾಮುಖ್ಯವಾಗಿದೆಯಾದರೂ, ಅವನು ಯಾವ ರೀತಿಯಲ್ಲಿ ತನ್ನನ್ನು ವ್ಯಕ್ತಪಡಿಸಿಕೊಳ್ಳುತ್ತಾನೋ ಅದು, ಆ ಮಾತುಗಳ ಹಿಂದಿರುವ ಭಾವನೆಗಳನ್ನು ತಿಳಿಯಪಡಿಸುತ್ತದೆ. ಮನಸ್ಸಿನಲ್ಲಿರುವ ಆತಂಕ ಹಾಗೂ ಚಿಂತೆಗಳು ಸೌಮ್ಯಭಾವದಿಂದ ವ್ಯಕ್ತಪಡಿಸಲ್ಪಡುವಾಗ ಒತ್ತಡಗಳು ಕಡಿಮೆಯಾಗುತ್ತವೆ. ಜ್ಞಾನಿ ಅರಸನಾದ ಸೊಲೊಮೋನನು ಬರೆದುದು: “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು.”​—ಜ್ಞಾನೋಕ್ತಿ 15:1.

5. ಧಾರ್ಮಿಕವಾಗಿ ವಿಭಾಗಗೊಂಡಿರುವ ಮನೆಗಳಲ್ಲಿ ಸೌಮ್ಯಭಾವವು ಹೇಗೆ ಸಹಾಯಮಾಡಸಾಧ್ಯವಿದೆ?

5 ಧಾರ್ಮಿಕವಾಗಿ ವಿಭಾಗಗೊಂಡಿರುವಂಥ ಒಂದು ಮನೆಯಲ್ಲಿ ಸೌಮ್ಯಭಾವವು ವಿಶೇಷವಾಗಿ ಪ್ರಾಮುಖ್ಯವಾಗಿದೆ. ಸೌಮ್ಯಭಾವದ ಜೊತೆಗೆ ದಯಾಪರ ಕೃತ್ಯಗಳನ್ನು ಮಾಡುವುದು, ವಿರೋಧಿಸುವವರನ್ನೂ ಯೆಹೋವನ ಕಡೆಗೆ ಸೆಳೆಯಲು ಸಹಾಯಮಾಡಸಾಧ್ಯವಿದೆ. ಪೇತ್ರನು ಕ್ರೈಸ್ತ ಪತ್ನಿಯರಿಗೆ ಸಲಹೆ ನೀಡಿದ್ದು: “ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು. ಜಡೆಹೆಣೆದುಕೊಳ್ಳುವದು ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವದು ವಸ್ತ್ರಗಳನ್ನು ಧರಿಸಿಕೊಳ್ಳುವದು ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. ಸಾತ್ವಿಕವಾದ ಶಾಂತಮನಸ್ಸು [“ಸೌಮ್ಯ ಮನೋಭಾವ,” NW] ಎಂಬ ಒಳಗಣ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಇದು ಶಾಶ್ವತವಾದದ್ದೂ ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದೂ ಆಗಿದೆ.”​—1 ಪೇತ್ರ 3:1-4.

6. ಸೌಮ್ಯಭಾವವನ್ನು ತೋರಿಸುವುದು, ಹೆತ್ತವರ ಮತ್ತು ಮಕ್ಕಳ ನಡುವಣ ಬಂಧಗಳನ್ನು ಹೇಗೆ ಇನ್ನಷ್ಟು ಬಲಪಡಿಸುತ್ತದೆ?

6 ಯೆಹೋವನಿಗಾಗಿ ಪ್ರೀತಿಯು ಇಲ್ಲದಿರುವಾಗ, ಹೆತ್ತವರು ಮತ್ತು ಮಕ್ಕಳ ನಡುವಣ ಸಂಬಂಧವು ವಿಶೇಷವಾಗಿ ಬಿಗಡಾಯಿಸಬಹುದು. ಆದರೆ ಎಲ್ಲಾ ಕ್ರೈಸ್ತ ಮನೆವಾರ್ತೆಗಳಲ್ಲಿ ಸೌಮ್ಯಭಾವವನ್ನು ತೋರಿಸುವ ಆವಶ್ಯಕತೆಯಿದೆ. ಪೌಲನು ತಂದೆಗಳಿಗೆ ಸಲಹೆ ನೀಡಿದ್ದು: “ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ [“ಯೆಹೋವನಿಗೆ,” NW] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿಸಲಹಿರಿ.” (ಎಫೆಸ 6:4) ಒಂದು ಕುಟುಂಬದಲ್ಲಿ ಸೌಮ್ಯಭಾವವು ರಾರಾಜಿಸುತ್ತಿರುವಾಗ, ಹೆತ್ತವರು ಮತ್ತು ಮಕ್ಕಳ ನಡುವಣ ಆಪ್ತ ಬಂಧವು ಇನ್ನಷ್ಟು ಬಲಗೊಳ್ಳುತ್ತದೆ. ಐವರು ಮಕ್ಕಳಲ್ಲಿ ಒಬ್ಬನಾದ ಡೇನ್‌ ತನ್ನ ತಂದೆಯ ಕುರಿತು ಜ್ಞಾಪಿಸಿಕೊಳ್ಳುವುದು: “ಅಪ್ಪ ತುಂಬ ಸೌಮ್ಯ ಸ್ವಭಾವದವರಾಗಿದ್ದರು. ನಾನು ಹದಿಪ್ರಾಯದವನಾಗಿದ್ದಾಗಲೂ ಅವರೊಂದಿಗೆ ಯಾವುದೇ ವಿಷಯದಲ್ಲಿ ಒಂದೇ ಒಂದು ಸಲವೂ ವಾಗ್ವಾದವಾದದ್ದು ನನಗೆ ನೆನಪಿಲ್ಲ. ಅವರು ಯಾವಾಗಲೂ ತುಂಬ ಸೌಮ್ಯ ಪ್ರಕೃತಿಯವರಾಗಿದ್ದರು, ಅವರ ಮನಸ್ಸಿಗೆ ಕಿರಿಕಿರಿಯಾಗಿದ್ದಾಗ ಸಹ ಹಾಗೆಯೇ ಇದ್ದರು. ಕೆಲವೊಮ್ಮೆ ತಪ್ಪುಮಾಡಿದಾಗ ಅವರು ನನ್ನನ್ನು ರೂಮ್‌ನಲ್ಲೇ ಕೂಡಿಹಾಕುತ್ತಿದ್ದರು ಅಥವಾ ನನಗೆ ತುಂಬ ಇಷ್ಟಕರವಾಗಿದ್ದ ಕೆಲವು ವಿಷಯಗಳನ್ನು ಮಾಡಲು ಬಿಡುತ್ತಿರಲಿಲ್ಲ, ಆದರೆ ನಾವೆಂದೂ ವಾದಿಸುತ್ತಿರಲಿಲ್ಲ. ಅವರು ಕೇವಲ ನಮ್ಮ ತಂದೆಯಾಗಿರಲಿಲ್ಲ, ಅವರು ನಮ್ಮ ಸ್ನೇಹಿತರೂ ಆಗಿದ್ದರು. ಮತ್ತು ನಾವೆಂದೂ ಅವರನ್ನು ನಿರಾಶೆಗೊಳಿಸಲು ಬಯಸಲಿಲ್ಲ.” ಸೌಮ್ಯಭಾವವು ಹೆತ್ತವರ ಮತ್ತು ಮಕ್ಕಳ ನಡುವಣ ಬಂಧಗಳನ್ನು ಇನ್ನಷ್ಟು ಬಲಪಡಿಸಲು ಸಹಾಯಮಾಡುತ್ತದೆ ಎಂಬುದಂತೂ ಸತ್ಯ.

ನಮ್ಮ ಶುಶ್ರೂಷೆಯಲ್ಲಿ

7, 8. ಕ್ಷೇತ್ರ ಶುಶ್ರೂಷೆಯಲ್ಲಿ ಸೌಮ್ಯಭಾವವನ್ನು ತೋರಿಸುವುದು ಏಕೆ ಅತ್ಯಾವಶ್ಯಕವಾಗಿದೆ?

7 ಸೌಮ್ಯಭಾವವು ಇನ್ನೊಂದು ಕ್ಷೇತ್ರದಲ್ಲಿಯೂ ಅತ್ಯಂತ ಪ್ರಾಮುಖ್ಯವಾಗಿದೆ; ಅದು ಕ್ಷೇತ್ರ ಶುಶ್ರೂಷೆಯೇ ಆಗಿದೆ. ನಾವು ರಾಜ್ಯದ ಸುವಾರ್ತೆಯನ್ನು ಇತರರೊಂದಿಗೆ ಹಂಚಿಕೊಳ್ಳುವಾಗ, ವಿವಿಧ ಮಾನಸಿಕ ಸ್ಥಿತಿಗಳಿರುವಂಥ ಜನರನ್ನು ಭೇಟಿಯಾಗುತ್ತೇವೆ. ಕೆಲವರು ನಾವು ತಿಳಿಸುವಂಥ ನಿರೀಕ್ಷೆಯ ಸಂದೇಶಕ್ಕೆ ಸಂತೋಷದಿಂದ ಕಿವಿಗೊಡುತ್ತಾರೆ. ಇತರರು ಬೇರೆ ಬೇರೆ ಕಾರಣಗಳಿಗಾಗಿ ಪ್ರತಿಕೂಲ ರೀತಿಯಲ್ಲಿ ಪ್ರತಿಕ್ರಿಯಿಸಬಹುದು. ಇಂಥ ಸಂದರ್ಭಗಳಲ್ಲೇ, ಭೂಲೋಕದ ಕಟ್ಟಕಡೆಯ ವರೆಗೂ ಸಾಕ್ಷಿಗಳಾಗುವಂತೆ ನಮಗೆ ಕೊಡಲ್ಪಟ್ಟಿರುವ ನೇಮಕವನ್ನು ಪೂರೈಸುವುದರಲ್ಲಿ ಸೌಮ್ಯಭಾವದ ಗುಣವು ನಮಗೆ ಮಹತ್ತರವಾಗಿ ಸಹಾಯಮಾಡುತ್ತದೆ.​—ಅ. ಕೃತ್ಯಗಳು 1:8; 2 ತಿಮೊಥೆಯ 4:5.

8 ಅಪೊಸ್ತಲ ಪೇತ್ರನು ಬರೆದುದು: “ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರಿ; ಆದರೆ ಅದನ್ನು ಸಾತ್ವಿಕತ್ವದಿಂದಲೂ [“ಸೌಮ್ಯ ಮನೋಭಾವದಿಂದಲೂ,” NW] ಮನೋಭೀತಿಯಿಂದಲೂ ಹೇಳಿರಿ.” (1 ಪೇತ್ರ 3:15) ನಮ್ಮ ಹೃದಯಗಳಲ್ಲಿ ನಾವು ಕ್ರಿಸ್ತನನ್ನು ಆದರ್ಶ ವ್ಯಕ್ತಿಯಾಗಿ ಪರಿಗಣಿಸುವುದರಿಂದ, ನಾವು ಸಾಕ್ಷಿಯನ್ನು ನೀಡುತ್ತಿರುವ ಸಮಯದಲ್ಲಿ ಜನರು ಕಠೋರವಾಗಿ ಮಾತಾಡುವಾಗ ಸೌಮ್ಯಭಾವವನ್ನು ಹಾಗೂ ಗೌರವವನ್ನು ತೋರಿಸಲು ಶತಪ್ರಯತ್ನವನ್ನು ಮಾಡುತ್ತೇವೆ. ಈ ರೀತಿಯ ವರ್ತನೆಯು ಅನೇಕವೇಳೆ ಗಮನಾರ್ಹ ಫಲಿತಾಂಶಗಳನ್ನು ಉತ್ಪಾದಿಸುತ್ತದೆ.

9, 10. ಕ್ಷೇತ್ರ ಶುಶ್ರೂಷೆಯಲ್ಲಿ ಸೌಮ್ಯಭಾವದ ಮೌಲ್ಯವನ್ನು ತೋರಿಸಲಿಕ್ಕಾಗಿ ಒಂದು ಅನುಭವವನ್ನು ತಿಳಿಸಿರಿ.

9 ಕೀತ್‌ನ ಅಪಾರ್ಟ್‌ಮೆಂಟ್‌ನ ಬಾಗಿಲನ್ನು ಯಾರೊ ತಟ್ಟಿದಾಗ, ಅವನ ಹೆಂಡತಿಯು ಬಾಗಿಲನ್ನು ತೆರೆದಳು ಮತ್ತು ಅವನು ಮನೆಯ ಒಳಗೇ ಇದ್ದನು. ಅವನ ಮನೆಗೆ ಬಂದಿರುವ ಸಂದರ್ಶಕನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದಾನೆಂಬುದನ್ನು ತಿಳಿದುಕೊಂಡಾಗ ಕೀತ್‌ನ ಹೆಂಡತಿಯು, ಸಾಕ್ಷಿಗಳು ಮಕ್ಕಳೊಂದಿಗೆ ಕ್ರೂರವಾಗಿ ನಡೆದುಕೊಳ್ಳುತ್ತಾರೆ ಎಂದು ಕೋಪದಿಂದ ನಿಂದಿಸಿ ಮಾತಾಡಿದಳು. ಆ ಸಹೋದರನು ಶಾಂತಚಿತ್ತನಾಗಿ ನಿಂತಿದ್ದನು. ತದನಂತರ ಅವನು ಸೌಮ್ಯವಾದ ರೀತಿಯಲ್ಲಿ ಪ್ರತ್ಯುತ್ತರಿಸಿದ್ದು: “ನಿಮಗೆ ಆ ಅಭಿಪ್ರಾಯವಿರುವುದು ನನಗೆ ವಿಷಾದವೆನಿಸುತ್ತದೆ. ಆದುದರಿಂದ, ಯೆಹೋವನ ಸಾಕ್ಷಿಗಳು ಏನನ್ನು ನಂಬುತ್ತಾರೆಂಬುದನ್ನು ದಯವಿಟ್ಟು ನಾನು ನಿಮಗೆ ತೋರಿಸಲೋ?” ಅಷ್ಟು ಹೊತ್ತು ಈ ಸಂಭಾಷಣೆಯನ್ನು ಒಳಗಿನಿಂದಲೇ ಕೇಳಿಸಿಕೊಳ್ಳುತ್ತಿದ್ದ ಕೀತ್‌ ಈಗ ಮನೆ ಬಾಗಿಲಿಗೆ ಬಂದು, ಆ ಸಹೋದರನ ಭೇಟಿಯನ್ನು ಅಲ್ಲಿಗೇ ಕೊನೆಗೊಳಿಸಿದನು.

10 ತದನಂತರ, ತಮ್ಮ ಸಂದರ್ಶಕನನ್ನು ಕಠೋರವಾದ ರೀತಿಯಲ್ಲಿ ಉಪಚರಿಸಿದ್ದಕ್ಕಾಗಿ ಈ ದಂಪತಿಗೆ ತುಂಬ ಬೇಸರವೆನಿಸಿತು. ಅವನ ಸೌಮ್ಯಭಾವವು ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ಅವರ ಆಶ್ಚರ್ಯಕ್ಕೆ, ಒಂದು ವಾರದ ಬಳಿಕ ಆ ಸಹೋದರನು ಹಿಂದಿರುಗಿದನು, ಮತ್ತು ಅವನು ತಾನು ನಂಬಿದ್ದ ವಿಷಯಗಳಿಗಾಗಿದ್ದ ಶಾಸ್ತ್ರೀಯ ಆಧಾರವನ್ನು ವಿವರಿಸುವಂತೆ ಕೀತ್‌ ಹಾಗೂ ಅವನ ಹೆಂಡತಿ ಅನುಮತಿಸಿದರು. “ಮುಂದಿನ ಎರಡು ವರ್ಷಗಳ ವರೆಗೆ, ಇತರ ಸಾಕ್ಷಿಗಳು ಹೇಳಿದ ಅನೇಕ ವಿಷಯಗಳಿಗೆ ನಾವು ಕಿವಿಗೊಟ್ಟೆವು” ಎಂದು ಅವರು ಸಮಯಾನಂತರ ಹೇಳಿದರು. ನಂತರ ಅವರು ಒಂದು ಬೈಬಲ್‌ ಅಧ್ಯಯನಕ್ಕಾಗಿ ಒಪ್ಪಿಕೊಂಡರು, ಮತ್ತು ಕಾಲಕ್ರಮೇಣ ಯೆಹೋವನಿಗೆ ತಮ್ಮ ಸಮರ್ಪಣೆಯ ಸಂಕೇತವಾಗಿ ಇವರಿಬ್ಬರೂ ದೀಕ್ಷಾಸ್ನಾನವನ್ನು ಪಡೆದುಕೊಂಡರು. ಕೀತ್‌ ಮತ್ತು ಅವನ ಹೆಂಡತಿಯನ್ನು ಪ್ರಥಮವಾಗಿ ಸಂದರ್ಶಿಸಿದ ಆ ಸಾಕ್ಷಿಗೆ ಎಂಥ ಪ್ರತಿಫಲ! ಅನೇಕ ವರ್ಷಗಳ ಬಳಿಕ ಆ ಸಾಕ್ಷಿಯು ಈ ದಂಪತಿಯನ್ನು ಸಂಧಿಸಿದನು ಮತ್ತು ಈಗ ಅವರು ತನ್ನ ಆತ್ಮಿಕ ಸಹೋದರ ಸಹೋದರಿಯಾಗಿದ್ದಾರೆ ಎಂಬುದು ಅವನಿಗೆ ಗೊತ್ತಾಯಿತು. ಖಂಡಿತವಾಗಿಯೂ ಸೌಮ್ಯಭಾವವು ಯಶಸ್ಸನ್ನು ಪಡೆಯುತ್ತದೆ.

11. ಯಾವ ವಿಧದಲ್ಲಿ ಸೌಮ್ಯಭಾವವು ಒಬ್ಬನು ಕ್ರೈಸ್ತ ಸತ್ಯವನ್ನು ಅಂಗೀಕರಿಸುವುದನ್ನು ಸುಲಭವಾದದ್ದಾಗಿ ಮಾಡಸಾಧ್ಯವಿದೆ?

11 ಒಬ್ಬ ಸೈನಿಕನೋಪಾದಿ ಹೆರಲ್ಡನಿಗಾದ ಅನುಭವಗಳು, ಅವನು ತುಂಬ ಅಸಮಾಧಾನಗೊಳ್ಳುವಂತೆ ಮತ್ತು ದೇವರ ಅಸ್ತಿತ್ವವನ್ನೇ ಸಂಶಯಿಸುವಂತೆ ಮಾಡಿದವು. ಒಬ್ಬ ಕುಡುಕ ಚಾಲಕನಿಂದಾದ ವಾಹನ ಅಪಘಾತವೊಂದು ಹೆರಲ್ಡ್‌ನನ್ನು ಶಾಶ್ವತವಾಗಿ ಅಂಗವಿಕಲನನ್ನಾಗಿ ಮಾಡಿ, ಅವನ ಸಮಸ್ಯೆಗಳನ್ನು ಇನ್ನೂ ಜಟಿಲಗೊಳಿಸಿತು. ಯೆಹೋವನ ಸಾಕ್ಷಿಗಳು ಹೆರಲ್ಡನ ಮನೆಯನ್ನು ಸಂದರ್ಶಿಸಿದಾಗ, ಅವರು ತನ್ನನ್ನು ಭೇಟಿಯಾಗುವುದನ್ನು ನಿಲ್ಲಿಸಬೇಕೆಂದು ತಗಾದೆಮಾಡಿದನು. ಆದರೆ ಒಂದು ದಿನ ಬಿಲ್‌ ಎಂಬ ಹೆಸರಿನ ಸಾಕ್ಷಿಯೊಬ್ಬನು ಒಬ್ಬ ಆಸಕ್ತ ವ್ಯಕ್ತಿಯನ್ನು ಭೇಟಿಯಾಗಲು ಹೊರಟಿದ್ದನು. ಈ ವ್ಯಕ್ತಿಯು ಹೆರಲ್ಡನ ಮನೆಯಿಂದ ಒಂದೆರಡು ಮನೆಯ ನಂತರದ ಮನೆಯಲ್ಲಿ ವಾಸಿಸುತ್ತಿದ್ದನು. ಆದರೆ ತನಗೆ ಗೊತ್ತಿಲ್ಲದೆ ಬಿಲ್‌ ಹೋಗಿ ಹೆರಲ್ಡನ ಮನೆಯ ಬಾಗಿಲನ್ನು ತಟ್ಟಿದನು. ಎರಡು ಕೋಲುಗಳ ಸಹಾಯದಿಂದ ಎದ್ದು ಬಂದು ಹೆರಲ್ಡ್‌ ಬಾಗಿಲನ್ನು ತೆರೆದಾಗ, ಬಿಲ್‌ ಕೂಡಲೆ ಕ್ಷಮೆಯಾಚಿಸಿ, ತಾನು ವಾಸ್ತವದಲ್ಲಿ ಅವನ ಮನೆಯ ಸಮೀಪದಲ್ಲೇ ಇದ್ದಂಥ ಇನ್ನೊಂದು ಮನೆಯನ್ನು ಸಂದರ್ಶಿಸಲಿಕ್ಕಾಗಿ ಬಂದಿದ್ದೆ ಎಂದು ವಿವರಿಸಿದನು. ಹೆರಲ್ಡ್‌ ಹೇಗೆ ಪ್ರತಿಕ್ರಿಯಿಸಿದನು? ಅತ್ಯಲ್ಪ ಕಾಲಾವಧಿಯಲ್ಲೇ ಒಂದು ಹೊಸ ರಾಜ್ಯ ಸಭಾಗೃಹವನ್ನು ಕಟ್ಟಲಿಕ್ಕಾಗಿ ಸಾಕ್ಷಿಗಳು ಒಟ್ಟುಗೂಡಿ ಕೆಲಸಮಾಡಿದ್ದನ್ನು ಟಿವಿ ವಾರ್ತೆಯಲ್ಲಿ ಹೆರಲ್ಡ್‌ ನೋಡಿದ್ದನೆಂಬುದು ಬಿಲ್‌ಗೆ ಗೊತ್ತಿರಲಿಲ್ಲ. ಅಷ್ಟೊಂದು ಜನರು ಐಕ್ಯರಾಗಿ ಕೆಲಸಮಾಡುತ್ತಿರುವುದನ್ನು ನೋಡಿ ಹೆರಲ್ಡ್‌ ತುಂಬ ಪ್ರಭಾವಿತನಾಗಿದ್ದನು, ಮತ್ತು ಇದರಿಂದಾಗಿ ಸಾಕ್ಷಿಗಳ ಕಡೆಗಿನ ಅವನ ಮನೋಭಾವವು ಸಂಪೂರ್ಣವಾಗಿ ಬದಲಾಗಿತ್ತು. ಬಿಲ್‌ ದಯಾಭರಿತನಾಗಿ ಕೇಳಿಕೊಂಡ ಕ್ಷಮೆ ಮತ್ತು ಅವನ ಹಿತಕರವಾದ ಸೌಮ್ಯ ಮನೋಭಾವದಿಂದ ಹೆರಲ್ಡ್‌ನ ಮನಕರಗಿತು, ಮತ್ತು ಸಾಕ್ಷಿಗಳು ಭೇಟಿಮಾಡುವಾಗ ಅವರನ್ನು ಬರಮಾಡಿಕೊಳ್ಳಲು ನಿರ್ಧರಿಸಿದನು. ಅವನು ಬೈಬಲನ್ನು ಅಭ್ಯಾಸಿಸಿದನು, ಪ್ರಗತಿಯನ್ನು ಮಾಡಿದನು, ಮತ್ತು ಯೆಹೋವನ ಒಬ್ಬ ಸ್ನಾತ ಸೇವಕನಾದನು.

ಸಭೆಯಲ್ಲಿ

12. ಕ್ರೈಸ್ತ ಸಭೆಯ ಸದಸ್ಯರು ಯಾವ ಲೌಕಿಕ ಗುಣಲಕ್ಷಣಗಳನ್ನು ಪ್ರತಿರೋಧಿಸಬೇಕು?

12 ಸೌಮ್ಯಭಾವವು ಅತ್ಯಗತ್ಯವಾಗಿರುವ ಮೂರನೆಯ ಕ್ಷೇತ್ರವು, ಕ್ರೈಸ್ತ ಸಭೆಯೇ ಆಗಿದೆ. ಇಂದಿನ ಸಮಾಜದಲ್ಲಿ ಸಂಘರ್ಷವು ಸರ್ವಸಾಮಾನ್ಯವಾಗಿದೆ. ಜೀವಿತದ ಬಗ್ಗೆ ಲೌಕಿಕ ನೋಟವುಳ್ಳವರ ನಡುವೆ ವಾಗ್ವಾದಗಳು, ಮಾತಿನ ಚಕಮಕಿ ಮತ್ತು ಕಾದಾಟಗಳು ಸದಾ ಇದ್ದೇ ಇರುತ್ತವೆ. ಆಗಾಗ್ಗೆ, ಅಂಥ ಲೌಕಿಕ ಗುಣಲಕ್ಷಣಗಳು ಕ್ರೈಸ್ತ ಸಭೆಯೊಳಗೂ ನುಸುಳಿ, ಇದರ ಫಲಿತಾಂಶವಾಗಿ ಮಾತಿನಲ್ಲೇ ಜಗಳಗಳು ಮತ್ತು ವಾಗ್ವಾದಗಳು ಉಂಟಾಗುತ್ತವೆ. ಜವಾಬ್ದಾರಿಯುತ ಸಹೋದರರು ಈ ರೀತಿಯ ಸನ್ನಿವೇಶಗಳನ್ನು ನಿಭಾಯಿಸಬೇಕಾಗಿರುವಾಗ, ಅವರಿಗೆ ತುಂಬ ದುಃಖವಾಗುತ್ತದೆ. ಆದರೂ, ಯೆಹೋವನಿಗಾಗಿ ಮತ್ತು ಅವರ ಸಹೋದರರಿಗಾಗಿರುವ ಪ್ರೀತಿಯು, ತಪ್ಪುಮಾಡುತ್ತಿರುವವರು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗುವಂತೆ ಸಹಾಯಮಾಡಲು ಪ್ರಯತ್ನಿಸುವಂತೆ ಅವರನ್ನು ಹುರಿದುಂಬಿಸುತ್ತದೆ.​—ಗಲಾತ್ಯ 5:​25, 26.

13, 14. ‘ಎದುರಿಸುವವರನ್ನು ಸೌಮ್ಯಭಾವದಿಂದ ತಿದ್ದು’ವುದರ ಫಲಿತಾಂಶವೇನಾಗಿರಸಾಧ್ಯವಿದೆ?

13 ಪ್ರಥಮ ಶತಮಾನದಲ್ಲಿ, ಪೌಲನೂ ಅವನ ಸಂಗಡಿಗನಾದ ತಿಮೊಥೆಯನೂ ಸಭೆಯೊಳಗಿದ್ದ ಕೆಲವು ವ್ಯಕ್ತಿಗಳಿಂದ ತೊಂದರೆಯನ್ನು ಅನುಭವಿಸಿದರು. ‘ಹೀನವಾದ ಬಳಕೆ’ಗಾಗಿರುವ ಪಾತ್ರೆಗಳನ್ನು ಹೋಲುವಂಥ ಸಹೋದರರ ವಿರುದ್ಧ ಎಚ್ಚರದಿಂದಿರುವಂತೆ ಪೌಲನು ತಿಮೊಥೆಯನಿಗೆ ಎಚ್ಚರಿಕೆ ನೀಡಿದನು. ಪೌಲನು ತರ್ಕಿಸಿದ್ದು: “ಕರ್ತನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವದರಲ್ಲಿ ಪ್ರವೀಣನೂ ಕೇಡನ್ನು ಸಹಿಸಿಕೊಳ್ಳುವವನೂ ಎದುರಿಸುವವರನ್ನು ನಿಧಾನದಿಂದ [“ಸೌಮ್ಯಭಾವದಿಂದ,” NW] ತಿದ್ದುವವನೂ ಆಗಿರಬೇಕು.” ಉದ್ರೇಕಭರಿತ ಸನ್ನಿವೇಶದ ಕೆಳಗೂ ನಾವು ಸೌಮ್ಯ ಮನೋಭಾವವನ್ನು ಕಾಪಾಡಿಕೊಳ್ಳುವಾಗ, ಭಿನ್ನಾಭಿಪ್ರಾಯವುಳ್ಳವರು ಅನೇಕವೇಳೆ ತಮ್ಮ ಟೀಕೆಯ ಮಾತುಗಳನ್ನು ಪುನಃ ಪರಿಶೀಲಿಸಿ ನೋಡುವಂತೆ ಪ್ರಚೋದಿಸಲ್ಪಡುತ್ತಾರೆ. ಇದಕ್ಕೆ ಪ್ರತಿಯಾಗಿ, ಪೌಲನು ಮುಂದುವರಿಸುತ್ತಾ ಬರೆದಂತೆ, ಯೆಹೋವನು ಅವರನ್ನು ‘ತನ್ನ ಕಡೆಗೆ ತಿರುಗಿಸಿ ಸತ್ಯದ ಜ್ಞಾನವನ್ನು ಅವರಿಗೆ ಕೊಡುವಂತಾಗಲಿ.’ (2 ತಿಮೊಥೆಯ 2:20, 21, 24, 25) ಇಲ್ಲಿ ಪೌಲನು ಮೃದುಸ್ವಭಾವವನ್ನು ಹಾಗೂ ನಿಗ್ರಹವನ್ನು ಸೌಮ್ಯಭಾವದೊಂದಿಗೆ ಜೋಡಿಸುತ್ತಾನೆ ಎಂಬುದನ್ನು ಗಮನಿಸಿರಿ.

14 ಪೌಲನು ಏನನ್ನು ಸಾರುತ್ತಿದ್ದನೋ ಅದಕ್ಕನುಸಾರ ಸ್ವತಃ ನಡೆಯುತ್ತಿದ್ದನು. ಕೊರಿಂಥ ಸಭೆಯಲ್ಲಿದ್ದ “ಅತಿಶ್ರೇಷ್ಠರಾದ ಅಪೊಸ್ತಲ”ರೊಂದಿಗೆ ವ್ಯವಹರಿಸುತ್ತಿದ್ದಾಗ, ಅವನು ಸಹೋದರರನ್ನು ಹೀಗೆ ಉತ್ತೇಜಿಸಿದನು: ‘ನಮ್ಮೆದುರಿನಲ್ಲಿರುವಾಗ ದೀನನಾಗಿ ನಡಕೊಳ್ಳುವವನೂ ದೂರದಲ್ಲಿರುವಾಗ ನಮ್ಮನ್ನು ಕುರಿತು ದಿಟ್ಟತನತೋರಿಸುವವನೂ ಆಗಿದ್ದಾನೆ ಎಂದು ಹೇಳುವವರು ನಿಮ್ಮಲ್ಲಿದ್ದಾರಲ್ಲಾ. ಆ ಪೌಲನೆಂಬ ನಾನು ಕ್ರಿಸ್ತನ ಶಾಂತಮನಸ್ಸನ್ನೂ [“ಸೌಮ್ಯಭಾವವನ್ನು,” NW] ಸಾತ್ವಿಕತ್ವವನ್ನೂ ನೆನಪಿಗೆ ತಂದುಕೊಂಡು ನಿಮ್ಮನ್ನು ಬೇಡಿಕೊಳ್ಳುತ್ತೇನೆ.’ (2 ಕೊರಿಂಥ 10:​1; 11:5) ನಿಜವಾಗಿಯೂ ಪೌಲನು ಕ್ರಿಸ್ತನನ್ನು ಅನುಸರಿಸಿದನು. ಕ್ರಿಸ್ತನ ‘ಸೌಮ್ಯಭಾವದಿಂದ’ ಅವನು ಆ ಸಹೋದರರಿಗೆ ವಿನಂತಿಯನ್ನು ಮಾಡಿದನು ಎಂಬುದನ್ನು ಗಮನಿಸಿರಿ. ಹೀಗೆ ಅವನು ದರ್ಪದ, ದಬ್ಬಾಳಿಕೆಯ ಮನೋಭಾವದಿಂದ ದೂರವಿದ್ದನು. ಸಭೆಯಲ್ಲಿ ಯಾರಿಗೆ ಪ್ರತಿಕ್ರಿಯಾತ್ಮಕ ಹೃದಯಗಳಿದ್ದವೋ ಅವರಿಗೆ ಅವನ ಬುದ್ಧಿವಾದವು ತುಂಬ ಹಿಡಿಸಿತು ಎಂಬುದರಲ್ಲಿ ಸಂಶಯವೇ ಇಲ್ಲ. ಬಿಗಡಾಯಿಸಿದ್ದ ಸಂಬಂಧಗಳನ್ನು ಅವನು ಸರಿಪಡಿಸಿದನು ಮತ್ತು ಸಭೆಯಲ್ಲಿ ಶಾಂತಿ ಹಾಗೂ ಐಕ್ಯವನ್ನು ಸ್ಥಾಪಿಸಲು ಸಹಾಯಮಾಡಿದನು. ಇದು ನಾವೆಲ್ಲರೂ ಅನುಕರಿಸಲು ಪ್ರಯತ್ನಿಸಸಾಧ್ಯವಿರುವ ಒಂದು ಕ್ರಿಯಾಕ್ರಮವಾಗಿಲ್ಲವೋ? ವಿಶೇಷವಾಗಿ ಹಿರಿಯರು ಕ್ರಿಸ್ತನ ಹಾಗೂ ಪೌಲನ ಕ್ರಿಯೆಗಳನ್ನು ಅನುಕರಿಸುವ ಅಗತ್ಯವಿದೆ.

15. ಸಲಹೆಯನ್ನು ಕೊಡುವಾಗ ಸೌಮ್ಯಭಾವವು ಏಕೆ ಪ್ರಾಮುಖ್ಯವಾಗಿದೆ?

15 ಇತರರಿಗೆ ಸಹಾಯಮಾಡುವ ಜವಾಬ್ದಾರಿಯು, ಸಭೆಯ ಶಾಂತಿ ಮತ್ತು ಐಕ್ಯವು ಬೆದರಿಕೆಗೆ ಒಳಗಾಗಿರುವಂಥ ಸಮಯಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದಂತೂ ನಿಶ್ಚಯ. ಸಂಬಂಧಗಳು ಬಿಗಡಾಯಿಸುವುದಕ್ಕೆ ಬಹಳ ಮುಂಚೆಯೇ ಸಹೋದರರಿಗೆ ಪ್ರೀತಿಯ ಮಾರ್ಗದರ್ಶನದ ಅಗತ್ಯವಿದೆ. “ಸಹೋದರರೇ, ನಿಮ್ಮಲ್ಲಿ ಯಾರಾದರೂ, ಅವನ ಅರಿವಿಗೆ ಬರುವ ಮುಂಚೆಯೇ ತಪ್ಪು ಹೆಜ್ಜೆಯನ್ನು ತೆಗೆದುಕೊಳ್ಳುವಲ್ಲಿ, ಆತ್ಮಿಕ ಅರ್ಹತೆಗಳುಳ್ಳ ನೀವು ಅಂಥವನನ್ನು ಸರಿಹೊಂದಿಸಲು ಪ್ರಯತ್ನಿಸಿರಿ” ಎಂದು ಪೌಲನು ಉತ್ತೇಜಿಸಿದನು. ಆದರೆ ಹೇಗೆ? “ಸೌಮ್ಯ ಮನೋಭಾವದಿಂದ ಹಾಗೆ ಮಾಡಿರಿ, ಅದೇ ಸಮಯದಲ್ಲಿ ನೀವು ಸಹ ದುಷ್ಪ್ರೇರಣೆಗೆ ಒಳಗಾಗದಂತೆ ನಿಮ್ಮ ವಿಷಯದಲ್ಲಿಯೂ ಎಚ್ಚರಿಕೆಯಿಂದಿರಿ.” (ಗಲಾತ್ಯ 6:​1, NW) “ಸೌಮ್ಯ ಮನೋಭಾವ”ವನ್ನು ಕಾಪಾಡಿಕೊಳ್ಳುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ಇದಕ್ಕೆ ವಿಶೇಷ ಕಾರಣವೇನೆಂದರೆ, ನೇಮಿತ ಪುರುಷರನ್ನೂ ಒಳಗೊಂಡು ಎಲ್ಲಾ ಕ್ರೈಸ್ತರು ಪಾಪಪೂರ್ಣ ಪ್ರವೃತ್ತಿಗಳಿಗೆ ಅಧೀನರಾಗಿದ್ದಾರೆ. ಆದರೂ, ಸಲಹೆಯನ್ನು ಕೊಡುವವನು ತೋರಿಸುವ ಸೌಮ್ಯಭಾವವೇ, ತಪ್ಪಿತಸ್ಥನು ಅಗತ್ಯವಿರುವ ಹೊಂದಾಣಿಕೆಯನ್ನು ಮಾಡುವುದನ್ನು ಸುಲಭಗೊಳಿಸುವುದು.

16, 17. ಸಲಹೆಯನ್ನು ಅನ್ವಯಿಸಿಕೊಳ್ಳಲು ಇರುವಂಥ ಅನಿಚ್ಛೆಯನ್ನು ನಿವಾರಿಸಲು ಯಾವುದು ಸಹಾಯಮಾಡಬಹುದು?

16 “ಸರಿಹೊಂದಿಸಿರಿ” ಎಂದು ಭಾಷಾಂತರಿಸಲ್ಪಟ್ಟಿರುವ ಮೂಲ ಗ್ರೀಕ್‌ ಭಾಷೆಯಲ್ಲಿನ ಪದವು, ಮುರಿದ ಎಲುಬುಗಳ ಮರುಜೋಡಣೆಯನ್ನು ಅಥವಾ ಸರಿಪಡಿಸುವಿಕೆಯನ್ನು ಸಹ ಸೂಚಿಸಸಾಧ್ಯವಿದೆ. ಇಂಥ ಮರುಜೋಡಣೆಯು ಅತ್ಯಂತ ವೇದನಾಮಯ ಕಾರ್ಯವಿಧಾನವಾಗಿದೆ. ಆದರೂ, ಮುರಿದ ಎಲುಬನ್ನು ಮರುಜೋಡಿಸುತ್ತಿರುವ ವೈದ್ಯನು ಪುನರಾಶ್ವಾಸನೆ ಕೊಡುತ್ತಾ, ಈ ಕಾರ್ಯವಿಧಾನದ ಪ್ರಯೋಜನಗಳ ಕುರಿತು ಸಕಾರಾತ್ಮಕವಾಗಿ ಮಾತಾಡುತ್ತಾನೆ. ಅವನ ಪ್ರಶಾಂತ ಚರ್ಯೆಯು ಸಾಂತ್ವನದಾಯಕವಾಗಿದೆ. ಮುಂಚಿತವಾಗಿಯೇ ನುಡಿಯಲ್ಪಡುವ ಕೆಲವು ಮಾತುಗಳು, ಅನುಭವಿಸಬೇಕಾಗುವ ಅತಿಯಾದ ಗಾಬರಿಯನ್ನು ಸಹ ಉಪಶಮನಗೊಳಿಸಲು ಸಹಾಯಮಾಡುತ್ತವೆ. ತದ್ರೀತಿಯಲ್ಲಿ, ಆತ್ಮಿಕ ಸರಿಪಡಿಸುವಿಕೆಯು ವೇದನಾಭರಿತವಾಗಿರಬಹುದು. ಆದರೆ ಅದನ್ನು ಹೆಚ್ಚು ಸ್ವೀಕಾರಾರ್ಹವಾಗಿ ಮಾಡಲು ಸೌಮ್ಯಭಾವವು ಸಹಾಯಮಾಡುವುದು; ಹೀಗೆ ಹಿತಕರವಾದ ಸಂಬಂಧಗಳನ್ನು ಪುನಸ್ಸ್ಥಾಪಿಸಲು ಹಾಗೂ ತಪ್ಪಿತಸ್ಥನು ತನ್ನ ಮಾರ್ಗಕ್ರಮವನ್ನು ಬದಲಾಯಿಸಲು ಅದು ಹಾದಿಯನ್ನು ಸಿದ್ಧಪಡಿಸುವುದು. ಆರಂಭದಲ್ಲಿ ಸಲಹೆಗೆ ಪ್ರತಿರೋಧವು ತೋರಿಸಲ್ಪಡಬಹುದಾದರೂ, ಸಹಾಯವನ್ನು ನೀಡುವಂಥ ಒಬ್ಬ ವ್ಯಕ್ತಿಯು ಸೌಮ್ಯಭಾವವನ್ನು ತೋರಿಸುವಲ್ಲಿ, ಸದೃಢವಾದ ಶಾಸ್ತ್ರೀಯ ಬುದ್ಧಿವಾದವನ್ನು ಅನುಸರಿಸಲು ತೋರಿಸಲ್ಪಡುವ ಯಾವುದೇ ಅನಿಚ್ಛೆಯನ್ನು ಅವನು ವಿಫಲಗೊಳಿಸಬಹುದು.​—ಜ್ಞಾನೋಕ್ತಿ 25:15.

17 ಇತರರನ್ನು ಸರಿಪಡಿಸಲು ಸಹಾಯಮಾಡುತ್ತಿರುವಾಗ, ಕೊಡಲ್ಪಡುವ ಸಲಹೆಯು ಟೀಕೆಯಾಗಿ ಪರಿಗಣಿಸಲ್ಪಡುವ ಅಪಾಯವು ಯಾವಾಗಲೂ ಇರುತ್ತದೆ. ಒಬ್ಬ ಬರಹಗಾರನು ಈ ರೀತಿಯಲ್ಲಿ ಹೇಳಿಕೆ ನೀಡುತ್ತಾನೆ: “ಇತರರಿಗೆ ತಿದ್ದುಪಾಟನ್ನು ನೀಡುತ್ತಿರುವಾಗ, ನಮ್ಮ ಸ್ವಂತ ಅಭಿಪ್ರಾಯಗಳನ್ನು ಒತ್ತಾಯದಿಂದ ಹೇರುವ ಪ್ರವೃತ್ತಿಯು ಬಲವಾಗಿರುತ್ತದೆ, ಆದುದರಿಂದಲೇ ದೀನಭಾವವು ಅತ್ಯಗತ್ಯವಾಗಿದೆ.” ನಮ್ರಭಾವದಿಂದ ಹೊರಹೊಮ್ಮುವಂಥ ಸೌಮ್ಯಭಾವವನ್ನು ಬೆಳೆಸಿಕೊಳ್ಳುವುದು, ಕ್ರೈಸ್ತ ಸಲಹೆಗಾರನು ಈ ಅಪಾಯದಿಂದ ದೂರವಿರುವಂತೆ ಸಹಾಯಮಾಡುವುದು.

“ಎಲ್ಲಾ ಮನುಷ್ಯರಿಗೆ”

18, 19. (ಎ) ಐಹಿಕ ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ಸೌಮ್ಯಭಾವವನ್ನು ತೋರಿಸುವುದನ್ನು ಕ್ರೈಸ್ತರು ಏಕೆ ಕಷ್ಟಕರವಾದದ್ದಾಗಿ ಕಂಡುಕೊಳ್ಳಬಹುದು? (ಬಿ) ಅಧಿಕಾರ ಸ್ಥಾನದಲ್ಲಿರುವವರಿಗೆ ಸೌಮ್ಯಭಾವವನ್ನು ತೋರಿಸಲು ಕ್ರೈಸ್ತರಿಗೆ ಯಾವುದು ಸಹಾಯಮಾಡುವುದು, ಮತ್ತು ಯಾವ ಭಾವೀ ಫಲಿತಾಂಶದೊಂದಿಗೆ?

18 ಸೌಮ್ಯಭಾವವನ್ನು ತೋರಿಸುವುದನ್ನು ಅನೇಕರು ಕಷ್ಟಕರವಾಗಿ ಕಂಡುಕೊಳ್ಳುವ ಒಂದು ಕ್ಷೇತ್ರವು, ಐಹಿಕ ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ಆಗಿದೆ. ಅಧಿಕಾರ ಸ್ಥಾನದಲ್ಲಿರುವ ಕೆಲವರು ಕಠೋರವಾಗಿ ಹಾಗೂ ಸಹಾನುಭೂತಿಯಿಲ್ಲದೆ ವರ್ತಿಸುತ್ತಾರೆಂಬುದು ಒಪ್ಪತಕ್ಕದ್ದೇ. (ಪ್ರಸಂಗಿ 4:1; 8:9) ಆದರೆ, ಯೆಹೋವನಿಗಾಗಿರುವ ನಮ್ಮ ಪ್ರೀತಿಯು ನಾವು ಆತನ ಸರ್ವಾಧಿಕಾರವನ್ನು ಗ್ರಹಿಸುವಂತೆ ಮತ್ತು ಸರಕಾರೀ ಅಧಿಕಾರಿಗಳಿಗೆ ಸಲ್ಲತಕ್ಕ ಸಂಬಂಧಸೂಚಕ ಅಧೀನತೆಯನ್ನು ಸಲ್ಲಿಸುವಂತೆ ನಮಗೆ ಸಹಾಯಮಾಡುವುದು. (ರೋಮಾಪುರ 13:1, 4; 1 ತಿಮೊಥೆಯ 2:1, 2) ಉನ್ನತ ಅಧಿಕಾರದಲ್ಲಿರುವವರು ಯೆಹೋವನ ಕುರಿತಾದ ನಮ್ಮ ಆರಾಧನೆಯ ಸಾರ್ವಜನಿಕ ಅಭಿವ್ಯಕ್ತಿಯನ್ನು ಮಿತಗೊಳಿಸಲು ಪ್ರಯತ್ನಿಸುವಾಗಲೂ, ನಮ್ಮ ಸ್ತೋತ್ರಯಜ್ಞವನ್ನು ಅರ್ಪಿಸಲು ಇನ್ನೂ ತೆರೆದಿರುವ ಇತರ ಮಾರ್ಗಗಳಿಗಾಗಿ ನಾವು ಸಂತೋಷದಿಂದ ಹುಡುಕುತ್ತೇವೆ.​—ಇಬ್ರಿಯ 13:15.

19 ಯಾವುದೇ ಸನ್ನಿವೇಶಗಳ ಕೆಳಗೆ ನಾವು ಆಕ್ರಮಣಶೀಲರಾಗುವುದಿಲ್ಲ. ನಾವು ವಿವೇಚನಾಶಕ್ತಿಯುಳ್ಳವರಾಗಿರಲು ಮತ್ತು ಅದೇ ಸಮಯದಲ್ಲಿ ಎಂದಿಗೂ ನಮ್ಮ ನೀತಿಯ ಮೂಲತತ್ತ್ವಗಳನ್ನು ರಾಜಿಮಾಡಿಕೊಳ್ಳದಿರಲು ಪ್ರಯತ್ನಿಸುತ್ತೇವೆ. ಈ ರೀತಿಯಲ್ಲಿ, ಲೋಕದಾದ್ಯಂತ ಇರುವ 234 ದೇಶಗಳಲ್ಲಿ ತಮ್ಮ ಶುಶ್ರೂಷೆಯನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ನಮ್ಮ ಸಹೋದರರು ಸಫಲರಾಗಿದ್ದಾರೆ. ನಾವು ಪೌಲನ ಈ ಸಲಹೆಗೆ ಕಿವಿಗೊಡುತ್ತೇವೆ: “ಸರಕಾರಗಳಿಗೂ ಅಧಿಕಾರಿಗಳಿಗೂ ಅಧಿಪತಿಗಳೆಂದು ಅಧೀನರಾಗಿ ವಿಧೇಯರಾಗಿರಿ, ಸಕಲಸತ್ಕಾರ್ಯಗಳನ್ನು ಮಾಡುವದಕ್ಕೆ ಸಿದ್ಧರಾಗಿರಿ, ಯಾರನ್ನೂ ದೂಷಿಸದೆ ಕುತರ್ಕಮಾಡದೆ ವಿವೇಚನಾಶಕ್ತಿಯುಳ್ಳವರಾಗಿರಿ, ಎಲ್ಲಾ ಮನುಷ್ಯರ ಕಡೆಗೆ ಪೂರ್ಣ ಸೌಮ್ಯಭಾವವನ್ನು ತೋರಿಸಿರಿ.”​—ತೀತ 3:​1, 2, NW.

20. ಸೌಮ್ಯಭಾವವನ್ನು ತೋರಿಸುವವರಿಗೆ ಯಾವ ಪ್ರತಿಫಲಗಳು ಕಾದಿರಿಸಲ್ಪಟ್ಟಿವೆ?

20 ಸೌಮ್ಯಭಾವವನ್ನು ತೋರಿಸುವವರೆಲ್ಲರಿಗೆ ಹೇರಳವಾದ ಆಶೀರ್ವಾದಗಳು ಕಾದಿರಿಸಲ್ಪಟ್ಟಿವೆ. ಯೇಸು ಹೇಳಿದ್ದು: “ಸೌಮ್ಯ ಪ್ರಕೃತಿಯುಳ್ಳವರು ಸಂತೋಷಿತರು, ಅವರು ಭೂಮಿಗೆ ಬಾಧ್ಯರಾಗುವರು.” (ಮತ್ತಾಯ 5:​5, NW) ಕ್ರಿಸ್ತನ ಆತ್ಮಾಭಿಷಿಕ್ತ ಸಹೋದರರಿಗಾದರೋ, ಸೌಮ್ಯಭಾವವನ್ನು ಕಾಪಾಡಿಕೊಳ್ಳುವುದು ಸಂತೋಷವನ್ನು ಹಾಗೂ ರಾಜ್ಯದ ಭೂಆಧಿಪತ್ಯದ ಮೇಲೆ ಆಳ್ವಿಕೆ ನಡಿಸುವ ವಿಶೇಷ ಸುಯೋಗವನ್ನು ನೀಡುತ್ತದೆ. “ಬೇರೆ ಕುರಿಗಳ” “ಮಹಾ ಸಮೂಹ”ದವರಾದರೋ ಸೌಮ್ಯಭಾವವನ್ನು ತೋರಿಸುತ್ತಾ ಮುಂದುವರಿಯುತ್ತಾರೆ ಮತ್ತು ಇದೇ ಭೂಮಿಯಲ್ಲಿ ಪರದೈಸದಲ್ಲಿನ ಜೀವನಕ್ಕಾಗಿ ಕಾತುರರಾಗಿ ಎದುರುನೋಡುತ್ತಾರೆ. (ಪ್ರಕಟನೆ 7:9; ಯೋಹಾನ 10:16; ಕೀರ್ತನೆ 37:11) ಎಷ್ಟು ಅದ್ಭುತಕರವಾದ ಪ್ರತೀಕ್ಷೆಗಳು ಮುಂದಿವೆ! ಹೀಗಿರುವುದರಿಂದ, ಎಫೆಸದ ಕ್ರೈಸ್ತರಿಗೆ ಪೌಲನು ಕೊಟ್ಟಂಥ ಮರುಜ್ಞಾಪನವನ್ನು ನಾವೆಂದಿಗೂ ಅಲಕ್ಷಿಸದಿರೋಣ: “[“ಪೂರ್ಣ ವಿನಯದಿಂದ ಹಾಗೂ ಸೌಮ್ಯಭಾವದಿಂದ,” NW] ನೀವು ದೇವರಿಂದ ಕರೆಯಲ್ಪಟ್ಟವರಾದ ಕಾರಣ ಯೋಗ್ಯರಾಗಿ ನಡೆದುಕೊಳ್ಳಬೇಕೆಂದು ಕರ್ತನ ಸೇವೆಯಲ್ಲಿ ಸೆರೆಯವನಾದ ನಾನು ನಿಮ್ಮನ್ನು ಪ್ರಬೋಧಿಸುತ್ತೇನೆ.”​—ಎಫೆಸ 4:​1, 2.

ಪುನರ್ವಿಮರ್ಶೆಯಲ್ಲಿ

• ಈ ಕೆಳಗಿನ ಕ್ಷೇತ್ರಗಳಲ್ಲಿ ಸೌಮ್ಯಭಾವವನ್ನು ತೋರಿಸುವುದರಿಂದ ಯಾವ ಆಶೀರ್ವಾದಗಳು ಸಿಗುತ್ತವೆ?

• ಕುಟುಂಬದಲ್ಲಿ

• ಕ್ಷೇತ್ರ ಶುಶ್ರೂಷೆಯಲ್ಲಿ

• ಸಭೆಯಲ್ಲಿ

• ಸೌಮ್ಯ ಮನೋಭಾವದವರಿಗೆ ಯಾವ ಪ್ರತಿಫಲಗಳು ವಾಗ್ದಾನಿಸಲ್ಪಟ್ಟಿವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 21ರಲ್ಲಿರುವ ಚಿತ್ರ]

ಧಾರ್ಮಿಕವಾಗಿ ವಿಭಾಗಗೊಂಡಿರುವ ಮನೆಗಳಲ್ಲಿ ಸೌಮ್ಯಭಾವವು ವಿಶೇಷವಾಗಿ ಪ್ರಾಮುಖ್ಯವಾಗಿದೆ

[ಪುಟ 21ರಲ್ಲಿರುವ ಚಿತ್ರ]

ಸೌಮ್ಯಭಾವವು ಕುಟುಂಬದ ಬಂಧಗಳನ್ನು ಇನ್ನಷ್ಟು ಬಲಗೊಳಿಸುತ್ತದೆ

[ಪುಟ 23ರಲ್ಲಿರುವ ಚಿತ್ರ]

ಸೌಮ್ಯಭಾವದಿಂದ ಹಾಗೂ ಆಳವಾದ ಗೌರವದಿಂದ ಉತ್ತರ ನೀಡಿರಿ

[ಪುಟ 24ರಲ್ಲಿರುವ ಚಿತ್ರ]

ಒಬ್ಬ ಸಲಹೆಗಾರನ ಸೌಮ್ಯಭಾವವು ತಪ್ಪಿತಸ್ಥನಿಗೆ ಸಹಾಯಮಾಡಬಹುದು